Saturday, May 9, 2026
Google search engine
Home Blog Page 202

ಯಾಕೋ ಮನಸ್ಸು ತೀರಾ ಭಾರ

ಜಿ ಎನ್ ಮೋಹನ್


ಯಾಕೋ ಮನಸ್ಸು ತೀರಾ ಭಾರ

ಲಾಕ್ ಡೌನ್ ಕಾಲದ ಎಷ್ಟೋ ಕಥೆಗಳನ್ನು ಹುಡುಕುಡುಕಿ ಓದುತ್ತಿದ್ದ ನಾನು ಇದನ್ನು ಓದಿದವನೇ ಮಾತಿಲ್ಲದವನಾಗಿ ಹೋದೆ. ನನ್ನೊಳಗೆ ಇನ್ನಿಲ್ಲದ ದುಃಖ ಮಡುಗಟ್ಟಿತ್ತು.

ಮುಂಬೈನಲ್ಲಿ ಸಂಬಂಧಿಕರ ಮದುವೆ. ತೆಲಂಗಾಣದಿಂದ ಮದುವೆಗೆ ಹೋದ ಅಮ್ಮ ಅಲ್ಲಿ ಲಾಕ್ ಡೌನ್ ನಲ್ಲಿ ಸಿಕ್ಕು ಬಿದ್ದಿದ್ದಾಳೆ. ಯಾವಾಗ ಲಾಕ್ ಡೌನ್ ಸ್ವಲ್ಪ ತೆರವಾಯಿತೋ ರೆಕ್ಕೆ ಬಿಚ್ಚಿದ ಹಕ್ಕಿಯಂತೆ ತನ್ನ ಮನೆಗೆ ಹಾರಲು ಸಜ್ಜಾಗಿದ್ದಾಳೆ.

ಸಂಭ್ರಮದಿಂದ ಮನೆಗೆ ಬಂದ ಅಮ್ಮನಿಗೆ ಕಂಡದ್ದು ಮನೆಯ ಗೇಟಿಗೆ ಬಿದ್ದಿರುವ ಬೀಗ.

ಅಯ್ಯೋ, ಮಗ ಸೊಸೆ ಎಲ್ಲಿ ಹೋದರೋ ಎಂದು ಅಲವತ್ತುಕೊಂಡಿದ್ದಾಳೆ.

ಏನು ಮಾಡುವುದು ಎಂದು ತೋಚದೆ ಗಲಿಬಿಲಿಯಾಗಿದ್ದಾಗ ಮನೆಯ ಒಳಗಿನಿಂದ ಒಗ್ಗರಣೆ ವಾಸನೆ ಬಂದಿದೆ.

ಹಾಗಾದರೆ ಮನೆಯಲ್ಲಿ ಯಾರೋ ಇದ್ದಾರೆ. ಜೀವ ಬಂದಂತಾಗಿ ಹೊರಗಿನಿಂದಲೇ ಮಗ ಸೊಸೆಯನ್ನು ಕೂಗಿ ಕರೆದಿದ್ದಾಳೆ. ಯಾರೆಂದರೆ ಯಾರ ಉತ್ತರವೂ ಇಲ್ಲ.

ಗೇಟು, ಮನೆಯ ಬಾಗಿಲೂ ತೆರೆಯಲಿಲ್ಲ.
ದಿಕ್ಕು ತೋಚದಂತಾದ ಅಮ್ಮ ಅಲ್ಲೇ ಗೇಟಿನಲ್ಲಿಯೇ ಕುಸಿದು ಕೂತಿದ್ದಾಳೆ. ಮನೆಯೊಳಗೆ ಎಲ್ಲಾ ಸದ್ದೂ ಕೇಳುತ್ತಿದೆ. ಆದರೆ ಬಾಗಿಲು ತೆರೆಯುತ್ತಿಲ್ಲ.

ಇಡೀ ಒಂದು ಹಗಲು ಒಂದು ರಾತ್ರಿಯನ್ನು ಗೇಟಿನಲ್ಲೇ ಮಲಗಿ ಕಳೆದ ಅವರನ್ನು ನೋಡಿ ನೆರೆಹೊರೆಯವರಿಗೆ ಅಯ್ಯೋ ಅನಿಸಿದೆ.

ನಾವು ವರ್ಷಗಳಿಂದ ನೋಡುತ್ತಿರುವ, ನಮ್ಮ ಜೊತೆ ದೇವಸ್ಥಾನಕ್ಕೂ ತರಕಾರಿ ಮಾರುಕಟ್ಟೆಗೂ ಜೊತೆಯಾಗುತ್ತಿದ್ದ ಅಮ್ಮ ಯಾಕೆ ಗೇಟಿನಲ್ಲಿ ಕುಸಿದು ಕುಳಿತಿದ್ದಾರೆ ಎಂದು ವಿಚಾರಿಸಿದ್ದಾರೆ.

ಮನೆಯೊಳಗೇ ಎಲ್ಲರೂ ಇದ್ದಾರೆ ಆದರೆ ಬಾಗಿಲು ತೆರೆಯುತ್ತಿಲ್ಲ ಎಂದು ಗೊತ್ತಾಗಿ ಅಕ್ಕಪಕ್ಕದ ಮನೆಯವರೂ ಕೂಗಿ ಕರೆದಿದ್ದಾರೆ. ಅದಕ್ಕೂ ಉತ್ತರವಿಲ್ಲ.

ಆಗ ದಾರಿ ಕಾಣದೆ ತಮ್ಮ ಶಾಸಕನಿಗೂ, ಕಾರ್ಪೊರೇಟರ್ ಗೂ ಮೊರೆ ಹೋಗಿದ್ದಾರೆ

ಯಾವಾಗ ಅವರು ಪೊಲೀಸರ ಸಮೇತ ಮನೆಗೆ ಬಂದರೋ ಆಗ ಬಾಗಿಲು ತೆರೆದಿದೆ.

ಆದರೆ ಅಮ್ಮನನ್ನು ಒಳಗೆ ಬಿಟ್ಟುಕೊಳ್ಳಲು ಮಾತ್ರ ರೆಡಿ ಇಲ್ಲ. ಕಾರಣ ಆಕೆ ಮುಂಬೈನಿಂದ ಬಂದಿದ್ದಾಳೆ.

ಅರೆ! ಬಂದರೇನಂತೆ ಅವರನ್ನು ಹೋಮ್ ಕ್ವಾರಂಟೈನ್ ಮಾಡಿ ಎಂದಿದ್ದಾರೆ. ಮಗ ಸೊಸೆ ಬಿಲ್ ಕುಲ್ ಒಪ್ಪಿಲ್ಲ.

ಹೋಗಲಿ ಅವರಿಗೆ ಅನ್ನ ನೀರು ಕೊಟ್ಟು ಏನು ಮಾಡಬಹುದು ಎಂದು ಅವರೊಡನೆ ಮಾತನಾಡಬಹುದಿತ್ತಲ್ಲಾ ಎಂದು ಕೇಳಿದರೆ ಅದಕ್ಕೆಲ್ಲ ನಮಗೆ ಪುರುಸೊತ್ತಿಲ್ಲ ಎನ್ನುವ ಉತ್ತರ ಬಂದಿದೆ.

ಮನೆ ಒಳಗೆ ಪ್ರವೇಶಿಸಿದ ಪೊಲೀಸರು ನೋಡಿದರೆ ಅಮ್ಮ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿರಲು ವ್ಯವಸ್ಥೆಯಂತೂ ಇದೆ.

ಗದರಿಸಿ ಕೇಳಿದರೆ ಕೊಠಡಿಯೇನೋ ಪ್ರತ್ಯೇಕ ಇದೆ ಆದರೆ ವಾಶ್ ಬೇಸಿನ್ ಒಂದೇ ಇದೆ ಎನ್ನುವ ಕುಂಟು ಉತ್ತರ.

ಅರೆ ವಾಶ್ ರೂಮ್ ಒಂದೇ ಆದರೆ ಆತಂಕಪಟ್ಟುಕೊಳ್ಳಬಹುದು ಆದರೆ ವಾಶ್ ಬೇಸಿನ್ ಬಳಸದೆ ಇರಬಹುದಲ್ಲ ಎಂದರೆ ಅದಕ್ಕೂ ಅಡ್ಡ ಉತ್ತರ.

ಕೊನೆಗೆ ಶಾಸಕ, ಕಾರ್ಪೊರೇಟರ್, ಪೊಲೀಸರು ತಕ್ಕ ಪರಿಣಾಮದ ಬಗ್ಗೆ ಮಾತನಾಡಿದ ಮೇಲೆಯೇ ಅವರನ್ನು ಒಳಗೆ ಬಿಟ್ಟು ಕೊಂಡದ್ದು..

ಏಕೆ ಹೀಗೆ..

—–

ಈ ಹಿಂದೆ ಆರ್ ಟಿ ವಿಠ್ಠಲಮೂರ್ತಿ ಒಂದು ಲೇಖನ ಬರೆದಿದ್ದರು. ಒಂದು ಬೆಳಕಿನ ಬಗ್ಗೆ.

ಎಸ್ ಎಸ್ ಕುಮಟಾ ಎನ್ನುವ ಸಮಾಜವಾದಿ ನಿಗಿ ನಿಗಿ ಕೆಂಡದಂತೆ ಉರಿದು ದನಿಯಿಲ್ಲದವರ ದನಿಯಾದವರ ಪತ್ನಿಯ ಬಗ್ಗೆ.

ಅಂತಹ ಎಸ್ ಎಸ್ ಕುಮಟಾ ಅವರ ಹೆಂಡತಿ ರತ್ನಮ್ಮ ತೀರಿ ಹೋದರು.

ರತ್ನಮ್ಮ ಹೇಗೆ ಕುಮಟಾ ಅವರ ಜೊತೆ ಜೊತೆಗೆ ಇದ್ದು ಅವರೊಳಗಿನ ಕಿಡಿ ನಂದದಂತೆ ನೋಡಿಕೊಂಡರು. ಹೇಗೆ ಹಸಿವನ್ನು ತನ್ನ ಗಂಡನಿಗೆ ಕಾಣದಂತೆ ತಮ್ಮೊಳಗೆ ಮುಚ್ಚಿಟ್ಟುಕೊಂಡರು. ಹೇಗೆ ಅವರು ಬಡಜನರ ಕಣ್ಣಿಗೆ ಬೆಳಕು ತುಂಬಲು ಹೆಗಲಾಗಿ ನಿಂತರು ಎಂದು ಬರೆದಿದ್ದರು.

ಆದರೆ.. ಆದರೆ ನನ್ನ ಮನಸ್ಸು ಕುಸಿದು ಹೋದದ್ದು ಅದಕ್ಕಲ್ಲ.

ಅವರ ಸಾವಿಗಿಂತಲೂ ತೀವ್ರವಾಗಿ ತಟ್ಟಿದ್ದು ಅವರು ತಮ್ಮ ಕೊನೆಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆಯಬೇಕಾಯಿತು ಎನ್ನುವುದರ ಬಗ್ಗೆ.

ರತ್ನಮ್ಮನವರಿಗೆ ಮಕ್ಕಳಿದ್ದಾರೆ. ಸ್ಥಿತಿವಂತರೂ ಹೌದು. ಆದರೆ ಅವರು ಮಾತ್ರ ವೃದ್ಧಾಶ್ರಮದಲ್ಲಿರಬೇಕಾಯಿತು.

ನಾನು ಆ ತಾಯಿಯನ್ನು ಕಂಡಿದ್ದೇನೆ. ಅಷ್ಟೇ ಅಲ್ಲ ಅವರ ಮಗಳು ಸುಜಾತ ಕುಮಟಾ ಅವರ ಪತಿ ಉಮರಬ್ಬ ಅಪಘಾತದಲ್ಲಿ ತೀರಿ ಹೋದಾಗ ಅವರೊಂದಿಗೆ ಮಳೆ ಗಾಳಿ ಲೆಕ್ಕಿಸದೆ ಪಶ್ಚಿಮ ಘಟ್ಟ ಇಳಿದು ಕರಾವಳಿಯ ಬಗಲಲ್ಲಿದ್ದ ಸುರತ್ಕಲ್ ವರೆಗೆ ಹೋಗಿ ಬಂದಿದ್ದೇನೆ.

ಆಕೆ ಗಟ್ಟಿಗಿತ್ತಿ. ಅವರ ಮಾತಿನೊಳಗೆ ಅವರ ಜೀವನದ ಏಟುಗಳು ಕಾಣದಂತೆ ಆದರೆ ಅವುಗಳಿಂದ ಪಾಠ ಕಲಿತು ಮುಂದೆ ಸಾಗುತ್ತಿರುವ ಕುರುಹಿತ್ತು. ಅಷ್ಟೂ ಮಕ್ಕಳಿಗೂ, ಅಂತೆಯೇ ಮೊಮ್ಮಕ್ಕಳಿಗೂ ಆಕೆ ಇನ್ನಿಲ್ಲದ ಆಧಾರವಾಗಿದ್ದರು.

ಆದರೆ ಆಕೆ ವೃದ್ಧಾಶ್ರಮದಲ್ಲಿದ್ದರು. ಅದು ಆಕೆಗೆ ಬೇಕಿರಲಿಲ್ಲ. ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಗೋಗರೆಯುತ್ತಿದ್ದರು.

ಒಂದು ಬೆಳಕಿನ ದೊಂದಿಯಾಗಿದ್ದ, ಬೆಳಕ ದೀವಿಗೆಗೆ ಹೆಗಲಾಗಿದ್ದ ರತ್ನಮ್ಮ ಹೀಗೆ ಹೊರಟುಬಿಟ್ಟರು.

—–

ಇನ್ನೊಂದು ದಿನ ಮಂಗಳೂರಿಗೆ ಹೋಗಲು ಬಸ್ ಹತ್ತಿ ಕೂತಿದ್ದೆ.
ಹೊರಗೆ ಯಾರೋ ಭಿಕ್ಕುವ ಸದ್ದು

ಏನು ಎಂದು ಇಳಿದು ಹತ್ತಿರ ಹೋದರೆ ಒಬ್ಬ ಹೆಂಗಸು, ಎದುರುಗಡೆ ಕುಡಿದು ತೂರಾಡುತ್ತಿರುವ ಯುವಕ.

ಏನಮ್ಮ ಎಂದು ಕೇಳಿದೆ

ಅಷ್ಟೇ ಸಾಕಾಯಿತೇನೋ ಆಕೆಗೆ. ಭಿಕ್ಕಿ ಭಿಕ್ಕಿ ಅಳತೊಡಗಿದಳು

ಆಕೆಯೂ ಮಂಗಳೂರಿನ ಬಸ್ ಹತ್ತಬೇಕಿತ್ತು. ವಾರದ ಕೊನೆಯ ದಿನ. ಹಾಗಾಗಿ ಬಸ್ ನಲ್ಲಿ ಇನ್ನಿಲ್ಲದ ರಶ್ ಇರುತ್ತದೆ ಎಂದು ಮಗನನ್ನು ಕರೆದು ಆತನ ಕೈಗೆ ದುಡ್ಡು ಇಟ್ಟಿದ್ದಾಳೆ. ನಾನು ಬರುವ ವೇಳೆಗೆ ಟಿಕೆಟ್ ಮಾಡಿಸಿರು ಅಂತ

ಆದರೆ ಆತ ಕೈಗೆ ಸಿಕ್ಕ ಆ ಹಣ ಹಿಡಿದು ಸೀದಾ ಗಡಂಗಿನ ದಾರಿ ಹಿಡಿದಿದ್ದಾನೆ. ಅಮ್ಮ ಕೊಟ್ಟ ಹಣ ಮುಗಿಯುವವರೆಗೂ ಕುಡಿದಿದ್ದಾನೆ. ಕೊನೆಗೆ ತೂರಾಡಿಕೊಂಡು ಬಸ್ ನಿಲ್ದಾಣಕ್ಕೆ ಬಂದಿದ್ದಾನೆ

ಅಮ್ಮ ಬಟ್ಟೆ ಬ್ಯಾಗ್ ಹಿಡಿದುಕೊಂಡು ನಿಲ್ದಾಣಕ್ಕೆ ಬಂದರೆ ಮಗ ತೂರಾಡುತ್ತಿದ್ದಾನೆ. ಕೈನಲ್ಲಿ ಟಿಕೆಟ್ ಇಲ್ಲ.

ಅಮ್ಮನಿಗೆ ಎಲ್ಲಾ ಅರ್ಥವಾಗಿ ಭಿಕ್ಕುತ್ತಿದ್ದಾಳೆ

‘ಮನೆ ಕಸ ಮುಸುರೆ ಮಾಡುತ್ತೇನೆ ಸಾರ್ ಅದರಲ್ಲಿ ಬರುವ ಅಷ್ಟೋ ಇಷ್ಟೋ ಹಣ ಕೂಡಿಸಿ ಧರ್ಮಸ್ಥಳಕ್ಕೆ ಹೊರಟಿದ್ದೆ. ಮಗನಿಗೆ ಒಂದು ಕೆಲಸವಾದರೂ ಸಿಗಲಿ ಅಂತ ದೇವರಿಗೆ ಬೇಡಿಕೊಳ್ಳುವುದಕ್ಕೆ. ಈಗ ಕುಡಿದು ಮುಗಿಸಿದ್ದಾನೆ. ನನ್ನ ಬಳಿ ಇನ್ನು ಹಣವೂ ಇಲ್ಲ

ಹೊಟ್ಟೆಯೊಳಗೆ ಸಂಕಟ ಹೊರಳಾಡಿತು.

———

ಅದೊಂದು ವಿಡಿಯೋ

ಪ್ರೊಫೆಸರ್ ಮಗ ತಾಯಿಯನ್ನು ಹಿಡಿದುಕೊಂಡು ಕಷ್ಟದಿಂದ ಮೆಟ್ಟಿಲು ಹತ್ತಿಸುತ್ತಿದ್ದಾನೆ. ಆರೋಗ್ಯ ಕುಸಿದು ಹೋಗಿರುವ ತಾಯಿ ಏದುಸಿರುಬಿಡುತ್ತಾ ಮಗನ ಆಸರೆ ಪಡೆದು ಹರಸಾಹಸ ಮಾಡುತ್ತಿದ್ದಾರೆ

ವಿಡಿಯೋ ನೋಡುತ್ತಿದ್ದವರಿಗೆ ಪಾಪ ಮಗ ಅಮ್ಮನ ಆರೈಕೆಗೆ ಎಷ್ಟು ಒದ್ದಾಡುತ್ತಿದ್ದಾನೆ ಅನಿಸುತ್ತಿತ್ತು

ಆದರೆ ಮರುಕ್ಷಣ ಅಮ್ಮ ಆ ನಾಲ್ಕನೆಯ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಸಾವು ತಕ್ಷಣ ಅವಳನ್ನು ಕಬಳಿಸಿಹಾಕಿದೆ.

ಅಪಾರ್ಟ್ಮೆಂಟ್ ನಲ್ಲಿದ್ದ ಸಿ ಸಿ ಟಿ ವಿ ಸದ್ದಿಲ್ಲದೇ ಗುಟ್ಟು ಬಿಟ್ಟುಕೊಟ್ಟಿದೆ.

ಮಗ ತಾಯಿಯನ್ನು ಮೆಟ್ಟಿಲು ಹತ್ತಿಸಿದವನೇ ಆಕೆಯನ್ನು ಅಲ್ಲಿಂದ ಕೆಳಕ್ಕೆ ದೂಡಿದ್ದಾನೆ.

ಈತ ಮೆಟ್ಟಿಲು ಹತ್ತಿಸುತ್ತಿರುವಾಗ ಬಾಗಿಲು ಹಾಕಿದ ಮನೆಯೊಳಗಿಂದ ಇನ್ನೊಂದು ದನಿ ಹೇಗೆ ಎಲ್ಲವನ್ನೂ ಸರಿಯಾಗಿ ಮಾಡಬೇಕು ಎಂದು ನಿರ್ದೇಶನ ನೀಡುತ್ತಿದೆ.

—-

‘ಅಮ್ಮ ನಿಮ್ಮ ಮನೆಗಳಲ್ಲಿ ಕಂಡಿರೇನೇ ಕಂದನಾ’ ಎಂದರು
ಆದರೆ ಈಗ ಕೇಳಬೇಕಿದೆ ‘ಕಂದರಿರಾ ನಿಮ್ಮ ಮನೆಗಳಲ್ಲಿ ಕಂಡಿರೇನು ಅಮ್ಮನಾ..??’

ಎಕ್ಕುಂಡಿ ಎಂಬ ’ಕೇವಲ ಮನುಷ್ಯ’ನಿಗೆ ನಮಸ್ಕಾರ.

ಜಿ ಎನ್ ಮೋಹನ್


ಕಣ್ಣು ಹಾಯಿಸಿದರೆ ಅನತಿ ದೂರದಲ್ಲಿ ಭೋರ್ಗರೆವ ಕಡಲು. ಗಾಳಿ ಬೀಸುವ ತೆಂಗಿನ ಚಾಮರಗಳು. ಕಾಲ ಕೆಳಗೆ ಅಷ್ಟಗಲಕ್ಕೂ ಹರಡಿಕೊಂಡ ನಗರಿ. ನಾವಿದ್ದದ್ದು ಮಂಗಳೂರ ನೆತ್ತಿಯೇನೋ ಅನ್ನುವ ಬಾವುಟ ಗುಡ್ಡೆಯಲ್ಲಿ.

ಗುರುರಾಜ ಮಾರ್ಪಳ್ಳಿ ದನಿ ತೆಗೆದು ಹಾಡುತ್ತಿದ್ದರು.

“ಮುಗಿಲಿನ ತುಂಬಾ ಮುತ್ತಿನ ಬೀಜ ಬಿತ್ತುವವರೆ ಇಲ್ಲ
ನಂದನವನದಲಿ ರೆಕ್ಕೆಯ ಕುದುರೆಯ ಹತ್ತುವವರೆ ಇಲ್ಲ
ಬೀದಿಗೆ ಬಿಸುಡಿದ ಕೂಸಿನ ಬಾಯಿಗೆ ತಾಯಿಯ ಹಾಲಿಲ್ಲ
ಗೌರಿ ಶಂಕರ ಶಿಖರವನೇರಲು ನಮಗೂ ಕಾಲಿಲ್ಲ
ಶಬರಿಯ ಗುಡಿಸಲ ಹಣ್ಣಿನ ರುಚಿಯನು ಕಂಡವರೇ ಇಲ್ಲ
ಒಲುಮೆಯ ಹಾಲು ತಿಳಿವಿನ ಜೇನು ಉಂಡವರೇ ಇಲ್ಲ
ಕಡಲಿನ ಭಗವದ್ಗೀತೆಗೆ ಭಾಷ್ಯವ ಬರೆದವರೇ ಇಲ್ಲ
ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೆ ಇಲ್ಲ…”

ನಾನು ಅವರ ಮುಂದೆಯೇ ಕುಳಿತಿದ್ದೆ, ’ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೇ ಇಲ್ಲ…’ ಎಂದವರ ಮುಂದೆ.

ಆದರೆ ಅವರು ಮಾತ್ರ ತಮ್ಮ ಹೃದಯದ ಬಾಗಿಲನ್ನು ತೆರೆಯುತ್ತಲೇ ಹೋದರು.

ಅವರ ಹೃದಯ ಒಂದು ‘ತೆರೆದ ಬಾಗಿಲು’ ಮಾತ್ರ ಆಗಿರಲಿಲ್ಲ, ಅದು ತೆರೆದಷ್ಟೂ ಬಾಗಿಲಾಗಿತ್ತು.

ಅವರು ಸು ರಂ ಎಕ್ಕುಂಡಿ. ಸುಬ್ಬಣ್ಣ ರಂಗನಾಥ ಎಕ್ಕುಂಡಿ.

ಪಕ್ಕದಲ್ಲೇ ಕಡಲು ಎನ್ನುವಷ್ಟು ಸನಿಹದಲ್ಲಿತ್ತು ನಮ್ಮ ಮನೆ.

ಹಸಿರು ಮುಕ್ಕಳಿಸುವ ಗದ್ದೆಗಳು, ಜುಳು ಜುಳು ಹರಿಯುವ ತೊರೆ, ಇವುಗಳ ನಡುವಿನ ನಮ್ಮ ಮನೆಯ ಅಂಗಳದಲ್ಲಿ ಕುಳಿತು ಎಕ್ಕುಂಡಿ ಎಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತಿದ್ದರು.

ಆಗ ಹಸಿರು ಗದ್ದೆಗೆ ಬಿಳಿಯ ಬಟ್ಟೆ ಹೊದಿಸಿಯೇ ತೀರುತ್ತೇನೆ ಎನ್ನುವಂತೆ ಒಂದು ಹಿಂಡು ಬೆಳ್ಳಕ್ಕಿಗಳು ಸುಯ್ಯಂನೆ ಹಾರಿ ಬಂದು ಗದ್ದೆಯ ಮೇಲೆ ಕಾಲಿಳಿಸಿದವು. ಅಷ್ಟೆ! ಎಕ್ಕುಂಡಿ ಅವರ ಕಣ್ಣು ಅರಳಿತು.

ಒಂದು ಪುಟ್ಟ ಮಗು ಆಗ ತಾನೆ ಒಂದು ಬೆಳ್ಳಕ್ಕಿಯನ್ನು ನೋಡುತ್ತಿದೆಯೇನೋ ಎನ್ನುವಂತೆ ಅವರು ಲಗುಬಗೆಯಿಂದ ಎದ್ದರು. ಅವರ ಬೊಚ್ಚು ಬಾಯಿಯಲ್ಲಿ ನಗು ತುಳುಕುತ್ತಿತ್ತು.

ಬೆಳ್ಳಕ್ಕಿಗಳ ಜೊತೆ ಇನ್ನೊಂದು ಬೆಳ್ಳಕ್ಕಿ ಸೇರಿ ಬಿಟ್ಟಿತ್ತು.

’ಪ್ರತಿಯೊಬ್ಬರ ಎದೆಯಲ್ಲಿ ಒಂದು ಬೆಳ್ಳಕ್ಕಿ ಇರುತ್ತದೆ’ ಎಂದು ಬಲವಾಗಿ ನಂಬಿದ್ದರು ಎಕ್ಕುಂಡಿ.

‘ಬೆಳ್ಳಕ್ಕಿ ಧವಲತೆಗೆ, ಶುದ್ಧತೆಗೆ ಸಂಕೇತವಾದಂತೆ ಸೌಂದರ್ಯದ ಸಂಕೇತ ಕೂಡ. ಈ ಜೀವನಪ್ರೀತಿ ಮನುಷ್ಯನನ್ನು ಸಂಪೂರ್ಣ ಮಾಡುತ್ತದೆ. ಇಲ್ಲದಿದ್ದರೆ ಅವನಿಗೆ ಮಾನವ ಸಂಬಂಧಗಳ ಬಗ್ಗೆ ಅರ್ಥವೇ ಆಗುವುದಿಲ್ಲ’, ಎನ್ನುತ್ತಿದ್ದರು.

ಅವತ್ತು ಹೀಗಾಯ್ತು, ನಾನು ಬೆಂಗಳೂರಿನ ಅವರ ಮನೆಯಲ್ಲಿ ಕುಳಿತಿದ್ದೆ. ಮಾರ್ಕ್ಸ್, ಎಂಗಲ್ಸ್, ದುಡಿವ ಕೈಗಳು, ತಿರುಗುವ ಚಕ್ರಗಳ ಬಗ್ಗೆ ಸಾಲು ಸಾಲಾಗಿ ಎಕ್ಕುಂಡಿ ಕವಿತೆಗಳನ್ನು ಬರೆದಿದ್ದರು.

ಅವು ನೇರ ನಮ್ಮ ಬದುಕಿನೊಳಗೇ ಕೈ ಹಾಕಿ ಒಂದು ಕಥನವನ್ನು ಹೆಕ್ಕಿ ಕೊಟ್ಟಂತಿತ್ತು. ಹಾಗಾಗಿ ಅವರನ್ನು ಭೇಟಿಯಾಗೇ ಸಿದ್ಧ ಎಂದು ನಾನು ಅವರ ಮನೆಯ ಬಾಗಿಲನ್ನು ಬಡಿದಿದ್ದೆ.

ಅವರ ಒಳಗಿನ ಕಥನಕ್ಕೆ ಕಿವಿಯಾಗಿ ಕುಳಿತಿದ್ದೆ. ಅವರೂ ಸಹ ಉತ್ಸಾಹದಿಂದ ತಮ್ಮ ಕವಿತೆಯ ನಡಿಗೆಯನ್ನು ಬಣ್ಣಿಸುತ್ತಾ ಇದ್ದರು.

ಇಬ್ಬರೂ ಮಾತಿನಲ್ಲಿ ಮುಳುಗಿ ಹೋಗಿದ್ದೆವು.

ಆಗ ಇದ್ದಕ್ಕಿದ್ದಂತೆ ಅವರು ದಢಬಡಿಸಿ ಎದ್ದರು. ಮಾತನ್ನು ಅರ್ಧಕ್ಕೇ ತುಂಡರಿಸಿ ಮನೆಯ ಆಚೆ ಹೋಗಿಬಿಟ್ಟರು. ನನಗೋ ಆತಂಕ ಶುರುವಾಯಿತು. ನಾನಾಡಿದ ಯಾವುದಾದರೂ ಮಾತು ಅವರನ್ನು ಘಾಸಿಗೊಳಿಸಿತೆ ಎಂದು ಕಂಗಾಲಾದೆ.

ನಾನೂ ಅವರ ಹಿಂದೆಯೇ ಹೊರನಡೆದೆ. ಆಚೆ ಹೋಗಿ ನೋಡಿದರೆ ಎಕ್ಕುಂಡಿ ಆಕಾಶಕ್ಕೆ ಕಣ್ಣು ನೆಟ್ಟು ನಿಂತಿದ್ದರು.

ಅಲ್ಲೊಂದು ವಿಮಾನ ಹಾರುತ್ತಿತ್ತು. ಆ ವಿಮಾನ ಒಂದು ಚುಕ್ಕೆಯಾಗಿ ಮರೆಯಾಗಿ ಹೋಗುವವರೆಗೂ ಎಕ್ಕುಂಡಿ ತದೇಕ ಚಿತ್ತರಾಗಿ ಅದನ್ನೇ ನೋಡುತ್ತಾ ನಿಂತಿದ್ದರು.

ನನ್ನನ್ನು ನೋಡಿದವರೇ ’ನಗರದಲ್ಲಿ ಹಾರುವ ಈ ವಿಮಾನ ನೋಡಿದರೆ ನನಗೆ ಬೆಳ್ಳಕ್ಕಿಗಳ ನೆನಪಾಗುತ್ತದೆ, ಈ ವಿಮಾನ ನನ್ನನ್ನು ಬಂಕಿಕೊಂಡ್ಲಕ್ಕೆ ಕರೆದೊಯ್ಯುವ ಬೆಳ್ಳಕ್ಕಿಗಳಂತೆ ಕಾಣುತ್ತದೆ’ ಎಂದರು.

ಬಂಕಿಕೊಡ್ಲ ಎಕ್ಕುಂಡಿಯವರ ಎದೆಯನ್ನು ಹಸಿರಾಗಿಸಿದ ಒಂದು ಊರು.

ಗುಲ್ಬರ್ಗದ ಮಣೂರಿನ ಮೂಲದ ಮನೆತನದ ಎಕ್ಕುಂಡಿ ಹುಟ್ಟಿದ್ದು ರಾಣಿಬೆನ್ನೂರಿನಲ್ಲಿ. ಉಂಡಿದ್ದು, ಉಟ್ಟಿದ್ದು ಬಡತನವನ್ನು.

ರಾಣಿಬೆನ್ನೂರು, ಧಾರವಾಡ, ಸಾಂಗ್ಲಿಯಲ್ಲಿ ಓದಿದ ಎಕ್ಕುಂಡಿ ಗೆಳೆಯರ ಜೊತೆ ಒಮ್ಮೆ ಉತ್ತರ ಕನ್ನಡ ಪ್ರವಾಸಕ್ಕೆ ಬಂದರು.

ಎಂದೂ ಕಡಲನ್ನು ಕಾಣದ, ಎಂದೂ ಹಿಂಡು ಹಿಂಡು ಬೆಳ್ಳಕ್ಕಿ ನೋಡದ, ಎಂದೂ ತೆಂಗಿನ ಚಾಮರ ಕಾಣದ ಎಕ್ಕುಂಡಿ ಅಲ್ಲಿಯೇ ನಿಂತುಹೋದರು.

ಸತತ ೩೫ ವರ್ಷಗಳ ಕಾಲ ಕಾಣದ ಹಳ್ಳಿಯಲ್ಲಿ ಪಾಠ ಹೇಳುತ್ತಾ ಹೋದರು… ಬದುಕಿನ ಪಾಠ.

ಒಂದು ದಿನ ಎಕ್ಕುಂಡಿ ಮನೆಯಿಂದ ಶಾಲೆಗೆ ನಡೆದು ಹೋಗುತ್ತಿದ್ದರು.

ಎಳೆ ಹುಡುಗಿಯೊಬ್ಬಳು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನಿಗಾಗಿ ಗಂಜಿ ಮಡಕೆ ಹೊತ್ತು ಹೊರಟಿದ್ದಳು.

ಆಗ ಹಾರಿ ಬಂತು ನೋಡಿ ಅದೇ ಬೆಳ್ಳಕ್ಕಿ ಹಿಂಡು. ಆ ಹುಡುಗಿ ನಡೆಯನ್ನೇ ಮರೆತುಬಿಟ್ಟಳು. ಕಣ್ಣರಳಿಸಿ ಬೆಳ್ಳಕ್ಕಿಗಳ ಹಾರಾಟವನ್ನು ನೋಡುತ್ತಾ ನಿಂತಳು.

ಹಸಿವಿನಿಂದ ತತ್ತರಿಸಿ ಹೋಗಿದ್ದ ರೈತ ಗಂಜಿ ಕಾಣದೆ ಸಿಟ್ಟಿನಿಂದ ’ಮಗೂ ಗಂಜಿ ಎಲ್ಲಿದೆ’ ಎಂದು ಕೂಗಿದ.

ಬೆಚ್ಚಿಬಿದ್ದ ಹುಡುಗಿ ಬೆಳ್ಳಕ್ಕಿಗಳನ್ನು ಬಿಟ್ಟು ಗಂಜಿ ಹೊತ್ತು ಓಡಿದಳು.

ಎಕ್ಕುಂಡಿ ಪೆಚ್ಚಾಗಿದ್ದರು. ಹೌದಲ್ಲಾ ಗಂಜಿಯ ಸಮಸ್ಯೆ ಬೆಳ್ಳಕ್ಕಿಗಳನ್ನು ಕಿತ್ತುಕೊಳ್ಳುತ್ತಾ ಇದೆ ಅನಿಸಿತು

ಅದು ಆಗಿ ಹೋಗಿ ಮೂರು ದಶಕ ಉರುಳಿಹೋಗಿತ್ತು. ಆದರೆ ಅದು ಈಗಿನ್ನೂ ನಡೆದು ಹೋಯಿತೇನೋ ಎನ್ನುವಷ್ಟು ನೋವು ಅವರೊಳಗಿತ್ತು.

‘ಮೋಹನ್, ನಿಸರ್ಗ ಎನ್ನುವುದು ಬೆಳ್ಳಕ್ಕಿಯ ಹಾಗೆ. ಹೊಳೆ, ನೀರು, ಗದ್ದೆ, ಹಸುರು ನೋಡಿ ಖುಷಿಪಡುತ್ತಾ ಇದ್ದಂತೆ ಅವರ ಬೆನ್ನಿನಲ್ಲಿ ಗಂಜಿ ಸಮಸ್ಯೆ ಕಾಡುತ್ತಾ ಇರುತ್ತೆ. ಗಂಜಿಗಾಗಿ ಹೋರಾಟ ಹೆಚ್ಚುತ್ತಾ ಹೋದಂತೆ ನಿಸರ್ಗ ನಮ್ಮಿಂದ ಮರೆಯಾಗುತ್ತಾ ಹೋಗುತ್ತೆ. ಗಂಜಿ ಜೀವನಕ್ಕೆ ಎಷ್ಟು ಅಗತ್ಯವೋ ಅಷ್ಟೇ ಬೆಳ್ಳಕ್ಕಿಗಳೂ ಅವಶ್ಯಕ ಎನ್ನುವ ಒಂದು ಸಮಾಜ ಸೃಷ್ಟಿಯಾಗಬೇಕು’ ಎಂದರು.

ನಾನು ಥೇಟ್ ‘ಕಣಗಲು ಗಿಡದಲ್ಲಿ ಹುಡುಗ’ನಂತಾಗಿ ಹೋಗಿದ್ದೆ.

‘ಬೇಸರದ ಬಿಸಿಲು ಮಧ್ಯಾಹ್ನ ಗೋಪುರದಲ್ಲಿ
ಗಡಿಯಾರ ಬಾರಿಸಿತು ಗಂಟೆಯೊಂದು
ಶಾಲೆ ತಪ್ಪಿಸಿ ಹುಡುಗ, ಗುಡಿಯ ಹಿಂಬದಿಗಿರುವ
ಕಣಗಿಲದ ಗಿಡದಲ್ಲಿ ಕುಳಿತ ಬಂದು
ಇಲ್ಲಿ ಪಾಠಗಳಿಲ್ಲ, ಇಲ್ಲಿ ಸಂಧಿ ಸಮಾಸ
ಇಲ್ಲ ವನಜೂಲಾದ ರೇವು ರೈಲು
ಇಲ್ಲಿ ಸುಳಿಯವು ಕೋನ ತ್ರಿಜ್ಯಗಳ ಹಾವಳಿಯು
ಇಲ್ಲಿ ತೂಕಡಿಕೆಗಳ ದೊಡ್ಡ ಬೈಲು
ಪಾಠಗಳು ನಡೆದಲ್ಲಿ ಮೋಡ ತೇಲುವುದಿಲ್ಲ
ಗಾಳಿ ಬೀಸುವುದಿಲ್ಲ ಎಲೆಗಳಿಲ್ಲ
ಯಾವ ರಾಸಾಯನಿಕ ಕ್ರಿಯೆಗೆ ಒಳಪಡಿಸಿಯೂ
ಮನದಲ್ಲಿ ಸಂತಸದ ಅಲೆಗಲಿಲ್ಲ…

ಎಕ್ಕುಂಡಿಯವರಿಗೆ ಬೆಳ್ಳಕ್ಕಿ ಎನ್ನುವುದು ಅಪಾರ ಮತ್ತು ಅನಂತದ ನಡುವಿನ ಒಂದು ಕೊಂಡಿಯಂತೆ ಕಾಣಿಸುತ್ತಿತ್ತು.

ಕಡಲ ಅಪಾರ, ಆಗಸದ ಅನಂತತೆ ಇವೆರಡನ್ನೂ ಒಂದು ಮಾಡುವಂತೆ ಬೆಳ್ಳಕ್ಕಿ ಜೀಕುತ್ತಿದೆಯೇನೋ ಎಂದು ಸಂಭ್ರಮಪಡುತ್ತಿದ್ದರು.

‘ನನ್ನ ಕಾವ್ಯವೂ ಹಾಗೆ ಅದು ಬೆಳ್ಳಕ್ಕಿಯಂತೆ ಅಪಾರ ಹಾಗೂ ಅನಂತವನ್ನು ಒಂದು ಮಾಡಬೇಕು’ ಎಂದು ಕನಸುತ್ತಿದ್ದರು.

ಎಕ್ಕುಂಡಿ ಎಂದರೆ ಹಾಗೇ ಅವರಿಗೆ ದುಡಿಯುವ ಕೈಗಳಲ್ಲಿ ಅಪಾರ ವಿಶ್ವಾಸವಿತ್ತು. ಸಮಾಜದ ಕಂದರಗಳನ್ನು ಇಲ್ಲವಾಗಿಸುವ ಬಗ್ಗೆಯೂ ಹುಮ್ಮಸ್ಸಿತ್ತು.

ಹಾಗಾಗಿಯೇ ಅವರು ಹೇಳುತ್ತಿದ್ದರು

‘ದೂರದಲ್ಲಿದ್ದವರನ್ನು ಹತ್ತಿರಕೆ ತರಬೇಕು
ಹರಿವ ಹೊಳೆಗೂ ಉಂಟು ಎರಡು
ತೋಳು ನೆಲವನಪ್ಪಿದ ಎರಡು ದಂಡೆ
ಗಳ ಬಾಂಧವ್ಯ ಬೆಸೆಯಬೇಕಲ್ಲವೇ
ನಮ್ಮ ಬಾಳು’

ಎಕ್ಕುಂಡಿಯವರ ಜೊತೆ ನಾನು ಮತ್ತೆ ಮತ್ತೆ ಮಾತನಾಡಿದೆ. ವರ್ಷಗಟ್ಟಲೆ ಸಾಕಷ್ಟು ಕಡೆ ಸುತ್ತಿದೆ.

ಅವರು ಸದಾ ಹೇಳುತ್ತಿದ್ದರು ‘ನನ್ನ ತಾಯಿ ಹಾಡಿದ ಒಂದು ಹಾಡಿನಿಂದ, ನಾನು ಜಗತ್ತನ್ನು ನೋಡುವ ಒಂದು ಕಿಟಕಿಯನ್ನು ರೂಪಿಸಿಕೊಂಡೆ’.

ಜಗತ್ತು ಕಾಣಬೇಕಾದರೆ ಖಂಡಿತಾ ನಮ್ಮೊಳಗೊಂದು ಕಿಟಕಿ ಇರಬೇಕು ಎಂದು ಅವರು ಬಲವಾಗಿ ನಂಬಿದ್ದರು

ಅವರ ‘ಕಿಟಕಿ ಮತ್ತು ಗಾಲಿಗಳು’ ಕವಿತೆಯಲ್ಲಿ ಪರೀಕ್ಷೆಗೆ ತಯಾರಾಗುತ್ತಾ ಕುಳಿತ ಕಾರ್ಲ್ ಮಾರ್ಕ್ಸ್ ಗೆ ಆತನ ಅಮ್ಮ ಕೇಳುತ್ತಾಳೆ-

‘ತಾಯಿ ಅಂದರು: ಮಗೂ, ಚರಿತ್ರೆ ಸುಲಭ
ದೊರೆಗಳ ರಾಣಿಯರ ಹುಟ್ಟು ಸಾವು
ನೆನಪಿಟ್ಟರಾಯಿತು, ಯುದ್ಧಗಳು ಜರುಗಿದ್ದು
ಬರಗಾಲ ಭೂಕಂಪ ತಂದ ನೋವು
ಹುಡುಗ ಕಾರ್ಲ ಅಂದನು: “ಕಂಡಿರುವಿರಲ್ಲವೇ
ಅಲ್ಲಿರುವ ಕೋಟೆ ಕೊತ್ತಳಗಳನ್ನು
ಕಿಟಕಿಯಾಚೆ ಉರುಳಿವೆ ಚರಿತ್ರೆಯ ಗಾಲಿ
ದಾರಿಯಲಿ ಎಸೆದು ಸ್ಮಾರಕಗಳನ್ನು”

ಕಿಟಕಿಯಿರಬೇಕು: ಆಗಲೇ ಕಾಣುವುದು
ಉರುಳುವ ಗಾಲಿಗಳ ಗೂಢ ದೃಶ್ಯ…’

ಎಕ್ಕುಂಡಿಯವರಿಗೆ ಕಿಟಕಿ ಕೇವಲ ಕಿಟಕಿಯಾಗಿರಲಿಲ್ಲ ಅದು ಬದುಕಿನ ಸತ್ಯಗಳನ್ನು ಕಂಡುಕೊಳ್ಳಲು ಇದ್ದ ಕಿಟಕಿಯಾಗಿತ್ತು.

ಆ ಕಿಟಕಿಯ ಮೂಲಕ ಎಕ್ಕುಂಡಿಯವರಿಗೆ ನಂ ೪, ಆಂಡರ್ಸನ್ ಬೀದಿಯಲ್ಲಿ ಮನೆಯ ತೊಟ್ಟಿಲು, ಹಾಸಿಗೆ, ದುಪ್ಪಟಿ, ಲಾಲಿ ಹಾಡುಗಳು ಹರಾಜಾಗುತ್ತಿರುವುದನ್ನು ನೋಡುತ್ತಾ ನಿಂತ ಕಾರ್ಲ್ ಮಾರ್ಕ್ಸ್, ಬಿಕ್ಕುತ್ತಿರುವ ಹೆಂಡತಿ ಹೆಲೆನ್, ‘ಬಂಡವಾಳ’ ಬರೆಯುವುದರಲ್ಲಿ ನಿರತನಾಗಿರುವ ಶ್ರಮಜೀವಿ ಬಂಧುವಿನ ಮನೆಗೆ ಬೆಳಕಾದ ಎಂಗೆಲ್ಸ್..

..ಹೆರಿಗೆ ಆಸ್ಪತ್ರೆಯ ಪೌಡರ್ – ಪಿಯರ್ಸ್ ಪರಿಮಳದ ಹೊದಿಕೆಯಿಂದ ದೂರವಾಗಿ ಎರಡು ಲಾರಿಗಳ ಕೆಳಗೆ ಕಟ್ಟಿರುವ ಸೀರೆ ತುಂಡನ್ನು ಅಪ್ಪಿ ಮಲಗಿರುವ ಚಿನ್ನಮ್ಮನ ಕಂದ, ಎಸೆದ ಬ್ರೆಡ್ಡಿನ ತುಂಡು ಆಯಲು ತೊಟ್ಟಿಯೊಳಗೆ ಇಳಿಯುವ ದುಡಿಯುವ ಕಸುವಿರುವ ಹಸಿದ ಕೈಗಳು..

..ಉಳ್ಳವರ ಎದೆಯಿಂದ ಬಂದಂತಹ ಬೆಣಚುಕಲ್ಲುಗಳ ಮೇಲೆ ಕಾಲಿಟ್ಟು ಗಾಯಗೊಂಡ ಕೂಲಿಕಾರರು, ಕೆಲಸವೇ ಶಿವಧ್ಯಾನವಾದ ದಾಸಿಮಯ್ಯ, ಹಾಲೆಂದೇ ಹಿಟ್ಟು ಕದಡಿದ ನೀರು ಕುಡಿದ ಅಶ್ವತ್ಥಾಮ, ಶ್ರೀಧರ ನಾಮದ ಖಜಾನೆ ತೆರೆಯುವ ಬೀಗದ ಕೈ ಹಿಡಿದು ಹಣದ ಖಜಾನೆಯಿಂದ ಹೊರಬಿದ್ದ ಪುರಂದರದಾಸ…

..ವಿಷದ ಬಟ್ಟಲಿಗೆ ಗುರಿಯಾದ ಸಾಕ್ರೆಟೀಸ್, ಏಸು ಕ್ರಿಸ್ತ, ಜಬಾಲ, ರಂತಿದೇವ, ಪ್ರವಾದಿ, ಡಕಾಯಿತ, ಹಾಗೆಯೇ ಬಕುಲದ ಹೂಗಳನ್ನು ನೋಡಿ ಒಂಡರೆಕ್ಷಣ ನೋವೆಲ್ಲವನ್ನೂ ಮರೆತ ಜೋಡಿ.. ಎಲ್ಲರೂ ಎಕ್ಕುಂಡಿಯವರ ಕಿಟಕಿಯಲ್ಲಿ ಕಂಡವರು…

ಎಕ್ಕುಂಡಿ ತಮಗೆ ಮಾತ್ರ ಕಿಟಕಿಯನ್ನು ರೂಪಿಸಿಕೊಳ್ಳಲಿಲ್ಲ. ತಮ್ಮ ಕವಿತೆಗಳ ಮೂಲಕ ಪ್ರತಿಯೊಬ್ಬರಿಗೂ ಕಿಟಕಿಗಳನ್ನು ರೂಪಿಸಿಕೊಟ್ಟರು.

ಎಕ್ಕುಂಡಿ ಅವರ ಜೊತೆ ಮಾತನಾಡುತ್ತಾ, ಅವರನ್ನು ಓದುತ್ತಾ ಇದ್ದ ನಾನು ಅವರು ಬರೆದ ಬರಹಗಳನ್ನೆಲ್ಲಾ ಸಂಕಲಿಸಿ ಎಕ್ಕುಂಡಿಯವರಿಗೆ ಒಂದು ನಮನ ಸಲ್ಲಿಸಬೇಕೆಂದು ಹೊರಟೆ.

ಆ ಬಗ್ಗೆ ಅವರೊಂದಿಗೆ ಹತ್ತು ಹಲವಾರು ದಿನ ಮಾತನಾಡಿದೆ. ಪುಸ್ತಕ ಅಚ್ಚಿನ ಮನೆಗೂ ಹೋಯಿತು. ಒಳಕ್ಕೆ ಹೋದ ಪುಸ್ತಕ ಹೊರಗೆ ಬರುವುದರೊಳಗಾಗಿ ‘ಎಕ್ಕುಂಡಿ ಇನ್ನಿಲ್ಲ’ ಎಂಬ ಸುದ್ದಿ ಬಂತು.

ಎಕ್ಕುಂಡಿಯವರ ಅಭಿನಂದನಾ ಗ್ರಂಥವಾಗಬೇಕಾಗಿದ್ದ ಕೃತಿ ಅವರ ಸಂತಾಪ ಗ್ರಂಥವಾಗಿ ಹೋಗಿತ್ತು.

ಆಗಲೇ ರಂಜಾನ್ ದರ್ಗಾ ನನಗೆ ರಷ್ಯನ್ ಕವಿ ರಸೂಲ್ ಗಂಚತೋವ್ ಅವರ ಕವಿತೆಯನ್ನು ನೆನಪಿಸಿದ್ದು.

’ಇಲ್ಲಿ ನಮಸ್ಕರಿಸು,
ಇವರು ಮಠಾಧೀಶರಾಗಿರಲಿಲ್ಲ,
ಚಕ್ರವರ್ತಿಯಾಗಿರಲಿಲ್ಲ,
ಕೇವಲ ಮನುಷ್ಯರಾಗಿದ್ದರು’.

ಅಂತಹ ಒಬ್ಬ ’ಕೇವಲ ಮನುಷ್ಯ’ನಿಗೆ ನನ್ನ ನಮಸ್ಕಾರ.

ಗ್ರಹಣದ ಭಯ ಮನೆಗೂ ಮನುಷ್ಯನಿಗೂ ಮನಸ್ಸುಗಳಿಗೂ

0

ಶಿಲ್ಪಾ ತಾರೀಕಟ್ಟೆ


ಗ್ರಹಣದ ಭಯ ಮನೆಗೂ ಮನುಷ್ಯನಿಗೂ ಮನಸ್ಸುಗಳಿಗೂ
ಹಬ್ಬಿಸಿದವರೂ ಯಾರು ಅದೇ ವೇಷ ಹಾಕಿರುವ ಜ್ಯೊತಿಷಿಗಳು.

ನಾವು ತುಂಬಾ ಚಿಕ್ಕ ವರಿದ್ದಾಗು ಯಾವ ಗ್ರಹಣದ ಭಯವೂ ಇರಲಿಲ್ಲ ಅರಾಮಾಗಿ ಆಡಲು ಬಿಡುತ್ತಿದ್ದರು ಈಗ ಮಕ್ಕಳನ್ನು ಒಳಗೆ ಕೂಡಿ ಹಾಕಿದ್ದಾರೆ.

ಭಯಕ್ಕೆ ದಬೆ೯ ಯನ್ನೆ ನೋಡದವರು ದಬೆ೯ ಹುಡುಕಿ ತಂದು ಹುಡುಕಿ ಪ್ರತಿಯೊಂದು ಪದಾರ್ಥಕ್ಕೂ ಹಾಕಿ ಗ್ರಹಣ ಈ ದಿನ ಎಂದು ಕೆಟ್ಟ ದಿನ ಆಚರಿಸುತ್ತಿದ್ದಾರೆ .
ತೋಟದಲ್ಲಿ ಕೆಲಸಕ್ಕೆ ಹೋಗಬೇಕಾದವರೆಲ್ಲ ಮನೆಲೇ ಲಾಕ್ ಆಗಿದ್ದಾರೆ ಗ್ರಹಣ ಶುರುವಾಗುವ ಮುಂಚೆಯೆ ಊಟ ಮುಗಿಸಿದ್ದಾರೆ.

ಹಸು ಕರುಗಳನ್ನು ಕಟ್ಟಿಹಾಕಿ ಮೇವು ಹಾಕಿದ್ದಾರೆ ಆರಾಮಾಗಿ ಮೇಯುವ ಹಸುಗಳೆಲ್ಲ ಮನೆಲಿ ಗ್ರಹಣ ದಿನ ಆಚರಿಸುತ್ತಿದ್ದಾವೆ.

ಬೆಳ್ಳಿಗ್ಗೆ ಎದ್ದು ತೋಟಕ್ಕೆ ಹೋದವರೆಲ್ಲ ನಿಜವಾಗಿಯೂ ತೋಟ ನೋಡಿದರೂ ಇಲ್ಲವೂ ದಬೆ೯ ಮಾತ್ರ ಹುಡುಕಿ ತಂದಿದ್ದಾರೆ .
ಮೊದಲೆಲ್ಲ ಜನ ಅರಾಮಾಗಿದ್ದರು ಭಯ ವಿಲ್ಲದೆ ಮೊದಲೆಲ್ಲ ದಬೆ೯ ಎಂದರೆ ಅದು ಬ್ರಾಹ್ಮಣರ ಸ್ವತ್ತು ಎಂದೆ ಭಾವಿಸಿದ್ದರು.

ಮನೇಯ ಮೇಲಿನ ನೀರಿನ ಟ್ಯಾಂಕ್ ಗಳಿಗೂ ದಬೆ೯ ಯ ದಶ೯ನ ಮಾಡಿಸಿದ್ದಾರೆ.

ಅನಿಸುತ್ತಿದೆ ಮೊದಲಿನ ಜನಗಳೆ ಸ್ವಲ್ಪ ವಿದ್ಯಾವಂತರಂತೆ ವತಿ೯ಸಿತ್ತಿದ್ದರು ಎಂದು ಕಾರಣ ನಿಜವಾಗಿಯೂ ನಾವು ಚಿಕ್ಕವರಿದ್ದಾಗ ಗ್ರಹಣದ ಛಾಯೆ ನಮಗೆ ಬಿದ್ದಿರಲಿಲ್ಲ .

ಅದರ ಭಯವೂ ಹಿರಿಯರು ಹುಟ್ಟಿಸಿರಲಿಲ್ಲ.

ಈಗ ಸಣ್ಣ ಮಕ್ಕಳು ಇಂದು ಗ್ರಹಣ ಅಂತೆ ಗ್ರಹಣ ಎಂದು ಒಳಗೆ ಸೇರುವ ಭಯಕ್ಕೆ ಬಂದು ಬಿಟ್ಟಿದ್ದಾರೆ ಮುಂದಿನ ಪೀಳಿಗೆಯನ್ನು ಮೂಢರಾಗಿಸಿದ್ದಾರೆ.

ಮೊದಲೆಲ್ಲ ಇದರ ಭಯವಿಲ್ಲವೆಂದರೆ ಆಗ ಭಯ ಹುಟ್ಟಿಸುವ ಜ್ಯೆೋತಿಷಿಗಳು ಇರಲಿಲ್ಲ ಅವರನ್ನು ಕೂರಿಸಿ ಗಂಟೆಗಟ್ಟಳೆ ಪ್ರೊಗ್ರಾಮ್ ಕೊಡುವ ಅಂದರೆ ಭಿತ್ತರಿಸುವ ಮಾಧ್ಯಮಗಳು ಇರಲಿಲ್ಲ .

ಊರಿಗೊಂದು ಎರಡು ಟಿ ವಿ ಗಳು ಇರುತ್ತಿದ್ದವೂ. ಈಗ ಇವೆಲ್ಲವೂ ಲಭ್ಯ ಆದರೆ ಯಾವುದರ ಜಾಗ್ರತಿ ಬೇಕೂ ಅದು ಮೂಡಿಸದೆ ಜನರನ್ನು ಹೆದರುವಂತೆ ನೆಮ್ಮದಿ ಇಲ್ಲದಂತೆ ಮಾಡುತ್ತಿವೆ.

ಜನರಲ್ಲೂ ಇದು ಮೂಢ ನಂಬಿಕೆ ಎನ್ನುವ ಸ್ಪಷ್ಠತೆ ಇದೆ ಆದರೂ ಆ ಗುರೂಜಿ ಹೇಳಿದರೂ ಈ ಗುರೂಜಿ ಹೇಳಿದರೂ ಎಂದು ಅವರು ಹೇಳಿದ್ದೆಲ್ಲ ಮಾಡಿಕೊಂಡಿದ್ದಾರೆ .

ಆದರೆ ಮತ್ತೆ ಅವರೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ

ಪಕ್ಷಿ ಪ್ರಾಣಿ ತೆಂಗಿನ ಮರ ಅದರಲ್ಲಿನ ಎಳನೀರು ಕಾಯಿಗೆ ಗ್ರಹಣ ಬಿದ್ದಿಲ್ಲವ ಎಂದು ಪ್ರಶ್ನೆ ಹಾಕಿಕೊಳ್ಳುತ್ತ ನಾವು ಮೂಡರಲ್ಲ ಆದರೆ ಭಯಕ್ಕೆ ಮೂಢರಂತೆ ವತಿ೯ಸುತ್ತಿದ್ದಾರೆ ಎಂದು ಗೊತ್ತಾಗದಂತೆ ತಿಳಿಸುತ್ತಿದ್ದಾರೆ…

ಇದನೆಲ್ಲ ವಿರೋಧಿಸುವವರನ್ನು ಬಲವಂತವಾಗಿ ಮೂಢತೆಗೆ ತಳ್ಳುತ್ತಿದ್ದಾರೆ. ಮುಂದೊದು ದಿನ ಗ್ರಹಣದ ದಿನವನ್ನು ವ್ಯೆಜ್ಞಾನಿಕವಾಗಿ ನಂಬುವಂತಾಗಲಿ ಅದರ ಕೂತೂಹಲಗಳನ್ನು ವೀಕ್ಷಿಸುವಂತಾಗಲಿ ಮಕ್ಕಳನ್ನು ಭಯದಿಂದ ಹೊರತರುವಂತಾಗಲಿ.ಮೂಢನಂಬಿಕೆಗಳಿಂದ ಆಚೆ ಬರುವಂತಾಗಲಿ.


ಗ್ರಹಣದಲ್ಲಿ ಬರೀ ಗಣ್ಣಿನಿಂದ ಸೂರ್ಯ ವೀಕ್ಷಣೆ ಅಪಾಯಕಾರಿ. ಬರೀಗಣ್ಣಿನಿಂದ‌ ವೀಕ್ಷಿಸಬಾರದು.

ತುಮಕೂರು ಹಳ್ಳಿಗಳನ್ನು ಆವರಿಸುತ್ತಿದೆ ಕೊರೊನಾ: ಇನ್ಮುಂದೆ ಮಾಸ್ಕ್ ಹಾಕದರಿಗೆ ದಂಡ

ತುಮಕೂರು: ಜಿಲ್ಲೆಯಲ್ಲಿ ಹಳ್ಳಿಗತ್ತ ಕೊರೊನಾ ಸೋಂಕು ಹರಡುತ್ತಿದ್ದು, ಜನರು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ.

ಮಾತನಾಡುವಾಗ ಪರಸ್ಪರ ಮಾಸ್ಕ್ ಧರಿಸಬೇಕು ಹಾಗಾ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೇಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಜನರಿಗೆ ಜಿ.ಪಂ‌. ಸಿಇಒ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಮುಖಗವಸು ಧರಿಸುವುದು, ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ತೊಳೆಯುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ರೋಗದ ನಿಯಂತ್ರಣ ಮಾಡುವಲ್ಲಿ ಸಹಕರಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮನವಿ ಮಾಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಮುಖವಾಗಿ ಪರಸ್ಪರ ಸಂಪರ್ಕ ಹಾಗೂ ವೈಯಕ್ತಿಕ ಶುಚಿತ್ವದ ಕೊರತೆಯಿಂದ ಬಹು ಬೇಗ ಹರಡುತ್ತಿದ್ದು, ರೋಗದ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇರುವುದು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ/ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ವ್ಯಕ್ತಿಗಳಿಗೆ ಒಂದು ನೂರು ರೂಪಾಯಿಗಳಂತೆ ದಂಡ ವಿಧಿಸಲು ಗ್ರಾಮಪಂಚಾಯತಿ ಗಳಿಗೆ ಸೂಚನೆ ನೀಡಲಾಗಿದೆ. ಮಾಸ್ಕ್ ದಿನಾಚರಣೆ ಮೂಲಕ ಮಾಸ್ಕ್ ಧರಿಸಲು ಅರಿವು ಮೂಡಿಸಲಾಗಿದೆ.

ಸಾರ್ವಜನಿಕರು ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ, ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ಶುಚಿಗೊಳಿಸುವ, ಅಶುಚಿಯಾದ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳದಂತೆ ಜಾಗರೂಕತೆ ವಹಿಸುವುದರಿಂದ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದೆಂದು ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಲಹೆ ನೀಡಿದ್ದು, ಸಾರ್ವಜನಿಕರೆಲ್ಲರೂ ಈ ಸಲಹೆಗಳನ್ನು ತಪ್ಪದೇ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.

ಸಿದ್ದಗಂಗಾ ಮಠದ ವಿದ್ಯಾರ್ಥಿಗೆ ಕೊರೊನಾ ಇಲ್ಲ

Publicstory.in


Tumkuru: ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯವನ್ನೇ ಭಯ ಪಡುವಂತೆ ಮಾಡಿದ ಸಿದ್ದಗಂಗಾ ಮಠದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿಗೆ ಕೊನೆಗೂ ತೆರೆ ಬಿದ್ದಿದೆ.

ಮಠದ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿಲ್ಲ ಎಂದು ಮಠಾದೀಶ ಸಿದ್ದಲಿಂಗ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ಪ್ರತ್ಯೇಕ ವಿಡಿಯೊ ಮೂಲಕ ಹೇಳಿಕೆ ನೀಡಿದ್ದಾರೆ.

ಪರೀಕ್ಷೆ ಬರೆಯಲು ರಾಯಚೂರಿನಿಂದ ಈ ವಿದ್ಯಾರ್ಥಿ ಬಂದಿದ್ದ. ಸೋಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರಬಹುದು ಎಂಬ ಕಾರಣಕ್ಕಾಗಿ ಆತನನ್ನು ಕ್ವಾರಂಟೈನ್ ಮಾಡಲಾಗಿತ್ತು.

ಸೋಂಕಿನ ವಿಚಾರದಲ್ಲಿ ಜಿಲ್ಲಾಡಳಿತ ನಿನ್ನೆಯಿಂದಲೂ ಅಧಿಕೃತವಾಗಿ ಹೇಳಿರಲಿಲ್ಲ. ಇಂದು ಜಿಲ್ಲಾಧಿಕಾರಿ ಸ್ವಯಂ ಹೇಳಿಕೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪರೀಕ್ಷೆ ಬರೆಯುವ ಮಕ್ಕಳಿಗೆ ನಿರಾಂತಕ.

ತುಮಕೂರು 3, ತಿಪಟೂರಿನಲ್ಲಿ ಒಬ್ಬರಿಗೆ ಕೊರೊನಾ: ವಿದೇಶದಿಂದ ಬಂದವನಿಗೂ ಸೋಂಕು

Publicstory.in


ತುಮಕೂರು: ಲಾಕ್ ಡೌನ್ ತೆರವಿನ ಬಳಿಕ ಜಿಲ್ಲೆಯಲ್ಲಿ ಕೊರೊ‌ನಾ ಸೋಕು ರುದ್ರತಾಂಡವ ಆಡುವ ಲಕ್ಷಣಗಳು ಕಾಣುತ್ತಿದ್ದು, ಶುಕ್ರವಾರ ಒಂದೇ ದಿನ ನಾಲ್ಕು ಮಂದಿಗೆ ಸೋಂಕು ತಗುಲಿದೆ.

ತುಮಕೂರು ತಾಲ್ಲೂಕಿನಲ್ಲಿ ಎರಡು ಗ್ರಾಮಗಳಲ್ಲಿ ಇಬ್ಬರಿಗೆ ಹಾಗೂ ತುಮಕೂರು ನಗರದ ಇಪ್ಪತ್ತೈದು ವರ್ಷದ ಒಬ್ಬ ಯುವಕನಿಗೆ ಸೋಂಕು ತಗುಲಿದೆ.

ತಿಪಟೂರಿನಲ್ಲಿ ಮಹಿಳೆಯೊಬ್ಬರಿಗೆ ಸೋಂಕು ತಗುಲಿದ್ದು, ಇವರು ನೆಲಮಂಗಲದ ಸೋಂಕಿತ ಮಹಿಳೆಯೊಂದಿಗೆ ಸಂಪರ್ಕದಿಂದ ಬಂದಿದೆ.

ತಿಪಟೂರಿನ ಮಹಿಳೆ ತಮಿಳುನಾಡಿಗೆ ಹೋಗಿ ಬಂದಿದ್ದರು.

ತುಮಕೂರು ನಗರದ ಯುವಕ ವಿದೇಶದಿಂದ ಬಂದಿದ್ದು ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರನ್ನು ತುಮಕೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಆಯಾ ಪ್ರದೇಶಗಳನ್ನು ಸೀಲ್ಡ್ ಡೌನ್ ಮಾಡಲಾಗಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

ಒಗಟೊಂದು ಹೇಳತೀವಿ ಕೇಳಿರಣ್ಣಾ, ಕುಂತ ಮಂದಿ ಮನವಿಟ್ಟು ಹೇಳೀರಣ್ಣಾ..

ಜಿ ಎನ್ ಮೋಹನ್


‘A.K.47 ಅಂದ್ರೇನು?’ ಅಂದೆ.

ನನ್ನ ಎದುರು ಐದು ವಿಶ್ವವಿದ್ಯಾಲಯಗಳ ಸುಮಾರು 20 ಮಂದಿ ಕುಳಿತಿದ್ದರು.

ಕಣ್ಣು ರೆಪ್ಪೆಮಿಟುಕಿಸುವುದರೊಳಗೆ ‘ಶಸ್ತ್ರಾಸ್ತ್ರ ಸಾರ್’ ಅಂತ ಒಕ್ಕೊರಲಿನಿಂದ ಗುಂಡೇಟು ಹೊಡೆದ ಹಾಗೇ ಉತ್ತರ ಕೊಟ್ಟರು. ‘ಇಷ್ಟೂ ಗೊತ್ತಿಲ್ವ’ ಅನ್ನೋ ಗೆದ್ದ ನಗು ಅವರ ಮುಖದಲ್ಲಿ ಕುಣೀತಿತ್ತು.

‘ಓ.ಕೆ. A.K.47 ಅಂತ ಯಾಕೆ ಹೆಸರು ಬಂತು? ಅಂದೆ.

ಆಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. A.K.47 ಗನ್ ಅನ್ನೋದು ಗೊತ್ತು. ಆದ್ರೆ ಅದರ ಹೆಸರು ಇಟ್ಟದ್ದು ಯಾರಪ್ಪಾ? ಅಂತ ತಲೆ ಕೆರೆದುಕೊಳ್ಳತೊಡಗಿದರು. ರೂಮಿನಲ್ಲಿ ನಿಶ್ಯಬ್ದ ವಾತಾವರಣ.

ಎಕೆ 47 ಅಂದ್ರೆ…? ಅನ್ನುವುದು ಆ ಕ್ಷಣಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಹೋಗಿತ್ತು.

ಅದು ಮೀಡಿಯಾ ವಿದ್ಯಾರ್ಥಿಗಳ ದಂಡು. ತಮ್ಮ ಎರಡು ವರ್ಷದ ಕಾಲೇಜ್ ಲೈಫ್ ಮುಗಿಸಿ ಇನ್ನೇನು ನ್ಯೂಸ್ ರೂಂ ಪ್ರವೇಶಿಸಬೇಕಾಗಿದ್ದವರು.

ಈಗ ಸ್ಟೂಡೆಂಟ್ ಗಳಿಗೆ ಪೇಪರ್ ಮಾಡುವುದು ಗೊತ್ತು. ಕ್ಯಾಮರಾ ಹಿಡಿಯುವುದು ಗೊತ್ತು. ಎಲೆಕ್ಟ್ರಾನಿಕ್ ಮೀಡಿಯಾದ ಓಟಕ್ಕೆ ತಕ್ಕಂತೆ ಸ್ಕ್ರಿಪ್ಟ್ ಬರೆಯುವುದು ಗೊತ್ತು.

ಮೌಸ್ ಹಿಡಿದ ಹತ್ತೇ ನಿಮಿಷದಲ್ಲಿ ವಾಹ್! ಎನಿಸುವ ಗ್ರಾಫಿಕ್ಸ್ ರೂಪಿಸುವುದು ಗೊತ್ತು. ಪಟಪಟ ಅರಳು ಹುರಿದಂತೆ ಮಾತನಾಡುವುದೂ ಗೊತ್ತು.

ಪಿಟಿಸಿ ಕೊಡಬೇಕೆಂದರೆ ಬ್ಯಾಕ್ ಗ್ರೌಂಡ್ ಹೇಗಿರಬೇಕು, ನಾನು ಹೇಗೆ ಕಾಣಬೇಕು, ಕ್ಯಾಮರಾದಲ್ಲಿ ಯಾವ ಡ್ರೆಸ್ ಚೆನ್ನಾಗಿ ಕಾಣುತ್ತೆ ಅಂತಲೂ ಗೊತ್ತು.

ಆದರೆ ಗೊತ್ತಿಲ್ಲದಿರುವುದು ಇದೇ. ಪತ್ರಕರ್ತನಿಗೆ ಎಲ್ಲವೂ ಗೊತ್ತಿರಬೇಕು ಎನ್ನುವುದು. ಎಲ್ಲವೂ ಅಂದರೆ ಅಕ್ಷರಶಃ ಎಲ್ಲವೂ ಗೊತ್ತಿರಬೇಕು.

ಆಕಾಶದ ಬಣ್ಣ ನೀಲಿ ಏಕೆ? ನೆಲ್ಸನ್ ಮಂಡೇಲಾ ಜೈಲಲ್ಲಿ ಇದ್ದದ್ದು ಎಷ್ಟು ವರ್ಷ? ರಷ್ಯಾದಲ್ಲಿ ವಿದಾಯ ಅನ್ನುವುದಕ್ಕೆ ಏನು ಹೇಳುತ್ತಾರೆ? ನೈಜೀರಿಯಾದಲ್ಲಿ ಎಣ್ಣೆ ಕಂಪನಿಗಳು ಅಷ್ಟೊಂದಿರುವುದು ಏಕೆ?

‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಬರೆದ ವರ್ಷ ಯಾವುದು? ವಿ.ಕೃ.ಗೋಕಾಕರಿಗೂ, ಗೋಕಾಕ್ ಚಳವಳಿಗೂ ಇರುವ ಸಂಬಂಧ ಏನು?

ಶಂಕರ್ ನಾಗ್ ಸತ್ತ ಸ್ಥಳ ಯಾವುದು? ನರಗುಂದದಲ್ಲಿ ಗುಂಡೇಟು ಬಿದ್ದದ್ದು ಯಾವಾಗ?

ಜೆ.ಎಚ್.ಪಟೇಲ್ ಹೆಸರಲ್ಲಿ ಜೆ.ಎಚ್ ಎಂದರೆ ಏನು? ಶ್ರೀನಿವಾಸ ಜಿ ಕಪ್ಪಣ್ಣ ಅವರ ಹೆಸರಿಗೆ ಕಪ್ಪಣ್ಣ ಎನ್ನುವುದು ಸೇರಿದ್ದು ಹೇಗೆ? ಹೀಗೆ…

ಒಂದು ಸಲ ಹೀಗಾಯ್ತು.

ಮಂಗಳೂರಿನ ‘ಪ್ರಜಾವಾಣಿ’ ಕಚೇರಿಯ ಫೋನ್ ಸದ್ದು ಮಾಡ ತೊಡಗಿತು. ನಾನು ಫೋನ್ ಎತ್ತಿಕೊಂಡೆ.

ಆ ಕಡೆ ಇದ್ದವರು ‘ಸಾರ್, ಒಂದು ಪ್ಲೇನ್ ರೇಟ್ ಎಷ್ಟು ಸಾರ್’ ಅಂದ್ರು.

ನನ್ನ ಕಿವಿ ನನಗೇ ಕೇಳದಂತಾಯಿತು. ಮತ್ತೆ ‘ಹಾಂ.. ಏನಂದ್ರಿ?’ ಅಂದೆ. ಒಂದು ವಿಮಾನದ ಬೆಲೆ ಎಷ್ಟು? ಅಂತ ಪ್ರಶ್ನೆ ಬಂತು.

ನಾನು ತಕ್ಷಣ ಗರಂ ಆದವನೇ ‘ಇದೇನು ಜೆಟ್ ಏರ್ ವೇಸ್ ಆಫೀಸಾ. ಪ್ರಜಾವಾಣಿ ಪೇಪರ್ ಕಚೇರಿ’ ಎನ್ನಬೇಕೆಂದುಕೊಂಡವನು ಬಾಯಿ ಮುಚ್ಚಿಕೊಂಡೆ.

ಹೌದಲ್ಲವಾ ಅವರು ಈ ಪ್ರಶ್ನೆಯ್ನು ಇನ್ನಾರಿಗೆ ಕೇಳಲು ಸಾಧ್ಯ? ಒಂದು ಬ್ಯಾಂಕಿಗೋ, ಎಲ್ ಐಸಿ ಕಚೇರಿಗೋ, ಕನ್ನಡ ಸಂಸ್ಕೃತಿ ಇಲಾಖೆಗೋ, ಹಳ್ಳಿ ಮನೆ ಹೋಟೆಲ್ಲಿಗೋ ಫೋನ್ ಮಾಡಿ ಈ ವಿಷಯ ಕೇಳಲು ಸಾಧ್ಯವೇ?

ರಾಜ್ ಕುಮಾರ್ ಅಪಹರಣವಾದಾಗ ನಾನು ಮಂಗಳೂರಿನಲ್ಲಿ, ‘ಈಟಿವಿ’ಯಲ್ಲಿದ್ದೆ, ಒಂದು ಮಣ ಫೋನ್ ಗಳ ಸುರಿಮಳೆ. ‘ಹೌದಾ, ಕಿಡ್ನಾಪ್ ಆಯ್ತಾ’ ಅಂತ.

‘ಇದೇನು ಗಾಜನೂರಲ್ಲ, ನಾನು ವೀರಪ್ಪನ್ ಅಲ್ಲ, ನನಗ್ಯಾಕೆ ಕೇಳೋದು’ ಅಂತ ನಾನು ಫೋನ್ ಕುಕ್ಕಲು ಸಾಧ್ಯವಿಲ್ಲ,

ಮತ್ತೊಂದು ಬಾರಿ ‘ಪ್ರಜಾವಾಣಿ’ ಬೆಂಗಳೂರು ಕಚೇರಿಯಲ್ಲಿದ್ದೆ. ಒಂದೇ ಸಮ ಫೋನ್ ಗಳು ಆರಂಭವಾದವು. ‘ಇಂದಿರಾನಗರದಲ್ಲಿ ನೆಲ ಅದುರಿದೆಯಂತೆ ಹೌದಾ? ಅಂತ.

ಫೋನ್ ಮಾಡಿದವರಿಗೆ ಭೂಕಂಪ ಆಗಿದೆ ಅನ್ನೋ ಭಯ. ‘ನಮ್ಮ ಆಫೀಸ್ ಇರೋದು ಎಂ.ಜಿ.ರೋಡ್ ನಲ್ಲಿ, ಇಂದಿರಾನಗರದಲ್ಲಿಲ್ಲ’ ಅಂತ ಫೋನ್ ಕಟ್ ಮಾಡಲು ಸಾಧ್ಯವಿಲ್ಲ.

‘ಯಾವುದೇ ಮೀಡಿಯಾ ಆಫೀಸ್ ಗೆ ಕೇಳಿ ನಾಳೆ ಬಂದ್ ಅಂತ ಗೊತ್ತಾದರೆ ಸಾವಿರಾರು ಫೋನ್ ಕಾಲ್ ಗಳ ಸುರಿಮಳೆ ಆಗುತ್ತೆ. ‘ನಾಳೆ ಸ್ಕೂಲ್ ಗೆ ರಜಾ ಕೊಟ್ಟಿದ್ದಾರಾ..?’ ಅಂತ. ಹಾಗಂತ ಪ್ರಜಾವಾಣಿ ಆಫೀಸೇನು ಡಿಡಿಪಿಐ ಮೌತ್ ಪೀಸಾ..?

ಪತ್ರಕರ್ತ ಎಂದರೆ ಮಾಹಿತಿಯ ಕಣಜ. ನಡೆದಾಡುವ ವಿಕಿಪೀಡಿಯಾ, ಮೀಡಿಯಾ ಆಫೀಸ್ ಎಂದರೆ ಕಣ್ಣೆದುರಿಗಿರುವ ಗೂಗಲ್ ಸರ್ಚ್. ಪತ್ರಕರ್ತನಾದವನಿಗೆ ಸೈನ್ಸ್ ಟು ಸೆಕ್ಸ್ ಎಲ್ಲವೂ ಗೊತ್ತಿರಬೇಕು ಅಂತ ಜಗತ್ತು ಭಾವಿಸುತ್ತದೆ. ಎಲ್ಲದ್ದಕ್ಕೂ ಕಾಮೆಂಟು ಕೊಡಬೇಕು ಅಂತ ಬಯಸುತ್ತೆ. ಪತ್ರಕರ್ತನ ಕೆಲಸವೂ ಹಾಗಿರುತ್ತದೆ.

ನ್ಯೂಸ್ ಡೆಸ್ಕ್ ನಲ್ಲಿ ಕುಳಿತ ಜರ್ನಲಿಸ್ಟ್ ಕಥೆ ನೋಡಿ.

ನೆಲ್ಸನ್ ಮಂಡೇಲ ಜೈಲುಗಳಿಂದ ಹೊರಬಂದಾಗ ಆತ ಪೊಲಿಟಿಕಲ್ ಕಾಮೆಂಟೇಟರ್, ವಿಶ್ವ ಕಪ್ ಜರುಗುವಾಗ ಸ್ಪೋರ್ಟ್ ಗೊತ್ತಿರುವಾತ. ರಿಜರ್ವ್ ಬ್ಯಾಂಕ್ ದಿಢೀರನೆ ಬಡ್ಡಿ ದರ ಹೆಚ್ಚಳಕ್ಕೆ ಮುಂದಾದಾಗ ಫೈನಾನ್ಶಿಯಲ್ ಎಕ್ಸ್ ಪರ್ಟ್.

9 ಗಂಟೆಯ ನಾಟಕ ನಡೆಯುತ್ತದೆ ಎನ್ನುವಾಗ ಥಿಯೇಟರ್ ಕ್ರಿಟಿಕ್. ಸೃಜನಾ ಕಾಯ್ಕಿಣಿಯ ರಂಗ ಪ್ರವೇಶ ಇದ್ದಾಗ ಡ್ಯಾನ್ಸ್ ಕ್ರಿಟಿಕ್.

ಒಂದು ಮೀಡಿಯಾ ಕೆಲಸ ಎನ್ನುವುದು ಗೋಳದ ಮೇಲೊಂದು ಸುತ್ತು ಬಂದಂತೆ. ಅಷ್ಟೇ ಅಲ್ಲ, ಪಾತಾಳದಿಂದ ಆಕಾಶಕ್ಕೆ ನೆಗೆದಂತೆ.

ಹೀಗೆ ಗೊತ್ತಿದ್ದರಿಂದಲೇ ‘ಪ್ಲೇನ್ ರೇಟ್ ಎಷ್ಟು’ ಅಂತ ಫೋನ್ ಬಂದಾಗ ನಾನು ತೀರಾ ಸಿಡಿಮಿಡಿಗೊಳ್ಳದೇ ಇದ್ದದ್ದು.

‘ಹತ್ತು ನಿಮಿಷ ಬಿಟ್ಟು ಫೋನ್ ಮಾಡಿ, ತಿಳಿಸುತ್ತೀನಿ’ ಅಂದೆ.

ಅವರು ಫೋನ್ ಇಟ್ಟ ತಕ್ಷಣ ನಾನ್ ಜೆಟ್ ಏರ್ ವೇಸ್ ಕಚೇರಿಗೆ ಫೋನ್ ತಿರುಗಿಸಲು ಆರಂಭಿಸಿದೆ.

ಅತ್ತಲಿನ ದನಿ ‘ಎಲ್ಲಿಗೆ ಟಿಕೆಟ್ ಬುಕ್ ಮಾಡಬೇಕು’ ಅಂತ ಕೇಳಿತು. ನಾನು ‘ಟಿಕೆಟ್ ಬುಕ್ಕಿಂಗ್ ಬೇಡ ಒಂದು ಪ್ಲೇನ್ ರೇಟು ಎಷ್ಟು’ ಎಂದೆ. ಆ ಕಡೆ ಇದ್ದ ಹುಡುಗಿ ಮೂರ್ಛೆ ಹೋಗುವುದೊಂದೇ ಬಾಕಿ ಇತ್ತೇನೋ.

‘ಇಲ್ಲಿ ವಿಮಾನ ಮಾರುವುದಿಲ್ಲ ಸಾರ್, ವಿಮಾನದ ಟಿಕೆಟ್ ಮಾರ್ತೀವಿ’ ಅಂದಳು.

ನಾನು ನನ್ನ ಪರಿಸ್ಥಿತಿ ವಿವರಿಸಿದೆ. ಪಾಪ ಏನೆಂದುಕೊಂಡಳೋ ಏನೋ ‘ಹತ್ತು ನಿಮಿಷ ಬಿಟ್ಟು ಫೋನ್ ಮಾಡಿ ಸಾರ್’ ಅಂತ ಫೋನ್ ಕಟ್ ಮಾಡಿದಳು.

ಅಲ್ಲಿಂದ ಆಕೆ ಫೋನ್ ತಿರುಗಿಸಿದ್ದು ತನ್ನ ಮುಂಬೈ ಹೆಡ್ ಆಫೀಸ್ ಗೆ. ಪ್ರಶ್ನೆ ನೇರ. ‘ಒಂದು ವಿಮಾನದ ರೇಟ್ ಎಷ್ಟು’ ಅಂತ. ಅಲ್ಲಿದ್ದವರ ಸಿಟ್ಟು ನೆತ್ತಿಗೇರಿರಬೇಕು. ಅಲ್ಲಾ ಟಿಕೆಟ್ ಮಾರು ಅಂತ ಇವಳನ್ನ ಕೂರಿಸಿದ್ರೆ ಇವಳು ವಿಮಾನವನ್ನೇ ಮಾರೋದಿಕ್ಕೆ ಕುಳಿತಿದ್ದಾಳಲ್ಲಾ ಅಂತ.

ಅವರು ಗದರುವ ಮುನ್ನವೇ ಆಕೆ ಹೀಗೀಗೆ ಅಂತ ಪರಿಸ್ಥಿತಿ ವಿವರಿಸಿದಳು.

ಮತ್ತೆ ನನ್ನ ಮುಂದಿನ ಫೋನ್ ಟ್ರಿಣ್ ಎಂದಿತ್ತು. ಅದೇ ಹುಡುಗರು. ವಿಮಾನದ ರೇಟು ಇಷ್ಟು ಅಂತ ಹೇಳಿದೆ.

ನನ್ನ ಕುತೂಹಲವೂ ಏರಿತ್ತು. ‘ಅದು ಸರಿ ಈ ಇನ್ ಫರ್ಮೇಶನ್ ನಿಮಗೆ ಯಾಕೆ ಬೇಕಿತ್ತು?’ ಅಂದೆ.

ಆ ಹುಡುಗರು ‘ಸಾರ್! ಕೆನರಾ ಕಾಲೇಜಿನ ಸ್ಟೂಡೆಂಟ್ಸ್ ನಾವು. ಹರಟೆ ಹೊಡೀತಾ ಕೂತಿದ್ವಿ, ಮಾತಾಡ್ತಾ ಇರುವಾಗ ಈ ವಿಷಯ ಬಂತು. ಬೆಟ್ಟಿಂಗ್ ಕಟ್ಟಿದ್ವಿ, ನ್ಯೂಸ್ ಪೇಪರ್ ನವರಿಗೆ ಎಲ್ಲಾ ಗೊತ್ತಿರುತ್ತಲ್ವಾ ಸಾರ್ ಅದಕ್ಕೇ ನಿಮಗೆ ಫೋನ್ ಮಾಡಿದ್ವಿ’ ಅಂದ್ರು.

ಹೌದಲ್ವಾ! ಅನಿಸಿತು. ಅವರ ಪ್ರಶ್ನೆಯಿಂದ ಅವರೂ, ಜೆಟ್ ಏರ್ ವೇಸ್ ನ ಆ ಹುಡುಗಿಯೂ, ನಾನೂ… ಮಾಹಿತಿ ಶ್ರೀಮಂತರಾಗಿದ್ದೆವು. ನಿನ್ನೆಗಿಂತ ಇವತ್ತು ಒಂದು ಮಾಹಿತಿ ನಮಗೆ ಹೆಚ್ಚು ಗೊತ್ತಾಗಿತ್ತು.

ಈ ಕಥೆ ಹೇಳಿ ನಾನು ಮುಂದಿದ್ದವರನ್ನು ನೋಡಿದೆ. ಅವರಿಗೂ ಹೌದಲ್ಲಾ ಎನಿಸಿರಬೇಕು.

ಈಗ ಹೇಳಿ ನೋಡೋಣ ಎಕೆ 47ಗೆ ಆ ಹೆಸರು ಏಕೆ ಬಂತು ಅಂದೆ.

ತಕ್ಷಣ ಹಿಂದಿನ ಸಾಲಿನಲ್ಲಿದ್ದ ಹುಡುಗನೊಬ್ಬ ತನ್ನ ಮೊಬೈಲ್ ಬಟನ್ ಒತ್ತಿದ. ಇಂಟರ್ ನೆಟ್ ಕನೆಕ್ಟ್ ಆಯಿತು. ಗೂಗಲ್ ಸರ್ಚ್ ನಲ್ಲಿ ಎ.ಕೆ-47 ಅಂತ ಎಂಟರ್ ಮಾಡಿದ. ವಾಹ್! ಎನ್ನುವ ಉದ್ಘಾರ ಹೊರಬಿತ್ತು.

‘ಆಟೋಮ್ಯಾಟಿಕ್ ರೈಫಲ್’ ಕಾರಣದಿಂದಾಗಿ ‘ಎ’ ಅದನ್ನು ಕಂಡುಹಿಡಿದಿದ್ದು ‘ಕಲಾಶ್ನಿಕೋವ್’ ಆದ್ದರಿಂದ ‘ಕೆ’ 1947ರಲ್ಲಿ ಇದನ್ನು ಕಂಡುಹಿಡಿದಿದ್ದರಿಂದ ’47’ ಅಂತ ಉತ್ತರ ಕೊಟ್ಟ.

ಕ್ಲಾಸಿನಲ್ಲಿದ್ದವರಿಗೆಲ್ಲಾ ಮಿಂಚು ಹೊಡೆದಂತಾಯಿತು. ಅರೆ! ಇಷ್ಟೆಲ್ಲಾ ಕಥೆ ಇರುತ್ತಾ ಅಂತ. ಅಷ್ಟಕ್ಕೇ ನಿಲ್ಲಲಿಲ್ಲ. ಮಾರನೆಯ ದಿನ ಎಕೆ 47ನ ಬುಲೆಟ್ ಎಷ್ಟು ವೇಗದಲ್ಲಿ ಹೋಗುತ್ತೆ? ಎಕೆ 47 ನಂತರ ಬಂದಿರುವ ಮಾಡೆಲ್ ಯಾವುದು? ಎಕೆ 47 ರೇಟ್ ಎಷ್ಟು? ಅದರ ಉದ್ದ ಅಗಲ ಆಳ ಎಲ್ಲವನ್ನೂ ಬಗೆದು ಕೂತಿದ್ದರು.

ಅಲ್ಲಿಂದ ಶುರುವಾಯಿತು ನೋಡಿ ಎಲ್ಲವನ್ನು ತಿಳಿಯುವ ಆಟ.

‘ಶೂನ್ಯವೇಳೆ’ ಎಂದರೇನು? ಅಸೆಂಬ್ಲಿಯಲ್ಲಿ ಯಾವಾಗ ಈ ಶೂನ್ಯವೇಳೆ ಇರುತ್ತೆ? ಇದಕ್ಕೆ ಶೂನ್ಯವೇಳೆ ಅಂತಲೇ ಯಾಕೆ ಹೆಸರಿಟ್ಟರು?

ಈಗ ಯಾವುದೂ ಪಾಠವಾಗಿರಲಿಲ್ಲ ಆಟವಾಗಿ ಹೋಗಿತ್ತು.

ಅಂದೂ ಹೀಗೇ ಆಗಿತ್ತು. ಬೆಸ್ಟ್ ಕ್ರೈಂ ರಿಪೋರ್ಟರ್ ಅಂತ ಬಣ್ಣಿಸಿಕೊಳ್ಳುತ್ತಿದ್ದ ರಿಪೋರ್ಟರ್ ಒಬ್ಬರು ‘ಈಟಿವಿ’ ಸೇರಲು ಬಯಸಿ ನಮ್ಮೆದುರು ಹಾಜರಾಗಿದ್ದರು.

ಆಗ ತಾನೇ ಬೆಂಗಳೂರಿನಲ್ಲಿ Rdx ಪತ್ತೆಯಾಗಿತ್ತು. Rdx ಅಂದ್ರೇನು ಅಂತ ಕೇಳಿದೆವು. ಒಂದೇ ಪ್ರಶ್ನೆಗೆ ಚಿತ್. ಇದನ್ನು ಸೈಕ್ಲೋನೈಟ್, ಹೆಕ್ಸೋಜೆನ್, T4 ಅಂತಾ ಕರೀತಾರೆ ಅನ್ನೋದು ಗೊತ್ತಿರಲಿಲ್ಲ.

ಇನ್ನೊಬ್ಬರು ಬೆಸ್ಟ್ ಎನ್ವಿರಾನ್ಮೆಂಟ್ ರಿಪೋರ್ಟರ್ ನಮ್ಮ ಮುಂದಿದ್ದರು. ರಾಮೋಜಿರಾವ್ ಅವರು ಕೇಳಿದ್ದು ಇಷ್ಟೇ.. ಬೆಂಗಳೂರಿನಲ್ಲಿ ಪರಾಗರೇಣು ಪ್ರಮಾಣ ಎಷ್ಟು? ಅಂತ.

ಅವರೂ ಚಿತ್. ಆನಂತರ ನಾನು ಕರ್ನಾಟಕದಲ್ಲಿ ಎಷ್ಟು ಜಿಲ್ಲೆ ಇದೆ? ಎಷ್ಟು ಜನ ಶಾಸಕರು? ಎಷ್ಟು ಜನ ಎಂಪಿಗಳು? ಎನ್ನುವ ಸಿಂಪಲ್ ಪ್ರಶ್ನೆ ಹಾಕುತ್ತಾ ಬಂದಿದ್ದೇನೆ.

ಮೊನ್ನೆ ಹಾಗೇ, ಇದೇ ಮೀಡಿಯಾ ಸ್ಟೂಡೆಂಟ್ ಗಳಿಗೆ ‘ಆಕ್ಟೋಪಸ್ ಅಥವಾ ಅಷ್ಟಪದಿಗೆ ಎಷ್ಟು ಕಾಲು?’ ಎಂದೆ.

ಕಿತ್ತೂರು ರಾಣಿ ಚೆನ್ನಮ್ಮನ ಊರು ಯಾವುದು ಎನ್ನುವಷ್ಟೇ ಸಿಂಪಲ್ ಪ್ರಶ್ನೆ ಅದು. ಆದರೆ 5, 8, 16?… ಉತ್ತರ ಬೆಳೆಯುತ್ತಲೇ ಹೋಗುತ್ತಿತ್ತು.

ತುಮಕೂರು: ಒಂದೇ ದಿನ ಮೂರು ತಾಲ್ಲೂಕುಗಳಿಗೆ ವಕ್ಕರಿಸಿದ ಕೊರೊನಾ

Publicstory. in


Tumkuru: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಮೂರು ತಾಲ್ಲೂಕುಗಳಿಗೆ ಕೊರೊನಾ ಸೋಂಕು ವಕ್ಕರಿಸಿದೆ.

ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಮೂರು ತಾಲ್ಲೂಕುಗಳಲ್ಲಿ ಒಂದೊಂದು ಪ್ರಕರಣಗಳು ಕಂಡು ಬಂದಿವೆ.

ಗುಬ್ಬಿ, ತಿಪಟೂರು ಪ್ರಕರಣಗಳಲ್ಲಿ ಸೋಂಕಿತರು ಯಾವುದೇ ಟ್ರಾವಲ್ ಮಾಡದಿದ್ದರೂ ಸೋಂಕು ತಗುಲಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ತಿಪಟೂರು ಸದಾಶಿವ‌ನಗರದ ವಾಸಿಗೂ ಕೊರೊನಾ ಸೋಂಕು ತಗುಲಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ನಿವಾಸಿ ಮಹಿಳೆ ಹಾಗೂ ಗುಬ್ಬಿ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿದೆ.

ಈ ಪ್ರದೇಶಗಳನ್ನು ಸೀಲ್ಡ್ ಡೌನ್ ಮಾಡಲಾಗಿದೆ. ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

Sslc ಪರೀಕ್ಷೆ: ಬಸ್ ಇಲ್ಲದಿದ್ದರೆ ಇಲಾಖೆ ವಾಹನದಲ್ಲಿ ಮಕ್ಕಳನ್ನು ಕರೆತನ್ನಿ- ಸಚಿವ!

Publicstory.in


ತುಮಕೂರು: ಜಿಲ್ಲೆಯಲ್ಲಿ ಜೂನ್ 25 ರಿಂದ ಜುಲೈ 2ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗದಂತೆ ಎಚ್ಚರವಹಿಸಬೇಕು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲೆ ಯಶಸ್ವಿಯಾಗಿರುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸಮಪರ್ಕವಾಗಿ, ವ್ಯವಸ್ಥಿತವಾಗಿ ಮಾಡಬೇಕು. ಮಕ್ಕಳು ಭಯಪಡದೇ ಪರೀಕ್ಷೆ ಬರೆಯುವಂತಾಗಬೇಕು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮನೆಯಿಂದಲೇ ಬಿಸಿ ನೀರನ್ನು/ಬಿಸಿ ಆರಿದ ನೀರು ತರುವಂತೆ ತಿಳಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಒಂದು ದಿನದ ಮೊದಲೇ ಕೊಠಡಿಗಳ ವಿವರಗಳನ್ನು ಮೊಬೈಲ್‌ಗೆ ಸಂದೇಶ ಕಳುಹಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮಾರ್ಗದರ್ಶನ ನೀಡಲಾಗುವುದು.

ಮಾರ್ಗದರ್ಶಕ ಫಲಕಗಳನ್ನು ಅಳವಡಿಸಲಾಗುವುದು. ಮಕ್ಕಳಿಗೆ ಭೀತಿ ಸೃಷ್ಟಿ ಮಾಡಬೇಡಿ, ಭಯದ ವಾತಾವರಣ ದೂರ ಮಾಡಿ, ಸಮಾಧಾನವಾಗಿ ಪರೀಕ್ಷೆ ಬರೆಯುವಂತಾಗಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದಿಂದ ದೂರವಿರುವ ಮಕ್ಕಳ ಮಾಹಿತಿ ಪಡೆದು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ಮಕ್ಕಳು ಬಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಪ್ರಯಾಣಕ್ಕೆ ತೊಂದರೆಯಾಗಿ ಗೈರು ಹಾಜರಾಗುವ ಮಕ್ಕಳನ್ನು ಸರ್ಕಾರಿ ಇಲಾಖೆ ವಾಹನಗಳ ಮೂಲಕ ಕರೆತರಬೇಕು.

ತಡವಾಗಿ ಬಂದರೂ ಸಹ ಮಕ್ಕಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು. ಮಕ್ಕಳನ್ನು ಕರೆತರುವ ವಾಹನಗಳಲ್ಲಿ ಶಿಕ್ಷಕರನ್ನು ನೇಮಿಸಬೇಕು ಎಂದರಲ್ಲದೇ ಮೊದಲ ದಿನದಿಂದ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕೂರುವ ಜಾಗವನ್ನು ಬದಲಾಯಿಸಬಾರದೆಂದು ಅವರು ಡಿಡಿಪಿಐಗಳಿಗೆ ಸೂಚಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿಗಳಿರಬೇಕು. ಪ್ರಥಮ ಚಿಕಿತ್ಸೆ ಪ್ಯಾರಾಸಿಟಮಾಲ್ ಮಾತ್ರೆ ಸೇರಿದಂತೆ ಆರೋಗ್ಯ ಪರಿಕರಗಳನ್ನು ಕೇಂದ್ರಗಳಲ್ಲಿ ಒದಗಿಸಬೇಕು.

ನೇಮಿಸಿರುವ ಆರೋಗ್ಯ ಸಿಬ್ಬಂದಿಗಳ ವಿವರಗಳನ್ನು ಆಯಾ ತಾಲೂಕು ಬಿಇಒಗಳಿಗೆ ನೀಡಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಡಿಹೆಚ್‌ಒ ಅವರಿಗೆ ಸೂಚಿಸಿದರು.

ಲಾಕ್ ಡೌನ್ ನಿಂದ 15 ಕೋಟಿ ಉದ್ಯೋಗ ನಷ್ಟ

Tumkuru: ದೇಶದಲ್ಲಿ ಕೊರೊನ ಲಾಕ್ ಡೌನ್ ಪರಿಣಾಮ 15 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಐದು ಕೋಟಿಯಷ್ಟು ಯುವಜನತೆ ಉದ್ಯೋಗ ಕಳೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಜಿಡಿಪಿಯ ಶೇ.1ರಷ್ಟು ಪರಿಹಾರವನ್ನು ಮಾತ್ರ ಕೇಂದ್ರ ಸರ್ಕಾರ ನೀಡಿದೆ. ಆದರೆ ಜಿಡಿಪಿಯ ಶೇ10ರಷ್ಟ ನೀಡಲಾಗಿದೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ವಿಡಿಯೋ ಸಂವಾದ ನಡೆಸಿದ ಯೆಚೂರಿ ಮೋದಿ ಸರ್ಕಾರ ಕೊರೊನ ಸಂದರ್ಭವನ್ನು ಸರಿಯಾಗಿ ನಿಭಾಯಿಸಿಲ್ಲ. ಕೇಂದ್ರ ಸರ್ಕಾರ ಪೂರ್ಯತಯಾರಿ ನಡೆಸದೆ ಕೈಗೊಂಡ ಕ್ರಮಗಳಿಂದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾದರು.

ಕೊರೊನ ವಾರಿಯಾರ್ ಗಳಿಗೆ ಪಿಪಿಇ ಕಿಟ್ ಗಳನ್ನು ಕೊಡಲು ಆಗಲಿಲ್ಲ. ಮೋದಿ ಸರ್ಕಾರ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನುಬಳಸಿಕೊಳ್ಳಲು ಮುಂದಾಗಲಿಲ್ಲ ಎಂದು ಹೇಳಿದರು.

ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಪರೀಕ್ಷೆ ಹೆಚ್ಚಿದೆ. ಇದರ ನಡುವೆಯೇ ಸೋಂಕು ಕೂಡ ವ್ಯಾಪಿಸುತ್ತಿದೆ. 1000 ಸೋಂಕಿತರಿಗೆ ಕೇವಲ 0.82 ವೈದ್ಯರು, 1000 ಸೋಂಕಿತರಿಗೆ ಕೇವಲ 0.7ರಷ್ಟು ಹಾಸಿಗೆಗಳು ಇವೆ ಇದು ಜನರ ಮೇಲೆ ತೀವ್ರ ಪರಿಣಾಮ ಬೀರಿದೆ.

ಅನೌಪಚಾರಿಕ ಮತ್ತು ಸಣ್ಣ ಕೈಗಾರಿಕೆಗಳ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಸಮಸ್ಯೆ ಎದುರಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಮುಂಗಾರು ಸಮಯದಲ್ಲಿ ಕೃಷಿ ಬಿಕ್ಕಟ್ಟು ಉದ್ಭವಿಸಿದೆ. ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ಪರದಾಡುವಂತಹ ಪರಿಸ್ಥಿತ ಇದೆ. ಆದರೂ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿರುವುದಾಗಿ ತಿಳಿಸಿದೆ. ನಿಜವಾಗಿಯೂ 3.5ರಷ್ಟು ಮಾತ್ರ ಬೆಂಬಲ ಬೆಲೆ ನೀಡಿದೆ. ಆದರೆ 50ರಷ್ಟು ಬೆಂಬಲ ಬೆಲೆ ನೀಡಿದೆ ಎಂದು ಕೆಂದ್ರ ಸರ್ಕಾರ ಅಸಂಬದ್ದವಾಗಿ ಮಾತನಾಡುತ್ತಿದೆ.

ದೇಶದ ಉಗ್ರಾಣದಲ್ಲಿ 8 ಲಕ್ಷ ಕೋಟಿ ಟನ್ ಆಹಾರ ಧಾನ್ಯಗಳು ಕೊಳೆಯುತ್ತಿದೆ. ಜನರು ತೊಂದರೆಯಲ್ಲಿದ್ದು ಅವರ ನೆರವಿಗೆ ಬರುತ್ತಿಲ್ಲ. ಕೊರೊನ ಕಾಲದಲ್ಲಿ ಪ್ರತಿ ಕುಟುಂಬದ ಖಾತೆಗೆ 7,500 ರೂ ನಗದು ವರ್ಗಾವಣೆ ಮಾಡಬೇಕು.ಆರು ತಿಂಗಳವರೆಗೆ ದೊರೆಯಬೇಕು.

ಪ್ರತಿ ವ್ಯಕ್ತಿಗೂ 10 ಕೆಜಿ ಆಹಾರಧಾನ್ಯವನ್ನು ಆರು ತಿಂಗಳವರೆಗೆ ನೀಡಬೇಕು ಎಂದು ಒತ್ತಾಯಿಸಿದರು.

ಜನರ ಸಹಾಯಕ್ಕೆ ಬಾರದ ಮೋದಿ ಸರ್ಕಾರ ಪಿಎಂ-ಕೇರ್ಸ್ ಹೆಸರಿನ ಬಾಧ್ಯತೆ ಇಲ್ಲದ ಮೋಸದ ಖಾತೆ ತೆರೆದು ಹತ್ತು ಸಾವಿರ ಕೋಟಿ ಸಂಗ್ರಹ ಮಾಡಿದೆ. ಜನರ ಪರಿಸ್ಥಿತಿ ಕುಸಿಯುತ್ತಿದ್ದು ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ.

ಮುಖೇಶ್ ಅಂಬಾನಿ ಏಷ್ಯಾದ ಅತಿದೊಡ್ಡ ಶ್ರೀಮಂತರಾಗಿದ್ದು ಲಾಕ್ ಡೌನ್ ಅವಧಿಯಲ್ಲಿ ಆತನ ಆದಾಯ ಶೇ. 17.7ರಷ್ಟು ಹೆಚ್ಚಳವಾಗಿದೆ.

ಕೈಗಾರಿಕೆಗಳು ಮುಚ್ಚುತ್ತಿವೆ. ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಆರ್ಥಿಕತೆ ಕುಸಿದಿದೆ. ಅಂತಹ ಸಮಯದಲ್ಲೂ ಲಾಭ ಬಂದಿದೆ. ಇದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು.

ಕೋರೊನ ಸಂಬಂಧ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಹಲವು ಸೂಚನೆಗಳನ್ನು ಕೊಟ್ಟಿದ್ದೇವೆ.ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿಗಳನ್ನು ಕೊಟ್ಟಿದ್ದೇವೆ. ಆದರೂ ಅವುಗಳಲ್ಲಿ ಒಂದನ್ನು ಪರಿಗಣಿಸಲಿಲ್ಲ.

ಪ್ರತಿಪಕ್ಷಗಳ ಜೊತೆ ಸೇರಿ ಪರ್ಯಾಯ ಮಾರ್ಗಗಳನ್ನು ಕೈಗೊಳ್ಳುವ ಸಂಬಂಧ ಸಲಹೆಗಳನ್ನು ನೀಡಿದೆವು. ಮುಂದಿನ ದಾರಿ ಹೇಗಿರಬೇಕು ಎಂದು ಹೇಳಿದೆವು. ಆದರೂ ಅದಕ್ಕೆ ಸ್ಪಂದಿಸಲಿಲ್ಲ.

ಈ ನಡುವೆ 20 ಲಕ್ಷ ಕೋಟಿ ಪ್ಯಾಕೇಜ್ ಸರ್ಕಾರ ಘೋಷಿಸಿದೆ. ಅದು ಸಣ್ಣ ಮೊತ್ತವಾಗಿದೆ. ನಾವು ಜಿಡಿಪಿಯ ಶೇ.5ರಷ್ಟು ಹಣವನ್ನು ಪರಿಹಾರವಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತೇವೆ.

ಆದರೆ ಕೇಂದ್ರ ಇದಕ್ಕೆ ಸಿದ್ದವಿಲ್ಲ. ಜನರ ಬೇಡಿಕೆ ಕುಸಿದಿದೆ. ಹಾಗಾಗಿ ಹಿಂದೆ ತಯಾರಿಸಿದ ವಸ್ತುಗಳನ್ನು ಕೊಳ್ಳಲು ಜನರಿಗೆ ಆಗುತ್ತಿಲ್ಲ. ಬೇಡಿಕೆಗೆ ಪುನಸ್ಛೇತನ ನೀಡಬೇಕು. ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು ಆಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ ಎಂದರು.