Saturday, May 9, 2026
Google search engine
Home Blog Page 204

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್


ಅವರು ದಿಡೀರನೆ ರಂಗಕ್ಕೆ ನುಗ್ಗುತ್ತಾರೆ. ಖಾಕಿ ಧಿರಿಸು, ಹುರಿ ಮೀಸೆ, ಕೈಯಲ್ಲಿ ಲಾಟಿ. ಬೆಳಕು ಕಾಣದ ಆ ತಡಿಕೆಯ ಗುಡಿಸಲಿಗೆ ನುಗ್ಗಿದ ಅವರು ಪತ್ತೆ ಮಾಡಲು ಬಂದಿರುವುದು ಕದ್ದ ಕಡಲೆಕಾಯಿಯನ್ನು.

ಇಡೀ ಮನೆಯನ್ನು ಎಳೆದಾಡಿಬಿಡುವ ಆ ಪೊಲೀಸರು ಅಲ್ಲಿ ನೇತು ಹಾಕಿದ್ದ ಗಡಿಗೆಗೆ ತಮ್ಮ ಲಾಟಿ ಬೀಸು ಬೀಸುತ್ತಾರೆ. ಮಣ್ಣಿನ ಮಡಿಕೆ ಠಳಾರನೆ ಒಡೆದು ಚೂರಾಗುತ್ತದೆ.

ನಂತರ ಸಂಪೂರ್ಣ ನಿಶಬ್ದ.

ಒಂದು ಹಸಿವು ನೀಗಿಕೊಳ್ಳಲು, ಆ ದಿನದ ಬದುಕನ್ನು ದೂಡಿಬಿಡಲು ಮಾಡಿದ ಒಂದು ಪುಟ್ಟ ಕಳ್ಳತನದ ವಿರುದ್ಧ ನಡೆಯುವ ದೌರ್ಜನ್ಯ ಒಂದು ಕ್ಷಣ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ.

ಆದರೆ ಅಲ್ಲಿ ನಿರ್ದೇಶಕರು ಆ ನೋವಿನ ಧಾರುಣತೆಯನ್ನು ಮುಟ್ಟಿಸಲು ಇನ್ನೂ ಒಂದು ಹೆಜ್ಜೆ ಮುಂದೆಹೋಗಿದ್ದರು. ಆ ಮಡಿಕೆಯೊಳಗೆ ಒಂದಿಷ್ಟು ಮೊಟ್ಟೆಗಳನ್ನು ಇರಿಸಿದ್ದರು ಲಾಟಿಯ ಬೀಸಿಗೆ ಮಡಿಕೆಯ ಜೊತೆಗೆ ಅದರಲ್ಲಿದ್ದ ಮೊಟ್ಟೆಗಳೂ ಒಡೆದುಹೋಗುತ್ತವೆ. ಒಡೆದ ಮಡಿಕೆ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿ ಅತ್ತಿತ್ತ ತೂಗುತ್ತಿದೆ.

ಆ ಒಡೆದ ಮಡಿಕೆಯಿಂದ ಘಟನೆ ಮುಗಿದು ಸಾಕಷ್ಟು ಕಾಲವಾದರೂ ಆ ಮೊಟ್ಟೆಯ ಲೋಳೆ ಸೋರುತ್ತಾ ನಾಟಕದ ವಿಷಾದವನ್ನು ಪ್ರತಿಯೊಬ್ಬರ ಎದೆಗೂ ಇಳಿಸುತ್ತಿದೆ.

ಇದು ‘ಒಡಲಾಳ’.

ದೇವನೂರು ಮಹಾದೇವರ ‘ಒಡಲಾಳ’.

ಸಿ ಜಿ ಕೃಷ್ಣಸ್ವಾಮಿ ಈ ಕಥೆಯನ್ನು ರಂಗಕ್ಕೇರಿಸಿದ್ದರು. ನಾಟಕ ನೋಡಿ ಬಂದ ನಂತರವೂ ಯಾಕೋ ಅಲ್ಲಿ ಜಿನುಗಿದ ಆ ಲೋಳೆಯ ರಸ ನನ್ನನ್ನು ಕಾಡಲು ಆರಂಭಿಸಿತ್ತು. ಆ ದಿನಕ್ಕೇ ಅದು ಮುಗಿಯಲಿಲ್ಲ. ಹಲವು ದಿನಗಳ ನಂತರವೂ ಅದು ನನ್ನೊಳಗೆ ಒಂದು ವಿಷಾದ ರಾಗವನ್ನು ಹುಟ್ಟುಹಾಕುತ್ತಲೇ ಇತ್ತು.

ದೇವನೂರು ಮಹಾದೇವ ಒಡಲಾಳ ಬರೆದು ದಶಕಗಳು ಕಳೆದಿವೆ. ಸಿಜಿಕೆ ಅದನ್ನು ನಾಟಕವಾಗಿಸಿಯೂ ದಶಕಗಳಾಗಿದೆ.

ಆದರೆ ಆ ನೋವಿನ ಎಳೆ ನನ್ನೊಳಗೆ ಜೀಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದು ನಿನ್ನೆ ನಡೆದ ಘಟನೆಯೇನೋ ಎಂಬಂತೆ ಒಳಗೆ ತೂಗುತ್ತಲೇ ಇದೆ
ಮೊನ್ನೆ ‘ಗೋವಿನ ಹಾಡು’ ಓದುತ್ತಿದ್ದೆ. ಅದು ಮರು ಓದು. ಪುಣ್ಯಕೋಟಿ ಎಂಬ ಗೋವಿನ ಬಗ್ಗೆಯೂ, ಅರ್ಭುತನೆಂಬ ಹುಲಿಯ ಬಗ್ಗೆಯೂ ಈಗ ಮರುವ್ಯಾಖ್ಯಾನ ನಡೆಯುತ್ತಿರುವ ಹೊತ್ತು.

‘ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ..’ ಎನ್ನುವ ಸಾಲುಗಳನ್ನು ಓದುತ್ತಿದ್ದಂತೆ ನನಗೆ ಥಟ್ಟನೆ ನೆನಪಾದದ್ದು ದೇವನೂರು ಮಹಾದೇವ.

ನನಗೆ ಚೆನ್ನಾಗಿ ನೆನಪಿದೆ. ‘ದ್ಯಾವನೂರು’ ಕೃತಿಯ ಬೆನ್ನಪುಟದಲ್ಲಿ ದೇವನೂರು ಕಯ್ಯಾರೆ ಬರೆದ ಈ ಸಾಲುಗಳು ಅಚ್ಚಾಗಿದ್ದವು. ಹಾಗೆ ಬರೆಯುವ ಮೂಲಕ ಆ ಗೋವಿನ ಹಾಡಿಗೆ ಇನ್ನೊಂದೇ ಅರ್ಥ ಬಂದುಬಿಟ್ಟಿತ್ತು. ಅದು ಗೋವಿನ ಹಾಡಾಗಿ ಮಾತ್ರ ಉಳಿದಿರಲಿಲ್ಲ. ಗಾಯಗೊಂಡ ಭಾರತದ ಕಥೆಯಾಗಿಯೂ ಬದಲಾಗಿ ಹೋಗಿತ್ತು

ದೇವನೂರು ಗಾಯಗಳನ್ನು ಪರಿಚಯಿಸಿದ ಕಾರಣಕ್ಕೇ ನನಗೆ ಮುಖ್ಯರು.

ದೇವನೂರರ ಸಾಹಿತ್ಯದ್ದು ಒಂದು ತೂಕವಾದರೆ ಅವರ ಚಿಂತನೆಗಳದ್ದೇ ಇನ್ನೊಂದು ತೂಕ.

ನಾನು ಸದಾ ಮುಖಾಮುಖಿಯಾಗುತ್ತಾ ಹೋದದ್ದು ಅವರ ಚಿಂತನೆಗಳ ಜೊತೆಗೇ.

ಕೋಮುವಾದಕ್ಕೆ ರೆಕ್ಕೆ ಬಂದು ಅದು ಇಡೀ ದೇಶಕ್ಕೆ ಕೊಳ್ಳಿ ಇಡುತ್ತಿದ್ದ ದಿನಗಳು ಅವು. ಎಲ್ಲೋ ದೂರದಲ್ಲಿ ಮಾತ್ರ ಕೋಮು ಗಲಭೆಯಾಗುತ್ತವೆ ಎಂದು ನಂಬಿದ್ದ ಕಾಲದಲ್ಲಿ ಮನೆ ಬಾಗಿಲಿಗೇ ಬಂದ ಗಲಭೆಗಳು ನಮ್ಮನ್ನು ತಲ್ಲಣಿಸಿಹಾಕಿತ್ತು.

ಕಣ್ಣೆದುರಿಗೇ ಒಂದು ಕೋಮು ರಾಜಕೀಯ ತಳ ಊರುತ್ತಾ, ಸ್ಥಿರವಾಗುತ್ತಾ, ಪ್ರಬಲವಾಗುತ್ತಾ, ದೇಶದ ಮನಸ್ಥಿತಿ ಬದಲಾಯಿಸುತ್ತಾ ಹೋಗುತ್ತಿದ್ದುದನ್ನು ಕಂಡು ಅದನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ತಲ್ಲಣಿಸಿದ್ದೆವು.

ದೇವನೂರು ಅವರು ನಮಗೆ ಆಸರೆಯಾಗಿ ಒದಗಿದ್ದು ಆಗಲೇ.

ಅವರು ಹೇಳುತ್ತಾರೆ-“ದಾಸ್ತೋವಸ್ಕಿಯ ‘ಕ್ರೈಮ್ ಅಂಡ್ ಪನಿಶ್ ಮೆಂಟ್ ‘ ಕೃತಿಯನ್ನು ಎದುರಿಗಿಟ್ಟುಕೊಂಡು ಅವರು ಈ ರಾಜಕಾರಣದ ಹಿಂದಿನ ರಾಜಕಾರಣವನ್ನು ಬಿಡಿಸಿಡುತ್ತಾ ಹೋದರು.

ಆ ಕಾದಂಬರಿಯ ನಾಯಕ ರೋಡಿಯಾನ್ ಎರಡು ಕೊಲೆ ಮಾಡುತ್ತಾನೆ. ಒಂದು ಕೊಲೆ ಸಂಚು ಹೂಡಿ ಮಾಡಿದ ಕೊಲೆ, ಇನ್ನೊಂದು ಆ ಕೊಲೆ ಮಾಡುವಾಗ ನೋಡಿದ ಸಾಕ್ಷಿಯದ್ದು. ಒಂದು ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯಾದರೆ, ಇನ್ನೊಂದು ಅಪ್ರಜ್ಞಾಪೂರ್ವಕವಾಗಿ ಮಾಡಿದ್ದು. ಆದರೆ ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯ ಬಗ್ಗೆ ವಿಹ್ವಲಗೊಳ್ಳುವ ಆತ ಇನ್ನೊಂದು ಕೊಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ.

“ಈ ಕಾದಂಬರಿಯ ಎಲ್ಲಾ ವಿವರಗಳನ್ನು ಮರೆತರೂ ಈ ವಿಲಕ್ಷಣ ನನ್ನ ಮನದಲ್ಲಿ ಉಳಿಯಿತು. ಕೊಲೆ, ಹಿಂಸೆಯನ್ನು ಪ್ರಜ್ಞಾಪೂರ್ವಕವಾಗಿ ಯೋಜನೆ ಮಾಡಿ ಮಾಡುವುದಕ್ಕೂ, ಉದ್ಧೇಶರಹಿತವಾಗಿ ಕೊಲೆ ಹಿಂಸೆ ಆಗುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅದು ನನಗೆ ಮನಗಾಣಿಸಿತ್ತು. ಉದ್ಧೇಶರಹಿತ ನೂರು ಕೊಲೆಗಳ ಮುಂದೆ,ಕೊಲೆ-ಹಿಂಸೆಯನ್ನು ತಾತ್ವಿಕಗೊಳಿಸಿದ ಒಂದೇ ಕೊಲೆ ಸಮ ಸಮ ಅನಿಸಿಬಿಟ್ಟಿತು”.

ಸಮಾಜದೊಳಗಿನ ಒಂದು ಹೊಸ ಚಲನೆಯನ್ನು ಇಡೀ ದೇಶ ತನ್ನದಾಗಿಸಿಕೊಳ್ಳಲು ನಿರೀಕ್ಷಿಸುತ್ತಿದ್ದಾಗಲೇ ಬಿಎಸ್ಪಿ, ಬಿಜೆಪಿಯ ಜೊತೆ ಒಪ್ಪಂದ ಮಾಡಿಕೊಂಡು ಅಧಿಕಾರದ ಗದ್ದುಗೆಗೇರಿಬಿಟ್ಟಿತ್ತು.

ಬಿಎಸ್ಪಿ ಪಕ್ಷವು ಹೊಂದಾಣಿಕೆಯ ಪರವಾಗಿ ಸಾಕಷ್ಟು ವಾದಗಳನ್ನು ಮಂಡಿಸುತ್ತಿದ್ದಾಗ ದೇವನೂರು ಒಂದು ಪ್ರಶ್ನೆ ಕೇಳುತ್ತಾರೆ-

“ಡಾ. ಅಂಬೇಡ್ಕರ್ ತನ್ನ ಕಟು ವ್ಯಕ್ತಿತ್ವಕ್ಕೆ, ಆದರ್ಶಗಳಿಗೆ ತಿಲಾಂಜಲಿ ಬಿಟ್ಟು ಅವಕಾಶವಾದಿ ಹೊಂದಾಣಿಕೆ ರಾಜಕೀಯ ಮಾಡಿದ್ದರೆ ಏನಾಗುತ್ತಿತ್ತು? ಅವರು ಸತ್ತ ದಿನವೇ ಸತ್ತು ಹೋಗುತ್ತಿದ್ದರು”.

ಇಂತಹದ್ದೇ ಪ್ರಶ್ನೆಗಳು ನನಗೆ ಎದ್ದದ್ದು ನವರಾತ್ರಿಯ ಸಂದರ್ಭದಲ್ಲಿ.

ದಸರಾ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಧಾನ ಭಾಷಣ ಮಾಡಿದ ಹಂಪ ನಾಗರಾಜಯ್ಯ ಅವರು ‘ದಸರೆ ಎನ್ನುವುದು ಆರ್ಯರು ದ್ರಾವಿಡರನ್ನು ಸಂಹಾರ ಮಾಡಿದ ಕಥೆ. ಅಂತಹದರಲ್ಲಿ ದ್ರಾವಿಡರಾದ ನಾವು ದಸರೆಯನ್ನು ವಿರೋಧಿಸಬೇಕೇ ಹೊರತು ಆಚರಿಸುವುದು ತಪ್ಪು’ ಎಂದಿದ್ದರು. ಹೊಸ ಪಾಠವೊಂದು ನಮಗೆ ಸಿಕ್ಕಿತ್ತು.

ನಾನು ಅಲ್ಲಿಂದ ಗುಲ್ಬರ್ಗಾಗೆ ಹೋದೆ.

ಅಲ್ಲಿ ಕೋಣಗಳ ಬಲಿ. ನೂರಾರು ಕೋಣಗಳನ್ನು ಹಾಡಗಹಲೇ ಕೊಂದು ಹಾಕುವ ಆಚರಣೆಗಳು ನನ್ನೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಆಗಲೇ ದೇವನೂರು ಅಸ್ಪೃಶ್ಯನು ಬ್ರಾಹ್ಮಣ ಕನ್ಯೆಯನ್ನು ಪ್ರೀತಿಸುವ ಕಥೆ ವಿವರಿಸಿ ‘ಕೋಣವಾದ ತಮ್ಮವನನ್ನೇ ನಮ್ಮವರು ಬಲಿ ಕೊಡುತ್ತಾ, ಅಷ್ಟೇ ಅಲ್ಲ ತಿಂದು ಬಂದಿದ್ದಾರೆ. ಇಂದು ಕೋಣ ಬಲಿಯು ಮಾಂಸ ಮಾತ್ರವಾಗಿರಬಹುದು. ಆದರೆ ಹಿಂದೆ, ನಮ್ಮವರನ್ನು ನಮ್ಮಿಂದಲೇ ಕೊಲ್ಲಿಸುವುದನ್ನು ಈ ಕತೆ ಮಾಡಿಸಿತ್ತು. ವರ್ಣಸಂಕರವನ್ನು ತಡೆದಿತ್ತು’ ಎನ್ನುತ್ತಾರೆ.

ಧರ್ಮಸ್ಥಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೇ ಕಾರಣವಾಗಿ ಬಂಡಾಯ ಸಾಹಿತ್ಯ ಸಂಘಟನೆ ಮೂಡಿ ಬಂದಾಗ ‘ಹೀಗೇಕೆ?’ ಎಂದು ಅನಿಸಿತ್ತು.

ಕನ್ನಡ ಸಾಹಿತ್ಯ ಪರಿಷತ್ತನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ಪ್ರಯತ್ನಿಸುತ್ತಿರುವಾಗ ದೇವನೂರರು “ಸಾಹಿತ್ಯ ಪರಿಷತ್ತು, ಅದಕ್ಕಿರುವ ರಚನೆಯಲ್ಲಿ ಎಂದೂ ನಮ್ಮಂಥವರ ಆಸೆಗಳನ್ನು ಮುಟ್ಟಲಾರದು. ನಮ್ಮ ಆಸೆಗಳ ಪೂರೈಕೆಗಾಗಿ ಅದರ ಕಡೆ ನೋಡುವುದೇ ತಪ್ಪು, ಮೂರ್ಖತನ ಇತ್ಯಾದಿ. ಪರಿಷತ್ ನಿಲುಗಡೆಯಾದ ಸಾಹಿತ್ಯವನ್ನು ಮೆರೆಸುತ್ತ ಬಂದಿದೆ. ಅದರಿಂದ ಆಗುವುದು ಅದೇನೆ. ನಮಗೆ ಬೇಕಾಗಿರುವುದು ನಡಿಗೆ” ಎಂದಿದ್ದರು.

ನನ್ನನ್ನು ಮ್ಯಾಕ್ಬೆತ್ ಓದು ಆವರಿಸಿಕೊಂಡಿದ್ದ ದಿನಗಳು. ರಾಮಚಂದ್ರ ದೇವರ ಅನುವಾದ ಅದು.

ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೆಲ್ಲವೂ ನನ್ನ ಕೈಯಿನ ಕಲೆಗಳನ್ನು ಹೋಗಲಾಡಿಸಲಾರದೇ ..? ಎಂದು ಲೇಡಿ ಮ್ಯಾಕ್ಬೆತ್ ನಿಡುಸುಯ್ಯುತ್ತಾಳೆ.

ಆ ರಕ್ತದ ಕಲೆ, ತೊಳೆದರೂ ಹೋಗದ ರಕ್ತದ ಕಲೆಗಳು ನನ್ನ ಮನಸ್ಸನ್ನು ತಟ್ಟಿ ನಿಂತುಬಿಟ್ಟಿತ್ತು.

ಆಗಲೇ ದೇವನೂರು ತಮ್ಮ ‘ಕುಸುಮಬಾಲೆ’ ಹುಟ್ಟಿದ್ದರ ಪ್ರೇರೇಪಣೆ ಏನು ಅಂತ ಹುಡುಕುತ್ತಾ ಇದ್ದರು.

ಅಂದಾಜಾಗಿ ಅವರ ಮುಂದೆ ಮೂರು ಪ್ರೇರೇಪಣೆಗಳಿದ್ದವು. ಅದರಲ್ಲಿ ಒಂದು ಅವರ ದಲಿತ ಸ್ನೇಹಿತನೊಬ್ಬನ ಕೊಲೆ. “ದಲಿತ ಸಂಘಟನೆಯಲ್ಲಿದ್ದ ದಲಿತನ ಕೊಲೆ. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು” ಎನ್ನುತ್ತಾರೆ.

ನನ್ನೊಳಗೆ, ನನ್ನ ದಾರಿಯುದ್ದಕ್ಕೂ ಎದ್ದ ಎಷ್ಟೊಂದು ಪ್ರಶ್ನೆಗಳಿವೆ.

ಆ ಪ್ರಶ್ನೆಗಳಿಗೆ ದೇವನೂರು ಉತ್ತರವಾಗಿ ಒದಗಿಬಂದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಅವರು ನನಗೆ ಮುಖ್ಯ.

ದೇವನೂರು ಅವರು ‘ಕುಸುಮಬಾಲೆ’ ಕೃತಿಯಲ್ಲಿ ರೂಪಿಸಿದ ಜೋತಮ್ಮಗಳ ಕಥೆಗೆ ಬರುತ್ತೇನೆ.

“ರಾತ್ರಿ ದೀಪಗಳನ್ನು ಆರಿಸಿದ ನಂತರ ಈ ದೀಪಗಳ ಆತ್ಮಗಳು ಹಳ್ಳಿಯ ಒಂದು ಸ್ಥಳದಲ್ಲಿ, ಮರವೊಂದರ ಕೆಳಗಿರುವ ಮಂಟಪದಲ್ಲಿ ಸೇರಿ ತಂತಮ್ಮ ಮನೆಗಳಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಹಂಚಿಕೊಳ್ಳುತ್ತವೆ ಎನ್ನುವುದು ಈ ಕಥೆ. ಜನಪದ ಕಥೆಯಲ್ಲಿ ಇದನ್ನು ತಮಾಷೆಗೆಂದು ಬಳಸಲಾಗಿದೆ. ಆದರೆ ನಿಜವನ್ನು ನುಡಿಸುವ ಆತ್ಮವಾಗಿ ನನಗೆ ಇದು ಕಾಣಿಸಿತು” ಎನ್ನುತ್ತಾರೆ ದೇವನೂರು.

ನನಗೂ ಅಷ್ಟೆ, ದೇವನೂರು ಆ ಜೋತಮ್ಮಗಳಂತೆಯೇ ಕಂಡಿದ್ದಾರೆ. ನಿಜವನ್ನು ನುಡಿಸುವ ಆತ್ಮದಂತೆ..

‘ಎದೆಗೆ ಬಿದ್ದ ಅಕ್ಷರ’ದ ಓಣಿಯಲ್ಲಿ ನಡೆಯುತ್ತಾ ಇದ್ದೆ. ಹಾಗಾಗಿ ಈ ಎಲ್ಲವೂ ನನ್ನೆದುರು ಎದ್ದು ಬಂದವು.

ಮಾಜಿ ಶಾಸಕರಿಗೆ ಶಾಸಕ ಗೌರಿಶಂಕರ್ ಪತ್ರ, ಕೇಳಿದ್ದಾರೆ ಹಲವು ಪ್ರಶ್ನೆ

ತುಮಕೂರು ತಾಲ್ಲೂಕಿನಲ್ಲಿ ಹೊನ್ನೇನಹಳ್ಳಿಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಹೊಡೆದಾಟ ಈಗ ಅಪ್ಪಟ ರಾಜಕೀಯ ಬಣ್ಣ ಬಳಿದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಹಾಲಿ, ಮಾಜಿ ಶಾಸಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಬಿ.ಸುರೇಶಗೌಡ ಎರಡು ಪತ್ರಗಳನ್ನು ಬರೆದಿದ್ದಾರೆ. ಈ ಪತ್ರಗಳಿಗೆ ಅಷ್ಟೇ ಗಟ್ಟಿಯಾಗಿ ಉತ್ತರಿಸಿರುವ ಶಾಸಕ ಬಿ.ಸಿ‌.ಗೌರಿಶಂಕರ್, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಪತ್ರ ಕೆಳಗಿನಂತಿದೆ.

ಸನ್ಮಾನ್ಯ ಮಾಜಿ ಶಾಸಕರಾದ ಬಿ. ಸುರೇಶ್ ಗೌಡರಿಗೆ ನಾನು ಮೊದಲನೆಯದಾಗಿ ಗೌರವಪೂರ್ವಕ ವಾದಂತಹ ವಂದನೆಗಳನ್ನು ಹೇಳುತ್ತೇನೆ. ಯಾಕೆಂದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಮಾಡಿ ಕೊನೆಯಲ್ಲಿ ನನ್ನನ್ನು ಕೆಲ ವಿಷಯಗಳಿಗೆ ವಿನಂತಿಸಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದಗಳು. ಈಗಲಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ & ಸೌಜನ್ಯ ಬಂದಿರುವುದಕ್ಕೆ ಸಂತೋಷವಾಗುತ್ತಿದೆ.

ನನ್ನ ಮೇಲೆ ಆಧಾರರಹಿತ ಆರೋಪ ಮಾಡುವ ನೀವು ಮೊದಲು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ.
ಕಾರಣವಿಷ್ಟೇ ನಿಮ್ಮನ್ನು ಕೂಡಾ ಈ ಕ್ಷೇತ್ರದ ಜನ ಆಯ್ಕೆ ಮಾಡಿ ಶಾಸಕರನ್ನಾಗಿ ಮಾಡಿ ಅಧಿಕಾರ ನೀಡಿದ್ದು ಬರೋಬ್ಬರಿ 10 ವರ್ಷಗಳ ಕಾಲ.

ಒಬ್ಬ ತತ್ವಜ್ಞಾನಿ ಹೇಳುತ್ತಾರೆ “ದುರುದ್ದೇಶದ ರಾಜಕಾರಣಿ ಕೊನೆ ಹಂತದಲ್ಲಿ ಶರಣಾಗತಿಯಾಗುತ್ತಾನೆ”. ಎಂದು
ಈಗ ಅದು ನಿಮ್ಮ ವಿಷಯದಲ್ಲಿ ಸಾಭೀತಾಗಿದೆ.

ಮಾಜಿ ಶಾಸಕರೇ, ಈಗಾಗಲೇ ನಾನು ಅಧಿಕಾರ ವಹಿಸಿಕೊಂಡು ಎರಡು ವರ್ಷ ಮುಗಿದಿದೆ. ಇಲ್ಲಿಯವರೆವಿಗೂ ಪದೇಪದೇ ಪ್ರತಿ ವಿಷಯದಲ್ಲೂ ಆರೋಗ್ಯಕರ ಚರ್ಚೆ ಮಾಡದೆ, ಅಭಿವೃದ್ಧಿ ಚರ್ಚೆ ಮಾಡದೇ, ಸಲಹೆ ನೀಡದೇ ಯಾವಾಗಲೂ ನನ್ನ ಮೇಲೆ ಇಲ್ಲಸಲ್ಲದ ಆಧಾರರಹಿತ ಆರೋಪ ಮಾಡುತ್ತಾ, ನಿಮ್ಮ ಅಧಿಕಾರದ ದಾಹಕ್ಕೆ ಜನಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯವೇ ಆಗಿದೆ. ನೀವು ಮಾಡಿರುವ ಷಡ್ಯಂತ್ರ ಒಂದೋ ಎರಡೋ ..?

ನಾನು ಮೊದಲನೆಯದಾಗಿ ಸನ್ಮಾನ್ಯ ಮಾಜಿ ಶಾಸಕರಿಗೆ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಹೇಳಿ ಕೊಡಬೇಕಾಗಿದೆ. ಇಲ್ಲಿವರೆಗೂ ತಿಳಿದುಕೊಂಡಿರುವುದು ಪ್ರಜಾಪ್ರಭುತ್ವವೆಂದರೆ “ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ” ಎಂಬುದು ಇದು ಕೇವಲ ಚುನಾವಣಾ ಆಯ್ಕೆ ಸಂಧರ್ಭದಲ್ಲಷ್ಚೇ, ಆದರೆ ನಿಜವಾಗಿಯೂ ಪ್ರಜಾಪ್ರಭುತ್ವವೆಂದರೆ “ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್” ಅವರ ದೃಷ್ಟಿಯಲ್ಲಿ “ರಕ್ತರಹಿತ ವಾದಂತಹ ಸಾಮಾಜಿಕ ಕ್ರಾಂತಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ” ನಿಮಗೆ ಈ ಪದಗಳು ಅರ್ಥವಾಗೊಲ್ಲಾ ಯಾಕೆಂದರೇ, ನೀವು ಮಾಡಿದ್ದೆಲ್ಲಾ ರಕ್ತಸಹಿತ ರಾಜಕಾರಣವನ್ನೇ.. ನೀವು ಬಯಸಿದ್ದು ಮುಗ್ದ ಜನಗಳ ರಕ್ತವನ್ನೆ, ಅದಕ್ಕೆ ಉದಾಹರಣೆ ಹೊನ್ನೇನಳ್ಳಿ ಘಟನೆ ಇನ್ನೂ ಅನೇಕ ಇದೆ ಸಮಯ ಬಂದಾಗ ಹೇಳುತ್ತೇನೆ.

ನಿಮ್ಮ ಪ್ರತಿಯೊಂದು ಹೆಜ್ಜೆಯೂ ಕೂಡಾ ದ್ವೇಷ, ಪ್ರಚೋದನೆಗೆ ಕುಮ್ಮಕ್ಕೂ ನೀಡುವುದೇ ಆಗಿದೆ. ಕ್ಷೇತ್ರದ ಸ್ವಾಸ್ಥ್ಯ ಕೆಡಿಸುವುದೇ ಆಗಿದೆ. ಪಟ್ಟಿ ಮಾಡುತ್ತಾ ಹೋಗುತ್ತೇನೆ ನೀವೇ ನಿಮ್ಮ ವಿಡಿಯೋದಲ್ಲಿ ಹೇಳಿರುವಂತೆ ರಾಜಕಾರಣದಿಂದ ದೂರ ಉಳಿಯಲು ಸಿದ್ಧರಾಗಿ..

1. ಈ ಹಿಂದೆ ಮಂಚಕಲ್ ಕುಪ್ಪೆಯ ಆನಂದ ಬಿಹಾರಿ ಹೋಟೆಲ್ ನಲ್ಲಿ ತಿಂದ ಊಟದ ಹಣವನ್ನ ನೀಡಲಾರದೇ ಮಾಲಿಕನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಗಳನ್ನು ಆ ಕೇಸ್ ನಿಂದ ಬಿಡಿಸಿ ನಿಮ್ಮ ಜೊತೆ ಇಟ್ಟಕೊಂಡು ರೌಡಿಸಂ & ಜೂಜಿನ ಹಡ್ಡೆ ನಡೆಸುತ್ತಿರುವವರು ಯಾರು…?

2. ಭಾರತ ದೇಶ ಕಂಡಂತಹ ಶ್ರೇಷ್ಠ ರಾಜಕೀಯ ಮುತ್ಸದಿ ಮತ್ತು ಮಾಜಿ ಪ್ರಧಾನಿಗಳು ಆದಂತಹ ದೇವೇಗೌಡರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನೀವು ಹಳ್ಳಿಯಲ್ಲಿ ಭಾಷಣ ಮಾಡುತ್ತಾ, ಮಾಜಿ ಪ್ರಧಾನಿಯ ಕೊರಳ ಪಟ್ಟಿಗೆ ಕೈಹಾಕಿ, ದೊಣ್ಣೆ ಹಿಡಿದು ಊರ ಒಳಗೆ ಬರದಂತೆ ನೋಡಿಕೊಳ್ಳಿ, ಎಂದು ಮಾಡಿದ ಭಾಷಣದ ತುಣುಕು ನಿಮ್ಮ ಸಂಸ್ಕೃತಿ ಮತ್ತು ನಿಮ್ಮ ಮನಸ್ಥಿತಿಯನ್ನು ಹೇಳುತ್ತದೆ.
ಇನ್ನೂ ಹ್ಯಾಂಡ್ ಪೋಸ್ಟ್ ವಡ್ಡರಹಳ್ಳಿ ಜಾತ್ರೆಯಲ್ಲಿ ನೀವು ವೇದಿಕೆ ಮೇಲೆ ನನ್ನ ಬಗ್ಗೆ ಮಾತನಾಡುವಾಗ ಶಾಸಕರನ್ನ ಪ್ರಶ್ನೆ ಮಾಡುವಾಗ ಯಾವ ರೀತಿ ಪದಬಳಕೆ ಮಾಡಬೇಕೆಂಬ ಅರಿವು, ಕನಿಷ್ಟ ಜ್ಞಾನ ನಿಮಗಿರಲಿಲ್ಲವೇ….?

3. ನನಗೆ ರಾಜಕಾರಣ ಮತ್ತು ಅಧಿಕಾರಿ ವರ್ಗಗಳಲ್ಲಿ ಹೀಗೆ ನಡೆದುಕೊಳ್ಳಬೇಕೆಂದು ಪಾಠ ಮಾಡುವ ಮೊದಲು, ನಿಮ್ಮಯ ಹೀನ ಸಂಸ್ಕೃತಿಯನ್ನು, ಹೀನ ಭಾಷೆಯನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಈ ಹಿಂದೆ ಒಬ್ಬ ಪೊಲೀಸ್ ಪೇದೆಯನ್ನು ಅವರ ಜಾತಿಯ ಹೆಸರನ್ನಿಡಿದು ಕುರುಬ ಪೊಲೀಸ್ ಎಂದಿದ್ದು ನೆನಪಿದೆಯಾ..? ಒಂದು ಸಮುದಾಯಕ್ಕೆ ನೀವು ತೋರಿದ ಅಗೌರವವನ್ನ ಆ ಸಮುದಾಯ ಜೀರ್ಣಿಸಿ ಕೊಳ್ಳಲಾಗಲಿಲ್ಲ. ಹೆತ್ತೇನಹಳ್ಳಿ ಜಾತ್ರಾ ಸಂಧರ್ಭದಲ್ಲಿ ಒಬ್ಬ ಮಹಿಳಾ AC ಅಧಿಕಾರಿಯ ಜೊತೆ ಹೇಗೆ ವರ್ತಿಸಿದ್ದೀರಿ ಹೇಳಿ.? ಆದರೆ ನಾ ಅಧಿಕಾರಿಗೆ ತಾಕೀತು ಮಾಡಿದ್ದು ಧ್ವನಿ ಇಲ್ಲದ ಮಹಿಳೆ & ದಲಿತ ಸಮಾಜದ ನ್ಯಾಯಕ್ಕಾಗಿ ಎಂಬುದು ನೆನಪಿರಲಿ.

4. ಮೊನ್ನೆ ಮೊನ್ನೆ ತಾನೆ ನೀವು ಕೊರೋನಾ ಸೋಂಕಿತ ತುಮಕೂರು ವ್ಯಕ್ತಿಯನ್ನು ನನ್ನ ಅಧಿಕಾರ ಬಳಸಿ ನಾಗವಲ್ಲಿ ಕುಂಬಿಪಾಳ್ಯದಲ್ಲಿ ಶವಸಂಸ್ಕಾರ ಮಾಡಿಸಿದ್ದೇನೆಂದು ಆರೋಪಿಸಿ ಅದರಲ್ಲೂ ವಿಫಲರಾಗಿದ್ದೀರಿ. ನಿಮ್ಮ ಪಕ್ಷದ ಉಸ್ತುವಾರಿ ಸಚಿವರೇ ನಿಮಗೆ ಛೀಮಾರಿ ಹಾಕಿದ್ದನ್ನ ಮರೆತಿದ್ದೀರಾ..?
ನಿಮಗೆ ಅಧಿಕಾರದ ಹಪಾಪಿತನ ಇದ್ದರೆ ಬಹಿರಂಗವಾಗಿ ಹೇಳಿ..?
“ನಾನು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ನನಗೆ ನನ್ನ ಭವಿಷ್ಯ ಮುಖ್ಯ ನನ್ನ ಕಾರ್ಯಕರ್ತರೇನಾದರೇನು.? ಜನಗಳೇನಾದರೇನು.? ಎಂದು” ನಾನೆ ಅಧಿಕಾರ ಬಿಟ್ಟುಕೊಡುತ್ತೇನೆ.

5. ನೀವೇ ಮಾಡಿಸಿಕೊಂಡ ಟಿವಿ ಸಂದರ್ಶನದಲ್ಲಿ ಅಧಿಕಾರಕ್ಕೆ ಅಂದುಕೊಂಡವನಲ್ಲಾ ಎಂದು ದೊಡ್ಡದಾಗಿ ಹೇಳುತ್ತೀರಲ್ಲಾ ನಿಮಗೆ ಈ ಮಾತು ಹೇಳುವುದಕ್ಕೆ ನೈತಿಕತೆ ಇದೇಯಾ.? ಅಧಿಕಾರದ ಹುಚ್ಚು ನಿಮಗೆ, ಹಾಗಾಗಿ ನಿಮ್ಮ ಹುಚ್ಚು ಹೆಚ್ಚಾಗಿ ಈ ರೀತಿ ವರ್ತನೆ ಮಾಡುತ್ತಿದ್ದೀರಾ..? ಹೊನ್ನೇನಳ್ಳಿ ಘಟನೆಯಲ್ಲಿ ಸೌಜನ್ಯಕ್ಕಾದರೂ ಹೆಣ್ಣುಮಗಳ ಪರವಾಗಿ ಒಂದು ವಾಕ್ಯವನ್ನು ಹೇಳಿಲಿಲ್ಲಾ. ದಲಿತರ ಪರವಾಗಿ ಒಂದು ಮಾತಿರಲಿಲ್ಲಾ. ನಿಮಗೆ ನಿಮ್ಮ ಸ್ವಾರ್ಥ ಮುಖ್ಯ. ನೀವು ಹಸುವಿನ ಮುಖವಾಡ ತೊಟ್ಟು ಹುಲಿಯ ಕ್ರೌರ್ಯವನ್ನು ಪ್ರದರ್ಶಿಸುತ್ತಿದ್ದೀರಾ. ಇದರಲ್ಲೇ ಗೊತ್ತಾಗುತ್ತದೆ ನೀವೂ ಮಹಿಳಾ ವಿರೋಧಿ, ದಲಿತ ವಿರೋಧಿ & ಸಮಯಸಾಧಕ ರಾಜಕಾರಣಿ ಎಂದು.

6. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಒಂದು ಸೋತಂತಹ ಕ್ಷೇತ್ರದಲ್ಲಿ ಯಾವ ರಾಜಕಾರಣಿಗಳು ಕೂಡಾ ನಿಮ್ಮಷ್ಟು ಹೀನ ಮಟ್ಟಕ್ಕೆ ಇಳಿದಿಲ್ಲಾ. ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಒಂದು ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದಿಂದ ಹಣ ತರುವುದೇ ದೊಡ್ಡ ಕಾರ್ಯ, ನಾನು ತಂದ ಹಣವನ್ನು ನೀವು ನಿಮ್ಮ ಸರ್ಕಾರದ ಮೇಲೆ ಒತ್ತಡ ತಂದು ಏನು ಮಾಡಿದ್ದೀರಾ ಎಂದು ನಿಮಗೆ ನೆನಪಾಗುತ್ತಿಲ್ಲವೇ..? ನೀವೂ ಪ್ರಜಾಪ್ರಭುತ್ವದ ವ್ಯಾಖ್ಯಾನದ ಪಾಠ ನನಗೆ ಹೇಳುತ್ತಿರಲ್ಲಾ ನಿಮಗೆ ಮಾನವೀಯತೆಯೇ ಇಲ್ಲವೇ..?

7. ಜಾತಿ-ಜಾತಿ ಮಧ್ಯೆ ವ್ಯಕ್ತಿಗಳ ಮಧ್ಯೆ ಸಂಘರ್ಷವನ್ನು ಸೃಷ್ಟಿಸಿ ರಾಜಕಾರಣ ಮಾಡುವ ನೀವು ನನ್ನ ಮೇಲೆ ಆರೋಪ ಮಾಡುತ್ತೀರಾ..? ನಿಮ್ಮ ಕಾಲದಲ್ಲಿ ಎಷ್ಟು ಜನ ಅಮಾಯಕರ ಮೇಲೆ & ಹೋರಾಟಗಾರರ ಮೇಲೆ ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ರೌಡಿಶೀಟರ್ ಮಾಡಿಸಿದ್ದೀರಾ ನೆನಪಿಲ್ಲವೇ..? ಏನೂ ಕಾಣದ ಮಂಗನ ರೀತಿ ವರ್ತಿಸಿ ನಮ್ಮನ್ನು ಮಂಗ ಮಾಡಬೇಡಿ ನಿಮ್ಮ ಕಾಲದಲ್ಲಿ ಮಾಡಿದ್ದೆ ದ್ವೇಷದ ರಾಜಕಾರಣ. ನಿಮಗೆ ವ್ಯಕ್ತಿಗೌರವ ಇದೆಯಾ ಸಮುದಾಯ ಗೌರವ ಇದೇಯಾ..? ಇದ್ಯಾವುದೂ ಇಲ್ಲಾ.

ಜನಗಳ ಮಧ್ಯೆ ರಾಜಕಾರಣದ ವಿಷಬೀಜ ಬಿತ್ತಿ ಆದರಿಂದ ಫಲ ನಿರೀಕ್ಷಿಸಬೇಡಿ, ನಿಮ್ಮ ಬಲ ಪ್ರದರ್ಶನ, ಬುದ್ಧಿ ಪ್ರದರ್ಶನ ನನ್ನ ವಿರುದ್ಧ ಮಾಡಿ. ಅದು ಬಿಟ್ಟು ಜನಸಾಮಾನ್ಯರ ಮೇಲೆ ಬೇಡಾ ನೀವು ಮಾಡುತ್ತಿರುವುದೇ ಹೇಸಿಗೆ ಹುಟ್ಟಿಸೋ ಕೆಲಸ ಗೌಡ್ರೇ. ನಾನು ಈ ಕ್ಷೇತ್ರದ ಶಾಸಕ ಎನ್ನುವುದಕ್ಕಿಂತ ಹೆಚ್ಚಾಗಿ ಮನೆಮಗ ಎನ್ನುವುದರಲ್ಲಿ ಹೆಮ್ಮೆ ಇದೆ .. ನೀವು ಮಾಡುವುದೆಲ್ಲಾ ಮಾಡಿ ಎಲ್ಲದಕ್ಕೂ ಸಿದ್ಧ ನಾನು. ನನ್ನ ಜನಗಳಿಗೆ ತೊಂದರೆಯಾದರೇ ಜನಗಳೇ ಉತ್ತರಿಸುತ್ತಾರೆ. ಕೊನೆಯದಾಗಿ ಮಾಜಿಯವರೇ ಕ್ಷೇತ್ರ ನೆಮ್ಮದಿಯಾಗಿರಲು ಬಿಡಿ. ಇದು ನಿಮಗೆ ಶೋಭೆಯಲ್ಲಾ.

ವಂದನೆಗಳೊಂದಿಗೆ,

ಇಂತಿ,
ಡಿ. ಸಿ. ಗೌರಿಶಂಕರ್
ಶಾಸಕರು
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ.

ನಮ್ಮ‌ ಸೈನಿಕರ ಬಲಿದಾನ ಪಡೆದ ಏನಿದು ಪಾಂಗೊಂಗ್ ತ್ಸೊ

ವಿನಯ್ ಹೆಬ್ಬೂರು


ಪಾಂಗೊಂಗ್ ತ್ಸೊ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನೇರ ಮುಖಾಮುಖಿ ಸ್ಥಳವಾಗಿದೆ, ನಿನ್ನೆ ರಾತ್ರಿ ನಡೆದ ಬಡಿದಾಟದಲ್ಲಿ ಯಾವುದೇ ಗುಂಡು ಹಾರಿಲ್ಲ ಆದರೂ ಎರಡೂ ಕಡೆ ಹಾನಿಯಾಗಿದೆ.ಭಾರತ ತನ್ನ ಸೈನ್ಯದ ಒಬ್ಬ ಲೆಂಪ್ಟಿನೆಂಟ್ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿರುವುದನ್ನು ಅಧೀಕೃತವಾಗಿ ತಿಳಿಸಿದೆ.

ಆದರೆ ಚೀನಾಯಾವುದೇ ಅಧೀಕೃತಬಹೇಳಿಕೆ ನೀಡದೇ ಕಳ್ಳಾಟದಲ್ಲಿ ತೊಡಗಿದೆ.

ಮೇ ಆರಂಭದಲ್ಲಿ ನಡೆದ ಗಲಾಟೆ ನಂತರ. ಎರಡೂ ಕಡೆಯವರು ತಮ್ಮ ಸೈನ್ಯದ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ ಆದರ ಜೊತೆ “ಸೇನೆ ಕಡಿತಗೊಳಿಸುವ ” ಪ್ರಕ್ರಿಯೆಯು ಸಹ ನಡೆಯುತ್ತಿದೆ.

ಎರಡೂ ಸೇನೆಗಳ ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ಮಾತುಕತೆ ನಡೆದಿದ್ದು. ಭಾರತ ಚೀನಾ ನಡುವಿನ 3000 ಚದರ ಕಿಮಿ ವಿಸ್ತೀರ್ಣದ ಗಡಿಯಲ್ಲಿ ಗಾಲ್ವಾನ್ ವ್ಯಾಲಿ, ಡೆಮ್ಚೋಕ್ ಮತ್ತು ದೌಲತ್ ಬೇಗ್ ಓಲ್ಡಿ ಗಳಲ್ಲಿ ಉದ್ವಿಘ್ನತೆ ಇದ್ದರೂ ಪ್ರಸ್ತುತ ಎರಢೂ ದೇಶಗಳ ಗಮನ ಪಾಂಗೊಂಗ್ ತ್ಸೋ ಮೇಲೆ ಇರಲಿದೆ.

ಪ್ಯಾಂಗೊಂಗ್ ತ್ಸೊ ಅನ್ನು “ಕಾನ್ಕ್ಲೇವ್ ಸರೋವರ” ಎಂದು ಅನುವಾದಿಸಲಾಗುತ್ತದೆ. ಪಾಂಗೊಂಗ್ ಎಂದರೆ ಲಡಾಖಿಯಲ್ಲಿ ಎತ್ತರದ ಮತ್ತು ತ್ಸೊ ಎಂದರೆ ಸರೋವರ ಎಂದರ್ಥ 14,000 ಅಡಿಗಳಷ್ಟು ಎತ್ತರದಲ್ಲಿರುವ ಈ ಸರೋವರ ಸುಮಾರು 135 ಕಿ.ಮೀ ವಿಸ್ತೀರ್ಣ ಹೊಂದಿದ್ದು ಬೆರಳಿನಾಕಾರದ ಎಂಟುಬೆಟ್ಟಗಳ ನಡುವೆ ಇದೆ.

1962 ಯುದ್ದದ ನಂತರ ಭಾರತ ಮತ್ತು ಚೀನಾ ಬೇರ್ಪಡಿಸುವ ರೇಖೆ – ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಭೂಮಿಯಂತೆಯೇ ನೀರಿನ ಮೂಲಕವೂ ಚಲಿಸಿ ಭಾರತ – ಚೀನಾ ಗಳನ್ನು ಬೇರ್ಪಡಿಸುತ್ತದೆ.

ಈ ಸರೋವರದ 45ಕಿಮಿ ಪ್ರದೇಶವನ್ನು ಭಾರತವು ನಿಯಂತ್ರಿಸುತ್ತಿದೆ ಉಳಿದ ಭಾಗ ಚೀನಾ ವಶದಲ್ಲಿದೆ.ಇದು ಕಾರಕೋಣಂ ಪರ್ವತ ಶ್ರೇಣೀಯ ಪ್ರದೇಶವಾಗಿದ್ದು ಇಲ್ಲಿ ಎಂಟು ಕಡಿದಾಧ ಬೆಟ್ಟಗಳ ಪ್ರದೇಶವಿದ್ದು ಅದನ್ನು 8ಫಿಂಗರ್ಸ್ ಎಂದು ಗುರುತಿಸಲಾಗುತ್ತದೆ.ಇದು ಸಂಪೂರ್ಣ ವಿವಾದಿತ ಪ್ರದೇಶವಾಗಿದೆ.

ಈ ಪ್ರದೇಶದಲ್ಲಿ ಗಸ್ತು ಹೆಚ್ಚು ಕಠಿಣವಾಗಿದ್ದು ಕಾಲ್ನಡಿಗೆ ಗಸ್ತು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ.ಫಿಂಗರ್‌ 4ವರೆಗೂ ಭಾರತದ ಗಡಿ ಎಂಬುದು ಭಾರತದ ವಾದವಾದರೂ ಕೈಯಲ್ಲಿರುವುದು ಫಿಂಗರ್ 2 ವರೆಗನ ಪ್ರದೇಶ ಮಾತ್ರ.2017 ರ ಡೋಕ್ಲಾಮ್ ವಿವಾದದ ಸಮಯದಲ್ಲಿ ಎರಡು ಕಡೆಯ ಸೈನಿಕರು ಈ ಪ್ರದೇಶದಲ್ಲೂ ಬಡಿದಾಡಿಕೊಂಡಿದ್ದರು.

ಚೀನಾ 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತ ಆಪರೇಷನ್‌ ವಿಜಯ್‌ಗಾಗಿ ಈ ಪ್ರದೇಶದಲ್ಲಿದ್ದ ಸೇನೆಯನ್ನು ಮರುನಿಯೋಜನೆ ಗೊಳಿಸುವ ಸಮಯದಲ್ಲಿ ಚೀನಾ ಎಲ್‌ಎಸಿಯ ಭಾರತದ ಬದಿಯಲ್ಲಿ 5 ಕಿ.ಮೀ.ವರೆಗೆ ರಸ್ತೆ ನಿರ್ಮಿಸಿತ್ತು.ಸರೋವರದ ಉದ್ದಕ್ಕೂ(ಚೀನಾ ಭಾಗದಲ್ಲಿ) ಲೋಹದ ರಸ್ತೆಯನ್ನು ನಿರ್ಮಿಸಿತು.

1962 ರ ಯುದ್ಧದ ಸಮಯದಲ್ಲಿ ಭಾರತ ಮತ್ತು ಚೀನಾ ನಡುವಿನ ಯುದ್ಧಭೂಮಿಯಲ್ಲಿ ಒಂದಾದ ಚುಸುಲ್ ಕಣಿವೆಗೆ ಬಹಳ ಹತ್ತಿರದಲ್ಲಿರುವುದರಿಂದ ಪಂಗೊಂಗ್ ತ್ಸೊ ಆಯಕಟ್ಟಿನ ನಿರ್ಣಾಯಕ ಪ್ರದೇಶವಾಗಿದೆ.

ಚೂಸುಲ್ ಕಣಿವೆಯನ್ನು ಕಾರ್ಯತಂತ್ರದ ಲಾಭವನ್ನು ಪಡೆದುಕೊಳ್ಳುವ ಮೂಲಕ ಚೀನಾ ಭಾರತದ ಕೈಯಲ್ಲಿದ ಈ ಪ್ರದೇಶದ ಕೆಲವು ಕಿಮಿಗಳನ್ನು ವಶಪಡಿಸಿಕೊಂಡಿತ್ತು .
ಪ್ಯಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ಪ್ರದೇಶಗಳಲ್ಲಿ ಚೀನಾದ ಆಕ್ರಮಣಕ್ಕೆ ಮತ್ತೊಂದು ವಿವರಣೆಯಿದೆ. ಎಲ್‌ಎಸಿ ಬಳಿ ಎಲ್ಲಿಯೂ ಭಾರತ ತನ್ನ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ. ಇದಕ್ಕೆ ಚೀನಾ ಕೊಡುವ ಕಾರಣ ಭಾರತ ಅಕ್ಸಾಯ್ ಚಿನ್ ಮತ್ತು ಲಾಸಾ-ಕಾಶ್ಗರ್ ಹೆದ್ದಾರಿಯನ್ನು ಆಕ್ರಮಿಸಿಕೊಳ್ಳುವ ಅಪಾಯದ ಆತಂಕ ವ್ಯಕ್ತಪಡಿಸುತ್ತದೆ. ಈ ಹೆದ್ದಾರಿ ಚೀನಾ – ಪಾಕಿಸ್ಥಾನದ ಮುಖ್ಯ ಹೆದ್ದಾರಿಯಾಗಿದ್ದು ಸಿಪಿಇಸಿ(ಚೀನಾ ಪಾಕಿಸ್ಥಾನ ಎಕಾನಾಮಿಕ್‌ ಕಾರಿಡಾರ್‌)ಗೆ ಬೆನ್ನೆಲುಬಾಗಿದೆ
ಚೀನಾದ ಪ್ರಸ್ತುತ 255 ಕಿ.ಮೀ ದೌಲತ್ ಬೇಗ್ ಓಲ್ಡಿ-ಡಾರ್ಬುಕ್-ಶಾಯೋಕ್ ರಸ್ತೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಪ್ರದೇಶ ಕರಕೋರಂ ಪಾಸ್‌ನ ತಳಭಾಗದಲ್ಲಿದೆ,

ಇದು ಭಾರತದ ಕೊನೆಯ ಮಿಲಿಟರಿ ಪೋಸ್ಟ್ ಆಗಿದ್ದು. ದೌಲತ್ ಬೇಗ್ ಓಲ್ಡಿ ವಿಶ್ವದ ಅತಿ ಎತ್ತರ ಪ್ರದೇಶದ ವಾಯುನೆಲೆಯಾಗಿದೆ. ಈ ರಸ್ತೆ ನಿರ್ಮಾಣವಾದರೆ ಲೇಹ್‌ನಿಂದ ದೌಲತ್ ಬೇಗ್ ಓಲ್ಡಿವರೆಗಿನ ಪ್ರಯಾಣದ ಸಮಯವನ್ನು ಎರಡು ದಿನಗಳಿಂದ ಆರು ಗಂಟೆಗಳಿಗೆ ಕಡಿಮೇಯಾಗುತ್ತದೆ.



ಈ ಲೇಖನವು ಇಂಡಿಯಾ ಟುಡೆ ಹಾಗೂ ಹಲವು ಅಂತರ್ಜಾಲ ತಾಣಗಳ ಮಾಹಿತಿ ಆಧರಿಸಿದೆ.

ಶಿರಾದ ಸ್ಟೀಲ್ ಅಂಗಡಿಯಾತನಿಗೆ ಕೊರೊನಾ

ತುಮಕೂರು: ಶಿರಾ ನಗರದಲ್ಲಿ ಸ್ಟೀಲ್ ಅಂಗಡಿ ನಡೆಸುತ್ತಿದ್ದ ಒಬ್ಬರಿಗೆ ಮಂಗಳವಾರ ಕೊರೊನಾ ಸೋಂಕು ಪತ್ತೆಯಾಗಿದೆ.

ಈತನ ಅಂಗಡಿ ಪಕ್ಕದಲ್ಲಿ ಮತ್ತೊಂದು ಅಂಗಡಿ ಇದ್ದು, ಆ ಅಂಗಡಿಗೆ ಹೋಗಿ ಬರುತ್ತಿದ್ದ.

ಈ ನಡುವೆ, ಇಬ್ಬರು ಕೊರೊನಾ ಪೀಡಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಎತ್ತಿನಹೊಳೆ:‌ಎಕರೆಗೆ ₹32 ಲಕ್ಷಕ್ಕೆ ಪಟ್ಟು…

Publicstory.in


ತುಮಕೂರು: ಎತ್ತಿನ ಹೊಳೆಯ ಬೈರಗೊಂಡ್ಲು ಜಲಾಶಯದ ನಿರ್ಮಾಣಕ್ಕೆ ಭೂಸ್ವಾಧೀನಕ್ಕೊಳಪಡುವ ರೈತರ ಜಮೀನಿಗೆ ಸೂಕ್ತ ಪರಿಹಾರ ದರ ನಿಗಧಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಕುರಿತು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜರುಗಿದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರ ಜಮೀನು ಭೂಸ್ವಾಧೀನವಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುತ್ತಿರುವ ಪ್ರತಿ ಎಕರೆಗೆ 32ಲಕ್ಷ ರೂ.ಗಳ ಪರಿಹಾರ ದರದಂತೆ ಕೊರಟಗೆರೆ ತಾಲ್ಲೂಕಿನ ರೈತರಿಗೂ ದೊರೆಯಬೇಕೆನ್ನುವುದು ನನ್ನ ಆಶಯವಾಗಿದೆ.

ಈ ನಿಟ್ಟಿನಲ್ಲಿ ಸಭೆಯಲ್ಲಿ ವ್ಯಕ್ತವಾಗಿರುವ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯೋಜನೆ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಹಾಗೂ ಆ ಭಾಗದ ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.

ತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಯೋಜನೆಗೆ ಭೂಸ್ವಾಧೀನವಾಗುವ ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇರಿದಂತೆ ಇತರೆ ಕಡೆ ರೈತರಿಗೆ ನೋಟೀಸ್ ನೀಡಿರುವುದಿಲ್ಲ.
ನಿಯಮಾನುಸಾರ ರೈತರಿಗೆ ಭೂ-ಪರಿಹಾರ ನೀಡುವುದು ತಡವಾದರೂ ಸಹ ಮೊದಲು ನೋಟೀಸ್ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ: ಜಿ. ಪರಮೇಶ್ವರ್ ಮಾತನಾಡಿ ಬೈರಗೊಂಡ್ಲು ಜಲಾಶಯವು ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲ್ಲೂಕಿನ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿದ್ದು, ಪಕ್ಕದ ತಾಲ್ಲೂಕಿನ ರೈತರಿಗೆ ನೀಡುವ ಪರಿಹಾರ ಧನದ ಪ್ರಮಾಣದಲ್ಲಿಯೇ ನಮ್ಮ ತಾಲ್ಲೂಕಿನ ರೈತರಿಗೂ ಪರಿಹಾರವನ್ನು ಸರ್ಕಾರ ನೀಡಬೇಕು.

ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎತ್ತಿನ ಹೊಳೆ ಯೋಜನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಭೂಪರಿಹಾರ ದರವನ್ನು ನಿಗಧಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸೂಕ್ತ ಪ್ರಸ್ತಾವನೆ ಪಡೆದು ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪ ಮಾಡಬೇಕೆಂದು ತೀರ್ಮಾನಿಸಲಾಗಿತ್ತು.

ಅದರಂತೆ ಜಲಾಶಯ ನಿರ್ಮಾಣದಿಂದ ಈ ಭಾಗಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಜನಪ್ರತಿನಿಧಿಗಳೆಲ್ಲರು ರೈತರ ಮನವೊಲಿಸಿದ್ದಾಗಿದೆ. ಜಲಾಶಯದ ಕಾಮಗಾರಿಗಾಗಿ ಬೈರಗೊಂಡ್ಲು ಗ್ರಾಮ ಸುತ್ತಮುತ್ತಲಿನ 5 ಹಳ್ಳಿಗಳು ಮುಳುಗಡೆಯಾಗಿ ಸ್ಥಳಾಂತರಗೊಳ್ಳಲಿದೆ.

ಹೆಚ್ಚುವರಿಯಾಗಿ 350 ಕೋಟಿ ರೂ.ಗಳ ಭೂ ಪರಿಹಾರವನ್ನು ನಮ್ಮ ಭಾಗದ ರೈತರಿಗೆ ದೊರೆಯಬೇಕು. ಪ್ರತಿ ಎಕರೆಗೆ 32 ಲಕ್ಷ ರೂ. ಭೂ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗಳ ಮನವೊಲಿಸಬೇಕೆಂದು ಅವರು ಸಚಿವರಿಗೆ ಮನವಿ ಮಾಡಿದರು.

ಬೈರಗೊಂಡ್ಲು ಸುತ್ತಮುತ್ತಲಿನ ಗ್ರಾಮಗಳ ರಸ್ತೆ, ಚರಂಡಿ, ಮತ್ತಿತರ ಮೂಲಭೂತ ಸೌಕರ್ಯದ ಕಾಮಗಾರಿಗಳಿಗಾಗಿ 150 ಕೋಟಿ ರೂ.ಗಳ ಮಂಜೂರಾತಿ ನೀಡಲಾಗಿತ್ತು.ಈ ಪೈಕಿ ಮೊದಲನೇ ಹಂತದಲ್ಲಿ 50 ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಇನ್ನುಳಿದ 100 ಕೋಟಿ ರೂ.ಗಳನ್ನು ತಡೆಹಿಡಿಯದೆ ಬಿಡುಗಡೆ ಮಾಡಿ ಆ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯನ್ನು ಮುಂದುವರೆಸಬೇಕು. ಕೊರಟಗೆರೆ ತಾಲ್ಲೂಕಿನಲ್ಲಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳುವಾಗ ಜನಪ್ರತಿನಿಧಿಗಳ ಗಮನಕ್ಕೆ ತರದೆ ಟೆಂಡರ್‍ದಾರರು ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಅವುಗಳ ಆರಂಭದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು ಕಾಮಗಾರಿ ಆರಂಭಿಸಿದರೆ ಸೂಕ್ತ ಎಂದು ಅವರು ತಿಳಿಸಿದರು.

ಭಾರತ ಚೀನಾ ಗಡಿಯಲ್ಲಿ ಉದ್ವಿಘ್ನ ಸ್ಥಿತಿ; ಸಭೆ

ಲಡಾಖ್ : ಚೀನಾ ಹಾಗು ಭಾರತ ನಡುವೆ ನಡೆದ ಸಂಘರ್ಷದಲ್ಲಿ ಭಾರತದ ಮೂವರು ಯೋಧರನ್ನ ಚೀನಾ ಯೋಧರು ಹತ್ಯೆ ಮಾಡಿದ್ದಾರೆ. ಸಂಘರ್ಷದಲ್ಲಿ ಕರ್ನಲ್  ರಾಂಕ್ ಅಧಿಕಾರಿ ಹಾಗು ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಸೃಷ್ಟಿಯಾಗಿತ್ತು. ಈ ವೇಳೆ ಚೀನಾ ಹಾಗು ಭಾರತ ಯೋಧರ ನಡುವೆ ಮಾರಾಮಾರಿಯಾಗಿದ್ದು, ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಸೇನೆಗೂ ಹಾನಿಯಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

ಹೀಗಾಗಿ ಸದ್ಯದ ಉದ್ವಿಘ್ನ ಸ್ಥಿತಿಯನ್ನ ನಿಯಂತ್ರಿಸಲು ಚೀನಾ ಹಾಗು ಭಾರತ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಸಭೆ ನಡೆಸುತ್ತಿದ್ದಾರೆ.

ಭಾರತ–ಚೀನಾ ಗಡಿಯಲ್ಲಿ ಉದ್ವಿಗ್ನಗೊಂಡಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಉಭಯ ದೇಶಗಳ ಮೇಜರ್ ಜನರಲ್ ಮಟ್ಟದ ಮಾತುಕತೆ ಆರಂಭವಾಗಿದೆ.

ಕೊರೋನಾಗೆ ಎ.ಎಸ್.ಐ ಬಲಿ

ಬೆಂಗಳೂರು : ಕೊರೋನಾ ವೈರಸ್ ಗೆ ಎ.ಎಸ್.ಐ ಓರ್ವರು ಬಲಿಯಾಗಿದ್ದಾರೆ.

ಕೊರೊನಾ ವೈರಸ್ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದೆ.  ಸಾವಿನ ಸಂಖ್ಯೆ ಸಹ ಗಣನೀಯವಾಗಿ ಏರುತ್ತಿದೆ.    ಬೆಂಗಳೂರಿನಲ್ಲಿ 33 ಮಂದಿ ಕೊರೋನಾ ಗೆ ಬಲಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.

ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ವಿ.ವಿ ಪುರಂ ಸಂಚಾರಿ ಪೊಲೀಸ್ ಎ.ಎಸ್.ಐ ಜೂನ್ 13 ರಂದು ಮನೆಯಲ್ಲಿ ನಿಧನರಾಗಿದ್ದರು. ಅವರ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇಂದು ವರದಿಯಲ್ಲಿ ಕೊರೊನಾ ಸೋಂಕು ಇದ್ದ ಬಗ್ಗೆ ಖಚಿತವಾಗಿದೆ.

ಪಾವಗಡದಲ್ಲಿ ರಕ್ತದಾನ- ಸಿಬ್ಬಂದಿಗೆ ಅಭಿನಂದನೆ

ಪಾವಗಡ : ಕೊರೊನಾ ಅನ್ನುವ ಪೆಡಂಭೂತ ನಮ್ಮ ರಾಜ್ಯದ್ದಲ್ಲಿ ಹರಡಿದ್ದಲ್ಲ ಅದು ಅನ್ಯ ರಾಷ್ಟ್ರ , ರಾಜ್ಯಗಳಿಂದ ಹರಡಿರೋ ವೈರಸ್ ಅದನ್ನು ಓಡಿಸುವ ಮನಸ್ಥೈರ್ಯ ವೃದ್ದಿಸಿಕೊಳ್ಳಿ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.

ಪಟ್ಟಣದ ಎಸ್.ಎಸ್ ಕೆ ರಂಗ ಮಂದಿರದಲ್ಲಿ ಎಚ್.ವಿ ವೆಂಕಟೇಶ್ ಅಭಿಮಾನಿ ಬಳಗ ಆಯೋಜಿಸಿದ್ದ  ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನತೆ ಕೊರೋನಾ ಬಗ್ಗೆ ಹೆದರುವ ಅವಶ್ಯವಿಲ್ಲ ಧೈರ್ಯವಾಗಿ ಎದುರಿಸುವ ಮನಶಕ್ತಿ ವೃದ್ದಿಸಿಕೊಳ್ಳಬೇಕು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ ಎಮದರು.

ಆರೋಗ್ಯ ಇಲಾಖೆ, ಕಂದಾಯ,  ಪೊಲೀಸ್ ಇಲಾಖೆ ಗಳ ಸಿಬ್ಬಂದಿ ಹಗಲಿರುಳು ಕೊರೋನಾ ನಿಯಂತ್ರಿಸಲು ಶ್ರಮಿಸಿದ್ದಾರೆ. ಅವರ  ಸೇವಾ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ವಿ .ವೆಂಕಟೇಶ್ ಮಾತನಾಡಿ,  ಕೊರೊನಾ  ಹಿನ್ನೆಲೆ ಮೂರು ತಿಂಗಳಿಂದ ಹಗಲು ರಾತ್ರಿಯೆನ್ನದೆ ಶ್ರಮಿಸಿದ ಎಲ್ಲಾ ಇಲಾಖೆಗಳ ಸಿಬ್ಬಂದಿಗಳನ್ನು ಅಭಿನಂದಿಸುವುದು ಎಲ್ಲರ ಕರ್ತವ್ಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ ವೆಂಕಟೇಶ್ ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ  ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ಅಭಿಮಾನಿಗಳು  ರಕ್ತ ದಾನ ಮಾಡಿದರು.

ಮುಖಂಡ ಟಿ. ನರಸಿಂಹಯ್ಯ, ಮಾಜಿ ಶಾಸಕ ಸೋಮ್ಲನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜು. ಆರೋಗ್ಯಾಧಿಕಾರಿ ತಿರುಪತಯ್ಯ , ಮುಖಂಡರಾದ ಶಂಕರ್ ರೆಡ್ಡಿ, ಪುರಸಭಾ ಸದಸ್ಯರಾದ ರಾಜೇಶ್, ಬಾಲ ಸುಬ್ರಮಣ್ಯಂ, ವೇಲು, ರವಿ, ಶಾ ಬಾಬು ಉಪಸ್ಥಿತರಿದ್ದರು.

 

ಇಂದಿರಾಗಾಂಧಿ ವಿರುದ್ಧ ರಾಜಕುಮಾರ್ ಸ್ಪರ್ಧೆ ಮಾಡಿಸಲು ಸಜ್ಜಾಗಿದ್ದೆ’ ಎಂದರು ದೇವೇಗೌಡರು

ಜಿ ಎನ್ ಮೋಹನ್


ನಾನು ಇನ್ನೂ ಆಫೀಸ್ ನೊಳಗೆ ಕಾಲಿಟ್ಟಿರಲಿಲ್ಲ. ಫೋನ್ ರಿಂಗಾಯಿತು.

ಒಂದೇ ಏಟಿಗೆ ಫೋನ್ ಎತ್ತುವ ಆಸಾಮಿಯೇ ನಾನಲ್ಲ. ಹಾಗಾಗಿ ಸುಮ್ಮನಿದ್ದೆ. ಯಾವಾಗ ಮೇಲಿಂದಮೇಲೆ ಆ ಫೋನ್ ಸಡ್ಡು ಮಾಡಲು ಪ್ರಾರಂಭಿಸಿತೋ ಎತ್ತಿದೆ.

ಆ ಕಡೆಯಿಂದ ಎಚ್ ಡಿ ಕುಮಾರಸ್ವಾಮಿ. ‘ಏನ್ ಮೋಹನ್, ಅಪ್ಪನ್ನ ತುಂಬಾ ನಗಿಸಿಬಿಟ್ಟರಂತೆ. ತುಂಬಾ ಗೆಲುವಾಗಿದ್ರಂತೆ ಅವರು ಹಾಗೆ ಮನಸ್ಸು ಬಿಚ್ಚಿ ಮಾತಾಡೋದೇ ಅಪರೂಪ. ನಿಮಗೆ ಥ್ಯಾಂಕ್ಸ್ ಹೇಳ್ಬೇಕು’ ಎಂದರು.

ಅರೆ! ನಾನು ಕಬ್ಬನ್ ಪಾರ್ಕ್ ನಲ್ಲಿ ಸುಮಾರು ಎರಡು ಗಂಟೆ ಹೊತ್ತು ದೇವೇಗೌಡರು ನಮ್ಮ ಮನೆಯ ಹಿರಿಯಣ್ಣನೇನೋ ಎಂಬಂತೆ ಮಾತಿಗೆ ಕೂರಿಸಿಕೊಂಡದ್ದು ಏನು ಮಾತಾಡಿದ್ದೆ ಎನ್ನುವುದು ಎಲ್ಲವೂ ಅವರಿಗೆ ಆಗಲೇ ಪಾಸ್ ಆಗಿತ್ತು.

‘ಓ! ರಾಜಕಾರಣವೇ’ ಎಂದುಕೊಂಡು ಕ್ಯಾಬಿನ್ ಸೇರಿಕೊಂಡೆ.

ನನ್ನ ಜೊತೆ ಅಷ್ಟೂ ಹೊತ್ತು ಕಲ್ಲು ಬೆಂಚಿನ ಮೇಲೆ, ಹುಲ್ಲು ಹಾಸಿನ ಮೇಲೆ, ಮಣ್ಣಿನ ನೆಲದ ಮೇಲೆ ಕುಳಿತ, ನಿಂತ, ನಕ್ಕ, ಮುಖ ಸಪ್ಪೆ ಮಾಡಿಕೊಂಡ, ಕೆಲವೊಮ್ಮೆ ಭಾವುಕರಾದ ದೇವೇಗೌಡರು ನೆನಪಾದರು.

ಕುಮಾರಸ್ವಾಮಿ ಅವರಿಗೆ ಹಾರ್ಟ್ ಬೈ ಪಾಸ್ ಆದಾಗ ಆಸ್ಪತ್ರೆಯಲ್ಲಿದ್ದ ಅಷ್ಟೂ ಸಮಯ ಅವರ ಹಾಸಿಗೆಗೆ ಅಂಟಿಕೊಂಡು ಜಪಮಾಲೆ ಹಿಡಿದು ಪ್ರಾರ್ಥಿಸಿದ್ದು ಇದೆ ದೇವೇಗೌಡರು.

ಪತ್ನಿ ಚನ್ನಮ್ಮನವರ ಮೇಲೆ ಆಸಿಡ್ ಅಟ್ಯಾಕ್ ಆದಾಗ ದಿನಗಟ್ಟಲೆ ಊಟ ಬಿಟ್ಟವರು, ಕಣ್ಣೀರು ಹಾಕಿದವರು ಈ ದೇವೇಗೌಡರು.

ಚಿಕ್ಕಬಳ್ಳಾಪುರದಿಂದ ಹರದನಹಳ್ಳಿಗೆ ಆಲೂಗಡ್ಡೆ ಮಾರಲು ಬರುತ್ತಿದ್ದವರೊಬ್ಬರು ಚನ್ನಮ್ಮ ಅವರ ಬಗ್ಗೆ ಪ್ರಸ್ತಾಪ ಮಾಡಿದರು. ದೇವೇಗೌಡರು ಅಮ್ಮ ಹೇಳಿದ ಹುಡುಗಿಯನ್ನು ಮದುವೆಯಾದರು.

ದೇವೇಗೌಡರು ಅವರ ಎಂದಿನ ಶೈಲಿಯಲ್ಲಿ ನನ್ನ ಹೆಗಲ ಮೇಲೆ ಕೈ ಹಾಕಿ ಏನೂ ಮಾತನಾಡಲಿಲ್ಲ. ಆದರೆ ನಾನು ಅವರ ಅನುಗಾಲದ ಮಿತ್ರನೇನೋ ಎನ್ನುವಂತೆ ಅಂತರಂಗದ ಮಾತುಗಳನ್ನಾಡಲು ಆರಂಭಿಸಿದರು.

ನನಗೆ ಅವಾಗ ಮೂರು ವರ್ಷ. ಮನೆ ಅಂಗಳದಲ್ಲಿ ಮಣ್ಣಲ್ಲಿ ಆಡ್ತಾ ಇದ್ದೆ. ಇನ್ನೂ ಸ್ಕೂಲಿಗೆ ಸೇರಿಸಿರಲಿಲ್ಲ ನನ್ನ. ಒಬ್ಬ ಬುಡಬುಡಿಕೆ ಬಾರಿಸುತ್ತಾ ಮನೆ ಅಂಗಳಕ್ಕೆ ಬಂದ. ಅಲ್ಲೇ ಇದ್ದ ನನ್ನನ್ನು ನೋಡಿದವನೇ ‘ಈ ಹುಡುಗ ಚಕ್ರವರ್ತಿ ಆಗ್ತಾನೆ’ ಅಂತ ಭವಿಷ್ಯ ಹೇಳಿದ.

ನಮ್ಮ ದೊಡ್ಡಮ್ಮನಿಗೆ ಇನ್ನಿಲ್ಲದ ಸಿಟ್ಟು ಬಂತು. ‘ಮೂಗಲ್ಲಿ ಗೊಣ್ಣೆ ಸುರಿಸ್ಕೊಂಡು ಕುಂತಿರೋ ಇವನು ಚಕ್ರವರ್ತಿ ಆಗ್ತಾನಾ, ಭಿಕ್ಷಕ್ಕೆ ಬಂದಿದೀಯಾ, ಭಿಕ್ಷಾ ತಗೊಂಡು ಸುಮ್ಮನೆ ಹೋಗು’ ಅಂತ ಕೂಗಾಡಿದರು.

ನನ್ನ ಅಮ್ಮ ದನದ ಕೊಟ್ಟಿಗೆಯಲ್ಲಿ ಕಸ ಗುಡಿಸುತ್ತಾ ಇದನ್ನೆಲ್ಲಾ ಸುಮ್ಮನೆ ನೋಡ್ತಾ ನಿಂತಿದ್ದರು. ಆ ಅಷ್ಟೂ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ. ಚಕ್ರವರ್ತಿ ಅಂದರೆ ನನಗೆ ಅರ್ಥಾನೂ ಸುಮಾರು ಕಾಲ ಗೊತ್ತಿರಲಿಲ್ಲ ಎಂದು ನಕ್ಕರು.

ನಮ್ಮಮ್ಮ ಹರದನಳ್ಳಿ ದೇವೇಗೌಡರಿಗೆ ಎರಡನೆಯ ಹೆಂಡತಿ. ನಮ್ಮ ತಂದೆಯ ಮೊದಲನೇ ಹೆಂಡತಿಗೆ ಕಾಲರಾ ಬಂದು ತೀರಿಹೋದರು.

ನನ್ನ ಅಮ್ಮನಿಗೆ ಅದು ಯಾರು ದೇವಮ್ಮ ಅಂತ ಹೆಸರಿಟ್ಟರೋ ನಿಜಕ್ಕೂ ಇನ್ನಿಲ್ಲದ ದೈವ ಭಕ್ತೆ ಆಕೆ. ಪ್ರತೀ ದಿನ ಹೋಗಿ ನಮ್ಮೂರ ದೇವಸ್ಥಾನಕ್ಕೆ ರಂಗೋಲಿ ಹಾಕಿ ಬರುತ್ತಿದ್ದರು. ಈ ದೇವರು ಪೂಜೆ ಎಲ್ಲಾ ನನಗೆ ಬಂದಿರೋದು ಅವರಿಂದಾನೆ ಅನಿಸುತ್ತೆ ಎಂದು ನನ್ನ ಕಡೆ ನೋಡಿದರು.

ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಅವರು ಆ ವೇಳೆಗಾಗಲೇ ಪೂಜೆ ಮಗಿಸಿ ಬಂದಿದ್ದರು ಎನ್ನುವುದಕ್ಕೆ ಹಣೆಯ ಮೇಲೂ, ಕಿವಿಯ ಮೇಲೂ ಸಾಕಷ್ಟು ಸಾಕ್ಷಿಗಳಿದ್ದವು.

ನನಗೆ ಅವರು ಇನ್ನೂ ಆಗ ತಾನೇ ಮೀಸೆ ಬಂದ ಕಾಲಕ್ಕೆ ಹಾಕಿ ಬ್ಯಾಟ್ ತುಂಡಾಗುವಂತೆ ತಮ್ಮ ಕಾಲೇಜಿನ ಹುಡುಗನೊಬ್ಬನನ್ನು ಬಡೆದಿದ್ದು ಗೊತ್ತಿತ್ತು.

ಹಾಗಾಗಿ ಮೆಲ್ಲಗೆ ನೀವು ರಾಜಕಾರಣಕ್ಕೆ ಹಾಕಿ ಬ್ಯಾಟ್ ಬೀಸಿಯೇ ಬಂದಿರಿ ಆಲ್ವಾ ಎಂದೆ.

ಗೌಡರು ಆ ಕಾಲಕ್ಕೆ ಜಾರಿಕೊಂಡರು.

ಪಾಲಿಟೆಕ್ನಿಕ್ ಓದುವಾಗ ಆದ ಘಟನೆ ಅದು. ಕ್ಲಾಸಿನ ಯೂನಿಯನ್ ಗೆ ಮೊದಲೆರಡು ವರ್ಷ ಪ್ರೆಸಿಡೆಂಟ್ ಆಗಿದ್ದವನು ಹಾಸನದ ಡಿ ಎಂ ಓ ರವರ ಮಗ. ಆತ ಬೈಕ್ ನಲ್ಲಿ, ಕಾರ್ ನಲ್ಲಿ ಬರ್ತಾ ಇದ್ದ. ನಾವೋ ಬಾಡಿಗೆ ರೂಮ್ ಮಾಡಿಕೊಂಡು ಅಡಿಗೆ ಮಾಡಿಕೊಂಡು ಓದುತ್ತಿದ್ದ ಹುಡುಗರು.

ಮೂರನೇ ವರ್ಷ ಯಾರು ಪ್ರೆಸಿಡೆಂಟ್ ಅನ್ನುವ ಪ್ರಸ್ತಾಪ ಬಂದಾಗ, ’ನಾನು ಆಗುತ್ತೇನೆ’ ಎಂದೆ. ಅವನು ಒರಟಾಗಿ, ’ಯಾವನೋ ಅವನು ಗಂಡು’ ಎಂದು ಮಾತನಾಡಿದ.

ಆಗ ನಾನು ಹಾಕಿ ಆಡ್ತಾ ಇದ್ದೆ. ಕೈಯಲ್ಲಿ ಹಾಕಿ ಸ್ಟಿಕ್ ಇತ್ತು, ಏನು ಸಿಟ್ಟು ಬಂತೋ ಎನೋ, ಬೀಸಿ ಹೊಡೆದೆ. ಸ್ಟಿಕ್ ಮುರಿದೇ ಹೋಯಿತು…

’ನಿನ್ನ ಡಿಸ್ ಕ್ವಾಲಿಫೈ ಮಾಡ್ತೀನಿ, ನೀನು ಮಿಸ್ ಬಿಹೇವ್ ಮಾಡಿದ್ದೀಯಾ’ ಅಂತ ಪ್ರಿನ್ಸಿಪಾಲ್ ಬೈದರು. ನಾನು ಸುಮ್ಮನೆ ನಿಂತೆ. ಆದರೆ ಎಲೆಕ್ಷನ್ ಗೆ ಕಂಟೆಸ್ಟ್ ಮಾಡದೇ ಬಿಡಲಿಲ್ಲ. ಗೆದ್ದೇ ಸಹಾ.. ಎಂದರು.

ಅವರಿಗೆ ತಮ್ಮ ಎಂದೂ ಮಾತನಾಡದ ವಿಷಯಗಳನ್ನು ಮಾತನಾಡುವ ಹುಕಿ ಬಂದಿತ್ತು.

ಕಬ್ಬನ್ ಪಾರ್ಕ್ ನ ಹಸಿರು ಹುಲ್ಲಿನ ಮೇಲೆ ನನ್ನನ್ನೂ ಕೂರಿಸಿಕೊಂಡವರೇ ಹೊಳೇನರಸಿಪುರದಲ್ಲಿ ನಾನು ಹೈಸ್ಕೂಲಿಗೆ ಹೋಗುವಾಗ ಒಂದು ದೊಡ್ಡ ಪಾಠ ಕಲಿತೆ ಎಂದರು.

ನಾನು ನನ್ನ ನೋಟ್ಸ್ ಚೆಕ್ ಮಾಡಿಕೊಂಡೆ. ಉಹುಂ ಆ ವಿಷಯ ಇರಲೇ ಇಲ. ನಾನೂ ದೊಡ್ಡ ಕಿವಿ ಮಾಡಿಕೊಂಡೆ.

ಹಾಗೆ ಅಲ್ಲಿರುವಾಗ ನನ್ನ ಬಟ್ಟೆಗಳನ್ನು ತೊಳೆಯಲು ಹೊಳೆಗೆ ಹೋಗುತ್ತಿದ್ದೆ. ಬಟ್ಟೆ ತೊಳೆದು ಬಂಡೆಯ ಮೇಲೆ ಒಣಗಿಹಾಕಿ, ಈಜು ಹೊಡೆದೆ. ವಾಪಸ್ ಬರುವಾಗ ನೋಡಿದರೆ ಬೀಗದ ಕೈ ಎಲ್ಲೋ ಕಳೆದುಹೋಗಿದೆ. ಆ ಬಟ್ಟೆಗಳನ್ನೆಲ್ಲಾ ಮುದುರಿಟ್ಟುಕೊಂಡು ನಾನಿದ್ದ ಬಾಡಿಗೆ ಮನೆಗೆ ಬಂದು ಮನೆ ಓನರ್ ಹತ್ತಿರ ನನ್ನ ಬಟ್ಟೆಗಳನ್ನು ಕೊಟ್ಟು ಮತ್ತೆ ಹೊಳೆ ದಂಡೆಗೆ ಓಡಿದೆ.

ಅಲ್ಲೆಲ್ಲಾ ಹುಡುಕಿದೆ. ಅಲ್ಲಿ ನನಗೆ ಎರಡು ರುಪಾಯಿ ನೋಟು ಸಿಕ್ಕಿತು. ಖುಷಿಯಲ್ಲಿ ಕೈಗೆತ್ತಿಕೊಂಡೆ. ಬೀಗ ರಿಪೇರಿ ಮಾಡುವವನಿಗೆ ಮೂರಾಣೆ ಕೊಟ್ಟು ಬೀಗ ತೆಗೆಸಿದೆ.

ಮಿಕ್ಕ ದುಡ್ಡಿಗೆ ನಾವು ಹುಡುಗರೆಲ್ಲಾ ಊರಿನ ಫೇಮಸ್ ಹೋಟಲ್ ವೆಂಕಟೇಶಭವನ್ ಗೆ ಹೋಗಿ ದೋಸೆ, ಆಂಬೊಡೆ ಎಲ್ಲಾ ತಿಂದು ಸಂತೋಷಪಟ್ಟೆವು. ಆಗ ನಾನು ಶಾಲೆಗೆ ಫೀಸ್ ಕಟ್ಟಲೆಂದು ಪುಸ್ತಕದಲ್ಲಿ ಎರಡೆರಡು ರೂಗಳ ಎರಡು ನೋಟುಗಳನ್ನಿಟ್ಟುಕೊಂಡಿದ್ದೆ.

ಶಾಲೆಗೆ ಹೋಗಿ ನೋಡ್ತೀನಿ, ಅದಿಲ್ಲ. ಏನಾಯ್ತು ಎಂದು ಬಂದ ದಾರಿಯಲ್ಲೇ ಹೋಗಿ ಹುಡುಕಿದೆ, ಸಿಗಲೇ ಇಲ್ಲ. ಆಗ ನಮ್ಮ ರೂಂನಲ್ಲಿ ಅಡಿಗೆ ಮಾಡಿಕೊಳ್ಳಲೆಂದು ೨೦ ಸೇರು ರಾಗಿ, ಎರಡು ಸೇರು ಅಕ್ಕಿ, ಸ್ವಲ್ಪ ಬೇಳೆ ಎಲ್ಲಾ ಕೊಟ್ಟಿದ್ದರು. ನಾನೇ ಅಡಿಗೆ ಮಾಡಿಕೊಳ್ಳುತ್ತಿದ್ದೆ. ಏನು ಮಾಡಲೂ ತೋಚದೆ ರುಪಾಯಿಗೆ ಮೂರು ಸೇರಿನ ಹಾಗೆ ಹನ್ನೆರಡು ಸೇರು ರಾಗಿ ಮಾರಿದೆ, ಫೀಸ್ ಕಟ್ಟಿದೆ,

ಆ ತಿಂಗಳೆಲ್ಲಾ ಒಂದು ಹೊತ್ತು ಊಟ, ಒಂದು ಹೊತ್ತು ಉಪವಾಸ. ಅಲ್ಲಿಗೆ ನನಗೆ ಸಿಕ್ಕ ೨ ರೂಪಾಯಿ ಪರರಿಗೆ ಖರ್ಚು ಮಾಡಿ ನಾನು ನನ್ನ ನಾಲ್ಕು ರುಪಾಯಿ ಕಳೆದುಕೊಂಡಿದ್ದೆ. ಪರರ ದುಡ್ಡನ್ನು ಮುಟ್ಟಬಾರದು ಎನ್ನುವುದಕ್ಕೆ ಇದು ಒಳ್ಳೆಯ ಪಾಠವಾಗಿತ್ತು.

‘ಅಮ್ಮನ ಬೆನ್ನ ಹಿಂದೆಯೇ ಸುತ್ತುತ್ತಿದ್ದ ಸಂಕೋಚದ ಹುಡುಗ ನೀವು. ಪ್ರಧಾನಿ ಆದಿರಿ..’ ಎಂದು ನಾನು ಮುಖ್ಯವಾದ ಪಾಯಿಂಟ್ ಎತ್ತಲು ಹೋದೆ.

ಅವರು ನನ್ನ ಮಾತು ಮುಂದುವರಿಸಲೂ ಬಿಡದೆ ನನ್ನ ಬದುಕಿನಲ್ಲಿ ಇಂತಹ ಭಗವಂತನ ಆಟಗಳು ತುಂಬಾ ಆಗಿದೆ. ಓದು ಮುಗಿಸಿ ಏನು ಮಾಡೋದು ಅಂತ ಗೊತ್ತಿಲ್ಲದೇ ಇದ್ದಾಗಲೂ ಇಂತಹದ್ದೇ ಭಗವಂತನ ಆತ ಆಯ್ತು ಎಂದರು.

ನಾನು ೧೦೦ ರೂಪಾಯಿ ಸಾಲ ಮಾಡಿ ಕಂಟ್ರಾಕ್ಟ್ ಕೆಲಸಕ್ಕೆ ಇಳಿದೆ. ವೀರಪ್ಪ ಅಂತ ಒಬ್ಬರು ಒಂದು ಕುಯ್ ಗತ್ತಿ ಇಟ್ಟುಕೊಂಡು ಹುಲ್ಲು ಕತ್ತರಿಸುತ್ತಾ ಕೂತಿದ್ದರು.

ಒಮ್ಮೆ ನನ್ನನ್ನು ನೋಡಿ ಯಾರಪ್ಪ ನೀನು ಎಂದರು. ನಾನು ಹರದನಹಳ್ಳಿ ದೊಡ್ಡಣ್ಣನ ಮಗ ಎಂದೆ. ’ಓಹೋ, ತುಂಬಾ ಚೆನ್ನಾಗಿ ಬದುಕಿದ ಮನೆ ಕಣಪ್ಪ. ಏನೋ ಈಗ ಹೀಗೆ ತೊಂದರೆ ಆಗಿದೆ. ನಿನ್ನ ಕಾಲಕ್ಕೆ ಇದು ಮೊದಲಿನಂತೆ ಸರಿ ಆದರೂ ಆಗಬಹುದು ಎಂದರು.

ನಾನು ಕೈ ಮುಗಿದು, ’ವೀರಪ್ಪನವರೆ, ಒಂದು ನೂರು ರೂಪಾಯಿ ಕೊಡ್ತೀರಾ’ ಎಂದು ಕೇಳಿದೆ. ಅವರು, ’ಅಯ್ಯೋ ಅಷ್ಟು ದುಡ್ಡು ನನ್ನ ಹತ್ತಿರ ಇಲ್ಲವಲ್ಲ, ಒಳ್ಳೆಯ ಕಷ್ಟಕ್ಕೆ ಬಂತಲ್ಲಾ, ಬಾ’ ಎಂದು ನನ್ನನ್ನು ಕರೆದುಕೊಂಡು, ಮೂರು ಮಹಡಿ ನಂಜುಂಡಶೆಟ್ಟರು ಅಂತ ಅವರ ಬಳಿ ಕರೆದುಕೊಂಡು ಹೋದರು.

ತಮ್ಮ ಕಿವಿಗಳಲ್ಲಿದ್ದ ಹತ್ತಕಡಕು ಬಿಚ್ಚಿಟ್ಟು, ’ನೂರು ರುಪಾಯಿ ಕೊಡು’ ಎಂದರು. ಆ ನೂರು ರೂಪಾಯಿ ಒದೆಯಲ್ಲಾ ಅದು ನನಗೆ ಇಂದಿಗೂ ಮರೆಯಲಾಗದ ನೂರು ರೂಪಾಯಿ. ಆ ದುಡ್ಡು ತೆಗೆದುಕೊಂಡು ನಾನು ಕಂಟ್ರಾಕ್ಟ್ ಕೆಲಸ ಶುರು ಮಾಡಿದೆ. ಪುಣ್ಯಾತ್ಮ ಅವರು ಎಂದು ಧ್ಯಾನಸ್ಥರಾದರು.

ನನಗೋ ಅವರು ರಾಜಕೀಯದಲ್ಲಿ ಬ್ಯಾಟ್ ಬೀಸಿದ್ದಾರೆ ಬಗ್ಗೆ ಕುತೂಹಲವಿತ್ತು. ಅವರ ಧ್ಯಾನಕ್ಕೆ ಭಂಗ ಬಂದರೂ ಬರಲಿ ಎಂದು ‘ನಿಮ್ಮ ರಂಗ ಪ್ರವೇಶ ಹೇಗೆ’ ಎಂದು ಕೇಳಿಯೇಬಿಟ್ಟೆ.

‘ನನ್ನ ರಾಜಕೀಯ ಗುರುಗಳು ಎ ಜಿ ರಾಮಚಂದ್ರ ರಾಯರು. ಬದುಕಿನ ಪಾಠಗಳನ್ನೂ ಅವರು ನನಗೆ ಹೇಳಿಕೊಟ್ಟವರು, ಕುಡಿಯುವುದು ತಪ್ಪು ಎಂದು ಹೇಳಿಕೊಟ್ಟವರು. ಎಂದೂ ಕುಡಿದವನಲ್ಲ ನಾನು. ೧೯೫೭ರಲ್ಲಿ ಅವರು ತಾವೇ ದೆಹಲಿಗೆ ಹೋಗಿ, ಈ ಸಲ ಚುನಾವಣೆಗೆ ನಾನು ನಿಲ್ಲಲ್ಲ, ಈ ಹುಡುಗನಿಗೆ ಸೀಟ್ ಕೊಡಿ ಅಂದರು. ಸೀಟ್ ಸಿಕ್ಕಿತು, ಎಲೆಕ್ಷನ್ ಗೆ ನಿಂತೆ, ಗೆದ್ದೆ.

ನನ್ನ ಹತ್ತಿರ ೧೦ ರೂ ಇಲ್ಲ. ಗೆದ್ದ ಮೇಲೆ ಒಬ್ಬೊಬ್ಬರೇ ಶುರು ಮಾಡಿದರು, ’ನಾನು ನೂರು ಖರ್ಚು ಮಾಡಿದ್ದೇನೆ, ನನ್ನದು ೨೦೦ ಆಯಿತು’ ಹೀಗೆ. ಎಲ್ಲಾ ಬರೆದುಕೊಂಡೆ. ನಮ್ಮ ಜಮೀನನ್ನು ಭೂ ಅಡಮಾನ ಬ್ಯಾಂಕಿಗೆ ೧೩ ಸಾವಿರಕ್ಕೆ ಅಡ ಇಟ್ಟೆ. ಎಲ್ಲರನ್ನೂ ಕರೆದು ಆ ಸಾಲ ತೀರಿಸಿದೆ. ಅಲ್ಲಿಂದ ನನ್ನ ರಾಜಕೀಯ ಜೀವನ ಪ್ರಾರಂಭ ಆಯ್ತು.

ನಾನು ಅವರ ಬಿ ಪಿ ಏರಿಸಬಹುದಾದ ಪ್ರಶ್ನೆಯನ್ನು ಕೈನಲ್ಲಿಟ್ಟುಕೊಂಡು ಕಾಯುತ್ತಿದ್ದೆ. ‘ಸಾರ್, ಕುಮಾರಸ್ವಾಮಿ ಅವರು ಬಿಜೆಪಿ..’ ಎಂದು ಹೇಳುತ್ತಿದ್ದಂತೆ ಒಂದೇ ಏಟಿಗೆ ನನ್ನ ಮಾತನ್ನೇ ತುಂಡರಿಸಿ ಹಾಕುವರಂತೆ ‘ನನ್ನ ಜೀವನದಲ್ಲೇ ನಾನು ಮೊದಲ ಬಾರಿಗೆ ಈ ಸುದ್ದಿ ಕೇಳಿದ ತಕ್ಷಣವೇ ತಲೆತಿರುಗಿ ಬಿದ್ದೆ. ಅದುವರೆಗೂ ಯಾವ ಬಿ ಪಿ ಯೂ ನನ್ನ ಹತ್ರ ಸುಳಿದಿರಲಿಲ್ಲ. ಆದರೆ ಅವತ್ತು ನನ್ನ ಬಿಪಿ ೨೨೦ / ೧೫೦ ಇತ್ತು’.

‘ಹೊರಗಡೆ ಎಲ್ಲಾ ದೇವೇಗೌಡರು ಸಂಚುಮಾಡಿ ಬಿಜೆಪಿ ಜೊತೆ ಸಂಬಂಧ ಮಾಡಿದರು ಎಂದು ಮಾತನಾಡಿಕೊಂಡರು. ಕುಮಾರಸ್ವಾಮಿ ದಾರಿ ತಪ್ಪಿದಾಗ ನಾನು ಮೂರುತಿಂಗಳು ಅವರ ಮುಖ ನೋಡಲಿಲ್ಲ ಗೊತ್ತಾ’ ಎಂದು ನನ್ನನ್ನು ನೋಡಿದರು.

ನಾನು ಅವರೇ ಮಾತನಾಡಲಿ ಎಂದು ಸುಮ್ಮನಿದ್ದೆ ಅವರಿಗೆ ಇನ್ನೂ ಹೇಳುವುದು ಇದೆ ಎನ್ನುವುದು ಅವರ ಮುಖದಲ್ಲಿ ಚಿಮ್ಮಿದ್ದ ಸಿಟ್ಟಿನಿಂದಲೇ ಗೊತ್ತಾಗುತ್ತಿತ್ತು.

‘ನನ್ನ ಆರೋಗ್ಯ ತೀರಾ ಹೆಚ್ಚುಕಡಿಮೆ ಆದಾಗ ನನ್ನನ್ನು ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆಗ ಆ ಮುಖ್ಯಮಂತ್ರಿಗಳಿಗೆ ವಿಷಯ ಗೊತ್ತಾಯಿತು. ಮನೆಗೆ ಬಂದ ಕುಮಾರಸ್ವಾಮಿ ‘ನಾನು ಬಿಜೆಪಿಗೆ ಮಾತುಕೊಟ್ಟೆ, ಸರ್ಕಾರ ಮಾಡಿದೆ. ಇವತ್ತೇ ರಾಜಿನಾಮೆ ಕೊಡ್ತೀನಿ’ ಅಂದರು. ನಾನು ಹೇಳಿದ್ದು ಒಂದೇ ಮಾತು, ’ನಾನು ಗಳಿಸಿದ ಆಸ್ತಿ ನಾಶ ಆಯ್ತು, ಇನ್ನು ಅದನ್ನು ಮತ್ತೆ ಸಂಪಾದನೆ ಮಾಡಕ್ಕಾಗಲ್ಲ, ಹೋಗು’ ಎಂದೆ.

‘ಒಂದು ಜುಡಿಷಿಯಲ್ ಕಾಂಪ್ಲೆಕ್ಸ್ ಉದ್ಘಾಟನೆ ಮಾಡುವಾಗ ಕುಮಾರಸ್ವಾಮಿ ’ನಾನು ಯಾವಾಗ ರಾಜಿನಾಮೆ ಕೊಡುತ್ತೇನೋ ಗೊತ್ತಿಲ್ಲ, ರೇವಣ್ಣ ನನ್ನ ಅಣ್ಣ, ನಮ್ಮ ತಂದೆ ಮನಸ್ಸಿನಲ್ಲೇನಿದೆಯೋ ಗೊತ್ತಿಲ್ಲ, ಅವರೇ ಮುಖ್ಯಮಂತ್ರಿ ಆಗಬೇಕು ಅಂತಿತ್ತೇನೋ’ ಎಂದು ಹೇಳಿದರು.

ಬಾರ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ನಮ್ಮನೆಗೆ ಓಡಿಬಂದರು, ಏನ್ ಸಾರ್ ಯಾವತ್ತು ರಾಜಿನಾಮೆ ಕೊಡ್ತೀನೋ ಗೊತ್ತಿಲ್ಲ ಅಂತಿದಾರೆ ಅಂದರು. ನಾನು ’ಅಧಿಕಾರ ಬಿಡೋದು ಅಷ್ಟು ಸುಲಭಾನಾ? ಹೋಗಿ ಸುಮ್ಮನೆ’ ಅಂದೆ’ ಎಂದರು.

ಅವರ ಮುಖದಲ್ಲಿ ಕಂಡ ಸಿಟ್ಟೇ ನನಗೆ ಇನ್ನೊಂದು ಪ್ರಶ್ನೆಯನ್ನು ತಕ್ಷಣ ಅವರ ಮುಂದೆ ಇಡಲು ಕಾರಣವಾಯಿತು.

‘ಸರ್ ದೇವೇಗೌಡ್ರಿಗೆ ತುಂಬಾ ಸಿಟ್ಟು ಅಂತಾರೆ. ಹೌದಾ?’ ಎಂದೆ.

‘ಹೌದು. ತಪ್ಪುಮಾಡಿದ್ರೆ ನೇರ ಮುಖಕ್ಕೇ ಹೇಳುತ್ತೇನೆ. ರಾಮಕೃಷ್ಣ ಹೆಗಡೆ ಒಂದು ಸಲ ನಿಮ್ಮ ಶತ್ರುವನ್ನ ನೀವೇ ಹುಟ್ಟು ಹಾಕಿಕೊಳ್ಳುತ್ತೀರಿ, you not only speak the truth, you speak the naked truth and you also create your own enemies’ ಅಂದರು. t doesn’t matter ಅಂದಿದ್ದೆ ನಾನು’.

‘ಇದೇ ಸಿಟ್ಟು ಅವರಿಗೆ ಆ ಕಾಲದಲ್ಲಿ ಇಂದಿರಾಗಾಂಧಿಯ ಬಗ್ಗೆಯೂ ಇತ್ತು. ಅದಕ್ಕೆ ಕೇಳಿದೆ. ಚಿಕ್ಕಮಗಳೂರು ಎಲೆಕ್ಷನ್ ನಲ್ಲಿ ನೀವು ದೊಡ್ಡ ಪ್ಲಾನ್ ಮಾಡಿದ್ರಿ’ ಅಂತ.

‘ಇಂದಿರಾಗಾಂಧಿಯವರು ೭೭ರಲ್ಲಿ ಚುನಾವಣೆಯಲ್ಲಿ ಸೋತಾಗ ಇಲ್ಲಿ ಚಿಕ್ಕಮಗಳೂರಿನಲ್ಲಿ ಡಿ ಬಿ ಚಂದ್ರೇಗೌಡರು ರಿಸೈನ್ ಮಾಡಿದರು. ಇಂದಿರಾಗಾಂಧಿ ಇಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂದಾಗ, ಅವರಿಗೆ ಸಮಾನವಾಗಿ ನಿಲ್ಲಬಲ್ಲ ವ್ಯಕ್ತಿ ಡಾ ರಾಜ್ ಕುಮಾರ್ ಎಂದುಕೊಂಡು ಅವರ ಬಳಿ ಹೋದೆ’.

‘ಗಂಟೆಗಟ್ಟಲೆ ಕನ್ವಿನ್ಸ್ ಮಾಡೋಕೆ ಪ್ರಯತ್ನಿಸಿದೆ. ಅವರು ಬಿಲ್ ಕುಲ್ ಒಪ್ಪಲಿಲ್ಲ. ನಾನೂ ಸಹಾ ಜಗ್ಗಲಿಲ್ಲ. ಅವರನ್ನ ಒಪ್ಪಿಸಿಯೇ ಸಿದ್ಧ ಅಂತ ತಯಾರಿ ಮಾಡಿದೆ. ಅದಕ್ಕಾಗಿ ಎಂಜಿಆರ್ ಬಳಿ ಹೋದೆ. ಅವರು ಹೇಳಿದ್ರೆ ರಾಜಕುಮಾರ್ ಒಪ್ತಾರೆ ಅಂತ’.

‘ಆದರೆ ಎಂಜಿಆರ್ ಅವರು ’ರಾಜ್ ಕುಮಾರ್ ಬಹಳ ಎತ್ತರಕ್ಕೆ ಬೆಳೆದಿರುವ ಕಲಾವಿದ, ಅವರನ್ನು ಒತ್ತಾಯ ಮಾಡಬೇಡಿ’ ಎಂದರು. ನಾನು ಅಲ್ಲಿಗೆ ನನ್ನ ಪ್ರಯತ್ನ ಕೈಬಿಟ್ಟೆ’ ಎಂದರು.

ರಾಜಕುಮಾರ್ ಅವರೇ ಸರಿ ಇಂದಿರಾಗಾಂಧಿಗೆ ಸ್ಪರ್ಧೆ ನೀಡಲು ಎಂದು ದೇವೇಗೌಡರು ನಿರ್ಧರಿಸಲು ಕಾರಣ ಇತ್ತು. ಯಾಕಂದರೆ ಅವರು ವಿರೋಧ ಪಕ್ಷದ ನಾಯಕರಾಗುವವರೆಗೆ ರಾಜಕುಮಾರ್ ಅವರ ಎಲ್ಲಾ ಸಿನಿಮಾಗಳನ್ನ ನೋಡಿದ್ದರು.

ಹಾಗಾಗಿ ನಿಮಗೆ ಸಿನೆಮಾ ಮೋಹ ಜಾಸ್ತಿ ಅಂತ ಒಂದು ಫುಲ್ ಟಾಸ್ ಹಾಕಿದೆ.

ಅವರು ನಕ್ಕು ‘ರಾಜ್ ಕುಮಾರ್ ಅಂದ್ರೆ ಕ್ಲಾಸಿಕ್ ಆಕ್ಟರ್ ಬಿಡಿ’ ಅಂದರು.

‘ಮೌಲ್ಯಗಳ ಮೇಲೆ ಬರುವ ಸಿನಿಮಾಗಳು ನನಗಿಷ್ಟ. ಭೂತಯ್ಯನ ಮಗ ಅಯ್ಯು, ಹಿಂದಿಯಲ್ಲಿ ಬೂಟ್ ಪಾಲೀಶ್, ಆವಾರ ಹೀಗೆ ನೀತಿಬೋಧನೆ ಇರುವ ಚಿತ್ರಗಳನ್ನು ನೋಡಿದ್ದೆ’ ಎಂದು ‘ಬೆಳ್ಳಿ’ ಕಾಲವನ್ನು ಬಿಚ್ಚಿಟ್ಟರು.

ಅವರ ಜೊತೆ ಅಷ್ಟೂ ಹೊತ್ತು ಮಾತನಾಡುವಾಗ ನಾನು ವಿಶೇಷವಾಗಿ ಗಮನಿಸಿದ್ದು ಚನ್ನಮ್ಮನವರ ಬಗ್ಗೆ ಅವರಿಗಿದ್ದ ಅಪಾರ ಪ್ರೀತಿಯನ್ನು.

‘ಯಾವಾಗ ಚಿಕ್ಕಬಳ್ಳಾಪುರದ ಹನುಮಪ್ಪ ಬಂದು ಚನ್ನಮ್ಮನವರನ್ನು ನನಗೆ ಜೊತೆ ಮಾಡಿ ಹೋದನೋ ಅವತ್ತಿನಿಂದ ಇವತ್ತಿನವರೆಗೆ ನಾನು ಒಂದು ಸಲವೂ ಅವರ ಜೊತೆ ಜಗಳ, ಮನಸ್ತಾಪ ಮಾಡಿಕೊಂಡದ್ದೇ ಇಲ್ಲ. ಅವರು ನನ್ನ ಮನಸನ್ನ ಒಂದು ದಿನವೂ ನೋಯಿಸಿಲ್ಲ. ನಾನು ನನ್ನ ಜೀವನದ ಏನನ್ನೂ ಅವರ ಹತ್ತಿರ ಮುಚ್ಚಿಟ್ಟಿಲ್ಲ’ ಎಂದರು.

ನನಗೆ ಕೇಳಲೇಬೇಕಾಗಿದ್ದದ್ದು ಅಂತಹ ಚನ್ನಮ್ಮನವರ ಮೇಲೆ ಆದ ಆಸಿಡ್ ದಾಳಿಯ ಬಗ್ಗೆ.

‘ಸರ್ ರಾಜಕಾರಣ ಮಾಡಿದ್ದು ನೀವು, ಆಸಿಡ್ ಬಿದ್ದಿದ್ದು ಪತ್ನಿಗೆ, ಏನನ್ನಿಸಿತು ಸರ್ ಆ ಕ್ಷಣ? ‘ಎಂದೆ.

‘ಯಾವ ಕಾಲದಲ್ಲಿ ಬಿತ್ತು ಅದು? ಆಗ ಯಾರು ಮುಖ್ಯಮಂತ್ರಿ ಆಗಿದ್ದರು? ಯಾರು ಎಂಪಿ ಆಗಿದ್ದರು? ಯಾರ ಪ್ರೇರಣೆ? ಇಲ್ಲ ನಾನು ಚರ್ಚೆಗೆ ಹೋಗೋದಿಲ್ಲ, ಅವರ ಹೆಸರುಗಳನ್ನೂ ತೆಗೆಯುವುದಿಲ್ಲ’ ಎಂದು ಮೌನಕ್ಕೆ ಜಾರಿದರು.

ಅವರ ಮನದ ದುಗುಡ ಕಡಿಮೆ ಮಾಡಲೋ ಎಂಬಂತೆ ನಾನು ‘ನೀವು ಒಂದು ಥರಾ 24×7 ನ್ಯೂಸ್ ಚಾನಲ್ ಇದ್ದ ಹಾಗೆ ಸಾರ್’ ಅಂದ.

ಅವರು ತಕ್ಷಣ ನಕ್ಕುಬಿಟ್ಟರು. ೨೪ ಗಂಟೆಯೂ ರಾಜಕಾರಣವನ್ನೇ ಉಸಿರಾಡುವ ಎಚ್ ಡಿ ದೇವೇಗೌಡರ ಮುಖದಲ್ಲಿ ಆ ನಗು ಇತ್ತಲ್ಲಾ ಅದು ‘ಶತಮಾನದ ನಗು’.

ಶಾಸಕ ಗೌರಿಶಂಕರ್ ಗೆ ದಿಢೀರನೇ ರಾತ್ರಿ ಇನ್ನೊಂದು ಪತ್ರ ಬರೆದ ಮಾಜಿ ಶಾಸಕರು

ಹೊನ್ನೇನಹಳ್ಳಿ ಘಟನೆಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಗೌರಿಶಂಕರ್, ಮಾಜಿ ಶಾಸಕ ಸುರೇಶಗೌಡ ನಡುವೆ ಆರೋಪ, ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಕ್ಷೇತ್ರದಲ್ಲೂ ಜನರ ನಡುವೆ ವಿಭಿನ್ನ ಅಭಿಪ್ರಾಯಗಳ, ಟೀಕೆ, ವಿಮರ್ಶೆ ಹೀಗೆ ಸಾಗುತ್ತಿದೆ. ಈ ನಡುವೆ, ಶಾಸಕರಿಗೆ ಬಹಿರಂಗ ಪತ್ರ ಬರೆದಿದ್ದ ಮಾಜಿ ಶಾಸಕರು ರಾತ್ರಿಯೊಳಗಾಗಿ ಮತ್ತೊಂದು ಬಹಿರಂಗ ಪತ್ರದ ಮೂಲಕ ರಾಜಧರ್ಮದ ಬಗ್ಗೆ ಮಾತನಾಡಿದ್ದಾರೆ. ಏನಿದೆ ಆ ಪತ್ರದಲ್ಲಿ?

ಪ್ರತೀ ಪಕ್ಷದ ಕಾರ್ಯಕರ್ತನಿಗೂ ಒಂದು ವೈಯಕ್ತಿಕ ಬದುಕು, ವೈಯಕ್ತಿಕ ನಿಲುವು ಅಂತಿರುತ್ತೆ. ಅದು ಪಕ್ಷದ ಹೊರತಾದದ್ದು ಆಗಿರಬಹುದು.

ಪಕ್ಷದ ಕಾರ್ಯಕರ್ತರ ವೈಯಕ್ತಿಕ ಹೊಡೆದಾಟಗಳನ್ನು ಪಕ್ಷವೊಂದರ ಹಣೆಗೆ ಕಟ್ಟೋದೋ, ಠಾಣೆಯಲ್ಲಿ ಹೋಗಿ ದಬ್ಬಾಳಿಕೆ ಮಾಡೋದೋ, ಅದನ್ನೇ ನೆಪವಾಗಿಟ್ಟುಕೊಂಡು ಕ್ಷೇತ್ರದ ಶಾಸಕನೇ ಧರಣಿಗೆ ಕರೆ ನೀಡೋದೋ, ಪ್ರತಿಭಟನೆ ನಡೆಸೋದೋ ಮಾಡ್ತಾನೆ ಅಂದ್ರೆ ಅದಕ್ಕಿಂತ ದೊಡ್ಡ ಹಾಸ್ಯಾಸ್ಪದ ವಿಚಾರ ಇನ್ನೊಂದಿಲ್ಲ…

ಅಧಿಕಾರದ ಜೊತೆ ಪ್ರೌಢತೆ, ಪ್ರಬುದ್ಧತೆಯೂ ಬೆಸೆದುಕೊಂಡಿದ್ದರೆ ಮಾತ್ರ ನಾವೂ ರಾಜಧರ್ಮವನ್ನು ನಿರೀಕ್ಷಿಸಬಹುದಿತ್ತೇನೋ? ಅಲ್ವಾ?!

ಜನರಿಂದ ಚುನಾಯಿಸಲ್ಪಟ್ಟು, ಶಾಸಕ ಅಂತ ಪ್ರತಿಜ್ಞೆ ಸ್ವೀಕರಿಸಿದ ನಾಯಕ ಕ್ಷೇತ್ರದ ಜನರನ್ನು ಸಮಾಧಾನಿಸಿ, ತಾನೇ ಮುಂದೆ ನಿಂತು ಕ್ಷೇತ್ರದ ಶಾಂತಿಯುತ ವಾತಾವರಣವನ್ನು ಕಾಪಾಡಬೇಕೇ ವಿನಃ ಪುಂಡಾಟಿಕೆ ಪ್ರದರ್ಶಿಸಿ, ಸಣ್ಣತನ ಮೆರೆದು, ಜನರನ್ನು ಗೊಂದಲಕ್ಕೆ ತಳ್ಳೋದಲ್ಲ.

ಜನನಾಯಕನಿಗೆ, ನಾಯಕನ ಸ್ಥಾನಮಾನಕ್ಕೆ ಇಂತಹ ನಿಲುವು, ವರ್ತನೆ ಶೋಭೆ ತರುವಂತದ್ದಲ್ಲ…

ಸ್ವಾಮಿ,
ನೀವು ದಬ್ಬಾಳಿಕೆ, ಧರಣಿ, ಪ್ರತಿಭಟನೆ, ಬಂದ್ ಗಳಲ್ಲೇ ನ್ಯಾಯ ಹುಡುಕುವ ಸೋಗಲಾಡಿ ರಾಜಕಾರಣ ಮಾಡುತ್ತೀರಿ ಅಂತಾದರೆ ಈ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಇರೋದ್ಯಾಕೆ???

ಅನಾಗರಿಕರ ಹಾಗೆ ಪ್ರತಿಭಟನೆ, ಮುಷ್ಕರಕ್ಕೆ ಕರೆ ಕೊಟ್ಟು ನಿಮ್ಮ ಅಯೋಗ್ಯತೆಯ ಡಂಗುರ ಸಾರುತ್ತೀರಿ ಅಂತಾದರೆ ನಿಮ್ಮನ್ನು ನೋಡಿ ಒಂದು ಚೆಂದ ನಗೆ ಚೆಲ್ಲಬಹುದು ನಾನು ಅಷ್ಟೇ..

ಪ್ರಿಯ ಶಾಸಕರೇ,
ನಾವು ರಾಜಕಾರಣ ಮಾಡೋಕೆ, ಗುದ್ದಾಡೋಕೆ ಒಳ್ಳೆಯ ಕಾರಣಗಳನ್ನು, ವಿಚಾರಗಳನ್ನು ಆಯ್ದುಕೊಳ್ಳೋಣ.

ಕ್ಷೇತ್ರದ ಅಭಿವೃದ್ಧಿಗಾಗಿ, ಒಳಿತಿಗಾಗಿ ಪೈಪೋಟಿಗೆ – ಸ್ಫರ್ಧೆಗೆ ಬೀಳೋಣ… ಈ ನಕಾರಾತ್ಮಕ ರಾಜಕೀಯ ಬಿಟ್ಟುಬಿಡಿ. ಜನಪ್ರತಿನಿಧಿಯಾಗಿ ಕೊರೋನಾ ಕಾಲಘಟ್ಟದ ಈ ಅವಧಿಯಲ್ಲಿ ನಮ್ಮ ಜವಾಬ್ದಾರಿ ದೊಡ್ಡದಿದೆ. ಬನ್ನಿ, ಜನರ ಆರೋಗ್ಯಕ್ಕಾಗಿ, ಜನಾನುರಾಗಿ ಕಾರ್ಯಗಳಿಗಾಗಿ ಹೋರಾಡೋಣ.

ಹಾಗಂತ ಗಲಭೆಯ, ಹೊಡೆದಾಟದ ರೂವಾರಿಗಳನ್ನು ಬಿಟ್ಟುಬಿಡಿ, ಕ್ಷಮಿಸಿಬಿಡಿ ಅಂತ ನಾ ಹೇಳುತ್ತಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.

ಕ್ಷೇತ್ರದ ಶಾಂತಿಯುತ ವಾತಾವರಣ ಕದಡುವ ಪ್ರಯತ್ನ ಇನ್ನೊಮ್ಮೆ, ಇನ್ನೊಬ್ಬರು ಮಾಡದಂತೆ ಕಾವಲಿರಿ, ಕಾವಲಿರೋಣ.

ಹೊನ್ನೆನ ಹಳ್ಳಿ ಹೊಡೆದಾಟದ ಗಾಯಾಳುಗಳನ್ನು ಸ್ಟೇಷನ್ ನಲ್ಲಿ ಕೂರಿಸಿಕೊಂಡು, ನಿಮ್ಮ ಆಪ್ತರನ್ನು ನಿಲ್ಲಿಸಿಕೊಂಡು ಶಾಸಕ ಅನ್ನೋ ಮತ್ತಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಪೋಲಿಸ್ ವೃತ್ತ ನಿರೀಕ್ಷಕರನ್ನು ಅವಾಚ್ಯವಾಗಿ ಬಯ್ದಾಡುತ್ತೀರಿ, ಮಾಧ್ಯಮದವರ ಮುಂದೆ ನಿಂತು ವೈಯಕ್ತಿಕ ಗಲಾಟೆಯನ್ನು ದೊಡ್ಡದಾಗಿಸಿ ಪಕ್ಷದ ಬಣ್ಣ ಬಳಿಯುತ್ತೀರಿ, ಊರ ಜನರ ನಡುವೆ ಪಕ್ಷ ಪಕ್ಷಗಳ ಬಣ ರಚಿಸಿ ದ್ವೇಷ ಹರಡುತ್ತೀರಿ ಅಂತಾದರೆ ನಿಮ್ಮ ಶಾಸಕತ್ವದ ಹೊಣೆಗಾರಿಕೆ ಎಂಥದ್ದು ಮಾರಾಯ್ರೇ…???!!! ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಶಾಸಕರೇ?!

ಜನರ ನಡುವೆ ದ್ವೇಷ ಹರಡುವ, ಜನರನ್ನು ಒಡೆದು ಆಳುವ ಬ್ರಿಟಿಷ್ ಸಿದ್ಧಾಂತಗಳನ್ನು ಪೋಷಿಸುವ ಕೀಳು ಮಟ್ಟದ ಹೀನ ರಾಜಕಾರಣ ಬಿಡಿ…

ಹಿಂಸಾಚಾರ, ಹಗೆತನ, ಪ್ರತಿಭಟನೆ ಯಾವುದೂ ನಮ್ಮ, ಊರ, ಕ್ಷೇತ್ರದ ಶಾಂತಿಗೆ ಪೂರಕ ಅಲ್ಲ. ಕ್ಷೇತ್ರದ ಇಮೇಜ್ ಗೆ ಡ್ಯಾಮೇಜ್ ಮಾಡಿ ನಿಮ್ಮ ಶಾಸಕತ್ವಕ್ಕೆ ಕನ್ನಡಿ ಹಿಡಿಯುತ್ತೀರಿ, ನಿಮ್ಮ ಪೊಳ್ಳು ನೇತಾರಿಕೆಗಳಿಗೆ ನಿದರ್ಶನ ಒದಗಿಸಿ ಪ್ರದರ್ಶನ ಹಮ್ಮಿಕೊಳ್ಳುತ್ತೀರಿ ಅಂದ್ರೆ… ಆ ನಿಮ್ಮ ಸಣ್ಣತನಗಳಿಂದ ದೊಡ್ಡತನದ ಹೆಚ್ಚುಗಾರಿಕೆಗಳಿಗೆ ನೀವು ದಾಪುಗಾಲಿಟ್ಟು ಪರಿಪಕ್ವತೆ ರೂಢಿಸಿಕೊಳ್ಳೋದು, ಮೈಗೂಡಿಸಿಕೊಳ್ಳೋದು ಯಾವಾಗ??!

ಎರಡು ಬಾರಿ ಶಾಸಕನಾಗಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದವನು, ತೊಡಗಿಸಿಕೊಂಡಿರುವವನು ನಾನು…

ಕ್ಷೇತ್ರದ ಜನತೆ ಪ್ರಬುದ್ಧರಿದ್ದಾರೆ. ಸರಿ – ತಪ್ಪು, ಸತ್ಯ – ಸುಳ್ಳು, ಒಳ್ಳೇದು – ಕೆಟ್ಟದ್ದು, ನೈಜತೆ – ಕಟ್ಟುಕತೆ, ಕ್ಷೇತ್ರದ ಬೇಕು – ಬೇಡ… ಎಲ್ಲವನ್ನೂ ಸ್ಪಷ್ಟವಾಗಿ, ಖಚಿತವಾಗಿ ಅರಿಯುವ ವಿವೇಚನೆ, ವಿವೇಕ, ಪ್ರಜ್ಞೆ ಅವರಿಗಿದೆ. ಟೇಕ್ ಕೇರ್. ಶಾಸಕತ್ವ ಅನ್ನೋದು ಮಕ್ಕಳಾಟಿಕೆಯ ಹುದ್ದೆ, ಹೊಣೆಗಾರಿಕೆ ಅಲ್ಲ.


ಕ್ಷೇತ್ರದ ಬಗೆಗಿನ ತುಂಬು ಪ್ರೀತಿ, ಗೌರವ ಮತ್ತು ಕಾಳಜಿಗಳೊಂದಿಗೆ,

ಬಿ. ಸುರೇಶ್ ಗೌಡ
ಮಾಜಿ ಶಾಸಕರು, ಬಿಜೆಪಿ ರಾಜ್ಯ ಕಾರ್ಯದರ್ಶಿ
ತುಮಕೂರು ಗ್ರಾಮಾಂತರ ಕ್ಷೇತ್ರ