Saturday, May 9, 2026
Google search engine
Home Blog Page 211

ಓ ಮೋಡಣ್ಣಾ, ನಾನೂ ಬರುವೆನು ಕೈ ನೀಡಣ್ಣಾ..’

ಜಿ ಎನ್ ಮೋಹನ್


‘ಇನ್ನೇನು ಹನಿಯೊಡೆದು ನೆಲಕ್ಕುರುಳಿಯೇ ಸೈ ‘ ಎನ್ನುವಂತಿದ್ದ ಆಕಾಶ ನೋಡಿ ನನ್ನ ಎದೆ ಢವಗುಟ್ಟತೊಡಗಿತು.

ಆಗಲೇ ಸೂರ್ಯ ಇನ್ನೇನು ನಾನು ಮುಳುಗಿಯೇ ಸಿದ್ಧ ಎಂದು ವರಾತ ಆರಂಭಿಸಿದ್ದ. ನನ್ನ ಕೈಲ್ಲಿದ್ದ ಕ್ಯಾಮರಾ ನನ್ನನ್ನು ಸುಮ್ಮನೆ ಕೂರಲುಬಿಟ್ಟಿರಲಿಲ್ಲ.

ಎಲ್ಲರೂ ‘ಗುಮ್ಮಟನಗರಿ’ಯಲ್ಲಿ ಗೋಳಗುಮ್ಮಟ ನೋಡಲು ಹೆಜ್ಜೆ ಹಾಕುತ್ತಿದ್ದರೆ ನಾನು ಅವರ ವಿರುದ್ಧ ದಿಕ್ಕು ಹಿಡಿದಿದ್ದೆ.

ವಿಜಾಪುರದ ಹೊರ ವಲಯದಲ್ಲಿ ನಿರ್ಮಿತಿ ಕೇಂದ್ರ ಮಳೆ ನೀರು ಸಂಗ್ರಹಣೆಯ ಬಗ್ಗೆಯೇ ಒಂದು ಪಾರ್ಕ್ ರೂಪಿಸಿತ್ತು.

ವಿಶಾಲ ಅಂಗಳದಲ್ಲಿ ಎತ್ತ ಕಣ್ಣು ಹಾಯಿಸಿದರೂ ಮಳೆ ನೀರನ್ನು ಹೇಗೆಲ್ಲಾ ಸಂಗ್ರಹಿಸಬಹುದು ಎಂದು ಹೇಳುವ ಶಿಲ್ಪಗಳು.

ಆಗ ನನಗೆ ಕಂಡದ್ದು ಒಂದು ದೊಡ್ಡ ಕೊಡಪಾನವನ್ನು ನೇರವಾಗಿ ಆಕಾಶಕ್ಕೆ ಎತ್ತಿ ಹಿಡಿದ ಆ ಮೂರು ಜನರ ಶಿಲ್ಪ! ಆಗಸದಲ್ಲಿ ಆಗಲೇ ಮಳೆ ಹೊತ್ತ ಮೋಡಗಳು ಆ ಕೊಡಪಾನದೊಳಗೇ ಜಾರಿ ಬೀಳುವಂತೆ ಚಿನ್ನಾಟವಾಡತೊಡಗಿತ್ತು.

ಅವರ ಚಿತ್ರ ತೆಗೆಯಬೇಕೆಂದರೆ ನಾನು ನೇರಾನೇರ ನೆಲದ ಮೇಲೆಯೇ ಮಲಗಬೇಕು. ನಾನು ಹಾಗೆ ಮಲಗಿ ಕ್ಯಾಮರಾ ಕ್ಲಿಕ್ಲಿಸಿದ್ದೇ ತಡ 94ದೇಶಗಳ 30 ಸಾವಿರ ಮಂದಿ ಇದು stratocumulus ಎಂದು ಕೂಗಿ ಹೇಳಿದರು.

ಕುಪ್ಪಳ್ಳಿಯಲ್ಲಿದ್ದೆ.

ಕುವೆಂಪು ಅವರು ಚಿರ ನಿದ್ರೆಯಲ್ಲಿರುವ ತಾಣವೇ ಹಾಗಿದೆ. ಎಂಥಹವರನ್ನೂ ಕೈಬೀಸಿ ಕರೆಯುತ್ತದೆ, ನಿಸರ್ಗಕ್ಕೆ ಚೌಕಟ್ಟು ಹಾಕುವಂತೆ ಕೆ ಟಿ ಶಿವಪ್ರಸಾದ್ ಬೃಹತ್ ಶಿಲೆಗಳವಿನ್ಯಾಸ ರೂಪಿಸಿದ್ದರು.

ಅವನ್ನು ಹೇಗಾದರೂ ವಿಶಿಷ್ಠವಾಗಿಸಬೇಕಲ್ಲಾ ಎಂದು ನಾನು ಆ ಕಲ್ಲಿನ ಶಿಲ್ಪವನ್ನು ನೀಲಾಕಾಶದ ಹಿನ್ನೆಲೆ ಬರುವಂತೆ ಹೊಂದಿಸಿಕೊಂಡೆ. ಕ್ಲಿಕ್… ಅದೇ 94 ದೇಶಗಳ 30 ಸಾವಿರ ಮಂದಿ ಇದನ್ನು cumulus ಎಂದು ಬಣ್ಣಿಸಿ ಹೇಳಿದರು.

ಯಾವುದೇ ಒಂದು ಪೋಟೋ ನೋಡಿದರೆ ಸಾಕು ಇದರ ಫ್ರೇಮ್ ಹೇಗಿದೆ, ಕ್ಯಾಮೆರಾ ಕೋನ ಹೇಗಿರಬೇಕಾಗಿತ್ತು, ಅಪರ್ಚರ್, ಎಕ್ಸ್ಪೋಷರ್ ಹೀಗೆ ಮಾತ್ರ ಪಾಠ ಕೇಳಿ ಗೊತ್ತಿದ್ದ ನಾನು ಇದೇನಪ್ಪಾ ಎಂದು ದಂಗಾಗಿ ಹೋಗಿದ್ದೆ.

ಆದರೆ ಅಷ್ಟೂ ದೇಶಗಳ, ಅಷ್ಟೂ ಜನರು ಮಾತನಾಡುತ್ತಿದ್ದುದು ನನ್ನ ಪೋಟೋಗಳ ಬಗ್ಗೆ ಅಲ್ಲ, ನನ್ನ ಫೋಟೋಗಳ ಸೌಂದರ್ಯದ ಬಗ್ಗೆ ಅಲ್ಲ, ಪೋಟೋದಲ್ಲಿ ಏನು ಸೆರೆ ಹಿಡಿಯಲು ಯತ್ನಿಸಿದ್ದೆ ಎನ್ನುವುದರ ಬಗ್ಗೆ ಅಲ್ಲ, ಆದರೆ ಆ ಪೋಟೋದಲ್ಲಿ ಕಾಣಿಸುತ್ತಿದ್ದ ಮೋಡಗಳ ಬಗ್ಗೆ…

ಇವರೇ ‘ಮೋಡಾಡಿಗಳು’

ಎಲ್ಲಿ ಮೋಡ ಕಂಡರೂ ಬಿಟ್ಟ ಕಣ್ಣು ಬಿಟ್ಟಂತೆ ನಿಲ್ಲುವವರು. ಮೋಡಕ್ಕೆ ಕ್ಯಾಮರಾ ಗುರಿ ಇಡುವವರು. ಯಾವ ಮೋಡ, ಎಷ್ಟು ದಪ್ಪ, ಯಾವ ಯಾವ ದೇಶದಲ್ಲಿ ಈ ಮೋಡ ಕಾಣುತ್ತದೆ ಎಂದು ಲೆಕ್ಕ ಹಾಕುವವರು. ಮೋಡದಲ್ಲಿರುವ ನೀರ ಹನಿಗಳೆಷ್ಟು ಎಂದು ಕರಾರುವಕ್ಕಾಗಿ ಹೇಳಬಲ್ಲವರು. ಪ್ರತೀದಿನ ಆಕಾಶಕ್ಕೇ ಕಣ್ಣು ನೆಟ್ಟು ಕೂರುವವರು.

ಆರ್ಥಾತ್ ಮೋಡದ ಪ್ರೇಮಿಗಳು.

ಇಂಗ್ಲೆಂಡ್ ನ ಸಾಮರ್ ಸೆಟ್ ನಲ್ಲಿರುವ ಗಾವಿನ್ ಪ್ರೆಟೋರ್ ಪಿನ್ನೆಗೆ ಒಂದು ದಿನ ಮೋಡದ ಬಗ್ಗೆ ಉಪನ್ಯಾಸ ನೀಡುವಂತೆ ಸಾಹಿತ್ಯ ಸಮ್ಮೇಳನವೊಂದರ ಸಂಘಟಕರಿಂದ ಆಹ್ವಾನ ಬಂತು.

ನಮ್ಮ ಕಾಳಿದಾಸನ ಮೇಘದೂತ, ಕವಿಗಳ ಮೋಡದ ನಂಟುವಿನಂತಹ ವಿಷಯಗಳು ಇಂಗ್ಲಿಶ್ ಸಾಹಿತ್ಯದಲ್ಲಿ ಏನೇನಿದೆಯೋ ಅದನ್ನೆಲ್ಲಾ ಹುಡುಕಿ ಗಾವಿನ್ ಮಾತನಾಡಬೇಕಿತ್ತು.

ಮೋಡದ ಬಗ್ಗೆ ಭಾಷಣಾನಾ ಅಂತ ಬಿಟ್ಟ ಕಣ್ಣು ಬಿಟ್ಟ ಗಾವಿನ್ ಭಾಷಣ ತಯಾರಿಗೆ ಕೂತರು. ಅರೆ! ಎಷ್ಟು ತಿಳಿದರೂ ಮುಗಿಯದ ವಿಷಯ ಮೋಡದಲ್ಲಿದೆ ಎಂದು ಅವರಿಗೆ ಗೊತ್ತಾಗಿ ಹೋಯಿತು.

ಸರಿ ಮೋಡಕ್ಕೆ ಇವರು ಅಂಟಿಕೊಂಡರೋ ಇಲ್ಲಾ ಮೋಡವೇ ಇವರನ್ನು ಆಂಟಿಸಿಕೊಂಡಿತೋ ಅಂತೂ ಅಂದಿನಿಂದ ಗ್ರಾವಿನ್ ಗೆ ಮೋಡದ್ದೇ ಗುಂಗು. ಹಾಗಾಗಿ Cloud spotters guide ಬರೆದರು.

ಒಂದು ದಿನ ತನ್ನಂತೆ ಮೋಡದ ಹುಚ್ಚರು ಇನ್ನೂ ಸಾಕಷ್ಟಿರಬಹುದಲ್ಲಾ ಎನ್ನುವ ಯೋಚನೆ ಬಂದದ್ದೇ ತಡ Cloud Lovers, Unite! ಎನ್ನುತ್ತಾ ಕ್ಲೌಡ್ ಆಪ್ರಿಶಿಯೇಷನ್ ಸೊಸೈಟಿ ರೂಪಿಸಿಯೇಬಿಟ್ಟರು. (cloudappreciationsociety.org).

‘ಓ ಮೋಡಣ್ಣಾ, ಓ ಮೋಡಣ್ಣಾ ನಾನೂ ಬರುವೆನು ಕೈ ನೀಡಣ್ಣಾ..’ ಎನ್ನುತ್ತಾ ಒಬ್ಬರ ಹಿಂದೆ ಒಬ್ಬರು ಅಮೇರಿಕಾದಿಂದ ಜಪಾನ್ ವರೆಗೆ ಫಿಜಿ, ಭೂತಾನ್, ಕೆನ್ಯ, ವಿಯಟ್ನಾಂ ಹೀಗೆ 94ದೇಶಗಳಿಂದ ಮೋಡದ ಹುಚ್ಚರು ಮೋಡದ ಈ ತಾಣವನ್ನು ಸೇರಿಯೇಬಿಟ್ಟರು.

ವಿಜಾಪುರ ಹಾಗೂ ಕುಪ್ಪಳ್ಳಿಯ ನನ್ನ ಪೋಟೋ ಈ ತಾಣ ತಲುಪಿದ್ದೇ ತಡ ಕೊಡಪಾನದ ಮೇಲೆ ತೂಗಾಡುತ್ತಿದ್ದ ಮಳೆ ಹೊತ್ತ ಆ ಭಾರೀ ಕಪ್ಪು ಮೋಡಗಳು ಅವರ ಕಣ್ಣು ಸೆಳೆಯಿತು.

ಕುಪ್ಪಳ್ಳಿಯ ನೆತ್ತಿಯಲ್ಲಿ ಮಟ ಮಟ ಮಧ್ಯಾಹ್ನ ತೂಗುತ್ತಿದ್ದ ಹಿಂಜಿದ ಹರಳೆಯ ಆ ಬಿಳಿ ಮೋಡ ಸಹಾ ಈ ಕೂಟದ ಚರ್ಚೆಗೆ ವಸ್ತುವಾಯಿತು.

ಕೊನೆಗೆ ಈ ಮೋಡ stratocumulus, cumulus ಮೋಡಗಳು ಎಂದು ಗುರುತಿಸಿ ಹೇಳಿದ್ದೇ ನಾನು ಗೂಗಲ್ ನ ಮೊರೆ ಹೊಕ್ಕೆ, ಮೋಡದ ಪುಸ್ತಕಗಳನ್ನು ಕೊಂಡೆ.

ಆಗಲೇ ನನಗೆ ಗೊತ್ತಾಗುತ್ತಾ ಹೋದದ್ದು ಮೋಡದ ಗಾತ್ರ, ಅದು ಇರುವ ಎತ್ತರದ ಮೇಲೆ ಮೋಡಗಳನ್ನು ವರ್ಗೀಕರಿಸುತ್ತಾ ಹೋಗುತ್ತಾರೆ.

ಯಾವುದೇ ಮೋಡವಾದರೂ ಅದು ವಿಶ್ವ ಸಂಸ್ಥೆಯ ವಿಶ್ವ ಪವನಶಾಸ್ತ್ರ ವಿಭಾಗದ ಮನ್ನಣೆ ಪಡೆದಿರಬೆಕು. ಈ ಮೋಡಗಳಿಗೆಲ್ಲಾ ಲ್ಯಾಟಿನ್ ಹೆಸರು ನೀಡಿದ್ದಾರೆ.

ಹೀಗೆ ಮೋಡಕ್ಕೂ ಹೆಸರು ಕೊಡಲು ಚಾಲನೆ ನೀಡಿದ್ದು ಇಂಗ್ಲೆಂಡ್ ನಲ್ಲಿದ್ದ ಒಬ್ಬ ಔಷಧ ಶಾಸ್ತ್ರಜ್ಞ. 19ನೆಯ ಶತಮಾನದಲ್ಲಿ ಮೋಡಗಳ ನಾಮಕರಣ ಆರಂಭವಾಯಿತು ಅಂತ.

ನೋಡಲು ಒಂದು ಅರಳೆ ಮೂಟೆಯಂತೆ ಕಾಣುವ ಮೋಡ 80ಆನೆಯಷ್ಟು ತೂಕವಿರುತ್ತದೆ. ಗುಡುಗು ಮಿಂಚು ಹೊತ್ತು ತರುವ ಮೋಡಗಳಂತೂ ಎವರೆಸ್ಟ್ ಶಿಖರಕ್ಕಿಂತ ಎರಡು ಪಟ್ಟು ಎತ್ತರ ಇರುತ್ತದೆ.

‘ಆಕಾಶ ನೋಡೋಕೆ ನೂಕುನುಗ್ಗಲೇ…’ ಎನ್ನುವ ಮಾತನ್ನಂತೂ ಕ್ಲೌಡ್ ಅಪ್ರಿಶಿಯೇಷನ್ ಸೊಸೈಟಿ ಸುಳ್ಳು ಮಾಡಿ ಹಾಕಿದೆ. ಜಗತ್ತಿನಾದ್ಯಂತ ಇಂದು ಸಾವಿರಾರು ಜನ ಬಿಟ್ಟ ಕಣ್ಣು ಬಿಟ್ಟುಕೊಂತ ಆ ಆಕಾಶ ನೋಡುತ್ತಿದ್ದಾರೆ.

ಕ್ಯಾಮರಾ ಹೊತ್ತು ತಿರುಗುತ್ತಾ, ಸಿಕ್ಕ ಸಿಕ್ಕ ಮೋಡಗಳನ್ನು ಸೆರೆಹಿಡಿಯುವ, ಇಂತಹ ಮೋಡಗಳೇ ಬೇಕು ಎಂದು ಕಾದು ಕೂತು ಕಾಡಲ್ಲಿ ಹುಲಿ ಚಿತ್ರ ತೆಗೆಯುವಂತೆ ದಿನಗಟ್ಟಲೆ ತಪಸ್ಸು ಮಾಡಿ ಅವರೂಪದ ಪೋಟೋ ಕ್ಲಿಕ್ಕಿಸುವ ಛಾಯಾಗ್ರಾಹಕರು ಇಲ್ಲಿದ್ದಾರೆ.

ಮೋಡ ಎನ್ನುವುದೇ ಒಂದು ಆರ್ಟ್ ಗ್ಯಾಲರಿ. ದಿನಕ್ಕೊಂದು ಕಲಾಕೃತಿ ಆಗಸದಲ್ಲಿ ಮೂಡುತ್ತಾ ಹೋಗುತ್ತದೆ. ಆ ಬಣ್ಣದ ಮಿಶ್ರಣ, ಅಷ್ಟಗಲದ ಕ್ಯಾನ್ವಾಸ್ ಇನ್ನೆಲ್ಲಿ ನೋಡಲು ಸಾಧ್ಯ ಹೇಳಿ ಎನ್ನುವ ಕಲಾವಿದರು ಇಲ್ಲಿದ್ದಾರೆ.

ಮೋಡವನ್ನು ಶಾಸ್ತ್ರೋಕ್ತವಾಗಿ ವಿವರಿಸುವ ಖಗೋಳಶಾಸ್ತ್ರಜ್ಞರಿದ್ದಾರೆ. ಮೋಡಗಳ ಇತಿಹಾಸದ ಬೆನ್ನತ್ತಿರುವ ಇತಿಹಾಸಕಾರರಿದ್ದಾರೆ.

ಮೋಡಗಳಿಗೆ ಮಾರು ಹೋಗಿ ಅದರ ಬಗ್ಗೆ ರಾಗಗಳನ್ನು ಸೃಷ್ಟಿಸಿರುವ ಸಂಗೀತಗಾರರಿದ್ದಾರೆ. ಪ್ರತೀ ದಿನ ‘ಮೋಡ ಕವಿದ ವಾತಾವರಣ’ ಎಂದು ನುಡಿಯಬೇಕಾದ ಟಿವಿ ಹವಾಮಾನ ಸುದ್ದಿ ವಾಚಕರಿದ್ದಾರೆ. ಮೋಡದ ಬಗ್ಗೆ ಕವಿತೆಗಳನ್ನು ಬರೆದವರ ಸಂಖ್ಯೆಯಂತೂ ಇನ್ನಿಲ್ಲದಷ್ಟು…

ಮೋಡ ಎಂಬ ಹುಚ್ಚು ಜಗತ್ತಿನಾದ್ಯಂತ ಹರಡಿದೆ. 96 ವರ್ಷದ ಅಜ್ಜನಿಂದ ಹಿಡಿದು, ಬೊಗಳುವ ಕೆಲಸವನ್ನೂ ಮರೆತು ಸದಾ ಆಕಾಶ ನೋಡುತ್ತಾ ಕೂರುವ ದಿಬ್ಬ ಎನ್ನುವ ನಾಯಿಯವರೆಗೆ, ಅರ್ಥಶಾಸ್ತ್ರಜ್ಞ ಹುದ್ದೆಗೆ ರಾಜಿನಾಮೆ ಬಿಸಾಕಿ ಮೋಡದ ಪೇಂಟಿಂಗ್ ಮಾಡುತ್ತಾ ಇರುವ ಜೋರ್ಜ್ ಫಿನ್ ವರೆಗೆ ಈ ಹುಚ್ಚು ತಗುಲಿಹೋಗಿದೆ.

ಮಕ್ಕಳಿಗೆ ಬಾಲ್ಯದಿಂದಲೇ ಮೋಡದ ಹುಚ್ಚು ಹತ್ತಿಸಲು ಶಾಲೆಯಲ್ಲಿ ಮೋಡದ ಪಾಠ ಮಾಡುವ ಪ್ರಯತ್ನ ಕ್ಲಿಕ್ ಆಗಿದೆ. ಊಟದ ಸಮಯದಲ್ಲಿ ಮೋಡದ ಕ್ಲಾಸ್, ಕ್ರಾಫ್ಟ್ ಸಮಯದಲ್ಲಿ ಮೋಡದ ಪೇಪರ್ ಕಟಿಂಗ್, ಶಾಲೆಯ ಮೂಲೆಯಲ್ಲಿ ಮೋಡದ ಕಾರ್ನರ್, ಮೋಡದ ಬಗ್ಗೆ ಕ್ವಿಜ್..

ಹೀಗೆ ಎಲ್ಲೆಲ್ಲೂ ಮೋಡ, ಮೋಡ. ಅದಿರಲಿ ಮೋಡದ ಡಿಸೈನ್ ಹೊತ್ತ ಪ್ಯಾಂಟ್, ಟಿ ಶರ್ಟ್ ಗಳು ಸಹಾ ಮಾರುಕಟ್ಟೆಗೆ ಬಂದಿದೆ.

ಮೋಡಕ್ಕೂ ಒಂದು ಮರ್ಯಾದೆ ತಂದು ಕೊಡಬೇಕು ಎನ್ನುವುದು ಈ ಮೋಡಣ್ಣದಿರ ಹೋರಾಟ.

ಮೋಡದ ಬಗ್ಗೆ ವಿಶ್ವಸಂಸ್ಥೆಗೆ ತಾತ್ಸಾರ ಎಂದು ಮೋಡ ಪ್ರೇಮಿಗಳು ಗುಡುಗಿದ್ದಾರೆ. ಮೋಡದ ಅಧ್ಯಯನ, ದಾಖಲೀಕರಣವನ್ನು ವಿಶ್ವ ಪವನಶಾಸ್ತ್ರ ಸಂಸ್ಥೆ ಸರಿಯಾಗಿ ಮಾಡುತ್ತಿಲ್ಲ ಎನ್ನುವ ಮೋಡಣ್ಣರು ಮೋಡದ ಅಟ್ಲಾಸ್ ರೂಪಿಸಲು ಕಾರಣರಾಗಿದ್ದಾರೆ. ಅಷ್ಟೇ ಅಲ್ಲ ಇವರೆಲ್ಲಾ ಸೇರಿ ಹೊಸ ಮೋಡವನ್ನೂ ಪತ್ತೆ ಹಚ್ಚಿದ್ದಾರೆ.

ಈ ಮೋಡಣ್ಣಂದಿರ ಲೆಕ್ಕದಲ್ಲಿ ನಮ್ಮ ರವೀಂದ್ರನಾಥ ಟ್ಯಾಗೂರರೂ ಸೇರಿ ಹೋಗಿದ್ದಾರೆ.

‘ನನ್ನ ಬದುಕಿನಲ್ಲಿ ಮೋಡಗಳು ತೇಲಿ ಬರುತ್ತಿವೆ. ಅವು ಬರುತ್ತಿರುವುದು ಮಳೆ ಸುರಿಸಲೋ ಇಲ್ಲಾ ಮಿಂಚು ಗುಡುಗು ಉಂಟು ಮಾಡಲು ಅಲ್ಲ. ಬದಲಿಗೆ ಅಸ್ತಮಿಸುತ್ತಿರುವ ನನ್ನ ಬಾನಂಗಳಕ್ಕೆ ಬಣ್ಣ ನೀಡಲು ಬರುತ್ತಿದೆ’ ಅಂದದ್ದೇ ತಡ ಟ್ಯಾಗೂರ್ ಮೋಡಣ್ಣರ ಲಿಸ್ಟ್ ನಲ್ಲಿ ದಾಖಲಾಗಿ ಹೋಗಿದ್ದಾರೆ.

ಮಡಿಕೇರಿಯ ರಾಜಾ ಸೀಟ್ ನಲ್ಲಿ ಅಡ್ಡಾಡಬೇಕಾಗಿ ಬಂತು.

ಕಾಲ ಕೆಳಗೆ ಮೋಡಗಳು ಹಾರಿ ಹೋಗುತ್ತಿದ್ದವು. ‘ಹಿಂಜಿದ ಅರಳೆಯು ಗಾಳಿಗೆ ಹಾರಿ ಮೋಡಗಳಾಗಿಹವೆ..?’ಎಂದು ಹಾಡಿಕೊಂಡೆ.

ಹಾಗೆ ಮೋಡದ ಬಗ್ಗೆ ಹಾಡಿಕೊಂಡದ್ದು ಕ್ಲೌಡ್ ಅಪ್ರಿಶಿಯೇಷನ್ ಸೊಸೈಟಿಗೆ ಈ ವೇಳೆಗೆ ಕೇಳಿಸಿರಲೇಬೇಕು.. ಖಂಡಿತಾ.

ಕೊಬ್ಬರಿಗೆ ಬೆಂಬಲ ಬೆಲೆ: ಸಿಎಂ‌ ಬಳಿಗೆ ಹೋಗುವೆ- ಶಾಸಕ

Publicstory.in

ತುರುವೇಕೆರೆ: ತಾಲ್ಲೂಕಿನ ತೆಂಗು ಬೆಳೆಗಾರರ ಹಿತ ದೃಷ್ಟಿಯಿಂದ ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡಬೇಕೆಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ನಾಳೆ ಮನವಿ ನೀಡಲು ಎಪಿಎಂಸಿ ಸದಸ್ಯರೊಟ್ಟಿಗೂಡಿ ನಿಯೋಗ ಹೋಗುವುದಾಗಿ ಶಾಸಕ ಮಸಾಲಜಯರಾಂ ಹೇಳಿದರು.

ತಾಲ್ಲೂಕಿನ ಮಾಯಸಂದ್ರ ಮತ್ತು ಡಿ.ಕಲ್ಕೆರೆ ಗ್ರಾಮದಲ್ಲಿ ಎಪಿಎಂಸಿಯ ರಾಷ್ಟೀಯ ಕೃಷಿ ವಿಕಾಸ್ ಯೋಜನೆಯಡಿಯ ತಲಾ 75 ಲಕ್ಷ ರೂಪಾಯಿಗಳ ವೆಚ್ಚದ ಗ್ರಾಮೀಣ ಸಂತೆಗಳ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ತೆಂಗು ಕ್ಷೇತ್ರದ ಜನರ ಪ್ರಧಾನ ವಾಣಿಜ್ಯ ಬೆಳೆಯ ಜೊತೆಗೆ ರೈತರ ಜೀವನಾಧಾರವೂ ಸಹ ಆಗಿದೆ. ಕೊರೊನಾ ಹಾಗು ಲಾಕ್ಡೌನ್ ನಿಂದ ಕೊಬ್ಬರಿಗೆ ಸೂಕ್ತ ಬೆಲೆ ಸಿಗದೆ ತೆಂಗುಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೇತ್ರದ ಹಲವಾರು ರೈತರು ಕೊಬ್ಬರಿಗೆ ಸಕರ್ಾರದಿಂದ ಬೆಂಬಲ ಬೆಲೆ ಕೊಡಿಸಬೇಕೆಂದು ನನ್ನ ಬಳಿ ಪಟ್ಟುಹಿಡಿದಿದ್ದಾರೆ. ಹೀಗಾಗಿ ರೈತರ ಸಮಸ್ಯೆಗಳನ್ನು ಮುಖ್ಯ ಮಂತ್ರಿಗಳ ಬಳಿ ನಿವೇದಿಸಿಕೊಳ್ಳಲಾಗುವುದು ಎ‌ಂದರು.

ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲೇ ಎರಡನೆ ಹಂತದ ಹೇಮಾವತಿ ನೀರು ಹರಿಸಿರುವುದು ಇದೇ ಮೊದಲು. ಹೀಗಾಗಲೇ ಮಾಯಸಂದ್ರ ಕೆರೆ ಸೇರಿದಂತೆ ಕೆಲ ಕೆರೆಗಳು ತುಂಬಿ ಒಂದೆರಡು ದಿನಗಳಲ್ಲಿ ಕೋಡಿ ಬೀಳಲಿವೆ ಎಂದರು.

ನಾಳೆಯಿಂದ ಸಿ.ಎಸ್.ಪುರ ಹೋಬಳಿಗೆ ನೀರು ಹರಿಯಲಿದ್ದು ಇನ್ನೂ 20 ದಿನಗಳ ಕಾಲ ಕ್ಷೇತ್ರದಾದ್ಯಂತ ಹೇಮಾವತಿ ನೀರು ಹರಿಯಲಿದ್ದು ಬಾಕಿ ಉಳಿದಿರುವ ಕೆರೆಗಳನ್ನು ತುಂಬಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಎಪಿಎಂಸಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಕೊಬ್ಬರಿಗೆ ಈಗಿರುವ ಮೂಲ ಬೆಲೆಯ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 2000 ರೂಪಾಯಿಗಳ ಪ್ರೋತ್ಸಾಹ ಧನ ನೀಡಿದರೆ ಒಟ್ಟು 14300 ರೂಪಾಯಿಗಳ ಬೆಲೆ ರೈತರಿಗೆ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ನರಸಿಂಹ, ಸದಸ್ಯರುಗಳಾದ ಪ್ರಸನ್ನ, ವಿ.ಟಿ.ವೆಂಕಟರಾಮು, ಕಾಂತರಾಜು, ನಾಗರಾಜು, ವಿಜಯೇಂದ್ರ, ಇಂದ್ರಮ್ಮ, ಲೋಕೇಶ್, ಮಧುಸೂದನ್ ಕಾರ್ಯದರ್ಶಿ ವೆಂಕಟೇಶ್ ಗುತ್ತಿಗೆದಾರರುಗಳಾದ ರಾಜೇಶ್, ಧನಪಾಲ್ ಜಿ.ಪಂ.ಮಾಜಿ ಸದಸ್ಯ ಎನ್.ಆರ್.ಜಯರಾಂ, ಸುರೇಶ್ ಮತ್ತು ಮುಖಂಡರುಗಳು ಇದ್ದರು.

ಮನೆಗೆ ನುಗ್ಗಿ ಬಾಲಕಿ ಕಿವಿ ಹರಿದು ಹಾಕಿದ ಚಿರತೆ

Publicstory. in


ಕುಣಿಗಲ್: ತಾಲೂಕು ತೆರದಕುಪ್ಪೆಯಲ್ಲಿ ಆರು ವರ್ಷದ ಬಾಲಕಿಯೊಬ್ಬಳ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ತೆರೆದಕುಪ್ಪೆಯ ನಾಗರಾಜು ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ತೋಟದ ಮನೆಗೆ ದಾಳಿ ಮಾಡಿದ ಚಿರತೆ ಬಾಲಕಿ ರೇಖಾಳ ಬಲಗಿವಿ ಕೆಳಗೆ ಗಾಯಗೊಳಿಸಿದೆ.

ಕೂಡಲೇ ಬಾಲಕಿ ರೇಖಾಳನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ.

ಚಿರತೆ ಬಾಲಿಕಿ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ಕುಣಿಗಲ್ ವಡ್ಡರಕುಪ್ಪೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಚಿರತೆ ದಾಳಿ ಮುಂದುವರೆದಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು.

ಹೆಬ್ಬೂರಿನಲ್ಲಿ ಪ್ರತಿಭಟನೆ


ಮತ್ತೊಂದು ಕಡೆ ತುಮಕೂರು ತಾಲೂಕು ಹೆಬ್ಬೂರಿನಲ್ಲಿ ಚಿರತೆ ದಾಳಿಯನ್ನು ಖಂಡಿಸಿ ನೂರಾರು ಮಂದಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮಣಿಕುಪ್ಪೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಬಾಲಕಿಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಅಹಿತಕರ ಘಟನೆ ನಡೆಯದಂತೆ ಕ್ರಮ ಜರುಗಿಸಿದ್ದಾರೆ. ಚಿರತೆ ದಾಳಿಯಿಂದ ಕುಣಿಗಲ್ ಮತ್ತು ಹೆಬ್ಬೂರು ಸುತ್ತಮುತ್ತ ಇದುವರೆಗೆ ಚಿರತೆ ದಾಳಿಗೆ ನಾಲ್ವರು ಮೃತಪಟ್ಟಿದ್ದಾರೆ.

ಕೊರೊನಾ: ತುಮಕೂರಿನಲ್ಲಿ ಮತ್ತೇ 4 ಮಂದಿ ಗುಣಮುಖ

ತುಮಕೂರು; ಜಿಲ್ಲೆಯಲ್ಲಿ ಗುರುವಾರ ಮತ್ತೇ ನಾಲ್ಕು ಮಂದಿ ಕೊರೊನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ನಗರದ‌ ಕೋವಿಡ್ ಆಸ್ಪತ್ರೆಯಿಂದ ಇವರನ್ನು ಮನೆಗೆ ಕಳುಹಿಸಿಕೊಡಲಾಯಿತು.

ಒಂದೇ ದಿನ ನಾಲ್ಕು ಮಂದಿ ಗುಣಮುಖರಾಗಿರುವುದು ವೈದ್ಯ ಸಿಬ್ಬಂದಿಗೆ ಖುಷಿಗೆ ಕಾರಣವಾಗಿದೆ.

ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಜನರು ಉದಾಸೀನ ತೋರಬಾರದು. ಸಾಮಾಜಿಕ ಅಂತರ, ಮಾತನಾಡುವಾಗ ಮಾಸ್ಕ್ ಧರಿಸುವುದನ್ನು ಮರೆಯಬಾರದು.

ತುಮಕೂರು ಕಾವೇರಿ ಕಣಿವೆಯಲ್ಲಿ ಜೆಡಿಎಸ್‌ಗೊಬ್ಬ ನೀಲಿಗಣ್ಣಿನ ಹುಡುಗ

0

Publicstory.in


ತುಮಕೂರು: ಜಿಲ್ಲೆಯ ಕಾವೇರಿ ಕಣಿವೆಯಲ್ಲಿ ದಲಿತ ಸಮುದಾಯದ ನಡುವೆ ಬಡವಾದಂತಿದ್ದ ಜೆಡಿಎಸ್ ಪಕ್ಷಕ್ಕೆ ಬಲತುಂಬಲು ಹಾಗೂ ತಮ್ಮದೇ ಕ್ಷೇತ್ರದಲ್ಲಿ ಬಲಹೆಚ್ಚಿಸಿಕೊಳ್ಳಲು ಶಾಸಕ ಬಿ.ಸಿ.ಗೌರಿಶಂಕರ್ ಹೊಸ ದಾಳ ಹುರುಳಿಸಿದ್ದಾರೆ.

ಪಾವಗಡದ ಮಾಜಿ ಶಾಸಕರಾದ, ಜೆಡಿಎಸ್ ನ ತಿಮ್ಮರಾಯಪ್ಪ ದಲಿತರು. ಆದರೆ ಏಕೋ ಅವರು ಇಡೀ ಜಿಲ್ಲೆಯನ್ನು ಆವರಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಲಿಲ್ಲ. ಹಾಗೇ ನೋಡಿದರೆ, ಜಿಲ್ಲೆಯಲ್ಲಿ ದಲಿತ ಬಲಾಢ್ಯ ರಾಜಕೀಯ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಮಾಜಿ ಶಾಸಕ ಕೆ.ಎನ್. ರಾಜಣ್ಣ. ಸಂಸದ ಜಿ.ಎಸ್. ಬಸವರಾಜ್ ಅವರುಗಳು ಆಯಾ ಸಮುದಾಯದ ಅನಭಿಷಿಕ್ತ ನಾಯಕರೇ ಆಗಿದ್ದಾರೆ. ಹೀಗಾಗಿಯೇ ಈ ಇಬ್ಬರು ಜಿಲ್ಲೆಯಲ್ಲಿ ಯಾರನ್ನು ಬೇಕಾದರೂ ಮೇಲಕ್ಕೆತ್ತುತ್ತಾರೆ, ಮನಸ್ಸು ಮಾಡಿದರೆ ಕೆಳಕ್ಕೆ ತಳ್ಳುವ ಶಕ್ತಿ ಬೆಳಸಿಕೊಂಡಿದ್ದಾರೆ.

ಹಾಗೇ ನೋಡಿದರೆ, ಜಿಲ್ಲೆಯಲ್ಲಿ ದಲಿತ ಬಲಾಢ್ಯ ರಾಜಕೀಯ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೂ ಈ ಶಕ್ತಿ ಬರಬೇಕಿತ್ತು. ಆದರೆ ಈ ಬಗ್ಗೆ ಅವರಿಗೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ಪಕ್ಷದ ನೆಲೆಯಲ್ಲಿ, ಜಾತಿಯ ನೆಲೆಯಲ್ಲಿ ಅವರು ನಾಯಕರು. ಆದರೆ ಇಡೀ ಜಿಲ್ಲೆಯ ಮೇಲೆ ಆ ಸಮುದಾಯದೊಳಗೆ ಅವರ ಬಿಗಿ ಹಿಡಿತ ಇಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಾ ಹೋಗುತ್ತಿದೆ.

ಕೃಷ್ಣಾ ಹಾಗೂ ಕಾವೇರಿ ಕೊಳ್ಳದಲ್ಲಿ ಹಂಚಿಹೋಗಿರುವ ತುಮಕೂರು ಜಿಲ್ಲೆಯ ರಾಜಕಾರಣವೂ ಸಹ ಈ ಎರಡು ಕೊಳ್ಳದಲ್ಲಿ ಹಂಚಿಹೋಗಿದೆ. ಕೃಷ್ಣಾ ಕೊಳ್ಳದ ರಾಜಕೀಯ ನಾಯಕರು ಕಾವೇರಿಕೊಳ್ಳದಲ್ಲಿ ತಮ್ಮ ಪ್ರಭಾವ ಬೆಳೆಸಿಕೊಂಡಿಲ್ಲ. ಅದೇ ರೀತಿ ಕಾವೇರಿಕೊಳ್ಳದ ಸಾಕಷ್ಟು ನಾಯಕರು ಕೃಷ್ಣಾಕೊಳ್ಳದ ರಾಜಕಾರಣದಲ್ಲಿ ಸೊನ್ನೆ. ಇದು ಜಿಲ್ಲೆಯ ರಾಜಕೀಯ ಚಿತ್ರಣ.

ಜೆಡಿಎಸ್ ನ ತಿಮ್ಮರಾಯಪ್ಪ ಕೃಷ್ಣಕೊಳ್ಳದವರು. ಹುಚ್ಚಯ್ಯ ಜೆಡಿಎಸ್ ಪಕ್ಷ ಬಿಟ್ಟ ಬಳಿಕ ಕಾವೇರಿಕೊಳ್ಳದಲ್ಲಿ ಅಂತಹ ಮುಖಗಳಿಲ್ಲ. ಇನ್ನೂ ಅವರೀಗ ಬಿಜೆಪಿ. ಅಲ್ಲೂ ಅವರು ಬೆಳೆಯಲಿಲ್ಲ.

ಕಾವೇರಿಕೊಳ್ಳದ ತಿಪಟೂರು, ಗುಬ್ಬಿ, ತುರುವೇಕೆರೆ, ತುಮಕೂರು, ಕುಣಿಗಲ್ ತಾಲ್ಲೂಕುಗಳಲ್ಲಿ ದಲಿತ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಮ್ಯೂನಿಷ್ಟ ಪಕ್ಷದ ಹಿನ್ನೆಲೆಯುಳ್ಳ ಬೆಳಗುಂಬ ವೆಂಕಟೇಶ್ ಅವರನ್ನು ಶಾಸಕ ಗೌರಿಶಂಕರ್ ತುಮಕೂರು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಪಕ್ಷದ ನೆಲೆ‌ ಗಟ್ಟಿಗೊಳಿಸುವ ಕೆಲಸ ನೀಡಿದ್ದಾರೆ

ಯಾವಾಗಲೂ ಚಟುವಟಿಕೆಯಲ್ಲಿ ಇರುವ ವೆಂಕಟೇಶ್ ಈಗಾಗಲೇ ತಾಲ್ಲೂಕಿನ ದಲಿತರ ನಡುವೆ ಹೆಜ್ಜೆ ಇಟ್ಟಿದ್ದಾರೆ. ಪ್ರತಿ ದಲಿತ ಮನೆಯವರ ಭೇಟಿ. ಅವರ ಕಷ್ಟ ಸುಖ ಆಲಿಸುವ ಕೆಲಸಕ್ಕೆ ಕೈ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ.

ಹಾಗೇ ನೋಡಿದರೆ, ಅವರ ಈ ಶಕ್ತಿಗೆ ಎಡಪಕ್ಷಗಳ ಹಿನ್ನೆಲೆ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಹಲವು ಒಳಸುಳಿ, ಒಳಪೆಟ್ಟುಗಳನ್ನು ಪರಸ್ಪರ ನೀಡಿಕೊಳ್ಳುವ ತಾಣವಾಗಿರುವ ಜೆಡಿಎಸ್ ನಲ್ಲಿ ಪಕ್ಷ ನಿಷ್ಠೆಯ ವ್ಯಕ್ತಿಗೆ ಮಣೆ ಹಾಕಿರುವುದು ಒಳ್ಳೆಯ ಬೆಳವಣಿಗೆಯೇ ಆಗಿದೆ.

ಶಾಸಕ ಗೌರಿಶಂಕರ್ ಅವರ ನೀಲಿಗಣ್ಣಿನ ಹುಡುಗನಾಗಿರುವ ವೆಂಕಟೇಶ್ ಅವರ ಕೆಲಸ ಜಿಲ್ಲೆಯಲ್ಲಿ ಬೇರೆಯದೇ ಇದೆ. ಹೊಸ ನಾಯಕತ್ವದ ಹುಡುಕಾಟದಲ್ಲಿ ಆ ಸಮುದಾಯದ ಯುವಕರು ಸಹ ಇದ್ದಾರೆ. ಆದರೆ ಕಟಿಬದ್ಧತೆಯ ಕೆಲಸ ಅವರನ್ನು ಇನ್ನಷ್ಟು ಮೇಲಕ್ಕೆ ಕರೆದುಕೊಂಡು ಹೋಗಬಹುದು.

ಕೃಷ್ಣಾಕೊಳ್ಳದಲ್ಲಿ ಪಕ್ಷ ಕಟ್ಟುವ ಅಥವಾ ಆ ಸಮುದಾಯವನ್ನು ಸೆಳೆದುಕೊಳ್ಳುವುದು ತುಸು ಕಷ್ಟವೇ ಸರಿ. ಆದರೆ ಕಾವೇರಿಕೊಳ್ಳದಲ್ಲಿ ಮನಸ್ಸು ಮಾಡಿದರೆ ಒಳ್ಳೆಯ ನಾಯಕನಾಗಿ ಬೆಳಗುಂಬ ವೆಂಕಟೇಶ್ ರೂಪುಗೊಳ್ಳುವ ಸಾಧ್ಯತೆಯನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೊ ಅದರ ಮೇಲೆ ನಿಂತಿದೆ. ಇದಕ್ಕಾಗಿ ನಾವು ಕಾದು ನೋಡಬೇಕಾಗಿದೆ.

ಬಿಜೆಪಿಯಲ್ಲಿ ಅದರಲ್ಲೂ ಕಾವೇರಿಕೊಳ್ಳದಲ್ಲಿ ದಲಿತ ಮುಖಂಡರನ್ನು ಬೆಳೆಸುವ ಕೆಲಸಕ್ಕೆ ಮಾಜಿ ಶಾಸಕ ಬಿ.ಸುರೇಶಗೌಡ ಸರಿಯಾಗಿಯೇ ದಾಳ ಉರುಳಿಸಿದ್ದರು. ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಏನ್ನೆಲ್ಲ ದಾಳಗಳನ್ನು ಉರುಳಿಸಿ ವೈ.ಎಚ್.ಹುಚ್ಚಯ್ಯ ಅವರನ್ನು ಪಕ್ಷಕ್ಕೆ ಕರೆತಂದರು. ಮಹಿಳಾ ನಾಯಕಿಯಾಗಿ ಶಾರದಾ ನರಸಿಂಹಮೂರ್ತಿಯನ್ನು ಬೆಳೆಸಲು ಪ್ರಯತ್ನಪಟ್ಟರು. ಆದರೆ ಆ ಪಕ್ಷದ ಉಸಿರುಕಟ್ಟಿಸುವ ವಾತಾವರಣ ಕಾರಣದಿಂದಾಗಿಯೇ ಈ ಇಬ್ಬರು ಪ್ರಬಲ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ.

ವೈ.ಕೆ.ರಾಮಯ್ಯ ಅವರಿಂದ ಕಲಿತುಬಂದರೂ ಸಹ ವೈ.ಎಚ್. ಹುಚ್ಚಯ್ಯ ಅವರು ಜನರನ್ನು ಆವರಿಸಿಕೊಳ್ಳುವಲ್ಲಿ ಹೆಚ್ಚು ಪ್ರಭಾವ ಬೀರಿದಂತೆ ಕಾಣುತ್ತಿಲ್ಲ.

ದೂರದೃಷ್ಟಿಯ ಹಿನ್ನೆಲೆಯಲ್ಲಿ ವೆಂಕಟೇಶ್ ಅವರನ್ನು ದಲಿತರ ಪ್ರತಿನಿಧಿಯಾಗಿ ಬಳಸುವ ಎಲ್ಲ ಅವಕಾಶವನ್ನು ಜೆಡಿಎಸ್ ತನ್ನೊಂದಿಗಿರಿಸಿಕೊಂಡಿದೆ. ದಲಿತರಲ್ಲದೆಯೋ ಬೇರೆ ಸಮುದಾಯದವರ ನಡುವೆಯೂ ತುಂಬಾನೆ ಒಡನಾಟ ಬೆಳೆಸಿಕೊಂಡಿರುವ ಬೆಳಗುಂಬ ವೆಂಕಟೇಶ್ ಯಾವ ದಾರಿಯಲ್ಲಿ ಸಾಗಿ ಎಲ್ಲಿ ಮುಟ್ಟುತ್ತಾರೆ ಎಂದು ಹೇಳಲು ಇನ್ನೂ ಕೆಲವು ವರ್ಷ ಕಾಯಬೇಕಾಗಿದೆ.

ದಲಿತರಲ್ಲದೆಯೋ ಬೇರೆ ಸಮುದಾಯದವರ ನಡುವೆಯೂ ತುಂಬಾನೆ ಒಡನಾಟ ಬೆಳೆಸಿಕೊಂಡಿರುವ ಬೆಳಗುಂಬ ವೆಂಕಟೇಶ್ ಯಾವ ದಾರಿಯಲ್ಲಿ ಸಾಗಿ ಎಲ್ಲಿ ಮುಟ್ಟುತ್ತಾರೆ ಎಂದು ಹೇಳಲು ಇನ್ನೂ ಕೆಲವು ವರ್ಷ ಕಾಯಬೇಕಾಗಿದೆ.

ಅವರು ‘ತೆರೆದ ಬಾಗಿಲು’

ಜಿ.ಎನ್.ಮೋಹನ್


‘ಬನ್ನಿ ಹಾಗೇ ಒಂದು ನಿಮಿಷ ನಮ್ಮ ಮ್ಯೂಸಿಯಂ ನೋಡಿಬಿಡುವರಂತೆ..’ ಎಂದರು

ಮ್ಯೂಸಿಯಂ ಎಂದರೆ ಸಾಕು ನಾನು ಮೊದಲಿನಿಂದಲೂ ಮಾರು ದೂರ.

ಆ ವಿಜ್ಞಾನಕ್ಕೂ, ನನ್ನ ಅಜ್ಞಾನಕ್ಕೂ ಎಲ್ಲೆಂದೆಲ್ಲಿಯೂ ಸಂಬಂಧವಿರಲಿಲ್ಲ. ಇನ್ನು ಚರಿತ್ರೆ, ಪಳೆಯುಳಿಕೆ ಉಹ್ಞೂ ಸಾಧ್ಯವೇ ಇಲ್ಲ

ಆದರೆ ಏನು ಮಾಡುವುದು ಈಗ ಒತ್ತಾಯಿಸುತ್ತಿದ್ದವರು ನನ್ನ ಒಂದು ಕಾಲದ ಗುರು, ಈಗಿನ ಸನ್ಮಿತ್ರ ಎಚ್ ವಿ ವೇಣುಗೋಪಾಲ್ ಅವರು.

ಹಾಗಾಗಿ ‘ನೋ’ ಎನ್ನುವ ಅವಕಾಶವೇ ಇರಲಿಲ್ಲ.

ನಾನು ತಕ್ಷಣ ಎದುರಿಗೆ ಇದ್ದ ಬಹುಮಹಡಿ ಕಟ್ಟಡದತ್ತ ಹೆಜ್ಜೆ ಹಾಕಿದೆ. ವೇಣುಗೋಪಾಲ್ ‘ಅಲ್ಲಿಗೇಕೆ ಹೋಗುತ್ತೀರಿ ಈ ಕಡೆ ಬನ್ನಿ’ ಎಂದರು.

ಇಡೀ ಅಂಗಳದಲ್ಲಿ ದೊಡ್ಡದು ಎನ್ನುವಂತಿದ್ದದ್ದು ಆ ಕಟ್ಟಡ ಮಾತ್ರ. ಹಾಗಾಗಿ ನಾನು ಮ್ಯೂಸಿಯಂ ಎಂದ ತಕ್ಷಣ ಆ ಕಡೆ ಹೆಜ್ಜೆ ಹಾಕಿದ್ದೆ.

ನಾನಿದ್ದದ್ದು ನ್ಯಾಷನಲ್ ಕಾಲೇಜಿನಲ್ಲಿ.

ಆದರೆ ಅವರು ನನ್ನನ್ನು ಅದರ ವಿರುದ್ಧ ದಿಕ್ಕಿಗೆ ಕರೆದುಕೊಂಡು ಹೋದರು.

ಆ ವೇಳೆಗಾಗಲೇ ಕಾಫಿಯ ಘಮ ಅಲ್ಲೆಲ್ಲಾ ಹರಡಿಕೊಳ್ಳುತ್ತಿತ್ತು. ಕಣ್ಣ ದೂರಕ್ಕೆ ಕ್ಯಾಂಟೀನ್ ಕಾಣಿಸಿತು. ಬಹುಷಃ ಹೊರಡುವ ಮುನ್ನ ಕಾಫಿಯ ಹನಿಯೊಂದು ನಾಲಿಗೆಯ ಮೇಲಿರಲಿ ಎಂದು ಆ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೆಜ್ಜೆ ಹಾಕಿದೆ.

ಇಲ್ಲ ನನ್ನ ಆ ನಿರೀಕ್ಷೆಯೂ ಸುಳ್ಳಾಯಿತು.

ಕ್ಯಾಂಟೀನ್ ಕೋಣೆಗೆ ಇನ್ನೂ ಹತ್ತು ಹೆಜ್ಜೆ ಮುಂಚೆಯೇ ಇದ್ದ ಕೋಣೆಯೊಂದಕ್ಕೆ ಕರೆದೊಯ್ದರು.

ಒಂದು ಕ್ಷಣ ನನಗೆ ಮಾತೇ ಹೊರಡಲಿಲ್ಲ.

ನಾನು ಇದ್ದದ್ದು ಒಂದು ಪುಟ್ಟ ಕೋಣೆಯಲ್ಲಿ.

ಅಲ್ಲಿಯಾದರೂ ಏನಿತ್ತು? ಒಂದು ಹಾಸಿಗೆ, ಒಂದು ಕುಕ್ಕರ್, ಎರಡು ತಟ್ಟೆ ಇನ್ನೆರಡು ಲೋಟ, ಒಂದು ಸೂಟ್ ಕೇಸ್, ಒಂದು ಚೊಂಬು, ನಾಲ್ಕೈದೇ ಪಂಚೆ, ಅಷ್ಟೇ ಜುಬ್ಬಾ, ಒಂದು ಕುರ್ಚಿ. ಒಂದು ಕೋಲು..

ಅಷ್ಟೇ..

ಎಷ್ಟೋ ಮ್ಯೂಸಿಯಂಗಳನು ಹೊಕ್ಕಿದ್ದೇನೆ, ರಾಜ ಮಹಾರಾಜರ ಕಥೆ ಕಂಡಿದ್ದೇನೆ, ಇದ್ದ ರಾಜಕಾರಣಿಗಳು, ಬಿದ್ದು ಹೋದ ರಾಜಕಾರಣಿಗಳ ವೈಭವದ ಉಳಿಕೆಗಳನ್ನು ನೋಡಿದ್ದೇನೆ, ಬಿಚ್ಚುಗತ್ತಿಯ ಬಂಟರ ಕಥೆ ಸಾರುವ ಕೋಣೆಗಳಲ್ಲಿ ಅಡ್ಡಾಡಿದ್ದೇನೆ. ಆದರೆ ಇಲ್ಲಿ ಒಂದು ಬದುಕೇ ಪುಟ್ಟ ಕೋಣೆಯಲ್ಲಿ ಹರಡಿಕೊಂಡಿತ್ತು.

ಉಳಿದ ಯಾವುದೇ ಮ್ಯೂಸಿಯಂನಲ್ಲಿ ಹೆಜ್ಜೆ ಹಾಕುವಾಗ ಒಂದು ಗತದ ವಾಸನೆ ಸುಳಿಯುತ್ತಿತ್ತು. ಆದರೆ ಇಲ್ಲಿ ತದ್ವಿರುದ್ಧ. ಜೀವವೊಂದು ಇಲ್ಲವಾಗಿ ದಶಕ ಉರುಳಿದರೂ ಅವರು ಇನ್ನೂ ಇಲ್ಲೇ ಇದ್ದಾರೆ ಎನ್ನುವ ಒಂದು ಆತ್ಮೀಯ ಭಾವ.

ಹೌದು, ಅದು ಎಚ್ಚೆನ್ ಅವರ ನೆನಪನ್ನು ಹೊತ್ತ ಕೋಣೆ.

‘ಎಚ್ ಎನ್’ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದ ಎಚ್ ನರಸಿಂಹಯ್ಯವರು ಅಲೆಯ ವಿರುದ್ಧ ಈಜಿದವರು.

ಸಾಮ್ರಾಟ್ ಅಶೋಕನಂತೆ ಬದುಕುವವರ, ಬೆಳಕಿದ್ದ ಸಮಾಜದಲ್ಲೂ ಕತ್ತಲೆ ಕೋಣೆಯಲ್ಲಿ ಇರಲು ಇಚ್ಚಿಸಿದವರ, ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆ ಎಂದು ನಂಬಿದ್ದವರ, ಹಾಗೆ ನಂಬಿಸುತ್ತಿದ್ದವರ ವಿರುದ್ಧ ಈಜಿದವರು. ಹಾಗಾಗಿಯೇ ಅವರ ಬದುಕೊಂದು ತೆರೆದ ಬಾಗಿಲು. ಅವರೊಂದು ‘ತೆರೆದ ಮನ’.

ಸಾಯಿಬಾಬಾ ಅವರನ್ನು ನೇರಾನೇರಾ ಪುಟ್ಟಪರ್ತಿಯಲ್ಲಿ ಪ್ರಶ್ನಿಸಿದಾಗಲೇ ಅವರು ದೇಶಾದ್ಯಂತ ಹೆಸರಾಗಿ ಹೋಗಿದ್ದರು.

ಅದು ಎಲ್ಲರೂ ಸಾಯಿಬಾಬಾರತ್ತ ನೋಡುತ್ತಿದ್ದ ಕಾಲ. ಜನ ಮರುಳೋ ಜಾತ್ರೆ ಮರುಳೋ ಎಂದು ಎಲ್ಲರೂ ಶರಣಾಗುತ್ತಿದ್ದಾಗ ಎಚ್ ಎನ್ ಅವರೊಳಗಿದ್ದ ಒಬ್ಬ ವೈಜ್ಞಾನಿಕ ಚಿಂತಕ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ.

ಬೂದಿ. ವಾಚು ಎಲ್ಲವನ್ನೂ ಗಾಳಿಯಿಂದ ಸೃಷ್ಟಿಸಿಕೊಡುತ್ತಿದ್ದ ಸಾಯಿಬಾಬಾರ ಎದುರು ನಿಂತು ಎಚ್ ಎನ್ ಕೇಳಿಯೇಬಿಟ್ಟರು- ನನಗೊಂದು ಕುಂಬಳಕಾಯಿ ಸೃಷ್ಟಿಸಿಕೊಡಿ.

ಎಚ್ ಎನ್ ದೇವರ ಅಸ್ತಿತ್ವದ ಬಗ್ಗೆ ಮಾತನಾಡಿದ್ದು ಕಡಿಮೆ. ಆದರೆ ಅವರಿಗೆ ದೇವರನ್ನು ಬೀದಿಗೆ ತರುವವರ ಬಗ್ಗೆ ಸಿಟ್ಟಿತ್ತು. ಮೌಢ್ಯವನ್ನು ಮೆಟ್ಟಿಲಾಗಿಸಿಕೊಳ್ಳುವವರ ಬಗ್ಗೆ ಅಸಹನೆಯಿತ್ತು. ಬೆಳಕು ತರಲಾಗದಿದ್ದರೂ ಪರವಾಗಿಲ್ಲ, ಕತ್ತಲೆಯನ್ನು ಹರಡದಿರೋಣ ಎನ್ನುವುದು ಅವರ ನಿಲುವು.

ಒಂದು ಬಿಳಿ ಪಂಚೆ, ಖಾದಿ ಬಿಳಿ ಜುಬ್ಬಾ, ಹಾಗೂ ಒಂದು ಬಿಳಿ ಖಾದಿ ಟೋಪಿ ಎಂದು ಮಾತ್ರ ಎಲ್ಲರಿಗೂ ಗೊತ್ತಿರುವ ಎಚ್ ಎನ್ ತಮ್ಮ ಆತ್ಮೀಯರಿಗೆ ಅಷ್ಟೇ ಆಗಿರಲಿಲ್ಲ ಅವರು ಸದಾ ಬಿಳಿ ಹಲ್ಲುಗಳನ್ನು ಪ್ರದರ್ಶಿಸುತ್ತಾ ತನ್ನ ಸುತ್ತಾ ಇರುವವರ ಹಲ್ಲುಗಳೂ ಎಲ್ಲರಿಗೂ ಗೋಚರವಾಗುವಂತೆ ಮಾಡುತ್ತಿದ್ದ ಮಹಾನ್ ಹಾಸ್ಯಪ್ರೇಮಿ ಕೂಡಾ.

ನಾನು ನಿಂತದ್ದು ಐದು ನಿಮಿಷದಲ್ಲಿ, ಒಂದು ಕಣ್ಣು ಹಾಯಿಸುವಿಕೆಯಲ್ಲಿ ಮುಗಿದುಹೋಗಬಹುದಾದ ಮ್ಯೂಸಿಯಂ.

ಆದರೆ ಎಷ್ಟೋ ಮ್ಯೂಸಿಯಂ ಕೋಣೆಗಟ್ಟಲೆ, ಎಕರೆಗಟ್ಟಲೆ ಹರಡಿಕೊಡಿದ್ದರೂ ಬೇಗ ಅಲ್ಲಿಂದ ಕಾಲು ಕೀಳಬೇಕು ಎಂದೇ ಅನಿಸುವ ನನಗೆ ಇಲ್ಲಿ ನೋಡಿದಷ್ಟೂ ನೆನಪಿಸಿಕೊಳ್ಳುವ ವಿಷಯಗಳಿತ್ತು. ಮನದ ರಂಗದಲ್ಲಿ ನೆನಪುಗಳ ಚಿತ್ರ ಸಾಲೆ.

ಕೋಲಾರದಲ್ಲಿ ಹುಟ್ಟಿದ ನರಸಿಂಹಯ್ಯನವರು ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಇರಲಿಲ್ಲ- ಛಲವೊಂದಿಲ್ಲದಿದ್ದರೆ.

ಅಂತಹ ಬಡತನದ ಎಚ್ ಎನ್ ಸರಿಯಾಗಿ ಹೆಜ್ಜೆ ಇಡುವುದು ಕಲಿತ ತಕ್ಷಣವೇ ಬಸ್ ಚಾರ್ಜ್ ಗೆ ಹಣ ಇಲ್ಲದ ಕಾರಣ ೫೩ ಮೈಲಿ ದೂರ ನಡದೇ ಬೆಂಗಳೂರಿಗೆ ಬಂದರು. ಆ ನಂತರವೂ ಅವರು ನಡದೇ ನಡೆದರು, ನಡದೇ ನಡೆದರು.. ಹೋರಾಟದ ಹಾದಿಯಲ್ಲಿ.

‘ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ’ ಎನ್ನುತ್ತಾನೆ ಬ್ರೆಕ್ಟ್. ಪ್ರಶ್ನೆಗಳ ಮೂಲಕವೇ ಸಮಾಜವನ್ನು ತಿದ್ದಲು ಅದೇ ರೀತಿಯಲ್ಲಿ ಹೊರಟುಬಿಟ್ಟವರು ಎಚ್ ಎನ್.

ಅವರು ಮೊದಲು ಪ್ರಶ್ನಿಸಿಕೊಂಡದ್ದು ತಮ್ಮನ್ನು. ಹಾಗಾಗಿ ಅವರು ಆಸ್ಥಾನಗಳನ್ನು ತಿರಸ್ಕರಿಸಿದರು ಸಿಂಹಾಸನಗಳಿಂದ ದೂರ ನಿಂತರು. ಕಿರೀಟ ಪ್ರಭಾವಳಿಗಳನ್ನು ತಾವೇ ತೆಗೆದಿಟ್ಟರು.

ಹಾಗೆ ಪ್ರಶ್ನೆ ಮಾಡಿಕೊಂಡ ಕಾರಣಕ್ಕಾಗಿಯೇ ಅವರಿಗೆ ಈ ಪುಟ್ಟ ಕೋಣೆಯೊಂದು ಬೆಳಕಿನ ಅರಮನೆಗೆ ಸಾಗುವ ಹಾದಿಯಾಯಿತು.

ನ್ಯಾಷನಲ್ ಹೈಸ್ಕೂಲ್, ನ್ಯಾಷನಲ್ ಕಾಲೇಜಿನಲ್ಲಿ ಓದಿ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾದ ಎಚ್ ಎನ್ ಹಲವು ದೇಶ ಸುತ್ತಿದರೂ ಮರಳಿದ್ದು ಅದೇ ನ್ಯಾಷನಲ್ ಕಾಲೇಜಿಗೆ.

ಬಡತನದಲ್ಲಿ ತನ್ನಂತೆ ಹೆಜ್ಜೆ ಹಾಕಿ ಬೆಳಕು ಬಯಸುತ್ತಿರುವವರಿಗೆ ಶಿಕ್ಷಣ ಎನ್ನುವುದು ಹೇಗೆ ಕಂದೀಲಾಗುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತು.

ಆ ಕಾರಣದಿಂದ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಭಾಗವಾಗಿ ಹೋದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದರು. ಮೇಲ್ಮನೆಯ ಸದಸ್ಯರಾಗಿದ್ದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಆದರೂ ಆದರೂ ಅವರಿಗೆ ಈ ಪುಟ್ಟ ಕೋಣೆಯೇ ಉಸಿರಿನ ತಾಣ.

ಅವರು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಹಾಸ್ಟೆಲ್ ಕೋಣೆ ಹೊಕ್ಕವರು ತಮ್ಮ ಅಂತಿಮ ಯಾತ್ರೆಯವರೆಗೆ ಅದೇ ಹಾಸ್ಟೆಲ್ ನಲ್ಲಿ ಜೀವಿಸಿದ್ದರು.

ಪ್ರಶ್ನೆ ಮಾಡುವುದು ಅವರಿಗೆ ಎಷ್ಟು ಇಷ್ಟ ಎಂದರೆ ಅವರೂ ಮೊದಲಾಗಿ ಆರಂಭಿಸಿದ ‘ಸೈನ್ಸ್ ಫೋರಂ’ನ ಚಿಹ್ನೆಯೇ ಪ್ರಶ್ನಾರ್ಥಕ ಚಿಹ್ನೆಯಾಗಿತ್ತು.

ಅವರ ಪುಟ್ಟ ಕೊಠಡಿಗೆ ಹೆಸರಿಗೆ ಮಾತ್ರ ಬಾಗಿಲಿತ್ತು. ಆದರೆ ಅದು ತೆರೆದ ಬಾಗಿಲೇ ಆಗಿತ್ತು. ಯಾವ ವಿದ್ಯಾರ್ಥಿಯಾಗಲೀ, ಮುಖ್ಯಮಂತ್ರಿಯಾಗಲೀ ಆ ಕೋಣೆಗೆ ಸೀದಾ ನಡೆದುಬರುತ್ತಿದ್ದರು. ನೆಲದ ಮೇಲೆ ಕುಳಿತು ಪಕ್ಕದ ಕ್ಯಾಂಟೀನ್ ನ ಒಂದು ಕಾಫಿ ಕುಡಿದು ಹೋಗುತ್ತಿದ್ದರು. ಗಾಂಧಿ ಎನ್ನುವ ಪವಾಡವೊಂದೇ ಅವರಿಗೆ ಹತ್ತಿರವಾದದ್ದು.

‘ಏನು ಗೊತ್ತಾ ಮೋಹನ್, ನಾನು ಗಾಂಧಿಯವರ ಕೈ ಮುಟ್ಟಿದ್ದೇನೆ’ ಎಂದು ಅವರು ಬಣ್ಣಿಸುವಾಗ ಅವರ ಮುಖದಲ್ಲಿ ಒಂದು ದೀಪಾವಳಿ.

ಕಾಲೇಜಿಗೆ ಹೋಗುವಾಗಲೇ ಪುಸ್ತಕಗಳನ್ನು ಬದಿಗಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಎಚ್ ಎನ್ ಅಂದು ತೊಟ್ಟ ಗಾಂಧಿ ಟೋಪಿಯನ್ನು ಎಂದೂ ಬದಿಗಿಡಲಿಲ್ಲ.

ಗಾಂಧಿ ಬೆಂಗಳೂರಿಗೆ ಬಂದಾಗ ಜೊತೆಗಿದ್ದು ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಹೇಳಿದ ಕ್ಷಣ ಅವರ ಬದುಕಿನ ಪ್ರಶಸ್ತಿಗಳಲ್ಲೊಂದು. ಪದ್ಮ ಭೂಷಣ, ತಾಮ್ರ ಪತ್ರ ಹೀಗೆ ಅನೇಕ ಗೌರವಕ್ಕೆ ಪಾತ್ರರಾಗಿದ್ದರೂ ಅಲ್ಲ, ಅದೊಂದೇ ಸರಿಯಾದ ಪ್ರಶಸ್ತಿ ಎಂದು ಭಾವಿಸಿದ್ದರು.

ನಾನು ಓದಿದ ಸಂಗೀತ, ನೃತ್ಯ, ನಾಟಕ ವಿಭಾಗವಂತೂ ಎಚ್ ಎನ್ ಅವರ ನೆನಪುಗಳನ್ನೇ ಹೊದ್ದು ಮಲಗಿದೆ.

ದಶಕಗಳ ಕಾಲ ನ್ಯಾಷನಲ್ ಕಾಲೇಜಿನಲ್ಲಿ ಅಂತರ ವರ್ಗೀಯ ನಾಟಕಗಳ ಹಬ್ಬವನ್ನೇ ನಡೆಸಿದ ಎಚ್ ಎನ್ ಕುಲಪತಿಯಾದಾಗ ಮಾಡಿದ ಸ್ಮರಣೀಯ ಕೆಲಸಗಳಲ್ಲೊಂದು ಈ ವಿಭಾಗದ ಕನಸು ಬಿತ್ತಿದ್ದು.

ಬ್ರಿಟಿಷರ ವಿರುದ್ಧ ಹೋರಾಡಿ ಪ್ರಮುಖರೆಲ್ಲರೂ ಭೂಗತರಾದಾಗ, ಜೈಲು ಪಾಲಾದಾಗ ‘ಇಂಕಿಲಾಬ್’ ಎನ್ನುವ ಕೊರೆಯಚ್ಚಿನ ಪತ್ರಿಕೆಯನ್ನು ದಿನಗಟ್ಟಲೆ ನಡೆಸಿದ ಹುಡುಗ ಮೂಢನಂಬಿಕೆಯನ್ನು ಕಟ್ಟಿಹಾಕದೆ ಬಿಟ್ಟಾನೆಯೇ.. ಅದೇ ಕಾರಣಕ್ಕೆ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ ಪವಾಡ, ಮೂಢನಂಬಿಕೆ ವಿರುದ್ಧದ ಸಮಿತಿ ಇಡೀ ದೇಶದಲ್ಲಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತು.

ಮಾಸಾಶನವನ್ನು ಕಣ್ಣೆತ್ತಿಯೂ ನೋಡದ, ಪರೀಕ್ಷಕರಿಲ್ಲದೆ ಪರೀಕ್ಷೆ ನಡೆಸಿದ, ಅಟೆಂಡೆನ್ಸ್ ನಲ್ಲಿ ತನ್ನ ಅಧ್ಯಾಪಕರು ರುಜು ಹಾಕುವುದು ಅವರಿಗೆ ತಾನು ಮಾಡುವ ಅಪಮಾನ ಎಂದು ನಂಬಿದ್ದ ಎಚ್ ಎನ್ ಆ ಕೋಣೆಯ ತೆರೆದ ಬಾಗಿಲಿನಿಂದ ಹೊರಟೇಬಿಟ್ಟರು.

ಇದೆಲ್ಲ ನೆನಪಾಗುತ್ತಾ.. ಆ ಕೋಣೆಯಲ್ಲಿ ನಾನು ನಿಂತು ಆಗಲೇ ಒಂದು ಗಂಟೆ ಮೀರಿತ್ತು. ಕ್ಯಾಂಟೀನ್ ನಿಂದ ಚಿಮ್ಮಿದ ಹೊಗೆಗೆ ಕೆಮ್ಮುತ್ತಾ ನಿಂತೆ. ತಕ್ಷಣ ಮತ್ತೆ ಎಚ್ ಎನ್ ನೆನಪಾದರು.

ಅವರು ತಮ್ಮ ಅಂತ್ಯಸಂಸ್ಕಾರ ಹೇಗಿರಬೇಕು ಎಂದು ಬದುಕಿದ್ದಾಗಲೇ ಬರೆದಿಟ್ಟಿದ್ದವರು. ತಮ್ಮ ಅಂತ್ಯ ಸಂಸ್ಕಾರಕ್ಕೆ ಬೇಕಾದ ಹಣವನ್ನು ಎತ್ತಿಟ್ಟಿದ್ದವರು.

ಅಷ್ಟೇ ಅಲ್ಲ ಗೆಳೆಯರ ಬಳಿ ಸದಾ ತಮ್ಮ ಬಿಳಿ ಹಲ್ಲುಗಳನ್ನು ಬಿಟ್ಟು ಎಲ್ಲರಿಗೂ ಕೇಳುವಂತೆ ಗೊಳ್ ಎಂದು ನಗುತ್ತ ‘ನೋಡಪ್ಪಾ ನನ್ನ ಅಂತ್ಯಸಂಸ್ಕಾರಕ್ಕೆ ಹಸಿ ಸೌದೆ ಬಳಸಬೇಡ, ಏಕೆಂದರೆ ನನಗೆ ಉಬ್ಬಸ, ಹೊಗೆ ತಡೆಯೋದಿಕ್ಕಾಗುವುದಿಲ್ಲ’ ಎಂದವರು.

ಆ ಕೋಣೆಯಿಂದ ಅವರು ಹೊರನಡೆದರು. ಈಗ ಸಮಾಜದಲ್ಲಿರುವುದು ಬೆಳಕೋ ಕತ್ತಲೋ.. ಗೊಂದಲ.


ನಾಡಿದ್ದು (ಶನಿವಾರ) ಎಚ್ ಎನ್ ಅವರ ಜನ್ಮ ಶತಮಾನೋತ್ಸವ.
ಅದರ ಅಂಗವಾಗಿ ಇನ್ನಿಲ್ಲದಂತೆ ನೆನಪಾದರು ಎಚ್ ಎನ್

ತಿಪಟೂರು ಯುವಕನಿಗೆ ಕೊರೊನಾ ಸೋಂಕು

ತಿಪಟೂರು: ಇಲ್ಲಿನ ಗಾಂಧಿ ನಗರದ ಮದಿನ ವೃತ್ತದಲ್ಲಿರುವ ಯುವಕನ್ನೊಬ್ಬನಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ತಿಪಟೂರಿನಲ್ಲಿ ಸೋಂಕಿತರ ಸಂಖ್ಯೆ ಎರಡಕ್ಕೇರಿದೆ.‌ಈಚೆಗೆ ಮುಂಬೈಗೆ ಹೋಗಿ ಬಂದಿದ್ದ ಲಾರಿ‌‌ ಚಾಲಕನಿಗೆ ಸೋಂಕು ತಗುಲಿತ್ತು.

ಈ ಯುವಕ ಉತ್ತರ ಪ್ರದೇಶದಲ್ಲಿ ನಡೆದ ತಬ್ಲೀಗಿ ಸಮಾವೇಶಕ್ಕೆ ಹೋಗಿದ್ದನು.‌ ಈಚೆಗೆ ತುಮಕೂರಿಗೆ ವಾಪಸ್ ಆಗಿದ್ದ ಈತನನ್ನು ಕ್ವಾರಂಟೈನ್ ಮಾಡಲಾಗಿತ್ತು. ಈತನೊಂದಿಗೆ ಇನ್ನೂ ಆರು ಮಂದಿ ತೆರಳಿದ್ದರು.

ಡಿಕೆಶಿ ಪದಗ್ರಹಣ: ಗ್ರಾಮಗಳಲ್ಲಿ ನೇರ ಪ್ರಸಾರ: ರಾಜೇಂದ್ರ

ತುಮಕೂರು: ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸಲು ಸಮರ್ಥ ಹಾಗೂ ದಕ್ಷ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿರುವುದು ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ತಂದಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ತಿಳಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ನಿಮಿತ್ತ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್-19ರ ಹಿನ್ನಲೆಯಲ್ಲಿ ಅಧ್ಯಕ್ಷರ ಪದಗ್ರಹಣದಲ್ಲಿ ಭಾಗವಹಿಸಲು ಕಷ್ಟಸಾಧ್ಯ, ಅದ್ದುದರಿಂದ ಜಿಲ್ಲೆಯ ಎಲ್ಲಾ ಪಂಚಾಯ್ತಿ ಮಟ್ಟದಲ್ಲಿ ಮತ್ತು ವಾರ್ಡಗಳಲ್ಲಿ ಎಲ್.ಇ.ಡಿ.ಗಳನ್ನು ಅಳವಡಿಸಿ, ಪ್ರತಿಯೊಬ್ಬ ಕಾರ್ಯಕರ್ತರು ನೇರವಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ವೀಕ್ಷಿಸುವಂತೆ ವ್ಯೆವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ತರುವ ಕೆಲಸವನ್ನು ಮಾಡುತ್ತೇನೆ. ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ವವನ್ನು ಸಂಘಟಿಸುವ ಕೆಲಸ ಮಾಡಬೇಕಿದೆ ಎಂದರು.

ತುಮಕೂರು ಉಸ್ತುವಾರಿ ಭವ್ಯ ಮಾತನಾಡಿ, ಕೋರೋನ ಸಂದರ್ಭದಲ್ಲಿ ರಾಜೇಂದ್ರ ಸುಮಾರು ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು. ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಎಲ್ಲರೂ ಸನ್ನದ್ಧರಾಗಬೇಕು. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಬೇಕೆಂದರು.

ರಾಜ್ಯ ಯುವ ಕಾಂಗ್ರೆಸ್ನ ಉಸ್ತುವಾರಿ ರಾಘವೇಂದ್ರ ಪ್ರಸಾದ್ ಮಾತನಾಡಿ ತುಮಕೂರು ಜಿಲ್ಲೆಯ ಎಲ್ಲಾ 11 ತಾಲ್ಲೂಕುಗಳಿಗೂ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು. ಪ್ರತಿ ಬೂತ್ ಗೆ 5 ಜನ ಕಾರ್ಯಕರ್ತರನ್ನು ನೇಮಕ ಮಾಡಿ ಪ್ರತಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಸಮಾರಂಭವನ್ನು ವೀಕ್ಷಸಲು ಅನುಕೂಲ ಮಾಡಬೇಕೆಂದರು.

ನಮ್ಗೂ 50‌ ಲಕ್ಷ ವಿಮೆ‌ ನೀಡಿ…

Publicstory. in


ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ 50 ಲಕ್ಷ ರೂಪಾಯಿ ವಿಮೆಯನ್ನು ನೀಡಬೇಕು, ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷತಾ ಸಲಕರಣೆಗಳಾದ ಸ್ಯಾನಿಟೈಜರ್, ಮಾಸ್ಕ್, ಕೈಕವಚಗಳನ್ನು ನೀಡಬೇಕು. ಅನಾರೋಗ್ಯವಿರುವ ಸಿಬ್ಬಂದಿಗೆ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ ಸಿಐಟಿಯು ಒತ್ತಾಯಿಸಿದೆ.

ಮೇ 4 ರಿಂದ ಕೆಲಸಕ್ಕೆ ಹಾಜರಾಗಿರುವ ಎಲ್ಲರಿಗೆ ಹಾಜರಾತಿ ನೀಡಬೇಕು. ಕೆಲಸಕ್ಕೆ ಹಾಜರಾದಾಗ್ಯೂ ಕೆಲಸ ನೀಡದ ರಜೆ ಹಾಕುವ ಪದ್ದತಿಯನ್ನು ಕೈಬಿಡಬೇಕು. ಹಾಗೂ ಕೊರೊನ ಸಂಕಷ್ಟದ ಸ್ಥಿತಿಯಲ್ಲಿ ಹೆಚ್ಚು ಕೆಲಸದ ಒತ್ತಡವನ್ನು ಹೇರಬಾರದು.

ಕೆಲಸಕ್ಕೆ ಹಾಜರಿದ್ದರೂ ಕರ್ತವ್ಯ ನೀಡದ ಆಡಳಿತ ಮಂಡಳಿಯ ಕ್ರಮಕ್ಕೆ ಬದಲಾಗಿ ಚಾಲಕರು, ನಿರ್ವಾಹಕರ ವೈಯಕ್ತಿಕ ಖಾತೆಗಳ ರಜೆಗಳನ್ನು ಕಡಿತಗೊಳಿಸಬಾರದು. ಸಾರಿಗೆ ನೌಕರರಿಗೆ ಕ್ಯಾಂಟಿನ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್‍ರವರಿಗೆ ಮನವಿ ಪತ್ರ ನೀಡಿದರು.

ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಂಸ್ಥೆಯ ಕೇಂದ್ರ ಕಚೇರಿಯಿಂದ ಸಂಕಷ್ಟ ನಿರ್ವಹಣೆಯ ಸಂಬಂಧ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಬರುತ್ತಿರುವ ಸುತ್ತೋಲೆಗಳ ಅನ್ವಯ ಕೆಲಸ ನಿರ್ವಹಿಸುತ್ತಿರುವುದಾಗಿ ಇದು ಒಂದು ಆಕಸ್ಮಿಕ ಪರಿಸ್ಥಿತಿಯಾಗಿದ್ದು, ಯಾವುದೇ ಕೊರತೆಗಳಿದ್ದಲ್ಲಿ ನೌಕರರು ತಮ್ಮ ಗಮನಕ್ಕೆ ತಂದರೆ ತಕ್ಷಣವೇ ಪರಿಹರಿಸಲಾಗುವುದು ಎಂದರು.

ಚರ್ಚೆಯಲ್ಲಿ ವಿಭಾಗೀಯ ಟ್ರಾಫಿಕ್ ಕಂಟ್ರೋಲರ್ ಪ್ರಕೃದ್ದೀನ್, ಭದ್ರತಾ ಜಾಗೃತಿ ಅಧಿಕಾರಿ ಲಕ್ಷ್ಮಣ್ ಹಾಜರಿದ್ದರು. ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸೈಯದ್ ಮುಜೀಬ್, ಜಿಲ್ಲಾಧ್ಯಕ್ಷ ಎ.ಆರ್. ದೇವರಾಜು, ಪ್ರಧಾನ ಕಾರ್ಯದರ್ಶಿ ಸಮೀವುಲ್ಲಾ, ಖಜಾಂಚಿ ರಾಜಣ್ಣ ಕೆ, ಉಪಾಧ್ಯಕ್ಷರಾದ ಪಿ.ಶಶಿಧರ್, ಸಂಘಟನಾ ಕಾರ್ಯದರ್ಶಿ ಜಿ.ರಮೇಶ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಹಾಜರಿದ್ದರು.

ಸಾರಿಗೆ ಸಿಬ್ಬಂದಿಯ ಅಹವಾಲು ಸಮಾಧಾನದಿಂದ ಆಲಿಸಿದ ಹಾಗೂ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಗಜೇಂದ್ರ ಕುಮಾರ್ ಅವರಿಗೆ ಸಂಘದ ಜಿಲ್ಲಾ ಸಮಿತಿಯು ಅಭಿನಂದಿಸಿದೆ.

ತುಮಕೂರು: 37 ಸಾವಿರ ವಿದ್ಯಾರ್ಥಿಗಳು ಬರೆಯಲಿದ್ದಾರೆ Sslc ಪರೀಕ್ಷೆ

ತುಮಕೂರು: ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಒಟ್ಟು 723 ಶಾಲೆಗಳ 37317 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ತುಮಕೂರಿನ 7 ಬ್ಲಾಕ್ ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 92 ಹಾಗೂ ಮಧುಗಿರಿಯ 9 ಬ್ಲಾಕ್ ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 68 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ತುಮಕೂರಿನ 2 ಹಾಗೂ ಮಧುಗಿರಿಯ 1 ಕೇಂದ್ರದಲ್ಲಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮಧುಗಿರಿಯ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಪಾವಗಡ ತಾಲ್ಲೂಕಿನ ಅನುದಾನಿತ ಶಾಲೆಯಾದ ವೈ.ಎನ್. ಹೊಸಕೋಟೆಯ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವೆಂದು ಗುರುತಿಸಲಾಗಿದೆ ಎಂದು ಡಿಡಿಪಿಐ ಎಂ.ಆರ್. ಕಾಮಾಕ್ಷಿ ಹಾಗೂ ರೇವಣ್ಣ ಸಿದ್ದಪ್ಪ ಸಭೆಗೆ ಮಾಹಿತಿ ನೀಡಿದರು.

ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆಯನ್ನು ಸುಗಮವಾಗಿ ಬರೆಯಲು ಅನುಕೂಲವಾಗುವಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸಿಸಿಟಿವಿ ಅಳವಡಿಸದೆ ಇರುವ ಪರೀಕ್ಷಾ ಕೇಂದ್ರಗಳಿಗೆ ಕೂಡಲೇ ಅಳವಡಿಸಲು ಕ್ರಮವಹಿಸಬೇಕು. ಸಿದ್ಧಗಂಗಾ ಮಠ ಸೇರಿದಂತೆ ವಸತಿ ಶಾಲೆಗಳಲ್ಲಿ ಉಳಿದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪಟ್ಟಿಯನ್ನು ತಮಗೆ ಸಲ್ಲಿಸಬೇಕೆಂದು ಡಿಡಿಪಿಐಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ನಿಯೋಜಿತ ಪರೀಕ್ಷಾ ಸಿಬ್ಬಂದಿಗಳಿಗೆ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಪರೀಕ್ಷಾ ಕಾರ್ಯಕ್ಕೆ ಸ್ವಯಂ ಸೇವಕರ ಅಗತ್ಯವಿದ್ದಲ್ಲಿ ಕೂಡಲೇ ಮಾಹಿತಿ ನೀಡಿದಲ್ಲಿ ಎನ್ಸಿಸಿ/ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಮುಖ್ಯಸ್ಥರಿಗೆ ಸ್ವಯಂ ಸೇವಕರನ್ನು ಒದಗಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಜಿ.ಪಂ. ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಮಂಜುನಾಥ, ಡಿಹೆಚ್ಓ ಡಾ: ನಾಗೇಂದ್ರಪ್ಪ, ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಎನ್ಸಿಸಿ/ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮತ್ತಿತರರು ಹಾಜರಿದ್ದರು.