Saturday, May 9, 2026
Google search engine
Home Blog Page 195

ಕನಸುಗಳನ್ನು ಬಿಟ್ಟು ದೂರ ಸರಿದ ರೈತ ನಾಯಕ

0

ಮಹೇಂದ್ರ ಕೃಷ್ಣಮೂರ್ತಿ

ತುಮಕೂರು: ರಾಜ್ಯದ ರೈತ ಸಂಘದ ಹಿರಿಯ ನಾಯಕರಾಗಿದ್ದ ಬೆನ್ನನಾಯಕನಹಳ್ಳಿ ದೇವರಾಜ್ ಅವರಿಗೆ ಸಾಯುವ ವಯಸ್ಸೇನು ಆಗಿರಲಿಲ್ಲ. ರೈತರ ಬಗೆಗಿನ ಎರಡು ಕನಸುಗಳನ್ನು ಬಿಟ್ಟು ಅವರು ಬಾರದ ಲೋಕಕ್ಕೆ ದೂರ ಸರಿದು ಹೋಗಿದ್ದಾರೆ.

ದೇವರಾಜ್ ಅವರನ್ನು ಎಲ್ಲರೂ ದೇವರಾಜಣ್ಣ ಎಂದೇ ಕರೆಯುತ್ತಿದ್ದರು. ಅಣ್ಣನೇ ರೀತೀನೆ ಎಲ್ಲರಿಗೂ ಅವರು ಪ್ರೀತಿ, ಪ್ರೇಮ, ವಾತ್ಸಲ್ಯ ನೀಡಿ ಬೆಳೆಸಿದರು. ಪೊರೆದವರು. ಯಾರಾದರೂ ರೈತರು ಕಷ್ಟದಲ್ಲಿ ಸಿಲುಕಿದ್ದಾರೆ ಎಂದರೆ ಕೂಡಲೇ ಅಲ್ಲಿ ಅವರು ಹಾಜರಿರುತ್ತಿದ್ದರು.

ರೈತರ ವಿಷಯದಕ್ಕೆ ಬಂದರೆ ಅವರು ಯಾರಿಗೂ ಹೆದರುತ್ತಿರಲಿಲ್ಲ. ಸಾಕಷ್ಟು ಸಲ ಜೈಲು ವಾಸ ಕಂಡು ಬಂದಿದ್ದ ಅವರು ರೈತ ಸಂಘಟನೆಗಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇ ಹೆಚ್ಚು. ತಮ್ಮ ವೈಯಕ್ತಿಕ ಸುಖ, ಹಣ, ಅಭಿವೃದ್ಧಿಯನ್ನೂ ಸಹ.

ಪ್ರೊ.ಎಂ.ಡಿಎನ್ ಅವರಂತೆಯೇ ಕಡು ಪ್ರಾಮಾಣಿಕ. ನಿಷ್ಠುರವಾದಿ. ಪ್ರೊಫೆಸರ್ ಅವರ ನೆರಳಿನಲ್ಲೇ ಬೆಳೆದವರು ದೇವರಾಜಣ್ಣ. ಇಡೀ ರಾಜ್ಯ, ದೇಶ, ವಿದೇಶಗಳ ಗಮನ ಸೆಳೆದ ಹಲವು ಮಹತ್ವದ ಹೋರಾಟಗಳಲ್ಲಿ ಪ್ರೊಫೆಸರ್ (ಎಂ.ಡಿ.ನಂಜುಂಡಸ್ವಾಮಿ) ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ತಿಪಟೂರಿನ ಬೆನ್ನನಾಯಕನಹಳ್ಳಿಯಂಥ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದ ಅವರು ಪ್ರೊಫೆಸರ್ ಅವರ ಕಾರಣದಿಂದಾಗಿಯೇ ರೈತ ಚಳವಳಿಗೆ ದುಮುಕಿದವರು. ಅನೇಕ ಸಲ ಜೈಲು ಕಂಡಿದ್ದವರು.

ಜಿಲ್ಲೆಯ ರೈತರ ಸಂಘಟನೆಗಾಗಿ ಜೀವ ತೇಯ್ದವರ ಬಗೆಗಿನ ಕಥನಗಳನ್ನು ಪುಸ್ತಕ ರೂಪದಲ್ಲಿ ತರಬೇಕು ಎಂಬುದು ಅವರು ಮಹದಾಸೆ ಆಗಿತ್ತು. ನಮ್ಮೊಂದಿಗೆ ನಮ್ಮ ಚಳವಳಿಯ ನೆನಪು ಮಾಸಿ ಹೋಗಿ ಬಿಡುತ್ತದೆ ಮಹೇಂದ್ರ. ನೀವೊಂದು ಇಡೀ ಜಿಲ್ಲೆಯ ರೈತ ಹೋರಾಟದ, ಹೋರಾಟಗಾರರ ಬಗೆಗೆ ಒಂದು ಪುಸ್ತಕ ತರಬೇಕು. ನನ್ನ ಹೋರಾಟದ ಗಾಥೆಯನ್ನು ನಿಮಗೆ ಹೇಳುತ್ತೇನೆ. ಇಡೀ ಜಿಲ್ಲೆಯ ರೈತ ಇತಿಹಾಸ ದೊಡ್ಡದಿದೆ. ಮಣ್ಣಲ್ಲಿ ಮಣ್ಣಾಗಿ ಹೋಗಿ ಬಿಡಬಾರದು’ ಎಂದು ಹೇಳುತ್ತಿದ್ದವರು ಅವರ ಎದೆಯೊಳಗೆ ಇತಿಹಾಸವನ್ನು ಇಟ್ಟುಕೊಂಡು ಹೊರಟೇ ಬಿಟ್ಟಿದ್ದು ಇಡೀ ನಾಡಿಗೆ ಆಘಾತ ತಂದಿದೆ.

ಪ್ರೊಫೆಸರ್ ಅವರ ಇನ್ನೊಂದು ಕನಸನ್ನು ಕನಸು ಮಾಡಲು ಅವರು ಹಾತೊರೆಯುತ್ತಿದ್ದರು. ಸಹಕಾರ ರೂಪದಲ್ಲಿ ಎಲ್ಲವನ್ನು ರೈತರೇ ನಿಭಾಯಿಸಬೇಕೆಂಬುದು ಅವರ ಮತ್ತೊಂದು ಕನಸಗಾಗಿತ್ತು. ಬೆಲೆ ಕಾವಲು ಸಮಿತಿ ನೇತೃತ್ವದಲ್ಲಿ ನಡೆದಿದ್ದ ಕೊಬ್ಬರಿ ಚಳವಳಿಯ ಹಿಂದೆ ಇಂಥದೊಂದು ಕನಸನ್ನು ಅವರು ಕಂಡಿದ್ದರು. ಬೆಲೆ ಕಾವಲು ಸಮಿತಿಯವರು ಆನ್ ಲೈನ್ ಕೊಬ್ಬರಿ ವಹಿವಾಟು ಅಧಿಕೃತಗೊಳಿಸಲು ತಿಪಟೂರು ಮಂಡಿಯಲ್ಲಿ ಕೊಬ್ಬರಿ ಮಂಡಿ ತೆರೆದಾಗ ಅದರ ಹಿಂದೆ ಅವರ ಕನಸನ್ನು ಮತ್ತಷ್ಟು ಚಿಗುರಿಸಿತ್ತು. ಆದರೆ ಬೆಲೆ ಕಾವಲು ಸಮಿತಿ ಈ ನಿಟ್ಟಿನಲ್ಲಿ ಸೋತಾಗ ಅವರು ಅತೀವ ನೋವು ತಿಂದರು.

ದೇವರಾಜಣ್ಣ ಏನು ಎಂಬುದನ್ನು ತಿಪಟೂರಿನಲ್ಲಿ ಪ್ರತಿ ಬೀದಿಗಳು ಹೇಳುತ್ತವೆ. ತಿಪಟೂರು ತಾಲ್ಲೂಕಿನ ಪ್ರತಿ ಬೀದಿ, ಹಳ್ಳಿಗಳ ಓಣಿಗಳಲ್ಲಿ ಅವರು ನೆನಪಿನ ಘಮ ಬಿಟ್ಟು ನಮ್ಮನ್ನು ಅಗಲಿದ್ದಾರೆ.

ಕೊನೆಯುವರೆಗೂ ಹಳೇ ಬೈಕ್ ನಲ್ಲೇ ಓಡಾಡುತ್ತಿದ್ದ ಅವರಿಗೆ ಬಂದು ಆಮಿಷಗಳು ಅಗಣಿತ. ರೈತರಿಗೆ ಪರಿಹಾರವನ್ನೇ ನೀಡದೇ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಕಡೆಯಿಂದ ಅವರಿಗೆ ಲಕ್ಸುರಿ ಕಾರು ನೀಡುವ, ಕೋಟ್ಯಂತರ ಹಣ ನೀಡುವ ಆಮಿಷ ನೀಡಲಾಗಿತ್ತು. ಮನೆಗೆ ಬಂದವರನ್ನು ನೇರ ಅವರ ಕಿವಿಹಿಂಡಿ ಬೀದಿಗೆ ಬಿಟ್ಟರು. ರೈತರಿಗೆ ದ್ರೋಹ ಎಸಗುವ ಈ ಕಾಮಗಾರಿ ತಡೆಗಟ್ಟಿ ಚಳವಳಿ ರೂಪಿಸಲು ಮುನ್ನಡೆಯುತ್ತಿದ್ದ ಅವರೀಗ ಆ ಚಳವಳಿಯನ್ನು ಬಿಟ್ಟು ಅಗಲಿದ್ದಾರೆ. ಈ ಚಳವಳಿಯನ್ನು ಮುಂದುವರೆಸಲು. ಅವರ ಕನಸನ್ನು ನನಸು ಮಾಡುವ ಕೆಲಸವನ್ನು ಈಗ ತಿಪಟೂರಿನ ಗೆಳೆಯರು, ರಾಜ್ಯ ರೈತ ಸಂಘ ಮಾಡಬೇಕಾಗಿದೆ.

ರಾಜ್ಯ ರೈತ ಸಂಘದ ದೇವರಾಜ್ ಇನ್ನಿಲ್ಲ

ತುಮಕೂರು: ರಾಜ್ಯ ರೈತ ಸಂಘದ ಹಿರಿಯ ಮುಖಂಡ‌ ಬೆನನಾಯಕನಹಳ್ಳಿ ದೇವರಾಜ್ ಭಾನುವಾರ ರಾತ್ರಿ ಅಕಾಲಿಕ ನಿಧನರಾದರು.

ಎಲ್ಲರಿಂದ ದೇವರಾಜಣ್ಣ ಎಂದು ಕರೆಯಿಸಿಕೊಳ್ಳುತ್ತಿದ್ದ ಅವರು ರೈತ ಸಂಘದ‌ ಹಿರಿಯ ಮುಖಂಡರಲ್ಲಿ ಒಬ್ಬರಾಗಿದ್ದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿಯಾಗಿದ್ದ ಅವರು ತಿಪಟೂರಿನ ಬೆನನಾಯಕನಹಳ್ಳಿಯವರು.

ನುಡಿದಂತೆ ನಡೆಯುತ್ತಿದ್ದ ಸರಳ, ಸಜ್ಜನಿಕೆಯ ನೇತಾರರಾಗಿದ್ದರು.

ರೈತ ಸಂಘದ ಸ್ಥಾಪಕರಾಗಿದ್ದ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರ ಒಡನಾಡಿಯಾಗಿದ್ದರು. ಅವರೊಂದಿಗೆ ವಿಶೇಷವಾದ ಆಪ್ತತೆ, ಸಂಬಂಧ ಇರಿಸಿ ಕೊಂಡಿದ್ದರು.

ಪ್ರೊ.ನಂಜುಂಡಸ್ವಾಮಿ ಅವರು ಕ್ಯಾನ್ಸರ್ ಪೀಡಿತರಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿದ್ದಾಗ ಅವರ ಆರೈಕೆ ಮಾಡಿದವರಲ್ಲಿ ಇವರು ಒಬ್ಬರಾಗಿದ್ದರು.

ತಿಪಟೂರಿನಲ್ಲಿ ದಶಕಗಳಿಂದ ರೈತ ಚಳವಳಿಯನ್ನು ಜೀವಂತವಾಗಿಟ್ಟುಕೊಂಡು ಬಂದಿದ್ದರು. ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದರು.

ನೀರಾ, ಕೊಬ್ಬರಿ‌‌‌ ಚಳವಳಿ ಸೇರಿದಂತೆ ಅನೇಕ‌ ಚಳವಳಿಗಳ‌ ಮುಂಚೂಣಿ ನಾಯಕರಾಗಿದ್ದರು. ಅನೇಕ ಸಲ ಜೈಲಿಗೂ ಬಂದಿದ್ದರು.

ಸೋಮವಾರ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ನಿಧನಕ್ಕೆ ರಾಜ್ಯ ರೈತ ಸಂಘ,‌‌ಬೆಲೆ ಕಾವಲು ಸಮಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ಗಣ್ಯರು, ರೈತ ಮುಖಂಡರು ಸಂತಾಪ ಸೂಚಿಸಿದ್ದಾರೆ.

ತುಮಕೂರು: ಪೊಲೀಸ್, ಜೈಲಿನಲ್ಲಿದ್ದ ಖೈದಿಗೆ ಕೊರೊನಾ

ತುಮಕೂರು: ನಿನ್ನೆ, ಮೊನ್ನೆಗೆ ಹೋಲಿಸಿದರೆ ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, 31 ಮಂದಿಗೆ ಸೋಂಕು ದೃಢಪಟ್ಟಿದೆ.

ಕುಣಿಗಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೆಬಲ್ ಹಾಗೂ ತುಮಕೂರು ಜಿಲ್ಲಾ ಜೈಲಿನಲ್ಲಿದ್ದ ಖೈದಿಯೊಬ್ಬನಿಗೂ ಸೋಂಕು ತಗುಲಿದೆ.

ಸರಗಳ್ಳತನದಲ್ಲಿ ಬಂಧಿಯಾಗಿದ್ದ ಇವನನ್ನು ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲಾಗಿದೆ.‌ ಕುಣಿಗಲ್ ಪೊಲೀಸ್ ಠಾಣೆಯನ್ನು ಎರಡು ದಿನ ಸೀಲ್ಡ್ ಡೌನ್ ಮಾಡಲಾಗಿದೆ.

ತುಮಕೂರಿನಲ್ಲಿ 12, ಕುಣಿಗಲ್ 5, ಮಧುಗಿರಿ ತಾಲ್ಲೂಕಿನಲ್ಲಿ ಮೂವರು, ಪಾವಗಡದಲ್ಲಿ ಐವರು ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ 4 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಒಟ್ಟಾರೆ ಸೋಂಕಿತರ ಸಂಖ್ಯೆ 252ಕ್ಕೇರಿದೆ

ತುಮಕೂರು 31 ಜನರಿಗೆ ಕೊರೊನಾ: 252ಕ್ಕೇರಿದ ಸಂಖ್ಯೆ

ತುಮಕೂರು: ನಿನ್ನೆ, ಮೊನ್ನೆಗೆ ಹೋಲಿಸಿದರೆ ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, 31 ಮಂದಿಗೆ ಸೋಂಕು ದೃಢಪಟ್ಟಿದೆ.

ತುಮಕೂರಿನಲ್ಲಿ 12, ಕುಣಿಗಲ್ 5, ಮಧುಗಿರಿ ತಾಲ್ಲೂಕಿನಲ್ಲಿ ಮೂವರು, ಪಾವಗಡದ ಮೂವರು ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ 4 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಒಟ್ಟಾರೆ ಸೋಂಕಿತರ ಸಂಖ್ಯೆ 252ಕ್ಕೇರಿದೆ

ಚಿ.ನಾ.ಹಳ್ಳಿ: ಉಸ್ತುವಾರಿ ಎದುರೇ ಸಭೆ ಬಹಿಷ್ಕರಿಸಿ ಹೊರ ನಡೆದರು….

ಚಿಕ್ಕನಾಯಕನಹಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ‌ ಅಧ್ಯಕ್ಷೆತೆಯಲ್ಲಿ ನಡೆದ ಕೆಡಿಪಿ ಸಭೆ ಕೂಗಾಟಕ್ಕೆ ಸಾಕ್ಷಿಯಾಯಿತು.

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸದಸ್ಯರು ಹರಿ ಹಾಯ್ದರು.

ತಾಲ್ಲೂಕು ಪಂಚಾಯಿತಿ ಇಓಗೆ ಜಿಲ್ಲಾ ಪಂಚಾಯಿತಿ ಸದಸ್ಯರ ಹೆಸರೇ ಗೊತ್ತಿಲ್ಲ ಕನಿಷ್ಠ ಗೌರವ ನೀಡುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಕೆಡಿಪಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ತಿ ನಂ ಶ್ರೀ ಭವನದಲ್ಲಿ ನಡೆಯಿತು .

ಜೆಡಿಎಸ್ ಎನ್. ಕಲ್ಲೇಶ್ ರಾಮಚಂದ್ರ ಹಾಗೂ ಕಾಂಗ್ರೆಸ್‌ನ ವೈ. ಸಿ ಸಿದ್ದರಾಮಯ್ಯ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡುವುದಿಲ್ಲ ಇಒಗೆ ಜಿಲ್ಲಾ ಪಂ. ಸದಸ್ಯರ ಹೆಸರೇ ಗೊತ್ತಿಲ್ಲ ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಆಡಳಿತ ಹೇಗೆ ನಡೆಸುತ್ತೀರಿ? ಅಧಿಕಾರಿಗಳು ಬೇಜವಾಬ್ದಾರಿ ಇಲ್ಲದೆ ವರ್ತಿಸುತ್ತಿದ್ದಾರೆ. ಕೆಡಿಪಿ ಬುಕ್ಲೆಟ್ ನೀಡುವುದನ್ನು ತಡಮಾಡುತ್ತಾರೆ ಎಂದು ಸಭೆಯಿಂದ ಹೊರ ನಡೆದರು.

ಮುಂದೆ ಹೀಗಾಗದಂತೆ ಕ್ರಮ ವಹಿಸುವಂತೆ ಸಚಿವರು ಇಒ ಗೆ ಸೂಚಿಸಿದರು

ಅಂಬೇಡ್ಕರ್ ರಿಂದಾಗಿ ನನಗೆ ಈ ಸ್ಥಾ‌ನ ಸಿಕ್ಕಿದೆ: ಕುಮಾರ್ ಗೌಡ

ಮಂಜುನಾಥ ಹೆತ್ತೇನಹಳ್ಳಿ


ತುಮಕೂರು: ದೇಶದಲ್ಲಿ ಪ್ರಪ್ರಥಮ ಬಾರಿಗೆ “ಮಹಾನಾಯಕ
ಡಾ. ಬಿ . ಆರ್. ಅಂಬೇಡ್ಕರ್” ಜಿ. ವಾಹಿನಿ ಧಾರವಾಹಿಯ ಮೊದಲ ಸಂಚಿಕೆಯನ್ನು ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಬೃಹತ್ LED ಪರದೆಯ ಮೂಲಕ ನೇರ ಪ್ರಸಾರಕ್ಕೆ ತುಮಕೂರಿನ ಎಲ್ಲಾ ಅನುಯಾಯಿಗಳು ಸಾಕ್ಷಿಯಾದರು.

ಈ ಸಂಧರ್ಭದಲ್ಲಿ ಮಾತನಾಡಿದ ಹಿರೇ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಿವನಂದ ಶಿವಚಾರ್ಯರು ಇಂದು ನನ್ನ ದೇಶದಲ್ಲಿ ಸಂವಿಧಾನ ವಿಲ್ಲದಿದ್ದರೆ ಇಡೀ ಶೂದ್ರ ಸಮುದಾಯ, ಧ್ವನಿ ಇಲ್ಲದ ಸಮುದಾಯ ಭೂ ಒಡೆತನವಿಲ್ಲದೇ, ರಾಜ್ಯಾಧಿಕಾರವಿಲ್ಲದೇ, ಶಿಕ್ಷಣವಿಲ್ಲದೇ ಗುಲಾಮಗಿರಿ & ಶೋಷಣೆಯಿಂದ ಬದುಕಬೇಕಿತ್ತು. ಇಂತಹ ಅದಮ್ಯ ಚೇತನದ ಆದರ್ಶಯುತ ಜೀವನ, ಸಂಘರ್ಷದ ಜೀವನ & ಹೋರಾಟದ ಜೀವನವನ್ನು ಧಾರವಾಹಿಯ ಮೂಲಕ ಪರಿಚಯವಾಗುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದರು.

ನಿಮ್ಮಲ್ಲಿ ನನ್ನ ಮನವಿ ಎಂದರೇ ಬಾಬಾ ಸಾಹೇಬರು ಬರೀ ದಲಿತ ಸಮುದಾಯಕ್ಕಲ್ಲಾ ಈದೇಶದ ಪ್ರತಿಯೊಬ್ಬ ಭಾರತೀಯನ ಘನತೆಯ ಜೀವನವನ್ನು ಕಟ್ಟಿಕೊಟ್ಟದ್ದು ಡಾ ಬಾಬಾ ಸಾಹೇಬರೇ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಜೆ ಕುಮಾರ್ ಗೌಡ ಮಾತನಾಡಿ, ಜಿ ಟಿವಿ ಕನ್ನಡದ ಮಹಾನಾಯಕ ದಾರವಾಹಿ ಮೊದಲ ಸಂಚಿಕೆಯನ್ನು ತುಮಕೂರಿನ ಸಮಾನಮನಸ್ಕರರು ಎಲ್ಲರೂ ಸೇರಿ ಆಚರಿಸುತ್ತಿರುವುದು ಹಾಗೂ ನೇರಪ್ರಸಾರವನ್ನು ಅದು ಅದ್ಭುತವಾದ LED ಪರದೆಯ ಮೂಲಕ ಪ್ರದರ್ಶನಗೊಳಿಸುತ್ತಿರುವುದು ಸಂತೋಷದ ವಿಷಯವಾಗಿದೆ ಹಾಗೂ ಜೀ ಕನ್ನಡ ವಾಹಿನಿಯ ಇಂತಹ ಪ್ರಯತ್ನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಭಾರತೀಯರೆಲ್ಲರಾದ ನಾವು ಮೊದಲನೆಯದಾಗಿ ನಾವು ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಸಂವಿಧಾನಾತ್ಮಕ ವಿಷಯಗಳನ್ನು ಚೆನ್ನಾಗಿ ತಿಳಿಯಲು ಅದರ ನಿರ್ಮಾತೃವಾದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವರನ್ನು ಅಧ್ಯಯನ ಮಾಡುವ ತುರ್ತು ಪರಿಸ್ಥಿತಿ ಇಂದು ನಮ್ಮ ಮುಂದಿದೆ ಎಂದರು.

ಯಾಕೆಂದರೆ ಸಂವಿಧಾನ ಸಮರ್ಪಣೆಯಾಗಿ 70 ವರ್ಷ ಕಳೆಯುತ್ತಾ ಬಂದಿದೆ ಆದರೂ ಕೂಡ ಇಂದಿನ ಜಗತ್ತಿನ ಯಾವುದೇ ಪರಿಸ್ಥಿತಿ ಯಾವುದೇ ಸಮಸ್ಯೆಗಳಿಗೆ ಉತ್ತರ ನಮಗೆ ಸಿಗುತ್ತದೆ ಎಂದಾದರೆ ಅದು ನಮ್ಮ ಸಂವಿಧಾನದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ನಾವು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವರ ಜ್ಞಾನದ ದೃಷ್ಟಿಯಿಂದ ತಿಳಿಯಬೇಕೆ ವಿನಃ ಅವರನ್ನು ಜಾತಿಯ ದೃಷ್ಟಿಯಿಂದ ತಿಳಿದರೇ ನಮಗೆಂದಿಗೂ ಅರ್ಥವಾಗುವುದಿಲ್ಲ ಎಂದು ತಿಳಿಸಿದರು.

ಬಾಬಾಸಾಹೇಬರ 125ನೇ ಜನ್ಮದಿನಾಚರಣೆ ಅಂಗವಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯ ನಡೆಸಿದ ವಿಶ್ವದ ಅತ್ಯಂತ ಶ್ರೇಷ್ಠ ಜ್ಞಾನಿ ಯಾರೆಂದು ನಡೆಸಿದ ಸರ್ವೆಯಲ್ಲಿ ಪ್ರಪ್ರಥಮ ಹೆಸರು ಇಡೀ ವಿಶ್ವದಲ್ಲೇ ಎಲ್ಲಾ ಕ್ಷೇತ್ರಗಳಲ್ಲೂ ಹೆಸರನ್ನು ತೆಗೆದುಕೊಂಡರೂ ಕೂಡಾ ಬಾಬಾಸಾಹೇಬರ ಹೆಸರು ಮೊದಲನೆಯದಾಯಿತು..

ಇಂತಹ ಕಾರಣದಿಂದ ವಿಶ್ವ ಸಂಸ್ಥೆಯೇ ಬಾಬಾ ಸಾಹೇಬರ ಜನ್ಮದಿನಾಚರಣೆಯನ್ನು “ವಿಶ್ವ ಜ್ಞಾನಿ” ಯ ದಿನಾಚರಣೆ ಎಂದು ಆಚರಿಸುವಂತೆ ಎಲ್ಲಾ ದೇಶಗಳಿಗೂ ಆದೇಶಿಸಿತು.

ಇಂತಹ ಶ್ರೇಷ್ಠ ವ್ಯಕ್ತಿ ಜನಿಸಿದ ಈ ಭಾರತ ಭೂಮಿಯಲ್ಲಿ ನಾನು ಹುಟ್ಟಿದ್ದೇನೆಂಬ ಹೆಮ್ಮೆ ನನಗಿದೆ. ಹಾಗೆ ನಾನು ಈ ದಿನದ ನನ್ನೆಲ್ಲಾ ಅಧಿಕಾರ ಸಂತೋಷ ಸುಖ ನೆಮ್ಮದಿಗೆ ಮುಖ್ಯ ಕಾರಣ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಎಂದು ಎದೆಯುಬ್ಬಿಸಿ ಹೇಳಲು ಅಭಿಮಾನವಿದೆ ಎಂದರು.

ನಾನು ಯಾವಾಗಲೂ ಕೂಡ ನನ್ನ ತಂದೆ-ತಾಯಿಗೆ ಎಷ್ಟು ಗೌರವಿಸುತ್ತೇನೋ ಅದಕ್ಕಿಂತ ಹೆಚ್ಚಿನ ಗೌರವವನ್ನು ನನ್ನ ಹೃದಯ ಪೂರ್ತಿಯಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ನೀಡಿ ಗೌರವಿಸುತ್ತೇನೆ ಎಂದು ತಿಳಿಸಿದರು.

ಇಂತಹ ಗೌರವಯುತವಾದ ಜೀವನ ನಡೆಸಿದ ಅವರು ನಡೆದು ಬಂದ ಹಾದಿಯನ್ನು ಅವರು ಹಾಕಿಕೊಟ್ಟ ಮಾರ್ಗವನ್ನು ಯಥಾವತ್ತಾಗಿ ಪಾಲಿಸುವುದರೊಂದಿಗೆ ನಮ್ಮ ಜೀವನವನ್ನು ಅತ್ಯಂತ ಶ್ರೇಷ್ಟವಾಗಿ ನಿರ್ವಹಿಸುತ್ತೇವೆ ಎಂದು ಪ್ರಮಾಣಿಕರಿಸೋಣಾ ಎಂದು ಮಹಾಪೌರರಾದ ಫರೀದ ಬೇಗಂ ಅಭಿಪ್ರಾಯ ಪಟ್ಟರು.

ನಾವೆಲ್ಲರೂ ಜಾತಿ ಮುಖವಾಡವನ್ನು ತೆಗೆದು ನೈಜವಾದ ವಿಶ್ವದ ಜ್ಞಾನಿ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳನ್ನು ನಿರಂತರ ಅಧ್ಯಯನ ಮಾಡಿ, ಬಲಿಷ್ಠವಾದ ಭಾರತವನ್ನು ಕಟ್ಟಲಿಕ್ಕೆ ನಾವೆಲ್ಲರೂ ಹೆಜ್ಜೆ ಹಾಕಬೇಕೆಂದು ಹೇಳಿದರು.

ಎಲ್ಲರೂ ಅತಿ ಹೆಚ್ಚು ಅಧ್ಯಯನ ಮಾಡಿ ಅಧ್ಯಯನದಿಂದ ಅಷ್ಟೇ ನಮ್ಮೆಲ್ಲರ ಸಮಸ್ಯೆ ಪರಿಹಾರ ಎಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತನ್ನು ನಾವೆಲ್ಲರೂ ಹೆಚ್ಚು ಹೆಚ್ಚು ಓದಿ ಭವ್ಯ ಭಾರತವನ್ನು ನಿರ್ಮಿಸಿ ಸಂವಿಧಾನಶಿಲ್ಪಿ ಕಂಡ ಭವ್ಯ ಭಾರತದ, ಸಮಸಮಾಜದ ಕನಸನ್ನು ನನಸಾಗಿ ಮಾಡೋಣ ಎಂದು ವೈ. ಹೆಚ್ ಹುಚ್ಚಯ್ಯ ಹೇಳಿದರು.

ಇಂದಿಗೂ ಈ ಸಮಾಜದಲ್ಲಿ ಅಸ್ಪ್ರುಶ್ಯತೆ & ಅಸಮಾನತೆ ತಾಂಡವವಾಡುತ್ತಿದೆ ಇದಕ್ಕೆ ನಾವು ಹೊರತಲ್ಲಾ ಆ ನೋವನ್ನು ನಾವು ಅನುಭವಿಸಿದ್ದೇವೆ ಎಂದು ವಾಲೆ ಚಂದ್ರಯ್ಯ ಅಭಿಪ್ರಾಯ ಪಟ್ಟರು.

ಇಷ್ಟೆಲ್ಲಾ ಸಾಧನೆ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಹಾಕಿಕೊಟ್ಟ ಹಾದಿ ಯಾವುದು..? ಆ ಹಾದಿ ಎಂದರೆ ಬಹುತೇಕರು ತಿಳಿದಿರುವಂತೆ “ಶಿಕ್ಷಣ, ಸಂಘಟನೆ, ಹೋರಾಟವಲ್ಲ” ಅದರಲ್ಲೂ ಕೂಡ ಕಸರತ್ತುಗಳು ನಡೆದುಹೋಗಿದೆ. ನಿಜವಾದ ಅರ್ಥದಲ್ಲಿ “ಶಿಕ್ಷಣ, ಹೋರಾಟ, ಸಂಘಟನೆ”. ಯಾವಾಗ ನಾವು ಶಿಕ್ಷಿತರಾಗುತ್ತೇವೊ ನಮ್ಮಲ್ಲಿ ವೈಚಾರಿಕವಾದಂತಹ, ವೈಜ್ಞಾನಿಕವಾದಂತಹ, ಹೋರಾಟದ ಮನೋಭಾವ ಬರುತ್ತದೆ ಎಂದರು.

ಹೋರಾಟದ ಮನೋಭಾವ ಸರಿಯಾಗಿದ್ದರೆ ಜನಗಳೇ ಸಂಘಟಿತರಾಗುತ್ತಾರೆ ಎಂದು ಬಾಬಾಸಾಹೇಬ್ ಹೇಳಿದ್ದು. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕಿದೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದ್ದ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ಸಂಸ್ಥಾಪಕರಾಜ್ಯಾಧ್ಯಕ್ಷರಾದ ಕೆ ಹೆಚ್ ಶಿವಕುಮಾರ್ ( ಬಂಡೆ ಕುಮಾರ್ ) ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಷಫಿ ಅಹಮದ್, ಲೋಕ ಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷರಾದ ಜಗನ್ನಾಥ್, ಉಪ ಮಹಾಪೌರರಾದ ಶಶಿಕಲಾ ಗಂಗಹನುಮಯ್ಯ, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪುಗೌಡ, ಜಯಕರ್ನಾಟಕ ಸೋಮಶೇಖರ್, LJP ಜಿಲ್ಲಾಧ್ಯಕ್ಷ ಶಿವಪ್ರಸಾದ್, DSS ಪಿ ಎನ್ ರಾಮಯ್ಯ, DSS ಕೇಬಲ್ ರಘು, ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟಾ ಶಂಕರ್, ಕೊಡಿಯಾಲ ಮಹಾದೇವ್, ರಾಮಯ್ಯ, ದಲಿತಸೇನೆ ಗೂಳೂರು ಸಿದ್ದರಾಜು, ಪ್ರಸನ್ನ ಕುಮಾರ್, ವೆಂಕಟೇಶ್, ರಾಮಾಂಜಿ, ಗೂಳರವೆ ನಾಗರಾಜ್, ದರ್ಶನ್, ಚೇತನ್ & ಹೆಚ್.ಎನ್ &ಮಂಜುನಾಥ್ ಉಪಸ್ಥಿತರಿದ್ದರು.

ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ.?

ಎಚ್.ಎಸ್. ಲೋಕೇಶ

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.

ರವಿಯ ಅನುಗ್ರಹ : ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ ‘ಡಿ’ ಮತ್ತು ‘ಇ’ ಪ್ರೋಟೀನ್ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ.

ಚಂದ್ರನ ಅನುಗ್ರಹ : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.

ಕುಜನ ಅನುಗ್ರಹ : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ ‘ಅನ್ನಂ ಬ್ರಹ್ಮ’ ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು.

ಬುಧನ ಅನುಗ್ರಹ : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು.

ಗುರುವಿನ ಅನುಗ್ರಹ : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. ‘ಕೋಶ ಓದಬೇಕು ಲೋಕ ಸುತ್ತಬೇಕು’ ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು.

ಶುಕ್ರನ ಅನುಗ್ರಹ : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು.

ಶನಿಯ ಅನುಗ್ರಹ : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು.

ರಾಹುವಿನ ಅನುಗ್ರಹ : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ.

ಕೇತುವಿನ ಅನುಗ್ರಹ : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.

ಕಾಯ್ಕಿಣಿ ಜೊತೆಗೆ ಮಾತಿನ ಸೋನೆ’ಮಳೆ’

ಜಿ.ಎನ್.ಮೋಹನ್


ಮುಂಬೈ ನ ಮುಲುಂದ್ ನ, ವೈಶಾಲಿನಗರದ, 2D- 57 ಫ್ಲ್ಯಾಟ್ ನಿಂದ ಹೊರಟ ಆ ಪತ್ರ ನನ್ನ ಕೈ ಸೇರಿ ಸರಿಯಾಗಿ ೨೫ ವರ್ಷಗಳಾಗಿವೆ.

ಆ ಪತ್ರವೇ ಕಾರಣವಾಗಿ ಆರಂಭವಾದ ಗೆಳೆತನಕ್ಕೆ ಸಹಾ ಈಗ ಬೆಳ್ಳಿ ಸಂಭ್ರಮ.

”ದೊಡ್ಡ ದನಿಯ ಬೇಂಡು ಬಜಂತ್ರಿ, ಕೂಗಿ ಕರೆಯುವ ದಲ್ಲಾಳಿಗಳ ಪೇಟೆಯಲ್ಲಿ- ಮೂಲೆಯಲ್ಲಿ ಬಕುಳದ ಹೂವಿನ ಮಾಲೆಗಳನ್ನು ಹಿಡಿದು ಕೂತಿದ್ದವರು ಅವರು …” ಎಂದು ಎಕ್ಕುಂಡಿಯವರನ್ನು ಬಣ್ಣಿಸಿದ ಪತ್ರ ಬರೆದವರು ಮತ್ತಾರೂ ಅಲ್ಲ- ಜಯಂತ್ ಕಾಯ್ಕಿಣಿ.

ನಾನು ಸು ರಂ ಎಕ್ಕುಂಡಿಯವರನ್ನು ಕುರಿತು ‘ಎಕ್ಕುಂಡಿ ನಮನ’ ಕೃತಿ ಹೊರತಂದು ಕೆಲವೇ ದಿನಗಳಾಗಿತ್ತಷ್ಟೇ.

ಅಘನಾಶಿನಿಯ ತವರಿನಲ್ಲಿದ್ದ ಎಕ್ಕುಂಡಿಯವರ ಬಗ್ಗೆ ಉತ್ತರ ಕನ್ನಡದವರೆಲ್ಲರಿಗೂ ಇನ್ನಿಲ್ಲದ ಹೆಮ್ಮೆ.

ಹಾಗಾಗಿಯೇ ಇರಬೇಕು ಜಯಂತ್ ತಮ್ಮ ಸುಂದರ ಅಕ್ಷರ, ವಿನ್ಯಾಸಗಳ ಮೂಲಕ ಗುರುತು ಗೊತ್ತಿಲ್ಲದ ನನಗೆ ಪತ್ರ ಬರೆದಿದ್ದರು.

ಅಂದಿನಿಂದ ಇಂದಿನವರೆಗೂ ನಾವು ಸ್ವಚ್ಚಂದ ಸ್ನೇಹವನ್ನು ಸದಾ ಜಾರಿಯಲ್ಲಿಟ್ಟಿದ್ದೇವೆ.

ಚಿತ್ರಕಲಾ ಪರಿಷತ್ತಿನ ಬಂಡೆಗಳ ಮೇಲೆ ನಾವು ಕುಳಿತಾಗಲೂ ನಮ್ಮ ಮಾತು ಎಕ್ಕುಂಡಿಯವರಿಂದಲೇ ಆರಂಭವಾಯಿತು.

‘ನನ್ನ ತಂದೆ ಅವರನ್ನು ಸುರಮ್ಯ ಕವಿ ಎನ್ನುತ್ತಿದ್ದರು’ ಎಂದು ಜಯಂತ್ ನೆನಪಿನ ಲೋಕಕ್ಕೆ ಜಾರಿಹೋದರು.

ಆ ವೇಳೆಗಾಗಲೇ ಇನ್ನು ಹನಿದೇ ಸಿದ್ಧ ಎನ್ನುವಂತೆ ಮೋಡಗಳು ಗೂಡು ಕಟ್ಟುತ್ತಿದ್ದವು.

ಜಯಂತ್ ಒಂಟಿಯಾಗಿ ಎಲ್ಲಿಯೂ ಸುಳಿದದ್ದು ಗೊತ್ತಿಲ್ಲ. ಜೊತೆಗೆ ಸಂಗಾತಿ ಸ್ಮಿತಾ ಇರುತ್ತಾರೆ. ಆ ಲೆಕ್ಕಕ್ಕೆ ಈಗ ಸೇರ್ಪಡೆಯಾಗಿರುವುದು ಮಳೆ.

ಬೇರೆಯವರಿಗೆ ಜಯಂತ್ ‘ಮುಂಗಾರು ಮಳೆ’ಯಾದರೆ ನನಗೆ ಅವರು ‘ಬೊಗಸೆಯಲ್ಲಿ ಮಳೆ’.

ಹಾಗಾಗಲಿ ಮಳೆ ನಾನಿಲ್ಲದೇ ಮಾತಿಲ್ಲ ಎನ್ನುವಂತೆ ಎಂಟ್ರಿ ಕೊಟ್ಟಿತು.

ಜಯಂತ್ ನೂರೆಂಟು ರೀತಿಯ ಮಳೆಯನ್ನು ಬಣ್ಣಿಸುತ್ತಾ ಹೋದರು.

’ಮಳೆ’…. ನಮ್ಮ ಮನಸ್ಸನ್ನು ಮತ್ತೆ ಬಾಲ್ಯಕ್ಕೆತೆಗೆದುಕೊಂಡು ಹೋಗುವಂತಹ, ಯಾವ ಪೂರ್ವಾಗ್ರಹ ಇಲ್ಲದೆ ಜಗತ್ತನ್ನು ನೋಡಲು ಪ್ರೇರೇಪಿಸುವಂತಹ,ಮನಸ್ಸನ್ನು ಹಸುರಾಗಿಸಿ, ಚಿಗುರಾಗಿಸಿ, ಹೂವಾಗಿಸಿ ಬೆಳಕಿನ ಕಡೆಗೆ ಕರೆದೊಯ್ಯುವಂತಹ ಮನಸ್ಥಿತಿ..

..ನನ್ನೊಳಗೆ ಮೊದಲು ಇಳಿದದ್ದು ಗೋಕರ್ಣದ ಮಳೆ. ನನ್ನ ಜೊತೆಗೆ ಮಳೆಯೂ ಬೆಳೆಯುತ್ತಾ ಹೋಗಿದೆ. ಶಾಲೆಯಲ್ಲಿದ್ದಾಗನಾನು ನೋಡಿದ ಮಳೆಯೇ ಬೇರೆ, ಕಾಲೇಜಿಗೆ ಹೋಗುವಾಗ ಇದೆ ಮಳೆ ಇನ್ನೊಂದಾಗಿತ್ತು. ಕೆಲಸ ಹುಡುಕುತ್ತಿದ್ದಾಗ,ಇಂಟರ್ವ್ಯೂಗಾಗಿ ಕಾಯುತ್ತಿರುವಾಗ ಆ ಮಳೆ ಬಣ್ಣ ಇನ್ನೂ ಬೇರೆಯೇ.. ಇಂಟರ್ವ್ಯೂ ಏನಾಯ್ತೋ, ಪೋಸ್ಟ್ ಮನ್ ಏನು ಉತ್ತರತರುತ್ತಾನೋ ಎಂದು ಕಾಯುವಾಗ ಬರುವ ಮಳೆ ಬೇರೆ ಥರ ಇರುತ್ತದೆ. ಕೆಲಸಕ್ಕೆ ಹೋಗುವಾಗ ಬಸ್ ತಡವಾದಾಗಬರುವ ಮಳೆ ಬೇರೆ ಥರ ಇರುತ್ತದೆ. ಹೀಗೇ ಒಂದೇ ಮಳೆ ನನ್ನೊಳಗೆ ನೂರೆಂಟು ರೀತಿ ಬೆಳೆದಿದೆ.

ಕಾಯ್ಕಿಣಿ ಎಂದ ತಕ್ಷಣ ಮಳೆ ಹೇಗೆ ನೆನಪಾಗುತ್ತದೋ ಹಾಗೆಯೇ ಗೋಕರ್ಣ. ಕಾಯ್ಕಿಣಿ ತುಂಬು ಪ್ರೀತಿಯಿಂದ ಗೋಕರ್ಣವನ್ನು ತಮ್ಮೊಂದಿಗೆ ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ.

‘ಗೋಕರ್ಣ ನನ್ನ ಭಾವಕೋಶವನ್ನು ರೂಪಿಸಿತು. ನನ್ನೂರು ಒಂದು ರೀತಿಯಲ್ಲಿ ಚಲನಶೀಲವಾದದ್ದು. ಗೋಕರ್ಣದಲ್ಲಿ ಪರ್ವತ ಇದೆ, ಸಮುದ್ರ ಇದೆ, ಮಳೆ ಇದೆ, ಜೊತೆಗೆ ಒಂದು ಆಧುನಿಕತೆಯೂ ಇದೆ. ಏಕೆಂದರೆ ಗೋಕರ್ಣ ಒಂದು ಪ್ರವಾಸೀಕೇಂದ್ರ. ಅತ್ಯಾಧುನಿಕವಾದ ಪ್ರವಾಸಿಗಳು ಬರುತ್ತಾರೆ ಅಲ್ಲಿಗೆ. ಅಲ್ಲಿ ಜಾನಪದವೂ ಇದೆ. ಅಲ್ಲಿ ಉಪನಿಷದ್ ಮತ್ತುವೇದಾಧ್ಯಯನ ಮಾಡುವವರೂ ಇದ್ದಾರೆ. ಹಾಲಕ್ಕಿ ವಚನ ಹಾಡುವವರೂ ಇದ್ದಾರೆ. ಎಲ್ಲಾ ಸೇರಿರುವ ಕೇಂದ್ರ ಅದು. ನಿತ್ಯ ಚಲನಶೀಲವಾದದ್ದು.

ಅಘನಾಶಿನಿ ಎಂದರೆ ಸಾಕು ಉತ್ತರ ಕನ್ನಡಿಗರ ಒಡಲೊಳಗೆ ಒಂದು ಸಂತಸದ ಬಗ್ಗೆ.

ಕಾಯ್ಕಿಣಿ ಕೂಡಾ ಅಘನಾಶಿನಿಯ ಹಿತ್ತಲಲ್ಲೇ ಬೆಳೆದವರು. ಹಾಗಾಗಲಿ ನನಗೆ ಒಂದು ಕನಸಿತ್ತು.

ನಾನು ‘ಸಮಯ’ ಚಾನಲ್ ನ ಮುಖ್ಯಸ್ಥನಾಗಿದ್ದಾಗ ಕಾಯ್ಕಿಣಿ ಅವರನ್ನು ಗೋಕರ್ಣದ ತುಂಬಾ ಸುತ್ತಾಡುವಂತೆ ಮಾಡಿ ಅವರ ಒಳಗಿನ ಸಂತಸದ ಬುಗ್ಗೆಗೂ ಕ್ಯಾಮೆರಾ ಹಿಡಿದಿದ್ದೆವು. ‘ಗೋಕರ್ಣದಲ್ಲಿ ಕಾಯ್ಕಿಣಿ’ ಒಂದು ಸುಂದರ ಬರಹದಂತೆಯೇ ಇತ್ತು.

ಜಯಂತ್ ಆಗ ಹೇಳಿದ ಒಂದು ಮಾತು ನನ್ನನ್ನು ತುಂಬಾ ಕಾಡಿತ್ತು. ಕೇಳಿದೆ- ’ದೇವರುಗಳ ಜೊತೆ ನಮಗೆ ತುಂಬಾ ಸಲಿಗೆಇತ್ತು, ಅವರೆಲ್ಲಾ ನಮ್ಮ ಜೊತೆ ಆಟ ಆಡಲು ಬರ್ತಾ ಇದ್ದರು’ ಎಂದು ನೀವು ಹೇಳಿದ್ದಿರಿ.

ನಮ್ಮ ಗೋಕರ್ಣದಲ್ಲಿ ಅಜೀರ್ಣ ಆಗೋಷ್ಟು ದೇವಸ್ಥಾನಗಳಿವೆ. ಮಹಾಬಲೇಶ್ವರ, ಗಣಪ, ವೆಂಕಟರಮಣ ಇವು ಮುಖ್ಯ ಗುಡಿಗಳು. ಅದರ ಹೊರತಾಗಿ ಗುಡ್ಡಗಳ ಮೇಲೆ ಭರತ ಗುಡಿ, ಪಾಂಡವರ ಗುಡಿ, ರಾಮತೀರ್ಥ, ಜಟಾಯು ತೀರ್ಥ ಹೀಗೆ ಎಷ್ಟೋಇರುತ್ತಿದ್ದವು.

ಅಲ್ಲಿ ಯಾರೂ ಯಾತ್ರಾರ್ಥಿಗಳು ಹೋಗುತ್ತಿರಲಿಲ್ಲ. ನಾವು ಮಕ್ಕಳು ಆಟವಾಡುವುದಕ್ಕೆ ಆ ದೇವಸ್ಥಾನಗಳು. ಪಾಳುಬಿದ್ದ ಪ್ರಾಂಗಣಗಳು, ಅಲ್ಲಿ ಪಾರಿವಾಳಗಳು, ಹಾಲಕ್ಕಿಗಳು, ಅಲ್ಲಿ ನಮ್ಮ ಆಟ.

ಹಾಗಾಗಿ ದೇವರೆಂದರೆ ನಮಗೆ ಸಲಿಗೆ ಮತ್ತು ಪ್ರೀತಿ. ದೇವರು ನಮಗೆ ಯಾವತ್ತೂ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿಯ ಹಾಗೆ ಭಯ ಹುಟ್ಟಿಸುತ್ತಿರಲಿಲ್ಲ! ಅವನೂ ನಮ್ಮ ಜೊತೆಯವನೇ, ನಮ್ಮನ್ನು ಅರ್ಥಮಾಡಿಕೊಳ್ಳಬಲ್ಲವನು ಎಂದೇಅನ್ನಿಸುತ್ತಿತ್ತು. ಭಯ ಅಂತ ಆಗಲೇ ಇಲ್ಲ.

ಮಳೆಯಲ್ಲಿ ತೊಯ್ಯುತ್ತಾ, ಅಘನಾಶಿನಿಯ ಅಂಗಳದಲ್ಲಿ ಆಡುತ್ತಾ ಇದ್ದ ಜಯಂತ್ ತಲುಪಿಕೊಂಡಿದ್ದು ಕುಮಟೆಯನ್ನು, ಅಲ್ಲಿಂದ ಧಾರವಾಡ.

ಮನೋಹರ ಗ್ರಂಥಮಾಲಾದ ಅಟ್ಟದ ಮೇಲಿನ ಮಾತುಗಳಿಗೆ ಕಿವಿ ಕೊಟ್ಟು ಅರಳಿದ ಜಯಂತ್ ಗೆ ೧೯ ನೆಯ ವಯಸ್ಸಿಗೇ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿತ್ತು.

ಅಟ್ಟ ನಿಮ್ಮನ್ನು ಪ್ರಭಾವಿಸಿದ್ದು ಹೇಗೆ ಎಂದೆ.

ನೋಡಿ ಈಗ ಹಿಂದಿರುಗಿ ನೋಡಿದಾಗ ಅದೆಲ್ಲಾ ಮೋಹಕವಾಗಿ ಕಾಣುತ್ತದೆ, ಜಿ ಬಿ ಜೋಶಿಯವರ ಅಟ್ಟ, ಕಲಾಕ್ಷೇತ್ರದ ಮೆಟ್ಟಿಲು ಎಲ್ಲಾ.

ಆದರೆ ಆಗ ಅಲ್ಲಿಗೆ ಹೋಗಲು ಸಹ ಒಂದು ಹಿಂಜರಿಕೆಇರುತ್ತಿತ್ತು.

ಉದಾಹರಣೆಗೆ ಲಂಕೇಶ್. ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಸಾಹಿತಿಗಳನ್ನು ನೋಡಬೇಕು, ಭೇಟಿಯಾಗಬೇಕು ಅನ್ನಿಸುತ್ತಿತ್ತು, ಆದರೆ ಒಂದು ಹಿಂಜರಿಕೆ. ಅಲ್ಲಿ ಒಂದು ಒಡ್ದೋಲಗ ಇರಬಹುದು ಎನ್ನುವ ಭಾವನೆ. ಲಂಕೇಶ್ ಎಂದ ಕೂಡಲೆ ನನಗೆ ನೆನಪಾಗುವುದು ಒಂದು ದೊಡ್ಡ ಟೇಬಲ್. ಅದರ ಒಂದು ತುದಿಯಲ್ಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಥರ ಲಂಕೇಶ್, ನಾವೆಲ್ಲಾ ತಪ್ಪು ಮಾಡಿದವರ ಹಾಗೆ ಕೈಕಟ್ಟಿ ನಿಲ್ಲಬೇಕಾಗಬಹುದು ಎನ್ನುವ ಚಿತ್ರವೇ ನನಗೆ ಗಾಬರಿ ಹುಟ್ಟಿಸಿ ನಾನು ಅವರನ್ನು ಭೇಟಿಮಾಡಲು ಹೋಗಲೇ ಇಲ್ಲ.

ಆ ಥರ ಯಾವುದೇ ಭಯ ಇಲ್ಲದೆ ನನ್ನನ್ನು ಹತ್ತಿರ ಸೆಳೆದವರು ಶಾಂತಿನಾಥ ದೇಸಾಯಿ ಮತ್ತು ಯಶವಂತ ಚಿತ್ತಾಲರು. ಅವರಿಬ್ಬರೊಡನೆಯೂ ನನ್ನದು ಒನ್ ಟು ಒನ್ ಎನ್ನುವ ಸಂಬಂಧ.

ಉತ್ತರ ಕನ್ನಡದವರಿಗೆ, ಕರಾವಳಿಯವರಿಗೆ ಮುಂಬಯಿ ಪಕ್ಕದ ಮನೆಯಂತೆ. ಜಯಂತ್ ಮುಂಬೈ ತಲುಪಿಕೊಂಡಿದ್ದೂ ಹಾಗೆಯೇ.

ಬಯೋ ಕೆಮಿಸ್ಟ್ರಿ ಓದಿದ್ದ ನನಗೆ ಬೆಂಗಳೂರಿನಲ್ಲಿ ಆಗ ಇದ್ದ ಅವಕಾಶ ಎಸ್ ಕೆ ಎಫ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮಾತ್ರ. ಅಲ್ಲಿ ಪ್ರಯತ್ನಿಸಿದರೂ ನನಗೆ ಕೆಲಸ ಸಿಗಲಿಲ್ಲ.ಹಾಗಾಗಿ ಬಾಂಬೆ ನನ್ನನ್ನು ಸೆಳೆಯಿತು. ಅಲ್ಲಿಗೆ ಹೋಗಿದ್ದರ ಬಗ್ಗೆ ನನಗೆ ತುಂಬಾ ಸಂತಸ ಇದೆ.

ಅಲ್ಲೇ ನಿಮಗೆ ನಿಮ್ಮ ಹುಡುಗಿ ಸಿಕ್ಕಿದ್ದು ಎಂದು ಮಾತನ್ನು ಒಂದಿಷ್ಟು ಬೇರೆ ದಿಕ್ಕಿಗೆ ಹೊರಳಿಸಿದೆ.

ಜಯಂತ್ ಕಣ್ಣುಗಳಲ್ಲಿ ನಕ್ಷತ್ರಗಳು.

ಹಾ… ಹೌದು! ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು, ಸಿಕ್ಕಿದೆವು.

ಅವಳು ನನಗೆ ಏನು ಎಂದು ಪ್ರತ್ಯೇಕಿಸಿ ಹೇಳಲಾಗದಷ್ಟು ಒಂದಾಗಿರುವ ಪಯಣ ನಮ್ಮದು. ನನಗಾಗಿ ಕೊಂಕಣಿ, ಕನ್ನಡ ಕಲಿತಳು. ಬೇರೆಬೇರೆ ರೀತಿಯಲ್ಲಿ ಪಾಸಿಟಿವ್ ಆಗಿ ನನ್ನ ಜಗತ್ತಿಗೆ ಅವಳು ತನ್ನನ್ನು ಅಳವಡಿಸಿಕೊಳ್ಳುತ್ತಾ ಬಂದಿದ್ದಾಳೆ. ಅದಕ್ಕೆ ನಾನು ಅವಳಿಗೆ ಸದಾಋಣಿ.

ಮುಂಬೈಗೆ ಇನ್ನೂ ಕಾಲಿಟ್ಟಿದ್ದಷ್ಟೇ.. ಚಿತ್ರರಂಗ ಕಾಯ್ಕಿಣಿಯನ್ನು ಕೈ ಬೀಸಿ ಕರೆಯಿತು. ಇನ್ನೂ ೨೩ ವರ್ಷದ ಹುಡುಗ ಗಿರೀಶ್ ಕಾಸರವಳ್ಳಿಯವರ ‘ಮೂರು ದಾರಿಗಳು’ ಸಿನೆಮಾಗೆ ಸಹಾಯಕ ನಿರ್ದೇಶಕರಾಗಿ ಹೋದರು.

ನಮಗೆಲ್ಲಾ ಸಿನಿಮಾ ಎನ್ನುವುದೇ ಒಂದು ಹುಚ್ಚು. ಕಾಸರವಳ್ಳಿ ಆಗ ಚಿತ್ತಾಲರ ’ಮೂರು ದಾರಿಗಳು’ ಚಿತ್ರಮಾಡುತ್ತಿದ್ದರು. ಅದರ ಸಂಭಾಷಣೆಯನ್ನು ಜಿ ಎಸ್ ಸದಾಶಿವ ಅವರು ಬರೆದಿದ್ದರು. ಅದಕ್ಕೆ ಗೋಕರ್ಣದ ಸ್ಥಳೀಯ ಸ್ಪರ್ಶ ಕೊಡಲು ನನ್ನನ್ನು ಕರೆದರು. ಚಿತ್ರರಂಗದ ವ್ಯಾಕರಣಗಳನ್ನು ಕಲಿಯಲು ಅದು ನನಗೆ ಒಂದು ದೊಡ್ಡ ಅವಕಾಶ ಆಯಿತು. ಅದು ನನಗೆ ಒಂದು ಅಪೂರ್ವವಾದ ಅನುಭವ.

ಅದಾದ ಮೇಲೆ ಟಿ ಎಸ್ ನಾಗಾಭರಣ. ಶಿವರಾಮ ಕಾರಂತರ ಕಾದಂಬರಿ ‘ಚಿಗುರಿದ ಕನಸು’ ಚಿತ್ರಕ್ಕೆ ರಾಜ ಕುಮಾರ್ ಕುಟುಂಬ ಕರಾವಳಿ ಜೀವನ ಗೊತ್ತಿರುವವರನ್ನು ಸ್ಕ್ರಿಪ್ಟ್ ಮಾಡಲು ಹುಡುಕುತ್ತಿದ್ದರು. ಹಾಗಾಗಿ ರಾಜಕುಮಾರ್ ಕುಟುಂಬದ ಜೊತೆ ಕೂತು ರಾಜಕುಮಾರ್ ಅವರನ್ನು ನೋಡುವ ಅವಕಾಶ ಮತ್ತು ಸಾಹಿತ್ಯ ಕೃತಿಒಂದು ಚಲನಚಿತ್ರವಾಗಿ ಹೇಗೆ ಪರಿವರ್ತನೆ ಆಗುತ್ತದೆ ಎನ್ನುವುದನ್ನು ನೋಡುವ ಒಂದು ಅವಕಾಶ ಸಿಕ್ಕಿತು. ಅಪೂರ್ವವಾದ ಅನುಭವ.

ಮೂರ್ನಾಲ್ಕುತಿಂಗಳು ರಾಜಕುಮಾರ್ ಅವರ ಜೊತೆಯಲ್ಲಿ ನಡೆದ ’ಕಥಾ ಕಾಲಕ್ಷೇಪ’ ಒಂದು ಅವಿಸ್ಮರಣೀಯವಾದ ಅನುಭವ.

ಕಿರಾಣಿ ಅಂಗಡಿಯಲ್ಲಿ ಕೊಂಡ ವಸ್ತುಗಳ ಪಟ್ಟಿಯಲ್ಲಿ ಜಯಂತ್ ನೋಡಿದ ಸಿನೆಮಾಗಳ ಹೆಸರೂ ಇರುತ್ತಿತ್ತು ಎಂದು ಅವರ ನೆನಪಿನ ಲೋಕಕ್ಕೆ ಕೈ ಹಾಕಿದೆ.

ಕಿರಾಣಿ ಅಂಗಡಿಯಲ್ಲಿ ಮನೆ ಸಾಮಾನಿಗೆ ಲೆಕ್ಕ ಬರೆಸುತ್ತಾರಲ್ಲ ಹಾಗೆ ನಾವು ಸಿನಿಮಾಗೆ ಹೋಗಲೂ ಸಹ ಅಲ್ಲಿ ನಗದುತೆಗೆದುಕೊಂಡು, ಲೆಕ್ಕ ಬರೆಸಿ ಸಿನಿಮಾ ನೋಡುತ್ತಿದ್ದೆವು.

ಆ ಕಿರಾಣಿ ಲೆಕ್ಕದ ಪುಸ್ತಕದಲ್ಲಿ ತೆಂಗಿನೆಣ್ಣೆ, ಬಾರ್ ಸೋಪು, ಸಾಸಿವೆಗಳ ಜೊತೆಯಲ್ಲಿ’ಸಿನಿಮಾ : ೫ ರೂ’ ಎಂದು ಸಹ ಇರುತ್ತಿತ್ತು!

ಹೀಗಾಗಿಸಿನಿಮಾ ಹಾಡು ಬರೆಯುವುದೆಂದರೆ ನನಗೆ ಅದು ನನ್ನ ಕ್ಷೇತ್ರಕ್ಕಿಂತ ಭಿನ್ನವಾದುದು ಎಂದೇನೂ ಅನ್ನಿಸಲಿಲ್ಲ.

ನೇರ ‘ಮುಂಗಾರು ಮಳೆ’ಯ ವಿಷಯಕ್ಕೆ ಬಂದೆ.

ನೀವು ಟ್ಯೂನ್ ಗೆ ಕವಿತೆ ಬರೆದದ್ದೇ ಇಲ್ಲ. ಹಾಗಿರುವಾಗ ಅದೇಗೆ ‘ಮುಂಗಾರು ಮಳೆ’ಯಲ್ಲಿ ಯೋಗರಾಜ ಭಟ್ಟರು ಕೊಟ್ಟ ಟ್ಯೂನ್ ಗೆ ಹೊಂದಿಕೊಂಡಿರಿ ಎಂದೆ.

‘ಯಾರಿಗೂ ಹೇಳೋಣು ಬ್ಯಾಡ ಯಾರಿಗೂ..’ ಎನ್ನುವಂತೆ ನನ್ನ ಕಡೆ ನೋಡಿದವರೇ ‘ನಿಜ ಹೇಳಬೇಕು ಅಂದ್ರೆ ಕಾಲೇಜು ದಿನಗಳಲ್ಲಿ ನಾನು ನನ್ನ ಸ್ನೇಹಿತರಿಗೆಲ್ಲಾ ಪ್ರೇಮಪತ್ರ ಬರೆದುಕೊಡುತ್ತಿದ್ದೆ..

..ಪೋಸ್ಟ್ಆಫೀಸಿನ ಹೊರಗೆ ಪತ್ರ ಬರೆಯುವವರು ಇರುವ ಹಾಗೆ ನಾನು ಹಾಸ್ಟೆಲಿನಲ್ಲಿ ಪ್ರೇಮಪತ್ರಗಳನ್ನುಬರೆದುಕೊಡುತ್ತಿದ್ದೆ. ಹಿಂದಿ ಹಾಡಿನ ಟ್ಯೂನ್ಗಳಿಗೆ ನಾನು ಕನ್ನಡದಲ್ಲಿ ಹಾಡು ಬರೆದುಕೊಡುತ್ತಿದ್ದೆ. ಹಾಗಾಗಿ ಟ್ಯೂನ್ ಗೆ ಹಾಡು ಬರೆಯುವುದರ ಅಭ್ಯಾಸ ನನಗಿತ್ತು’.

‘ಮುಂಗಾರುಮಳೆ’ಯ ‘ಅನಿಸುತಿದೆ ಯಾಕೋ ಇಂದು..’ ಹೀಗೆ ನಿಮ್ಮನ್ನುಜನರ ಮನದೊಳಗೆ ಹೋಗಿ ಕೂರಿಸಬಹುದು ಎಂದು ನಿಮಗನ್ನಿಸಿತ್ತಾ?

ಇಲ್ಲ, ನಮಗ್ಯಾರಿಗೂ ಹಾಗನ್ನಿಸಿರಲಿಲ್ಲ. ಅದಕ್ಕಾಗಿ ಬರೆದ ಆ ಸಾಲುಗಳು ಜನರಿಗೆ ಯಾವುದೋ ತಿಜೋರಿಯ ಬಾಗಿಲು ತೆಗೆಯುವ ಕೀಲಿ ಕೈ ಆಗಬಹುದು ಎಂದು ನನಗನ್ನಿಸಿರಲಿಲ್ಲ.

ಅದಾದ ಮೇಲೆ ನಾನು ಸುಮಾರು ೨೦೦ ಹಾಡುಗಳನ್ನಾದರೂ ಬರೆದಿದ್ದೇನೆ, ಅದಕ್ಕಿಂತ ಚೆನ್ನಾಗಿರುವ ಹಾಡುಗಳನ್ನೂ ಬರೆದಿದ್ದೆನೆ. ಆದರೆ ಇಂದೂ ಸಹ ಜನ ನನ್ನನ್ನು ಆ ಹಾಡಿನಿಂದಲೇ ಗುರುತಿಸುತ್ತಾರೆ.

ಇನ್ನೂಒಂದು ಘಟನೆ ಇದೆ, ಒಂದು ಕುಟುಂಬದಲ್ಲಿ ಮಗುವನ್ನು ಕೊಂದು ತಂದೆ ತಾಯಿ ಇಬ್ಬರೂ ಆತ್ಮಹತ್ಯೆಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಮಗು ಉಳಿದುಕೊಂಡಿದೆ. ಆದರೆ ಪ್ರಜ್ಞೆ ಇಲ್ಲ. ಅಪ್ಪ ಅಮ್ಮ ಇಬ್ಬರೂಉಳಿದಿಲ್ಲ..

..ಆಗ ಪಕ್ಕದ ಮನೆ ಅಜ್ಜಿ ಹೇಳಿದರಂತೆ, ಮಗು ಈ ಹಾಡು ತುಂಬಾ ಕೇಳುತ್ತಿತ್ತು ಎಂದು. ಮಗುವಿನ ಕಿವಿಯಲ್ಲಿ ಈ ಹಾಡನ್ನು ಕೇಳಿಸಿದಾಗ ಮಗುವಿಗೆ ಪ್ರಜ್ಞೆ ಬಂದು ಬದುಕಿಗೆ ಮರಳಿತಂತೆ. ಅದೆಲ್ಲಾ ಕೇಳಿದಾಗ ನಾವು ಕೇವಲ ಸಿನಿಮಾ ಹಾಡು ಎನ್ನುವ ಹಾಡೊಂದು ಬೇರೆ ಬೇರೆ ರೀತಿಯಲ್ಲಿ ಜನರನ್ನು ತಾಕುತ್ತಿರುತ್ತದೆ.

ಗೋಕರ್ಣದಂತೆಯೇ ಮುಂಬೈ ಅನ್ನೂ ಅಲ್ಲಿನ ಬ್ಯಾಂಡ್ ಸ್ಟಾಂಡ್, ಲೋಕಲ್ ಟ್ರೇನ್, ಡಬ್ಬಾವಾಲಾ, ಬಾಚಣಿಗೆ ಹೀಗೆ ಎಲ್ಲವನ್ನೂ ಕನ್ನಡ ಓದುಗ ಲೋಕಕ್ಕೆ ಕಟ್ಟಿಕೊಟ್ಟವರು ಜಯಂತ್.

ಮುಂಬೈ ನ ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಎಂದು ಕೇಳಿದೆ.

ಜಯಂತ್ ನಿಜಕ್ಕೂ ಕಳೆದು ಹೋದರು.

ನನಗೆ ಮುಂಬೈ ಒಂದು ಊರಲ್ಲ, ಅದು ಒಂದು ಮನೋಧರ್ಮ. ಕಾಯಕ ಸಂಸ್ಕೃತಿಯಿಂದ ಹುಟ್ಟಿದ ಮನೋಧರ್ಮ. ಯಾರು ಯಾರ ಬದುಕಿನಲ್ಲೂ ಮಧ್ಯೆ ಪ್ರವೇಶಿಸುವುದಿಲ್ಲ. ಈಗಲೂ ಸಹ ಮುಂಬೈನಲ್ಲಿ ಆಟೋದವನು ನಿಮಗೆ ಒಂದು ರೂ ಚಿಲ್ಲರೆ ವಾಪಸ್ ಕೊಡುತ್ತಾನೆ. ಅದು ಆ ಸಿಟಿಯ ಮೌಲ್ಯವನ್ನು ಹೇಳುತ್ತದೆ..

..ಅಲ್ಲಿ ಗಲೀಜಿದೆ, ಅಲ್ಲಿ ಧೂಳಿದೆ, ಅಲ್ಲಿ ಬೆವರಿದೆ, ಅಲ್ಲಿ ಧಾರಾವಿಯಂತಹ ಪ್ರಪಂಚದ ಅತಿದೊಡ್ಡ ಸ್ಲಂ ಇದೆ. ಆದರೆ ಇವೆಲ್ಲವನ್ನೂ ಮೀರುವಂತಹ, ಬಂಧುತ್ವವನ್ನು ಮಾತನಾಡದೆಯೂ ಅನುಭವಕ್ಕೆ ತರುವಂತಹ ಒಂದು ಸಲಿಗೆ ಇದೆ..

..ಅದಕ್ಕೇ ಮುಂಬೈ ಹಿಂದಿಯಲ್ಲಿ ಬಹುವಚನ ಇಲ್ಲ. ನನಗೆ ಅಂತಹ ಒಂದು ದೃಷ್ಟಿದಾನವನ್ನು ಮಾಡಿದ ಊರು ಮುಂಬೈ. ಹಾಗಾಗಿ ನಾನು ನಿರಂತರ ಮುಂಬೈ ಪ್ರತಿಪಾದಕ.

ಜಯಂತ್ ಅವರನ್ನು ಮುಂಬೈಗಿಂತಲೂ ಗಾಢವಾಗಿಸಿಬಿಡಬಹುದಾದ ಇನ್ನೊಂದು ವಿಷಯವಿತ್ತು.

ನಿಮ್ಮ ಬದುಕಿನೊಳಗೆ ಒಂದು ಸಮುದ್ರವಿದೆ ಎಂದೆ.

ಜಯಂತ್ ಇನ್ನಷ್ಟು ನೆನಪಿನ ಲೋಕಕ್ಕೆ ಜಾರಿದರು.

ನನಗೆ ಸಮುದ್ರ ಎಂದರೆ ಜೋಗುಳ, ಅಸೀಮ ಅದು. ಅದರ ಸ್ವರೂಪಗಳು ಬೇರೆಯಾಗುತ್ತಿರುತ್ತವೆ..

..ಸಮುದ್ರಕ್ಕೆ ದುಖಃದ ಕಥೆಗಳೂ ಇವೆ. ಸಾರಾ ಅಬೂಬಕ್ಕರ್ ಒಂದು ಮಾತು ಹೇಳ್ತಾಇದ್ದರು. ಅವರ ಕಡೆ ಹಲವಾರು ಹೆಣ್ಣು ಮಕ್ಕಳು ಸಮುದ್ರದ ಮೊರೆತ ಕೇಳಿರುತ್ತಾರೆ, ಆದರೆ ಸಮುದ್ರವನ್ನು ನೋಡದೆ ೧೫-೨೦ ವರ್ಷಗಳನ್ನುಕಳೆದಿರುತ್ತಾರೆ.

ಸಮುದ್ರ ಇವೆಲ್ಲಕ್ಕೂಸಾಕ್ಷಿ. ಮಳೆಗಾಲದಲ್ಲಿ ಸಮುದ್ರದ ಘೋಷ ನನಗೆಇಷ್ಟ. ಸಮುದ್ರದ ಅಗಾಧತೆ ನನಗೆ ವಿಧೇಯತೆ ಕಲಿಸುತ್ತದೆ. ಸಮುದ್ರದ ದಂಡೆಯಲ್ಲಿರುವ ಊರುಗಳಿಗೆ ಸದಾ ಜಗತ್ತಿಗೆ ಒಂದು ಕಿಟಕಿ ತೆಗೆದಿಟ್ಟಂತೆ. ಅದು ಮನಸ್ಸಲ್ಲೂ ಒಂದು ಕಿಟಕಿ ತೆರೆಯುತ್ತದೆ ಎಂದು ನನ್ನ ಅಭಿಪ್ರಾಯ.

ಸಮುದ್ರದ ತಡಿಯಲ್ಲೇ ಸಾಕಷ್ಟು ವರ್ಷ ಕಳೆದ ನನಗೂ ಅದರ ಗುಂಗು ಹತ್ತಿತ್ತು. ಮಾತಿಲ್ಲದೆ ಒಂದು ಚಂದ ಹಗ್ ಕೊಟ್ಟೆ

ಪಾವಗಡ: 4 ಮಂದಿಗೆ ಕೋವಿಡ್ 19 ಸೋಂಕು

ಪಾವಗಡ  ತಾಲ್ಲೂಕಿನ ತಿಮ್ಮಮ್ಮನಹಳ್ಳಿ ಗ್ರಾಮದ ಬಸ್ ಚಾಲಕ ಸೇರಿದಂತೆ ತಾಲ್ಲೂಕಿನಲ್ಲಿ  ಶನಿವಾರ  ಒಟ್ಟು 4 ಮಂದಿಗೆ  ಕೋವಿಡ್ 19 ಸೋಂಕು ದೃಢಪಟ್ಟಿದೆ.

ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ    ತಿಮ್ಮಮ್ಮನಹಳ್ಳಿ ಗ್ರಾಮದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.  ಇವರೊಟ್ಟಿಗೆ ಕಂಡಕ್ಟರ್  ಆಗಿದ್ದವರಿಗೂ ಸೋಂಕು ದೃಢಪಟ್ಟಿತ್ತು. ಗಂಟಲು ದ್ರವ ಪರೀಕ್ಷೆಗೆ ನೀಡಿ ಚಾಲಕ ತಿಮ್ಮಮ್ಮನಹಳ್ಳಿಗೆ ಹಿಂದಿರುಗುತ್ತಿದ್ದಾಗ ಕೊರೋನಾ ಸೊಂಕು ದೃಢಪಟ್ಟಿರುವ ವಿಚಾರ ತಿಳಿದಿದೆ. ಆದರೂ ಮರಳದೆ ಪಾವಗಡದತ್ತ ಚಾಲಕ ಬಂದಿದ್ದಾರೆ.  ಮಾಹಿತಿ ತಿಳಿದ  ಇಲ್ಲಿನ ಸಿಬ್ಬಂದಿ ಚಾಲಕನನ್ನು ತಡೆದು ಪ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಟ್ಟಣದ ವಿನಾಯಕನಗರದ  32 ವರ್ಷ ವಯಸ್ಸಿನ  ವ್ಯಕ್ತಿ,  ರೈನ್ ಗೇಜ್ ಬಡಾವಣೆ 23 ವರ್ಷದ ಯುವಕನಿಗೂ ಸೋಂಕು ದೃಡಪಟ್ಟಿದೆ. ಇವರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.  23 ವರ್ಷ ವಯಸ್ಸಿನ ವ್ಯಕ್ತಿ ಪಟ್ಟಣದ ಆಶ್ರಮವೊಂದರಲ್ಲಿ  ಸ್ವಯಂ ಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂಬುದು ಅಲ್ಲಿನ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.

ಲಿಂಗದಹಳ್ಳಿಯಲ್ಲಿ ನಕಲಿ ವೈದ್ಯ (ಆರ್.ಎಂ.ಪಿ) ವೃತ್ತಿ ನಡೆಸುತ್ತಿದ್ದ ನ್ಯಾಯದಗುಂಟೆ  ಗ್ರಾಮದ  49 ವರ್ಷದ ವ್ಯಕ್ತಿಗೆ ಸೊಂಕು ದೃಢಪಟ್ಟಿದೆ. ಈತನ ಬಳಿ ಸಾಕಷ್ಟು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದವರ ಬಗ್ಗೆ ತಾಲ್ಲೂಕು ಆಡಳಿತ ಮಾಹಿತಿ ಕಲೆ ಹಾಕುತ್ತಿದೆ.

 

ತುಮಕೂರು: 221ಕ್ಕೇರಿತು ಕೊರೊನಾ ಸೋಂಕಿತರ ಸಂಖ್ಯೆ

ತುಮಕೂರು: ನಿನ್ನೆ, ಮೊನ್ನೆಗೆ ಹೋಲಿಸಿದರೆ ಶನಿವಾರ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, 13 ಮಂದಿಗೆ ಸೋಂಕು ದೃಢಪಟ್ಟಿದೆ.

ಕುಣಿಗಲ್, ಮಧುಗಿರಿ ತಾಲ್ಲೂಕಿನಲ್ಲಿ ತಲಾ ಇಬ್ಬರು, ಪಾವಗಡದಲ್ಲಿ ಮೂವರು ಹಾಗೂ ತುಮಕೂರಿನಲ್ಲಿ 6 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಇದರಲ್ಲಿ ಸೋಂಕಿತರ ಸಂಖ್ಯೆ 221ಕ್ಕೇರಿದೆ.