Saturday, May 9, 2026
Google search engine
Home Blog Page 196

ನ್ಯೂಸ್ ರೂಮ್ ನಿಂದ ‘ಮಿಸ್ಸಿಂಗ್’

ಜಿ.ಎನ್.ಮೋಹನ್


ಮಿಸ್ಸಿಂಗ್-

ಅಂತಾರಾಷ್ಟ್ರೀಯ ಡಾಕ್ಯುಮೆಂಟರಿ ಫಿಲಂ ಫೆಸ್ಟಿವಲ್ ಗಾಗಿ ಕೇರಳಕ್ಕೆ ಕಾಲಿಟ್ಟ ನಾನು ತಿರುವನಂತಪುರದ ಬೀದಿಗಳಲ್ಲಿ ಅಡ್ಡಾಡುತ್ತಿದ್ದೆ.

ಒಂದು ಬುಕ್ ಸ್ಟಾಲ್ ಮುಂದೆ ಹಾದು ಹೋಗುವಾಗ ಅಲ್ಲಿ ತೂಗು ಹಾಕಿದ್ದ ಮ್ಯಾಗಜೈನ್ ದಿಢೀರನೆ ನನ್ನ ಗಮನ ಸೆಳೆಯಿತು.

ಮುಖಪುಟದಲ್ಲಿ ಮೂವರು ಹುಡುಗಿಯರ ಫೋಟೋ. ಅದರ ಕೆಳಗೆ ದಪ್ಪ ಅಕ್ಷರಗಳಲ್ಲಿ ಏನೋ ಮುದ್ರಿತವಾಗಿತ್ತು.

ಮ್ಯಾಗಜೈನ್ ನತ್ತ ಬೊಟ್ಟು ಮಾಡಿ ‘ಏನದು?’ ಅಂದೆ. ಅಂಗಡಿಯಾತ ಹೇಳಿದ ‘ಕಾಣೆಯಾಗಿದ್ದಾರೆ’ ಅಂತ. ಏನನ್ನಿಸಿತೋ ಭಾಷೆ ಬಾರದಿದ್ದರೂ ಆ ಪತ್ರಿಕೆಯನ್ನು ಕೊಂಡೆ.

ಊರಿಗೆ ವಾಪಸಾದ ನಂತರ ಮಲಯಾಳಂ ಬರುವವರನ್ನು ಎಡತಾಕಿದೆ. ಆಗಲೇ ಇನ್ನಷ್ಟು ಗಾಬರಿಯಾದದ್ದು.

ಮಲಯಾಳಂನ ‘ಪತ್ರಿಕಾರಂಗದಿಂದ ಮೂವರು ಕಾಣೆಯಾಗಿದ್ದಾರೆ’ ಎನ್ನವುದು ಲೇಖನದ ಸಾರಾಂಶ.

ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ, ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದ, ಪ್ರಮುಖ ಮೀಡಿಯಾ ಕಛೇರಿಗಳಿದ್ದ ಈ ಮೂವರು ಪತ್ರಿಕೋದ್ಯಮಕ್ಕೆ ವಿದಾಯ ಹೇಳಿದ್ದರು. ಬೇರೆ ಎಲ್ಲೋ ಯಾವುದೋ ಕೆಲಸದಲ್ಲಿದ್ದರು.

‘ಮಾಧ್ಯಮಮ್’ ಪತ್ರಿಕೆ ಈ ಸಂಗತಿಯನ್ನು ಕೈಗೆತ್ತಿಕೊಂಡಿತು.

ಯಾಕೆ ಅಷ್ಟು ಚುರುಕಾಗಿದ್ದ, ಒಳ್ಳೆಯ ಹೆಸರು ಮಾಡಿದ್ದ ಹುಡುಗಿಯರು ಪತ್ರಿಕೋದ್ಯಮ ಬಿಟ್ಟು ಹೋದರು? ಪತ್ರಿಕೋದ್ಯಮದ ಸ್ಥಿತಿ ಕಾರಣವೇ? ಪತ್ರಿಕಾಲಯಗಳು ಮಹಿಳಾಪರವಾದ ಆಮ್ಬಿಯೆನ್ಸ್ ಹೊಂದಿಲ್ಲವೇ? ಹೀಗೆ ಹತ್ತು ಹಲವು ಅಂಶಗಳತ್ತ ಮುಖ ಮಾಡಿ ನಿಂತಿತು.

ಹೌದಲ್ಲಾ? ಈ ವಿಚಾರ ನಮ್ಮ ಗಮನಕ್ಕೆ ಯಾಕೆ ಬರಲಿಲ್ಲ ಅಂತ ನಾನೂ ದಂಗಾದೆ.

ಮಲಯಾಳಂ ಪತ್ರಿಕೋದ್ಯಮದಲ್ಲಿ ಆಗುತ್ತಿರುವುದು ಆ ಭಾಷೆಗೆ ಮಾತ್ರ ಸಂಬಂಧಪಟ್ಟ ವಿಶೇಷ ಬೆಳವಣಿಗೆಯೇನಲ್ಲ.

ಕನ್ನಡ ಪತ್ರಿಕೋದ್ಯಮ, ಯಾವುದೇ ಭಾಷೆಯ ಪತ್ರಿಕೋದ್ಯಮ, ಇಂಗ್ಲಿಷ್ ಜರ್ನಲಿಸಂ ಹೀಗೆ ಭಾಷೆ, ದೇಶ ಮೀರಿ ಎಲ್ಲೆಡೆ ಇದು ನಿಜ.

ಪತ್ರಿಕೋದ್ಯಮದಿಂದ ಮಹಿಳೆಯರು ಕಾಣೆಯಾಗುತ್ತಿದ್ದಾರೆ. ಆದರೆ ಅದು ಭ್ರೂಣಹತ್ಯೆಯಂತೆ ಸದ್ದಿಲ್ಲದೇ ಆಗಿಹೋಗುತ್ತಿದೆ.

ನಾನು ನ್ಯೂಸ್ ರೂಂಗೆ ಕಾಲಿಟ್ಟಾಗ ಡೈರೆಕ್ಟ್ ಶಿಷ್ಯತ್ವ ಪಡೆಯಬೇಕಾಗಿ ಬಂದದ್ದು ಎನ್. ಗಾಯತ್ರಿ ದೇವಿ ಅವರಿಂದ.

ಅವರ ನೇತೃತ್ವದ ಶಿಫ್ಟ್ ನಲ್ಲಿ ಹಲವು ವರ್ಷ ಕೆಲಸ ಮಾಡಿದ ನನಗೆ ಪತ್ರಿಕೋದ್ಯಮದ ಪಾಠದ ಜೊತೆಗೆ ಮಹಿಳಾವಾದ ಕೂಡಾ ‘ಬಿಲ್ ಕುಲ್ ಮುಫ್ತ್’ ಆಗಿ ಸಿಕ್ಕಿತ್ತು.

ಗಾಯತ್ರಿ ದೇವಿ ರಾಜ್ಯದ ಮಹಿಳಾ ಚಳವಳಿಗೆ ಅಡಿಪಾಯ ಹಾಕಿಕೊಟ್ಟ ಮುಖ್ಯರಲ್ಲೊಬ್ಬರು. ನ್ಯೂಸ್ ರೂಂನಲ್ಲಿ ಮಹಿಳೆಯರಿಗೆ ನೈಟ್ ಶಿಫ್ಟ್ ಇರಬೇಕಾ ಬೇಡವಾ? ಎಳೆ ಮಕ್ಕಳಿಗೆ ಆಫೀಸಿನಲ್ಲಿ ಕ್ರಷ್ ಇರಬೇಕು ಅನ್ನುವ ಹುಮ್ಮಸ್ಸಿನ ಮಾತುಗಳು, ಅದಕ್ಕೆ ತದ್ವಿರುದ್ಧವಾಗಿ ಹಲವರ ಗೊಣಗಾಟಗಳು ಇದ್ದ ದಿನಗಳು ಅವು.

ಹೀಗಿರುವಾಗಲೇ ಕೈಗೆ ಸಿಕ್ಕಿದ್ದು ವಿಮಲ್ ಬಾಲಸುಬ್ರಹ್ಮಣ್ಯಂ ಅವರ ಪುಸ್ತಕ ‘ಮಿರರ್ ಇಮೇಜ್’. ಇದರ ಬೆನ್ನಲ್ಲೇ ಅಮ್ಮು, ಕಲ್ಪನಾ ಶರ್ಮ ಬರೆದ ‘ಹೂಸ್ ನ್ಯೂಸ್?’, ‘ಮೇಕಿಂಗ್ ನ್ಯೂಸ್’ ಹೀಗೆ ಸಾಲು ಸಾಲು ಪುಸ್ತಕಗಳು.

ಯಾವುದೇ ಇಂಗ್ಲಿಷ್ ಪತ್ರಿಕೆಗೆ speaking to newsmen ಅನ್ನುವ ಬಳಕೆ ಅತಿ ಸಾಮಾನ್ಯ ಎನ್ನುವಂತಾಗಿಹೋಗಿತ್ತು. ಆಗ ದನಿ ಎತ್ತಿದ್ದು ಇದೇ ಲೇಖಕಿಯರು.

ಪುರುಷ ಪತ್ರಕರ್ತರೇ ಗಿಜಿಗುಡುತ್ತಿದ್ದ ಕಾಲ ಬಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳಾ ಪತ್ರಕರ್ತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಿರುವಾಗ speaking to newsmen ಎಂದರೆ ಏನರ್ಥ? ಬದಲಿಗೆ speaking to newspersons ಅಂತ ಬಳಸಿ ಅನ್ನುವ ಚರ್ಚೆಗಳು ಎದ್ದು ನಿಂತವು.

ಇದನ್ನು ಓದುತ್ತಾ, ಓದುತ್ತಲೇ ನಾನು ಪತ್ರಿಕೋದ್ಯಮ ಎನ್ನುವ ಪುಸ್ತಕದ ಬದನೆಕಾಯಿಯಿಂದ ಆಚೆ ಬಂದು ನಿಜ ಪತ್ರಿಕೋದ್ಯಮದ ‘ಅ ಆ ಇ ಈ’ ಕಲಿಯಲು ಆರಂಭಿಸಿದ್ದೆ.

‘ಹುಡುಗಿಯರನ್ನ ತಗೊಳ್ಳುವಾಗ ನೋಡಿ ತಗೊಳ್ಳಿ, ಅವರು ಖಂಡಿತಾ ಬೇಕು. ಅವರು ಚೆನ್ನಾಗಿ ಕೆಲಸಾ ಕೂಡಾ ಮಾಡ್ತಾರೆ. ಆದರೆ ಅವರನ್ನ ಮೀರಿದ ಮಿತಿಗಳು ಕೆಲಸಕ್ಕೆ ಅಡ್ಡಿಯಾಗುತ್ತೆ’ ಅನ್ನೋ ಕಿವಿಮಾತನ್ನ ರಾಮೋಜಿರಾಯರು ಹೇಳಿದ್ದರು.

ಮಹಿಳಾ ಪತ್ರಕರ್ತರ ಕುರಿತು ಕೆಲವು ವರ್ಷಗಳ ಹಿಂದೆ ಮೀಡಿಯಾ ರಿಪೋರ್ಟ್ ಬಿಡುಗಡೆ ಮಾಡಿದ ಗೆಳತಿ, ‘ಹಿಂದೂ’ ಪತ್ರಿಕೆಯ ಪಾರ್ವತಿ ಮೆನನ್ ಇದೇ ಪ್ರಶ್ನೆ ಎತ್ತಿದರು.

‘ನ್ಯೂಸ್ ರೂಂನಿಂದ ಮಹಿಳೆಯರು ಕಣ್ಮರೆಯಾಗ್ತಿದ್ದಾರೆ ಅಂದ್ರೆ ಅದಕ್ಕೆ ನ್ಯೂಸ್ ರೂಂ ಆಚೆಗಿನ ಒತ್ತಡಗಳು ಕಾರಣ. ಹಾಗಾಗಿ ನ್ಯೂಸ್ ಮಹಿಳೆ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ ಸಮಾಜ ಸಹಾ ಸುಧಾರಿಸಬೇಕು’ ಅಂತ.

‘ಈಟಿವಿ’ಗೆ ಕಾಲಿಟ್ಟು ಇನ್ನೂ ತಿಂಗಳುಗಳು ಕಳೆದಿರಲಿಲ್ಲ.

ಮಾರ್ಚ್ 8 -ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ವಿಶ್ವಸಂಸ್ಥೆಯ ಭಾಗವಾದ ‘ಯುನಿಫೆಮ್’ ಒಂದು ಕರೆ ಕೊಟ್ಟಿತು.

‘ಈ ಒಂದು ದಿನ ಮಹಿಳೆಯರಿಗೆ ಜಾಗ ಬಿಟ್ಟುಕೊಡಿ’ ಅಂತ. ಅದರ ಅರ್ಥ ಇಷ್ಟೇ.. ನೀವು ಪೇಪರ್ನವರಾದರೆ ಇವತ್ತಿನ ಎಡಿಷನ್ ಅನ್ನು ಮಹಿಳೆಯರಿಗೆ ಬಿಟ್ಟುಕೊಡಿ, ಚಾನಲ್ ನವರಾದರೆ ಮಹಿಳೆಯರು ಇವತ್ತಿನ ಬುಲೆಟಿನ್ ರೂಪಿಸಲಿ ಅಂತ.

ಅರೇ! ಯಾಕಾಗಬಾರದು ಅನಿಸಿತು.

ಮಧ್ಯಾಹ್ನದ ಡೆಸ್ಕ್ ಮೀಟಿಂಗ್ ನಲ್ಲಿ ‘ಒಂದು ಹೊಸ ಯೋಚನೆ ಇದೆ. ಇವತ್ತಿನ ಪ್ರೈಮ್ ಬುಲೆಟಿನ್ ನ ಚುಕ್ಕಾಣಿ ಮಹಿಳೆಯರು ಹಿಡೀಬೇಕು ಅಂತ, ಯಾರಾದರೂ ಸಿದ್ಧರಿದ್ದೀರ’ ಅಂದೆ.

ಒಂದು ಕ್ಷಣ ನನ್ನನ್ನೇ ನಂಬಲಾಗಲಿಲ್ಲ. ಎಚ್.ಎಸ್. ಅಪರ್ಣ, ವಿಮಲಾಕ್ಷಿ, ಶ್ರೀದೇವಿ ಹೀಗೇ ಎಲ್ಲರ ಕೈಗಳು ಮೇಲೇರಿದವು.

ಸರಿ ಇನ್ಯಾಕೆ ತಡ ಅಂತ ‘ಗೋ ಅಹೆಡ್’ ಅಂದೆ. ಒಂದು ಕ್ಷಣದ ಹಿಂದೆ ಬಚ್ಚಾಗಳಂತೆ ಕಾಣುತ್ತಿದ್ದ ಹುಡುಗಿಯರು ಡ್ರೈವರ್ ಸೀಟಿನಲ್ಲಿ ಕುಳಿತೇಬಿಟ್ಟರು. ಹುಡುಗರನ್ನೂ ಬೆನ್ನಿಗಿಟ್ಟುಕೊಂಡು.

ತುಂಬಾ ದೂರ ಕ್ರಮಿಸಬೇಕಾದ ರಾಜಧಾನಿ ಎಕ್ಸ್ ಪ್ರೆಸ್ ಎಷ್ಟು ವೇಗದಿಂದ ಸಿಳ್ಳು ಹಾಕುತ್ತಾ, ಎದುರಿನ ಅಡೆತಡೆಗಳನ್ನೆಲ್ಲಾ ದಾಟುತ್ತಾ ದೆಹಲಿಗೆ ನುಗ್ಗೇ ಬಿಡುತ್ತದಲ್ಲಾ ಹಾಗೆ ನುಗ್ಗೇ ಬಿಟ್ಟರು.

ಬುಲೆಟಿನ್ ಏರ್ ಆಗುವಾಗ ಇಡೀ ನ್ಯೂಸ್ ರೂಂನಲ್ಲಿ ಸಾಸಿವೆ ಬಿದ್ದರೂ ಸದ್ದಾಗುವ ವಾತಾವರಣ. ಕೊನೆ ಬಾಲ್ ನಲ್ಲಿ ಸಿಕ್ಸರ್ ಎತ್ತಬೇಕಾದ ಅನಿವಾರ್ಯತೆ ಇರುವಾಗ ಉಸಿರುಗಟ್ಟಿಬಿಡುತ್ತೇವಲ್ಲಾ ಹಾಗೆ ಎಲ್ಲರೂ ಉಸಿರು ಕಟ್ಟಿ ಕೂತಿದ್ದರು.

ಬುಲೆಟಿನ್ ಮುಗಿಯುತ್ತಿದ್ದಂತೆ ಜೋರು ಚಪ್ಪಾಳೆ.

ಹಲವರು ಈ ಬಚ್ಚಾ ಹುಡುಗಿಯರ ಕೈ ಕುಲುಕಿ ಶುಭಾಶಯ ಹೇಳುತ್ತಿದ್ದರು.

ನಾನು ‘ಇದು ಪ್ರಯೋಗ, ಮುಂದಿನ ದಿನಗಳಲ್ಲಿ ಇದು ವಾಸ್ತವವಾಗಲಿ’ ಎಂದು ಮಾತ್ರ ಹೇಳಿ ಮುಗಿಸಿದೆ.

ಆ ಸಂಭ್ರಮ ನನ್ನ ಕಣ್ಣು ತುಂಬಿ ಎದೆಯಾಳದಲ್ಲಿ ಒಂದು ಪರ್ಮನೆಂಟ್ ಜಾಗ ಹುಡುಕಿಕೊಳ್ಳುತ್ತಿತ್ತು.

ಈ ಬುಲೆಟಿನ್ ಬಿಸಿ ನನಗೆ ಗೊತ್ತಾದದ್ದು ಮರುದಿನ.

ಎರಡು ರಾಜಿನಾಮೆ ಬಂದು ಬಿತ್ತು. ಇನ್ನಷ್ಟು ಬುಲೆಟಿನ್ ಪ್ರೊಡ್ಯೂಸರ್ ಗಳು ಗರಂ ಆಗಿದ್ದರು. ಮೀಟಿಂಗ್ ನಲ್ಲಿ ಒಂದೇ ಪ್ರಶ್ನೆ-ಬುಲೆಟಿನ್ ಅನ್ನೋದು ಏನು ಹುಡುಗಾಟಾನಾ? ಅದಕ್ಕೊಂದು ಟ್ರೈನಿಂಗ್ ಬೇಡವಾ? ನಿನ್ನೆ ಮೊನ್ನೆ ಬಂದವರೂ ಬುಲೆಟಿನ್ ಮಾಡಬಹುದು ಅನ್ನೋದಾದರೆ ನಾವ್ಯಾಕಿರಬೇಕು?

ಆಗ ನನಗೆ ಅರ್ಥವಾಯಿತು ಯಾಕೆ ‘ಯೂನಿಫೆಮ್’ ಈ ಕರೆ ಕೊಟ್ಟಿತು ಅಂತ.

ಬದಲಾವಣೆ ಅನ್ನೋದು ಹೂವಿನ ದಾರಿ ಅಲ್ಲ. ಬುಲೆಟಿನ್ ಅನ್ನುವುದನ್ನು ಬ್ರಹ್ಮವಿದ್ಯೆ ಮಾಡಿ ಕೂಡಿಸಿದ್ದವರು ಮಂತ್ರಕ್ಕೆ ಮಾತ್ರ ಮಾವಿನಕಾಯಿ ಉದುರುತ್ತೆ ಅಂತ ನಂಬಿದ್ದರು.

ಈ ಹುಡುಗಿಯರು, ಇನ್ನೂ ಆಗತಾನೆ ಕಣ್ಣು ಬಿಡುತ್ತಿದ್ದ ಹುಡುಗಿಯರು ತಮಗೆ ಸಿಕ್ಕ ಕವಣೆ ಕಲ್ಲು, ಕೋಲು ಹಿಡಿದು ಮಾವಿನಕಾಯಿ ಉದುರಿಸಿ ಹಾಕಿದ್ದರು.

ಇವರು ಬರೀ ಮಾವಿನಕಾಯಿ ಉದುರಿಸಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ? ಆದರೆ ಎಷ್ಟೋ ಜನರ ಪ್ರಭಾವಳಿಯನ್ನೂ ಹುಡಿ ಮಾಡಿಹಾಕಿದ್ದರು.

‘ಅರರೆ! ಎನ್ನಯ ಸಮನಾರು? ಈ ಧರೆಯೊಳ್ ಯಾರಿಹರು?’ ಅಂತ ಪ್ರಶ್ನಿಸುತ್ತಿದ್ದವರ ಮುಂದೆ ನಾವೂ ಆಟಕ್ಕಿದ್ದೇವೆ ಅಂತ ಘೋಷಿಸಿಬಿಟ್ಟಿದ್ದರು.

ಆಟದಿಂದ ಆದ ಪ್ರಯೋಜನ ಮಾತ್ರ ದೊಡ್ಡದು. ಮುಂದಿನ ದಿನಗಳಲ್ಲಿ ಈ ಹುಡುಗಿಯರೇ ಪರ್ಮನೆಂಟಾಗಿ ಡ್ರೈವರ್ ಸೀಟಿಗೆ ಬಂದು ಕೂತರು. ಹಾಗೆ ಕೂರಲು ಈ ಆಟ ಅವರಿಗೆ ಸಾಕಷ್ಟು ಕಾನ್ಫಿಡೆನ್ಸ್ ತುಂಬಿತ್ತು.

ಬುಲೆಟಿನ್ ನಲ್ಲಿ ಕಳೆದೇ ಹೋಗಿದ್ದ ಮಹಿಳಾ ಸುದ್ದಿಗಳು ಮತ್ತೆ ಕಾಣತೊಡಗಿದವು. ನ್ಯೂಸ್ ರೂಂನಲ್ಲಿ ಹುಡುಗಿಯರ ಬಗೆಗಿದ್ದ ಕೊಂಕು ಒಂದಿಷ್ಟಾದರೂ ಕಡಿಮೆಯಾಯಿತು.

ರಾಜ್ ಕುಮಾರ್ ಇಲ್ಲವಾದರು. ‘ಈಟಿವಿ’ ಬೆಂಗಳೂರು ಚೀಫ್ ಮ್ಯಾನೇಜರ್ ಸುಬ್ಬಾನಾಯ್ಡು ಫೋನ್ ಮಾಡಿದ್ರು, ‘ಜಾಸ್ತಿ ಲೇಡಿ ರಿಪೋರ್ಟರ್ಸ್ ತಗೊಳ್ಳಬೇಡಿ ಅಂತ ಹೇಳಿದ್ದೆ. ಈಗ ಏನು ಮಾಡ್ತೀರಾ?’ ಅಂದ್ರು.

ರಾಜ್ ಕುಮಾರ್ ನಿಧನದ ನಂತರ ಉಂಟಾದ ದೊಡ್ಡ ಹಾಹಾಕಾರದಲ್ಲಿ ಈ ಹುಡುಗಿಯರೇನು ಮಾಡಲು ಸಾಧ್ಯ ಎನ್ನುವ ಹತಾಶೆ ಅವರ ಮಾತಲ್ಲಿತ್ತು.

‘ಏನು ಮಾಡೋಣ ಹೇಳಿ ಸರ್’ ಅಂತ ಮರುಪ್ರಶ್ನೆ ಮುಂದಿಟ್ಟೆ.

ಅವರು ಅಕ್ಕ ಪಕ್ಕದ ಡಿಸ್ಟ್ರೀಕ್ಟ್ ನವರನೆಲ್ಲಾ ಕರೆಸಿಬಿಡಿ. ಇಲ್ಲಾ ಅಂದ್ರೆ ಕಷ್ಟ ಅಂದರು.

ಯಾಕೆ ಕಷ್ಟ? ಅನ್ನೋ ಪ್ರಶ್ನೆ ಆಗಲೇ ನನ್ನ ಮುಂದಿತ್ತು. ಶಾರದಾ ನಾಯಕ್, ಜ್ಯೋತಿ ಇರ್ವತ್ತೂರ್, ಭುವನೇಶ್ವರಿ ಹೀಗೇ ದೊಡ್ಡ ದಂಡೇ ಇತ್ತು.

ಮರುಕ್ಷಣ ಅವರು ಇದ್ದದ್ದು ಬೆಂಕಿ ಹಚ್ಚುತ್ತಿದ್ದವರ, ಗೋಲಿಬಾರ್ ಮಾಡುತ್ತಿದ್ದವರ, ಮೆರವಣಿಗೆಯ ಗೊಂದಲ, ರಾಜಕುಮಾರ್ ಮನೆಯ ಜನಜಂಗುಳಿ ಮಧ್ಯೆ..

ನೂರಾರು ಜನರ ತಳ್ಳಾಟದ ಮಧ್ಯೆ ಪಿಟಿಸಿ ನೀಡುತ್ತಿದ್ದ ಜ್ಯೋತಿ ಇರ್ವತ್ತೂರ್ ಮುಖ ಗಮನಿಸಿದೆ. ‘ಬೆದರಿದ್ದಳಾ’ ಅಂತ.

ಹಾಗೆ ಒಂದು ಕ್ಷಣ ಅಂದುಕೊಂಡಿದ್ದಕ್ಕೆ ನನಗೇ ನಾಚಿಕೆಯಾಗುವಂತೆ ‘ಕ್ಯಾಮೆರಾ ಮ್ಯಾನ್ ಶಿವಪ್ಪ ಅವರೊಂದಿಗೆ ಗಲಭೆಯ ಸ್ಥಳದಿಂದ ಜ್ಯೋತಿ ಇರ್ವತ್ತೂರು’ ಅಂತ ಸೈನ್ ಆಫ್ ಮಾಡಿದಳು.

ಈ ಕಡೆ ನೇರಪ್ರಸಾರಕ್ಕೆ ಬೇಕಾದ ಓಬಿ ವ್ಯಾನ್ ಇರಲಿಲ್ಲ. ಫೀಲ್ಡ್ ನಲ್ಲಿ ಶೂಟ್ ಮಾಡಿದ ವಿಶುಯಲ್ಸ್ ಗಳು ಆಫೀಸಿಗೆ ಬರಲಾಗುತ್ತಿಲ್ಲ.

ಶಾರದಾ ನಾಯಕ್ ಹಲ್ಲು ಕಚ್ಚಿ ನಿಂತೇಬಿಟ್ಟರು. ಇದು ನೇರ ಪ್ರಸಾರ ಅಲ್ಲ ಅಂತ ಯಾರೂ ಹೇಳಲು ಸಾಧ್ಯವಾಗದಂತೆ ರಾಮೋಜಿ ಫಿಲಂ ಸಿಟಿಯ ಸ್ಟುಡಿಯೋಗೆ ವಿಶುವಲ್ಸ್ ಗಳ ಮಹಾಪೂರ ಹರಿಯಿತು.

ಯಾಕೋ ಗಾಂಧಿ ಹೇಳಿದ ಮಾತು ನೆನಪಾಯಿತು-

‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಅಂತ. ಅದು ಪತ್ರಿಕೋದ್ಯಮಕ್ಕೂ ನಿಜವಾದ ಮಾತು.
—-
ಚಿತ್ರ: ರಾಜ್ಯ ಮಹಿಳಾ ಪತ್ರಕರ್ತೆಯರ ಸಂಘವನ್ನು ರೂಪಿಸಲು
ಪ್ರೆಸ್ ಕ್ಲಬ್ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆ

ತುಮಕೂರು: ಬೃಹತ್ ಎಲ್ ಇಡಿ ಪರದೆಯಲ್ಲಿ ಮಹಾನ್ ನಾಯಕ ಅಂಬೇಡ್ಕರ್ ಧಾರವಾಹಿ ವೀಕ್ಷಿಸಲು ಅವಕಾಶ

Publicstory. in


ತುಮಕೂರು: ಸಂವಿಧಾನ ಶಿಲ್ಪಿ, ವಿಶ್ಚದ ಕಣ್ಮಣಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕತೆ ಆಧರಿಸಿದ ಜಿ.ಕನ್ನಡ ವಾಹಿನಿ ಶನಿವಾರದಿಂದ ಆರಂಭಿಸಿರುವ ಮಹಾನ್ ನಾಯಕ ಬಿ.ಆರ್.ಅಂಬೇಡ್ಕರ್ ಅವರ ಧಾರಾವಾಹಿಯ ವೀಕ್ಷಣೆಗೆ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿದೆ.

ಧಾರವಾಹಿಯೊಂದರ ಆರಂಭಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಂಭ್ರಮಾಚರಣೆ ದೇಶದ ಟಿ.ವಿ.ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಸುಮಾರು 18*12 ಅಡಿ ಎತ್ತರದ ಬೃಹತ್ ಪರದೆಯ ಮೇಲೆ ಧಾರವಾಹಿಯ ಮೊದಲ ಕಂತಿನ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಸಿ.ಗೌರಿಶಂಕರ್ ಉಪಸ್ಥಿತರಿದ್ದು, ಶಾಸಕ ಗೌರಿಶಂಕರ್ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡುವವರು.

ಕಾರ್ಪೋರೇಟರ್ ಜಿ.ಕುಮಾರ್ ಅತಿಥಿಗಳಾಗಿರುವವರು.

ಧಾರವಾಹಿಯ ವೀಕ್ಷಣೆಗೆ ಎಲ್ಲರಿಗೂ ಅವಕಾಶವಿದೆ. ಕಾರ್ಯಕ್ರಮ ಸಂಜೆ 6ರಿಂದ 7 ಗಂಟೆಯವರೆಗೆ ಇರಲಿದೆ. ಈ ಒಂದು ಗಂಟೆ ಧಾರವಾಹಿ ವೀಕ್ಷಣೆಗೆ ಅವಕಾಶವಿದೆ. ಪ್ರತಿ ಶನಿವಾರ, ಭಾನುವಾರ ಎರಡು ದಿನ ಧಾರವಾಹಿ ಜಿ.ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಂಜುನಾಥ್ ತಿಳಿಸಿದರು.

ಎಲ್ಲರೂ ಮರೆತವರನ್ನು ಕೈ ಹಿಡಿದ ಸಿಬಿಎಸ್

ತಿಪಟೂರು: ಸೀಲ್ ಡೌನ್ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಕಾಂಗ್ರೆಸ್ ಮುಖಂಡರಾದ ಸಿ.ಬಿ.ಶಶಿಧರ್ ವಿತರಿಸಿದರು.

ಕಳೆದ ವಾರ ತಿಪಟೂರು ನಗರದ ಸದಾಶಿವಪ್ಪನಗರದಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿದ್ದರ ಪರಿಣಾಮ ಇಡೀ ಆ ಭಾಗವನ್ನು ಸೀಲ್ ಡೌನ್ ಮಾಡಲಾಗಿದ್ದು ,ದಿನ ನಿತ್ಯದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ತುಂಬಾ ತೊಂದರೆಯಾಗಿತ್ತು.

ಆ ಭಾಗದ ಮುಖಂಡರ ಮನವಿಯಂತೆ ಈ ವ್ಯಾಪ್ತಿಯಲ್ಲಿ ವಾಸವಿರುವ 40ಕುಟುಂಬಗಳು ಮತ್ತು ನೆಹರೂ ನಗರದ 10ಕುಟುಂಬಗಳು ಸೇರಿ ಒಟ್ಟು 50ಕುಟುಂಬಗಳಿಗೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳ ಕಿಟ್ ಗಳನ್ನು ಜನಸ್ಪಂಧನ ಟ್ರಸ್ಟ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರಾದ ಸಿ‌.ಬಿ.ಶಶಿಧರ್ ರವರು ವಿತರಿಸಿದರು.

ಕಾಂಗ್ರೆಸ್ ನಗರ ಸಭಾ ಸದಸ್ಯರಾದ ಮಹೇಶ್ ,ಕಾಂಗ್ರೆಸ್ ಹಿರಿಯ ಮುಖಂಡರಾದ ಸಂಜೀವಯ್ಯಮತ್ತು ಶಿವಣ್ಣನವರ ಸಮ್ಮುಖದಲ್ಲಿ ವಿತರಿಸಲಾಯಿತು.

ತುಮಕೂರು: ಮತ್ತೇ 25:ಜನರಿಗೆ ಕೊರೊನಾ, ಎರಡು ಶತಕ ದಾಟಿದ ಸೋಂಕಿತರು

ತುಮಕೂರು: ಶುಕ್ರವಾರ ಮತ್ತೇ ತುಮಕೂರು ಜಿಲ್ಲೆಯಲ್ಲಿ 25 ಜನರಿಗೆ ಸೋಂಕು ತಗುಲಿದೆ.

ಮಧುಗಿರಿಯಲ್ಲಿ 12 ಮಂದಿಗೆ ಸೋಕು ದೃಢಪಟ್ಟಿದ್ದು, ಅತಿ ಹೆಚ್ಚು ಜನರಿಗೆ ಸೋಕು ದೃಢಪಟ್ಟ ತಾಲ್ಲೂಕು ಆಗಿದೆ.

ತುಮಕೂರು ತಾಲ್ಲೂಕಿನಲ್ಲಿ ನಾಲ್ಕು, ಕೊರಟಗೆರೆಯಲ್ಲಿ ಮೂವರಿಗೆ, ಕುಣಿಗಲ್ ತಾಲ್ಲೂಕಿನಲ್ಲಿ ಇಬ್ಬರಿಗೆ ಸೋಂಕು ಹತ್ತಿದೆ.

ತುರುವೇಕೆರೆ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 208 ಕ್ಕೇರಿದೆ.

ನಾಲ್ಕು ಮಂದಿ ಐಸಿಯು ನಲ್ಲಿದ್ದಾರೆ. ದಿನೇ ದಿ‌ನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಮನೆ ಮಾಡಿದೆ.

ಇ‌ನ್ನೊಂದೆಡೆ, 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಆರ್ ಎಸ್ ರಾಜಾರಾಮ್ ಎನ್ನುವ ಅರಿವಿನ ಜೊತೆಗಾರ

ಜಿ ಎನ್ ಮೋಹನ್


ಒಂದು ದಿನ ನಾನೂ ಹಾಗೂ ಲಹರಿ ವೇಲು ಮಾತನಾಡುತ್ತಾ ಕುಳಿತಿದ್ದೆವು.

ನಾನು ಅವರಿಗೆ ಕೇಳಿದೆ- ಅಲ್ಲಾ ನೀವು ಕೈಯಿಟ್ಟ ಸಿ ಡಿ ಗಳೆಲ್ಲಾ ಚಿನ್ನವಾಗುತ್ತದಲ್ಲಾ ಅದು ಹೇಗೆ ಅಂತ.

ಅದಕ್ಕೆ ಲಹರಿ ವೇಲು ನಕ್ಕು ‘ನನ್ನ ಕಿವಿ’ ಎಂದರು.

ನಾನು ಇದೇನಪ್ಪಾ ಲಹರಿ ಕಂಪನಿಯ ಸಿ ಡಿ ಯಶಸ್ಸಿಗೂ, ವೇಲು ಅವರ ಕಿವಿಗೂ ಎತ್ತಣಿಂದೆತ್ತ ಸಂಬಂಧ ?ಎಂದು ಯೋಚಿಸುತ್ತಿದ್ದೆ.

ಅವರು ಹೇಳಿದರು- ‘ಈ ಕಿವಿ ನನ್ನ ಆಸ್ತಿ. ಒಂದು ಹಾಡು ಕೇಳಿದ ತಕ್ಷಣ ಈ ಕಿವಿಗೆ ಗೊತ್ತಾಗಿ ಹೋಗುತ್ತದೆ ಇದು ಕ್ಲಿಕ್ ಆಗುತ್ತದೋ ಇಲ್ಲವೋ ಅಂತ. ಮತ್ತು ನಾನು ಈ ಕಿವಿಯನ್ನು ಎಂದೂ ಕಲುಷಿತಗೊಳ್ಳಲು ಬಿಟ್ಟಿಲ್’ ಎಂದರು.

ನವಕರ್ನಾಟಕದ ಜೊತೆಗೆ ಐದು ದಶಕದ ಸುಧೀರ್ಘ ನಂಟು ಹೊಂದಿದ್ದ ರಾಜಾರಾಮ್ ತಮ್ಮ ಆರೋಗ್ಯ ಹಾಗೂ ವಯಸ್ಸಿನ ಕಾರಣದಿಂದ ನವಕರ್ನಾಟಕದ ಜವಾಬ್ದಾರಿಯಿಂದ ಬಿಡುಗಡೆ ಹೊಂದಿದ್ದಾರೆ.

ನವಕರ್ನಾಟಕ ಎಂದರೆ ರಾಜಾರಾಮ್, ರಾಜಾರಾಮ್ ಎಂದರೆ ನವಕರ್ನಾಟಕ ಎಂದು ಸುಮಾರು ಜನ ಹೇಳಿಬಿಡುತ್ತಾರೆ.

ತಪ್ಪು, ಅದು ಖಂಡಿತಾ ತಪ್ಪು.

ನನಗೆ ರಾಜಾರಾಮ್ ಎಂದರೆ ನವಕರ್ನಾಟಕ ಮಾತ್ರವಲ್ಲ ಅವರು ನನ್ನ ಯೌವನ, ರಾಜಾರಾಮ್ ಎಂದರೆ ನನ್ನ ದಶಕಗಳ ಅರಿವು, ರಾಜಾರಾಮ್ ಎಂದರೆ ಅದು ನನ್ನ ನೋಟ ಕೂಡಾ.

ರಾಜಾರಾಮ್ ಎಂದಾಕ್ಷಣ ನನಗೆ ಅದು ನವಕರ್ನಾಟಕ ಮಾತ್ರವಲ್ಲ, ಸೋವಿಯತ್ ದೇಶ, ಬ್ರೆಕ್ಟ್, ಗಾರ್ಕಿ, ಟಾಲ್ಸ್ಟಾಯ್, ಚೆ ಗೆವಾರ, ಜಗತ್ತಿನ ಅಷ್ಟೂ ದೇಶಗಳ ಕಥೆಗಾರರು, ರಾಹುಲ ಸಾಂಕೃತ್ಯಾಯನ, ಜಾಗತೀಕರಣ, ಡಂಕೆಲ್ ಪ್ರಸ್ತಾವನೆ, ಜಿ ರಾಮಕೃಷ್ಣ.. ಹೀಗೆ ಎಲ್ಲವೂ. ಎಲ್ಲರೂ..

ಆರ್ ಎಸ್ ರಾಜಾರಾಮ್ ಅವರಿಗೆ ಒಂದು ಹಸ್ತಪ್ರತಿ ಕೈನಲ್ಲಿ ಹಿಡಿದುಕೊಂಡರೆ ಇದು ಎಲ್ಲಿಯವರೆಗೆ ಹೋಗಿ ಮುಟ್ಟುವ ತಾಖತ್ತು ಇದೆ ಎಂದು ಗೊತ್ತಾಗಿ ಹೋಗುತ್ತಿತ್ತು.

ಅಷ್ಟೇ ಆಗಿದ್ದರೆ ಅವರು ಒಬ್ಬ ಪುಸ್ತಕದಂಗಡಿಯ ಮುಖ್ಯಸ್ಥ ಎಂದು ಮಾತ್ರ ಕರೆಸಿಕೊಳ್ಳುತ್ತಿದ್ದರು.

ಆದರೆ ಅವರಿಗೆ ಆ ಪುಸ್ತಕ ಉಂಟು ಮಾಡಬಹುದಾದ ಕಂಪನಗಳೂ ಅರ್ಥವಾಗಿಬಿಡುತ್ತಿತ್ತು.

ಈ ಕಾರಣಕ್ಕಾಗಿಯೇ ಅವರು ಅರಿವಿನ ಜೊತೆಗಾರರೂ ಆದರು.

ಒಂದು ಪೀಳಿಗೆ ಇವತ್ತು ಹೋರಾಟದ ಸ್ಪೂರ್ತಿ ಪಡೆದಿದ್ದರೆ, ಓದಿನ ರುಚಿ ಹತ್ತಿಸಿಕೊಂಡಿದ್ದರೆ, ಸಮಾಜವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದರೆ, ಜಾಗತೀಕರಣ ಉಂಟು ಮಾಡುವ ತಲ್ಲಣಗಳನ್ನು ತಿಳಿದಿದ್ದರೆ ಖಂಡಿತಾ ಅದರ ಹಿಂದೆ ರಾಜಾರಾಮ್ ಹಾಗೂ ನವಕರ್ನಾಟಕದ ಪಾತ್ರ ಇದ್ದೆ ಇದೆ.

ಒಂದು ದಿನ ನಾನೂ ಅವರೂ ಉಳ್ಳಾಲದ, ಯಾರೂ ಸುಳಿಯದ ಕಡಲ ದಂಡೆಯಲ್ಲಿ ಕುಳಿತಿದ್ದೆವು.

ಜೊತೆಗೆ ಎ ಆರ್ ಉಡುಪ, ಎನ್ ಎಸ್ ವೆಂಕಟರಾಮ್, ಎನ್ ಕೆ ವಸಂತಲಕ್ಷ್ಮಿ ಹೀಗೆ ಒಂದಷ್ಟು ಆತ್ಮೀಯರು.

ಸೂರ್ಯ ಜಾರಿ ಹೋಗಿ ಸುಮಾರು ಹೊತ್ತಾಗಿತ್ತು.

ನನ್ನೊಡನೆ ಮಾತನಾಡುತ್ತಿದ್ದ ರಾಜಾರಾಮ್ ‘ಮೋಹನ್ ಆ ನಕ್ಷತ್ರಗಳನ್ನ ನೋಡಿ.. ಇಲ್ಲಿ ಹಾರುತ್ತಿರುವ ಮಿಂಚು ಹುಳ ನೋಡಿ.. ಅವಕ್ಕೆ ಈ ಕತ್ತಲೆಯನ್ನೇ ಒದ್ದು ಓಡಿಸುತ್ತೇನೆ ಎನ್ನುವ ವಿಶ್ವಾಸ ಇದೆ ಆಲ್ವಾ’ ಎಂದರು.

ನಾನು ಅವರತ್ತ ತಿರುಗಿದೆ. ‘ಪುಸ್ತಕಗಳೂ ಅಷ್ಟೇ, ದೊಡ್ಡ ಅಂಧಕಾರವನ್ನು ಓಡಿಸುವ ಕೆಲಸ ಮಾಡಬೇಕು ಆ ನಕ್ಷತ್ರಗಳಂತೆ, ಈ ಮಿಣುಕು ಹುಳದಷ್ಟಾದರೂ..’ ಎಂದರು

ಅವರು ಅದೇ ಕೆಲಸ ಮಾಡಿದರು.

ಸತತವಾಗಿ ೫ ದಶಕದ ಕಾಲ ಅವರು ನಕ್ಷತ್ರಗಳನ್ನು ಹುಡುಕಿದರು ಮಿಣುಕು ಹುಳದ ಬೆಂಬತ್ತಿದರು. ಆ ಮೂಲಕ ಸಮಾಜದ ನಡುವಿನ ಅಂಧಕಾರಕ್ಕೆ ಒಂದಿಷ್ಟಾದರೂ ಅರಿವಿನ ಬೆಳಕು ಕೊಡಲು ಯತ್ನಿಸಿದರು.

ನವಕರ್ನಾಟಕ ಎನ್ನುವ ಕ್ಯಾನವಾಸ್ ನೊಳಗೆ ಜಗತ್ತಿನ ಎಷ್ಟೆಲ್ಲಾ ಲೇಖಕರನ್ನು ಸೇರಿಸಿದರು, ದೇಶದ ಎಷ್ಟೆಲ್ಲಾ ಸುಡು ವಿಷಯಗಳನ್ನು ತಂದಿಟ್ಟರು.

ಎಷ್ಟೆಲ್ಲಾ ದೇಶಗಳನ್ನು ಪರಿಚಯಿಸಿದರು. ಎಷ್ಟೆಲ್ಲಾ ಹೋರಾಟಗಳನ್ನು ಪರಿಚಯಿಸಿದರು, ಎಷ್ಟೆಲ್ಲಾ ಸೌಹಾರ್ದ ಚಳವಳಿಗಳನ್ನು ಪರಿಚಯಿಸಿದರು.

ದಕ್ಷಿಣ ಕನ್ನಡದ ಅಂಗಳದಲ್ಲಿದ್ದ ರಾಜಾರಾಮ್ ಬಿ ವಿ ಕಕ್ಕಿಲ್ಲಾಯರ ಹೋರಾಟದ ರೀತಿಗೆ ಮಾರುಹೋದರು. ಪುತ್ತೂರಿನಲ್ಲಿ ರೈತ ಕಾರ್ಮಿಕರ ಸಂಘಟನೆ ಆರಂಭಿಸಿದರು. ಅಲ್ಲಿಂದ ತಲುಪಿಕೊಂಡಿದ್ದು ಬೆಂಗಳೂರಿನ ನವಕರ್ನಾಟಕವನ್ನು.

ಬಿ ವಿ ಕಕ್ಕಿಲ್ಲಾಯ ಅವರ ಕಣ್ಣೋಟದ ಫಲವಾಗಿ ಆರಂಭಗೊಂಡ ನವಕರ್ನಾಟಕ ಪ್ರಕಾಶನಕ್ಕೆ ರಾಜಾರಾಮ್ ಪ್ರವೇಶ ಕೊಟ್ಟರು. ‘ಜನಶಕ್ತಿ’ ಮುದ್ರಣಾಲಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ನವಕರ್ನಾಟಕದ ಮುಖ್ಯಸ್ಥರಾಗಿದ್ದ ಎಸ್ ಆರ್ ಭಟ್ ನಿವೃತ್ತರಾದಾಗ ೧೯೭೨ ರಲ್ಲಿ ರಾಜಾರಾಮ್ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿ ಅದರ ಚುಕ್ಕಾಣಿ ಹಿಡಿದರು.

ಆ ನಂತರದ್ದು ನಮ್ಮೆಲ್ಲರ ಕಣ್ಣ ಮುಂದಿದೆ.

ಕ್ಯೂಬಾ ಪ್ರವಾಸ ಕಥನ ಬರೆಯುವಾಗ ಗೂಗಲ್ ಇಲ್ಲದ ಕಾಲದಲ್ಲಿ ಕ್ಯೂಬಾದ ಕಥೆಗಳನ್ನು ಕೈಗಿಟ್ಟದ್ದು ಇದೇ ನವಕರ್ನಾಟಕ.

ಡಂಕೆಲ್ ಪ್ರಸ್ತಾವನೆ- ಹಾಗೆಂದರೇನು? ಎಂದು ಎಲ್ಲರೂ ಕೇಳುತ್ತಿದ್ದಾಗ ನವಕರ್ನಾಟಕ ನನ್ನ ಬಳಿ ಮಾಧ್ಯಮದ ಮೇಲೆ ಡಂಕೆಲ್ ಪ್ರಸ್ತಾವನೆ ಮಾಡುವ ದಾಳಿಯ ಬಗೆಗಿನ ಎರಡು ಕೃತಿಗಳನ್ನು ಬರೆಸಿತು.

ಸ್ವಾತಂತ್ರ್ಯೋತ್ತರ ಭಾರತದ ಅವಲೋಕನ ಸರಣಿಯಂತೂ ಇವತ್ತಿಗೂ ಭಾರತ ಅರ್ಥವಾಗದವರಿಗೆ, ಅರ್ಥವಾದವರಿಗೂ ಇರುವ ಬೆಳಕಿನ ಹಣತೆಗಳು.

ರಾಜಾರಾಮ್ ಗೆ ಚೆನ್ನಾಗಿ ಗೊತ್ತು. ಇನ್ನು ಉರಿಯುವ ಪಂಜನ್ನು ನಮ್ಮ ನಂತರದ ಪೀಳಿಗೆಗೆ ದಾಟಿಸಬೇಕು ಎಂದು.

ನನ್ನ ಮಗಳೊಂದಿಗೆ ಒಂದು ದಿನ ನವಕರ್ನಾಟಕದ ಬಾಗಿಲು ಬಡಿದೆ. ಅವರು ಹತ್ತೆಂಟು ಪುಸ್ತಕಗಳನ್ನು ಸಡಗರದಿಂದ ತಾವೇ ಆಯ್ದೂ ಆಯ್ದೂ ಅವಳ ಕೈಗಿಟ್ಟಿದ್ದರು.

ಈ ಅನುಭವ ಮಕ್ಕಳೊಂದಿಗೆ ನವಕರ್ನಾಟಕಕ್ಕೆ ಹೋದ ಎಲ್ಲರಿಗೂ ಆಗಿದೆ.

ಈಗ ನೋಡಿದರೆ ಅಷ್ಟೇ ಪ್ರೀತಿಯಿಂದ ನವಕರ್ನಾಟಕದ ಜವಾಬ್ದಾರಿಯನ್ನೇ ನಂತರದ ಪೀಳಿಗೆಯ ಕೈಗಿಟ್ಟುಬಿಟ್ಟಿದ್ದಾರೆ. ಡಾ ಸಿದ್ಧನಗೌಡ ಪಾಟೀಲ್, ಎ ಆರ್ ಉಡುಪ ಅವರ ಕೈಗೆ ರಿಲೇ ಓಟದ ಬೇಟನ್ ಕೊಟ್ಟಿದ್ದಾರೆ.

ತಕ್ಕಡಿ ಹಿಡಿದು ವ್ಯಾಪಾರಕ್ಕೆ ಕೂತ ಪ್ರಕಾಶಕರ ನಡುವೆ ಪುಸ್ತಕ ಎನ್ನುವುದು ವಿಚಾರದ ದೊಂದಿ ಎಂದು ಅರ್ಥೈಸಿದ ರಾಜಾರಾಮ್ ಪುಸ್ತಕ ಲೋಕಕ್ಕೆ ಒಂದು ಘನತೆ ತಂದುಕೊಟ್ಟವರು.

ಪುಸ್ತಕದ ಘಮ ನಿಮ್ಮ ಸುತ್ತಾ ಆಡುತ್ತಲೇ ಇರಲಿ..–

ಕೊರಟಗೆರೆಯಲ್ಲಿ 17, ಗುಬ್ಬಿಯಲ್ಲಿ 13 ಸೇರಿ 44 ಮಂದಿಗೆ ಕೊರೊನಾ: ‌183ಕ್ಕೇರಿದ ಸೋಂಕಿತರ ಸಂಖ್ಯೆ

Publicstory. in


Tumkur: ಜಿಲ್ಲೆಯ ಹಳ್ಳಿ,ಹಳ್ಳಿಗಳನ್ನು ಬಿಡದ ಕೊರೊನಾ ಗುರುವಾರ ಒಂದೇ ದಿ‌ನ 44 ಜನರಿಗೆ ದೃಢಪಟ್ಟಿದೆ.

ಇದೇ ಪ್ರಮಾಣದಲ್ಲಿ ಏರುತ್ತಾ ಹೋದರೆ ಗತಿ ಏನು ಎಂದು ಜನರು ಭಯಭೀತರಾಗಿದ್ದಾರೆ.

ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚು ಜನರು ಸೋಂಕು ಪೀಡಿತರಾಗುತ್ತಿರುವುದು ಭಯಬೀತಿ ಹೆಚ್ಚಲು ಕಾರಣವಾಗಿದೆ.

ಗುಬ್ಬಿಯಲ್ಲಿ 13 ಮಂದಿ, ಕೊರಟಗೆರೆಯಲ್ಲಿ 17, ತಿಪಟೂರಿನಲ್ಲಿ 5 ಹಾಗೂ ತುರುವೇಕೆರೆ ಒಬ್ಬರು ಹಾಗೂ ಪಾವಗಡದಲ್ಲಿ ಓರ್ವ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.

ಗುಬ್ಬಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಸೋಂಕಿಗೆ ತುತ್ತಾಗಿದ್ದು, ಗ್ರಾಹಕರು ಭಯ ಬೀಳುವಂತಾಗಿದೆ.

ಮುಚ್ಚಿದ ಶಾಲೆಗಳು: ಕೂಲಿ‌ ಕೆಲಸಕ್ಕಾಗಿ ಖಾಸಗಿ ಶಾಲೆಗಳ ಶಿಕ್ಷಕರ ಹುಡುಕಾಟ…

ಎಂ.ಎನ್.ಭರತ್


ಚಿಕ್ಕನಾಯಕನಹಳ್ಳಿ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಶಾಲಾ ಕಾಲೇಜು ರಿ ಓಪನ್ ಆಗದೆ ಸಂಬಳ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಖಾಸಗಿ ಶಾಲೆ ಶಿಕ್ಷಕರ ಪಾಡು ಹೇಳತೀರದಾಗಿದೆ.

ಜೀವನ ನಡೆಸುವುದು ಬಹಳ ಕಷ್ಟವಾಗಿದ್ಧು, ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಕೂಲಿ ಕೆಲಸದ ಹುಡುಕಿದರೂ ಜನರು ಕೂಲಿಗೂ ಕರೆಯುತ್ತಿಲ್ಲ ಎಂದು ತಾಲ್ಲೂಕಿನ ಶಿಕ್ಷಕರೊಬ್ಬರು ಕಣ್ಣೀರಾದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 23 ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಇನ್ನಿತರ ಶಾಲೆಗಳ ನೂರಾರು ಶಿಕ್ಷಕರು ಕಳೆದ ನಾಲ್ಕು ತಿಂಗಳುಗಳಿಂದ ಸಂಬಳ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಾರಂಭವಾಗಿದ್ದರೂ ಸಹ ಪೋಷಕರು ಮಕ್ಕಳನ್ನು ದಾಖಲಿಸಲು ಕಾಯ್ದು ನೋಡುವ ತಂತ್ರ ಅನುಭವಿಸುತ್ತಿರುವುದರಿಂದ ಆಡಳಿತ ಮಂಡಳಿ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು.

ಕೆಲವು ಶಾಲಾ ಕಾಲೇಜುಗಳು ಆರ್ಥಿಕವಾಗಿ ಗಟ್ಟಿ ಇದ್ದರೂ ಸಂಬಳ ನೀಡುತ್ತಿಲ್ಲ ಎನ್ನುತ್ತಾರೆ.

ಖಾಸಗಿ ಶಾಲಾ ಆಡಳಿತ ಮಂಡಳಿ ನೀಡುವ ಅಲ್ಪ ಸಂಬಳದಲ್ಲಿ ಸಂಸಾರ ನಡೆಸುತ್ತಿದ್ದ ತಾಲ್ಲೂಕಿನ ನೂರಾರು ಶಿಕ್ಷಕರು ಇಂದು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.

ನಿತ್ಯದ ಅವಶ್ಯಕ ವಸ್ತುಗಳನ್ನು ಖರೀದಿಸಲು ಹಿಂದು ಮುಂದು ನೋಡುವಂತಾಗಿದೆ ಇವರ ಪಾಡು ಮತ್ತು ಶಿಕ್ಷಕರ ಕುಟುಂಬಗಳು ಕೋರೋಣ ಕಾಟದಿಂದ ನಲುಗುತ್ತಿದ್ದು ದಿಕ್ಕು ತೋಚದ ಸ್ಥಿತಿಗೆ ತಲುಪಿದೆ.

ನೆರವು ಅಗತ್ಯ …


ಇತ್ತ ಬೇಡಲು ಸಿದ್ಧವಿಲ್ಲದೆ ಬೇರೆ ಕೆಲಸಗಳು ಸಿಗದೆ ಮನೆಯಲ್ಲಿನ ದಿನದ ಖರ್ಚುಗಳಿಗೆ ಹಣವಿಲ್ಲದೆ ಖಾಸಗಿ ಶಿಕ್ಷಕರು ಪರದಾಡುವಂತಾಗಿದೆ. ಸಮಸ್ಯೆ ಹೇಳಿದರೆ ಸಮಾಜ ಕೀಳಾಗಿ ನೋಡುತ್ತದೆ ಎಂಬ ಭಯ ಒಂದು ಕಡೆ ಕಾಡುತ್ತಿದ್ಧರೆ ಬೇರೆ ವೃತ್ತಿ ಮಾಡಲು ಉದ್ಯೋಗ ಅವಕಾಶಗಳೇ ಇಲ್ಲವಾಗಿದೆ.

ಇನ್ನೂ ಕೆಲ ಖಾಸಗಿ ಶಿಕ್ಷಕರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

ಸರ್ಕಾರ ಎಲ್ಲಾ ವರ್ಗಕ್ಕೆ ಕೊರೊನ ಅನುದಾನದಲ್ಲಿ ನೀಡಿರುವ ಅಲ್ಪ ಸಹಾಯವನ್ನು ಶಿಕ್ಷಕರಿಗೂ ನೀಡಬೇಕು ಎಂಬುದು ಹಲವರ ಮನವಿಯಾಗಿದೆ.

ವಿದ್ಯಾರ್ಥಿಗಳ ದಾಖಲಾತಿಯಾಗದೆ ಆಡಳಿತ ಮಂಡಳಿ ವೇತನ ನೀಡುವುದಿಲ್ಲ ಮತ್ತು ಶಾಲೆ ಪ್ರಾರಂಭವಾಗದೆ ಕೆಲಸ ಕಳೆದುಕೊಳ್ಳುವ ಭಯ ಇನ್ನೊಂದು ಕಡೆ ಕಾಡುತ್ತಿದೆ.‌ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಖಾಸಗಿ ಶಾಲಾ
ಶಿಕ್ಷಕರೊಬ್ಬರು ತಮ್ಮ ಆಳಲನ್ನು ತೋಡಿಕೊಂಡರು.

ಕೃಷಿ ಕೆಲಸ ಆರಂಭಿಸಿದ ನಟ ನಿಖಿಲ್ ಕುಮಾರಸ್ವಾಮಿ ರೈತರಿಗೆ ಹೇಳಿದ್ದೇನು?

0

Publicstory. in


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ತಾವಿನ್ನು ಕೃಷಿಕನಾಗುವುದಾಗಿ ಹೇಳಿದ್ದು, ರಾಮನಗರ ಸಮೀಪದ ಕಿತ್ತಗಾನ ಹಳ್ಳಿಯ ತಮ್ಮ ತೋಟದಲ್ಲಿ ಕೃಷಿ ಕೆಲಸ ಆರಂಭಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಕೃಷಿಕರಿಗೆ ಬಹಿರಂಗ ಪತ್ರ ಬರೆದಿದ್ದು ಮನಮುಟ್ಟುವಂತಿದೆ. ಎಲ್ಲರನ್ನು ಚಿಂತನೆಗೆ ಹಂಚುವಂತೆ ಇದೆ.

ಅವರ ಫೇಸ್‌ಬುಕ್‌ ಬರಹ ಹೀಗಿದೆ…

ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತ ಈ ದೇಶದ ಬೆನ್ನೆಲುಬು ಎಂದು ಗೌರವ ಸಲ್ಲಿಸುತ್ತೇವೆ. ಆದರೆ ರೈತರ ಮಕ್ಕಳು ರೈತರಾಗಿ ಅವರ ಕೃಷಿಭೂಮಿಯಲ್ಲಿ ದುಡಿಯಲು ಹಿಂಜರಿದು ನಗರದ ಕಡೆಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹವಣಿಸುವವರ ಸಂಖ್ಯೆಯೇ ಹೆಚ್ಚು.

ತಾವು ಕಲಿತ ವಿದ್ಯಾಭ್ಯಾಸದ ಆಧಾರದ ಮೇಲೆ ನಗರಗಳಲ್ಲಿ ಕೆಲಸವೊಂದನ್ನು ಸಂಪಾದಿಸಿ ಜೀವನ ನಡೆಸುವವರು ಒಂದು ಕಡೆಯಾದರೆ ಇನ್ನು ಕೆಲವರು ಸ್ವಂತ ಉದ್ಯೋಗ ಅಥವಾ ಕೂಲಿ ಕೆಲಸವನ್ನಾದರೂ ನಗರದಲ್ಲಿ ಮಾಡಿಕೊಂಡು ಜೀವನ ನಡೆಸಲು ನಗರಗಳ ಕಡೆಗೆ ಮುಖಮಾಡುವವರು ಇನ್ನೊಂದು ಕಡೆ.

ಇದರ ಪರಿಣಾಮವಾಗಿ ಹಳ್ಳಿಗಳಲ್ಲಿರುವ ಕೃಷಿಭೂಮಿಗಳು ಪಾಲು ಬೀಳುತ್ತಿವೆ. ನಗರದಲ್ಲಿ ವೃತ್ತಿ ಸ್ಪರ್ಧೆ ತಾರಕಕ್ಕೇರಿದೆ.

ಡಾಕ್ಟರ್ ತನ್ನ‌ ಮಗ ಡಾಕ್ಟರ್ ‌ಆಗಲಿ, ಪೊಲೀಸ್ ತನ್ನ ಮಗನೂ ತನ್ನಂತೆಯೇ ಪೊಲೀಸ್ ಆಗಲಿ ಸರ್ಕಾರಿ‌ ನೌಕರ ತನ್ನ ಮಗನೂ ಸರ್ಕಾರಿ ನೌಕರನಾಗಲಿ ಎಂದು ಆಸೆ ಪಡುತ್ತಾನೆ. ಆದರೆ ನಮ್ಮ ದೇಶದ ರೈತ ತನ್ನ ಮಗನೂ ರೈತನಾಗಲಿ ಎಂದು ಎಂದೂ ಬಯಸದ ಪರಿಸ್ಥಿತಿ ಇದೆ.

ತಾನು ಪಟ್ಟ ಕಷ್ಟ ತನಗೇ ಕೊನೆಯಾಗಲಿ ನನ್ನ ಮಕ್ಕಳಿಗೆ ಈ ಕಷ್ಟ ಬೇಡ ಎಂದು ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸಿ ಉದ್ಯೋಗಕ್ಕಾಗಿ ನಗರಗಳಿಗೆ ಕಳುಹಿಸುತ್ತಾರೆ.

ರೈತರಿಗೆ ತಾವು ಏನೇ ಬೆಳೆದರೂ ಅದಕ್ಕೆ ಬೆಲೆ ನಿಗದಿ ಮಾಡುವ ಅಧಿಕಾರವೂ ಆತನಿಗಿಲ್ಲ. ಜೀವಮಾನವಿಡೀ ದುಡಿದು ಬದುಕುವ ರೈತನಿಗೆ ಈ ದೇಶದ ಮೊದಲ ಗೌರವ ಸಿಗಬೇಕಿದ್ದು ಸರ್ಕಾರಿ ಅಧಿಕಾರಿಗಳು ಹಾಗೂ ಬ್ಯಾಂಕ್ ನೌಕರರು ರೈತರು ತಮ್ಮ ಕಚೇರಿಗೆ ಬಂದಾಗ ಗೌರವದಿಂದ ನಡೆಸಿಕೊಳ್ಳಬೇಕು.

ಜಮೀನಿನಲ್ಲಿ ಮುಳ್ಳು ಚುಚ್ಚಿ ಮಣ್ಣಿಗೆ ರಕ್ತದ ಅಭಿಷೇಕವಾದರೂ ಮರುದಿನ ಅದೇ ಜಮೀನಿನಲ್ಲಿ ಕೆಲಸ ಮಾಡುವ ರೈತನಿಗೆ ಘನತೆಯ ಬದುಕನ್ನು ಕಟ್ಟಿ ಕೊಡಬೇಕಿದೆ.

ರೈತರ ಮಕ್ಕಳು ಕೃಷಿಭೂಮಿಯಲ್ಲಿ ಕೆಲಸ ಮಾಡುವುದು ಒಂದು ಗೌರವ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು.ರೈತನಾಗಿ ಬದುಕುವುದು ದೌರ್ಭಾಗ್ಯವಲ್ಲ ಬದಲಾಗಿ ಅದೊಂದು ಸೌಭಾಗ್ಯ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು.

ನಗರದಿಂದ ಮತ್ತೆ ಊರುಗಳಿಗೆ ಹಿಂದಿರುಗಿ ತಮ್ಮ ತಮ್ಮ ಕೃಷಿಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ನಿಮಗೆಲ್ಲರಿಗೂ ಯಶಸ್ಸು ಸಿಗಲಿ. ರೈತನ ಮಗನೆಂದು ಹೆಮ್ಮೆಯಿಂದ ಹೇಳಿ.

ವಿದ್ಯಾಭ್ಯಾಸವಿರುವ ಯುವಕರು ವ್ಯವಸಾಯಕ್ಕಾಗಿ ಜಮೀನಿಗಿಳಿದರೆ ಮಧ್ಯವರ್ತಿಗಳ ಮೋಸವೂ ಕಡಿಮೆಯಾಗಲಿದೆ. ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ.‌

ಕೃಷಿಯಲ್ಲೆ ಉನ್ನತ ಪದವಿ ಪಡೆದ ರೈತರ ಮಕ್ಕಳೇ ದೇಶದ ಕೃಷಿನೀತಿಯನ್ನು ನಿರ್ಧರಿಸುವಂತಾಗಲಿ. ಇದರ ಜೊತೆಗೆ ಸರ್ಕಾರಗಳು ಸಹಾ ಕೃಷಿ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹವನ್ನು ನೀಡಿದರೆ ದೇಶದಲ್ಲಿ ರೈತನೆಂದರೆ ಎದ್ದು ಕೈಮುಗಿಯುವ ದಿನಗಳು ದೂರವಿಲ್ಲ.

ನಾನು ಸಹಾ ರೈತನ ಮಗನಾಗಿದ್ದು ನಮ್ಮ ಜಮೀನಿನಲ್ಲಿ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ.

ಇದೇ ರೀತಿ‌ ನಗರದಿಂದ ಹಳ್ಳಿಗಳಿಗೆ ಹಿಂತಿರುಗಿ ವ್ಯವಸಾಯದಲ್ಲಿ ತೊಡಗಿರುವ ಎಲ್ಲಾ ರೈತರ ಮಕ್ಕಳಿಗೂ ಯಶಸ್ಸು ಸಿಗಲಿ.

ಬೆಸಗರಹಳ್ಳಿ ರಾಮಣ್ಣ ಎಂಬ ಕೊಡೆ…

ಜಿ.ಎನ್.ಮೋಹನ್


ಆ ‘ಹುಡುಗ’ ನನ್ನೆದುರು ಕುಳಿತಿದ್ದ.

ಆತನ ಕಣ್ಣುಗಳಲ್ಲಿ ಇನ್ನಿಲ್ಲದ ನೋವು ಮಡುಗಟ್ಟಿತ್ತು. ಆಗಲೋ ಈಗಲೋ ಹೊರಗೆ ಜಾರಲು ಕಣ್ಣೀರು ಕಾದು ಕುಳಿತಿತ್ತು.

ಆ ಹುಡುಗನ ಎದೆಯಲ್ಲಿ ನೆನಪುಗಳ ಬತ್ತಲಾರದ ಗಂಗೆಯೊಂದು ಅಡಗಿ ಕುಳಿತಿತ್ತು.

ಆ ‘ಹುಡುಗ’ ಇನ್ನಾರೂ ಅಲ್ಲ, ಕನ್ನಡ ಕಥಾ ಲೋಕವನ್ನು ಮಗ್ಗುಲು ಬದಲಾಯಿಸುವಂತೆ ಮಾಡಿದ ‘ಒಂದು ಹುಡುಗನಿಗೆ ಬಿದ್ದ ಕನಸು’ ವಿನ ಹುಡುಗ- ರವಿಕಾಂತೇಗೌಡ.

ಕನ್ನಡ ಓದುಗರು ಪ್ರೀತಿಯಿಂದ ರಾಮಣ್ಣ ಎಂದು ಎದೆಗೆ ಹಚ್ಚಿಕೊಂಡ ಬೆಸಗರಹಳ್ಳಿ ರಾಮಣ್ಣ ಬರೆದ ಕಥೆಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಾನವೀಯತೆಯ ಬೆಸುಗೆ ಹಾಕಿದವು.

ಆಧುನಿಕತೆ ಹೆಜ್ಜೆ ಹಾಕಲು ಸಜ್ಜಾಗುತ್ತಿದ್ದ ಸಮಯದಲ್ಲಿ ಹಳ್ಳಿಯ ಒಡಲು ಅನುಭವಿಸುತ್ತಿದ್ದ ತುಮುಲವನ್ನು ಬೆಸಗರಹಳ್ಳಿ ರಾಮಣ್ಣ ಹೊರಗೆ ಹಾಕಿದ್ದರು.

ಅಂತಹ ಸಾಲಿನಲ್ಲಿ ಬಂದ ಒಂದು ಮಹತ್ವದ ಕಥೆ- ಒಂದು ಹುಡುಗನಿಗೆ ಬಿದ್ದ ಕನಸು.

ರವಿಕಾಂತೇಗೌಡರನ್ನು ನಾನು ನೇರಾ ನೇರಾ ಕೇಳಿದೆ

‘ಆ ಹುಡುಗ ನೀವೇನಾ ?’.

ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಒಂದೇ ಕ್ಷಣಕ್ಕೆ ತಮ್ಮ ಬಾಲ್ಯಕ್ಕೆ ಜಾರಿಹೋಗಿದ್ದರು.

ಅವರ ಕಣ್ಣುಗಳು ಒಂದು ಭಯ, ಒಂದು ಮಿನುಗು ಎರಡನ್ನೂ ಹೊತ್ತಿತ್ತು.

ತಾನು ಕಂಡ ಕನಸೊಂದು ಅಪ್ಪನ ಕಥೆಗೆ ಆಹಾರವಾಯಿತಲ್ಲಾ ಎಂದು ಕಣ್ಣು ಮಿನುಗುತ್ತಿದ್ದರೆ, ಕಂಡ ಆ ಕನಸು ಅವರೊಳಗೆ ಒಂದು ಭಯವನ್ನು ಹುಟ್ಟು ಹಾಕಿತ್ತು.

ಆ ‘ಹುಡುಗ’ ಯಾರು ಎಂದು ನನಗೆ ಗೊತ್ತಾಗಿ ಹೋಗಿತ್ತು.

ಆ ‘ಕನಸು’ ಏನು ಎಂಬುದು ಗೊತ್ತಾಗುವುದು ಮಾತ್ರ ಬಾಕಿಯಿತ್ತು. ‘ಏನದು ಕನಸು ?’ ಎಂದು ಕೇಳಿದೆ.

‘ಕತ್ತಲೆ, ಬೆಳಕು, ಅರಮನೆ, ಮೃಗಾಲಯ. ನಟ್ಟನಡುರಾತ್ರಿ ನಾನು ಕೂಗುತ್ತಾ ಹಾಸಿಗೆಯ ಮೇಲೆ ಎದ್ದು ಕುಳಿತೆ, ಒಂದು ಕನಸು ಒಡೆದು ಹೋಗಿತ್ತು. ಅದು ಒಡೆದು ಹೋದ ಕನಸು’ ಎಂದರು.

ಬೆಸಗರಹಳ್ಳಿ ರಾಮಣ್ಣ ತಮ್ಮ ಬದುಕು ಹಾಗೂ ಕಥೆಯ ನಡುವೆ ಎಂದೂ ಒಂದು ಕೋಟೆಯನ್ನು ಕಟ್ಟಿದವರೇ ಅಲ್ಲ. ಹಾಗಾಗಿಯೇ ಆ ‘ಒಂದು ಹುಡುಗನಿಗೆ ಬಿದ್ದ ಕನಸು’ ಒಂದು ದೇಶದ, ಒಂದು ಸಮಾಜದ ಕನಸಾಗಿ ಬದಲಾಯಿಸುತ್ತಾ ಹೋದರು.

ದಾರಿಯುದ್ದಕ್ಕೂ ಹಸಿರು ಚಿಮ್ಮಿಸುತ್ತಾ ಇದ್ದ ಗದ್ದೆಗಳನ್ನು ನೋಡುತ್ತಾ ಮಂಡ್ಯ ತಲುಪಿದ ನನಗೆ ಒಮ್ಮೆ ನನ್ನ ಕಣ್ಣನ್ನೇ ನಂಬಲಾಗದ ಸ್ಥಿತಿ.

ಮಂಡ್ಯದ ಆ ಕಲಾಮಂದಿರದ ಅಂಗಳ ವಸ್ತುಶಃ ಒಂದು ಕರ್ನಾಟಕವಾಗಿ ಬದಲಾಗಿ ಹೋಗಿತ್ತು. ಬೆಸಗರಹಳ್ಳಿ ರಾಮಣ್ಣನವರ ನೆನಪಿನ ಕಂದೀಲು ಸದಾ ಉರಿಯುತ್ತಲೇ ಇರುವಂತೆ ನೋಡಿಕೊಳ್ಳಲು ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕಥೆಗಾರರಿಗೆ ಕೊಡುವ ಪ್ರಶಸ್ತಿ ಕಾರ್ಯಕ್ರಮಕ್ಕೆ ಎಲ್ಲೆಂಲ್ಲಿಂದಲೋ ಜನ ಮನೆಯ ಮದುವೆಗೆ ಬಂದಂತೆ ಹೊರಟು ಬಂದಿದ್ದರು.

ನನಗೆ ನೆನಪಾದದ್ದು ‘ನೆಲದ ಒಡಲು’.

ಬೆಸಗರಹಳ್ಳಿ ರಾಮಣ್ಣನವರ ಮನೆಯ ಹೆಸರೂ ಅದೇ. ಅವರ ಮೊದಲ ಕಥಾ ಸಂಕಲನದ ಹೆಸರೂ ಅದೇ.

ಹಿಂದೆ ಇದೇ ರವಿಕಾಂತೇಗೌಡರಿಗೆ ‘ಹಾಗೇಕೆ?’ ಎಂದು ಪ್ರಶ್ನಿಸಿದ್ದೆ. ಆಗ ಅವರು ನೆಲದ ಬಗ್ಗೆ ರಾಮಣ್ಣನವರಿಗಿದ್ದ ಅಪಾರ ಪ್ರೀತಿಯ ಬಗ್ಗೆ ಹೇಳುತ್ತಾ ಹೋಗಿದ್ದರು.

‘ನನ್ನ ಅಪ್ಪ ಸದಾ ಹೇಳುತ್ತಿದ್ದರು. ಹಕ್ಕಿ ಎಷ್ಟು ಎತ್ತರಕ್ಕೆ ಬೇಕಾದರೂ ರೆಕ್ಕೆ ಬಿಚ್ಚಿ ಹಾರಬಹುದು ಆದರೆ ಅದಕ್ಕೆ ಕಾಳು ಬೇಕೆಂದಾಗ ಈ ನೆಲದ ಒಡಲಿಗೆ ಬರಲೇಬೇಕು’ ಎಂದು.

ಒಂದು ಕ್ಷಣ ಆ ಅಂಗಳದ ತುಂಬಾ ಇದ್ದ ಜನರ ಪ್ರೀತಿಯನ್ನು ಕಂಡಾಗ ನನಗೆ ಅನಿಸಿತು ಅಷ್ಟೆತ್ತರಕ್ಕೆ ಹಾರಿ ಹೋದ ರಾಮಣ್ಣ ಎನ್ನುವ ಹಕ್ಕಿಯನ್ನು ಹೇಗೆ ಈ ಎಲ್ಲರೂ ಮತ್ತೆ ಈ ಕಾರ್ಯಕ್ರಮದ ಮೂಲಕ ನೆಲದ ಒಡಲಿಗೆ ಬರುವಂತೆ ಮಾಡಿದ್ದಾರಲ್ಲಾ ಎಂದು.

ರವಿಕಾಂತೇಗೌಡರು ಹಾಗೂ ನಾನು ಗಂಟೆಗಟ್ಟಲೆ ರಾಮಣ್ಣನವರ ಬಗ್ಗೆ ಮಾತಾಡಿದ್ದೇವೆ.

ಕಥೆಯೆಂಬ ಹುಲಿಯ ಬೆನ್ನೇರಿದ ರಾಮಣ್ಣನನ್ನು ನಾನು ಎಟುಕಿಸಿಕೊಂಡಿದ್ದು ಅವರ ಕಥೆಗಳ ಮೂಲಕ ಮಾತ್ರವಲ್ಲ, ರಾಮಣ್ಣ ಒಬ್ಬ ಜಾನಪದ ಮಾಯಕಾರನೋ ಎಂಬಂತೆ ಹಲ ಜನರ ನಾಲಿಗೆಯಲ್ಲಿ ನಲಿದಾಡಿದ್ದನ್ನು ಕೇಳಿದ್ದೇನೆ.

ಬಹುಷಃ ಕನ್ನಡದ ಎಷ್ಟು ಕಥೆಗಾರರಿಗೆ ಆ ಭಾಗ್ಯವಿದೆಯೋ ಗೊತ್ತಿಲ್ಲ. ಬೆಸಗರಹಳ್ಳಿ ರಾಮಣ್ಣ ಓದುಗರಿಗೆ ಎಂದೂ ಬಹುವಚನದ ರಾಮಣ್ಣ ಆಗಿರಲೇ ಇಲ್ಲ. ತಮ್ಮ ಮನೆಯ ಒಬ್ಬ ನೆಂಟನೇನೋ ಎನ್ನುವಂತೆ ಒಳಗುಮಾಡಿಕೊಂಡುಬಿಟ್ಟಿದ್ದರು.

ಕೆ ವಿ ನಾರಾಯಣ್ ಅವರು ಬರೆದದ್ದು ಇನ್ನೂ ನನ್ನ ಮನಸ್ಸಲ್ಲಿತ್ತು. ‘ವೈದ್ಯರಾದ ರಾಮಣ್ಣನವರು ಸಾಮಾಜಿಕ ರೋಗಗಳನ್ನೂ ಪತ್ತೆ ಹಚ್ಚುತ್ತಿದ್ದರು. ಅದರ ಕೊಳೆತ ದೇಹವನ್ನು ಸೀಳಿ ನೋಡುವ ನೈಪುಣ್ಯವಿತ್ತು’.

ಅದು ನೆನಪಾದದ್ದು ಮಗ ರವಿಕಾಂತೇಗೌಡರು ಹೇಳಿದ ಒಂದು ಘಟನೆಯಿಂದ.

ಒಂದು ದಿನ ರಾಮಣ್ಣ ಮನೆಗೆ ಬಂದವರೇ ಮಾತನಾಡದೆ ಕುಳಿತರು. ಅವರ ಕಣ್ಣುಗಳಲ್ಲಿ ನೀರು ಉಕ್ಕುತ್ತಿತ್ತು.

ಮಲೇರಿಯಾ ಅಧಿಕಾರಿಯಾಗಿದ್ದ ರಾಮಣ್ಣ ಕೆ ಆರ್ ಪೇಟೆಯಿಂದ ಬರುತ್ತಿರುವಾಗ ಒಂದು ಹೊಲದಲ್ಲಿ ಉಳುಮೆ ನಡೆಯುತ್ತಿತ್ತು. ಆ ಕಡೆ ಕಣ್ಣು ಹಾಯಿಸಿದ ರಾಮಣ್ಣನವರಿಗೆ ಕಾದಿದ್ದದ್ದು ಒಂದು ದೊಡ್ಡ ಷಾಕ್.

ಅಲ್ಲಿ ರೈತನೊಬ್ಬ ಒಂದು ನೊಗಕ್ಕೆ ಎತ್ತನ್ನೂ, ಇನ್ನೊಂದು ನೊಗಕ್ಕೆ ತನ್ನ ಹೆಂಡತಿಯನ್ನೂ ಹೂಡಿ ಹೊಲ ಉಳುತ್ತಿದ್ದ. ಗ್ರಾಮೀಣ ಭಾರತದ ನೋವು ರಾಮಣ್ಣನ ಎದೆ ಹೊಲದೊಳಗೂ ಇಳಿಯುತ್ತಾ ಹೋಗಿದ್ದು ಹೀಗೆ.

ರವಿಕಾಂತೇಗೌಡರು ನೆನಪುಗಳನ್ನು ಬಿಚ್ಚುತ್ತಾ ಹೋದರು.

ನಾನು ಪಿಯುಸಿ ಪಾಸಾದಾಗ ನನ್ನ ಅಜ್ಜಿ ಒಂದು ಸಾವಿರ ರೂ ಕೊಟ್ಟರು. ಅಪ್ಪ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅಷ್ಟು ಹಣಕ್ಕೂ ಪುಸ್ತಕ ಕೊಡಿಸಿ ‘ನಾನು ಸಾಹಿತ್ಯದ ಸ್ಪರ್ಶಕ್ಕೆ ಸಿಗದೇ ಹೋಗಿದ್ದರೆ ಒಬ್ಬ ಕ್ರಿಮಿನಲ್ ಆಗಿರುತ್ತಿದ್ದೆ. ಸಾಹಿತ್ಯ ಮನುಷ್ಯನ ಘನತೆಯನ್ನು ಎತ್ತಿಹಿಡಿಯುತ್ತದೆ. ಅಷ್ಟೇ ಅಲ್ಲ, ಸದಾ ಅದನ್ನು ನೆನಪಿಸುತ್ತದೆ’ ಎಂದರು.

ಅವರ ಕಣ್ಣುಗಳನ್ನೇ ನಿಟ್ಟಿಸಿ ನೋಡಿದೆ. ನೆನಪುಗಳು ಹೊರಗೆ ಜಿಗಿಯಲು ಇನ್ನೂ ಕಾದಿದ್ದವು.

‘ನಾನು ಪೊಲೀಸ್ ಇಲಾಖೆಗೆ ಆಯ್ಕೆಯಾದಾಗ ಅಪ್ಪ ಒಂದೇ ಮಾತು ಹೇಳಿದರು. ನೋಡು ಫ್ಯಾನು, ಫೋನು ಇದ್ದಾಗ ಅದರ ಕೆಳಗೆ ಇದ್ದು ದೊಡ್ಡ ಮಾತನಾಡುವುದು ಸುಲಭ. ವ್ಯವಸ್ಥೆಯ ಆಚೆ ಇದ್ದು ದೊಡ್ಡ ಮಾತಾಡಬಹುದು. ಆದರೆ ಆ ವ್ಯವಸ್ಥೆಯ ಒಳಗಿದ್ದು ಏನು ಸುಧಾರಣೆ ಮಾಡುತ್ತೀಯಾ ಎನ್ನುವುದು ಮುಖ್ಯ’

ನೆನಪುಗಳು ಒಂದು ಕೆಲಿಡಿಯೋಸ್ಕೋಪ್ ನಂತೆ ಎಷ್ಟೊಂದು ಬಣ್ಣ ಬಣ್ಣ. ಅಷ್ಟೇ ಅಲ್ಲ ಅದನ್ನು ಹೊರಳಿಸಿದಷ್ಟೂ ಹೊಸ ಹೊಸ ಚಿತ್ತಾರ.
ಇಲ್ಲಿಯೂ ಹಾಗೇ ಆಯಿತು.

‘ಅಪ್ಪನ ತೋಳನ್ನು ಮಿಸ್ ಮಾಡಿಕೊಳ್ತೀರಾ’ ಎಂದೆ.

ರವಿಕಾಂತೇಗೌಡರು ಅದುವರೆಗೂ ಹಿಡಿದಿಟ್ಟಿದ್ದ ಕಣ್ಣೀರು ಅವರ ಮಾತನ್ನೇ ಕೇಳದೆ ಹೊರಗೆ ಜಿಗಿಯಿತು.

‘ಅಮ್ಮನಿಗೊಂದಾಸೆಯಿತ್ತು. ನಮ್ಮದೇ ಒಂದು ಸ್ವಂತದ ಗೂಡಿರಬೇಕು ಅಂತ. ಒಂದು ದಿನ ಅಪ್ಪ ಒಂದು ಪೆಟ್ಟಿಗೆ ಹೊತ್ತು ತಂದರು’.

‘ಅಪ್ಪ ಪೆಟ್ಟಿಗೆ ತೆಗೆದಾಗ ಅಲ್ಲಿದ್ದದ್ದು ಒಂದು ಹಿತ್ತಾಳೆಯ ಬಾಗಿಲ ಹಿಡಿ. ಇದೇನಿದು ಎನ್ನುವ ನಮ್ಮ ಪ್ರಶ್ನೆ ಅರ್ಥವಾದವರಂತೆ ಮನೆ ಕಟ್ತೀವಲ್ಲಾ ಒಂದೊಂದನ್ನೇ ಸಂಗ್ರಹ ಮಾಡೋಣ’ ಎಂದರು.

‘ಅಪ್ಪನನ್ನು ಮಣ್ಣು ಮಾಡುವಾಗ ಧೋ ಎಂದು ಮಳೆ ಸುರಿಯುತ್ತಿತ್ತು. ಆ ಮಳೆಯಲ್ಲಿ ನಮ್ಮ ಕಣ್ಣೀರೂ ಹರಿದು ಭೂಮಿ ಸೇರಿತು. ಅದು ನಮ್ಮ ಕಣ್ಣೀರು ಮಾತ್ರವಲ್ಲ ಅಲ್ಲಿಗೆ ಹಿಂಡುಗಟ್ಟಿ ಬಂದ ಎಲ್ಲರ ಕಣ್ಣೀರನ್ನೂ ಸೇರಿಸಿಕೊಂಡು ಮಳೆ ಭೂಮಿಗಿಳಿಯುತ್ತಿತ್ತು’ ಎಂದರು.

ನನಗೆ ರವಿಕಾಂತೇಗೌಡರನ್ನು ಆಗ ನಿಟ್ಟಿಸಿ ನೋಡಲು ಖಂಡಿತಾ ಸಾಧ್ಯವಾಗಲಿಲ್ಲ.

‘ಅಪ್ಪನನ್ನು ಮಣ್ಣು ಮಾಡಲು ಹೊರಟಾಗ ಮಟ ಮಟ ಬಿಸಿಲು. ಶವಯಾತ್ರೆ ಸಾಗುತ್ತಿದ್ದಾಗ ದಾರಿಹೋಕನೊಬ್ಬ ಓಡೋಡಿ ಬಂದು ರಾಮಣ್ಣನ ಮುಖ ಬಾಡಿ ಹೋಗುತ್ತೆ ಅಂತ ಹೇಳಿ ತನ್ನ ಬಳಿ ಇದ್ದ ಕೊಡೆಯನ್ನು ಅವರ ಮುಖಕ್ಕೆ ಹಿಡಿದ.

ಆ ಕೊಡೆ ಅಂದಿನಿಂದ ಇಂದಿಗೂ ನಮ್ಮ ಮನೆಯಲ್ಲಿದೆ, ಅಪ್ಪ ಹಾಗೂ ಜನರ ನಡುವಿನ ಪ್ರೀತಿಯ ಕೊಂಡಿಯಾಗಿ’ ಎಂದರು.

ಬೆಸಗರಹಳ್ಳಿ ರಾಮಣ್ಣ ಎನ್ನುವುದೇ ಒಂದು ಕೊಡೆ.

ಅದು ನೊಂದ ಮನಸ್ಸುಗಳು ಮತ್ತಷ್ಟು ಬೇಯದಿರಲಿ ಎಂದು ಮುಚ್ಚಟೆಯಿಂದ ಕಾಪಾಡಿದ ಕೊಡೆ. ಬೆಸಗರಹಳ್ಳಿ ರಾಮಣ್ಣ ಎಂಬ ಕೊಡೆ ಹಿಡಿದು ಹೊರಟವರೆಷ್ಟೋ.

ಮೊನ್ನೆ ಅಪ್ಪನ ದಿನಾಚರಣೆ. ಹಾಗಾಗಿ ರವಿಕಾಂತೇಗೌಡರ ಈ ಅಪ್ಪನ ಪ್ರೀತಿ ನೆನಪಾಯಿತು. ರವಿಕಾಂತೇಗೌಡರಿಗೆ ಮಾತ್ರ ನಿನ್ನೆಯೊಂದೇ ಅಪ್ಪನ ದಿನವಲ್ಲ. ಪ್ರತಿ ದಿನವೂ ಅಪ್ಪನ ದಿನ.

ತುಮಕೂರು 10 ಬಡಾವಣೆ ಸೀಲ್ಡ್ ಡೌನ್: ಬೆಂಗಳೂರಿನಿಂದ‌ ಹೊತ್ತು ತರುತ್ತಿದ್ದಾರೆ ಸೋಂಕು

Publicstory.in


ತುಮಕೂರು: ಜಿಲ್ಲೆಯಲ್ಲಿ ದಿನೇದಿನೇ ಕೊರೊನ ಸೋಂಕಿತರ ಸಂಖ್ಯೆ ಏರತೊಡಗಿದೆ. ಜುಲೈ 1ರಂದು ಒಂದೇ ಜಿಲ್ಲೆಯಲ್ಲಿ 26 ಪ್ರಕರಣಗಳು ದೃಢಪಟ್ಟಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಈವರೆವಿಗೂ ತುಮಕೂರು ನಗರದ ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಅಶೋಕನಗರ, ಗಾಂಧೀನಗರ, ಕೆ.ಆರ್.ಬಡಾವಣೆ, ಮರಳೂರು, ಪಿಎಚ್ ಕಾಲೋನಿ, ಅಮರಜ್ಯೋತಿ ನಗರ, ವಿನಾಯಕನಗರ, ಶಾಂತಿನಗರ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ 8 ಕೊರೊನ ಪ್ರಕರಣಗಳು ದಾಖಲಾಗಿವೆ. ಕುಣಿಗಲ್ ಎರಡನೇ ಸ್ಥಾನಕ್ಕೇರಿದೆ.

ಕುಣಿಗಲ್ ತಾಲೂಕಿನ ಹಳ್ಳಿಗಳಿಗೂ ಕೊರೊನ ಸೋಂಕು ಹರಡಿದೆ. 6 ಸೋಂಕಿನ ಪ್ರಕರಣಗಳು ವರದಿಯಾಗಿವೆ.ಕುಣಿಗಲ್ ಅಗ್ರಹಾರ, ಇಪ್ಪಾಡಿ,ಬಂಡಿಗೌಡನಪಾಳ್ಯದಲ್ಲಿ ಸೋಂಕು ಕಾಣಿಸಿದೆ.

ಮಧುಗಿರಿ ಮೂರನೇ ಸ್ಥಾನದಲ್ಲಿದೆ. ತಾಲೂಕಿನಲ್ಲಿ 4 ಪ್ರಕರಣಗಳು ದಾಖಲಾಗಿವೆ. ಪಾವಗಡ ತಾಲೂಕಿನಲ್ಲಿ 3 ಪ್ರಕರಣಗಳು, ಸಿರಾ, ಗುಬ್ಬಿ ತಾಲೂಕುಗಳಲ್ಲಿ ತಲಾ 2, ಚಿಕ್ಕನಾಯಕನಹಳ್ಳಿಯಲ್ಲಿ 1 ಸೋಂಕು ಪ್ರಕರಣ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಮತ್ತಷ್ಟು ಪ್ರಕರಣಗಳು ಕಂಡುಬರಬಹುದು. 2526 ಮಂದಿಯ ಫಲಿತಾಂಶಗಳು ಇನ್ನು ಬರಬೇಕಾಗಿದೆ. ಇದುವರೆಗೆ 83 ಕೋರೋನ ಪ್ರಕರಣಗಳು ಕ್ರಿಯಾಶೀಲವಾಗಿದ್ದು ಏಳು ಮಂದಿ ಮೃತಪಟ್ಟಿದ್ದಾರೆ.

ಇದೀಗ ಹೊಸ ಪ್ರದೇಶಗಳಲ್ಲೂ ಕೊರೊನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸೀಲ್ ಡೌನ್ ಪ್ರದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮಳೆಗಾಲದಲ್ಲಿ ಆರೋಗ್ಯ ಇಲಾಖೆ ಕೊರೊನ ಸೋಂಕನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಿಂದ ಪಾವಗಡ ತಾಲೂಕು, ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಿಗೆ ಬರುವವ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದು ಅಲ್ಲಿಂದ ಬರುವವರು ನೇರವಾಗಿ ಹಳ್ಳಿಗಳನ್ನು ಸೇರುತ್ತಿದ್ದಾರೆ. ಇದು ಗ್ರಾಮೀಣ ಪ್ರದೇಶದಲ್ಲೂ ಅತಂಕ ಹೆಚ್ಚಾಗಲು ಕಾರಣವಾಗಿದೆ.