Saturday, May 9, 2026
Google search engine
Home Blog Page 201

ಕೊರಟಗೆರೆ: ಒಬ್ಬ ಸೋಂಕಿತಳಿಂದ 50 ಮಂದಿಗೆ ಕ್ವಾರಂಟೈನ್

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸೋಂಕು ಕಂಡು ಬಂದಿದೆ. ತಾಲ್ಲೂಕಿ ಕಸಬಾ ಹೋಬಳಿ ಕತ್ತಿನಾಗೇನಹಳ್ಳಿಯ 26 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟೀವ್ ಬಂದಿದೆ.

ತುಮಕೂರು ತಾಲ್ಲೂಕಿನ ಜಕ್ಕೇನಹಳ್ಳಿ ವಾಸಿಯಾದ ಮಹಿಳೆಯನ್ನ ಕೊರಟಗೆರೆ ತಾಲ್ಲೂಕಿನ ಕತ್ತಿನಾಗೇನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು. ಮಹಿಳೆ, ಗಂಡ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ತಾಲ್ಲೂಕಿನ ಅಳಾಲಸಂದ್ರದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಂದಿಗೆ ಮಹಿಳೆಯ ತಂದೆ, ಅಣ್ಣ ಕೂಡ ಇದ್ದರು.

ಅನಾರೋಗ್ಯ ಕಾರಣದಿಂದ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾಗ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದ ವೇಳೆ ಮಹಿಳೆಗೆ ಕೊರೊನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ.

ತವರು ಮನೆ ಜಕ್ಕೇನಹಳ್ಳಿಯಲ್ಲಿದ್ದ ಮಹಿಳೆಯನ್ನು ತುಮಕೂರು ಕೊವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದರೊಂದಿಗೆ ಮಹಿಳೆಯ ಮಕ್ಕಳು, ಗಂಡ, ತಂದೆ ಹಾಗೂ ಅಣ್ಣನನ್ನು ತುಮಕೂರು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಮಹಿಳೆ 50 ಜನ ಪ್ರಥಮ ಹಂತದ ಸಂಪರ್ಕ ಹಾಗೂ 70 ಜನ ದ್ವಿತೀಯ ಹಂತದ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಪ್ರಥಮ ಸಂಪರ್ಕದಲ್ಲಿದ್ದವರನ್ನು ಕೊರಟಗೆರೆ ತಾಲ್ಲೂಕಿನ ರೆಡ್ಡಿಕಟ್ಟೆಬಾರೆ ಮುರಾರ್ಜಿ ವಸತಿಶಾಲೆ ಹಾಗೂ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಹಂತದ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಮಹಿಳೆ ಕೆಲಸ ಮಾಡುತ್ತಿದ್ದ ತೋಟದ ಮಾಲೀಕ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಗಿಂದ್ಹಾಗೆ ತೋಟಕ್ಕೆ ಬಂದು ಹೋಗುತ್ತಿದ್ದರಿಂದ ಮಹಿಳೆಗೆ ಸೋಂಕು ತಗಲಿರಬಹುದೆಂದು ಶಂಕಿಸಲಾಗಿದೆ.

ಸೋಂಕಿತ ಮಹಿಳೆ ಕತ್ತಿನಾಗೇನಹಳ್ಳಿಯ ಮಹಿಳಾ ಸಂಘದ ಹಣ ಕಟ್ಟಲು ಬಂದಿದ್ದ ವೇಳೆ ಸಂಘದ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕೊರಟಗೆರೆಗೂ ಬಂತು ಕೊರೊನಾ ಸೋಂಕು

ತುಮಕೂರು:

ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕೊರಟಗೆರೆ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸೋಂಕು ಕಂಡು ಬಂದಿದೆ. ತಾಲ್ಲೂಕಿ ಕಸಬಾ ಹೋಬಳಿ ಕತ್ತಿನಾಗೇನಹಳ್ಳಿಯ 26 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟೀವ್ ಬಂದಿದೆ.

ತುಮಕೂರು ತಾಲ್ಲೂಕಿನ ಜಕ್ಕೇನಹಳ್ಳಿ ವಾಸಿಯಾದ ಮಹಿಳೆಯನ್ನ ಕೊರಟಗೆರೆ ತಾಲ್ಲೂಕಿನ ಕತ್ತಿನಾಗೇನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು. ಮಹಿಳೆ, ಗಂಡ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ತಾಲ್ಲೂಕಿನ ಅಳಾಲಸಂದ್ರದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಂದಿಗೆ ಮಹಿಳೆಯ ತಂದೆ, ಅಣ್ಣ ಕೂಡ ಇದ್ದರು.

ಅನಾರೋಗ್ಯ ಕಾರಣದಿಂದ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾಗ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದ ವೇಳೆ ಮಹಿಳೆಗೆ ಕೊರೊನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ.

ತವರು ಮನೆ ಜಕ್ಕೇನಹಳ್ಳಿಯಲ್ಲಿದ್ದ ಮಹಿಳೆಯನ್ನು ತುಮಕೂರು ಕೊವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದರೊಂದಿಗೆ ಮಹಿಳೆಯ ಮಕ್ಕಳು, ಗಂಡ, ತಂದೆ ಹಾಗೂ ಅಣ್ಣನನ್ನು ತುಮಕೂರು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಮಹಿಳೆ 50 ಜನ ಪ್ರಥಮ ಹಂತದ ಸಂಪರ್ಕ ಹಾಗೂ 70 ಜನ ದ್ವಿತೀಯ ಹಂತದ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಪ್ರಥಮ ಸಂಪರ್ಕದಲ್ಲಿದ್ದವರನ್ನು ಕೊರಟಗೆರೆ ತಾಲ್ಲೂಕಿನ ರೆಡ್ಡಿಕಟ್ಟೆಬಾರೆ ಮುರಾರ್ಜಿ ವಸತಿಶಾಲೆ ಹಾಗೂ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಹಂತದ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಮಹಿಳೆ ಕೆಲಸ ಮಾಡುತ್ತಿದ್ದ ತೋಟದ ಮಾಲೀಕ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಗಿಂದ್ಹಾಗೆ ತೋಟಕ್ಕೆ ಬಂದು ಹೋಗುತ್ತಿದ್ದರಿಂದ ಮಹಿಳೆಗೆ ಸೋಂಕು ತಗಲಿರಬಹುದೆಂದು ಶಂಕಿಸಲಾಗಿದೆ.

ಸೋಂಕಿತ ಮಹಿಳೆ ಕತ್ತಿನಾಗೇನಹಳ್ಳಿಯ ಮಹಿಳಾ ಸಂಘದ ಹಣ ಕಟ್ಟಲು ಬಂದಿದ್ದ ವೇಳೆ ಸಂಘದ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಶಾಸಕರ ಹಿಂಬಾಲಕರ ದುಂಡಾವರ್ತನೆ: ಜೆಡಿಎಸ್ ಪ್ರತಿಭಟನೆ

ತುರುವೇಕೆರೆ: ಬಿಜೆಪಿ ಶಾಸಕರ ಹಿಂಬಾಲಕರ ದುಂಡಾವರ್ತನೆ ತಾಲ್ಲೂಕಿನಲ್ಲಿ ಮಿತಿಮೀರಿದ್ದು ಶಾಸಕರ ಕುಮ್ಮಕ್ಕಿನಿಂದ ಜೆಡಿಎಸ್‍ ಕಾರ್ಯಕರ್ತರ ಮೇಲೆ ನಿರಂತ ಹಲ್ಲೆ ನಡೆಯುತ್ತಿದೆಂದು ಆರೋಪಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ಜೆಡಿಎಸ್‍ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಶಾಸಕರೊಂದಿಗೆ ಸೇರಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸುತ್ತಾ ಶಾಸಕರ ಹಿಂಬಾಲಕರ ಗುಂಡಾ ವರ್ತನೆಗೆ ಧಿಕ್ಕಾರ ಕೂಗಿ, ಹಲ್ಲೆ ನಡೆಸಿದ ಆರೋಪಿಯನ್ನು ಬಂದಿಸುವಂತೆ ಘೋಷಣೆ ಕೂಗುತ್ತಾ ಠಾಣೆಯ ಎದುರು ಜಮಾಯಿಸಿದರು.ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಮುನಿಯೂರಿನಲ್ಲಿ ವಸಂತಕುಮಾರ್ ಮೇಲೆ ಬಿಜೆಪಿ ಕಾರ್ಯಕರ್ತ ಪುನೀತ್ ಜಮೀನು ವಿಚಾರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರೂ ಆರೋಪಿಯನ್ನು ಇದುವರೆಗೂ ಬಂಧಿಸದಿರುವುದು ಪೊಲೀಸರ ಅದಕ್ಷತೆಯನ್ನು ತೋರಿಸುತ್ತದೆ. ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಶಾಸಕರ ದುರಾಡಳಿತದ ಎಲ್ಲೆ ಮೀರಿದೆ ಎಂದು ಕಿಡಿಕಾರಿದರು.ಬಡವರಿಗೆ ರೈತರಿಗೆ ರಕ್ಷಣೆಯಿಲ್ಲದಂತಾಗಿದೆ. ಬಿಜೆಪಿ ಕಾರ್ಯಕರ್ತರು ಮಾಡುವ ಎಲ್ಲ ದೌರ್ಜನ್ಯಗಳಿಗೆ ಶಾಸಕರು ಬೆನ್ನೆಲುಬಾಗಿ ನಿಂತಿರುವುದು ದುರದೃಷ್ಟಕರ. ಕೂಡಲೇ ಆರೋಪಿಯನ್ನು ಬಂದಿಸುವಂತೆ ಆಗ್ರಹಿಸಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೊಳಾಲಗಂಗಾಧರ್ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುವ ಅಹಿತಕರ ಘಟನೆಗೆ ಶಾಸಕ ಮಸಾಲಜರಾಂರ ದೊಂಬರಾಟದ ರಾಜಕಾರಣ ಎಂದು ಆರೋಪಿಸಿ, ತಾಲ್ಲೂಕಿನ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂದು ದೂರಿದರು.ಪ್ರತಿಭಟನೆಯಲ್ಲಿ ಜೆಡಿಎಸ್‍ ಮುಖಂಡರುಗಳು, ಕಾರ್ಯಕರ್ತರು ಮತ್ತು ಮುನಿಯೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ತುಮಕೂರು: ಒಂದೇ ದಿನ ಮೂರು ಹಳ್ಳಿಗಳಿಗೆ ಕಾಲಿಟ್ಟಿತು ಕೊರೊನಾ- ಮಧುಗಿರಿ ಪಟ್ಟಣಕ್ಕೂ ಇಣುಕಿತು

Publicstory.in


ತುಮಕೂರು: ಜಿಲ್ಲೆಯ ಹಳ್ಳಿಗಳ ಕಡೆ ಕೊರೊನಾ ತನ್ನ ಕಬಂಧಬಾಹು ಚಾಚ ತೊಡಗಿದೆ.

ಜಿಲ್ಲೆಯಲ್ಲಿ ಒಂದೇ ದಿನ ಮೂರು ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಭಯಭೀತರಾಗಿದ್ದಾರೆ.

ಈ ಹಳ್ಳಿಯ ಜನರಿಗೆ ಹೇಗೆ ಬಂತು ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ಟ್ರಾವಲ್ ಇಸ್ಟರಿ ಸಹ ನೀಡಿಲ್ಲ.

ಮೊದಲ ಪ್ರಕರಣದಲ್ಲಿ ಮಧುಗಿರಿಯ ಅಚ್ಚೇನಹಳ್ಳಿಯ 29 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.

ಕೊರಟಗೆರೆ ತಾಲ್ಲೂಕಿನ ಡಿ.ನಾಗೇನಹಳ್ಳಿಯ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯ ಒಬ್ಬರಿಗೆ ಸೋಂಕು ತಗುಲಿದೆ.

ಮಧುಗಿರಿ ಪಟ್ಟಣದ ಎಲ್ ಐಸಿ ಕಚೇರಿ ಹಿಂಭಾಗದ ನಿವಾಸಿಯೊಬ್ಬರಿಗೆ ಸೋಂಕು ತಗುಲಿದೆ.

ಸೋಂಕಿತರನ್ನು ತುಮಕೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

250 ಕೋಟಿ ವರ್ಷಗಳ ಹಿಂದೆ ಸಮುದ್ರವಾಗಿದ್ದ ಚಿಕ್ಕನಾಯಕನಹಳ್ಳಿ

ಮಹೇಂದ್ರ ಕೃಷ್ಣಮೂರ್ತಿ


ಹೌದೇ ಎಂದು ಹುಬ್ಬೇರಿಸಬೇಡಿ! ನಿಜವೇ ಎಂದು ಕೇಳಬೇಡಿ. ನೀರಿಗಾಗಿ ಹಾತೊರೆಯುತ್ತಿರುವ ಈ ಬೆಟ್ಟಗುಡ್ಡಗಳ ನಾಡು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬಹಳ, ಬಹಳ ವರ್ಷಗಳ ಹಿಂದೆ ಒಂದು ಸಮುದ್ರವಾಗಿತ್ತು.

ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ವರದಿ ಮುಂದಿಟ್ಟುಕೊಂಡು ಲೇಖಕ, ಈಗ ಡಿಡಿಪಿಐ ಆಗಿರುವ ಎಚ್.ಕೆ.ನರಸಿಂಹಮೂರ್ತಿ ವಾದಕ್ಕೆ ನಿಂತರು.

ಚಿತ್ರಗಳು: ಅನಿಲ್ ಕುಮಾರ್ ಎಂ.ಆರ್.

ತೆಂಗು, ಕಂಬಳಿ, ಕೋಮುಸಾಮರಸ್ಯಕ್ಕಷ್ಟೇ ಚಿಕ್ಕನಾಯಕನಹಳ್ಳಿಯ ಅಸ್ಮಿತೆ ಅಡಗಿಲ್ಲ. 250 ಕೋಟಿ ವರ್ಷಗಳ ಹಿಂದೆ ಇದೊಂದು ಪಾತಾಳ ಲೋಕ; ಅರ್ಥಾಥ್ ಸಮುದ್ರದ ತಳವಾಗಿತ್ತು. ನೋಡಿ ಇಲ್ಲಿದೆ ವಿಜ್ಜಾನಿಗಳ ವರದಿ ಎಂದರು.

ಅವರ ಮಾತುಗಳ ದಿಕ್ಕು ಹಿಡಿದು ಚಿಕ್ಕನಾಯಕನಹಳ್ಳಿಗೆ ಕಾಲಿಟ್ಟಾಗ ಸಮುದ್ರದ ತಳದಲ್ಲೇ ಕಾಲಿಟ್ಟ ಭಾವಕ್ಕೆ ಒಳಗಾದೆ. 234 ಗ್ರಾಮಗಳ ತನ್ನ ವ್ಯಾಪ್ತಿಯೊಳಗೆ ಅಡಗಿಸಿಕೊಂಡ ಚಿಕ್ಕನಾಯಕನಹಳ್ಳಿ ಈಗ ಸಮುದ್ರ ಮಟ್ಟಕ್ಕಿಂತ ಬರೋಬರಿ 2569 ಅಡಿ ಎತ್ತರದಲ್ಲಿದೆ.

ಅರೆರೆ ಇದೇನಿದು ಎಲ್ಲಿಯ ಸಮುದ್ರ, ಇದೆಲ್ಲಿಯ ಎತ್ತರ. ಇದೇ ಪ್ರಕೃತಿಯ ಕೌತುಕ.

ಹಿಂದೊಮ್ಮೆ ಸಮುದ್ರದ ತಳ; ಈಗ ಸಮುದ್ರ ಮಟ್ಟಕ್ಕೂ ಎರಡೂವರೆ ಸಾವಿರಕ್ಕೂ ಅಧಿಕ ಎತ್ತರದಲ್ಲಿ ನಿಂತಿದೆ.

ಇದಕ್ಕೆಲ್ಲ ಚಂಡಮಾರುತ, ಭೂಕಂಪ, ಜ್ವಾಲಾಮುಖಿ ಸ್ಫೋಟ ಕಾರಣ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. 250 ಕೋಟಿ ವರ್ಷಗಳ ಹಿಂದೆ ಘಟಿಸಿದ್ದ ಈ ಪ್ರಾಕೃತಿಕ ಮಹಾ ಘನಸ್ಪೋಟ ಒಂದು ಸಮುದ್ರವನ್ನು ಚಿಕ್ಕನಾಯಕನಹಳ್ಳಿ ಆಗಿದೆ. ಇದರೊಳಗೆ ಅದಿರು ಮಾತ್ರವಲ್ಲ ಕೆಣಕಿದರೆ ಚಿನ್ನದ ನಿಕ್ಷೇಪವೂ ಸಿಗಬಹುದು.

ಪ್ರಕೃತಿಯ ವಿಸ್ಮಯ ಅದೇನೆ ಇರಲಿ, ಒಂದು ನದಿಯನ್ನೂ ಕಾಣದ ಕಲ್ಪತರು ಜಿಲ್ಲೆಯ ಈ ಊರು ಹಿಂದೊಮ್ಮೆ ಸಮುದ್ರದವಾಗಿತ್ತು ಎಂಬುದೇ ಒಂದು ಥ್ರಿಲ್ ನೀಡುವ ವಿಷಯ.

ಚಿಕ್ಕನಾಯಕಹಳ್ಳಿ ಎಂದರೆ ಅನೇಕ ಸಾಹಸಗಾಥೆಗಳ ಊರಾಗಿದೆ. ಹಾಗಲವಾಡಿ ನಾಯಕರ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣವನ್ನು ಎರಡನೇ ಪಾಳೇಗಾರ ಸಾಲಿನಾಯಕ (1554-1580) ವಿಜಯದ ನೆನಪಿಗೆ ಕಾರಣನಾದ ಸಹೋದರ ಚಿಕ್ಕನಾಯಕನ ಹೆಸರಿನಲ್ಲಿ ಕಟ್ಟಿದನು. ಇದು ರಾಜನ ಹೆಸರಿನ ಊರು.

ತನ್ನ ಸಹೋದರನ ಶೌರ್ಯ, ಸಾಹಸವನ್ನು ಜನ ಕೊಂಡಾಡಲಿ ಎಂಬ ಕಾರಣಕ್ಕಾಗಿ ಈ ಪಟ್ಟಣ ಕಟ್ಟಿದ ಎಂದು ಇತಿಹಾಸದಲ್ಲಿ ಹೇಳಲಾಗಿದೆ.

20ನೇ ಶತಮಾನದ ಪವಾಡಪುರುಷರೆಂದೇ ಪ್ರಸಿದ್ಧಿ ಪಡೆದಿದ್ದ ಕಂದಿಕೆರೆ ಶಾಂತವೀರಸ್ವಾಮಿ ಅವರ ವೈಭವ ಇತಿಹಾಸದಲ್ಲಿ ಅಡಗಿದೆ.

ಕಂದಿಕೆರೆ ಸ್ವಾಮೀಜಿಗಳನ್ನು ನೋಡಲು ಉತ್ತರ ಕರ್ನಾಟಕದಿಂದ ಜನಜಾತ್ರೆಯೇ ಇಲ್ಲಿಗೆ ಬರುತ್ತಿತ್ತು. ಸೂಫಿ ಪಂಥದ ಮಹಾನ್ ಸಂತ ತಾತಯ್ಯ ಇಲ್ಲೇ ಬಾಳಿ ಬದುಕಿದರು.

ತಾತಯ್ಯನ ಗೋರಿ ಪಟ್ಟಣದಲ್ಲಿದೆ. ಇಲ್ಲಿಯ ಉರುಸ್‌ನ ನೇತೃತ್ವ ಇಂದಿಗೂ ಹಿಂದೂಗಳೇ ವಹಿಸಿಕೊಳ್ಳುತ್ತಾರೆ.

ತಾತಯ್ಯನ ಪವಾಡ ಚಿಕ್ಕನಾಯಕನಹಳ್ಳಿಗಷ್ಟೇ ಸೀಮಿತವಾಗಿಲ್ಲ. ಇಡೀ ಜಿಲ್ಲೆಗೆ ಪಸಹರಿಸಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಈಗಲೂ ತಾತಯ್ಯನಿಗೆ ಹರಕೆ ಹೊತ್ತುಕೊಳ್ಳುವ ಪರಿಪಾಠವಿದೆ. ಹಿಂದೂ-ಮುಸ್ಲಿಂ ಕೋಮುಸಾಮರಸ್ಯ ಪ್ರಸಿದ್ಧ ಸ್ಥಳಗಳಲ್ಲಿ ಇದೂ ಒಂದಾಗಿದೆ.

ಕಂಬಳಿ ನೇಯುವ ಮೂಲಕವೇ ಪ್ರಸಿದ್ಧಿಪಡಿರುವ ಈ ಪಟ್ಟಣ ಸ್ವಾತಂತ್ರ್ಯ ಚಳವಳಿಯ ಚರಿತ್ರೆಯಲ್ಲಿ ಅತಿ ದೊಡ್ಡ ಹೆಸರನ್ನು ದಾಖಲಿಸಿರುವುದು ಬಹುತೇಕರಿಗೆ ಗೊತ್ತಿಲ್ಲ. 1942ರಲ್ಲಿ ನಡೆದ ಎರಡನೇ ಮಹಾಯುದ್ಧದ ವೇಳೆ ಇಲ್ಲಿನ ಉಣ್ಣೇ ನೇಕಾರರ ಸಂಘ ಸದಸ್ಯರು ಭಾರತದ ಮಿತ್ರರಾಷ್ಟ್ರದ ಸೈನಿಕರಿಗೆ 50 ಸಾವಿರ ಕಂಬಳಿ ನೇಯ್ದು ಕಳುಹಿಸಿದ ಕೀರ್ತಿ ಇದೆ.

ಆ ಕಾಲಘಟ್ಟದಲ್ಲಿ ಸೈನಿಕರಿಗೆ ಇಷ್ಟೊಂದು ಭಾರಿ ಕಂಬಳಿ ಕಳುಹಿಸಿದ್ದ ಭಾರತದ ಏಕೈಕ ಊರು ಚಿ.ನಾ.ಹಳ್ಳಿ. ದೇಸಿ ಚಳವಳಿಯ ಕಾಲಘಟ್ಟದಲ್ಲೇ ಇಲ್ಲಿ ದೇಸಿ ವಿದ್ಯಾಪೀಠ ಆರಂಭವಾಗಿದ್ದು ಈಗ ಇತಿಹಾಸ.

ಚಿಕ್ಕನಾಯಕನಹಳ್ಳಿಯಲ್ಲಿ ಚಿನ್ನದ ನಿಕ್ಷೇಪಗಳಿವೆ. ಹೊನ್ನೇಬಾಗಿ, ಬೆಳ್ಳಾರದ ಗುಡ್ಡಗಳಲ್ಲಿ ಚಿನ್ನದ ನಿಕ್ಷೇಪ ಅಡಗಿದೆ. ಆದರೆ ಚಿನ್ನ ಹೊರತೆಗೆಯಲು ವೆಚ್ಚ ದುಬಾರಿಯಾಗಲಿದೆ ಎಂಬ ಕಾರಣಕ್ಕಾಗಿ ಚಿನ್ನದಗಣಿ ಇಲ್ಲಿ ಆರಂಭವಾಗಿಲ್ಲ.

ಇಲ್ಲಿ ಸಿಗುವ ಮ್ಯಾಂಗನೀಸ್ ಅದಿರು ದೇಶದ ಉತ್ಕೃಷ್ಟ ಮ್ಯಾಂಗನೀಸ್ ಅದಿರು ಎನಿಸಿದೆ. ಮ್ಯಾಂಗನೀಸ್ ಅದಿರು ಗಣಿಗಾರಿಕೆ ತಲತಲಾಂತರದಿಂದಲೂ ನಡೆದುಕೊಂಡು ಬರುತ್ತಿದೆ.

ಕುಪ್ಪೂರು ತಮ್ಮಡಿಹಳ್ಳಿಮಠ, ಶೆಟ್ಟಿಕೆರೆಯ ಹೊಯ್ಸಳಶೈಲಿಯ ಯೋಗಮಾಧವ ದೇವಾಲಯ, ಬೈಗುಳವೇ ಪೂಜೆ ಮಾಡಿಕೊಂಡಿರುವ ಹೆಸರುಹಳ್ಳಿಯ ಲಕ್ಕವ್ವ, ಆಂಜನೇಯ, ತೀರ್ಥರಾಮೇಶ್ವರ ದೇವಸ್ಥಾನಗಳಿಗೆ ಇದು ಪ್ರಸಿದ್ಧಿ ಪಡೆದಿದೆ. ಶರಣ ಸಿದ್ಧರಾಮೇಶ್ವರರು ಈ ನಾಡಿನಲ್ಲಿ ಸಂಚರಿಸಿದ ಕೀರ್ತಿಯೂ ಇಲ್ಲಿದೆ.

ಮದಲಿಂಗನ ನೆನೆದು..


ಮದಲಿಂಗನೆಂಬ ಸಾಹಸಿಯ ಮೈ ನವಿರೇಳಿಸುತ್ತದೆ. ಜಾನಪದ ಕಥೆಯಾಗಿರುವ ಮದಲಿಂಗ ಕುರಿತು ಮೊಟ್ಟಮೊದಲಿಗೆ ಮಾಸ್ತಿ ಅಯ್ಯಂಗಾರ್ ಬಹರದಲ್ಲಿ ದಾಖಲಿಸಿದರು.

ಮದುವೆಯ ಬಳಿಕ ಹೆಂಡತಿ, ಅತ್ತೆ, ನಾದಿನಿ ಜಾಣೆಯೊಂದಿಗೆ ಚಿಕ್ಕನಾಯಕನಹಳ್ಳಿಗೆ ಬರುತ್ತಾನೆ. ಎತ್ತಿನಗಾಡಿಯ ಪ್ರಯಾಣದ ಹೊತ್ತು ಕಳೆಯಲು ನಾದಿನಿ ಜಾಣೆಯನ್ನು ರೇಗಿಸುತ್ತಿರುತ್ತಾನೆ. ಹರಟೆ, ರೇಗಾಟದ ನಡುವೆ ತಮಾಷೆಗಾಗಿ ಜಾಣೆಯನ್ನು ತನಗೆ ಕೊಟ್ಟ ಮದುವೆ ಮಾಡುವಂತೆ ಅತ್ತೆಗೆ ಕೇಳುತ್ತಾನೆ.

ಇದಕ್ಕೆ ನಕ್ಕ ಅತ್ತೆ ಇನ್ನಂಥ ಗಂಡಸಿಗೆ ಇಬ್ಬರು ಹೆಂಡರು ಬೇಕಾ ಎಂದು ಪ್ರಶ್ನೆ ಎಸೆಯುತ್ತಾಳೆ.
ಅತ್ತೆಯ ಮಾತಿನಿಂದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದ ಮದಲಿಂಗ ಚಿಕ್ಕನಾಯಕಹಳ್ಳಿ ಸಮೀಪದ ಬರುತ್ತಿದ್ದಾಗ ಸಿದ್ದ ಗುಡ್ಡವನ್ನು ನೋಡಿ ಈ ಗುಡ್ಡವನ್ನು ಹಿಮ್ಮುಖವಾಗಿ ಹತ್ತಿ, ಹಿಮ್ಮುಖವಾಗಿ ಇಳಿದರೆ ಜಾಣೆಯನ್ನು ಕೊಟ್ಟು ಮದುವೆ ಮಾಡಬೇಕು ಎಂದು ಸವಾಲು ಎಸೆಯುತ್ತಾನೆ. ಸವಾಲಿಗೆ ಅತ್ತೆ ಒಪ್ಪುತ್ತಾಳೆ.

ಬೆಟ್ಟ ಹತ್ತಿದ ಮದಲಿಂಗ ಹಿಮ್ಮುಖವಾಗಿ ಇಳಿಯುತ್ತಾನೆ. ಸುಸ್ತಾದ ಮದಲಿಂಗನಿಗೆ ನೀರು ಕುಡಿಸಲು ಜಾಣೆ ಮುಂದಾದಾಗ ನೀರು ಹಿಡಿದಿದ್ದ ಮಗೆ (ಮಣ್ಣಿನ ತಂಬಿಗೆ) ಬಿದ್ದು ಒಡೆದು ಹೋಗುತ್ತದೆ. ನೀರಿಲ್ಲದೇ ಗಂಟಲು ಒಣಗಿ ಮದಲಿಂಗ ಸಾಯುತ್ತಾನೆ. ಮದಲಿಂಗ ಇಹಲೋಕ ತೃಜಿಸಿದ ಕಣಿವೆ ಇಂದು ಮದಲಿಂಗನ ಕಣಿವೆಯಾಗಿದೆ.

ಮದಲಿಂಗನಿಗೆ ನೀರು ತರಲು ಹೋದ ಹೆಂಡತಿ ಮಡುವಿಗೆ ಬಿದ್ದು ಸಾಯುತ್ತಾಳೆ. ಇದು ಮದನಮಡು ಆಗಿದೆ. ಮದಲಿಂಗನಿಗೆ ತಮ್ಮ ಜೊಲ್ಲು ನೀಡಿ ಬದುಕಿಸುವ ಪ್ರಯತ್ನ ಮಾಡಿ ಸಾಧ್ಯವಾಗದೇ ಜಾಣೆ ಕೂಡ ಸಾಯುತ್ತಾಳೆ. ಜಾಣೆ ಸಾವಿಗೀಡಾದ ಸ್ಥಳ ಜಾಣೆಹಾರ್ ಆಗಿದೆ.

ಅಳಿಯ, ಇಬ್ಬರು ಹೆಣ್ಣು ಮಕ್ಕಳ ಸಾವಿನಿಂದ ಕಂಗಾಲಾಗಿ ಅಲ್ಲಿಂದ ಓಡುತ್ತಾ ಸ್ವಲ್ಪ ದೂರದಲ್ಲಿ ಅತ್ತೆಯೂ ಸಾಯುತ್ತಾಳೆ. ಅತ್ತೆ ಸತ್ತ ಜಾಗ ಈಗ ಹತ್ಯಾಳು ಆಗಿದೆ.

ಅತ್ತೆ ಸಮಾಧಿ ಮಾಡಿದ ಜಾಗ ಎನ್ನಲಾದ ಜಾಗವನ್ನು ಈಗಲೂ ಅಜ್ಜಿಗುಡ್ಡೆ ಎಂದು ಕರೆಯಲಾಗುತ್ತದೆ.

ಇಲ್ಲಿನ ಸಾಸಲುಗೆ ಹೊಯ್ಸಳದ ಪಟ್ಟದರಾಣಿ ಶಾಂತಲೆ ಬಂದಿದ್ದಳು ಎಂಬದಕ್ಕೆ ಇಲ್ಲಿ ಶಾಸನ ದೊರೆತಿದೆ. ಈ ಗ್ರಾಮದಲ್ಲಿ ನ್ಯಾಯ ಮಾಡಲು ಶಾಂತಲೆ ಬಂದಿದ್ದಳು, ನ್ಯಾಯ ಬಗೆಹರಿಸಿದ್ದಳು ಎಂದೂ ಹೇಳಲಾಗುತ್ತದೆ.

ಪಟ್ಟಾಧಿಕಾರದ ನೆನಪಿಗೆ ದೇವಸ್ಥಾನ
ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ಅವರಿಗೆ ಪಟ್ಟಾಧಿಕಾರ ಮಾಡುವ ದಿನವೇ ಚಿಕ್ಕನಾಯಕನಹಳ್ಳಿಯಲ್ಲಿನ ಕೇಶವ ದೇವಾಲಯವನ್ನು ನಿರ್ಮಿಸಿಲಾಯಿತು.

ಧರ್ಮಪ್ರಭು ಮುದಿಯಪ್ಪ ನಾಯಕ ತನ್ನ ಕೃತಿಯೊಂದರಲ್ಲಿ ಬರಹ ಕಲಿಸಿದವರ ಪಾದಕ್ಕೆ ಭಕ್ತಿಯಿಂದ ಕೃತಜ್ಞತೆಯಿಂದ ಶರಣು, ಶರಣು ಎಂದು ಹೇಳಿರುವುದು ಹಾಗಲವಾಡಿ ನಾಯಕರು ಗುರು ಪರಂಪರೆಗೆ ನೀಡುತ್ತಿದ್ದ ಗೌರವಕ್ಕೆ ಸಾಕ್ಷಿಯಾಗಿದೆ.

ಅಬ್ಬಬ್ಬಾ ಏನ್ನೆಲ್ಲ ಅಡಗಿಸಿಟ್ಟುಕೊಂಡಿದೆ ನಮ್ಮ ಚಿಕ್ಕನಾಯಕನಹಳ್ಳಿ ಅಲ್ಲವೇ?


ಈ ಲೇಖ‌ನ ಪ್ರಜಾವಾಣಿಯ ನಮ್ಮೂರು, ನಮ್ಮ ಜಿಲ್ಲೆ ಅಂಕಣಕ್ಕೆ ಬರೆದಿದ್ದೆ. ಸಣ್ಣ ಬದಲಾವಣೆಯೊಂದಿಗೆ ಮತ್ತೊಮ್ಮೆ ಇಲ್ಲಿ ಪ್ರಕಟವಾಗುತ್ತಿದೆ.

ಪೂರಕ ಮಾಹಿತಿ: ಭರತ್ ಎಂ.ಎನ್. ಪತ್ರಕರ್ತರು,‌ ಚಿ.ನಾ.ಹಳ್ಳಿ

Sslc ಪರೀಕ್ಷೆ: ದಾನಿಗಳು ಮಕ್ಕಳಿಗೆ ಊಟ, ತಿಂಡಿ ನೀಡುವಂತಿಲ್ಲ

ತುರುವೇಕೆರೆ: ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗು ದಾನಿಗಳಿಂದ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಊಟ, ತಿಂಡಿ ಕೊಡಿಸಬಾರದು ಎಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ಮುಖ್ಯ ಶಿಕ್ಷಕರುಗಳಿಗೆ ಸೂಚಿಸಿದರು.

ಪಟ್ಟಣದ ಜೆಪಿ ಆಂಗ್ಲಪ್ರೌಢ ಶಾಲಾ ಆವರಣದಲ್ಲಿ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅಧ್ಯಕ್ಷತೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಕೋವಿಡ್-19ರ ಹಿನ್ನಲೆಯಲ್ಲಿ ಮಕ್ಕಳು ಮತ್ತು ಪೋಷಕರುಗಳಲ್ಲಿನ ಭಯವನ್ನು ದೂರು ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ. ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಕಾಪಾಡಲು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಹಾಗು ಪಟ್ಟಣ ಪಂಚಾಯಿತಿಗಳ ನೆರವನ್ನು ಪಡೆಯಿರಿ ಎಂದರು.

ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನೋಡಿಕೊಳ್ಳಲು ಒಂದೇ ಕಡೆ ಹಾಕಬೇಡಿ. ಆರೋಗ್ಯ ವ್ಯತ್ಯಸಾವಿರುವ ಮಕ್ಕಳಿಗೆ ಧೈರ್ಯ ತುಂಬಿ ಎಂದರು.

ಎಲ್ಲ ಕೇಂದ್ರಗಳಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ತುರ್ತು ಚಿಕಿತ್ಸಾ ಕಿಟ್ ವ್ಯವಸ್ಥೆ ಮಾಡಲಾಗುವುದು. ಮಾಸ್ಕ್ ಧರಿಸುವುದು ಖಡ್ಡಾಯ. ಮುಖ್ಯವಾಗಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ ಒಟ್ಟಾರೆಯಾಗಿ ಯಾವ ಮಕ್ಕಳೂ ಸಹ ಸೌಕರ್ಯಗಳ ಸಮಸ್ಯೆಯಿಂದ ಪರೀಕ್ಷೆಯಿಂದ ವಂಚಿತರಾಗಬಾರದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಜಯರಾಮ್ ಮಾತನಾಡಿ, ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ 25 ಸಾವಿರ ಮಾಸ್ಕ್ ಗಳನ್ನು ರೋಟರಿ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ಬಿಇಒ ಸಿ.ರಂಗಧಾಮಯ್ಯ ಮಾತನಾಡಿ, ತಾಲ್ಲೂಕಿನ ಎಲ್ಲ ಕೇಂದ್ರಗಳಲ್ಲಿ 2016 ಮಕ್ಕಳು ಪರೀಕ್ಷೆ ಬರೆಯಲಿದ್ದು ಹೊರ ತಾಲ್ಲೂಕುಗಳಿಂದ ಇಲ್ಲಿಗೆ 46 ಮಕ್ಕಳು ಪರೀಕ್ಷೆ ಬರೆಯಲು ಬಂದಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಆರೋಗ್ಯ, ಬಸ್ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸಲಾಗಿದೆ ಎಂದರು.

ಈ ವೇಳೆ ಎಲ್ಲ ಪರೀಕ್ಷಾ ಕೇಂದ್ರದ ಮುಖ್ಯಾಧಿಕಾರಿಗಳಿಗೆ ಶಾಸಕ ಮಸಾಲಜಯರಾಂ ನೀಡಿದ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಯಿತು.

ಟಿಎಚ್.ಒ ಡಾ.ಸುಪ್ರಿಯಾ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್, ಬಿಆರ್ಸಿ ವಸಂತ್ ಕುಮಾರ್, ರೋಟರಿ ಅಧ್ಯಕ್ಷ ಗುಪ್ತಾ ಇದ್ದರು.

ಗಾಯತ್ರಿ ನನ್ನೊಳಗಿನ ಸಾಕ್ಷಿಪ್ರಜ್ಞೆ..

ಜಿ ಎನ್ ಮೋಹನ್


ಸರಿಯಾಗಿ ನೆನಪಿದೆ.

ಅದು ೧೯೮೧

ಇಡೀ ಭಾರತ ತುರ್ತು ಪರಿಸ್ಥಿತಿಯಿಂದ ಬಳಲಿ ಆಗ ತಾನೇ ಮಗ್ಗುಲು ಬದಲಿಸಿಕೊಂಡಿತ್ತು

ಒಂದು ಪ್ರಜಾಪ್ರಭುತ್ವ ಹೇಗೆ ಸರ್ವಾಧಿಕಾರಿಯಾಗಿಬಿಡಬಹುದು ಎಂಬ ನೋಟ ಪ್ರತಿಯೊಬ್ಬರಿಗೂ ಧಕ್ಕಿ ಹೋಗಿತ್ತು

ಮುಖದ ಮೇಲೆ ಸಿಟ್ಟು, ಕಣ್ಣುಗಳಲ್ಲಿ ಕೆಂಡ ಇನ್ನೂ ಆರಿರಲಿಲ್ಲ

‘ಸಮುದಾಯ’ ತಂಡ ಸಾಂಸ್ಕೃತಿಕ ಜಾಥಾ ರೂಪಿಸಿ ಜನರನ್ನು ಪ್ರಶ್ನೆ ಮಾಡಲು ಪ್ರೇರೇಪಿಸುತ್ತಿತ್ತು

ಅದಕ್ಕೆ ಸಿಕ್ಕ ಜನ ಬೆಂಬಲ, ಜನರಲ್ಲಿ ಇದ್ದ ಪ್ರಶ್ನೆಯ ಹಸಿವು, ಜಗ್ಗಿ ಉತ್ತರ ಪಡೆಯಬೇಕೆಂಬ ನಿಲುವು.. ಇವು ಮತ್ತೆ ‘ಸಮುದಾಯ’ ತನ್ನ ಎರಡನೆಯ ಜಾಥಾಗೆ ಸಜ್ಜಾಗಲು ಹುಮ್ಮಸ್ಸು ನೀಡಿತ್ತು

೪೬, ಅಂಗಡಿ ಬೀದಿ, ನರಸಿಂಹರಾಜ ಕಾಲೋನಿ ಇಂತಹ ಉರಿವ ಕಣ್ಣುಗಳವರಿಂದ ತುಂಬಿ ಹೋಗಿತ್ತು

ಆಗ ಅಲ್ಲಿಗೆ ಕಾಲಿಟ್ಟವರು ಸದಾ ನಗುವನ್ನೇ ಮುಖಕ್ಕೆ ಹರಡಿಕೊಂಡಿದ್ದ ಎನ್ ಗಾಯತ್ರಿ

ಆಗ ಪ್ರಸನ್ನ ಶುಭಾಶಯ ಪತ್ರಗಳ ಲೋಕಕ್ಕೆ ಒಂದಿಷ್ಟು ಹೊಸ ಗಾಳಿ ಹಾಯುವಂತೆ ಮಾಡಿದ್ದರು. ಕೈಯಾರೆ ಮಾಡಿದ ಶುಭಾಶಯ ಪತ್ರಗಳನ್ನು ಬೀದಿ ಬೀದಿಯಲ್ಲಿ ಮಾರಿ ಜಾಥಾಗೆ ಹಣ ಸಂಗ್ರಹಿಸುತ್ತಿದ್ದೆವು

ಅಂತಹದೇ ಕೆಲಸದಲ್ಲಿದ್ದಾಗ ಬಂದದ್ದು ಗಾಯತ್ರಿ

ಕಬ್ಬಿಣದ ಅಂಗಡಿಯಲ್ಲಿ ಜೇನ್ನೊಣಕ್ಕೆ ಹೇಗೆ ಏನೂ ಕೆಲಸವಿಲ್ಲವೋ ಹಾಗೆ ಕೆಂಡದ ಮನೆಯಲ್ಲಿ ಮುಗುಳ್ನಗೆಗೇನು ಕೆಲಸ ?

ಹಾಗಾಗಿ ನಾನು ಪಕ್ಕದವರಲ್ಲಿ ಕೇಳಿಯೇ ಬಿಟ್ಟೆ ‘ಯಾರಿವರು?’ ಅಂತ
ಎನ್ ಗಾಯತ್ರಿ ಎಂದರು

ನಾನು ನನಗೇ ಗೊತ್ತಿಲ್ಲದಂತೆ ಎದ್ದು ನಿಂತುಬಿಟ್ಟಿದ್ದೆ
ಏಕೆಂದರೆ ಅವರು ಕೇವಲ ಎನ್ ಗಾಯತ್ರಿ ಆಗಿರಲಿಲ್ಲ
ಅವರು ಮಹಿಳಾ ಹೋರಾಟಕ್ಕೆ ಮಾತು ಕೊಟ್ಟ ಎನ್ ಗಾಯತ್ರಿ ಆಗಿದ್ದರು

ಎನ್ ಗಾಯತ್ರಿ ‘ದುಡಿಯುವ ಮಹಿಳೆಯರ ಸಮನ್ವಯ ಸಮಿತಿ’ಯ ಮೂಲಕ ಒಂದು ದೊಡ್ಡ ಹೋರಾಟಕ್ಕೆ ಕೀಲೆಣ್ಣೆಯಾಗಿದ್ದರು.

‘ಕೋಟಿ ಕೋಟಿ ಬಾಧೆಗಳಲ್ಲಿ, ಲಕ್ಷಾಂತರ ನೋವುಗಳಲ್ಲಿ, ಹುಟ್ಟಿ ಬೆಳೆದ ತಂಗಿಯರಿಗೆ’ ದನಿ ಇದೆ ಎನ್ನುವುದನ್ನು ಅರಿವು ಮಾಡಿಕೊಡಲು ಆರಂಭಿಸಿದ್ದರು

ಆನಂತರ ನಾನು ಅವರನ್ನು ಪದೇ ಪದೇ ನೋಡಿದೆ

ನರಗುಂದ ಹೋರಾಟ, ಕಾರ್ಮಿಕ ಸಂಘಟನೆಗಳ ಚಳವಳಿ, ಕುದುರಿಮೋತಿ ಬೆತ್ತಲೆ ಪ್ರಕರಣ ಹೀಗೆ..

‘ಎನ್’ ಅಂದರೆ ನಗುಮುಖದ ಎಂದು ಅಂದುಕೊಂಡಿದ್ದ ನಾನು ಅವರು ವೇದಿಕೆ ಹತ್ತಿ ಮಾತನಾಡುವಾಗ, ಅನೇಕ ಸಭೆಗಳಲ್ಲಿ ತಮ್ಮ ನೋಟ ಮಂಡಿಸುವಾಗ ಆ ನಗುವಿನ ಗಾಯತ್ರಿಯೊಳಗಿದ್ದ ಹೋರಾಟಗಾರಳ ಕಿಚ್ಚನ್ನು ಕಂಡೆ.

ಆ ನಂತರ ನನ್ನ ಅವರ ನಡುವಿನ ಪರಿಚಯಕ್ಕೆ ದಶಕಗಳ ಇತಿಹಾಸವಿದೆ
ಜಗಳಕ್ಕೆ ಕಾಲು ಕೆರೆಯುವ ನಾನು, ನಗುವಿನಲ್ಲೇ ಮರು ಹೊಡೆತ ನೀಡುವ ಅವರೂ..

ಗಾಯತ್ರಿ ಹಾಗೂ ಅವರ ಬಳಗ ‘ಅಚಲ’ ಪತ್ರಿಕೆ ಹುಟ್ಟು ಹಾಕುವ ವೇಳೆಗೇ ಕಿರು ಪತ್ರಿಕೆಗಳು ತಮ್ಮ ಅಚಲತೆಯನ್ನು ಕಳೆದುಕೊಂಡು ಸಾಕಷ್ಟು ಕಾಲವಾಗಿತ್ತು.

ಆದರೆ ಎನ್ ಗಾಯತ್ರಿ ಮತ್ತು ಅವರ ಬಳಗಕ್ಕೆ ಅದು ಪತ್ರಿಕೆ ಮಾತ್ರವಾಗಿರಲಿಲ್ಲ. ಅವರ ಸಂಸ್ಥೆಯ ಚಿಹ್ನೆಯೇ ಹೇಳುವಂತೆ ಅದು ವಿಚಾರದ ಪಂಜು.

ಹಾಗಾಗಿ ಗಾಯತ್ರಿ ಊರೂರು ತಿರುಗಿ, ಕಾರ್ಯಕ್ರಮ ನಡೆಸಿ, ಚಂದಾಗಾಗಿ ಬೆನ್ನತ್ತಿ.. ಹೀಗೆ ಪತ್ರಿಕೆಯನ್ನು ವರ್ಷಗಟ್ಟಲೆ ನಡೆಸಿದರು.

ದೂರದ ಊರುಗಳಿಂದ ನಾನೂ ಅದಕ್ಕೆ ಲೇಖನ ಬರೆಯುತ್ತಾ, ಅವರು ನಡೆಸುವ ಸಂಕಿರಣದಲ್ಲಿ ಮಾತನಾಡುತ್ತಾ, ಚಂದಾ ಎತ್ತುತ್ತ ಜೊತೆಗೆ ನಿಂತೆ.

ಎಷ್ಟೋ ಜನರಿಗೆ ಹೋರಾಟ ಎನ್ನುವುದು ಮನೆಯ ಅಂಗಳದ ಆಚೆಯೇ..
ಮನೆಯೊಳಗೆ ‘ನೋ, ನೋ’

ಆದರೆ ನನಗೆ ಗಾಯತ್ರಿ ಬಗ್ಗೆ ಇನ್ನೂ ಗೌರವ ಹೆಚ್ಚಾಗಲು ಅವರು ಮನೆಯೊಳಗೂ ಮನೆಯಾಚೆಯೂ ಒಂದೇ ರೀತಿ ಇದ್ದರು.

ಅವರ ಚಳವಳಿಯ ನೋಟಕ್ಕೆ ಮುಖವಾಡಗಳಿರಲಿಲ್ಲ

ಗಾಯತ್ರಿ ಭಿನ್ನ
ಹೋರಾಟ ಮಾಡುವುದರಲ್ಲಿ ಮಾತ್ರವಲ್ಲ, ವಿಚಾರದಲ್ಲೂ..

ಮೊನ್ನೆ ಗಾಯತ್ರಿ ಮತ್ತೆ ಮುಖ್ಯವಾಗಿ ಎದ್ದು ಕಂಡದ್ದು
ವಿನಯಾ ವಕ್ಕುಂದಗೆ ನರಹಳ್ಳಿ ಪ್ರಶಸ್ತಿ ಕೊಡುವ ಕಾರ್ಯಕ್ರಮದಲ್ಲಿ..

ಅಲ್ಲಿ ಎಚ್ ಎಸ್ ರಾಘವೇಂದ್ರ ರಾವ್ ಗುರುತಿಸಿದರು
ಮೊದಲು ಡಾ ವಿನಯಾ ಒಕ್ಕುಂದ ಆಗಿದ್ದ ವಿನಯಾ ಹೇಗೆ ಹೆಸರಲ್ಲಿದ್ದ ಒಕ್ಕುಂದ, ಡಾ.. ಎಲ್ಲವನ್ನೂ ಬಿಟ್ಟುಕೊಡುತ್ತ ಕೇವಲ ವಿನಯಾ ಆಗಿ ಉಳಿದರು ಎಂದು.

ಆಗ ನನಗೆ ಎದ್ದು ಕಂಡಿದ್ದು ಎದುರಿಗೇ ಕುಳಿತಿದ್ದ ಎನ್ ಗಾಯತ್ರಿ

ಹಾಗೆ ಅನೇಕ ಮಹಿಳೆಯರು ವಿಚಾರಗಳಲ್ಲಿ ಹೊಸತನವನ್ನು ಹುಡುಕುತ್ತಾ ನಡೆದಿದ್ದರ ಹಿಂದೆ ಅವರ ಹೆಜ್ಜೆ ಗುರುತು ಸದಾ ಇದೆ

ಎನ್ ಗಾಯತ್ರಿ ಸಂಘಟನೆ ಎಂದೂ ಮಹಿಳೆಯರನ್ನು ಕೂಡಿಸಿಕೊಂಡು
ಪುರುಷರ ವಿರುಧ್ಧ ಬೀದಿಗಿಳಿಯಲಿಲ್ಲ
ಬದಲಿಗೆ ಪುರುಷರನ್ನೂ ಸೇರಿಸಿಕೊಂಡು ಪುರುಷರ ವಿರುದ್ಧ ಬೀದಿಗಿಳಿದರು

ರಿಸರ್ವ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಲೇ ಇಷ್ಟೆಲ್ಲಾ ಮಾಡಿದ ಗಾಯತ್ರಿ ನನ್ನೊಳಗಿನ ಸಾಕ್ಷಿ ಪ್ರಜ್ಞೆ.

ಗಾಯತ್ರಿ ‘ಅಚಲ’ಕ್ಕೆ ಬರೆಯುತ್ತಿದ್ದ ಸಂಪಾದಕೀಯಗಳನ್ನು ಓದಬೇಕು
ಅವು ಖಡಕ್ ನಿಲುವಿನ, ಸಿಡಿಗುಂಡುಗಳು
ಒಂದು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಗಾಯತ್ರಿ ಮೊಗೆದುಕೊಟ್ಟ ಕಿರು ದಾರಿಗಳು

ಹಾಗಾಗಿಯೇ ನನಗೆ ಹೋರಾಟಗಾರ್ತಿ ಗಾಯತ್ರಿ ಜೊತೆಗೆ ಬರಹಗಾರ್ತಿ ಗಾಯತ್ರಿಯೂ ಇಷ್ಟ

ಗಾಯತ್ರಿ ನನ್ನೊಳಗೆ ಸದಾ ಪ್ರಶ್ನೆ ಹುಟ್ಟುಹಾಕುತ್ತಲೇ ಇರುತ್ತಾರೆ

ನನ್ನೊಳಗಿನ ಪುರುಷ ತಲೆ ಎತ್ತಿದಾಗೆಲ್ಲಾ ಅವರ ಪ್ರೀತಿಯ ಗದರುವಿಕೆ ಕೇಳಿಸುತ್ತದೆ

ನನಗೆ ಈ ‘ಗಾಯತ್ರಿ’ ಮಂತ್ರ ಇಷ್ಟ.

ಗುಬ್ಬಿ,‌ ಶಿರಾದಲ್ಲಿ ಒಬ್ಬರಿಗೆ ಕೊರೊನಾ ಸೋಂಕು

ತುಮಕೂರು: ಗುಬ್ಬಿ ಹಾಗೂ ಶಿರಾದಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು‌ ಕಾಣಿಸಿಕೊಂಡಿದೆ.

ಶಿರಾ ಗ್ರಾಮದ ಹೊಸೂರು ಗ್ರಾಮದ ಮಹಿಳೆಗೆ ಸೋಕು ಪತ್ತೆಯಾಗಿದೆ. ಜ್ವರ, ಗಂಟಲಿನ ನೋವಿನಿಂದ ಗೋಮಾದರನಹಳ್ಳಿ ಆಸ್ಪತ್ರೆಗೆ ತೆರಳಿದ್ದ ಈತನನ್ನು ಶಿರಾ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಯಾಬ್ ಪರೀಕ್ಷೆ ಮಾಡಲಾಗಿತ್ತು.

ಇನ್ನೂ ಚೇಳೂರಿನಲ್ಲಿ 28 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಈತ ಮೊದಲಿಗೆ ಚೇಳೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದ, ನಂತರ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೇರಿದೆ.

ಹೋಂ‌ ಕ್ವಾರಂಟೈನ್ ಕಾಯಲು ಪಿಯು ಉಪನ್ಯಾಸಕರ ಬಳಕೆ

Publicstory.in


ತುಮಕೂರು: ಕೊರೊನಾ ಸೋಂಕಿತರು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಮಾಡುವ ಕೊರೊ‌ನಾ ಶಂಕಿತರನ್ನು ಕಾಯುವ ಹೊಣೆ ಇನ್ನು ಮುಂದೆ ಪಿಯು ಕಾಲೇಜಿನ ಉಪನ್ಯಾಸಕರ ಹೆಗಲೇರಲಿದೆ.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಇನ್ನು ಮುಂದೆ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಅಥವಾ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಇನ್ಸ್ಟಿಟ್ಯೂಟ್ ಕ್ವಾರಂಟೈನ್ ಮಾಡುವ ಬದಲು ಹೋಂ ಕ್ವಾರಂಟೈನ್ ಮಾಡಲಿದೆ ಎಂದೂ ಹೇಳಲಾಗುತ್ತಿದೆ.

ಹೀಗೆ ಹೋಂ ಕ್ವಾರಂಟೈನ್ ಆದವರ ಮೇಲೆ ಕಣ್ಗಾವಲು ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಕೆಲಸಕ್ಕೆ ಪಿಯು ಕಾಲೇಜಿನ ಉಪನ್ಯಾಸಕರನ್ನು ಬಳಸಲು ಮುಂದಾಗಿದೆ.

ಮೌಲ್ಯಮಾಪನ ಕೆಲಸದಲ್ಲಿ ಭಾಗಿಯಾಗಿರುವ ಉಪನ್ಯಾಸಕರು, ಪ್ರಾಂಶುಪಾಲರನ್ನು ಹೊರತುಪಡಿಸಿ ಉಳಿದ ಉಪನ್ಯಾಸಕರ ಪಟ್ಟಿಯನ್ನು ಮಾಡುವಂತೆ ಪಿಯು ಉಪ ನಿರ್ದೇಶಕರಿಗೆ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳ ಉಪನ್ಯಾಸಕರು ಈ ಕೆಲಸಕ್ಕೆ‌ ತೆಗೆದುಕೊಳ್ಳಲಾಗುತ್ತಿದೆ.

ಕಾಲೇಜುಗಳು ಇನ್ನೂ ಆರಂಭಿಸಿಲ್ಲ. ಕಾಲೇಜುಗಳು ಆರಂಭವಾಗುವವರೆಗೂ ಕೊರೊನಾ ಜಯಿಸಲು ಸರ್ಕಾರದ ಜತೆ ಕೈ ಜೋಡಿಸುವುದು ಆದ್ಯ ಕರ್ತವ್ಯ. ಈ ಸಂದಿಗ್ದ ಸ್ಥಿತಿಯಲ್ಲಿ ರೋಗ ನಿಯಂತ್ರಣದ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತುಮಕೂರಿನ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರು ಹೇಳಿದರು.

ಸುರೇಶ ಗೌಡ ಅವರಿಗೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ

Publicstory.in

ತುಮಕೂರು: ಪರಸ್ಪರ ಅಪನಂಬಿಕೆ, ಒಗ್ಗಟ್ಟು ಇಲ್ಲದೇ ಜರಡಿಯಂತಾಗಿರುವ ತುಮಕೂರು ಜಿಲ್ಲಾ ಬಿಜೆಪಿ ಘಟಕಕ್ಕೆ ಮಾಜಿ ಶಾಸಕ, ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಸುರೇಶಗೌಡ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ವರಿಷ್ಠರು ಹೊಸ ಸಂದೇಶ ರವಾನಿಸಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಶಾಸಕ ಜ್ಯೋತಿ ಗಣೇಶ ಅವಧಿ ಮುಗಿದಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸಾರಥಿ ಕೂರಿಸಲು ಬಿಜೆಪಿ ರಾಜ್ಯ ವರಿಷ್ಠರು ಅಲೆದುತೂಗಿ ನೋಡುವ ಕೆಲಸ ಮಾಡುತ್ತಿದ್ದರು.

ಸಂಸದ ಜಿ.ಎಸ್.ಬಸವರಾಜ್ ಅವರಿಂದ ಸ್ವಲ್ಪ ಅಂತರ ಕಾಪಾಡಿಕೊಳ್ಳುತ್ತಿರುವ ಹೆಬ್ಬಾಕ ರವಿ ಅವರು ಸ್ಥಾನದ ಮೇಲೆ ಕಣ್ಣಿಟ್ಟಿದ್ದರು, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಇನ್ನೂ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ವಯಸ್ಸಿನ ಕಾರಣದಿಂದ ಅವಕಾಶ ಇರಲಿಲ್ಲ.

ಹಿಂದುಳಿದವರಿಗೆ ಸ್ಥಾನ ಸಿಗಬಹುದೆಂಬ ನಿರೀಕ್ಷೆಯೂ ಇತ್ತು. ಅದರ ಲೆಕ್ಕಾಚಾರವನ್ನು ಬಿಜೆಪಿಯ ಗರ್ಭಗುಡಿಯ ಮುಖಂಡರು ಬದಲಿಸಿದಂತೆ ಕಾಣುತ್ತಿದೆ.

ಜ್ಯೋತಿ ಗಣೇಶ್ ಅವರ ಹಿಂದಿನ ಅವಧಿಯಲ್ಲಿ ಸುರೇಶಗೌಡರೇ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು. ಯಡಿಯೂರಪ್ಪ ಅವರು ಕೆಜೆಪಿಯಿಂದ ಬಿಜೆಪಿಗೆ ಬಂದು ಮತ್ತೇ ತಮ್ಮ ಸ್ಥಾನ ಭದ್ರಪಡಿಸಿಕೊಂಡ ಬಳಿಕ ಜ್ಯೋತಿ ಗಣೇಶ್ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಇದರಿಂದಾಗಿ ಜಿಲ್ಲಾ ಬಿಜೆಪಿ ಮಾನಸಿಕವಾಗಿ, ದೈಹಿಕವಾಗಿ ಎರಡೂ ಹೋಳಾಗಿದ್ದರೂ ಒಂದೇ ಎಂಬಂತೆ ತೋರಿಸಿಕೊಳ್ಳುತ್ತಿದ್ದರು.

ಮಾಜಿ ಸಚಿವ ಎಸ್,ಶಿವಣ್ಣ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರು. ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸಹ ಇದರ ಹಿಂದೆ ಇದ್ದರು. ಏನ್ನೆಲ್ಲ ಆದರೂ ಜ್ಯೋತಿಗಣೇಶ್ ಅವರನ್ನು ಯಡಿಯೂರಪ್ಪ ಬದಲಾವಣೆ ಮಾಡಲಿಲ್ಲ.

ನಂತರ ವಿಧಾನಸಭೆ ಚುನಾವಣೆಯಲ್ಲಿ ಜ್ಯೋತಿ ಗಣೇಶ್ ಗೆಲುವು ಸಾಧಿಸಿ ಶಾಸಕರೂ ಆದರು. ಮಿತಭಾಷೆಯ ಜ್ಯೋತಿಗಣೇಶ್ ಎಲ್ಲರನ್ನೂ ಸಂಭಾಳಿಸಿಕೊಂಡು ಹೋದರು. ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಾಗಿರಲಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಖಾಡದಲ್ಲಿದ್ದರೂ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯ ಹಿಂದೆ ನಿಂತ ಪರಿಣಾಮ ಅವರು ಸೋಲುವಂತಾಯಿತು.

ಚುನಾವಣೆಯ ನಂತರ ಒಕ್ಕಲಿಗ ಅಧಿಕಾರಿಗಳು, ಮುಖಂಡರನ್ನು ಕಡೆಗಣಿಸುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ ಎಂಬ ದೊಡ್ಡ ಆರೋಪಗಳು ಕೇಳಿಬಂದಿದ್ದವು.
ಇದರ ನಡುವೆಯೇ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಿತ್ತು.

ಸಭೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಕೆಂಗಣ್ಣಿನ ಬಿರುನೋಟ ನಡೆದದ್ದು, ಬಿಜೆಪಿಯೊಳಗೆ ಗುಟ್ಟಾಗಿ ಏನು ಉಳಿದಿರಲಿಲ್ಲ.

ಇದಾದ ಬಳಿಕ ಮೂರು-ನಾಲ್ಕು ಮಂದಿ ಹೆಸರನ್ನು ರಾಜ್ಯ ಕೋರ್ ಕಮಿಟಿಗೆ ಕಳುಹಿಸಲಾಗಿತ್ತು.

ಸುರೇಶಗೌಡರೇ ಏಕೆ?


ಸುರೇಶಗೌಡರನ್ನು ಮತ್ತೇ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಹಿಂದೆ ಎರಡು ಕಾರಣಗಳಿವೆ ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕರು.

ಸುರೇಶಗೌಡರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾಗ ಜಿಲ್ಲೆಯಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಒದಗಿಸಲು ಮಾಡಿದ ರಾಜಕೀಯ ನಿಪುಣತೆ. ಇನ್ನೊಂದು, ಜಿಲ್ಲೆಯಲ್ಲಿರುವ ಬಹುಸಂಖ್ಯಾತ ಒಕ್ಕಲಿಗರನ್ನು ತೃಪ್ತಿ ಪಡಿಸುವ ಕೆಲಸ.

ಕ್ಷೇತ್ರದಲ್ಲಿ ಅಗಾಧ ಎನ್ನುವಂತ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಇಡೀ ದೇಶವೇ ಗ್ರಾಮಾಂತರ ಕ್ಷೇತ್ರದತ್ತ ತಿರುಗುವಂತೆ ಮಾಡಿದರೂ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಬಿಜೆಪಿಯ ಇಬ್ಬರು ಪ್ರಮುಖ ನಾಯಕರು ಕೆಲಸ ಮಾಡಿದ್ದು ಈಗ ಯಡಿಯೂರಪ್ಪ ಅವರಿಗೂ ಗೊತ್ತಾಗಿದೆ. ಸುರೇಶಗೌಡರ ಸೋಲುವಂತೆ ಮಾಡಿದ ಒಣ ರಾಜಕೀಯಕ್ಕೆ ಜಿಲ್ಲೆಯ ಒಕ್ಕಲಿಗರ ನಡುವೆಯೂ ಪಕ್ಷದ ಬಗ್ಗೆ ಮುನಿಸಿದೆ. ಇದನ್ನು ನೀಗಿಸಲು ಮತ್ತೇ ಪಕ್ಷವನ್ನು ಮತ್ತಷ್ಟು ಗಟ್ಟಿಪಡಿಸಲು ಸುರೇಶಗೌಡ ಅವರನ್ನು ರಾಜಕಾರಣಿಯೇ ಬೇಕಿತ್ತು ಎನ್ನುತ್ತಾರೆ ರಾಜ್ಯಕೋರ್ ಕಮಿಟಿಯ ಸದಸ್ಯರೊಬ್ಬರು.

ಸುರೇಶಗೌಡ ಅವರು ಅಧ್ಯಕ್ಷರಾಗಿದ್ದಾಗ ಜೆಡಿಎಸ್ ನ ಹಿಂದುಳಿದ ಮುಖಂಡರಾಗಿದ್ದ ವೈ.ಎಚ್.ಹುಚ್ಚಯ್ಯ, ಎಂ.ಆರ್. ಹುಲಿನಾಯ್ಕರ್ ಮುಂತಾವರನ್ನು ಕರೆತಂದರು. ಶಿರಾ ತಾಲ್ಲೂಕಿನಲ್ಲೂ ಸಾಕಷ್ಟು ಮುಖಂಡರನ್ನು ಕರೆತಂದರು. ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿದ್ದ ಮಸಾಲ ಜಯರಾಂ ಅವರನ್ನು ಕರೆತಂದು, ಅಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದರು.

ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿ ಬಲ ಕಳೆದುಕೊಳ್ಳುವ ಎಲ್ಲ ಮುನ್ಸೂಚನೆಗಳು ಜಿಲ್ಲೆಯಲ್ಲಿ ಈಗಾಗಲೇ ಕಾಣುತ್ತಿದೆ. ಬಲ ಉಳಿಸಿಕೊಳ್ಳುವ, ಮತ್ತಷ್ಟು ವಿಸ್ತರಿಸುವ ಕೆಲಸ ಸುರೇಶಗೌಡರ ಹೆಗಲೇರಿದೆ.

ಸೋಲಿನ ನಡುವೆ ಪಕ್ಷ ಮುನ್ನೆಡೆಸುವ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬದನ್ನು ಕಾದುನೋಡಬೇಕಾಗಿದೆ.

ಅವರೊಂದಿಗೆ ಮುನಿಸಿಕೊಂಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಈಗ ಅವರ ಅಣ್ಣನಂತೆ ಅವರ ಹಿಂದೆ ನಿಂತಿದ್ದಾರೆ. ಸ್ವಲ್ಪ ದೂರವಾದಂತೆ ಕಾಣುತ್ತಿದ್ದ ಸಂಸದ ಜಿ.ಎಸ್.ಬಸವರಾಜ್ ಸಹ ಅವರೊಂದಿಗೆ ಸ್ನೇಹದ ಕೈ ಚಾಚಿದ್ದಾರೆ. ಈಗ ಬಣಗಳೆಲ್ಲ ಒಂದಾದಂತೆ ಕಾಣುತ್ತಿವೆ. ಇಂತಹ ಸಂದರ್ಭದಲ್ಲಿ ಪಕ್ಷದ ಚುಕ್ಕಾಣಿ ವಹಿಸಿಕೊಳ್ಳುತ್ತಿದ್ದಾರೆ.