Wednesday, May 6, 2026
Google search engine
Home Blog Page 209

ನಟ ಚಿರು ಮದುವೆ: ಜಗ್ಗೇಶ ಹೇಳಿದ್ದು ಏನು?

Publicstory. in


ಬೆಂಗಳೂರು: 11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ಪ್ಲೀಸ್‌ ಮಾಮ Forget ಅಂದ.

ಚಿರು ಮದುವೆ ಹೇಗೆ ನಡೆಯಿತು ಎಂಬುದನ್ನು ಜಗ್ಗೇಶ್ ಹೀಗೆ ನೆನಪಿಸಿಕೊಂಡಿದ್ದು, ಮುಂದೆ ಓದಿ.

ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಎಂದು ಚಿರು ಹೇಳಿದ. ಸುಂದರ್ ರಾಜ್‌ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಣಾಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅಮ್ಮಣ್ಣಾಯ ಅವರು ‘ಜಗ್ಗೇಶ್… ಅಷ್ಟಮಕುಜ ದೋಷ ಇದೆ. ಅದಕ್ಕೆ ಕೆಲ ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರೆಯಿರಿ’ ಎಂದರು. ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು.

ನಟ ಗಣೇಶನ ಜೊತೆ ಒಂದು ಅತಿಥಿ ಪಾತ್ರ ನಿಗದಿಯಾಗಿತ್ತು. ಆ ಚಿತ್ರೀಕರಣ ಮೇಘನಾ ಮನೆ ಮುಂದೆಯೇ ನಡೆಯಿತು. ಚಿತ್ರೀಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು, ಅವರ ಮದುವೆಯ ವಿಷಯ ಮಾತಾಡಿದೆ. ಮದುವೆ ನಿಗದಿಯಾಯಿತು. ಮೇಘನಾ ಹಾಗೂ ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು. ದೇವರ ದಯೆಯಿಂದ ಮದುವೆಯು ಮುಗಿಯಿತು.

ನಂತರ ಚಿರು ಅನೇಕ ಬಾರಿ ಕರೆಮಾಡಿ ‘ಮಾಮ ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ’ ಎಂದು ಕರೆಯುತ್ತಿದ್ದ. ನನ್ನದು ವಿಚಿತ್ರ ಜನ್ಮ. ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ. ಯಾಕೋ ಇಂದು (ಭಾನುವಾರ) ನಾನು ಮತ್ತು ಪರಿಮಳ ಚಿರು ಬಗ್ಗೆ ಮಾತಾಡುತ್ತಾ ‘ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ ಗ್ಯಾಪ್‌? ಇಷ್ಟೊತ್ತಿಗೆ ಸಿಹಿಸುದ್ದಿ ಬೇಕಿತ್ತು’ ಎಂದು ಚರ್ಚಿಸಿದೆವು. ನಂತರ ಮಧ್ಯಾಹ್ನ ಊಟ ಮಾಡಿ ಮಲಗಿದೆ.

ಚಾಲಕ ಪದ್ದು ಕರೆಮಾಡಿ, ‘ಬಾಸ್‌ ಟೀವಿ ನೋಡಿದ್ರಾ..? ಚಿರು ಹೋಗಿಬಿಟ್ಟಾ,’ ಎಂದ. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ. ಇಷ್ಟೇನಾ ಬದುಕು? ಇದಕ್ಕಾ ನಮ್ಮ ಹೋರಾಟ.? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ? ಎಂಥ ದೌರ್ಭಾಗ್ಯ? ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು. ಆ ಸಾಲಿಗೆ ಚಿರು ಸೇರಿಬಿಟ್ಟನೆ?

ಹುಟ್ಟಿಗೆ ಸಾವು ಖಚಿತ. ಆದರೆ ಇಷ್ಟು ಬೇಗವೇ? ಓ ದೇವರೆ ಈ ಸಾವು ನ್ಯಾಯವೆ?

ಹೀಗೆಂದು ಜಗ್ಗೇಶ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸಮಯ ಸಂಬಂಧ ಮತ್ತು ಶುಚಿತ್ವದ ಮಹತ್ವ

0

ದಿಗಂತ್ ಸಿ.ಎಲ್‌.
6ನೇ ತರಗತಿ ವಿದ್ಯಾರ್ಥಿ, ತುಮಕೂರು


ನಮ್ಮೆಲ್ಲ‌ ಶಾಲೆಯ ಪರೀಕ್ಷೆಯನ್ನು ಕೊರೊನಾ ಭೀತಿಯಿಂದ ಬೇಗ ಬೇಗನೆ ಮುಗಿಸಿ ನಮ್ಮನ್ನು ಮುಂದಿನ ತರಗತಿಗೆ ತೇರ್ಗಡಿಸಿ ಎಲ್ಲರನ್ನೂ ಲಾಕ್ ಡೌನ್ ಎಂಬ ಜೈಲಿಗೆ ಬಂಧಿಸಿ ಇಲ್ಲಿಗೆ ಸುಮಾರು ಮೂರು ತಿಂಗಳಾಯಿತು.

ನಾನು ಶಾಲೆಯಿಂದ ದಿನಾಲೂ ವಾಟ್ಸ್ ಆ್ಯಪ್ ನಲ್ಲಿ ಬರುತ್ತಿದ್ದ ಎಲ್ಲಾ ಹೋಂ ವರ್ಕ್ ಅನ್ನು ಚಾಚೂ ತಪ್ಪದೆ ಮುಗಿಸಿ ಸಮಯ ಕಳೆಯಲು ಪ್ರಾರಂಭಿಸಿದ.

ನನ್ನ ದಿನಚರಿ ಬೆಳಿಗ್ಗಿನ ದೇವರ ಪೂಜೆಯೊಂದಿಗೆ ಪ್ರಾರಂಭವಾಗಿ ನನ್ನ ಮುದ್ದಿನ ತಂಗಿ ನಿಧಿಯ ಜೊತೆ ಆಟವಾಡುತ್ತಾ ಅಮ್ಮ ಅಪ್ಪನಿಗೆ ಸಹಾಯ ಮಾಡುತ್ತಾ ಮತ್ತು ಉಳಿದ ಸಮಯವನ್ನು ತಾತಾ ಅಜ್ಜಿ ಮಾವ ಅತ್ತೆ ದೊಡ್ಡಮ ದೊಡ್ಡಪ್ಪ ಚಿಕ್ಕಪ್ಪ ಚಿಕ್ಕಮ್ಮ ಮತ್ತು ಬಂಧು ಬಳಗದವರ ಜೊತೆ ಫೋನಿನಲ್ಲಿ ಮಾತಾನಾಡುತ್ತಾ ಕಳೆಯುತ್ತಿದ್ದೇನೆ. ಮತ್ತು ಚಿತ್ರಗಳನ್ನು ಬಿಡಿಸುತ್ತಾ ಕಳೆಯಿತು.

ಇದರ ಜೊತೆಯಲ್ಲಿ ಆನ್ಲೈನ್ ತರಗತಿ ಕೂಡ ಶುರುವಾಗಿ ನನ್ನನು ಕಾರ್ಯನಿರತನನ್ನಾಗಿ ಮಾಡಿತು.

ಯಾವಾಗಲೂ ರಜೆಯನ್ನು ಅಜ್ಜಿಯ ಮನೆಯಲ್ಲಿ ತುಂಬಾ ಮೋಜು ಮಸ್ತಿ ನಿಂದ ಕಾಲ ಕಳೆಯುತ್ತಿದ್ದೆ ನಾನು ಈ ರಜೆಯನ್ನು ಬಹಳ ಸುರಕ್ಷಿತವಾಗಿ ಶುಚಿತ್ವದಿಂದ ಮತ್ತು ಜಾಗರೂಕನಾಗಿ ನಮ್ಮ ಮನೆಯಲ್ಲೇ ಕಳೆಯಬೇಕಾಗಿದೆ. ಅದನ್ನು ನಾನು ಪಾಲಿಸುತ್ತಲೂ ಇದ್ದೇನೆ.

ಹೀಗೆ ಕೊರೊನಾ ಲಾಕ್ ಡೌನ್ ನಮಗೆಲ್ಲ ಸಮಯದ,ಸಂಬಂಧದ ಮತ್ತು ಶುಚಿತ್ವದ ಮಹತ್ವವನ್ನು ಸರಿಯಾಗಿ ತಿಳಿಸಿ ಕೊಟ್ಟಿತು.

ಸಾವಿನ ಅನುಭವಕ್ಕಾಗಿ ವಿಷ ಸೇವಿಸಿದ ಯುವಕ

ತುಮಕೂರು

ಯುವಕನೊಬ್ಬ ತನ್ನ ಸಾವಿನ ಬಗ್ಗೆ ಅನುಭವ ಪಡೆಯಬೇಕು ಅದು ಹೇಗಿರತ್ತೆ ಎಂಬ ಹುಚ್ಚು ಹಂಬಲದಿಂದ ಟಿಕ್ ಟ್ಯಾಕ್ ವಿಡಿಯೋ ಮಾಡಿ ಆನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿ ಗ್ರಾಮದ ನಾಗರಾಜಪ್ಪ ಎಂಬುವರ ಮಗ ಧನಂಜಯ್(26) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.

ಸಾವಿಗೂ ಮುನ್ನ ಯುವಕ ತೆಗೆದಿರುವ ಟಿಕ್ ಟ್ಯಾಕ್ ವಿಡಿಯೋ

ಸಾವಿಗೂ ಮುನ್ನ ಧನಂಜಯ್ ಜೀವನದಲ್ಲಿ ಒಂದು ಸಲ ಸಾಯಬೇಕು. ಅದು ಹೇಗಿರುತ್ತದೆ ಅನ್ನೋದ್ನ ಅನುಭವ ಪಡಿಬೇಕು. ನಾನು ಸಾಯುತ್ತಿದ್ದೇನೆ. ಅದನ್ನು ನೀವೆಲ್ಲ ನೋಡಬೇಕು ಎಂದು ಟಿಕ್ ಟ್ಯಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಟ್ಟಿದ್ದಾನೆ.

ಆನಂತರ ಆತ್ಮಹತ್ಯೆ ಮಾಡಿಕೊಳ್ಳಲು ಕ್ರಿಮಿನಾಶಕ ಸೇವಿಸಿದ್ದಾನೆ. ಅಸ್ವಸ್ತಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿದ್ದಾನೆ.

ಧನಂಜಯ್ ಗೆ 4 ತಿಂಗಳ ಹಿಂದಷ್ಟೆ ಮದುವೆಯಾಗಿತ್ತು.

ಸ್ಥಳಕ್ಕೆ ಕೊರಟಗೆರೆ ಸಿಪಿಐ ಎಫ್.ಕೆ. ನಧಾಪ್, ಪಿಎಸ್ಐ ಎಚ್.ಮುತ್ತುರಾಜು ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಲ್ಲಿ ಮಹಿಳೆ ಸಾವು: ಸಂಬಂಧಿಕರ ಧರಣಿ

ತುಮಕೂರು ಜಿಲ್ಲೆ ಪಾವಗಡದಲ್ಲಿ  ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರ ಅಜಾಗರೂಕತೆಯಿಂದ ಮಹಿಳೆ ಅಸುನೀಗಿದ್ದಾರೆ ಎಂದು ಮೃತರ ಪೋಷಕರು ಭಾನುವಾರ ಆಸ್ಪತ್ರೆ ಬಳಿ ಧರಣಿ ನಡೆಸಿದರು.

ಆಂಧ್ರ ಪ್ರದೇಶದ ರೊದ್ದಂ ಮಂಡಲಂ ವೈ.ಟಿ.ರೆಡ್ಡಿ ಪಲ್ಲಿಯ ಸೌಭಾಗ್ಯ(28) ಎಂಬುವರನ್ನು ಹೆರಿಗೆಗಾಗಿ ಪಟ್ಟಣದ ಅಮರಾಪುರ ರಸ್ತೆಯ ಹೆರಿಗೆ ಆಸ್ಪತ್ರೆಗೆ ಕರೆತರಲಾಗಿತ್ತು. ಬೆಳಿಗ್ಗೆ 7 ಕ್ಕೆ ಶಸ್ತ್ರ ಚಿಕಿತ್ಸೆ(ಸಿಜೇರಿಯನ್) ಮಾಡಿದ್ದಾರೆ. ಆದರೆ ಮಹಿಳೆಯ ಸ್ಥಿತಿಯ ಬಗ್ಗೆ ಸಂಬಂಧಿಕರಿಗೆ ತಿಳಿಸದೆ ವೈದ್ಯೆ ಮರೆ ಮಾಚಿದ್ದಾರೆ ಎಂದು ಮಹಿಳೆಯ ಮಾವ ವೆಂಕಟೇಶ್ ಆರೋಪಿಸಿದರು.

ಕಡೆಯ ಗಳಿಗೆಯಲ್ಲಿ ಮಹಿಳೆಯನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ತುರ್ತು ವಾಹನ ಬರುವ ವೇಳೆಗೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೂರು ಅಥವಾ ನಾಲ್ಕನೇ ಸಿಜೇರಿಯನ್ ಆದರೂ ಮಾಡುತ್ತೇನೆ ಖರ್ಚು ಜಾಸ್ತಿ ಆಗುತ್ತೆ. ಜೀವಕ್ಕೆ ಭಯವಿಲ್ಲ ಎಂದು ಹಲ ತಿಂಗಳುಗಳಿಂದ ತಪಾಸಣೆ ನಡೆಸುತ್ತಿದ್ದ ಧನದಾಹಿ ವೈದ್ಯೆ ಕಡೆಗಳಿಗೆಯಲ್ಲಿ ಇದು 3 ನೇ ಸಿಜೇರಿಯನ್ ಆಗಿದ್ದರಿಂದ ಹೀಗಾಗಿದೆ ಎಂದು ಕೈ ಎತ್ತಿದ್ದಾರೆ. ಹಣಕ್ಕಾಗಿ ಇವರು ಏನು ಬೇಕಾದರೂ ಮಾಡುತ್ತಾರೆ ಎಂದು ಸಂಬಂಧಿಕರು ದೂರಿದರು.

ಮೃತ ದೇಹ ಪಡೆಯಲು ನಿರಾಕರಿಸಿ ಆಸ್ಪತ್ರೆ ಬಳಿ ಸಂಬಂಧಿಕರು ಧರಣಿ ನಡೆಸಿದರು.

 

ಜೂನ್.8ಕ್ಕೆ ಹತ್ತನೇ ತರಗತಿ ಮಕ್ಕಳಿಗೆ ನೇರ ಫೋನ್ ಇನ್

Publicstory. in


ತುರುವೇಕೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ತಾಲ್ಲೂಕಿನ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ವಿಷಯವಾರು ಸಮಸ್ಯೆಗಳು, ಕ್ಷಿಷ್ಠಾಂಶಗಳ ಪರಿಹಾರ ಹಾಗು ಪರೀಕ್ಷಾ ಸಿದ್ಧತೆಯ ಬಗ್ಗೆ ತಜ್ಞ ಶಿಕ್ಷಕರುಗಳಿಂದ ಪರಿಹಾರ ನೀಡಲು ಮಕ್ಕಳಿಂದ ನೇರ ಪೋನ್ ಇನ್ ಕಾರ್ಯಕ್ರಮವನ್ನು ಜೂನ್.8ರಿಂದ ಆಯೋಜಿಸಲಾಗಿದೆಂದು ಬಿಇಒ. ಸಿ.ರಂಗಧಾಮಯ್ಯ ತಿಳಿಸಿದರು.

ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ಜೂನ್.8ರಂದು ಗಣಿತ, 9 ರಂದು ಆಂಗ್ಲಭಾಷೆ, 10ರಂದು ವಿಜ್ಞಾನ, 11ರಂದು ಸಮಾಜವಿಜ್ಞಾನ, 12ರಂದು ಕನ್ನಡ, 13ರಂದು ಹಿಂದಿ ವಿಷಯಗಳ ಬಗ್ಗೆ ಬೆಳಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ.

ತಾಲ್ಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಹಾಗು ಸಹ ಶಿಕ್ಷಕರುಗಳು ಮಕ್ಕಳು ಮತ್ತು ಪೋಷಕರುಗಳಿಗೆ ತಿಳಿಸಿ ಈ ನಂಬರ್ಗೆ 9964006270, 9008736160 ಕರೆ ಮಾಡಲು ಹೇಳಿ ಎಂದರು.

ಖ್ಯಾತ ನಟ ಚಿರಂಜೀವಿ ಸರ್ಜಾ ದಿಢೀರ್ ಸಾವು; ಕಂಬನಿಯಲ್ಲಿ ಸ್ಯಾಂಡಲ್ ವುಡ್

ಬೆಂಗಳೂರು: ಕರುನಾಡಿನ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದು, ಅಭಿಮಾನಿಗಳಿಂದ‌ ಶಾಕ್ ನಿಂದ ಹೊರಬರಲಾಗುತ್ತಿಲ್ಲ.

ಕೇವಲ 39 ವರ್ಷ ವಯಸ್ಸಿನ ಅವರು ಕೇವಲ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು.

ಖ್ಯಾತ ನಟ ಅರ್ಜುನ್‌ ಸರ್ಜಾ ಅವರ ಅಳಿಯ. ಅರ್ಜುನ್ ಸರ್ಜಾ ಅವರ ತಾಯಿ ತುಮಕೂರಿನವರು.

ಶನಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಜಯನಗರದ ಸಾಗರ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು.

ಕೊರೊನಾ ಕಾರಣ ಚಿರಂಜೀವಿಯ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.. ಎಂದು ಮೂಲಗಳು ತಿಳಿಸಿವೆ

ವಾಯುಪುತ್ರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದರು.ರುದ್ರತಾಂಡವ, ವರದನಾಯಕ, ವಾಯುಪುತ್ರ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

ನಟಿ ಮೇಘನಾ ರಾಜ್ 2018ರಲ್ಲಿ ಮದುವೆಯಾಗಿದ್ದರು.

180 ನ್ಯಾಯಬೆಲೆ ಅಂಗಡಿಗಳ ಅಮಾನತು

ತುಮಕೂತು: ಗುಲ್ಬರ್ಗಾ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು 4000 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 20 ದಿನಗಳಲ್ಲಿ ಪೊಲೀಸ್, ಕಂದಾಯ ಹಾಗೂ ಆಹಾರ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 4000 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ. ಅಕ್ಕಿಯನ್ನು ಸಾಗಿಸಿದ ಲಾರಿಗಳನ್ನೂ ಸಹ ಸೀಲ್ಡ್ ಮಾಡಲಾಗಿದೆ. ಯಾವುದೇ ಅಂಗಡಿಗಳಲ್ಲಿ ಸೂಕ್ತ ದಾಖಲೆ/ ರಸೀದಿ ಇಲ್ಲದೆ ಅಕ್ಕಿ ಹಾಗೂ ಮತ್ತಿತರ ಪಡಿತರ ಧಾನ್ಯಗಳನ್ನು ಶೇಖರಿಸಿಟ್ಟಿರುವುದು ಕಂಡು ಬಂದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದರು.

180 ನ್ಯಾಯಬೆಲೆ ಅಂಗಡಿಗಳ ಅಮಾನತು


ತಾವು ಆಹಾರ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಪಡಿತರ ವಿತರಣೆಯಲ್ಲಿರುವ ಹಲವಾರು ಲೋಪದೋಷಗಳನ್ನು ಸರಿಪಡಿಸಿದ್ದೇನೆ. ರಾಜ್ಯದಲ್ಲಿ ಈವರೆಗೆ ತೂಕದ ವ್ಯತ್ಯಾಸ, ಪಡಿತರ ದುರ್ಬಳಕೆ, ಗ್ರಾಹಕರಿಗೆ ಮೋಸ, ಅಕ್ರಮ ದಾಸ್ತಾನು, ಹಣ ದುರುಪಯೋಗ ಮಾಡುತ್ತಿದ್ದ 180 ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತ್ತಿನಲ್ಲಿಡಲಾಗಿದೆ.

ಈ ಪೈಕಿ ಸಣ್ಣ-ಪುಟ್ಟ ಲೋಪದೋಷಗಳ ಆರೋಪವಿರುವ ಮೂರ್ನಾಲ್ಕು ನ್ಯಾಯಬೆಲೆಗಳನ್ನು ಅಮಾನತ್ತಿನಿಂದ ಕೈಬಿಟ್ಟು, ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾದರೆ ನಿರ್ದಾಕ್ಷಿಣ್ಯ ಕ್ರಮ:
ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದರೆ ಗ್ರಾಹಕರು ಯಾವುದೇ ಕಾರಣಕ್ಕೂ ಮಣಿಯದೆ ಪ್ರತಿಭಟಿಸಬೇಕು. ಇಲ್ಲವೇ ಇಲಾಖೆಯ ಸಹಾಯವಾಣಿ ಸಂಖ್ಯೆ 1967ಕ್ಕೆ ದೂರು ನೀಡಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಪ್ರತಿದಿನ ಸಹಾಯವಾಣಿಗೆ ಸುಮಾರು 250 ದೂರು ಕರೆಗಳು ಬರುತ್ತಿದ್ದು, ಸ್ವೀಕರಿಸಿದ ದೂರುಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

4ಲಕ್ಷ ವಲಸೆ ಕುಟುಂಬಗಳಿಗೆ ಪಡಿತರ ವಿತರಣೆ:


ಕೋವಿಡ್-19 ಸೋಂಕು ರೋಗದ ಹಿನ್ನೆಲೆಯಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬ ದೃಷ್ಟಿಯಿಂದ ಮೇ ಮತ್ತು ಜೂನ್ ಮಾಹೆಗಾಗಿ ವಲಸೆ ಕಾರ್ಮಿಕರು ಹಾಗೂ ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ತಲಾ 2 ಕೆ.ಜಿ. ಕಡಲೆ ಕಾಳು ಹಾಗೂ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಪಡಿತರ ಹಂಚಿಕೆ ಮಾಡಿದೆ ಎಂದು ತಿಳಿಸಿದರು.

ಲಾಕ್ಡೌನ್ ಸಂದರ್ಭದಲ್ಲಿ ಈವರೆಗೆ ರಾಜ್ಯದಲ್ಲಿ 4 ಲಕ್ಷಕ್ಕಿಂತ ಹೆಚ್ಚು ವಲಸೆ ಕುಟುಂಬಗಳಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ ಎಂದರು.

‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..’

ಜಿ.ಎನ್.ಮೋಹನ್


‘ಚಾಯಾ..’ ಎಂಬ ರಾಗ ಕೇಳಿದ ತಕ್ಷಣ ನಾನು ನಾನಾಗಿರುವುದಿಲ್ಲ.ಅದು ನನಗೆ ಸುಬ್ಬುಲಕ್ಷ್ಮಿಯ, ಬಾಲಮುರಳಿ ಕೃಷ್ಣ, ಭೀಮಸೇನ್ ಜೋಶಿಯವರ ರಾಗಕ್ಕಿಂತ ಹತ್ತು ಪಟ್ಟು ಹೆಚ್ಚು.

ಒಮ್ಮೆ ಈ ರಾಗ ಕಿವಿಗೆ ಬಿದ್ದರೆ ಸಾಕು ಕಾಲಕೋಶದಲ್ಲಿ ಕೂರಿಸಿ ಒಮ್ಮೆ ಹಿಂದೆ ದೂಕಿದಂತೆ ನೂರೆಂಟು ನೆನಪುಗಳ ಕೋಣೆಯನ್ನು ಹೊಕ್ಕುಬಿಟ್ಟಿರುತ್ತೇನೆ.

ಆ ಒಂದು ರಾಗಕ್ಕೆ ಮಾತ್ರ ನಾನು ಬಾಲ್ಯದಲ್ಲಿ, ಬೆಳ್ಳಂಬೆಳಗ್ಗೆ ವರ್ಷಾನುಗಟ್ಟಲೆ ಕೇಳಿದ ವೆಂಕಟೇಶ್ವರ ಸುಪ್ರಭಾತವನ್ನೂ ಹಿಂದಿಕ್ಕುವ ಶಕ್ತಿ ಇದೆ.

ಈ ರಾಗಕ್ಕೆ ಇಂತಹದೇ ಹೊತ್ತು ಗೊತ್ತು ಅನ್ನುವುದೇನೂ ಇಲ್ಲ. ಯಾವಾಗ ಬೇಕಾದರೂ ಹಾಡಬಹುದಾದ, ಯಾವ ರೀತಿಯಲ್ಲೂ ಹಾಡಬಹುದಾದ ರಾಗ ಇದೊಂದೇ ಎನ್ನುವುದು ನನ್ನ ಖಡಕ್ ನಂಬಿಕೆ.

ಇನ್ನುಳಿದ ಎಲ್ಲಕ್ಕೂ ಬೆಳಗಿನ, ಸಂಜೆಯ, ರಾತ್ರಿಯ ಎನ್ನುವ ಗಡಿಗಳಿವೆ.ಈ ರಾಗವೋ ಯಾವುದೇ ಹಂಗಿಲ್ಲದ ‘ಹಗಲಿರುಳೆನ್ನದೆ ಜಡಿಯುವ ಸುರಿಮಳೆ.. ಸಿಡಿ ಕೋಲ್ಮಿಂಚಿನ ರಾಗಗಳು..’

ಆದರೆ ಈ ರಾಗಕ್ಕೂ ಒಂದು ಹಿಮ್ಮೇಳ ಮುಮ್ಮೇಳವಿದೆ. ’ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠ್ಠಲ ನಾಮ ತುಪ್ಪವ ಸೇರಿಸಿ ಬಾಯಿ ಚಪ್ಪರಿಸಿರೋ..’ ಎನ್ನುವಂತೆ ಈ ಚಾಯಾ ರಾಗಕ್ಕೆ ‘ಚುಕ್ ಬುಕ್.. ಚುಕ್ ಬುಕ್..’ ಸದ್ದು ಬೆರೆತಿರಲೇಬೇಕು.

ಈ ಎರಡೇ ಇದ್ದರೂ ಸಾಕು. ಆದರೆ ಪಾಯಸಕ್ಕೆ ತುಪ್ಪವೂ ಸೇರಿದರೆ ಆಹಾ! ಎನ್ನುವಂತಿರುತ್ತದೆ ಎನ್ನುವುದಾದರೆ ಜೊತೆಗೆ ಒಂದು ಮಸಾಲೆ ವಡೆ ಇರಬೇಕು.

ಆ ಚುಕು ಬುಕು ಸದ್ದಿನ ನಡುವೆ ‘ಚಾಯಾ’ ಎಂಬ ನಾದ ಕೇಳಿ ನಾನು ಎದ್ದು ಕುಳಿತದ್ದು ಎಷ್ಟನೇ ಸಲವೋ.. ಆ ಚುಕು ಬುಕು ಸದ್ದಿಗೂ ಆ ‘ಚಾಯಾ..’ ರಾಗಕ್ಕೂ ಇರುವ ಶಕ್ತಿಯೇ ಅದು .

ಅದು ನನಗೆ ಗೊತ್ತಿರಲಿಲ್ಲ. ರೈಲು ಎಂದರೆ ಸಾಕು ಮಾರುದೂರ ನಿಲ್ಲುತ್ತಿದ್ದೆ.

ಆ ಉದ್ದೋಉದ್ದ ಹಳಿಗಳೂ, ಗಿಜಿಗುಡುವ ನಿಲ್ದಾಣಗಳೂ, ನೋಟೀಸ್ ಬೋರ್ಡ್ ನಲ್ಲಿ ನೇತು ಹಾಕಿರುತ್ತಿದ್ದ ಸೂಟ್ ಕೇಸ್ ಕಳ್ಳರ ಫೋಟೋಗಳೂ, ಯಾವುದೋ ನಿಗೂಢ ಲೋಕವೊಂದರಿಂದ ಬಂದವರಂತೆ ಯಾರನ್ನು ಬೇಕಾದರೂ ಕೆಕ್ಕರಿಸಿ ನೋಡುತ್ತಿದ್ದವರೂ.. ಸೇರಿ ನನಗೆ ರೈಲು ಎನ್ನುವುದೇ ನನ್ನದಲ್ಲದ ಲೋಕವಾಗಿ ಹೋಗಿತ್ತು.

ಇನ್ನೂ ಕಾರಣ ಇತ್ತೇನೋ.. ಎಲ್ಲೂ ಎಂದೂ ಸೇರದ, ಎಷ್ಟು ದೂರ ಬೇಕಾದರೂ ಹಾಗೆ ತಾಗದೆ ಸಾಗುವ ಹಳಿಗಳು ನನ್ನೊಳಗೆ ಒಂದು ವಿಷಾದ ರಾಗವನ್ನು ಹುಟ್ಟು ಹಾಕುತ್ತಲೇ ಬಂದಿತ್ತು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ ರಾಜ್ ಕೈನಲ್ಲಿದ್ದ ಪಿಸ್ತೂಲು ಡಂ ಎಂದದ್ದೂ ರೈಲಿನ ಬಗ್ಗೆ ಒಂದು ಗೊತ್ತಿಲ್ಲದ ಭಯ ಬೆಸುಗೆ ಹಾಕಿ ಹೋಗಿತ್ತು.

ಇನ್ನೂ ತಿಂಗಳುಗಳ ಹಸುಗೂಸನ್ನು ಕಟ್ಟಿಕೊಂಡು ನೂರೆಂಟು ಮಂದಿ ‘ರೈಲು ಇದೆ ಆರಾಮವಾಗಿ ಹೋಗಿ’ ಎಂದರೂ ಕೇಳದೆ ಬಸ್ಸು ಹತ್ತಿಯೇ ಊರೂರು ಸುತ್ತಿದ್ದೆ. ಮೂರು ರಾಜ್ಯಗಳನ್ನು ದಾಟಿ ಹೋಗಬೇಕಾಗಿ ಬಂದರೂ ರೈಲು ಮಾತ್ರ ಬೇಡ ಎನ್ನುವ ಜೀವ ನನ್ನದು.

ಆದರೆ ಒಂದು ದಿನ ಕಮಾಲ್ ಆಗಿಹೋಯಿತು.

ಧಾರವಾಡ ವಿಶ್ವವಿದ್ಯಾಲಯದ ಬೆನ್ನಿಗೆ ನಿಂತಿದ್ದೆ. ಅಲ್ಲಿಂದ ಎಷ್ಟು ಕಣ್ಣು ಹಾಯಿಸಿದರೂ ಬಟಾ ಬಯಲು. ಗೆಳೆಯ ಸಂಜೀವ ಕುಲಕರ್ಣಿ ಅಲ್ಲಿ ಒಂದು ಕನಸು ಮೊಳಕೆಯೊಡೆಸಲು ಸಜ್ಜಾಗಿದ್ದರು ಹಾಗಾಗಿ ಅವರ ಜೊತೆ ಆ ಕಾಳು ಊರಾಬೇಕಾದ ಜಾಗ ಯಾವುದು ಎಂದು ನೋಡಲು ಹೋಗಿದ್ದೆ.

ಆಗ ಕಂಡಿತು. ಅಷ್ಟು ದೂರದಲ್ಲಿ.. ಒಂದು ಮಿಲಿಪೀಡ್. ಸಹಸ್ರಾರು ಹೆಜ್ಜೆ ಹಾಕುತ್ತ ತೆವಳುತ್ತ ಬಾಗುತ್ತಾ ಬಳಕುತ್ತಾ ನನ್ನ ಕಣ್ಣ ಮುಂದೆ ಎಲ್ಲೋ ಅಲ್ಲಿಂದ ಸಾಗಿ ಕಮಾನಿನಂತೆ ಬಾಗಿ ನಂತರ ನನ್ನ ಮುಂದೆಯೇ ನನಗೆ ಕಣ್ಣು ಮಿಟುಕಿಸುತ್ತಾ ಹಾದು ಹೋಗಿಯೇ ಬಿಟ್ಟಿತು.

ನನ್ನ ಎದೆಯಲ್ಲಿ ಒಂದು ರಾಗ ಹರಿದು ಹೋದಂತಾಯಿತು. ರೈಲು ನನ್ನೊಳಗೆ ಒಂದು ರಾಗವಾಗಿದ್ದು ಹೀಗೆ.

ನೀವು ನಂಬಬೇಕು- ನನಗೆ ಬೇಂದ್ರೆಯನ್ನೂ, ಕುವೆಂಪು ಅವರನ್ನೂ, ಲಂಕೇಶ್, ಎಕ್ಕುಂಡಿ, ಕಂಬಾರರನ್ನೂ.. ಒಳಕ್ಕೆ ನನ್ನೊಳಕ್ಕೆ ಎಳೆದುಕೊಳ್ಳಲು ಸಾಧ್ಯವಾಗಿದ್ದು ಈ ಮಿಲಿಪೀಡ್ ಎಂಬ ರೈಲಿನ ಕಾರಣಕ್ಕಾಗಿಯೇ.

ರೈಲು ಹತ್ತಿದೊಡನೆ ಹಾರಿ ಕಿಟಕಿ ಸೀಟು ಹಿಡಿಯುತ್ತಿದ್ದ, ರಿಸರ್ವೇಶನ್ ಮಾಡಿಸುವಾಗಲೆಲ್ಲಾ ಕಿಟಕಿಯೇ ಸಿಗುವಂತೆ ಲೋಯರ್ ಬರ್ತ್ ಹುಡುಕುತ್ತಿದ್ದ ನನಗೆ ಎಷ್ಟೋ ರಾತ್ರಿಗಳನ್ನು ಸದ್ದಿಲ್ಲದಂತೆ ಕಳೆಯಲು ಈ ಚುಕ್ ಬುಕ್ ರಾಗವೇ ಬೇಕಾಗಿತ್ತು.

ಮನಸ್ಸಿನೊಳಗೆ ಅಲೆಗಳಂತೆ ಏಳುತ್ತಿದ್ದ, ಮೊರೆಯುತ್ತಿದ್ದ, ಕಾಡುತ್ತಿದ್ದ, ಸದ್ದುಗಳ ಹುಟ್ಟಡಗಿಸಲು ಈ ಚುಕ್ ಬುಕ್ ಸದ್ದಿಗೆ ಸಾಧ್ಯವಾಗಿದೆ. ಅದರ ‘ಧಡಲ್ ಧಿಡೀಲ್’ ಗಳಂತೂ ನನಗೆ ಬೇಂದ್ರೆಯ ಹಾಡಿನಂತೆಯೇ ಒಳಗೆ ಹೊಕ್ಕಿದೆ.

‘ಏನ್ ಮುಂಗಾರಿ ಮಳೆ ಹಾಂಗಾ ಸಿಡಿಲ್.. ಬಿದ್ದಿತು ಖಡಿಲ್.. ಎದಿ ಆಗಿ ನಿಂತು ಮೂಕಾ..’ ಎನ್ನುವುದು ನನಗೆ ಅದರ ಮಾತ್ರೆ, ಗಣ ಸಮೇತ ಅರ್ಥವಾಗಿದ್ದರೆ ಈ ರೈಲೆಂಬ ರೈಲಿನ ಚಕ್ರಗಳಿಂದಾಗಿ. ಕಿಟಕಿಯ ಸರಳುಗಳಿಗೆ ಕೆನ್ನೆ ಒತ್ತಿ ಕುಳಿತರೆ ಆ ಕಿಟಕಿ ತೆರೆಯುತ್ತಿದ್ದ ಲೋಕವೇ ಬೇರೆ.

ಕವಿ ಎಕ್ಕುಂಡಿಯವರಂತೂ ನನಗೆ ಇನ್ನಿಲ್ಲದಂತೆ ನೆನಪಾಗುವುದೇ ಇಲ್ಲಿ. ಅವರು ಹೇಳುತ್ತಿದ್ದರು- ‘ಅಮ್ಮ ಹಾಡಿದ ಒಂದು ಹಾಡಿನಿಂದ ನಾನು ಈ ಜಗತ್ತನ್ನು ನೋಡುವ ಕಿಟಕಿಯನ್ನು ರೂಪಿಸಿಕೊಂಡೆ’ ಅಂತ.

ಹೌದಲ್ಲಾ.. ಬದುಕಿಗೆ ಕಿಟಕಿ ರೂಪಿಸಿಕೊಳ್ಳಲು ಯಾವುದಾದರೂ ಸಾಕು. ಹಾಗೆ ಅವರಿಗೆ ಅಮ್ಮನ ಹಾಡಾದರೆ, ನನಗೆ ರೈಲಿನ ಹಾಡು. ಆ ಕಿಟಕಿಯ ಮೂಲಕವೇ ನನಗೆ ರಾಗಗಳು ಸಿಕ್ಕಿವೆ, ಬದುಕು ಸಿಕ್ಕಿದೆ, ನೋಟವೂ ಸಿಕ್ಕಿದೆ. ಒಂದು ಇಡೀ ಜಗತ್ತು ಸಿಕ್ಕಿದೆ.

‘ಬನ ಬನಾ ನೋಡು ಈಗ ಹ್ಯಾಂಗ ಮದುವಿ ಮಗನಾಂಗ ತಲೆಗೆ ಬಾಸಿಂಗ’ ಎನ್ನುವ ಸಾಲುಗಳು ಅರ್ಥ ಒದಗಿಸಿಕೊಂಡಿದ್ದು ರೈಲಿನ ಕಿಟಕಿಯ ಮೂಲಕವೇ.. ಎಲ್ಲವನ್ನೂ ಹಿಂದಿಕ್ಕುತ್ತ ಎಲ್ಲವನ್ನೂ ಮಣಿಸುತ್ತಾ ನಾಗಾಲೋಟದಲ್ಲಿ ರೈಲು ಹೋಗುವಾಗಲೂ ನನಗೆ ಹಸಿರು ಮುಕ್ಕಳಿಸುವ ಬೆಟ್ಟ ಗುಡ್ಡಗಳು ಕಂಡಿವೆ, ಕಾಡುಗಳನ್ನು ಸೀಳಿ ನಡೆವಾಗ ಬನ ಬನದ ತುಂಬೆಲ್ಲಾ ನನಗೆ ಬೇಂದ್ರೆಯ ಶಬ್ದಗಳು ಸಿಕ್ಕಿವೆ.

ಅದು ತಂಬೂರಿಯ ಹಾಗೆ. ಅಲ್ಲಿ ಸಿಕ್ಕದ್ದು ಸದ್ದು ಮಾಡದ ತಂಬೂರಿ. ಅದಕ್ಕೆ ನಾದ ಹಚ್ಚುವುದನ್ನು ಅರ್ಥ ಹಚ್ಚುವುದನ್ನು ನನಗೆ ಹೇಳಿಕೊಟ್ಟದ್ದು ಈ ರೈಲೇ. ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಶ್ರಾವಣಾ..’ ಎನ್ನುವ ಸಾಲುಗಳು ರೈಲಿನೊಳಗೆ ಹಾಗೆ ಕೆನ್ನೆ ಒತ್ತಿ ಸಾಗುತ್ತಿರುವಾಗ ನನಗೆ ಕೇವಲ ಸಾಲುಗಳಾಗಿರಲಿಲಲ್ಲ. ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಿದ್ದ ದೃಶ್ಯಾವಳಿಗಳಾಗಿದ್ದವು.

ಈ ರೈಲು ಎನ್ನುವ ರಾಗ ನನ್ನೊಳಗೆ ಹೊಕ್ಕಿದ್ದು ಬೇಂದ್ರೆ ಅಜ್ಜನ ಸಾಧನಕೇರಿಗೆ ಒಂದಷ್ಟು ಹೆಜ್ಜೆ ಆಚೆ ಮಾತ್ರ. ಹಾಗಾಗಿಯೇ ಇರಬೇಕು ನನಗೆ ರೈಲು ಎನ್ನುವುದು ಸದಾ ರಾಗಗಳನ್ನೇ ಮೊಳಗಿಸುತ್ತ ಹೋದವು.

‘ಕೂಗೇ ಕೂಗುತದ ಕೂಗೇ ಕೂಗುತದ ಗಿರಣಿ ಕರೆಯೋ ಹಾಂಗಾ..’ ಎಂದು’ ಜೋಗಿ’ ಕವಿತೆ ನನ್ನೊಳಗೆ ಒಂದು ಕವಿತೆ ಹುಟ್ಟುಹಾಕುತ್ತಿದ್ದರೆ ಈ ರೈಲು ನನ್ನನ್ನು ಕೂರಿಸಿಕೊಂಡು ಯಾವುದೋ ಬಯಲ ಮಧ್ಯೆ ಎಲ್ಲೋ ದೂರದಲ್ಲಿ ಹರಡಿಕೊಂಡಿದ್ದ ಮರವನ್ನು ಸುತ್ತುತ್ತಾ ಕಣ್ಣಿನ ಮುಂದೆ ರಾಗದ ರಂಗೋಲಿ ಬಿಡಿಸುತ್ತಿತ್ತು.

ಅದಿರಲಿ.. ಮೊನ್ನೆ ‘ರಂಗಶಂಕರ’ದಲ್ಲಿ ಬಿಂದುಮಾಲಿನಿ ‘ನೀ ಬೈರಾಗಿ ಇರಬಹುದು ಬಾಕಿ.. ನಿನ್ನ ಮಠದಾಗ ನಾನೂ ಇರಾಕಿ’ ಎಂದು ಹಾಡುವಾಗ ಮತ್ತೆ ನನ್ನ ಮನದ ಹಳಿಗಳ ಮೇಲೆ ರೈಲು ತೆವಳಲು ಶುರುವಾಯಿತು.

ಸಿಮೆಂಟಿನ ನಾಡಿನಲ್ಲೂ ಇದ್ದವನು ನಾನು. ಸದಾ ಸಿಮೆಂಟಿನ ಹೊಗೆಯನ್ನೇ ಉಗುಳುವ, ಸಾಯಿಸಿಯೇ ಸಿದ್ಧ ಎನ್ನುವಂತೆ ಸುಡುವ ಸೂರ್ಯನ ಮಧ್ಯೆ ಕೈನಲ್ಲಿ ಹಿಡಿದ ಚಿಲುಮೆಯಲ್ಲಿ ಎಲ್ಲವನ್ನೂ ಮರೆತಂತೆ ತಮ್ಮದೇ ಲೋಕದಲ್ಲಿ ತೂರುತ್ತಿದ್ದರಲ್ಲಾ ಅವರು ನೆನಪಾದದ್ದು ಹೇಗೆ?

ಹಾಗೆಯೇ ‘ಮಾಯಾಕಿನ್ನರಿ’ ಕೂಡಾ.. ಮರಳುಸಿದ್ಧನ ನಾರಿ ಮರಳು ಮಾಡಲು ಹಾಕಿದ ಹೆಜ್ಜೆಯ ವಯ್ಯಾರ, ಕಣ್ಣನ್ನೇ ಬಿಲ್ಲಾಗಿಸಿಕೊಂಡಿದ್ದು, ಅವಳ ಬಳಕುವಿಕೆ, ಕಾಮನೆಗಳ ತಾಂಡವ ಎಲ್ಲವೂ ನನಗೆ ಈ ರೈಲಿನ ಸದ್ದಿನ ನಡುವೆಯೇ ಅದು ತಿರುವುನಲ್ಲಿ ತಿರುಗಿದ ರೀತಿಗೇ ಅರ್ಥವಾಗಿ ಹೋಗಿತ್ತು. ಕೊನೆಗೆ ಸುರಂಗವನ್ನು ಹೊಕ್ಕಾಗ ‘ಮರುಳು ಮಾಡಾಕ ಹೋಗಿ ಮರುಳ ಸಿದ್ಧನ ನಾರಿ ಮರುಳಾಗ್ಯಾಳ ಜಂಗಮಯ್ಯಾಗ..’ ಎನ್ನುವ ಸಾಲಿಗೆ ಅರ್ಥ ಹೊಳೆಸಿಬಿಟ್ಟಿತ್ತು.

ಇರಲಿ ಬಿಡಿ ನಾನು ಬದುಕು ಕಟ್ಟಿಕೊಳ್ಳುತ್ತಾ, ಅಥವಾ ಬದುಕು ನನ್ನನ್ನು ಇಲ್ಲಿರು ಎಂದು ಕರೆದಾಗೆಲ್ಲಾ ಅದಕ್ಕೆ ಮಣಿಯುತ್ತಾ ಊರೂರು ತಿರುಗಿದಾಗೆಲ್ಲಾ ಮತ್ತೆ ಈ ರೈಲೇ ನನ್ನ ಎದೆಗೆ ಕವಿತೆಗಳನ್ನು ತಂದು ಸುರಿದಿದೆ.

‘ಹೋಗುವೆನು ನಾ, ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ..’ ಎನ್ನುವುದಕ್ಕೆ ಅರ್ಥ ಬರಬೇಕಾದರೆ, ಅಥವಾ ಅದರ ಅರ್ಥ ತನ್ನ ಅಷ್ಟೂ ಗಾಢತೆಯಲ್ಲಿ ನಿಮ್ಮ ಕೈಗೆ ಸಿಗಬೇಕಿದ್ದರೆ ಎಷ್ಟೋ ದಿನಗಳ ನಂತರ ನೀವು ನಿಮ್ಮ ಮನೆ ತಲುಪಿಕೊಳ್ಳಲು ರೈಲು ಹತ್ತಬೇಕು.

ಅದೇ ಕಿಟಕಿಯ ಸರಳುಗಳಿಗೆ ಹತ್ತಿಕೊಂಡ ನನ್ನ ಕೆನ್ನೆಯ ಮೇಲೆ ಅದೆಷ್ಟು ಬಾರಿ ಕಣ್ಣೀರು ಜಾರಿದೆಯೋ. ‘ನಾನು ಬಿದ್ದು ಎದ್ದ ಮನೆ.. ಮೊದಲು ಬೆಳಕು ಕಂಡ ಮನೆ ತಿಪ್ಪ ತಿಪ್ಪ ಹೆಜ್ಜೆಯಿಟ್ಟು ಬಿಸಿಲ ಕೋಲ ಹಿಡಿದುಬಿಟ್ಟು ತಂಗಿ ತಮ್ಮರೊಡನೆ ಹಿಟ್ಟು ತಿಂದು ಬೆಳೆದ ನನ್ನ ಮನೆ ಮನೆ ಮನೆ ಮುದ್ದುಮನೆ..’ ಎನ್ನುವ ಕವಿತೆಯಂತೂ ನನ್ನನ್ನು ಅಕ್ಷರಶಃ ಅರಬೀ ಸಮುದ್ರದ ಕಡಲಲ್ಲಿ ಸುಳಿಗೆ ಸಿಕ್ಕ ಪುಟ್ಟ ದೋಣಿಯ ಏಕೈಕ ಪಯಣಿಗನಂತೆ ಮಾಡಿದೆ.

ಒಂದು ದಿನ ಹೀಗೆ ಸಾಗುತ್ತಿದ್ದಾಗ ರೈಲು ಭತ್ತದ ಗದ್ದೆಗಳ ಮಧ್ಯೆ ಶಿಳ್ಳೆ ಹಾಕುತ್ತಾ ಸಾಗುತ್ತಿತ್ತು. ಕಣಿವೆಯಲ್ಲಿ ಜೋಪಾನ ಮಾಡುವ ತಾಯಿಯಂತೆ ತೆವಳುವ, ಸುರಂಗದೊಳಗೆ ಪಾತಕಿಯಂತೆ ಕಣ್ಣು ಬೀರುವ, ಬೆಟ್ಟ ಗುಡ್ಡಗಳ ಮಧ್ಯೆ ಮಾರುದ್ಧ ಸೇತುವೆ ದಾಟುವಾಗ ಸಾಹಸಿಯಂತೆ ಮೀಸೆ ಮೇಲೇರಿಸುವ ಈ ರೈಲೆಂಬ ಪ್ರಾಣಿ ಹಸಿರು ಗದ್ದೆಯ ನಡುವೆ ಸಾಗುವಾಗ ತಾನೂ ಮೃದುವಾಗಿಬಿಡುತ್ತದೆ.

ಒಮ್ಮೆ ಕೃಷ್ಣ ಆಲನಹಳ್ಳಿ ‘ಏನು ಗೊತ್ತಾ ಮೋಹನ್, ಕಣ್ಣಿಗೆ ಕಾಣುವಷ್ಟೂ ಹಸಿರು ಮುಕ್ಕಳಿಸುವ ಗದ್ದೆ ಇರುತ್ತದಲ್ಲ ಅದಕ್ಕೆ ನಿಜಕ್ಕೂ ಹಸಿರು ಬರುವುದು ಯಾವಾಗ ಗೊತ್ತಾ’ ಎಂದು ಕೇಳಿದ್ದ.

ನಾನು ಸಿಟಿಯಲ್ಲಿ ಬೆಳೆದಿದ್ದವ. ಕಾಂಕ್ರೀಟ್ ಕಟ್ಟಡಗಳ, ಉಸಿರು ಸಿಕ್ಕಿಕೊಳ್ಳುವ ಹೊಗೆ ಕೊಳವೆಗಳ ಮಧ್ಯೆ ಇದ್ದವ. ನಾನು ‘ಬೆಬ್ಬೆಬ್ಬೆ..’ ಎಂದಿದ್ದೆ.

ಆಗ ಕೃಷ್ಣ ‘ಆ ಹಸಿರಿನ ನಡುವೆ ನನ್ನ ಫಲ ಹೊತ್ತ ಹೆಂಡತಿ ನಡೆದು ಬರುತ್ತಾಳಲ್ಲಾ ಆಗ..’ ಎಂದ. ಈಗ ನೋಡಿದರೆ ಇದೇ ರೈಲು, ಪಾತಕಿಯಂತೆ ಸಾಕಷ್ಟು ಬಾರಿ ಕಂಗೆಡಿಸಿದ್ದ ರೈಲು, ಥೇಟ್ ಗಬ್ಬ ಹೊತ್ತ ಹೆಂಗಸಿನಂತೆ ಆ ಹಸಿರು ಗದ್ದೆಯ ಮಧ್ಯೆ ಹೆಜ್ಜೆ ಹಾಕುತ್ತಿದೆ. ಆ ಗದ್ದೆಯೋ ಈ ರೈಲು ನನ್ನನ್ನು ಸೀಳಿದರೆ ಮಾತ್ರ ಫಲ ಕೊಡುತ್ತೇನೆ ಎನ್ನುವಂತೆ ನಿಂತಿದೆ.

ಇರಲಿ ಬಿಡಿ, ಅದು ಆ ರೈಲು ಮತ್ತು ಆ ಗದ್ದೆಯ ವ್ಯವಹಾರ. ಮೈದಾನ ಹಾಗೂ ಕುದುರೆ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ನನಗೆ ಫಕ್ಕನೆ ಆ ಹಸಿರು ಗದ್ದೆಯ ಮಧ್ಯೆ ಹಾರುತ್ತಿದ್ದ ಬೆಳ್ಳಕ್ಕಿ ಕಂಡುಬಿಡಬೇಕೇ..! ಹಾಗೆ ಅದು ಹಸಿರು ಗದ್ದೆಯ ಮಧ್ಯೆ ಫಟ ಫಟ ರೆಕ್ಕೆ ಬಡಿಯುತ್ತಾ ಎದ್ದಾಗ ನನ್ನ ಪುಟ್ಟ ಕೂಸಿಗೆ ನಾಟಕದ ತರುಣ ಶ್ರೀಪಾದ್ ಭಟ್ ಕೇಳಿದ್ದು ನೆನಪಾಯಿತು.

‘ಇದು ಎಷ್ಟೊಂದು ಬೆಳ್ಳಗಿದೆಯಲ್ಲಾ ಅದು ಹ್ಯಾಗೆ’ ಅಂತ. ನನ್ನ ಪುಟ್ಟ ಕೂಸು, ಆಗ ತಾನೇ ಶಾಲೆಯ ಮೆಟ್ಟಿಲು ಹತ್ತಲು ಸಜ್ಜಾಗುತ್ತಿದ್ದ ಕೂಸು ‘ಯಾಕೆ ಅಂದ್ರೆ ಅದು ಬಿಳಿ ಸೋಪು ಹಾಕಿಕೊಂಡು ಸ್ನಾನ ಮಾಡುತ್ತೆ’ ಎಂದಿತ್ತು.

ಮಕ್ಕಳು ಬೆಳೆದಂತೆಲ್ಲಾ, ಅದರಲ್ಲೂ ಹೆಣ್ಣು ಮಕ್ಕಳು ಇನ್ನಿಲ್ಲದ ವೇಗದಲ್ಲಿ ಪ್ರೌಢರಾಗಿಬಿಟ್ಟಾಗ ಈ ನೆನಪುಗಳಲ್ಲದೆ ಮನದೊಳಗೆ ಇನ್ನೇನು ಉಳಿಯಲು ಸಾಧ್ಯ. ಈ ರೈಲಿಗೆ ಸಾಧ್ಯ, ಮತ್ತೆ ಮತ್ತೆ ಆ ನೆನಪುಗಳನ್ನು ಮನಸಿನೊಳಗೆ ದೋಸೆಯಂತೆ ಮಗುಚಿಹಾಕಲು.

ಹಾಗೆ ಅಂದುಕೊಳ್ಳುತ್ತಿರುವಾಗಲೇ ಹಾಗೆ ಹಾರಿದ ಆ ಬೆಳ್ಳಕ್ಕಿ ನನಗೆ ಎಕ್ಕುಂಡಿಯವರನ್ನೂ ನೆನಪಿಸಿಬಿಟ್ಟಿತು. ಉತ್ತರ ಕರ್ನಾಟಕದ ಎಕ್ಕುಂಡಿ ಉತ್ತರ ಕನ್ನಡ ಸೇರಿಕೊಂಡಿದ್ದು ಬದುಕು ಕಟ್ಟಿಕೊಳ್ಳಲಿಕ್ಕಾಗಿ. ಗಂಜಿಯ ಸಮಸ್ಯೆಗೆ ಉತ್ತರ ಹುಡುಕಿಕೊಳ್ಳುವ ಸಲುವಾಗಿ.

ಎಕ್ಕುಂಡಿ ಬರೆದಿದ್ದರು. ಇವತ್ತು ಬೆಳ್ಳಕ್ಕಿಯನ್ನು ನೋಡುವ ಮನಸ್ಸನ್ನು ಗಂಜಿಯ ಕೂಗು ಕಿತ್ತುಕೊಳ್ಳುತ್ತಿದೆ. ಗಂಜಿ ಮತ್ತು ಬೆಳ್ಳಕ್ಕಿ ಎರಡೂ ಇರುವ ಒಂದು ಸುಂದರ ಜಗತ್ತನ್ನು ನಿರ್ಮಾಣ ಮಾಡಬೇಕು ಅಂತ. ಹೌದಲ್ಲ, ಎಂತ ಮನವ ಕಾಡುವ ಮಾತು.

ಅದು ಸರಿ ರೈಲಿನ ಕಿಟಕಿಯೊಳಗಿನಿಂದಲೇ ಇದು ಕಾಣಬೇಕಾಗಿ ಬಂದದ್ದು ಹೇಗೆ.

ರೈಲು ದಟ್ಟ ಕಾನನದ ನಡುವೆ ಹೋಗುವಾಗ ಒಂದು ಅರ್ಥವನ್ನು ಹೊಳೆಸಿದರೆ, ಸಮುದ್ರದ ಬದಿಯಲ್ಲಿ ಶಿಳ್ಳೆ ಹಾಕುವಾಗಲೇ ಇನ್ನೊಂದು ರೀತಿ, ಭತ್ತದ ಗದ್ದೆಗಳ ಮಧ್ಯೆ ತೋಡುಗಳ ನೀರಿನ ಸನಿಹದಲ್ಲಿ ಸಾಗುವಾಗ ಒಂದು ರೀತಿಯಾದರೆ, ಕಪ್ಪು ಮಣ್ಣಿನ ನಡುವೆ ಜಾಲಿ ಮುಳ್ಳಿನ ಗಿಡಗಳ ಪಕ್ಕ ಹಾದು ಹೋಗುವಾಗಲೇ ಇನ್ನೊಂದು ರೀತಿ. ‘ನನ್ನವ್ವ ಕಪ್ಪಾದ ಫಲವತ್ತಾದ ನೆಲ..’ ಎನ್ನುವುದಕ್ಕೆ ಒಂದು ಮಾಗುವಿಕೆಯ ಅರ್ಥ ಕೊಡಲು ನನಗೆ ಈ ರೈಲೇ ಆಗಿಬರಬೇಕೇ..

ಹೀಗೇ ಸಾಗುತ್ತಿದ್ದೆ. ಕಪ್ಪು ಮಣ್ಣಿನ ನಾಡಿನಲ್ಲಿ ದೂರ, ಬಹು ದೂರದಲ್ಲಿ ಆ ಕಪ್ಪು ಮಣ್ಣಿನ ಮಧ್ಯೆ, ಏಕಾಂಗಿ ಗುಡ್ಡದ ಮೇಲೆ, ಒಂದು ಪುಟ್ಟ ಸುಣ್ಣ ಬಳಿದುಕೊಂಡ ಗುಡಿ… ನನ್ನೊಳಗೆ ಒಂದು ತುಡಿತ, ಒಂದು ಕುಣಿತ, ಒಂದು ಅನುರಾಗ, ಒಂದು ಬಿಸಿ..

‘ಸೋಮಲಿಂಗನ ಗುಡಿ ಮ್ಯಾಲ ಬಂಗಾರ ಚಡಿ ನೋಡಿ ಬರೋಣು ನಡಿಯ..’ ಎನ್ನುವ ಸಂಗ್ಯಾ ಬಾಳ್ಯದ ಹಾಡು ಮೊರೆಯತೊಡಗಿತು. ನನಗೋ ಇನ್ನಿಲ್ಲದ ನವರಂಗಿ ಭಾವ, ನಾನೂ ಪೆನ್ನು ಕೈಗೆತ್ತಿಕೊಂಡೆ. ‘ಸಂಗ್ಯಾನಿಗೆ..’ ಅನ್ನುವ ಕವನ ಓದಲು ತಂದಿದ್ದ ಪುಸ್ತಕದ ಅಂಚಿನಲ್ಲಿದ್ದ ಇಷ್ಟಿಷ್ಟು ಜಾಗದಲ್ಲೇ ಹೆಜ್ಜೆ ಊರುತ್ತಾ ಬಂದುಬಿಟ್ಟಿತು.

‘ನಾ ಕುಣೀಬೇಕಾ ಮೈ ಮಣೀಬೇಕಾ ಕಾಲು ದಣೀಬೇಕಾ ತಾಯಿ ನವಿಲಿನಾಂಗ ಎಳೆ ಮಣಕಿನಾಂಗ ತಿರತಿರಗಿದಾಂಗ ಬುಗುರಿ’ ಎನ್ನುವುದಂತೂ ನನಗೆ ರೈಲು ಒಂದೊಂದು ತಿರುವಿನಲ್ಲಿ ಹೊರಳಿದಾಗೆಲ್ಲಾ ನೆನಪಾಗುತ್ತದೆ.. ಸುಂದರ ಸುರತ ಸುಖದ ಹಾಗೆ.

ಅದಿರಲಿ ಅಣ್ಣ ಹೇಳುತ್ತಿದ್ದರು ಕೆ ಎಸ್ ನ ಕವಿತೆ ಓದಿದ್ದೀಯಾ ಅಂತ.. ‘ಎಲ್ಲಿದ್ದೀಯೆ ಮೀನಾ, ಇಲ್ಲೇ ಇದ್ದೀನಮ್ಮ..’ ಕವಿತೆಯ ಸಾಲು ಮನದಿಂದ ಮರೆಯಾಗುವುದಾದರೂ ಹೇಗೆ?. ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಾಗಲೇ ಈ ಮಾತು ಬಂತು. ‘ನವಿಲೂರ ಮನೆಗೆ ಚಕ್ಕಡಿಯಲಿ ಸಾಗಿ ಪದುಮಳನ್ನು ನೋಡುತ್ತಿದ್ದ ಕೆ ಎಸ್ ನ ಆಧುನಿಕತೆಯ ಈ ರೈಲನ್ನು ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲವೇನೋ..’ ಎಂದರು.

‘ಮಾಯಾದಮನದ ಭಾರ, ತೆಗೆದಾಂಗ ಎಲ್ಲಾ ದ್ವಾರಾ.. ಏನಾ ಏನಿದೋ ಎಂತಾ.. ಬೆರಗಾ..’ ಎಂದು ನಾನು ಉದ್ಘಾರ ತೆಗೆದು ಎಲ್ಲವನ್ನೂ ನಿಮ್ಮ ಮುಂದೆ ಬಿಚ್ಚಿ ಕುಳಿತಿರುವಾಗಲೇ ನನಗೆ ಒಂದು ಘಟನೆ ನೆನಪಿಗೆ ಬರುತ್ತಿದೆ..

ಗೆಳೆಯ ಸೂರಿ ಫೋನ್ ಮಾಡಿದ್ದರು. ‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..’ ಅನ್ನುವ ರಿಂಗ್ ಟೋನ್ ಅವರಿಗೆ ಕೇಳಿಸಿದೆ.

ತಕ್ಷಣ ಸೂರಿ ‘ರೀ.. ಇದೇನ್ರಿ ಇಂತಾ ರಿಂಗ್ ಟೋನ್’ ಅಂದರು. ರೇಗುತ್ತಿದ್ದರೇನೋ ಗೊತ್ತಿಲ್ಲ.. ಆದರೆ ಆ ವೇಳೆಗಾಗಲೇ ನನ್ನ ಮನಸ್ಸು ಚುಕು ಬುಕು ರೈಲು ಏರಿ ದೂರ.. ಬಹು ದೂರ.. ಹೋಗಿಯಾಗಿತ್ತು.

ಭಾರತದ ಪಾಂಗೊಂಗ್ ತ್ಸೊನಲ್ಲಿ‌ ಚೀನಿ ಮುಖಗಳು…

0

ವಿನಯ್ ಹೆಬ್ಬೂರು


ಹಿಂದಿಯ ಪ್ರಸಿದ್ದ ಚಲನಚಿತ್ರ ‘3 ಈಡಿಯಟ್ಸ್’ ನ ಕ್ಲೈಮ್ಯಾಕ್ಸ್ ದೃಶ್ಯ ನೋಡಿದವರಿಗೆ ಈಚೆಗೆ ಎಲ್ಲಾ ನ್ಯೂಸ್‍ ಚಾನೆಲ್‍ಗಳಲ್ಲಿ ಅದೇ ದೃಷ್ಯ ನೋಡುತ್ತಿರುವಂತೆ ಭಾಸವಾಗುತ್ತಿದೆ ಮತ್ತು ಆ ಸ್ಥಳದ ಸಮೀಪ ಚೀನಿ ಮುಖಗಳು ಎದ್ದು ಕಾಣುತ್ತಿವೆ.

ಅದೇ ಈಚೆಗೆ ಭಾರತ ಚೀನಾದ ನಡುವಿನ ವಿವಾದದ ಪ್ರಮುಖ ಕೇಂದ್ರವಾದ ಪಾಂಗೊಂಗ್ ತ್ಸೊ.

ಇದೀಗ, ಈ ಪಾಂಗೊಂಗ್ ತ್ಸೊ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನೇರ ಮುಖಾಮುಖಿ ಸ್ಥಳವಾಗಿದೆ, ಮೇ ಆರಂಭದಲ್ಲಿ ನಡೆದ ಗಲಾಟೆ ನಂತರ. ಎರಡೂ ಕಡೆಯವರು ತಮ್ಮ ಸೈನ್ಯದ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ ಆದರ ಜೊತೆ “ಸೇನೆ ಕಡಿತಗೊಳಿಸುವ ” ಪ್ರಕ್ರಿಯೆಯು ಸಹ ನಡೆಯುತ್ತಿದೆ.

ಎರಡೂ ಸೇನೆಗಳ ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ಮಾತುಕತೆ ನಡೆದಿದ್ದು. ಭಾರತ ಚೀನಾ ನಡುವಿನ 3000ಚಕಿಮಿ ವಿಸ್ತೀರ್ಣದ ಗಡಿಯಲ್ಲಿ ಗಾಲ್ವಾನ್ ವ್ಯಾಲಿ, ಡೆಮ್ಚೋಕ್ ಮತ್ತು ದೌಲತ್ ಬೇಗ್ ಓಲ್ಡಿ ಗಳಲ್ಲಿ ಉದ್ವಿಘ್ನತೆ ಇದ್ದರೂ ಪ್ರಸ್ತುತ ಎರಢೂ ದೇಶಗಳ ಗಮನ ಪಾಂಗೊಂಗ್ ತ್ಸೋ ಮೇಲೆ ಇರಲಿದೆ.

ಪ್ಯಾಂಗೊಂಗ್ ತ್ಸೊ ಅನ್ನು “ಕಾನ್ಕ್ಲೇವ್ ಸರೋವರ” ಎಂದು ಅನುವಾದಿಸಲಾಗುತ್ತದೆ. ಪಾಂಗೊಂಗ್ ಎಂದರೆ ಲಡಾಖಿಯಲ್ಲಿ ಎತ್ತರದ ಮತ್ತು ತ್ಸೊ ಎಂದರೆ ಸರೋವರ ಎಂದರ್ಥ 14,000 ಅಡಿಗಳಷ್ಟು ಎತ್ತರದಲ್ಲಿರುವ ಈ ಸರೋವರ ಸುಮಾರು 135 ಕಿ.ಮೀ ವಿಸ್ತೀರ್ಣ ಹೊಂದಿದ್ದು ಬೆರಳಿನಾಕಾರದ ಎಂಟುಬೆಟ್ಟಗಳ ನಡುವೆ ಇದೆ.

1962 ಯುದ್ದದ ನಂತರ ಭಾರತ ಮತ್ತು ಚೀನಾ ಬೇರ್ಪಡಿಸುವ ರೇಖೆ – ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಭೂಮಿಯಂತೆಯೇ ನೀರಿನ ಮೂಲಕವೂ ಚಲಿಸಿ ಭಾರತ – ಚೀನಾ ಗಳನ್ನು ಬೇರ್ಪಡಿಸುತ್ತದೆ.

ಈ ಸರೋವರದ 45ಕಿಮಿ ಪ್ರದೇಶವನ್ನು ಭಾರತವು ನಿಯಂತ್ರಿಸುತ್ತಿದೆ ಉಳಿದ ಭಾಗ ಚೀನಾ ವಶದಲ್ಲಿದೆ.ಇದು ಕಾರಕೋಣಂ ಪರ್ವತ ಶ್ರೇಣೀಯ ಪ್ರದೇಶವಾಗಿದ್ದು ಇಲ್ಲಿ ಎಂಟು ಕಡಿದಾಧ ಬೆಟ್ಟಗಳ ಪ್ರದೇಶವಿದ್ದು ಅದನ್ನು 8ಫಿಂಗರ್ಸ್ ಎಂದು ಗುರುತಿಸಲಾಗುತ್ತದೆ.ಇದು ಸಂಪೂರ್ಣ ವಿವಾದಿತ ಪ್ರದೇಶವಾಗಿದೆ.

ಈ ಪ್ರದೇಶದಲ್ಲಿ ಗಸ್ತು ಹೆಚ್ಚು ಕಠಿಣವಾಗಿದ್ದು ಕಾಲ್ನಡಿಗೆ ಗಸ್ತು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ.ಫಿಂಗರ್‌ 4ವರೆಗೂ ಭಾರತದ ಗಡಿ ಎಂಬುದು ಭಾರತದ ವಾದವಾದರೂ ಕೈಯಲ್ಲಿರುವುದು ಫಿಂಗರ್ 2 ವರೆಗನ ಪ್ರದೇಶ ಮಾತ್ರ.2017 ರ ಡೋಕ್ಲಾಮ್ ವಿವಾದದ ಸಮಯದಲ್ಲಿ ಎರಡು ಕಡೆಯ ಸೈನಿಕರು ಈ ಪ್ರದೇಶದಲ್ಲೂ ಬಡಿದಾಡಿಕೊಂಡಿದ್ದರು.

ಚೀನಾ 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತ ಆಪರೇಷನ್‌ ವಿಜಯ್‌ಗಾಗಿ ಈ ಪ್ರದೇಶದಲ್ಲಿದ್ದ ಸೇನೆಯನ್ನು ಮರುನಿಯೋಜನೆ ಗೊಳಿಸುವ ಸಮಯದಲ್ಲಿ ಚೀನಾ ಎಲ್‌ಎಸಿಯ ಭಾರತದ ಬದಿಯಲ್ಲಿ 5 ಕಿ.ಮೀ.ವರೆಗೆ ರಸ್ತೆ ನಿರ್ಮಿಸಿತ್ತು.ಸರೋವರದ ಉದ್ದಕ್ಕೂ(ಚೀನಾ ಭಾಗದಲ್ಲಿ) ಲೋಹದ ರಸ್ತೆಯನ್ನು ನಿರ್ಮಿಸಿತು.

1962 ರ ಯುದ್ಧದ ಸಮಯದಲ್ಲಿ ಭಾರತ ಮತ್ತು ಚೀನಾ ನಡುವಿನ ಯುದ್ಧಭೂಮಿಯಲ್ಲಿ ಒಂದಾದ ಚುಸುಲ್ ಕಣಿವೆಗೆ ಬಹಳ ಹತ್ತಿರದಲ್ಲಿರುವುದರಿಂದ ಪಂಗೊಂಗ್ ತ್ಸೊ ಆಯಕಟ್ಟಿನ ನಿರ್ಣಾಯಕ ಪ್ರದೇಶವಾಗಿದೆ.

ಚೂಸುಲ್ ಕಣಿವೆಯನ್ನು ಕಾರ್ಯತಂತ್ರದ ಲಾಭವನ್ನು ಪಡೆದುಕೊಳ್ಳುವ ಮೂಲಕ ಚೀನಾ ಭಾರತದ ಕೈಯಲ್ಲಿದ ಈ ಪ್ರದೇಶದ ಕೆಲವು ಕಿಮಿಗಳನ್ನು ವಶಪಡಿಸಿಕೊಂಡಿತ್ತು .

ಪ್ಯಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ಪ್ರದೇಶಗಳಲ್ಲಿ ಚೀನಾದ ಆಕ್ರಮಣಕ್ಕೆ ಮತ್ತೊಂದು ವಿವರಣೆಯಿದೆ. ಎಲ್‌ಎಸಿ ಬಳಿ ಎಲ್ಲಿಯೂ ಭಾರತ ತನ್ನ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ.

ಇದಕ್ಕೆ ಚೀನಾ ಕೊಡುವ ಕಾರಣ ಭಾರತ ಅಕ್ಸಾಯ್ ಚಿನ್ ಮತ್ತು ಲಾಸಾ-ಕಾಶ್ಗರ್ ಹೆದ್ದಾರಿಯನ್ನು ಆಕ್ರಮಿಸಿಕೊಳ್ಳುವ ಅಪಾಯದ ಆತಂಕ ವ್ಯಕ್ತಪಡಿಸುತ್ತದೆ. ಈ ಹೆದ್ದಾರಿ ಚೀನಾ – ಪಾಕಿಸ್ಥಾನದ ಮುಖ್ಯ ಹೆದ್ದಾರಿಯಾಗಿದ್ದು ಸಿಪಿಇಸಿ(ಚೀನಾ ಪಾಕಿಸ್ಥಾನ ಎಕಾನಾಮಿಕ್‌ ಕಾರಿಡಾರ್‌)ಗೆ ಬೆನ್ನೆಲುಬಾಗಿದೆ.

ಚೀನಾದ ಪ್ರಸ್ತುತ 255 ಕಿ.ಮೀ ದೌಲತ್ ಬೇಗ್ ಓಲ್ಡಿ-ಡಾರ್ಬುಕ್-ಶಾಯೋಕ್ ರಸ್ತೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಪ್ರದೇಶ ಕರಕೋರಂ ಪಾಸ್‌ನ ತಳಭಾಗದಲ್ಲಿದೆ, ಇದು ಭಾರತದ ಕೊನೆಯ ಮಿಲಿಟರಿ ಪೋಸ್ಟ್ ಆಗಿದ್ದು. ದೌಲತ್ ಬೇಗ್ ಓಲ್ಡಿ ವಿಶ್ವದ ಅತಿ ಎತ್ತರ ಪ್ರದೇಶದ ವಾಯುನೆಲೆಯಾಗಿದೆ.

ಈ ರಸ್ತೆ ನಿರ್ಮಾಣವಾದರೆ ಲೇಹ್‌ನಿಂದ ದೌಲತ್ ಬೇಗ್ ಓಲ್ಡಿವರೆಗಿನ ಪ್ರಯಾಣದ ಸಮಯವನ್ನು ಎರಡು ದಿನಗಳಿಂದ ಆರು ಗಂಟೆಗಳಿಗೆ ಕಡಿಮೇಯಾಗುತ್ತದೆ.


ಮಾಹಿತಿ- ಕೃಪೆ:–ಇಂಡಿಯಾ ಟುಡೆ
https://www.indiatoday.in/news-analysis/story/india-china-border-dispute-pangong-tso-fingers-1685382-2020-06-04

ಹಾಗೂ ವಿವಿಧ ಜಾಲತಾಣಗಳು.

ದಂಡು ಪಾಳ್ಯದ ಮಕ್ಕಳಿಗೆ ಪೊಲೀಸ್ ಆಗುವ ಕನಸು…

ಜಿ ಎನ್ ಮೋಹನ್


“ಎಲ್ಲಿ ಒಮ್ಮೆ ಕಣ್ಣು ಮುಚ್ಚಿ’ ಎಂದರು.

ಹಣೆಯಲ್ಲಿ ನಾಮ, ಮುಖದಲ್ಲಿ ತುಂಬಿ ತುಳುಕುವ ಭಕ್ತಿ. ಸರಿ ಇನ್ನು ಕೈಜೋಡಿಸಿ ಪ್ರಾರ್ಥನೆ ಮಾಡಲು ಹಚ್ಚುತ್ತಾರೆ ಎಂದುಕೊಂಡು ನಾನು ಕಣ್ಣು ಮುಚ್ಚಿದೆ.

‘ಈಗ ಏನು ಕಾಣುತ್ತಿದೆ’ ಅಂದರು. ‘ಏನಿಲ್ಲ ಬರೀ ಕತ್ತಲೆ, ಅಂಧಕಾರ’ ಎಂದೆ. ‘ಕಣ್ಣು ಬಿಡಿ’ ಎಂದರು. ಬಿಟ್ಟೆ.

ಈಗ ಏನು ಕಾಣಿಸುತ್ತಿದೆ ಎಂದು ಕೇಳಿದರು. ಇಡೀ ಜಗತ್ತು.ಅಂದೆ.

ಅದೇ, ಅದೇ ವ್ಯತ್ಯಾಸ. ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಜಗತ್ತು, ಅಲ್ಲಿನ ಸಂಕಟ, ಹಾಗೆಯೇ ಅದಕ್ಕೆ ಬೇಕಿರುವ ಪರಿಹಾರ ಎಲ್ಲಾ ಕಾಣುತ್ತದೆ. ಆದರೆ ನಾವು ನಮ್ಮ ಕಣ್ಣು ಮುಚ್ಚಿ ಕುಳಿತಿದ್ದೇವೆ. ಎಲ್ಲೆಡೆಯೂ ಅಂಧಕಾರ ಮಾತ್ರ ಕಾಣುತ್ತಿದೆ ಎಂದರು.

ಅವರು ಮಣಿ.
ಮಣಿ ಅಲಿಯಾಸ್ ವಿ ರಾಘವಾಚಾರ್ ಮಣಿ ಅಲಿಯಾಸ್ ಮಣಿ ಅಂಕಲ್.

ಹೀಗೆ ಮಾತನಾಡುವ ವೇಳೆಗೆ ಓಡಿಬಂದ ಮಗುವೊಂದು ಅವರ ತೊಡೆಯೇರಿ ಕುಳಿತಿತು. ಇನ್ನೊಂದು ಮಗು ಅವರ ಕೊರಳು ಬಳಸಿತ್ತು. ಇನ್ನೊಂದು ಅವರ ತೋಳು ಹಿಡಿದು ಜಗ್ಗುತ್ತಿತ್ತು.

ಮತ್ತೊಂದು ಮಗದೊಂದು ನಾನು ಎಣಿಸುತ್ತಾ ಹೋದೆ. 100, 101, 102.. ಸಂಖ್ಯೆ ಬೆಳೆಯುತ್ತಲೇ ಹೋಯಿತು.

‘ಏನು ಇಷ್ಟೊಂದು ಮಕ್ಕಳು’ ಎಂದೆ. ಅವರು ಮುಖ ಬಾಡಿಸಿಕೊಂಡವರೇ ‘ಇಲ್ಲಿ ಬರೀ 170 ಮಂದಿ ಇದ್ದಾರೆ ಇನ್ನೂ 1300 ಮಕ್ಕಳು ಈ ಮನೆಯೊಳಗೆ ಸೇರಿಕೊಳ್ಳಬೇಕು ಎನ್ನುವ ಹಂಬಲ ನನ್ನದು’ ಎಂದರು.

ನನ್ನ ಶಾಕ್ ಅರಿವಾಯಿತೇನೋ.. ‘ಕರ್ನಾಟಕದ ಬೇರೆ ಬೇರೆ ಜೈಲುಗಳಲ್ಲಿ 1500 ಜೀವಾವಧಿ ಕೈದಿಗಳಿದ್ದಾರೆ. ಆ ಎಲ್ಲರ ಮಕ್ಕಳು ಹೀಗೆ ನನ್ನ ತೆಕ್ಕೆಗೆ ಬರಬೇಕು ಎನ್ನುವುದು ನನ್ನ ಕನಸು’ ಎಂದರು.

ನನಗೆ ಇನ್ನೂ ಒಂದು ಶಾಕ್ ಆಯಿತು. ಅಂದರೆ ಇಲ್ಲಿ ಹೀಗೆ ನನ್ನ ಕಣ್ಣೆದುರಿಗೆ ಆಡುತ್ತಿರುವ, ಓಡುತ್ತಿರುವ, ಕುಣಿಯುತ್ತಿರುವ ಮಕ್ಕಳೆಲ್ಲಾ…???.

‘ನಾನು ಕಣ್ಣು ಮುಚ್ಚಿಕೊಂಡಿದ್ದರೆ ಇದೆಲ್ಲಾ ಆಗುತ್ತಲೇ ಇರಲಿಲ್ಲವೇನೋ, ನಾನು ಕಣ್ಣು ಬಿಟ್ಟು ಜಗತ್ತು ನೋಡಿದ ಕಾರಣ ಆಯಿತು’ ಎಂದರು.

ಹೀಗೆ ಕೈದಿಗಳ ಮಕ್ಕಳೊಡನೆ ಬದುಕು ನಡೆಸಬೇಕು ಎಂದು ಯಾವ ನ್ಯಾಯಾಲಯವೂ ಅವರಿಗೆ ಯಾವ ಆದೇಶವನ್ನೂ ನೀಡಿರಲಿಲ್ಲ. ಆದರೆ ಈ ಮಣಿ ಅಂಕಲ್ ತಾವೇ ತಾವಾಗಿ ಕೈದಿಗಳ ಬದುಕಿನೊಳಗೆ ನಡೆದುಕೊಂಡು ಬಂದುಬಿಟ್ಟಿದ್ದರು.

ಮಣಿ ಅವರ ಮನೆ ಇರುವುದು ರಾಜಾಜಿನಗರದಲ್ಲಿ. ಕೆಲಸ ರಿಸರ್ವ್ ಬ್ಯಾಂಕ್ ನಲ್ಲಿ.

ಪ್ರತೀ ದಿನ ಕೆಲಸಕ್ಕೆ ಹೋಗುವಾಗ ಅವರ ಕಿವಿಗೆ ಹೆಂಗಸರು ಮಕ್ಕಳ ಅಳುವ ಶಬ್ದ ಕೇಳಿಸುತ್ತಿತ್ತು. ಏನಿದು ಹೀಗೆ ಎಂದು ತಿರುಗಿ ನೋಡಿದರೆ ಅದು ಸೆಂಟ್ರಲ್ ಜೈಲು.

ಜೀವಾವಧಿ ಶಿಕ್ಷೆಗೊಳಗಾಗಿದ್ದ ಗಂಡನನ್ನು ಕಾಣಲು ಮಕ್ಕಳೊಡನೆ ಬಂದ ಹೆಂಗಸರು ಅಲ್ಲಿ. ಅಪ್ಪ ಕಂಡ ತಕ್ಷಣವೇ ಕಣ್ಣೀರಿನ ಅಲೆ.

ಪ್ರತೀ ದಿನ ಅದೇ ಜೈಲು, ಅದೇ ಅಳು. ಆದರೆ ಮಕ್ಕಳು ಮಾತ್ರ ಬೇರೆ ಬೇರೆ.

ಆಗ ಮಣಿ ಅವರಿಗೆ ಅನಿಸಿತು ಮಕ್ಕಳಿಗೇಕೆ ಈ ಶಿಕ್ಷೆ. ಇದು ಒಂದು ದಿನದ ಹೊಯ್ದಾಟವಲ್ಲ ಹಲವು ವರ್ಷಗಳ ಕಾಲ ಇವರ ಮನಸ್ಸು ಮಕ್ಕಳ ಅಳುವಿನಿಂದ ಕುಸಿದು ಹೋಗಿತ್ತು.

ತಾವು ರಿಸರ್ವ್ ಬ್ಯಾಂಕ್ ನಿಂದ ನಿವೃತ್ತಿಯಾದಾಗ ಕೈಗೆ ಒಂದಷ್ಟು ಹಣ ಬಂದದ್ದೇ ತಡ ಇವರ ಕನಸಿಗೆ ರೆಕ್ಕೆ ಬಂತು. ಪತ್ನಿ ಸರೋಜಿಯವರೊಡನೆ ತಮ್ಮ ನೋವು ಹಂಚಿಕೊಂಡರು.

ಅಷ್ಟೇ ಆ ನಂತರ ಇಬ್ಬರೂ ತಿರುಗಿ ನೋಡಲಿಲ್ಲ. ‘ಸೋಕೇರ್ ಇಂಡ್’ (So Care Ind) ಹುಟ್ಟಿದ್ದು ಹೀಗೆ.

ನನ್ನ ಕೈ ಹಿಡಿದಿದ್ದ ಪುಟಾಣಿಯೊಬ್ಬ ತನ್ನ ಕನಸುಗಳನ್ನು ಬಿಚ್ಚಲು ಆರಂಭಿಸಿದ.

‘ನಾನು ದೊಡ್ದವನಾದ ಮೇಲೆ ಪೋಲೀಸ್ ಆಫೀಸರ್ ಆಗ್ತೀನಿ’ ಅಂದ. ನಾನು ಅವನ ಕಣ್ಣುಗಳನ್ನೇ ದಿಟ್ಟಿಸಿದೆ. ಅವನ ಕಣ್ಣೊಳಗೆ ದೃಢವಾದ ಆತ್ಮವಿಶ್ವಾಸವಿತ್ತು. ಅಂದುಕೊಂಡದ್ದನ್ನು ಸಾಧಿಸುವ ಛಲ ಇಣುಕುತ್ತಿತ್ತು.

ಆತ ದಂಡು ಪಾಳ್ಯದ ಗ್ಯಾಂಗ್ ನ ಕೂಸು. ಹುಟ್ಟಿದ್ದು ಜೈಲಿನೊಳಗೆ. ಕಣ್ಣು ಬಿಟ್ಟ ತಕ್ಷಣ ಕಂಡದ್ದು ಪಾತಕಿಗಳ ಲೋಕ. ಕೊಲೆ ಸುಲಿಗೆ ದರೋಡೆ, ಹತ್ಯೆ ಹೀಗೆ ನೊರೆಂಟು ಕಾರಣಗಳಿಗೆ ಕೈಕೋಳ ತೊಡಿಸಿಕೊಂಡು ಸರಳುಗಳ ಹಿಂದಿರುವ ಜನ. ಬಂಧೀಖಾನೆಯೊಳಗೆ ತೆವಳಿದ, ಅಂಬೆಗಾಲಿಟ್ಟ ಈ ಮಗು ಈಗ ಮಣಿ ದಂಪತಿಗಳ ಅಂಗಳದಲ್ಲಿ ನಿಂತಿತ್ತು.

ಯಾವ ಲೋಕದೊಳಗೆ ಈ ಮಗು ಅರಳಿತ್ತೋ ಆ ಲೋಕಕ್ಕೆ ವಿರುದ್ಧವಾಗಿ ಬೆಳೆದು ನಿಲ್ಲಲು ಪ್ರಯತ್ನಿಸಿತ್ತು. ಅದಕ್ಕೆ ಮಣಿ ಎಂಬ ಮಿಣಿ ಮಿಣಿ ಬೆಳಕು ಆಸರೆಯಾಗಿ ಸಿಕ್ಕಿತ್ತು.

ಅಲ್ಲಿದ್ದ ಮಕ್ಕಳು ಶಬ್ದ ಸಾಗರವನ್ನೇ ಸೃಷ್ಟಿಸುತ್ತಿದ್ದರು, ಕಾಲನಿಗೂ ಕಾಲು ಬಂದಂತಿತ್ತು.

ನನ್ನ ಭುಜದ ಮೇಲೆ ಕೈ ಇಟ್ಟ ಮಣಿ ‘ಇಲ್ಲಿರುವ ಮಕ್ಕಳಲ್ಲಿ ಬಹುತೇಕ ಎಲ್ಲರೂ ಕೊಲೆಗಳನ್ನು ಕಂಡಿದ್ದಾರೆ. ತನ್ನ ತಂದೆಯೇ ತಾಯಿಯನ್ನು ಕತ್ತು ಹಿಸುಕಿ ಕೊಂದ, ಬೆಂಕಿ ಹಚ್ಚಿದ, ತಲೆ ಒಡೆದು ಸಾಯಿಸಿದ್ದನ್ನು ಕಂಡಿದ್ದಾರೆ. ಇನ್ನು ಕೆಲವರು ತಾಯಿಯೇ ತಂದೆಯ ಕೊಲೆ ಮಾಡಿದ್ದನ್ನು ಕಂಡಿದ್ದಾರೆ’.

‘ಅಗೋ ಅಲ್ಲಿ’ ಎಂದವರೇ ಮುಗ್ದತೆಯನ್ನೇ ಮೈಯಾಗಿಸಿಕೊಂಡಿದ್ದ ಒಬ್ಬ ಹುಡುಗಿಯತ್ತ ಬೆರಳು ತೋರಿಸಿದರು.

‘ಆಕೆ ನಿನ್ನೆ ತಾನೇ ನ್ಯಾಯಾಲಯಕ್ಕೆ ಹೋಗಿ ತನ್ನ ತಂದೆ ತನ್ನ ತಾಯಿಗೆ ಬೆಂಕಿ ಹಚ್ಚಿದ್ದನ್ನು ವಿವರಿಸಿ ಬಂದಿದ್ದಾಳೆ. ಆ ಕೊಲೆಯಲ್ಲಿ ಈಕೆಯೇ ಪ್ರಮುಖ ಸಾಕ್ಷಿ’ ಎಂದರು.

ನಾನು ಆ ಹುಡುಗಿಯತ್ತ ನೋಡಿದೆ. ಕೆಲವೇ ಕ್ಷಣಗಳ ಹಿಂದೆ ಆಕೆ ನನ್ನೊಡನೆ ‘ನಾನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೀನಿ’ ಅಂದಿದ್ದಳು.

ಬೆಂಕಿ ಕಂಡು ತತ್ತರಿಸಿ ಹೋಗಿದ್ದ ಹುಡುಗಿ ಈಗ ಬೆಂಕಿಗಲ್ಲ, ಇಡೀ ಸಮಾಜದ ನೋವಿಗೇ ಮುಲಾಮು ಹಚ್ಚುವ ವೈದ್ಯೆಯಾಗಲು ಬಯಸಿದ್ದಳು.

‘ಪ್ರಾರ್ಥಿಸುವ ತುಟಿಗಳಿಗಿಂತ ಕೆಲಸ ಮಾಡುವ ಕೈಗಳು ದೊಡ್ಡದು ಅಲ್ಲವೇ?’ ಎಂದರು.

ಮಣಿ ಅವರಿಗೇನೋ ಕರುಳು ಕರಗಿತ್ತು ಆದರೆ ಅವರು ನಡೆದ ಹಾದಿಯೇನೂ ಸುಲಭದ್ದಾಗಿರಲಿಲ್ಲ. ಪ್ರತೀ ಬಂದೀಖಾನೆ ಸುತ್ತಿದರು ನ್ಯಾಯಾಲಯದ ಅಂಗಳದಲ್ಲಿ ನಿಂತರು.

‘ಪ್ರತಿಯೊಬ್ಬ ಕೊಲೆಗಾರ ಸಹಾ ಸಮಾಜದ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿರುತ್ತಾನೆ. ಸಮಾಜ ಹೀಗಿರುವುದಕ್ಕೇ ನಾನು ಹೀಗಾದೆ ಎಂದು ನಂಬಿಸಿಕೊಳ್ಳಲು ಯತ್ನಿಸುತ್ತಿರುತ್ತಾನೆ. ಆದರೆ ಸಮಾಜಕ್ಕೆ ಕರುಣೆಯ ಕಣ್ಣಿದೆ ಎನ್ನುವುದನ್ನು ತಿಳಿಸಲು ನಾನು ಈ ಎಲ್ಲವನ್ನೂ ಮಾಡುತ್ತಿದ್ದೇನೆ. ಇದರಿಂದ ಆ ಕೊಲೆಗಾರನೊಳಗಿರುವ ಕ್ರೋಧ ಒಂದಿಷ್ಟು ಕಡಿಮೆಯಾದರೂ ಸಮಾಜಕ್ಕೆ ಎಷ್ಟೋ ಆರೋಗ್ಯ ಸಿಕ್ಕಿದಂತಲ್ಲವೇ?’ ಎಂದು ಪ್ರಶ್ನಿಸಿದರು.

ನಾನು ಕುಳಿತ ಜಾಗ ನೋಡಿಕೊಂಡೆ. ಅದು ಅತಿಥಿ ಕೊಠಡಿ.

ಜೈಲಿನಿಂದ ಪೆರೋಲ್ ಮೇಲೆ ಆಚೆ ಬರುವ ಕೈದಿಗಳು ತಮ್ಮ ಮಕ್ಕಳನ್ನು ನೋಡಲು ಇಲ್ಲಿಗೆ ಬರುತ್ತಾರೆ

ಈ ಕೋಣೆ ಹಲವು ಕಥೆಗಳಿಗೆ ಸಾಕ್ಷಿಯಾಗಿದೆ. ಮಗು ಬೆಳೆದ ರೀತಿ, ಅದರ ಕಣ್ಣಲ್ಲಿನ ವಿಶ್ವಾಸ, ಅಪ್ಪನೆಡೆಗೆ ಇನ್ನೂ ಉಳಿಸಿಕೊಂಡಿರುವ ಪ್ರೀತಿ ಕೈದಿಗಳ ಕಣ್ಣು ತುಂಬುವಂತೆ ಮಾಡುತ್ತದೆ. ಇನ್ನೆಂದೂ ನಾನು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಬಿಕ್ಕಿದವರು ಇದ್ದಾರೆ.

ಹಾಗೆ ಮಣಿ ಅವರು ಹೇಳುತ್ತಿರುವಂತೆಯೇ ಆಚೆ ಯಾವುದೋ ವಾಹನ ಬ್ರೇಕ್ ಹಾಕಿದ ಸದ್ದು. ಹೊರಗೆ ನೋಡಿದೆ. ಮಕ್ಕಳು ‘ಹೋ’ ಎನ್ನುತ್ತ ಆಟೋ ಹತ್ತುತ್ತಿದ್ದರು.

ನೀಟಾದ ಯೂನಿಫಾರ್ಮ್, ಮುಖಕ್ಕೆ ಒಂದು ಚಂದನೆಯ ನಗು. ‘ಯಾವ ಶಾಲೆಗೆ ಹೋಗುತ್ತಾರೆ’ ಎಂದು ಕೇಳಿದೆ. ಮಣಿ ಯಾವ ಶಾಲೆಯ ಹೆಸರೂ ಬಿಟ್ಟುಕೊಡಲಿಲ್ಲ

‘ಇವರೆಲ್ಲಾ ಎಲ್ಲಾ ಪ್ರತಿಷ್ಠಿತರ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೋ ಅಲ್ಲಿಯೇ ಕಲಿಯುತ್ತಿದ್ದಾರೆ.’

‘ನಾವು ಅರ್ಜಿ ಹಿಡಿದು ಶಾಲೆ ಶಾಲೆ ಸುತ್ತುತ್ತೇವೆ. ಎಲ್ಲವನ್ನೂ ಬಿಡಿಸಿಹೇಳುತ್ತೇವೆ. ಮಕ್ಕಳನ್ನು ಪ್ರತ್ಯೇಕಿಸಿ ಇಟ್ಟರೆ ಅವರೂ ಮುಂದೆ ಒಬ್ಬ ಅಪರಾಧಿಯಾಗಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗುವುದು ಬೇಡ ಎನ್ನುತ್ತೇವೆ.’

‘ಬಹುತೇಕ ಎಲ್ಲಾ ಶಾಲೆಗಳೂ ನಮ್ಮ ಮನವಿಗೆ ಸ್ಪಂದಿಸಿವೆ. ಅಷ್ಟೇ ಅಲ್ಲ ಫೀಸ್ ನಲ್ಲಿ ರಿಯಾಯಿತಿಯನ್ನೂ ಕೊಟ್ಟಿವೆ’ ಎಂದರು.

‘ಮಕ್ಕಳ ಹಿನ್ನೆಲೆಯನ್ನು ಮಾತ್ರ ಬಹಿರಂಗಪಡಿಸಬೇಡಿ ಎಂದು ನಾವು ಅವರಿಗೆ ಕೇಳಿಕೊಳ್ಳುತ್ತೇವೆ’ ಎಂದರು.

‘ಆದರೂ ತರಗತಿಗಳಲ್ಲಿ ಕಥೆ ಹೇಳುವಾಗ, ಪಾಠ ಮಾಡುವಾಗ ಕಳ್ಳ ಕಾಕರ, ಕೊಲೆಗಾರರ ಕಥೆ ಬರುತ್ತದೆ. ಹಾಗೆ ಬಂದಾಗ ಈ ಮಕ್ಕಳು ಏನೂ ಹೇಳದೆ ಹೇಗೆ ತಲ್ಲಣಿಸಿಹೋಗುತ್ತಾರೋ ಎಂದು ನನಗೆ ಭಯವಾಗುತ್ತದೆ’ ಎನ್ನುವಾಗ ಸದಾ ನಗುವ, ಹಾಸ್ಯ ಮಾಡುತ್ತಲೇ ಇರುವ ಮಣಿಯವರ ಕಣ್ಣು ಸಹಾ ಒದ್ದೆಯಾಗಿತ್ತು.

ತಕ್ಷಣ ಚೇತರಿಸಿಕೊಂಡವರೇ ‘ಅಗೋ ಅಲ್ಲಿ ನೋಡಿ’ ಎಂದರು. ಒಬ್ಬ ಹುಡುಗಿಯತ್ತ ಬೆಟ್ಟು ಮಾಡಿದವರೇ ‘ಆಕೆ ತನ್ನ ತರಗತಿಯ 48 ಮಕ್ಕಳ ಪಾಕಿ 5ನೇ rank ಪಡೆದಿದ್ದಾಳೆ’ ಎಂದರು.

ಹಾಗೆ ಹೇಳುವಾಗ ಅವರೊಳಗೊಬ್ಬ ಜವಾಬ್ದಾರಿಯುತವಾದ ತಂದೆ ಎದ್ದು ಕುಳಿತಿದ್ದ.

‘ನಾನು ಆ ಕೈದಿಗಳು ಎಂದೆಂದೂ ಕೊಡಲಾಗದ ಒಂದನ್ನು ಈ ಮಕ್ಕಳಿಗೆ ಕೊಟ್ಟೆ- ಅದು ಸ್ವಾತಂತ್ರ್ಯ’ ಎಂದರು.

ಮಕ್ಕಳು ಬೆಳೆಯುತ್ತ ಹೋಗುತ್ತಿದ್ದಾರೆ . ಅವರ ಖರ್ಚು ವೆಚ್ಚ ಸಹಾ ಬೆಳೆಯುತ್ತಲೇ ಇದೆ. ಹಾಗೆಯೇ ಮಕ್ಕಳ ಸಂಖ್ಯೆಯೂ ಏರುತ್ತಿದೆ. ಇಡೀ ಸಂಸ್ಥೆಯನ್ನು ಅನುಭವಿ ಟ್ರಸ್ಟಿಗಳ ತಂಡ ಮುನ್ನಡೆಸುತ್ತಿದೆ. ಶೃಂಗೇರಿಯ ಶಾರದಾ ಪೀಠ ಬೆನ್ನಿಗೆ ನಿಂತಿದೆ. (socareind.org) (080-23321864, 23329774)
——
ಅಂತಹ ಮಣಿ, ಮಕ್ಕಳ ಪ್ರೀತಿಯ ಅಂಕಲ್ ಮಣಿ ಕೆಲವು ವರ್ಷಗಳ ಹಿಂದೆ ಇಲ್ಲವಾಗಿ ಹೋದರು.

ಮಣಿ- ಸರೋಜಿ ದಂಪತಿಗಳೊಡನೆ ಕಳೆದ ಹಲವು ದಿನಗಳು ನೆನಪಿಗೆ ಬಂತು. ಆ ಮಕ್ಕಳು ನೆನಪಾದರು, ಪೋಲೀಸ್ ಅಧಿಕಾರಿ ಆಗುತ್ತೇನೆ, ಡಾಕ್ಟರ್ ಆಗುತ್ತ್ತೇನೆ, ಮಾಸ್ತರ್ ಆಗುತ್ತೇನೆ ಅನ್ನುತ್ತಾ ಇದ್ದ ಮಕ್ಕಳು. ನಾನು ಹೊರಡುವಾಗ ‘ನೀವು ಎಲ್ಲಿಂದ ಬಂದಿರಿ?’ ಎಂದು ಕೇಳಿದ್ದರು.

‘ಬದುಕು ಬಂದೀಖಾನೆ’ ಯಿಂದ ಎನ್ನುವ ಮಾತು ನಾಲಿಗೆಯ ತುದಿವರೆಗೆ ಬಂದಿತ್ತು.

‘ನನಗೂ ನಿನಗೂ ಹೃದಯದ ಬಾಗಿಲು ತೆರೆದವರೇ ಇಲ್ಲ’ ಎನ್ನುವ ಎಕ್ಕುಂಡಿಯವರ ಕವಿತೆಯ ಸಾಲುಗಳನ್ನು ಮಣಿ ಸುಳ್ಳು ಮಾಡಿ ಹಾಕಿದ್ದರು.