ಬಿ.ಜಿ.ನಗರ (ಬೆಳ್ಳೂರು ಕ್ರಾಸ್): ಇಲ್ಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 29ರಂದು ಕುವೆಂಪು ಓದು: ಕಮ್ಮಟ ಆಯೋಜಿಸಲಾಗಿದೆ.
ಕುವೆಂಪು ಭಾಷಾ ಪ್ರಾಧಿಕಾರ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಬೆಳಿಗ್ಗೆ ೧೦ಕ್ಕೆ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಚನ್ನಪ್ಪ ಕಟ್ಟಿ ಅವರು ಸಮಾರಂಭ ಉದ್ಘಾಟಿಸುವರು.
ಅತಿಥಿಗಳಾಗಿ ವಿ.ವಿ.ಯ ಕುಲಸಚಿವರಾದ ಡಾ.ಸಿ.ಕೆ.ಸುಬ್ಬರಾಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಅಧ್ಯಕ್ಷತೆಯನ್ನು ವಿ.ವಿ. ಉಪ ಕುಲಪತಿ ಡಾ. ಎಂ.ಎ. ಶೇಖರ್ ವಹಿಸುವರು. ಕಮ್ಮಟದ ನಿರ್ದೇಶಕರಾಗಿ ವಿಮರ್ಶಕರಾದ ಡಾ. ಸುಭಾಷ್ ರಾಜಮಾನೆ ಕಾರ್ಯನಿರ್ವಹಿಸುವರು.
ವಿ.ವಿ.ಯ ಮಾನವಿಕ ಹಾಗೂ ಸಮಾಜ ವಿಜ್ಞಾನ ವಿಭಾಗದ ಡೀನ್ ಎ.ಟಿ.ಶಿವರಾಂ, ಪ್ರಾಂಶುಪಾಲ ಪ್ರೊ.ರೋಹಿತ್ ಎನ್.ಆರ್. ಉಪಸ್ಥಿತಿ ಇರಲಿದೆ.
ಕಥೆಗಾರರೂ ಆದ ಕುವೆಂಪು ಭಾಷಾ ಭಾರತಿ ಸದಸ್ಯ ಸಂಚಾಲಕ ಎಸ್. ಗಂಗಾಧರಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುವರು.
ಕಮ್ಮಟದಲ್ಲಿ ಕುವೆಂಪು ಅವರ ಕೆಲವು ಆಯ್ದ ಕವಿತೆ, ಕತೆಗಳು, ಕಾದಂಬರಿಗಳ ಓದು ಹಾಗೂ ಆ ಕುರಿತ ಚರ್ಚೆ, ಸಂವಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.