Saturday, May 9, 2026
Google search engine
Home Blog Page 207

ತುಮಕೂರು: ಒಂದೇ ದಿನ 7 ಜನರಿಗೆ ಕೊರೊನಾ, 3 ಮಕ್ಕಳಿಗೂ ತಗುಲಿದ ಸೋಂಕು

Tumkuru; ತುಮಕೂರು ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ಏಳು ಜನರಿಗೆ ಕೊರೊನಾ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ‌ ಸೋಂಕು‌ ತಗ್ಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿತ್ತು.‌ ಏಕಾಏಕಿ ಏಳು ಜನರಿಗೆ ಸೋಂಕು‌ ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

https://youtu.be/lhnwizAHr9g

ಇವರಲ್ಲಿ ಒಂದೇ ಕುಟುಂಬದ ಆರು ಜನರು ಸೋಂಕು ಪೀಡಿತರಾಗಿದ್ದಾರೆ.‌ಇವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ.

ಇವರೆಲ್ಲರು ಶಿರಾ ನಗರದವರು. ಲಾಕ್ ಡೌನ್ ಗೂ ಮುಂಚೆ ಕುಟುಂಬ ಸದಸ್ಯರು ಆಂಧ್ರ ಪ್ರದೇಶದ ಹಿಂದೂ ಪುರಕ್ಕೆ ತೆರಳಿದ್ದರು.‌ ಇದೇ 2 ತಾರೀಖು ಶಿರಾಗೆ ವಾಪಸ್ ಆಗಿದ್ದರು.

ಜ್ವರ ಬಂದಿದ್ದ ಕಾರಣ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇನ್ನೊಬ್ಬ ವ್ಯಕ್ತಿ ಮಧುಗಿರಿಯವರಾಗಿದ್ದು, ಇವರಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ.


ಎಣ್ಣೆ ಏಟಲ್ಲಿ ಕಲ್ಲು ಎತ್ತಾಕ್ಕಿ ಕೊಂದ್ರು

ತುಮಕೂರು

ಕೂಲಿ ಕೆಲಸಗಾರನ ಮುಖದ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ‌ ಕುಣಿಗಲ್ ರೈಲ್ವೆ ಸ್ಟೇಷನ್ ಬಳಿ‌ ಬುಧವಾರ ತಡರಾತ್ರಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ರಾಜು ಎಂದು ಗುರುತಿಸಲಾಗಿದೆ. ಆತನ ಊರು, ವಿಳಾಸ ಪತ್ತೆಯಾಗಿಲ್ಲ. ಬಹಳ ದಿನಗಳಿಂದ ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಆತನ ವಿಳಾಸ ಯಾರಿಗೂ ತಿಳಿದಿಲ್ಲ.

ಬುಧವಾರ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಕುಡಿದ ಮತ್ತಲ್ಲಿ ಗಲಾಟೆ ಮಾಡಿಕೊಂಡು ಆ ಜಗಳದಲ್ಲಿ ಅವನ ಜೊತೆಗಿದ್ದವರೆ ಎಣ್ಣೆ ಏಟಲ್ಲಿ ಕಲ್ಲು ಎತ್ತಿ ಹಾಕಿ ಕೊಂದಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಎಸ್ಪಿ ಉದೇಶ್, ಡಿವೈಎಸ್ಪಿ ಜಗದೀಶ್, ಸಿಪಿಐ ನಿರಂಜನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನನ್ನ ಬೊಗಸೆ ಖಾಲಿಯಾಗಿಯೇ ಉಳಿಯಿತು..

ಜಿ ಎನ್‌ ಮೋಹನ್


ಸಿಕ್ಕಾಪಟ್ಟೆ ಕುಡಿದಿದ್ದೆ
ನಿಲ್ಲಲಾಗುತ್ತಿರಲಿಲ್ಲ.. ತೂರಾಡುತ್ತಿದ್ದೆ..
ಮನೆಗೆ ಬಂದವನೇ ಕೈಗೆ ಸಿಕ್ಕಿದ್ದು ತೆಗೆದುಕೊಂಡು ಅವಳಿಗೆ ಬಡಿಯಲು ಶುರು ಮಾಡಿದೆ.
ಅವಳು ನನ್ನ ಮೇಲೆ ಖಂಡಿತಾ ಕೈಯೆತ್ತಲಿಲ್ಲ
ಚೀರಲಿಲ್ಲ, ನೆರೆಯವರಿಗೆ ಕೇಳಿಸಲೂ ಬಾರದು ಎನ್ನುವಂತೆ ಬಿಕ್ಕಿದಳು..

ನನಗೆ ಅದರ ಕೇರೇ ಇರಲಿಲ್ಲ
ಇದ್ದ ಬುದ್ದಿಯನ್ನು ಬದಿಗೆ ಬಿಸಾಡಿ ಅವಳನ್ನು ಬಡಿಯುತ್ತಾ ಹೋದೆ
ಬಡಿದೇ ಬಡಿದೆ

ಇಷ್ಟೆಲ್ಲಾ ಆಗಿದ್ದು ದೂರದ ಕನಕಪುರದ ಆಚೆಯ ಒಂದು ಹಳ್ಳಿಯಲ್ಲಿ.
ನಾನು ಕುಡುಕ ಗಂಡನ ವೇಷದಲ್ಲಿದ್ದೆ.

ನನ್ನೆದುರು ಇದ್ದಾಕೆ ದಿನವಿಡೀ ದುಡಿದು ಸುಸ್ತಾಗಿ ಹೋಗಿದ್ದ ಹೆಣ್ಣು
ಆಕೆ ಕೂಲಿಯ ಹೆಣ್ಣು,
ಆಕೆ, ಕಾರ್ಖಾನೆಯ ಹೆಣ್ಣು,
ಆಕೆ ಕಾರ್ಪೊರೇಟ್ ಹೆಣ್ಣು,
ಆಕೆ ‘ಹೆಣ್ಣು’

ಅದು ಬೀದಿ ನಾಟಕ, ಸಾಂಸ್ಕೃತಿಕ ಜಾಥಾ ಅದು
ಊರಿಂದೂರಿಗೆ ತಿರುಗುತ್ತಾ, ಹಳ್ಳಿ, ಗಲ್ಲಿ, ಕಚೇರಿ ಎದುರು ಫ್ಯಾಕ್ಟರಿ ಮುಂದೆ ನಾಟಕ ಆಡುತ್ತಾ ಆಡುತ್ತಾ ಬರುತ್ತಿದ್ದೆವು

ಆಗ ನಡೆದು ಹೋಯಿತು ಒಂದು ಅಚ್ಚರಿ.
ನಾನು ಕಲ್ಲಾಗಿ ನಿಂತುಬಿಟ್ಟೆ
ನನ್ನೊಳಗೆ ಅರಿವು ಬಿತ್ತಿದ ಘಟನೆ ಅದು

ಬೀದಿ ನಾಟಕ ಮುಗಿದು ಆದ ನಂತರ ಜಾಥಾದ ಖರ್ಚಿಗಾಗಿ ನಾಟಕ ನೋಡುತ್ತಿದ್ದವರಿಂದಲೇ ಹಣ ಸಂಗ್ರಹಿಸುತ್ತಿದ್ದೆವು.

ನಾಟಕ ಮುಗಿದ ತಕ್ಷಣ ಎಲ್ಲಾ ನಟರೂ ಒಂದು ಟವೆಲ್ ಹಿಡಿದು ದೊಂಬರಾಟದವರ ರೀತಿ ಎಲ್ಲರ ಮುಂದೆ ಒಂದು ಸುತ್ತು ಹಾದು ಬರುತ್ತಿದ್ದೆವು.

ನಾಟಕ ನೋಡಿದವರು ತಮ್ಮಲ್ಲಿದ್ದ ಪುಡಿಗಾಸಿನಿಂದ ಹಿಡಿದು ದೊಡ್ಡ ನೋಟಿನವರೆಗೆ ತಮ್ಮ ಕೈಲಾದಷ್ಟು ಆ ಟವೆಲ್ ನೊಳಗೆ ಸೇರಿಸುತ್ತಿದ್ದರು.

ಆಗ ಆಯಿತು ನೋಡಿ ಈ ಮ್ಯಾಜಿಕ್

ಎಲ್ಲಾ ನಟರೂ ಒಂದೆಡೆ ಸೇರಿ ತಮ್ಮ ಬಳಿ ಸಂಗ್ರಹವಾದ ಹಣವನ್ನು ಕೂಡಿಸಿ ತಂಡಕ್ಕೆ ಕೊಡಲು ಕುಳಿತರು

ನನ್ನ ಟವಲ್ ನಲ್ಲಿ ಒಂದೇ ಒಂದು ಪೈಸೆ ಬಿದ್ದಿರಲಿಲ್ಲ

ನಾನೂ ಎಲ್ಲರಂತೆ ಪ್ರತಿಯೊಬ್ಬರೂ ಮುಂದೂ ಟವೆಲ್ ಹಿಡಿದು ತಿರುಗಿದ್ದೆ
ಆದರೆ ಒಬ್ಬರೆಂದರೆ ಒಬ್ಬರೂ ದುಡ್ಡು ಹಾಕಿರಲಿಲ್ಲ.
ನನ್ನ ಕೈನಲ್ಲಿ ಇದ್ದದ್ದು ಖಾಲಿ ಟವೆಲ್ ಮಾತ್ರ

ಆದರೆ ಇನ್ನೂ ಒಂದು ಮ್ಯಾಜಿಕ್ ಆಗಿಹೋಗಿತ್ತು
ಅದು ಇನ್ನೊಂದೇ ಹೊಸ ಪಾಠ

ಅದೇ ಕೂಲಿ ಹೆಣ್ಣಿನ ಮುಂದೆ ಇದ್ದ ಟವೆಲ್ ನಲ್ಲಿ ಇನ್ನಿಲ್ಲದಷ್ಟು ಹಣ.
ಆಕೆಯ ಟವೆಲ್ ಮೀರಿ ದುಡ್ಡು ಆಚೆ ತುಳುಕುತ್ತಿತ್ತು.

ಕೇವಲ ಐದತ್ತು ನಿಮಿಷದಲ್ಲಿ ಜನ ಇತಿಹಾಸ ಬರೆದಿದ್ದರು
ಕುಡುಕನ, ಪೀಡಕನ, ಬುದ್ದಿ ಇಲ್ಲದವನ ಹಣೆಬರಹ ನಿರ್ಧರಿಸಿಬಿಟ್ಟಿದ್ದರು

ಅದೇ ವೇಳೆ ಬದುಕು ಕಟ್ಟಲು ಹೆಣಗಾಡುತ್ತಿದ್ದ ಮಹಿಳೆಯ ಭವಿಷ್ಯಕ್ಕೂ ಕೈ ಜೋಡಿಸಿದ್ದರು.

ಇದನ್ನು ಬರೆದದ್ದು ಆಹಾರ ಇಲಾಖೆಯನ್ನು ಎಡತಾಕಲಾಗದ, ಒಂದಿಷ್ಟು ರೇಷನ್ ಮುಖವನ್ನೂ ನೋಡಲಾಗದ
ಇನ್ನೂ ಹೆಬ್ಬೆಟ್ಟಾಗಿಯೇ ಉಳಿದಿರುವ, ಕಾರ್ಖಾನೆಗಳಲ್ಲಿ ದುಡಿದು ಮಕ್ಕಳ ಕನಸಿಗೆ ಬುನಾದಿ ಹಾಕಿ ಕೊಡುತ್ತಿದ್ದ…

….ಕಣ್ಣೀರಲ್ಲಿ ಕೈ ತೊಳೆದರೂ ಸ್ವಾಭಿಮಾನದಿಂದ ಬದುಕುತ್ತಿದ್ದ
ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದ, ಗೋಡೆಗೆ ಸುಣ್ಣ ಹೊಡೆಯುತ್ತಿದ್ದ..
ಈ ಎಲ್ಲಕ್ಕಿಂತ ಹೆಚ್ಚಾಗಿ ತಾವೂ ಕುಡುಕ ಗಂಡನನ್ನು ಪಡೆದಿದ್ದ, ಒದೆತ ತಿಂದಿದ್ದ ಭಿಕ್ಕಿದ್ದ ಜೀವಗಳು

ಜಗತ್ತು ಗೊತ್ತಿಲ್ಲದ, ಸೈಬರ್ ಲೋಕದಲ್ಲಿ ಉಸಿರೂ ಇಲ್ಲದ, ಯಾರ ಲೆಕ್ಕಕ್ಕೂ ಇಲ್ಲದ ಜೀವಗಳು
ಸಮಯ ಬಂದಾಗ ತಮ್ಮ ‘ಪವಾಡ’ ತೋರಿಸಿದ್ದವು.
ಎಂತಹ ಮಾತಿಗೂ ಮರುಳಾಗದೆ ತಮ್ಮೊಳಗಿಗೆ ತಾವೇ ದಣಿಯಾಗಿದ್ದವು..

ಇನ್ನೊಮ್ಮೆ ಹೀಗೆ ಆಗಿತ್ತು.
‘ಪತ್ರೆ ಸಂಗಪ್ಪ’ ಅಂತ ಒಬ್ಬ ಇದ್ದ. ಬೇಡ ಬೇಡವೆಂದರೂ ಜೀತಕ್ಕೆಳೆದುಕೊಂಡು ಹೋದರು.
ಸಿಕ್ಕ ಪುಟ್ಟ ಕಾರಣಕ್ಕೆ ಚಿತ್ರಹಿಂಸೆ, ಕೊನೆಗೆ ಆತನ ಕೊಲೆಯೇ ಆಗಿ ಹೋಯ್ತು

ಆ ನಾಟಕ ನಡೆಯುತ್ತಿತ್ತು.

ಗೌಡ ಪತ್ರೆ ಸಂಗಪ್ಪನನ್ನು ಒದ್ದು ಬಡಿದು ಮಾಡುತ್ತಿದ್ದ
ಆ ನಾಟಕ ನೋಡುತ್ತಾ ಕುಳಿತಿದ್ದ ಹಣ್ಣು ಹಣ್ಣು ಮುದುಕಿ ‘ಅವನ ಪೊಗರು ನೋಡು..’ ಅಂತ ಎದ್ದೇ ಬಿಟ್ಟಳು.

ಜನ ಎಲ್ಲಾ ಅವಳ ಕಡೆ ತಿರುಗಿದರು.
ಅಜ್ಜಿ ಪುನಃ ದನಿ ಏನೂ ಎತ್ತಲಿಲ್ಲ
ಆದರೆ ಇಡೀ ನಾಟಕದುದ್ದಕ್ಕೂ ಆಕೆಯ ನಿಟುಸಿರು ಕೇಳುತ್ತಿತ್ತು

ಇನ್ನೇನು ನಾಟಕ ಮುಗಿಯುತ್ತಾ ಬಂತು ತನ್ನ ಹತ್ತಿರದಲ್ಲೇ ನಿಂತಿದ್ದ ನಾಟಕ ಮಾಡುತ್ತಿದ್ದ ಒಬ್ಬನನ್ನು ಕರೆದಳು
ಆತ ನಾಟಕ ಮಾಡುತ್ತಿದ್ದ. ಕೈ ಸನ್ನೆ ಮಾಡಿ ಬರಲಾಗುವುದಿಲ್ಲ ಎಂದರೂ ಅಜ್ಜಿ ಸುಮ್ಮನೆ ಬಿಡುತ್ತಿಲ್ಲ
ಅಂತೂ ಮತ್ತೇನಾದರೂ ಅವಾಂತರವಾದರೆ ಎಂದು ಆತ ಯಾರಿಗೂ ಕಾಣದಂತೆ ಅಜ್ಜಿಯ ಬಳಿ ಬಂದ

ಆ ಅಜ್ಜಿ ಸೀರೆಯ ಸೆರಗಿನಲ್ಲಿ ಪಾಪ ತನ್ನ ಮೊಮ್ಮಕ್ಕಳಿಗಾಗಿ ಎಂದು ಕಟ್ಟಿಕೊಂಡಿತ್ತೇನೋ ಒಂದು ಚಾಕಲೇಟ್ ತೆಗೆದು ಕೊಟ್ಟಿತು

ನರಳುತ್ತಾ ಬಿದ್ದಿದ್ದ ಪತ್ರೆ ಸಂಗಪ್ಪನನ್ನ ತೋರಿಸಿದವಳೇ ಅವನಿಗೆ ಕೊಡು ಅಂದಳು.

ನಾಟಕ ನಡೆಯುತ್ತಿತ್ತು. ಇನ್ನೇನು ಗೌಡ ಪತ್ರೆ ಸಂಗಪ್ಪನನ್ನು ಕೊಲೆ ಮಾಡಿಯೇ ಬಿಡಬೇಕು
ಜನ ಉಸಿರುಗಟ್ಟಿ ನೋಡುತ್ತಿದ್ದರು
ಅಂತಹ ಜನಜಂಗುಳಿಯಲ್ಲೂ ಸಾಸಿವೆ ಬಿದ್ದರೆ ಸದ್ದಾಗುವಷ್ಟು ಮೌನ

ಆಗಲೇ ಆ ಅಜ್ಜಿ ದೊಡ್ಡದಾಗಿ ದನಿ ಎತ್ತೇಬಿಟ್ಟಿತು

‘ನಾನು ಕೊಟ್ಟಿದ್ದು ನಿನಗಲ್ಲ ಆ ಸಂಗಪ್ಪನಿಗೆ ಕೊಡು’ ಅಂತ

ಆ ಸಂಗಪ್ಪನೂ, ಆ ಗೌಡನೂ, ಆ ಎಲ್ಲಾ ನಟರೂ ನಾಟಕ ಎನ್ನುವುದನ್ನೂ ಮರೆತು ಇದೇನಪ್ಪಾ ಎಂದು ಅಜ್ಜಿಯ ಕಡೆ ತಿರುಗಿದರು

ಪತ್ರೆ ಸಂಗಪ್ಪನ ಬಳಿ ಹೋಗಿ ಆತ ಚಾಕಲೇಟ್ ಮುಟ್ಟಿಸುವವರೆಗೆ ನಾಟಕ ನಡೆಯಲೇ ಇಲ್ಲ

ಆಮೇಲೆಯೇ ಅಜ್ಜಿ ಸುಮ್ಮನಾಗಿದ್ದು, ನಾಟಕ ಮುಂದುವರೆದಿದ್ದು

‘ಆಕಾಶವಾಣಿಯ ಈರಣ್ಣ’ ಎ ಎಸ್ ಮೂರ್ತಿ ಕಂಚಿನ ಕಂಠದಲ್ಲಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದರು
ಪ್ರತಿಯೊಂದು ಅವಶ್ಯಕ ವಸ್ತುವಿನ ಬೆಲೆ ಆಕಾಶಕ್ಕೇರಿತ್ತು
ಜನರ ಬಡ ಬಾನಲವನ್ನು ಸುಟ್ಟು ಹಾಕಿತ್ತು
ಸೀಮೆಎಣ್ಣೆಯನ್ನೂ ಬಿಟ್ಟಿರಲಿಲ್ಲ

ಎ ಎಸ್ ಮೂರ್ತಿಗಳು ಧಿಕ್ಕಾರ ಧಿಕ್ಕಾರ ಎಂದು ಕೂಗಿದರಷ್ಟೇ
ಬೀದಿ ನಾಟಕದಲ್ಲಿದ್ದ ಅಷ್ಟೂ ಜನರೂ ಮರು ದನಿ ನೀಡಿದರು.
ನೋಡ ನೋಡುತ್ತಾ ಮೆರವಣಿಗೆ ಹೊರಟಿತು ಬೆಲೆ ಇಳಿಸದ ಸರ್ಕಾರದ ವಿರುದ್ಧ

ಮೆರವಣಿಗೆ ಒಂದು ಹಂತಕ್ಕೆ ಬಂದಿತು ಮೂರ್ತಿಗಳು ನೋಡುತ್ತಾರೆ
ತಾವು ಕರೆ ತಂದದ್ದು ೧೩ ಕಲಾವಿದರನ್ನು ಆದರೆ ಅದು ಇಪ್ಪತ್ತಾಗಿ ನಿಂತಿದೆ

ಇದೇನಪ್ಪಾ ಎಂದು ಅಂತಹ ಎ ಎಸ್ ಮೂರ್ತಿಯವರೇ ಬೆರಗಾಗಿ ನೋಡಿದರೆ
ಅವರೆಲ್ಲಾ ನಾಟಕ ನೋಡುತ್ತಾ ಕುಳಿತ ಜನ

ಅವರ ಮನೆಯಲ್ಲೂ ಸೀಮೆ ಎಣ್ಣೆ ಸಮಸ್ಯೆ ಇತ್ತು
ಸರಿ ಇವರು ನಾಟಕದಲ್ಲಿ ತೆಗೆದ ಮೆರವಣಿಗೆಯಲ್ಲಿ ಧಿಕ್ಕಾರ ಕೂಗುತ್ತ ತಾವೂ ಸೇರಿಹೋಗಿದ್ದರು

‘ಕೋಟಿ ಕೋಟಿ ಬಾಧೆಗಳಲ್ಲಿ
ಲಕ್ಷಾಂತರ ನೋವುಗಳಲ್ಲಿ
ನೀ ಹುಟ್ಟಿ ಬೆಳೆದೆಯಮ್ಮ
ನನ್ನ ತಂಗಿ ಅನಸೂಯ..’

ಎಂದು ದನಿ ತೆಗೆದದ್ದು ಮಾಲೂರು ತಾಲೂಕು ಟೇಕಲ್ ಹೋಬಳಿ ಹುಣಸೀಕೋಟೆಯಲ್ಲಿ ನಡೆದ ಅತ್ಯಾಚಾರದ ನಂತರ

ನಟರು ಬೀದಿಗಿಳಿದಿದ್ದರು ಅನಸೂಯಳ ಮೇಲೆ ನಡೆದ ಅತ್ಯಾಚಾರದ ನೋವು ಎಲ್ಲರಿಗೂ ತಟ್ಟಿತ್ತು

‘ಬೆಲ್ಚಿ’ ನಾಟಕ ನಡೆದಿತ್ತು
೧೧ ಜನ ದಲಿತರನ್ನು ಹಾಡಹಗಲೇ ಸುಟ್ಟು ಹಾಕಿದ ಪ್ರಕರಣ ಅದು

ಆ ನಾಟಕದಲ್ಲಿ ಒಂದು ಸಂಭಾಷಣೆ ಬರುತ್ತದೆ
ಈ ಘಟನೆ ನಡೆದ ಎಷ್ಟೋ ಕಾಲದ ನಂತರ ದೊಡ್ಡ ಬೆಂಗಾವಲಲ್ಲಿ ಇಂದಿರಾ ಬರುತ್ತಾರೆ..
ಹೇಗೆ ಬಂದ್ರು ಅಂತೀರಾ
ಆನೆ ಮೇಲೆ ಬಂದ್ಲು.. ಅಂಬಾರೀನಲ್ಲಿ ಬಂದ್ಲು.. ಅಂತ

ಯಾವಾಗ ಆ ಡೈಲಾಗ್ ಬಂತೋ- ಈ ಸಲಾನೂ ಬರ್ತಾಳೇನು ಆಕಿ
ಬರ್ಲಿ ಎಲ್ಲಾ ತಯಾರು ಮಾಡಿ ಇಟ್ಕೊಂಡೇವಿ
ಆಕಿ ಒಂದ್ಕಡಿ.. ಚಷ್ಮಾಒಂದ್ಕಡಿ ಮಾಡ್ತೀವಿ ಅಂತ ಎದ್ದು ನಿಂತೇಬಿಟ್ಟರು

ಇದೇ ನಾಟಕ ನೋಡುತ್ತಿದ್ದ ಮದೀನಾಬಿ ಕಣ್ಣೇರು ಹಾಕುತ್ತಾ ಕುಳಿತಿದ್ದಳು

ಯಾಕವ್ವಾ ಅಂತ ಕೇಳಿದ್ರೆ

‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆಯ
ಕಥೆಯೊಂದ ಹೇಳತೀವಿ
ಸಾರಿ ಸಾರಿ ಹೇಳತೀವಿ
ಕಿವಿಗೊಟ್ಟು ಕೇಳಿರಣ್ಣಾ ನೋವೀನಾ ರಾಗವನ್ನು’
ಅನ್ನುವ ಹಾಡು ಅವಳನ್ನು ಕದಲಿಸಿಹಾಕಿತ್ತು.

ಚಲೋ ಹಾಡು ಹೇಳ್ತೀರಿ ಅರ್ಥ ಆಗೋ ಮಂದಿಗೆ ಅರ್ಥ ಆಗ್ತಾವ ಅಂತ ನಿಟ್ಟುಸಿರಿಟ್ಟಳು

ಪತ್ರೆ ಸಂಗಪ್ಪ ಇನ್ನೊಂದೆಡೆ ಇನ್ನೇನು ಕೊಲೆಯಾಗಲು ಸಜ್ಜಾಗಿದ್ದ
ಊರಿನ ಗೌಡ ಗುಟುರು ಹಾಕುತ್ತಿದ್ದ
ಏನು ಮಾಡ್ಲಿ ಊರಿಗೆ ಹೋದ್ರೆ ಗೌಡ ನನ್ನ ಕೊಲೆ ಮಾಡಿಸಿಬಿಡ್ತಾನೆ ಅಂತ ಭಯದಿಂದ ನಿಟ್ಟುಸಿರಿಟ್ಟ

ಅವನು ಹಾಗೆ ಅಂದ ಅಷ್ಟೇ,

ನಾಟಕ ನೋಡುತ್ತಿದ್ದ ಒಬ್ಬ ಎದ್ದು ನಿಂತೇ ಬಿಟ್ಟ
ಹಸಿಬಿಸಿ ರಕ್ತದ ಹುಡುಗ

‘ಯಾಕೆ ನಾನಿಲ್ವಾ, ಏನು ಮಾಡ್ತಾನೆ ನೋಡೇ ಬಿಡ್ತೀನಿ ನಡಿ ಹೋಗೋಣ’ ಎಂದು ನಿಂತೇ ಬಿಟ್ಟ

ನಾಟಕ ಆಡುತ್ತಿದ್ದವರೂ ನೋಡುತ್ತಿದ್ದವರೂ ಇವನೆಡೆಗೆ ತಿರುಗಿದರು
ಎಲ್ಲರೂ ತನ್ನತ್ತಲೇ ನೋಡುತ್ತಿದ್ದುದನ್ನು ನೋಡಿ ಆತ ಹಾಗೇ ಸುಮ್ಮನೆ ಕುಳಿತ

ನಾಟಕ ಮುಂದುವರೆಯಿತು. ಪತ್ರೆ ಸಂಗಪ್ಪನ ಕೊಲೆಯೂ ಆಯಿತು.
‘ಸಾಯ್ಸಿಬಿಟ್ರಾ ಅಯ್ಯೋ ನನ್ನ ಮಕ್ಕಳಾ ಎಲ್ಲರೂ ಹಂಗೇನಾ..’ ಅಂತ ಕೂಗಿದ

ನಾನು ಮತ್ತೆ ನಿಂತಿದ್ದೆ
ಬೀದಿಯಲ್ಲಿ.

ತುರ್ತು ಪರಿಸ್ಥಿತಿಯ ಕರಾಳ ದಿನಗಳ ಬಗ್ಗೆ ನಾಟಕ
ಪ್ರತೀ ಪೊಲೀಸ್ ಸ್ಟೇಷನ್ ನರಕಕ್ಕೆ ಹೆಬ್ಬಾಗಿಲು ತೆರೆದಿದ್ದವು
ಪೊಲೀಸ್ ಸ್ಟೇಷನ್ ಮಾತಿರಲಿ, ಭಾರತಕ್ಕೆ ಭಾರತವೇ ನರಕವಾಗಿ ಹೋಗಿತ್ತು

‘ಭಾರತ ದರ್ಶನ’ ನಾಟಕ ಬೀದಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತಿತ್ತು
ತುರ್ತು ಪರಿಸ್ಥಿಯನ್ನು ವಿರೋಧಿಸಿದವನ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ
ಮುಖ ಜಜ್ಜಿ ಹಾಕುತ್ತಿದ್ದಾರೆ ಖಾರದ ಪುಡಿ ಎರಚುತ್ತಿದ್ದಾರೆ

ನಾನು ಇನ್ನೇನು ಕೊನೆಯ ಬಾರಿಗೆ ಎನ್ನುವಂತೆ ಲಾಠಿ ಎತ್ತಬೇಕು
ಗುಂಪಿನಿಂದ ಜಿಗಿದ ಒಬ್ಬ ಬೀಸುತ್ತಿದ್ದ ಲಾಠಿಯನ್ನು ಹಿಡಿದೇ ಬಿಟ್ಟ
‘ಅವನ ಮೇಲೆ ಕೈ ಮಾಡಿ ನೋಡು..’ ಅಂತ ಕೆಂಗಣ್ಣು ಬೀರಿದ

ನಾನು ಇದೇನಾಗಿ ಹೋಗುತ್ತಿದೆ ಎಂದು ನೋಡುವಷ್ಟರಲ್ಲಿ ನನ್ನ ಕಾಲರ್ ಪಟ್ಟಿ ಅವನ ಮುಷ್ಟಿಯಲ್ಲಿತ್ತು

ಇವರು ನಾನು ಒಡ್ಡಿದ್ದ ಬೊಗಸೆಗೆ ಚಿಲ್ಲರೆ ಬಿಡಿಗಾಸು ಹಾಕದೆ ಹೋಗಿರಬಹುದು
ಆದರೆ ತಮ್ಮ ನೋವುಗಳನ್ನು ಸುರಿದಿದ್ದರು

ಅವರು ನನ್ನ ಬೊಗಸೆಯತ್ತ ಕಣ್ಣೆತ್ತಿಯೂ ನೋಡದಿರಬಹುದು
ಆದರೆ ಕಣ್ಣೇರು ತುಂಬಿದ್ದರು

ಅವರು ನಾನು ಒಡ್ಡಿದ್ದ ಬೊಗಸೆಯನ್ನು ತಿರಸ್ಕರಿಸಿರಬಹುದು
ಆದರೆ ಅರಿವಿನ ನೋಟವನ್ನು ತುಂಬಿದ್ದರು
—-
ಚಿತ್ರದಲ್ಲಿ ಇರುವುದು ಸಮುದಾಯ ಸಾಂಸ್ಕೃತಿಕ ಜಾಥಾದ ರೂವಾರಿ ಪ್ರಸನ್ನ

ಓದಲೇಬೇಕಾದ ಸಂದರ್ಶನ: ಕಂದೀಕೆರೆ ಉಪವಾಸಕ್ಕಿದೆ ರಾಷ್ಟ್ರೀಯ ಆಯಾಮ

0

ಪೊಲಿಟಿಕ್ಸ್ ಫಾರ್ ದಿ ಪೂರ್ ಸರಣಿ ಉಪವಾಸ ಕರ್ನಾಕಟದಲ್ಲಿ ಮೊದಲ ಬಾರಿಗೆ ಇಂದಿರಾ ಸರಣಿಗಾಂಧೀ ಮಾರ್ಗ ಅನುಸರಣೆ ಮುಖ್ಯ – ಎನ್.ಇಂದಿರಾ ಅವರೊಂದಿಗಿನ ಕೆ.ಇ.ಸಿದ್ದಯ್ಯ ನಡೆಸಿದ ಸಂದರ್ಶನ

ಕೊರೊನ ಲಾಕ್ ಡೌನ್ ನಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಬಡವರನ್ನು ಸಂಕಷ್ಟಕ್ಕೆ ಈಡುಮಾಡಿದೆ. ಇಂಥ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪೊಲಿಟಿಕ್ಸ್ ಫಾರ್ ದಿ ಪೂರ್ ಸಂಘಟನೆ ಬಡಜನರಿಗೆ ನೈತಿಕ ಬಲ ತುಂಬಲು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ವಲಸೆ ಕಾರ್ಮಿಕರು, ರೈತರು, ಗ್ರಾಮೀಣ ಆರ್ಥಿಕತೆ ಮತ್ತು ಪರಿಸರ ಸಂರಕ್ಷಣೆ ಮಾಡುವುದು ಈ ಸಂಘಟನೆಯ ಮುಖ್ಯ ಉದ್ದೇಶ.

ಪೊಲಿಟಿಕ್ಸ್ ಫಾರ್ ದಿ ಪೂರ್ ಸಂಘಟನೆ ಜೂನ್ 5 ರಿಂದ ಬಿಹಾರದ ಚಂಪಾರಣ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಒಬ್ಬೊಬ್ಬರು ಒಂದುದಿನದ ಮಟ್ಟಿಗೆ ಉಪವಾಸ ಕೈಗೊಂಡಿದ್ದಾರೆ.

ಈ ಸರಣಿ ಉಪವಾಸ ಸತ್ಯಾಗ್ರಹ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಕಂದೀಗೆರೆ ಸಿರಿಧಾನ್ಯ ಸಂಸ್ಕರಣ ಘಟಕದಲ್ಲಿ ಜೂನ್ 10ರಂದು ಆರಂಭವಾಗಿದೆ.

ವಿಜ್ಞಾನ ಚಳವಳಿ, ಪರಿಸರ ಹೋರಾಟದಲ್ಲಿ ತೊಡಗಿಸಿಕೊಂಡು ಹೆಸರು ಮಾಡಿರುವ ಹಾಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ಎನ್. ಇಂದಿರಾ ಸರಣಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದವರಲ್ಲಿ ರಾಜ್ಯದಲ್ಲೇ ಮೊದಲಿಗರು. ಸರಣಿ ಉಪವಾಸ ಜೂನ್ 10ರಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಿ ಜೂನ್ 11 ಬೆಳಗ್ಗೆ 6 ಗಂಟೆಗೆ ಪೂರ್ಣಗೊಂಡಿದೆ.

ಹಾಗಾಗಿ https://publicstory.in ಎನ್. ಇಂದಿರಾ ಅವರನ್ನು ಮಾತನಾಡಿಸಿತು. ಅವರು ನೀಡಿರುವ ವಿವಗಳು ಹೀಗಿವೆ.

ಪಿಎಸ್- ಮೇಡಂ, ಈ ಸರಣಿ ಉಪವಾಸ ಸತ್ಯಾಗ್ರಹದ ಉದ್ದೇಶವೇನು?

ಎನ್.ಇಂದಿರಾ: ಇದು ಪ್ರಮುಖವಾಗಿ ಕೊರೊನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘಟನೆ. ಇದರಲ್ಲಿ ವಿಜ್ಞಾನಿಗಳು, ಗಾಂಧೀವಾದಿಗಳು ಇದ್ದಾರೆ. ಕೊರೊನ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ಕೃಷಿಕರು, ಬಡವರು ಸಾಕಷ್ಟು ಸಂಕಟ ಅನುಭವಿಸಿದರು. ಅನುಭವಿಸುತ್ತಲೂ ಇದ್ದಾರೆ. ವಲಸೆ ಕಾರ್ಮಿಕರು ಇದುವರೆಗೆ ನೆಲೆ ಕಂಡಿಲ್ಲ. ಗ್ರಾಮೀಣ ಆರ್ಥಿಕತೆ, ಕೃಷಿ ಇಲ್ಲದೆ ಸಮಾಜ ಮುಂದೆ ನಡೆಯಲ್ಲ. ಗಾಂಧೀ ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ನಾವು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ.

ಪಿಎಸ್- ಮೇಂಡ ಈ ಉಪವಾಸ ಸತ್ಯಾಗ್ರಹ ಎಂದು ಪೂರ್ಣಗೊಳ್ಳಲಿದೆ?

ಎನ್.ಇಂದಿರಾ: ಜೂನ್ 5ರಂದು ಪರಿಸರ ದಿನದಂದು ಬಿಹಾರದ ಚಂಪಾರಣ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ದಿನಕ್ಕೆ ಒಬ್ಬೊಬ್ಬರಂತೆ ಸರಣಿ ಉಪವಾಸ ನಡೆಸುತ್ತಿದ್ದಾರೆ. ಇದು ಎಲ್ಲಾ ರಾಜ್ಯಗಳಲ್ಲೂ ನಡೆಯುತ್ತಿದೆ. ಒಬ್ಬ ವ್ಯಕ್ತಿ 24 ಗಂಟೆ ಕಾಲ ಉಪವಾಸ ಸತ್ಯಾಗ್ರಹ ಮಾಡುವುದು. ಇಂದಿಗೆ ಆರು ದಿನವಾಗಿದೆ ಕರ್ನಾಟಕದಲ್ಲಿ ಮೊದಲ ಬಾರಿಗೆ ನಾನು ಉಪವಾಸ ಕುಳಿತಿದ್ದೇನೆ. ಇದು ಅಕ್ಟೋಬರ್ 2ರವರೆಗೆ ಮುಂದು ವರಿಯಲಿದೆ. ಅಂದು ಶಾಂತಿ ದಿನವನ್ನಾಗಿ ಆಚರಿಸಲಾಗುವುದು.

ಪಿಎಸ್- ಉಪವಾಸ ಸತ್ಯಾಗ್ರಹದಿಂದ ಜನರಿಗೆ ಹೇಗೆ ಸಹಾಯ ಮಾಡಬಲ್ಲಿರಿ?

ಎನ್.ಇಂದಿರಾ: ರಾಜಕೀಯ ವ್ಯಕ್ತಿಗಳು ಬಡವರು, ಕೃಷಿಕರು, ಕಾರ್ಮಿಕರ ಪರವಾಗಿಲ್ಲ. ಇದು ನಿಮಗೂ ಗೊತ್ತು. ನಾವು ಉಪವಾಸ ಸತ್ಯಾಗ್ರಹದ ಮೂಲಕ ಈ ಜನವಿಭಾಗಗಳಲ್ಲಿ ನೈತಿಕ ಬಲ ತುಂಬುತ್ತೇವೆ. ಸಾಧ್ಯವಾಧರೆ ಹಣಬಲವನ್ನು ಮಾಡುತ್ತೇವೆ. ಕೊರೊನ ಅವಧಿಯಲ್ಲಿ ಜನರಿಗೆ ಸಹಾಯ ಮಾಡುವುದು ಮಾತ್ರವಲ್ಲ, ಕಾರ್ಮಿಕರು ಗ್ರಾಮದಲ್ಲಿ ನೆಲೆಸುವಂತೆ ಮಾಡುವುದು, ಕೆಲಸ ಮಾಡುವಂತೆ ಪ್ರೋತ್ಸಾಹಿಸುವು. ಕೃಷಿಯಲ್ಲಿ ತೊಡಬೇಕು. ಪರಿಸರ ಉಳಿಸುವಂತಹ ಕೆಲಸ ಮಾಡಬೇಕು ಎಂಬ ಬಗ್ಗೆ ಜಾಗೃಹಿಸಿ ಮೂಡಿಸುತ್ತೇವೆ.

ಪಿಎಸ್- ಮೇಡಂ ಪರಿಸರ ಉಳಿವು ಹೇಗೆ?

ಎನ್.ಇಂದಿರಾ: ನೋಡಿ, ಅಮೇಜಾನ್ ಕಾಡು ನಾಶ ಮಾಡುತ್ತಿದ್ದಾರೆ. ಅರಣ್ಯ ನಾಶವಾದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತೆ. ಆಕ್ಸಿಜನ್ ಕಡಿಮೆಯಾಗುತ್ತದೆ. ಇದು ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗುತ್ತದೆ. ಪರಿಸರ ಸಂಕ್ಷಣೆಗೆ ಎಲ್ಲರೂ ಮುಂದಾಗಬೇಕು. ಈಗ ಕೃಷಿ ಪದ್ದತಿಯೂ ಬದಲಾಗಿದೆ.

ಇದು ಕೂಡ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಭೂಮಿಗೆ ರಾಸಾಯಿನಿಕ ಗೊಬ್ಬರ ಸೇರುತ್ತಿದೆ. ಕಾರ್ಖಾನೆಗಳ ವಿಶಯುಕ್ತ ನೀರು ಪರಿಸರವನ್ನು ಸೇರುತ್ತಿದೆ. ಹಿಂದಿನ ಪರಂಪರೆಯಿಂದ ಬಂದ ಕೃಷಿ ಪದ್ದತಿ ಬಿಟ್ಟು ಯಂತ್ರಗಳ ಬಳಕೆ ಜಾಸ್ತಿಯಾಗಿದೆ. ಇದೆಲ್ಲವೂ ಪರಿಸರಕ್ಕೆ ತೊಂದರೆ ಉಂಟುಮಾಡುತ್ತಿದೆ.

ನಾವು ಪರಿಸರವನ್ನು ಕಾಪಾಡಿಕೊಳ್ಳಬೇಕು. ಗಿಡಮರಗಳನ್ನು ಬೆಳೆಸಬೇಕು.

ಪಿಎಸ್- ಮೇಡಂ ಯುವಜನತೆ ನಗರಗಳಿಗೆ ಹೋಗದಂತೆ ತಡೆಯುವುದು ಹೇಗೆ? ತಿಳಿಸಿ.

ಎನ್.ಇಂದಿರಾ: ಕೊರೊನದಿಂದ ನಗರಗಳಲ್ಲಿ ದುಡಿಯುತ್ತಿದ್ದ ಜನರು ಹಳ್ಳಿಗಳಿಗೆ ಬಂದಿದ್ದಾರೆ. ಜಮೀನುಗಳಲ್ಲಿ ದುಡಿಯುತ್ತಿದ್ದಾರೆ. ಇದರಿಂದ ಬಾಡಿಗೆ ಉಳಿಯಿತು. ಅರ್ಧದಷ್ಟು ಉಳಿತಾಯವಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಗಾಳಿ, ಶುದ್ದ ನೀರು ಒಳ್ಳೆಯ ಪರಿಸರ ಸಿಗುತ್ತದೆ. ಆದರೆ ನಗರಗಳಲ್ಲಿ ಒಳ್ಳೆಯ ಗುಣಮಟ್ಟದ ಜೀವನ ಮಾಡುತ್ತೇವೆ ಎಂಬುದು ಸುಳ್ಳು. ಹಳ್ಳಿಗಳಲ್ಲಿ ಹೈನುಗಾರಿಕೆ ಮಾಡಿದರೆ, ಎಲೆ ಹಚ್ಚಿದರೆ, ಸೊಪ್ಪು ಬೆಳೆದರೆ, ಗುಡಿಕೈಗಾರಿ ಮಾಡಿದರೆ ಹಳ್ಳಿಗಳು ಅಭಿವೃದ್ಧಿ ಆಗುತ್ತವೆ. ಇದು ಗಾಂಧಿಯವರ ಗ್ರಾಮೋದ್ದಾರದ ಕನಸು. ಕುಟುಂಬಗಳು ನೆಮ್ಮದಿಯಾಗಿರುತ್ತವೆ. ದುಡ್ಡು ಉಳಿತಾಯವಾಗುತ್ತದೆ.

ಪಿಎಸ್- ಹಾಗಾದರೆ ಈಗ ಗಾಂಧೀ ಮಾರ್ಗದಲ್ಲಿ ನಡೆಯುವುದು ಅನಿವಾರ್ಯ ಅಂತೀರಾ?

ಎನ್.ಇಂದಿರಾ: ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಹೈನುಗಾರಿಕೆಗೆ ಒಗ್ಗಿ ಹೋಗಿದ್ದಾರೆ. ನಿತ್ಯವೂ ಸಂಜೆ ಹಾಲು ತೆಗೆದುಕೊಂಡು ಹೋಗಿ ಡೇರಿಗೆ ಹಾಕಿ ಬರುತ್ತಾರೆ. ಹಸು ಸಾಕಿ, ತರಕಾರಿ ಬೆಳೆದು ಗ್ರಾಮದಲ್ಲೆ ವಾಸ ಮಾಡಬೇಕು. ಗ್ರಾಮೀಣ ಜನರು ಯಾವುದೇ ಕಾರಣಕ್ಕು ನಗರಗಳಿಗೆ ಹೋಗಬಾರದು. ನಗರ ಪ್ರದೇಶದ ಜನರೇ ಹಳ್ಳಿಗೆ ಬಂದು ಖರೀದಿಸುವಂತಹ ವಾತಾವರಣ ನಿರ್ಮಾಣವಾಗಬೇಕು.

ಗ್ರಾಮಗಳು ಅಭಿವೃದ್ದಿ ಹೊಂದಬೇಕು. ನಾವು ಗಾಂಧೀ ತತ್ವ ಮತ್ತು ಗಾಂಧೀ ಮಾರ್ಗ ಅನುಸರಿಸದಿದ್ದರೆ ಉಳಿಗಾಲವಿಲ್ಲ. ಸರಳ ಜೀವನ, ಸರಳ ಆಹಾರ ಕ್ರಮ ಅನುಸರಿಸಿದರೆ ಸಾಕಷ್ಟು ಸಮಸ್ಯೆಗಳು ಇಲ್ಲವಾಗುತ್ತವೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6.041ಕ್ಕೇರಿಕೆ

Publicstory. in


ಬೆಂಗಳೂರು: ರಾಜ್ಯದಲ್ಲಿಂದು 120 ಹೊಸ ಕೊರೊನಾ ಪ್ರಕರಣ ಪತ್ತೆ.
ಬೆಂಗಳೂರು ನಗರ 42, ವಿಜಯಪುರ 13, ಯಾದಗಿರಿ 27
ಕಲಬುರಗಿ 11, ದಕ್ಷಿಣ ಕನ್ನಡ 4, ಬೀದರ್ 5, ಧಾರವಾಡ 4
ಹಾಸನ, ಬಳ್ಳಾರಿ ಜಿಲ್ಲೆಯಲ್ಲಿ ತಲಾ ಮೂವರಿಗೆ ಸೋಂಕು
ಬಾಗಲಕೋಟೆ, ರಾಮನಗರ ಜಿಲ್ಲೆಯಲ್ಲಿ ತಲಾ ಇಬ್ಬರಿಗೆ ಸೋಂಕು ಪತ್ತೆ
ಬೆಳಗಾವಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಪತ್ತೆ
ರಾಜ್ಯದಲ್ಲಿ 6041 ಸೋಂಕಿತರ ಪೈಕಿ ಇಂದು 257 ಮಂದಿ ಬಿಡುಗಡೆ.
ರಾಜ್ಯದಲ್ಲಿ ಈವರೆಗೆ 69 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದುಬ
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಎಂ.ಡಿ.ಲಕ್ಷ್ಮೀನಾರಾಯಣರನ್ನು MLC ಮಾಡಿ

ತುರುವೇಕೆರೆ: ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ತಾಲ್ಲೂಕು ಕಾಂಗ್ರೆಸ್ ವತಿಯಿಂದ ಒತ್ತಾಯಿಸಲಾಗುತ್ತಿದೆಂದು ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಕೊಬ್ಬರಿ ಬೆಲೆ ಗಣನೀಯ ಕುಸಿತ ಕಂಡಿರುವುದರಿಂದ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರವೇ ರೈತ ಸಂಕಷ್ಟಕ್ಕೆ ಧಾವಿಸಿ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ತಾಲ್ಲೂಕಿನಲ್ಲಿ ಕೊಬ್ಬರಿ ನಫೆಡ್ ಕೇಂದ್ರವನ್ನು ತೆರೆಯಲು ಅವಕಾಶ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತ್ ಕುಮಾರ್ ಮಾತನಾಡಿ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರು ತಾಲ್ಲೂಕಿನ ರಾಜಕಾರಣದಲ್ಲಿ ಅತ್ಯಂತ ಅನುಭವ ಮತ್ತು ಹೆಚ್ಚು ಪ್ರೌಢಿಮೆವುಳ್ಳವರು. ರಾಜ್ಯ ನೇಕಾರರ ಏಳಿಗಾಗಿ ಹಲವು ವರ್ಷ ದುಡಿದವರಲ್ಲದೆ ಪಕ್ಷ ಸಂಘಟನೆಗೆ ಅವಿರತವಾಗಿ ಶ್ರಮಿಸಿದ್ದಾರೆ. ಇವೆಲ್ಲದಕ್ಕಿಂತ ಮಿಗಿಲಾಗಿ ತಾಲ್ಲೂಕಿನ ಹಿಂದುಳಿದ ವರ್ಗ ಹಾಗು ರಾಜ್ಯ ಹಿಂದುಳಿದ ವರ್ಗಗಳ ಆಮೂಲಾಗ್ರ ಏಳಿಗೆಯ ಹಿತ ದೃಷ್ಟಿಯಿಂದ ಎಂಎಲ್ಸಿ ಮಾಡುವ ಅಗತ್ಯ ಮತ್ತು ಅರ್ಥಪೂರ್ಣವಾದದು‌‌ ಎಂದರು.

ಇತ್ತೀಚಿನ ದಿನಗಳಲ್ಲಿ ತುರ್ತು ರಾಜಕಾರಣ ಮಾಡುವುತ್ತಿರುವರೆಲ್ಲಾ ಮೇಲ್ಮನೆಗೆ ಹೋಗಿ ಅದರ ಆಶಯವನ್ನೇ ದಿಕ್ಕುತಪ್ಪಿಸುತ್ತಿದ್ದಾರೆ. ವಿಧಾನ ಪರಿಷತ್ ಸಭೆಯಲ್ಲಿ ರಾಜ್ಯ ಮತ್ತು ಜನಕಲ್ಯಾಣಯುತ ಯೋಜನೆಗಳ ಬಗ್ಗೆ ಯಾವ ಗಂಭೀರ ಚರ್ಚೆಗಳೂ ಅಲ್ಲಿ ನಡೆಯುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಂ ಮಾತನಾಡಿ, ಲಕ್ಷ್ಮೀನಾರಾಯಣ್ ಅವರು ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಹೆಚ್ಚು ಹೋರಾಟ ನಡೆಸಿವರು ಎಂದರು.

ಸುದ್ದಿ ಗೋಷ್ಠಿಯಲ್ಲಿ ತಾ.ಪಂ ಸದಸ್ಯರುಗಳಾದ ಮಂಜುನಾಥ್, ಮಹಲಿಂಗಯ್ಯ, ಭೈರಪ್ಪ, ನಂಜೇಗೌಡ, ಮುಂಖಡರುಗಳಾದ ಕೃಷ್ಣಮೂರ್ತಿ, ಕಾಂತರಾಜು, ಅರಳೀಕೆರೆ ರವಿ ಇನ್ನಿತರರು ಇದ್ದರು.

ಕೋವಿಡ್-19 ನಿಯಂತ್ರಣ ದೊಡ್ಡ ಸವಾಲಾಗಿತ್ತು.

ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೊಲೀಸ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವರ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತುಮಕೂರು ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಯಾಗಿರುವುದರಿಂದ ಇಲ್ಲಿ ಕೋವಿಡ್-19 ನಿಯಂತ್ರಣ ದೊಡ್ಡ ಸವಾಲಾಗಿತ್ತು. ಕೊರೊನಾ ನಿಯಂತ್ರಣ ಸಮಯದಲ್ಲಿ ತುಮಕೂರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ವೀಕ್ಷಿಸಿದ್ದೇನೆ. ಕೋವಿಡ್-19 ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಂಟೈನ್ಮೆಂಟ್ ವಲಯ, ಚೆಕ್‍ಪೋಸ್ಟ್ ನಿರ್ವಹಣೆ, ಕ್ವಾರೆಂಟೈನ್ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಡಿಮೆಯಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಾಕ್‍ಡೌನ್ ಸಮಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಿತ್ತು. ಲಾಕ್‍ಡೌನ್ ಸಡಿಲಿಕೆಯಾದ ನಂತರ ಅಪರಾಧ ಪ್ರಕರಣಗಳು ಮರುಕಳಿಸುತ್ತವೆ. ಕೋವಿಡ್-19 ನಿಯಂತ್ರಣ ಸಮಯದಲ್ಲಿ ಇದ್ದ ರೀತಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಬೇಗ ಆಗಬೇಕು. ಬೆಂಗಳೂರು ಸಮೀಪವಿರುವುದರಿಂದ ಗಾಂಜಾ, ಡ್ರಗ್ಸ್ ಮಾರಾಟವು ನಡೆಯುತ್ತದೆ ಈ ಬಗ್ಗೆ ವಿಶೇಷವಾಗಿ ಎಚ್ಚರವಹಿಸಬೇಕು ಕಂಪ್ಲೇಂಟ್‍ಗಾಗಿ ಕಾಯದೇ ರೈಡ್ ಮಾಡುವ ಕೆಲಸ ಮಾಡಬೇಕು. ಪ್ರಕರಣದಲ್ಲಿ ಕಿಂಗ್‍ಪಿನ್ ಇದ್ದರೆ ಅವರನ್ನು ಪತ್ತೆ ಹಚ್ಚಬೇಕು ಎಂದರು.

ಪಿಎಸ್‍ಐ ಹುದ್ದೆಗಳ ನೇಮಕಾತಿ ಹಾಗೂ ಪೊಲೀಸ್ ಕಟ್ಟಡಗಳ ನಿರ್ಮಾಣ ಮಾಡಬೇಕೆಂಬುದು ನಮ್ಮ ಗಮನದಲ್ಲಿದೆ. ಹಣಕಾಸಿನ ತೊಂದರೆಯಿದ್ದರೂ ಸಹ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.

ತುಮಕೂರು ನಗರ ಕೇಂದ್ರದಲ್ಲಿ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣವನ್ನು ಹಂತ-ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಪೊಲೀಸ್ ಠಾಣೆಗಳಿಗೆ ಹೊಸ ರೂಪ ಕೊಡುವುದಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದೇ ಜೂನ್ 18ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ

ಜೂನ್ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೆ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್ ಮಾಹೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಇಂಗ್ಲೀಷ್ ವಿಷಯ ಮಾತ್ರ ನಡೆಯದೆ ಬಾಕಿ ಉಳಿದಿತ್ತು.

ಸರ್ಕಾರದ ನಿರ್ದೇಶನದಂತೆ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಇದೇ ಜೂನ್ 18ರಂದು ನಡೆಸಲಾಗುವುದು. ಜಿಲ್ಲೆಯಲ್ಲಿ ಮಾರ್ಚ್ ಮಾಹೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಿದಂತೆ ಜೂನ್ 18ರಂದು ಸಹ ಯಾವುದೇ ಲೋಪದೋಷಗಳಿಲ್ಲದೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕೆಂದು ನಿರ್ದೇಶನ ನೀಡಿದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕೊಠಡಿಗೆ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆ, ಪರೀಕ್ಷೆ ಬರೆಯಲು ಸುಸ್ಥಿತಿಯಲ್ಲಿರುವ ಮೇಜುಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಬರೆಯಲು ಬರುವ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರಿನಿಂಗ್‍ಗೆ ಒಳಪಡಿಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದವರೆಲ್ಲರೂ ಮಾಸ್ಕ್ ಧರಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕೆಂದರಲ್ಲದೆ, ಪರೀಕ್ಷಾ ಕೊಠಡಿಗಳು ಮಳೆ ನೀರು ಸೋರದಂತೆ ಎಚ್ಚರಿಕೆ ವಹಿಸಬೇಕು ಸೂಚಿಸಿದರು.

ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಕ್ಕೆ ಒಂದು ಗಂಟೆ ಮುನ್ನ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ಸೂಚನೆ ನೀಡಬೇಕು. ಥರ್ಮಲ್ ಸ್ಕ್ರಿನಿಂಗ್ ಪ್ರಕ್ರಿಯೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸಬೇಕೆಂದರಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತಂಕ/ಗೊಂದಲಗಳು ಸೃಷ್ಟಿಯಾಗದಂತೆ ಸುಲಲಿತ ವಾತಾವರಣ ಕಲ್ಪಿಸಬೇಕು.

ಕಂಟೋನ್‍ಮೆಂಟ್ ವಲಯದಿಂದ ಬಂದ ವಿದ್ಯಾರ್ಥಿಗಳು ಹಾಗೂ ಕೆಮ್ಮು/ನೆಗಡಿ/ಜ್ವರ ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕೆಂದರು.

ಒಂದಿಷ್ಟು ಬ್ಲಾಂಕೆಟ್ ಬೇಕಲ್ಲಾ..?

ಜಿ ಎನ್ ಮೋಹನ್


ಒಂದಿಷ್ಟು ಬ್ಲಾಂಕೆಟ್ ಬೇಕಲ್ಲಾ..?

ಮೊಬೈಲ್‍ನ ಅತ್ತ ಕಡೆಯಿಂದ ಕಂಡು ಕೇಳದ ದನಿ. ನಾನು ತಬ್ಬಿಬ್ಬಾದೆ. ಪರಿಚಯವೇ ಇಲ್ಲದ ಆಕೆ ನನ್ನ ನಂಬರ್ ಹುಡುಕಿ ಬ್ಲಾಂಕೆಟ್‍ಗೆ ಬೇಡಿಕೆ ಇಟ್ಟಿದ್ದರು.

ಇದು ಖಂಡಿತಾ ‘ಸ್ಪಾಮ್’ ಕಾಲ್ ಎಂದು ನಾನು ಎರಡನೇ ಮಾತೇ ಆಡದಂತೆ ಫೋನ್ ಕಟ್ ಮಾಡುವವನಿದ್ದೆ. ಆಗ ಆ ಕಡೆಯ ದನಿ ‘ನೆಲ್ಸನ್ ಮಂಡೇಲಾರಿಗಾಗಿ’ ಎಂದಿತು. ತಕ್ಷಣ ನನ್ನ ಬೆರಳು ಅಲ್ಲೇ ನಿಂತಿತು.

ಕಾಲ್ ಬಂದದ್ದು ಕೇರಳದಿಂದ. ಕೇಳುತ್ತಿರುವುದು ಹೊದೆಯುವ ಬ್ಲಾಂಕೆಟ್‍ಗಳನ್ನು. ಹೇಳುತ್ತಿರುವುದು ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಹೆಸರು.

ನಾನು ತಬ್ಬಿಬ್ಬಾಗಿದ್ದು ಗೊತ್ತಾಯಿತೇನೋ, ಕೇರಳದ ಕೊಟ್ಟಾಯಂ ನ ರಾಣಿ ಥಾಮಸ್ ಸ್ಪಷ್ಟವಾಗಿ ಹೇಳಿದರು.

‘ಜುಲೈ 18 ನೆಲ್ಸನ್ ಮಂಡೇಲಾ ಹುಟ್ಟುಹಬ್ಬ ಈ ವರ್ಷಕ್ಕೆ ಇನ್ನೂ ಒಂದು ಮಹತ್ವವಿದೆ. ಮಂಡೇಲಾ ಬದುಕಿದ್ದಿದ್ದರೆ ಈ ಬಾರಿ ಅವರದ್ದು 100 ನೆಯ ಹುಟ್ಟುಹಬ್ಬ. ಈ ವರ್ಷವನ್ನು ತೀರಾ ಭಿನ್ನವಾಗಿ ಆಚರಿಸಲಾಗುತ್ತಿದೆ ಉಣ್ಣೆ ಹೊದಿಕೆಗಳನ್ನು ಹೆಣಿಗೆ ಹಾಕುವ ಮೂಲಕ’.

‘ಕರ್ನಾಟಕದಿಂದಲೂ ಹಾಗೆ ಹೆಣಿಗೆ ಹಾಕಿ ಕೊಡುವ ಉತ್ಸಾಹಿಗಳನ್ನು ಜೊತೆ ಮಾಡಿ ಕೊಡಬಹುದೇ..’ ಎಂದು.

ಆಕೆ ನನಗೆ ಹಾಗೆ ಹೇಳುತ್ತಿರುವ ಸಮಯದಲ್ಲಿಯೇ ಜಗತ್ತು ತನ್ನ ಮನೆಯ ಮೂಲೆಯಲ್ಲಿದ್ದ ಉಣ್ಣೆಯನ್ನು ಹೊರ ತೆಗೆದಿತ್ತು.

ದಕ್ಷಿಣ ಆಫ್ರಿಕಾದ ಮಂಡೇಲಾ ಸ್ವೇರ್ ನಿಂದ ವಾಷಿಂಗ್ಟನ್‍ವರೆಗೆ, ಪ್ರಾಥಮಿಕ ಶಾಲೆಗಳಿಂದ ಆಕ್ಸ್ಫರ್ಡ್ ಯೂನಿವರ್ಸಿಟಿಯವರೆಗೆ, ಪುಟ್ಟ ಮಕ್ಕಳಿಂದ ಹಣ್ಣು ಹಣ್ಣು ಮುದುಕರವರೆಗೆ, ಶಾಲೆ, ಆಸ್ಪತ್ರೆ, ಜೈಲು, ಹೋಟೆಲ್ ನಿಂದ ಹಿಡಿದು ಉದ್ಯಾನವನಗಳವರೆಗೆ ಎಲ್ಲೆಡೆ ಉಣ್ಣೆಯ ನೂಲು ಹೊರತೆಗೆದವರು ಹೆಣಿಗೆ ಹಾಕಲು ಶುರು ಮಾಡಿದ್ದರು.

ಎಲ್ಲರೂ ತಯಾರಿಯಾಗುತ್ತಿದ್ದುದು ನೆಲ್ಸನ್ ಮಂಡೇಲಾ ಹುಟ್ಟು ಹಬ್ಬಕ್ಕಾಗಿ. ಮಂಡೇಲಾ ನೆನಪಿನಲ್ಲಿ ಒಂದಿಷ್ಟು ಮೈ ಮನಸ್ಸುಗಳನ್ನು ಬೆಚ್ಚಗಿಡುವುದಕ್ಕಾಗಿ ಹೊದಿಕೆಗಳನ್ನು ಹೆಣೆಯಲು.

‘ಅದೊಂದು ದಿನ ನೆಲ್ಸನ್ ಮಂಡೇಲಾರ ಬಹುಕಾಲದ ಆಪ್ತ ಕಾರ್ಯದರ್ಶಿ ಜೆಲ್ಡಾ ಲಾ ಗ್ರಾಂಜೆ ತನ್ನ ಗೆಳತಿಯೊಂದಿಗೆ ಹರಟೆ ಹೊಡೆಯುತ್ತಿದ್ದಾಗ ಮಂಡೇಲಾ ನೆನಪಿಗೆ 67 ಬ್ಲಾಂಕೆಟ್ ಹೆಣಿಗೆ ಹಾಕಿಕೊಡು ನೋಡೋಣ’ ಎಂದರು.

ಮಂಡೇಲಾ ನಿಧನರಾಗಿದ್ದ ದುಃಖದಿಂದ ಯಾರೂ ಹೊರಬರಲಾಗದಿದ್ದ ದಿನಗಳು ಅವು. ತಕ್ಷಣ ಗೆಳತಿ ಕ್ಯಾರೋಲಿನ್ ಸ್ಟೀನ್ ಚಾಲೆಂಜ್ ಸ್ವೀಕರಿಸಿಯೇ ಬಿಟ್ಟರು. ಆ ಕ್ಷಣಕ್ಕೆ ಹುಮ್ಮಸ್ಸಿನಿಂದ ಪಂಥ ಸ್ವೀಕರಿಸಿ ಬಂದ ಕ್ಯಾರೋಲಿನ್‍ಗೆ ಉಣ್ಣೆಯ ನೂಲು ಕೈನಲ್ಲಿ ಹಿಡಿದಾಗ ಗೊತ್ತಾಯಿತು ‘ಇದು ಸುಲಭವಾಗಿ ಆಗುವಂತದ್ದಲ್ಲ’. ಆಗ ಆಕೆ ತನ್ನ ಗೆಳೆಯರ ಗುಂಪಿನ ಕಡೆ ನೋಡಿದರು. ಅನೇಕರು ತಾವೂ ಕೈ ಜೋಡಿಸಿದರು.

ಕ್ಯಾರೋಲಿನ್ ತನ್ನ ಎಲ್ಲಾ ಗುಂಪಿಗೆ ಈ ವಿಷಯ ತಿಳಿಯಲಿ ಎಂದು ಫೇಸ್‍ಬುಕ್ ಪೇಜ್ ರೂಪಿಸಿದರು. ಸೋಷಿಯಲ್ ಮೀಡಿಯಾಗೆ ಈ ವಿಷಯ ಬಂದದ್ದೇ ತಡ ‘ನಾವೂ ಇದ್ದೇವೆ, ನಾವೂ ಬ್ಲಾಂಕೆಟ್ ಹೆಣಿಗೆ ಹಾಕಲು ಸಿದ್ದ’ ಎಂದು ಮುಂದೆ ಬಂದವರು ಅದೆಷ್ಟೋ ಜನ.

ಕ್ಯಾರೋಲಿನ್ ನೋಡ ನೋಡುತ್ತಿದ್ದಂತೆಯೇ ಗಡಿ ಗೋಡೆಯಿಂದ ಈ ಯೋಚನೆ ಜಿಗಿದು ಹೊರಗೋಡಿತು. ಬೀದಿಯಲ್ಲಿ, ಗಲ್ಲಿಯಲ್ಲಿ, ಬೇಲಿ ಮಳೆಯ ಮರೆಗಳಲ್ಲಿ ಎಲ್ಲೆಲ್ಲೂ ಹೆಣಿಗೆ ಶುರುವಾಗಿಯೇ ಹೋಯ್ತು.

ಇಂಗ್ಲೆಂಡ್, ಜರ್ಮನಿ, ಅಮೇರಿಕಾ, ನ್ಯೂಜಿಲ್ಯಾಂಡ್, ಕ್ರೊಯೇಷಿಯಾ, ಅರ್ಮೇನಿಯಾ, ಜಪಾನ್, ಶ್ರೀಲಂಕಾ ಹೀಗೆ ಜನ ವಿಷಯ ಗೊತ್ತಾಗುತ್ತಿದ್ದಂತೆಯೇ ಹೆಣಿಗೆ ಕಡ್ಡಿಯನ್ನು ಕೈಗೆತ್ತಿಕೊಂಡರು.

ಆಗ ಕಣ್ಣೀರಾಗಿದ್ದು ಕ್ಯಾರೋಲಿನ್ – ‘ಇಲ್ಲಿ ನನಗೆ ಹೀಗಾಗುತ್ತದೆ ಎಂದು ಖಂಡಿತಾ ಗೊತ್ತಿರಲಿಲ್ಲ ಮಂಡೇಲಾ ಜಗತ್ತಿನ ಎಲ್ಲೆಡೆ ಇಷ್ಟೊಂದು ಹೃದಯಗಳಲ್ಲಿ ಅಡಗಿ ಕುಳಿತಿದ್ದಾರೆ ಎಂದೇ ಗೊತ್ತಿರಲಿಲ್ಲ’.

ವರ್ಣಧ್ವೇಷಿ ಬೋಥಾ ಸರ್ಕಾರ ಮಂಡೇಲಾರನ್ನ ಬಂದೀಖಾನೆಯ ಒಳಗೆ ನಡೆಸಿಕೊಂಡು ಹೋಯಿತು. ಆದರೆ ಅದೇ ವೇಳೆ ಎಷ್ಟೊಂದು ಜನ ಅವರನ್ನು ಕೈ ಹಿಡಿದು ತಮ್ಮ ಎದೆಗೂಡುಗಳ ಒಳಗೆ ಕರೆದುಕೊಂಡು ಬಿಟ್ಟರು

ಟೀ ಪಾರ್ಟಿಯ ಒಂದು ಹರಟೆಯಾಗಿಯಷ್ಟೇ ಮುಗಿದು ಹೋಗಬಹುದಾಗಿದ್ದ ಒಂದು ಮಾತು ಜಗತ್ತಿನ ಒಂದು ವಿಭಿನ್ನ ಚಳವಳಿಯೇ ಆಗಿ ಹೋಯಿತು.

ಒಂದೊಂದು ಹೊಲಿಗೆಯೂ ಒಂದು ವಿಭಿನ್ನ ಕಥೆ ಹೇಳುತ್ತಾ ಹೋಯಿತು. ಪ್ರತಿಯೊಂದು ಹೆಣಿಗೆಯ ಹಿಂದೆ ಪ್ರೀತಿಯ ಹೃದಯಗಳಿತ್ತು. ಹಾಗಾಗಿಯೇ ನೋಡನೋಡುತ್ತಿದ್ದಂತೆಯೇ 67 ಹೊದಿಕೆಗಳ ಕೆಲಸ ಹೂವೆತ್ತುವಂತೆ ಮುಗಿದು ಹೋಯಿತು.

ಆದರೆ ಹೊದಿಕೆಗಳು ಬರುವುದು ನಿಲ್ಲಲಿಲ್ಲ. ಇದರ ಜೊತೆಗೆ ಸ್ಪೆಟರ್‍ ಗಳು, ಶಾಲುಗಳು, ಮಫ್ಲರ್ ಗಳು ಹೆಣಿಗೆಯಾಗುತ್ತಾ ಹೋಯಿತು.

‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಕುಸಿದಿವೆ’ ಎಂದಾವರಾರು? ಹಾಗಾಗಿಯೇ ಗಿನ್ನೆಸ್ ದಾಖಲೆಯೊಂದು ಸೃಷ್ಟಿಯಾಯಿತು. ಈ ಯೋಜನೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಬ್ಲಾಂಕೆಟ್ ವರ್ಲ್ಡ್ ಕಪ್ ಹೆಸರಿನಲ್ಲಿ ಅದು ಒಂದು ಆಟವೇನೋ ಎನ್ನುವಂತೆ ಸಂಭ್ರಮಿಸಿದರು.

‘ನಾವು ಹೆಣಿಗೆ ಹಾಕುತ್ತಾ ಹೋದೆವು. ಉಣ್ಣೆಯನ್ನು ಹೆಣಿಗೆ ಹಾಕುತ್ತಾ ಹಾಕುತ್ತಾ ತಿರುಗಿ ನೋಡಿದರೆ ನಮಗೆ ನಾವೇ ಹೆಣಿಗೆ ಹಾಕಿಕೊಂಡಿದ್ದೆವು. ಮಂಡೇಲಾ ಎನ್ನುವ ಜಾದೂ ದೇಶ ದೇಶಗಳನ್ನು, ಅಲ್ಲಿನ ಜನರನ್ನು ಹೆಣಿಗೆ ಹಾಕಿಬಿಟ್ಟಿತು. ಜಗತ್ತು ಎಷ್ಟು ದೊಡ್ಡದು ಎಂದು ಮೊದಲು ಅನಿಸಿತ್ತು. ಆದರೆ ನೋಡ ನೋಡುತ್ತಿದ್ದಂತೆಯೇ ಒಬ್ಬರಿಗೊಬ್ಬರು ಪರಿಚಯವಾಗುತ್ತಾ, ಸ್ನೇಹ ಬೆಳೆಯುತ್ತಾ ಜಗತ್ತು ಒಂದು ಪುಟ್ಟ ಗೂಡು ಎನಿಸಿ ಹೋಯಿತು’ ಎನ್ನುತ್ತಾರೆ ಜೆಲ್ಡಾ.

ಹನ್ನೊಂದು ವರ್ಷದ ಎಲ್ಲಾ ಗ್ರೀಲಿ ಇಬ್ಬರು ಜೈಲುವಾಸಿಗಳ ಜೊತೆ ಕೈಜೋಡಿಸಿ ಹಾಡೊಂದನ್ನು ಬರೆದಳು. ಇದು ಈಗ ’67 ಬ್ಲಾಂಕೆಟ್ಸ್ ಫಾರ್ ನೆಲ್ಸನ್ ಮಂಡೇಲಾ’ ಚಳವಳಿಯ ಧ್ಯೇಯಗೀತೆ.

ಶಾಲೆಗಳಲ್ಲಿ, ವೃದ್ಧಾಶ್ರಮದಲ್ಲಿ, ಹೋಟೆಲ್‍ಗಳಲ್ಲಿ, ಪಾರ್ಕ್‍ಗಳಲ್ಲಿ,ಆಸ್ಪತ್ರೆಗಳಲ್ಲಿ ಹೆಣಿಗೆ ಸ್ಪರ್ಧೆ, ಹೆಣಿಗೆ ಕ್ರೀಡೆ ನಡೆಸಿದ್ದನ್ನು ನೋಡಿದ ಬಂಧೀಖಾನೆಯ ಕೈದಿಗಳು ನಮಗೂ ಮಂಡೇಲಾ ಬ್ಲಾಂಕೆಟ್ ಹೆಣಿಗೆ ಹಾಕಲು ಅವಕಾಶ ಕೊಡಿ ಎಂದು ಕೋರಿದರು. ದಕ್ಷಿಣ ಆಫ್ರಿಕಾ ಸರ್ಕಾರ ಒಪ್ಪಿದ್ದೇ ತಡ ಆ ದೇಶದ ಎಲ್ಲಾ 243ಬಂಧೀಖಾನೆಗಳಲ್ಲಿ ‘ಮಂಡೇಲಾ, ಮಾಡಿಬಾ’ ಘೋಷಣೆ ಕೇಳಿಬಂತು.

‘ಇಂದೊಂದು ಹೆಣಿಗೆ ಕ್ರಾಂತಿ’ ಎಂದೇ ಜಗತ್ತು ಬಣ್ಣಿಸಿತು. ಹಾಗೆ ಎಲ್ಲೆಡೆ ಸಿದ್ದವಾದ ಉಣ್ಣೆಯ ಹೊದಿಕೆ, ಉಡುಗೆಗಳನ್ನು ಹೊತ್ತ ತಂಡಗಳು ಬೀದಿ ಬೀದಿ ಅಲೆದವು. ಚಳಿಯಲ್ಲಿ ನಡುಗುತ್ತಿದ್ದವರು ಮಂಡೇಲಾರ ಸ್ಪರ್ಶದಲ್ಲಿ ಬೆಚ್ಚಗಾದರು.

ಈ ಮಧ್ಯೆ 160 x 160 ಸೆಂಮೀಗಳ ಹಲವು ಬ್ಲಾಂಕೆಟ್ ತುಣುಕುಗಳು ಸೇರಿಸಲಾಯಿತು. ಪ್ರತಿಯೊಬ್ಬರಿಗೂ ಅದರಲ್ಲಿ ಏನು ಇರಬೇಕು ಎಂದು ಸೂಚಿಸಲಾಗಿತ್ತು. ಎಲ್ಲಾ ತುಣುಕುಗಳೂ ಒಂದೆಡೆ ಸೇರಿಸಿ ಜೋಡಿಸಿದಾಗ ವಾರೆವ್ವಾ…. ಇನ್ನೊಂದು ಯಕ್ಷಿಣಿ. ಜಗತ್ತಿನ ಅತ್ಯಂತ ದೊಡ್ಡ ಬ್ಲಾಂಕೆಟ್ ನ ಹೃದಯದಲ್ಲಿ ಮಂಡೇಲಾ ಚಿತ್ರ ಮೂಡಿಬಂದಿತ್ತು.

‘ಅಲ್ಲಿ ಆ ಆಗಸದಲ್ಲಿ ಬೆಳ್ಳಿ ಚುಕ್ಕೆಯಾಗಿರುವ ಮಂಡೇಲಾ ಅಲ್ಲಿಂದ ಕೆಳಗೆ ಇಣುಕಿದರೆ ಅವರ ಚಿತ್ರ ಕಾಣಬೇಕಲ್ಲವೇ..? ಹಾಗಾಗಿ ಇಷ್ಟು ದೊಡ್ಡ ಮಂಡೇಲಾರ ಚಿತ್ರ ಬಿಡಿಸಿದ್ದೇವೆ’ ಎಂದು ಸಂಭ್ರಮಿಸಿದರು.

‘ನಾವು ಗುಲಾಮರು ಎಷ್ಟು ದೂರ ಬಂದಿದ್ದೇವೆ…’ ಎಂದಿದ್ದರು ಮಂಡೇಲಾ. ಅತಿ ದೀರ್ಘ ಬಂದೀಖಾನೆ ವಾಸದ ನಂತರ ಕ್ಯೂಬಾಗೆ ಬಂದಿಳಿದಾಗ. ಫಿಡೆಲ್ ಕ್ಯಾಸ್ಟ್ರೋ ಅವರ ಕೈಕುಲುಕಿದಾಗ.

ಗುಲಾಮರು ಎಂದು ಜರಿದಿದ್ದ ಜಗತ್ತು ಬೆಚ್ಚಿಬಿದ್ದಿತ್ತು. ಅಂತೆಯೇ ಈಗ ಜಗತ್ತಿನ ಹಲವಾರು ಜನರು ಎಷ್ಟು ದೂರ ನಡೆದು ಬಂದರು ಆ ಮಂಡೇಲಾಗಾಗಿ..

ಪಾವಗಡ:ಸಿಡಿಲಿಗೆ ರೈತ ಬಲಿ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಚಿತ್ತಗಾನಹಳ್ಳಿ ಬಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಹನುಮಂತರಾಯಪ್ಪ ಎಂಬುವರಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಸುಮಾರು 69 ವರ್ಷ ವಯಸ್ಸಿನ ರೈತ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾಗ ಗುಡುಗು ಸಹಿತ ಮಳೆ ಬಿದ್ದಿದೆ. ಮರದ ಕೆಳೆಗೆ ಆಶ್ರಯ ಪಡೆದಿದ್ದ ರೈತನಿಗೆ ಸಿಡಿಲು ತಾಗಿ ಸಾವನ್ನಪ್ಪಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.