Saturday, May 9, 2026
Google search engine
Home Blog Page 193

ತುಮಕೂರು : ಜೆಡಿಎಸ್‌ಗೆ ಮುಖಭಂಗ

Publicstory


ತುಮಕೂರು: ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕವಿತಾ ರಮೇಶ್ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಜಯಗಳಿಸಿದರು.

ಬಿಜೆಪಿ ಪಕ್ಷದಿಂದ ೧೭ ಸದಸ್ಯ ಬಲವಿದ್ದು, ಜೆಡಿಎಸ್ ೧೨ ಸದಸ್ಯರ ಬಲ, ಕಾಂಗ್ರೆಸ್ ೧, ಇರುತ್ತಾರೆ. ಸ್ಪಷ್ಟ ಬಹುಮತವಿದ್ದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅನಾಯಾಸವಾಗಿ ಅಧ್ಯಕ್ಷಗಾದಿ ಏರಬಹುದೆಂಬ ಸಂತಸದಲ್ಲಿದ್ದರು, ಆದರೆ ೧೨ ಸದಸ್ಯ ಬಲವಿದ್ದ ಜೆಡಿಎಸ್ ಕಾಂಗ್ರೆಸ್ ಒಬ್ಬರು ಸದಸ್ಯರ ವಿಶ್ವಾಸದೊಂದಿಗೆ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಅಧ್ಯಕ್ಷಗಾದಿಗೇರಲು ಕಸರತ್ತು ನಡೆಸಿತ್ತು.

ತಮ್ಮ ಬಲಿಯಿದ್ದ ೧೩ ಸದಸ್ಯ ಬಲದ ಜೊತೆಗೆ ಬಿಜೆಪಿಯ ಇಬ್ಬರು ಸದಸ್ಯರನ್ನು ತಮ್ಮ ಕಡೆ ಸೆಳೆದುಕೊಂಡು ಮತ್ತೊಬ್ಬ ಬಿಜೆಪಿ ಸದಸ್ಯರನ್ನ ಗೈರು ಹಾಜರಿಪಡಿಸಿ ಅಧ್ಯಕ್ಷ ಸ್ಥಾನವನ್ನು ತಾನು ಪಡೆಯಬೇಕೆಂದು ಜೆಡಿಎಸ್‌ನ ಹಾಲಿ ಶಾಸಕ ಡಿ.ಸಿ.ಗೌರಿಶಂಖರ್ ಕಸರತ್ತು ನಡೆಸಿದ್ದರು.

ಇಬ್ಬರು ಬಿಜೆಪಿ ಸದಸ್ಯರಾದ ಕೋರಾ ಎಸ್‌ಟಿ ಮೀಸಲು ಕ್ಷೇತ್ರದ ಕವಿತಾ ರಮೇಶ್ ಮತ್ತು ಕುರುವೇಲು ಎಸ್‌ಸಿ ಮೀಸಲು ಕ್ಷೇತ್ರದ ಸುಧಾರವರುಗಳನ್ನ ಜೆಡಿಎಸ್‌ನ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವಂತೆ ಮನವೊಲಿಸಿದ್ದರು.

ಜೆಡಿಎಸ್‌ನ ೧೨ ಸದಸ್ಯರ ಬಲ ಹಾಗೂ ಕಾಂಗ್ರೆಸ್‌ನ ಒಬ್ಬರು, ಬಿಜೆಪಿಯ ಕವಿತಾ ರಮೇಶ್ ಮತ್ತು ಸುಧಾ ಇಬ್ಬರು ಸೇರಿ ೧೫ ಜನ ಸದಸ್ಯ ಬಲದಿಂದ ಮೇಲುಗೈ ಸಾದಿಸಬಹುದೆಂಬ ಮಹಾದಾಸೆಯೊತ್ತ ಹಾಲಿ ಶಾಸಕ ಡಿ.ಸಿ.ಗೌರಿಶಂಖರ್‌ಗೆ ಮುಖಭಂಗ ಮಾಡುವ ಸಲುವಾಗಿ ಬಿಜೆಪಿ ರಣತಂತ್ರ ರೂಪಿಸಿ ತನ್ನ ೧೫ ಜನರ ಸದಸ್ಯ ಬಲದಿಂದಲೇ ಅಧ್ಯಕ್ಷ ಸ್ಥಾನದ ಮೇಲೆ ತನ್ನ ಹಿಡಿತ ಸಾದಿಸುವ ರಣತಂತ್ರ ಯಶಸ್ವಿಯಾಯಿತು.

ಜೆಡಿಎಸ್ ಪಕ್ಷದ ವತಿಯಿಂದ ಆಯ್ಕೆಯಾದ ಕೆಸ್ತೂರು ತಾ.ಪಂ.ಸದಸ್ಯೆ ನೇತ್ರಾವತಿ, ಬಿಟ್ಟನಕುರಿಕೆ ತಾ.ಪಂ ಸದಸ್ಯ ಮಂಜುನಾಥ್ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಬಲಿ ಇದ್ದ ೧೫ ಸದಸ್ಯರ ಬಲದಿಂದಲೇ ಎಸ್‌ಸಿ ಮೀಸಲು ಕ್ಷೇತ್ರವಾದ ಅರಕೆರೆ ತಾ.ಪಂ. ಕ್ಷೇತ್ರದ ಆಯ್ಕೆಯಾಗಿದ್ದ ಕವಿತಾ ರಮೇಶ್‌ರವರನ್ನ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಿಸಿಕೊಂಡಿದೆ.

ಬಿಜೆಪಿ ಪಕ್ಷದ ಹಾಲಿ ಜಿಲ್ಲಾಧ್ಯಕ್ಷ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‌ಗೌಡರ ರಣತಂತ್ರದಿಂದ ಜೆಡಿಎಸ್‌ನ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಈ ಚುನಾವಣೆ ಒಂದು ರೀತಿಯ ಮುಖಭಂಗ ಮಾಡಿದೆ.

ಮತ್ತೊಂದು ವಿಶೇಷವೆಂದರೆ ಜಯನಗರದಲ್ಲಿರುವ ತನ್ನ ಗೃಹ ಕಛೇರಿಯಿಂದ ಪೊಲೀಸರ ಸರ್ಪಗಾವಲಿನಲ್ಲಿ ಜೆಡಿಎಸ್‌ನ ಶಾಸಕ ಡಿ.ಸಿ.ಗೌರಿಶಂಕರ್ ಬಿಜೆಪಿಯ ಇಬ್ಬರು ಸದಸ್ಯರು ಸೇರಿದಂತೆ ಜೆಡಿಎಸ್‌ನ ಸದಸ್ಯರು ಒಟ್ಟು ಸೇರಿ ೧೩ ಜನರನ್ನ ಚುನಾವಣಾ ಸ್ಥಳಕ್ಕೆ ಕರೆದೊಯ್ದದ್ದು ಸಂಶಯಾಸ್ಪದವಾಗಿತ್ತು.

ಯಾವುದೇ ರೀತಿಯ ಜೀವಭಯದ ದೂರು ನೀಡದೆ. ಪೊಲೀಸರು ರಕ್ಷಣೆ ನೀಡಿ ಸದಸ್ಯರ ಬೆಂಬಲಕ್ಕೆ ಪೋಲಿಸ್ ಎಸ್ಕಾರ್ಟ್ ಕೊಟ್ಟದ್ದು ಮತ್ತೊಂದು ವಿಶೇಷವಾಗಿತ್ತು.

ಬಿಜಿಪಿಯ ಮಾಜಿ ಶಾಸಕ ಹಾಗೂ ಹಾಲಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡರಿಗೆ ಮುಖಭಂಗ ಮಾಡಲು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಮಾಡಿದ ರಣತಂತ್ರಗಳೆಲ್ಲ ವಿಫಲಗೊಂಡವಾದರೂ ತಾ.ಪಂ. ಅಧ್ಯಕ್ಷಗಾದಿಯ ಚುನಾವಣೆ ಒಂದು ರೀತಿಯಲ್ಲಿ ವಿಭಿನ್ನತೆಯಿಂದಲೇ ಕೂಡಿತ್ತು.

ಸದಸ್ಯರ ಕುದುರೆ ವ್ಯಾಪಾರ ಒಂದು ಕಡೆಯಾದರೆ ಮತ್ತೊಂದು ಕಡೆ ಪಕ್ಷ ವಿಪ್ ಜಾರಿಮಾಡಿದ್ದು ಮತ್ತೊಂದು ರಣತಂತ್ರವಾಗಿತ್ತು.

ತಂತ್ರ ಮತ್ತು ಪ್ರತಿತಂತ್ರಗಳು ಏನೇ ಇರಲಿ ವ್ಯಾಪರಕ್ಕೊಳಗಾಗಿ ಅನ್ಯಪಕ್ಷಕ್ಕೆ ಬೆಂಬಲ ನೀಡಿ ಮತ ಚಲಾಯಿಸಿದ ಬಿಜೆಪಿಯ ಇಬ್ಬರು ಸದಸ್ಯರಿಗೆ ಬಿಜೆಪಿ ಪಕ್ಷ ನೀಡಿದ ವಿಪ್‌ ಉಲ್ಲಘಿಸಿದವರಿಗೆ ಅವರ ಮುಂದಿನ ರಾಜಕೀಯ ಭವಿಷ್ಯ ಕಂಟಕವಾಗಲಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಜೆಡಿಎಸ್ ಪಕ್ಷದಿಂದ ಗೈರು ಹಾಜರಾದ ಇಬ್ಬರು ಸದಸ್ಯರು ಎಲ್ಲಿದ್ದಾರೆ, ಯಾರ ಹಿಡಿತದಲ್ಲಿದ್ದಾರೆ ಎಂಬುದು ತಿಳಿದುಬರುತ್ತಿಲ್ಲ. ಜೆಡಿಎಸ್ ತನ್ನ ಪಕ್ಷದೊಳಗಿನ ೧೨ ಸದಸ್ಯರ ಪೈಕಿ ಇಬ್ಬರು ಸದಸ್ಯರನ್ನ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಸ್ವಯಂ ಮುಜುಗರಕ್ಕೀಡಾಗಿದೆ ಎಂದರೆ ತಪ್ಪಾಗಲಾಗರದು.

ಅಂಬೇಡ್ಕರ್ ನಿವಾಸ ಹಾಳು: ಆರೋಪಿ ಗಡಿಪಾರು ಮಾಡಿ

ತುಮಕೂರು: ಮೊನ್ನೆ ಮಹಾರಾಷ್ಟ್ರದ ದಾದರ್ನಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಮನೆಯ ಹೂವಿನ ಕುಂಡ ಹಾಗೂ ಸಿಸಿ ಕ್ಯಾಮೆರಾಗಳ ದ್ವಂಸ ಪ್ರಕರಣವನ್ನು ಈ ರೀತಿಯಲ್ಲಿ ಅದರ ವಿಚಾರಣೆಯ ದಿಕ್ಕು ತಪ್ಪಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಕರ್ನಾಟಕ ಪರಿಶಿಷ್ಟರ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಜಿ. ಹೆಚ್ ಪ್ರಶ್ನಿಸಿದ್ದಾರೆ.

ಬದಲಾಗುತ್ತಿದೆ ಭಾರತ ಸತ್ಯ, ಅಕ್ಷರಸಹ ಸತ್ಯ ಬದಲಾಗುತ್ತಿದೆ. ಯಾವ ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿತ್ತೊ, ಶೋಷಣೆ ಮೆರೆಯುತ್ತಿತ್ತೊ, ರಾಕ್ಷಸರೂಪಿ ಅಸ್ಪ್ರುಶ್ಯತೆ ಕ್ರೌರ್ಯ ಮೆರೆಯುತ್ತಿತ್ತೊ ಅಂತಹ ದೇಶದಲ್ಲಿ ಸಮಾನತೆಯನ್ನು ತಂದು ದೇಶವನ್ನು ಮುನ್ನಡೆಸುತ್ತಿರುವ ಸಂವಿಧಾನ ಎಂಬ ಮಹಾನ್ ಗ್ರಂಥದ ಕರ್ತೃ ಡಾಕ್ಟರ್ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ನಿವಾಸಕ್ಕೆ ರಕ್ಷಣೆ ಇಲ್ಲವೆಂದಾದರೇ ಭಾರತ ಬದಲಾದಂತೆ ಅಲ್ಲವೇ..?

ಇದಕ್ಕಾಗೆ ಬಾಬಾ ಸಾಹೇಬರು ‘ನನಗೊಂದು ತಾಯಿನಾಡಿಲ್ಲ, ನನ್ನ ಜನರನ್ನ ನಾಯಿ,ಹಂದಿಗಿಂತಲೂ ಕೀಳಾಗಿ ಕಾಣುವ ಈ ನೆಲವನ್ನು ನನ್ನ ತಾಯಿನಾಡೆಂದು ಹೇಗೆ ಒಪ್ಪಿಕೊಳ್ಳಲಿ ಎಂದು ಯಾವಾಗಲೂ ಹೇಳುತ್ತಿದ್ದರು.ಬಾಬಾ ಸಾಹೇಬರ ನಿವಾಸದ ಮೇಲಿನ ಹೂ ಕುಂಡಗಳ ದ್ವಂಸ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಮಾನಸಿಕ ಅಸ್ವಸ್ಥನಂತೆ, ಇಂತಹ ಕಥೆಗಳನ್ನು ಸೃಷ್ಟಿಸಿ ದೇಶ ಮತ್ತು ಸಂವಿಧಾನ ಶಿಲ್ಪಿಗೆ ಈ ಪರಿಯ ಗೌರವವನ್ನು ನೀಡುತ್ತಿರುವ ಭವ್ಯಭಾರತದ ಇಂದಿನ ಸ್ಥಿತಿ ನೋಡಿದರೇ, ಭಾರತ ಅದರಲ್ಲೂ #ಜಾತ್ಯತೀತ_ಭಾರತ ಬದಲಾಗುತ್ತಿದೆ ಎಂದಿದ್ದಾರೆ.

ಬಾಬಾಸಾಹೇಬರು ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಹೊರತುಪಡಿಸಿದರೆ ಮಾಧ್ಯಮ ರಂಗದ ಮೇಲೆ ನಂಬಿಕೆ ಇಟ್ಟಿದ್ದರು. ಮಾಧ್ಯಮವೂ ಕೂಡ ಇಂತಹ ಸುದ್ದಿಯನ್ನು ಪಾರದರ್ಶಕವಾಗಿ ವಿಚಾರಣೆ ನಡೆಸುವಂತೆ ತಾಕೀತು ಮಾಡುವಲ್ಲಿ ವಿಪಲವಾಗಿದೆ ಎನ್ನುವುದನ್ನು ನೋಡಿದರೆ ಭಾರತ ಬದಲಾಗುತ್ತಿದೆ ಎಂದಲ್ಲವೇ.. ಎಂತಹ ವಿಪರ್ಯಾಸ ..?? ಎಂದು ಹೇಳಿದ್ದಾರೆ.ಈ ದೇಶದಲ್ಲಿ ಏನಾಗ್ತಿದೆ ಬಾಂಬ್ ಇಟ್ಟವನು ಮಾನಸಿಕ ಅಸ್ವಸ್ಥ.? ದ್ವಂಸ ಮಾಡಿದವ ಮಾನಸಿಕ ಅಸ್ವಸ್ಥ.? ಹಾಗಿದ್ದ ಮೇಲೆ ದೇಶದ ಸ್ವಾಸ್ಥ್ಯ ಕೆಡುತ್ತಿರುವುದು ಸತ್ಯವೆಂದಾಯ್ತು. ಎಲ್ಲಿಂದ ಕೆಡುತ್ತಿದೆ ಎಂಬುದನ್ನು ಮನಗಂಡರೇ ಒಳಿತು. ಕೊರೋನಾ ತರಹದ ವೈರಸ್ ನಮ್ಮ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ ಎಂದಾಯ್ತು.

ಇದರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಅನಿವಾರ್ಯತೆ ಯುವ ಜನತೆಯ ಮೇಲಿದೆ.

ಆರೋಪಿಗಳನ್ನು ರಕ್ಷಿಸುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ, ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ದೇಶದ್ರೋಹಿ ಎಂದು ಪರಿಗಣಿಸಿ, ಗಡಿಪಾರು ಮಾಡಿ ಆದೇಶಿಸಬೇಕೆಂದು ಕರ್ನಾಟಕ ಪರಿಶಿಷ್ಟರ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಜಿ. ಹೆಚ್ ಆಗ್ರಹಿಸಿದ್ದಾರೆ.

‘ಸ್ವರ್ಗ’ದೊಳಗಿತ್ತು ನರಕ..

ಜಿ.ಎನ್.ಮೋಹನ್


‘ಸ್ವರ್ಗಕ್ಕೆ ಬನ್ನಿ’-ಅಂತ ಡಾ ವೈ ಎಸ್ ಮೋಹನ್ ಕುಮಾರ್ ಕರೆ ಮಾಡಿದಾಗ ನನಗೆ ಆಶ್ಚರ್ಯವಾಗಿತ್ತು.

ಕಾಸರಗೋಡಿನ ಪಾತಾಳ ಎನ್ನಬಹುದಾದ ಊರೊಂದರಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಮೋಹನ್ ಕುಮಾರ್ ನನಗಾದ ಆಶ್ಚರ್ಯವನ್ನು ಕಂಡುಕೊಂಡರೇನೋ..?.

‘ಸ್ವರ್ಗ’ ಎನ್ನುವುದು ನಮ್ಮ ಊರಿನ ಹೆಸರು. ಖಂಡಿತಾ ಬನ್ನಿ ಎಂದರು.

ನಾನೂ ಹಾಗೂ ಕ್ಯಾಮೆರಾಮನ್ ಅಬ್ದುಲ್ ಹಮೀದ್, ಶ್ರೀಪಡ್ರೆಯವರೊಂದಿಗೆ ಕಾಡು ಕಣಿವೆ ಬೆಟ್ಟ ಗುಡ್ಡ ಏರುತ್ತಾ, ಇಳಿಯುತ್ತಾ ತಲುಪಿದ್ದು ‘ಸ್ವರ್ಗ’ವನ್ನು.

ಅದು ನಿಜಕ್ಕೂಸ್ವರ್ಗ.

ಎಲ್ಲೆಡೆ ಗೇರು ಹಣ್ಣಿನ ಮರಗಳು. ಇನ್ನೇನು ಆಕಾಶಕ್ಕೆ ಮುತ್ತಿಟ್ಟೆ ಎನ್ನುವಷ್ಟು ಎತ್ತರಕ್ಕೆ ಎದ್ದು ನಿಂತ ಬೆಟ್ಟಗಳು, ಇನ್ನೊಂದೆಡೆ ಪ್ರಪಾತ. ಅಲ್ಲಿಂದ ಎದ್ದೇಳುತ್ತಿರುವ ಹೊಗೆಯ ಮೋಡಗಳು ಅಲ್ಲೊಂದು ಊರಿದೆ ಎಂಬ ಕುರುಹನ್ನು ಬಿಟ್ಟುಕೊಡುತ್ತಿತ್ತು.

ಡಾ ಮೋಹನ್ ಕುಮಾರ್ ಕೈ ತೋರಿಸಿದ ಕಡೆಯೆಲ್ಲಾ ಹೊರಳುತ್ತಾ ನಾವು ತಲುಪಿಕೊಂಡಿದ್ದು ದಟ್ಟ ಗೇರು ತೋಟಗಳ ಊರನ್ನು.

ಆಗ ಬಿಚ್ಚಿಕೊಳ್ಳಲು ಆರಂಭಿಸಿದ್ದು ನರಕ.

ಗೇರು ತೋಟದ ನಡುವೆ ಇದ್ದ ಒಂದೊಂದೇ ಮನೆಯ ಬಾಗಿಲು ಬಡಿಯುತ್ತಾ ಹೋದಂತೆ ಇದು ‘ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ..’ ಎನ್ನುವಂತೆ ಆಯಿತು.

ನಡೆಯಲಾಗದ, ತೆವಳಲೂ ಆಗದ ಮಕ್ಕಳು ಶೂನ್ಯ ದೃಷ್ಟಿಯಿಂದ ನಮ್ಮೆಡೆಗೆ ನೋಡುತ್ತಿದ್ದರು.

ಇಪ್ಪತ್ತು ದಾಟಿದವರೂ ಸಹಾ ಇನ್ನೂ ಹಸುಗೂಸುಗಳಂತೆ ಅಮ್ಮನನ್ನು ಆತುಕೊಂಡಿದ್ದರು.

ಮುಖದ ಆಕಾರವೇ ಬದಲಾದ ಮಕ್ಕಳು ಉಸಿರು ಎಳೆದುಕೊಳ್ಳಲೂ ಸಂಕಟಪಡುತ್ತಿದ್ದರು.

ಶಾಲೆಯ ಬಾಗಿಲು ಮುಟ್ಟಲಾಗದ ಮಕ್ಕಳು ಅಸಹಾಯಕರಾಗಿ ನಮ್ಮನ್ನು ನೋಡುತ್ತಿದ್ದರೆ, ಶಾಲೆಯತ್ತ ಹೆಜ್ಜೆ ಹಾಕುವ ಅದೃಷ್ಟ ಪಡೆದ ಎಷ್ಟೋ ಮಕ್ಕಳ ಮೈಯಲ್ಲಿ ಬೊಬ್ಬೆಗಳಿದ್ದವು. ಚರ್ಮಸುಟ್ಟು ಮುದುಕರಂತೆ ಕಾಣುತ್ತಿದ್ದರು. ಕೈ, ಕಾಲಲ್ಲಿನ ಬೆರಳುಗಳು ವಿಕಾರ ರೂಪು ಪಡೆದಿದ್ದವು.

ಅದು 2001. ಪುಟ್ಟ ಗ್ರಾಮದಲ್ಲಿ ವೈದ್ಯ ಮಾಡುತ್ತಿದ್ದ ಮೋಹನ್ ಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ಯಾಕೋ ಎಲ್ಲವೂ ಸರಿ ಇಲ್ಲ ಎನಿಸಲು ಆರಂಭಿಸಿತು.

ಅವರ ಬಳಿ ಬರುತ್ತಿದ್ದ ರೋಗಿಗಳ ಸಂಖ್ಯೆ ಧಿಡೀರನೆ ಹೆಚ್ಚಾಗಿತ್ತು, ಮಾನಸಿಕ ಅಸ್ವಸ್ಥತೆ, ಅಂಗವಿಕಲತೆ, ಗರ್ಭ ಧರಿಸದಿರುವಿಕೆ ಹೀಗೆ ರೋಗಗಳ ಸರಮಾಲೆಯೇ ಕಾಣಿಸಿಕೊಳ್ಳತೊಡಗಿತ್ತು.

ಮೋಹನ್ ಕುಮಾರ್ ಸುಮ್ಮನೆ ಕೂರಲಿಲ್ಲ. ವೈದ್ಯಕೀಯ ಪ್ರಕರಣಗಳನ್ನು ತಿರುವಿ ಹಾಕತೊಡಗಿದರು. ಕ್ರಿಮಿನಾಶಕದ ಪರಿಣಾಮವಾಗಿ ಬೇರೆಡೆ ಆಗಿರುವ ಪರಿಣಾಮಕ್ಕೂ ಇಲ್ಲಿನ ರೋಗದ ರೀತಿಗೂ ತಾಳೆಯಾಯಿತು.

ಈ ರೋಗದ ಹಿಂದೆ ಇರುವುದು ಎಂಡೋಸಲ್ಫಾನ್ ಎನ್ನುವುದು ಗೊತ್ತಾಗಿ ಹೋಯಿತು.

ಪರಿಸರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶ್ರೀಪಡ್ರೆ ಅವರೊಂದಿಗೆ ವಿಷಯ ಹಂಚಿಕೊಂಡರು.

ಎಂಡೋಸಲ್ಫಾನ್ ಕೇವಲ ಕ್ರಿಮಿ ಕೀಟಗಳನ್ನಲ್ಲ, ಜನರನ್ನೂ ಹೊಸಗಿ ಹಾಕುವ ರಕ್ಕಸ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಕೆಲಸ ಆರಂಭವಾಯಿತು.

ಅದಾಗಿ ಇನ್ನೂ ಸ್ವಲ್ಪ ದಿನವೂ ಆಗಿರಲಿಲ್ಲ. ಮತ್ತೆ ಶ್ರೀಪಡ್ರೆ ಫೋನಾಯಿಸಿದರು.

ಎಂಡೋಸಲ್ಫಾನ್ ಕಾಸರಗೋಡು ಗಡಿಯನ್ನೂ ದಾಟಿ ಕರ್ನಾಟಕದಲ್ಲೂ ರುದ್ರ ನರ್ತನ ಆರಂಭಿಸಿಬಿಟ್ಟಿತ್ತು.

ನಿಡ್ಲೆ, ಕೊಕ್ಕಡ, ಪಟ್ರಮೆಯಲ್ಲಿ ಕಂಡ ದೃಶ್ಯ ಕರುಳು ಕತ್ತರಿಸುವಂತಿತ್ತು.

ಅಲ್ಲಿನ ಅಮ್ಮಂದಿರ ಕಣ್ಣಲ್ಲಿ ಇದ್ದ ಮೂಕವೇದನೆ, ಮಕ್ಕಳು ಅನುಭವಿಸುತ್ತಿದ್ದ ಯಾತನೆ ಎರಡೂ ತತ್ತರಿಸುವಂತೆ ಮಾಡಿತ್ತು. ಕೇರಳದಲ್ಲಿ ಮಾತ್ರ ಎಂದುಕೊಂಡಿದ್ದ ಎಂಡೋಸಲ್ಫಾನ್ ಉರಿ ಮಾರಿ ಪುತ್ತೂರು, ಸುಳ್ಯ, ಬಂಟ್ವಾಳ, ಭಟ್ಕಳ ಎಲ್ಲೆಡೆ ಕಾಣಿಸಿಕೊಂಡಿತು.

ಅದಾಗಿ 11 ವರ್ಷಗಳು ಕಳೆದುಹೋಗಿದೆ. ಈ ಮಧ್ಯೆ ಸುಮಾರು ೧೬೦ ಸತ್ಯಶೋಧಕ ವರದಿಗಳು ಬಂದಿವೆ. ಸಾವಿರಾರು ಪ್ರತಿಭಟನೆಗಳು ಜರುಗಿವೆ. ಹಲವರು ಸಾವನ್ನಪ್ಪಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಅದರ ಹೊಡೆತದಿಂದ ನರಳುತ್ತಿದ್ದಾರೆ.

ಆದರೂ ಎಂಡೋಸಲ್ಫಾನ್ ರುದ್ರನರ್ತನ ಮಾತ್ರ ನಿಂತಿಲ್ಲ.

‘ ನಮಗೆ ಪರಿಹಾರ ನೀಡಿ ಇಲ್ಲವೇ ದಯಾ ಮರಣ ಕೊಟ್ಟುಬಿಡಿ’ ಎಂದು ಸಂತ್ರಸ್ತರು ಬರೆದ ಸಾವಿರಾರು ಅಂಚೆ ಕಾರ್ಡುಗಳು ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಗಳನ್ನು ಹುಡುಕುತ್ತಲೇ ಇವೆ.

‘ಡರ್ಟಿ ಡಜನ್’ಎಂದು ಜಗತ್ತಿನ ಎಲ್ಲೆಡೆ ಮೂದಲಿಕೆಗೆ ಒಳಗಾದ ವಿಷ ಕುಟುಂಬದ ಸದಸ್ಯ ಈ ಎಂಡೋಸಲ್ಫಾನ್.

ನಮಗೆ ಗೊತ್ತಿರುವುದು ಎಂಡೋಸಲ್ಫಾನ್ ಎಂಬ ಹೆಸರು ಮಾತ್ರ. ಆದರೆ ಈ ಕ್ರಿಮಿನಾಶಕಕ್ಕೆ ನೂರೆಂಟು ಹೆಸರಿದೆ. 1950ರ ದಶಕದ ಆರಂಭದಲ್ಲಿ ಅಮೇರಿಕಾ ಹುಟ್ಟುಹಾಕಿದ ಈ ಕ್ರಿಮಿನಾಶಕವನ್ನು 1955ರಲ್ಲಿ ಬೇಯರ್ ಕ್ರಾಪ್ ಸೈನ್ಸ್ ಕಂಪನಿ ಕೈಗೆತ್ತಿಕೊಂಡದ್ದೇ ತಡ ಜಗತ್ತಿನ ಎಲ್ಲೆಡೆ ವ್ಯಾಪಿಸಿತು. ಕೃಷಿಕರು ಎಲ್ಲೆಲ್ಲಿದ್ದಾರೋ ಅಲ್ಲೆಲ್ಲಾ ಎಂಡೋಸಲ್ಫಾನ್ ಅತಿ ಬೇಗ ಪ್ರಚಾರಕ್ಕೆ ಬಂತು.

ಇದಕ್ಕೆ ಕಾರಣವೂ ಇದೆ. ಯಾಕೆಂದರೆ ಎಂಡೋಸಲ್ಫಾನ್ ಅತಿ ಸುಲಭ ಬೆಲೆಯಲ್ಲಿ ಕೈಗೆಟುಕುತ್ತದೆ. ಆದರೆ ಯಾವಾಗ ಕಾಸರಗೋಡಿನ ‘ಸ್ವರ್ಗ’ ತನ್ನೊಳಗಿನ ನರಕವನ್ನು ಬಿಚ್ಚಿಟ್ಟಿತೋ ಅಲ್ಲಿಂದ ಎಂಡೋಸಲ್ಫಾನ್ ನ್ನು ಕಟಕಟೆಯಲ್ಲಿ ನಿಲ್ಲಿಸುವ ಕೆಲಸ ಅಲ್ಲಿಂದ ಆರಂಭವಾಯಿತು.

ಗೇರು ತೋಟವನ್ನು ಕಾಡುತ್ತಿದ್ದ ಸೊಳ್ಳೆಗಳನ್ನು ಇಲ್ಲವಾಗಿಸಲು ಬಂದಿಳಿದದ್ದು ಎಂಡೋಸಲ್ಫಾನ್.

ಎಂಡೋಸಲ್ಫಾನ್ ಸರ್ವಂತರ್ಯಾಮಿಯಂತೆ ತೂಗಾಡುವ ಗೇರು ಹಣ್ಣಿನಿಂದ ಹಿಡಿದು ಊಟದ ಬಟ್ಟಲಿನವರೆಗೆ ಬಂದು ನಿಂತಿತು. ಕಾಫಿ, ಟೀ, ಹಣ್ಣು, ತರಕಾರಿ, ಹೂವು ಮಾತ್ರವಲ್ಲದೆ ಹತ್ತಿ, ತಂಬಾಕು ಹೀಗೆ ಎಲ್ಲೆಡೆ ಎಂಡೋಸಲ್ಫಾನ್ ತನ್ನ ಗುರುತು ಬಿಟ್ಟುಕೊಟ್ಟಿತ್ತು.

ಇದು ಜನರ ಮೇಲೆ ಮಾತ್ರವಲ್ಲದೆ ದಟ್ಟ ಅರಣ್ಯದಲ್ಲಿ ವನ್ಯಜೀವಿಗಳ ಮೇಲೆ, ಸಾಗರ ಹೊಕ್ಕು ಅಲ್ಲಿನ ಜಲರಾಶಿಯ ಮೇಲೆ ಪರಿಣಾಮ ಬೀರಲು ಆರಂಭಿಸಿತು.

ಎಂಡೋಸಲ್ಫಾನ್ ಗುಣವೇ ಅಂತಹದ್ದು. ಅದು ಎಲ್ಲೆಂದರಲ್ಲಿ ಮನೆಯ ನೆಂಟನಂತೆ ಹೊಂದಿಕೊಂಡುಬಿಡುತ್ತದೆ, ಭೂಮಿಯಲ್ಲಿ ಸಲೀಸಾಗಿ ಹಿಂಗುತ್ತದೆ. ನೀರಿನಲ್ಲಿ ಸೇರಿಹೋಗುತ್ತದೆ. ಗಾಳಿಯಲ್ಲಿ ಆರಾಮವಾಗಿ ತೇಲುತ್ತದೆ.

ದೂರದಲ್ಲಿ ಬರುವ ಮಳೆ ಮೋಡಗಳನ್ನು ಹೇಗೆ ರೈತರು ಕಂಡುಹಿಡಿದುಬಿಡುತ್ತಾರೋ ಹಾಗೆಯೇ ಚಿಟ್ಟೆಗಳು ಪಟ ಪಟನೆ ಸಾಯುತ್ತಿದ್ದಂತೆ ಎಂಡೋ ಇಲ್ಲಿ ಕಾಲೂರಿ ನಿಂತಿದೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ.

ಇಂದು ಕಾಸರಗೋಡಿನಲ್ಲಿ ಚಿಟ್ಟೆಗಳು ಇಲ್ಲ, ಕಾಸರಗೋಡು ಒಂದು ಪುಟ್ಟ ಚಿಟ್ಟೆಯಂತೆ ಪತರಗುಟ್ಟಲು ಆರಂಭವಾದದ್ದೇ ತಡ ಜಗತ್ತು ಎಚ್ಚೆತ್ತುಕೊಂಡಿತು. .

ಎಂಡೋಸಲ್ಫಾನ್ ಜಗತ್ತಿನಾದ್ಯಂತ ಬಳಕೆಯಲ್ಲಿದ್ದರೂ, ಭಾರತದಲ್ಲಿಯೂ ಸಾಕಷ್ಟು ವರ್ಷಗಳಿಂದ ಇದ್ದರೂ ಇದ್ದಕ್ಕಿದ್ದಂತೆ ಅದರ ಪರಿಣಾಮ ಕಾಸರಗೋಡು ಹಾಗೂ ಅಂತಹ ಪ್ರದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡ ಬಗ್ಗೆಯೂ ಸಾಕಷ್ಟು ಅಧ್ಯಯನಗಳು ಜರುಗಿದೆ.

ಬಯಲ ಪ್ರದೇಶದಲ್ಲಿ ಎಂಡೋ ಸಿಂಪಡಿಸುವ ಕಡೆ ಇದು ನಿಧಾನ ವಿಷವಾದರೆ, ಒಂದು ಬಟ್ಟಲಿನಂತೆ ಇರುವ ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸ್ವರೂಪವೇ ಎಂಡೋ ತಕ್ಷಣದ ಕೊಲೆಗಾರನಂತೆ ಕಾಣಲು ಕಾರಣವಾಗಿದೆ.

ಇಲ್ಲಿ ಸಿಂಪಡಿಸುವ ಕ್ರಿಮಿನಾಶಕ ಚದುರಿ ಹಂಚಿಹೋಗುವುದಿಲ್ಲ ಬದಲಿಗೆ ಘನೀಕರಿಸಿ ಕುಳಿತುಕೊಳ್ಳುತ್ತದೆ. ಎಂಡೋಸಲ್ಫಾನ್ ಬಗ್ಗೆ ಕೇರಳ, ಕರ್ನಾಟಕದಲ್ಲಿ ಬಂದಷ್ಟು ವ್ಯಾಪಕ ವಿರೋಧ ಇತರ ಕಡೆ ಬಾರದೆ ಇರುವುದಕ್ಕೂ ಇದು ಕಾರಣ.

ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಕೊಲೆಗಾರ ಜನರ ಕಣ್ಣಿಗೆ ಕಾಣುತ್ತಿಲ್ಲ ಎಂಬ ಆತಂಕ ಈ ಚಳವಳಿಯಲ್ಲಿದೆ.

ಎಂಡೋಸಲ್ಫಾನ್ ದೊಡ್ಡ ಪೆಟ್ಟು ನೀಡಿರುವುದು ಭಾರತಕ್ಕೆ.
ವ್ಯಂಗ್ಯವೆಂದರೆ ಎಂಡೋಸಲ್ಫಾನ್ ಗೆ ಜಾಗತಿಕ ನಿಷೇಧ ಹೇರಲು ಸಜ್ಜಾದಾಗ ಅದನ್ನು ವಿರೋಧಿಸಿದ್ದು ಭಾರತವೇ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 90ರ ದಶಕದ ವೇಳೆಗೆ ಇಡೀ ಜಗತ್ತು ವರ್ಷಕ್ಕೆ 12,800 ಮೆಟ್ರಿಕ್ ಟನ್ ನ್ನಷ್ಟುಎಂಡೋಸಲ್ಫಾನ್ ಅನ್ನು ಕಬಳಿಸುತ್ತಿದೆ.

ಕೃಷಿ ರಾಸಾಯನಿಕ ಕ್ಷೇತ್ರದಲ್ಲಿ ಎಂಡೋಸಲ್ಫಾನ್ ಜಗತ್ತಿನ ಏಳನೆಯ ಅತಿ ದೊಡ್ಡ ಕ್ರಿಮಿನಾಶಕ, ಇಡೀ ಜಗತ್ತು ಇದನ್ನು ಭಯಂಕರ ಕ್ರಿಮಿನಾಶಕ ಎಂದು ಬಣ್ಣಿಸಿ ಹೊರದೂಡಲು ಯತ್ನಿಸಿದಾಗ 80 ದೇಶಗಳು ಇದಕ್ಕೆ ಸಮ್ಮತಿ ಸೂಚಿಸಿದ್ದವು.

2011 ರ ಏಪ್ರಿಲ್ ನಲ್ಲಿ ನಡೆದ ಸ್ಟಾಕ್ ಹೋಂ ಸಮಾವೇಶ ಎಂಡೋಸಲ್ಫಾನ್ ನ ಮೇಲೆ ಜಾಗತಿಕ ನಿಷೇದ ಹೇರಲು ಸಜ್ಜಾಯಿತು. ಆದರೆ ಇಲ್ಲಿ ವಿರೋಧ ವ್ಯಕ್ತವಾದದ್ದು ಭಾರತ ಮತ್ತು ಚೀನಾದಿಂದ.

ಇದಕ್ಕೆ ಕಾರಣ ಈಗ ಎಂಡೋಸಲ್ಫಾನ್ ಕಂಪನಿಯ ಮಾಲೀಕತ್ವ ಇರುವುದು ಚೀನಾದ ಕೈನಲ್ಲಿ.

ಭಾರತ ಎಂಡೋಸಲ್ಫಾನ್ ಅನ್ನು ಅತಿ ಹೆಚ್ಚು ಉತ್ಪಾದಿಸುತ್ತಿರುವ, ರಫ್ತು ಮಾಡುತ್ತಿರುವ ದೇಶ ಸಹಾ.

ಹಾಗಾಗಿಯೇ ಸಂಸತ್ತಿನಲ್ಲಿ ಎಂಡೋಸಲ್ಫಾನ್ ನಿಷೇದಿಸಬೇಕು ಎಂಬ ಕೂಗೆದ್ದಾಗ ಹಲವು ರಾಜ್ಯಗಳು ಈ ನಿಷೇದಕ್ಕೆ ಒಪ್ಪಿಗೆ ಕೊಟ್ಟಿಲ್ಲ ಎಂಬ ಕಾರಣವನ್ನು ಶರದ್ ಪವಾರ್ ಮುಂದುಮಾಡಿದರು.

ಆದರೆ ಆರ್ ಟಿ ಐ ದಾಖಲೆಗಳು ಹೇಳಿದ್ದು ಬೇರೆಯದ್ದೇ ಕಥೆ. ಯಾವೊಂದು ರಾಜ್ಯವೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವ ಅಂಶ ಹೊರಬಿತ್ತು. ಭಾರತ ಕ್ರಿಮಿನಾಶಕ ಲಾಬಿಗೆ ಮಣಿದಿದೆ ಎನ್ನುವುದು ಸುಸ್ಪಷ್ಟ.

ಎಂಡೋಸಲ್ಫಾನ್ ಗೆ ಉರುಳುತ್ತಿರುವ ಜೀವಗಳನ್ನು ಶರದ್ ಪವಾರ್ ಅವರು ಕ್ರಿಕೆಟ್ ಅಂಕಣದಲ್ಲಿ ಬೀಳುತ್ತಿರುವ ವಿಕೆಟ್ ಗಳೇನೋ ಎನ್ನುವ ಸಂಭ್ರಮದಿಂದ ನೋಡುತ್ತಿರುವಾಗಲೇ ‘ಹಿರೋಶಿಮಾ ಸಿಂಡ್ರೋಮ್’ ತಲೆ ಎತ್ತಿದೆ.

ಎಲ್ಲಿ ನಮಗೆ ಹುಟ್ಟುವ ಮಗು ಅಂಗವೈಕಲ್ಯ ಹೊಂದುತ್ತದೋ ಎನ್ನುವ ಕಾರಣಕ್ಕೇ ಗರ್ಭಪಾತ ಮಾಡಿಸಿಕೊಳ್ಳುವವರ ಸಂಖ್ಯೆ ಇನ್ನಿಲ್ಲದಂತೆ ಹೆಚ್ಚುತ್ತಿದೆ.

ಎಂಡೋ ಪೀಡಿತ ಗ್ರಾಮಗಳ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತಿಲ್ಲ. ಮದುವೆಯಾದ ಅನೇಕರಿಗೆ ಗರ್ಭ ನಿಲ್ಲುತ್ತಿಲ್ಲ. ಮಕ್ಕಳಾದರೂ ಅವರ ಬದುಕಿನಲ್ಲಿ ಬೆಳಕು ಮಿನುಗುತ್ತಿಲ್ಲ.

‘ಸ್ವರ್ಗ’ದ ಈ ಎಲ್ಲಾ ನರಕವನ್ನೂ ನೋಡಿ ಘಟ್ಟ ಏರಿ ವಾಪಸಾಗುತ್ತಿದ್ದಾಗ ತೂಗಾಡುತ್ತಿದ್ದ ಗೇರು ಹಣ್ಣನ್ನು ತೋರಿಸಿ ಶ್ರೀಪಡ್ರೆ ‘ತಿನ್ನಿ’ ಎಂದರು.

ಹಣ್ಣಿಗೆ ಕೈಹಾಕಿದ್ದ ನಾನು ಹಾಗೇ ಹಿಂದೆ ಸರಿದೆ.

ಪಶ್ಚಿಮ ಘಟ್ಟದಲ್ಲಿ ಪಟ ಪಟನೆ ಸಾಯುತ್ತಿರುವ ಚಿಟ್ಟೆಗಳು ನೆನಪಾದವು.

ಕೆಂಪಯ್ಯ ಕೊಲೆ: ತನಿಖಾ ವೈಫಲ್ಯದ ಕಡೆ ವರದಿ ಬೊಟ್ಟು

ತುರುವೇಕೆರೆ: ಇಲ್ಲಿನ ಗಿರಿಯನಹಳ್ಳಿ ಕೆಂಪಯ್ಯ ನಿಗೂಢ ಸಾವು ಪ್ರಕರಣದಲ್ಲಿ ಪೊಲೀಸರು ದೂರುದಾರರ ಮನವಿಯ ಅಂಶಗಳನ್ನ ಪರಿಗಣಿಸಿಲ್ಲ.

ತನಿಖೆಯ ಪ್ರಾಥಮಿಕ ಹಂತದ ಕ್ರಮಗಳನ್ನು ಕೈಗೊಂಡಿಲ್ಲಅಶಕ್ತ ಕುಟುಂಬದ ರಕ್ಷಣೆಗೆ ಮುಂದಾಗಿಲ್ಲ. ಸರಿಯಾಗಿ ತನಿಖೆಯನ್ನು ನಡೆಸದೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಸಂಪೂರ್ಣ ವಿಫಲ ವಾಗಿದೆ ಎಂದು ಸತ್ಯಶೋಧನ ಸಮಿತಿ ಹಾಗೂ ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಆರೋಪಿಸಿದರು.

ತುಮಕೂರಿನ ಪತ್ರಿಕಾಭವನದಲ್ಲಿಂದು ಪಿಯುಸಿಎಲ್ ಮತ್ತು ಪರ್ಯಾಯ ಕಾನೂನು ವೇದಿಕೆ ಸದಸ್ಯರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಸ್ವತ್ತನ್ನು ರಕ್ಷಿಸಲು ಮುಂದಾದ ನೌಕರರಿಗೆ ರಕ್ಷಣೆ ನೀಡಿಲ್ಲ. ಇದು ಸರ್ಕಾರದ ವೈಫಲ್ಯವಾಗಿದೆ ಎಂದು ದೂರಿದರು.

ಮೃತನ ಕುಟುಂಬದಲ್ಲಿ ಹೆಣ್ಣುಮಕ್ಕಳೇ ಇದ್ದು ಅವರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ಕೈಚೆಲ್ಲಿ ಕುಳಿತಿದೆ ತರುವೇಕೆರೆಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದರೂ ಬಡವರ ಗೋಳನ್ನು ಕೇಳುವವರೇ ಇಲ್ಲ.ಈ ಕೂಡಲೇ ಮೃತನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಕೆಂಪಯ್ಯ ನಿಗೂಢ ಸಾವು ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು ಬಡಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಮೃತ ಕೆಂಪಯ್ಯ ಪುತ್ರಿ ಚೈತ್ರ ಮಾತನಾಡಿ, ನಮಗೆ ಜೀವಬೆದರಿಕೆ ಇದೆ. ನಮಗೆ ರಕ್ಷಣೆ ಬೇಕು. ಮನೆಯಲ್ಲಿ ವಾಸಿಸಲು ಕಷ್ಟವಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು. ಹಣ್ಣುಮಕ್ಕಳೇ ಇರುವುದರಿಂದ ರಕ್ಷಣೆ ಕೊಡಬೇಕು. ನಮ್ಮ ತಂದೆಯ ಸಾವಿಗೆ ಕಾರಣವಾಗಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಆ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಧ್ಯಮದವರಿಗೆ ಮನವಿ ಮಾಡಿದರು

ಪರ್ಯಾಯ ಕಾನೂನು ವೇದಿಕೆಯ ಸದಸ್ಯ ಹಾಗೂ ಹೈಕೋರ್ಟ್ ವಕೀಲ ಎಸ್. ಶಿವಮಣಿಥನ್ ಮಾತನಾಡಿ ಕೆಂಪಯ್ಯ ನಿಗೂಡ ಸಾವು ಪ್ರಕರಣದಲ್ಲಿ ಸ್ಥಳ ಮಹಜರು ಮಾಡಿಲ್ಲ. ಎಎಸ್.ಪಿ. ಸಾಕ್ಷ್ಯಗಳನ್ನು ತುಮಕೂರಿಗೆ ಕರೆಸಿಕೊಂಡು ಹೇಳಿಕೆ ಪಡೆದಿದ್ದಾರೆ. ಘಟನೆ ಸ್ಥಳದಲ್ಲಿ ಹೇಳಿಕೆ ಪಡೆದಿಲ್ಲ.ಇದು ಪೊಲೀಸರ ವೈಪಲ್ಯ ಎಂದು ಟೀಕಿಸಿದರು.

ದಂಡಿನಶಿವರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗಂಗಣ್ಣ ದೂರುದಾರರಿಂದ ಒತ್ತಾಯಪೂರಕವಾಗಿ ದೂರು ನೀಡಲು ವಿಳಂಬಕ್ಕೆ ಸಂಬಂಧಿಕರ ಜೊತೆ ಚರ್ಚಿಸಿದ್ದು ಕಾರಣ ಎಂದು ಬರೆಸಿಕೊಂಡಿದ್ದಾರೆ. ಘಟನೆ ಸಂಬಂಧ ಸಾಕ್ಷ್ಯ ಸಂಗ್ರಹ ಮಾಡಿಲ್ಲ. ಆರೋಪಿಗಳು ಸ್ಥಳದಲ್ಲಿದ್ದರೂ ಅವರ ಸಿಮ್ ಮತ್ತು ಕಾಲರ್ ಐಡಿ ಡಿಟೈಲ್ ಸಂಗ್ರಹ ಮಾಡಿಲ್ಲ. ಎಎಸ್.ಪಿ. ಚಾರ್ಜ್ ಶೀಟ್ ಸಲ್ಲಿಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ಪೊಲೀಸರೊಂದಿಗೆ ವೈದ್ಯರು ಶಾಮೀಲಾಗಿದ್ದಾರೆ.

ಕಂದಾಯ ಇಲಾಖೆಯೂ ಕ್ರಮ ಜರುಗಿಸಿಲ್ಲ. ಪೊಲೀಸ್, ವೈದ್ಯರ ಲೋಪಗಳು ಎದ್ದುಕಾಣುತ್ತವೆ ಎಂದು ಆರೋಪಿಸಿದರು.
ಎಫ್ ಐಆರ್ ದಾಖಲಿಸಿ ತಿಂಗಳು ಕಳೆದರೂ ಚಾರ್ಜ್ ಶೀಟ್ ಸಲ್ಲಿಸಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಸತ್ಯಶೋಧನ ಸಮಿತಿಯ ಸದಸ್ಯ ಟಿ.ವಿ.ನರಸಿಂಹಪ್ಪ, ಪರ್ಯಾಯ ಕಾನೂನು ವೇದಿಕೆಯ ಬಸವಪ್ರಸಾದ್ ಕುನಾಲೆ, ಪಿಯುಸಿಎಲ್ ಉಪಾಧ್ಯಕ್ಷೆ ದೀಪಿಕ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ ಹಾಜರಿದ್ದರು.

ತುಮಕೂರು: ಗರ್ಭಿಣಿ ಸೇರಿ 27 ಜನರಿಗೆ ಕೊರೊನಾ: ಒಬ್ಬರು ಸಾವು

ತುಮಕೂರು: ಜಿಲ್ಲೆಯಲ್ಲಿ ಇಂದು ಗರ್ಭಿಣಿ ಸೇರಿ 27 ಜನರಿಗೆ ಸೋಂಕು‌ ಕಾಣಿಸಿಕೊಂಡಿದೆ.

ಚಿಕ್ಕನಾಯಕನಹಳ್ಳಿಗೂ ಕೊರೊನ ವಕ್ಕರಿಸಿದೆ. ವಿಶೇಷವೆಂದರೆ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯೊಂದರಲ್ಲೇ 16 ಪ್ರಕರಣಗಳು ಪತ್ತೆಯಾಗಿವೆ.

ಉಳಿದಂತೆ ಮಧುಗಿರಿ 5, ತಿಪಟೂರು-3 ತುಮಕೂರು-2, ಕೊರಟಗೆರೆ-1 ಪ್ರಕರಣಗಳು ದೃಢಪಟ್ಟಿವೆ. ಕೊರಟಗೆರೆಯಲ್ಲಿ 53 ವರ್ಷದ ವ್ಯಕ್ತಿಯೊಬ್ಬರು ಕೊರೊನಕ್ಕೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ತಿಳಿಸಿದ್ದಾರೆ.

ಗರ್ಭಿಣಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಈಗ ಹೆರಿಗೆಯಾಗಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಿದರು.

ಇದುವರೆಗೆ ಪಾವಗಡ, ಶಿರಾ, ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದವು. ಇಂದು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅದೂ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ 16 ಪ್ರಕರಣಗಳು ಪತ್ತೆಯಾಗಿದ್ದು ಜನರನ್ನು ಭೀತರನ್ನಾಗಿಸಿದೆ.

ಮನುಷ್ಯರನ್ನು ಮಾರುವ ರೆಡ್ ಮಾರ್ಕೆಟ್

ಜಿ.ಎನ್.ಮೋಹನ್


ಹುಷಾರ್!!

ನನ್ನ ಬೆಲೆ ಏನು ಅಂತ ಗೊತ್ತಾ ನಿಮಗೆ?’- ಹಾಗೆ ಕೇಳಿದ್ದು ಸ್ಕಾಟ್ ಕಾರ್ನೆ.

ಮಾತೆತ್ತಿದರೆ ಸಾಕು ‘ನನ್ನ ಬೆಲೆ ಏನೂ ಅಂತ ನಿಂಗೇನೋ ಗೊತ್ತು?’ ಎನ್ನುವ ಡೈಲಾಗ್ ಗಳನ್ನು ಕನ್ನಡ ಸಿನೆಮಾಗಳಲ್ಲಿ ಬೇಕಾದಷ್ಟು ಸಲ ಕೇಳಿದ್ದ ನನಗೆ ಕಾರ್ನೆ ಸಹಾ ಹಾಗೆಯೇ ಹತ್ತರಲ್ಲಿ ಹನ್ನೊಂದನೆಯವರಾಗಿಬಿಡುತ್ತಿದ್ದರೇನೋ?.

ಆದರೆ ಹಾಗೆ ಕೇಳುತ್ತಾ ಇರುವ ವ್ಯಕ್ತಿ ಕ್ಯಾಲಿಫೋರ್ನಿಯಾದವ. ಕನ್ನಡ ಸಿನೆಮಾ ನೋಡಿಯಂತೂ ಈ ಡೈಲಾಗ್ ಕಲಿತಿರುವ ಸಾಧ್ಯತೆ ಇಲ್ಲ. ಹಾಗಾಗಿ ನನ್ನ ಕುತೂಹಲ ಹೆಚ್ಚುತ್ತಾ ಹೋಯಿತು.

ಆತ ಹೇಳಿದ-

‘ನೋಡಿ ನನ್ನ ತೂಕ ಸರಿಸುಮಾರು 90 ಕೆ ಜಿ. ಕೆಂಚನೆಯ ಕೂದಲಿದೆ. ನೀಲಿ ಕಣ್ಣುಗಳಿವೆ. ಒಂದು ಹಲ್ಲೂ ಉದುರಿಲ್ಲ. ನನ್ನ ಥೈರಾಯ್ಡ್ ಗ್ರಂಥಿಗಳು ಅದು ಯಾವ ಕೆಲಸವನ್ನು ಮಾಡಬೇಕೋ ಅದನ್ನು ಸರಿಯಾಗಿ ಮಾಡುತ್ತಿದೆ. 6 ಅಡಿ 2 ಇಂಚು ಎತ್ತರ ಇರುವ ನನ್ನ ಮೈನ ಚರ್ಮ ಹೊಳಪು ಕಳೆದುಕೊಂಡಿಲ್ಲ. ನನ್ನ ಎರಡೂ ಕಿಡ್ನಿಗಳೂ ಸರಿಯಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ನನ್ನ ಬೆಲೆ 2,50,000 ಡಾಲರ್’ ಎಂದ. ಆರ್ಥಾತ್ 1.36 ಕೋಟಿ ರೂಪಾಯಿ.

ಇದೇನಪ್ಪಾ ಹೊಸ ಲೆಕ್ಕಾಚಾರ? ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಇದು ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮನುಷ್ಯನ ಒಂದೊಂದು ಅಂಗಕ್ಕೆ ಇರುವ ರೇಟು. ನನ್ನ ದೇಹದ ಎಲ್ಲಾ ಅಂಗಗಳನ್ನೂ ಒಟ್ಟು ಮಾಡಿದರೆ ಈಗಿಂದೀಗ ಈ ರೇಟು ಗಿಟ್ಟುತ್ತದೆ ಎಂದ.

ಹಾಗೆ ನಾನು ಆತನ ಪರಿಚಯ ಮಾಡಿಕೊಂಡದ್ದು ಆತ ಬರೆದ ‘ದಿ ರೆಡ್ ಮಾರ್ಕೆಟ್’ ಪುಸ್ತಕದಲ್ಲಿ.

ಒಂದು ಕಾಲಕ್ಕೆ ಆತ ಬೋಧಕನಾಗಿದ್ದ. ವಿದೇಶದ ವಿದ್ಯಾರ್ಥಿಗಳನ್ನು ಕರೆದುಕೊಂಡು ಭಾರತ ಸುತ್ತುತ್ತಾ ಇದ್ದಾಗ ಒಂದು ಅವಘಡ ನಡೆದು ಹೋಯಿತು.

ಆತನ ವಿದ್ಯಾರ್ಥಿನಿಯೊಬ್ಬಳು ಸತ್ತು ಹೋದಳು. ಆ ಅವಘಡ ಅವನ ಲೋಕವನ್ನೇ ಬದಲಿಸಿಹಾಕಿತು.

ಮನುಷ್ಯ ಎನ್ನುವವನು ಒಂದು ದೇಹ ಮಾತ್ರ. ಅದಕ್ಕೆ ಮಾರುಕಟ್ಟೆಯಲ್ಲಿ ಇಷ್ಟು ಬೆಲೆ ಇದೆ ಎಂದು ಗೊತ್ತಾಗಿಹೋಯಿತ್ತು.

ಪರಿಣಾಮವಾಗಿ ಆತ ಜಗತ್ತಿನ ಎಲ್ಲೆಡೆ ಮಾನವನ ದೇಹದ ಅಂಗಾಂಗಗಳ ಬಗ್ಗೆ ಇರುವ ಮಾರಾಟ ಜಾಲವನ್ನು ಬೆನ್ನಟ್ಟಿ ಹೋದ.

ಭಾರತ, ಶ್ರೀಲಂಕಾ, ನೇಪಾಳ, ಭೂತಾನ್, ಮಲೇಶಿಯಾ, ಚೀನಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೇರಿಕಾ ಹೀಗೆ ಸುತ್ತುತ್ತಾ ಆತ ಕಂಡುಕೊಂಡಿದ್ದು ವಿಚಿತ್ರ ಲೋಕವನ್ನು.

ದೇಹದ ಇಂಚಿಂಚನ್ನೂ ಕೊಳ್ಳೆ ಹೊಡೆಯಲು ಕಾದು ಕುಳಿತಿರುವವರ ಲೋಕವನ್ನು.

‘ಮಾನವಾ ದೇಹವು ಮೂಳೆ ಮಾಂಸದ ತಡಿಕೆ’ ಅಂದರಲ್ಲಾ ಹಾಗೆ ಮನುಷ್ಯನನ್ನು ಕೇವಲ ಮೂಳೆ, ಮಾಂಸ ಎಂದುಕೊಂಡವರ ಕರಾಳ ಲೋಕವನ್ನು.

ತರಕಾರಿ ಮಾರ್ಕೆಟ್, ಹಣ್ಣಿನ ಮಾರ್ಕೆಟ್, ಸೊಪ್ಪಿನ ಮಾರ್ಕೆಟ್, ಹೂವಿನ ಮಾರ್ಕೆಟ್ ಇರುವಂತೆಯೇ ಇನ್ನೊಂದು ಮಾರ್ಕೆಟ್ ಸಹಾ ಇದೆ. ಅದು ಈ ‘ರೆಡ್ ಮಾರ್ಕೆಟ್’.

ಇಲ್ಲಿ ಮಾರಾಟಕ್ಕಿರುವುದು ಮೂಳೆ, ತಲೆಬುರುಡೆ, ಕಿಡ್ನಿ, ಕೂದಲು, ಇಡೀ ಮನುಷ್ಯ..

ಕಾರ್ ಗಳನ್ನ, ಸ್ಕೂಟರ್ ಗಳನ್ನ, ಜೆ ಸಿ ಬಿ ಯಂತ್ರಗಳನ್ನ, ಇನ್ನೂ ಬೇಕಾದರೆ ಚಿಪ್ಸ್, ಕೋಲಾಗಳನ್ನ, ಫ್ರಿಡ್ಜ್, ವಾಶಿಂಗ್ ಮೆಷಿನ್ ಗಳನ್ನ ಕಾರ್ಖಾನೆಗಳಲ್ಲಿ ಉತ್ಪಾದಿಸಬಹುದು.

ಆದರೆ ಮನುಷ್ಯನನ್ನು ಉತ್ಪಾದಿಸಲು ಸಾಧ್ಯವೇ? ಅಥವಾ ಮನುಷ್ಯನ ಯಾವುದಾದರೂ ಅಂಗಾಂಗ ವಿಫಲವಾದರೆ ಸ್ಪೇರ್ ಪಾರ್ಟ್ ಗಳನ್ನ ಉತ್ಪಾದಿಸಲು ಸಾಧ್ಯವೇ?

ಹಾಗಾಗಿಯೇ ಮಾನವ ದೇಹ ಎನ್ನುವುದನ್ನೇ ದಂಧೆ ಮಾಡಿಕೊಂಡ ಒಂದು ಭೂಗತ ಲೋಕ ತಲೆ ಎತ್ತಿದೆ.

ಆ ಲೋಕಕ್ಕೆ ಒಬ್ಬ ಮನುಷ್ಯ ಒಬ್ಬ ಮನುಷ್ಯನಾಗಿ ಕಾಣುವುದಿಲ್ಲ. ಬದಲಿಗೆ ಹಲವು ಸ್ಪೇರ್ ಪಾರ್ಟ್ ಗಳನ್ನು ಹೊಂದಿಸಿ ತಯಾರು ಮಾಡಿದ ಒಂದು ರಚನೆಯಾಗಿ ಮಾತ್ರ ಕಾಣುತ್ತಾನೆ.

ಯಾವುದೇ ಗ್ಯಾರೇಜ್ ನಲ್ಲಿ ಒಂದು ಸ್ಕೂಟರ್ ಅನ್ನು ಸಂಪೂರ್ಣವಾಗಿ ಬಿಚ್ಚಿ ಬೇಕಾದದ್ದನ್ನು ರಿಪೇರಿ ಮಾಡಿ ಓವರ್ ಆಯ್ಲಿಂಗ್ ಮಾಡಿ ಹೊಚ್ಚಹೊಸದಾಗಿ ಆಚೆ ಕಳಿಸಿಕೊಡುತ್ತಾರಲ್ಲಾ ಹಾಗೆಯೇ ಮಾನವ ದೇಹವನ್ನು ಸಹಾ ರಿಪೇರಿ ಮಾಡುವ, ಓವರ್ ಆಯ್ಲಿಂಗ್ ಮಾಡುವ ಕರಾಳ ಗ್ಯಾರೇಜ್ ಗಳು ತಲೆ ಎತ್ತಿವೆ.

ನಿಮ್ಮ ಮನೆಯ ಮಗುವೊಂದು ನಾಪತ್ತೆಯಾಗಿದ್ದರೆ ಹುಷಾರು ಅದನ್ನು ಇದೇ ಕಳ್ಳರು ಕದ್ದೊಯ್ದಿರುವ ಸಾಧ್ಯತೆ ಇದೆ.

ನಿಮ್ಮ ಮನೆಯಲ್ಲಿ ಹಿರಿಯರು ಸತ್ತಿದ್ದರೆ ಅವರನ್ನು ಮಣ್ಣು ಮಾಡಿ ಬಂದು ನೀವು ಸುಸ್ತು ಕಳೆದುಕೊಳ್ಳುವ ಮೊದಲೇ ಸಮಾಧಿಯಿಂದ ಆ ಹೆಣವನ್ನೇ ಎಗರಿಸಿರುತ್ತಾರೆ.

ಆರೋಗ್ಯ ತಪಾಸಣೆಗೆ ಆಸ್ಪತ್ರೆ ಸೇರಿದ್ದೀರಿ ಕತ್ತರಿ ನಿಮ್ಮ ಜೋಬಿಗೆ ಮಾತ್ರವಲ್ಲ, ನಿಮ್ಮ ದೇಹದ ಇನ್ನೂ ಕೆಲವು ಅಂಗಾಂಗಗಳಿಗೂ ಬಿದ್ದಿದೆ.

ಇದು ಕಟ್ಟು ಕಥೆಯಲ್ಲ. ಜಗತ್ತಿನ ನಾನಾ ದೇಶಗಳಲ್ಲಿ ನಡೆಯುತ್ತಿರುವ ಕಳ್ಳತನ ಎನ್ನುತ್ತದೆ ಈ ‘ದಿ ರೆಡ್ ಮಾರ್ಕೆಟ್’

ಇವತ್ತು ಅಮೆರಿಕಾದಲ್ಲಿ ಯಾವುದೋ ಒಂದು ಸಂಸಾರದಲ್ಲಿರುವ ಕೊರತೆಯನ್ನು ಪೂರ್ಣ ಮಾಡಲು ಇಲ್ಲಿನ ಮಗುವನ್ನು ದತ್ತು ನೀಡಲಾಗುತ್ತಿದೆ.

ಆ ಮನೆಯನ್ನು ತಲುಪುವ ಮಗು ಎಷ್ಟೋ ಬಾರಿ ಆಶ್ಚರ್ಯ ಆದರೂ ನಿಜ, ಅದು ಯಾವುದೋ ಊರಿನ ಯಾವುದೋ ಗಲ್ಲಿಯಲ್ಲಿ ಆಟ ಆಡಿಕೊಂಡಿದ್ದ ಮಗು.

ಬೇರೆಯವರ ಕಣ್ಣು ತಪ್ಪಿಸಿ ಕ್ಷಣ ಮಾತ್ರದಲ್ಲಿ ಆ ಮಗುವನ್ನು ಕದ್ದೊಯ್ದು ತನ್ನ ಕರಾಳ ಜಾಲಕ್ಕೆ ದಬ್ಬಿ ಅಮೇರಿಕಾ ತಲುಪಿಸಲಾಗುತ್ತದೆ.

ಒಳ್ಳೆಯ ತಲೆಬುರುಡೆ, ಒಳ್ಳೆಯ ಅಸ್ತಿ ಪಂಜರ, ಒಳ್ಳೆಯ ಮೂಳೆ ಇವುಗಳಿಗಾಗಿ ಸ್ಮಶಾನವನ್ನು ಲೂಟಿ ಮಾಡುವ ಗುಂಪುಗಳೇ ಸೃಷ್ಟಿಯಾಗಿದೆ.

ಹೆಣವನ್ನು ಊಳಿದ ಮರುನಿಮಿಷವೇ ಅಲ್ಲಿಂದ ಕಾಣೆಯಾಗುತ್ತದೆ.

ನಿಮ್ಮ ಕಣ್ಣೆದುರಿಗೆ ಚಿತೆಗೆ ಅಗ್ನಿ ಸ್ಪರ್ಶವಾಗಿದ್ದರೂ ನೀವು ಆ ಕಡೆ ತಿರುಗಿದ ತಕ್ಷಣವೇ ಹೆಣವನ್ನು ಚಿತೆಯಿಂದ ಎಳೆದು ಹಾಕುವ ಕೂಟಗಳಿವೆ.

ರಕ್ತದ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಬಸ್ ನಿಲ್ದಾಣಕ್ಕೆ ಬರುವವರನ್ನು ಒಂದಿಷ್ಟು ಹಣದ ಆಸೆ ತೋರಿಸಿ, ಬರಲಾರದವರನ್ನು ಬಲವಂತವಾಗಿ ಎಳೆದೊಯ್ದು ತಿಂಗಳುಗಟ್ಟಲೆ ಕತ್ತಲ ಕೋಣೆಗಳಲ್ಲಿ ರಕ್ತ ಹೀರುವ ಜಾಲವಿದೆ.

ಮನೆಯಲ್ಲಿನ ಬಡತನ, ಕೊಡಬೇಕಾದ ವರದಕ್ಷಿಣೆ ಬಾಕಿ ಕಿಡ್ನಿಗಳನ್ನೇ ಮಾಯವಾಗುವಂತೆ ಮಾಡುತ್ತಿವೆ.

ನಾಳೆಯ ಜನಾಂಗಕ್ಕೆ ಬೇಕಾದ ಸೂಪರ್ ಔಷಧಿಗಳನ್ನು ತಯಾರಿಸಲು ಮನುಷ್ಯರನ್ನೇ ಪ್ರಯೋಗ ಪಶುವಾಗಿಸುವ ದಂಧೆಯೂ ಇದೆ.

ಇಲಿಗಳ ಮೇಲೆ ಪ್ರಯೋಗ ನಡೆಸಿದ ಕಾಲವನ್ನೂ ದಾಟಿ ಮನುಷ್ಯರ ಮೇಲೂ ಪ್ರಯೋಗ ನಡೆಯುವ, ಅದಕ್ಕಾಗಿ ಜನರನ್ನು ಸರಬರಾಜು ಮಾಡುವ ಕರಾಳ ಜಾಲವಿದೆ.

ಆಸ್ಪತ್ರೆಗೆ ಹೋದ ಗರ್ಬಿಣಿ ಹೆಂಗಸಿಗೆ ಬೇಕಾದ ಚುಚ್ಚ್ಚುಮದ್ದುಗಳ ಜೊತೆ ಈ ರೀತಿಯಲ್ಲಿ ಪ್ರಯೋಗಿಸಬಾರದ ಚುಚ್ಚುಮದ್ದುಗಳನ್ನೂ ಚುಚ್ಚಿ ಕಳಿಸುವ ದುಷ್ಟ ಕೂಟವಿದೆ.

ಸೌಂದರ್ಯ ಉದ್ಯಮ ಎಷ್ಟು ಅಗಾಧವಾಗಿ ಬೆಳೆಯುತ್ತಿದೆಯೆಂದರೆ ಅವರನ್ನು ಇನ್ನಷ್ಟು ಕೊಬ್ಬಿ ಬೆಳೆಸಲು ತಿರುಪತಿಯಿಂದಲೂ ಬಿಲಿಯನ್ ಡಾಲರ್ ಮೌಲ್ಯದ ಕೂದಲು ಹೋಗಿ ಬೀಳುತ್ತಿದೆ.

ಸರ್ಕಾರ-ಆಸ್ಪತ್ರೆಗಳು- ಮಧ್ಯವರ್ತಿಗಳು- ಸರಬರಾಜುದಾರರ ಜಾಲ ಎಷ್ಟು ನಿಕಟವಾಗಿ ಹಾಗೂ ಎಷ್ಟು ಅಗಾಧವಾಗಿ ಬೆಳೆಯುತ್ತಿದೆ ಎಂದರೆ ಮನುಷ್ಯನ ದೇಹ ಎನ್ನುವುದು ಚಿನ್ನ ಅಗೆಯುವ ಕಾರ್ಖಾನೆಯಂತೆ ಕಾಣುತ್ತಿದೆ.

ಇವತ್ತು ಊರಿಗೆ ಊರೇ ಕಿಡ್ನಿ ಮಾರುವ, ಊರಿಗೆ ಊರೇ ಗರ್ಭದಾನ ಮಾಡುವ, ಊರಿಗೆ ಊರೇ ದೇಹದ ಹಕ್ಕನ್ನು ಬೇರೆಯವರಿಗೆ ಬರೆದು ಕೊಡುವ ಪರಿಸ್ಥಿತಿ ಎದುರಾಗಿದೆ.

ದುರಂತ ಎನ್ನುವುದು ಈ ರೆಡ್ ಮಾರ್ಕೆಟ್ ಗೆ ಹೇಗೆ ಆಹಾರ ಒದಗಿಸುತ್ತದೆ ಎನ್ನುವುದೇ ಮನಮಿಡಿಯುವ ಕಥೆ.

‘ಕಿಡ್ನಿವಾಕ್ಕಂ’ ಎಂದೇ ಹೆಸರಾದ ಒಂದು ಹಳ್ಳಿಯಿದೆ. ತಮಿಳುನಾಡಿಗೆ ಸುನಾಮಿ ಅಪ್ಪಳಿಸಿದಾಗ ನೆಲೆ ಕಳೆದುಕೊಂಡ ಅಲ್ಲಿನ ಪ್ರತಿಯೊಬ್ಬರ ಕಣ್ಣಲ್ಲೂ ಕಣ್ಣೀರಿದೆ.

ಹಾಗಿದೆ ಎಂದು ಗೊತ್ತಾದದ್ದೇ ತಡ ಈ ರೆಡ್ ಮಾರ್ಕೆಟ್ ಕಳ್ಳರು ರಾಜಾರೋಷವಾಗಿಯೇ ಹೆಜ್ಜೆ ಹಾಕಿದರು.

ಇಂತಹ ಕಿಡ್ನಿವಾಕ್ಕಂನಿಂದ ಹಿಡಿದು ನೆರೆಯ ಭೂತಾನದಲ್ಲಿ ರಾಶಿಗಟ್ಟಲೆ ಅಸ್ತಿಪಂಜರ ಸಿಕ್ಕ ಸ್ಥಳಕ್ಕೆ, ಇಡೀ ಜಗತ್ತಿನ ತಲೆಬುರುಡೆ ಕಾರ್ಖಾನೆ ಎಂದು ಕುಖ್ಯಾತಿ ಪಡೆದಿರುವ ಕೊಲ್ಕೊತ್ತಾಗೆ, ರಕ್ತವನ್ನು ಬಲವಂತವಾಗಿ ಕಕ್ಕಿಸಿಕೊಳ್ಳುವ ಗೋರಖಪುರಕ್ಕೆ..

..ತಪಾಸಣೆಗೆ ಬಂದ ಹೆಂಗಸಿಗೆ ಗೊತ್ತಿಲ್ಲದಂತೆ ಇನ್ನೂ ಪ್ರಯೋಗ ನಡೆಸಲಾಗುತ್ತಿರುವ ಔಷಧಿ ಚುಚ್ಚಿ ಹಣೆಯಲ್ಲಿ ಕಣ್ಣು ಉಳ್ಳ ಮಗು ಹುಟ್ಟುವಂತೆ ಮಾಡಿದ ಚೆನ್ನೈ ವರೆಗೆ, ಈ ಎಲ್ಲಾ ಅಂಗಾಂಗಗಳ ಲಾಭ ಪಡೆದ ದೇಶಗಳನ್ನೂ ಸ್ಕಾಟ್ ಕಾರ್ನೆ ಬೆನ್ನತ್ತಿ ಹೋಗಿದ್ದಾರೆ.

ಈ ದಂಧೆಯ ಕರಾಳ ಕೈಗಳು ಎಲ್ಲೆಲ್ಲಿ ಚಾಚಿದೆಯೋ ಅಲ್ಲೆಲ್ಲಾ ಅಲೆದಾಡಿದ್ದಾರೆ. ದಾಖಲೆಗಳನ್ನು ಕೂಡಿಸಿದ್ದಾರೆ. ಪೊಲೀಸರನ್ನೂ ಅಂತೆಯೇ ದಂಧೆಕೋರರನ್ನೂ ಮಾತನಾಡಿಸಿದ್ದಾರೆ.

ಈ ಮಾನವ ಅಂಗಾಂಗದ ವಾರಸುದಾರರು ಯಾರು ಎನ್ನುವುದು ಅದರ ಪ್ರಯೋಜನ ಪಡೆಯುವ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಈ ಅಂಗಾಂಗ ವಿನಿಮಯದಲ್ಲಿ ಪಾರದರ್ಶಕತೆ ಇದ್ದಾಗ ಮಾತ್ರ ಈ ದಂಧೆಗೆ ಲಗಾಮು ಹಾಕಲು ಸಾಧ್ಯ.

ಪ್ರತಿಯೊಂದು ಬಾಟಲಿ ರಕ್ತ ಇದು ಯಾರದ್ದು ಎಂದು ಸೂಚಿಸಬೇಕು. ದತ್ತು ಪಡೆಯುವ ಮಗುವಿನ ತಾಯಿ ತಂದೆ ಯಾರು ಎಂದು ಗೊತ್ತಿರಬೇಕು. ಕಿಡ್ನಿ ಇಂತಹವರದ್ದು ಎಂದು ನಮೂದಿಸಿರಬೇಕು. ಅಸ್ತಿಪಂಜರ ಇಂತಹ ಮನೆಯವರದ್ದು ಎನ್ನುವ ದಾಖಲೆ ಇರಬೇಕು.

ಹಾಗಾಗದೆ ಹೋದಲ್ಲಿ ದಿನ ನಿತ್ಯ ಮಕ್ಕಳು ಕಾಣೆಯಾಗುತ್ತಾರೆ. ಪ್ರತಿ ನಿತ್ಯ ಕಿಡ್ನಿಗಳನ್ನು ಬಲವಂತವಾಗಿ ಕತ್ತರಿಸಲಾಗುತ್ತದೆ. ಚಿತ್ರ ವಿಚಿತ್ರ ಮಾರ್ಗಗಳನ್ನು ಈ ದಂಧೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಸ್ಕಾಟ್ ನಿಟ್ಟುಸಿರಿಡುತ್ತಾರೆ.

ಒಮ್ಮ್ಮೆ ಪ್ರವಾಸಕ್ಕೆ ಹೋದಾಗ ದಾರಿಯಲ್ಲಿ ಕುರಿ ಮಂದೆಯೊಂದು ಹಾದುಹೋಗುತ್ತಿತ್ತು.

ನನ್ನ ಜೊತೆಯಲ್ಲಿದ್ದವರೊಬ್ಬರು ‘ಅಯ್ಯಯ್ಯೋ ಎಷ್ಟೊಂದು ಮಟನ್ ಹೋಗುತ್ತಿದೆ ನೋಡಿ’ ಎಂದು ಉದ್ಘಾರ ತೆಗೆದರು.

ಆ ಮಾತಿನಿಂದ ಆದ ಶಾಕ್ ಇನ್ನೂ ಆರಿಲ್ಲ.

ಆಗಲೇ ಸ್ಕಾಟ್ ಕಾರ್ನೆ ಈ ಪುಸ್ತಕ ಮುಂದಿಟ್ಟಿದ್ದಾರೆ.

ಮನುಷ್ಯರೂ ಈಗ ಮಾಂಸವಾಗಿ ಹೋದ ಕಥೆ ಹೇಳಿದ್ದಾರೆ.

ಪಾವಗಡ 7ತಿಂಗಳ ಗಂಡು, 8ತಿಂಗಳ ಹೆಣ್ಣು ಮಗುವಿಗೂ ಕೊರೋನಾ

ಪಾವಗಡ ತಾಲ್ಲೂಕಿನಲ್ಲಿ ಮಂಗಳವಾರ ಒಂದೇ ದಿನ 14 ಮಂದಿಗೆ ಕೊರೋನ ಸೊಂಕು ದೃಢಪಟ್ಟಿದೆ.

14 ಮಂದಿಯಲ್ಲಿ  ದಳವಾಯಿ ಹಳ್ಳಿ  ತಾಂಡದ 8 ತಿಂಗಳ ಬಾಲಕಿ, ಕ್ಯಾತಗಾನಕೆರೆ 7 ತಿಂಗಳ ಬಾಲಕನಿಗೆ ಸೋಂಕು ದೃಢಪಟ್ಟಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ಚಿತ್ತಗಾನಹಳ್ಳಿಯ 38 ವರ್ಷದ ವ್ಯಕ್ತಿ,  ಕುರುಬರಬೀದಿ 18 ವರ್ಷದ ಯುವಕ, 17 ವರ್ಷದ ಯುವಕ, ರೊಪ್ಪದ  65  ವರ್ಷದ ವೃದ್ಧ ನಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕೆಂಚಗಾನಹಳ್ಳಿ 11 ವರ್ಷದ ಬಾಲಕಿ, ಮುಗದಾಳಬೆಟ್ಟದ 47 ವರ್ಷದ ಮಹಿಳೆ, ಕ್ಯಾತಗಾನಕೆರೆಯ 7 ವರ್ಷದ ಬಾಲಕ, ಚಿಕ್ಕ ಜಾಲೋಡು ಗ್ರಾಮದ  7 ವರ್ಷದ ಬಾಲಕಿ,  ವೈ ಎನ್ ಹೊಸಕೋಟೆ 40 ವರ್ಷದ ಪುರುಷ, 32 ವರ್ಷದ ಮಹಿಳೆ, 42 ವರ್ಷದ  ವ್ಯಕ್ತಿ,  ಹೊಸಹಳ್ಳಿಯ 02 ವರ್ಷದ ಗಂಡು ಮಗು, 21 ವರ್ಷದ ಯುವತಿಗೆ ಕೋವಿಡ್ 19 ದೃಢಪಟ್ಟಿದೆ.

ಸಮಯ ಸಾಧಕ ರಾಜಕಾರಣಿ ಎಂ.ಟಿ.ಕೃಷ್ಣಪ್ಪ : ವಿ.ಬಿ.ಸುರೇಶ್ ಲೇವಡಿ

Publicstory.in


ತುರುವೇಕೆರೆ:ತಾಲ್ಲೂಕಿನ ಮುನಿಯೂರಿನ ಹಲ್ಲೆ ಪ್ರಕರಣದಲ್ಲಿ ವಿನಾಕಾರಣ ಬಿಜೆಪಿ ಪಕ್ಷವನ್ನು ಹಾಗು ಶಾಸಕರನ್ನು ಮುನ್ನೆಲೆಗೆ ತರುವ ಮೂಲಕ ದುರುದ್ದೇಶದ ರಾಜಕಾರಣದ ಹುಚ್ಚಾಟವನ್ನು ಇಲ್ಲಿಗೆ ಕೈಬಿಡದ ಬೇಕೆಂದು ಬಿಜೆಪಿ ರಾಜ್ಯ ರೇಷ್ಮೆ ಪ್ರಕೋಷ್ಠಕದ ಸಂಚಾಲಕ ವಿ.ಬಿ.ಸುರೇಶ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಮುನಿಯೂರಿನ ಹಲ್ಲೆ ಪ್ರಕರಣದ ವ್ಯಕ್ತಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸುತ್ತಾ
ನೂರಾರು ಜನರನ್ನು ಸೇರಿಸಿ ಧರಣಿ ಮಾಡಿಸಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹರಡಲು ಪರೋಕ್ಷವಾಗಿ ಕಾರಣರಾಗಿದ್ದಾರೆಂದು ದೂರಿದರು.

ನೀವು ಬಿಜೆಪಿ ಕಚೇರಿ ನುಗ್ಗಿ ಒಡೆಯುವುದಾಗಿ ನಿನ್ನೆ ಹೇಳಿದ್ದೀರಿ. ಹಾಗಾದರೆ ನಾವೇನು ಕೈಗೆ ಬಳತೊಟ್ಟು ಕುಳಿತಿದ್ದೀವಾ? ಬನ್ನಿ ಕಚೇರಿಗೆ ನೋಡೋಣವೆಂದು ಸವಾಲು ಹಾಕಿದರು.

ನಿಮ್ಮ ಸಮಯ ಸಾಧಕ ರಾಜಕಾರಣದ ಕುತಂತ್ರ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಹೇಳಿದರು.

ನಿಮಗೆ ರಾಜಕೀಯ ಶಕ್ತಿ ಕೊಟ್ಟ ದಬ್ಬೇಘಟ್ಟ ಹೋಬಳಿಗೆ ನೀವು ಕೊಟ್ಟ ಕೊಡುಗೆ ಏನು? ತಾಲ್ಲೂಕಿನಲ್ಲಿ ಜನತದಳ ಸಾಧನೆ ಶೂನ್ಯವೆಂದು ಲೇವಡಿ ಗೈದರು.

ಶಾಸಕ ಮಸಾಲಜಯರಾಂ ಅಣ್ಣನ ಮಗ ಕುಮಾರ್ ಮಾತನಾಡಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನಮ್ಮ ಕುಟುಂಬದ ಸದಸ್ಯರೊಬ್ಬರನ್ನು ದುರ್ಬಳಕೆ ಮಾಡಿಕೊಂಡಿ ಸ್ವಂತ ಸಹೋದರರ ವಿರುದ್ದ ಎತ್ತಿ ಕಟ್ಟಿ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜಕಾರಣ ಅವರು ಮಾಡಿಕೊಳ್ಳಲಿ, ಆದರೆ ನಮ್ಮ ಕುಟುಂಬವನ್ನು ರಾಜಕಾರಣಕ್ಕೆ ಎಳೆದು ತಂದರೆ ಕೃಷ್ಣಪ್ಪನಿಗೆ ತಕ್ಕ ಪಾಠ ಕಲಿಸಬೇಕಾದೀತು ಎಂದು ಕಿಡಿಕಾರಿದರು.

ಸುದ್ದಿ ಗೋಷ್ಠಿಯಲ್ಲಿ ವಿ.ಟಿ.ವೆಂಕಟರಾಮು, ಚಿದಾನಂದ್, ಸೋಮಣ್ಣ, ಶಾಸಕರ ಸಹೋದರರಾದ, ತಿಮ್ಮಪ್ಪ, ಶ್ರೀನಿವಾಸ್, ರುದ್ರೇಶ್, ಸುರೇಶ್, ಎ.ಬಿ.ಗೌಡ ಮತ್ತು ಗೋವಿಂದೇಗೌಡ ಇದ್ದರು

ತುಮಕೂರು 24 ಮಂದಿಗೆ ಕೊರೊ‌ನಾ: ಹಳ್ಳಿಗಳಲ್ಲೇ ಹೆಚ್ಚು

ತುಮಕೂರು: ಜಿಲ್ಲೆಯಲ್ಲಿ ಇಂದು 24 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪಾವಗಡದಲ್ಲಿ 14 ಜನರು ಸೋಂಕಿಗೆ ತುತ್ತಾಗಿದ್ದಾರೆ.

ಬಹುತೇಕ ಪ್ರಕರಣಗಳು ಹಳ್ಳಿಗಳಲ್ಲೇ ಕಂಡು ಬಂದಿವೆ.

ಗುಬ್ಬಿ ಮೂವರಿಗೆ, ಕೊರಟಗೆರೆ ಇಬ್ಬರು, ತುಮಕೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ತುಮಕೂರಿನಲ್ಲಿ ನಾಗವಲ್ಲಿ ಗ್ರಾಮ, ತುರುವೇಕೆರೆಯಲ್ಲಿ ಮೇಗರ ಹೊಸಹಳ್ಳಿ, ಗುಬ್ಬಿ ತಾಲ್ಲೂಕಿನಲ್ಲಿ ಮಾವಿನಹಳ್ಳಿ ಗೊಲ್ಲರಹಟ್ಟಿ, ಬಿಳೀನಂದಿ, ಕಾಡೇನಹಳ್ಳಿ, ಗುಬ್ಬಿ ಪಟ್ಟಣದ ಪೇಟೆ ಬೀದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನೂ 65 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಸಚಿವರ ಸೂಚನೆಗೆ ಇನ್ನೂ ಸಿಕ್ಕಿಲ್ಲ ಕಿಮ್ಮತ್ತು..

ಭರತ್ ಎಂ.ಎನ್


ಚಿಕ್ಕನಾಯಕನಹಳ್ಳಿ: ಕೊರೊನಾ ತುರ್ತು ಸಭೆಯಲ್ಲಿ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಪಟ್ಟಣದಲ್ಲಿ ಹಂದಿ ಸಾಕಣೆದಾರರಿಗೆ ನೋಟಿಸ್ ನೀಡಿ ಹಂದಿ ಹಾವಳಿಗೆ ತಪ್ಪಿಸಿ ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಮುಖ್ಯಾಧಿಕಾರಿಗಳು ಇನ್ನೂ ತಲೆ ಕೆಡಿಸಿಕೊಂಡಿಲ್ಲ .

ಕಳೆದ ವಾರ ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದನ್ನು ಗಮನಿಸಿ ತಾಲ್ಲೂಕು ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದರು.

ಪಟ್ಟಣದಲ್ಲಿ ಹಂದಿ ಹಾವಳಿ ಹೆಚ್ಚಾಗುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ಜನಪ್ರತಿನಿಧಿಯ ಮಾತಿಗೆ ಪುಷ್ಟಿ ನೀಡುವಂತೆ . ಸಭೆಯಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಅವರಿಗೆ ಪಟ್ಟಣದಲ್ಲಿ ಹಂದಿ ಸಾಕಣೆ ಮಾಡುವವರಿಗೆ ಮೊದಲು ನೋಟಿಸ್ ನೀಡಿ. ಏಳು ದಿನಗಳ ಕಾಲಾವಕಾಶ ನೀಡಿ. ಕಾಲಾವಕಾಶ ನೀಡಿದರೂ ಸಹ ಹಂದಿಗಳನ್ನು ರಸ್ತೆಗೆ ಬಿಟ್ಟರೆ ಅವುಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಿ ಎಂದು ಕಟ್ಟುನಿಟ್ಟಾದ ಸೂಚನೆಯನ್ನು ಸಚಿವರು ನೀಡಿದ್ದರು.

ಸೂಚನೆ ನೀಡಿ ಒಂದು ವಾರ ಕಳೆಯುತ್ತಿದ್ದರೂ ಸಹ ಪುರಸಭೆ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ . ಪಟ್ಟಣದಲ್ಲಿ ಹಂದಿ ಹಾವಳಿಗಳ ಬಗ್ಗೆ ಹಲವಾರು ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ