Saturday, May 9, 2026
Google search engine
Home Blog Page 199

ತುಮಕೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

Publicstory.in


Tumkur: ಜಿಲ್ಲೆಯಲ್ಲಿ ಶನಿವಾರ ಕೊರೊನಾಗೆ ಮತ್ತೊಂದು ಬಲಿಯಾಗಿದೆ.

ತುಮಕೂರಿನ ಕೃಷ್ಣಾನಗರದ ಈ ವ್ಯಕ್ತಿ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದರು.

ಶನಿವಾರ ವರದಿ ಬಂದಿದ್ದು, ಅವರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವುದು ದೃಢಪಟ್ಟಿದೆ.

ಬೆಂಗಳೂರಿನಿಂದ‌ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ ಮತ್ತೊಬ್ಬ ವ್ಯಕ್ತಿಗೊ ಸೋಂಕು ಇರುವುದು ದೃಢಪಟ್ಟಿದೆ.

ಎರಡೂ ಪ್ರಕರಣದಲ್ಲಿ ಸಂಪರ್ಕಿತರ ಮಾಹಿತಿ ಕಲೆ ಹಾಕುತ್ತಿದ್ದು, ಕ್ವಾರಂಟೈನ್ ಮಾಡಲಾಗುವುದು. ಖಾಸಗಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸೀಲ್ಡ್ ಡೌನ್ ಮಾಡುವುದಿಲ್ಲ ಎಂದು ಡಿಎಚ್ ಒ ನಾಗೇಂದ್ರಪ್ಪ ತಿಳಿಸಿದ್ದಾರೆ.


ಕೊರೊನಾ: ಕಲಾಪ ಸ್ಥಗಿತಗೊಳಿಸಲು ಪಾವಗಡ ವಕೀಲರ‌ ನಿರ್ಧಾರ

Publicstory.in


Pavagada: ಇಲ್ಲಿ‌ನ ಹಿರಿಯ ಶ್ರೇಣಿ ನ್ಯಾಯಾಲಯದ ಸಿಬ್ಬಂದಿಯೊಬ್ಬರ ಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣ ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸದಿರಲು ಇಲ್ಲಿನ ವಕೀಲರ ಸಂಘ ನಿರ್ಧಾರ ಕೈಗೊಂಡಿದೆ.

ಪತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಬ್ಬಂದಿ ಈಗ ಕ್ವಾರಂಟೈನ್ ನಲ್ಲಿಡಲಾಗಿದೆ.

ಈ ಹಿನ್ನೆಲೆಯಲ್ಲಿ ಭಯಭೀತರಾಗಿರುವ ವಕೀಲರು ಸಂಘದ ಸಾಮಾನ್ಯ ಸಭೆ ನಡೆಸಿದರು. ವಕೀಲ‌ರೆಲ್ಲರ ಸಲಹೆಯ ಮೇರೆಗೆ ಹದಿನಾಲ್ಕು ದಿನಗಳ ಕಾಲ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಿದರು.

ಪ್ರದೇಶ ಕುರುಬರ ಸಂಘದ ಚುನಾವಣೆ: ಬಲ ತೋರಿಸಿದ ಸಿದ್ದರಾಮಯ್ಯ

Publicstory. in


ಬೆಂಗಳೂರು: ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗರಲ್ಲಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ.

ಚುನಾವಣೆಯು ಈ ಇಬ್ಬರ ನಾಯಕರ ನಡುವಿಗೆ ಪ್ರತಿಷ್ಟೆಯಾಗಿ ಮಾರ್ಪಟ್ಟಿತ್ತು.

ಈ ಮೂಲಕ ತಮ್ಮ ಸಮಾಜದ ಮೇಲೆ ಹಿಡಿತ ಸಾಧಿಸುವ ಯತ್ನ ಈಶ್ವರಪ್ಪ ನಡೆಸಿದ್ದರು. ಆದರೆ ಅದಕ್ಕೆ ಬೆಂಬಲ ಸಿಕ್ಕಂತೆ ಕಾಣುತ್ತಿಲ್ಲ.

ಆಯ್ಕೆಯಾದವರ ವಿವರ;

ಅಧ್ಯಕ್ಷ: ಬಳ್ಳಾರಿ ಕೃಷ್ಣ (83 ಮತಗಳು)‌, ಪ್ರಧಾನ ಕಾರ್ಯದರ್ಶಿ: ಮಾಜಿ ಮೇಯರ್ ವೆಂಕಟೇಶ ಮೂರ್ತಿ (81 ಮತಗಳು) ಕಾರ್ಯಾಧ್ಯಕ್ಷ: ಮೈಸೂರಿನ ಸುಬ್ಬಣ್ಣ (84)‌, ಖಜಾಂಚಿ: ದೇವರಾಜು (84).

ಉಪಾಧ್ಯಕರು; ಕೃಷ್ಣ ಕುಮಾರ್ (78ಮತಗಳು), ಪುಟ್ಟಬಸವಯ್ಯ (78) ಮಿರ್ಜಾಪುರ ಮಹಾದೇವಪ್ಪ (76), ಎಂ.ಸಿ.ರಾಜಣ್ಣ (81), ವೆಂಕಟರಮಣಪ್ಪ(75) ಶಂಕರ ವಿಠೋಬ ಹೆಗಡೆ (79).

ಹಿರಿಯ ಉಪಾಧ್ಯಕ್ಷರಾಗಿ ಈರಣ್ಣ ಝಳಕಿ (83 ಮತಗಳು), ಜಗದೀಶ (78), ಬಸವರಾಜ್ ಬಸಲಗುಂದಿ (75), ರೇಖಾ ಹುಲಿಯಪ್ಪಗೌಡ (85) ಆಯ್ಕೆಯಾಗಿದ್ದಾರೆ.

ಚೀನಾ ಗಡಿಯಲ್ಲಿ ಅಧಿಕಾರಿ ನಾಪತ್ತೆ

Publicstory. in


ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ರಸ್ತೆಯ ನಿರ್ಮಾಣವನ್ನು ಪರಿಶೀಲಿಸಲು ಹೋದ ಭಾರತೀಯ ಎಂಜಿನಿಯರಿಂಗ್ ಸೇವೆ (ಐಇಎಸ್) ಅಧಿಕಾರಿ ಸುಭಾನ್ ಅಲಿಯ ಕಾಣೆಯಾಗಿದ್ದಾರೆ.

ಅವರು ಹೋಗುತ್ತಿದ್ದ ಜಿಪ್ಸಿ ಅನಿಯಂತ್ರಿತವಾಗಿ ಸುಮಾರು ಐದು ಸಾವಿರ ಅಡಿಗಳಷ್ಟು ಕಂದಕಕ್ಕೆ ಬಿದ್ದಿತು. ಸುಭಾನ್ ಅವರ ಜಿಪ್ಸಿಯನ್ನು ಪತ್ತೆಯಾಗಿದೆ ಆದರೆ ಸುಭಾನ್ ಇನ್ನೂ ಪತ್ತೆಯಾಗಿಲ್ಲ.

ಐಇಎಸ್ ಅಧಿಕಾರಿಯ ಹುಡುಕಾಟದಲ್ಲಿ ನಿರತರಾಗಿದ್ದು ಸೇನೆಯ ಹೆಲಿಕಾಪ್ಟರ್‌ಗಳು ಸಹ ಭಾಗಿಯಾಗಿದ್ದವು.

ಭಾರತೀಯ ಎಂಜಿನಿಯರಿಂಗ್ ಸೇವೆಯ ಅಧಿಕಾರಿಯಾಗಿದ್ದ ಸುಭಾನ್, ಬಲರಾಂಪುರ ಜಿಲ್ಲೆಯ ಕೌವಾಪುರ ಪಟ್ಟಣ ಪ್ರದೇಶದ ಜಯಾಂಗ್ರಾ ಗ್ರಾಮದ ನಿವಾಸಿ.

ಸುಭಾನ್ ಅವರ ಪ್ರಾಥಮಿಕ ಶಿಕ್ಷಣ ಜಿಲ್ಲೆಯ ರಾಮದೇಹ್ ಕಿಸಾನ್ ಆದರ್ಶ್ ವಿದ್ಯಾ ಮಂದಿರದಿಂದ ಮೂರು ತಿಂಗಳ ಹಿಂದೆ ಅವರನ್ನು ಲಡಾಖ್‌ನ ರಕ್ಷಣಾ ಸಚಿವಾಲಯದಲ್ಲಿ ಸಿವಿಲ್ ಎಂಜಿನಿಯರ್ ಆಗಿ ನೇಮಿಸಲಾಯಿತು.

ಜಯನಗರ ಗ್ರಾಮದ ನಿವಾಸಿ ರಂಜಾನ್ ಅಲಿಯ 28 ವರ್ಷದ ಮಗ ಸುಭಾನ್ ಅಲಿ ಆರು ತಿಂಗಳ ಹಿಂದೆ ಕೇಂದ್ರ ಸಾರ್ವಜನಿಕ ಸೇವಾ ಆಯೋಗದ ಭಾರತೀಯ ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಸಿವಿಲ್ ಎಂಜಿನಿಯರಿಂಗ್ ಅಲ್ಲಿ 24 ನೇ ರ್ಯಾಂಕ್ ಪಡೆದ ಸುಭಾನ್ ಅವರನ್ನು ಆರಂಭದಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿವಿಲ್ ಎಂಜಿನಿಯರ್ ಆಗಿ ನೇಮಿಸಲಾಯಿತು. ಏಪ್ರಿಲ್ 2020 ರಲ್ಲಿ ಅವರನ್ನು ಲಡಾಖ್‌ಗೆ ನೇಮಿಸಲಾಯಿತು. ಪ್ರಸ್ತುತ, ಸುಭಾನ್ ಅಲಿಯ ಕರ್ತವ್ಯವನ್ನು ಕಾರ್ಗಿಲ್ ಪ್ರದೇಶದ ಸಂಪರ್ಕತಡೆಯನ್ನು ಕೇಂದ್ರದಲ್ಲಿ ತೊಡಗಿಸಲಾಗಿತ್ತು.

ಭಾರತ-ಚೀನಾ ಗಡಿಯಲ್ಲಿ ಮೀನಾದಿಂದ ದ್ರಾಸ್‌ವರೆಗೆ ರಸ್ತೆ ನಿರ್ಮಿಸಲಾಗುತ್ತಿದೆ. ಸುಭಾನ್ ಸೋಮವಾರ ಈ ರಸ್ತೆಯನ್ನು ಪರಿಶೀಲಿಸಲು ಹೋದರು.

ತಪಾಸಣೆಯ ಸಮಯದಲ್ಲಿ, ಅವನ ಜಿಪ್ಸಿ ಅನಿಯಂತ್ರಿತ ಮತ್ತು ಕಂದಕದಲ್ಲಿ ಉರುಳಿಸಿತು.

ಬೆಲವತ್ತದಲ್ಲಿ ಭಾರೀ ಗಾತ್ರದ ಚಿರತೆ ಸೆರೆ

ವೀರಭದ್ರೇಗೌಡ


ಬೆಲವತ್ತ; ಇಲ್ಲಿನ ಅರಣ್ಯದಲ್ಲಿ ಭಾರೀ ಗಾತ್ರದ ಚಿರತೆಯೊಂದು ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.

ಭಾರೀ ಗಾತ್ರದ ಚಿರತೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ಜನರು ಓಡೋಡಿ ಬಂದರು.

ಅನೇಕ ತಿಂಗಳಿಂದ ಅರಣ್ಯದಂಚಿನಲ್ಲಿ ಓಡಾಡುತ್ತಿದ್ದ ಚಿರತೆ ಸಾಕು ಪ್ರಾಣಿಗಳನ್ನು ತಿನ್ನುತ್ತಿತ್ತು. ಇದರಿಂದ ಜನರು ಭಯಭೀತರಾಗಿದ್ದರು.

ಹೀಗಾಗಿ ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಶುಕ್ರವಾರ ರಾತ್ರಿ ಬೋನಿಗೆ ನಾಯಿಯನ್ನು ಕಟ್ಟಿದ್ದರು. ನಾಯಿ ತಿನ್ನಲು ಬಂದ ಚಿರತೆ ಸೆರೆಯಾಗಿದೆ.

ಇಷ್ಟೊಂದು ದೊಡ್ಡ ಗಾತ್ರದ ಚಿರತೆಯನ್ನು ನಾವು ನಿರೀಕ್ಷಿಸಿರಲಿಲ್ಲ ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದರು.

‘ಅಮ್ಮಾ, ಇಂಡಿಯಾದಲ್ಲಿ ಶಾಲೆಗೆ ಹೇಗೆ ಹೋಗ್ತಾರಮ್ಮಾ?’

ಜಿ ಎನ್ ಮೋಹನ್


ಪಶ್ಚಿಮಘಟ್ಟದ ಆ ದಟ್ಟ ಕಾನನವನ್ನು ಮಣಿಸಿಯೇಬಿಡಬೇಕು ಎಂಬ ಹಂಬಲ.

ಸರಿ ಬೆಂಗಳೂರಿನಿಂದ ಒಂದು ದೊಡ್ಡ ದಂಡೇ ಕುದುರೆಮುಖ ಪರ್ವತ ಏರಲು ಆರಂಭಿಸಿತು.

ಬೆಳ್ತಂಗಡಿಯಿಂದ ಆರಂಭಿಸಿ, ಕುದುರೆಮುಖ ನೆತ್ತಿ ಮುಟ್ಟಿ, ಕಳಸದಲ್ಲಿ ಮತ್ತೆ ರಸ್ತೆಗೆ ಸೇರಬೇಕು. ಬೆನ್ನಿಗೆ ಒಂದಷ್ಟು ದಿನದ ಊಟ, ಬಗಲಲ್ಲಿ ನೀರಿನ ಬಾಟಲಿಗಳನ್ನು ಹೊತ್ತು, ಹೆಜ್ಜೆ ಹೆಜ್ಜೆಗೂ ಏದುಸಿರು ಬಿಡುತ್ತಾ ಬೆಟ್ಟ ಹತ್ತುತ್ತಾ ಇದ್ದೆವು.

ಎದುರಿಗೆ ಒಬ್ಬ ಹುಡುಗ. ಖಾಕಿ ಚೆಡ್ಡಿ, ಬಿಳಿ ಅಂಗಿ ತೊಟ್ಟು, ಬೆನ್ನಿಗೆ ಬ್ಯಾಗ್ ಏರಿಸಿಕೊಂಡು ಜಿಂಕೆಯ ವೇಗದಲ್ಲಿ ಬೆಟ್ಟ ಹತ್ತುತ್ತಾ ನೋಡ ನೋಡುತ್ತಿದ್ದಂತೆಯೇ ಆ ಘಟ್ಟಗಳಲ್ಲಿ ಮರೆಯಾಗಿಯೇ ಹೋದ.

ಆತ ನೆಲ್ಸನ್, ಕುದುರೆಮುಖದ ನೆತ್ತಿಯಲ್ಲಿರುವ ಸೈಮನ್ ಲೋಬೋ ಕುಟುಂಬದ ಆತ ಅಕ್ಷರಗಳನ್ನು ಎಟುಕಿಸಿಕೊಳ್ಳಬೇಕಾದರೆ ಪ್ರತಿ ದಿನಾ ಕುದುರೆಮುಖವನ್ನು ಹತ್ತಿ ಇಳಿಯಬೇಕು.

ಮಂಗಳೂರಿನ ಬಂದರು ಪ್ರದೇಶದಲ್ಲಿ ನಿಂತಿದ್ದೆ.

‘ಫೋಂ, ಫೋಂ’ ಎನ್ನುವ ದೊಡ್ಡ ಸದ್ದು ಕೇಳಿಸಿತು. ಅದೂ ನದಿಯ ಮೇಲಿನಿಂದ. ಎದುರಿಗೆ ಕಣ್ಣು ಹಾಯಿಸಿದರೆ ಅರೇಬಿಯಾ ಸಮುದ್ರವೂ, ನೇತ್ರಾವತಿ ನದಿಯೂ ತೆಕ್ಕೆಗೆ ಬಿದ್ದಂತೆ ಕಾಣಿಸುತ್ತಿತ್ತು.

ಅದರ ಮಧ್ಯೆ ಇರುವುದೇ ಬೆಂಗ್ರೆ. ಅಲ್ಲಿಂದ ಈ ದೋಣಿ ಹಾದು ಬರುತ್ತಿತ್ತು.

ನಾನು ದೋಣಿ ನೋಡುತ್ತಾ ನಿಂತೆ. ಆಗ ‘ಹೋ’ ಎನ್ನುವ ಹರ್ಷದ ಕೇಕೆ ಕೇಳಿಬಂತು. ಒಂದೇ ನಿಮಿಷಕ್ಕೆ ದೋಣಿಯೂ ಹೊಯ್ದಾಡುವಂತೆ ಮಾಡಿ ನೂರಾರು ಮಕ್ಕಳು ಆಚೆಗೆ ಜಿಗಿದರು.

ಇವರೆಲ್ಲಾ ಆ ದ್ವೀಪದಿಂದ ನಗರದ ಹತ್ತಾರು ಶಾಲೆಗಳನ್ನು ಮುಟ್ಟಬೇಕಾದವರು. ಅಕ್ಷರದ ಬೆಳಕು ಕಾಣಬೇಕಾದರೆ ಪ್ರತಿ ನಿತ್ಯ ಈ ದೋಣಿಯಾಟ ನಡೆಯಲೇಬೇಕು.

ದೋಣಿ ಇಲ್ಲದಿದ್ದರೆ ಮಂಗಳೂರು ನಗರಕ್ಕೆ ‘ನೀವು ಯಾರೋ, ಇನ್ನು ನಾವು ಯಾರೋ’ ಎನ್ನುವ ಮರೆವು.

ಇನ್ನು ಮೆಘಾನೆ. ಶಿವಮೊಗ್ಗದ ಎತ್ತರದ ಗುಡ್ಡದಲ್ಲಿ ಅರಳಿಕೊಂಡಿರುವ ಹಳ್ಳಿ.

ಅಲ್ಲಿಗೆ ಹುಚ್ಚಪ್ಪ ಮಾಸ್ತರ್ ಅವರ ಜೊತೆ ಕಾಲಿಟ್ಟಿದ್ದೆ. ಇನ್ನೂ ಸೈಕಲ್ ನೋಡದ ಹತ್ತಾರು ಜನ ಅಲ್ಲಿದ್ದಾರೆ. ಪಕ್ಕಾ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕ್ಯಾನ್ವಾಸ್ ಇರುವ ಹಳ್ಳಿ .

ಅಲ್ಲಿಗೆ ಮುಟ್ಟಲು ನಾವು ಮೇಲೆ ಏರುತ್ತಿರುವಾಗ ಹುಡುಗ ಹುಡುಗಿಯರ ದೊಡ್ಡ ಗುಂಪು ಕೆಳಕ್ಕೆ ಇಳಿಯುತ್ತಿತ್ತು. ‘ಎಲ್ಲಿಗ್ರೋ’ ಅಂದ್ರು ಮಾಸ್ತರರು.

‘ಶಾಲೆಗೆ’ ಅನ್ನುತ್ತಾ ಮಕ್ಕಳು ಸರ,ಸರ ಹಾದು ಹೋದರು. ಅಕ್ಷರದ ಬೆಳಕು ಕಾಣಬೇಕಾದರೆ ಬೆಟ್ಟಗಳಿಂದ ಕೆಳಗೆ ಜಾರುಬಂಡಿಯಂತೆ ಇಳಿಯಬೇಕಿತ್ತು.

ಇನ್ನೊಮ್ಮೆ ಪಶ್ಚಿಮ ಘಟ್ಟಗಳ ತಪ್ಪಲಿನ ಹಳ್ಳಿಗೆ ಕಾಲಿಟ್ಟಿದ್ದೆ.

ಜುಳು ಜುಳು ಹರಿಯುವ ನದಿ. ಅದರ ಆಚೆಯಿಂದ ಮಕ್ಕಳು ಈ ದಡ ಸೇರಬೇಕು ಒಂದು ಹಸಿರಿನ ಬಿದಿರು ಬೊಂಬು ಎರಡೂ ದಂಡೆಗಳನ್ನು ಬೆಸೆದಿತ್ತು.

ಅದನ್ನು ಹಿಡಿದು ಹುಡುಗರು ತಂತಿಯ ಮೇಲಿನ ನಡಿಗೆಯಂತೆ ಸರ್ಕಸ್ ಮಾಡುತ್ತಾ ಈಚೆ ದಡ ಸೇರಿಯೇಬಿಟ್ಟರು. ಅಕ್ಷರದ ಬೆಳಕು ಕಾಣಬೇಕೆಂದರೆ ಆ ಸರ್ಕಸ್ ದಿನನಿತ್ಯ ನಡೆಯಬೇಕು

ನನ್ನ ಮಗಳೇ ಶಾಲೆಗೆ ಹೋಗುವ ಕಾಲ ಬಂತು.

ಬ್ಯಾಗ್ ನಲ್ಲಿ ಅವಳಿಗೆ ಬೇಕಾದ ಪುಸ್ತಕ ಓರಣವಾಗಿಟ್ಟೆ. ಬೆಳ್ಳಂಬೆಳಗ್ಗೆ ಸ್ನಾನ ಮಾಡಿಸಿದ್ದಾಯ್ತು.

ಯೂನಿಫಾರಂ ತೊಡಿಸಿ, ಕುತ್ತಿಗೆಗೆ ಟೈ ಬಿಗಿದು, ತಿಂಡಿ ತಿನ್ನಿಸಿ, ಬ್ಯಾಸ್ಕೆಟ್ ನಲ್ಲಿ ನೀರು, ಊಟದ ಡಬ್ಬಿ ಇಟ್ಟು ಟಾಟಾ ಮಾಡಿ, ಗೇಟಿನ ಬಳಿ ನಿಲ್ಲಿಸಿದರೆ ಸಾಕು ಐದು ನಿಮಿಷದಲ್ಲಿ ಬರುವ ಘಮ್ಮತ್ತಿನ ಹಳದಿ ವ್ಯಾನ್ ಮಗಳನ್ನು ಎಗರಿಸಿಕೊಂಡು ಹೋಯಿತು.

ಮತ್ತೆ ಸಂಜೆ ಆಫೀಸಿನಿಂದ ಬರುವ ವೇಳೆಗೆ ಅದೇ ಮಗಳು ಆರಾಮವಾಗಿ ಟಾಮ್ ಅಂಡ್ ಜೆರ್ರಿ ಲೋಕದಲ್ಲಿ ಇಲಿ ಬೆಕ್ಕಿನ ಜೊತೆ ಗುದ್ದಾಡುತ್ತಾ ಕೂತಿದ್ದಳು. ಎಷ್ಟು ಸಲೀಸು..?

‘ಶಾಲೆಗೆ ಹೋಗುವೆವು.. ನಾವು ಶಾಲೆಗೆ ಹೋಗುವೆವು..’ ಅನ್ನುವ ದನಿ ಟಿ. ವಿ ಯಲ್ಲಿ ಕೇಳುತ್ತಿದ್ದಂತೆ ನನ್ನ ಮನಸ್ಸು ಒಂದು ಸುತ್ತು ಆ ಬೆಂಗ್ರೆಯನ್ನೂ, ಮೆಘಾನೆಯನ್ನೂ, ದಿಡುಪೆಯನ್ನೂ, ಕುದುರೆಮುಖವನ್ನೂ ಸುತ್ತಿ ಬರುತ್ತದೆ.

ಹೌದಲ್ಲಾ ಮಕ್ಕಳು ಶಾಲೆಗೆ ಹೇಗೆಲ್ಲಾ ಹೋಗುತ್ತಾರೆ ಅಂತ ಒಂದು ದಿನ ಇಂಗ್ಲೆಂಡ್, ಕೆನಡಾ, ಅಮೇರಿಕಾ ಅಂತ ಸುತ್ತುತ್ತಿದ್ದ ಲೀಸಾ ಹೆದ್ಲಾಫ್ ಗೆ ಸಹಾ ಅನಿಸಿತು.

ಒಂದು ದಿನ ಮಗ ಆಲಿವರ್ ಲೀಸಾಗೆ ಕೇಳಿದ ‘ಅಮ್ಮಾ, ಇಂಡಿಯಾದಲ್ಲಿ ಶಾಲೆಗೆ ಹೇಗೆ ಹೋಗ್ತಾರಮ್ಮಾ?’ ಅಂತ.

ಲೀಸಾ ಮಗುವಿನ ಪ್ರಶ್ನೆಗೆ ನಕ್ಕು ಸುಮ್ಮನಾಗಿಬಿಡಬಹುದಿತ್ತು.

ಲೀಸಾ ಸುಮ್ಮನೆ ಕೂರಲಿಲ್ಲ. ಬ್ಯಾಕ್ ಪ್ಯಾಕ್ ಏರಿಸಿಕೊಂಡು, ವೀಸಾ ರೆಡಿ ಮಾಡಿಕೊಂಡು ಭಾರತಕ್ಕೆ ಬಂದೇಬಿಟ್ಟಳು.

ಅಲ್ಲಿಂದ ಆರಂಭ ಆಯ್ತು ನೋಡಿ ಶಾಲೆ ಮತ್ತು ಲೀಸಾ ನಂಟು. ದೇಶದ ಮೂಲೆ ಮೂಲೆ ಶಾಲೆಗಳಿಗೆ ಭೇಟಿ ಕೊಟ್ಟಳು.

ಪರ್ವತ ಏರಿ, ಮರಳುಗಾಡು ಹೊಕ್ಕು, ಸರೋವರದಲ್ಲಿ ಬೋಟ್ ಹತ್ತಿ, ತೂಗು ಸೇತುವೆಯಲ್ಲಿ ನಡೆದು ಹೋಗಿ ಮಕ್ಕಳು ಹೇಗೆಲ್ಲಾ ಶಾಲೆಗೇ ಹೋಗುತ್ತಾರೆ ಅಂತ ನೋಡಿಕೊಂಡು ಬಂದೇಬಿಟ್ಟಳು.

ಹೋದಲ್ಲೆಲ್ಲಾ ನಿತಿನ್ ಉಪಾಧ್ಯೆ ಕ್ಯಾಮೆರಾ ಕ್ಲಿಕ್ ಕ್ಲಿಕ್ ಅಂತು.

ಇಷ್ಟೆಲ್ಲಾ ಆದ ಮೇಲೆ ಲೀಸಾಗೆ ಅನಿಸಿತು ಇದನ್ನ ಮಗ ಆಲಿವರ್ ಗೆ ಮಾತ್ರ ಅಲ್ಲ ಇಡೀ ಜಗತ್ತಿಗೆ ಹೇಳಬೇಕು ಅಂತ. ಆಗ ಹೊರಬಂತು ನೋಡಿ ‘Going to School in India’ ಪುಸ್ತಕ.

ಕಿಲೋ ಮೀಟರ್ ಗಟ್ಟಲೆ ನಡೆದು, ಮಳೆಯಲ್ಲಿ ನೆಂದು, ಪ್ರವಾಹ ಬಂದಾಗ ಕಕ್ಕಾಬಿಕ್ಕಿಯಾಗಿ, ಮನೆಗೆ ಹೋಗುವ ರಸ್ತೆಗಳೇ ಮುಚ್ಚಿ ಹೋಗಿ, ದೋಣಿ ದಾಟುವಾಗ ಸಮುದ್ರವೇ ಮಕ್ಕಳನ್ನು ನುಂಗಿ ಹಾಕಿ, ಬಿರು ಧಗೆಯ ಮರಳುಗಾಡಲ್ಲಿ ಕಾಲಲ್ಲಿ ರಕ್ತ ಬರುವಂತೆ ನಡೆದು, ಎತ್ತಿನ ಬಂಡಿಯಲ್ಲಿ, ಟ್ರಕ್ ಗಳಲ್ಲಿ, ರೋಪ್ ವೇ ಗಳಲ್ಲಿ ಕೂತು ಮಕ್ಕಳು ಶಾಲೆ ಸೇರುತ್ತಿದ್ದಾರೆ.

ಆ ಮಕ್ಕಳಿಗಿರುವುದು ‘ಚಿನ್ನ ಚಿನ್ನ ಆಸೈ’. ಓದಿ ದೊಡ್ಡವನಾಗಿ ಅಮ್ಮನನ್ನ ಸಾಕಬೇಕು, ಒಬ್ಬ ಒಳ್ಳೆ ಹುಡುಗಿ ಆಗಬೇಕು, ನಾನು ನೋಡಿದ ಟ್ರೇನ್ ನ ಡ್ರೈವರ್ ಆಗಬೇಕು, ನನ್ನ ಅಪ್ಪನನ್ನ ಹೆದರಿಸದ ಪೊಲೀಸ್ ಆಗಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಸಾಕಷ್ಟು ಮಕ್ಕಳಿಗೆ ಕಲಿಸುವ ಟೀಚರ್ ಆಗಬೇಕು..

ಎಷ್ಟೆಲ್ಲಾ ಕನಸುಗಳು…?

ಒಂದು ಪುಸ್ತಕವಾಗಿ ಬಂದ ಲೀಸಾ ಕನಸು ಈಗ ಪುಸ್ತಕ ಮಾತ್ರವಲ್ಲ. ದೊಡ್ಡ ಚಳವಳಿ. ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಯನ್ನು ಎಟುಕಿಸಿಕೊಡುವ ಪ್ರಯತ್ನ.

ಅಕ್ಷರದ ಬೆಳಕಲ್ಲಿ ಬೆಳೆದು ಒಂದು ಮಾದರಿಯಾಗಿ ಎದ್ದು ನಿಂತವರ ಸ್ಫೂರ್ತಿ ಕಥೆಗಳನ್ನೂ ಹರಡುವ ಚಳವಳಿ.

ಹೀಗೆ ‘ಶಾಲೆಗೆ ಹೋಗುವೆವು’ ಎನ್ನುವ ಹಾಡು ಕೇವಲ ಹಾಡಲ್ಲ. ಅದು ಬರಿಗಾಲಿನಲ್ಲಿ ಕನಸುಗಳನ್ನೂ ಬೆನ್ನತ್ತುತ್ತಿರುವವರ ಕಥೆ.

ಸದ್ಯದಲ್ಲಿಯೇ ಶಾಲೆಯ ಬಾಗಿಲು ತೆರೆಯುತ್ತಿದೆ. ನನಗೆ ಮತ್ತೆ ನನ್ನ ಆ ಶಾಲೆಗೇ ಹೋಗಿ ಕೂರುವ ಮನಸ್ಸಾಗುತ್ತಿದೆ.

ಬನ್ನಿ ನಮ್ಮ ವಯಸ್ಸು ಎಷ್ಟಿದ್ದರೇನು ಶಾಲೆಗೆ ಹೋಗೋಣ.

ಈ ಪುಸ್ತಕದ ಬಗ್ಗೆ ಇನ್ನೂ ವಿವರ ಬೇಕಾದರೆ- https://www.goingtoschool.com/

ತಿಪಟೂರಿನ ಅಕ್ಕನ ಮನೆಗೆ ಹೋದವನಿಗೂ ಕೊರೊನಾ, ಪಾವಗಡದಲ್ಲಿ Sslc ಪರೀಕ್ಷಾ ಕೇಂದ್ರಕ್ಕೆ ಬಂದ ಸೋಂಕಿತ ಅಧಿಕಾರಿ

ಚಿಕ್ಕನಾಯನಕಹಳ್ಲಿಯಲ್ಲಿ ಸೀಲ್ಡ್ ಡೌನ್ ಗೆ ಮುನ್ನ ಪೊಲೀಸ್ ಕಾವಲು

ತುಮಕೂರು: ಹುಷಾರಿಲ್ಲ ಎಂದು ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿಗೆ‌ ಹೋದ ತಮ್ಮನಿಗೆ ಕೊರೊನಾ ಸೋಂಕು ತಗುಲಿದೆ.

ಪಾವಗಡದಲ್ಲಿ ಹೊಸಕೋಟೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕನಿಗೆ ತೆರಳಿದ್ದ ಬಿಸಿಎಂ ಅಧಿಕಾರಿಗೂ ಸೋಂಕು ತಗುಲಿದೆ.

ಈ ಅಧಿಕಾರಿ ಕ್ವಾರಂಟೈನ್ ಇರಬೇಕಿದ್ದರೂ ಪರೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಭಯದಲ್ಲೇ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ, ಪೋಷಕರಿಗೆ ಜಿಲ್ಲಾಡಳಿತದ ಮೇಲೆ ವಿಶ್ವಾಸ ಕಡಿಮೆ ಮಾಡುವ ಪ್ರಕರಣ ಇದಾಗಿದೆ. ಪರೀಕ್ಷಾ ಕೆಲಸಕ್ಕೆ ತೆಗೆದುಕೊಂಡ ಸಿಬ್ಬಂದಿಗೆ ಮೊದಲು ಖಾತರಿ ಮಾಡಿಕೊಂಡು ಕೆಲಸಕ್ಕೆ ನಿಯೋಜಿಸಬೇಕು ಎಂದು sfi ಮಾಜಿ ಜಿಲ್ಲಾ ಕಾರ್ಯದರ್ಶಿ ಎಸ್.ರಾಘವೇಂದ್ರ ಹೇಳಿದರು.

ಈ ಅಧಿಕಾರಿ ಯಾವುದೇ ವಿದ್ಯಾರ್ಥಿಯ ಸಂಪರ್ಕಕ್ಕೆ ಬಂದಿಲ್ಲ. ಸಂಪರ್ಕಕ್ಕೆ ಬಂದ ಆರು ಶಿಕ್ಷಕರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರ ಹೇಳಿಕೆಯನ್ನು ವಿಜಯ ಕರ್ನಾಟಕ ಪತ್ರಿಕೆ ಪ್ರಕಟಿಸಿದೆ.

ತಾಲ್ಲೂಕಿನ ಕಾಡೇನಹಳ್ಳಿಯ 21 ವರ್ಷದ ಯುವಕ ತಿಪಟೂರಿನ ತಾಲ್ಲೂಕಿನ ಕೋಟನಾಯಕನಹಳ್ಳಿಗೆ ಹೋಗಿದ್ದರು. ಆದರೆ ಅಲ್ಲಿ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ. ಈಗ ಎರಡೂ ಗ್ರಾಮಗಳನ್ನು ಸೀಲ್ಡ್ ಡೌನ್ ಮಾಡಲಾಗಿದೆ.

ಪಾವಗಡ ತಾಲೂಕಿನಲ್ಲಿ ನಾಲ್ವರು, ಸಿರಾ ಮೂರು, ತುಮಕೂರು ಎರಡು, ತಿಪಟೂರು 2 ಮತ್ತು ಗುಬ್ಬಿ 2 ಪ್ರಕರಣಗಳು ಶುಕ್ರವಾರ ವರದಿಯಾಗಿವೆ.

ಇನ್ನೂ, ಪಾವಗಡ ತಾಲೂಕಿನ ಮದ್ದಬಂಡೆಯಲ್ಲಿ 45 ವರ್ಷದ ವ್ಯಕ್ತಿಗೆ ಕೊರೊನ ಇರುವುದು ದೃಢಪಟ್ಟಿದ್ದು, ಇದೇ ಮೊದಲ ಬಾರಿಗೆ ಪಾವಗಡದಲ್ಲಿ ಹಳ್ಳಿಗೂ ಕೊರೊನ ವ್ಯಾಪಿಸಿದೆ.

ತುಮಕೂರಿನ ಅಮರಜ್ಯೋತಿ ನಗರ ಮತ್ತು ವಿನಾಯಕನಗರದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೊನ ಹರಡಿದೆ. ಈ ಎರಡು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವೇಳೆಯಲ್ಲೇ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವುದು ಪೋಷಕರಲ್ಲಿ ಆತಂಕ ಉಂಟುಮಾಡಿದೆ.

ತುಮಕೂರು ಒಂದೇ ದಿನ 15 ಜನರಿಗೆ ಕೊರೊನಾ

ತುಮಕೂರು; ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಹದಿನೈದು ಜನರಿಗೆ ಕೊರೊನಾ ಸೋಂಕು ತಗುಲಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು ಇದೇ ಮೊದಲು. ಇನ್ನೂ ಹೆಚ್ಚಿನ ಜನರಿಗೆ ಸೋಂಕು ತಗುಲಿದ್ದು, ನಾಳೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಲಾಗುತ್ತಿದೆ.

ತುಮಕೂರು ತಾಲ್ಲೂಕಿನಲ್ಲಿ ನಾಲ್ಕು, ಶಿರಾ ಮೂರು, ಪಾವಗಡ ನಾಲ್ಕು ಮಂದಿಗೆ ಸೋಂಕು ತಗುಲಿದೆ.

ಮಧುಗಿರಿ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಸಿಜಿಕೆ ಎಂಬ ‘ಮಹಾಚೈತ್ರ’

ಜಿ.ಎನ್.ಮೋಹನ್


ಆ ಇಬ್ಬರೂ ಉದ್ಘಾಟನೆಗಾಗಿಯೇ ಸಜ್ಜಾಗಿದ್ದ ಪರದೆಯನ್ನು ಎಳೆದರು.

ಬಹುಷಃ ಒಂದು ವಿಗ್ರಹವನ್ನೋ ಅಥವಾ ಶಿಲಾ ಪಲಕವನ್ನೋ ಅವರು ನಿರೀಕ್ಷಿಸಿರಬೇಕು.

ಆದರೆ ಆ ಪರದೆಯಿಂದ ದಿಢೀರನೆ ಎರಡು ಆಕೃತಿಗಳು ಹೊರನೆಗೆದವು. ಕಪ್ಪು ಬಟ್ಟೆ, ಕಪ್ಪು ಮುಖವಾಡ ಹೊತ್ತ ಆ ಎರಡು ಆಕೃತಿಗಳು ಉದ್ಘಾಟಿಸಲು ಬಂದವರ ಮೇಲೆಯೇ ಮುಗಿಬಿದ್ದವು. ಮುಲಾಜೇ ನೋಡದೆ ಅವರ ಜೊತೆ ಕೈ ಮಿಲಾಯಿಸಿದವು. ಕೊರಳ ಪಟ್ಟಿ ಹಿಡಿದವು.

ಉದ್ಘಾಟಿಸಿದವರಿಗೆ ಈಗ ಬೇರೆ ಮಾರ್ಗವೇ ಇರಲಿಲ್ಲ. ತಮ್ಮನ್ನು ತಾವು ಬಚಾವು ಮಾಡಿಕೊಳ್ಳಬೇಕಿತ್ತು. ಹಾಗಾಗಿ ಅದುವರೆಗೂ ಸಂಕೋಚ ಪಟ್ಟು ಹಿಂದೆ ಸರಿಯುತ್ತಿದ್ದವರು ಆ ಎರಡು ಕರಾಳ ಆಕೃತಿಗಳ ಮೇಲೆ ಧಾಳಿ ನಡಿಸಿಯೇ ಬಿಟ್ಟರು.

ಗುದ್ದು ನೀಡಿದರು, ಕಪಾಳಕ್ಕೆ ಬಿಗಿದರು. ಸತ್ತೆವೋ, ಕೆಟ್ಟೆವೋ ಎಂದು ಆ ಎರಡು ಆಕೃತಿಗಳು ಅಲ್ಲಿಂದ ಎದ್ದು ಬಿದ್ದು ಪರಾರಿಯಾದವು.

ಹಾಗೆ ಆ ಅಕೃತಿಗಳ ಜೊತೆ ಗುದ್ದಾಡಿದ್ದು ಇನ್ನಾರೂ ಅಲ್ಲ, ಆಗ ಸಂಸ್ಕೃತಿ ಸಚಿವರಾಗಿದ್ದ ಜೀವರಾಜ ಆಳ್ವ ಹಾಗು ಶಾಸಕ ಉಮರಬ್ಬ. ಇವರ ಗುದ್ದಾಟ, ಹೊಡೆದಾಟವನ್ನು ನೋಡುತ್ತಾ ನಗುತ್ತಾ ನಿಂತಿದ್ದು ಮಾತ್ರ ಸಿಜಿಕೆ.

ಅದು ಸಿಜಿಕೆಯ ಮಹಾನ್ ಕನಸಿನ ಉದ್ಘಾಟನೆ.

ಆ ವೇಳೆಗಾಗಲೇ ರಂಗಜಗತ್ತನ್ನು ಒಂದೂವರೆ ಸುತ್ತಾದರೂ ಪೂರೈಸಿದ್ದ ಸಿಜಿಕೆ ಎಂಬ ಭೂಮಂಡಲಕ್ಕೆ ಇನ್ನು ನಾನೊಬ್ಬನೇ ಅಲ್ಲ, ನೂರಾರು ಜನ ಸತತವಾಗಿ ರಂಗಭೂಮಿಯಲ್ಲಿ ಸುತ್ತುತ್ತಲೇ ಇರಬೇಕು ಎನಿಸಿತ್ತೆನೋ, ಒಂದು ರಂಗ ರೆಪರ್ಟರಿ ಕಟ್ಟುವ ಕನಸು ಕಂಡುಬಿಟ್ಟಿದ್ದ.

ಹಾಗೆ ಕಂಡ ಮನಸು ಮನಸ್ಸಿನೊಳಗೆ ಮೊಟ್ಟೆ ಇಟ್ಟು, ಕಾವು ಪಡೆದು, ಮರಿಯಾಗಿ ಹೊರಬಂದಿತ್ತು.

ಆ ರೆಪರ್ಟರಿಗಾಗಿ ಒಂದು ರಿಹರ್ಸಲ್ ಎನ್ನುವಂತೆ ಸಿಜಿಕೆ ೧೫೦ ದಿನಗಳ ಸತತ ನಾಟಕ ಪ್ರಯೋಗದ ಹುಚ್ಚು ಸಾಹಸಕ್ಕೆ ಕೈ ಹಾಕಿಯೇ ಬಿಟ್ಟಿದ್ದ.

’ಹೋದರೆ ಏನಾದರೂ ಹೋಗಲಿ, ಬಂದರೆ ಬೆಟ್ಟವೇ ಬರಲಿ’ ಎನ್ನುವ ಜಾಯಮಾನ ಸಿಜಿಕೆಯದು.

ಹಾಗಾಗಿ ಕಲಾಕ್ಷೇತ್ರದ ಉದ್ಯಾನದ ಬದಿಯಲ್ಲೇ ಇದ್ದ ಖಾಲಿ ಜಾಗವನ್ನೇ ನೂರಿನ್ನೂರು ಜನ ಕುಳಿತುಕೊಳ್ಳುವ ಥಿಯೇಟರ್ ಆಗಿ ರೂಪಿಸಿಬಿಟ್ಟಿದ್ದ.

ಆ ಪ್ರಯೋಗದ ಉದ್ಘಾಟನೆಯನ್ನೇ ಜೀವರಾಜ್ ಆಳ್ವ ಮತ್ತು ಉಮರಬ್ಬ ನಡೆಸಿದ್ದು.

ತಮ್ಮ ಮೈಮೇಲೆ ಬಿದ್ದವರ ಜೊತೆ ಬಡಿದಾಡಿ ಉದ್ಘಾಟನೆ ಮಾಡಬೇಕಾದ ಭಾಗ್ಯ ಬಹುಷಃ ಯಾವ ರಾಜಕಾರಣಿಗೂ ಸಿಕ್ಕಿರಲಿಕ್ಕಿಲ್ಲ.

ಈ ಅನಿರೀಕ್ಷಿತದಿಂದ ಇನ್ನೂ ಸುಧಾರಿಸಿಕೊಳ್ಳುತ್ತಿದ್ದವರನ್ನು ಕಂಡ ಸಿಜಿಕೆ ಮೈಕ್ ಹಿಡಿದು, ’ಇದು ರಂಗಸಂಸ್ಕೃತಿಯನ್ನು ಹೊಸಕಿ ಹಾಕುತ್ತಿರುವ ಕಾಲ. ರಂಗಸಂಸ್ಕೃತಿಯನ್ನು ಹೊಸಕಿ ಹಾಕುವವರ ವಿರುದ್ಧ ಹೀಗೆಯೇ ಹೋರಾಡಿ ಗೆಲ್ಲಬೇಕಾಗಿದೆ’ ಎಂದ.

ಯಾಕೋ ಅಂದು ಆ ರೂಪಕದಲ್ಲಿ ನನಗೆ ಕಂಡದ್ದು ಸಿಜಿಕೆಯೇ.

ಯಾವಾಗ ರಂಗಸಂಸ್ಕೃತಿ ನಿಂತ ನೀರಾಗುತ್ತಿತ್ತೋ, ಯಾವ ರಂಗಸಂಸ್ಕೃತಿ ವಿದೇಶಿ ಹಣಕ್ಕೆ ಕೈ ಚಾಚುತ್ತಾ ನಿಂತಿತ್ತೋ, ಯಾವ ರಂಗಸಂಸ್ಕೃತಿ ಶ್ರೇಷ್ಠತೆಯ ವ್ಯಸನದಲ್ಲಿ ಬಿದ್ದಿತ್ತೋ ಅದನ್ನು ಸಿಜಿಕೆ ಥೇಟ್ ಹೀಗೆಯೇ ಹೊಡೆದಾಡಿ ಜಯಿಸಿಕೊಳ್ಳಲು ನಿಂತುಬಿಟ್ಟಿದ್ದರು.

ನನಗೆ ಚೆನ್ನಾಗಿ ನೆನಪಿದೆ. ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್, ’ಫೋರ್ಡ್ V/s ಅಫೋರ್ಡ್’ ಎನ್ನುವ ಲೇಖನ ಬರೆದಿದ್ದರು. ಕನ್ನಡ ಸಾಂಸ್ಕೃತಿಕ ಲೋಕವನ್ನು ಒಂದು ರೀತಿಯಲ್ಲಿ ಬೆಚ್ಚಿ ಬೀಳಿಸಿದ ಲೇಖನ ಅದು.

ಹಲವು ರಂಗತಂಡಗಳು, ಸಂಸ್ಥೆಗಳು ಹೇಗೆ ವಿದೇಶಿ ಹಣ ಪಡೆದು ಕಾರ್ಯಾಚರಿಸುತ್ತದೆ ಎನ್ನುವ ಹೂರಣ ಹೊಂದಿತ್ತು. ಆ ವೇಳೆಗೆ ಇಡೀ ದೇಶವನ್ನು ಫಾರಿನ್ ಫಂಡ್ ತ್ರಿವಿಕ್ರಮನಂತೆ ಆವರಿಸಿಕೊಳ್ಳುತಿತ್ತು.

ಅದರ ಮುಖ್ಯ ಭಾಗ ಹರಿದುಬರುತ್ತಿದ್ದುದು ಬೆಂಗಳೂರಿನ ಸಂಘಟನೆಗಳಿಗೆ.

ಈ ಲೇಖನದ ಕಾರಣಕ್ಕಾಗಿ ಹಾಗು ’ಸಮುದಾಯ’ದ ಜೊತೆಗಿದ್ದ ಒಡನಾಟದ ಕಾರಣದಿಂದಾಗಿ ನಾನು ಸದಾ ಈ ವಿದೇಶಿ ಹಣದ ಒಳಹರಿವಿನ ಬಗ್ಗೆ ಒಂದು ಗಮನವಿಟ್ಟಿದ್ದೆ. ನಾನು ಫೋರ್ಡ್ ಫೌಂಡೇಶನ್ ಮೂಲ ಹುಡುಕಲು ಆರಂಭಿಸಿದೆ. ಆಗ ಕರೆ ಬಂದದ್ದು ಸಿಜಿಕೆಯಿಂದ.

ಕಲಾಕ್ಷೇತ್ರದ ಕ್ಯಾಂಟೀನಿನ ಮೆಟ್ಟಿಲ ಮೇಲೆ ಕುಳಿತಿದ್ದ ಸಿಜಿಕೆ ಅಭಿಮಾನದಿಂದ ಕೈ ಒತ್ತಿದ್ದ.

ವಿದೇಶಿ ಹಣ ರಂಗದ ಉಸಿರಾಟಕ್ಕೆ ಹೇಗೆ ಗುದ್ದು ನೀಡಬಹುದು ಎಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ಆತ ಎದ್ದುಬಂದಿದ್ದು ಕಲಾಕ್ಷೇತ್ರದ ನಾಲ್ಕು ಗೋಡೆಗಳ ಒಳಗಿನಿಂದಲ್ಲ. ಬೀದಿ ಬೀದಿಗಳಲ್ಲಿ ತಿಂಗಳುಗಟ್ಟಲೆ ಅಲೆದು, ನೊಂದ ನಿಟ್ಟುಸಿರುಗಳಿಗೆ ಎದುರಾಗಿ, ಇಲ್ಲದವರ ಖಾಲಿ ಹೊಟ್ಟೆಗಳ ಮುಂದೆ, ಬಾಡಿದ ಕಣ್ಣುಗಳಿಗೆ ನಾಟಕ ಪ್ರದರ್ಶಿಸಿದವನು ಈತ.

ನಾಟಕ ಎನ್ನುವುದು ಆತನಿಗೆ ಬೆಳಕಿನ ಚಿತ್ತಾರ. ಅದು ಅವನಿಗೆ ಶಬ್ಧ ಹಾಗು ಮೌನದ ನಡುವಿನ ಗಮ್ಮತ್ತಿನ ಆಟವಾಗಿರಲಿಲ್ಲ.

’ಎಲ್ಲಿಂದ ಬಂದಿರೆಂದು ಕೇಳಬಹುದು ನೀವು / ಜನರ ನಡುವಿನಿಂದ ಎಂದು ಹೇಳುತೀವಿ ನಾವು /ಈಗ ಪಯಣ ಎಲ್ಲಿಗೆಂದು ಕೇಳಬಹುದು ನೀವು / ತಿರುಗಿ ಮತ್ತೆ ಜನರ ನಡುವೆ ಹೋಗುತೇವೆ ನಾವು’ ಎನ್ನುವುದು ಯಾವುದೇ ಬೀದಿನಾಟಕಕ್ಕೆ ಮುನ್ನುಡಿ ಬರೆಯುತ್ತಿದ್ದ ಹಾಡು.

ಸಿಜಿಕೆ ಥೇಟ್ ಆ ಹಾಡಿನಂತೆಯೇ ಜನರ ನಡುವಿನಿಂದ ಬಂದು, ಜನರ ಒಳಗೇ ನಡೆದು ಹೋಗುತ್ತಿದ್ದಾತ.

’ಬೆಲ್ಚಿ’ ಎನ್ನುವ ಒಂದು ಒಡಲ ಸಂಕಟವನ್ನು ಉಣಬಡಿಸಿದ್ದು ಆತನೇ.

ಈ ನಾಡ ಮಣ್ಣಿನಲ್ಲಿ ಮಣ್ಣಾಗಿ ಹೋದವರ ಬಗ್ಗೆ ಅದು ಎಲ್ಲೆಲ್ಲಿಂದ ಕಥೆಗಳನ್ನು ಹೆಕ್ಕಿ ತರುತ್ತಿದ್ದನೋ ಗೊತ್ತಿಲ್ಲ.

ಅದರೆ ಬೆಲ್ಚಿ, ಒಡಲಾಳ, ಮಹಾಚೈತ್ರ, ನೀಗಿಕೊಂಡ ಸಂಸ, ಅಲ್ಲೇ ಇದ್ದೋರು, ಷೇಕ್ಸ್ ಪಿಯರ್ ನ ಸ್ವಪ್ನ ನೌಕೆ ಎಲ್ಲವೂ ಅದದರದ್ದೇ ಆದ ರೀತಿಯಲ್ಲಿ ಒಡಲ ಸಂಕಟ, ತಳಮಳಗಳಿಗೆ ಮಾತುಕೊಟ್ಟಿತ್ತು.

ಈ ನಾಡ ಮಣ್ಣಿನಲ್ಲಿ / ಮಣ್ಣಾದ ಜನಗಳ ಕಥೆಯ / ಕಥೆಯೊಂದ ಹೇಳತೀವಿ / ಸಾರಿ ಸಾರಿ ಹೇಳತೀವಿ / ಕಿವಿಗೊಟ್ಟು ಕೇಳಿರಣ್ಣ / ನೋವಿನ ರಾಗವನ್ನು / ಭಾರತ ದೇಶದ / ಬಿಹಾರ ರಾಜ್ಯದ / ಬೆಲ್ಚಿಯ ಗ್ರಾಮದಲ್ಲಿ / ಹನ್ನೊಂದು ಜನ ದಲಿತರನ್ನು / ನಮ್ಮಣ್ಣ ತಮ್ಮಂದಿರನ್ನು / ಹಾಡ ಹಗಲಿನಲ್ಲೇ / ಸುಟ್ಟು ಬೂದಿ ಮಾಡಿದರಲ್ಲೋ…. ಎನ್ನುವ ರಾಗ ಇನ್ನೂ ಕಿವಿಯಿಂದ ಎದ್ದು ಹೋಗಿಲ್ಲ.

ಅಲ್ಲಿ ರೋಷ ಇತ್ತು, ಸಂಕಟವಿತ್ತು, ಕಣ್ಣೀರಿತ್ತು. ನಾಟಕದೊಳಗೆ ಮಾತ್ರವಲ್ಲ ನಾಟಕ ನೋಡುತ್ತಿದ್ದವರ ಕಣ್ಣಲ್ಲೂ ನೀರಾಡುತ್ತಿತ್ತು.

ಕಥೆ ಬಿಹಾರ ರಾಜ್ಯದ್ದು ಎಂದು ಯಾರೂ ಅಂದುಕೊಳ್ಳುತ್ತಿರಲಿಲ್ಲ. ಅದು ನಮ್ಮ ನಿಮ್ಮ ಊರಿನ ಕಥೆಯಾಗಿ ಒಡಲ ಸಂಕಟಕ್ಕೆ ಕಾವು ನೀಡಿಬಿಡುತ್ತಿತ್ತು.

ಆತನ ಆತ್ಮಚರಿತ್ರೆಯ ಪುಟಗಳನ್ನು ತಿರುಗಿಸುತ್ತಿದ್ದೆ.

’ಸತ್ತವರ ನೆರಳು’ ನಾಟಕ ನಡೆಯುತ್ತಿದ್ದಾಗ ಕುಂಟುತ್ತಾ ತಂಡದ ಬಳಿಗೆ ಹೋದ ಸಿಜಿಕೆ ’ನನ್ನನ್ನೂ ನಾಟಕಕ್ಕೆ ಸೇರಿಸಿಕೊಳ್ಳಿ’ ಎಂದಿದ್ದ.

’ಅವನು ನನ್ನನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದ. ನನ್ನ ಕಾಲನ್ನು ವಿಶೇಷವಾಗಿ ಗಮನಿಸಿ ’ರಂಗಭೂಮಿಗೆ ನಿನ್ನಂಥವನ ಸೇರ್ಪಡೆ ಸಾಧ್ಯವೇ ಇಲ್ಲ’ ಅಂದುಬಿಟ್ಟ. ಈಗ ನಾನು ಏನು ಹೇಳಬಹುದು’ ಎಂದು ಸಿಜಿಕೆ ಆತ್ಮಕಥನ ಬರೆಯುವಾಗ ಹೇಳಿಕೊಳ್ಳುತ್ತಾರೆ.

ಮೈಸೂರಿನ ಮಿಷನ್ ಆಸ್ಪತ್ರೆಯ ಹೋಪ್ ವಾರ್ಡಿನಲ್ಲಿ ಎರಡು ಊನವಾದ ಕಾಲುಗಳನ್ನು ಒಡ್ಡಿಕೊಂಡು ಡಾ ಟೋವಿಯೆದಿರು ಮಲಗಿದ್ದ ಮಗು ನಿಜಕ್ಕೂ ಬಹುದೂರ ನಡೆದುಕೊಂಡು ಬಂದುಬಿಟ್ಟಿತ್ತು.

ಕೇವಲ ಆ ಮಗು ಮಾತ್ರ ನಡೆದು ಬರಲಿಲ್ಲ, ತನ್ನ ಜೊತೆ ನೂರಾರು ಜನರನ್ನು ಕಿಂದರಿ ಜೋಗಿಯ ಹಾಗೆ ನಡೆಸಿಕೊಂಡು ಬಂದುಬಿಟ್ಟಿತು.

ಆ ’ಹೋಪ್’ ವಾರ್ಡ್ ನ ಪರಿಣಾಮವೆ ಇರಬೇಕೇನೋ, ಹಳ್ಳಿಖೇಡಾ, ಗಾಣಗೇರಾ, ಕೋಲಾರ, ರಾಯಚೂರು… ಹೀಗೆ ಎಲ್ಲೆಲ್ಲಿ ಒಂದು ಆತ್ಮವಿಶ್ವಾಸದ ಬೆಳಕು ಕಾಣದವರ ಒಳಗೆ ಭರವಸೆಯನ್ನು ಬಿತ್ತುತ್ತಾ ಹೋದರು. ರಂಗಭೂಮಿಯನ್ನು ಜನರ ಬಳಿಗೆ ನಡೆಸಿಕೊಂಡೇ ಹೋಗಿಬಿಟ್ಟರು.

೪೬, ಅಂಗಡಿ ಬೀದಿ, ಬಸವನಗುಡಿಯಲ್ಲಿ ೧೯೮೦ರಲ್ಲಿ ಮೊತ್ತಮೊದಲ ಬಾರಿಗೆ ಉರಿ ಉರಿವ ಮುಖ ಹೊತ್ತ ಸಿಜಿಕೆಯನ್ನು ಕಂಡ ದಿನದಿಂದ ಆತನ ವಿದಾಯದವರೆಗೆ ನನ್ನೊಳಗೆ ಹಚ್ಚಹಸಿರು ನೆನಪುಗಳು ಹರಡಿಕೊಂಡಿವೆ.

ದ್ಯಾವನೂರರ ’ಒಡಲಾಳ’ ನಾಟಕ ನೋಡಿ ನಾನು ಬೆಚ್ಚಿ ಬಿದ್ದಿದ್ದೇನೆ. ಆ ನಾಟಕ ನನ್ನನ್ನು ಕಾಡಿದ ಪರಿಗೆ, ಕನ್ನಡ ಲೋಕವನ್ನು ಕಾಡಿದ ಪರಿಗೆ ಮಾತುಗಳಿಲ್ಲ.

ಸಿಜಿಕೆ ‘ಮಹಾಚೈತ್ರ’ವನ್ನು ಕೈಗೆತ್ತಿಕೊಂಡಾಗ ಅದರ ಮೊದಲ ದಿನದಿಂದ ಆತನ ಬೇಗುದಿಯನ್ನು ಹತ್ತಿರದಿಂದ ಕಂಡವನು ನಾನು.

ಎಚ್ ಎಸ್ ಶಿವಪ್ರಕಾಶರ ಒಳಗೆ ಕದಲುತ್ತಿದ್ದ ’ಮಹಾಚೈತ್ರ’ಕ್ಕೆ ಇದ್ದ ಮೊದಲ ಕಿವಿಗಳಲ್ಲಿ ನನ್ನವೂ ಎರಡು ಕಿವಿಗಳು.

ಆ ನಂತರ ಸಿಜಿಕೆ ಮಹಾಚೈತ್ರವನ್ನು ಕೈಗೆತ್ತಿಕೊಂಡಾಗ ಇದು ಆತನಿಗೂ ಮಹಾಚೈತ್ರವಾಗಿ ಹೋಗುತ್ತದೆ ಎನ್ನುವುದು ನನಗೆ ಗೊತ್ತಾಗಿ ಹೋಗಿತ್ತು. ಆತ ನಿಜಕ್ಕೂ ಮಹಾಚೈತ್ರದ ಒಳಗೆ ಮುಳುಗಿ ಹೋಗಿದ್ದ. ಹಸಿರು ಪಕಳೆಗಳಂತೆ ನನಗೆ ಕಂಡಿದ್ದ.

ಯಾಕೋ ಪ್ರಸನ್ನರನ್ನು ನೆನಸಿಕೊಳ್ಳದೆ, ಆ ಕಾಲಕ್ಕೆ ಇಡೀ ರಾಜ್ಯದಲ್ಲಿ ಹೊರಳುತ್ತಿದ್ದ ಆವೇಶವನ್ನು ನೆನಪಿಸಿಕೊಳ್ಳದೆ ಸಿಜಿಕೆಯನ್ನು ಕಣ್ಣ ಮುಂದೆ ನಿಲ್ಲಿಸಿಕೊಳ್ಳಲು ಸಾಧ್ಯವಿಲ್ಲ.

ಸಿಜಿಕೆ ಎಂಬ ಮಹಾಸಂಘಟಕ ರೂಪುಗೊಳ್ಳಲು ಪ್ರಸನ್ನ ಒಂದು ಕಣ್ಣೋಟ ಒದಗಿಸಿದ್ದರು.

ಸಿಜಿಕೆ ತನ್ನ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಬರೆದಾಗ ನನಗೆ ಫೋನಾಯಿಸಿದ್ದ.

ನಾನು ಏನಂತೀನೋ ಎನ್ನುವ ಒಂದು ಕುತೂಹಲ ಅವನಲ್ಲಿತ್ತು. ಆಗ ನಾನು ಮಂಗಳೂರಿನಲ್ಲಿದ್ದೆ.

ಇಲ್ಲೆ ಬಾ. ನನ್ನ ಅಭಿಪ್ರಾಯ ಹೇಳ್ತೀನಿ ಅಂದೆ. ಒಂದು ಮತ್ತೊಂದಾಯ್ತು.

ಸಿಜಿಕೆಯ ಆ ಆತ್ಮಕಥನದ ಬಗ್ಗೆ ನಾವು ಗೆಳೆಯರೆಲ್ಲರೂ ಸೇರಿ ಇಡೀ ಒಂದು ದಿನದ ಸಂಕಿರಣವನ್ನೇ ನಡೆಸಿಬಿಟ್ಟೆವು.

ಸಿಜಿಕೆ ಅಲ್ಲಿಂದ ಹೊರಡುವ ಮುನ್ನ ನನ್ನ ಕೈ ಹಿಡಿದು, ’ನನ್ನ ಶತ್ರು ಬಂದಿದ್ದರೂ ಈ ಸಂಕಿರಣದಲ್ಲಿ ಕುಳಿತಿದ್ದರೆ ನನ್ನ ಮಿತ್ರನಾಗಿ ಹೋಗುತ್ತಿದ್ದ, ಹಾಗೆ ಮಾಡಿಬಿಟ್ಟೆ’ ಎಂದ.

ಆತನ ದನಿ ತೇವಗೊಂಡಿತ್ತು. ಹಾಗೆ ಅಂದದ್ದು ನಿಜವೂ ಆಯಿತು. ಆತ ಶತ್ರುವನ್ನು ಗೆಲ್ಲುತ್ತಾಹೋದ.

ಸಿಜಿಕೆಯ ಮೂಸೆಯಲ್ಲಿ ಅರಳಿದ ಹುಡುಗ ಕೃಷ್ಣ ರಾಯಚೂರು ತಮ್ಮ ಕವಿತೆಯಲ್ಲಿ ’ಹುಚ್ಚುಹೊಳೆಯಲ್ಲಿ ನಿಂತ ಸಂತ / ಹರಿವ ಸೆಳೆವು ಕೂಡಾ ಇವನಿದ್ದೆಡೆಗೆ’ ಎನ್ನುತ್ತಾರೆ.

ಹೌದಲ್ಲ, ಇವನಿದ್ದೆಡೆಗೆ ಅಷ್ಟೊಂದು ಜನರು ಹರಿದು ಬಂದಿದ್ದೇಕೆ ಎಂದು ಯೋಚಿಸುತ್ತಾ ಕುಳಿತಿದ್ದೆ. ನನಗೆ ನೆನಪಾಗಿದ್ದು ಸು ರಂ ಎಕ್ಕುಂಡಿಯವರ ’ಬಂಡೆ, ಹುಡುಗ ಮತ್ತು ಬೆಸ್ತ’ ಕವಿತೆ.

ಒಬ್ಬ ಹುಡುಗ ಎಷ್ಟು ಹೊತ್ತಾದರೂ ಮನೆಗೆ ಹೋಗಿಲ್ಲ. ತಾಯಿ ಆತಂಕದಿಂದ ಹುಡುಕಿಕೊಂಡು ಓಡಿ ಬಂದಿದ್ದಾಳೆ.

ಅಲ್ಲಿದ್ದ ಬೆಸ್ತನ ಬಳಿ ಕೇಳಿದಾಗ, ’ದೂರದ ಬೆಟ್ಟದಲ್ಲಿ ಪ್ರತಿ ಬಂಡೆಗೂ ಆತ ಕಿವಿ ಇಟ್ಟು ಓಡಾಡುತ್ತಿದ್ದಾನೆ… ಬೆಟ್ಟ ಬಂಡೆಗಳು ಎಂದಾದರೂ ಮಾತನಾಡಬಹುದೆ?/ ಕಲ್ಲಿಗೂ ಕೊರಳುಂಟೆ, ಬಂಡೆಗೂ ಬಾಯುಂಟೆ? / ಕಾಡು ಎಲ್ಲಿಯಾದರೂ ಹಾಡಬಹುದೇ’ ಎಂದು ಕೇಳಿದರೆ ’ಆಲಿಸುವ ಕಿವಿಗೆಲ್ಲಿಯೂ / ಹಾದಿಹವು, ಹುಲ್ಲಿನಲಿ, ಹೊಳೆಗಳಲಿ, ಬೆಟ್ಟಗಳ ಮುಂಜಾವಿನಲಿ, ಹನಿ ಮಂಜಿನಲಿ / ಹಾಲುತೆನೆ ತುಂಬಿರುವ ಬೆಳೆಗಳಲಿ’ ಎನ್ನುತ್ತಿದ್ದಾನೆ ಎನ್ನುತ್ತಾನೆ.

ಆ ಹುಡುಗನೇ ಜಕಣಾಚಾರಿ.

ಹಾಗೆ ಥೇಟ್ ಹಾಗೆಯೇ ಬೆಟ್ಟ, ಬಂಡೆ, ಕಲ್ಲಿನಲ್ಲೂ ಕೊರಳಿದೆ, ಬಾಯಿದೆ ಎಂದು ಗುರುತಿಸಿದವರು ಸಿಜಿಕೆ.

ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ಉತ್ಸವ ಜರುಗುವಾಗ ನೋಡಬೇಕು, ಎಷ್ಟೊಂದು ಬಂಡೆಗಳು ಹಾಡುಗಳಾಗಿ ಚಿಮ್ಮಿರುತ್ತವೆ!.

Sslc: ತುರುವೇಕೆರೆಯಲ್ಲಿ 89 ವಿದ್ಯಾರ್ಥಿಗಳು ಗೈರಯ

ತುರುವೇಕೆರೆ: ಕೋವಿಡ್-19ರ ನಡುವೆಯೂ ತಾಲ್ಲೂಕಿನ ಹತ್ತನೆ ತರಗತಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಿರಾತಂಕವಾಗಿ ಗುರುವಾರ ಬರೆದರು.

ತಾಲ್ಲೂಕಿನ ನಾಲ್ಕು ಹೋಬಳಿಗಳ 8 ಪರೀಕ್ಷಾ ಕೇಂದ್ರಗಳಲ್ಲಿ ಥರ್ಮೋಸ್ಕ್ಯಾನಿಂಗ್, ಸ್ಯಾನಿಟೈಸರ್ ಮಾಡಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳುವ ಮೂಲಕ ಮಕ್ಕಳು ಸುರಕ್ಷತೆಯಿಂದ ಮೊದಲ ದಿನದ ಆಂಗ್ಲ ಭಾಷಾ ವಿಷಯವನ್ನು ಬರೆದರು.

ಜ್ವರ ಸೇರಿದಂತೆ ಇನ್ನಿತರ ಸಮಸ್ಯೆಗಳ ಕಾರಣಗಳಿಂದ ಪ್ರತ್ಯೇಕ ಕೊಠಡಿಗಳಲ್ಲಿ ಯಾವ ಕೇಂದ್ರಗಳಲ್ಲಿಯೂ ಸಹ ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಲಿಲ್ಲ.

ಹೊರ ಜಿಲ್ಲೆ ತಾಲ್ಲೂಕುಗಳಿಂದ ಬಂದು 15 ವಿದ್ಯಾರ್ಥಿಗಳು ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ತಹಶೀಲ್ದಾರ್ ಆರ್.ನಯಿಂಉನ್ನೀಸಾ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಂಗ್ಲಭಾಷಾ ವಿಷಯವನ್ನು ಬರೆಯಲು 1865 ಮಕ್ಕಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದವು ಅವುಗಳಲ್ಲಿ 1766 ಇಂದು ಪರೀಕ್ಷೆಗೆ ಹಾಜರಾಗಿದ್ದು ಇನ್ನು 89 ಮಕ್ಕಳು ಗೈರು ಹಾಜರಾಗಿದ್ದವು ಎಂದು ಬಿಇಒ ಸಿ.ರಂಗಧಾಮಯ್ಯ ತಿಳಿಸಿದರು.