Saturday, May 9, 2026
Google search engine
Home Blog Page 206

ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಫುಟ್ಪಾತ್ ಗೆ ಹಾನಿ

ತುಮಕೂರು: ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಎಚ್ಎಂಎಸ್ ಪಾಲಿಟೆಕ್ನಿಕ್ ಮುಂಭಾಗ ದ ಇನ್ನೊಂದು ಬದಿಯಲ್ಲಿ ಉದ್ದಕ್ಕೂ ಹೊಸದಾಗಿ ಫುಟ್ಪಾತ್ ನಿರ್ಮಿಸಲಾಗಿದೆ. ಅಮೃತ್ ಯೋಜನೆಯಡಿ ಸುಮಾರು ಅರವತ್ತು ಎಪ್ಪತ್ತು ಲಕ್ಷ ರೂಗಳನ್ನು ವೆಚ್ಚ ಮಾಡಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಕಾಮಗಾರಿ ಮುಕ್ತಾಯಗೊಂಡು ಇನ್ನೂ ಸಹ 3 – 4 ದಿನಗಳು ಸಹ ಕಳೆದಿಲ್ಲ. ಆದರೆ ಅಷ್ಟರೊಳಗೆ ಈ ಫುಟ್ಪಾತ್ ಉದ್ದಕ್ಕೂ ಅಂಗಡಿ ಮಳಿಗೆಗಳವರು ಅಕ್ರಮವಾಗಿ ಇಳಿಜಾರು ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದಕ್ಕಾಗಿ ಹೊಸದಾಗಿ ನಿರ್ಮಿಸಿರುವ ಫುಟ್ಪಾತ್ ಅನ್ನು ಅಗೆದು ಹಾಳು ಮಾಡಲಾಗಿದೆ. ಜೊತೆಗೆ ಇಳಿಜಾರು ನಿರ್ಮಾಣಕ್ಕಾಗಿ ರಸ್ತೆಯ ಟಾರ್ ಜಾಗವನ್ನು ಒತ್ತುವರಿ ಮಾಡಲಾಗಿದೆ.

ಈ ಅಕ್ರಮ ನಡೆಸಲು ರಜಾ ದಿನವಾದ ಎರಡನೇ ಶನಿವಾರ ವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾನುವಾರವೂ ರಜಾ ದಿನ ಇರುವುದರಿಂದ ನಿರಾತಂಕವಾಗಿ ದಿಡೀರನೆ ಫುಟ್ಪಾತ್ ಒಡೆದು ಮನಬಂದಂತೆ ಇಳಿಜಾರು ಗಳನ್ನು ನಿರ್ಮಾಣ ಮಾಡಲಾಗಿದೆ.

ಈ ರೀತಿ ಯದ್ವಾತದ್ವಾ ಇಳಿಜಾರು ನಿರ್ಮಿಸಲು ಅನುಮತಿ ಕೊಟ್ಟವರು ಯಾರು? ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಿರುವ ಫುಟ್ಪಾತ್ ಹಾಳಾಗಲಿಲ್ಲವೇ? ತಕ್ಷಣವೇ ತುಮಕೂರಿನ ಶಾಸಕರು, ಮಹಾನಗರಪಾಲಿಕೆಯ ಸದಸ್ಯರುಗಳು ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಫುಟ್ಪಾತ್ ಅನ್ನು ಸರಿಪಡಿಸಬೇಕು ಹಾಗೂ ಸರ್ಕಾರಿ ಸ್ವತ್ತಾದ ಇದನ್ನು ಹಾಳುಗೆಡವಿದ ವ್ಯಕ್ತಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ಒತ್ತಾಯಿಸಿದ್ದಾರೆ.

ವಿಧಾನಪರಿಷತ್ ಗೆ ಎಸ್ ಪಿಎಂ ತೆರೆಮರೆ ಪ್ರಯತ್ನ

Publicstory.in


ತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ವಿರುದ್ಧವೇ ತೊಡೆತಟ್ಟಿ ಭಾರೀ ಸದ್ದುಗದ್ದಲ ಎಬ್ಬಿಸಿದ ಆಗಿನ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಈಗ ರಾಜಕೀಯ ಆಶ್ರಯಯಕ್ಕಾಗಿ ಅಲೆದಾಟ ಆರಂಭಿಸಿದ್ದಾರೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಲು ತೆರೆಮರೆ ಪ್ರಯತ್ನ ಆರಂಭಿಸಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ವರಿಷ್ಠರ ಮೇಲೆ ಪ್ರಭಾವ ಬೀರಿಸಿ ಅಧಿಕಾರ ಹಿಡಿಯಲು ಮೂರು-ನಾಲ್ಕು ತಿಂಗಳಿಂದ ಸತತ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯ ಸಭೆಗೆ ಆಯ್ಕೆ ಮಾಡುವಂತೆ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಮೂಲಕ ಪ್ರಯತ್ನ ನಡೆಸಿ ಹಿನ್ನಡೆ ಅನುಭವಿಸಿದರು.

ಜಿಲ್ಲೆಯ ಚಾಣಾಕ್ಷ ರಾಜಕಾರಣಿಗಳಲ್ಲಿ ಎಸ್.ಪಿ.ಮುದ್ದಹನುಮೇಗೌಡ ಕೂಡ ಒಬ್ಬರು. ಬಿಜೆಪಿ ಸಂಸದ ಜಿ.ಎಸ್,ಬಸವರಾಜ್, ಎಸ್.ಪಿ.ಮುದ್ದಹನುಮೇಗೌಡ ಇಬ್ಬರೂ ಕಾಂಗ್ರೆಸ್ ನಲ್ಲಿದ್ದವರೇ? ಇಬ್ಬರ ರಾಜಕೀಯದಾಟ ಈಗ ಗುಟ್ಟಾಗಿಯೇನು ಉಳಿದಿಲ್ಲ. ರಾಜಕೀಯ ಪಟ್ಟುಗಳನ್ನು ಹಾಕುವಲ್ಲಿ ಇಬ್ಬರೂ ನಿಸ್ಸೀಮರು. ಈಗ ಇದು ಇಲ್ಲಿ ಅಪ್ರಸ್ತುತ.

ಲೋಕಸಭೆ ಚುನಾವಣೆಯಲ್ಲಿ ತನಗೆ ಟಿಕೆಟ್ ಕೊಡಲಿಲ್ಲ. ನಾನು ಬಲಿಪಶುವಾದೆ ಎಂಬ ಕರುಣೆಯ ಮಂತ್ರವನ್ನು ಅವರೀಗ ತೂರಿ ಬಿಡುತ್ತಿದ್ದಾರೆ. ಇದೇ ಆಧಾರದಲ್ಲಿ ರಾಜ್ಯಸಭೆಗೆ ಹೋಗುವ ಕನಸು ಕಂಡಿದ್ದ ಅವರಿಗೆ ನಿರಾಸೆಯಾಯಿತು. ಇವರು ಕರುಣೆಯ ತಂತ್ರ ದೆಹಲಿಯನ್ನು ಮುಟ್ಟಲೂ ಇಲ್ಲ ಎಂಬುದು ಬೇರೆ ಮಾತು.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಸೀಟು ನೀಡಿದೆ. ಮತ್ತೇ ದೇವೇಗೌಡರಿಗೆ ಬೆಂಬಲ ನೀಡಿದೆ. ಜೆಡಿಎಸ್ ಬೆಂಬಲದೊಂದಿಗೆ ತಮಗೆ ಅವಕಾಶ ಮಾಡಿಕೊಡಬೇಕು ಎಂಬುದು ಎಸ್ಪಿಎಂ ಮನದಾಸೆ ಆಗಿತ್ತು. ಆದರೆ ರಾಜಕೀಯದಲ್ಲಿ ಇದಕ್ಕೆ ಅವಕಾಶ ಇಲ್ಲವಲ್ಲ?

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ವಿರೋಧಿಸುವ ಮೂಲಕ ಪರೋಕ್ಷವಾಗಿ ಆಗಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ವಿರುದ್ಧವೇ ಮುದ್ದಹನುಮೇಗೌಡ ಅವರು ತೊಡೆ ತಟ್ಟಿದರು. ಕಾಂಗ್ರೆಸ್ ನ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರೊಂದಿಗೆ ಸೇರಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪ್ರಯತ್ನ ನಡೆಸಿ ಅಲ್ಲಿಂದ ಹಿಂದೆ ಸರಿದರು. ಚುನಾವಣಾ ಪ್ರಚಾರ ಕಣದಲ್ಲೂ ಕಾಣಿಸಿಕೊಳ್ಳಲಿಲ್ಲ.

ದೇವೇಗೌಡರನ್ನು ಗೆಲ್ಲಿಸಬೇಕು ಎಂದು ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಿಗೂ ಬೆಲೆ ಕೊಡಲಿಲ್ಲ. ಇದಾದ ಬಳಿಕ ಪರಮೇಶ್ವರ್ ಅವರನ್ನು ವಾಚಾಮಗೋಚರ ಹೀಯಾಳಿಸುವ ರಾಜಣ್ಣ ಅವರೊಂದಿಗೆ ಮುದ್ದಹನುಮೇಗೌಡ ಅವರು ಹೆಚ್ಚೆಚ್ಚು ಗುರುತಿಸಿಕೊಳ್ಳುತ್ತಿದ್ದಂತೆ ಪರಮೇಶ್ವರ್ ಅವರು ತಮ್ಮ ಅಂಗಳದಿಂದ ಅವರನ್ನು ಕೈಬಿಟ್ಟರು ಎನ್ನುತ್ತಾರೆ ಪರಮೇಶ್ವರ್ ಅವರ ಆಪ್ತರು.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪ್ರಹಸನದಿಂದ ರಾಜಕೀಯದಿಂದಲೇ ಮೂಲೆಗುಂಪಾಗಿದ್ದ ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಗೆ ಕರೆತಂದು ಕಳೆದ‌ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಸವರಾಜ್ ವಿರುದ್ಧ ಗೆಲ್ಲಿಸುವ ಮೂಲಕ ಜಿಲ್ಲೆಯ ರಾಜಕೀಯ ತಂತ್ರಗಾರಿಕೆಯನ್ನೇ ಪರಮೇಶ್ವರ್ ಬದಲಾಯಿಸಿದ್ದರು. ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೊಡದಿದ್ದರೆ ವಿಷ ಕುಡಿಯುವುದಾಗಿ ರಾಹುಲ್ ಗಾಂಧಿ ಮುಂದೆ ಅವರು ಹೇಳಿದ ಮಾತುಗಳು ಈಗ ಗುಟ್ಟಾಗೇನು ಉಳಿದಿಲ್ಲ. ಪರಮೇಶ್ವರ್ ಆಗ ಪಟ್ಟು ಸಡಿಲಿಸಿದ್ದರೆ ಕಾಂಗ್ರೆಸ್ ನಲ್ಲಿ ಜಿಲ್ಲೆಯ ರಾಜಕಾರಣ ಈಗ ಬೇರೆಯೇ ಇರುತ್ತಿತ್ತು.

ಚುನಾವಣೆಯ ನಂತರ ಪರಮೇಶ್ವರ್ ಅವರೊಂದಿಗೆ ಮುದ್ದಹನುಮೇಗೌಡ ಉತ್ತಮ ಸಂಬಂಧವನ್ನೇ ಪಾಲಿಸಿದರು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಪರಮೇಶ್ವರ್ ಅವರ ಗೆಲುವಿಗೆ ತಂತ್ರರೂಪಿಸಿದವರಲ್ಲಿ ಮುದ್ದಹನುಮೇಗೌಡ ಅವರೂ ಇದ್ದರು. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸಿದ ಬಿಜೆಪಿ, ಜೆಡಿಎಸ್ ನ ಹಲವು ನಾಯಕರ ವಿಶ್ವಾಸ ಕಳೆದುಕೊಂಡರು.

ಮುದ್ದಹಮುನೇಗೌಡರ ಗೆಲುವಿಗೆ ಜೆಡಿಎಸ್, ಬಿಜೆಪಿ ನಾಯಕರ ಹಿಂಬದಿ ಸಹಕಾರವೇ ಕಾರಣವಾಗಿತ್ತು. ಇದೇ ತಂತ್ರ ಈ ಸಲ ಸಂಸದ ಜಿ.ಎಸ್.ಬಸವರಾಜ್ ತಮ್ಮ ಗೆಲುವಿಗೆ ಬಳಸಿಕೊಂಡರು ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯ ಅವರೊಂದಿಗೆ ಇರುವವರು. ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರೊಂದಿಗೆ ಸಿದ್ದರಾಮಯ್ಯ ಎಂತಹ ಸಂಬಂಧ ಉಳಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ತುಮಕೂರು ಜಿಲ್ಲೆಯಲ್ಲಿ ಮಳೆಗಾಲ, ಮುಂಗಾರಿನಲ್ಲೂ ಹೇಮಾವತಿ ನೀರು ಹರಿದುಹೋಗುತ್ತಿರುವಂತೆ ಜಿಲ್ಲೆ, ರಾಜ್ಯದ ರಾಜಕೀಯದಲ್ಲೂ ನೀರು ಹರಿದು ಹೋಗುತ್ತಿದೆ.

ರಾಜ್ಯಸಭೆಯಲ್ಲಿ ಸೀಟು ಸಿಗದಿದ್ದರೂ ಪರ್ವಾಗಿಲ್ಲ, ರಾಜ್ಯದ ವಿಧಾನಸಭೆಯಲ್ಲಿ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಅವಕಾಶ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅತ್ತ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವ ಕೆಲಸವನ್ನು ಮುದ್ದಹನುಮೇಗೌಡ ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಸೀಟು ಕಿತ್ತುಕೊಂಡ ಕಾರಣಕ್ಕಾಗಿಯಾದರೂ ಅವರಿಗೆ ವಿಧಾನಪರಿಷತ್ ಗೆ ಅವಕಾಶ ಸಿಗಲಿದೆ ಎಂದು ಮುದ್ದಹನುಮೇಗೌಡ ಅವರ ಆಪ್ತರು ಹೇಳುತ್ತಿದ್ದಾರೆ.

ನಮ್ಮ ಸಾಹೇಬರ ಮುಂದೆಯೇ ಮೀಸೆ ತಿರುವಿದರು. ಮುದ್ದಹನುಮೇಗೌಡರು ವಿಧಾನ ಪರಿಷತ್ ಗೆ ಹೋಗಲು ಕೆಪಿಸಿಸಿ ಅಧ್ಯಕ್ಷರು, ಪರಮೇಶ್ವರ್ ಅವರು ಅವಕಾಶ ನೀಡುವುದಿಲ್ಲ. ಕೆ.ಎನ್.ರಾಜಣ್ಣ ಅವರ ಕಾರಣದಿಂದ ಸಿದ್ದರಾಮಯ್ಯ ಒಂದೆರಡು ಸಲ ಹೆಸರು ಹೇಳಬಹುದು ಅಷ್ಟೇ. ಇದರಿಂದ ಏನೇನು ಪ್ರಯೋಜನ ಆಗದು ಎನ್ನುತ್ತಾರೆ ಪರಮೇಶ್ವರ್ ಅವರ ಆಪ್ತರು.

ಏನೇ ಆಗಲೀ, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಜಿಲ್ಲೆಯ ರಾಜಕಾರಣದಲ್ಲಿ ಅನೇಕ ಬದಲಾವಣೆಗಳ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಹೀಗೆ ಎರಡೂ ಪಕ್ಷಗಳಲ್ಲೂ ತಳಮಳ ಉಂಟು ಮಾಡುತ್ತಿದ್ದಾರೆ ಶಿವಕುಮಾರ್.

ಯಾರ ಟವೆಲ್, ಯಾರ ಹೆಗಲ ಮೇಲೆ ಹೋಗಿ ಬೀಳಲಿದೆ ಎಂದು ಹೇಳಲು ಇನ್ನೂ ಒಂದು ವರ್ಷ ಕಾಯಬೇಕಾಗಿದೆ.

ರಾಜಕಾರಣ ಏನೇ ಇರಲಿ, ಸಜ್ಜನ ಎಂದು ಜನರಿಂದ ಬಿರುದು ಪಡೆದಿರುವ ಮುದ್ದಹನುಮೇಗೌಡ ಅವರನ್ನು ವಿಧಾನ ಪರಿಷತ್ ಗೆ ಕಳಿಸುವುದು ಒಳ್ಳೆಯದೇ ಸರಿ.

ಜಿಲ್ಲೆಯಲ್ಲಿ ತೆಂಗು, ಕೊಬ್ಬರಿ ಕುರಿತು ಮಾತೇ ಆಡದೇ ಸೊರಗಿ ಸೋರೆಕಾಯಿಯಂತಾಗಿದ್ದ ಇಲ್ಲಿಯ ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ತೆಂಗು, ಕೊಬ್ಬರಿಯ ಬಗ್ಗೆ ಮಾತನಾಡದೇ ಹೋದರೆ ವಿಧಿ ಇಲ್ಲ. ಜನರು ಸೋಲಿಸಿ ಬಿಡುತ್ತಾರೆ ಎಂಬ ಸಂದಿಗ್ಧ ಸ್ಥಿತಿಯನ್ನು ರೂಪಿಸಿದ ಜಿಲ್ಲೆಯ ಮೊದಲ ರಾಜಕಾರಣಿ ಮುದ್ದಹನುಮೇಗೌಡರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಕಾರಣಕ್ಕಾಗಿಯಾದರೂ ಅವರು ವಿಧಾನಪರಿಷತ್ ಮೆಟ್ಟಿಲು ಹತ್ತಬೇಕಾಗಿದೆ.

ಆದರೆ ಇದೊಂದೇ ಕಾರಣದಿಂದ ರಾಜಕಾರಣ ನಡೆಯುತ್ತದೆಯೇ? ಹಲವು ತಪ್ಪುಗಳಿಗೆ ಏನುತ್ತರ, ಪ್ರತಿಫಲ ಎಂಬ ಪ್ರಶ್ನೆಗಳಿಗೆ ಮುದ್ದಹನುಮೇಗೌಡರೇ ಉತ್ತರಿಸಬೇಕಾಗಿದೆ.

ತುಮಕೂರು: ಡಿಡಿಪಿಐ ಕಚೇರಿಯಲ್ಲಿ ತೋಡಿದ ಗುಂಡಿ ಹಿಂದೆ ಅನುಮಾನಗಳ ಹುತ್ತ

Tumkuru: ಸಾರ್ವಜನಿಕ ಶಿಕ್ಷಣ ಇಲಾಖೆ ಆವರಣದಲ್ಲಿ ದೊಡ್ಡ ಗುಂಡಿ ತೋಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕೆಲ ದಾಖಲೆಗಳನ್ನು ಮುಚ್ಚಲು ಈ ಗುಂಡಿ ತೆಗೆಯಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇಲಾಖೆಯ ಸಿಬ್ಬಂದಿ ಹೇಳುವಂತೆ ಕಸವನ್ನು ಹೂತುಹಾಕಲು ಗುಂಡಿ ತೆಗೆದಿದ್ದೆವು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕಾಮಾಕ್ಷಮ್ಮ ಸೂಚನೆ ಮೇರೆಗೆ ಈ ಗುಂಡಿ ತೋಡಲಾಗಿತ್ತು ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ತುಜಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಕಳೆದ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗುಂಡಿ ತೋಡಿರುವ ಉದ್ದೇಶವೇನು ಎಂಬ ಸಿಇಒ ಪ್ರಶ್ನೆಗೆ ಡಿಡಿಪಿಐ ಮತ್ತು ಇಲಾಖೆಯ ಸಿಬ್ಬಂದಿ ಉತ್ತರಿಸಲು ಹಿಂದೆ ಮುಂದೆ ನೋಡಿದರು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿ ಸೋಮವಾರದವರೆಗೆ ಗುಂಡಿ ಮುಚ್ಚದಂತೆ ಶುಭಕಲ್ಯಾಣ್ ಅವರು ಡಿಡಿಪಿಐಗೆ ಸೂಚನೆ ನೀಡಿದ್ದಾರೆ.

ತುಮಕೂರು: Bjp, JDS ಕಾರ್ಯಕರ್ತರ ನಡುವೆ ಹೊಡೆದಾಟ

ತುಮಕೂರು : ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತುಮಕೂರು ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಘಟನೆ ಜೆಡಿಎಸ್ ನ ನಾಲ್ವರು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.

ಹಲ್ಲೆಗೊಳಗಾದ ರಾಧಾಕೃಷ್ಣ (32), ಸಂಜೀವಮ್ಮ(42), ರಂಗಸ್ವಾಮಯ್ಯ (60), ಶ್ರೀನಿವಾಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವ್ಯಯಕ್ತಿಕ ಕಾರಣದ ಮೇಲೆ ಹಲ್ಲೆ ಮಾಡಿರಲೂಬಹುದು ಎನ್ನಲಾಗಿದೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ಮಾಡುತ್ತಿದ್ದು, ದೂರು ದಾಖಲಾದ ಬಳಿಕ ಹೆಚ್ಚಿನ ವಿವರ ತಿಳಿಯಲಿದೆ.

‘ವಿ ಶಲ್ ಓವರ್ ಕಮ್’

ಜಿ.ಎನ್.ಮೋಹನ್


‘ಇಲ್ಲ ಅದು ನನಗೆ ಸಿಗುವವರೆಗೆ ನಾನಿಲ್ಲಿಂದ ಕದಲುವುದೇ ಇಲ್ಲ’ ಎಂದು ರಚ್ಚೆಹಿಡಿದು ಕೂತುಬಿಟ್ಟಿದ್ದೆ.

ಸದಾ ನಿದ್ರೆಯ ಸ್ಥಿತಿಯಲ್ಲಿರುವ ಅಟ್ಲಾಂಟಾದಿಂದ ಮಾರು ದೂರದಲ್ಲಿರುವ, ನೂರಾರು ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದ್ದ ಬೃಹತ್ ಮಾಲ್ ನಿಂದ ನಾನು ಕಾಲು ತೆಗೆಯಲು ಸಿದ್ಧವೇ ಇರಲಿಲ್ಲ.

ಜಪಾನಿನ ಮೆಗ್, ರುಮೇನಿಯಾದ ಕ್ರಿಸ್ಟಿ, ಜೆಕ್ ನ ಮೆರೆಕ್, ಸ್ಲೊವೇನಿಯಾದ ಪೋಲಾಂಕಾ, ಆಸ್ಟ್ರೇಲಿಯಾದ ಗೆರ್ದಾ, ದಕ್ಷಿಣ ಆಪ್ರಿಕಾದ ಶಬಲಾಲ, ಇರಾನ್ ನ ಹಮೀದ್, ಕೆನ್ಯಾದ ಏಂಜೆಲೋ ಎಲ್ಲರೂ ನನ್ನನ್ನು ಸುತ್ತುವರಿದಿದ್ದರು.

ನಾನೋ ಮಿಠಾಯಿಗೆ ಹಠ ಹಿಡಿದು ಕೂತ ಮಗುವಿನಂತೆ ಕೂತುಬಿಟ್ಟಿದ್ದೆ.

ಆ ವೇಳೆಗೆ ನಾನು ಬೆಂಗಳೂರಿನ ಎಲ್ಲಾ ಅಂಗಡಿಗಳನ್ನೂ ಗರಗರನೆ ಸುತ್ತಿ ಮುಗಿಸಿದ್ದೆ. ಇಲ್ಲ ಎನಿಸಿಕೊಂಡರೂ ತರಿಸಿಕೊಡಿ ಎಂದು ಬೆನ್ನುಬಿದ್ದಿದ್ದೆ. ದೂರ ದೇಶದ ಹಲವರಿಗೆ ಮೇಲ್ ಮಾಡಿ ಸಿಕ್ಕರೆ ಖಂಡಿತಾ ಕಳಿಸಿಕೊಡಿ ಎಂದು ವಿನಂತಿಸಿದ್ದೆ.

ಈಗ ಈ ಅಮೇರಿಕಾದ ನೆಲದಲ್ಲಲ್ಲದಿದ್ದರೆ ಇನ್ನೆಲ್ಲೂ ನನಗೆ ಅದು ಸಿಗಲು ಸಾಧ್ಯವೇ ಇಲ್ಲ ಎಂದು ಗೊತ್ತಾಗಿ ಹೋಗಿತ್ತು. ಹಾಗಾಗಿ ನಾನು ಪಟ್ಟು ಹಿಡಿದು ಕೂತಿದ್ದೆ.

ಆ ವೇಳೆಗಾಗಲೇ, ಮಾಲ್ ಅನ್ನು ಶರವೇಗದಲ್ಲಿ ಸುತ್ತಿ ಇದ್ದ ಹತ್ತಾರು ಬೂಟುಗಳ ಪಟ್ಟಿಗೆ ಇನ್ನಷ್ಟನ್ನು ಜೋಡಿಸಿಕೊಂಡಿದ್ದ ಆಸ್ಟ್ರೇಲಿಯಾದ ಗೆರ್ದಾ, ಒಳ್ಳೆಯ ಟಾಪ್ ಗಳಿಂದ ಮಿಂಚುತ್ತಿದ್ದರೂ ಇನ್ನಷ್ಟು ಟಾಪ್ ಗಳ ಬೇಟೆ ಮಾಡಿದ್ದ ದಕ್ಷಿಣ ಆಫ್ರಿಕಾದ ಶಬಲಾಲ, ಕ್ಯಾಮೆರಾಗಳ ಬೆನ್ನ ಹಿಂದೆಯೇ ಇದ್ದ ಜೆಕ್ ನ ಮೆರೆಕ್, ಮಕ್ಕಳಿಗೆ ಟಾಯ್ಸ್ ಎಂದು ಓಡಾಡುತ್ತಿದ್ದ ಇರಾನ್ ನ ಹಮೀದ್, ಎಲ್ಲರೂ ನಾನು ಹೀಗೆ ಹಠಕ್ಕೆ ಬಿದ್ದು ಕೂತಿರುವ ವಸ್ತುವಾದರೂ ಯಾವುದು ಎನ್ನುವ ಕುತೂಹಲಕ್ಕೆ ಬಿದ್ದಿದ್ದರು.

ನಾನು ಹುಡುಕುತ್ತಿದ್ದುದು ಒಂದು ಸಿ.ಡಿ. ಮಾತ್ರ.

ಇವನ ಆಸೆ ಈಡೇರಿಸದಿದ್ದರೆ ಇವತ್ತಿನ ‘ಹ್ಯಾಪಿ ಹವರ್ಸ್’ ಗೆ ದೊಡ್ಡ ನಾಮ ಎಂದು ಎಲ್ಲರಿಗೂ ಅರಿವಾಯಿತೇನೋ.. ಇಬ್ಬಿಬ್ಬರಂತೆ ಎಲ್ಲರೂ ಆ ಬೃಹ…ತ್ ಮಾಲ್ ನ ದಶದಿಕ್ಕುಗಳಲ್ಲಿ ಹರಡಿಹೋದರು.

ಇದ್ದಬದ್ದ ಅಂಗಡಿಗಳನ್ನೆಲ್ಲಾ ಹುಡುಕಿ ತಡಕಿದಾಗ ಒಂದು ಮೂಲೆಯಲ್ಲಿ ಸಿಕ್ಕೇಬಿಟ್ಟದ್ದು ಆ ಅಜ್ಜ.

ಬೊಚ್ಚುಬಾಯಿಯ ತುಂಬಾ ನಗೆ ಉಕ್ಕಿಸುತ್ತಿದ್ದ, ಜಗತ್ತು ಬದಲಿಸಿಯೇ ಸೈ ಎಂದು ಸಿದ್ಧವಾದ ಅಜ್ಜ ‘ಪೀಟ್ ಸೀಗರ್’.

ಎಂತಹ ಸಂಕಷ್ಟವೇ ಆದರೂ ಸರಿ ‘ಗೆದ್ದೇ ಗೆಲ್ಲುವೆವು’ ಎಂಬ ಹುಮ್ಮಸ್ಸನ್ನು ಜಗತ್ತಿಗೆ ತುಂಬಿದ ಅಜ್ಜ, ‘ವಿ ಶಲ್ ಓವರ್ ಕಮ್’ ಹಾಡನ್ನು ಜಗತ್ತಿನ ರಾಷ್ಟ್ರಗೀತೆಯಾಗಿಸಿದ ಪೀಟ್ ಸೀಗರ್.

ಹುರ್ರೇ! ಎನ್ನುತ್ತಾ ಎಲ್ಲರೂ ವ್ಯಾನ್ ಏರಿದೆವು.

ನಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಸಂಜೆ ಒಂದು ಗಂಟೆ ಪುಕ್ಕಟೆಯಾಗಿ ಕೊಡುವ ಬಿಯರ್ ನ್ನು ಈ ದಿನ ದಯಪಾಲಿಸಿರುವುದು ನಾನೇ ಎನ್ನುವ ಕೃತಜ್ಞತಾಭಾವ ಅವರ ಕಣ್ಣುಗಳಿಂದ ತುಳುಕುತ್ತಿತ್ತು.

ವ್ಯಾನ್ ಆ ಉದ್ದೋಉದ್ದ ರಸ್ತೆಗಳಿಗೆ ತೆಕ್ಕೆ ಬಿದ್ದದ್ದೇ ತಡ ಎಲ್ಲರಿಗೂ ಅದ್ಯಾವುದಪ್ಪಾ ಅಂತ ಘನಂದಾರಿ ಕ್ಯಾಸೆಟ್, ನಾನು ಹಾಗೆ ಹಠ ಹಿಡಿದು ಕೂತಿದ್ದು,. ಎನಿಸಿತೇನೋ ವ್ಯಾನ್ ನಲ್ಲಿಯೇ ಕೇಳಿಬಿಡುವ ಹುಕಿಗೆ ಬಿದ್ದರು.

ಪ್ಲೇಯರ್ ಒಳಹೊಕ್ಕ ಸಿ.ಡಿ ಹಾಡನ್ನು ಹೊರಗೆ ತುಳುಕಿಸಿದ್ದೇ ತಡ ಗೆರ್ಡಾಳ ಮುಖದ ಆಕಾರವೇ ಬದಲಾಯಿತು ‘ಏನಿದು, ಚರ್ಚ್ ಹಾಡು ಕೇಳಲು ಇಷ್ಟು ಸ್ಟ್ರೈಕ್ ಮಾಡಿದೆಯಾ?’ ಎಂದಳು.

ಸಿ.ಡಿ ಆ ವೇಳೆಗೆ ಎರಡನೇ ಹಾಡಿಗೆ ದಾಟಿಕೊಂಡಿತ್ತು. ‘ಅಯ್ಯೋ ಇದು ಜೋಗುಳದ ಹಾಡು, ಲಲಬಿ..’ ಎಂದು ಸ್ಲೋವೇನಿಯಾದ ಪೋಲಂಕಾ ಆಕಳಿಸಿಯೇಬಿಟ್ಟಳು.

ಒಂದೊಂದು ಹಾಡೂ ಪ್ಲೇಯರ್ ನಿಂದ ಹೊರಗೆ ಜಿಗಿಯುತ್ತಿದ್ದಂತೆಯೇ ಒಬ್ಬೊಬ್ಬರೂ ನನ್ನ ಮುಖ ನೋಡತೊಡಗಿದರು.

ಆ… ಆ ವೇಳೆಗೇ ಆ ಹಾಡು ಹೊರಬಿತ್ತು. ವಿ ಶಲ್ ಓವರ್ ಕಂ…

ಅರೆ! ಇಡೀ ವ್ಯಾನ್ ನ ವಾತಾವರಣವೇ ಬದಲಾಗಿ ಹೋಯಿತು.

ಆಸ್ಟ್ರೇಲಿಯಾ, ಕೆನ್ಯಾ, ಜಪಾನ್, ಸ್ಲೋವೇನಿಯಾ, ರುಮೇನಿಯಾ, ಇರಾನ್, ಜೆಕ್, ದಕ್ಷಿಣ ಆಫ್ರಿಕಾ ಎಂಬ ಗಡಿಗಳನ್ನು ಅಳಿಸಿಹಾಕಿ ಆ ಹಾಡು ಎಲ್ಲರ ಬಾಯಲ್ಲೂ ಮೊಳಗುತ್ತಿತ್ತು. ಅದು ನೋಡ ನೋಡುತ್ತಿದ್ದಂತೆಯೇ ಈ ಎಲ್ಲರೂ ಒಂದಾಗಿ ಹೋಗಿದ್ದರು.

ದೇಶದ ಗಡಿ ಇಲ್ಲವಾಗುತ್ತಾ ಆಗುತ್ತಾ ಒಂದು ಜಗತ್ತು ಆ ಪುಟ್ಟ ವ್ಯಾನ್ ನಲ್ಲಿ ಅರಳಿಕೂತಿತ್ತು.

ಅದು ಪೀಟ್ ಸೀಗರ್. ಜಗತ್ತಿಗೇ ಒಂದು ಹಾಡು ಮೊಗೆದುಕೊಟ್ಟಾತ.

ನನ್ನ ಶಾಲೆಯ ಕಿಟಕಿಯಿಂದ ಇಣುಕಿದರೆ ಸಾಕು ಅನತಿ ದೂರದಲ್ಲಿ ಗುಡ್ಡಗಳ ಸಾಲು ಕಾಣುತ್ತಿತ್ತು. ಬೆಟ್ಟಕ್ಕೆ ಚಾರಣ ಹೋಗಿಯೇ ಬಿಡೋಣ ಎಂದು ಮಾಸ್ತರರು ನಮ್ಮನ್ನು ಹೊರಡಿಸಿಕೊಂಡು ನಡೆದೇಬಿಟ್ಟರು.

ದಾರಿ ಸಾಗಲು ಒಂದು ಹಾಡು ಬೇಕಿತ್ತು. ಆಗ ಚಿಮ್ಮಿದ್ದು ಅದೇ ಹಾಡು ‘ವಿ ಶಲ್ ಓವರ್ ಕಮ್’

ಅಲ್ಲಿಂದ ಜಿಗಿದು ಹೈಸ್ಕೂಲ್ ಗೆ ಬಂದಾಗ ಶ್ರಮದಾನಕ್ಕಾಗಿ ಇನ್ನೊಂದು ಊರು ಸೇರಿಕೊಂಡೆವು. ರಾತ್ರಿ ಕ್ಯಾಂಪ್ ಫೈರ್ ನಂದಿಸುವ ಸಮಯ. ಅದಕ್ಕೂ ಮುನ್ನ ನಮ್ಮೆಲ್ಲರ ಕಂಠದಿಂದ ಮೊಳಗಿದ್ದು ಅದೇ ‘ವಿ ಶಲ್ ಓವರ್ ಕಮ್’.

ಕಾಲೇಜು ಎನ್ ಸಿ ಸಿಯಲ್ಲಿಯೂ ಅದೇ ಹಾಡು- ವಿ ಶಲ್ ಓವರ್ ಕಮ್ ,

ಇದೆಲ್ಲಾ ಆಗಿ ನಾನು ಕ್ಯೂಬಾಗೆ ಬಂದಿಳಿದೆ. ಜಗತ್ತಿನ ಎಲ್ಲೆಡೆಯ ಕನಸುಗಾರರು ಒಂದೆಡೆ ಸೇರಿದ್ದವು. ಅಲ್ಲಂತೂ ನಾವು ಬೇರೆ ಹಾಡನ್ನು ಯೋಚಿಸುವ ಸಾಧ್ಯತೆಯೇ ಇರಲಿಲ್ಲ. ಏಕೆಂದರೆ ಜಗತ್ತಿನ ಕನಸುಗಾರರಿಗೆ ಹುಮ್ಮಸ್ಸು ತಂಬಲು ಒಂದು ಹಾಡು ಎಂದು ಇದ್ದರೆ ಅದು ‘ವಿ ಶಲ್ ಓವರ್ ಕಮ್’ ಮಾತ್ರ.

ಸಂಗೀತಗಾರರ, ಸಂಗೀತ ಶಾಸ್ತ್ರಜ್ಞರ ಕುಟುಂಬದಲ್ಲಿ ಹುಟ್ಟಿದ ಪೀಟರ್ ಸೀಗರ್ ಗೆ ನಾಲ್ಕು ಗೋಡೆಯ ಒಳಗಿನ ಪಾಠಕ್ಕಿಂತ ಬಯಲೇ ಕೈಬೀಸಿ ಕರೆಯಿತೇನೋ.

ಬಾಸ್ಟನ್ ನಲ್ಲಿ ಓದುತ್ತಿದ್ದ ಆತ ಓದಿಗೆ ಶರಣು ಹೇಳಿ ಸಿಕ್ಕ ಸಿಕ್ಕ ರೈಲು ಹತ್ತಿ ಊರೂರು ಸುತ್ತಲು ಶುರುಮಾಡಿದ. ಹೋದೆಡೆಯೆಲ್ಲಾ ಕೇಳಿದ ಜನಪದ ಹಾಡುಗಳು ಅವನೊಳಗೆ ಒಬ್ಬ ಹಾಡುಗಾರನನ್ನು ಹುಟ್ಟುಹಾಕಲುತೊಡಗಿದವು.

ಹಾಗೆ ಹಾಡುಗಳನ್ನು ಸೂರೆಗೊಳ್ಳುತ್ತಾ ಇರುವಾಗಲೇ ಅವರ ಕಣ್ಣಿಗೆ ಬಿದ್ದದ್ದು ಬ್ಯಾಂಜೋ… ಐದು ತಂತಿಗಳ ಬ್ಯಾಂಜೋ ಗಿರಿಜನರ ಕೈಯಲ್ಲಿ ಹೊರಡಿಸುತ್ತಿದ್ದ ಸಂಗೀತ ಇವರಿಗೆ ಕಿನ್ನರ ಗಾನವಾಗಿ ಕೇಳಿಸಿತು.

ಅದನ್ನು ಕೈಗೆತ್ತಿಕೊಂಡರು. ಅಷ್ಟೇ ಅಲ್ಲ ಅದನ್ನು ತನಗೆ ಬೇಕಾದಂತೆ ಹಿಗ್ಗಿಸಿ ಪಳಗಿಸಿಕೊಂಡರು. ಈ ಬ್ಯಾಂಜೋ ಎಷ್ಟು ಜನಪ್ರಿಯವಾಯಿತೆಂದರೆ ಅಮೇರಿಕದೆಲ್ಲೆಡೆ ಈಗ ಇದು ‘ಪೀಟ್ ಬ್ಯಾಂಜೋ’ ಎಂದೇ ಹೆಸರುವಾಸಿ.

ಪೀಟ್ ಸೀಗರ್ ಗೆ ಇದು ಸಂಗೀತ ವಾದ್ಯವಲ್ಲ. ಅದು ಅಸ್ತ್ರ. ದ್ವೇಷವನ್ನು ಸುತ್ತುಗಟ್ಟಿ ಮಣಿಸುವ ಅಸ್ತ್ರ. ಪೀಟ್ ಬಾರಿಸುವ ಬ್ಯಾಂಜೋದ ಮೇಲೆ ಈ ಸಾಲುಗಳು ಸದಾ ಕಾಣಿಸುತ್ತದೆ.

ಪೀಟ್ ಗೆ ಗೊತ್ತಿತ್ತು ನಾನು ಹಾಡಹೊರಟಿರುವುದು ಜಗತ್ತಿನ ವಿಷಾದವನ್ನು, ಹಾಡ ಹೊರಟಿರುವುದು ನೊಂದವರ ಕಥೆಗಳನ್ನು, ಪೀಟ್ ಹಾಡಿನ ಮೂಲಕ ಕಣ್ಣೀರ ಕಥೆಗಳನ್ನು ಕೇಳಿಸುವ, ಹಾಡಿನ ಮೂಲಕವೇ ಆ ಕಣ್ಣೀರನ್ನು ಒರೆಸುವ, ಹಾಡಿನ ಮೂಲಕವೇ ಒಂದು ಪುಟ್ಟ ವಿಶ್ವಾಸ ಹೊಳೆಯುವಂತೆ ಮಾಡುವ, ಹಾಡಿನ ಮೂಲಕವೇ ಜಗತ್ತನ್ನು ಗೆಲ್ಲುವ ಕೆಲಸಕ್ಕೆ ಇಳಿದೇಬಿಟ್ಟರು.

ವಿಯೆಟ್ನಾಂ ಯುದ್ಧದ ವಿರುದ್ಧ, ವಾಟರ್ ಗೇಟ್ ನ ನಿಕ್ಸನ್ ವಿರುದ್ಧ, ಮಲಗುಂಡಿಗಳಂತೆ ಕಾಣುವ ಹೊಳೆ ನದಿಗಳ ವಿರುದ್ಧ, ಆಫ್ರಿಕಾದ ಚಿನ್ನದ ಗಣಿಗಳ ಶೋಷಕರ ವಿರುದ್ಧ, ಯುದ್ಧಕ್ಕೆ ಹಸಿದವರ ವಿರುದ್ಧ ಹಾಡುಗಳನ್ನು ಕಟ್ಟಿದರು.

ಮಾರ್ಟಿನ್ ಲೂಥರ್ ಕಿಂಗ್ ಜನರನ್ನು ಮುನ್ನಡೆಸುತ್ತಾ ಹೊರಟಾಗ ಜೊತೆಯಲ್ಲಿ ಹಾಡುಗಳನ್ನು ಹೊತ್ತ ಪೀಟ್ ಸೀಗರ್ ಇದ್ದರು.

ಪೀಟ್ ಸೀಗರ್ ಬೈಬಲ್ ಪುಟಗಳಿಂದಲೂ ಹಾಡು ಸೃಷ್ಟಿಸಿದರು. ತಾಯಂದಿರು ಹಾಡುವ ಜೋಗುಳದಲ್ಲಿ ಹಾಡು ಕಂಡರು, ಅಪ್ರೋ- ಅಮೇರಿಕನ್ ಜನರ ಕಾಲೋನಿಗಳಿಂದ ಹಾಡು ಹೆಕ್ಕಿ ತಂದರು, ಕೊನೆಗೆ ರಷ್ಯನ್ ಕಾದಂಬರಿಕಾರ ಶೋಲೋಕೋವ್ ನ ಕಾದಂಬರಿಗಳಿಂದಲೂ ಹಾಡು ಉಕ್ಕಿಸಿದರು.

ಪೀಟ್ ಗೆ ಜನರ ಎದೆ ಬಡಿತ ಗೊತ್ತಿತ್ತು. ಅತ್ಯಂತ ಸರಳ ಶಬ್ದಗಳನ್ನು ಹಿಡಿದು ಅವರಲ್ಲಿ ನೋವನ್ನೂ, ಭರವಸೆಯ ಕಿರಣಗಳನ್ನೂ ಬೆಸುಗೆ ಹಾಕುತ್ತಿದ್ದರು.

ಹಾಗಾಗಿ ಪೀಟ್ ಸೀಗರ್ ಹಾಡು ಅವರ ಸ್ವತ್ತಾಗಿ ಮಾತ್ರ ಉಳಿಯಲಿಲ್ಲ. ಅವರ 1700 ಹಾಡುಗಳೂ ದೇಶದಿಂದ ದೇಶಕ್ಕೆ ವಲಸೆ ಹೋಗುವ ಹಕ್ಕಿಗಳಂತೆ ಪಟ ಪಟ ರೆಕ್ಕೆ ಬಡಿಯುತ್ತಾ ಹಾರುತ್ತಾ ಹೋದವು.

ಪೀಟ್ ಹಾಡುಗಳು ಅದು ಎಂದೂ ಒಬ್ಬರ ಹಾಡು ಅಲ್ಲವೇ ಅಲ್ಲ. ಯಾವುದೇ ಕಡೆ ಆ ಹಾಡಿನ ಸೊಲ್ಲು ಶುರುವಾದರೆ ಇಡೀ ಸಭಾಂಗಣವೇ ದನಿಗೂಡಿಸುತ್ತದೆ.

ಪೀಟ್ ಯುದ್ಧಕ್ಕೆ ಹೋಗುವ ಯೋಧರ ಬಗ್ಗೆ ನಿಸ್ಸಾಹಕತೆಯಿರುವ ಹಾಡು ಬರೆಯುತ್ತಾರೆ, ಶಾಲೆಯ ಪಾಠಗಳು ಹೇಳಿಕೊಡುವ ಕಟು ಸುಳ್ಳುಗಳ ಬಗ್ಗೆ ಬರೆಯುತ್ತಾರೆ, ರಾಜಕಾರಣಿಗಳ ಮುಖವಾಡಗಳ ಬಗ್ಗೆ, ಇಂಗ್ಲಿಷ್ ಎಂಬ ಹುಚ್ಚಾಟದ ಬಗ್ಗೆ, ಕೊನೆಗೆ ಕಿಟಕಿಯಿಂದ ಕಂಡ ಸುಂದರ ನೋಟದ ಬಗ್ಗೆಯೂ ಬರೆಯುತ್ತಾರೆ.

ಪೀಟ್ ಸೀಗರ್ ಗೆ ಭಾಷೆ ಎಂದೂ ಮಿತಿಯಾಗಿರಲಿಲ್ಲ. ‘ಭಾಷೆ ಎನ್ನುವುದು ಸೋತಾಗ ನಾದದ ಬೆನ್ನತ್ತಿ, ಭಾಷೆ ಎನ್ನುವುದು ಸೋತಾಗ ಕುಣಿತದ ಬೆನ್ನತ್ತಿ’ ಎನ್ನುತ್ತಿದ್ದರು.

ಅದು ಹೌದು ಎನ್ನುವಂತೆ ಅವರು ಕೊಲ್ಕೊತ್ತಾ, ಬೆಂಗಳೂರು, ತಿರುವನಂತಪುರಕ್ಕೆ ಬಂದಾಗ ಅವರ ಹಾಡುಗಳು ಭಾಷೆಯನ್ನು ಮೀರಿ ನಾದದ ಅಲೆಗಳನ್ನು ಎಬ್ಬಿಸುತ್ತಿದ್ದವು.

‘ಇಷ್ಟೆಲ್ಲಾ ಹಾಡಿದ್ದೀರಿ, ಇಷ್ಟು ವರ್ಷ ಹಾಡಿದ್ದೀರಿ, ಇಷ್ಟೆಲ್ಲಾ ಜನರ ಮುಂದೆ ಹಾಡಿದ್ದೀರಿ, ಆದದ್ದೇನು?’ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಪೀಟ್ ನಕ್ಕು ‘ಎಷ್ಟೊಂದು ಪುಟ್ಟ ಪುಟ್ಟ ವಿಜಯಗಳು ಸಿಕ್ಕಿವೆ ಗೊತ್ತಾ’ ಎಂದರು.

ಕೊಲ್ಕೊತ್ತಾದ ವೇದಿಕೆಯ ಮೇಲೆ ಬ್ಯಾಂಜೋ ಹಿಡಿದು ನಿಂತ ಪೀಟ್ ಸೀಜರ್ ಗೆ ಸಭಿಕರೊಬ್ಬರು ಕೂಗಿ ಕೇಳಿದರು- ‘ಭಾರತವನ್ನು ಬಡಿದೆಬ್ಬಿಸಿದ ಒಂದು ಪ್ರತಿಭಟನಾ ಗೀತೆ ಎಂದು ನೀವು ಯಾವುದನ್ನು ಆರಿಸುತ್ತೀರಿ?’.

ಪೀಟ್ ಬ್ಯಾಂಜೋ ತಂತಿಗಳನ್ನು ಶೃತಿಮಾಡಿ, ಗಂಟಲನ್ನು ಸರಿಮಾಡಿಕೊಂಡು- ‘ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ’ ಹಾಡಲು ಶುರುಮಾಡಿದರು.

ಸಭೆ ತನಗೇ ಗೊತ್ತಿಲ್ಲದಂತೆ ದನಿಗೂಡಿಸಿತ್ತು. ಗಾಂಧಿ ಎಂಬ ಆ ದೊಡ್ಡ ಪ್ರತಿಭಟನಾಕಾರನ ಜೊತೆ ಪೀಟ್ ಸೀಗರ್ ಹೆಜ್ಜೆ ಹಾಕುತ್ತಿದ್ದರು.

ಮೊನ್ನೆ ಮೊನ್ನೆ ತಾನೇ ಮೇ ದಿನಾಚರಣೆ ಮುಗಿಯಿತಲ್ಲಾ ಪೀಟ್ ಸೀಗರ್ ನೆನಪಿಗೆ ಬಂದರು.

ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಧನ ವಿತರಣೆ

ತುಮಕೂರು: ಕೊರೊನಾ ನಿಯಂತ್ರಿಸಲು ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.

ನಗರದ  ಕನ್ನಡಭವನದಲ್ಲಿ  ಡಿಸಿಸಿ ಬ್ಯಾಂಕ್, ತುಮಕೂರು ಹಾಲು ಒಕ್ಕೂಟ, ಆರೋಗ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪರಿಹಾರ ಧನ ವಿತರಿಸಲಾಯಿತು.

2 ತಿಂಗಳ ಕಾಲ  ಮನೆ ಮನೆಗೆ ಭೇಟಿ ಮಾಡಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ನಡೆಸಿದ್ದಾರೆ. ಸಮುದಾಯದ ಆರೋಗ್ಯವನ್ನು ಕಾಪಾಡಲು ಸಾಕಷ್ಟು ಶ್ರಮಿಸಿದ್ದಾರೆ.  ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಅವಿರತ ಶ್ರಮ ಮೆಚ್ಚುವಂತದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ  ಪ್ರಶಂಸಿಸಿದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, 40,250 ಆಶಾ ಕಾರ್ಯಕರ್ತೆಯರಿಗೆ ತಲಾ  3 ಸಾವಿರದಂತೆ  12.7 ಕೋಟಿಯನ್ನು ಸಹಕಾರ ಇಲಾಖೆ ಮೂಲಕ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದರು.

ಜಿಲ್ಲೆಯ 101 ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಪತ್ರ, ಪ್ರೋತ್ಸಾಹಧನ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ಚೆಕ್ ವಿತರಿಸಲಾಯಿತು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಸಂಸದ ಜಿ.ಎಸ್.ಬಸವರಾಜು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ಮಹಾಲಿಂಗಪ್ಪ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಉಪವಿಭಾಗಾಧಿಕಾರಿ ಅಜಯ್, ಡಿಎಚ್‍ಒ ಡಾ.ನಾಗೇಂದ್ರಪ್ಪ, ಮುಖಂಡ ಡಾ.ಹುಲಿನಾಯ್ಕರ್ ಹಾಜರಿದ್ದರು.

ಪೊಲೀಸ್ ಠಾಣೆಯಲ್ಲೇ ಕುಡಿದು ಹೊಡೆದಾಡಿದರು…

Publicstory. in


Tumkuru: ಕುಡಿದು ಜೂಜಾಡುವವರನ್ನು ಹಿಡಿಯುವ ಬದಲು ಠಾಣೆಯಲ್ಲಿ ಅವರೇ ಕುಡಿದು ಜೂಜಾಡಿದರ ಪೊಲೀಸರ ಕತೆ ಬಟಾಬಯಲಾಗಿದೆ.

ತುಮಕೂರು ತಾಲ್ಲೂಕು ಹೆಬ್ಬೂರು ಪೋಲಿಸರು ಈ ರಾದ್ಧಾಂತ ಮಾಡಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಐ ರಾಮಚಂದ್ರಪ್ಪ, ಠಾಣೆ ರೈಟರ್ ದೇವರಾಜ್, ಚಾಲಕ ಸಂತೋಷ್, ಕಾನ್‌ಸ್ಟೆಬಲ್ ಮಹೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಮಾನತುಗೊಳಿಸಿದ್ದಾರೆ.

ಕಾಫಿ ಕಪ್ಪಿನೊಳಗೆ ಕೊಲಂಬಸ್…

ಜಿ.ಎನ್.ಮೋಹನ್


ಆ ಹಡಗು ಸಮುದ್ರದ ಮಧ್ಯೆ ದಾರಿ ಮಾಡಿಕೊಳ್ಳುತ್ತಾ ಹೊರಟದ್ದೇ ತಡ ಜಗತ್ತು ಎಂದಿನ ಜಗತ್ತಾಗಿ ಉಳಿಯಲಿಲ್ಲ.

ಆ ಹಡಗು ಸೂರ್ಯನ ಗುರುತನ್ನು ಆಧಾರವಾಗಿಟ್ಟುಕೊಂಡು ತನ್ನ ಪಯಣ ಆರಂಭಿಸಿದ್ದೆ ತಡ ಸಾವು ತನ್ನ ಕಾಲ ಬುಡದಲ್ಲಿ ಬಿದ್ದಿದೆ ಎನ್ನುವುದು ಅನೇಕರಿಗೆ ತಿಳಿದಿರಲಿಲ್ಲ.

ಆ ಹಡಗು ಜಗತ್ತು ಚಪ್ಪಟೆಯಾಗಿದೆ ಎನ್ನುವುದನ್ನು ಸುಳ್ಳು ಮಾಡುತ್ತೇನೆ ಎಂದು ಹೊರಟಾಗ ಅದು ಸಾವಿರಾರು ಹೊಸ ಸುಳ್ಳುಗಳಿಗೆ ದಾರಿಯಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.

ಆ ಹಡಗು ಮೂರು ವರ್ಷಗಳಿಗಾಗುವಷ್ಟು ಆಹಾರವನ್ನು ಹೊತ್ತು ಹೊರಟಾಗ ಅದು ಜಗತ್ತಿನ ಅನ್ನವನ್ನು, ಅವಕಾಶವನ್ನು, ಭವಿಷ್ಯವನ್ನು ಕಸಿಯುತ್ತದೆ ಎಂದು ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ.

ಆತ- ಕೊಲಂಬಸ್.

ಸ್ಪೇನ್ ನ ರಾಣಿ ಇಸಾಬೆಲ್ಲಾಳ ಬೆಂಬಲವನ್ನು ಬಗಲಲ್ಲಿಟ್ಟುಕೊಂಡು 1492 ಅಕ್ಟೋಬರ್ 12 ರಂದು ಆತ ಸಂಚಾರ ಹೊರಟದ್ದೇ ತಡ ಜಗತ್ತಿನ ಚರಿತ್ರೆಯ ಪುಟಗಳು ಮಗ್ಗುಲು ಬದಲಿಸಿಕೊಂಡವು.

ಯಾಕೋ ಕಳೆದ ಹಲವು ದಿನಗಳಿಂದ ನನಗೆ ಕೊಲಂಬಸ್ ಬಿಟ್ಟೂ ಬಿಡದೆ ಕಾಡುತ್ತಿದ್ದಾನೆ. ನಿಂತರೂ ಕುಂತರೂ ಕೊಲಂಬಸ್ ನದ್ದೇ ಗುಂಗು.

ಹಾಗಾಗಲು ಕಾರಣವಾದದ್ದು ನಾನು ಕುಡಿಯಲು ಹೊರಟಿದ್ದ ಒಂದು ಕಪ್ ಕಾಫಿ ಎಂದರೆ ನೀವು ನಂಬಬೇಕು.

ಆ ಒಂದು ಪುಟ್ಟ ಕಾಫಿ ಕಪ್ ನನಗೆ ಭೂಗೋಳವನ್ನೂ ಚರಿತ್ರೆಯನ್ನೂ ಕಲಿಸಿಬಿಟ್ಟಿತು.

ಕ್ಯೂಬಾದಲ್ಲಿದ್ದೆ. ಕಾಫಿ ಹುಚ್ಚಿಗೆ ಬಿದ್ದು ಒಲ್ಲದ ಮನಸ್ಸಿನಿಂದ ಸಾಕಷ್ಟು ಡಾಲರ್ ಖರ್ಚು ಮಾಡಿ ಕಾಫಿಗೆ ಆರ್ಡರ್ ಮಾಡಿದೆ.

ಕಾಫಿ ಕೊಡುತ್ತಿದ್ದವ ‘ಕಾಫಿಗೆ ಹಾಲು ಸೇರಿಸಬೇಕೆ?’ ಎಂದು ಕೇಳಿದ. ‘ಎಸ್, ಕಾಫಿ ವಿಥ್ ಮಿಲ್ಕ್ ಪ್ಲೀಸ್’ ಅಂದೆ.

ಅಂದದಷ್ಟೇ, ಪಕ್ಕದಲ್ಲಿದ್ದಾಕೆ ನನ್ನನ್ನು ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಹಿಗ್ಗಾಮುಗ್ಗಾ ಬೆಂಡೆತ್ತಲು ಆರಂಭಿಸಿದಳು.

ಯಾಕೆ ಹೀಗೆ? ಎಂದು ಕಳವಳಕ್ಕೆ ಬಿದ್ದಿದ್ದವನನ್ನು ಅಂಗಡಿಯಾತ ‘ನೀವು ಕಾಫಿಗೆ ಹಾಲು ಹಾಕಿಸಿಕೊಂಡಿರಲ್ಲಾ ಅದಕ್ಕೆ. ಕಾಫಿಗೆ ಹಾಲು ಹಾಕಿಸಿಕೊಳ್ಳುವವರು ಹೆಚ್ಚಾಗಿ ಬ್ರಿಟಿಷರು ಮಾತ್ರ. ಉಳಿದ ಕಡೆ ಕಾಫಿ ಎಂದರೆ ಕಾಫಿ ಮಾತ್ರ’ ಅಂದ.

ಕಾಫಿಗೆ ಹಾಲು ಹಾಕಿಸಿಕೊಂಡದ್ದೇ ತಡ ಆಕೆಯ ಹೊಟ್ಟೆಯಲ್ಲಿದ್ದ ಬ್ರಿಟಿಷರ ವಿರುಧ್ಧದ ಸಿಟ್ಟೆಲ್ಲಾ ಹೊರಬಂದಿತ್ತು.

ನಾನು ಹಿಡಿದಿದ್ದ ಕಾಫಿಯ ಕಪ್ ಆಗ ನನಗೆ ಕಾಫಿಯ ಕಪ್ ಆಗಿ ಮಾತ್ರ ಉಳಿದಿರಲಿಲ್ಲ ನನಗೆ ಚರಿತ್ರೆ ಭೂಗೋಳ ಕಲಿಸಿದ ಎಲ್ಲವೂ ಆಗಿಹೋಗಿತ್ತು. ನನ್ನ ಕಾಫಿ ಕಪ್ಪಿನೊಳಗೆ ಆ ಕ್ಷಣ ನೀವು ಇಣುಕಿದ್ದರೆ ದೊಡ್ಡ ಬಿರುಗಾಳಿಯನ್ನೇ ಕಾಣಬಹುದಾಗಿತ್ತು.

ಇದಾಗಿ ವರುಷಗಳು ಉರುಳಿ ಹೋಗಿದೆ. ಆದರೆ ಅಂದಿನಿಂದ ಇಂದಿನವರೆಗೆ ನನಗೆ ಚರಿತ್ರೆಯ ಪಾಠ ನಡೆಯುತ್ತಲೇ ಇದೆ.

ಕಾಫಿಯೊಳಗಿನ ಹಾಲು ನನಗೆ ಹೊಸ ಚರಿತ್ರೆ ಕಲಿಸಿದ ದಿನದಿಂದ ನಾನು ಚರಿತ್ರೆಯ ಪುಟಗಳನ್ನು ಎಚ್ಚರಿಕೆಯಿಂದ ಓದುತ್ತಾ ಬಂದಿದ್ದೇನೆ. ಚರಿತ್ರೆಯ ಪುಟಗಳ ನಡುವೆ ಆಡದೆ ಬಿಟ್ಟಿರುವ ಮಾತುಗಳನ್ನು ಓದುತ್ತಾ ಬರುತ್ತಿದ್ದೇನೆ. ಚರಿತ್ರೆಯ ಪುಟಗಳು ಹೇಳದೆ ಬಿಟ್ಟಿದ್ದನ್ನು ಹೆಕ್ಕಿ ನೋಡುತ್ತಿದ್ದೇನೆ.

ಹಾಗೆ ಹುಡುಕುವಾಗಲೇ ನನಗೆ ಸಿಕ್ಕಿದ್ದು ಈ ಕೊಲಂಬಸ್.

ಕೆಲವೇ ವಾರಗಳ ಹಿಂದೆ ಅಮೇರಿಕಾದಲ್ಲೂ ಈ ಚರಿತ್ರೆಯ ಗುಳ್ಳೆಗಳು ಒಡೆದು ಹೋಗಿದ್ದವು.

‘ಸ್ಯಾಂಡಿ’ಗೂ ಮುನ್ನವೇ ಇನ್ನೊಂದು ಚಂಡಮಾರುತ ಎದ್ದು ಬಂದಿತ್ತು. ಅದು ಚರಿತ್ರೆಯ ಪುಟಗಳಲ್ಲಿ ಎದ್ದ ಚಂಡಮಾರುತ.

ಕೊಲಂಬಸ್ ದಿನಾಚರಣೆಯನ್ನು ಸರ್ಕಾರ ರದ್ದು ಮಾಡಬೇಕು, ಘೋಷಿಸಿರುವ ಸರ್ಕಾರಿ ರಜವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು, ಕೈಯಲ್ಲಿ ರಕ್ತ ಮೆತ್ತಿದ ವ್ಯಕ್ತಿಯನ್ನು ದೇಶದ ದೊಡ್ಡ ಮನುಷ್ಯ ಎಂದು ಬಿಂಬಿಸುವುದೇಕೆ? ಎನ್ನುವ ಕೂಗೆದ್ದಿತ್ತು.

ಈ ಕೂಗನ್ನು ಎತ್ತಿದವರು ಅಮೆರಿಕಾದ ಮೂಲನಿವಾಸಿಗಳು, ಚರಿತ್ರಕಾರರು ಹಾಗೂ ನನ್ನಂತೆಯೇ ಕಾಫಿ ಕುಡಿದಿದ್ದ ಹಲವಾರು ಮಂದಿ.

‘ಒಂದು ಪ್ರಶ್ನೆ ಕೇಳುತ್ತೇವೆ. ಜರ್ಮನಿಯ ಯಹೂದಿಗಳ ಓಣಿಯಲ್ಲಿ ಹಿಟ್ಲರ್ ನ ಗುಣಗಾನ ಮಾಡುವ, ಆರಾಧಿಸುವ ಮೆರವಣಿಗೆ ನಡೆದರೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಇದು ಸಾಧ್ಯವೇ? ಹಾಗಾಗಲು ಸಾಧ್ಯವಿಲ್ಲ ಎನ್ನುವುದಾದರೆ ಅಮೆರಿಕಾದ ಪಾಲಿಗೆ ಹಿಟ್ಲರ್ ಆದ ಕೊಲಂಬಸ್ ನನ್ನು ಹೇಗೆ ಆರಾಧಿಸುತ್ತೀರಿ? ಎಂದು ಸಾರ್ವಜನಿಕ ಹೇಳಿಕೆಗಳು ಬಿಡುಗಡೆಯಾದವು.

ಕರಪತ್ರಗಳು ಹಂಚಿಕೆಯಾದವು. ಕೊಲಂಬಸ್ ನ ಪ್ರತಿಮೆಯ ಮೇಲೆ ರಕ್ತದ ಸಂಕೇತವಾಗಿ ಕೆಂಪು ಬಣ್ಣವನ್ನು ಎರಚಲಾಯಿತು.

ಈ ಆಕ್ರೋಶಕ್ಕೆ ಕಾರಣವಿದೆ.

ಇಟಲಿಯ ಮೂಲದ ಕೊಲಂಬಸ್ ಭಾರತದಲ್ಲಿದ್ದ ಸಂಬಾರ ಪದಾರ್ಥ, ರೇಷ್ಮೆ ಹಾಗೂ ಧನ ಕನಕದ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದ. ಹಾಗಾಗಿ ಸಮುದ್ರ ಮಾರ್ಗವಾಗಿ ಹೋಗಿ ಭಾರತದಿಂದ ಅಮೂಲ್ಯವಾದ ಎಲ್ಲವನ್ನೂ ಹೊತ್ತುಕೊಂಡು ಬರುವ ಬಗ್ಗೆ ಸ್ಪೇನ್ ನ ರಾಣಿ ಇಸಾಬೆಲ್ಲಾಳ ಮನ ಒಲಿಸಿದ.

ಆಗ ಸಾಗರ ಮಾರ್ಗಗಳೇ ಒಂದು ದೇಶದ ಭವಿಷ್ಯವನ್ನು ಬದಲಿಸಿ ಹಾಕುವ ಮಾರ್ಗಗಳಾಗಿದ್ದವು. ಹೊಸ ದಾರಿ ಹುಡುಕುವುದು ಎನ್ನುವುದು ಹೊಸ ಸಂಪತ್ತನ್ನು ದೋಚುವುದು ಎನ್ನುವ ಅರ್ಥವನ್ನೇ ಪಡೆದಿತ್ತು.

ಹಾಗೆ ಭಾರತ ಮುಟ್ಟುವ ಆಸೆಯಿಂದ ಹೊರಟ ಕೊಲಂಬಸ್ ಲೆಕ್ಕಾಚಾರ ತಪ್ಪಿತ್ತು.

ಆತ ಭೂಮಿಯ ವಿಸ್ತಾರವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ. ಸಾಗರದಲ್ಲಿನ ಮೈಲುಗಳ ಅಂದಾಜು ತಪ್ಪಿದ್ದ. ಹಾಗಾಗಿ ಆತ ಹೋಗಿ ಮುಟ್ಟಿದ ನೆಲವನ್ನೇ ಭಾರತ ಎಂದುಕೊಂಡ.

ಹಾಗೆ ಆತ ಕಾಲಿಟ್ಟದ್ದು ವೆಸ್ಟ್ ಇಂಡೀಸ್, ಕ್ಯೂಬಾ, ಅಮೇರಿಕಾ ಹೀಗೆ..

ಚರಿತ್ರೆಯ ಪುಸ್ತಕ ಬರೆದವರು ‘ಕೊಲಂಬಸ್ ಅಮೆರಿಕಾವನ್ನು ಕಂಡುಹಿಡಿದ’ ಎಂದು ಬರೆದು ಕೈ ತೊಳೆದುಕೊಂಡರು.

ಆಗಲೇ ಫಿಡೆಲ್ ಕ್ಯಾಸ್ಟ್ರೋ ಗುಡುಗಿದ್ದು- ವೆಸ್ಟ್ ಇಂಡೀಸ್, ಕ್ಯೂಬಾ ಆ ಮೂಲಕ ಅಮೆರಿಕಾವನ್ನು ಕೊಲಂಬಸ್ ಕಂಡುಹಿಡಿದ 500ನೆ ವರ್ಷಾಚರಣೆಯನ್ನು ಅದ್ಧೂರಿಯಿಂದ ಆಚರಿಸಲು ಸ್ಪೇನ್ ಸಜಾಗುತ್ತಿದ್ದಾಗ ಕ್ಯಾಸ್ಟ್ರೋ ಅಪಸ್ವರ ಎತ್ತಿದರು.

‘ಯಾವುದೇ ಒಂದು ದೇಶವನ್ನು ಕಂಡು ಹಿಡಿಯುವುದು ಎಂದರೇನು?’ ಎಂದು ಪ್ರಶ್ನಿಸಿದರು.

‘ಕೊಲಂಬಸ್ ಇಲ್ಲಿಗೆ ಕಾಲಿಟ್ಟಿರಬಹುದು ಅಷ್ಟೇ, ಆದರೆ ಆತ ಕಂಡು ಹಿಡಿಯಲು ಹೇಗೆ ಸಾಧ್ಯ?’ ಏಂಬ ಪ್ರಶ್ನೆ ಎತ್ತಿದರು.

ಇದೇ ಪ್ರಶ್ನೆಯನ್ನು ಈಗ ಅನೇಕ ಅಮೆರಿಕನ್ನರೂ ಕೇಳುತ್ತಿದ್ದಾರೆ.

ಅಕ್ಟೋಬರ್ 12 ಬಂತೆಂದರೆ ಸಾಕು ಅಮೇರಿಕಾ ಕೊಲಂಬಸ್ ಪರ ವಿರೋಧದ ಹೊಸ ಚರ್ಚೆಗೆ ಕಾರಣವಾಗುತ್ತದೆ.

ಅಮೆರಿಕಾದಲ್ಲಿ ನೆಲಸಿರುವ ಇಟಲಿ, ಸ್ಪೇನ್ ನವರಿಗೆ ತಾವು ಅಮೆರಿಕಾವನ್ನು ಕಂಡು ಹಿಡಿದೆವು ಎನ್ನುವ ಹೆಮ್ಮೆಯಾದರೆ ಅಮೆರಿಕಾದ ಹಲವು ಮೂಲ ನಿವಾಸಿಗಳಿಗೆ ಇದು ತಮ್ಮನ್ನು ಹೊಸಕಿ ಹಾಕಿದ ನೋವಿನ ಘಟನೆಯಾಗಿ ಕಾಣುತ್ತದೆ.

ಕೊಲಂಬಸ್ ಅಮೆರಿಕಾದಲ್ಲಿ ಕಾಲಿಡುವ ಮುಂಚೆಯೇ 145 ದಶಲಕ್ಷ ಮಂದಿ ಇದ್ದರು. 565 ಬುಡಕಟ್ಟುಗಳು ಇದ್ದವು. ಇಲ್ಲಿನ ಮೂಲನಿವಾಸಿಗಳನ್ನು ಕತ್ತರಿಸಿದ, ಹೊಸಕಿ ಹಾಕಿದ ಅವರನ್ನು ಲೂಟಿ ಮಾಡಿದ, ಅಮೆರಿಕಾದ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ಬಗ್ಗೆ ಸಂಶೋಧಕರು. ಚರಿತ್ರಕಾರರು ಪುರಾವೆ ನೀಡುತ್ತಲೇ ಬಂದಿದ್ದಾರೆ.

ಸಿಡುಬಿನ ರೋಗಾಣುಗಳನ್ನು ಹೊತ್ತ ಕಂಬಳಿಗಳನ್ನು ಮೂಲನಿವಾಸಿಗಳಿಗೆ ನೀಡಿ ರೋಗ ಹರಡುವಂತೆ ಮಾಡಿದ್ದು. ಬೇಟೆ ಆಡಬೇಕು ಎಂದು ಆಸೆಯಾದಾಗ ಮನುಷ್ಯರನ್ನೇ ಅಟ್ಟಾಡಿಸಿ ಗುಂಡು ಹಾರಿಸಿ ಕೊಂದದ್ದು, ಹಾಗೆ ಸತ್ತವರನ್ನು ತನ್ನ ಬೇಟೆ ನಾಯಿಗಳಿಗೆ ಆಹಾರವಾಗಿ ನೀಡಿದ್ದು, ಲಕ್ಷಾಂತರ ಜನರನ್ನು ಗುಲಾಮರನ್ನಾಗಿಸಿಕೊಂಡು ವಿವಿಧ ದೇಶಗಳಿಗೆ ಹೊತ್ತೊಯ್ದದ್ದು, ಮಕ್ಕಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದು ಎಲ್ಲವೂ ಚರಿತ್ರೆಯ ಪುಟಗಳಲ್ಲಿ ಏಕಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.

ಈ ಕೊಲಂಬಸ್ ವಿವಾದದ ನೆರಳು ಭಾರತವನ್ನೂ ಬಿಟ್ಟಿಲ್ಲ.

ಕೊಲಂಬಿಯನ್ನರಿಗಿಂತ ಮುಂಚೆ ಭಾರತ ತಲುಪಿಬಿಡಬೇಕು ಎಂದುಕೊಂಡ ಕೊಲಂಬಸ್ ಎಲ್ಲೆಲ್ಲಿಗೋ ಹೋಗಿ ಮುಟ್ಟಿದ. ಆದರೆ ಅವನೊಬ್ಬನಿದ್ದ ವಾಸ್ಕೋ ಡ ಗಾಮ.

ಪೋರ್ಚುಗಲ್ಲಿನಿಂದ ಹೊರಟ ಆತ ಕೇರಳ, ಗೋವಾಗೆ ಕಾಲಿಟ್ಟ. ವಾಸ್ಕೋ ಡ ಗಾಮ ಭೇಟಿ ಕೊಟ್ಟ 500ನೆಯ ವರ್ಷಾಚರಣೆಗೆ ಭಾರತ ಸಜ್ಜಾಗುತ್ತಿರುವಾಗ ಇಲ್ಲಿಯೂ ಕೊಲಂಬಸ್ ಅಮೆರಿಕಾವನ್ನು ಕಂಡು ಹಿಡಿದ ಘಟನೆ ನೆನಪಾಯಿತು.

‘ವಾಸ್ಕೋ ಡ ಗಾಮ ಭಾರತವನ್ನು ಕಂಡು ಹಿಡಿಯಲು ಹೇಗೆ ಸಾಧ್ಯ? ಆತ ಬಂದ ಕಾರಣದಿಂದಾಗಿಯೇ ಭಾರತ ಶತಮಾನಗಳ ದಾಸ್ಯಕ್ಕೆ ಒಳಗಾಗಬೇಕಾಯಿತು. ಆಚರಣೆ ಕೈಬಿಡಿ’ ಎಂದು ಕೇರಳ, ಗೋವಾದಲ್ಲಿ ಪ್ರತಿಭಟನೆಯ ಅಲೆ ಎದ್ದಿತು.

‘ಆತ ಇಲ್ಲಿಗೆ ಬಂದಿದ್ದ, ಅದು ವ್ಯಾಪಾರದ ಹೊಸ ನಡೆಗೆ ದಾರಿಯಾಯಿತು ಎನ್ನುವುದಷ್ಟನ್ನು ಮಾತ್ರವೇ ಸರ್ಕಾರ ಗುರುತಿಸಲು ಇಷ್ಟಪಡುತ್ತದೆ’ ಎಂದು ಸರ್ಕಾರವೇ ಖುದ್ದು ಹೇಳಿಕೆ ನೀಡಬೇಕಾಯಿತು.

ಅಷ್ಟರಮಟ್ಟಿಗಾದರೂ ಕೊಲಂಬಸ್ ನನ್ನು ಸೀಮಿತಗೊಳಿಸಲು ಅಮೇರಿಕಾ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಚರಿತ್ರೆ ಎನ್ನುವುದು ಅಂಕಿ ಅಂಶ, ಎದ್ದ ರಾಜರು, ಬಿದ್ದ ಸಾಮ್ರಾಜ್ಯಗಳ ಲೆಕ್ಕವಲ್ಲ ಎನ್ನುವುದು ಗೊತ್ತಾಗಲು ಇನ್ನೂ ಸಾಕಷ್ಟು ವಾದ ವಿವಾದಗಳು ನಡೆಯಬೇಕಿದೆ.

ಈ ಮಧ್ಯೆಯೇ ಅಮೆರಿಕಾದ ಹೆಸರಾಂತ ಸಮಾಜಶಾಸ್ತ್ರಜ್ಞ ಜೇಮ್ಸ್ ಲೋವೆನ್ ಅಮೆರಿಕಾದ ಶಾಲೆಗಳು ಕಲಿಸುತ್ತಿರುವ ಅಷ್ಟೂ ಚರಿತ್ರೆಯ ಪುಟಗಳನ್ನೂ ತಿರುವು ಹಾಕಿದರು.

ವಿಸ್ತಾರ ಅಧ್ಯಯನ ನಡೆಸಿ ‘ನನ್ನ ಅಧ್ಯಾಪಕರು ನನಗೆ ಹೇಳಿದ ಸುಳ್ಳುಗಳು’ (Lies My Teacher Told Me) ಎನ್ನುವ ಪುಸ್ತಕ ಹೊರತಂದರು.

ಆ ಸರಣಿಯಲ್ಲಿ ಈಗ ‘ನನ್ನ ಅಧ್ಯಾಪಕರು ನನಗೆ ಕ್ರಿಸ್ತೋಫರ್ ಕೊಲಂಬಸ್ ಬಗ್ಗೆ ಹೇಳಿದ ಸುಳ್ಳೇನು? ಎನ್ನುವ ಪುಸ್ತಕ ಹೊರಬಂದಿದೆ.

ಅಲ್ಲಿ ಅವರು ಪುಸ್ತಕಗಳ ಪುಟಗಳಲ್ಲಿ ಚರಿತ್ರೆಯ ಶವ ಪರೀಕ್ಷೆ ನಡೆಸುತ್ತಿದ್ದಾರೆ ಇಲ್ಲಿ ನಾನು ಕೈನಲ್ಲಿ ಕಾಫಿ ಕಪ್ ಹಿಡಿದು ಕುಳಿತಿದ್ದೇನೆ.
—–
ಅಮೆರಿಕಾದಲ್ಲಿ Black Lives Matters ಚಳವಳಿಯ ಅಂಗವಾಗಿ ಪ್ರತೀ ದಿನ ಕೊಲಂಬಸ್ ನ ಪ್ರತಿಮೆಗಳನ್ನು ಒಡೆದು ಉರುಳಿಸುತ್ತಿದ್ದಾರೆ.

ಏಕೆ ಎಂದು ಆಶ್ಚರ್ಯಚಕಿತರಾಗಿ ಅನೇಕರು ನನ್ನನ್ನು ಕೇಳಿದರು. ಆ ಹಿನ್ನೆಲೆಯಲ್ಲಿ ನನ್ನ ಈ ಲೇಖನ.

‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಕೃತಿಯನ್ನು ‘ಅಭಿನವ ಪ್ರಕಾಶನ’ ಪ್ರಕಟಿಸಿದೆ.
ಪ್ರತಿಗಳಿಗಾಗಿ- 94488 04905

ನಿಮ್ಮಿಂದ ನಮ್ಮ‌ಹಳ್ಳಿಗಳಲ್ಲಿ ಏನಾಯ್ತು ಗೊತ್ತಾ?

ಶಿಲ್ಪಾ ತಾರೀಕಟ್ಟೆ


covid 19,
ವ್ಯೆರಸ್ ಬಂದಿದ್ದು ವುಹಾನ್ ನಗರ ದಿಂದ ಈ ವ್ಯೆರಸ್ ಮನುಷ್ಯನ ದೇಹಕ್ಕಷ್ಟೆ ಹಾನಿ ಮಾಡಬೇಕಿತ್ತು ಆದರೆ ಜನರ ಮನುಷ್ಯತ್ವಕ್ಕೂ ಕೂಡ ಹಾನಿ ಮಾಡಿದ್ದು ಸರಿಯೇ?

ವ್ಯೆರಸ್ ಮನುಷ್ಯನಿಗೆ ಬರುವು ಬದಲು ಧಮ೯ಗಳಿಗೆ ಬಂತ ಎಂಬ ಪ್ರಶ್ನೆ ಮೂಡಿದ್ದು ಟಿ ವಿ ಮಾಧ್ಯಮಗಳಿಂದ .

ಮಾಧ್ಯಮಗಳು ಅದೇಕೆ ಅಷ್ಟು ಹೆದರಿಸಿದರು ಜನರನ್ನು, ಅದು ಹಳ್ಳಿಯ ಜನರನ್ನು ?

ಆ ಧಮ೯ದವರು ಹಬ್ಬಿಸಿದರು, ಈ ಧರ್ಮದವರು ಹಬ್ಬಿಸಿದರು ಎಲ್ಲಿ ಮಾತಿಗಿಳಿದರು ಇದೆ ವಿಚಾರ … ಒಬ್ಬರಿಂದ ಇಬ್ಬರಿಂದಾದ ತಪ್ಪಿಗೆ ಇಡೀ ಸಮುದಾಯವನ್ನು ಕೆಟ್ಟದಾಗಿ ವಣಿ೯ಸುವುದು ಅದೆಷ್ಟು ಸರಿ.

ಮನುಷ್ಯನೆ ಮಾಡಿಕೊಂಡಿರುವ ಪ್ರತಿಯೊಂದು ಜಾತಿ ಧಮ೯ ಗಳಲ್ಲೂ ಕೆಟ್ಟದ್ದನ್ನು ಮಾಡುವವರು ಮತ್ತು ಒಳ್ಳೆಯದನ್ನು ಮಾಡುವವರು ಇದ್ದಾರೆ.

ಕೆಟ್ಟದ್ದನ್ನು ಸಮುದಾಯಕ್ಕೆ ತಗಲು ಆಕುವುದು ಸಾಮಾಜಿಕವಾಗಿ ದ್ವೇಷಕ್ಕೆ ಮುನ್ನುಡಿ ಅಷ್ಟೇ .

ಧಮ೯ಗಳ ಕಚ್ಚಾಟಗಳಿಗೆ ಬಂದಿರುವ ವ್ಯೆರಸ್ ಅದೆಷ್ಟು ಆಥಿ೯ಕವಾಗಿ ನಷ್ಟ ಮಾಡಿತೆಂಬುದು ಸ್ಪಷ್ಟವಾಗಿ ಕಂಡಿದ್ದು ಹಳ್ಳಿಗಳ ಚಿತ್ರಣದಿಂದ .

ಹಳ್ಳಿಗಳಲ್ಲಿ ಹಲ ಧರ್ಮಗಳ ಸಮುದಾಯದವರು ಅದೆಷ್ಟು ಬಾಂಧವ್ಯ ಕಾಪಾಡಿಕೊಂಡಿದ್ದರು .
ನ್ಯೂಸ್ ಚಾನೆಲ್ಗಳ ಒಂದೇ ಒಂದು ಬ್ರೇಕಿಂಗ್ ನ್ಯೂಸ್ ದೊಡ್ಧ ದ್ವನಿಯಲ್ಲಿ ಅದೆಂತಹ ದ್ವೇಷವನ್ನು ಬಿತ್ತರಿಸಿದವು ಅಂದರೆ….

ಲಾಕ್ ಡೌನ್ ನ ಪರಿಣಾಮದಿಂದ ಹೆಂಗಸರು ಗಂಡಸರೂ ಮಕ್ಕಳೆನ್ನದೆ ತೆಂಗಿನಮರದಿಂದ ಕಡ್ಡಿ ಸಿಗಿದ ಕಂತೆ ಕಟ್ಟಿ ರಾಶಿಗಟ್ಟಳೆ ಕಡ್ಡಿಕೊಳ್ಳುವವರು ಇಲ್ಲದಂತಾದರು. ಊರಿಗೆ ವ್ಯಾಪಾರಕ್ಕೆ ಬಂದವರನ್ನು ಬಿಟ್ಟುಕೊಳ್ಳದೆ ಅಮಾನವೀಯತೆ ತೋರಿಸದಷ್ಟು ಮಾನವೀಯತೆ ಕಳೆದುಕೊಂಡರು.

ಹಳೇ ಹುಣಸೆ ಹಣ್ಣು ಕೊಳ್ಳವವರು ಇಲ್ಲದೆ, ಕೊಟ್ಟರೆ ಅವರು ಕೊಟ್ಟ ದುಡ್ಧಿಂದ ವ್ಯೆರಸ್ ಬಂದಿತು ಎಂಬ ಅನುಮಾನಗಳಿಗೆ ಪಾರವೆ ಇಲ್ಲದೆ ವ್ಯೆರಸ್ ಸದ್ದು ಮಾಡಿತ್ತು .

ಕೊಡುವುದು ಕೊಳ್ಳುವುದು ಹಳ್ಳಿಗಳ ದುಡಿಮೆಯ ಒಂದು ಭಾಗವೇ ಆಗಿತ್ತು .

ಹಳ್ಳಿಗಳ ಜನ ಅದೆಷ್ಟುೂ ಕೊಳ್ಳಲು ನಗರಗಳಿಗೆ ಕಾಲಿಡುವುದೆ ಇಲ್ಲ. ಹೇ ಇಲ್ಲೆ ಅವರು ಬರುತ್ತಾರೆ, ಹೇಗೊ ಹೆಚ್ಚು ಕಮ್ಮಿ ವ್ಯಾಪಾರ ಮಾಡುಬಹುದು ಎಂದು ನಂಬಿದ ಹಿಂದೂಗಳಲ್ಲೂ.

ಮತ್ತು ಹೇ, ಹಳ್ಳಿಗೆ ವ್ಯಾಪಾರಕ್ಕೆ ನಿಂತರೆ ವ್ಯಾಪರವೂ ಆಗುತ್ತದೆ ಒಂದಿಷ್ಟು ಕಾಯಿ ದಿನಸಿ ಕೊಡುತ್ತಾರೆ ಎಂದು ನಂಬಿದ ಅವರ‌ ಮನಸುಗಳಿಗೆ ಮತ್ತು ಹೊಟ್ಟೆಗೆ ಇಟ್ಟ ಮಾಧ್ಯಮಗಳ ವ್ಯೆರಸ್ ಈಗಲೂ ಚೇತರಿಸಿಕೊಳ್ಳುವುದರಲ್ಲೆ ಇದೆ.


ಧಮ೯ ಮತ್ತು ಜಾತಿಗಳು ಮನುಷ್ಯನನ್ನು ಮತ್ತು ಮಾನವೀಯತೆಯನ್ನು ಮೀರಿಸಲಾರವು, ಕಾರಣ ಜಾತಿ ಧರ್ಮ ಗಳು ಮನುಷ್ಯರಿಂದ ಮಾಡಲ್ಪಟ್ಟವು .

ಅವರು ತಂದ ಈರುಳ್ಳಿ ತರಕಾರಿ ಕೊಳ್ಳುವವರಿಲ್ಲ ಊರುಗಳಿಗೆ ತೆರಳಿದರೆ ನಮ್ಮ ಹಳ್ಳಿಗೆ ಕಾಲಿಡಬೇಡಿ ಎಂದು ಗದರಿಸಿ ಕಳುಹಿಸಿದ್ದಾರೆ ವ್ಯಾಪಾರಗಳನ್ನೆ ನಂಬಿರುವ ಮುಗ್ದ ಜನರ ಹೊಟ್ಟೆಗೆ ಪೆಟ್ಟು ಬಿದ್ದಿರುವುದು ಅಂತೂ ನಿಜ.

ಹಳ್ಳಿಗಳಲ್ಲಿ ಬೆಳೆದ ಹಲಸು ಮಾವಿನ ವ್ಯಾಪಾರಕ್ಕೂ ಒಡೆತ ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದರ ನಡುವೆ ದ್ವೇಷಿಸುವಂತಹ ಸ್ಥಿತಿ ನಿಮಾ೯ಣವಾಗಿದೆ.

ಒಟ್ಟಿಗೆ ಇದ್ದವರೂ ಒಬ್ಬರನ್ನೂ ಒಬ್ಬರು ಅನುಮಾನಿಸುವ ಆಗೇ ಆಯಿತು. ಇದೂ ಅವರ ಅಂಗಡಿಯೇ ಎಂದು ಗುರುತಿಸಿ ಅವರ ಅಂಗಡಿಗಳಲ್ಲಿ ಏನೂ ಕೊಳ್ಳದೆ ಮುಂದೆ ನೆಡೆದಿದ್ದೂ ಆಯಿತು.

ಹೊಬ್ಬಟ್ಟಿನ ಘಮ, ಬಿರಿಯಾನಿಯ ಸ್ವಾದದ ಬಗ್ಗೆ ಮಾತಾಡುತಿದ್ದ ಭಾಂದವರು ಇಂದು ಮಾತಾನಾಡದೆ ಅಂಜುವಂತಾಯಿತು.

ಇಂತಹದೊಂದು ಅಂತರ ಬೇಕಾಗಿದಿದ್ದು, ಜನರಲ್ಲಿದ್ದ ಮಾನವೀಯತೆ ಬಾಂಧವ್ಯಕ್ಕೆ ಅಲ್ಲ. ದೇಹವನ್ನು ಕೊಲ್ಲುವ ವ್ಯೆರಸ್ಸಿಗೆ ಮಾತ್ರ….

ಮಾಧ್ಯಮಗಳು ದ್ವೇಷ ಬಿತ್ತಿದ ಮಾತ್ರಕ್ಕೆ ನಮ್ಮಲ್ಲೆ ಮೊದಲು ಎಂದು ಡಿಬೇಟ್ ಗಳನ್ನು ಮಾಡಿದ ಮಾತ್ರಕ್ಕೆ ಜನ ಅಷ್ಟೇನೂ ತಲೆಕೆಡಿಸಿಕೊಂಡತೆ ಕಾಣುತ್ತಿಲ್ಲ.

ವ್ಯೆರಸ್ ನೊಟ್ಟಿಗೆ ಸಹಜವಾಗಿ ಬದುಕುತ್ತಲೆ ಮತ್ತೆ ಕೊಡು ಕೊಳ್ಳವಿಕೆಯನ್ನು ಮುಂದುವರೆಸಿದ್ದಾರೆ. ಹಳ್ಳಿಗಳಿಗೆ ಅವರು ಬರುತ್ತಿದ್ದಾರೆ ಕಡ್ಡಿ ಕೊಳ್ಳುತ್ತಿದ್ದಾರೆ. ನಮ್ಮೊಟ್ಟಿಗೆ ಮತ್ತೇ ಅದೇ ಸ್ನೇಹ ಬೆಸೆದಿದ್ದಾರೆ .ಒಟ್ಟಿಗೆ ಕೂತು ಟೀ ಕುಡಿಯುತ್ತಿದ್ದಾರೆ. ಅವರ ಅವರ ಸಮುದಾಯಗಳಲ್ಲಿ ಯಾರೊ ಮಾಡಿದ ತಪ್ಪುಗಳನ್ನು ಮಾಧ್ಯಮಗಳನ್ನು ಶಪಿಸುತ್ತಿದ್ದಾರೆ.

ಸಾಮಾನ್ಯರು ಮುಗ್ದರು ಮಾಡದ ತಪ್ಪು ಗಳಿಗೆ ಸ್ವಲ್ಪ ಮಟ್ಟಿಗೆ ಕಷ್ಟ ಅನುಭವಿಸುತ್ತಿದ್ದಾರೆ .

ಮಾಧ್ಯಮ ಗಳು ಸಂವಿಧಾನದ ಒಂದು ಅಂಗವೇ ಆಗಿರುವುದರಿಂದ ಆರೋಗ್ಯಕರ ಸಮಾಜವನ್ನು ಕಾಪಾಡುವ ಪ್ರಜ್ಞೆ ಇಟ್ಟುಕೊಳ್ಳವುದು ತುಂಬಾ ಮುಖ್ಯ .

ಅಯ್ಯೋ! ಎಷ್ಟೊಂದು ಮಕ್ಕಳಿಗೆ ಕಚ್ಚೇ ಬಿಟ್ಟಿತು ನಾಯಿ…

ತುಮಕೂರು: ನಗರದಲ್ಲಿ ನಾಯಿಗಳ ಹಿಂಡು ದಾಳಿ ನಡೆಸಿ 10 ಹೆಚ್ಚು ಮಕ್ಕಳನ್ನು ಗಾಯಗೊಳಿಸಿರುವ ಘಟನೆ ಜೂನ್ 11 ರಂದು ನಡೆದಿದೆ.

ನಜರಾಬಾದ್ ನ ಸ್ಮಶಾನ ಹಿಂಭಾಗ ಮಸೀದಿ ರಸ್ತೆಯಲ್ಲಿ ನಾಯಿಗಳು ದಾಳಿ ನಡೆಸಿ ಮಕ್ಕಳನ್ನು ಕಚ್ಚಿ ಗಾಯಗೊಳಿಸಿವೆ.

ಕೈ, ಕಾಲು, ತೊಡೆಯ ಭಾಗಕ್ಕೆ ಬಾಯಿ ಹಾಕಿರುವ ನಾಯಿಗಳು ಮಾಂಸಖಂಡ ಹೊರಬರುವಂತೆ ಬರುವಂತೆ ಕಚ್ಚಿವೆ. ಕೂಡಲೇ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ನಾಯಿಗಳು ದಾಳಿ ನಡೆಸಿರುವುದಕ್ಕೆ ನಗರ ಪಾಲಿಕೆಯೇ ಕಾರಣ. ಹಂದಿ ಹಿಡಿಯುವ ಪಾಲಿಕೆ ನಾಯಿಗಳ ಹಾವಳಿಯನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಚ್ಚ ಪಾಲಿಕೆಯೇ ಭರಿಸಲಿ


ತುಮಕೂರಿನ ಹನ್ನರಡನೇ ವಾರ್ಡ್ ನಲ್ಲಿ ನಾಯಿಗಳು ದಾಳಿ ನಡೆಸಿ 10ಕ್ಕೂ ಹೆಚ್ಚು ಮಂದಿ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದು, ನಗರಪಾಲಿಕೆಯೇ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕು ಎಂದು ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಒತ್ತಾಯಿಸಿದ್ದಾರೆ.

ಜೂನ್ 11ರಂದು ಮಧ್ಯಾಹ್ನ ನಜರಾಬಾದ್ ನ ಸ್ಮಶಾನದ ಹಿಂಬಾಗ ಮಸೀದಿ ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ನಾಯಿಗಳ ಹಿಂಡು ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ. ಇದಕ್ಕೆ ನಗರ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದ್ದಾರೆ.

ಹಂದಿಗಳನ್ನು ಹಿಡಿಯುವಲ್ಲಿ ಮುತುವರ್ಜಿ ತೋರಿಸುವ ಅಧಿಕಾರಿಗಳು ನಾಯಿ ದಾಳಿ ಬಗ್ಗೆ ಜಾಣಮೌನ ವಹಿಸಿದ್ದಾರೆ. ಪೊದೆಗಳಿಗೂ ನುಗ್ಗಿ ಹಂದಿಗಳನ್ನು ಹಿಡಿಯಲಾಗುತ್ತದೆ. ಆದರೆ ದಿನಬೆಳಗು ಮಕ್ಕಳ ಮೇಲೆರಗುವ ನಾಯಿಗಳ ಹಿಂಡನ್ನು ನಿಯಂತ್ರಿಸುವಲ್ಲಿ ಪಾಲಿಕೆ ವಿಫಲವಾಗಿದೆ.

ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ನಾಯಿಗಳು ಹೆಚ್ಚದಂತೆ ಸಂತಾನಹರಣ ಚಿಕಿತ್ಸೆ ಮಾಡಬೇಕು. ಮಕ್ಕಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ