Thursday, July 30, 2026
Google search engine
Home Blog Page 198

ವಾರ್ತಾ ಇಲಾಖೆಯ ಆಯುಕ್ತರಾಗಿ ಡಾ ಪಿ ಎಸ್ ಹರ್ಷ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಡಾ ಪಿ ಎಸ್ ಹರ್ಷ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಡಾ ಪಿ ಎಸ್ ಹರ್ಷ ಅವರು ಈ ಹಿಂದೆಯೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಆಯುಕ್ತರಾದ ಎಸ್ ಎನ್ ಸಿದ್ದರಾಮಪ್ಪ ಅವರು ಡಾ ಪಿ ಎಸ್ ಹರ್ಷ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಎಸ್ ಎನ್ ಸಿದ್ದರಾಮಪ್ಪ ಅವರು ಬೆಂಗಳೂರಿನ ಸಿ ಐ ಡಿ ಯ ಆರ್ಥಿಕ ಅಪರಾಧಗಳ ವಿಭಾಗದ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಡಾ ಪಿ.ಎಸ್ ಹರ್ಷ ಅವರು ತುಮಕೂರಿನ ಎಸ್ ಪಿ ಆಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು.

ಪಾವಗಡ: ವಾರಿಯರ್ಸ್ ಗೆ ಅಭಿನಂದನೆ

ಪಾವಗಡ  ತಾಲ್ಲೂಕಿನಾದ್ಯಂತ ಲಾಕ್ ಡೌನ್ ವೇಳೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದವರಿಗೆ  ನಮ್ಮ ಹಕ್ಕು ಸಂಸ್ಥೆ ವತಿಯಿಂದ ಸೋಮವಾರ  ಅಭಿನಂದನೆ ಸಲ್ಲಿಸಲಾಯಿತು.

ಪೌರ ಕಾರ್ಮಿಕರು ಹಾಗೂ ತಾಲ್ಲೂಕಿನ ರೊಪ್ಪ ಗ್ರಾಮ ಪಂಚಾಯಿತಿ ಜಾಡ ಮಾಲಿಗಳಿಗೆ ಪಡಿತರ ವಿತರಿಸಲಾಯಿತು.  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀರಾಮ ನಾಯ್ಕ, , ಕಾರ್ಯದರ್ಶಿ ಮೊಹಮದ್ ರಪೀಕ್, 313 ಅಲ್ ಅಮೀನ್ ಪದಾಧಿಕಾರಿಗಳಾದ ಯೂನಸ್, ಷಾರಿಕ್, ಮುದೀದ್ ಅವರನ್ನು ಸನ್ಮಾನಿಸಲಾಯಿತು.

ನಾಗಲ ಮಡಿಕೆ ಹೋಬಳಿಯಲ್ಲಿ ಚೆಕ್ ಪೋಸ್ಟ್ ನಲ್ಲಿ  ಕೆಲಸ ಮಾಡಿದ ಯುವಕರಿಗೆ ಮಾಸ್ಕ್, ಸ್ಯಾನಿಟೈಸರ್, ಪ್ರಮಾಣ ಪತ್ರ ವಿತರಿಸಿ ಪ್ರೋತ್ಸಾಹ ನೀಡಿದರು.

ರಾಜ್ಯ ಘಟಕದ  ಅಧ್ಯಕ್ಷ ರಜತ್ ಗೌಡ  ಮಾತನಾಡಿ, ಎಚ್.ಎಸ್.ಆರ್ ಬಡಾವಣೆಯ  ಇನ್ ಸ್ಪೆಕ್ಟರ್ ರಾಘವೆಂದ್ರ  ಅವರ ಹುಟ್ಟು ಹಬ್ಬವನ್ನು ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸುವ ಮುಖಾಂತರ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಸುಮಾರು 8 ಸಾವಿರ ಮಂದಿಗೆ ಪಡಿತರ ವಿತರಿಸಲಾಗಿದೆ. ಸಂಸ್ಥೆ ವತಿಯಿಂದ ತಾಲ್ಲೂಕಿನ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ನಿರ್ಗತಿಕರು, ಅಬಲರಿಗೆ ಸಂಸ್ಥೆ ಕೈಲಾದ ಸಹಾಯ, ಸಹಕಾರ ನೀಡುತ್ತಿದೆ. ಈ ಎಲ್ಲ ಸಮಾಜ ಮುಖಿ ಕೆಲಸಗಳು ಇನ್ ಸ್ಪೆಕ್ಟರ್ ರಾಘವೆಂದ್ರ  ಅವರ ಮಾರ್ಗದರ್ಶನದಲ್ಲಿ  ನಡೆಯುತ್ತಿದೆ  ಎಂದರು.

ತಾಲ್ಲೂಕು ಅಧ್ಯಕ್ಷ ಎ.ಗಿರೀಶ್, 313 ಅಲ್ ಮದದ್ ಸಂಸ್ಥೆಯ ವತಿಯಿಂದ ಸ್ಪೀಡ್ ಮಾರುತಿ ಸರ್ವಿಸ್ ಸ್ಟೇಷನ್ ಮಾಲೀಕ ಯೂನಸ್ ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಆಹಾರ ವಿತರಿಸಿದ್ದಾರೆ.   ಸ್ನೇಹಿತರ ಸಹಕಾರ ಪಡೆದು ಸ್ವಂತ ಖರ್ಚಿನಿಂದ ಪಟ್ಟಣದ ವಿವಿಧ ಬಡಾವಣೆಗಳಿಗೆ ಔಷಧಿ ಸಿಂಪಡಿಸಿದ್ದಾರೆ.   ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವವರನ್ನು ಸಂಘ ಗುರುತಿಸಿ ಸನ್ಮಾನಿಸುತ್ತಿದೆ.

ಗ್ರಾಮ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ಜೀವದ ಅಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹವರಿಗೆ ಕೃತಜ್ಞತೆ ಸಲ್ಲಿಸುವುದು ಎಲ್ಲರ ಕರ್ತವ್ಯ ಎಂದರು.

ಷಾದಿ ಮಹಲ್ ನಲ್ಲಿ ನಡೆದ  ಅಭಿನಂದನಾ ಕಾರ್ಯಕ್ರಮದಲ್ಲಿ, ಸಂಸ್ಥೆ ಕಾರ್ಯದರ್ಶಿ ಹರಿನಾಥ್,  ಇನಾಯತ್, ನಿಸಾರ್ ಅಹಮದ್,  ಷಕೀಲ್,  ಬಾಬು,  ಚಾಂದು,  ವಹೀದ್, ಆಕೀಬ್, ಸಾದಿಕ್ ಇತರರು ಉಪಸ್ಥಿತರಿದ್ದರು.

ರೈತರೊಂದಿಗೆ ಮುನಿಸು; ಕಾರಿನಲ್ಲಿ ಹೋಗಿ ಕುಳಿತ ಸಚಿವ ಮಾಧುಸ್ವಾಮಿ

ಚಿತ್ರ: ಕ್ಯಾತ್ಸಂದ್ರ ನರಸಿಂಹ

ತುಮಕೂರು; ಭೂಸುಧಾರಣಾ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರು ಮತ್ತು ಸಚಿವ ಜೆ.ಸಿ.

ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ತುಮಕೂರಿನಲ್ಲಿ ವರದಿಯಾಗಿದೆ.

ನಿಮ್ಮದೇ ಸರ್ಕಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ರೈತ ಮುಖಂಡರ ಪ್ರಶ್ನೆ ಸಚಿವರು ಕೆರಳಿದರು. ರೈತ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಲಾರದೆ ಸಚಿವರು ಬೇಸರಗೊಂಡು ಕಾರಿನಲ್ಲಿ ಹೋಗಿ ಕುಳಿತ ಘಟನೆ ಜರುಗಿದೆ.

ರೈತ ಮುಖಂಡರು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದಾಗ ಸಚಿವರು ಸಿಡಿಮಿಡಿ ವ್ಯಕ್ತಪಡಿಸಿದರು. ಆಗ ಮಾತಿಗೆ ಮಾತು ಬೆಳೆಯಿತು. ಪ್ರತಿಭಟನಾನಿರತ ರೈತರು ಸಚಿವರ ವಿರುದ್ಧ ಘೋಷಣೆ ಕೂಗಿದರು. ಒಂದು ಹಂತದಲ್ಲಿ ಪ್ರತಿಭಟನಾರರು ದಿಕ್ಕಾರ ಕೂಗುತ್ತಿದ್ದಂತೆಯೇ ಸಚಿವರು ಹೊರಟು ಹೋದರು. ಮತ್ತೆ ಸಚಿವರನ್ನು ಸಮಾಧಾನಪಡಿ ಅಧಿಕಾರಿಗಳು ಕರೆತಂದರು. ಸಚಿವರು ಹಠಕ್ಕೆ ಬಿದ್ದಂತೆ ತನ್ನ ಪಟ್ಟನ್ನು ಸಡಿಸಲೇ ಇಲ್ಲ. ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ಬಂದಾಗ ಈ ಘಟನೆ ಜರುಗಿದೆ.

ಭೂಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಕಾಯ್ದೆ ಕಲಂ 79 ಎ,ಬಿ,ಸಿ ಮತ್ತು 63 ಹಾಗೂ 80ನ್ನು ತೆಗೆದಹಾಕುವ ಕರಡು ಮಸೂದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ಹಲವು ರೈತ ಸಂಘಟನೆಗಳು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದವು.

ಯಾವುದೇ ತಿದ್ದುಪಡಿ ಅಥವಾ ಕಾಯ್ದೆ ರೂಪಿಸಲು ಸಾರ್ವಜನಿಕರ ಒಳಿತು ಅದರಲ್ಲಿ ಅಡಕವಾಗಿರಬೇಕು. ಅದನ್ನು ಜನಸಮುದಾಯ ಒಪ್ಪುವಂತಿರಬೇಕು, ಅದು ಸಮರ್ಥನೀಯವಾಗಿರಬೇಕು. ಅಂತಹ ಕಾಯ್ದೆ ಅಥವಾ ತಿದ್ದುಪಡಿ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಇಂತಹ ಚರ್ಚೆಗೆ ಅವಕಾಶ ನೀಡದೆ ಸರ್ಕಾರ ತರಲು ಉದ್ದೇಶಿಸಿರುವ ಭೂಸುಧಾರಣಾ ಕಾಯ್ದೆ ಬಾಲಿಶವಾಗಿರುತ್ತವೆ ಎಂದು ಪ್ರತಿಭಟನಾಕಾರರು ದೂರಿದರು.
ಕಲಂಗಳನ್ನು ರದ್ದುಪಡಿಸಿದರೆ ಭೂಸುಧಾರಣಾ ಕಾಯ್ದೆಯ ಅಸ್ತಿತ್ವವೇ ಇರುವುದಿಲ್ಲ. ಕಾಯ್ದೆಯ ಮೂಲ ಉದ್ದೇಶ ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಗೆ ಈ ತಿದ್ದುಪಡಿ ತಿಲಾಂಜಲಿ ಇಡಲಿದೆ. ಉಳ್ಳವರು ಮಾತ್ರ ಭೂಮಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸಣ್ಣ ಹಿಡುವಳಿ ರೈತರೇ ಜಾಸ್ತಿ ಇದ್ದು ಅವರ ಸಂಪೂರ್ಣ ಬದುಕು ಬೀದಿಗೆ ಬೀಳಲಿದೆ. ರೈತರ ಅಸ್ತಿತ್ವವೇ ಇಲ್ಲವಾಗಲಿದೆ.. ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ದಲಿತರು ಅತ್ಯಂತ ಸಂಕಷ್ಟಕ್ಕೆ ಈಡಾಗುತ್ತಾರೆ. ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯುತ್ತದೆ ಮತ್ತು ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎಂದು ಆರೋಪಿಸಿದರು.

ತಿದ್ದುಪಡಿಯಿಂದ ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟು ಬಿದ್ದು ಆಹಾರ ಭದ್ರತೆಯ ಹಕ್ಕು ನಾಶವಾಗುತ್ತದೆ. ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಹಕರ ಮೇಲೂ ಹೊಡೆತ ಬೀಳುತ್ತದೆ. ಬಂಡವಾಳಶಾಹಿಗಳು ಕುಲಾಂತರಿ ಬೀಜಗಳ ಬಳಕೆ, ರಾಸಾಯನಿಕ ಕೃಷಿ, ಮಾನೋಕಲ್ಚರ್‌ಗೆ ಒತ್ತು ನೀಡಿ ಇಡೀ ಪರಿಸರವೇ ನಾಶವಾಗುತ್ತದೆ. ಇದರಿಂದ ಆಹಾರ ಸಂಸ್ಕಂತಿಗೆ ಪೆಟ್ಟು ಬೀಳುತ್ತದೆ ಎಂದು ಆಪಾದಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಎಸ್ ಸಿಸಿ, ಎಐಕೆಎಸ್, ದಲಿತ ಸಂಘರ್ಷ ಸಮಿತಿಗಳು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ರೈತ ಮುಖಂಡ ಅಹವಾಲುಗಳನ್ನು ಆಲಿಸಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ದು ಹೇಳಿ ಬೇಸರದಿಂದಲೇ ಅಲ್ಲಿಂದ ತೆರಳಿದರು. ಇದೇ ವೇಳೆ ಸಂಸದ ಅವರಿಗೂ ಮನವಿ ಸಲ್ಲಿಸಲಾಯಿತು. ಪಾರ್ಲಿಮೆಂಟ್ ನಲ್ಲಿ ಚರ್ಚಿಸುತ್ತೇನೆ. ಪ್ರಧಾನಿಗಳ ಗಮನ ಸೆಳೆಯುತ್ತೇನೆ ಎಂದು ಬಸವರಾಜು ರೈತ ಮುಖಂಡರಿಗೆ ಭರವಸೆ ನೀಡಿದರು.

ಕರ್ನಾಟಕವನ್ನು ಕಾಡಿಸಿ ಹಾಕಿದ ಇನ್ನೊಂದು ‘ಅರೆ ಬೆತ್ತಲೆ ಸೇವೆ’

ಜಿ.ಎನ್.ಮೋಹನ್


‘Why not in page 1?’

ಬೆಂಗಳೂರಿನಿಂದ ಕರೆ ಮಾಡಿದ ಎಚ್.ಎನ್. ಆನಂದ ನನಗೆ ಈ ಪ್ರಶ್ನೆ ಕೇಳಿದರು.

ಗುಲ್ಬರ್ಗಾ ಬ್ಯೂರೋದಿಂದ ಆ ದಿನ ಒಂದು ಮಣ ನ್ಯೂಸ್ ಗಳನ್ನು ಹೊತ್ತುಹಾಕಿದ್ದೆ. ಹಾಗೆ ಕಳಿಸುವಾಗ ಇಂತಿಂಥ ಪೇಜ್ ಗೆ ಇಂಥದು ಬಂದರೆ ಚೆನ್ನ ಎಂದು ಸಜೆಸ್ಟ್ ಮಾಡುವುದೂ ನನ್ನ ‘ತಲೆ ಹರಟೆ’ಯಾಗಿತ್ತು.

ಹಾಗೆ ನಾನು ಒಳಪುಟಕ್ಕೆ ಬಳಸಿಕೊಳ್ಳಿ ಅಂತ ಸಜೆಸ್ಟ್ ಮಾಡಿದ್ದು ಅರೆಬೆತ್ತಲೆ ಸೇವೆಯ ಫೋಟೋವನ್ನು.

ಆಗಲೇ ಆನಂದ ಅವರು ನನಗೆ ಫೋನಾಯಿಸಿದ್ದು. ‘ಸುಧಾ’ದಲ್ಲಿ ಸಾಕಷ್ಟು ಕಾಲ ಸೇವೆ ಸಲ್ಲಿಸಿದ್ದ ಆನಂದ ಆಗ ‘ಪ್ರಜಾವಾಣಿ’ ಎಡಿಟೋರಿಯಲ್ ಡೆಸ್ಕ್ ಹ್ಯಾಂಡಲ್ ಮಾಡುತ್ತಿದ್ದರು.

‘ಇದು ಖಂಡಿತವಾಗಿಯೂ ಪೇಜ್ ಒನ್ ಫೋಟೋ, ಯಾಕೆ ಒಳಪುಟಕ್ಕೆ ಬಳಸಿ ಎನ್ನುತ್ತೀರಿ’ ಎಂದರು.

ನಾನು ಆ ದಿನದ ಇನ್ನಾವುದೋ ಸುದ್ದಿಯ ಬಾಲ ಹಿಡಿದು ಅದು ‘ಪೇಜ್ ಒನ್’ನಲ್ಲಿ ಬರಬೇಕು ಎಂದು ವಕಾಲತ್ತು ಮಾಡುತ್ತಿದ್ದೆ.

ಆನಂದರ ದನಿ ಹೆಚ್ಚು ದೃಢವಾದಾಗ ‘ಸುಧಾ’ದಲ್ಲಿದ್ದವರಿಗೆ ಏನು ಗೊತ್ತಾಗುತ್ತೆ ನ್ಯೂಸ್ ಇಂಪಾರ್ಟೆನ್ಸ್ ಅಂತ ಸುಮ್ಮನಾದೆ.

ನಾಗೇಶ್ ಪೊಳಲಿ ಕಾಲಲ್ಲಿ ಅದ್ಯಾವ ಮಚ್ಚೆ ಇತ್ತೋ ಗೊತ್ತಿಲ್ಲ. ಇದ್ದ ಅಷ್ಟಗಲದ ಗುಲ್ಬರ್ಗವನ್ನು ಆತ ಗರಗರ ಸುತ್ತುತ್ತಿದ್ದ.

ಹಾಗೆ ಒಮ್ಮೆ ಸೂಪರ್ ಮಾರ್ಕೆಟ್ಟಿನಲ್ಲಿ ಹಾದು ಬರುತ್ತಿರುವಾಗ ಅವನಿಗೆ ಕಂಡದ್ದು ಆ ಅರೆಬೆತ್ತಲೆ ಸೇವೆ ದೃಶ್ಯ.

ಅವರು ಯಾರೂ ಬಡವರಲ್ಲ. ಗೀತಾ ನಾಗಭೂಷಣರ ಕಥೆಗಳಲ್ಲಿ ಮೇಲಿಂದ ಮೇಲೆ ಬರುವ ಮಾಪುರ ತಾಯಿಯ ಮಕ್ಕಳೂ ಅಲ್ಲ.
ಸಾಕಷ್ಟು ಶ್ರೀಮಂತರ ಮನೆಯ ಹಿರಿಯ ಹೆಂಗಸೊಬ್ಬರು ಅರೆಬೆತ್ತಲಾಗಿದ್ದರು.

ಸೊಂಟಕ್ಕೆ ಬೇವಿನ ಸೊಪ್ಪಿನ ರಾಶಿಯನ್ನು ಮರೆಮಾಡಿಕೊಂಡು ಉಧೋ, ಉಧೋ ಹೇಳುತ್ತಾ ಸಾಗಿದ್ದರು. ಅವರ ಸುತ್ತ ಮಹಿಳೆಯರ ದೊಡ್ಡ ಗುಂಪು.

ನಾಗೇಶ್ ಪೊಳಲಿಯ ಕ್ಯಾಮೆರಾ ‘ಕ್ಲಿಕ್’ ಎಂದಿತು.

ಮಾರನೆಯ ದಿನ ‘ಪ್ರಜಾವಾಣಿ’ಯ ಮುಖಪುಟದಲ್ಲಿ ಅರೆ ಬೆತ್ತಲೆ ಫೋಟೋ ರಾರಾಜಿಸುತ್ತಿತ್ತು.

ಇನ್ನೂ ಕಣ್ಬಿಟ್ಟು ಹಾಸಿಗೆಯಿಂದ ಎದ್ದಿರಲಿಲ್ಲ. ಮನೆಯ ಫೋನ್ ಒಂದೇ ಸಮ ಕೂಗತೊಡಗಿತು. ‘ಎಲ್ಲಿ ಆದದ್ದು ಬೆತ್ತಲೆ ಸೇವೆ?’ ಎಂಬ ಪ್ರಶ್ನೆ. ಗುಲ್ಬರ್ಗಾ, ಬೆಂಗಳೂರು ಎಲ್ಲೆಡೆಯಿಂದ ಫೋನ್ ಗಳ ಸುರಿಮಳೆ.

ಪತ್ರಕರ್ತನಿಗೆ ಈ ಫೋನ್ ಗಳು ಆರನೆಯ ಪ್ರಜ್ಞೆಯನ್ನು ಎಚ್ಚರಿಸುವ ಸಾಧನ.

ಈ ಫೋಟೋ ಇವತ್ತು ಏನೋ ತಂದಿಡುತ್ತದೆ ಅಂತ ಅನ್ನಿಸಿಹೋಗಿತ್ತು,
ಕಚೇರಿಗೆ ಬಂದು ಇನ್ನೂ ಐದು ನಿಮಿಷ ಆಗಿರಲಿಲ್ಲ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ಫೋನ್ ಮಾಡಿದರು.

ಎಂದಿನಂತೆ ಚಾ ಆಯ್ತಾ, ಕಾಫಿ ಆಯ್ತಾ, ಮಾತಾಡಿ ಮುಗಿಸುವಾಗ ‘ಆ ಫೋಟೋ ಎಲ್ಲಿ ಸಿಕ್ತು’ ಅಂದರು, ಹೀಗೀಗೆ ಅಂದೆ. ನನಗೆ ಫೋಟೋ ಕಳಿಸ್ತೀರಾ ಅಂದ್ರು, ನೆಗೆಟೀವ್ ಇದೆಯಾ ಅಂದರು.

ಎಲ್ಲಕ್ಕೂ ‘ಆಗ್ಲಿ ನೋಡೋಣ. ಅದಕ್ಕೇನ್ರಿ’ ಅಂತಲೇ ನನ್ನ ಉತ್ತರ.

ಇಷ್ಟು ಆಗಿ ಮುಗಿಯುವ ಹೊತ್ತಿಗೆ ಬೆಂಗಳೂರಿಂದ ಇಂಟಲಿಜೆನ್ಸ್ ಡಿಪಾರ್ಟ್ ಮೆಂಟ್ ಕಾಲ್ ‘ಆ ಫೋಟೋ ಎಲ್ಲಿ ಸಿಕ್ತು’ ಅಂತ.

ಪಾಪ, ಕರ್ನಾಟಕ ಸರ್ಕಾರಕ್ಕೆ ಆಗಬಾರದ್ದು ಆಗಿಹೋಗಿತ್ತು. ಒಂದು ಫೋಟೋ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿ ಕೂರಿಸಿತ್ತು.

ಮಲ್ಲಿಕಾರ್ಜುನ ಖರ್ಗೆ ಆ ದಿನ ತಾನೇ ಗೃಹಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದರು.

ಆ ಸಂತೋಷದಿಂದಲೇ ಪತ್ರಕರ್ತರನ್ನು ಭೇಟಿ ಮಾಡಲು ಉತ್ಸುಕರಾಗಿದ್ದರು.

ಖರ್ಗೆ ಮುಖ ಕಂಡದ್ದೇ ಪತ್ರಕರ್ತರು ಇರಿಸುಮುರಿಸಾಗುವ ಪ್ರಶ್ನೆಗಳ ಬಾಣವನ್ನೇ ಬಿಡಲು ಶುರುಮಾಡಿದ್ದರು.

‘ನೀವು ಗೃಹಮಂತ್ರಿಗಳು, ನಿಮ್ಮ ತವರಿನಲ್ಲೇ ಈ ಸ್ಥಿತಿ ಇದೆ ಅಂದರೆ ರಾಜ್ಯದ ಪರಿಸ್ಥಿತಿ ಏನು’ ಅಂತ ಸೀದಾ ಅವರನ್ನೇ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟರು.

ಖರ್ಗೆ ಇದನ್ನು ಖಂಡಿತಾ ನಿರೀಕ್ಷಿಸಿರಲಿಲ್ಲ, ತಾನು ಗೃಹ ಸಚಿವನಾದ ಮೊದಲ ದಿನವೇ ಗುಲ್ಬರ್ಗಾದಲ್ಲಿ ಕಾನೂನೇ ಇಲ್ಲ ಎನ್ನುವಂತಾ ಪರಿಸ್ಥಿತಿ ಅವರಿಗೆ ತೀರಾ ಮುಜುಗರ ಉಂಟಮಾಡಿತ್ತು.

ಅದರ ಪರಿಣಾಮ ಆದದ್ದು ಪೊಲೀಸ್ ಇಲಾಖೆ ಮೇಲೆ.

ಪೊಲೀಸ್ ಇಲಾಖೆಗೆ ಪ್ರತಾಪ್ ರೆಡ್ಡಿ ಬಂದು ಇನ್ನೂ ನಾಲ್ಕು ದಿನ ಆಗಿರಲಿಲ್ಲ. ಈ ‘ಅರೆ ಬೆತ್ತಲೆ’ ಫೋಟೋ ಎರಗಿ ಬಂದಿತ್ತು.

ಡಿ.ಸಿ. ರಾಜಪ್ಪ ಎರಡನೇ ಫೋನ್ ಮಾಡುವ ಹೊತ್ತಿಗೆ ನಾನು ಅಲರ್ಟ್ ಆಗಿಬಿಟ್ಟಿದ್ದೆ.

ಯಾವುದೇ ಇನ್ವೆಸ್ಟಿಗೇಟೀವ್ ಜರ್ನಲಿಸ್ಟ್ ಮಾಡುವ ಹಾಗೆ ನನ್ನ ಬಳಿ ಇದ್ದ ಆ ನೆಗೆಟಿವ್ ಕಾಣದ ಸ್ಥಳಕ್ಕೆ ಎತ್ತಂಗಡಿಯಾಗಿಬಿಟ್ಟಿತ್ತು.

ಫೋನ್ ಮಾಡಿದವರಿಗೆ ಇದ್ದ ದಾಖಲೆಗಳನ್ನೇ ಹೊಸಕಿ ಹಾಕಿಬಿಡುವ ದಾಹ ಇದೆ ಎಂದು ಗೊತ್ತಾಗಿಹೋಗಿತ್ತು. ಪೊಲೀಸ್ ಇಲಾಖೆ ಆಚರಣೆಗಳನ್ನಲ್ಲ, ದಾಖಲೆಗಳನ್ನ ಹೊಸಕಿ ಹಾಕುತ್ತದೆ ಅನ್ನುವುದು ಗೊತ್ತಾಗಿ ಹೋಗಿತ್ತು.

ಸಂಜೆ ವೇಳೆಗೆ ಪೊಲೀಸ್ ಇಲಾಖೆಯ ಪ್ರೆಸ್ ಸ್ಟೇಟ್ಮೆಂಟ್ ಪ್ರತಿಯೊಂದು ಪತ್ರಿಕಾ ಕಚೇರಿಗೂ ಬಂದು ಬಿತ್ತು.

ಅದರಲ್ಲಿ ವಿಷಯ ನೇರವಾಗಿತ್ತು. ಗುಲ್ಬರ್ಗಾದಲ್ಲಿ ‘ಬೆತ್ತಲೆ ಸೇವೆ’ ಜರುಗಿಲ್ಲ.

ಬೆಳ್ಳಂಬೆಳಗ್ಗೆ ‘ಪ್ರಜಾವಾಣಿ’ಯಲ್ಲಿ ಫೋಟೋ ಬಂದು, ಅದು ಗೃಹ ಸಚಿವರನ್ನೇ ಅಲ್ಲಾಡಿಸಿಹಾಕಿದ್ದರಿಂದ ಬೇರೆ ಪತ್ರಿಕೆಗಳಿಗೆ ಮುಜುಗರವಾಗಿತ್ತು. ನಮ್ಮ ಪತ್ರಿಕೆಗೆ ಈ ವಿಷಯ ಯಾಕೆ ಸಿಗಲಿಲ್ಲ ಅಂತ.

ಹಾಗಾಗಿ ಗುಲ್ಬರ್ಗಾದ ಎಲ್ಲಾ ವರದಿಗಾರರನ್ನು ಅವರವರ ಸಂಪಾದಕರು ಫೋನ್ ಮಾಡಿ ಗುದ್ದಿ ಹಾಕಿದ್ದರು. ಈ ಕಾರಣಕ್ಕಾಗಿ ಇಂಥದ್ದೊಂದು ಆಗೇ ಇಲ್ಲ ಎಂದು ಸಾಧಿಸಿ ಮುಖ ಉಳಿಸಿಕೊಳ್ಳುವ ಹಟ ಪತ್ರಕರ್ತರಿಗೂ ಎದ್ದು ನಿಂತಿತು.

ಇದಕ್ಕೆ ಸರಿಯಾಗಿ ಸಾಥ್ ಕೊಟ್ಟಿದ್ದು ಪೊಲೀಸರ ಪ್ರೆಸ್ ನೋಟ್. ಮಾರನೆಯ ದಿನ ಎಲ್ಲಾ ಪತ್ರಿಕೆಗಳು ‘ಬೆತ್ತಲೆ ಸೇವೆ ಜರುಗಿಯೇ ಇಲ್ಲ’ ಎಂದು ಸುದ್ದಿ ಪ್ರಕಟಿಸಿ ಸಂಭ್ರಮಿಸಿದರು.

ಆ ಮಧ್ಯೆ ಜಿಲ್ಲಾ ಎಸ್.ಪಿ. ಪ್ರತಾಪ್ ರೆಡ್ಡಿ ಒಂದು ಪ್ರೆಸ್ ಕಾನ್ಫರೆನ್ಸ್ ಕರೆದರು.

ಸ್ವಲ್ಪದಿನದ ಹಿಂದೆಯಷ್ಟೇ ಅವರು ಬೇಟನ್ ಪಡೆದ ಫೋಟೋವನ್ನು ದೊಡ್ಡದಾಗಿ ಪ್ರಕಟಿಸಿಸಿದಾಗ ಅವರಿಂದ ‘ಬ್ಯೂಟಿಫುಲ್’ ಎನಿಸಿಕೊಂಡಿದ್ದ ಪತ್ರಿಕೆ ಈಗ ಗುಲ್ಬರ್ಗಾ ಖಡಕ್ ಮೆಣಸಿನಕಾಯಿ ಆಗಿಹೋಗಿತ್ತು.

ಪತ್ರಿಕಾ ಗೋಷ್ಠಿ ಆರಂಭಿಸಿದ ಅವರು ಹೇಳಿದ ಮೊದಲ ವಾಕ್ಯವೇ ‘ಗುಲ್ಬರ್ಗಾದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಎಲ್ಲಿಯೂ ಬೆತ್ತಲೆ ಸೇವೆ ಜರುಗಿಲ್ಲ’ ಅಂತ.

Reading between the lines ಅನ್ನೋದನ್ನ ಪತ್ರಕರ್ತರಿಗೆ ಹೇಳಿಕೊಡಬೇಕೆ?

ಬೆಳಿಗ್ಗೆ ಪೇಪರ್ ಗಳಲ್ಲಿ ಬೆತ್ತಲೆ ಸೇವೆ ಆಗಿಲ್ಲ ಅನ್ನುವ ಸುದ್ದಿ, ಈಗಲೂ ಅದೇ ಮಾತು.

ತಕ್ಷಣ ಅಲ್ಲಿಯೇ ಅವರ ಮಾತನ್ನು ತುಂಡರಿಸಿದ ನಾನು ‘ಅಂದರೆ ಅರೆಬೆತ್ತಲೆ ಸೇವೆ ಆಗಿದೆ ಅಂತಲೇ?’ ಅಂತ ಕೇಳಿದೆ.

ಅವರಿಗೂ ರೇಗಿಹೋಯಿತು, ಸರಿ ದೊಡ್ಡ ದನಿಯಲ್ಲಿ ನಾನು, ಅವರು ವಾದಕ್ಕೆ ಅಣಿಯಾಗುತ್ತಿದ್ದೆವು.

‘ಸೀ ಯು ಟುಮಾರೋ ಇನ್ ಪ್ರಜಾವಾಣಿ’ ಅಂತ ಮನಸ್ಸಿನಲ್ಲಿ ಅಂದುಕೊಂಡವನೇ ಹೊರಬಿದ್ದೆ.

ನಾನೂ, ನಾಗೇಶ್ ಪೊಳಲಿ ಇಬ್ಬರೂ ಚದುರಂಗದ ಕಾಯಿಗಳನ್ನು ನಡೆಸಲು ಸಿದ್ಧರಾಗಿದ್ದೆವು.

ಪೊಳಲಿ ಬರುವ ಮುನ್ನ ‘ಪ್ರಜಾವಾಣಿ’ಗೆ ಫೋಟೋಗ್ರಾಫರ್ ಆಗಿದ್ದ ಭವಾನಿಸಿಂಗ್, ನಮಗೆ ಆಗೀಗ ಫೋಟೋ ಕೊಡುತ್ತಿದ್ದ ಬಿಲ್ಲು ಎಲ್ಲರನ್ನು ಸೇರಿಸಿ ಒಂದೊಂದು ಕಡೆಗೆ ಕಳಿಸಿದ್ದಾಯಿತು.

ನಾನು ಪೊಳಲಿ ಅಪ್ಪನಕೆರೆಯ ಪಕ್ಕದಲ್ಲಿರುವ ದೇವಸ್ಥಾನದ ಬಳಿ ಗೊತ್ತಾಗದಂತೆ ಅಡಗಿ ಕುಳಿತೆವು.

ಗಂಟೆಗಳು ಕಳೆದುಹೋದವು. ಇನ್ನೇನು ಗಂಟು ಮೂಟೆ ಕಟ್ಟಬೇಕು ಅನ್ನುವಾಗ ಬಂತು ನೋಡಿ ಅರೆಬೆತ್ತಲೆ ಮೆರವಣಿಗೆ.

ಮೆರವಣಿಗೆ ಮುಂಭಾಗದಲ್ಲಿ ಒಂದು ಆಡು. ಮೆರವಣಿಗೆ ಸೀದಾ ದೇವಸ್ಥಾನಕ್ಕೆ.

ಪೂಜೆ ಪುನಸ್ಕಾರ ಆದಮೇಲೆ ನಾವು ನೋಡ ನೋಡುತ್ತಿರುವಂತೆಯೇ ‘ಜಮಾಬಂಧಿಗಮಲ್ದಾರ ಬರಲು ನಮ್ಮಲೊಬ್ಬನನು ಕತ್ತ ಕಚ್ಚಕ್ಕೆಂದು ಕತ್ತರಿಸಿ…’ ನಿಸಾರ್ ಕವಿತೆಯ ಸಾಲಿನಂತೆ ಕಚಕ್ಕೆಂದು ಕತ್ತರಿಸಿದರು.

ಪೊಳಲಿ ಅಂದರೆ ಪೊಳಲಿಯೇ. ಫೋಟೋ ಹೇಗೆ ತೆಗೆದನೋ,. ಮತ್ತೆ ನನ್ನ ಮುಂದೆ ಒಂದು ಮಣ ಫೋಟೋ ಹರಡಿದ್ದ.

‘ಬೆತ್ತಲೆಸೇವೆ ನಡೆದಿಲ್ಲ’ ಅಂತ ಪತ್ರಿಕಾ ಗೋಷ್ಠಿ ನಡೆಸಿದ ದಿನವೇ ಇನ್ನೊಂದು ಸುದ್ದಿ ಬೆಂಗಳೂರಿನತ್ತ ಓಡುತ್ತಿತ್ತು. ‘ಮತ್ತೆ ಅರೆಬೆತ್ತಲೆ ಸೇವೆ, ಜೊತೆಗೆ ಪ್ರಾಣಿಹತ್ಯೆ ಕೂಡಾ..’ ಅನ್ನುವ ಹೆಡ್ ಲೈನ್ ನೊಂದಿಗೆ.

ಸುದ್ದಿ ಕಳಿಸಿ ಆಗ ಮುಖ್ಯಸ್ಥರಾಗಿದ್ದ ಶ್ರೀಧರ್ ಆಚಾರ್ ಅವರಿಗೆ ಫೋನ್ ಮಾಡಿದೆ, ‘ಸಾರ್ ಪೇಜ್ ಒನ್ ಗೆ ತಗೊಳ್ಳಿ ಸಾರ್’ ಅಂತ.

‘ಪೇಜ್ ಒನ್ ಗೆ ಹೋಗೋದು ಏನಿದೇರೀ ಅದರಲ್ಲಿ..’ ಅಂದರು.

ನನಗೆ ಪತ್ರಿಕೋದ್ಯಮದ ಎರಡು ಪಾಠಗಳು ಗೊತ್ತಾದವು. ಸುದ್ದಿಯ ಬೆಲೆ ಹೇಗೆ ತಿಳಿಯಬೇಕು ಅಂತ ಒಬ್ಬರು ಕಲಿಸಿದ್ದರು, ಇನ್ನೊಬ್ಬರು ಸುದ್ದಿಯ ಬೆಲೆ ಹೇಗೆ ಕಳೆಯಬೇಕು ಅಂತ.

ಒಳಪುಟಗಳಲ್ಲಿ ಸುದ್ದಿಯಂತೂ ಬಂತು.

ಈ ಬಾರಿ ಪೊಲೀಸ್ ಇಲಾಖೆ ಕೆಲಸ ಮಾಡಿತ್ತು. ದೇವಸ್ಥಾನದ ಎದುರು ಪೊಲೀಸ್ ವ್ಯಾನ್, ಗೋಡೆಯ ಮೇಲೆ ‘ಇಲ್ಲಿ ಸೇವೆಗೆ ಅವಕಾಶವಿಲ್ಲ’ ಎಂಬ ಬರಹ.

ಅಷ್ಟೇ ಅಲ್ಲ, ಅಕ್ಕಪಕ್ಕ ನಡೆಯುತ್ತಿದ್ದ ಪ್ರತೀ ಮದುವೆ ಮನೆ, ಮಂಟಪಕ್ಕೆ ಹೋದ ಪೊಲೀಸರು ಸೇವೆ ಮಾಡುವಂತಿಲ್ಲ ಎಂದು ತಾಕೀತು ಮಾಡಿ ಬಂದಿದ್ದರು.

ವಿಷಯ ಇಷ್ಟೇ, ಮನೆಯಲ್ಲಿ ದೊಡ್ಡಮಗನ ಮದುವೆ ಆದಾಗ ಆತನ ತಾಯಿ ಅರೆಬೆತ್ತಲೆ ಸೇವೆ ಮಾಡಬೇಕು. ಇಲ್ಲಿ ಬಡವ-ಶ್ರೀಮಂತ, ಹಳ್ಳಿ-ಪಟ್ಟಣ ಅಂತ ಭೇದ ಭಾವವೇ ಇಲ್ಲ.

ಹಾಗಾಗಿಯೇ ಮದುವೆ ಸೀಸನ್ ಬಂದರೆ ಸಾಕು ನಗರದ ಅಷ್ಟೂ ರಸ್ತೆಗಳಲ್ಲಿ ಯಾವಾಗ ಬೇಕೆಂದರೆ ಶಹನಾಯಿ ವಾದ್ಯದ ಸಮೇತ ಮೆರವಣಿಗೆ ಹೊರಟೇಬಿಡುತ್ತಿತ್ತು.

ಪತ್ರಕರ್ತನಾದವನಿಗೆ ಮುಖ್ಯವಾಗಿ ಬೇಕಾದದ್ದೇ ಚಾಲೆಂಜ್. ಅಂತಹ ಚಾಲೆಂಜ್ ನಮಗಂತೂ ಸುಖಾಸುಮ್ಮನೆ ಒದಗಿಬಂದಿತ್ತು.

ಸರಿ ಅಪ್ಪನಕೆರೆ ದೇವಸ್ಥಾನ ಕೈಬಿಟ್ಟ ನಾನು, ಪೊಳಲಿ ಗುಲ್ಬರ್ಗಾದ ಇತರ ದೇವಸ್ಥಾನಗಳತ್ತ ಹೊರಟೆವು.

ಅರೆ! ಒಂದಲ್ಲಾ, ಎರಡಲ್ಲಾ ‘ಕಾನೂನು ಸುವ್ಯವಸ್ಥೆ ಸರಿ ಇರುವ’ ನಗರದಲ್ಲಿ ಎಷ್ಟೊಂದು ಮೆರವಣಿಗೆ, ಎಲ್ಲವೂ ಕ್ಯಾಮೆರಾದಲ್ಲಿ ದಾಖಲಾಯಿತು.

ಹತ್ತು ಬೇಕಿದ್ದ ಕಡೆ ಇಪ್ಪತ್ತು, ಇಪ್ಪತ್ತು ಬೇಕಿದ್ದ ಕಡೆ ಎರಡು ರೋಲ್ ಫಿಲಂಗಳು.

ನನ್ನ ಗುಲ್ಬರ್ಗಾ ಅನುಭವಗಳನ್ನೆಲ್ಲ ಒಟ್ಟಿಗೆ ಸೇರಿಸ ಬೇಕೆಂದಿದ್ದೇನೆ. ಹೆಸರು ‘ಡೇಟ್ ಲೈನ್ ಗುಲ್ಬರ್ಗಾ’ ಅಂತ…
—–

ಬೆತ್ತಲೆ ಸೇವೆಯ ವಿರುದ್ಧ ಬರೆದ, ಸಮಾಜದಲ್ಲಿ ದನಿ ಇಲ್ಲದವರನ್ನು ಹೊಸಕಿ ಹಾಕುತ್ತಿದ್ದ ಅಸಂಖ್ಯಾತ ಆಚರಣೆಗಳತ್ತ ನಾಡಿನ ಪ್ರಜ್ಞಾವಂತರ ಗಮನ ಸೆಳೆದ ಆ ತಾಯಿ ಗೀತಾ ನಾಗಭೂಷಣ ಇನ್ನಿಲ್ಲ.

ಅವರ ‘ಮಾಪುರ ತಾಯಿಯ ಮಕ್ಕಳು’ ‘ಹಸಿಮಾಂಸ ಮತ್ತು ಹದ್ದುಗಳು’ ಕೃತಿಗಳೇ ನನಗೆ ಕಲಬುರ್ಗಿ ಜಿಲ್ಲೆಯಲ್ಲಿ ಒಂದು ದಂಧೆಯಂತೆ ಬೆಳೆದುನಿಂತಿದ್ದ ಬೆತ್ತಲೆ ಸೇವೆಯ ಬಗ್ಗೆ ಗಮನ ಹರಿಸಲು ಕಾರಣವಾಗಿದ್ದು.


ಈ ಬರಹ ಗೀತಾ ನಾಗಭೂಷಣ ಅವರಿಗೆ…


ಚಿತ್ರ: ಕಲಬುರ್ಗಿ ರೈಲು ನಿಲ್ದಾಣದಲ್ಲಿ ನನ್ನ ಪತ್ರಿಕೋದ್ಯಮ ಸಾಹಸಗಳಿಗೆ ಸದಾ ಬೆಂಗಾವಲಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರೊಂದಿಗೆ..

ಮದುವೆಗೆ ಹೋದ 15 ಜನರಿಗೆ ಕೊರೊನಾ

ಭಿಲ್ವಾರ: ಮದುವೆಯಲ್ಲಿ ಪಾಲ್ಗೊಂಡಿದ್ದ 15 ಜನರಿಗೆ ಕೊರೊನಾ ಸೋಂಕು ತಗುಲಿರುವುದು ರಾಜಾಸ್ಥಾನದ ಭಿಲ್ವಾರದ‌ ಭವಡಾ ಮೊಹಲ್ಲಾದಲ್ಲಿ ನಡೆದಿದೆ.ಮದುವೆಯಲ್ಲಿ 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿದ್ದರು.

ಮದುವೆ ಸಮಾರಂಭಕ್ಕೆ 50 ಜನರಷ್ಟೇ ಭಾಗವಹಿಸಲು ಆಹ್ವಾನ ನೀಡಿದ್ದರು. ಹೆಚ್ಚು ಮಂದಿ ಅತಿಥಿಗಳನ್ನು ಆಹ್ವಾನಿಸಿದ ಕುಟುಂಬಕ್ಕೆ ಜಿಲ್ಲಾಡಳಿತ 6 ಲಕ್ಷ ಹೆಚ್ಚು ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ತುಮಕೂರಿನಲ್ಲಿ 93ಕ್ಕೇರಿದ ಸೋಂಕು, ಒಂದೇ ದಿನ 18 ಮಂದಿಗೆ ಸೋಂಕು

ತುಮಕೂರು: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 18 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ತುಮಕೂರಿನಲ್ಲಿ 7 ಮಂದಿ, ಪಾವಗಡದಲ್ಲಿ 5 ಗುಬ್ಬಿ 1, ಕೊರಟಗೆರೆ 2, ಮಧುಗಿರಿ 2, ತಿಪಟೂರಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ಪಾಸಿಟಿವ್ ಬಂದಿರುವ ಸಂಖ್ಯೆ 93ಕ್ಕೆ ಏರಿದೆ. ಇದೂವರೆಗೆ 39 ಜನ ಗುಣಮುಖರಾಗಿದ್ದಾರೆ, 5 ಜನ ಸಾವನ್ನಪ್ಪಿದ್ದು, 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಥ ಅಧಿಕಾರಿಗಳು ಸಾವಿರವಾಗಲಿ….

ತುಳಸೀತನಯ


ಅವರ ಹುಟ್ಟು ಹಬ್ಬಕ್ಕೆ ಇಂತ ಅಧಿಕಾರಿಗಳು ಸಾವಿರ, ಸಾವಿರ ಪಟ್ಟು ಬೆಳೆಯುತ್ತಾ ಹೋಗಲಿ ಎಂದು ಹಾರೈಸುವುದೇ ಸರಿ. ಅದರಲ್ಲೂ ಜನಪರವಾದ ಪೊಲೀಸರು ಇದ್ದಲ್ಲಿ ನೋವುಂಡವರಿಗೆ ಸಮಾಜ ಎನ್ನುವುದು ಸ್ವರ್ಗವಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಂದ್ರಶೇಖರ್ ಅವರನ್ನು ಅಣ್ಣಾ ಎನ್ನುವ ಜನರೇ ಹೆಚ್ಚು. ಅವರು ಕೆಲಸ ಮಾಡಿದ ಠಾಣೆಗಳ ಸರಹದ್ದಿನಲ್ಲಿ ವಿಚಾರಿಸುತ್ತಾ ಹೋದರೇ ಅವರಿಗೆ ಕೃತಜ್ಞತೆ ಸಲ್ಲಿಸುವವರ ಸಂಖ್ಯೆ ನೂರು, ಇನ್ನೂರು ಹೀಗೆ ಏರುತ್ತಾ ಹೋಗುತ್ತದೆ.

ರಾಮನಗರದ ಎಸಿಬಿ ಅಧಿಕಾರಿಯಾಗಿರುವ ಚಂದ್ರಶೇಖರ್ ಅವರ ಹುಟ್ಟುಹಬ್ಬ ಇಂದು. ಸರಳ ಸಜ್ಜನಿಕೆಯ ಪೊಲೀಸರು ಇವರು.

ನನಗಿನ್ನೂ ನೆನಪಿದೆ.‌ಕ್ಷಣ ಯಾಮಾರಿದರೆ ನಾನು ಚಿರತೆಯ ಬಾಯಿಗೆ ಆಹಾರವಾಗಬೇಕಿತ್ತು. ಕ್ಷಣಮಾತ್ರದಲ್ಲಿ ಅವರ ಪ್ರಾಣ ಲೆಕ್ಕಿಸದೇ ಚಿರತೆಯ ಬಾಯಿಗೆ ಕೈ ಹಾಕಿ ಹಿಡಿದೇ ಬಿಟ್ಟರು. ಅದರ ಕುತ್ತಿಗೆಯನ್ನು ಅವರ ಅದುಮಿ ಹಿಡಿದಿಟ್ಟರು.

ನನಗೆ ಗೊತ್ತಿದೆ, ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಅವರೊಂದಿಗೆ ಆ ದರೋಡೆಕೋರರನ್ನು ಹಿಡಿದಿದ್ದ ತಂಡದಲ್ಲಿ ನಾನು ಇದ್ದೆ. ಅವರೊಂದಿಗೆ ಇದ್ದ ಎಲ್ಲರಿಗೂ ಪ್ರಶಸ್ತಿ ಕೊಡುವುದಾದರೆ ಮಾತ್ರ ಪ್ರಶಸ್ತಿಗೆ ಅರ್ಜಿ ಹಾಕುವೆ ಎಂದು ಆಗಿನ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಹೇಳಿಯೇ ಬಿಟ್ಟರು. ಅವರು ಪ್ರಶಸ್ತಿ ಗೊಡವೆಗೆ ಹೋಗಲಿಲ್ಲ ಎಂದು ನೆನೆಯುತ್ತಾರೆ ಅವರೊಂದಿಗೆ‌ ಕೆಲಸ ಮಾಡಿದ್ದ ಕೊರಟಗೆರೆ ಠಾಣೆಯಲ್ಲಿ ಚಂದ್ರಶೇಖರ್ ಅವರೊಂದಿಗೆ ಸಿಬ್ಬಂದಿ.

ನಮಗೆ ದಿಕ್ಕೆ ತೋಚದಂತಾಗಿತ್ತು. ಸುಳ್ಳು ದೂರಿನಲ್ಲಿ ನನ್ನ ಮಗನನ್ನು ಜೈಲಿಗೆ ತಳ್ಳಲಾಗಿತ್ತು. ವಕೀಲರಿಗೆ ಕೊಡಲು ಹಣವೂ ಇರಲಿಲ್ಲ. ವಕೀಲರೊಬ್ಬರ ಹೆಸರು ಹೇಳಿದರು. ಜೈಲಿನಲ್ಲಿದ್ದ‌ ಮಗ ಬಿಡುಗಡೆಯಾದ.

ಅದು ಪೊಲೀಸರ ಭವನ ಚಿಲುಮೆ. ಸಾವಿರಾರು ಜನರು ಕಿಕ್ಕಿರಿದು ದುಂಬಿದ್ದರು. ಅವರು ವೇದಿಕೆಗೆ ಬರುವಾಗ ಹೂವಿನ ಸುರಿಮಳೆ.‌ಯಾವ ಸಿನಿಮಾ ನಾಯಕನಿಗೂ ಇಲ್ಲದಷ್ಟು.

ಒಬ್ಬ ಅಧಿಕಾರಿ ಬಗ್ಗೆ ಇಷ್ಟು ಹೇಳಿದರೆ ಸಾಕಲ್ಲವೇ? ನನ್ನನ್ನು ತಮ್ಮನಂತೆಯೇ ಪ್ರೀಯಿಯಿಂದ ನೋಡಿಕೊಳ್ಳುವ ಅವರಿಗೆ ಜನ್ಮ ದಿನದ ಶುಭಾಶಯಗಳು.

ಅಡಿಕೆ, ಪರಂಗಿ, ಮಾವು, ದಾಳಿಂಬೆಗೆ ಬೆಳೆ ವಿಮೆ

0

ತುರುವೇಕೆರೆ: ತಾಲ್ಲೂಕಿನಲ್ಲಿ ಹವಾಮಾನ ಆಧಾರಿತ ತೋಟಗಾರಿಕಾ ಬೆಳೆ ಬೆಳೆಯುವ ರೈತರು ಬೆಳೆವಿಮೆ ಮಾಡಿಸಬೇಕೆಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಟಿ.ಆಂಜನೇಯರೆಡ್ಡಿ ತಿಳಿಸಿದ್ದಾರೆ.ತಾಲ್ಲೂಕಿನ ಅಡಿಕೆ, ಪರಂಗಿ, ಮಾವು, ಮತ್ತು ದಾಳಿಂಬೆ, ಬೆಳೆಗಳನ್ನು ಬೆಳೆಯುವ ರೈತರು ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲ ಪಡೆಯುವ ಹಾಗು ಬೆಳೆಸಾಲ ಪಡೆಯದ ರೈತರೂ ಮೇಲೆ ಸೂಚಿಸಿದ ನಿರ್ದಿಷ್ಟ ಬೆಳೆಗಳಿಗೆ ವಿಮೆ ಮಾಡಿಸಬಹುದು.ರೈತರು ಅಗತ್ಯ ದಾಖಲೆಗಳೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಗಳಲ್ಲಿ ಬೆಳೆ ವಿಮೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ. ಅಡಿಕೆ, ದಾಳಿಂಬೆ, ಪರಂಗಿ ಮತ್ತು ಮಾವು ಬೆಳೆಗಳ ವಿಮೆಗೆ ಹೆಸರು ನೋಂದಾಯಿಸಲು ಜೂನ್ 30 ಕೊನೆಯ ದಿನವಾಗಿದ್ದರೆ; ಮಾವು ಬೆಳೆಗೆ ಜುಲೈ 31 ಕೊನೆಯ ದಿನವಾಗಿರುತ್ತದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆವೊತ್ತು ಭಿಕ್ಷೆ ಬೇಡಿದವ ಇಂದು ಉದ್ಯಮಿ

0

ಸಣ್ಣದರಲ್ಲಿ ಭಿಕ್ಷೆ ಬೇಡಿಕೊಂಡು ಓದು ಪೂರೈಸಿದವರು ಇವರು. ಇಂದು ತಿಪಟೂರಿನಲ್ಲಿ ಯಶಸ್ವಿ ಉದ್ಯಮಿ. ಕಷ್ಟದಿಂದಲೇ ಮೇಲೆ ಬರಬಹುದು, ಛಲವೇ ಮುಖ್ಯ ಎಂಬುದಕ್ಕೆ ತಿಪಟೂರು ಕೃಷ್ಣ ಉದಾಹರಣೆಯಾಗಿ ನಿಂತಿದ್ದಾರೆ. ಯುವಕರು ಉದ್ಯಮಪತಿಗಳಾಗಲು ಅವರಿಗೆ ತರಬೇತಿ, ಸಹಾಯ ನೀಡುವ ಕೆಲಸದಲ್ಲೂ ಅವರು ಸಕ್ರಿಯರು. ಅವರ ಮಾತುಗಳಲ್ಲಿ ಓದಿ

ಇವತ್ತು ರವಿವಾರ..
ಏನೋ ಒಂದು ತರಹದ ಸಮಾಧಾನದ ದಿನ.
ನಮ್ಮ ಫ್ಯಾಕ್ಟರಿಗೆ ಬೆಳಿಗ್ಗೆ ಒಂದು ವಿಸಿಟ್ ಕೊಟ್ಟೆ..

ಒಬ್ಬನೇ.. ಕಳೆದ ಭಾನುವಾರ ರಜಾ ಅನುಭವಿಸದೇ ಹೊಲದ ಕಡೆ ಹೋಗಿದ್ದೆ. ಇವತ್ತು, ಇಲ್ಲಿ.

ಆಗೇ ಒಬ್ಬನೇ ಕುಳಿತಾಗ ಇಡೀ ಬದುಕು ಕಣ್ಣಾ ಮುಂದೆ ಬರ ತೊಡಗಿತು…

ದೇಶದ ತುಂಬಾ, ಅಲ್ಲಾ ಜಗದ ತುಂಬಾ ಕರೋನಾ ಆವರಿಸಿಕೊಳ್ಳುವ ಹೊತ್ತಲ್ಲಿ ನಾನು ನನ್ನ ಆರೋಗ್ಯದ ಬಗ್ಗೆ ಗಮನ ಹರಿಸಿದೆ.
ಹೌದು, ಎಷ್ಟೊಂದು ಆರೋಗ್ಯವಾಗಿದ್ದೇನೆ.
52 ಆದರೂ ಅದೇ 30 ರ ಉತ್ಸಾಹ, ಹುಮ್ಮಸ್ಸು, ಹಠ, ಛಲ, ಸಾಧನೆಯೆಡೆಗೆ ಮನದ ತುಡಿತ.

ಸ್ವಾಭಿಮಾನ,ಸ್ವಾವಲಂಬಿತನ,ಶ್ರಮ, ಸತತ ಪ್ರಯತ್ನ…
ಹೌದು ನಾನು ಬದುಕಿನಲ್ಲಿ ಒಂದು ಪ್ರಿನ್ಸಿಪಲ್ ಇಟ್ಟುಕೊಂಡು, ಜೀವನ ನಡೆಸಿಕೊಂಡು ಬಂದವನು.

ಹೇಗೆಲ್ಲಾ ನಿರರ್ಥಕ ಬದುಕು ನಡೆಸುವುದಕ್ಕಿಂತ, ಹೀಗೆ ಬದುಕ ಬೇಕು ನಡೆಸಬೇಕು ಎಂದು ಹಠಕ್ಕೆ ಬಿದ್ದವರು.
ನಿಧಾನವಾಗಿ ಆದರೂ ನಾನು ಸಾಧಿಸಿ, ತೃಪ್ತಿ ಜೊತೆಗೆ ಆತ್ಮ ಸಂತೋಷ ಕಂಡವನು.

ನನ್ನ ಏಳನೇ ವಯಸ್ಸಿಂದಲೇ ಕಷ್ಟದ ಸರಮಾಲೆ ಹೊದ್ದು, ಗೆದ್ದವನು..
ಹಸಿದಾಗ ಬಿಕ್ಷೆ ಬೇಡಿ ತಿಂದವನು, ಹೋಟೆಲ್‌ನಲ್ಲಿ ಎಂಜಲು ಲೋಟ ತೊಳೆದವನು, ಕಾಡಿನಿಂದ ಕಟ್ಟಿಗೆ ಹೊತ್ತವನು, ಎಮ್ಮೆ, ದನ ಕಾಯ್ದವನು, ಇಟ್ಟಿಗೆ, ಮರಳು ಹೊತ್ತವನು, ದಿನಸಿ ಅಂಗಡಿಯಲ್ಲಿ, ಕೈಗಾರಿಕೆಗಳಲ್ಲಿ ಹೀಗೆ ಹತ್ತು ಹಲವು ಕೆಲಸ ಮಾಡಿಕೊಂಡು ಹಸಿವ ನೀಗಿಸಿಕೊಳ್ಳುವ ಜೊತೆಗೆ ವಿದ್ಯಾ ದಾಹ ಪೋರೈಸಿಕೊಂಡವನು.

ದುಡಿಮೆಗಾಗಿ ಊರೂರು ಸುತ್ತಿದವನು. ಬದುಕ ಗೆದ್ದವನು.
ಯಾರಿಗೂ ಮೋಸ, ವಂಚನೆ ಮಾಡದೇ ಛಲದಿಂದ ಬದುಕ ಕಟ್ಟಿಕೊಂಡವನು.

ಹೆದರಿಸುವವರಿಗೆ ಹೆದರಿಸಿ, ಪ್ರೀತಿಸುವವರಿಗೆ ಜೀವವನ್ನು ಒತ್ತೆ ಇಟ್ಟು, ಗೆಳೆತನಕ್ಕೆ ಗೆಳೆತನ, ವಿರೋಧಕ್ಕೆ ವಿರೋಧದಲ್ಲೇ ಧಂ ನಿಂದ ಬದುಕನ್ನು ರಕ್ಷಣಾತ್ಮಕವಾಗಿ ಕಟ್ಟಿಕೊಂಡವನು.

ಸಮಾಜದ ಸೇವೆಗೆ ಮುಂದಾಗಿ, ಕುಟುಂಬಕ್ಕೂ ಆಸರೆಯಾಗಿ, ಮಕ್ಕಳ ದಡ ಮುಟ್ಟಿಸಿ ಮಾದರಿಯಾದವನು.

ಕಲೆ, ಸಾಹಿತ್ಯ, ನಾಟಕ, ಸಿನಿಮಾ, ಚಳುವಳಿ, ಹೋರಾಟ, ಸತ್ಯಾಗ್ರಹ, ಮಾದ್ಯಮ, ವ್ಯಾಪಾರ, ಉದ್ಯಮ ಕ್ಷೇತ್ರಗಳಲ್ಲಿ ಎಡತಾಕಿ ಬಂದವನು.
ಸುಮಾರು 35ಕ್ಕೂ ಹೆಚ್ಚು ಕಸುಬುಗಳನ್ನು ಮಾಡಿ, ಅನುಭವ ಪಡೆದವನು.

ಎಂತಹ ಕಷ್ಟಕ್ಕೂ ಸವಾಲಿಗೆ ಬಗ್ಗದೇ ಬಂಡೆಯ ಜೀವನ ನಡೆಸಿದವನು.
ಕುಡುಕ, ಪೋಲಿ, ಒರಟನಾಗಿ ಸಮಾಜದ ಒರಟುತನಕ್ಕೆ ತಡೆಹೊಡ್ಡಿದವನು.

ಅಹಂಕಾರಿಗಳ ಬಡಿದು ಜೈಲಿಗೂ ಹೋದವನು. ದುಷ್ಟರ, ನಿಷ್ಠರ ಗೆಳತನ ಹೊಂದಿದ್ದವನು. ಅತ್ಯಂತ ಕಷ್ಟಕರ ಜೀವನ, ಅತ್ಯಂತ ಸುಖ, ಭೋಗಗಳನ್ನೂ ಅನುಭವಿಸಿದವನು.

ನಾನಾ ಘಟನೆ, ಷಡ್ಯಂತ್ರ, ಪಿತೂರಿ, ವೈರತ್ವ,ಅಪಘಾತಗಳಿಂದ ಅನೇಕ ಬಾರಿ ಸಾವನ್ನು ಗೆದ್ದವನು. ನೂರಾರು ಸ್ನೇಹಿತರ ಕಳೆದುಕೊಂಡು, ಸಾವಿರಾರು ಸ್ನೇಹಿತರ ಪಡೆದುಕೊಂಡವನು.
ಇಡೀ ಜೀವನದ ಕಥೆ ಮೂರು ಸಾವಿರ ಪುಟಗಳಾಗಿವೆ.

ಆದರೂ ಈಗ ಆರೋಗ್ಯಕರ, ಆನಂದಕರ ಜೀವನ ನಡೆಸುತ್ತಿರೋದು ನನ್ನೊಳಗೇ ಅಚ್ಚರಿ ಮೂಡಿಸಿದೆ.
ಇಡೀ ಬದುಕಿನ ಪುಟಗಳನ್ನು ನಿಮ್ಮ ಮುಂದೆ ತೆರೆದಿಟ್ಟು, ಆತ್ಮವಿಶ್ವಾಸದಿಂದ ಬದುಕ ನಡೆಸುವ ಬಗ್ಗೆ ಅನುಭವ ಹಂಚಿಕೊಳ್ಳುವ ಮಹದಾಸೆ ಇದೆ.

ಜಿಗುಪ್ಸೆ, ನಿರುತ್ಸಾಹ, ಸಾಲುಗಟ್ಟಿದ ಸೊಲುಗಳ ಮೆಟ್ಟಿ ನಿಂತ ನನಗೆ ಪ್ರಶಂಸೆ, ಗೌರವ, ಮನ್ನಣೆಗಳು ಸಿಕ್ಕಿ ಜೀವನ ಸಾರ್ಥಕಗೊಳಿಸಿದೆ.

ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ, ಕಾರಣವೂ ಅಲ್ಲ. ಅದು ಬದುಕಿನ ಪಲಾಯನದ ನೆಪ ಮಾತ್ರ. ಇಂತಹ ಅನೇಕ ಸಂದರ್ಭಗಳನ್ನು ಎದುರಿಸಿ ಗೆದ್ದಾಗ, ಕಾರಣರಾದವರು ಉದುರಿ ಹೋಗಿದ್ದರು.

ಶ್ರೇಷ್ಠ ಬದುಕನ್ನು ಶ್ರೇಷ್ಠವಾಗಿಯೇ ಕಳೆಯಬೇಕು
ಮಾದರಿಯಾಗಿ ಮನುಷ್ಯರಂತೆ..

ಭಾನುವಾರದ ಶುಭಾಶಯಗಳು
ಮತ್ತೊಮ್ಮೆ ಬಿಡುವಾದಾಗ, ಇನ್ನೊಂದಿಷ್ಟು
ನಿಮ್ಮವ
ತಿಪಟೂರುಕೃಷ್ಣ
9448416550

ಷೇಕ್ಸ್ ಪಿಯರ್ ನನ್ನೊಳಗೂ ಬಂದ..

ಜಿ.ಎನ್.ಮೋಹನ್


ಆತ ಥೇಟ್ ಹಾಗೇ.. ನನ್ನ ಮನಸ್ಸಿನೊಳಗೆ ನುಗ್ಗಿದ- ಕಳ್ಳನ ಹಾಗೆ.

‘ಷೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ನೋಡುತ್ತಾ ಕುಳಿತಿದ್ದ ನನಗೆ ಅಂದಿನವರೆಗೂ ಬಿಡಿಸಲಾಗದ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಹೋಯಿತು

ಷೇಕ್ಸ್ ಪಿಯರ್, ಮಹಾನ್ ನಾಟಕಕಾರ ಷೇಕ್ಸ್ ಪಿಯರ್ ಸ್ತ್ರಾಟ್ ಫೋರ್ಡ್ ಗೆ ಬರುತ್ತಾನೆ ಎನ್ನುವ ಊರ ಘೋಷಣೆಯ ಮಧ್ಯೆ ಆತ ಬರುತ್ತಾನೆ.

ಎಲ್ಲರೂ ಬಾಜಾಭಜಂತ್ರಿ ಸಮೇತ, ತಲೆಗೆ ತುರಾಯಿ ಸಿಕ್ಕಿಸಿಕೊಂಡು ಕೋಟು ಬೂಟಿನ ಶೇಕ್ಸ್ ಪಿಯರ್ ನ ಆಗಮನವನ್ನು ಕಾಯುತ್ತಿದ್ದರೆ, ಆತ ಆಹೋರಾತ್ರಿಯಲ್ಲಿ ಗೋಡೆ ಹಾರಿ, ಹಿಂಬಾಗಿಲ ಮೂಲಕ ಬರುತ್ತಾನೆ.. ಥೇಟ್ ಕಳ್ಳನ ಹಾಗೆ..

ನಟರಾಜ ಹುಳಿಯಾರ್ ಬರೆದ, ನಟರಾಜ ಹೊನ್ನವಳ್ಳಿ ಕಟ್ಟಿಕೊಟ್ಟ ‘ಷೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ನೋಡುತ್ತಾ ನೋಡುತ್ತಾ ನನಗೂ ಗೊತ್ತಾಗಿ ಹೋಯಿತು, ಯಸ್, ಆತ ನಿಜಕ್ಕೂ ಕಳ್ಳನಂತೆಯೇ ನನ್ನೊಳಗೆ ಬಂದ.

ಷೇಕ್ಸ್ ಪಿಯರ್ ಎಂದಾಕ್ಷಣ ನನಗೆ ಆ ರಂಗದ ಮೇಲಿನ ಕತ್ತಲೆ ಬೆಳಕುಗಳೇ ನೆನಪಾಗುತ್ತದೆ.

‘ಒಳ್ಳೆ ಸಮಯ, ಒಳ್ಳೆ ಸಮಯ, ಒಳ್ಳೆ ಸಮಯವೂ.. ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವೂ..’ ಎನ್ನುವ ಸದಾರಮೆಯ ಕಳ್ಳನ ಹಾಗೆ ಷೇಕ್ಸ್ ಪಿಯರ್ ರಂಗದ ಮೇಲಿನ ಕತ್ತಲೆಯಲ್ಲೇ ನನ್ನೊಳಗೆ ನುಗ್ಗಿಬಿಟ್ಟ.

ನನಗಿನ್ನೂ ಚೆನ್ನಾಗಿ ನೆನಪಿದೆ. ಪ್ರಸನ್ನ ಮ್ಯಾಕ್ ಬೆತ್ ನಿರ್ದೇಶಿಸುವುದರೊಂದಿಗೆ ಆ ಕಳ್ಳ ಷೇಕ್ಸ್ ಪಿಯರ್ ನನ್ನು ನನ್ನೊಳಗೆ ಆಳವಾಗಿ ಕೂರಿಸಿಬಿಟ್ಟರು.

ಹಾಗೆ ಬಂದವನು ಯಾಕೆ ನನ್ನೊಳಗೆ ಪ್ರಶ್ನೆಗಳನ್ನು ಬಿತ್ತುತ್ತಾ ಹೋದ? ಸಂಭ್ರಮಕ್ಕೂ, ನೋವಿಗೂ, ವಿಷಾದಕ್ಕೂ, ರಾಗಕ್ಕೂ, ದ್ವೇಷಕ್ಕೂ ಎಲ್ಲಕ್ಕೂ ಆತ ಒದಗಿ ಬಂದುಬಿಟ್ಟ.

‘ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ…’ ನನ್ನೊಳಗೆ ಷೇಕ್ಸ್ ಪಿಯರ್ ನಾಟಕದ ಸಾಲುಗಳು ಸಿ ಅಶ್ವತ್ ಹಾಡಿದ ಭಾವಗೀತೆಗಳೇನೋ ಎನ್ನುವಂತೆ ಮತ್ತೆ ಮತ್ತೆ ಸುಳಿಯುತ್ತಲೇ ಇರುತ್ತದೆ.

ರಾಮಚಂದ್ರ ದೇವ ಮಾಡಿದ ಅನುವಾದಕ್ಕೆ ಅಂತ ಶಕ್ತಿಯಿತ್ತೋ ಅಥವಾ ಪ್ರಸನ್ನ ಅದನ್ನು ನಾಟುವ ಹಾಗೆ ಆಡಿಸಿದರೋ, ಇಲ್ಲಾ ಜಿ ಕೆ ಗೋವಿಂದ ರಾವ್, ಪ್ರೇಮಾ ಕಾರಂತ್ ಮ್ಯಾಕ್ ಬೆತ್- ಲೇಡಿ ಮ್ಯಾಕ್ ಬೆತ್ ಆಗಿ ನಮ್ಮೊಳಗೇ ಷೇಕ್ಸ್ ಪಿಯರ್ ನನ್ನು ಎಳೆದುಕೊಂಡು ಬಂದು ಬಿಟ್ಟರೋ ಗೊತ್ತಿಲ್ಲ.

ಆದರೆ ಆ ಮ್ಯಾಕ್ ಬೆತ್, ಆ ಷೇಕ್ಸ್ ಪಿಯರ್ ಇನ್ನೂ ಸುತ್ತುತ್ತಲೇ ಇದ್ದಾರೆ.

‘ಗಿರಿಗಿಟ್ಟಿ ಗಿಟ್ಟಿಗರ ಆದಲ್ಲಿ ಮುಗಿದಲ್ಲಿ ಗೆದ್ದಲ್ಲಿ ಸೋತಲ್ಲಿ ಕದನದಲ್ಲಿ.. ಎಲ್ಲಿ.. ಮ್ಯಾಕ್ ಬೆತ್ ಬರುವಲ್ಲಿ’ ಎನ್ನುವ ಜಕ್ಕಿಣಿಯರ ಆರ್ಭಟ ನೆನಪಾಗುತ್ತದೆ.

ಮ್ಯಾಕ್ ಬೆತ್ ನೀಡಿದ ಔತಣ ಕೂಟದಲ್ಲಿ ಊಟ ಮಾಡುತ್ತಿದ್ದ ಅತಿಥಿಗಳ ಮಧ್ಯದಿಂದ ಎದ್ದು ನಿಲ್ಲುವ ಪ್ರೇತ ನೆನಪಾಗುತ್ತದೆ.

ಬರ್ನಂ ವನಕ್ಕೆ ಕೈ ಕಾಲು ಬರಿಸಿದ್ದು ನೆನಪಾಗುತ್ತದೆ.

ಆ ಲೇಡಿ ಮ್ಯಾಕ್ ಬೆತ್ ಕೈಯಲ್ಲಿ ದೀಪದ ಬುಟ್ಟಿ ಹಿಡಿದು ನಿದ್ದೆಯಲ್ಲೇ ನಡೆಯುವ ಘಟನೆ ನೆನಪಾಗುತ್ತದೆ.

ಯಾಕೆ ಆ ಷೇಕ್ಸ್ ಪಿಯರ್ ನನ್ನೊಳಗೆ ಇಷ್ಟೊಂದು ನಿಡುಸುಯ್ಯುವಿಕೆಯನ್ನು ಬಿಟ್ಟು ಹೋದ?

‘ಗತ್ತು ಗಮ್ಮತ್ತಿನಲ್ಲಿ ರೆಕ್ಕೆ ಬಡಿಯುತ್ತಿದ್ದ ಹಕ್ಕಿಯನ್ನು ಹೆಗ್ಗಣ ತಿನ್ನುವ ಸಾಮಾನ್ಯ ಗೂಗೆ ಹೊಡೆದು ಕೊಂದಿತ್ತು’ ಎನ್ನುವ ಮಾತು ನನಗೆ ಎಚ್ಚರದ ದೀಪವಾಗಿ ಉಳಿದಿದ್ದು ಹೇಗೆ?

‘ಈ ಅರೇಬಿಯಾದ ಸುಗಂಧ ದ್ರವ್ಯಗಳೆಲ್ಲವೂ ನನ್ನ ಕೈಯಿನ ರಕ್ತದ ಕಲೆಗಳನ್ನು ಹೋಗಲಾಡಿಸಲಾರವೇ?’ ಎಂದು ಲೇಡಿ ಮ್ಯಾಕ್ ಬೆತ್ ಕತ್ತಲ ಆ ರಾತ್ರಿಯಲ್ಲಿ ಆಕ್ರಂದನದ ರಾಗ ತೆಗೆದಾಗ ಅವಳಿರಲಿ, ನಾನೂ ನನ್ನ ಕೈಯನ್ನು ನೋಡಿಕೊಂಡದ್ದಾದರೂ ಏಕೆ?

ಹೌದು ಹಾಗಾಗಿಯೇ ನಾನು ಆ ಷೇಕ್ಸ್ ಪಿಯರ್ ನನ್ನು ಎಳೆದುಕೊಂಡು ನನ್ನೆದುರು ನಿಲ್ಲಿಸಿಕೊಳ್ಳಬೇಕಾಗಿ ಬಂದದ್ದು. ಕೇಳಬೇಕಾಗಿ ಬಂದದ್ದು ಅವನಿಗೆ ಪ್ರಶ್ನೆಗಳನ್ನು.

‘ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ
ಇನ್ನಾರಿಗೂ ಅಲ್ಲ
ನೇರ ಷೇಕ್ಸ್ ಪಿಯರನಿಗೇ;

ಏಕೆ ಹಾಗಾಯಿತು
ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ?
ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ
ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ
ಮ್ಯಾಕ್ ಬೆತ್ ನಿಗೆ ಏಕೆ ಮುಖಾಮುಖಿಯಾಗಿಸಿದೆ
ಆ ಮೂರು ಜಕ್ಕಿಣಿಯರನ್ನು?

ಜೋಡಿಯಾಗಿಸಿದೆ ಇನ್ನಷ್ಟು ಮತ್ತಷ್ಟು
ಆಕಾಂಕ್ಷೆಗಳ ನೀರೆರೆವ
ಆ ಲೇಡಿ ಮ್ಯಾಕ್ ಬೆತ್ ಳನ್ನು?”

ನನ್ನ ‘ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ’ ಕವನ ಸಂಕಲನ ಎದ್ದು ಬಂದದ್ದೆ ಆ ಷೇಕ್ಸ್ ಪಿಯರ್ ನ ನಾಟಕಗಳಿಂದ, ಆತನ ಕಳ್ಳಾಟಗಳಿಂದ.

ನನಗೋ ಷೇಕ್ಸ್ ಪಿಯರನಿಗೆ ಕೇಳಬೇಕಾದ ಪ್ರಶ್ನೆಗಳ ಪಟ್ಟಿ ಮುಗಿಯಲೇ ಇಲ್ಲ.

ಷೇಕ್ಸ್ ಪಿಯರ್ ಸಿಗುವ ಎಲ್ಲಾ ಕಡೆ ಹುಡುಕುತ್ತಲೇ ಹೋದೆ. ಬಿ ವಿ ಕಾರಂತರು ಮ್ಯಾಕ್ ಬೆತ್ ಅನ್ನು ಯಕ್ಷಗಾನಕ್ಕೆ ಅಳವಡಿಸಿ ‘ಬರ್ನಂ ವನ’ವಾಗಿಸಿದ್ದರು. ಧಾರವಾಡದ ಬಯಲು ರಂಗದಲ್ಲಿ ಪ್ರದರ್ಶನವಿತ್ತು. ಅಲ್ಲಿಗೂ ಹೋದೆ.

ಕುರೋಸೋವನ ಬೆನ್ನತ್ತಿ ಆತನ ‘ಥ್ರೋನ್ ಆಫ್ ಬ್ಲಡ್’ ನೋಡಿದೆ. ಇತ್ತೀಚಿನ ‘ಮಕ್ಬೂಲ್’ ಸಿನೆಮಾ ಸಹಾ ನೋಡಿದೆ.

ಬಸವಲಿಂಗಯ್ಯ ನಿರ್ದೇಶಿಸಿದ ‘ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ನಾಟಕ ನೋಡಿದ್ದೂ ಆಯ್ತು. ಉಹೂ ತೃಪ್ತಿಯಾಗಲಿಲ್ಲ. ನೇರಾನೇರ ಅವನು ಹುಟ್ಟಿದ ಸ್ಥಳವನ್ನೇ ಹುಡುಕಿ ಲಂಡನ್ ಗೆ ಹಾರಿದೆ.

ನನ್ನಲ್ಲಿದ್ದ ಪ್ರಶ್ನೆಗಳ ಬತ್ತಳಿಕೆ ಬರಿದಾಗಲೇ ಇಲ್ಲ.

‘ಪ್ರಶ್ನೆ ಇರುವುದು ಷೇಕ್ಸ್ ಪಿಯರನಿಗೆ
ಇರಲೇ ಇಲ್ಲದೇ ಇರಲೇ ಎನ್ನುವ
ರಾಜಕುಮಾರನನ್ನು ಸೃಷ್ಟಿ ಮಾಡಿದವನಿಗೆ
ಗತ್ತಿನಲ್ಲಿ ಹಾರುತ್ತಿದ್ದ ಹಕ್ಕಿಯನ್ನು
ಒಂದು ಸಾಮಾನ್ಯ ಗೂಗೆಯಿಂದ
ಹೊಡೆದು ಕೊಂದವನಿಗೆ
ಬರ್ನಂ ವನಕ್ಕೂ ಕೈ ಕಾಲು ಬರಿಸಿದವನಿಗೆ
ಊಟದ ಬಟ್ಟಲುಗಳ ನಡುವೆ
ಎದ್ದು ನಿಲ್ಲುವ ಪ್ರೇತಗಳನ್ನು ಸೃಷ್ಟಿಸಿದವನಿಗೆ
ಕಪ್ಪಿಗೂ ಬಿಳುಪಿಗೂ ನಡುವೆ
ಒಂದು ಗೋಡೆ ಎಬ್ಬಿಸಿದವನಿಗೆ
ಸುಂದರ ಕನಸುಗಳ ಮಧ್ಯೆಯೂ
ಒಂದೊಂದು ನಿಟ್ಟುಸಿರು ಹೆಣೆದವನಿಗೆ..”

ಕಳ್ಳನಂತೆ ಒಳಗೆ ಇಣುಕಿದ ಆ ಷೇಕ್ಸ್ ಪಿಯರ್ ನನ್ನನ್ನು ತೊರೆದಂತೂ ಹೋಗಿಲ್ಲ. ಎಲ್ಲೆಲ್ಲೂ ಸಿಗುತ್ತಾ ಕಳ್ಳಾಟವಾಡುತ್ತಲೇ ಇದ್ದಾನೆ.

ಮೊನ್ನೆ ಮೊನ್ನೆಯೇನೋ ‘ರಂಗಶಂಕರ’ದ ಅಂಗಳಕ್ಕೆ ಹೆಜ್ಜೆ ಇಟ್ಟರೆ ಒಂದು ಟ್ರಾಲಿಯ ಮೇಲೆ ಗೊಂಬೆಯಾಗಿ ಕುಳಿತಿದ್ದ, ಇನ್ನೊಂದು ದಿನ ಅದೇ ಅಂಗಳದಲ್ಲಿ ನೋಡಿದರೆ ಶೇಕ್ಸ್ ಪಿಯರ್ ಲ್ಯಾಂಪ್ ಗಳನ್ನ ಮಾರಾಟ ಮಾಡುತ್ತಿದ್ದರು.

ಲಂಡನ್ ನ ಮೇಡಂ ತುಸಾಡ್ ಸೃಷ್ಟಿಸಿದ ಮೇಣದ ಗುಹೆ ಹೊಕ್ಕರೆ ಅಲ್ಲಿ ಇದೇ ಬೊಕ್ಕ ತಲೆಯ ಶೇಕ್ಸ್ ಪಿಯರ್ ತಲೆ ಕುಣಿಸುತ್ತಾ ಏನನ್ನೋ ಬರೆಯುತ್ತಿದ್ದ.

ನನ್ನ ಹಾಗೂ ಆತನ ಜೂಟಾಟ ನಡೆಯುತ್ತಲೇ ಇದೆ.

ಇದೇ ನಟರಾಜ ಹೊನ್ನವಳ್ಳಿ ‘ಪ್ರಮಾಣುವಿಗೆ ಪ್ರಮಾಣು’ಎನ್ನುವ ನಾಟಕ ನಿರ್ದೇಶಿಸಿದ್ದರು. ಷೇಕ್ಸ್ ಪಿಯರ್ ನ ‘ಮೆಷರ್ ಫಾರ್ ಮೆಷರ್ ನಾಟಕ.

ನಾಟಕ ಆರಂಭವಾದದ್ದೇ ನನ್ನ ಕವಿತೆಯ ಮೂಲಕ. ನಟರು ಪ್ರಶ್ನೆಗಳನ್ನು ಷೇಕ್ಸ್ ಪಿಯರ್ ನತ್ತ ತೂರುತ್ತಲೇ ಅವನ ಪಾತ್ರಗಳಾಗಿ ಹೋದರು. ಥೇಟ್ ನನ್ನಂತೇ..

ಅಟ್ಲಾಂಟದ ಸಿ ಎನ್ ಎನ್ ಚಾನಲ್ ನ ಅಷ್ಟುದ್ದ ಮಹಡಿಯನ್ನು ಏರಿ ಇನ್ನೇನು ಒಳಗೆ ಕಾಲಿಡುವವನಿದ್ದೆ.

ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ನನ್ನನ್ನು ನೋಡಿದವನೇ ‘ಏ, ಯು ಶೇಕ್ಸ್ ಪಿಯರ್’ ಎಂದು ನನ್ನತ್ತ ದಾಪುಗಾಲು ಹಾಕುತ್ತಾ ಬಂದ.

ಆ ವೇಳೆಗಾಗಲೇ ನನ್ನ ಹೆಸರು ಅಮೆರಿಕನ್ನರ ನಾಲಿಗೆಗೆ ಸಿಕ್ಕು ಹತ್ತವತಾರ ತಾಳಿ ಸಾಕಷ್ಟು ದಿನವಾಗಿ ಹೋಗಿತ್ತು.

ಹುಬ್ಬೇರಿಸಿ ನಿಂತ ನಾನು ಅವನ ಮುಂದೆ ನನ್ನ ಸಿ ಎನ್ ಎನ್ ಕಾರ್ಡ್ ಹಿಡಿದೆ.

ಆತ ಅದರತ್ತ ಕಣ್ಣೆತ್ತಿಯೂ ನೋಡದೆ ನನ್ನ ಕೈನಲ್ಲಿದ್ದ ನೋಟ್ ಬುಕ್ ನತ್ತ ಕೈ ತೋರಿಸಿದ.

ಹಾಂ, ಅಲ್ಲಿತ್ತು ಷೇಕ್ಸ್ ಪಿಯರ್ ಚಿತ್ರ.

ಅದು ಖಾಸಗಿ ಕಂಪನಿಯೊಂದು ಶೇಕ್ಸ್ ಪಿಯರ್ ಥೀಮ್ ಮೇಲೆ ರಚಿಸಿದ ನೋಟ್ ಬುಕ್.

ಮುಖಪುಟದಲ್ಲಿ ಆತನ ಚಿತ್ರ. ಒಳಗೆ ಆತನ ನಾಟಕದ ನೂರಾರು ಸಾಲುಗಳು.

ಆ ಸೆಕ್ಯುರಿಟಿ ಗಾರ್ಡ್ ನನ್ನಿಂದ ಆ ನೋಟ್ ಬುಕ್ ಪಡೆದವನೇ ತನಗೆ ಬೇಕಾದ ಕೋಟ್ ಹುಡುಕಲು ಹಾಳೆ ತಿರುವತೊಡಗಿದ.

ಆ ಕಳ್ಳ ಷೇಕ್ಸ್ ಪಿಯರ್ ಆ ದೂರದ ಅಮೇರಿಕಾದಲ್ಲೂ ನನಗೂ ಸೆಕ್ಯುರಿಟಿ ಗಾರ್ಡ್ ಗೂ ಒಂದು ನಂಟು ಬೆಸೆದಿದ್ದ.

ಇದು ಹೇಗೆ?

ಆ ಪ್ರಶ್ನೆಯನ್ನೂ ಕೇಳಬೇಕಾಗಿದೆ ಷೇಕ್ಸ್ ಪಿಯರನಿಗೆ ..