Saturday, December 6, 2025
Google search engine
Home Blog Page 2

ತುಮಕೂರು ನ್ಯಾಯಾಲಯಕ್ಕೆ ಜಾಗ ಏಕೆ ಬೇಕು?


ಲೇಖನ:    ಡಾ.ಎಸ್.ರಮೇಶ್, LLM, Phd

ಹಿರಿಯ ನ್ಯಾಯವಾದಿಗಳು


ಎಸ್.ರಮೇಶ್

ತುಮಕೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಹೊಸದಾಗಿ ಜಾಗ ನೀಡುವ ವಿಷಯ ಈಗ ಜಿಲ್ಲಾಧಿಕಾರಿಯವರ ಮುಂದೆ ಇದೆ. ನಗರಕ್ಕೆ ಅಂಟಿಕೊಂಡಿರುವ ಅಮಾಲಪುರದಲ್ಲಿರುವ ನೂರಾರು ಎಕರೆ ಸರ್ಕಾರಿ ಜಾಗದಲ್ಲಿ 20 ಎಕರೆ ಜಾಗ ನೀಡುವಂತೆ ತುಮಕೂರು ವಕೀಲರ ಸಂಘ, ಕರ್ನಾಟಕದ ಲೋಕಾಯುಕ್ತದ ಉಪ ಲೋಕಾಯುಕ್ತರು ತುಮಕೂರು ಜಿಲ್ಲಾಧಿಕಾರಿ ಅವರ ಮುಂದೆ ಬೇಡಿಕೆ ಮಂಡಿಸಿದ್ದಾರೆ.

ಇನ್ನೂ, ನ್ಯಾಯಾಂಗದ ಆಸೆಯೂ ಇದೇ ಆಗಿದೆ. ಆದರೆ ಈವರೆಗೂ ಜಿಲ್ಲಾಧಿಕಾರಿಯವರು ನಿರ್ಧಾರ ಪ್ರಕಟಿಸಿಲ್ಲ ಎಂಬ ಮಾಹಿತಿ ಇದೆ.

ನಿಜಕ್ಕೂ, ನ್ಯಾಯಾಲಯಕ್ಕೆ ಜಾಗ ಏಕೆ ಬೇಕು ಎಂಬುದರತ್ತ ನಾವೀಗ ನೋಣೋಣ. ತುಮಕೂರು ನಗರದ ಜನಸಂಖ್ಯೆ ಬೆಳೆದಂತೆ, ನ್ಯಾಯಾಂಗದ ಆಡಳಿತದಲ್ಲಿ ಆಗಾಧ ಬದಲಾವಣೆಗಳಾಗಿವೆ. ಈಗಾಗಲೇ ಇದನ್ನು ಕಾಣಬಹುದಾಗಿದೆ. ಮುಂದೆ ಇದಕ್ಕೆ ತಕ್ಕಂತೆ ನ್ಯಾಯಾಲಯವೂ ಸನ್ನದ್ಧವಾಗಬೇಕಾಗಿದೆ. ‘ನ್ಯಾಯ ವ್ಯವಸ್ಥೆ’ಯ ಅಸ್ಥೆಯೇ ಆಡಳಿತವನ್ನು ಅಳೆಯುವ ಮೇರುಗೋಲಾಗಿದೆ.


ತುಮಕೂರು ನಗರವನ್ನೇ ನೋಡುವುದಾದರೆ, ತುಮಕೂರು ನಗರಸಭೆಯಾಗಿತ್ತು. ನಂತರ ಮಹಾನಗರ ಪಾಲಿಕೆಯಾಗಿ 2016 ರಲ್ಲಿ ಸ್ಮಾರ್ಟ್‌ ಸಿಟಿಯಾಗಿಯೂ ರೂಪಾಂತರಗೊಂಡಿತು. ಇದಕ್ಕೆ ಅನುಗುಣವಾಗಿ ತುಮಕೂರು ಜಿಲ್ಲಾ ಕೇಂದ್ರದ ನ್ಯಾಯಾಲಯಗಳ ಸಂಖ್ಯೆಗಳಲ್ಲಿಯೂ ಬದಲಾವಣೆಯಾಗಿ 2010 ರಲ್ಲಿ ಇದ್ದ ಒಟ್ಟು 9 ನ್ಯಾಯಾಲಯಗಳಿಂದ ಈಗ 21 ನ್ಯಾಯಾಲಯಗಳಿಗೆ ವಿಸ್ತರಣೆಗೊಂಡಿದೆ. ಇನ್ನೂ ಮೂರು ನ್ಯಾಯಾಲಯಗಳು, ಜಾಗವಿಲ್ಲದ ಕಾರಣ ಆರಂಭಗೊಂಡಿಲ್ಲ.

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಹಾಲಿ 38,205 ಕೇಸುಗಳು ಎಲ್ಲಾ ಪ್ರಕಾರಗಳಿಂದ ಬಾಕಿ ಇವೆ. ಇವುಗಳಲ್ಲಿ 20496 ಸಿವಿಲ್ ಪ್ರಕರಣಗಳು,17709 ಕ್ರಿಮಿನಲ್ ಪ್ರಕರಣಗಳು ಸದ್ಯ ವಿಚಾರಣೆಗೆ ಬಾಕಿ ಉಳಿದಿವೆ. ಅದರಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ 6371 ಸಿವಿಲ್ ಪ್ರಕರಣಗಳು, 2315 ಸೆಷನ್ಸ್ ಪ್ರಕರಣಗಳು, ಹಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ 7462 ಸಿವಿಲ್ ಪ್ರಕರಣಗಳು, 1212 ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಕಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ 6603 ಸಿವಿಲ್ ಪ್ರಕರಣಗಳು, 14182 ಕ್ರಿಮಿನಲ್ ಪ್ರಕರಣಗಳು ಹಾಗೂ ಲೇಬರ್ ಕೋರ್ಟ್ ನಲ್ಲಿ 136 ಲೇಬರ್ ಪ್ರಕರಣಗಳು ಬಾಕಿ ಇವೆ. ಅಲ್ಲದೇ ಪ್ರತಿ ತಿಂಗಳು 1400-1500 ಹೊಸ ಪ್ರಕರಣಗಳು ದಾಖಲಾಗುತ್ತಿವೆ.


ಈ ಒಟ್ಟು ಪ್ರಕರಣಗಳಿಗೆ ಹೋಲಿಸಿಕೊಂಡರೆ, ನ್ಯಾಯಾಲಯಗಳ ಸಂಖ್ಯೆ ಕಡಿಮೆ ಇರುವುದರಿಂದ ಈಗಿರುವ ನ್ಯಾಯಾಲಯಗಳ ಮೇಲೆ, ನ್ಯಾಯಾಧೀಶರ ಮೇಲೆ ಒತ್ತಡ ಹೆಚ್ಚಿ, ನ್ಯಾಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಲು ಕಷ್ಟವಾಗುತ್ತದೆ. ಈ ದೃಷ್ಟಿಕೋನದಿಂದ ಹಾಲಿ ಇರುವ ನ್ಯಾಯಾಲಯಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.

ಇ- ವ್ಯಾಜ್ಯ ವ್ಯವಸ್ಥೆ ಬಲಗೊಳ್ಳುತ್ತಿರುವ ಸನ್ನಿವೇಷದಲ್ಲಿ ನ್ಯಾಯಾಲಯವು ಇ- ವ್ಯಾಜ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಿದ್ದಲ್ಲಿ ಪ್ರತ್ಯೇಕವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು, ಪೈಲಿಂಗ್ ಕೌಂಟರ್ ಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಬೇಕಾಗುತ್ತದೆ. ಇದಕ್ಕಾಗಿ ವಿಶಾಲ ಜಾಗದ ಅಗತ್ಯವಿರುತ್ತದೆ.

ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಪ್ರತ್ಯೇಕ ಫೈಲಿಂಗ್ ಕೌಂಟರ್ ಇರುವುದನ್ನು ಗಮನಿಸಬಹುದು. ತುಮಕೂರು ಬೆಳೆಯುತ್ತಿದ್ದರೂ ತುಮಕೂರು ನ್ಯಾಯಾಲಯದ ವ್ಯವಸ್ಥೆ ಮಾತ್ರ ಕಿಷ್ಕಿಂಧೆಯಂತೆಯೇ ಇದೆ. ತುಮಕೂರು ನಗರದ ಬೆಳವಣಿಗೆಗೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ನ್ಯಾಯಾಲಯ ಸಂಕೀರ್ಣದ ಅವಶ್ಯಕತೆ ಇದೆ,

ಈಗಿರುವ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಿ ಈಗಾಗಲೇ ರಾಜ್ಯ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿದೆ. ತುಮಕೂರು ನಗರ ವ್ಯಾಪಿಯ ಸುತ್ತಳತೆ 12 ಕಿಲೋ ಮೀಟರ್ ವ್ಯಾಪ್ತಿಗೆ ಹಿಗ್ಗಿಸಲಾಗಿದೆ. ಈಗ ವಕೀಲರ ಸಂಘ ಕೇಳುತ್ತಿರುವ ಅಮಲಾಪುರದ ವಿಜ್ಞಾನಗುಡ್ಡ ಪ್ರದೇಶ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಲಿದೆ. ಇದು ನ್ಯಾಯಾಂಗದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಇನ್ನು, ತುಮಕೂರು ನ್ಯಾಯಾಲಯದಲ್ಲಿ  ದಿನ ಪ್ರತಿ ನ್ಯಾಯಾಲಯವೊಂದರಲ್ಲಿ ಕನಿಷ್ಠ 100-150 ಪ್ರಕರಣಗಳನ್ನು ನಿರ್ವಹಿಸಲಾಗುತ್ತಿದೆ. ಒಟ್ಟು 21 ನ್ಯಾಯಾಲಯಗಳಿಂದ ಪ್ರತಿದಿನ ಕನಿಷ್ಠ 2300 ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳಲ್ಲಿ ಭಾಗವಹಿಸಲು ಪ್ರತಿ ದಿನ ನ್ಯಾಯಾಲಯಕ್ಕೆ ಕಕ್ಷಿದಾರರು, ಅವರ ಸಹಾಯಕರು, ಸಾಕ್ಷಿದಾರರು, ವಕೀಲರು ಸೇರಿದರೆ 6000 ಕ್ಕೂ ಹೆಚ್ಚು ಜನರು ಒಂದು ಹೋಗುತ್ತಾರೆ. ಇವರಲ್ಲದೇ ನ್ಯಾಯಾಲಯದ ಸಿಬ್ಬಂದಿಯೂ ಇರುತ್ತಾರೆ. ಇದು – ನ್ಯಾಯಾಲಯಕ್ಕೆ ಪ್ರತಿ ದಿನ ಎಷ್ಟು ಕಾರುಗಳು, ದ್ವಿಚಕ್ರವಾಹನಗಳು, ಪೊಲೀಸ್ ವಾಹನಗಳು ಬರಬಹುದು ಎಂಬುದರ ಊಹೆಯನ್ನು ನೀವುಗಳೇ ಮಾಡಿಕೊಳ್ಳಬಹುದು.

ಇನ್ನೂ ಮುಂದೆ, ಮುಂದೆ ವಾಹನಗಳ ಸಂಖ್ಯೆ ಇನ್ನೂ ಹೆಚ್ಚುತ್ತವೆ. ಇದು ನ್ಯಾಯಾಲಯದ ಕಾರ್ಯಕಲಾಪಗಳಿಗೆ, ಸುಗಮ ಸಂಚಾರಕ್ಕೆ ಈಗಾಗಲೇ ಸಾಕಷ್ಟು ತೊಡಕನ್ನು ಉಂಟು ಮಾಡುತ್ತಿದ್ದು, ನ್ಯಾಯಾಲಯದ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ವಕೀಲರಿಗೂ ನ್ಯಾಯದಾನ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅಡ್ಡಿಯುಂಟಾಗುತ್ತಿದೆ. ಈ ದೃಷ್ಟಿಯಿಂದ ವಿಶಾಲ ಜಾಗದ ಅಗತ್ಯವಿದೆ.

ಇನ್ನೂ, ವಸಂತನರಾಸಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ತುಮಕೂರು ನ್ಯಾಯಾಲಯದ ಮೇಲೆ ನೇರ ಪರಿಣಾಮ ಬೀರಲಿವೆ. ಹೆಚ್ಚು ಹೆಚ್ಚು ಕ್ರಿಮಿನಲ್, ವಾಹನ ಅಫಘಾತ ಪ್ರಕರಣಗಳು. ಕೌಟುಂಬಿಕ ವಿವಾಹ ಪ್ರಕರಣಗಳು ಮೇರೆ ಮೀರಿ ಬೆಳೆಯಲಿವೆ. ಬಹುಭಾಷಿಕ, ಬಹುರಾಜ್ಯಗಳ ಜನರ ಪ್ರಕರಣಗಳ ನಿರ್ವಹಣೆಗೆ ನ್ಯಾಯಾಲಯ ಈಗಿನಿಂದಲೇ ಸನ್ನದ್ಧವಾಗಬೇಕಾಗಿದೆ. ತಿಂಗಳಿಗೆ ಏಳೆಂಟು ಸಾವಿರ ಪ್ರಕರಣಗಳು ದಾಖಲಾಗುವ ಕಾಲ ಹೆಚ್ಚೇನು ದೂರವಿಲ್ಲ ಎಂಬುದನ್ನು ನಾವುಗಳು ಈಗಿನಿಂದಲೇ ಗಮನಿಸಬೇಕಾಗಿದೆ.


ಈಗಿನ ನ್ಯಾಯಾಲಯದ ಕೊಠಡಿಗಳು ಹೇಗಿವೆ ಎಂದರೆ ವಕೀಲರು ಸಹ ಗಂಟೆಗಟ್ಟಲೆ ನಿಂತುಕೊಂಡೇ ಕಲಾಪದಲ್ಲಿ ಪಾಲ್ಗೊಳ್ಳಬೇಕಾದ ಸ್ಥಿತಿ ಇದೆ. ಕಕ್ಷಿದಾರರು ತಮ್ಮ ಪ್ರಕರಣಗಳನ್ನು ದಿನಗಟ್ಟಲೇ ನಿಂತುಕೊಂಡೇ ಕಾಯಬೇಕಾಗಿದೆ. ಈ ಪರಿಸ್ಥಿತಿಯನ್ನು ಗಮನಿಸಿದರೇ ಈಗಿರುವ ಇಡೀ ನ್ಯಾಯಾಲಯದ ಕಟ್ಟಡವೇ ಅಪ್ರಸ್ತುತವಾಗಿದೆ ಎಂದೇ ಹೇಳಬೇಕಾಗುತ್ತದೆ. ಇನ್ನೂ ಮುಂದಿನ ದಿನಗಳಲ್ಲಿ ಆಗುವ ದುಃಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯವಾಗಿದೆ.

ವಿಜ್ಜಾನಗುಡ್ಡವೇ ಏಕೆ ಬೇಕು?


ವಿಜ್ಞಾನಗುಡ್ಡದಲ್ಲೇ ಏಕೆ ಜಾಗ ಬೇಕು ಎಂದರೆ, ನಗರದೊಳಗೆ ಈ ಜಾಗ ಬಿಟ್ಟರೆ ಬೇರ ಜಾಗ ಇಲ್ಲವಾಗಿದೆ.
ಈಗಿನ ನ್ಯಾಯಲಯದಲ್ಲಿ ವಕೀಲರಿಗೆ ಛೇಂಬರಗಳೇ ಇಲ್ಲ. ಹೊಸ ಜಾಗದಲ್ಲಿ ನೂರಾರು ಛೇಂಬರ್ ಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಇದರಿಂದ ವಕೀಲರು ತಮ್ಮ ತಮ್ಮ ಕಕ್ಷಿದಾರರೊಂದಿಗೆ ವ್ಯವಹರಿಸಲು ಸಾಧ್ಯವಾಗಲಿದೆ. ಕೇಸುಗಳಿಗೆ ತಯಾರಾಗಲು ಸಹ ನೆರವಾಗಲಿದೆ. ಇದು ನ್ಯಾಯ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ.


ವಿಜ್ಞಾನಗುಡ್ಡ ಪ್ರದೇಶ ನಗರದ ಹೆದ್ದಾರಿಗೆ ಅಂಟಿಕೊಂಡಿರುವುದರಿಂದ ಅಲ್ಲಿಗೆ ಸಿಟಿ ಬಸ್ ವ್ಯವಸ್ಥೆ ಇರುವುದರಿಂದ ಬಸ್ಸುಗಳಲ್ಲಿ ಓಡಾಡುವ ಕಕ್ಷಿದಾರರಿಗೆ, ವಕೀಲರುಗಳಿಗೆ ಕೋರ್ಟ್ ಗೆ ಓಡಾಡಲು ಕಷ್ಟವಾಗದು. ಎಷ್ಟೇ ಸಾವಿರ ಕಾರುಗಳು, ದ್ವಿಚಕ್ರ ವಾಹನಗಳು ಬಂದರೂ ತೊಂದರೆಯಾಗದು.


ಅಲ್ಲಿ ನೂರಾರು ಎಕರೆ ಸರ್ಕಾರಿ ಜಾಗ ಇರುವುದರಿಂದ ಅಲ್ಲಿಯೇ ನ್ಯಾಯಾಧೀಶರ ವಸತಿ ಸಮುಚ್ಛಯಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರ ವಸತಿ ಸಮುಚ್ಛಯಗಳ ನಿರ್ಮಾಣಕ್ಕೂ ಮುಂದಾಗಬಹುದಾಗಿದೆ.


ವಿಜ್ಞಾನಗುಡ್ಡದ ಮೇಲೆ ವಿಶಾಲವಾಗಿರುವ 5 ಎಕರೆ ಜಾಗದಲ್ಲಿ “ನ್ಯಾಯಾಂಗ ಮ್ಯೂಸಿಯಂ’ ನಿರ್ಮಾಣ ಮಾಡುವ ಮೂಲಕ ಇಡೀ ಜಗತ್ತಿನಲ್ಲಿ, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬೆಳೆದುಬಂದ ಬಗೆಯನ್ನು ಚಿತ್ರಿಸಿದರೆ, (ಗೋವಾದ ಬಿಗ್ ಫೂಟ್ ನಂತೆ) ನ್ಯಾಯಾಂಗ ಪ್ರವಾಸೋದ್ಯಮದ ಹೊಸ ಪರಿಕಲ್ಪನೆಯನ್ನು ಜಗತ್ತಿಗೆ ನಾವು ಕೊಟ್ಟಂತಾಗುತ್ತದೆ. ಇಡೀ ದೇಶದ ಕಾನೂನು ವಿದ್ಯಾರ್ಥಿಗಳು, ನ್ಯಾಯಾಧೀಶರು, ವಕೀಲರು, ಜನ ಸಾಮಾನ್ಯರು ಇಲ್ಲಿಗೆ ಭೇಟಿ ನೀಡಿ ನ್ಯಾಯ ವ್ಯವಸ್ಥೆಯ ಮಜಲುಗಳನ್ನು ಅರಿತುಕೊಳ್ಳಲು ಈ  ಜ್ಯೂಡಿಶಿಯಲ್ ಟೂರಿಸಂ ನೆರವಾಗಲಿದೆ. ಇದು ತುಮಕೂರು ನಗರದ ಪ್ರವಾಸೋದ್ಯಮ ಆದಾಯವನ್ನು ಹೆಚ್ಚಿಸುವುದಲ್ಲದೇ, ತುಮಕೂರಿನ ಖ್ಯಾತಿಯನ್ನು ದೇಶವ್ಯಾಪಿ, ವಿಶ್ವವ್ಯಾಪಿ ಹರಡಲಿದೆ. ಈ ಹಿನ್ನೆಲೆಯಲ್ಲಿ, ಈ ದೃಷ್ಟಿಕೋನದಲ್ಲಿ ಜಿಲ್ಲಾಡಳಿತ, ಇಲ್ಲಿನ ಉಸ್ತುವಾರಿ ಸಚಿವರು, ಸಚಿವರುಗಳು, ಶಾಸಕರುಗಳು, ಸಂಘಸಂಸ್ಥೆಗಳು ನ್ಯಾಯಾಂಗದ ಬೇಡಿಕೆಯನ್ನು ಸಹೃದತೆಯಿಂದ ನೋಡಬೇಕಾಗಿದೆ ಎನ್ನುವುದು ನನ್ನ ಅನಿಸಿಕೆಯಾಗಿದೆ.

15 ದಿನದಲ್ಲಿ ನ್ಯಾಯಾಲಯಕ್ಕೆ ಜಾಗ ನಿರ್ಧಾರ: ಜಿಲ್ಲಾಧಿಕಾರಿ

ತುಮಕೂರು: ಅಮಲಾಪುರದಲ್ಲಿ ಎಂಎಸ್ಇಎಂ ಗೆ ನೀಡಿದ್ದ ಜಾಗವನ್ನು ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ನೀಡುವ ಬಗ್ಗೆ ಇನ್ನೂ ಹದಿನೈದು ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭರವಸೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಯಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಕೀಲರು ಪಟ್ಟು ಹಿಡಿದ ಕಾರಣ ಕೊನೆಗೂ ಜಾಗದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು.

ಆರಂಭದಲ್ಲಿ ತಿಮ್ಮರಾಜನಹಳ್ಳಿ, ವಿಶ್ವವಿದ್ಯಾನಿಲಯದ ಜಾಗ ನೀಡುವ ಬಗ್ಗೆ ಜಿಲ್ಲಾಧಿಕಾರಿ ಹೇಳಿದರು. ತಿಮ್ಮರಾಜನಹಳ್ಳಿ ದೂರ ಇರುವುದರಿಂದ ಕಕ್ಷಿದಾರರಿಗೆ, ಸಾಕ್ಷಿದಾರರಿಗೆ ತೊಂದರೆಯಾಗಲಿದೆ. ಈ ಜಾಗ ಬೇಡ ಎಂದು ಮೊದಲ ಸಭೆಯಲ್ಲಿ ಹೇಳಿದ್ದೇವೆ. ಅಮಲಾಪುರದಲ್ಲಿರುವ ಜಾಗ ನೀಡಿ ಎಂದು ಜಿಲ್ಲಾ ಪ್ರಧಾನ ನ್ಯಾಯಾದೀಶರಾದ ಜಯಂತ್ ಕುಮಾರ್ ಹೇಳಿದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ವಕೀಲರದ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ , ಆ ಜಾಗ ನಮಗೆ ಬೇಡ. ಅಮಲಾಪುರದ ಜಾಗ ನೀಡಿ ಎಂದು ಒತ್ತಾಯಿಸಿದರು.

ಅಮಲಾಪುರದಲ್ಲಿ ಜಾಗ ನೀಡಲು ಏನು ಸಮಸ್ಯೆ. ಅಲ್ಲಿ 15 ಎಕರೆ ಜಾಗವನ್ನು ಈ ಹಿಂದೆ ಎಂಎಸ್ ಎಇ ಗೆ ನೀಡಲಾಗಿತ್ತು. ಕೇಂದ್ರ ಸರ್ಕಾರ ಆ ಜಾಗ ವಾಪಸ್ ನೀಡಿದೆ. ಇನ್ನೂ ವಿಜ್ಞಾನ ಕೇಂದ್ರಕ್ಕೆ ನೀಡಿದ 5 ಎಕರೆಯೂ ಖಾಲಿ ಇದೆ. ವಿಜ್ಞಾನ ಕೇಂದ್ರಕ್ಕೆ ನೀವೆ ಅಧ್ಯಕ್ಷರು. ಈ ಎರಡನ್ನೂ ಸೇರಿಸಿ 20 ಎಕರೆ ಜಾಗವನ್ನು ನ್ಯಾಯಾಲಯಕ್ಕೆ ನೀಡಿ ಎಂದು ವಕೀಲರಾದ ಜಿ.ಎನ್. ನಾಗರಾಜ್,  ಓಬಯ್ಯ, ಶಿವಕುಮಾರ್, ಸಿ.ಕೆ.ಮಹೇಂದ್ರ, ಸಿಂಧು ಮತ್ತಿತರರು ಒತ್ತಾಯಿಸಿದರು.

ಅರಣ್ಯಕ್ಕೆ ನೀಡಿರುವ ಜಾಗವನ್ನು ಸಹ ನ್ಯಾಯಾಲಯಕ್ಕೆ ನೀಡಬಹುದಾಗಿದೆ. ನ್ಯಾಯಾಲಯಕ್ಕೆ ಜಾಗ ಬೇಕಾಗಿದೆ. ಜಾಗ ನೀಡಲು ಏನಾದರೂ ಸಮಸ್ಯೆ ಇದ್ದರೆ ಹೇಳಿ ಎಂದು ಹಿರಿಯ ವಕೀಲರಾದ ಕೃಷ್ಣಶಾಸ್ತ್ರಿ ಹೇಳಿದರು.

ಸದ್ಯಕ್ಕೆ, ಕೃಷಿ ಇಲಾಖೆ, ಪೊಲೀಸ್ ಠಾಣೆ, ಲೇಬರ್ ಕಮಿಷನರ್ ಜಾಗ ಬಿಡಿಸಿಕೊಟ್ಟರೂ ಸಾಕು ಎಂದರು. ಆದರೆ ಈ ಜಾಗ ಬಿಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಮಗೆ ಅಮಲಾಪುರದ 20 ಎಕರೆ ಜಾಗ ಬೇಕೇಬೇಕು ಎಂದು ಕೆಂಪರಾಜಯ್ಯ ಹೇಳಿದರು.

ಜಿಲ್ಲಾಡಳಿತ ಜಾಗ ನೀಡದಿದ್ದರೆ ವಕೀಲರು, ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಬೀದಿಗೆ ಇಳಿಯಲಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಒಳ್ಳೆಯ ನ್ಯಾಯಾಲಯ ಸಂಕೀರ್ಣ ಇದ್ದರೆ ಜಿಲ್ಲೆಗೆ ಹೆಸರು ಬರಲಿದೆ. ಜಿಲ್ಲಾಧಿಕಾರಿ ಅವರಿಗೂ ಹೆಸರು ಬರಲಿದೆ. ಜಾಗ  ನೀಡಲು ಜಿಲ್ಲಾಧಿಕಾರಿ ಮುಂದಾಗಬೇಕು. ನಿರ್ಧಾರ ಪಾಸಿಟಿವ್ ಆಗಿರಲಿ ಎಂದು ಹಲವು ವಕೀಲರು ಹೇಳಿದರು.

ನನ್ನದು ಓ ಪಾಸಿಟಿವ್ ಬ್ಲಡ್. ಅಭಿವೃದ್ಧಿಯೇ ನನಗೆ ಬೇಕಿರುವುದು ಎಂದು ಶುಭಕಲ್ಯಾಣ್ ಮಾತಿಗೆ ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.

ಸಭೆಯಲ್ಲಿ ಹಿರಿಯ ವಕೀಲರಾದ ರಂಗನಾಥ ರೆಡ್ಡಿ, ಎಂ.ಬಿ.ಬಸವರಾಜ್, ಮಹೇಶ್, ನವೀನ್ ನಾಯ್ಕ, ತಿಪ್ಪೇಸ್ವಾಮಿ,  ಸಂಘದ ಪದಾಧಿಕಾರಿಗಳಾದ  ಧನಂಜಯ್, ಸುರೇಶ್, ಶ್ರೀನಿವಾಸ್, ಗೋವಿಂದರಾಜು, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್, ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುಳಾ, ಹಲವು ಅಧಿಕಾರಿಗಳು, ವಕೀಲರು ಹಾಜರಿದ್ದರು.

ಜಿಲ್ಲಾ ನ್ಯಾಯಾಲಯಕ್ಕೆ ಜಾಗ: ಮೌನಕ್ಕೆ ಶರಣಾದ ಅಧಿಕಾರಿಗಳು


ತುಮಕೂರು: ಪ್ರಸ್ತಾವಿತ ವಿಜ್ಞಾನಗುಡ್ಡವಿರುವ ಅಮಾಲಪುರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಜಾಗ ನೀಡುವ ಸಂಬಂಧ ಸೋಮವಾರ ಸಭೆ ನಡೆಯಿತು.

ಸಭೆಯ ನೇತೃತ್ವವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶರಾದ ಜಯಂತಕುಮಾರ್ ಅವರು ವಹಿಸಿದ್ದರು.

ಉಪ ಲೋಕಾಯುಕ್ತರ ನಿರ್ದೇಶನವಿದ್ದಾಗ್ಯೂ ಜಿಲ್ಲಾಡಳಿತ ಜಾಗದ ಸರ್ವೆ ನಡೆಸಲು ತಮ್ಮನ್ನು ಕರೆದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಇದೇ ಜಾಗದಲ್ಲಿ ಎಂ.ಎಸ್ ಎಂ ಇ ಕೇಂದ್ರಕ್ಕೆ 15 ಎಕರೆ ಜಾಗ ನೀಡಲಾಗಿತ್ತು. ಎಂ.ಎಸ್ ಎಂ ಇ ಕೇಂದ್ರದವರು ಜಾಗ ವಾಪಸ್ ನೀಡಿದ್ದಾರೆ. ಆ ಜಾಗವನ್ನು ನ್ಯಾಯಾಲಯಕ್ಕೆ ನೀಡಲು ಏನು ತೊಂದರೆ ಎಂದು ಪ್ರಶ್ನಿಸಿದರು.

ಸಭೆಗೆ ಬರಬೇಕಾಗಿದ್ದ ಜಿಲ್ಲಾಧಿಕಾರಿ ಬದಲಿಗೆ ಅವರನ್ನು ಪ್ರತಿನಿಧಿಸಿ ಉಪ ವಿಭಾಗಾಧಿಕಾರಿ ಗೌರವ ಶೆಟ್ಟಿ, ತುಮಕೂರು ತಹಶೀಲ್ದಾರ್ ಅವರು ಬಂದಿದ್ದರು. ಪ್ರಧಾನ ನ್ಯಾಯಧೀಶರ ಅನೇಕ ಪ್ರಶ್ನೆಗಳಿಗೆ ಅವರು ತಲೆ ಕೆಳಗು ಹಾಕಿದರು. ಉತ್ತರ ನೀಡಲಾಗದೇ ಅಸಹಾಯಕವಾಗಿ ಮೌನವಾದರು.

ಇಲ್ಲಿರುವ ಜಾಗ ಕೊಡಲು ಯಾವ ಒತ್ತಡವಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅರಣ್ಯ ಇಲಾಖೆಗೆ ಭೂ ಬ್ಯಾಂಕ್ ಗೆ ನೀಡಿರುವ ಜಾಗವನ್ನು ಯಾವಾಗ ಬೇಕಾದರೂ ವಾಪಸ್ ಪಡೆಯಬಹುದು ಎಂದು ಸರ್ಕಾರದ ಆದೇಶದಲ್ಲೇ ಇದೆ. ಆ ಭೂಮಿ ವಾಪಸ್ ಪಡೆಯಲು ಏಕೆ ಮೀನಮೇಷ ಎಣಿಸುತ್ತಿದ್ದೀರಿ ಎಂದು ಕೇಳಿದರು.

“ಜಾಗವನ್ನು ನಾನು ತೆಗೆದುಕೊಂಡು ಹೋಗುವುದಿಲ್ಲ. ನನ್ನ ವೈಯಕ್ತಿಕ ಹಿತಾಸಕ್ತಿಯೂ ಅಡಗಿಲ್ಲ. ಈಗಿರುವ ನ್ಯಾಯಾಲಯದ ಸಂಕೀರ್ಣದಲ್ಲಿ ಪಾರ್ಕಿಂಗ್  ಸಮಸ್ಯೆ ಜಾಸ್ತಿಯಾಗುತ್ತಿದೆ. ಕೋರ್ಟ್ ಹಾಲ್ ಗಳು ಸಾಲುತ್ತಿಲ್ಲ. ಪ್ರತಿ ತಿಂಗಳು ಒಂದೂವರೆ ಸಾವಿರ ಕೇಸ್ ಗಳು ದಾಖಲಾಗುತ್ತಿವೆ. ಹೀಗೆ ಆದರೆ ಕೋರ್ಟ್ ನಡೆಸುವುದೇ ಕಷ್ಟವಾಗಲಿದೆ. ಇದನ್ನು ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು.

ನ್ಯಾಯಾಲಯಕ್ಕೆ ಜಾಗ ನೀಡುವಲ್ಲಿ ಜಿಲ್ಲಾಡಳಿತ ಸುಖಾಸುಮ್ಮನೇ ವಿಳಂಬ ಧೋರಣೆ ತೋರುತ್ತಿದೆ. ಬೇಕಂತಲೇ ಏನೇನೋ ಸಬೂಬು ಹೇಳುತ್ತಿದೆ. ಇದು ಮನಸ್ಸಿಗೆ ನೋವು ತಂದಿದೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷರಾದ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ, ವಕೀಲರಾದ ಓಬಯ್ಯ, ಶಿವಕುಮಾರ್, ಸಿ.ಕೆ.ಮಹೇಂದ್ರ ಮಾತನಾಡಿ. ಜಾಗದ ಕೊರತೆ ಇಲ್ಲ,. ಜಿಲ್ಲಾಡಳಿತಕ್ಕೆ ಮನಸ್ಸು ಇಲ್ಲ. ಈಗಾಗಲೇ ಮೋಹನ್ ರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದಾಗೇ ಸರ್ವೆ ಕೆಲಸ ಆಗಿದೆ. ಅರಣ್ಯಕ್ಕೆ ಮೀಸಲಿಟ್ಟಿರುವ ಜಾಗದ ಹೊರತಾಗಿಯೂ ಜಾಗವಿದೆ. ವಿಜ್ಞಾನಕೇಂದ್ರದ 5 ಎಕರೆ, ಎಂಎಸ್ ಎಂ ಇ ಕೇಂದ್ರಕ್ಕೆ ನೀಡಿ ವಾಪಸ್ಸಾಗಿರುವ 15 ಎಕರೆ ಜಾಗ ನೀಡಿದರೆ ಸಾಕಾಗಲಿದೆ. ಭವಿಷ್ಯದ ತುಮಕೂರಿನ ದೃಷ್ಟಿಯಿಂದ ಕೂಡಲೇ ಜಾಗ ನೀಡಬೇಕು. ಸುಖಾಸುಮ್ಮನೇ ಸರ್ವೆ ಹೆಸರಿನಲ್ಲಿ ಕಾಲಹರಣ ಮಾಡಬಾರದು ಎಂದು ಆಗ್ರಹಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ ಮಾತನಾಡಿ, ನಾವಿನ್ನೂ ಸುಮ್ಮನಿರಲು ಸಾಧ್ಯವಿಲ್ಲ. ಜಿಲ್ಲಾಡಳಿತ ತೀರ್ಮಾನ ಪ್ರಕಟಿಸಬೇಕು. ಜಿಲ್ಲಾಧಿಕಾರಿ ನ್ಯಾಯಾಂಗದ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ವಕೀಲರಾದ ಬಿ.ಜಿ.ನಾಗರಾಜ್. ಎಂ.ಬಿ.ಬಸವರಾಜ್, ಸಂಘದ ಹಲವು ಪದಾಧಿಕಾರಿಗಳು ಹಾಜರಿದ್ದು, ಜಿಲ್ಲಾಡಳಿತದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪರಮೇಶ್ವರ್ ಬಳಿಗೆ ನಿಯೋಗ

ತುಮಕೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಪ್ರಸ್ತಾವಿತ ವಿಜ್ಞಾನಗುಡ್ಡದ ಅಮಲಾಪುರದಲ್ಲಿ ಜಾಗ ನೀಡಬೇಕೆಂದು ಕೋರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಬಳಿ ನಿಯೋಗ ತೆರಳಲು ವಕೀಲರು ನಂತರ ನಡೆದ ಸಭೆಯಲ್ಲಿ ನಿರ್ಧರಿಸಿದರು.

ತುಮಕೂರು ವೇಗವಾಗಿ ಬೆಳೆಯುತ್ತಿದೆ. ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ನ್ಯಾಯಾಲಯ ಸಾಕಾಗದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಳ್ಳಲು ನಿರ್ಧರಿಸಲಾಯಿತು.

ಜಾಗವು ನಗರಕ್ಕೆ ಹತ್ತಿರವಿರುವುದರಿಂದ ವಕೀಲರು, ಕಕ್ಷಿದಾರರಿಬ್ಬರಿಗೂ ಅನುಕೂಲವಾಗಲಿದೆ. ಅಲ್ಲದೇ ಸಚಿವರು ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರವೂ ಜಾಗಕ್ಕೆ ಹತ್ತಿರವಿರುವ ಕಾರಣ ಕೊರಟಗೆರೆಯ ಅಭಿವೃದ್ಧಿಗೂ ಇದು ನೆರವಾಗಲಿದೆ. ಇದನ್ನು ಸಚಿವರ ಗಮನಕ್ಕೆ ತರಬೇಕು. ಅವರು ಜಾಗ ಕೊಡಿಸಲು ನೆರವಾಗಲಿದ್ದಾರೆ ಎಂಬ ವಿಶ್ವಾಸವನ್ನು ವಕೀಲರ ಸಂಘ ಪದಾಧಿಕಾರಿಗಳು  ವ್ಯಕ್ತಪಡಿಸಿದರು.

ವಿಧಾನಪರಿಷತ್: ಕಾಂಗ್ರೆಸ್ ಕಣ್ಣಿಗೆ ಕಾಣದೇ ಹೋದವರಿವರು….

0


ರಾಜ್ಯ ವಿಧಾನ ಪರಿಷತ್ ನ  ನಾಲ್ಕು ಸ್ಥಾನಗಳಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ್ದ ನಾಲ್ವರ ಪಟ್ಟಿಗೆ ಕೊನೆಗೂ ಹೈ ಕಮಾಂಡ್ ತಡೆ ಹಿಡಿದಿದೆ. ಹೀಗಾಗಿ ಕಾಂಗ್ರೆಸ್ ಹೈ ಕಮಾಂಡ್ ಪಕ್ಷಕ್ಕಾಗಿ ಹಗಲಿರುಗಳು ದುಡಿದ, ದುಡಿಯುತ್ತಿರುವ ಕಾರ್ಯಕರ್ತರ ಬೆನ್ನಿಗೆ ನಿಲ್ಲಬಹುದು ಎಂಬ ಹೊಸ ಲೆಕ್ಕಾಚಾರಗಳು  ಚರ್ಚೆಯ ಮುನ್ನೆಲೆಗೆ ಬಂದಿವೆ.
‘ಕಾಂಗ್ರೆಸ್ ಯಾವಾಗಲೂ ಕಾಂಗ್ರೆಸ್ಸಿನಿಂದಲೇ ಸೋಲಿಸಿಕೊಳ್ಳುತ್ತದೆ. ಗೆದ್ದಾಗಲೆಲ್ಲ ಗೆಲುವಿಗೆ ಪಣತೊಟ್ಟು ದುಡಿದ ಸಾಮಾನ್ಯ ಕಾರ್ಯಕರ್ತರನ್ನು, ಮರೆತುಬಿಡುತ್ತದೆ. ಹೀಗಾಗಿ ಪಕ್ಷ ಗೆದ್ದಾಗ ಪಕ್ಷದ ಪರ ದನಿ ಎತ್ತುವ ಕಾರ್ಯಕರ್ತರ ಕೊರತೆ ಆ ಪಕ್ಷಕ್ಕೆ ಯಾವಾಗಲೂ ಕಾಡುತ್ತದೆ. ಹೀಗಾಗಿಯೇ ಅದು ಬಿಜೆಪಿ, ಜೆಡಿಎಸ್ ಎದುರು ಸಪ್ಪೆಸಪ್ಪೆಯಾಗಿ ಕಾಣತೊಡಗುತ್ತದೆ’ ಎಂಬ ಮಾತುಗಳನ್ನು ರಾಜಕೀಯ ಪಂಡಿತರು ಯಾವಾಗಲೂ ಹೇಳುತ್ತಿರುತ್ತಾರೆ.


ವಿಧಾನ ಪರಿಷತ್ ಗೆ ನಾಮಕರಣ ಮಾಡಲು ರಾಜ್ಯ ಕಾಂಗ್ರೆಸ್ಸಿಗರು ಸಿದ್ಧಪಡಿಸಿರುವ ಪಟ್ಟಿ ಕಾರ್ಯಕರ್ತರಲ್ಲಿ ಮೇಲಿನ  ಭಾವನೆ ಗಟ್ಟಿಗೊಳ್ಳಲು ಮತ್ತೂ ಕಾರಣವಾಗಿದೆ.  ಪಕ್ಷದ ನಿಜ ಕಾರ್ಯಕರ್ತರನ್ನು, ಅಲ್ಲದೇ ಕರ್ನಾಟಕದ ಜಾತ್ಯತೀತತೆಯನ್ನು ಉಳಿಸಿಕೊಳ್ಳಲು ಬೇಕಾದ ಬುದ್ಧಿವಂತರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡಬೇಕು ಎಂಬ ಮಾತುಗಳು ಆ ಪಕ್ಷದೊಳಗೆ ಕೇಳಿಬಂದಿವೆ.

ಗ್ಯಾರಂಟಿಗಳಿಂದಷ್ಟೇ  ಪಕ್ಷ  ಅಧಿಕಾರ ಮರುಗಳಿಸಲು ಸಾಧ್ಯವಿಲ್ಲ ಎಂಬ ಚರ್ಚೆಯೂ ಈಗ ಮುನ್ನೆಲೆಗೆ ಬಂದಿರುವುದು ಆ ಪಕ್ಷದಲ್ಲಿ ಗುಟ್ಟಾಗೇನು ಉಳಿದಿಲ್ಲ.
ಬಿಜೆಪಿಯ ಅಧಿಕಾರವಧಿಯಲ್ಲಿ ಬಿಜೆಪಿ ದನಿ ಅಡಗಿದ್ದೆ ಪಠ್ಯ ಪುಸ್ತಕದ ವಿವಾದದಿಂದ. ಇದರಲ್ಲಿ  ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರ ಪಠ್ಯದ ವಿವಾದವಂತೂ ಬಿಜೆಪಿಯನ್ನು ಅಕ್ಷರಶಃ ಕಂಗೆಡೆಸಿತು.

ನಟರಾಜಗೌಡ


ಪಠ್ಯ ಪುಸ್ತಕದ ವಿವಾದದ ಹೋರಾಟವು ಬಿಜೆಪಿಯ ಮರು ಅಧಿಕಾರದ ಕನಸಿನ ಅರ್ಧವನ್ನು ಆಪೋಷನ ತೆಗೆದುಕೊಳ್ಳುವಲ್ಲಿ ಬರಗೂರು ರಾಮಚಂದ್ರಪ್ಪನವರು ಆ ವಿವಾದವನ್ನು ಎದುರಿಸಿದ ರೀತಿಯೇ ಕಾರಣವಾಯಿತು. ಬಿಜೆಪಿಯ ಬಣ್ಣ ಬಯಲಿಗೆಳೆಯುವಲ್ಲಿ ಬರಗೂರು ಚಿಂತನೆಗಳು, ವಿವಾದದದ ಸಂಧರ್ಭದಲ್ಲಿ ಬರಗೂರು ನಡೆದುಕೊಂಡ ರೀತಿಯೇ ಎಲ್ಲರಿಗೂ ಗೊತ್ತಿದೆ.

ಕಾಂಗ್ರೆಸ್ ಪಕ್ಷದ ಅನೇಕ ಗ್ಯಾರಂಟಿಗಳ ಹೆಸರಿನ ಚಿಂತನೆ ಮೂಸೆ ಸಹ ಬರಗೂರು ಅವರು ಚಿಂತನೆಗಳಿಂದ ಬಂದಿವೆ. ಅಂಥ ಹೆಸರುಗಳಿಂದಲೇ ಆಸ್ಮಿತೆಯನ್ನು ಗಟ್ಟಿಮಾಡಿಕೊಂಡ ಕಾಂಗ್ರೆಸ್ ಅವರನ್ನೇ ಮರೆತಂತೆ ಕಾಣುತ್ತದೆ.


ಗಾಂಧೀಜಿ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ ಅವರ ವಿಚಾರಧಾರೆಗಳು, ಸಮಾಜವಾದ- ಕಮ್ಯೂನಿಸ್ಟ್ ವಿಚಾರಧಾರೆಗಳ ಸಮ್ಮಿಳಿತವಾಗಿಯೂ. ಇವುಗಳನ್ನು ಹೊರತಾಗಿಯೂ ಈ ದಿನಮಾನಕ್ಕೆ ಜನಸಾಮನ್ಯರಿಗೆ, ರಾಜ್ಯಕ್ಕೆ, ದೇಶಕ್ಕೆ ಬೇಕಾದಂಥ ತಮ್ಮದೇ ಆದ ಒಂದು ಸೈಂದಾತಿಕ ನಿಲುವು ಹೊಂದಿರುವ ಬರಗೂರು ಅವರ ದನಿಗೆ ದೊಡ್ಡ ಶಕ್ತಿ ಸಹ ಇದೆ.

ಜಾತ್ಯತೀತ ಶಕ್ತಿಗಳು ದುರ್ಬಲಗೊಳ್ೞುವುದನ್ನು ತಡೆಯಲು ಬರಗೂರು ಅವರ ಮಾತುಗಳು, ಚಿಂತನೆಗಳು ಬಲವಾಗಿ ಪ್ರಯೋಜನಕ್ಕೆ ಬರುತ್ತಿದ್ದವು. ಇದು ರಾಜ್ಯದಲ್ಲಿ ಅಷ್ಟೇ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಅನ್ನು ಬಲಪಡಿಸಲು ನೆರವಾಗುತ್ತಿದ್ದವು.

ಬರಗೂರರು ಎಂದೂ ಕಾಂಗ್ರೆಸ್ ಜತೆ ನೇರ ಭಾಗಿಯಾದವರಲ್ಲ. ನಿಷ್ಠುರತೆಗೆ ಹೆಸರಾದ ಅವರ ಚಿಂತನೆಗಳು ಖಂಡಿತವಾಗಲೂ ಕಾಂಗ್ರೆಸ್ ನ ಬಿಟ್ಟರೆ ಬೇರೆ ಪಕ್ಷಗಳಿಗೆ ಅನುಕೂಲ ಸಿಂಧುವಾಗುವುದಿಲ್ಲ.


ಕರ್ನಾಟಕದಲ್ಲಿ ಜಾತ್ಯತೀತತೆಯು ಮುಂದುವರೆಯಬೇಕೆಂಬ ಅಭಿಲಾಷೆ, ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಮಾತುಗಳಿಗೆ ಪರ್ಯಾಯ ರೂಪಿಸಲು ವಿಧಾನ ಪರಿಷತ್ ನಲ್ಲಿ ಬರಗೂರು ಇದ್ದರೆ ಅದು ಬೇರೆಯೇ ಆಗಿರುತ್ತಿತ್ತು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಲದಲ್ಲಿ ವಿಧಾನ ಪರಿಷತ್ ಸ್ಥಾನ ಹುಡುಕಿಕೊಂಡು ಬಂದರೂ ಅದನ್ನು ತಿರಸ್ಕರಿಸಿದವರು ಬರಗೂರು ರಾಮಚಂದ್ರಪ್ಪನವರು. ಅವರಿಗೆ ಈ ಸಲ ಅವಕಾಶ ಕೊಡುವ ಮೂಲಕ ಜನರ ದನಿಯನ್ನು ವಿಧಾನ ಪರಿಷತ್ ನಲ್ಲಿ ಜೀವಂತವಾಗಿ ಇಡುವ ಒಂದು ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡರೆ ಅದು ಕಾಂಗ್ರೆಸ್ಸಿಗಾಗುವ ನಷ್ಟವೇ ಹೊರತು ಬರಗೂರು ರಾಮಚಂದ್ರಪ್ಪನವರಿಗೆ ಅಲ್ಲ. ಬರಗೂರು ಮಾತುಗಳು, ಪಠ್ಯ ಪುಸ್ತಕ ವಿವಾದದ ವೇಳೆ ಇಡೀ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ತೆರಳಿ ಬಿಜೆಪಿ ಮುಖವಾಡವನ್ನು ಬಯಲಿಗೆಳೆದ ಬರಗೂರು ಅಭಿಮಾನಿಗಳ ಕೆಲಸ ಕಾಂಗ್ರೆಸ್ ಚೇತರಿಸಿಕೊಳ್ಳಲು ಸಹಾಯ ಮಾಡಿದ್ದನ್ನು ಕಾಂಗ್ರೆಸ್ ಮರೆಯಬಾರದು.


ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಒಂದು ಮಾತು ಹೇಳುವುದುಂಟು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಪಕ್ಷ ಕೈ ಬಿಡುವುದಿಲ್ಲ ಎಂದು. ಆದರೆ ಈ ಮಾತು ಯಾಕೋ ಮಾತಾಗಿಯೇ ಉಳಿಯುವಂತೆ ಕಾಣುತ್ತಿದೆ.
ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿ ವಕ್ತಾರರಾಗಿರುವ ರಮೇಶ್ ಬಾಬು ಅವರು ವಿಧಾನ ಪರಿಷತ್ ನಾಮನಿರ್ದೇಶಿತರ ಪಟ್ಟಿಯಲ್ಲಿ ಸೇರಿದ್ದು ಹೇಗೆಂದು ಈಗ ಡಿ.ಕೆ.ಶಿವಕುಮಾರ್ ಅವರೇ ಹೇಳಬೇಕಾಗಿದೆ.
ಪಕ್ಷವನ್ನು ವಕ್ತಾರರೊಬ್ಬರಿಗೆ ಆ ಸ್ಥಾನ ನೀಡಬೇಕೆಂಬ ಅಭಿಲಾಷೆ ಆ ಪಕ್ಷಕ್ಕೆ ಇದ್ದರೆ ಟಿ.ವಿ., ಸಮೂಹ ಮಾಧ್ಯಮ, ಸಾಮಾಜಿಕ ಮಾಧ್ಯಮ, ಪತ್ರಿಕೆಗಳಲ್ಲಿ ಕಾಂಗ್ರೆಸ್ ನ ವಕ್ತಾರಿಕೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ಎ.ಎನ್. ನಟರಾಜಗೌಡ ಅವರಿಗೆ ನ್ಯಾಯವಾಗಿ ಸಲ್ಲಬೇಕಾಗಿತ್ತು.


ಅತ್ಯಂತ ಕಡುಬಡತನದ ಕುಟುಂಬದ ಹಿನ್ನೆಲೆಯ ನಟರಾಜಗೌಡರು, ವಿದ್ಯಾರ್ಥಿ ದೆಸೆಯಿಂದಲೇ ಎನ್ ಎಸ್ ಯು ಐ  ಕಾರ್ಯಕರ್ತರಾಗಿ ದುಡಿದವರು. ಹಾಗೇ, ನೋಡಿದರೆ, ನಟರಾಜಗೌಡರು ಕೆಪಿಸಿಸಿ ಮುಖ್ಯವಕ್ತಾರರು. ಯುವಕರ ಪ್ರತಿನಿಧಿಯಾಗಿ ಅವರು ಮಾಡಿರುವ ಕೆಲಸ ಆಗಾಧವಾದದು. ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಯುವಜನರಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಆಸರೆಯಾದವರು.


ಕಾಂಗ್ರೆಸ್ ನ ಚೀಫ್ ಮೀಡಿಯಾ ಕೋ ಆರ್ಡಿನೇಟರ್ ಆಗಿ ಟಿ.ವಿ. ಚಾನಲ್ ಗಳ ಸಾವಿರಾರು ಡಿಬೇಟ್ ಗಳಲ್ಲಿ ಆ ಪಕ್ಷವನ್ನು ಸಮರ್ಥಿಸಿಕೊಂಡವರು. ಯೂತ್ ಐಕಾನ್ ಆಗಿರುವ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲಾಗುತ್ತದೆ ಎಂದು ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳಲಾಗುತ್ತಿತ್ತು. ಆದರೆ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೇ ಹೋಗಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಷಿಯಲ್ ಮೀಡಿಯಾವನ್ನು ಅವರು ನಿರ್ವಹಿಸಿದ ಬಗೆ ಎಲ್ಲರಿಗೂ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಜ್ಯದಲ್ಲಿ ರಾಹುಲ್ ಗಾಂಧಿಯವರ ಜನಾರ್ಶೀವಾದ ಯಾತ್ರೆಯುದ್ದಕ್ಕೂ  ಸಾಗಿ ಪ್ರಚಾರದ ನೊಗ ಹೊತ್ತಿದ್ದರು.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ವಾರ್ ರೂಂ ನಿರ್ವಹಿಸಿ ಎಐಸಿಸಿ ಮೆಚ್ಚುಗೆಗೂ ಪಾತ್ರರಾಗಿದ್ದರು. ಆ ಪಕ್ಷ ಅಲ್ಲಿ ಅಧಿಕಾರಕ್ಕೂ ಬಂತು. ಆದರೆ ಇಂಥವರ ಹೆಸರೂ ಸಹ ಇಲ್ಲವಾಗಿದೆ.

ಕುವೆಂಪು ಸಾಹಿತ್ಯ ಓದು: ಕುಲಪತಿ ಡಾ. ಎಂ.ಎ.ಶೇಖರ್ ಸಲಹೆ

ಬಿ.ಜಿ.ನಗರ: ಕುವೆಂಪು ಸಾಹಿತ್ಯ ಓದುವುದೆಂದರೆ ವಿಶ್ವ ಮಾನವನಾಗುವತ್ತ ಮನುಷ್ಯ ರೂಪುಗೊಳ್ಳಲು ಓದುವುದಾಗಿದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಎಂ.ಎ.ಶೇಖರ್ ಅಭಿಪ್ರಾಯಪಟ್ಟರು.

ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ  “ಕುವೆಂಪು ಓದು ” ಕಮ್ಮಟದಲ್ಲಿ ಮಾತನಾಡಿದರು.

ಕುವೆಂಪು ಸಾಹಿತ್ಯದ ಓದಿಗಾಗಿ ಇಂತಹ ಕಮ್ಮಟಗಳ ಆಯೋಜನೆ ಅವಶ್ಯಕ ಎಂದರು. ಕುವೆಂಪು ಸಾಹಿತ್ಯದ ಪರಂಪರೆ ಅತಿ ದೊಡ್ಡದು ಎಂದರು.

ಜಗತ್ತಿನ ಯಾವ ಮಗವೂ ಕೂಡ ಸುಲಲಿತವಾಗಿ ಕಲಿಯಬಹುದಾದ ಭಾಷೆ ಎಂದರೆ ಅದು ಕನ್ನಡವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆದಿಚುಂಚನಗಿರಿ ವಿ ವಿ ಯ ಕುಲಸಚಿವರಾದ ಡಾ. ಸಿ ಕೆ ಸುಬ್ಬರಾಯ ಅವರು ಮಾತನಾಡಿ,  ಕುವೆಂಪು ಅವರು ನಿರಂಕುಶಮತಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದಾರೆ. ಇಂದಿನ ಯುವ ಜನತೆ ಕುವೆಂಪು ಅವರ ಸಾಹಿತ್ಯವನ್ನು ಓದಬೇಕು. ಬದುಕಿನ ಮಾರ್ಗವನ್ನು ತೋರುವಂತಹ ಸಾಹಿತ್ಯದ ಓದು ಇಂದಿನ ತುರ್ತು ಕೂಡ ಎಂದರು.

ಕುವೆಂಪು ರೈತನನ್ನು ಯೋಗಿ ಎಂದಿದ್ದಾರೆ. ಸಾಹಿತ್ಯ ಎನ್ನುವುದು ಒಂದು ಸಂವೇದನೆ, ವೈಚಾರಿಕತೆ ಬೆಳೆಸಿಕೊಳ್ಳಲು ಕುವೆಂಪು ಅವರ ಓದು ಮುಖ್ಯವಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಎಸ್. ಗಂಗಾಧರಯ್ಯ ಹೇಳಿದರು.

ಕಮ್ಮಟದ ನಿರ್ದೇಶಕರಾದ ಡಾ. ಸುಭಾಷ್ ರಾಜಮಾನೆ, ವಿ.ವಿ.ಯ ಮಾನವಿಕ ಹಾಗೂ ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಎ ಟಿ ಶಿವರಾಮು, ಪಾಂಶುಪಾಲರಾದ ರೋಹಿತ್ ಎನ್ ಆರ್. ಸಹ ಪ್ರಾಧ್ಯಾಪಕರಾದ ಡಾ. ವಾಸುದೇವಮೂರ್ತಿ ಟಿ ಎನ್, ಡಾ. ಶ್ವೇತಾರಾಣಿ ಹೆಚ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕರಾದ ಹೇಮರಾಜ್ ಸಿ.ಆರ್. ಅವರು ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ರಕ್ಷಾ ಎಸ್.ವಿ. ಕಾರ್ಯಕ್ರಮ ನಿರೂಪಿಸಿದರು.

ಕಮ್ಮಟದಲ್ಲಿ ಕುವೆಂಪು ಅವರ ಕವಿತೆಗಳ ವಾಚನ, ಸಾಹಿತ್ಯದ ಓದು ಮತ್ತು ಚರ್ಚೆ ನಡೆಯಿತು.

ಕುವೆಂಪು ಸಾಹಿತ್ಯದ ಓದು ಬಾಲಗಂಗಾಧರನಾಥ ಶ್ರೀಗಳ ಆಶಯವಾಗಿತ್ತು: ಎಟಿಎಸ್

ಬಿ.ಜಿ.ನಗರ:  ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ವಿದ್ಯಾರ್ಥಿಗಳಿಂದ ಓದಿಸಬೇಕು ಎಂಬುದು ಆದಿಚುಂಚನಗಿರಿ ಮಠಾಧ್ಯಕ್ಷರಾಗಿದ್ದ ಪದ್ಮಭೂಷಣ ಪುರಸ್ಕೃತ  ಡಾ. ಶ್ರೀ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿಗಳ ಆಶಯವಾಗಿತ್ತು ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಮಾನವಿಕ ಹಾಗೂ ಸಮಾಜ ವಿಜ್ಞಾನದ ಮುಖ್ಯಸ್ಥರಾದ ಡಾ.ಎ.ಟಿ.ಶಿವರಾಮು ಹೇಳಿದರು.

ಇಲ್ಲಿನ ವಿ.ವಿ.ಯ ಪದವಿ ಕಾಲೇಜಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕುವೆಂಪು ಓದು ಕಮ್ಮಟದಲ್ಲಿ ಮಾತನಾಡಿದರು.

ಶ್ರೀಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ರಾತ್ರಿ ಕಾರ್ಯಕ್ರಮ ಮುಗಿಸಿ ಎಷ್ಟೇ ತಡವಾಗಿ ಬಂದರೂ ಅರ್ಧ ಗಂಟೆ ಕಾಲ ಓದದೇ ನಿದ್ದೆಗೆ ಹೋಗುವುದಿಲ್ಲ. ಓದಿಗೆ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ವಿದ್ಯಾರ್ಥಿಗಳು ಸಹ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆನ್ನುವುದು ಶ್ರೀಗಳ ಆಶಯವಾಗಿದೆ ಎಂದರು.

ವರ್ಷಕ್ಕೇ ಇಂತಿಷ್ಟು ಪುಸ್ತಕ ಓದಬೇಕೆಂಬ ಗುರಿಯನ್ನು ಪ್ರತಿಯೊಬ್ಬರು ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ವಿ.ವಿ.ಕುಲಪತಿ ಡಾ.ಎಂ.ಎ.ಶೇಖರ್, ಕುಲಸಚಿವರಾದ ಡಾ. ಸಿ ಕೆ ಸುಬ್ಬರಾಯ, ಡಾ.ಸುಭಾಷ್ ರಾಜಮಾನೆ,.ಎಸ್.ಗಂಗಾಧರಯ್ಯ, ಪ್ರಾಂಶುಪಾಲರಾದ ರೋಹಿತ್ ಎನ್ ಆರ್. ಡಾ . ವಾಸುದೇವಮೂರ್ತಿ ಟಿ.ಎನ್. ಡಾ.ಶ್ವೇತಾರಾಣಿ ಎಚ್. ಇದ್ದರು.

ಆದಿಚುಂಚನಗಿರಿ ವಿ.ವಿ.ಯಲ್ಲಿ ಕುವೆಂಪು ಓದು ಕಮ್ಮಟ

ಬಿ.ಜಿ.ನಗರ (ಬೆಳ್ಳೂರು ಕ್ರಾಸ್): ಇಲ್ಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 29ರಂದು ಕುವೆಂಪು ಓದು: ಕಮ್ಮಟ ಆಯೋಜಿಸಲಾಗಿದೆ.

ಕುವೆಂಪು ಭಾಷಾ ಪ್ರಾಧಿಕಾರ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಬೆಳಿಗ್ಗೆ ೧೦ಕ್ಕೆ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಚನ್ನಪ್ಪ ಕಟ್ಟಿ ಅವರು ಸಮಾರಂಭ ಉದ್ಘಾಟಿಸುವರು.
ಅತಿಥಿಗಳಾಗಿ ವಿ.ವಿ.ಯ ಕುಲಸಚಿವರಾದ ಡಾ.ಸಿ.ಕೆ.ಸುಬ್ಬರಾಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಅಧ್ಯಕ್ಷತೆಯನ್ನು ವಿ.ವಿ. ಉಪ ಕುಲಪತಿ ಡಾ‌. ಎಂ.ಎ. ಶೇಖರ್ ವಹಿಸುವರು. ಕಮ್ಮಟದ ನಿರ್ದೇಶಕರಾಗಿ ವಿಮರ್ಶಕರಾದ ಡಾ. ಸುಭಾಷ್ ರಾಜಮಾನೆ ಕಾರ್ಯನಿರ್ವಹಿಸುವರು.

ವಿ.ವಿ.ಯ ಮಾನವಿಕ ಹಾಗೂ ಸಮಾಜ ವಿಜ್ಞಾನ ವಿಭಾಗದ ಡೀನ್ ಎ.ಟಿ.ಶಿವರಾಂ, ಪ್ರಾಂಶುಪಾಲ ಪ್ರೊ.ರೋಹಿತ್ ಎನ್.ಆರ್. ಉಪಸ್ಥಿತಿ ಇರಲಿದೆ.
ಕಥೆಗಾರರೂ ಆದ ಕುವೆಂಪು ಭಾಷಾ ಭಾರತಿ ಸದಸ್ಯ ಸಂಚಾಲಕ ಎಸ್. ಗಂಗಾಧರಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುವರು.

ಕಮ್ಮಟದಲ್ಲಿ ಕುವೆಂಪು ಅವರ ಕೆಲವು ಆಯ್ದ ಕವಿತೆ, ಕತೆಗಳು, ಕಾದಂಬರಿಗಳ ಓದು ಹಾಗೂ ಆ ಕುರಿತ ಚರ್ಚೆ, ಸಂವಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೊದಲಾ ದಿನ ಏನ್ನೆಲ್ಲಾ ಮಾಡಿದ್ರು ಈ ಪುಟಾಣಿಗಳು

0

ಲೇಖನ: ತುಳಸೀತನಯಚಿದು

ಬೇಸಿಗೆ ರಜೆ ಮುಗಿದಿದೆ. ಮಕ್ಕಳು ಇಷ್ಟು ದಿನ ಕಳೆದದ್ದು ತಮ್ಮದೇ ಆದ ಹೊಸದೊಂದು ಲೋಕ. ಈಗ ಶಾಲೆ ಪುನಾರಂಭಗೊಂಡಿವೆ.

ರಜೆಯ ಮದಜದಲ್ಲಿ ಮಿಂದೆದ್ದ ಮಕ್ಕಳು ಈಗ ಶಾಲೆಗಳತ್ತ ಮುಖ ಮಾಡಬೇಕಿದೆ. ಮುಗ್ಧ ಮನಸ್ಸುಗಳಲ್ಲಿ ಇನ್ನೂ ಅದೇ ರಜೆಯ ಆಟೋಟದ ನೆನಪು ಹಚ್ಚಹಸಿರಾಗಿದೆ. ಆದರೂ ಪೋಷಕರ ಒತ್ತಾಯದ ಮೆರೆಗೆ ಕಲಿಕೆಯತ್ತ ಮುಖ ಮಾಡಬೇಕಿದೆ. ಕೆಲವು ಮಕ್ಕಳಿಗೆ ಶಾಲೆ ಪ್ರಾರಂಭದ ಮೊದಲ ದಿನ ಏನೋ ಒಂದು ಸಂಕಟ ಭಾವ. ಮತ್ತೆ ಕೆಲವರಿಗೆ ಹೊಸ ಹುರುಪಿನ ಸಂಭ್ರಮದ ಹೆಜ್ಜೆ.

ಬೇಸಿಗೆ ರಜೆ ಎಂಬುದು ಮಕ್ಕಳ ಜೀವನದಲ್ಲಿ ಅತ್ಯಂತ ನಿರೀಕ್ಷಿತ ಕಾಲ. ಅದೆಷ್ಟೋ ದಿನಗಳಿಂದ ಶಾಲೆಯ ಕಟ್ಟಡ, ಪುಸ್ತಕ, ಪಾಠ ಮತ್ತು ಪರೀಕ್ಷೆಗಳಿಂದ ದೂರವಿದ್ದು, ಆಟ, ಮೋಜು, ವೀಕ್ಷಣೆ ಮತ್ತು ವಿಶ್ರಾಂತಿಯ ಈ ಕಾಲವು ಅವರಿಗೆ ನಿಜವಾದ ಸಂತಸದ ಕಾಲವಾಗಿರುತ್ತದೆ. ಆದರೆ, ಕಾಲನ ತೀರದಲಿ ಏನು ನಿಲ್ಲುತ್ತದೆ? ಎರಡು ತಿಂಗಳ ರಜೆ ತಮ್ಮ ವಿಸ್ಮಯದ ನೆನಪುಗಳೊಂದಿಗೆ ಮರೆಯಾದಂತೆ ಕಾಲಚಕ್ರ ಮುಂದುವರಿದಿದೆ. ಬೇಸಿಗೆಯ ಉರಿಗೆ ತಾಪವಂತೂ ತೀರಿದರೂ, ಅದರ ಸಿಹಿ ನೆನಪುಗಳು ಮಕ್ಕಳ ಮನಸ್ಸಿನಲ್ಲಿ ಇನ್ನೂ ತಾಜಾಗಿಯೇ ಉಳಿದಿವೆ.

ಶಾಲೆಗಳು ಪುನರಾರಂಭಗೊಂಡವು. ಮೊದಲ ದಿನವೇ ಮಕ್ಕಳು ಮಂಕಾದ ಮುಖದಿಂದ, ಕೆಲವರು ಕುತೂಹಲದಿಂದ, ಇನ್ನೂ ಕೆಲವರು ಅಜ್ಞಾನತೆಯಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದರು. ಆಟಗಳಲ್ಲಿ, ಪ್ರವಾಸಗಳಲ್ಲಿ, ಅಜ್ಜಿ-ಅಜ್ಜಂದಿರ ಕಥೆಗಳಲ್ಲಿ ತೋಡಗಿಕೊಂಡಿದ್ದ ಅವರು, ಈಗ ತಿರುಗಿ ಪಾಠಶಾಲೆಯ ಗಂಭೀರ ವಾತಾವರಣದತ್ತ ಮರಳಬೇಕಿದೆ. ಅವರ ಹೃದಯದಲ್ಲಿ ಮತ್ತೆ ಶುರುವಾದ ಪಾಠದ ಕಥೆಯೂ ಒಂದು ಹೊಸ ತಿರುವನ್ನು ಕೊಡುವ ದಾವಂತವಿದೆ.

ಪೋಷಕರು ಮಕ್ಕಳಿಗೆ ಶಾಲೆಗೆ ಹೋಗುವ ಅಗತ್ಯವನ್ನು ತಿಳಿಸಿಕೊಟ್ಟು, ಉತ್ಸಾಹವಂತಿಕೆ ತರವ ಯತ್ನದಲ್ಲಿದ್ದಾರೆ. “ಇದೀಗ ಮತ್ತೆ ಓದಬೇಕು, ಈ ವರ್ಷ ಹೊಸ ವಿಷಯಗಳು, ಹೊಸ ಶಿಕ್ಷಕರು, ಹೊಸ ಗೆಳೆಯರು..!” ಎಂಬ ಪ್ರೋತ್ಸಾಹದ ಮಾತುಗಳ ಜೊತೆಗೆ ನೂತನ ಬ್ಯಾಗು, ಪುಸ್ತಕಗಳು, ಪೆನ್ನು, ಪೆನ್ಸಿಲ್ ಗಳು ಮಕ್ಕಳನ್ನು ನವೋತ್ಸಾಹಕ್ಕೆ ಹೊತ್ತು ತಂದಿವೆ.

ಶಾಲೆಯ ದ್ವಾರದಲ್ಲಿ ಶಿಕ್ಷಕರು ಹಸನ್ಮಿಕಿಗಳಾಗಿ ಮಕ್ಕಳನ್ನು ಬರಮಾಡಿಕೊಂಡರು. ಮೊದಲು ನೋಡುತ್ತಿದ್ದಂತೆಯೇ ಮುದ್ದಾಗಿ ನಗುತ್ತಾ ತಂಗಾಳಿಯಂಥ ಸ್ವಾಗತ. “ಹಾಯ್, ಹಲೋ, ಗುಡ್ ಮಾರ್ನಿಂಗ್ ಪುಟ್ಟಾ..! ನಿನ್ನ ಬೇಸಿಗೆ ಹೇಗಿತ್ತು? ರಜದಲ್ಲಿ ಏನು ಮಾಡಿದೆ..? ಎಲ್ಲಿಗೆ ಹೋಗಿದ್ದೇ..?” ಎಂಬ ಪ್ರಶ್ನೆಗಳ ಸುರಿಮಳೆ ಮಕ್ಕಳ ನಗೆಯ ಜೊತೆ ಬೆರೆತು ಹಾರಿತು. ಕೆಲವು ಮಕ್ಕಳು ತಮ್ಮ ಉಲ್ಲಾಸದ ಅನುಭವಗಳನ್ನು ಹೇಳುತ್ತಾ ಮೆಚ್ಚಿನ ನೋಟಗಳನ್ನು ಪಡೆದುಕೊಂಡರು. ಇನ್ನು ಕೆಲವು ಮಕ್ಕಳು ನಿಶ್ಯಬ್ದವಾಗಿ ನೋಡುವ ಮೂಲಕ ತಮ್ಮ ಸುಮ್ಮನಾದ ನೆನಪುಗಳನ್ನು ಮೌನದಲಿ ಹಂಚಿಕೊಂಡರು.

ಈ ವರ್ಷದ ಶೈಕ್ಷಣಿಕ ಚಟುವಟಿಕೆ ಆರಂಭವಾದರೂ, ಮೊದಲ ದಿನ ಪಾಠಕ್ಕಿಂತ ಹೆಚ್ಚು ನೆನಪುಗಳನ್ನು ಹಂಚಿಕೊಳ್ಳುವ ದಿನ. ಗೆಳೆಯರೊಂದಿಗೆ ಮತ್ತೆ ಸೇರಿಕೊಳ್ಳುವ ಹರ್ಷ, ಹೊಸ ಪುಸ್ತಕಗಳ ಸುವಾಸನೆ, ಕರೆಯುವ ಗಂಟೆಯ ಪ್ರಭಾತಧ್ವನಿ ಇವೆಲ್ಲಾ ಮಕ್ಕಳಲ್ಲಿ ಪುಟಪುಟಿತ ಮನಸ್ಸನ್ನು ತಾಜಾ ಮಾಡಿತು.

ಈ ದಿನ ಶಿಕ್ಷಕರಿಗೂ ವಿಶೇಷ. ಮಕ್ಕಳ ಉಲ್ಲಾಸದ ಚಲನೆ, ಅವರ ಬದಲಾಗಿರುವ ವ್ಯಕ್ತಿತ್ವ, ಬೇಸಿಗೆಯೊಳಗಿನ ಬೆಳವಣಿಗೆಯ ಕಂಡುಹಿಡಿಯುವ ಸಂಭ್ರಮ ಶಿಕ್ಷಕರಿಗೆ ಅನಿರ್ವಹಣೀಯ ಸಂತೋಷ ನೀಡುತ್ತದೆ. ಅವರು ಮಕ್ಕಳಿಗೆ ಅಧ್ಯಯನದ ಮಹತ್ವವನ್ನು ಮತ್ತೊಮ್ಮೆ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದರು. ಅದರಲ್ಲೂ ಕಠಿಣತೆಯಲ್ಲ, ನಗೆಯಮಾತುಗಳಿಂದ, ಕಥೆಗಳ ಮೂಲಕ, ಅನುಭವಗಳ ಹಂಚಿಕೆಯಿಂದ.

ಈಗ ರಜೆಯ ಸಿಹಿತನವನ್ನು ಹಿಂದೆ ಬಿಟ್ಟು, ಹೊಸ ಶೈಕ್ಷಣಿಕ ವರ್ಷಕ್ಕೆ ಪದಾರ್ಪಣೆ ಮಾಡುವ ಕಾಲ. ಇದು ಹೊಸ ಕನಸುಗಳ ಆರಂಭ, ಹೊಸ ಗುರಿಗಳ ಹೆಜ್ಜೆಗಳು. ಮಕ್ಕಳ ಮನಸ್ಸು ಈಗ ಎದೆಯಾಳದಲ್ಲಿ ಆಟದ ಜಗತ್ತಿನಿಂದ ಪಾಠದ ಲೋಕಕ್ಕೆ ಕಾಲಿಡುತ್ತಿದೆ. ಆದರೆ ಈ ಪಾಠವೂ ಅಂತೂ ಒಂದೇ: ಕಲಿಕೆಯಲ್ಲಿ ಸುಖವಿದೆ.
—ತುಳಸಿತನಯ ಚಿದು..✍️

ಮೊಬೈಲ್, ಮಕ್ಕಳ ಮನಸ್ಸನ್ನ ಮಾಸದಿರಲಿ..

0

ಲೇಖನ: ತುಳಸೀತನಯಚಿದು

ಇದು ಮದುವೆ ಇನ್ನಿತರೆ ಶುಭ ಸಮಾರಂಭದ ಕಾಲ. ಬಹಳಷ್ಟು ಮದುವೆ ಸಮಾರಂಭಗಳಿಗೆ ಆಹ್ವಾನ ಕೂಡ ಬಂದಿದ್ದವು. ಹಾಗಾಗಿ ನಾನು ಇದ್ದಿದುರಲ್ಲಿ ಒಂದಷ್ಟು ಮದುವೆಗಳಿಗೆ ಹೋಗಿದ್ದೆ. ಅಲ್ಲಿ ಸ್ನೇಹಿತರೊಂದಿಗೆ ಹರಟುವಾಗ ನನಗೆ ಕಣ್ಣಿಗೆ ಬಿದ್ದದ್ದು, ಸುಮಾರು ಐದು ವರ್ಷ ಒಳಗಿನ ಅತೀ ಸಣ್ಣ ವಯಸ್ಸಿನ ಮಕ್ಕಳು ತಮ್ಮ ಕೈಗಳಲ್ಲಿ ಮೊಬೈಲ್ ಹಿಡಿದು ಎವೆಇಕ್ಕದೆ ಅದನ್ನು ನೋಡುತ್ತಿದ್ದದ್ದು.

ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ತಾವು ನೆಂಟರಿಷ್ಟರ ಜೊತೆ ಹರಟೆಯಲ್ಲಿ ತೊಡಗಿದ್ದರು. ಇತ್ತ ಮಕ್ಕಳು ಮೊಬೈಲ್ ಗೆ ದಾಸರಾದಂತೆ ಎಡೆಬಿಡದೇ ಕಣ್ಣರಳಿಸಿ ನೋಡುತ್ತಲೆ ಇದ್ದರು.

ಪೋಷಕರು, ಮಕ್ಕಳು ಹಠ ಮಾಡುತ್ತಾರೆ, ಹಠ ಮಾಡದಿರಲಿ, ಸುಮ್ಮನಿರಲ್ಲ ತೀಟೆ ಮಾಡುತ್ತಾರೆ, ಮೊಬೈಲ್ ಇಲ್ಲದೆ ನಮ್ಮ ಮಗು ಊಟವೇ ಮಾಡೋಲ್ಲ ಅನ್ನೋಕಾರಣಕ್ಕೆ ಪೋಷಕರೇ ಮಕ್ಕಳ ಕೈಗೆ ಮೊಬೈಲ್ ಇತ್ತು ಅವರವರ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ನಾನು ಕಂಡಂತೆ ಇತ್ತೀಚೆಗೆ ಇಂತಹ ಬಹಳಷ್ಟು ಸಮಾರಂಭಗಳಲ್ಲಿ ಬಹುತೇಕ ಮಕ್ಕಳು ಇದೇ ತರ ಮೊಬೈಲ್ ಬಳಸುತ್ತಿರುತ್ತಾರೆ. ಗೆಳೆಯರೊಂದಿಗೆ ಮಾತನಾಡುವಾಗ ಅದ್ಯಾಕೋ ಏನೋ ಪುಟ್ಟ ಮಕ್ಕಳ ಕೈಲಿನ ಮೊಬೈಲ್ ನನ್ನನ್ನು ಗಮನ ಹರಿಸುವಂತೆ ಮಾಡಿತ್ತು.

ಮಕ್ಕಳು ತಾವೇ ಮೊಬೈಲ್ ಗೀಳು ಹತ್ತಿಸಿಕೊಂಡರೇ.? ಇಲ್ಲಾ ಪೋಷಕರು ತಮ್ಮತಮ್ಮ ಕೆಲಸ ಮಾಡಿಕೊಳ್ಳಲು ಮಕ್ಕಳು ಅಡ್ಡಿಯಾಗುತ್ತಾರೆಂಬ ಕಾರಣದಿಂದ ಮೊಬೈಲ್ ಕೈಗಿಟ್ಟು ಕೂರಿಸುವ ಸಲುವಾಗಿ ಕೊಟ್ಟಿದ್ದರಿಂದ ಗೀಳಾಗಿ ಪರಿವರ್ತಿತೇ.? ಇಂತಹದೊಂದು ಪ್ರಶ್ನೆ ನನ್ನನ್ನು ಗಾಢವಾಗಿ ಕಾಡತೊಡಗಿತು. ಈ ಕುರಿತಾಗಿ ನನಗನ್ನಿಸಿದ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಇದು ನಮ್ಮ ಕಾಲಘಟ್ಟದಲ್ಲಿ ಅತ್ಯಂತ ತೀವ್ರವಾಗಿ ಚರ್ಚೆಗೆ ಒಳಪಡುವ ವಿಷಯ. “ಮಕ್ಕಳಿಗೆ ಮೊಬೈಲ್‌– ಅನುಕೂಲದ ಮುಖವೋ, ಅಪಾಯದ ಬಲೆಯೋ?” ಎಂಬಂತೆ, ನಾವೆಲ್ಲಾ ವಿವರಣೆ ಮಾಡಿದ ಸಂದರ್ಭಗಳು ಇಂದು ಸಾಮಾನ್ಯವಾಗಿಬಿಟ್ಟಿವೆ. ಈ ಹಿನ್ನಲೆಯಲ್ಲಿ, ಈ ಸಮಸ್ಯೆಯ ಮೂಲವನ್ನು, ಪೋಷಕರ ಜವಾಬ್ದಾರಿಯನ್ನು, ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ಮತ್ತು ಏನು ಮಾಡಿದರೆ ಸಮಸ್ಯೆ ನಿಯಂತ್ರಣಕ್ಕೊಳಪಡಬಹುದು ಎಂಬುದನ್ನು ವಿಶ್ಲೇಷಿಸಬಯಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳು, ಕುಟುಂಬ ಕೂಟಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಾಣಸಿಗುವ ಒಂದು ಸಾಮಾನ್ಯ ದೃಶ್ಯವೆಂದರೆ: ಪುಟ್ಟ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿದು ಅದಕ್ಕೆ ಮಗ್ನವಾಗಿರುವುದು.

ಕೆಲವರು ಕಾರ್ಟೂನ್ ನೋಡುತ್ತಿದ್ದಾರೆ, ಇನ್ನೂ ಕೆಲವರು ಗೇಮ್‌ಗಳಲ್ಲಿ ಮುಳುಗಿದ್ದಾರೆ. ಪೋಷಕರು ಅಲ್ಲಿಗೆ ಗಮನ ಹರಿಸದೇ, ಅವರು “ಶಾಂತವಾಗಿದ್ದಾರೆ” ಎಂಬ ನೆಮ್ಮದಿಯಲ್ಲಿ ತಮ್ಮತಮ್ಮ ಮಾತುಕತೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಮಕ್ಕಳಿಗೆ ಮೊಬೈಲ್ ಕೊಡುವುದರಿಂದ ತಾತ್ಕಾಲಿಕವಾಗಿ ತೀವ್ರ ಹಠ, ಅಳಿವು, ಅಸಹನೆಯ ಪರಿಸ್ಥಿತಿಯನ್ನು ತಪ್ಪಿಸಬಹುದು. ಆದರೆ ಇದರಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳನ್ನು ಹಲವು ಪೋಷಕರು ಅರ್ಥ ಮಾಡಿಕೊಂಡಿಲ್ಲ.

ಮಕ್ಕಳಿಗೆ ಮೊಬೈಲ್ ನೀಡುವ ಮೊದಲು ಪೋಷಕರಿಗೆ ಈ ಕೆಳಗಿನ ವಿಷಯಗಳನ್ನು ತಿಳಿದಿರಬೇಕು:

ಮಕ್ಕಳ ಮೆದುಳಿನ ಬೆಳವಣಿಗೆ: ಐದು ವರ್ಷದೊಳಗಿನ ಮಕ್ಕಳ ಮೆದುಳಿನ ಬೆಳವಣಿಗೆಯು ಅತ್ಯಂತ ತೀವ್ರವಾಗಿದೆ. ಈ ಸಮಯದಲ್ಲಿ ಅವರು ಅಮ್ಮನ ಮುಖ, ತಂದೆಯ ಮಾತು, ಆಟದ ಖುಷಿ, ಕಥೆಗಳ ಕಲ್ಪನೆ—ಇವೆಲ್ಲ ನಿರ್ಣಾಯಕ ಅಂಶಗಳು. ಈ ಸಮಯದಲ್ಲಿ ಪರದೆಯ ಪರಿಮಿತ ಜಗತ್ತಿನಲ್ಲಿ ಮುಳುಗುವುದು ಅವರ ಕಲ್ಪನೆ ಶಕ್ತಿಗೆ ತೀವ್ರ ಧಕ್ಕೆ ತರುತ್ತದೆ.

ಮಾನಸಿಕ ಆರೋಗ್ಯ: ಮೊಬೈಲ್‌ಗೆ ಚಟವಾಗುವುದು ಮಕ್ಕಳಲ್ಲಿ ಕೋಪ, ಧೈರ್ಯ ನಾಶ, ಅಶಾಂತಿ, ನಿದ್ರೆ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ದಾರಿ ಮಾಡುತ್ತದೆ.

ಭಾಷಾ ಬೆಳವಣಿಗೆಗೆ ಅಡ್ಡಿ: ಮೊಬೈಲ್‌ನಲ್ಲಿನ ಒತ್ತಡದ ವಿಡಿಯೋಗಳು, ವೇಗದ ದೃಶ್ಯಗಳು, ನಿಷ್ಠೂರ ಡೈಲಾಗ್‌ಗಳು ಮಕ್ಕಳ ಭಾಷಾ ಅಭಿವೃದ್ಧಿಗೆ ಅಡ್ಡಿಯಾಗಬಹುದು. ಬದುಕಿನ ನೈಜ ಸಂಭಾಷಣೆಯ ಅನುಭವವಿಲ್ಲದೆ, ಅವರ ವಾಕ್ ಶಕ್ತಿ ಕುಂದುತ್ತದೆ.

ದುಷ್ಪರಿಣಾಮ

ದೃಷ್ಟಿದೋಷ: ಹಳೆಯದಕ್ಕಿಂತ ಹೆಚ್ಚಾಗಿ ಈಗ ಮಕ್ಕಳಿಗೆ ಚಿಕ್ಕ ವಯಸ್ಸಲ್ಲಿ ಗ್ಲಾಸ್ ಬೇಕಾಗುತ್ತಿರುವುದು ಆಶ್ಚರ್ಯದ ವಿಷಯವಲ್ಲ.

ನಿದ್ರೆಗತಸ್ಥಿತಿ: ಪರದೆ ಬೆಳಕು ನಿದ್ರೆ ಹಾರ್ಮೋನ್‌ಗಳಿಗೆ ವ್ಯತಿರಿಕ್ತವಾಗಿದೆ. ಇವು ಮಕ್ಕಳ ನಿದ್ರೆಯನ್ನು ಕೆಡಿಸಬಹುದು.

ಸಾಮಾಜಿಕ ಕೌಶಲ್ಯ ಕೊರತೆ: ಮಕ್ಕಳಿಗೆ ಸಂಬಂಧಗಳನ್ನು ನಿರ್ಮಿಸಿಕೊಳ್ಳುವ, ಶೈಕ್ಷಣಿಕವಾಗಿ ಬೆಳೆಸಿಕೊಳ್ಳುವ ಅವಕಾಶಗಳು ಕಡಿಮೆಯಾಗುತ್ತವೆ.

ಅತಿಯಾದ ಒಂಟಿ ತನ: ಇಷ್ಟ, ವೀಕ್ಷಣೆ, ಪ್ರತಿಕ್ರಿಯೆ ಮೇಲೆ ನಂಬಿಕೆ ಬೆಳೆಸಿದರೆ, ಜೀವನದ ನೈಜ ಸಂತೋಷಗಳ ಅರಿವೇ ಉಳಿಯುವುದಿಲ್ಲ.

ಮಕ್ಕಳಿಗೆ ಮೊಬೈಲ್ ನೀಡುವುದು ಅಪರಾಧವಲ್ಲ. ಆದರೆ ಅವು ಬಳಸುವ ವಿಧಾನ, ಸಮಯ, ಉದ್ದೇಶ, ಮತ್ತು ಮೇಲ್ವಿಚಾರಣೆ ಇಲ್ಲದೆ ಮಾಡುವ ಬಳಕೆ ಹಾನಿಕಾರಕ. ಪೋಷಕರು ತಮ್ಮ ಸಮಯವನ್ನು, ಪ್ರೀತಿಯನ್ನು, ಮತ್ತು ಸಹನೆಯುಳ್ಳ ಮಾರ್ಗದರ್ಶನವನ್ನು ಮಕ್ಕಳಿಗೆ ನೀಡುವ ಮೂಲಕ ಅವರಿಗೆ ಸುಸ್ಥಿರ, ಸಮತೋಲನದ ಜೀವನದ ದಿಕ್ಕು ನೀಡಬಹುದು.

ಮಕ್ಕಳ ಮುಗ್ಧತೆಯ ಮುಂದೆ ತಂತ್ರಜ್ಞಾನ ಮಣಿಯದಿರಲಿ; ತಂತ್ರಜ್ಞಾನ ನಮ್ಮ ಮಕ್ಕಳಿಗೆ ಆಜ್ಞೆಯಲ್ಲ, ಸಾಧನವಾಗಿರಲಿ.

–ಲೇಖಕರು:-ತುಳಸಿತನಯ ಚಿದು..✍️

“ಸಮಯದ ನದಿಯಲ್ಲಿ ಬದುಕಿನ ಹಡಗು”

ಸಮಯ – ಅದು ಮೌಲ್ಯವಿಲ್ಲದ ಅಂಶವಲ್ಲ. ಅದು ಬದುಕಿನ ದಾರಿದೀಪ. ಪ್ರತಿಯೊಂದು ಕ್ಷಣವೂ ಅದು ಮುಂದೆ ಮಾತ್ರ ಓಡುತ್ತಿದೆ. ನಾವು ಯಾವಾಗಲೂ ಅದನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದರೂ ಅದು ನಮ್ಮ ಬೆರಳ ಹಿಂದೆ ಸಿಡಿದು ಹೋಗುತ್ತಿದೆ. ಈ ಓಡುವ ಸಮಯದ ಹಾದಿಯಲ್ಲಿ, ಬದುಕು ತನ್ನ ಹಡಗನ್ನು ಸಾಗಿಸುತ್ತಿದೆ – ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಕತ್ತಲ ಕಣಿವೆಯಲ್ಲಿ, ಇನ್ನೊಮ್ಮೆ ಭವಣೆಗಳ ಏರುಪೇರಿನಲ್ಲಿ.

ಸಂತೋಷ, ನೋವು, ನಿರಾಶೆ, ಆಕಾಂಕ್ಷೆ — ಇವೆಲ್ಲಾ ಬದುಕಿನ ನಾಟಕದಲ್ಲಿ ನಮಗೆ ಅನಿಸುವ ಹಾಗೆ ಭಾವನೆಗಳ ಪಾತ್ರವಹಿಸುತ್ತವೆ. ಪ್ರತಿ ಭಾವನೆ, ಒಂದು ಪಾಠ, ಒಂದು ಅನುಭವ. ಒಮ್ಮೆ ಸುಖದ ಎದೆಯಲ್ಲಿ ಹಾರಾಡಿದ ಹಗಲು, ಮತ್ತೊಮ್ಮೆ ದುಃಖದ ಮಬ್ಬಿನಲ್ಲಿ ಕರಗಿ ಹೋಗುವ ರಾತ್ರಿ. ಆದರೆ ಇವೆಲ್ಲವೂ ಜೀವನದ ನಿಜವಾದ ಬಣ್ಣ.

ಜೀವನದ ಸಾಗರದಲ್ಲಿ ನಾವು ಎಲ್ಲರಿಗೂ ನಾವೇ, ನಾವಾಗಿ, ನಾವಿಲ್ಲದ ಅನೇಕ ಕನಸುಗಳ ನೌಕೆಹೊಕ್ಕಿದ ನಾವಿಕರು. ನಾವು ಎಲ್ಲಿ ಹೋಗಬೇಕು ಎಂಬ ಅರಿವಿಲ್ಲದಿದ್ದರೂ, ಸಾಗುವ ಪ್ರಯಾಣದಲ್ಲಿರುವ ಭಾವನೆಗಳು ನಮಗೆ ಬದುಕು ಬದಲಿಸುವ ಪಾಠಗಳನ್ನು ಕಲಿಸುತ್ತವೆ. ಈ ಪಾಠಗಳು – ಅವು ನಮ್ಮನ್ನು ಹೆಚ್ಚು ಮಾನವೀಯವಾಗಿಸಿಕೊಳ್ಳುತ್ತವೆ. ಹೆಚ್ಚು ಗಂಭೀರವಾಗಿ ಬದುಕನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತವೆ.

ಹೀಗೇ, ಸಮಯ ತೀರವಿಲ್ಲದ ನದಿಯಲ್ಲಿ ಬದುಕು ಸಾಗುತ್ತಿದೆ. ನಾವು ಹತ್ತಿರುವ ಈ ಹಡಗು ಎಲ್ಲಿಗೆ ತಲುಪುತ್ತದೆ ಎಂಬದು ಅಷ್ಟು ಮುಖ್ಯವಲ್ಲ. ಅದರಲ್ಲಿರುವ ಪ್ರತಿ ಕ್ಷಣ, ಪ್ರತಿಯೊಂದು ಭಾವನೆ, ಮತ್ತು ಬದುಕಿದ ರೀತಿಯೇ ನಿಜವಾದ ಜಯ.

ಏಕೆಂದರೆ, ಬದುಕು – ಓಡುತ್ತಿರುವ ಸಮಯದಲ್ಲಿ ಕಾಣಿಸಿಕೊಳ್ಳುವ ನಿಜವಾದ ಕಲೆ.

—ತುಳಸಿತನಯ ಚಿದು..✍️