Saturday, May 9, 2026
Google search engine
Home Blog Page 194

ವೈ.ಎನ್.ಹೊಸಕೋಟೆ ಸೀಲ್ಡ್ ಡೌನ್

ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ 42 ವರ್ಷದ ವ್ಯಕ್ತಿಗೆ ಸೋಮವಾರದಂದು ಕೊರೋನಾ ದೃಢಪಟ್ಟಿರುವುದರಿಂದ ಮಂಗಳವಾರ ಬೆಳಿಗ್ಗೆ ರೋಗಿಯ ಮನೆಯ ವ್ಯಾಪ್ತಿಯ 100 ಮೀಟರ್ ಸೀಲ್ಡ್ ಡೌನ್ ಮಾಡಲಾಯಿತು.

ಎಂ.ಜಿ.ರಸ್ತೆಯ ಪ್ರಥಮ, ದ್ವಿತೀಯ ಮತ್ತು ತೃತೀಯ ಕ್ರಾಸ್ ರಸ್ತೆಗಳಿಗೆ ಶೀಟ್ ಮತ್ತು ಬ್ಯಾರಿಗೇಟ್‌ಗಳನ್ನು ಅಡ್ಡ ಹಾಕಿ ಶೀಲ್ಡ್ ಡೌನ್ ಮಾಡಲಾಗಿದೆ.

ಈ ವ್ಯಾಪ್ತಿಯ ಮನೆಗಳಲ್ಲಿನ ಜನತೆ ೧೪ ದಿನಗಳ ಕಾಲ ಹೊರಬರದಂತೆ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಅಲ್ಲಿನ ಮನೆಗಳು ಮತ್ತು ಕುಟುಂಬಗಳ ಸದಸ್ಯರನ್ನು ಪಟ್ಟಿ ಮಾಡಿ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ.

ಕೊರೋನಾ ದೃಢಪಟ್ಟಿರುವ ವ್ಯಕ್ತಿಯು 7 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ಗ್ರಾಮಕ್ಕೆ ಕೊರೋನಾ ಲಗ್ಗೆ ಹಿಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿ ಮತ್ತು ಪೋಲೀಸ್ ಠಾಣೆಯಲ್ಲಿ ಸ್ಯಾನಿಟಿಸಿಂಗ್ ಮತ್ತು ಸ್ಪ್ರೇ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಅತ್ಯಗತ್ಯ ಇದ್ದರೆ ಮಾತ್ರ ಸಾರ್ವಜನಿಕರಿಗೆ ಕಛೇರಿ ಪ್ರವೇಶ ನೀಡಲಾಗುತ್ತಿದೆ.

ಕಲಾಕ್ಷೇತ್ರವೆಂಬ ನನ್ನೊಳಗಿನ ಕವಿತೆ…

ಜಿ.ಎನ್.ಮೋಹನ್


ಆ ದಿನ ಒಂದು ವಿಚಿತ್ರ ಜರುಗಿ ಹೋಗಿತ್ತು.

ಸದಾ ರಂಗದ ಮೇಲಿದ್ದು ಕತ್ತಲು ಬೆಳಕಿನಾಟದ ಮಧ್ಯೆ ಜನರ ಮನಸ್ಸಿಗೆ ಲಗ್ಗೆ ಹಾಕುತ್ತಿದ್ದ ಆ ಎಲ್ಲರೂ ಮೆಟ್ಟಿಲಿನ ಮೇಲೆ ಕುಳಿತಿದ್ದರು.

ಪ್ರತಿಯೊಬ್ಬರ ಎದೆಯಲ್ಲೂ ನೋವು, ಆಕ್ರೋಶ ಮಡುಗಟ್ಟಿತ್ತು.

ತಮ್ಮ ಮನೆಯ ಮಂದಿಗೇ ಏನೋ ನೋವಾಯಿತು ಎನ್ನುವಂತೆ ಪ್ರತಿಯೊಬ್ಬರೂ ಯಾತನೆ ಅನುಭವಿಸುತ್ತಿದ್ದರು.

ಅವರೆಲ್ಲರೂ ಹಾಗೆ ಒದ್ದಾಡುತ್ತಿದ್ದುದ್ದು ಇನ್ನ್ಯಾರ ಬಗ್ಗೆಯೂ ಅಲ್ಲ, ರವೀಂದ್ರ ಕಲಾಕ್ಷೇತ್ರದ ಬಗ್ಗೆ.

ಗುಂಡೂರಾವ್ ಸರ್ಕಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲು ಸಜ್ಜಾಯಿತು.

ಅದುವರೆಗೂ ಈಗ ಬೆಂಗಳೂರಿನ ಬಸ್ ಸ್ಟ್ಯಾಂಡ್ ಇರುವ ಜಕ್ಕರಾಯನ ಕೆರೆ ಕಾಂಗ್ರೆಸ್ ಎಕ್ಸಿಬಿಶನ್ನಿನ ತಾಣವಾಗಿತ್ತು. ಗುಂಡೂರಾಯರಿಗೆ ಅದೇನು ಯೋಚನೆ ಬಂತೋ ಕಲಾಕ್ಷೇತ್ರದತ್ತ ಮುಖ ಮಾಡಿಬಿಟ್ಟರು.

ಸುದ್ದಿ ಗೊತ್ತಾದದ್ದೇ ತಡ, ತಮ್ಮ ತಮ್ಮ ಡೋಲು, ಹಾರ್ಮೋನಿಯಂ, ಕಂಜರ, ತಾಳ, ಗೆಜ್ಜೆ, ನಾಟಕದ ವೇಷಭೂಷಣಗಳ ಸಮೇತ ಕಲಾವಿದರು ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಕುಳಿತೇಬಿಟ್ಟರು.

’ಕೇಳಿ ಕೇಳಿರೋ ಕಲಾಕ್ಷೇತ್ರ ಕಥೆಯ
ನೀವೆಲ್ಲರೂ ಕೇಳಿ
ನೊಂದ ಬೆಂದ ಈ ಕಲಾಗಾರದ ವ್ಯಥೆಯ …..’

ಒಬ್ಬೊಬ್ಬರೂ ಒಂದೊಂದು ಸಾಲು ಸೇರಿಸುತ್ತಾ ಹೋದರು.

’ಕವಿ ರವೀಂದ್ರರ ಬೀಡಂತೆ
ಕಲಾ ಸೇವೆಯೇ ಗುರಿಯಂತೆ
ಸತ್ಯಕೆ ಷೆಡ್ಡೇ ಗತಿಯಂತೆ
ವಸ್ತು ಪ್ರದರ್ಶನ ಇಲ್ಲಂತೆ …

ಹೀಗೆ ಕಲಾವಿದರು ಕಲಾಕ್ಷೇತ್ರದ ಬಗಲಿಗೆ ನಿಂತೇಬಿಟ್ಟರು.

ನಿನ್ನ ಮೈ ಯಾರಾದರು ಮುಟ್ಟಿದರೆ ನಾವಿದ್ದೇವೆ ಎನ್ನುವ ಭರವಸೆ ನೀಡಿದರು.

ಕಲಾಕ್ಷೇತ್ರ ಎಂಬುದು ನನ್ನೊಳಗಿನ ಬೆರಗು.

ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ’ಇಸ್ಪೀಟ್ ರಾಜ್ಯ’ಕ್ಕೆ ಯಾರೆಲ್ಲಾ ಬರುತ್ತೀರಿ ಕೈ ಎತ್ತಿ’ ಎಂದರು.

ಇದೇನಪ್ಪ ಇಸ್ಪೀಟ್ ರಾಜ್ಯ? ಅಲ್ಲಿಗೆ ಯಾಕೆ ಕರೆದುಕೊಂಡು ಹೋಗುತ್ತಾರೆ ಎಂದು ಕಣ್ಣುಬಾಯಿ ಬಿಡುವಂತಾಗಿತ್ತು.

’ಇಸ್ಪೀಟ್’ ಎಂದರೆ ಸಾಕು ಮೈಮೇಲೆ ಬಾಸುಂಡೆ ಎಬ್ಬಿಸುವ ಮನೆ ನಮ್ಮದು. ಹಾಗಿರುವಾಗ ಅದರ ರಾಜ್ಯಕ್ಕೇ ಹೋಗುವುದು… ನನಗೋ ಇದು ಬಿಡಿಸಲಾಗದ ಒಗಟಾಗಿತ್ತು.

ಆದರೆ ಹಾಗೆ ಕೇಳುತ್ತಿದ್ದದ್ದು ನಾವೆಲ್ಲರೂ ಪ್ರೀತಿಸುತ್ತಿದ್ದ ನಾಟಕದ ಮೇಷ್ಟ್ರು ಎಂ ವಿ ಸುಬ್ಬಣ್ಣ. ಆ ಕಾರಣಕ್ಕಾಗಿಯೇ ಧೈರ್ಯ ಮಾಡಿ ನಾನೂ ಹಿಂದುಮುಂದು ನೋಡದೆ ಕೈ ಎತ್ತಿಬಿಟ್ಟಿದ್ದೆ.

ಆಮೇಲೆ ಗೊತ್ತಾಯಿತು ಅದು ‘ಬೆನಕ’ ತಂಡ ಅಭಿನಯಿಸುತ್ತಿದ್ದ ಬಿ ವಿ ಕಾರಂತರ ನಿರ್ದೇಶನದ ನಾಟಕ ಅಂತ. ನಾಟಕ ಇದ್ದದ್ದು ರವೀಂದ್ರ ಕಲಾಕ್ಷೇತ್ರದಲ್ಲಿ.

ಗಂಟೆ ಹೊಡೆದಂತೆ ಆರು ಗಂಟೆಗೆ ಕಲಾಕ್ಷೇತ್ರದ ಅಂಗಳಕ್ಕೆ ಕಾಲಿಟ್ಟಾಗ ’ನೀ ಯಾರೋ ಏನೋ ಎಂತೋ / ಅಂತೂ ಪೋಣಿಸಿತು ಕಾಣದಾ ತಂತು…’ ಎನ್ನುವ ಅನುಭವ.

ಆ ಕತ್ತಲು, ಆ ಬೆಳಕು, ಆ ಹಾಡುಗಳು, ಆ ದೃಶ್ಯಗಳು …. ಕಲಾಕ್ಷೇತ್ರ ನನ್ನೊಳಗೆ ಒಂದು ಜಾಗ ಹುಡುಕಿಕೊಂಡದ್ದು ಹೀಗೆ.

ಅಂದಿನಿಂದ ಇಂದಿನವರೆಗೂ ಕಲಾಕ್ಷೇತ್ರ ನನ್ನೊಳಗೆ ತನ್ನ ಆಟ – ಮಾಟವನ್ನು ನಡೆಸುತ್ತಲೇ ಬಂದಿದೆ.

ಸಿಜಿಕೆ ಯ ’ಒಡಲಾಳ’ ’ಬೆಲ್ಚಿ’ ’ಮಹಾಚೈತ್ರ’ ಪ್ರಸನ್ನರ ’ದಂಗೆಯ ಮುಂಚಿನ ದಿನಗಳು’ ’ತಾಯಿ’ ’ಗೆಲಿಲಿಯೋ’ ಟಿ ಎನ್ ಸೀತಾರಾಂ ಅವರ ’ನಮ್ಮೊಳಗೊಬ್ಬ ನಾಜೂಕಯ್ಯ’, ಸುರೇಶ್ ಆನಗಳ್ಳಿಯ ’ಮಂಟೆಸ್ವಾಮಿ ಪ್ರಸಂಗ’… ಹೀಗೆ ನೂರೆಂಟು ನಾಟಕಗಳು ನನ್ನೊಳಗೆ ಇಳಿದಿವೆ,

ನಾದದ ನದಿಯನ್ನು ನಡೆಸಿವೆ, ನನ್ನನ್ನು ತಿದ್ದಿವೆ, ಕಣ್ಣೋಟವನ್ನು ನೀಡಿವೆ.

ಪುಸ್ತಕವೆಂದರೆ ಹೇಗೆ ಪುಸ್ತಕ ಮಾತ್ರವಲ್ಲವೋ ಹಾಗೆ ನನಗೆ ನಾಟಕವೆಂದರೆ ಬರೀ ನಾಟಕ ಮಾತ್ರವಲ್ಲ. ಹಾಗೆಯೇ ಕಲಾಕ್ಷೇತ್ರವೆಂದರೆ ಬರೀ ಕಲಾಕ್ಷೇತ್ರವೂ ಅಲ್ಲ, ಬದುಕಿನ ಪಾಠಶಾಲೆ.

ನಾಲ್ಕು ಗೋಡೆಯ ಒಳಗೆ ನಾನು ಎಷ್ಟು ಹೆಕ್ಕಿಕೊಂಡಿದ್ದೇನೆಯೋ ಅದರ ನಾಲ್ಕು ಪಟ್ಟು ಹೆಚ್ಚೇ ನಾನು ಕಲಾಕ್ಷೇತ್ರದಿಂದಲೂ ಆಯ್ದುಕೊಂಡಿದ್ದೇನೆ.

ಕಲಾಕ್ಷೇತ್ರವೆಂದರೆ ಅಲ್ಲಿನ ಸ್ಟೇಜ್ ಮಾತ್ರ ಎಂದುಕೊಂಡರೆ ಯಾರಾದರೂ ನಕ್ಕುಬಿಟ್ಟಾರು.

ಕಲಾಕ್ಷೇತ್ರವೆಂದರೆ ಅದು ಸ್ಟೇಜ್ ಕೂಡಾ ಹೌದು, ಅದರ ಮುಂದಿನ ಮೆಟ್ಟಿಲೂ ಹೌದು, ಹಿಂದಿನ ಬಯಲು ರಂಗವೂ ಹೌದು, ಪಕ್ಕದ ಕನ್ನಡ ಭವನವೂ ಹೌದು, ರಿಹರ್ಸಲ್ ಷೆಡ್ಡುಗಳೂ ಹೌದು, ವಿಶ್ರಾಂತಿ ಕೊಠಡಿಗಳೂ ಹೌದು, ಪಕ್ಕದ ಕಲ್ಲುವನವೂ ಹೌದು, ಅಷ್ಟೇ ಏಕೆ ಉಡುಪರ ಕ್ಯಾಂಟೀನ್ ಕೂಡಾ ಹೌದು.

ಕಲಾಕ್ಷೇತ್ರ ಎಂದರೆ ಕೇವಲ ನಾಟಕವಲ್ಲ.

ಇಲ್ಲಿನ ಮೆಟ್ಟಿಲಿನ ಮೇಲೆ ಏರುದನಿಯ ಚರ್ಚೆಗಳಾಗಿವೆ, ಹೊಸ ತಂಡಗಳು ಹುಟ್ಟಿವೆ, ನೂರು ಕನಸುಗಳು ಅರಳಿವೆ, ಪುಸ್ತಕಗಳು ಬಿಡುಗಡೆ ಆಗಿವೆ, ಕಲಾಕೃತಿಗಳು ಮೂಡಿವೆ..

ಸಂತಸದ ಕಣ್ಣೀರೂ ಚಿಮ್ಮಿವೆ, ನೋವಿನ ಕಂಬನಿಯೂ ಅಲ್ಲಿ ಜಾಗ ಮಾಡಿಕೊಂಡಿದೆ.

ಕವಿ ರವೀಂದ್ರರ ನೂರನೆ ಹುಟ್ಟುಹಬ್ಬವನ್ನು ಜನಮನದಲ್ಲಿ ಸ್ಥಾಯಿಯಾಗಿ ಉಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿತು.

ರವೀಂದ್ರರ ತವರು ಕೊಲ್ಕತ್ತಾದಲ್ಲಿ ರವೀಂದ್ರ ಸದನ, ಭೂಪಾಲದಲ್ಲಿ ರವೀಂದ್ರ ಭವನ, ಹೈದರಾಬಾದಿನಲ್ಲಿ ರವೀಂದ್ರ ಭಾರತಿ, ಮುಂಬೈನಲ್ಲಿ ರವೀಂದ್ರ ನಾಟ್ಯಮಂದಿರ ತಲೆ ಎತ್ತಿತು.

ಬೆಂಗಳೂರಿನಲ್ಲಿ ರವೀಂದ್ರರ ಹೆಸರಿನ ಕಲಾಕ್ಷೇತ್ರ ಹುಟ್ಟುಹಾಕಲು ಮುಂದಾದಾಗ ಕಣ್ಣಿಗೆ ಕಂಡದ್ದು ಪುರಭವನದ ಪಕ್ಕ ಇದ್ದ ಕೊಳೆಗೇರಿ.

ಆಗ ಮುಖ್ಯಮಂತ್ರಿಯಾಗಿದ್ದ ಬಿ ಡಿ ಜತ್ತಿ ಉತ್ಸಾಹದಿಂದ ಮುಂದೆ ಬಂದರು.

ಮಾಸ್ತಿ, ಬೇಂದ್ರೆ, ಶಿವರಾಮ ಕಾರಂತ, ಗೊರೂರು ರಾಮಸ್ವಾಮಿ ಐಯ್ಯಂಗಾರ್, ಮಲ್ಲಿಕಾರ್ಜುನ ಮನ್ಸೂರರೂ ಸೇರಿದಂತೆ ಹಲವು ಗಣ್ಯರ ಸಮಿತಿ ರಚನೆಯಾಯಿತು.

ಎಸ್ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದೇ ಕಲಾಕ್ಷೇತ್ರ ನಿರ್ಮಾಣಕ್ಕೆ ಇನ್ನಷ್ಟು ವೇಗ ಒದಗಿತು.

ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಮಕ್ಕಳಿಗಾಗಿ ನೆಹರೂ ಸಿನಿಮಾ ಪ್ರದರ್ಶಿಸಿ ಹಣ ಸಂಗ್ರಹಿಸಲಾಯಿತು. ಶಿವಾಜಿ ಗಣೇಶನ್ ’ವೀರಪಾಂಡ್ಯ ಕಟ್ಟಬೊಮ್ಮನ್’ ನಾಟಕ ಪ್ರದರ್ಶಿಸಿ ಹಣ ಕೂಡಿಸಿಕೊಟ್ಟರು. ಅಧಿಕಾರಿಗಳು, ಕಾರ್ಮಿಕರು, ಮಠಾಧಿಪತಿಗಳು ಹಣ ಸೇರಿಸುತ್ತಾ ಹೋದರು.

ಅಮೇರಿಕಾದ ಚಾರ್ಲ್ಸ್ ವಿಲ್ಸನ್ ಕಣ್ಗಾವಲಿನಲ್ಲಿ ಬಿ ಆರ್ ಮಾಣಿಕ್ಯಂ ರೂಪರೇಷೆ ಸಿದ್ಧಪಡಿಸಿದರು.

೧೯೬೩, ಮಾರ್ಚ್ ೧೨ ರಂದು ಕಲಾಕ್ಷೇತ್ರದ ಪರದೆಯನ್ನು ಸರಿಸಿಯೇ ಬಿಟ್ಟರು.

ಆಗ ತಲೆಬಿಸಿಯಾಗಿದ್ದು ರಂಗತಂಡಗಳಿಗೆ.

೫೦ ರೂ ಖರ್ಚು ಮಾಡಿ ಇಡೀ ಒಂದು ನಾಟಕವನ್ನೇ ತಯಾರು ಮಾಡುತ್ತಿದ್ದ ರಂಗತಂಡಗಳಿಗೆ ಬರೀ ಪ್ರದರ್ಶನ ಮಾಡಲು ನೂರಾರು ರೂ ಬಾಡಿಗೆ ಕೊಡುವುದು ಸುತರಾಂ ಸಾಧ್ಯವಿರಲಿಲ್ಲ.

ಅದುವರೆವಿಗೂ ಬಸವನಗುಡಿ ನ್ಯಾಷನಲ್ ಕಾಲೇಜ್, ಮಲ್ಲೇಶ್ವರಂ ಅಸೋಸಿಯೇಷನ್ ನಾಟಕದ ತವರಾಗಿತ್ತು. ಹಾಗಾಗಿ ಕಲಾಕ್ಷೇತ್ರ ಸರ್ಕಾರಿ ಕಾರ್ಯಕ್ರಮ, ಸಭೆ, ಸಮ್ಮೇಳನಕ್ಕೇ ಸೀಮಿತವಾಗಿ ಹೋಯಿತು.

ಸಂಗೀತ ನಾಟಕ ಅಕಾಡಮಿ ಕಛೇರಿ ಕಲಾಕ್ಷೇತ್ರದಲ್ಲಿಯೇ ನೆಲೆಯೂರಿತು.

ಯಾವಾಗ ವಿದೇಶಿ ಸಾಂಸ್ಕೃತಿಕ ತಂಡಗಳು ಸಾಂಸ್ಕೃತಿಕ ವಿನಿಮಯದಡಿ ಬೆಂಗಳೂರಿಗೆ ಬರಲು ಆರಂಭಿಸಿದವೋ ಆಗ ಕಲಾಕ್ಷೇತ್ರ ಸಹ ಇಲ್ಲಿನ ರಂಗತಂಡಗಳಿಗೆ ಬೇಕಾದಂತೆ ಹೊಸ ರೂಪ ಪಡೆಯುತ್ತಾ ಹೋಯಿತು.

‘ನಾಟ್ಯ ಸಂಘ’ದ ಹೆಮ್ಮೆಯ ಉಲ್ಲಾಳ್ ಷೀಲ್ಡ್ ಸ್ಪರ್ಧೆ ಪ್ರಥಮ ಬಾರಿಗೆ ಪುರಭವನ ಬಿಟ್ಟು ಕಲಾಕ್ಷೇತ್ರ ಪ್ರವೇಶಿಸಿತು.

ಈ ಮಧ್ಯೆ ಒಂದು ಘಟನೆ ರಂಗಭೂಮಿಯ ಎಲ್ಲರನ್ನೂ ಒಗ್ಗೂಡಿಸಿಬಿಟ್ಟಿತು.

೧೯೭೪ರಲ್ಲಿ ರಂಗಸಂಪದದ ’ಆ ಮನಿ’ ನಾಟಕ ಪ್ರದರ್ಶನಕ್ಕೆ ನೀಡಿದ್ದ ಅನುಮತಿಯನ್ನು ರಾತ್ರೋರಾತ್ರಿ ರದ್ದು ಮಾಡಲಾಯಿತು.

ರಂಗಕರ್ಮಿಗಳು ಕುದ್ದುಹೋದರು.

ಬಿ ವಿ ಕಾರಂತರ ನೇತೃತ್ವದಲ್ಲಿ ‘ರಂಗಭೂಮಿ ಕ್ರಿಯಾಸಮಿತಿ’ ರಚನೆಯಾಯಿತು. ಕಲಾಕ್ಷೇತ್ರ ಕಲಾವಿದರ ತಾಣವಾಗಿ ಬದಲಾಗಲು ಆರಂಭಿಸಿದ್ದೇ ಆಗ.

ಕಲಾಕ್ಷೇತ್ರದ ಬಾಡಿಗೆ ಇಳಿಸಬೇಕು, ಬೆಳಕು ವ್ಯವಸ್ಥೆ ಸರಿಮಾಡಬೇಕು, ರಿಹರ್ಸಲ್ ಗೂ ಅನುಮತಿ ನೀಡಬೇಕು, ಬಾಡಿಗೆ ಯಾಕೆ ಹೆಚ್ಚಿಸಬೇಕು ಎನ್ನುವುದಷ್ಟೇ ಅಲ್ಲದೆ ಅಧಿಕಾರಿಗಳಿಗೆ ಆರು ಸೀಟು ಪುಕ್ಕಟೆಯಾಗಿ ಯಾಕೆ ಕೊಡಬೇಕು ಎಂದು ಪ್ರಶ್ನಿಸುವವರೆಗೂ ಬಂದು ನಿಂತಿತು.

ಗುಂಡೂರಾವ್ ವಸ್ತುಪ್ರದರ್ಶನ ನಡೆಸಲು ಶಂಕುಸ್ಥಾಪನೆ ನಡೆಸಿದ್ದೇ ಪ್ರತಿಭಟನೆಯ ಅಲೆಯನ್ನೇ ಎದುರಿಸಬೇಕಾಯಿತು.

೧೯೮೩ರಲ್ಲಿ ಕಲಾಕ್ಷೇತ್ರದ ರಿಪೇರಿಗಾಗಿ ಅದರ ಬಾಗಿಲು ಮುಚ್ಚಲಾಯಿತು. ತಿಂಗಳುಗಳು ಉರುಳಿದರೂ ಬಾಗಿಲು ತೆಗೆಯದ್ದು ಕಂಡು ಪಕ್ಕದಲ್ಲಿ ತಾತ್ಕಾಲಿಕವಾಗಿ ‘ಕೈಲಾಸಂ ಕಲಾಕ್ಷೇತ್ರ’ ನಿರ್ಮಿಸಲಾಯಿತು.

ಆ ನಂತರ ಹಿಂದೆ ಸಂಸ ಬಯಲು ರಂಗಮಂದಿರ ಬಂದದ್ದು, ಕೈಲಾಸಂ ಕಲಾಕ್ಷೇತ್ರ ಇದ್ದ ಜಾಗ ಕನ್ನಡಭವನವಾಗಿದ್ದು ಎಲ್ಲವೂ ಇತಿಹಾಸ.

ಕಲಾಕ್ಷೇತ್ರ ಎಷ್ಟೋ ತಲೆಮಾರುಗಳಿಗೆ ವಿವೇಕ ಬಿತ್ತಿದ ಜಾಗ. ಬಂಡಾಯದ ಉಸಿರು ಜೀವಂತವಿಟ್ಟ ಜಾಗ, ಹೊಸ ನೋಟಕ್ಕೆ ದಾರಿ ಮಾಡಿಕೊಟ್ಟ ಜಾಗ. ವಿಚಾರ ಮಂಥನಕ್ಕೆ ಒದಗಿದ ವೇದಿಕೆ.

‘ಒಣಮರ ಚಿಗುರಿ ಹೂ ಬಿಟ್ಟ ಕಥೆಯ ಊರೆಲ್ಲಾ ಹಾಡಿ ಹಾಡಿ, ಕಥೆಯಾಯ್ತು, ಹೊಸ ಕವಿತೆಯಾಯ್ತು, ನಾಲಿಗೆಯ ಹೆಡೆಯನಾಡಿ..’ ಎನ್ನುವ ಪ್ರಸನ್ನ ನಿರ್ದೇಶಿಸಿದ ‘ದಂಗೆಯ ಮುಂಚಿನ ದಿನಗಳು’ ನಾಟಕದ ಸಾಲು ಯಾಕೋ ನೆನಪಾಗುತ್ತಿದೆ.

ರವೀಂದ್ರ ಕಲಾಕ್ಷೇತ್ರ ಎಂಬ ಹೊಸ ಕವಿತೆ ಎದೆಯಲ್ಲಾಡುತ್ತಿದೆ.
—-

ಚಿತ್ರ: ಕಲಾಕ್ಷೇತ್ರದ ಮೆಟ್ಟಿಲು ಎಂದರೆ ರಂಗಕರ್ಮಿಗಳ ಜೀವನಾಡಿ.
ಈ ಮೆಟ್ಟಿಲಿನ ಮೇಲೆ ಬಿ ಜಯಶ್ರೀ ಜೊತೆಯಲ್ಲಿ..

ಚಿ.ನಾ.ಹಳ್ಳಿ‌ ತಾಲ್ಲೂಕು ಕಚೇರಿ ಮುಖ್ಯದ್ವಾರ ಬಂದ್ …

ಚಿಕ್ಕನಾಯಕನಹಳ್ಳಿ: ‌ಸಾರ್ವಜನಿಕರಿಗೆ ತಾಲ್ಲೂಕು ಕಚೇರಿ ಪ್ರವೇಶಕ್ಕೆ ಸೋಮವಾರದಿಂದ ನಿರ್ಬಂಧ ವಿಧಿಸಲಾಗಿದ್ದು ಕೇವಲ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶಕ್ಕೆ ಆಹ್ವಾನ ಕಲ್ಪಿಸಲಾಗಿದೆ.

ಕೆಲ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಕಚೇರಿ ಮುಂಭಾಗ ಪ್ರಕಟಣೆ ಮಾಡಿ ಸಂಪರ್ಕಿಸಲು ಸಾರ್ವಜನಿಕರಿಗೆ ತಿಳಿಸಲಾಗಿದೆ.

ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಎರಡು ಮುಖ್ಯ ದ್ವಾರಗಳು ಬಂದ್ ಮಾಡಿ ಕೇವಲ ಕಚೇರಿ ಸಿಬ್ಬಂದಿಗೆ ಮಾತ್ರ ಒಳಗಡೆ ಹೋಗುತ್ತಿರುವ ದೃಶ್ಯ ಕಂಡು ಬಂದಿತು.

ಭಾನುವಾರ ಕಾಡೆನಹಳ್ಳಿ ಯಲ್ಲಿ 8 ವರ್ಷದ ಮಗುವಿಗೆ ಕೊರೊನ ಪಾಸಿಟಿವ್ ಬಂದಿರುವುದರಿಂದ ಮಗುವಿನ ತಂದೆ ಸರ್ವೆಯರ್ ಆಗಿ ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ತಾಲ್ಲೂಕು ಕಚೇರಿಯ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಗೇಟ್ ಮುಂಭಾಗದಲ್ಲಿ ಕಾವಲು ಕುಳಿತಿದ್ದ ಕಚೇರಿ ಸಿಬ್ಬಂದಿ ತಿಳಿಸಿದರು.

ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಗ್ಯವೂ ಸಹ ಸಾರ್ವಜನಿಕರಿಗೆ ಅತೀ ಮುಖ್ಯವಾಗಿದೆ.‌ ಆದರೆ ಯಾವುದೇ ಮುನ್ಸೂಚನೆ ನೀಡದೆ ಕಚೇರಿಗೆ ಪ್ರವೇಶ ನಿರ್ಬಂಧ ಮಾಡಿರುವುದರಿಂದ ದೂರದ ಊರುಗಳಿಂದ ಬಂದಿರುವವರಿಗೆ ಅನಾನುಕೂಲವಾಯಿತು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು

ಮಧುಗಿರಿ RTO: ಸಾ‌ಮಾಜಿಕ ಅಂತರಕ್ಕಿಲ್ಲ ಬೆಲೆ?

0

ಧಾರಂ


ಮಧುಗಿರಿ: ಇಲ್ಲಿ‌ನ ಆರ್ ಟಿಒ ಕಚೇರಿಯಲ್ಲಿ ಚಾಲನಾ ಪರವಾನಗಿ ನೀಡಬೇಕಾದರೆ ಕೊರೊನಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.

https://youtu.be/W-Z48YXoDYA

ಸೋಮವಾರ ಡ್ರೈವಿಂಗ್ ಪರೀಕ್ಷೆ ವೇಳೆ ಗೌಜು ಗದ್ದಲ ಕಂಡುಬಂತು. ಪರೀಕ್ಷಾರ್ಥಿಗಳು ಬಹಳಷ್ಟು ಮಂದಿ ಮಾಸ್ಕ್ ಕೂಡ ಧರಿಸಿರಲಿಲ್ಲ.

ಆರ್ ಟಿ ಒ ಅಧಿಕಾರಿ ಸಾಮಾಜಿಕ ಅಂತರ ಕಾಪಾಡಿ, ಕಾಪಾಡಿ ಎಂದು ಕೂಗಿ, ಕೂಗಿ ಸುಸ್ತಾದರೆ ಹೊರತು ಜನರು ಪಾಲಿಸಲಿಲ್ಲ.

ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಹೆಚ್ಚುತ್ತಿದೆ. ಹೀಗಾಗಿ ಕೊರೊನಾ ಕಳೆಯುವವರೆಗೂ ಚಾಲನ ಪರವಾನಗಿ ನೀಡುವುದನ್ನು ಜಿಲ್ಲಾಧಿಕಾರಿ ರದ್ದು ಮಾಡಬೇಕು. ಇಲ್ಲವೇ ವಾರದಲ್ಲಿ ಹತ್ತು ಜನರಿಗೆ ಮಾತ್ರ ಪರವಾನಗಿ ನೀಡುವಂತೆ ಸೂಚನೆ ನೀಡಬೇಕು. ಇಲ್ಲದಿದ್ದರೆ ಸೋಂಕು ಹರಡುವ ಕೇಂದ್ರವಾಗಿ ಆರ್ ಟಿ ಒ ಕಚೇರಿ ಆಗಲಿದೆ ಎಂದು ವಕೀಲ ನೇತ್ರಾನಂದ ಹೇಳಿದರು.

ಸುಮಲತಾ ಅಂಬರೀಶ್ ಗೆ ಕೊರೊನಾ

0

ತುಮಕೂರು: ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮತದಾರರಿಗೆ ಈ ಬಗ್ಗೆ ಬರೆದುಕೊಂಡಿದ್ದಾರೆ.

ಆತ್ಮೀಯರೆ,

ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀನಿ.

ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿದ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ.

ಸುಮಲತಾ ಅಂಬರೀಷ್
ಸದಸ್ಯೆ, ಮಂಡ್ಯ ಲೋಕಸಭಾ ಕ್ಷೇತ್ರ

ಕೊರೊನಾ: ಕೈ‌‌‌ಚೆಲ್ಲುತ್ತಿದ್ದಾರಾ ಉಸ್ತುವಾರಿ ಸಚಿವರು?

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ನಮ್ಮ ಕೈ ಮೀರಿ ಹೋಗುತ್ತಿದೆ ಎಂದು ಹೇಳುವ ಮೂಲಕ ಯುದ್ಧಕ್ಕೆ ಮೊದಲೇ ಉಸ್ತುವಾರಿ ಸಚಿವರು ಕೈ ಚೆಲ್ಲುತ್ತಿದ್ದಾರ ಎಂಬ ಅನುಮಾನ ಮೂಡುವಂತಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾವಿರ ಗಡಿ ದಾಟಿದರೂ ಅಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಮುನ್ನೂರರ ಗಡಿ ದಾಟಿಲ್ಲದ ಜಿಲ್ಲೆಯಲ್ಲಿ ಈಗಲೇ ಪರಿಸ್ಥಿತಿ ಕೈ ಮೀರುತ್ತಿದೆ ಎಂದರೆ ಏನರ್ಥ ಎಂದು ಜನರು ಕೇಳುವಂತಾಗಿದೆ.

ಲಾಕ್ ಡೌನ್ ಸಮಯ ಸೇರಿದಂತೆ ಪರಿಸ್ಥಿತಿ ನಿಭಾಯಿಸಲು ಇಲ್ಲಿಯವರೆಗೂ ಸಿಕ್ಕ ಸಮಯದಲ್ಲಿ ಜಿಲ್ಲಾಡಳಿತ ಏನು ಮಾಡುತ್ತಿತ್ತು. ಉಸ್ತುವಾರಿ ಸಚಿವರಿಗೆ ಇದೆಲ್ಲ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಅವರದೇ ಪಕ್ಷದ ಮುಖಂಡರಾದ ಸೊಗಡು ಶಿವಣ್ಣ ತಮ್ಮ ಹೋಟೆಲ್ ಬಿಟ್ಟು ಕೊಡುವುದಾಗಿ ಹೇಳಿ ಎಷ್ಟು ತಿಂಗಳು ಕಳೆದಿವೆ. ಸಂಸದರು ತಮ್ಮ ಒಡೆತನ ಸಿಐಟಿ ಕಾಲೇಜು ಬಿಟ್ಟು ಕೊಡುವುದಾಗಿ ಹೇಳಿ ಎಷ್ಟು ತಿಂಗಳಾಗಿವೆ. ಇಲ್ಲಿ ಕೋವಿಡ್ ರೋಗಿಗಳ ನಿರ್ವಹಣಾ ಕೇಂದ್ರ ತೆರೆಯಲು ಜಿಲ್ಲಾಡಳಿತಕ್ಕೆ, ಉಸ್ತುವಾರಿ ಸಚಿವರಿಗೆ ಏನು ಅಡ್ಡಿಯಾಗಿತ್ತು ಎಂಬುದನ್ನು ಜನರ ಮುಂದೆ ಇಡಬೇಕಾಗಿದೆ ಎಂದು ಜನರು ಕೇಳುತ್ತಿದ್ದಾರೆ.

ರೋಗ ಎಷ್ಟೇ ಉಲ್ಬಣಿಸಿದರೂ ಚಿಕಿತ್ಸೆ ನೀಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದನ್ನು ಬಿಟ್ಟು ಈಗ ಈ ರೀತಿ ಹೇಳುತ್ತಿರುವುದು ಸರಿ ಅಲ್ಲ ಎಂದು ಜನರು ಹೇಳುತ್ತಿದ್ದಾರೆ.

ಇಷ್ಟು ದಿನ ಏನು ಮಾಡುತ್ತಿದ್ದರು. ಏಕಾಗಿ ಮೊದಲೇ ತಯಾರಿ ನಡೆಸಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆ ಸಹ ಜನರಿಂದ ಕೇಳಿ ಬರುತ್ತಿವೆ.

ವಾರ್ತಾ ಇಲಾಖೆ ನೀಡಿರುವ ಉಸ್ತುವಾರಿ ಸಚಿವರ ಪತ್ರಿಕಾಗೋಷ್ಠಿಯ ವಿವರ ಹೀಗಿದೆ


ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೂ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸೋಂಕು ಸಮುದಾಯದಲ್ಲಿ ಹರಡುತ್ತಿರುವುದು ಆಘಾತವನ್ನುಂಟು ಮಾಡಿದೆ. ಇದರಿಂದ ಸೋಂಕು ನಿಯಂತ್ರಣ ನಮ್ಮ ಕೈತಪ್ಪುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ತರಬಹದು ಎಂದರು.

ಜಿಲ್ಲೆಯಲ್ಲಿ 9 ಕೋವಿಡ್ ಕೇರ್ ಸೆಂಟರ್‍ಗಳಿದ್ದು, ಈ ಸೆಂಟರ್‍ನಲ್ಲಿ ರೋಗ ಲಕ್ಷಣಗಳಿಲ್ಲದ ಅಥವಾ ಸಣ್ಣ-ಪುಟ್ಟ ಖಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ತಗುಲಿದರೆ ಗುಣಪಡಿಸುವುದು ಕಷ್ಟಸಾಧ್ಯ ಎಂದು ಹೇಳಿದರು.

ರೋಗಲಕ್ಷಣಗಳು ಕಂಡುಬಂದ ರೋಗಿಗಳಿಗೆ ಮನೆಯಲ್ಲಿಯೇ ಸ್ವಯಂ ಔಷಧೋಪಚಾರದ ಪ್ರಯೋಗ ಮಾಡಿ ರೋಗ ಉಲ್ಬಣವಾಗಿ ಅಸಹಾಯಕ ಸ್ಥಿತಿ ತಲುಪಿದಾಗ ಆಸ್ಪತ್ರೆಗೆ ಕರೆತರದೆ ರೋಗಿಯನ್ನು ತಕ್ಷಣವೇ ಪರೀಕ್ಷೆಗೊಳಪಡಿಸುವುದರಿಂದ ಅನಾಹುತಗಳನ್ನು ತಡೆಯಬಹುದೆಂದು ತಿಳಿಸಿದರು.

ಪೋಷಕರು ಮಕ್ಕಳನ್ನು ಹೊರಗಡೆ ಬಿಡಬಾರದು. ಮಕ್ಕಳಿಗೆ ರೋಗ ತಗುಲಿದರೆ ನಿಯಂತ್ರಿಸುವುದು ಬಹಳ ಕಷ್ಟ ಎಂದರಲ್ಲದೆ ಸೋಂಕಿತರು ಗುಣಮುಖರಾದ ಕೂಡಲೇ ಎಲ್ಲೆಂದರಲ್ಲಿ ಓಡಾಡದೆ, ಸಮುದಾಯದಲ್ಲಿ ಬೆರೆಯದೆ ಕನಿಷ್ಟ ಒಂದು ವಾರಗಳ ಕಾಲ ಹೋಮ್ ಕ್ವಾರೆಂಟೈನ್‍ಗೊಳಗಾಗಬೇಕು ಎಂದು ಸಲಹೆ ನೀಡಿದರು.

ಕುಣಿಗಲ್ ಶಾಸಕರಿಗೆ ಕೊವಿಡ್ ಸೋಂಕು

ತುಮಕೂರು: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜು.5 ರಂದು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದರು, ಜು.6 ರಂದು ಸೋಂಕು ಪಾಸಿಟಿವ್ ಕಂಡು ಬಂದಿದೆ.

ಸೋಂಕು ದೃಢಪಟ್ಟ ಬೆನ್ನಲ್ಲೇ ಶಾಸಕ ಡಾ.ರಂಗನಾಥ್ ಅವರು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸಂಬಂಧಿಯೂ ಕೂಡ ಆಗಿದ್ದಾರೆ.

ತಮಗೆ ಕೊವಿಡ್ ಸೋಂಕು ದೃಢಪಟ್ಟಿರುವ ಬಗ್ಗೆ, ಆಸ್ಪ್ರೆಯಲ್ಲಿ ದಾಖಲಾಗಿರುವ ಬಗ್ಗೆ ಸ್ವತಃ ಶಾಸಕರೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಎಲ್ಲರೂ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದು ವ್ಯಾಪಕವಾಗಿ ವೈರಲ್ ಆಗಿದೆ.

ಕಳೆದ ಮೂರು ದಿನಗಳ ಹಿಂದಷ್ಟೇ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ತಿಳಿದು ಬಂದಿತ್ತು. ರಾಜ್ಯದಲ್ಲಿ ಈಗ ಎರಡನೇಯದಾಗಿ ಕುಣಿಗಲ್ ಶಾಸಕ ಕೊರೋನಾ ಸೋಂಕಿಗೆ ಒಳಗಾಗಿರುವುದು ಕಂಡು ಬಂದಿದೆ.

ತುಮಕೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ..

ತುಮಕೂರು:
ಜಿಲ್ಲೆಯಲ್ಲಿ ಇಂದು ಹೊಸದಾಗಿ 16 ಕೊವಿಡ್ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 268 ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ 1, ಕೊರಟಗೆರೆ 4, ಕುಣಿಗಲ್ 1, ಮಧುಗಿರಿ 2, ಪಾವಗಡ 2, ತುಮಕೂರು 6 ಪ್ರಕರಣಗಳು ಸೇರಿ ಸೋಮವಾರ ಒಟ್ಟು 16 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಪಟ್ಟು ಹಾಕಿ ಗೆದ್ದ ಸಿದ್ದರಾಮಯ್ಯ

ಜಿ.ಎನ್.ಮೋಹನ್


ಬಾಗಿಲು ತಟ್ಟಿದ ಸದ್ದಾಯಿತು

ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ ಬಾಗಿಲು ತೆಗೆದೆ .

ಒಂದು ಕ್ಷಣ ನಾನು ಮಾತಿಲ್ಲದೆ ನಿಂತೆ.

ಬಾಗಿಲು ಬಡಿದದ್ದು ಇನ್ನಾರೂ ಅಲ್ಲ. ಅದೇ ಪಂಚೆ, ಅದೇ ಜುಬ್ಬಾ, ಅದೇ ಮೇಲು ಹೊದಿಕೆ ಹೊದ್ದ ಅದೇ ಅರೆ ನೆರೆತ ಗಡ್ಡದ- ಸಿದ್ದರಾಮಯ್ಯ.

‘ಈಟಿವಿ’ ಚಾನಲ್ ಗಾಗಿ ನ್ಯೂಸ್ ರೀಡರ್ ಗಳನ್ನು ಆಯ್ಕೆ ಮಾಡಲು ರಾಜ್ಯದ ಎಲ್ಲೆಡೆ ಸಂದರ್ಶನ ನಡೆಸುತ್ತಾ ನಾನು ಮೈಸೂರು ತಲುಪಿಕೊಂಡಿದ್ದೆ.

ಮೈಸೂರು ತಲುಪಿದ ಮೇಲೆ ಕೆ ರಾಮದಾಸ್ ಅವರಿಗೆ ಒಂದು ನಮಸ್ಕಾರ ಹೇಳದೇ ಬರಲು ನನಗಿರಲಿ, ಯಾರಿಗೂ ಸಾಧ್ಯವಿಲ್ಲ.

ಹಾಗಾಗಿ ಅವರ ಮನೆಯಲ್ಲಿ ಕುಳಿತು ಹರಟೆ ಹೊಡೆಯುತ್ತಾ ಇದ್ದಾಗ ಬಂದದ್ದು ಸಿದ್ದರಾಮಯ್ಯನವರು.

ಆನಂತರ ನಾನು ಮತ್ತೆ ಅವರ ಕೈ ಕುಲುಕಿದ್ದು ‘ಕೃಷ್ಣಾ’ದ ಅಂಗಳದಲ್ಲಿ.

ಮೊದಲ ಬಾರಿಗೆ ಕೈ ಕುಲುಕಿದಾಗ ಅವರು ಶಾಸಕರಾಗಿದ್ದರು. ಎರಡನೆಯ ಬಾರಿ ನಾನು ಮುಖ್ಯಮಂತ್ರಿಯ ಕೈ ಕುಲುಕುತ್ತಾ ನಿಂತಿದ್ದೆ.

‘ಹೇಗಿದ್ದೀರಿ ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್’ ಎಂದೆ .

‘ಅಯ್ಯೋ ಸುಮ್ಮನಿರು ಮಾರಾಯ. ಎಕ್ಸ್ ಪ್ರೆಸ್ ವೇಗದಲ್ಲಿ ವಿಧಾನಸೌಧ ಸಿಗಬೇಕಾದರೆ ನೂರೆಂಟು ವಿದ್ಯೆ ಗೊತ್ತಿರಬೇಕು. ನಾನು ಒಂದು ಶಟಲ್ ಗಾಡಿ ಅಷ್ಟೇ’ ಎಂದು ನಕ್ಕರು.

‘ನಾನು ಹೆಲಿಕ್ಯಾಪ್ಟರ್ ನಿಂದ ಜಿಗಿದು ವಿಧಾನಸೌಧದ ಖುರ್ಚಿಯಲ್ಲಿ ಕೂಡಲಿಲ್ಲ. ಬಹಳ ಹೋರಾಟ ಮಾಡಿಕೊಂಡು ರಾಜಕೀಯದಲ್ಲಿ ಮೇಲೆಬಂದೆ. ಸ್ವಂತ ಶಕ್ತಿಯಿಂದ ರಾಜಕೀಯ ಮಾಡುತ್ತಾಬಂದೆ. ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯನಿಂದ ಶುರು ಮಾಡಿ ಇಲ್ಲಿಯವರೆಗೂ ಬಂದಿದ್ದೇನೆ..’

‘..ಯಾವುದೇ ರಾಜಕೀಯ ಜೀವನಕ್ಕೆಒಂದು ಸ್ಟ್ರಗಲ್ ಬೇಕು, ಒಂದು ಸಿದ್ದಾಂತ ಬೇಕು’ ಎಂದು ತಮ್ಮ ಶಟಲ್ ಗಾಡಿ ಅಲ್ಲಲ್ಲಿ ನಿಲ್ಲುತ್ತಾ ವಿಧಾನಸೌಧದವರೆಗೂ ಅದರಲ್ಲೂ ಮುಖ್ಯಮಂತ್ರಿ ಖುರ್ಚಿಯವರೆಗೂ ಬಂದು ಮುಟ್ಟಿದ ಕಥೆ ಹೇಳಿದರು.

ನನಗೆ ಅವರು ಮರಳಲ್ಲಿ ತಿದ್ದಿ ಅಕ್ಷರ ಕಲಿತ ಕಥೆ ಗೊತ್ತಿತ್ತು. ಹಾಗಾಗಿ ಅವರ ಬಾಲ್ಯಕ್ಕೆ ಅವರನ್ನು ಕರೆದುಕೊಂಡು ಹೋದೆ.

ಸಿದ್ದರಾಮನಹುಂಡಿಯ ನೆನಪು ಮಾಡುತ್ತಿದ್ದಂತೆ ಅವರ ಮುಖ ಅರಳಿತು.

‘ನಮ್ಮ ತಂದೆ ನನ್ನನ್ನು ವೀರಮಕ್ಕಳ ಕುಣಿತಕ್ಕೆ ಸೇರಿಸಿದ್ದರು. ಒಂದು ವೇಳೆ ಅಲ್ಲಿ ಸೇರದೆ ಹೋಗಿದ್ದರೆ ನಾನು ವಿದ್ಯೆಕಲೀತಾ ಇದ್ದೆನೋ ಇಲ್ಲವೋ ಗೊತ್ತಿಲ್ಲ’.

‘ನಾನು ಪ್ರೈಮರಿ ಶಾಲೆ ಮುಖ ಕಂಡವನೇ ಅಲ್ಲ. ನಮಗೆ ವೀರಮಕ್ಕಳ ಕುಣಿತ ಕಲಿಸುತ್ತಿದ್ದಂತಹ ಮೇಷ್ಟ್ರು ನಂಜೇಗೌಡರು ನಮಗೆಲ್ಲಾ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿದರು. ಅವರು ಅಕ್ಷರಾಭ್ಯಾಸ ಮಾಡಿಸಿ, ಕಾಗುಣಿತ ಕಲಿಸಿ, ಲೆಕ್ಕಹೇಳಿಕೊಟ್ಟಿದ್ದರಿಂದ ನನಗೆ ಮುಂದೆ ಓದುವ ಆಸಕ್ತಿ ಬೆಳೆಯಿತು. ಆ ನೆನಪು ನನ್ನೊಳಗಡೆ ಸದಾ ಇರುತ್ತದೆ’ ಎಂದು ಭಾವಪರಾಶರಾದರು.

ಸಿದ್ದರಾಮಯ್ಯನವರಿಗೆ ವೀರಗಾಸೆ ಕುಣಿತದ ಹೆಜ್ಜೆಗಳು ಚೆನ್ನಾಗಿ ಗೊತ್ತು. ಪಟ್ಟು ಹಿಡಿದು ಕಲಿತದ್ದು. ಅದಕ್ಕೇ ಇರಬೇಕು ಅವರಿಗೆ ನಂತರದ ರಾಜಕೀಯ ಹೆಜ್ಜೆಗಳೂ ಸುಲಭವಾದವು.

ಪಟ್ಟು ಹಾಕಿದರೆ ಗೆದ್ದೇ ಸಿದ್ಧ ಎನ್ನುವ ಛಲ ಅವರದ್ದು.

ಹಾಗಾಗಿಯೇ ನೆನಪಿಸಿದೆ. ‘ನೀವು ವಿಧಾನಸೌಧದ ಒಳಗೆ ಹೋಗದಂತೆ ಪೊಲೀಸ್ ಅಧಿಕಾರಿ ತಡೆದಿದ್ದರು’ ಅಂತ.

‘ಅದು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಘಟನೆಗಳಲ್ಲಿ ಒಂದು. ವಿಧಾನಸೌಧದ ಒಳಗೆ ಸಿಕ್ಕಾಪಟ್ಟೆ ಗಲಾಟೆ ಆಗಿತ್ತು. ಆಗ ಇದ್ದ ಪೋಲೀಸ್ ಕಮಿಷನರ್ ತಮ್ಮ ಯೂನಿಫಾರ್ಮ್ ಮತ್ತು ಆಯುಧಗಳ ಸಮೇತ ಬಂದು ನನ್ನನ್ನು ಒಳಗೆಬಿಡದಂತೆ ತಡೆದರು’.

‘ಹಾಗೆ ಮಾಡಬಾರದಿತ್ತು ಅವರು. ಆಗ ನಾನು ಅವರಿಗೆ, ಒಂದು ದಿನ ನಾನು ಮುಖ್ಯಮಂತ್ರಿ ಆಗಿಯೇ ವಿಧಾನಸೌಧಕ್ಕೆ ಬರುತ್ತೇನೆ, ಎಚ್ಚರಿಕೆಯಿಂದಿರಿ ಎಂದು ಹೇಳಿದ್ದೆ’.

ಮಗ ಡಾಕ್ಟರ್ ಆಗಬೇಕು ಅನ್ನುವ ಕನಸು ಅಪ್ಪನಿಗಿತ್ತು. ಆದರೆ ಸಿದ್ದರಾಮಯ್ಯನವರಿಗೆ ವಿಜ್ಞಾನ ವಿಷಯಗಳ ಮೇಲೆ ಕಣ್ಣು. ಬಾಟನಿ, ಜುವಾಲಜಿ ಮೇಜರ್ ತೆಗೆದುಕೊಂಡು ಬಿಎಸ್ಸಿ ಮುಗಿಸಿದರು.

‘ಬಾಟನಿಯಲ್ಲಿ ಎಂಎಸ್ಸಿ ಓದುವ ಆಸೆ ಇತ್ತು ನನಗೆ. ಸೀಟ್ ಸಿಗಲಿಲ್ಲ. ವಿದ್ಯಾಭ್ಯಾಸ ನಿಲ್ಲಿಸಿ, ವ್ಯವಸಾಯ ಮಾಡೋಣ ಎಂದುಕೊಂಡು ಊರಿಗೆ ಹಿಂದಿರುಗಿದೆ. ಒಂದು ವರ್ಷ ಊರಿನಲ್ಲೇ ವ್ಯವಸಾಯ ಮಾಡಿಕೊಂಡಿದ್ದೆ. ವ್ಯವಸಾಯದಿಂದ ಏನೂ ಲಾಭವಾಗುವುದಿಲ್ಲ ಎಂದುಕೊಂಡು ಲಾ ಓದುವ ಆಲೋಚನೆ ನನಗೆ ಬಂತು. ಹಾಗಾಗಿ ಲಾ ಕಾಲೇಜಿಗೆ ಸೇರಿದೆ’.

ಅಷ್ಟು ಹೇಳುವ ವೇಳೆಗೆ ಸಿದ್ದರಾಮಯ್ಯನವರ ಕಣ್ಣಲ್ಲಿ ಮಿಂಚಿತ್ತು. ಯಾಕೆಂದರೆ ಅವರ ಬದುಕಿಗೆ ದೊಡ್ಡ ತಿರುವು ಸಿಕ್ಕಿದ್ದೇ ಇಲ್ಲಿ.

ಅವರಿಗೆ ಲಾ ಕಾಲೇಜಿನಲ್ಲಿ ಪ್ರೊ ಎಂ ಡಿ ನಂಜುಂಡಸ್ವಾಮಿ ಸಿಕ್ಕಿ ಹೋಗಿದ್ದರು.

‘ಲಾ ಓದುವಾಗ ಪ್ರೊ ನಂಜುಂಡಸ್ವಾಮಿಯವರ ಪರಿಚಯ ಆಯಿತು. ಅವರು ಆಗಾಗಲೇ ಸೋಷಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯರಾಗಿದ್ದರು. ನಮ್ಮನ್ನೂ ಅವರು ಸೋಷಲಿಸ್ಟ್ ಪಾರ್ಟಿಗೆ ಸೇರಿಸಿದರು’.

‘ನಮಗೆ ಅವರು ಪಾಠ ಮಾಡದೇ ಇದ್ದರೂ ಅವರ ಸಂಪರ್ಕ ಪ್ರತಿನಿತ್ಯ ಆಗುತ್ತಲೇ ಇತ್ತು. ಸ್ನೇಹಿತರ ಒಂದು ಗುಂಪನ್ನು ಸೇರಿಸಿ ರಾಜಕೀಯ ಚರ್ಚೆಗಳನ್ನು ಮಾಡುತ್ತಿದ್ದರು. ಹಾಗಾಗಿ ಅವರ ಬಗ್ಗೆ ನಮಗೆ ಬಹಳ ಅಭಿಮಾನ ಮತ್ತು ಪ್ರೀತಿ ಇತ್ತು. ನಾನು ರಾಜಕೀಯಕ್ಕೆ ಎಂಟ್ರಿ ಕೊಡಲು ಅವರೇ ಕಾರಣ’ ಎಂದರು.

‘ಪ್ಲೈಮೌತ್ ಕಾರು..’ ಎಂದು ನಾನು ರಾಗವೆಳೆದೆ.

ನಾನು ಏನು ಕೇಳಲು ಹೊರಟಿದ್ದೇನೆ ಎಂದು ಅವರಿಗೆ ಗೊತ್ತಾಗಿ ಹೋಯಿತು.

‘ಹೌದು, ನಂಜುಂಡಸ್ವಾಮಿ ಅವರು ತಮ್ಮ ಬಳಿ ಇದ್ದ ಪ್ಲೈಮೌತ್ ಕಾರನ್ನು ಚುನಾವಣಾ ಓಡಾಟಕ್ಕೆ ಅಂತ ಕೊಟ್ಟರು. ಒಂದಿಷ್ಟು ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಕಾರು ಎರಡು ಮೂರು ದಿನ ಓಡಿ ನಿಂತುಹೋಯಿತು’ ಎಂದರು.

ಅವರು ಹಣಕಾಸು ಅಂದಾಕ್ಷಣ ನನ್ನ ನೆನಪಿಗೆ ಬಂದದ್ದು ಇವರು ಕಡಲೆ ಕಾಯಿ ಮಾರುವ ಅಜ್ಜಿಯ ಬಳಿ ಸಾಲ ತೆಗೆದುಕೊಳ್ಳುತ್ತಾ ಇದ್ದದ್ದು.

‘ನಾನು ಲಾಯರ್ ಗಿರಿ ಶುರು ಮಾಡಿದೆ. ಕಕ್ಷಿದಾರರು ಸಿಗಬೇಕಲ್ಲ. ಕೈ ಎಲ್ಲಾ ಖಾಲಿ. ಅಲ್ಲೇ ಕಡ್ಲೆ ಕಾಯಿ ಮಾರುವವಳ ಹತ್ರ ಸಾಲ ಮಾಡಿ ಸಿಗರೇಟು ಸೇದುತ್ತಿದ್ದೆ, ಆಮೇಲ್ಯಾವಾಗಾದ್ರೂ ದುಡ್ಡು ಬಂದಾಗ ಒಟ್ಟಿಗೆ ಅದನ್ನು ತೀರಿಸುವುದು ನಡೀತಾ ಇತ್ತು’.

‘ನಾನು ಎಂಎಲ್ ಎ ಆದ ಮೇಲೆ ಹೋಗಿ ಎಷ್ಟು ಸಾಲ ಬಾಕಿ ಇಟ್ಟಿದ್ದೆನೋ ಅಷ್ಟೂ ಚುಕ್ತಾ ಮಾಡಿ ಬಂದೆ’ ಎಂದು ನಕ್ಕರು.

‘ಎಂ ಡಿ ಎನ್ ಪ್ರಭಾವ ಇರಬೇಕು. ಚೆನ್ನಾಗಿ ಲೆಕ್ಚರ್ ಕೊಡ್ತೀರಾ..’ ಅಂತ ಅವರ ಕಡೆ ಒಂದು ಬಾಣ ಬಿಟ್ಟೆ.

ನಾನು ಏನು ಕೇಳುತ್ತಿದ್ದೇನೆ ಎನ್ನುವುದು ಅವರಿಗೆ ತಕ್ಷಣ ಗೊತ್ತಾಗಿ ಹೋಯಿತು.

‘ಹೌದು ನಾನು ಸ್ವಲ್ಪ ದಿನ ಪಾರ್ಟ್ ಟೈಮ್ ಲೆಕ್ಚರರ್ ಆಗಿದ್ದೆ, ಸುಮಾರು ಮೂರು ವರ್ಷಗಳ ಕಾಲ. ಆ ಅನುಭವ ನನಗೆ ಬಹಳ ಖುಷಿ ಕೊಟ್ಟಿದೆ. ಲಾಯರ್ ಹುದ್ದೆಗಿಂತಾ ಪಾಠ ಮಾಡುವ ಹುದ್ದೆಯನ್ನು ನಾನು ಬಹಳ ಪ್ರೀತಿಸುತ್ತಿದ್ದೆ.’

‘ಕುರಿಗಳ ಲೆಕ್ಕ ಮಾಡೋದಿಕ್ಕೆ ಬರದೇ ಇರೋ ಸಿದ್ದರಾಮಯ್ಯ ಬಜೆಟ್ ಮಂಡಿಸ್ತಾನಂತೆ ಅಂದರು..’ ಎಂದು ಅವರ ನೆನಪು ಮೀಟಿದೆ.

‘ನಾನು ಅರ್ಥಶಾಸ್ತ್ರ ಖಂಡಿತಾ ಓದಿಲ್ಲ. ಬಾಟನಿ, ಜುವಾಲಜಿ, ಕಾನೂನು ಓದಿದವನು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗನನಗೆ ಹಣಕಾಸಿನ ಮಂತ್ರಿ ಆಗಲು ಆಹ್ವಾನಿಸಿದರು. ನಿಜ ಹೇಳಬೇಕು ಎಂದರೆ ಆಗ ನನ್ನ ಮನಸ್ಸಿನಲ್ಲಿದ್ದದ್ದು ಗೃಹ ಅಥವಾ ಕಂದಾಯ ಇಲಾಖೆ. ಹಣಕಾಸಿನ ಇಲಾಖೆ ಎಂದಾಗ ಅದನ್ನು ಒಂದು ಸವಾಲು ಎಂದೇ ನಾನು ಸ್ವೀಕರಿಸಿದೆ’.

‘ಆಗಲೇ ಕೆಲವರು ಕುಹಕವಾಡಿದ್ದು. ಸಿದ್ದರಾಮಯ್ಯನಿಗೆ ಕುರಿ ಎಣಿಸಲು ಸಹ ಬರೋಲ್ಲ,ಹಣಕಾಸು ಇಲಾಖೆ ಹೇಗೆ ನಿಭಾಯಿಸ್ತಾನೆ ಅಂತ. ನಾನು ಅದನ್ನು ಒಂದು ಚಾಲೆಂಜ್ ಅಂತ ತಗೊಂಡೆ’ ಎಂದು ತಾವು ಪಟ್ಟು ಹಾಕಿ ಗೆದ್ದ ಕಥೆಯನ್ನು ಹೇಳಿದರು.

ಸಿದ್ದರಾಮಯ್ಯನವರಿಗೆ ಕುಸ್ತಿ ಸಹಾ ಇಷ್ಟ ಎನ್ನುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ. ‘ನೀವು ಹಾಕಿದ ಕುಸ್ತಿ ಪಟ್ಟುಗಳನ್ನು ಒಂದೊಂದಾಗಿ ನೆನಪಿಸಿಕೊಳ್ಳಿ’ ಎಂದೆ.

‘ನನಗೂ ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ನನಗೆ ಅನ್ನಿಸಿತ್ತು. ಅದಕ್ಕೆ ನಾನು ಅರ್ಹನಿದ್ದೇನೆ ಎಂದು ಸಹ ನನಗೆ ನಂಬಿಕೆ ಇತ್ತು. ೧೯೯೬ ರಲ್ಲಿ ಮತ್ತೆ ೨೦೦೪ ರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ನನಗೆ ಇತ್ತು
ಎರಡು ಬಾರಿಯೂ ತಪ್ಪಿಹೋಯಿತು. ಕಾಂಗ್ರೆಸ್ ಸೇರಿದ ಮೇಲೆ ಮತ್ತೆ ಆ ಆಸೆ ಚಿಗುರೊಡೆಯಿತು. ಮುಖ್ಯಮಂತ್ರಿ ಆದೆ’ ಎಂದರು.

‘ಸರ್ ನೀವು ಇನ್ನೂ ಒಂದು ಕುಸ್ತಿ ಮಾಡಿದ್ದೀರಿ ಇಂಗ್ಲಿಷ್ ಜೊತೆ’ ಎಂದೆ.

ಅಯ್ಯೋ ಹೌದಪ್ಪಾ, ಈ ಇಂಗ್ಲಿಷ್ ಸಹವಾಸ ಯಾರಿಗೂ ಬೇಡ. ಇಂಗ್ಲಿಷ್ ನನ್ನನ್ನ ಹೆದರಿಸಿ ಹಾಕಿತ್ತು. ನಾನು ಬೆಳೆದು ಬಂದ ಹಿನ್ನಲೆ ಮತ್ತು ವಾತಾವರಣ ಇದಕ್ಕೆ ಕಾರಣ. ಹಳ್ಳಿಯಲ್ಲಿ ನಾನು ಯಾರ ಜೊತೆ ಇಂಗ್ಲಿಷ್ ಮಾತನಾಡಬಹುದಿತ್ತು? ಹಳ್ಳಿ ಶಾಲೆಗಳಲ್ಲಿ ಇಂಗ್ಲಿಷ್ ಗೊತ್ತಿರುವ ಉಪಾಧ್ಯಾಯರೂ ಇರ್ತಾ ಇರಲಿಲ್ಲ. ಹೀಗಾಗಿ ಅದನ್ನೂ ಮಣಿಸಬೇಕಾಗಿ ಬಂತು’ ಎಂದು ಗೆದ್ದ ನಗು ಬೀರಿದರು.

‘ಸಾಧಾರಣವಾಗಿ ಮುಖ್ಯಮಂತ್ರಿ ಆದ ತಕ್ಷಣ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಾರೆ, ಮಠಗಳಿಗೆ ಹೋಗಿ ಸ್ವಾಮಿಗಳ ಕಾಲಿಗೆಬೀಳುತ್ತಾರೆ. ಆದರೆ ನೀವು ಸಾಹಿತಿಗಳನ್ನು, ವಿಚಾರವಂತರನ್ನೂ ಭೇಟಿಮಾಡಿದಿರಿ?

‘ಈ ಸಾಹಿತಿಗಳುಈ ನಾಡಿನ ಸಂಪತ್ತು. ತಮ್ಮ ತಮ್ಮ ಕ್ಷೇತ್ರಗಳಲ್ಲಿಅಪಾರವಾದ ಕೆಲಸ ಮಾಡಿದಂತವರು. ಸಮಾಜದ ಬಗ್ಗೆಕಳಕಳಿ ಇಟ್ಟುಕೊಡಿರುವಂತವರು. ರಾಜ್ಯದ ಹಿತದಬಗ್ಗೆ ಕಳಕಳಿ ಇಟ್ಟುಕೊಂಡಿರುವವರು. ಅದಕ್ಕಾಗೇ ನಾನು ಸಾಹಿತಿಗಳನ್ನು ಭೇಟಿಮಾಡಿ, ಅವರ ಜೊತೆ ಚರ್ಚೆ ಮಾಡಿ, ಅವರ ಹಾರೈಕೆಗಳನ್ನು ತೆಗೆದುಕೊಳ್ಳೋಣ ಎಂದು ನಾನು ಅವರನ್ನುಭೇಟಿ ಮಾಡಿದೆ’.

ಇಷ್ಟೆಲ್ಲಾ ಮಾತನಾಡುತ್ತಿರುವಾಗಲೇ ನಾನು ಅವರ ಪಂಚೆಯುತ್ತ ಬೆರಳು ತೋರಿಸಿದೆ.

ತಕ್ಷಣ ನನ್ನ ಹೆಗಲ ಮೇಲೆ ಕೈ ಹಾಕಿದವರೇ ‘ಪಂಚೆ ನಾನು ಬಯಸಿ ಆಯ್ಕೆಮಾಡಿಕೊಂಡ ಟ್ರೇಡ್ ಮಾರ್ಕ್ ಏನಲ್ಲ’ ಎಂಬ ಗುಟ್ಟು ಬಿಟ್ಟುಕೊಟ್ಟರು.

‘ನಾನೂ ಪ್ಯಾಂಟು, ಶರ್ಟು, ಕೋಟು ಎಲ್ಲಾ ಹಾಕ್ಕೋತಾ ಇದ್ದೆ. ನನಗೆ ಈ ‘ಡ್ರೈ ಸ್ಕಿನ್’ ಸಮಸ್ಯೆ ಬಂತು. ಆಗ ಡಾಕ್ಟರು ನೀವು ಸದಾ ಕಾಟನ್ ಬಟ್ಟೆ ಹಾಕಿಕೊಳ್ಳಬೇಕುಎಂದು ಹೇಳಿದರು. ಸ್ವಲ್ಪ ಗಾಳಿ ಆಡುವಂತಹ ಬಟ್ಟೆಹಾಕಿಕೊಳ್ಳಬೇಕು ಎಂದರು

‘೧೯೯೪ ರಿಂದ ನಾನು ಕಾಟನ್ ಬಟ್ಟೆ ಹಾಕಲು ಶುರು ಮಾಡಿದೆ, ಧೋತಿ ಕುರ್ತಾ ಹಾಕಲು ಶುರು ಮಾಡಿದೆ. ಹಾಗಾಗಿ ಆಗಿನಿಂದ ಇದೇ ಅಭ್ಯಾಸ ಆಯಿತು’.

‘ಡ್ರೈ ಸ್ಕಿನ್ ಸಮಸ್ಯೆ ಏನೋ ಕಡಿಮೆ ಆಯಿತು, ಆದರೆ ಪಂಚೆ ಮೇಲಿನ ಪ್ರೀತಿ ಜಾಸ್ತಿ ಆಗಿ ಹೋಗಿತ್ತು’ ಎಂದವರೇ ‘ಫಾರಿನ್ ಗೆ ಹೋದಾಗ ನಾನೂ ಸೂಟು, ಬೂಟುಹಾಕಿಕೊಳ್ತೀನಪ್ಪಾ’ ಎಂದು ಜೋರಾಗಿ ನಕ್ಕರು.

ಸಿದ್ದರಾಮಯ್ಯನವರಿಗೆ ತಮ್ಮ ಅಮ್ಮ ಎಂದರೆ ಇನ್ನಿಲ್ಲದ ಪ್ರಾಣ. ಯಾವಾಗಲೇ ಊರಿಗೆ ಹೋದರೂ ನೂರಾರು ರೊಪಾಯಿಯ ಅಡಿಕೆ ಎಲೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು.

ತಕ್ಷಣ ದೊಡ್ಡದಾಗಿ ನಕ್ಕುಬಿಟ್ಟ ಸಿದ್ದರಾಮಯ್ಯನವರು ‘ಅಮ್ಮನ ಮೇಲೆ ಪ್ರೀತಿ ಏನೋ ಇತ್ತು. ಆದರೆ ಎಲೆ ಅಡಿಕೆ ಕೊಡೋದರ ಹಿಂದೆ ಒಂದು ಸ್ವಾರ್ಥವೂ ಇತ್ತು. ಹಾಗೆ ನಮ್ಮವ್ವನಿಗೆ ಒಳ್ಳೆ ವೀಳ್ಯೆದೆಲೆ, ಅಡಿಕೆ ತೆಗೆದುಕೊಂಡು ಹೋದರೆ ಬರುವಾಗ ಸ್ವಲ್ಪ ದುಡ್ಡು ಹೆಚ್ಚಾಗಿ ಕೊಡ್ತಾ ಇದ್ಲು’ ಎಂದರು.

ಸಿದ್ದರಾಮಯ್ಯನವರಿಗೆ ಹಿಂದುಸ್ಥಾನಿ ಸಂಗೀತ ಎಂದರೆ ಪ್ರಾಣ.
ಈ ಗುಟ್ಟು ನನಗೆ ಗೊತ್ತಿತ್ತು.

ಮಹಮದ್ ರಫಿ ಹಾಡುಗಳಿಗಂತೂ ಅವರ ಎಲ್ಲಾ ಒತ್ತಡಗಳನ್ನ ಒಂದೇ ಕ್ಷಣಕ್ಕೆ ದೂರ ಎಸೆಯುವಷ್ಟು ತಾಖತ್ತು ಇದೆ.

ಅದು ಗೊತ್ತಿದ್ದ ನಾನು ಅಲ್ಲಿಯವರೆಗೂ ಅಡಗಿಸಿಟ್ಟುಕೊಂಡಿದ್ದ ಮಹಮದ್ ರಫಿ ಅವರ ಸಿ ಡಿಗಳನ್ನು ತೆಗೆದು ಅವರ ಕೈಗಿಟ್ಟೆ.

ಅವರು ಮಾತಿಲ್ಲದಂತಾದರು.

ಅವರ ಕೈಗಳು ನನ್ನನ್ನು ಒತ್ತಿ ಹಿಡಿದ ರೀತಿಯೇ ಅವರ ಸಂಭ್ರಮವನ್ನು ನನಗೆ ದಾಟಿಸಿತ್ತು.

ವಿದೇಶದ‌‌ ನೆಲದಲ್ಲೂ ಕಲ್ಪತರು ನಾಡಿನ ಹಸಿರು ಶಾಲು ಬೀಸಿದ್ದ ಚಳವಳಿಯ ಅನುವುಗಾರ…

0

ಉಜ್ಜಜ್ಜಿ ರಾಜಣ್ಣ


ಹೋರಾಟದ ಹಸಿರು ರುಮಾಲು
ಕರ್ನಾಟಕದ ತಿಪಟೂರು ತಾಲೂಕಿನ ಹೊಲಮಾಳಗಳಿಂದ, ಯುರೋಪಿನ ಹಳ್ಳಿಗಳ ಹೊಲ್ದಬಾರೆಗಳವರೆವಿಗೂ, ಕುಲಾಂತರಿ ಬೀಜ ಬಿತ್ತನೆಯನ್ನು ವಿರೋಧಿಸಿ; ರೈತ ಚಳವಳಿಯಲ್ಲಿ ಭಾಗವಹಿಸಿದವರು ಬೆನ್ನಾಯ್ಕನಹಳ್ಳಿ ದೇವರಾಜ್.

ಭಾರತೀಯ ರೈತ ಚಳುವಳಿಗಳು ಜಾಗತಿಕ ರೈತ ಚಳುವಳಿಗಳ ಭಾಗವಾಗಿಯೂ ಕೆಲಸ ಮಾಡಿವೆ.

ಕರ್ನಾಟಕದ ರೈತ ಚಳವಳಿಗಾರರನ್ನು ವಿದೇಶಗಳಲ್ಲಿ ನಡೆಯುವ ರೈತ ಚಳುವಳಿಗಳಲ್ಲಿ ತೊಡಗಿಸಲು ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರು ದಣಿವರಿಯದೆ ದುಡಿಯುತ್ತಿದ್ದ ಕಾಲದ ರೈತ ಚಳುವಳಿ ಸಂಗಾತಿಗಳಲ್ಲಿ ಬೆನ್ನಾಯ್ಕನಹಳ್ಳಿ ದೇವರಾಜ್ ಸಹ ಪ್ರಮುಖರು.

ಪ್ರೊಫೆಸರ್ ಎಂ.ಡಿ.ಎನ್ ಅವರ ಹೋರಾಟದ ಹಸಿವು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹೋರಾಟವನ್ನು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವಿಸ್ತರಿಸುವಂತೆ ಮಾಡಿತ್ತು.

1999 June 15 ರಿಂದ ಒಂದೂವರೆ ತಿಂಗಳು, ಯೂರೋಪ್ ರಾಷ್ಟ್ರದ ಹಳ್ಳಿಗಳಲ್ಲಿ ಎಂ.ಡಿ.ಎನ್. ನೇತೃತ್ವದಲ್ಲಿ ನಡೆದ ರೈತ ಚಳುವಳಿಯಲ್ಲಿ ಬೆನ್ನಾಯ್ಕನಹಳ್ಳಿ ದೇವರಾಜ್ ತಿಪಟೂರು ತಾಲೂಕಿನಿಂದ ಭಾಗವಹಿಸಿದವರು.

ಯುರೋಪಿಯನ್ನರೂ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸುತ್ತಿದ್ದ ಕಾಲವದು. ಕೃಷಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿವೆ ಎಂಬುದನ್ನು ಯುರೋಪಿಯನ್ ರೈತರೂ ಆಗಲೇ ಅರ್ಥಮಾಡಿಕೊಂಡದ್ದರು. ಅಲ್ಲಿಯ ರೈತರ ಕಳವಳವನ್ನು ಹೋರಾಟದಲ್ಲಿ ಭಾಗವಹಿಸಿದ್ದ ನಾವೆಲ್ಲರೂ ಚರ್ಚಿಸುತ್ತಿದ್ದೆವೆಂದು ದೇವರಾಜ್ ಹೇಳುತ್ತಿದ್ದರು.

ಭಾರತದಿಂದ ಸುಮಾರು 650 ರೈತ ಹೋರಾಟಗಾರರನ್ನು ಪ್ರೊಫೆಸರ್ ನಂಜುಂಡಸ್ವಾಮಿಯವರು ಯುರೋಪಿಯನ್ ಹಳ್ಳಿಗಳಿಗೆ ಕರೆದುಕೊಂಡು ಹೋಗಿದ್ದರು.

ಕರ್ನಾಟಕದವರೇ 400 ಜನ ಹೋರಾಟಗಾರರು. ದೇಶದ ವಿವಿಧ ಭಾಗಗಳಿಂದ 250 ಜನ ಹೋರಾಟದಲ್ಲಿದ್ದರು. ಅದೊಂದು ಬೃಹತ್ ಹೋರಾಟದ ಯಾನ.

ಕುಲಾಂತರಿ ಬೀಜಗಳನ್ನು ಬಿತ್ತಿದ್ದ ಹೊಲಗಳಲ್ಲಿ ಬೆಳೆ ನಾಶಮಾಡುವುದು ಯುರೋಪಿಯನಲ್ಲಿ ಕೈಗೊಂಡ ಚಳುವಳಿಯ ಉದ್ಧೇಶವಾಗಿತ್ತು. ರಾತ್ರಿ ಅಲ್ಲಿಯ ರೈತರ ಮನೆಯಲ್ಲಿ ಉಳಿದು ಮುಂದಿನ ದಿನದ ಕಾರ್ಯಸೂಚಿ ಚರ್ಚಿಸುವುದು.

ಮಾರ್ಗಸೂಚಿಯಂತೆ ಬಸ್ ಗಳಲ್ಲಿ ರೈತರ ಹೊಲಗಳಿಗೆ ಹೋಗುವುದು ಕುಲಾಂತರಿ ಬೀಜ ಬಿತ್ತನೆ ಹೊಲಗಳಲ್ಲಿ ದಾಳಿ ನಡೆಸಿ ನಿಗದಿಯಾದ ಕುಟುಂಬದಲ್ಲಿ ವಾಸ್ತವ್ಯಕ್ಕಾಗಿ ಹಿಂತಿರುಗುವುದು.

ಹೋರಾಟಗಾರರು ಯಾವ ಹಳ್ಳಿಯಲ್ಲಿ ಉಳಿಯಬೇಕೆಂಬುದು ಮೊದಲೇ ನಿಗದಿಯಾಗಿರುತ್ತಿತ್ತು.

ಯುರೋಪಿನ ಹಳ್ಳಿಗಳ ಚಳುವಳಿಯಲ್ಲಿ ದೇವರಾಜ್ ಮತ್ತು ಸಂಗಡಿಗರು ಭಾಗವಹಿಸಿದ್ದಾಗ ಆಗಿನ್ನೂ, ದೇವರಾಜ್ ಹಾಗು ಸಂಗಡಿಗರು ಯುವ ಚಳುವಳಿಗಾರರು. ಉತ್ಸಾಹಿ ತರುಣರು ಹೋರಾಟದ ಉರುಪು ಅವರ ಮೈಯೊಳಗೆ ತೊನೆಯುತ್ತಿದ್ದ ಹರೆಯ. ಮಾರ್ಗ ಸೂಚಿಯಂತೆ ಕೆಲಸ ಮುಗಿಸಿ ವಿಶ್ರಾಂತಿಯ ದಿನದಂದು ಪ್ಯಾರಿಸ್ನಲ್ಲಿ ಐ.ಪಿ.ಎಲ್ ಟವರ್ ನೋಡಲು ಒಮ್ಮೆ ಗೆಳೆಯರೊಡಗೂಡಿ ಹೋಗಿರುತ್ತಾರೆ.

ಮಂಡ್ಯ ಶಿವರಾಂ, ಗುಬ್ಬಿ ಗೋವಿಂದ ರಾಜ್, ಕೃಷ್ಣಮೂರ್ತಿ ಇತರೆಯವರೂ ಜೊತೆಯಲ್ಲಿ. ಐ.ಪಿ.ಎಲ್ ಟವರ್ ನೋಡಿ ಅವರವರ ವಾಸ್ತವ್ಯಗಳಿಗೆ ಹಿಂತಿರುಗಿದಾಗ ಪ್ರೊಫೆಸರ್ಗೆ ಗೊತ್ತಾಗಿ, “ಯಾತಕ್ಕೆ ಕಬ್ಬಿಣ ನೋಡಲು ಹೋಗಿದ್ದಿರಿ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರಂತೆ.

ಚಳುವಳಿಯ ಉದ್ಧೇಶದಲ್ಲಿ ಉಂಟಾದ ಬದಲಾವಣೆಯನ್ನು ಎಂ.ಡಿ.ಎನ್ ಕೂಡಲೇ ಮನವರಿಕೆ ಮಾಡಿಕೊಂಡು, ಇದು “ಹ್ಯಾಪಿ ಟೂರ್”ಲ್ಲ. ಭಾರತೀಯ ರೈತ ಚಳುವಳಿಗಾರರ ಉದ್ಧೇಶಗಳನ್ನು ವಿದೇಶಿ ನೆಲದಲ್ಲಿ ಬಿತ್ತಬೇಕಾದುದು ತೀರಾ ಅತ್ಯವಶ್ಯಕ. ಚಳುವಳಿಯ ಕಾರ್ಯಸೂಚಿಗಳು ಹಿಂದುಮುಂದಾಗಬಾರದು. ವಿಶ್ರಾಂತಿಯ ದಿನ ವಿಶ್ರಾಂತಿಗಾಗಿಯೇ ಉಪಯೋಗವಾದರೆ ಹೋರಾಟ ಯಶಸ್ವಿಯಾಗಲು ಸಹಕಾರಿಯಾಗುವುದೆಂದು ಪ್ಯಾರಿಸ್ ನಗರಕ್ಕೆ ಐ.ಪಿ.ಎಲ್ ಟವರ್ ನೋಡಲು ಹೋಗಿ ಬಂದವರಿಗೆಲಾ ನಂಜುಂಡಸ್ವಾಮಿ ಮಾಡಿದ ಚಳುವಳಿ ಪಾಠವನ್ನು ದೇವರಾಜ್ ಚಳುವಳಿಗಾರರ ಗಮನಕ್ಕೆ ಆಗಾಗ ಹಾಕುತಿದ್ದರು.

ಚಳುವಳಿಯ ಎಚ್ಚರವನ್ನು ಸದಾ ಕಾಪಿಟ್ಟುಕೊಂಡಿರುತ್ತಿದ್ದ ಅವರು ನಮ್ಮ ನಡುವೆ ಹೋರಾಟದ ಮಾರ್ಗದರ್ಶಕರಾಗಿದ್ದರು.

ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಯುರೋಪಿನ ಹಳ್ಳಿಗಳಲ್ಲಿ ಚಳವಳಿ ಹೂಡಿರುವಾಗ, ಜರ್ಮನಿಯಲ್ಲಿ ಜಿ- 8 ಶೃಂಗ ಸಭೆ ನಡೆಯುತ್ತಿರುತ್ತದೆ. ಅದೇ ಸಂದರ್ಭದಲ್ಲಿ ಮಾಸ್ಸಾಂಟೊ, ಕಾರ್ಗಿಲ್, ಕ್ಯಾಡ್ಬರಿ ಇವೇ ಮೊದಲಾದ ಎಂ.ಎನ್.ಸಿ.ಗಳ ವಿರುದ್ಧ ಇವರ ಹೋರಾಟ ಯುರೋಪಿಯನ್ ನೆಲದಲ್ಲಿ ಮುಂದುವರಿದಿರುತ್ತದೆ. ಭಾರತದ ಕಪ್ಪು ಹಣವನ್ನು ಹಿಂದಿರುಗಿಸಲು, “ನಮ್ಮ ಹಣ ನಮಗೆ ಹಿಂದಿರುಗಿಸಿ” ಎಂದು ಆಗ್ರಹಿಸಿ ಸ್ವಿಸ್ ಬ್ಯಾಂಕ್ ವಿರುದ್ಧ ಘೋಷಣೆ ಕೂಗಿ ಚಳುವಳಿಯ ಸಂಗಾತಿಗಳು ಪ್ರತಿಭಟನೆ ನಡೆಸುವರು.

ಯುರೋಪಿನ ನೆಲದಲ್ಲೂ ಭಾರತೀಯ ಚಳುವಳಿಗಾರರು ಎಂದಿನಂತೆ ಟಿಕೆಟ್ ರಹಿತ ರೈಲು ಸಂಚಾರವನ್ನೇ ಕೈಗೊಳ್ಳುವರು. ಯುರೋಪಿನ ಸರ್ಕಾರ ಅವಕಾಶ ನೀಡುವುದಿಲ್ಲ. ಕಾನೂನಿನ ನಿರ್ಬಂಧ ವಿದಿಸುತ್ತದೆ.

ಪ್ರೊಫೆಸರ್ ನೇತೃತ್ವದಲ್ಲಿ ದೇವರಾಜ್ ಮತ್ತು ಸಂಗಡಿಗರು ಬಂದನಕ್ಕೊಳಗಾಗುವರು. ಪಟ್ಟು ಸಡಿಲಸದ ಯುರೋಪಿಯನ್ ಸರ್ಕಾರ, ವಿಧಿಸಲಾಗಿರುವ ದಂಡ ಪಾವತಿಸದೆ, ಬಿಡುಗಡೆ ಮಾಡುವುದಿಲ್ಲ.

ಟಿಕೆಟ್ ರಹಿತ ಪ್ರಯಾಣ ಮಾಡಿದುದರಿಂದ ದಂಡ ಪಾವತಿಸಬೇಕು ಅಥವಾ ಜೈಲುಶಿಕ್ಷೆಗೆ ಒಳಗಾಗಬೇಕೆಂದು ಕಡ್ಡಾಯಗೊಳಿಸುತ್ತದೆ. ಪ್ರತಿಭಟನಾ ನಿರತ ಭಾರತೀಯ ಚಳುವಳಿಗಾರರ ಜೊತೆಯಲ್ಲಿ ಯುರೋಪಿಯನ್ ಸ್ಥಳೀಯ ರೈತ ಹೋರಾಟಗಾರರೂ ಜೊತೆಯಾಗುತ್ತಾರೆ. ರೈತರ ನಿರಶನ ಮುಂದುವರಿಯತ್ತದೆ. ಟಿಕೆಟ್ ರಹಿತ ರೈಲು ಪ್ರಯಾಣಕ್ಕೆ ದಂಡ ಕಟ್ಟಲು ಚಳವಳಿಗಾರರು ಒಪ್ಪುದಿಲ್ಲ. ಆಗ, ರೈತರ ಹೋರಾಟಕ್ಕೆ ಮಣಿದ ಯುರೋಪಿಯನ್ ಅಧಿಕಾರಿಗಳು ಬಂದಿತ ರೈತರನ್ನು ಬಿಡುಗಡೆಗೊಳಿಸುತ್ತಾರೆ.

ಯುರೋಪನಲ್ಲೂ ನಿರುದ್ಯೋಗಿಗಳು ಮತ್ತು ಕಾರ್ಮಿಕರಿಗೆ ವಸತಿ ಸಮಸ್ಯೆ ಇರುವುದನ್ನು ಪ್ರೊಫೆಸರ್ ಆಗಲೇ ಮನಗಂಡಿದ್ದರು.

ಅಲ್ಲಿಯ ಸರ್ಕಾರಿ ಕಟ್ಟಡಗಳು ಖಾಲಿ ಇರುವುದು ಅಲ್ಲಲ್ಲಿ ಕಂಡು ಬಂದಿತು. ಅಲ್ಲಿಯ ವಸತಿ ರಹಿತರಿಗೆ ಸರ್ಕಾರಿ ಖಾಲಿ ಕಟ್ಟಡಗಳನ್ನು ಬಳಸಿಕೊಳ್ಳುವಂತೆ ಎಂ.ಡಿ.ಎನ್ ಕರೆ ನೀಡುತ್ತಾರೆ.

ಯುರೋಪಿನಾದ್ಯಂತ ಸುದ್ದಿಯಾಗುತ್ತದೆ. ಪ್ರೊಫೆಸರ್ ಕೊಟ್ಟ ಕರೆ ಚಳುವಳಿಯ ಯಶಸ್ವಿ ಹಾದಿ ಹಿಡಿಯಿತು. ಗೃಹೋಪಯೋಗಿ ಮತ್ತು ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಬಳಕೆದಾರರಾದ ಯುರೋಪಿನ ರೈತರಿಗೆ ಕರೆಂಟ್ ಲೈನ್ ಗಳಿಗೆ ಕೊಕ್ಕೆ ಹಾಕಿಕೊಳ್ಳುವುದನ್ನು ಪ್ರೊಫೆಸರ್ ಹೇಳಿಕೊಟ್ಟರಂತೆ.

ಯುರೋಪಿನಲ್ಲಿ ರೈತರು ಚಳುವಳಿ ಪ್ರಾರಂಭಿಸಿದರೆ ಪೊಲೀಸರು ಮತ್ತು ಅಧಿಕಾರಿಗಳಿಗೆ ಟೊಮೆಟೊ ಹಾಗೂ ಕೋಳಿ ಮೊಟ್ಟೆ ಎಸೆಯುವುದು ವಾಡಿಕೆ. ಹಾಗೆಯೇ ಅವರಿಗೆ ಚಳುವಳಿ ಆರಂಭಿಸಿ ಗೊತ್ತು.

ಆ ದೇಶದ ರೈತರೆಲ್ಲ ಇದನ್ನೇ ಚಳುವಳಿ ಎಂದು ತಿಳಿದಿದ್ದರು. ಹೋರಾಟದ ಇತರೆ ಪಾಠಗಳನ್ನು ಪ್ರೊಫೆಸರ್ ನೀಡುತ್ತಿದ್ದ ಉಪನ್ಯಾಸಗಳಿಂದ ಅವರೆಲ್ಲ ಕಲಿತರು ಎಂದು ವಿದೇಶಿ ನೆಲದ ರೈತರಿಗೆ ಪ್ರೊಫೆಸರ್‌ ಹೇಳಿಕೊಟ್ಟ ಚಳುವಳಿಯ ಪಾಠಗಳನ್ನು ದೇವರಾಜ್‌ ಆಗಾಗ ನೆನೆಯುತ್ತಿದ್ದರು.

ಪ್ರತಿಭಟನಾ ನಿರತರಾದ ಭಾರತೀಯ ರೈತರ ಜೊತೆಯಲ್ಲಿ ಭಾಷಾನುವಾದಕರನ್ನೂ ಕರೆದುಕೊಂಡು ಹೋಗುತ್ತಿದ್ದೆವು. ಜೊತೆಯಲ್ಲಿರುತ್ತಿದ್ದ ಅನುವಾದಕರು ನಮ್ಮ ಅಭಿಪ್ರಾಯಗಳನ್ನು ಅನುವಾದಿಸಿ ಅಲ್ಲಿಯ ರೈತರಿಗೆ ಹೇಳುತ್ತಿದ್ದರು. ಜರ್ಮನ್, ಹಿಂದಿ, ಇಂಗ್ಲಿಷ್ ಬಲ್ಲವರು ನಾವು ಹೋದ ಕಡೆ ರೈತರ ಜೊತೆ ಬರುತ್ತಿದ್ದರು.

ಯುರೋಪಿಯನ್ ರೈತರ ಜೊತೆ ನಾವು ಸಂವಾದಿಸಲು ಅನುವಾದಕರಿಂದ ಬಹಳ ಅನುಕೂಲವಾಯಿತು ಎನ್ನುತ್ತಿದ್ದರು.
ದಿನಬೆಳಗಾದರೆ ಕಾಲೇಜು ಮತ್ತು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸಭೆ ನಡೆಸುತ್ತಿದ್ದೆವು.

ಅವರೆಲ್ಲರೂ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಮಾತನಾಡುತ್ತಿದ್ದರು. ರೈತರ ಭವಿಷ್ಯದ ಬಗ್ಗೆ ಎಂ.ಎನ್.ಸಿಗಳು ಯೋಚಿಸುವುದಿಲ್ಲ ಎಂಬುದು ಅವರಿಗಾಗಲೇ ಅರಿವಾಗಿತ್ತು. ಮನಿ ಮನಿ ಅಂತಾರೆ.

ಹಣ ಮಾಡುವುದೇ ಕಂಪನಿಗಳ ಉದ್ದೇಶ. ಹಣ ಹೊರತಾಗಿ ಕಂಪನಿಗಳು ತುಟಿ ಎರಡು ಮಾಡುವುದಿಲ್ಲ. ಕಂಪನಿ ಮಾಲೀಕರಿಗೆ ಬೇಕಾಗಿರುವುದು ಹಣ ಎಂದೆಲ್ಲಾ ಅಲ್ಲಿಯ ರೈತರು ಮಾತನಾಡುತ್ತಿದ್ದರು ಎಂಬುದನ್ನು ಭಾರತೀಯ ನೆಲದಿಂದ ಹೋದ

ಚಳುವಳಿಗಾರರೂ ಆಗಲೇ ಗಮನಿಸಿದ್ದರಂತೆ.
ಪ್ರೊಫೆಸರ್ ರೈತ ಚಳುವಳಿಯ ಮಾರ್ಗಸೂಚಿಗಳನ್ನು ಕುರಿತಂತೆ ತುಂಬಾ ನಿಷ್ಠುರವಾಗಿದ್ದವರು. ಹೋರಾಟಗಾರರ ಊಟ-ವಸತಿಗಳೆಲ್ಲ ಸ್ಥಳೀಯ ರೈತರ ಮನೆಗಳಲ್ಲಿ ಆಯೋಜನೆ ಗೊಳ್ಳುತ್ತಿದ್ದವು. ಅದು ಸಂತೋಷಕ್ಕಾಗಿ ಕೈಗೊಂಡ ಪ್ರವಾಸವಾಗಿರಲಿಲ್ಲ.

ಪ್ರವಾಸದಲ್ಲಿರುವವರನ್ನು ಲಾಡ್ಜ್ ಮಾಡಿ ಮಲಗಿ ಸುತ್ತಿರಲಿಲ್ಲ. ರೈತರ ಮನೆಯಲ್ಲೇ ಉಳಿಸಿತ್ತಿದ್ದರು. ಇದು ನಮಗೆಲ್ಲಾ ಅನುಕೂಲವಾಗುತ್ತಿತ್ತು. ಅಲ್ಲಿಯ ಬೇಸಾಯಗಾರರ ಜೊತೆ ಮಾತನಾಡುತ್ತಿದ್ದೆವು. ಗೊತ್ತಿಲ್ಲದ ಇಂಗ್ಲಿಷ್ ಬಳಸಿ

ಮಾತನಾಡುತ್ತಿದ್ದುದು ನಮಗೆಲ್ಲ ವಿಶೇಷವಾದ ಖುಷಿಯಾಗುತ್ತಿತೆಂದು ದೇವರಾಜ್‌ ಹೇಳುತ್ತಿದ್ದರು.
ಒಂದು ದಿನ ಒಬ್ಬ ರೈತನ ಮನೆಯಲ್ಲಿ ಉಳಿದಿದ್ದೆವು. ಊಟವಾಯಿತು. ನಾವೆಲ್ಲಾ ಆತನ ಮನೆಗೆ ಉಳಿದುಕೊಳ್ಳಲು ಹೋಗಿದ್ದಕ್ಕಾಗಿ ಅವನು ತುಂಬಾ ಖುಷಿಯಾಗಿದ್ದ. ಏನೋ ತರುವ ಸಂತೋಷದಿಂದ ಹೊರಗೆ ಹೋದ. ಆತ ಏನು ತರಬಹುದೆಂದು ನಾವೆಲ್ಲಾ ಕುತೂಹಲಗೊಂಡು ಕಾದು ಕುಳಿತೆವು. ಹೆಗಲ ಮೇಲೆʼ “ ನೊಗ” ವೊಂದನ್ನು ತಂದನು. ಹೊತ್ತು ತಂದು ತೋರಿಸಿದ ನೊಗ ಅವನಿಗೆ ಪುರಾತನ ವಸ್ತು. ಆತನ ತಾತಮುತ್ತಾತರು ದನ ಕಟ್ಟಿಕೊಂಡು ತಲೆಮಾರುಗಳ ಹಿಂದೆ ಕೃಷಿ ಮಾಡುತ್ತಿದ್ದರಂತೆ. ಪೂರ್ವಜರ ನೆನಪಾಗಿ ಅವನು ನೊಗ ಇಟ್ಟುಕೊಂಡಿರುವುದಾಗಿ ಸಂತೋಷದಿಂದ ತಿಳಿಸಿದ.

ಹೈನುಗಾರಿಕೆಯಲ್ಲಿ ಮುಂದಿದ್ದೇವೆ. ಆದರೂ ಸುಖವಾಗಿಲ್ಲವೆಂದು ಅವನು ನೊಂದು ಹೇಳಿಕೊಂಡ. ಶಾಲೆಗೆ ಬಿಡಲು ಮಕ್ಕಳ ಜೊತೆ ಅಮ್ಮ ಹೊರಡುವಾಗ ಹಾಲಿನ ಕ್ಯಾನ್ ಗಳ ಜೊತೆ ಹೋಗಿ ಸಂಸ್ಕರಣಾ ಘಟಕಕ್ಕೆ ಮಹಿಳೆ ಹಾಲು ಮಾರುವವಳು. ಗಂಡಸರು ಹಸುಗಳ

ನಿಗಾ ಮಾಡುವುದು ಯುರೋಪಿಯನ್ ಕೃಷಿಕರ ದೈನಂದಿನ ಕೆಲಸವಾಗಿತ್ತಂತೆ.
ಯುರೋಪಿಯನ್ನರು ನಾನ್ ವೆಜಿಟೇರಿಯನ್. ಬೆಳಿಗ್ಗೆ ತಿಂಡಿ ಇಲ್ಲ. ತಿಂಡಿ ಬೇಯಿಸುತ್ತಾ ಕೂರುವವರಲ್ಲ ಅವರು. ರೆಡಿಮೇಡ್ ತಿಂಡಿ. ಅವರು ತಿಂಡಿಗಾಗಿ ಕಾಯುವುದಿಲ್ಲ. ಬ್ರೆಡ್ ಹಾಲು ಇತರೆ ಗಳನ್ನು ನಮಗೆ ಊಟಕ್ಕಾಗಿ ನೀಡುತ್ತಿದ್ದರು. ಭಾರತ ಸರ್ಕಾರದ ಹಾಗೆಯೇ ಯುರೋಪ್ ಸರ್ಕಾರವೂ ಸಹ ಬಹುರಾಷ್ಟ್ರೀಯ ಕಂಪನಿಗಳಿಗೆ ಸಹಕಾರಿ. ಭಾರತ ಗ್ಯಾಟ್ ಒಪ್ಪಂದ ಮಾಡಿಕೊಂಡ ಎಂಟು ವರ್ಷಗಳ ನಂತರ ಯುರೋಪ್ ರಾಷ್ಟ್ರ ಗ್ಯಾಟ್ ಗೆ ಸಹಿ ಹಾಕಿತು.
ಲಾಫಿಂಗ್ ಟೆರರಿಸ್ಟ್!

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸರ್ಕಾರದ ವಿರುದ್ಧ” ಲಾಫಿಂಗ್ ಚಳುವಳಿʼ ಮಾಡಿತ್ತು. ಬಜೆಟ್ ಅಧಿವೇಶನಕ್ಕೆ ಮೊದಲೇ ಬಜೆಟ್ ಪ್ರತಿಗಳ ಹಿಡಿದು ವಿಧಾನಸೌಧದ ಆವರಣದಲ್ಲಿ ಪ್ರೊಫೆಸರ್ ” ನಗುವ ಚಳುವಳಿ” ಹಮ್ಮಿಕೊಂಡು ಯಶಸ್ವಿಯಾಗಿದ್ದರು.

ಚಳುವಳಿ ವಿದೇಶಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ವಿದೇಶಿ ಪತ್ರಿಕೆಗಳು ಚಳುವಳಿಗಾರರನ್ನು ಕುರಿತುʼ ಲಾಫಿಂಗ್ ಟೆರರಿಸ್ಟ್ ʼಎಂದು ಬಣ್ಣಿಸಿದವು.
ಯುರೋಪಿನ ಹಳ್ಳಿಗಳಲ್ಲಿ ಪ್ರತಿಭಟನಾ ನಿರತರಾಗಿದ್ದಾಗ ಅಲ್ಲಿಯ ಪತ್ರಿಕೆಗಳು ಲಾಫಿಂಗ್ ಟೆರರಿಸ್ಟ್ ಬಂದಿದ್ದಾರೆಂದು ಸುದ್ದಿ ಪ್ರಕಟಿಸತೊಡಗಿದವು.

ನಮ್ಮನ್ನು ನೋಡಲು ಜನ. ಪತ್ರರರ್ತರು ಹುಡುಕಿ ಬರುತ್ತಿದ್ದರು. ಅಲ್ಲಿಯ ಹಳ್ಳಿಗಳಿಗೆ ನಾವು ಭೇಟಿ ನೀಡುವ ಮೊದಲು ಪತ್ರಿಕೆಗಳು ಸುದ್ದಿ ಮಾಡಿರುತ್ತಿದ್ದವು. ಲಾಫಿಂಗ್ ಟೆರರಿಸ್ಟ್ ಗಳನ್ನು ನೋಡಲು ಅನಿವಾಸಿ ಭಾರತೀಯರಾದಿಯಾಗಿ ಯುರೋಪಿನ್ ರೈತರೆಲ್ಲ ಮಾತನಾಡಿಸಲು ಬರುತ್ತಿದ್ದರು.

ಅನಿವಾಸಿ ಭಾರತೀಯರು ಒಮ್ಮೊಮ್ಮೆ ವೆಜಿಟೇಬಲ್ ಪಲಾವ್. ಬಿಸಿಬೇಳೆ ಬಾತ್ ಕೊಟ್ಟರು. ಸ್ವದೇಶಿ ಊಟ ಆಗಲೇ ಮರೆತು ಹೋದಂತಾಗಿತ್ತು ಎನ್ನುತ್ತದ್ದರು ದೇವಣ್ಣ.

ಮನೆಮನೆಯಲ್ಲೂ ಲೈಬ್ರರಿ
ಯುರೋಪಿನ ಬಹುತೇಕ ಕುಟುಂಬಗಳಲ್ಲಿ ಪ್ರತಿಯೊಂದು ಮನೆತನವು ಲೈಬ್ರರಿಗಳನ್ನು ಹೊಂದಿವೆ. ಅಷ್ಟೊಂದು ಅಕ್ಷರಸ್ಥ ಕುಟುಂಬಗಳನ್ನು ಅಲ್ಲಿ ಕಾಣಬಹುದಾಗಿದೆ. ಗ್ರಂಥಾಲಯ ರಹಿತ ಕುಟುಂಬ ವಿರಳ. ನಮ್ಮ ದೇಶದಲ್ಲಿ ಹಳ್ಳಿಗೊಂದು ಮುಂದುವರಿದ ಶಿಕ್ಷಣ ಕೇಂದ್ರ ತೆರೆದು ಅವುಗಳೆಲ್ಲ ಮುಚ್ಚಿಕೊಂಡವು. ಗ್ರಾಮ ಪಂಚಾಯತಿ ಗ್ರಂಥಾಲಯಗಳಿವೆ.

ಅವು ಗ್ರಾಮ ಪಂಚಾಯಿತಿ ನಿರುಪಯುಕ್ತ ಸಾಮಗ್ರಿಗಳನ್ನು ತುಂಬುವ ಕೊಠಡಿಗಳಾಗಿ ಕೆಲವು ಧೂಳಿಡಿದಿವೆ. ಯುರೋಪಿನಲ್ಲಿ ಮನೆಗೊಂದು ಗ್ರಂಥಾಲಯ . ಅಲ್ಲಿ ನಮ್ಮ ಮನೆ ನಮ್ಮ ಗ್ರಂಥಾಲಯಕ್ಕೆ ಮೊದಲನೇ ಆದ್ಯತೆ ಮನೆಗಳಲ್ಲಿ ಗ್ರಂಥಾಲಯಗಳರಬೇಕಾದುದರ ಅವಶ್ಯಕತೆಯನ್ನಯ ಅವರು ಒತ್ತಿ ಹೇಳುತ್ತಿದ್ದರು.

ಮನೆಯೇ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ವಿದ್ಯೆ ಕಲಿತ ಜನರು ಧನ್ಯರು!
ಹೀಗೆ ಹೇಳಿಕೊಂಡಿರುವ ನಮ್ಮ ದೇಶದಲ್ಲಿ ಇನ್ನೂ ಕೂಡ ಅನಕ್ಷರಸ್ಥ ಕುಟುಂಬಗಳಿವೆ. ವಯಸ್ಕರ ಶಿಕ್ಷಣ ನಡೆಯುತ್ತಲೇ ಇದೆ .ಮನೆಗಳಲ್ಲಿ ಗ್ರಂಥಾಲಯಗಳ ಆಗುವುದು ಯಾವಾಗ? ಎಂಬುದರ ಬಗ್ಗೆ ದೇವರಾಜು ಅವರಿಗೆ ಪಶ್ಚಾತ್ತಾಪವಿತ್ತು.

ಯುರೋಪಿನ ಹಳ್ಳಿಗಳಲ್ಲಿ ಚಳುವಳಿ ನಡೆಸಲು ಆ ರಾಷ್ಟ್ರಕ್ಕೆ ಹೋದವರೆಲ್ಲ ಭಾರತೀಯ ಹಳ್ಳಿಗಳ ಮೂಲದವರೇ. ತನಿಖೆಯಿಂದ ತಪ್ಪಿಸಿಕೊಂಡ ಗಡಿ ಸುಳ್ಳುಗಾರರ ಹಾಗೆ ರೈತರ ಜೇಬುಗಳಲ್ಲಿ ಮೋಟು ಬೀಡಿ, ಅಡಿಕೆ ಚೂರು, ಒಣಗಿದ ವಿಳ್ಳೇದೆಲೆ ತರಕಲು, ನೀರು ಬತ್ತಿದ ಎಲೆ ತೊಟ್ಟುಗಳು, ಸುಣ್ಣಕಾಯಿ, ಹೊಗೆಸೊಪ್ಪು, ಕಡ್ಡಿಪುಡಿಗಳೂ ಭಾರತೀಯ ಚಳುವಳಿಗಾರರ ಜೊತೆಯಲ್ಲಿ ಪ್ರವಾಸ ಹೋಗಿದ್ದವಂತೆ.

ನಾವು ಉಳಿಯಲು ಒಂದು ಮನೆಗೆ ಹೋಗಿದ್ದೆವು. ಅಡಿಕೆ ಚೂರು ತೆಗೆದು ಆ ಕುಟುಂಬದ ಮಹಿಳೆಗೆ ಕೊಟ್ಟೆವು. ಇದನ್ನು ನೀವು ಬೆಳೆಯುತ್ತೀರಿ ಎಂದು ಕೇಳಲಾಯಿತು. ಬೆಳೆಯುವ ವಿಧಾನ ವಿವರಿಸುವಂತೆ ಆ ಮಹಿಳೆ ಕುತೂಹಲದಿಂದ ಕೇಳಿದಳು. ಅಡಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು.

ಕೂಡಲೇ ಆ ಕುಟುಂಬದ ಮಹಿಳೆ ಅಟ್ಲಾಸ್ ತಂದರು. ಕರ್ನಾಟಕದ ಮಂಗಳೂರು ತೋರಿಸಿದರು. ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶದ ಭಾಗಗಳಿಂದ ನೀವೆಲ್ಲಾ ಬಂದಿದ್ದೀರಿ ಎಂದು ಆಕೆ ನಮ್ಮೂರಿನ ಬಗ್ಗೆ ನಮಗೇ ವಿವರಿಸಿದರು. ನಮ್ಮ ಶಾಲಾ-ಕಾಲೇಜುಗಳಲ್ಲಿ ಕನಿಷ್ಠಪಕ್ಷ ನಮ್ಮ ಕಲಿಕಾರ್ಥಿಗಳಿಗೆ ಸರಿಯಾಗಿ ಅಟ್ಲಾಸ್ ನೋಡುವುದನ್ನು ಹೇಳಿ ಕೊಟ್ಟಿದ್ದೇವೆಯೇ? ಎಂದು ಆಗಾಗ ಮಾತನಾಡುವ ಸಂದರ್ಭಗಳಲ್ಲಿ ಅವರು ಪ್ರಶ್ನೆ ಹಾಕುತ್ತಿದ್ದರು.

ಕೃಷಿ ಎಂದರೆ ಅಲ್ಲಿಯವರೆಗೆ ಅಷ್ಟೊಂದು ಆಸಕ್ತಿ. ಬೇಸಾಯ ಬಲ್ಲವರಾದರೂ ಮನೆಮಂದಿಯಲ್ಲ ಕೃಷಿ ಮಾಹಿತಿ ಓದಿ, ಸಂಗ್ರಹಿಸಿ ತಿಳಿಯುತ್ತಾರೆ. ಅಲ್ಲಿಯ ಮಕ್ಕಳಿಗೆ ಶಾಲೆಗಿಂತ ಮನೆಯಲ್ಲೇ ಹೆಚ್ಚು ಓದುವ ಅನುಕೂಲವಿದೆ. ಅಲ್ಲಿ ಪುಸ್ತಕ ರಹಿತ ಮನೆ ಜ್ಞಾನ ರಹಿತ ಗೃಹ.
ಸಿಲಬಸ್ ಶಿಕ್ಷಣಕ್ಕಿಂತ ಅವರದ್ದು ಸಾಮಾನ್ಯ ಜ್ಞಾನಕ್ಕೆ ಮೊದಲ ಆದ್ಯತೆ. ಸಾಮಾನ್ಯ ತಿಳುವಳಿಕೆ ಮನೆತನಕ್ಕೆ ಅನುಕೂಲ ಎಂದು ನಂಬಿರುವವರು. “ ಮೈಯಾಳು” ಪದ್ಧತಿ ಆದೇಶದಲ್ಲಿಯೂ ಇದೆ. ಆದರೂ ಅಲ್ಲಿಯೂ ಕೂಡ ಬದುಕು ತುಂಬಾ ದುಬಾರಿ. ದನ ಕಟ್ಟಿಕೊಂಡು ಬೇಸಾಯ ಮಾಡುವುದು ದುಬಾರಿಯಲ್ಲ. ಯಂತ್ರೋಪಕರಣ ಕಟ್ಟಿಕೊಂಡು ಕೃಷಿ ಮಾಡುವುದು ಕಷ್ಟ ಎಂಬುದು ಈಗಾಗಲೇ ಯುರೋಪಿಯನ್ ರೈತರಿಗೆ ಅರ್ಥವಾಗುವಂತಿದೆ.

ಎಕ್ಸ್ಪನ್ಸಿವ್ ಅಗ್ರಿಕಲ್ಚರಲ್ ಪ್ಯಾರಿಸ್ ಎಂದು ಪ್ರೊಫೆಸರ್ ಆಗಾಗ ಹೇಳುತ್ತಿದ್ದರು. 120 ಹೆಚ್ ಪಿ ಟ್ರ್ಯಾಕ್ಟರ್ ಬಳಸುತ್ತಾರೆ. ಕೃಷಿ ಯಾಂತ್ರೀಕರಣಗೊಂಡಿದೆ. ಅತಿಯಾದ ಯಂತ್ರೋಪಕರಣಗಳ ಬಳಕೆಯಿಂದ ಕೃಷಿ ಪರಿಸ್ಥಿತಿಯು ದುಬಾರಿ.

ನಮ್ಮಲ್ಲಿ 26 39 35 55 ಹೆಚ್ ಪಿ ಟ್ರ್ಯಾಕ್ಟರ್ ಬಳಕೆಯಾಗುತ್ತಿವೆ. ಕೃಷಿಗಳ ಮೇಲೆ ಇವುಗಳು ಒತ್ತಡ ಹಾಗೂ ದುಬಾರಿಯನ್ನುಂಟು ಮಾಡಿವೆ ಎಂದು ಯುರೋಪಿಯನ್‌ ಹಳ್ಳಿಗಳ ಹೊಲಗಳಲ್ಲಿ ಹಮ್ಮಿಕೊಂಡ ಒಂದೂವರೆ ತಿಂಗಳ ಅವಧಿಯ ಚಳುವಳಿಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.

ನಮ್ಮ ಭಾಗದಲ್ಲಿ ಚಳುವಳಿಯ ಹಿರಿಯ ಮುತ್ಸದ್ಧಿ ಬೆನ್ನಾಯಕನಹಳ್ಳಿ ದೇವರಾಜ್‌ ನಮ್ಮನ್ನೆಲ್ಲಾ ಅಗಲಿರುವುದೇ ವಿಶಾಧನೀಯ ಸಂಗತಿ. ಚಳುವಳಿಗಳ ಬಹುಮುಖ್ಯವಾದ ಕೃತಿಯೊಂದನ್ನು ಕಾಲ ನಮ್ಮಿಂದ ಕಸಿದುಕೊಂಡಂತಾಗಿದೆ.


ದೇವರಾಜಣ್ಣ ನೆನಪಿನ ಭಾಗವಾಗಿ ಈ ಲೇಖನ. ಅವರ ನೆನಪುಗಳನ್ನು ನೀವು ಬರೆಯಿರಿ. 9844817737