Saturday, May 9, 2026
Google search engine
Home Blog Page 200

ಈ ನಾಲ್ಕು ಕಾಯ್ದೆಗಳ ತಿದ್ದುಪಡಿಗೆ ರೈತರೇಕೆ ವಿರೋಧ

ತುಮಕೂರು: ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್, ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜೂನ್ 27 ರಿಂದ 30ರವರೆಗೆ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಐಕೆಎಸ್‍ಸಿಸಿ ಸಂಚಾಲಕ ಸಿ.ಯತಿರಾಜು ತಿಳಿಸಿದರು.

ದೇಶದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣಾ ಕಸುಬುದಾರರನ್ನು ಸಾಮ್ರಾಜ್ಯಶಾಹಿಗಳು, ಕಾರ್ಪೋರೇಟ್ ಕಂಪನಿಗಳಿಗೆ ಗುಲಾಮರನ್ನಾಗಿ ಮಾಡಲು ಎಪಿಎಂಸಿ ಕಾಯ್ದೆ ತಿದ್ದುಪಡ್ಡಿ ಮಾಡಿ, ಸರ್ಕಾರದ ನಿಯಂತ್ರಿತ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ನಾಶಮಾಡಲು ಉದ್ದೇಶಿಸಲಾಗಿದೆ.

ಮೆಟ್ರೋ, ಮೋರ್, ರಿಲೆಯನ್ಸ್ ಪ್ರೆಶ್, ಡಿಮಾರ್ಟ್, ಬಿಗ್‍ಬಾಸಕಟ್‍ನಂತಹ ದೈತ್ಯ ಕಾರ್ಪೋರೇಟ್ ಕಂಪನಿಗಳು ಖರೀದಿ ಶುರುಮಾಡಲಿವೆ.

ಉತ್ಪನ್ನಗಳನ್ನು ಖರೀದಿಸಿ ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಬೇಕು, ದೇಶ ವಿದೇಶಿಗಳಿಗೆ ಸಾಗಾಣಿಕೆ ಮಾಡಬೇಕು, ಇಷ್ಟ ಬಂದ ದರಗಳಿಗೆ ಮಾರಾಟ ಮಾಡಬೇಕು. ಇದಕ್ಕೆ ಅಗತ್ಯ ವಸ್ತುಗಳನ್ನು ಇವರೇ ಖರೀದಿ ಮಾಡಬೇಕು, ಇಷ್ಟೇ ಖರೀದಿ ಮಾಡಬೇಕು.

ಇಷ್ಟೇ ದಾಸ್ತಾನು ಮಾಡಬೇಕು ಮತ್ತು ಇಷ್ಟೇ ದರಕ್ಕೆ ಮಾರಾಟ ಮಾಡಬೇಕೆನ್ನುವ ಅಗತ್ಯ ವಸ್ತುಗಳ ಕಾಯ್ದೆ-1955ಈ ಪ್ರಕ್ರಿಯೆಗೆ ಅಡ್ಡಿಉಂಟು ಮಾಡುತ್ತದೆ. ಆದರಿಂದಲ್ಲೇ ಅಗತ್ಯ ವಸ್ತುಗಳ ಕಾಯ್ದೆ (ತಿದ್ದುಪಡಿ) 2020’ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ತಕ್ಷಣ ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಒಂದು ರೈತ ಕುಟುಂಬ ಗರಿಷ್ಠ 54 ಎಕರೆ ಮಾತ್ರ ಭೂಮಿಯನ್ನು ಹೊಂದಬಹುದು ಎಂಬುದನ್ನು ಬದಲಿಸಿ ಐದು ಜನರಿಗಿಂತ ಹೆಚ್ಚಿರುವ ಕುಟುಂಬ 216 ಎಕರೆ ಭೂಮಿಯನ್ನು ಹೊಂದಬಹುದೆಂದು ತಿದ್ದುಪಡಿಯನ್ನು ತರಲು ಸಚಿವ ಸಂಪುಟ ತೀರ್ಮಾನಿಸಿದೆ.

ಇದರ ಪರಿಣಾಮವಾಗಿ ಇನ್ನೂ ಕೇಲವೇ ವರ್ಷಗಳಲ್ಲಿ ಐದು ಎಕರೆಗಿಂತ ಕಡಿಮೆ ಭೂಮಿ ಇರುವ ಶೇ. 85 ರಷ್ಟು ಸಣ್ಣ, ಅತಿ ಸಣ್ಣ ರೈತರು ಮತ್ತಿತರು ತಕ್ಷಣಕ್ಕೆ ಕಾಣುವ ಹಣದಾಸೆಗೆ ಮೋಸಹೋಗಿ ತಮ್ಮ ಭೂಮಿಗಳನ್ನು ಮಾರಾಟ ಮಾಡಿ ಈಗಾಗಲೇ ಶೇ. 40 ಕ್ಕಿಂತ ಹೆಚ್ಚಿಗೆ ಇರುವ ಭೂಹೀನರ ಕುಟುಂಬಗಳ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

ಇದು ಉಳುವವನೇ ಹೊಲದೊಡೆಯ ಬದಲು ಇರುವವನೇ ಹೊಲದೊಡೆಯಾಗಲಿದೆ ಎಂದು ಕಾರ್ಯದರ್ಶಿ ಬಿ.ಉಮೇಶ್ ತಿಳಿಸಿದರು.

ಜೂನ್ 27 ರಿಂದ 30ರವರೆಗೆ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದು ಜೂನ್ 29-06-2020ರಂದು ಜಿಲ್ಲಾ ಕೇಂದ್ರದಲ್ಲಿರುವ ತುಮಕೂರು ನಗರ ಗ್ರಾಮಾಂತರ ಶಿರಾ ಗುಬ್ಬಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳು ರೈತಪರವಾದ ಕಾನೂನು ಜಾರಿಗೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ರೈತ ಮುಖಂಡರಾದ ಎಚ್.ಎಂ.ರವೀಶ್, ಚಿಕ್ಕಬೈರೇಗೌಡ, ರಂಗಹನುಮಯ್ಯ ರಾಜ್ಯ ಕಾರ್ಯದರ್ಶಿ ಬಿ.ಎಸ್. ಶಂಕರಪ್ಪ ಮೊದಲಾದವರು ಉಪಸ್ಥಿತರಿದ್ದರು.

ಬಂಡಿಗೆ ಡಿಕ್ಕಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸಾವು

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಶೈಲಾಪುರ ಬಳಿ ಹಿಂಬದಿಯಿಂದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಕಾರಣ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಡಪಲಕೆರೆ ಕಡೆಯಿಂದ ಶೈಲಾಪುರ ಕಡೆಗೆ ಬರುತ್ತಿದ್ದ ರಮೇಶ್, ಹನುಮಂತರಾಯ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರೀರ್ವರು ಶೈಲಾಪುರ ಗ್ರಾಮದವರು.

ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶಗೌಡರ ಬೆನ್ನುತಟ್ಟಿದ ಸಿಎಂ ಯಡಿಯೂರಪ್ಪ

Publicstory.in


ಬೆಂಗಳೂರು: ಅಲ್ಲಿ ಮಂದಸ್ಮಿತದ ನಗುವಿತ್ತು.‌ ಸುರೇಶಗೌಡರ ಹೆಗಲು ತಟ್ಟಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೇ ಕಣ್ಣೋಟದಲ್ಲಿ ನೂರು ಸಂದೇಶಗಳನ್ನು ಸುರೇಶಗೌಡರಿಗೆ ರವಾನಿಸಿದರು.

ಇವರಿಬ್ಬರ ಆತ್ಮೀಯತೆ ಕಂಡು ಮತ್ತಷ್ಟು ಆರ್ದರಾದವರು ಸಂಸದ ಜಿ.ಎಸ್.ಬಸವರಾಜ್.

ಸುರೇಶಗೌಡ ಅವರು ಚುನಾವಣೆಯಲ್ಲಿ ಸೋತಾಗ ಬಸವರಾಜ್ ಮಾಜಿ ಸಂಸದರು.

ಬಸವರಾಜ್ ಅವರ ಪುತ್ರ, ಶಾಸಕ ಜ್ಯೋತಿ ಗಣೇಶ್ ಅವರಿಗೆ ಚುನಾವಣೆಯಲ್ಲಿ ತುಮಕೂರು ನಗರದ ಒಕ್ಕಲಿಗರು ಬಲವಾಗಿ ಹಿಂದೆ ನಿಂತ ಹಿಂದೆ ಸುರೇಶಗೌಡ ಅವರೂ ಇದ್ದರು. ತನ್ನ ಕ್ಷೇತ್ರದ ಚುನಾವಣೆ ಬಿಟ್ಟು ಜ್ಯೋತಿ ಗಣೇಶ್ ಪರ ಪ್ರಚಾರ ಮಾಡಿದವರು. ಇದೆಲ್ಲವೂ ನೆನಪಾದವರಂತೆ ಸಂಸದರು ಕ್ಷಣ ಮೌನವಾದರು.

ಮತ್ತೇ ಇಬ್ಬರ ನಾಯಕರನ್ನು ನೋಡಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಸುರೇಶಗೌಡ ಪಕ್ಷ ಕಟ್ಟುವುದರಲ್ಲಿ ನಿಸ್ಸೀಮರು. ಅವರೊಂದಿಗೆ ಇದ್ದು ಪಕ್ಷಕ್ಕೆ ಭದ್ರ ಬುನಾದಿಯಾಕುವ ಕನಸಿಗೆ ಕೈ ಜೋಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲು ಸಂಸದ‌ ಜಿ.ಎಸ್.ಬಸವರಾಜ್ ಅವರೊಂದಿಗೆ ಮುಖ್ಯಮಂತ್ರಿ ಬಳಿ ತೆರಳಿ ಸುರೇಶಗೌಡ ಅರ್ಶೀವಾದ ಪಡೆದರು.

ಸುರೇಶಗೌಡ ಅವರನ್ನು ಅಭಿನಂದಿಸಿದ ಬಿಎಸ್ ವೈ, ಪಕ್ಷ ಬಲಪಡಿಸುವಂತೆ ಹೇಳಿದರು.

ಅಂದ್.. ಯಾನ್ ಕುಡ್ಲದಾಯೆ..

ಜಿ ಎನ್ ಮೋಹನ್


‘ಹೌದು ಎಲ್ಲಿ ಉಳಿದುಕೊಂಡಿದ್ದೀರಿ?’ ಅಂದರು

ನಾನು ‘ಬೆಲ್ ಮೌಂಟ್’ ನಲ್ಲಿ ಅಂದೆ

ಅವರಿಗೆ ಏನೆಂದರೆ ಏನೂ ಗೊತ್ತಾದಂತೆ ಕಾಣಲಿಲ್ಲ

ಮತ್ತೆ ಅದೇ ಪ್ರಶ್ನೆ ಒಗೆದರು

ನಾನು ‘ಮಂಗಳೂರು ಸಮಾಚಾರ’ದಲ್ಲಿ ಎಂದೆ

ಅವರು ಇನ್ನಷ್ಟು ಗೊಂದಲಕ್ಕೀಡಾದರು
‘ನಾನು ಕೇಳಿದ್ದು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಲ್ಲ’ ಎಂದರು

ನಾನು ಆಗ ಕ್ವಿಜ್ ಪ್ರೋಗ್ರಾಮ್ ಗೆ ಕೊನೆ ಹಾಡುವವನಂತೆ ನಾನಿರುವುದು ‘ಬಲ್ಮಠ’ದಲ್ಲಿ
‘ಮಂಗಳೂರು ಸಮಾಚಾರ’ ಇರುವ ಅಂಗಳದಲ್ಲೇ ಎಂದೆ

ಮತ್ತೆ ಅದ್ಯಾಕೆ ‘ಬೆಲ್ ಮೌಂಟ್’ ಅಂದಿರಿ ಎಂದರು

ಆಗ ನಾನು ಅವರ ಮುಂದೆ ಮೂರು ಸಂಪುಟಗಳ ದೊಡ್ಡ ಕಟ್ಟನ್ನು ಹಿಡಿದು ನಿಲ್ಲಬೇಕಾಯಿತು.

ನಾನು ಯಾವಾಗಲೂ ಗೆಳೆಯರೊಂದಿಗೆ ತಮಾಷೆ ಮಾಡುತ್ತಿರುತ್ತೇನೆ- ‘ನನಗೆ ಮಂಗಳೂರಿನ ಗ್ರೀನ್ ಕಾರ್ಡ್ ಇದೆ’ ಎಂದು
ಎರಡು ಅವಧಿಯಲ್ಲಿ ೯ ವರ್ಷಗಳ ಕಾಲ ಮಂಗಳೂರಿನಲ್ಲಿದ್ದವನು ನಾನು.

ಬೆಂಗಳೂರಿನಿಂದ ನನ್ನ ಕೈನೆಟಿಕ್ ಹೋಂಡಾ ಏರಿ ಜುಮ್ಮಂತ ಘಟ್ಟ ಇಳಿದು ಕಡಲ ನಗರಿ ಸೇರಿಕೊಂಡವನಿಗೆ ಈಗಲೂ ಮನದೊಳಗೆ ಕಡಲ ಅಲೆಗಳದ್ದೇ ನಾದ.

ಮಂಗಳೂರಿಗೆ ಎಂದು ಸ್ಕೂಟರ್ ಹತ್ತಿದವನಿಗೆ ಹೇಳಿದರು- ಅಲ್ಲಿ ಹೇಗಿರುತ್ತೀಯೋ ಮಾರಾಯ
ದಪ್ಪ ಅಕ್ಕಿ, ಬಿರು ಬೇಸಿಗೆ, ಭಾರೀ ಮಳೆ, ಮೀನಿನ ವಾಸನೆ..

ಹಾಗೆ ಅನಿಸಿಬಿಡುತ್ತಿತ್ತೇನೋ.. ನಾನು ಮಂಗಳೂರು ಹೊರಗೂ ಹೆಜ್ಜೆ ಹಾಕದಿದ್ದರೆ..

ಕಾರ್ಕಳದ ಭುವನೇಂದ್ರಕ್ಕೆ ಹಾಮಾನಾ ಬರುತ್ತಾರಂತೆ, ಕುಂದಾಪುರದಲ್ಲಿ ಕಾರಂತರ ಮನೆ ಇದೆಯಂತೆ, ಉಡುಪಿಯಲ್ಲಿ ಭೂತ ಮುಖವರ್ಣಿಕೆ ಪ್ರಾತ್ಯಕ್ಷಿಕೆ ಇದೆಯಂತೆ, ಕವತಾರ್ ನಲ್ಲಿ ಸಿರಿ ಜಾತ್ರೆಯಂತೆ, ಸುಳ್ಯದಲ್ಲಿ ಬಣ್ಣದ ಮಾಲಿಂಗರುು ಇದ್ದಾರಂತೆ.. ಅಂತ ಇದ್ದಬದ್ದ ನೆಪಗಳನ್ನೆಲ್ಲಾ ಹುಡುಕಿಕೊಂಡು ಮೂಲೆ ಮೂಲೆ ಸುತ್ತಿಬಿಟ್ಟೆ.

ಜಿ ಎಸ್ ಸಿದ್ಧಲಿಂಗಯ್ಯನವರು ಒಮ್ಮೆ ಹೇಳಿದ್ದರು- ‘ಹಸು ಕರು ಹಾಕಿದ ತಕ್ಷಣ ಅದರ ಬಗ್ಗೆ ಪ್ರೀತಿ, ಮಮತೆ ಏನೂ ಹುಟ್ಟುವುದಿಲ್ಲ ಕಣೋ, ಯಾವಾಗ ಕರುವಿನ ಮೈ ಮೇಲಿರುವ ಲೋಳೆಯನ್ನು ಶುಚಿ ಮಾಡಲು ಅದರ ಮೈ ನೆಕ್ಕಲು ಆರಂಭಿಸುತ್ತದೋ ಅಲ್ಲಿಂದ ಹುಟ್ಟುತ್ತದೆ ಪ್ರೀತಿ ಸಂಬಂಧ’ ಅಂತ..

ಯಸ್, ಹೌದು, ಅಂದ್ , ಹಾಂ ಜೀ.. ಎಂದು ಈಗ ಖಡಕ್ಕಾಗಿ ಅದನ್ನು ಅನುಮೋದಿಸುತ್ತೇನೆ.

ಏಕೆಂದರೆ ಬಂದರಿಗೆ ಹೋಗಿ ಮೀನು ದಡ ಸೇರುವ ವೇಳೆಗೆ ಲಾಟ್ ನಲ್ಲಿ ಮೀನು ಕೊಂಡು ಮನೆಗೆ ಬಂದವನು ನಾನು.

ಯಾವ ‘ಕಜೆ ಅಕ್ಕಿ’ ಚೆನ್ನ ಎಂದು ನಿದ್ದೆಯಲ್ಲಿ ಕೇಳಿದರೂ ಹೇಳಬಲ್ಲೆ,

ದೋಸೆಗೆ ಹಲಸಿನ ಹಣ್ಣು ಹಾಕಿದಾಗ ಬರುವ ಸುವಾಸನೆ ಯಾವುದು ಎಂದು ಮನಮುಟ್ಟುವಂತೆ ವಿವರಿಸಬಲ್ಲೆ.

ಅದು ಬಿಡಿ ವಾಸನೆಯನ್ನು ವಾಸನೆ ಎಂದೂ ಸುವಾಸನೆಯನ್ನು ಸುವಾಸನೆ ಎಂದೂ ಗುರುತಿಸಬಲ್ಲೆ ಎಂದರೆ ನನಗಲ್ಲದೆ ಇನ್ನಾರಿಗೆ ಗ್ರೀನ್ ಕಾರ್ಡ್ ಸಿಗಲು ಸಾಧ್ಯ..!

ಆದರೆ ಒಂದು ಅಳುಕಿತ್ತು. ಸೂಟರ್ ಪೇಟೆ, ವೆಲೆನ್ಸಿಯಾ, ಸ್ಟರಕ್ ರಸ್ತೆ, ಮೋರ್ಗನ್ಸ್ ಗೇಟ್ , ಹಾಮಿಲ್ಟನ್ ಸರ್ಕಲ್ ಇವು ನನಗೆ ಒಳ್ಳೆ ಗಣಿತ ಪರೀಕ್ಷೆಯ ಅತಿ ಕಠಿಣ ಥೀರಮ್ ಗಳಂತೆ ಕಾಣುತ್ತಿತ್ತು.

ಬಿಡಿಸಲಾಗದ ಒಗಟು.

ಆ ವೇಳೆಗೆ ಈ ಅಡ್ಕಗಳೂ, ಗುಡ್ಡೆಗಳೂ, ಬೈಲುಗಳೂ ಹೀಗೆಯೇ ನನ್ನ ತಲೆ ತಿಂದಿತ್ತು.

ಆದರೆ ನಾನು ಆರ್ಕೆ ಮಣಿಪಾಲರ ಸ್ಥಳನಾಮ ಅಧ್ಯಯನಗಳ ಮೊರೆ ಹೊಕ್ಕು ಇವುಗಳಲ್ಲಿ ಬಹುತೇಕ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದೆ.

ಹಾಗಾಗಿ ಜಲ್ಲಿ ಗುಡ್ಡೆ, ಮಣ್ಣು ಗುಡ್ಡೆಗಳೂ, ದೇರೆಬೈಲುಗಳೂ, ಅಡ್ಯನಡ್ಕ, ಹಿರಿಯಡ್ಕಗಳೂ ಅಂತಹ ದೊಡ್ಡ ಭೂತವಾಗಿ ನನ್ನ ಮುಂದೆ ಕುಣಿಯುತ್ತಿರಲಿಲ್ಲ.

ನಾನೋ ಭಟ್ಕಳದಿಂದ ಕಣ್ಣೂರಿನವರೆಗೆ ಸುತ್ತಿದ್ದೇನೆ ಎಂದು ಎಲ್ಲರ ಮುಂದೆ ಕೊಚ್ಚಿಕೊಳ್ಳುತ್ತಾ ಮಂಗಳೂರಿನವರಿಗೇ ಮಂಗಳೂರಿನ ದಾರಿ ಹೇಳಬಲ್ಲೆ ಎಂದು ಮೀಸೆ ತಿರುವುತ್ತಿದ್ದೆ.

ಈ ಅಹಂಗೆ ಭಂಗ ತಂದದ್ದೇ ಇವು. ಈ ಸೂಟರ್, ಸ್ಟರಕ್, ಹಾಮಿಲ್ಟನ್ ಗಳು.

ಏನು ಮಾಡಿದರೂ ಇದರ ಅರ್ಥ ಹೊಳೆಯುತ್ತಲೂ ಇರಲಿಲ್ಲ. ಅಶೋಕವರ್ಧನರ ಅತ್ರಿ ಪುಸ್ತಕದ ಅಂಗಡಿಗೆ ಹೊಕ್ಕು ಹುಡುಕಿಯೂ ಸೋತಿದ್ದೆ.

ಇದು ಗೊತ್ತಾಗಲಿಲ್ಲ ಎನ್ನುವ ಕೊರತೆಯೊಂದಿಗೆ ನಾನು ಮಂಗಳೂರು ದಾಟಿ ಹೈದ್ರಾಬಾದ್ ಗೆ ಹೋದೆ.. ಅಲ್ಲಿಂದ ಬೆಂಗಳೂರು ಸೇರಿಕೊಂಡೆ

ಹೀಗಿರುವಾಗಲೇ ಒಂದು ದಿನ ೨೫೦೦ ಪುಟಗಳು ನನ್ನ ಎದುರು ಹರಡಿಕೊಂಡವು.

ನನ್ನ ಬದುಕಿಗೆ ಒಂದು ‘ಗಿಳಿಸೂವೆ’ಯಾಗಿರುವ ಬಿ ಎ ವಿವೇಕ ರೈ ಅವರ ‘ಸುಯಿಲ್’ಗೆ ಹೋದಾಗ ನನ್ನೆದುರು ಹರಡಿಕೊಂಡ ಹಾಳೆಗಳು ನನ್ನನ್ನು ಒಂದೇ ಏಟಿಗೆ ಎತ್ತಿ ಅರಬ್ಬೀ ಸಮುದ್ರಕ್ಕೂ, ಅಲ್ಲಿಂದ ಅಳಿವೆಗಳಿಗೂ, ಬಂದರಿಗೂ, ಬ್ರಿಟಿಷರ ಸಾಮ್ರಾಜ್ಯಕ್ಕೂ, ಜೈನ ಬೀಡುಗಳಿಗೂ, ಗುತ್ತುಗಳಿಗೂ, ಟಿಪ್ಪು ಸುಲ್ತಾನನ ಕೋಟೆಗಳಿಗೂ, ಜೋಗಿ ಮಠಕ್ಕೂ, ಚಾಪೆಲ್, ಚರ್ಚ್ ಗಳಿಗೂ, ಬ್ಯಾರಿ ಸಾಹಿತ್ಯ ಅಕ್ಯಾಡೆಮಿಗೂ, ಕೊಂಕಣರ ರಥ ಬೀದಿಗೂ.. ಗುಜರಾತಿ ಹೋಟೆಲ್ ಗೂ ಭೇಟಿ ಕೊಡಿಸಿ ಕುದ್ಮುಲ್ ರಂಗರಾಯರು, ಫಾದರ್ ಅಗಸ್ಟಸ್ ಮುಲ್ಲರ್, ಮೊಳಹಳ್ಳಿ ಶಿವರಾವ್, ಕಾರ್ನಾಡ್ ಸದಾಶಿವರಾವ್, ಮಣೇಲ್ ಶ್ರೀನಿವಾಸ ನಾಯಕ್, ಜಾರ್ಜ್ ಫರ್ನಾಂಡಿಸ್ ಅವರ ಕೈ ಕುಲುಕಿಸಿತು.

ನಾನು ವಿವೇಕ ರೈ ಅವರ ಮುಖ ನೋಡಿದೆ. ಅಭಿಮಾನದಿಂದ. ಮಂಗಳೂರು ಎಂಬ ಮಂಗಳೂರು ೨೫೦೦ ಪುಟಗಳಲ್ಲಿ ಹರಡಿ ನಿಂತಿತ್ತು.

‘ಮೊದಲು ಎರಡು ಸಂಪುಟದಲ್ಲಿ ಮಂಗಳೂರು ದರ್ಶನ ಮಾಡಿಸಬೇಕು ಎಂದಿತ್ತು. ಆದರೆ ನಾವು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಶುರು ಮಾಡಿದಾಗ ಇದು ಇಷ್ಟಕ್ಕೇ ಮುಗಿಯುವ ಕೆಲಸವಲ್ಲ ಅನಿಸಿ ಹೋಯಿತು. ಸಂಪಾದಕ ಮಂಡಳಿ ಸಂಗ್ರಹಿಸಿದ ಮಾಹಿತಿಗಳು ನಾಲ್ಕು ಸಂಪುಟಕ್ಕಾಗುವಷ್ಟಿತ್ತು. ಕೊನೆಗೆ ಮೂರು ಸಂಪುಟ ನಿಮ್ಮ ಮುಂದಿದೆ ‘ ಎಂದರು.

‘ಮಂಗಳೂರು ದರ್ಶನ’ದ ಈ ಮೂರೂ ಸಂಪುಟಗಳನ್ನು ನೋಡಿದಾಗ ‘ವಿವೇಕ’ ಹಾಗೂ ‘ಆನಂದ’ ಎರಡರ ಹೆಜ್ಜೆ ಗುರುತೂ ಸಿಕ್ಕಿಬಿಡುತ್ತದೆ.

ವಿವೇಕ ರೈ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ‘ಮೈಸೂರು ದರ್ಶನ’ದ ನಾಲ್ಕು ಸಂಪುಟಗಳನ್ನು ರೂಪಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಆಡಳಿತಕ್ಕೆ ೨೦೦ ವರ್ಷವಾದಾಗ ‘ಪೊಲಿ’ ಸ್ಮರಣ ಸಂಚಿಕೆ ರೂಪಿಸಿದ್ದರು.

ಈಗ ಈ ‘ಮಂಗಳೂರು ದರ್ಶನ’.

ಮಂಗಳೂರು ಮಹಾನಗರಪಾಲಿಕೆಗೆ ೧೫೦ ವರ್ಷಗಳಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಎ ಬಿ ಇಬ್ರಾಹಿಂ, ಅಧ್ಯಕ್ಷತೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಘನ ಕಾರ್ಯದ ಹೊಣೆ ಹೊತ್ತುಕೊಂಡಿತು.

ಅಧ್ಯಕ್ಷರಾಗಿದ್ದ ಇಬ್ರಾಹಿಂ ಕೋಡಿಜಾಲ್ ಹಾಗೂ ಆಯುಕ್ತರಾಗಿದ್ದ ಮೊಹಮ್ಮದ್ ನಜೀರ್ ಚುಕ್ಕಾಣಿ ಹಿಡಿದರು.

ಡಾ ವಾಮನ ನಂದಾವರ, ಡಾ ಸತ್ಯನಾರಾಯಣ ಮಲ್ಲಿಪಟ್ಟಣ, ಮುದ್ದು ಮೂಡುಬೆಳ್ಳೆ ಅವರು ಸಹಾಯಕ ಸಂಪಾದಕರ ಗುರುತರ ಜವಾಬ್ದಾರಿ ಹೊತ್ತರು.

೧೮ ತಿಂಗಳುಗಳ ಕಾಲ ಮಂಗಳೂರಿನ ಮೂಲೆ ಮೂಲೆಗಳಲ್ಲಿ ಕಂಡಿದ್ದು ಈ ಮಂಗಳೂರು ದರ್ಶನದ ತಂಡ.

ಮಂಗಳೂರಿನ ಒಳಗೆ ಸೇರಿ ಹೋದ ಮೇಲೆಯೇ ಗೊತ್ತಾದದ್ದು ಮಂಗಳೂರು ಒಂದು ನಗರ ಹಲವು ಹೆಸರು ಎಂದು.

ಅದು ತುಳುವರಿಗೆ ‘ಕುಡ್ಲ’ ಕೊಂಕಣಿಗರಿಗೆ ‘ಕೊಡಿಯಾಲ’ ಬ್ಯಾರಿಗಳಿಗೆ ‘ಮೈಕಾಲ’. ಓಹ್! ಒಂದು ನಗರಕ್ಕೆ ಅಷ್ಟೊಂದು ಹೆಸರಿದೆಯಾ.. ಎಂದು ಕಣ್ಣು ಬಾಯಿ ಬಿಟ್ಟಿದ್ದೆ.

ಆದರೆ ‘ದರ್ಶನ’ದ ಪುಟ ತಿರುಗಿಸುತ್ತಾ ಹೋದಂತೆ.. ಇದಕ್ಕೆ ಮಂಗಳಾಪುರ, ಮ್ಯಾಂಗರೌತ್, ಮಂಜರೂರ್ ಎನ್ನುವ ಹೆಸರುಗಳೂ ಇತ್ತು ಎನ್ನುವ ದರ್ಶನವೂ ಆಗಿ ಹೋಯ್ತು.

ನನಗೆ ಗೊತ್ತಿಲ್ಲದ ಮಂಗಳೂರೇ.. ಎನ್ನುವ ನನ್ನ ಅಹಮಿಕೆಯ ಬೆಲೂನಿಗೆ ಒಂದೊಂದು ಸಂಪುಟವೂ ಸೂಜಿಯಂತೆ ಚುಚ್ಚುತ್ತಾ ಹೋಯಿತು.

‘ಮಂಗಳೂರು ಏನು?’ ಎಂದು ನೇರಾ ನೇರ ವಿವೇಕ ರೈ ಅವರನ್ನೇ ಕೇಳಿದೆ.

‘ಮಂಗಳೂರು ದೇಶದ ಒಳಗೂ, ಹೊರಗೂ ಜನಪ್ರಿಯ, ಅರಬೀ ಸಮುದ್ರದ ದಡದಲ್ಲಿ ನೇತ್ರಾವತಿ, ಗುರುಪುರ ನದಿಗಳ ನಡುವೆ ಇರುವ ಊರು. ಇದು ಬಂದರಾಗಿ, ಪಟ್ಟಣವಾಗಿ, ನಗರವಾಗಿ ಬೆಳೆದ ವಿದ್ಯಮಾನವೇ ಒಂದು ರೋಚಕ ಸಂಕಥನ..’.

‘…ಇದು ಬೇರೆ ಬೇರೆ ಧರ್ಮ, ದೇಶ, ರಾಜ ಮನೆತನ, ಸಮುದಾಯಗಳ ಆಡಳಿತಕ್ಕೆ ಒಳಪಟ್ಟಿತ್ತು. ಅದರ ಎಲ್ಲಾ ಧನಾತ್ಮಕ ಅಂಶಗಳನ್ನು ಹೀರಿಕೊಂಡು ಒಂದು ಸಮ್ಮಿಶ್ರ ಸಂಕೀರ್ಣ ಪ್ರದೇಶವಾಗಿ ಬೆಳೆದ ಪರಿಯೇ ಬೆರಗನ್ನು ಉಂಟುಮಾಡುತ್ತದೆ’ ಎನ್ನುತ್ತಾರೆ.

‘ತುಳು, ಕನ್ನಡ, ಕೊಂಕಣಿ, ಬ್ಯಾರಿ, ಮಲೆಯಾಳಿ, ಮರಾಠಿ, ಉರ್ದು ಇಂಗ್ಲಿಷ್ ಎಲ್ಲವನ್ನೂ ಒಳಗೊಂದು ಭಾಷಾ ವಿಜ್ಞಾನಿಗಳಿಗೆ ಸವಾಲಾಗಿ ಬೆಳೆದಿರುವ ಊರು ಮಂಗಳೂರು’.

‘ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಬ್ರಹ್ಮ ಮುಂತಾದ ದೇವರುಗಳ ಆರಾಧನೆಯ ಜೊತೆಯೇ ತುಳುವ ಸಂಸ್ಕೃತಿಯ ಕೊರಗ ತನಿಯ, ಕೋರ್ದಬ್ಬು, ತನ್ನಿ ಮಾನಿಗ, ಕಾಣದ ಕಾಟದ, ಪಂಜುರ್ಲಿ, ಕಲ್ಲುಡ ಕಲ್ಲುರ್ಟಿ ಮುಂತಾದ ದೈವಗಳ ಕೋಲ ನೇಮಗಳ ಆವಾಸ ಸ್ಥಾನವೂ.’.

‘ನಾಥಪಂಥದ ಒಂದು ಮುಖ್ಯ ಕೇಂದ್ರವಾಗಿ ಕೂಡಾ ಐತಿಹಾಸಿಕವಾಗಿ ಮಂಗಳೂರು ಸಂಶೋಧಕರ ಗಮನವನ್ನು ಸೆಳೆದಿದೆ’.

‘ಮುಸ್ಲಿಂ ಸಂಸ್ಕೃತಿಯ ಭಿನ್ನ ವಿನ್ಯಾಸಗಳ ಮಸೀದಿಗಳು ಮತ್ತು ದರ್ಗಾಗಳೂ, ರೋಮನ್ ಕ್ರೈಸ್ತ ಪಂಥದ ಮತ್ತು ಪ್ರೊಟೆಸ್ಟೆಂಟ್ ಪಂಥದ ಭಿನ್ನ ಮಾದರಿ ಇಗರ್ಜಿಗಳು, ಜೈನ ಬಸದಿ, ವೀರಶೈವ ಮಠಗಳ ಜೊತೆಗೆಯೇ ಇತ್ತೀಚಿನ ಸಿಖ್ಖರ ಗುರುದ್ವಾರ ಕೂಡಾ ಮಂಗಳೂರಿನ ಬಹುಧರ್ಮದ ಸಾಮರಸ್ಯದ ಭೂಮಿಕೆಗೆ ಪ್ರವೇಶ ಮಾಡಿದೆ ‘

ವಿವೇಕ ರೈ ಅವರು ಬಣ್ಣಿಸುತ್ತಾ ಹೋದರು.

ನನಗೋ ‘ಸಹೋದಯ’ದ ನೆನಪು.

ಮಂಗಳೂರಿಗೆ ಕಾಲಿಟ್ಟರೆ ನಾನು ಸೇರಿಕೊಳ್ಳುವುದೇ ಸಹೋದಯದ ಅಂಗಳಕ್ಕೆ. ನನ್ನ ಎಲ್ಲಾ ಗೆಳೆಯರಿಗೂ ಆಶ್ಚರ್ಯ.

‘ಮಂಗಳೂರಿನಲ್ಲಿ ಈಗ ಪಾಶ್ ಹೋಟೆಲು ಉಂಟು ಮಾರಾಯ’ ಎನ್ನುತ್ತಾರೆ.

ನನಗೋ ‘ಮಂಗಳೂರು ಸಮಾಚಾರ’ ಪತ್ರಿಕೆ ಮುದ್ರಿತವಾಗುತ್ತಿದ್ದ,, ಅದರ ಅಚ್ಚುಮೊಳೆಗಳು ಇನ್ನೂ ಇರುವ, ಜೈಮಿನಿ ಭಾರತ, ತೊರವೆ ರಾಮಾಯಣ, ದಾಸರ ಪದಗಳು, ಕುಮಾರವ್ಯಾಸ ಭಾರತ, ಬಸವ ಪುರಾಣ, ರಾವಣೇಶ್ವರನ ದಿಗ್ವಿಜಯಗಳನ್ನು ತಾಳೆ ಗರಿಯಿಂದ ಬಿಡಿಸಿಕೊಂಡು ಬಂದು ಕೈಗಿತ್ತ ಮೋಗ್ಲಿಂಗ್, ಕಿಟ್ಟೆಲ್, ವೈಗ್ಲೆ ಅವರು ಇದ್ದ ಈ ಅಂಗಳವೇ ಎದೆಗೆ ಹತ್ತಿರ.

ನಾನು ಆ ಅಂಗಳಕ್ಕೆ ಎಷ್ಟು ಬಾರಿ ಕಾಲಿಟ್ಟಿದ್ದೇನೋ- ಹಾಗೆ ಒಮ್ಮೆ ಹೋದಾಗ ಅಲ್ಲಿ ಶ್ರೀನಿವಾಸ ಹಾವನೂರರು ತಮ್ಮ ಕೊಠಡಿಯ ಹೊರಗೆ ತಮ್ಮ ಯಾವತ್ತೂ ಪ್ರೀತಿಯ ಶ್ರೀಖಂಡವನ್ನು ಮೆಲ್ಲುತ್ತಾ ಕುಳಿತಿದ್ದವರು.

ನನ್ನನ್ನು ನೋಡಿದವರೇ ‘ಬಾ ಇಲ್ಲಿ’ ಎಂದು ಕೈಹಿಡಿದು ‘ಈ ಮೋಗ್ಲಿಂಗ್ ಎಂತ ಮನುಷ್ಯ ಮಾರಾಯ’ ಎಂದರು.

ನನಗೋ ಅವರನ್ನು ಸದಾ ಚುಡಾಯಿಸಿಯೇ ಗೊತ್ತು.. ‘ಎಂತ ಮನುಷ್ಯ’ ಎಂದೆ.

ಅವರು ಆಗಲೇ ಮೋಗ್ಲಿಂಗ್ ಲೋಕದಲ್ಲಿ ಕಳೆದು ಹೋಗಿದ್ದರು.

ಯಾವುದೋ ಸಾಲುಗಳ ಮೇಲೆ ಕಯ್ಯಾಡಿಸಿದರು. ನಾನು ಇಣುಕಿ ನೋಡಿದೆ. ಅಲ್ಲಿ ಮೊಗ್ಲಿಂಗ್ ಬರೆದಿದ್ದ ‘ಇನ್ನೂ ಹುಟ್ಟದಿರುವ ಕನ್ನಡದ ಬಾಲಕರ ಕೃತಜ್ಞತೆಗೆ ಪಾತ್ರನಾಗುವ ಹೆಮ್ಮೆ ನನ್ನದು’ ಎಂದಿತ್ತು.

ಹೌದಲ್ಲಾ.. ತಾಳೆ ಗರಿಗಳು ಮೋಗ್ಲಿಂಗ್ ಕಾಲದಲ್ಲಿಯೇ ಕಪ್ಪಗಾಗಿ ಹೊಗೆ ಹಿಡಿದಿತ್ತು. ಅದನ್ನು ಆತ ಅಲ್ಲಿಂದ ನಡೆಸಿಕೊಂಡು ಬಂದು ಪುಸ್ತಕದ ಹಾಳೆಗಳ ಒಳಗೆ ಪ್ರವೇಶ ಕೊಡಿಸದಿದ್ದರೆ ನಮಗೆಲ್ಲರಿಗೂ ಈ ಶ್ರೀಮಂತ ಸಾಹಿತ್ಯವೇ ಕೈ ತಪ್ಪಿ ಹೋಗುತ್ತಿತ್ತಲ್ಲಾ ಅನಿಸಿತು.

ಹೌದಲ್ಲಾ.. ಬಿ ಎ ವಿವೇಕ ರೈ ಅವರೂ ತಮ್ಮ ತಂಡವನ್ನು ಕಟ್ಟಿಕೊಂಡು ಹೊರಡದಿದ್ದರೆ ನಾಳಿನ ಪೀಳಿಗೆಗೆ ಮಂಗಳೂರು ಎಂದರೇನು ಎನ್ನುವುದರ ಚರಿತ್ರೆಯೇ ಸಿಕ್ಕದೇ ಹೋಗುತ್ತಿತ್ತಲ್ಲ ಅನಿಸಿತು.

ಅದೆಲ್ಲಾ ಸರಿ ನೀವು ಬಲ್ಮಠಕ್ಕೆ ‘ಬೆಲ್ ಮೌಂಟ್’ ಅಂತ ಕರೆದಿದ್ದು ಏಕೆ ಹೇಳಲೇ ಇಲ್ಲ ಅಂದಿರಾ..

ಹೇಳಲ್ಲ, ಬೇಕಿದ್ದರೆ ‘ಮಂಗಳೂರು ದರ್ಶನ’ದ ಪುಟ ತಿರುಗಿಸಿ’

ಅಹಾ! ಸಚಿವರ ಕ್ಷೇತ್ರದಲ್ಲಿ ಸಾಮಾಜಿಕ ಅಂತರ

ಚಿಕ್ಕನಾಯಕನಹಳ್ಳಿ: ಕ್ಷೇತ್ರದ ಶಾಸಕರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ, ಕೊರೊನಾದಿಂದ ಹೆದರಿ ಎಲ್ಲರೂ ಮನೆಯಲ್ಲಿರುವಾಗಲೂ ಜಿಲ್ಲೆಯ ಎಲ್ಲೆಡೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಸೋಂಕು ತಡೆಯಲು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಅವರದೇ ಕ್ಷೇತ್ರದ ಅಧಿಕಾರಿಗಳಿಗೆ ಜಾಗೃತಿ ಆದಂತೆ ಕಾಣುತ್ತಿಲ್ಲ.

ಪಟ್ಟಣದ ತಾಲ್ಲೂಕು ಆಫೀಸಿನ ಪಹಣಿ ಕೇಂದ್ರದ ದೃಶ್ಯವನ್ನು ಚಿತ್ರದಲ್ಲಿ ಕಾಣಬಹುದು.

ಕೋವಿಡ್ – 19 ರೋಗ ಹಬ್ಬುತ್ತಿರುವ ಸಮಯದಲ್ಲಿ ಎಲ್ಲವನ್ನೂ ಹೇಳಬೇಕಾದ ತಹಸೀಲ್ದಾರ್ ಅವರು ಇರುವ ಆಫೀಸಿನಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ.

ಪಹಣಿ ಪಡೆಯಲು ಜನರು ಗುಂಪು ಗುಂಪು ಗೂಡುತ್ತಿದ್ದಾರೆ. ಇಡೀ ತಾಲ್ಲೂಕಿಗೆ ಮಾದರಿಯಾಗಬೇಕಾದ ಜಾಗ ಇದು. ಆದರೆ ಹೇಳುವವರು, ಕೇಳುವವರು ಯಾರು ಇಲ್ಲದಾಗಿದೆ.

ತಾಲ್ಲೂಕಿಗೆ ಈಗಾಗಲೇ ಸೋಂಕು ಹರಡಿದೆ. ಎಲ್ಲಡೆ ಸಾಮಾಜಿಕ ಅಂತರ ಕಾಪಾಡಲು ಅಧಿಕಾರಿಗಳು ಮುಂದಾಗಬೇಕು ಎಂಬ ಒತ್ತಾಯ ಜನರಿಂದಲೂ ಕೇಳಿ ಬರುತ್ತಿದೆ.

ನನಗೆ ಸಾಮಾಜಿಕ ಅಂತರ ಕಾಪಾಡಲು ಇಷ್ಟ. ಆದರೆ ಹಾಗೆ ನಿಂತರೆ ಬೇರೆಯವರು ನನ್ನ ಮುಂದೆ ಬರುತ್ತಾರೆ. ಅನಿವಾರ್ಯವಾಗಿ ನಾನು ಅವರೊಂದಿಗೆ ಗುಂಪುಗೂಡಿದ್ದೇನೆ ಎಂದು ರೈತರೊಬ್ಬರು ಹೇಳಿದರು.

ಅಧಿಕಾರಿಗಳು, ಕೆಲವೇ ಜನರ ಕೆಲಸಗಳಿಂದ ಶಾಸಕರಿಗೆ ಕೆಟ್ಟ ಬರುತ್ತದೆ. ನಮ್ಮ ತಾಲ್ಲೂಕಿನಲ್ಲಿ ಕೋವಿಡ್ ಹರಡದಂತೆ ತಡೆಯುವ ಜವಾಬ್ದಾರಿ ಜನರ ಮೇಲೂ ಇದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳನ್ನಷ್ಟೇ ಟೀಕಿಸುವುದರಿಂದ ಏನು ಪ್ರಯೋಜನ ಇಲ್ಲ. ಎಂದು ಅಭಿಪ್ರಾಯಪಟ್ಟರು.

ಸರಗಳವು

ಪಾವಗಡದಲ್ಲಿ ಬುಧವಾರ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ಶಿಕ್ಷಕಿಯ ಚಿನ್ನದ ಸರ ಕದ್ದು ಕಳ್ಳ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.

ತಾಲ್ಲೂಕಿನ ದೊಡ್ಡಹಳ್ಳಿಯಲ್ಲಿ ಶಿಕ್ಷಕಿಯಾಗಿರುವ ಲಲಿತಾಂಬ ಎಂಬುವರು ಪಟ್ಟಣದ ಬನಶಂಕರಿಯಿಂದ ಬಸ್ ನಿಲ್ದಾಣದತ್ತ ಹೋಗುತ್ತಿದ್ದಾಗ ಕಳ್ಳ ಸುಮಾರು 1.5 ಲಕ್ಷ ಮೌಲ್ಯದ ಸರವನ್ನು ಕದ್ದು ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈಗ ದೌಲತ್ ಬೇಗ್ ಓಲ್ಡಿ ಮೇಲೆ ಚೀನಾ ಕಣ್ಣು

0

ವಿನಯ್ ಹೆಬ್ಬೂರು


ಲಡಾಖ್‌ನ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ನದಿ ಕಣಿವೆಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ತೊಂದರೆ ಸೃಷ್ಟಿಸಿದ ನಂತರ, ಚೀನಾ ಕಣ್ಣು ಈಗ ದೌಲತ್ ಬೇಗ್ ಓಲ್ಡಿ ರಸ್ತೆ ಮೇಲೆ ಬಿದ್ದಿದೆ.

ಕಾರಕೋರಂ ಪರ್ವತ ಶ್ರೇಣಿಯಲ್ಲಿ ಇರುವ ಈ ಪ್ರದೇಶವನ್ನು ಆಕ್ರಮಿಸಿಕೊಂಡರೆ ಪಾಕಿಸ್ತಾನ ಮತ್ತು ಯುರೋಪ್ ಕಡೆಗೆ ಸಾಗುವ ತಮ್ಮ ಹೆದ್ದಾರಿಗಳಿಗೆ ಆನುಕೂಲವಾಗುತ್ತದೆ ಎಂಬುದು ಚೀನಿಯರ ದುರಾಲೋಚನೆ.ಇದೇ ಪ್ರದೇಶದಲ್ಲಿ ಸಿಪಿಇಸಿ ರಸ್ತೆ ಹಾದು ಹೋಗುತ್ತದೆ.

“ಡಿಬಿಒ ವಲಯದಲ್ಲಿ, ಚೀನಿಯರು ನಮಗೆ ತೊಂದರೆ ನೀಡುತ್ತಿರುವ ಪ್ರದೇಶ ಗಾಲ್ವಾನ್ ನದಿ ಕಣಿವೆಯ ಪಕ್ಕದಲ್ಲಿವೆ ಮತ್ತು ಡಿಬಿಒ ವಲಯದ ಭಾರತೀಯ ಬೆಟಾಲಿಯನ್ಗಳಿಗೆ ಹತ್ತಿರದಲ್ಲಿವೆ”.

ಪಿಪಿ 15, ಪಿಪಿ 17 ಮತ್ತು ಪಿಪಿ 17 ಎ ಬಳಿಯ ರಸ್ತೆಯಲ್ಲಿ ಭಾರೀ ವಾಹನಗಳು ಮತ್ತು ಫಿರಂಗಿಗಳನ್ನು ಎಲ್‌ಎಸಿಗೆ ಹತ್ತಿರಕ್ಕೆ ಸಾಗಿಸಲು ಚೀನಿಯರು ಮೂಲಸೌಕರ್ಯ ತೀವ್ರವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಡಿಬಿಒ ವಲಯ ಅಕ್ಸಾಯ್ ಚಿನ್ ಪ್ರಸ್ಥಭೂಮಿ ಪ್ರದೇಶದಲ್ಲಿದ್ದು .ಇದು ಭಾರತೀಯ ವಶದಲ್ಲಿರುವ ಅಕ್ಸಾಯ್‌ ಚಿನ್‌ ಪ್ರದೇಶವಾಗಿದೆ.

ಪಾಂಗೊಂಗ್ ತ್ಸೋನ ಬೆರಳಿನ ಪ್ರದೇಶದಲ್ಲೂ, ಚೀನಿಯರು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ ಮತ್ತು ಬೆರಳು ನಾಲ್ಕು ಮತ್ತು ಪಕ್ಕದ ಭಾಗಗಳಲ್ಲಿ ತಮ್ಮ ಸ್ಥಾನಗಳನ್ನು ಬಲಪಡಿಸಿದ್ದಾರೆ.

ಚೀನಾ ಸುಖೋಯ್ -30 ವಿಮಾನಗಳನ್ನು ತನ್ನ ಮುಂಚೂಣಿ ನೆಲೆಗಳಿಗೆ ಸಮೀಪವಾಗಿರುವ ಪ್ರದೇಶದಲ್ಲಿ ಭಾರತೀಯ ಪ್ರದೇಶಕ್ಕೆ ಹತ್ತಿರದಲ್ಲಿ ನಿಯೋಜಿಸಿದ್ದಾರೆ.
ಸ್ಯಾಟಲೈಟ್‌ಗಳು ಹಾಗೂ ಗುಪ್ತಚರ ಮಾಹಿತಿ ನಂಬುವುದಾದರೆ ಚೀನಾ ವಾಯು ರಕ್ಷಣಾ ಗನ್ ಬ್ಯಾಟರಿ ನಿಯೋಜಿಸಿದ್ದು ಕ್ಷಿಪಣಿ ನಿರೋಧಕ ವ್ಯವಸ್ಥೆ ಅಳವಡಿಸಲಾಗಿದೆ.

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಈ ಪ್ರದೇಶದ ಮುಂಚೂಣೀ ನೆಲೆಗಳಲ್ಲಿ ನಿಯೋಜಿಸಲಾಗಿದೆ.

ಭಾರತ ಮತ್ತು ಚೀನಾ ನಡುವೆ ಮಾತುಕತೆಗಳು ನಡೆಯುತ್ತಿದ್ದು, ಅಲ್ಲಿ ಒಪ್ಪಂದಗಳಾಗುತ್ತಿದ್ದರೂ ಚೀನಿಯರು ತಮ್ಮ ಬದ್ಧತೆಗಳನ್ನು ಮತ್ತು ಆಶ್ವಾಸನೆಗಳನ್ನು ಗೌರವಿಸುವಲ್ಲಿ ವಿಫಲರಾಗಿದ್ದಾರೆ.

ನಾಲಿಗೆ ಕಟ್ಟಿ ಹಾಕುವ ಇಂಗ್ಲಿಷ್

ಜಿ ಎನ್ ಮೋಹನ್


ಸಿ.ಎಚ್. ಹನುಮಂತರಾಯರ ‘ವಕೀಲರೊಬ್ಬರ ವಗೈರೆಗಳು’ ಪುಸ್ತಕ ಓದುತ್ತಾ ಕುಳಿತಿದ್ದೆ.

ಕರ್ನಾಟಕ ಕಂಡ ಅನೇಕ ಸೆನ್ಸೇಷನಲ್ ಪ್ರಕರಣಗಳನ್ನು ಹ್ಯಾಂಡಲ್ ಮಾಡಿದವರು ಹನುಮಂತರಾಯರು.

ಇಡೀ ಪುಸ್ತಕ ಎಂತಹ ಪತ್ತೇದಾರಿ ಕಾದಂಬರಿಗಳನ್ನೂ ನಿವಾಳಿಸಿ ಒಗೆಯುವಂತಿತ್ತು.

ಇಂತಹ ಹನುಮಂತರಾಯರು ತಮ್ಮ ಊರು ಚಿಕ್ಕಬೆಳವಂಗಲದಿಂದ ಬೆಂಗಳೂರಿಗೆ ಬಂದು ತಟ್ಟಿದ್ದು ಸೇಂಟ್ ಜೋಸೆಫ್ ಕಾಲೇಜಿನ ಬಾಗಿಲು,

ಇಂಗ್ಲೀಷ್ ಸೆಂಟು ವಾಸನೆಯ ನಡುವೆ ಅಪ್ಪಟ ಕನ್ನಡದ ಹುಡುಗ.

ಡಿಬೇಟ್ ಎಂದರೆ ಹನುಮಂತರಾಯರಿಗೆ ಪಂಚಪ್ರಾಣ. ಎಲ್ಲಿ ಹೋದರು ಶೀಲ್ಡ್ ಕಟ್ಟಿಟ್ಟ ಬುಟ್ಟಿ. ಏಳು ವರ್ಷ ಡಿಬೇಟ್ ನಲ್ಲಿ ಸೋತು ಸುಣ್ಣಗಾಗಿದ್ದ ಕಾಲೇಜಿಗೆ ಹನುಮಂತರಾಯರು ಶೀಲ್ಡ್ ತಂದುಕೊಟ್ಟರು.

ಸಂತಸಗೊಂಡ ಪ್ರಿನ್ಸಿಪಾಲರು ಹನುಮಂತರಾಯರನ್ನು ಚೇಂಬರ್ ಗೆ ಕರೆಸಿದರು.

ತನ್ನ ಮುಂದೆ ನಿಂತ ಹುಡುಗನನ್ನು ಪ್ರಿನ್ಸಿಪಾಲ್ ಪ್ರೀತಿಯಿಂದ ‘ವಾಟ್ ಈಸ್ ಯುವರ್ ಫಾದರ್?’ ಅಂತ ಕೇಳಿದರು.

ತಕ್ಷಣ ಹನುಮಂತರಾಯರು ‘my father is a man’ ಅಂದರು.

ಕಕ್ಕಾವಿಕ್ಕಿಯಾದ ಪ್ರಿನ್ಸಿಪಾಲರಿಗೆ ಮಾತೇ ಹೊರಡಲಿಲ್ಲ.

ಮಗನ ಮಾಂಸವನ್ನೇ ತಿಂದ ಬ್ರೂಕ್ಸ್, ಮಗಳನ್ನೇ ಕೊಂದ ತಾಯಿ, ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರ ಮೊಮ್ಮಗ ದರೋಡೆಕೋರನಾದದ್ದು, ಸೊಸೆ ಬೀನಾಳನ್ನೇ ಇಡೀ ರಾತ್ರಿ ಕತ್ತರಿಸಿದ ಪ್ರೊಫೆಸರ್ ವಿಷಕಂಠಯ್ಯ, ಲಲಿತಮಹಲ್ ಕೊಳದಲ್ಲಿ ನಡೆದ ಕೊಲೆ, ನಗರಿ ಬಾಬಯ್ಯ ನಕ್ಸಲೈಟ್ ಪುರಾಣ, ಪ್ರಿನ್ಸಿಪಾಲನನ್ನೇ ಕೊಂದ ವಿದ್ಯಾರ್ಥಿ…. ಹೀಗೆ ಒಂದಕ್ಕಿಂತಾ ಒಂದು ಕಾಡುವ ಪ್ರಕರಣ ಈ ಪುಸ್ತಕದಲ್ಲಿದೆ.

ಆದರೆ ಇದನ್ನೆಲ್ಲಾ ಮೀರಿ ನನ್ನನ್ನು ಕಾಡಿದ್ದು ‘ಮೈ ಫಾದರ್ ಈಸ್ ಎ ಮ್ಯಾನ್’ ಪ್ರಕರಣ.

ರಂಜಾನ್ ದರ್ಗಾ ತುಂಬ ಹಿಂದೆ ‘ಸುಧಾ’ದಲ್ಲಿ ಒಂದು ಲೇಖನ ಬರೆದಿದ್ದರು.’ನಗರವೆಂಬ ಚಕ್ರವ್ಯೂಹದಲ್ಲಿ ಹಳ್ಳಿಗರೆಂಬ ಅಭಿಮನ್ಯುಗಳು’ ಅಂತ.

ಈ ಪ್ರಕರಣ ಓದಿದ ತಕ್ಷಣ ನನಗೆ ಯಾಕೋ ಆ ಲೇಖನ ಮೇಲಿಂದ ಮೇಲೆ ನೆನಪಿಗೆ ಬಂತು

ಹೌದಲ್ಲಾ ಇಂಗ್ಲಿಷ್ ಎಂಬ ಚಕ್ರವ್ಯೂಹದಲ್ಲಿ ಎಷ್ಟೊಂದು ಅಭಿಮನ್ಯುಗಳು ಸಿಕ್ಕಿಹಾಕಿಕೊಂಡಿದ್ದಾರೆ ಅಂತ.

‘ಇಫ್ ಯು ಕಂ ಟುಡೇ ಇಟ್ಸ್ ಟೂ ಅರ್ಲಿ, ಇಫ್ ಯು ಕಂ ಟುಮಾರೋ, ಇಟ್ಸ್ ಟೂ ಲೇಟ್…. ಅಂತ ರಾಜ್ ಕುಮಾರ್ ಸಿನಿಮಾದಲ್ಲಿ ಗಿಟಾರ್ ಮೀಟುತ್ತಾ ಹಾಡಿದ್ದು ಬೇಡಾ ಎಂದರೂ ನೆನಪಿಗೆ ಬರುತ್ತಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೇ ಅಡ್ಡ ಹಾಕಿ ಪ್ರಶ್ನೆ ಕೇಳುವ, ಸಿಡಿ ಸಿಡಿ ಎನ್ನುವ ದೇವೇಗೌಡರಿಗೂ ಇರಸು ಮುರಸಾಗುವ ಪ್ರಶ್ನೆ ಎದುರಿಗಿಡುವ, ನೀವಿನ್ನೂ ಬಚ್ಚಾ ಎನ್ನುವಂತೆ ನೋಡುವ ಸಿದ್ದರಾಮಯ್ಯನವರಿಗೂ ಪ್ರಶ್ನೆ ಎಸೆಯುವ ಪತ್ರಕರ್ತರು ಅದೇ ಸೋನಿಯಾ ಗಾಂಧಿಯೋ, ಸಚಿನ್ ತೆಂಡುಲ್ಕರೋ, ಸಾನಿಯಾ ಮಿರ್ಜಾ, ಪ್ರಿಯಾಂಕಾ ಚೋಪ್ರ ಎದುರಾದರೆ ಸಾಕು ಬಾಯಿ ಕಳೆದುಕೊಂಡುಬಿಡುತ್ತಾರೆ.

ಇವರನ್ನು ಪ್ರಶ್ನಿಸುವ ಧೈರ್ಯ ಇಲ್ಲ ಅಂತಲ್ಲ. ಕೇಳಲು ಪ್ರಶ್ನೆಗಳಿಲ್ಲ ಅಂತಲ್ಲ, ಅವರ ಬಗ್ಗೆ ಹೋಂವರ್ಕ್ ಮಾಡಿಲ್ಲ, ಅಂತಲ್ಲ..

ಎಲ್ಲರೊಂದಿಗೆ ಗುದ್ದಾಟಕ್ಕಿಳಿಯುವ ಅವರ ನಾಲಿಗೆ ಇದ್ದಕ್ಕಿದ್ದಂತೆ ಸತ್ತುಹೋಗುವಂತೆ ಮಾಡುವುದು ಇನ್ನಾವುದೂ ಅಲ್ಲ- ಇಂಗ್ಲಿಷ್.

ನನಗೆ ಇನ್ನೂ ನೆನಪಿದೆ. ಪ್ರತಿಮಾ ಬೇಡಿ ಹೆಸರಘಟ್ಟದಲ್ಲಿ ನೃತ್ಯಗ್ರಾಮಕ್ಕೆ ಚಾಲನೆ ಕೊಟ್ಟಿದ್ದರು. ದೊಡ್ಡ ಗುಲ್ಲೆದ್ದಿತ್ತು.

ಕಥಕ್ ಗ್ಯಾಕೆ ಜಾಗ? ಹೊರರಾಜ್ಯದ ಪ್ರತಿಮಾ ಬೇಡಿಗೇಕೆ ಮಣೆ? ರಾಮಕೃಷ್ಣ ಹೆಗಡೆಗೇಕೆ ಇಷ್ಟೊಂದು ಆಸಕ್ತಿ? ಅಂತೆಲ್ಲಾ,

ಪ್ರತಿಮಾ ಬೇಡಿ ಸಹಾ ಬಿಂದಾಸ್ ಶೈಲಿಯಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಬಿಯರ್ ಇಟ್ಟು ಈ ದೇಶ ತನ್ನಿಂದ ಎಂಟನೆಯ ಅದ್ಭುತಕ್ಕಾಗಿ ಕಾಯುತ್ತಿದೆ ಎನ್ನುವಂತೆ ಮಾತಾಡಿ ಈಗ ಕೇಳಿ ಪ್ರಶ್ನೆ ಅಂದರು.

ಯಸ್, ನನ್ನ ಬಳಿ ನೂರಾರು ಪ್ರಶ್ನೆ ಇತ್ತು. ‘ಕೋಡಗಾನ ಕೋಳಿ ನುಂಗಿತ್ತು…. ನೋಡವ್ವಾ ತಂಗಿ’ ಅನ್ನೋ ರೀತಿ ನನ್ನ ಪ್ರಶ್ನೆಗಳನ್ನೆಲ್ಲಾ ಇಂಗ್ಲಿಷ್ ನುಂಗಿ ನೀರು ಕುಡಿದು ಕುಳಿತಿತ್ತು.

‘ಈಟಿವಿ’ಯಲ್ಲಿದ್ದ ಒಂದು ದಿನ ರಾಜಸ್ಥಾನ ಚಾನೆಲ್ ನ ಚೀಫ್ ನನ್ನ ಬಳಿ ಬಂದರು.

ಎಷ್ಟು ಹೊತ್ತಾದರೂ ಏನೂ ಮಾತಾಡಲಿಲ್ಲ. ಏನು ಎಂಬಂತೆ ನೋಡಿದೆ. ಅಕ್ಕ ಪಕ್ಕ ಯಾರೂ ಇಲ್ಲ ಅಂತ ಖಾತರಿಪಡಿಸಿಕೊಂಡ. ಆತ ಪಿಸುಮಾತಿನಲ್ಲಿ ‘ಗ್ರಾಫಿಟಿ ಅಂದ್ರೆ ಸೆಕ್ಸ್ ಅಲ್ವಾ’ ಅಂದ್ರು.

ಕಮ್ಯುನಿಕೇಷನ್ ವಿದ್ಯಾರ್ಥಿಯಾಗಿದ್ದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ.

ಗೋಡೆ ಮೇಲಿನ ಬರಹ ಅನ್ನೋದು ‘ಗ್ರಾಫಿಟಿ’ ಅಂತ ಓದಿ ಕೇಳಿ ಗೊತ್ತಿದ್ದ ನನಗೆ ಈತ ಹೊಸ ಅರ್ಥ ಕಂಡುಹಿಡಿದಿದ್ದು ನೋಡಿ ಆಶ್ಚರ್ಯ ಆಗಿತ್ತು.

ಆತ ಒಳ್ಳೆಯ ಕವಿ. ರಾಜಸ್ಥಾನದ ಸಂಸ್ಥೆಗಳಿಂದ ಗೌರವ ಪಡೆದಾತ. ಹಾಗಾಗಿ ಇಲ್ಲಿ ಏನೋ ಸ್ಪೆಲಿಂಗ್ ಮಿಸ್ಟೇಕ್ ಆಗಿದೆ ಅನಿಸಿತು. ‘ಯಾಕೆ ಅಂತ ಕೇಳಿದೆ.

‘ಟೈಮ್ಸ್ ಆಫ್ ಇಂಡಿಯಾ’ದ ಸ್ಪೋರ್ಟ್ಸ್ ಪುಟದಲ್ಲಿ ‘ಗ್ರಾಫಿಟಿ’ ಅನ್ನೋ ಪುಟಾಣಿ ಕಾಲಂ ಇದೆ. ಸ್ವಲ್ಪ ಗರ್ಮಾಗರಂ ಕಾಲಂ ಅದು. ಯಾರದ್ದಾದ್ರೂ ಒಂದು ಅಹಾ… ಅನ್ನುವ ಫೋಟೋ ಅದರಲ್ಲಿ ಗ್ಯಾರಂಟಿ.

ಯಾವಾಗಲೂ ಈ ಬಿಚ್ಚಮ್ಮಂದಿರ ಫೋಟೋಗಳನ್ನೇ ಅಲ್ಲಿ ನೋಡಿದ್ದ ಆತ ‘ಗ್ರಾಫಿಟಿ’ ಎಂದರೆ ಸೆಕ್ಸ್ ಅಂತ ಅರ್ಥ ಮಾಡಿಕೊಂಡಿದ್ದ.

ಸಮಸ್ಯೆ ಆತನದ್ದಲ್ಲ ಇಂಗ್ಲಿಷ್ ನದ್ದು. ಒಬ್ಬ ಪ್ರತಿಭಾವಂತ ಜರ್ನಲಿಸ್ಟ್ ಇಂಗ್ಲಿಷ್ ಮುಂದೆ ಕುಬ್ಜನಾಗಿ ಹೋಗಿದ್ದ.

ಕೆ ಎ ಎಸ್ ಅಧಿಕಾರಿಯಾಗಿರುವ ಮಮತಾ ಗೌಡ ನನ್ನ ಕ್ಲಾಸ್ ಮೇಟ್. ಜರ್ನಲಿಸಂ ಓದುತ್ತಿದ್ದ ಸಮಯದಲ್ಲಿ ನಾನು ‘ಪ್ರಜಾವಾಣಿ’ಯಲ್ಲಿ ಆಕೆ ‘ಡೆಕನ್ ಹೆರಾಲ್ಡ್’ನಲ್ಲಿ ಇಂಟರ್ನ್ಷಿಪ್ ಮಾಡ್ತಾ ಇದ್ದ ದಿನಗಳು ಅವು.

ಒಂದು ದಿನ ಅಲ್ಲಿ ಇಲ್ಲಿ ಸುತ್ತಾಡಿ ಬಂದು ಡೆಕ್ಕನ್ ಹೆರಾಲ್ಡ್ ಮೆಟ್ಟಲು ಹತ್ತಿದಾಗ ಆಕೆ ‘ಹ್ಯಾಂಗ್ ಅರೌಂಡ್ ಹಿಯರ್’ ಅಂದವಳೇ ಎಲ್ಲೋ ತೂರಿಕೊಂಡಳು.

ಇದೇನಪ್ಪಾ ಇದುವರೆಗೂ ನೆಟ್ಟಗಿದ್ದ ಇವಳು ಈಗ ‘ಇಲ್ಲೇ ನೇಣು ಹಾಕ್ಕೋ ಅಂತ ಹೇಳ್ತಿದ್ದಾಳೆ’ ಅಂತ ತಬ್ಬಿಬ್ಬಾಗಿ ಹೋಗಿದ್ದೆ

‘ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು’ ಅನ್ನೋದಕ್ಕೆ ಇಂಗ್ಲಿಷ್ ನಲ್ಲಿ ‘ಹ್ಯಾಂಗ್ ಅರೌಂಡ್ ಹಿಯರ್’ ಅಂತಾರೆ ಅನ್ನೋದು ಅರ್ಥ ಆಗೋದಕ್ಕೆ ನನಗೆ ದಶಕಗಳು ಬೇಕಾಯ್ತು.

ಇನ್ನೊಂದು ಪ್ರಕರಣ. ಉರ್ದು ಚಾನೆಲ್ ನ ಮುಖ್ಯಸ್ಥ ರಾಜೇಶ್ ರಾಯ್ನಾ ಇದ್ದಕ್ಕಿದಂತೆ ಜೋರಾಗಿ ನಗಲಾರಂಭಿಸಿದರು.

ನಾನು ಅವರ ಕ್ಯಾಬಿನ್ ನಲ್ಲಿ ಇಣುಕಿ ನೋಡಿದೆ. ಉಹುಂ ಯಾರೂ ಇಲ್ಲ. ಒಬ್ಬರೇ ಕುಳಿತು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ರು.

ಏನು ಅಂದೆ.

ಅವರು ನನ್ನೆದುರಿಗೆ ತಮ್ಮ ಕಾಶ್ಮೀರ ವರದಿಗಾರನ ರಿಪೋರ್ಟ್ ಒಂದನ್ನ ತಳ್ಳಿದರು.

ಅದರ ಮೇಲೆ ಕಣ್ಣಾಡಿಸಿದ ನನಗೂ ನಗು ತಡೆಯಲಾಗಲಿಲ್ಲ. ರಾಜೇಶ ರಾಯ್ನಾ ಜತೆ ನಾನೂ ಸೇರಿಕೊಂಡೆ.

ಆಗಿದ್ದು ಇಷ್ಟು ಕಾಶ್ಮೀರದ ವರದಿಗಾರ ಕಳಿಸಿದ್ದ ವರದಿಯಲ್ಲಿ ಆತನ ವಿದ್ಯಾಭಾಸದ ಮಟ್ಟ ‘ಇಂಟರ್’ ಎಂದು ಬರೆಯುವ ಬದಲು ‘ಆತ ಇಂಟರ್ ಕೋರ್ಸ್ ಮಾಡಿದ್ದಾನೆ’ ಅಂತ ಬರೆದಿದ್ದ.

ಕಾಶ್ಮೀರದಲ್ಲಿ ಉಗ್ರಗಾಮಿಗಳ ಬಂದೂಕನ್ನೂ ಸಲೀಸಾಗಿ ಎದುರಿಸಲು ಗೊತ್ತಿದ್ದ ಆ ವರದಿಗಾರ ಇಂಗ್ಲಿಷ್ ನ ನಳಿಕೆಯ ಎದುರು ಶರಣಾಗಿ ಹೋಗಿದ್ದ.

ಹುಬ್ಬಳ್ಳಿಯ ಐಬಿಎಂಆರ್ ಸ್ಕೂಲ್ ನಲ್ಲಿ ಮೀಡಿಯಾ ಸೆಮಿನಾರ್ ಇತ್ತು. ನಯನಾ ಗಂಗಾಧರ್ ಪತ್ರಿಕೋದ್ಯಮದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಡಿ ಎಂದು ಕೇಳಿದ್ದರು.

ಫಟ್ ಅಂತ ಒಂದು ಪ್ರಶ್ನೆ ಬಂತು. ಒಳ್ಳೆ ಜರ್ನಲಿಸ್ಟ್ ಆಗೋದಿಕ್ಕೆ ಏನು ಪ್ರಿಪರೇಶನ್ ಬೇಕು ಅಂತ. ನಾನು ಒಂದು ಕ್ಷಣವೂ ಯೋಚಿಸದೇ ಇಂಗ್ಲಿಷ್ ಅಂದೆ.

ಒಂದು ಕಾಲ ಇತ್ತು ನಮ್ಮ ವಿಧಾನಸೌಧ, ನಮ್ಮ ಸಿಎಂ, ನಮ್ಮ ಪ್ರಾಬಂ ಅನ್ನೋದಷ್ಟೇ ಇದ್ದ ಕಾಲ. ಆದರೆ ಯಾವಾಗ ಜಾಗತೀಕರಣದ ಗಾಳಿ ಬೀಸೋದಿಕ್ಕೆ ಶುರುವಾಯ್ತೋ ಒಂದೇ ಏಟಿಗೆ ಜರ್ನಲಿಸಂನ ಖದರ್ ಬದಲಾಗಿ ಹೋಯಿತು.

ಐಟಿ, ಬಿಟಿ, ಸಿನಿಮಾ, ವಾಣಿಜ್ಯ, ಯಾವುದಕ್ಕೂ ಗಡಿ ಗೋಡೆ ಇಲ್ಲವಾಗಿ ಹೋಯಿತು. ದಿನಕ್ಕೊಬ್ಬರು ವಿಐಪಿ ಸಿಗುವ ಕಾಲದಲ್ಲಿ ಆಟೋಮ್ಯಾಟಿಕ್ ಆಗಿ ಇಂಗ್ಲಿಷ್ ಎಲ್ಲರ ತಲೆಯ ಮೇಲೆ ಬಂದು ಕುಳಿತಿದೆ.

ಪತ್ರಿಕೋದ್ಯಮ ವಿದ್ಯಾರ್ಥಿಗಳ ಕ್ಯಾಂಪಸ್ ಇಂಟರ್ವ್ಯೂಗೆ ಹೋಗಿದ್ದೆವು. ಮಾತನಾಡುತ್ತಾ ಒಬ್ಬ ವಿದ್ಯಾರ್ಥಿಗೆ ‘ವೇರ್ ಡು ಯು ಪುಟ್ ಅಪ್?’ ಅಂತ ಕೇಳಿದೆ.

ತಕ್ಷಣ ಆತ ‘ಸಾರ್ ಪುಟ್ಟಪ್ಪನವರ ಮನೆ ಉದಯರವಿ. ಇಲ್ಲೇ ಕುವೆಂಪು ನಗರದಲ್ಲಿದೆ’ ಅಂತ.

ಪರಿಸ್ಥಿತಿ ಹೀಗಿದೆ ಅಂತ ಗೊತ್ತಿದ್ದರಿಂದಲೋ ಏನೋ ರಾಮೋಜಿರಾಯರು ‘ಇಂಗ್ಲಿಷ್, ಇಂಗ್ಲಿಷ್ ಅಂಡ್ ಇಂಗ್ಲಿಷ್’ ಅಂತ ತಾಕೀತು ಮಾಡಿದ್ದರು.

ಪತ್ರಕರ್ತರಾಗುವವರಿಗೆ ಮಿನಿಮಮ್ ಇಂಗ್ಲಿಷ್ ಜ್ಞಾನಾನಾದ್ರೂ ಇಲ್ಲದೆ ಹೋದ್ರೆ ಹೇಗೆ ಅಂತ.

‘ಕನ್ನಡಪ್ರಭ’ ಹೊಸ ಪತ್ರಕರ್ತರ ಆಯ್ಕೆಗೆ ಲಿಖಿತ ಪರೀಕ್ಷೆ ನಡೆಸಿದಾಗ ಎದೆ ಒಡೆಯುವ ಉತ್ತರ ಬಂದಿತ್ತು.

Ugly ಅನ್ನುವ ಪದದ ಅರ್ಥವೇ ಬಹುತೇಕ ವಿದ್ಯಾರ್ಥಿಗಳಗೆ ಗೊತ್ತಿರಲಿಲ್ಲ. Illusion ಅಂದರೆ ಏನು ಎಂದು ಕೇಳಿದಾಗ ‘ಅನಾರೋಗ್ಯಪೀಡಿತ’ ಅನ್ನುವ ಉತ್ತರ ಬಂದಿತ್ತು.

ಉತ್ತರ ಕೊಟ್ಟಾತನ ಕಾನ್ಫಿಡೆನ್ಸ್ ಕಂಡು ಪರೀಕ್ಷೆ ಮಾಡುತ್ತಿದ್ದವರೇ ದಂಗಾಗಿಹೋಗಿದ್ದರು.

‘ಅನಾರೋಗ್ಯ ಪೀಡಿತ’ ಹೇಗಾಗುತ್ತೆ. ಅಂತ ಕೇಳಿದಾಗ ಆತ ill ಅಂದರೆ ಅನಾರೋಗ್ಯ illusion ಅಂದ್ರೆ ‘ಅನಾರೋಗ್ಯಪೀಡಿತ’ ಅಂತ ಉತ್ತರ ಕೊಟ್ಟು ಎಲ್ಲರನ್ನೂ ತಬ್ಬಿಬ್ಬಾಗಿಸಿದ್ದ.

ಮೊನ್ನೆ ಸೆಮಿನಾರ್ ನಲ್ಲಿ ಹಿರಿಯ ಪತ್ರಕರ್ತ ಶಿವಾನಂದ ಜೋಶಿ ಅವರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭಾಷಾ ಶುದ್ಧತೆ ಕಲಿಸಿ ಅಂತ ಒತ್ತಾಯಿಸಿದರು. ಕನ್ನಡದಲ್ಲಿ ಎಷ್ಟೊಂದು ತಪ್ಪುಗಳು ಎನ್ನುವ ಬೇಸರ ಅವರ ಮಾತಿನಲ್ಲಿ ಇಣುಕುತ್ತಿತ್ತು.

ಕನ್ನಡವೂ, ಇಂಗ್ಲಿಷೂ ಎರಡೂ ಕಲಿಸದ ಮಾಧ್ಯಮ ಕೋರ್ಸ್ ಗಳು ತಾಂತ್ರಿಕತೆಯನ್ನು ಮಾತ್ರ ಕಲಿಸುತ್ತಿದೆ. ಕಂಪ್ಯೂಟರ್ ಆಪರೇಟ್ ಮಾಡಲು ಬರುವ ಕ್ವಾರ್ಕ್ ಎಕ್ಸ್ಪ್ರೆಸ್ ಗೊತ್ತಿರುವವರು ಬಹು ಬೇಗ ಮಿಂಚುತ್ತಾರೆ.

ಕ್ಯಾಮೆರಾ, ಎಡಿಟಿಂಗ್ ಗೊತ್ತಿರುವವರು ಎಂತಹ ಕಡೆಯೂ ಸೈ ಅನಿಸಿಕೊಂಡು ಬಿಡುತ್ತಾರೆ. ಆದರೆ ಕ್ಯಾಮೆರಾ, ಕ್ವಾರ್ಕ್ ಎಕ್ಸ್ಪ್ರೆಸ್ ಹರಿತ ಪ್ರಶ್ನೆ ರೂಪಿಸುವ, ಸುದ್ದಿ ಹೊರಗೆ ಎಳೆಯುವುದನ್ನು ಕಲಿಸಿಕೊಡುವುದಿಲ್ಲ.

ಇದೆಲ್ಲಾ ನೆನಪಾದದ್ದು ಆಚಾರ್ಯ ಇನ್ ಸ್ಟಿಟ್ಯೂಟ್ ನಲ್ಲಿ ಜರುಗುತ್ತಿದ್ದ ರಾಷ್ಟ್ರ ಮಟ್ಟದ ಮೀಡಿಯಾ ಸಮ್ಮೇಳನದಿಂದಾಗಿ.

ನಂದಿನಿ ಲಕ್ಷ್ಮೀಕಾಂತ್ ಫೋನ್ ಮಾಡಿ ಪೇನಲ್ ಡಿಸ್ಸಶನ್ ಇದೆ ಬನ್ನಿ ಎಂದರು. ಉತ್ಸಾಹದಿಂದ ಓಕೆ ಎಂದೆ.

ತನ್ನದೇ ಗಟ್ಟಿದನಿಯಲ್ಲಿ ‘ಡಿಸ್ಸಶನ್ ಎಲ್ಲಾ ಇಂಗ್ಲಿಷ್ ನಲ್ಲಿರ್ತದಪ್ಪಾ’. ಅಂತ ಎರಡನೇ ಮಾತನಾಡಿದರು.

ನಾನು ತಕ್ಷಣ ಈ ಸೆಮಿನಾರ್ ಗೆ ಕೈ ಕೊಡುವುದು ಹೇಗೆ ಅಂತ ಯೋಚನೆ ಮಾಡುತ್ತಾ ಕುಳಿತೆ.

ಶಿರಾ: Sslc ಪರೀಕ್ಷೆಗೆ ತೆರಳಲು ಸಾರಿಗೆ ವ್ಯವಸ್ಥೆ

Publicstory.in


ಸಿರಾ: ತಾಲ್ಲೂಕಿನಾದ್ಯಂತ ಗುರುವಾರದಿಂದ ಪ್ರಾರಂಭವಾಗುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ನಿರ್ಭೀತಿಯಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿದೆ.

ಈ ಕುರಿತು ಸಿರಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ https://publicstory.in ಗೆ ಮಾಹಿತಿ ನೀಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಾದ್ಯಂತ ಒಟ್ಟು 17 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಒಟ್ಟು 4292 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಎಲ್ಲಾ ಕೇಂದ್ರಗಳನ್ನೂ ಸ್ಯಾನಿಟೈಸರ್ ಮಾಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ.

ಪ್ರತಿ ಕೇಂದ್ರದಲ್ಲೂ ಸಿಸಿಟಿವಿ ಅಳವಡಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ನಾಲ್ಕು ಮಾಸ್ಕ್ ವಿತರಣೆ, ಸ್ಥಳದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಯಾನಿಟೈಸರ್ ವಿತರಣೆ ಹಾಗೂ ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಆರೋಗ್ಯ ಸಿಬ್ಬಂದಿ ಹಾಜರಿದ್ದು, ಎಲ್ಲಾ ಮಕ್ಕಳಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಲಿದ್ದಾರೆ.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಿಂದ ಸ್ವಯಂ ಸೇವಕರನ್ನು ನೇಮಿಸಿ, ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳಮಾಡಲಾಗಿದೆ ಎಂದು ಹೇಳಿದರು.

ಯಾವ ವಿದ್ಯಾರ್ಥಿಯೂ ಸಾರಿಗೆ ಸೌಲಭ್ಯ ಇಲ್ಲವೆಂದು ಪರೀಕ್ಷೆಯಿಂದ ವಂಚಿತರಾಗಬಾರದೆಂಬ ಕಾರಣಕ್ಕ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ತಮ್ಮ ಸ್ವಗ್ರಾಮದಿಂದ ಸಂಬಂಧಿಸಿದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಒಂದು ಗಂಟೆ ಮೂವತ್ತು ನಿಮಿಷ ಮುಂಚಿತವಾಗಿ ಬಂದು ತಪಾಸಣೆಗೆ ಒಳಪಡುವುದು, ಆರೋಗ್ಯ ತಪಾಸಣೆಗೂ ಮುನ್ನ ವಿದ್ಯಾರ್ಥಿಗಳು ತಮ್ಮ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಂಡು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರದಲ್ಲಿ ಪರಸ್ಪರ ಒಂದು ಮೀಟರ್ ಅಂತರ ಕಾಪಾಡಿಕೊಂಡು, ಸರತಿ ಸಾಲಿನಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು.
ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯಿಗೆ ಕರವಸ್ತ್ರ ಉಪಯೋಗಿಸುವುದು. ಇತರೆ ಪರೀಕ್ಷಾರ್ಥಿಗಳೊಂದಿಗೆ ಕೈ ಕುಲುಕುವುದು, ಅಪ್ಪಿಕೊಳ್ಳುವುದು, ಮುಟ್ಟುವುದು ಮತ್ತು ಎಲ್ಲೆಂದರಲ್ಲಿ ಉಗುಳುವುದನ್ನು ಮಾಡುವಂತಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗುವುದು ಎಂದು ಹೇಳಿದರು.

ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಮೇಲ್ವಿಚಾರಕರಿಗೆ ತಿಳಿಸುವುದು.
ವಿದ್ಯಾರ್ಥಿಗಳು ಮನೆಯಿಂದಲೇ ಪ್ರತ್ಯೇಕ ಬ್ಯಾಗಿನಲ್ಲಿ ನೀರಿನ ಬಾಟಲಿ, ಆಹಾರದ ಡಬ್ಬಿ ತರಬೇಕು ಎಂದರು.

ಪರೀಕ್ಷೆಗೆ ಅಗತ್ಯವಾದ ಪ್ರವೇಶಪತ್ರ ಹಾಗೂ ಇತರೆ ಸಲಕರಣೆಗಳನ್ನು ತರುವುದು.
ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಹಂತದಿಂದ ನಿರ್ಗಮಿಸುವ ಹಂತದವರೆಗೆ ದೈಹಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದು.

ಇತರೆ ಇಲಾಖೆಗಳ ಸಹಕಾರದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿ ಎಂಬುದೇ ಎಲ್ಲರ ಆಶಯವಾಗಿದೆ ಎಂದರು.

ಕೊರೊನಾ ವೈರಸ್ ಗೆ ಔಷಧಿ: ಪ್ರಚಾರ ನಿಲ್ಲಿಸುವಂತೆ ಪತಂಜಲಿ ಕಂಪನಿಗೆ ಕೇಂದ್ರ ನೋಟಿಸ್

Publicstory. in


ನವದೆಹಲಿ: ಕೊರೊನಾ ವೈರಸ್ ಸಂಪೂರ್ಣ ಗುಣಪಡಿಸುವಂತ ಔಷಧ ಕರೊನಿಲ್ ಕಂಡು ಹಿಡಿದಿರುವುದಾಗಿ ಹೇಳಿದ್ದ ಬಾಬಾ ರಾಮ್ ದೇವ್ ಅವರ ಕಂಪನಿಗೆ ಪ್ರಚಾರ ಮಾಡದಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ ಎಂದು ಲೈವ್ ಲಾ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ.

ಈ ಔಷಧಿಗೆ ಯಾವ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಔಷಧಿ ಸಿದ್ಧಪಡಿಸಲು ಬಳಸಿರುವ ಸಾಮಾಗ್ರಿ ಏನು? ಎಲ್ಲಿ ಸಂಶೋಧನೆ ಮಾಡಲಾಗಿದೆ. ಇದಕ್ಕೆ ಅನುಮತಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದೆ.

Drugs and Magic Remedies (Objectionable Advertisements) Act, 1954 ಪ್ರಕಾರ ಪ್ರಚಾರ, ಜಾಹೀರಾತು ತಡೆಯುವಂತೆ ನಿರ್ದೇಶಿಸಿದೆ.