Saturday, May 9, 2026
Google search engine
Home Blog Page 212

ಜುಲೈ 1ಕ್ಕೆ ಸ್ಕೂಲ್ ಓಪನ್ ಇನ್ನೂ‌ ಡೌಟ್

ಶಾಲೆಗಳನ್ನು ಪುನಾರಾರಂಭಗೊಳ್ಳಲು ಉದ್ದೇಶಿಸಿರುವ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಜುಲೈ 1 ರಿಂದ ಶಾಲೆ ಪ್ರಾರಂಭ ಮಾಡಬೇಕೆಂಬುದು ನಿರ್ಧಾರಿತ ದಿನಾಂಕವಲ್ಲ, ಯೋಜಿತ ದಿನಾಂಕವಷ್ಟೇ ಎಂದಿದ್ದಾರೆ. ಜುಲೈ 1ಕ್ಕೆ ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳುವ ಬಗ್ಗೆ ವರದಿಗಳು ಬಂದಿದ್ದವು.

ಇದರಿಂದ ಪೊಷಕರು ಮತ್ತು ಮಕ್ಕಳು ಗೊಂದಲಕ್ಕೀಡಾಗಿದ್ದರು. ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮತ್ತು ಲಾಕ್ಡೌನ್ ತೆರವುಗೊಂಡಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದುಸ್ಸಾಹಸವಾಗಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಕಳವಳಗೊಂಡಿದ್ದರು.

SSLC ಪರೀಕ್ಷಾ ಸಿದ್ಧತೆ ಪರಿಶೀಲನಾ ಸಭೆ ನಡೆಸಲು ಬಾಗಲಕೋಟೆಗೆ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ಶಿಕ್ಷಣ ಸಚಿವ ಸುರೇಶಕುಮಾರ್, ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಮುನ್ನ ಪಾಲಕರ ಅಭಿಪ್ರಾಯ ಕ್ರೂಢೀಕರಣಕ್ಕೆ ನಿಧಾ೯ರಿಸಲಾಗಿದೆ. ಪಾಲಕರ ಮತ್ತು ಎಸ್.ಡಿ.ಎಂ.ಸಿ ಸದಸ್ಯರ ಅಭಿಪ್ರಾಯ ಕ್ರೂಡೀಕರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಬಗ್ಗೆ ಜೂನ್ 15ಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಬೇಕು. ನಂತರ ಕೇಂದ್ರ ನೀಡುವ ವರದಿಗೆ ಅನುಸಾರ ನಿರ್ಧಾರ ಮಾಡಲಿದ್ದೇವೆ ಎಂದು ತಿಳಿಸಿದರು.

ಅಯ್ಯೊಯ್ಯೋ ಕರಡಿಯೇ…

Publicstory. in


ತುಮಕೂರು/ಕೊರಟಗೆರೆ: ಅಯ್ಯೊಯ್ಯೋ ಕರಡಿಯೇ…

ಅಲ್ಲಿ ನೋವು ಮರಡಿಕಟ್ಟಿತ್ತು.‌ ಓಹ್, ಹೀಗಾಗಬಾರದಿತ್ತು. ಅದು ಬದುಕಬೇಕಿತ್ತು ಎಂದು ಹೇಳಿದವರೇ ಹೆಚ್ಚು.

ಟೇಬಲ್ ಮೇಲೆ‌ ರಾಜ ಗಂಭೀರದಂತೆ ಆ ಜಾಂಬವಂತನ ನೋಡಿ ಕೆನ್ನೆ ಹನಿ ನೀರು ಬೀಳಿಸಿಕೊಂಡವರೇ ಹೆಚ್ಚು.

ಕಳ್ಳ ಬೇಟಿಯ ಉರುಳಿಗೆ ಬಿದ್ದು ನರಳಾಡುತ್ತಿದ್ದ ಈ ಗಂಡು ಕರಡಿಗೆ ಏನೇನು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿತು.

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎ.ವೆಂಕಟಾಪುರ ಗ್ರಾಮದ ಗುಟ್ಟೆಯಲ್ಲಿ ಇದು ಸಿಲುಕಿತ್ತು. ಘಟನೆ ನಡೆದಿದೆ. ಕಳೆದ 10ದಿನದ ಹಿಂದೆಯೇ ಕರಡಿ ಸಿಲುಕಿ ನರಳಾಟ ನಡೆಸಿದೆ.

ಅಲ್ಲಿಂದ‌‌ ಹೇಗೋ ತಪ್ಪಿಸಿಕೊಂಡು ಆಹಾರಕ್ಕಾಗಿ ಪರದಾಡಿ ರಸ್ತೆಯ ಬದಿಯಲ್ಲಿ ಬಿದ್ದಿದೆ.

ಗ್ರಾಮಸ್ಥರ ನೆರವಿನಿಂದ ಕರಡಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿವರ್ಗ ಚಿಕಿತ್ಸೆಗಾಗಿ ಕೊರಟಗೆರೆಯ ಪಶುಇಲಾಖೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶಚಂದ್ರ, ಅರಣ್ಯ ಸಿಬ್ಬಂದಿಗಳಾದ ನಾಗಾರಾಜು, ಹನುಮಂತಯ್ಯ, ನಂದೀಶ್, ನೇಹಜುಲ್ ತಸ್ಮೀಯಾ, ನರಸಿಂಹಯ್ಯ, ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ಕೊರೊನಾ ಖರೀದಿ’ ಕಿಕ್ ಬ್ಯಾಕ್ ಆರೋಪ: ತನಿಖೆ ಆರಂಭಿಸಿದ ACB

Publicstory. in


ತುಮಕೂರು: ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರದ ಆರೋಪದ ತನಿಖೆಗೆ ಎಸಿಬಿ ಪೀಲ್ಡಿಗೆ‌ ಇಳಿದಿದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಡಿಎಚ್ಒ ಡಾ ಚಂದ್ರಿಕಾ ಅವರನ್ನು ಸರ್ಕಾರ ಈಗಾಗಲೇ ವರ್ಗಾವಣೆ ಮಾಡಿದೆ. ಅಲ್ಲದೆ ಪದೋನ್ನತಿ ನೀಡಿ ಉಪ ನಿರ್ದೇಶಕರ ಹುದ್ದೆಗೆ ಕೂರಿಸಿದೆ.

ಚಂದ್ರಿಕಾ ಅವರ ವರ್ಗಾವಣೆ ಜಾತಿ ಕೇಂದ್ರಿತ ಎಂಬ ಗಂಬೀರ ಆರೋಪವನ್ನು ಜಿಲ್ಲೆಯ ದಲಿತ ಸಮುದಾಯ ಈಗಾಗಲೇ ಮಾಡಿದೆ.‌

ವರ್ಗಾವಣೆ ಹಿಂದೆ ಪಟ್ಟಭಧ್ರ ಕೆಲವು ಅಧಿಕಾರಿಗಳು, ಕೆಲವು ರಾಜಕಾರಣಿಗಳು
ಚಿತಾವಣೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ. ದಕ್ಷ ದಲಿತ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ದಲಿತ ಮುಖಂಡರ ಮತ್ತು ಸಂಘಟನೆಗಳ ಗಂಭೀರ ಆರೋಪದ ನಡುವೆಯೇ ಎಸಿಬಿ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.

ಸರಕಾರ ಯಾವುದೇ ತನಿಖೆ ನಡೆಸದೆ ಅಧಿಕಾರಿಯನ್ನು ಏಕಾಏಕಿ ವರ್ಗಾವಣೆ ಮಾಡಿದ್ದು ತಪ್ಪು ಎಂದು ಅನೇಕರು ಹೇಳುತ್ತಿದ್ದಾರೆ.‌

ಇಲಾಖೆಯಲ್ಲಿ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಬೇಕೆಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಾದಿಕ್ ಪಾಷ‌ ದೂರಿನ ಹಿನ್ನೆಲೆಯಲ್ಲಿ ಜೂನ್ 5ರಂದು ತನಿಖೆಗೆ ಹಾಜರಾಗುವಂತೆ ಚಂದ್ರಿಕಾ ಅವರಿಗೆ ಎಸಿಬಿ ನೋಟಿಸ್ ನೀಡಿದೆ.

ಪಿಪಿಇ ಕಿಟ್ ಗಳು, ಸ್ಯಾನಿಟೈಸರ್ ಮತ್ತು ಜ್ವರ ಪರೀಕ್ಷೆ ಮಾಡುವ ಮಾಪನವನ್ನು ಕೇಂದ್ರೀಕೃತ ಖರೀದಿ ಮೂಲಕ ಖರೀದಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

ಈಗಿನ ವ್ಯವಸ್ಥೆಯಲ್ಲಿ ಕೇಂದ್ರೀಕೃತ ಖರೀದಿಗೆ ಅವಕಾಶ ಇಲ್ಲ. ಆಯಾ ಪ್ರಾಥಮಿಕ ಕೇಂದ್ರಗಳ ವೈದ್ಯಾಧಿಕಾರಿಗಳು ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಬೇಕಾಗಿದೆ.
ಆದರೆ ಅದಕ್ಕೆ ಅವಕಾಶ ನೀಡದೆ ಏಜೆನ್ಸಿಯೊಂದಕ್ಕೆ ಸರಬರಾಜು ಮಾಡಲು ಅವಕಾಶ ನೀಡಿದ್ದಾರೆ. ಸಾಕಷ್ಟು ಸಾಮಗ್ರಿಗಳು ಬರುವುದಕ್ಕೂ ಮುನ್ನವೇ ಬಿಲ್ ಪಾವತಿಸಲಾಗಿದೆ ಎಂದು ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಗಂಭೀರ ಆರೋಪ ಮಾಡಿದ್ದರು.

ಈ ಆರೋಪಗಳ ಹಿನ್ನೆಲೆಯಲ್ಲಿ ಡಾಕ್ಟರ್ ಚಂದ್ರಿಕಾ ಅವರನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು .ಆದರೆ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಅವರನ್ನು ಆರೋಗ್ಯ ಇಲಾಖೆಯ ಉಪ ನಿರ್ದೇಶಕರನ್ನಾಗಿ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದ್ದು ಸಹ ಹಲವರು ಹುಬ್ಬೇರುವಂತೆ ಮಾಡಿತ್ತು.

ಚಂದ್ರಿಕಾ ಅವರ ವರ್ಗಾವಣೆ ವಿಷಯ ಜಾತಿ ಕೇಂದ್ರಿತ ವಾಗುತ್ತಿದ್ದಂತೆ ಆ ವಿಚಾರದಿಂದ ರಾಜಕಾರಣಿಗಳು ದೂರ ಉಳಿಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ‌ ಹಾಗೂ ಸಂಸದರೊಬ್ಬರ ಕೊರಳಿಗೆ ಈ ಆರೋಪ ಸಿಲಿಕಿದೆ.

ಒಕ್ಕಲಿಗ ಅಧಿಕಾರಿಗಳಿಗೂ ಕಿರುಕುಳ ನೀಡಿ ಜಿಲ್ಲೆಯಿಂದ ಹೊರ ಹಾಕಲಾಗುತ್ತಿದೆ. ವರ್ಗಾವಣೆ ಆಗಿ ಬಂದವರನ್ನು ಅಧಿಕಾರ ವಹಿಸಿಕೊಳ್ಳಲು ಬಿಡುತ್ತಿಲ್ಲ ಎಂಬ ಆರೋಪವೂ ಗಟ್ಟಿಗೊಳ್ಳ ತೊಡಗಿದೆ. ಇದು‌ ಜಿಲ್ಲೆಯಲ್ಲಿ ಸರ್ಕಾರಿ ಸಿಬ್ಬಂದಿ ನಡುವೆ ಕೆಟ್ಟ ಪರಿಣಾಮವನ್ನೇ ಬೀರತೊಡಗಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಚಂದ್ರಿಕಾ ಅವರ ಮೇಲೆ ಕೇಳಿ ಬಂದ ಆರೋಪ ಕುರಿತು ಕೆಟಿಪಿಪಿ ಕಾಯ್ದೆ ಅನುಸಾರ ತನಿಖೆ ಕೈಗೊಂಡು ಅದರ ವರದಿ ಬರುವವರೆಗೂ ಏನನ್ನು ಹೇಳುವುದು ಸರಿ‌ ಅಲ್ಲ.‌ ಪ್ರಾಮಾಣಿಕ ಅಥವಾ ಅಪ್ರಾಮಾಣಿಕ ಅಧಿಕಾರಿಗಳ ವಿಷಯದಲ್ಲಿ‌ ಪದೇ ಪದೇ ಜಾತಿ ಕೇಂದ್ರಿತವಾಗಿ ನೋಡುವುದನ್ನು ರಾಜಕಾರಣಿಗಳು ಸಹಿತ ಎಲ್ಲರೂ ಬಿಡಬೇಕಾಗಿದೆ.

ಒಂದು ಸಮುದಾಯದ ಸರ್ಕಾರಿ ನೌಕರರು, ಅಧಿಕಾರಿಗಳನ್ನು ಮೂಲೆ ಗುಂಪು ಮಾಡುವುದು‌ ಅಥವಾ ವರ್ಗಾವಣೆ‌ ಶಿಕ್ಷೆ ಅಥವಾ ಆರೋಪ ಮಾಡಿಸುವುದನ್ನು ಸಹ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೈ ಬಿಡಬೇಕು.


ಎಲ್ಲ ಜಾತಿಗಳಲ್ಲೂ ಪ್ರಾಮಾಣಿಕ, ಅಪ್ರಾಮಾಣಿಕ ಅಧಿಕಾರಿಗಳು ಇರುತ್ತಾರೆ ಎಂಬುದನ್ನು ಯಾರೂ ಮರೆಯಬಾರದು. ಇದನ್ನು ಜಿಲ್ಲೆಯ ಬೆವರು ಹನಿ ಪತ್ರಿಕೆಯ ಸಂಪಾದಕರಾದ ಕುಚ್ಚಂಗಿ ಪ್ರಸನ್ನ ತುಂಬಾ ಚೆನ್ನಾಗಿ ಬರೆದಿದ್ದಾರೆ.


ಚಂದ್ರಿಕಾ ಅವರ‌ ಮೇಲೆ ಆರೋಪ ಕೇಳಿ ಬಂದ ಕ್ಷಣವೇ ವರ್ಗಾವಣೆ ಮಾಡಿದ್ದು ಸಹ ತಪ್ಪೇ. ಆದರೆ ಈ ಸಂದರ್ಭದಲ್ಲಿ ಶೀಘ್ರದಲ್ಲೇ ತನಿಖೆಗೆ ಆದೇಶಿಸಿ ಕೆಟಿಪಿಪಿ ಕಾಯ್ದೆಯಂತೆ ನಡೆದುಕೊಂಡಿದ್ದರೆ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚುತ್ತಿತ್ತು.

ಮೇಲ್ನೋಟದ ಪ್ರಾಥಮಿಕ ತನಿಖೆಯನ್ನು ಸಹ ನಡೆಸದೆ ಅಧಿಕಾರಿಯನ್ನು ವರ್ಗ ಮಾಡಿದ್ದು ಏಕೆ ಎಂದು ದಲಿತ ಮುಖಂಡರು ಪ್ರಶ್ನಿಸುತ್ತಿದ್ದಾರೆ.ಇನ್ನೊಂದೆಡೆ ಚಂದ್ರಿಕಾ ಅವರು ವರ್ಗಾವಣೆಯಾದ ಸ್ಥಾನಕ್ಕೆ ಯಾವುದೇ ಆಡಳಿತದ ಹೆಚ್ಚು ಅನುಭವ ಇಲ್ಲದ ಡಾಕ್ಟರ್ ನಾಗೇಂದ್ರಪ್ಪ ಅವರನ್ನು ಡಿಎಚ್ಒ ಸ್ಥಾನಕ್ಕೆ ಕೂರಿಸಿದ್ದು ಸಹ ವರ್ಗಾವಣೆ ಹಿಂದೆ ಜಾತಿ ವಾಸನೆ ಹೆಚ್ಚು ಮಾಡಲು ಕಾರಣವಾಯಿತು.

ಭೃಂಗದ ಬೆನ್ನೇರಿ ಬಂತು..

ಜಿ ಎನ್ ಮೋಹನ್


ಅದು ಹೀಗಾಯ್ತು-

ಮೊನ್ನೆ ಒಂದು ಪುಸ್ತಕದ ಅಂಗಡಿಯ ಬೆನ್ನತ್ತಿ ಒರಿಸ್ಸಾಗೆ ಹೋದ ಕಥೆ ಹೇಳುತ್ತಿದ್ದೆನಲ್ಲಾ ಆಗ ಏಕಾಏಕಿ ‘ದುಂಬಿಗೆ ಮಕರಂದ ಯಾವ ಜಾಗದ, ಯಾವ ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು ಗೊತ್ತಾಗುವುದಿಲ್ಲವೇ..’ ಎಂದು ಬರೆದುಬಿಟ್ಟೆ.

ಆದರೆ ಮರುಕ್ಷಣ ನನ್ನ ಬೆರಳು ನನ್ನ ಕೆನ್ನೆಯ ಮೇಲೆ ಹೋಗಿ ಕೂತಿತ್ತು. ಹೌದು ಬರೆದದ್ದೇನೋ ಬರೆದೆ. ಆದರೆ ದುಂಬಿಗೆ ಮಕರಂದ ಯಾವ ಜಾಗದ ಯಾವ ಹೂವಿನಲ್ಲಿ ಯಾವ ಮೂಲೆಯಲ್ಲಿ ಇರುತ್ತದೆ ಎನ್ನುವುದು ಹೇಗೆ ಗೊತ್ತಾಗುತ್ತದೆ ಎನ್ನುವ ವಿಷಯ ತಲೆ ಕೊರೆಯಲಾರಂಭಿಸಿತು.

ಹಾಗೆ ನೋಡಿದರೆ ಜೇನ್ನೊಣ ನನಗೆ ಅಪರಿಚಿತ ಏನಲ್ಲ. ಜೇನು ಕೀಳುವವರ ಹಿಂದೆ, ಜೇನು ನೊಣಗಳ ಹಿಂದೆ, ಜೇನಿನ ಪಾಠ ಮಾಡುವ ಪ್ರೊಫೆಸರ್ ಗಳ ಹಿಂದೆ, ಜೇನಿನ ಅಧ್ಯಯನ ಮಾಡುವ ಸಂಶೋಧಕರ ಜೊತೆ ಸಾಕಷ್ಟು ಕಾಲ ಕಳೆದಿದ್ದೇನೆ.

ಅದಕ್ಕೆ ಕಾರಣ ನಾವು ಇದ್ದ ಮನೆಯ ಎದುರೇ ಕೃಷಿ ವಿಶ್ವವಿದ್ಯಾಲಯವಿದ್ದದ್ದು ಹಾಗೂ ನನ್ನ ಅಣ್ಣ ಕೃಷಿ ಅಧ್ಯಯನ ಮಾಡುತ್ತಾ ಇದ್ದದ್ದು.

ಒಮ್ಮೆ ಹೀಗಾಯ್ತು. ನಮ್ಮ ಮನೆಯ ಪಕ್ಕ ಕಟ್ಟಡ ಕಟ್ಟಲು ಸಾಕಷ್ಟು ಲೋಡ್ ಕಲ್ಲು ಬಂದು ಬಿತ್ತು. ಪಾಪ ಏನಾಯಿತೋ ಏನೋ ಅಲ್ಲಿ ಕಲ್ಲು ಬಂದು ಬಿತ್ತೇ ಹೊರತು ಕಟ್ಟಡ ಏಳುವ ಯಾವ ಲಕ್ಷಣವೂ ಕಾಣಲಿಲ್ಲ. ಹಾಗಾಗಿ ನಮಗೆ ಅದೇ ಆಟದ ತಾಣ, ಅಪ್ಪ ಅಮ್ಮನಿಗೆ ಏನೆಂದರೆ ಏನೂ ಕೈಗೆ ಸಿಗದಂತೆ ಮುಚ್ಚಿಡುವ ಸೇಫ್ ಲಾಕರ್. ಜೀರುಂಡೆಗೆ ದಾರ ಕಟ್ಟಿ ಹಾರಿಸಿ ನಂತರ ಅದನ್ನು ಸೇರಿಸಲು ಇದ್ದ ಗೂಡು.. ಹೀಗೆ ಏನೇನೋ ಆಗಿ ಬದಲಾಗಿಬಿಟ್ಟಿತ್ತು.

ಅಂತಹ ಕಲ್ಲುಗಳ ರಾಶಿಯ ಮಧ್ಯೆ ಒಂದು ದಿನ ಜೇನ್ನೊಣಗಳು ಜುಂಯ್ ಎಂದು ಶಬ್ದ ಮಾಡುತ್ತಾ ಹಾರುತ್ತಿದೆ. ಅದರ ಆವೇಶ ಎಷ್ಟಿತ್ತು ಎಂದರೆ ಹತ್ತಿರ ಹೋದರೆ ಕೊಂದೇ ಸಿದ್ಧ ಎನ್ನುವಂತೆ. ಒಂದು ಹೊಸ ನೆಲವನ್ನು ಆಕ್ರಮಿಸಿದ ಸೇನೆ ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮುನ್ಸೂಚನೆ ಕೊಡುವಂತೆ.

ಅಲ್ಲಿಂದ ಶುರುವಾಯ್ತು ನಮ್ಮ ಜೇನು ಅಧ್ಯಯನ. ಪ್ರತೀ ದಿನ ಆ ಕಲ್ಲಿನ ರಾಶಿಗಳ ನಡುವಿನಿಂದ ಜೇನ್ನೊಣಗಳು ಎದ್ದು ಹೊರಗೆ ಹಾರುವುದೂ, ಮತ್ತೆ ಗೂಡು ಸೇರುವುದೂ, ಕಮ್ಮನೆ ಪರಿಮಳ ಬರುವುದೂ ಹೀಗೆಯೇ. ಹೀಗೆ..

ಇದೆಲ್ಲವನ್ನೂ ನೋಡುತ್ತಿದ್ದ ಅಣ್ಣ ಒಂದು ದಿನ ತಮ್ಮ ಗೆಳೆಯ ಪ್ರೊಫೆಸರ್ ಜೊತೆ ಕಾರ್ಯಾಚರಣೆಗೆ ಇಳಿದೇಬಿಟ್ಟರು. ಮುಖಕ್ಕೆ ಟವಲ್ ಕಟ್ಟಿಕೊಂಡು ಅಂಗೈ ಮುಚ್ಚುವ ಶರ್ಟ್ ಧರಿಸಿ ಏನೇನೋ ಟ್ರಿಕ್ ಬಳಸಿ ಜೇನುಗೂಡಿಗೆ ಕೈ ಹಾಕಿಯೇ ಬಿಟ್ಟರು.

ಓಹ್ ! ಎಷ್ಟೊಂದು ಜೇನು.

ಆದರೆ ಆ ಪ್ರೊಫೆಸರ್ ಆ ಜೇನು ನೆಕ್ಕಿ ನೋಡುವ ಮನಸ್ಸೂ ಮಾಡುತ್ತಿಲ್ಲ. ಬದಲಿಗೆ ಅವರ ಗಮನವೆಲ್ಲ ಅದೊಂದೇ ಜೇನ್ನೊಣದ ಮೇಲೆ. ಅದು ರಾಣಿ ಜೇನು.

ಅವರು ರಾಣಿ ಜೇನಿನ ಬೆನ್ನತ್ತಿ ಬಂದಿದ್ದರು. ಕೊನೆಗೂ ಅದು ಸಿಕ್ಕೇಬಿಟ್ಟಿತು.

ಅವರು ಅದನ್ನು ಒಂದು ಬೆಂಕಿ ಪೊಟ್ಟಣದಲ್ಲಿ ಕೂಡಿಟ್ಟು ಆರಾಮು ಮಾತುಕತೆಗೆ ಇಳಿದರು. ನಾವು ಇತ್ತ ಜೇನು ನೆಕ್ಕಿ ಅವರ ಪಕ್ಕ ಹಾಜರಾದವರೇ ಅಲ್ಲಿದ್ದ ಬೆಂಕಿ ಪೊಟ್ಟಣ ಎಗರಿಸಿಕೊಂಡು ಬಂದು ಸದ್ದು ಮಾಡದಂತೆ ತೆರೆದೆವು. ಅಷ್ಟೇ..! ಅದಕ್ಕೆ ಕಾಯುತ್ತಾ ಕೂತಿದ್ದಂತೆ ಆ ರಾಣಿ ಜೇನು ಹಾರಿಹೋಗಿಯೇ ಬಿಟ್ಟಿತು.

ಆ ಪ್ರೊಫೆಸರ್ ಮುಖದಲ್ಲಿ ಮಡುಗಟ್ಟಿ ಹೋದ ಆ ನಿರಾಸೆಯನ್ನು ನನ್ನ ಮನದಿಂದ ಅಂದಿನಿಂದ ಇಂದಿನವರೆಗೂ ಹೊರ ಓಡಿಸಲು ಆಗಿಲ್ಲ.

ಹಾಗಾಗಿ ಅಂದಿನಿಂದ ಇಂದಿನವರೆಗೂ ಜೇನಿಗಿಂತ ಜೇನ್ನೊಣವೇ ನನ್ನನ್ನು ಆಕ್ರಮಿಸಿಬಿಟ್ಟಿದೆ.

ಇನ್ನೂ ಶಾಲೆಗೆ ಹೋಗುತ್ತಿದ್ದ ಆ ಕಾಲದಿಂದ ಇಂದಿನವರೆಗೂ ನನ್ನ ತಲೆಯಲ್ಲಿ ಆ ಜೇನ್ನೊಣದ ಮೊರೆತ.

ಮಂಗಳೂರಿಗೆ ಹೋಗಿ ಇಳಿದಾಗಲಂತೂ ನನಗೆ ಜೇನಿನ ಅಜ್ಜ ಎಂದೇ ಹೆಸರಾಗಿದ್ದ ಪೈಲೂರು ಲಕ್ಷ್ಮೀನಾರಾಯಣ ರಾಯರು ಸಿಕ್ಕಿ ಹೋದರು.

ಅವರು ಆ ಕಡಲ ನಗರಿಗೂ, ಪಶ್ಚಿಮ ಘಟ್ಟದವರಿಗೂ ಜೇನಿನ ಹುಚ್ಚು ಹಿಡಿಸಿದವರು. ಹಾಗಾಗಿ ನಾನು ಅವರ ಹಿಂದೆ ಸಾಕಷ್ಟು ಬಾರಿ ಜೇನು ಪಾಠ ಕೇಳುತ್ತಾ ಸುತ್ತಿದೆ.

ಅಷ್ಟೇ ಅಲ್ಲ ಅವರ ಮನೆಯ ಬಾಗಿಲಲ್ಲಿ ಕೂತು ಜೇನು ಪೆಟ್ಟಿಗೆ, ಜೇನು ಬೇಧ, ಜೇನಿನ ಪೆಟ್ಟಿಗೆ ಎಲ್ಲಿಡಬೇಕು, ಅದರೊಳಗಿನ ಮೇಣ ಏನು ಮಾಡಬೇಕು ಎನ್ನುವುದೆಲ್ಲಾ ತಲೆಯೊಳಗೆ ಕೂರಿಸಿಕೊಳ್ಳುತ್ತಾ ಹೋದೆ.

ಈ ಮಧ್ಯೆ ಜೋಗದ ಹಾದಿಯಲ್ಲಿರುವ ತಲವಾಟದ ರಾಘವೇಂದ್ರ ಶರ್ಮ ತಮ್ಮ ಮಾಂತ್ರಿಕ ಶೈಲಿಯಲ್ಲಿ ‘ಒಂದು ಜೇನಿನ ಹಿಂದೆ’ ಪುಸ್ತಕ ಬರೆದದ್ದೂ ಅಲ್ಲದೆ ಜೇನು ಗೂಡನ್ನು ಹೊತ್ತೊಯ್ದು ನಗರದಿಂದ ನದಿ ಈಜಲು, ಬೆಟ್ಟ ಹತ್ತಲು ಬರುತ್ತಿದ್ದ ಮಕ್ಕಳಿಗೆ ಹೊನ್ನೆಮರಡುವಿನಲ್ಲಿ ಪಾಠ ಮಾಡುತ್ತಾ ಇದ್ದರು.

ಹೀಗಿರುವಾಗಲೇ ಒಂದು ದಿನ ನಾನು ರಾಮಚಂದ್ರ ದೇವ ಬರೆದದ್ದನ್ನು ಓದಿದ್ದು. ಚಿಟ್ಟೆಗಳು ಎಲ್ಲಾ ಸಸ್ಯಗಳ ಮೇಲೂ ಹೋಗಿ ಕೂರುವುದಿಲ್ಲ. ಒಂದೊಂದು ಪ್ರಭೇದದ ಚಿಟ್ಟೆಗೆ ಅದರದ್ದೇ ಆದ ಸಸ್ಯಗಳ ಆಯ್ಕೆ ಇರುತ್ತದೆ ಅಂತ ಹೇಳುತ್ತಾ ಒಂದು ನೆನಪಿಡಿ ನಾವು ನಡೆಸುತ್ತಿರುವ ಪರಿಸರ ನಾಶದಿಂದಾಗಿ ಈ ಸಸ್ಯಗಳು ನಾಶವಾಗುತ್ತಾ ಹೋದರೆ ಬರೀ ಸಸ್ಯಗಳಲ್ಲ ಅದನ್ನೇ ಅವಲಂಭಿಸಿರುವ ಚಿಟ್ಟೆ ಸಂತತಿಯೂ ನಾಶವಾಗಿ ಹೋಗುತ್ತದೆ ಎಂದಿದ್ದರು.

ಹೌದಲ್ಲಾ.. ಎನಿಸಿ ಅರೆ ಕ್ಷಣ ಕಂಪಿಸಿದ್ದೆ. ಆದರೆ ಈಗ ಅದೇ ರೀತಿ ಮತ್ತೊಮ್ಮೆ ಕಂಪಿಸುವ ಕಾಲ ಬಂದುಬಿಟ್ಟಿತ್ತು.

ಒರಿಸ್ಸಾದ ಪುಸ್ತಕದಂಗಡಿಯ ಕಥೆ ಹೇಳುತ್ತಾ ದುಂಬಿಯ ಬೆನ್ನಟ್ಟಿದ ನಾನು ಇದ್ದ ಪುಸ್ತಕಗಳೆಲ್ಲದರ ಮೊರೆ ಹೋದೆ. ಗೂಗಲ್ ನಲ್ಲಿ ಜಾಲಾಟ ನಡೆಸಿದೆ . ಹತ್ತು ಹಲವು ಮಂದಿಗೆ ಫೋನಾಯಿಸಿದೆ. ಇ ಮೇಲ್ ಗಳು ಈ ಕಡೆಯಿಂದ ಆ ಕಡೆಗೆ ಆ ಕಡೆಯಿಂದ ಈ ಕಡೆಗೆ ಪಿಂಗ್ ಪಾಂಗ್ ಬಾಲ್ ನಂತೆ ಅಡ್ಡಾಡಿದವು.

ಗಂಟೆಗಳ ಲೆಕ್ಕ ಬಿಡಿ, ದಿನಗಳು ಉರುಳಿದವು. ಸಿಕ್ಕ ಮಾಹಿತಿ ಕೈನಲ್ಲಿ ಹಿಡಿದು ನಾನು ನಿಜಕ್ಕೂ ಮಾತಿಲ್ಲದವನಾಗಿದ್ದೆ.

ಕುಂಬಳಕಾಯಿ, ಸೌತೆ ಕಾಯಿ, ಕಲ್ಲಂಗಡಿ ಹಣ್ಣು, ನಿಂಬೆಹಣ್ಣು, ದ್ರಾಕ್ಷಿ, ಟೊಮೇಟೊ, ಬದನೇಕಾಯಿ, ಈರುಳ್ಳಿ, ಎಲೆಕೋಸು, ಹೂಕೋಸು, ಸೂರ್ಯಕಾಂತಿ, ಸೇಬು, ಸೀಬೆಕಾಯಿ, ಹುರುಳಿಕಾಯಿ, ಕ್ಯಾರಟ್, ಕಾಫಿ, ತೆಂಗಿನಕಾಯಿ, ಮಾವಿನಹಣ್ಣು, ಹುಣಿಸೇ ಹಣ್ಣು, ಹತ್ತಿ, ಗೋಡಂಬಿ, ಬಾದಾಮಿ… ಎಲ್ಲಕ್ಕೂ ಈ ಎಲ್ಲಕ್ಕೂ ಜೇನ್ನೊಣಗಳ ನಂಟಿತ್ತು.

ಜಗತ್ತಿನ ಪ್ರತೀ ಊಟದ ತಟ್ಟೆಯಲ್ಲೂ ಜೇನ್ನೊಣಗಳ ಹೆಜ್ಜೆಗುರುತಿತ್ತು.

ನಾವು ತಿನ್ನುವ ಹಣ್ಣು, ತರಕಾರಿ, ಸೊಪ್ಪು ಈ ಎಲ್ಲವೂ ತಮ್ಮ ಹುಟ್ಟಿಗೆ ಜೇನ್ನೊಣಗಳ ಸ್ಮರಣೆ ಮಾಡುತ್ತಿದ್ದವು.

ದುಂಬಿ ಮಾತ್ರವೇ ಪರಾಗ ಸ್ಪರ್ಶ ಮಾಡುವುದಿಲ್ಲ ಆದರೆ.. ನೆನಪಿಡಿ ಈ ಜಗತ್ತಿನ ಮೂರನೇ ಒಂದು ಭಾಗದ ಆಹಾರ ಹುಟ್ಟಬೇಕಾದರೆ ಅದಕ್ಕೆ ದುಂಬಿಯ ಪರಾಗ ಸ್ಪರ್ಶವೇ ಆಗಬೇಕು.

ಅದರಲ್ಲೂ ಈ ಜಗತ್ತಿನ ಶೇಖಡಾ ೯೦ ಸಸ್ಯಗಳಿಗೆ ದುಂಬಿ ಇಲ್ಲದೆ ಉಳಿಗಾಲವಿಲ್ಲ. ೧೩೦ ರೀತಿಯ ಹಣ್ಣುಗಳು ಹಾಗೂ ತರಕಾರಿಗಳು ಉಸಿರಾಡುತ್ತಿರುವುದೇ ದುಂಬಿಗಳ ಸ್ಪರ್ಶದಿಂದ.

ಅಮೆರಿಕಾ ಒಂದರಲ್ಲೇ ದುಂಬಿಗಳು ೪೦ ಬಿಲಿಯನ್ ಡಾಲರ್ ಕೃಷಿ ಉತ್ಪನ್ನಕ್ಕೆ ಕಾರಣ. ಇನ್ನೊಂದು ವಿಸ್ಮಯ ಎಂದರೆ ದುಂಬಿಗಳು ಮಾತ್ರವೇ ಇನ್ನೊಂದು ಜೀವವನ್ನು ತಿನ್ನದೇ ಬದುಕುವುದು

ಒಂದು ಜೇನುಗೂಡಲ್ಲಿ ೮೦ ಸಾವಿರ ಜೇನ್ನೊಣಗಳಿರುತ್ತವೆ. ಒಂದು ದಿನದಲ್ಲಿ ಇವು ಮುತ್ತಿಕ್ಕುವ ಹೂಗಳ ಸಂಖ್ಯೆಯೇ ೩೦೦ ಮಿಲಿಯನ್. ಪ್ರತೀ ವರ್ಷ ಒಂದು ಗೂಡಿನಲ್ಲಿ ೮೮ ಪೌಂಡ್ ಜೇನು ಸಂಗ್ರಹವಾಗುತ್ತದೆ.

ನನಗೋ ಆ ಚಿಟ್ಟೆಗಳದ್ದೇ ನೆನಪು. ಇಷ್ಟೊಂದೆಲ್ಲಾ ಸಸ್ಯಗಳು ಚಿಟ್ಟೆಗಳ ಉಳಿವಿಗೆ ಕಾರಣವಾಗಿದ್ದರೆ ಇಲ್ಲಿ ಇಷ್ಟೆಲ್ಲಾ ದುಂಬಿಗಳು ನಮ್ಮ ಆಹಾರದ ಬಟ್ಟಲನ್ನು ಉಳಿಸುತ್ತಿದ್ದವು

ಅಕಸ್ಮಾತ್ ಈ ದುಂಬಿಗಳು ಇಲ್ಲವಾಗಿಬಿಟ್ಟರೆ.. ಎನಿಸಿತು.

ಆಗಲೇ ಅಲ್ಬರ್ಟ್ ಐನ್ ಸ್ಟೀನ್ ನನ್ನ ಕೈಗೆಟುಕಿದ್ದು. ಆ ಕಾಲಕ್ಕೇ ಈ ಬಗ್ಗೆ ಚಿಂತಿತನಾಗಿದ್ದ ಐನಸ್ಟೈನ್ ‘ಅಕಸ್ಮಾತ್ ದುಂಬಿಗಳೇನಾದರೂ ಈ ಜಗತ್ತಿನಿಂದ ಅಳಿದು ಹೋದರೆ ಮನುಷ್ಯನಿಗೆ ಉಳಿಗಾಲವಿರುವಿದು ಕೇವಲ ನಾಲ್ಕು ವರ್ಷ ಮಾತ್ರ’ ಎಂದು ಹೇಳಿಬಿಟ್ಟಿದ್ದ.

ಇದರಿಂದಾಗಿ ಏನಾಗಿಬಿಟ್ಟಿದೆಯಪ್ಪಾ ಈ ದುಂಬಿಗಳ ಕಥೆ ಎಂದು ಹುಡುಕಿದೆ. ಪಕ್ಕಾ ಅದು ಜೇನುಹುಟ್ಟಿಗೇ ಕೈ ಹಾಕಿದಂತಾಗಿ ಹೋಯಿತು.

ಈ ಜಗತ್ತು ರಾಸಾಯನಿಕಗಳ ಸುರಿಹೊಂಡ ಆಗುತ್ತಿರುವುದು ಮೊದಲು ಗೊತ್ತಾಗಿರುವುದೇ ಈ ದುಂಬಿಗಳಿಗೆ. ಜಗತ್ತಿನ ಎಲ್ಲೆಲ್ಲಿ ನೋಡಿದರೂ ಜೇನು ಗೂಡುಗಳಲ್ಲಿ ಜೇನ್ನೊಣಗಳೇ ನಾಪತ್ತೆ. ರಾಣಿ ಹಾಗೂ ಮರಿ ಜೇನು ಬಿಟ್ಟರೆ ಮತ್ತೇನಿಲ್ಲ ಎನ್ನುವ ಶೋಕದ ವಾತಾವರಣ.

ಒಂದು ಜೇನ್ನೊಣ ಎಲ್ಲಿಯಾದರೂ ಅಲುಗಾಡದೆ ಬಿದ್ದಿದೆ ಎಂದರೆ ಅದು ಸತ್ತಿದೆ ಎಂದು ಅರ್ಥವಲ್ಲ. ಅದು ತನ್ನ ಶಕ್ತಿಗೂ ಮೀರಿ ಪರಾಗವನ್ನು ಗೂಡಿನಂತ ಹೊತ್ತೊಯ್ಯುತ್ತಿದೆ ಎಂದು ಅರ್ಥ, ಅದು ಶಕ್ತಿಗೂ ಮೀರಿ ಪರಾಗ ಹೊತ್ತಿದೆ ಎಂದರೆ ಅದು ತನ್ನ ಶಕ್ತಿ ಮೀರಿ ಪರಾಗ ಸ್ಪರ್ಶ ಮಾಡಿದೆ ಎಂದರ್ಥ. ಅದು ಶಕ್ತಿ ಮೀರಿ ಪರಾಗ ಸ್ಪರ್ಶ ಮಾಡಿದೆ ಎಂದರೆ ನಮ್ಮ ಊಟದ ಬಟ್ಟಲಿನಲ್ಲಿ ಸಾಕಷ್ಟು ತರಕಾರಿ, ಸೊಪ್ಪಿನ ಸಾರು ಇದೆ. ಊಟದ ನಂತರ ತಿನ್ನಲು ಸಾಕಷ್ಟು ಹಣ್ಣುಗಳಿವೆ. ಅಷ್ಟೇ ಅಲ್ಲ ಅವು ನಮ್ಮ ಹಲವು ಖಾಯಿಲೆಗಳನ್ನು ದೂರ ತಳ್ಳುತ್ತಿವೆ ಎಂದೇ ಅರ್ಥ.

ಶಿವಾನಂದ ಕಳವೆಯವರ ‘ಮೊನೋಕಲ್ಚರ್ ಮಹಾಯಾನ’ ತಿರುವಿ ಹಾಕುತ್ತಿದ್ದೆ. ನಮ್ಮ ಪಶ್ಚಿಮ ಘಟ್ಟಗಳು, ನಮ್ಮ ನಾಡಿನ ಅರಣ್ಯಕ್ಕೆ ಹಿಡಿದಿರುವ ಏಕರೂಪದ ಹುಚ್ಚನ್ನು ಪುಸ್ತಕ ಬಿಚ್ಚಿಟ್ಟಿತ್ತು.

ಇದೇ ಮೊನೋಕಲ್ಚರ್ ಹುಚ್ಚೇ ದುಂಬಿಗಳಿಗೂ ಕುತ್ತು ತಂದಿವೆ. ಅಷ್ಟೇ ಅಲ್ಲ, ಪ್ರತೀ ವರ್ಷ ಜಗತ್ತಿನಾದ್ಯಂತ ಈ ಭೂಮಿಗೆ ನಾವು ಸುರಿಯುತ್ತಿರುವುದು ಏನಿಲ್ಲೆಂದರೂ ೨.೫ ಬಿಲಿಯನ್ ಕೆ ಜಿ ರಾಸಾಯನಿಕಗಳನ್ನು.

ಈ ರಾಸಾಯನಿಕದಿಂದಾಗಿ ಬಂಜೆತನ, ಕ್ಯಾನ್ಸರ್, ಹಾರ್ಮೋನ್ ಗಳ ವ್ಯತ್ಯಾಸ, ವಂಶವಾಹಿನಿಯಲ್ಲೇ ವ್ಯತ್ಯಾಸ ಹೀಗೆ ೨೭ ಮಹಾ ಖಾಯಿಲೆಗಳು ಬರುತ್ತವೆ ಎಂದು ಸಂಶೋಧಕರು ಪಟ್ಟಿ ಮಾಡಿದ್ದಾರೆ.

ಮೂರು ಸಾವಿರ ವರ್ಷ ಇಟ್ಟರೂ ಕೆಡದ ವಸ್ತು ಜೇನು ಎನ್ನುತ್ತಾರೆ.

ಕ್ಯಾನ್ಸರ್, ಏಡ್ಸ್ ನಿಂದ ದೂರ ಇರಲೂ ದುಂಬಿಗಳು ಬೇಕು. ಸ್ವರ್ಗ ಅಥವಾ ನರಕ ನಿಮ್ಮ ಆಯ್ಕೆ ಯಾವುದು ಎಂದರೆ ನರಕದತ್ತಲೇ ವಾಲುತ್ತಿದ್ದೇವೆ. ಮಾರಕ ರೋಗಗಳಿಂದ ಮುಕ್ತವಾಗಿಸುವ ದುಂಬಿಗಳನ್ನು ಕೊಂದು ನಾವು ರೋಗಗಳ ಬಾಣಲೆಗೆ ಬೀಳುತ್ತಿದ್ದೇವೆ.

ಇಂಗ್ಲೆಂಡ್ ನಲ್ಲಿ ಒಂದು ನಂಬಿಕೆ ಇದೆ. ಮನೆಯ ಮುಖ್ಯಸ್ಥರು ಸತ್ತರೆ ಹೋಗಿ ಜೇನ್ನೊಣಗಳಿಗೆ ಆ ಸುದ್ದಿ ಮುಟ್ಟಿಸಿ ಬರಬೇಕು ಎಂದು.

ಜೇನು ಗೂಡಿರುವ ಕಡೆ ಹೋಗಿ ಮನೆಯವರು ‘ನಮ್ಮ ಮನೆಯಲ್ಲಿ ಸಾವಾಗಿದೆ. ದುಃಖಿಸು ಜೇನ್ನೊಣವೇ’ ಎಂದು ಅರುಹಿ ಬರುತ್ತಾರೆ. ಹಾಗೆ ಸುದ್ದಿ ತಿಳಿಸದಿದ್ದರೆ ಜೇನ್ನೊಣಗಳು ತಾವು ಈ ಕುಟುಂಬದವರಲ್ಲ ಎನ್ನುವ ಚಿಂತೆಯಲ್ಲೇ ಅವರನ್ನು ತೊರೆದು ಹೋಗಿಬಿಡುತ್ತವೆ ಎನ್ನುವ ನಂಬಿಕೆ;

ಒಂದು ಕಾಲದಲ್ಲಿ ಜೇನ್ನೊಣಗಳು ಹಾಗೂ ಜನರ ನಡುವಿನ ಸಂಬಂಧ ಹಾಗಿತ್ತು. ಯಾಕೋ ಬೇಂದ್ರೆ, ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವನ್ನು ವಿವರಿಸಿದ ಬೇಂದ್ರೆ ನೆನಪಾದರು.

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ
ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ…

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ.. ಎನ್ನುವ ಸಾಲಿಗಿಂತ ಮುಂದೆ ಹೋಗಲಾಗಲಿಲ್ಲ. ದುಂಬಿಗಳ ಸ್ಪರ್ಶವನ್ನು ನಾವ್ಯಾರೂ ಔಟ್ ಸೋರ್ಸ್ ಮಾಡಲು ಸಾಧ್ಯವಿಲ್ಲ ಅಲ್ಲವೇ..??

ಸರ್ಕಾರದಿಂದಲೇ ಕೊಬ್ಬರಿ ಖರೀದಿಗೆ ಒಪ್ಪಿಗೆ

Publicstory.in


ತುಮಕೂರು: ಕೊರೊನಾ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಕೇಂದ್ರವನ್ನು ತೆರೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಕೊಬ್ಬರಿ ಬೆಲೆಯೂ ಕೇಂದ್ರ ಸರಕಾರದ ಬೆಂಬಲ ಬೆಲೆಗಿಂತ ಕಡಿಮೆ ಕಡಿಮೆಯಾಗಿರುವ ಕಾರಣ ನಾಫೆಡ್ ಮೂಲಕ ಕೊಬ್ಬರಿ ಖರೀದಿಸುವಂತೆ ಹಲವು ರೈತ ಸಂಘಟನೆಗಳು, ರಾಜಕೀಯ ಮುಖಂಡರು, ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಜಿಲ್ಲೆಯ ಕೊಬ್ಬರಿಯೂ ಬಹುತೇಕವಾಗಿ ಉತ್ತರ ಭಾರತದ ರಾಜ್ಯಗಳಿಗೆ ರವಾನೆಯಾಗುತ್ತದೆ. ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಕೊರೊನಾ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಕೊಬ್ಬರಿ ಬೇಡಿಕೆ ಕಳೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಕೊಬ್ಬರಿ ಖರೀದಿ ಕೇಂದ್ರವನ್ನು ತೆರೆಯುವಂತೆ ಶಾಸಕ ಬಿ.ಸಿ. ನಾಗೇಶ್ ಅವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು.

ಶಾಸಕರ ಪತ್ರಕ್ಕೆ ಸ್ಪಂದಿಸಿರುವ ಸಚಿವ ನಾರಾಯಣ ಗೌಡ ಅವರು ಕೊಬ್ಬರಿ ಕೇಂದ್ರಗಳನ್ನು ತೆರೆಯಲು ಮುಂದಾಗುವಂತೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಸರ್ಕಾರ ಯಾವ ಬೆಲೆಯಲ್ಲಿ ಕೊಂಡುಕೊಳ್ಳಲಿದೆ ಎಂಬುದನ್ನು ನೋಡಬೇಕಾಗಿದೆ.

ತುಮಕೂರು: ಒಂದೇ ದಿನ ನಾಲ್ಕು ಮಂದಿ ಕೊರೊನಾ ಸೋಂಕಿತರು ಗುಣಮುಖ

Publicstory. in


ತುಮಕೂರು: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಕೋವಿಡ್ ರೋಗಿಗಳು ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಆಶಾವಾದ ಮೂಡಿದೆ.

ಇಲ್ಲಿಯವರೆಗೆ ಮೂವತ್ತೊಂದು ಮಂದಿ ಕೊರೊನಾ ತಗುಲಿದೆ. ಇತರೆ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದ ಜನರು ಭಯಭೀತರಾಗಿದ್ದಾರೆ.

ಇದರ ನಡುವೆ, ಇಲ್ಲಿಯವರೆಗೆ ಒಟ್ಟು ಹನ್ನೊಂದು ಮಂದಿ ಗುಣಮುಖ ರಾಗಿರುವುದು ವಿಶೇಷ. ಇಬ್ಬರು ಸಾವಿಗೀಡಾಗಿದ್ದಾರೆ.

ಸದ್ಯ, ಹದಿನೆಂಟು ಮಂದಿ ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲಾ-ಕಾಲೇಜು ಪ್ರಾರಂಭಕ್ಕೆ ಅಭಿಪ್ರಾಯ ಸಂಗ್ರಹ

ತುಮಕೂರು

ಶಾಲಾ, ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಜೂ. 10 ರಿಂದ 12ರ ಅವಧಿಯಲ್ಲಿ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 30 ರಂದು 5ನೇ ಹಂತದ ಮಾರ್ಗಸೂಚಿಯನ್ನು ಹೊರಡಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಶಾಲಾಕಾಲೇಜುಗಳು ಪುನರಾರಂಭ ಮಾಡಲಿವೆ.

ಪಾಲಕರು ಮತ್ತು ಇತರೆ ಪಾಲುದಾರರೊಂದಿಗೆ ಆಯಾ ಸಂಸ್ಥೆಯ ಮಟ್ಟದಲ್ಲಿ ಸಮಾಲೋಚನೆ ನಡೆಸಿ, ಅದರ ಆಧಾರದ ಮೇಲೆ ಜುಲೈ ತಿಂಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜೂನ್ 1 ರಂದು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಸಂಬಂಧಿಸಿದ ಪಾಲುದಾರರ ಸಭೆಗಳನ್ನು ಪ್ರತಿ ಶಾಲೆಯ‌ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ (ಖಾಸಗಿ) ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಕೂಡಲೇ ಜೂನ್ 10 ರಿಂದ ಜೂನ್ 12 ರ ನಡುವಿನ ಅವಧಿಯಲ್ಲಿ ಪೋಷಕರ ಮತ್ತು ಎಸ್ಡಿಎಂಸಿ ಸದಸ್ಯರ ಸಭೆ ಕರೆದು ಕೇಳಕಂಡ ಅಂಶಗಳ ಕುರಿತು ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದೆ.

1. ಶಾಲೆಗಳನ್ನು ಪುನರಾರಂಭ ಮಾಡಬಹುದಾದ ದಿನಾಂಕ ಕುರಿತು.

2. ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನದ ಬಗ್ಗೆ.

3. ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ.

ಪೋಷಕರು ಮತ್ತು ಎಸ್ಡಿಎಂಸಿ ಸದಸ್ಯರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಸುರೇಶ್ ಕುಮಾರ್ ಅವರು ಮನವಿ ಮಾಡಿದ್ದಾರೆ.

ರೈತರು ವಿರೋಧಿಸುತ್ತಿರುವ ತಿದ್ದುಪಡಿಯನ್ನು ಸಮರ್ಥಿಸಿಕೊಂಡ ಜಿಎಸ್ ಬಿ

Publicstory.in


Tumkuru; ಕೇಂದ್ರ ಬಿಜೆಪಿ ಸರ್ಕಾರದ ಸೂಚನೆಯಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸಂಸದ ಜಿ.ಎಸ್.ಬಸವರಾಜ್ ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ನಿರ್ಧಾರ ರೈತ ವಿರೋಧಿಯಲ್ಲ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದ ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆನ್‌ಲೈನ್‌ನಲ್ಲಿ ಎಲ್ಲ ವ್ಯವಹಾರ ನಡೆಯುವುದರಿಂದ ಮಾರುಕಟ್ಟೆಯಲ್ಲಿ ತೂಕ ಮತ್ತು ಅಳತೆಯಲ್ಲಿ ಆಗುತ್ತಿದ್ದ ಮೋಸ ರೈತರ ಶೋಷಣೆ ತಪ್ಪಿ ಅವರ ಮನೆ ಬಾಗಿಲಿಗೆ ಹಣ ಸಂದಾಯವಾಗಲಿದೆ ಎಂದರು.ರಾಜ್ಯದ ಬಿಜೆಪಿಯಲ್ಲಿ ಯಾವುದೆ ಭಿನ್ನಮತವಿಲ್ಲ ಎಂದುಸ್ಪಷ್ಟಪಡಿಸಿದ ಅವರು ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಪ್ರಧಾನಿ ನರೇಂದ್ರಮೋದಿ ದಿಟ್ಟಕ್ರಮ ಕೈಗೊಂಡಿದ್ದು, ವಿಶ್ವನಾಯಕರು ಕೊಂಡಾಡಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.ಕೊರೊನಾ ಸೋಂಕು ಹರಡುವುದ ತಡೆದ ಪರಿಣಾಮ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದು ಸಾವಿನ ಸಂಖ್ಯೆಕೂಡ ಕಡಿಮೆಯಾಗಿದೆ ಎಂದರು.ಅಮೆರಿಕಾದಂತಹ ಮುಂದುವರೆದ ದೇಶವೇ ಕೊರೊನಾ ಸೋಂಕಿನಿಂದ ಕಂಗೆಟ್ಟಿದೆ. ವಿಶ್ವದ ಅನೇಕ ರಾಷ್ಟçಗಳು ಕೊರೊನ ತಡೆಯಲು ಹರಸಾಹಸಪಡುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ತೆಗೆದುಕೊಂಡ ಕ್ರಮಗಳಿಂದ ಸೋಂಕು ಕಡಿಮೆಯಾಗಿದೆ ಎಂದು ಹೇಳಿದರು.
ಕೋವಿಡ್-19 ವಿಷಯದಲ್ಲಿ ಭಾರತ ದೇಶಕ್ಕೆ 8ನೇ ಸ್ಥಾನ ದೊರೆತಿದೆ. ಕೇಂದ್ರ ಸರ್ಕಾರ ಇದನ್ನು ನಿಯಂತ್ರಿಸಲು ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದು ಸಮರ್ಥಿಸಿಕೊಂಡರು.ಒಂದು ದೇಶ, ಒಂದು ಶುಲ್ಕ, ಒಂದು ದೇಶ ಒಂದು ಪಡಿತರ ಕಾರ್ಡ್ ಮೂಲಕ ಇಡಿ ದೇಶಕ್ಕೆ ಪ್ರಧಾನಿ ಮೋದಿ ಮಾದರಿ ಆಡಳಿತ ನೀಡಿದ್ದಾರೆ. 135 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಅಭಿವೃದ್ಧಿಗೆ ಒತ್ತು ನೀಡಿ, ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದರು.ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಗಲ್ಲುಶಿಕ್ಷೆ ನೀಡುವಂತಹ ತೀರ್ಮಾನ ಕೈಗೊಂಡು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕರಾದ ಗಂಗಹನುಮಯ್ಯ, ಡಾ. ಎಂ.ಆರ್.ಹುಲಿನಾಯ್ಕರ್, ಬಿಜೆಪಿ ಮುಖಂಡರಾದ ಶಿವಪ್ರಸಾದ್, ಹೆಬ್ಬಾಕ ರವಿಶಂಕರ್, ಕೊಪ್ಪಳ್ ನಾಗರಾಜ್, ರಂಗನಾಯಕ್ ಉಪಸ್ಥಿತರಿದ್ದರು.

ಅಲ್ಲಿ ಪುಸ್ತಕಗಳು ಮಾತನಾಡಿತು…

ಜಿ.ಎನ್.ಮೋಹನ್


‘ಇವರು ಬರೆದಿರುವ ಎಲ್ಲಾ ಪುಸ್ತಗಳೂ ಸುಡಲಿಕ್ಕೆ ಯೋಗ್ಯ’ ಎಂದೆ

ತಕ್ಷಣ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರೂ, ಸಭಾಂಗಣದಲ್ಲಿದ್ದ ಕೇಳುಗರೂ ಆವಾಕ್ಕಾದರು.

ನನಗಂತೂ ಹಾಗೆ ಅನಿಸಿಹೋಗಿತ್ತು- ಅವರ ಪುಸ್ತಕ ಸುಡಲು ಯೋಗ್ಯ ಅಂತ.

ಅದು ವಿನಯಾ ವಕ್ಕುಂದ ಅವರ ಬರಹಗಳನ್ನು ಮೆಚ್ಚಿ ಅವರಿಗೆ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹೆಸರಿನ ಪ್ರಶಸ್ತಿ ನೀಡುವ ಸಂದರ್ಭ.

ಕೃತಿಕಾರ್ತಿಯ ಬಗ್ಗೆ ಮಾತನಾಡಲು ನನ್ನನ್ನು ಕರೆಸಿದ ಸಂಘಟಕರಿಗೂ ಇರಿಸುಮುರಿಸು.

ಇಂದಿನ ಕಾರ್ಯಕ್ರಮದ ಕೇಂದ್ರಬಿಂದು, ಎಲ್ಲರ ಮೆಚ್ಚುಗೆಯ ವಿನಯಾ ಬರೆದಿರುವ ಕೃತಿಗಳು..ಸುಡಲು ಲಾಯಕ್ಕಾದ ಪುಸ್ತಕಗಳೇ?? ಎಂದು ಎಲ್ಲರೂ ಕಣ್ಣುಬಿಟ್ಟು ನನ್ನನ್ನು ನೋಡುತ್ತಿದ್ದರು

ನಾನು ಮಾತು ಮುಂದುವರೆಸಿದೆ-

ಹಾನಿಕಾರಕ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಡಬೇಕೆಂದು ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು

ಎಲ್ಲೆಲ್ಲೂ ಪುಸ್ತಕಗಳನ್ನು ಎತ್ತಿನಗಾಡಿಗಳಲ್ಲಿ ಹೇರಿ
ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು
ಆಗ ಒಬ್ಬ ಬಹಿಷ್ಕೃತ ಸಾಹಿತಿ, ಶ್ರೇಷ್ಠರಲ್ಲೊಬ್ಬ,
ಸುಡಲಿರುವ ಪುಸ್ತಕಗಳ ಪಟ್ಟಿಯಲ್ಲಿ
ತನ್ನ ಕೃತಿಗಳ ಹೆಸರಿಲ್ಲದ್ದನ್ನು ನೋಡಿ ಹೌಹಾರಿದ.
ತಕ್ಷಣ ಕೋಪದ ಭರದಲ್ಲಿ ಮೇಜಿಗೆ ಧಾವಿಸಿ, ಪಾತ್ರ ಗೀಚಿದ:
ಸುಡಿ, ನನ್ನನ್ನು ಸುಡಿ! – ಲೇಖನಿ ಹಕ್ಕಿವೇಗದಲ್ಲಿ ಹಾರಿತ್ತು
ನನ್ನನ್ನು ಸುಡಿ!
ನನಗೇನೂ ಪರವಾಗಿಲ್ಲ!, ನನ್ನನ್ನು ಬಿಡಬೇಡಿ!
ನನ್ನ ಪುಸ್ತಕಗಳು ಯಾವಾಗಲೂ ಸತ್ಯವನ್ನೇ ಸಾರಿಲ್ಲವೇ?
ಈಗ ನಿಮ್ಮಿಂದ ನಾನು ಸುಳ್ಳನ್ನೆಣಿಸಿಕೊಳ್ಳಬೇಕೇನು!
ಇದು ನನ್ನ ಆಜ್ಞೆ, ನನ್ನನ್ನು ಸುಡಿ!

-ಬ್ರೆಕ್ಟ್ ನ ಈ ಕವಿತೆಯನ್ನು ಆ ಸಭೆಯಲ್ಲಿ ಓದಿದೆ. ಶಾ ಬಾಲೂರಾವ್ ಅನುವಾದಿಸಿದ್ದು.

’ಈಗ ನೀವೇ ಹೇಳಿ ವಿನಯಾ ವಕ್ಕುಂದ ಬರೆದಿರುವ ಕೃತಿಗಳೆಲ್ಲವೂ ಬೆಂಕಿಗೆ ಹಾಕಲು ಯೋಗ್ಯ ಹೌದೋ ಅಲ್ಲವೋ..?’ ಎಂದೆ

ತಕ್ಷಣ ಕೇಳುಗರು, ಅತಿಥಿಗಳು ನಿಟ್ಟುಸಿರುಬಿಟ್ಟರು. ಎಲ್ಲರೂ ‘ಹೌದು, ಹೌದು ಅವರ ಕೃತಿಗಳು ಸುಡಲಿಕ್ಕೆ ಯೋಗ್ಯ’ ಎಂದು ನನಗೆ ಸಾಥ್ ನೀಡಿದ್ದರು.

ಬ್ರೆಕ್ಟ್ ಗೆ ಗೊತ್ತಿತ್ತು ಅಕ್ಷರಗಳು ಬೆಳಕಿನ ಕಂದೀಲುಗಳು ಎಂದು.

ಅವನಿಗಿಂತಲೂ ಜರ್ಮನಿಯ ನಾಜಿ ದೊರೆಗಳಿಗೆ ಪುಸ್ತಕಗಳ ಬಗ್ಗೆ ಇನ್ನೂ ಹೆಚ್ಚು ಗೊತ್ತಿತ್ತು.

ಅವು ಆಲೋಚನೆಗಳನ್ನು ಹರಿತ ಮಾಡುತ್ತದೆ, ತಿಕ್ಕಿ ತಿಕ್ಕಿ ಚೂಪುಗೊಳಿಸುತ್ತದೆ, ಎಲ್ಲವನ್ನೂ ಪ್ರಶ್ನಿಸುತ್ತದೆ, ಕೊನೆಗೆ ಅದು ರಾಜನನ್ನೂ, ಪ್ರಭುತ್ವವನ್ನೂ ಪ್ರಶ್ನಿಸುವ ಮಟ್ಟಕ್ಕೆ ಬರುತ್ತದೆ.

ಅಷ್ಟೇ ಅಲ್ಲ, ಅದು ಬೀದಿ ಬೀದಿಯಲ್ಲಿ ಜನ ಅಣಿನೆರೆಯುವಂತೆ ಮಾಡುತ್ತದೆ. ಮುಷ್ಠಿ ಬಿಗಿ ಹಿಡಿದು ಘೋಷಣೆ ಕೂಗಲು ಹಚ್ಚುತ್ತದೆ, ದಂಗೆ ಏಳುತ್ತದೆ, ಕುರ್ಚಿ ಅಲುಗಾಡಿಸದೆ ಅದು ಬಿಡುವುದಿಲ್ಲ.

ಹಾಗಾಗಿಯೇ ಅವರಿಗೆ ಭಾರೀ ಸಿಟ್ಟಿತ್ತು- ಪುಸ್ತಕಗಳ ಬಗ್ಗೆ.

ಎದುರಿಗೆ ಏರಿ ಬರುವವವರನ್ನು ಒಂದೇ ಏಟಿಗೆ ಕತ್ತಿಯಲ್ಲಿ ಕೊಚ್ಚಿ ಹಾಕಬಹುದಿತ್ತು. ರುಂಡವನ್ನು ಬೇಕಾದರೆ ರಸ್ತೆಯಲ್ಲಿ ಮೆರವಣಿಗೆ ಮಾಡಬಹುದಿತ್ತು.

ಆದರೆ ಪುಸ್ತಕಗಳು?

ಹಾಗಾಗಿಯೇ ಯಾವ ಯಾವ ಪುಸ್ತಕದೊಳಗೆ ಜೀವವಿತ್ತೋ ಅದೆಲ್ಲವನ್ನೂ ಆಯ್ದುಕೊಂಡರು, ಯಾವ ಪುಸ್ತಕಗಳು ಜನರ ನೋವಿಗೆ ಮಿಡಿಯುತ್ತಿತ್ತೋ ಅದನ್ನೂ ಆಯ್ದುಕೊಂಡರು, ಯಾವ ಪುಸ್ತಕಕ್ಕೆ ಪ್ರಶ್ನೆ ಮಾಡುವ ಶಕ್ತಿ ಇತ್ತೋ ಅದನ್ನೂ ಎಳೆದುಕೊಂಡರು, ಯಾವ ಪುಸ್ತಕ ತಮ್ಮ ಬದುಕಿನ ಕಥೆಗಳನ್ನೇ ವಿವರಿಸ್ಸಿ ಮನಸ್ಸು ಮಿಡಿಯುವಂತೆ ಮಾಡುತ್ತಿತ್ತೋ ಅದನ್ನೂ ಎಳೆದುಕೊಂಡರು.

‘ಪುಸ್ತಕಗಳು ಮಾತಾಡುತ್ತವೆ, ಮಾತಾಡುತ್ತವೆ ಪುಸ್ತಕಗಳು’ ಎಂದು ಅನಿಸಿದ್ದೆಲ್ಲವನ್ನೂ ಹೇರಿಕೊಂಡರು

ಜನ ನೋಡ ನೋಡುತ್ತಿದ್ದಂತೆಯೇ ಅದನ್ನು ನಗರದ ಮುಖ್ಯ ರಸ್ತೆಯಲ್ಲಿ ಸುರಿದು ಬೆಂಕಿ ಹಚ್ಚಿ ಅಟ್ಟಹಾಸ ದಿಂದ ನಕ್ಕರು.

ಇದೆಲ್ಲಾ ಬ್ರೆಕ್ಟ್ ಕಣ್ಣ ಮುಂದೆಯೇ ನಡೆದಿತ್ತೇನೋ?. ಪುಸ್ತಕಗಳನ್ನು ಸುಟ್ಟು ಸಾರ್ವಭೌಮತ್ವ ರಕ್ಷಿಸಿಕೊಳ್ಳಬಹುದು ಎನ್ನುವ ಆಲೋಚನೆಯ ಬಗ್ಗೆ ಬ್ರೆಕ್ಟ್ ಎಷ್ಟು ನಕ್ಕಿದ್ದನೋ!.

ಆತನಂತೂ ಕವಿತೆ ಬರೆದ, ನಾಟಕ ಬರೆದ ಜರ್ಮನಿಯ ಮಾತು ಬಿಡಿ, ಇಡೀ ಜಗತ್ತಿಗೆ ಆಲೋಚನೆ ಮಾಡುವಂತೆ ಪ್ರೇರೇಪಿಸಿದ, ಪ್ರಶ್ನಿಸುವ ಕಿಡಿ ಹೊತ್ತಿಸಿಬಿಟ್ಟ.

ಆದರೆ ಇನ್ನೂ ಹಲವರಿದ್ದರು.

ಅವರು ಯಾವ ಯಾವ ಪುಸ್ತಕಗಳನ್ನು ಸುಡಲಾಗಿತ್ತೋ ಆ ಪುಸ್ತಕಗಳ ಪಟ್ಟಿ ತಯಾರಿಸಿದರು. ಯಾವ ಪುಸ್ತಕಗಳನ್ನು ನಾಜಿ ಸರ್ಕಾರ ನಿಷೇಧಿಸಿತ್ತೋ ಅದನ್ನೂ ಪಟ್ಟಿ ಮಾಡಿದರು.

ಲೇಖಕರ ಮನೆ ಮನೆಗೆ ತೆರಳಿದರು. ಆ ನಿಮ್ಮ ಪುಸ್ತಕಗಳನ್ನು ಕೊಡಿ ಎಂದರು. ನಾಲ್ಕಾರು ಪ್ರತಿ ಹೇರಿಕೊಂಡರು. ಅವರೂ ದೇಶ ದೇಶ ಸುತ್ತಿದರು. ಎಲ್ಲವನ್ನೂ ಜರ್ಮನಿಗೆ ಹೊತ್ತುಕೊಂಡು ಬಂದರು.

ಎಲ್ಲಿ ಪುಸ್ತಕಗಳನ್ನು ಸುಡಲಾಗಿತ್ತೋ, ಜರ್ಮನಿಯ ಅದೇ ಸ್ಥಳದಲ್ಲಿ ಆ ಎಲ್ಲಾ ಪುಸ್ತಕಗಳನ್ನು ಹರಡಿ ಕೂತರು. ಅದು ಒಂದೆರಡಲ್ಲ1 ಲಕ್ಷ ಪುಸ್ತಕಗಳು.

ಜಗತ್ತಿನ ಎಲ್ಲೆಡೆ ಪುಸ್ತಕಗಳು ಕಣ್ಣು ಕೆಂಪಗಾಗಿಸುತ್ತಲೇ ಇವೆ.

ಐನ್ ಸ್ಟೀನ್ ನಿಂದ ಹಿಡಿದು ಹ್ಯಾರಿ ಪಾಟರ್ ಬರೆದ ಜೆ ಕೆ ರೌಲಿಂಗ್ ವರೆಗೆ ಪ್ರಭುತ್ವಗಳು ಪುಸ್ತಕ ಎಂದರೆ ಸಾಕು ಹೆದರಿ ನಡುಗುತ್ತಲೇ ಇದೆ.

ವಾಲ್ಟಮಿರ್ ಬೆಂಜಮಿನ್, ಬ್ರೆಕ್ಟ್, ಮಾರ್ಕ್ಸ್, ಎಂಗೆಲ್ಸ್, ಫ್ರಾಯ್ಡ್ , ದಾಸ್ತೋವಸ್ಕಿ, ಗಾರ್ಕಿ, ಟಾಲ್ ಸ್ಟಾಯ್, ರೋಸಾ ಲುಕ್ಸೆಮ್ಬರ್ಗ್, ವಿಕ್ಟರ್ ಹ್ಯೂಗೋ, ಹೆಮಿಂಗ್ವೇ, ಹೆಲೆನ್ ಕೆಲರ್, ಜೋಸೆಫ್ ಕಾನ್ರಾಡ್.. ಹೀಗೆ ನಾಜಿ ಸರ್ಕಾರ ಬಹಿಷ್ಕರಿಸಿದ, ಆ ನಂತರ ಜಗತ್ತಿನಾದ್ಯಂತ ವಿವಿಧ ಸರ್ಕಾರಗಳಿಂದ ಬಹಿಷ್ಕಾರಕ್ಕೆ ಒಳಗಾದ ಎಲ್ಲ ಪುಸ್ತಕಗಳ ಪಟ್ಟಿ ತಯಾರಿಸಲಾಯಿತು.

ಹೀಗೆ ಪ್ರಭುತ್ವವನ್ನು ನಡುಗಿಸಿದ ಪುಸ್ತಕಗಳು ಸಾವಿರಗಟ್ಟಲೆ ಇದ್ದವು. ಕೊನೆಗೆ ಅದರಲ್ಲಿ 170 ಪುಸ್ತಕಗಳನ್ನು ಮಾತ್ರ ಆಯ್ದುಕೊಂಡು ಆ ಕೃತಿಕಾರರ ಮನೆಗೆ ತೆರಳಿದರು. ಜರ್ಮನಿಗೆ ಬಂದು ತಲುಪಿದ್ದು ಆ 170 ಕೃತಿಗಳ ಒಟ್ಟು 1 ಲಕ್ಷ ಪ್ರತಿಗಳು.

ಜನ ನೋಡನೋಡುತ್ತಿದ್ದಂತೆಯೇ ದೊಡ್ಡ ಕಂಬಗಳು, ಅದರ ಎತ್ತರಕ್ಕೆ ಏರಲು ಕ್ರೇನ್ ಗಳು. ಯಾವ ನೆಲದಲ್ಲಿ ಪುಸ್ತಕಗಳನ್ನು ಯುವಕರು ತಮ್ಮ ಕೈಯಾರ ಸುಟ್ಟು ಹಾಕಿದ್ದಾರೋ ಅದೇ ನೆಲದಲ್ಲಿ ಯುವಕರ ದಂಡೇ ನೆರೆಯಿತು.

ಅಷ್ಟೂ ಪುಸ್ತಕಗಳನ್ನು ಸೇರಿಸಿ, ವಿಂಗಡಿಸಿ ನೋಡ ನೋಡುತ್ತಿದ್ದಂತೆಯೇ ಜಗತ್ತಿನ ಮೊದಲ ಪ್ರಜಾಪ್ರಭುತ್ವದ ಸಂಕೇತ ಎನಿಸಿಕೊಂಡ ಗ್ರೀಕ್ ದೇಗುಲ, ಅಥೆನಾ ಪ್ರಜಾಪ್ರಭುತ್ವದ ಸಂಕೇತವಾದ ‘ಪಾರ್ಥೇನಾನ್’ ಪ್ರತಿಕೃತಿಯನ್ನು ನಿರ್ಮಿಸಿಯೇಬಿಟ್ಟರು.

ಅವರು ಪುಸ್ತಕವನ್ನು ಸುಟ್ಟರು, ಪ್ರಭುತ್ವ ಕಾಪಾಡಿಕೊಳ್ಳಲು
ಇವರು ಪುಸ್ತಕಗಳ ಮೂಲಕ ಕಟ್ಟಿದರು ಪ್ರಜಾ ಪ್ರಭುತ್ವವನ್ನು

ಅರ್ಜೆಂಟೈನಾದ ಮಾರ್ತಾ ಮಿನುಜಿನ್ ಕಲಾವಿದೆ. ತನ್ನೊಳಗೆ ಒಂದು ಬೆಂಕಿಯ ಕಿಡಿ ಇಟ್ಟುಕೊಂಡು ಬೆಳೆದ ಕಲಾವಿದೆ. ಅರ್ಜೆಂಟೈನಾದಲ್ಲಿ ಜುಂಟಾ ಸರ್ವಾಧಿಕಾರಿ ಸರ್ಕಾರ ಹೀಗೇ ಪುಸ್ತಕಗಳ ಮೇಲೆ ಕೆಂಪುಗಣ್ಣು ಬೀರಿದ್ದು ಗೊತ್ತಿದ್ದಾಕೆ. ಆಗಲೇ ಅರ್ಜೆಂಟೈನಾದಲ್ಲಿ ಪುಸ್ತಕಗಳನ್ನು ಒಟ್ಟುಮಾಡಿ ಪ್ರತಿಕೃತಿ ನಿರ್ಮಿಸಿದ್ದಳು.

ಆದರೆ ಯಾವಾಗ ಜರ್ಮನಿಯಲ್ಲಿ ಕಲಾ ಉತ್ಸವ ಎಂದು ಗೊತ್ತಾಯಿತೋ ಆಕೆ ಹತ್ತು ಪಟ್ಟು ಉತ್ಸಾಹದಿಂದ ಎದ್ದು ನಿಂತಳು.

ವರ್ಷಗಟ್ಟಲೆ ಪುಸ್ತಕದ ಮೂಲಕ ಸ್ವಾತಂತ್ರ್ಯದ ಸಂದೇಶ ಬಿತ್ತುವ ಕನಸಿಗೆ ರೆಕ್ಕೆ ಕೊಟ್ಟಳು.

1933, 10 ಮೇ ಜರ್ಮನಿಯಲ್ಲಿ ಟ್ರಕ್ ಗಟ್ಟಲೆ ಪುಸ್ತಕಗಳನ್ನು ಹೇರಿಕೊಂಡು ಬಂದು ಸುಟ್ಟಿದ್ದರು. ’ಜರ್ಮನ್ ಅಲ್ಲದ ಭಾವನೆಗಳನ್ನು ಸುಟ್ಟುಹಾಕಬೇಕು’ ಎನ್ನುವುದೇ ಆಗಿನ ನಾಜಿ ಸರ್ಕಾರದ ಉದ್ಧೇಶವಾಗಿತ್ತು.

ಅದನ್ನು ಕೈಗೆತ್ತಿಕೊಂಡದ್ದು ಅಲ್ಲಿನ ವಿದ್ಯಾರ್ಥಿ ಯುವ ಸೇನೆ. ಬೀದಿ ಬೀದಿಗಳಲ್ಲಿ ಪ್ರಚಾರ ನಡೆಸಿ ಕೇಕೆ ಹಾಕಿ ರಾಷ್ಟ್ರ ಗೀತೆ ಹಾಡಿ ಪುಸ್ತಕ ಸುಟ್ಟರು.

ಗೊಬೆಲ್ಸ್ ಭರ್ಜರಿ ಭಾಷಣ ಬಿಗಿದು ಪುಸ್ತಕಗಳಿಂದ ಅಲ್ಲದ ವ್ಯಕ್ತಿತ್ವ ಕಟ್ಟಿಕೊಳ್ಳಿ ಎಂದು ಕರೆ ನೀಡಿದ. ಜರ್ಮನ್ ಶುದ್ಧತೆ ಇಲ್ಲದ ಎಲ್ಲವನ್ನೂ ಸುಡಲಾಯಿತು. ಅದು ಬಿಡಿ ಕೊನೆಗೆ ಅದೇ ನೆಲದಲ್ಲಿ ಜರ್ಮನ್ ಅಲ್ಲದವರನ್ನೂ ಸುಟ್ಟು ಹಾಕಿದರು.

ಮನೆಗಳ ಮೇಲೆ ದಾಳಿ ನಡೆಸುತ್ತಿದ್ದವರು ಮನದ ಮೇಲೆ ದಾಳಿ ನಡೆಸುವುದು ಹೇಗೆ ಎಂದು ಸಂಚು ಹೂಡಿದರು. ಪರಿಣಾಮ ಬೃಹತ್ ಲೈಬ್ರರಿಗಳ ಮೇಲೆ ಬಾಂಬ್ ದಾಳಿ ನಡೆಸಿ ನಾಶ ಮಾಡಲಾಯಿತು.

ಯಾವ ಮಿಲಿಟರಿ ಹೀಗೆ ದಾಳಿ ಮಾಡುತ್ತಾ ಪುಸ್ತಕಗಳನ್ನು ನಾಶ ಮಾಡುತ್ತಾ ಹೋಯಿತೋ ಅದಕ್ಕೆ ವಿರುದ್ಧವಾಗಿ ಈ ನಾಜಿ ಕ್ರೌರ್ಯವನ್ನು ಖಂಡಿಸಲು ಅಮೆರಿಕಾದಲ್ಲಿ ಸೇನೆ ಪುಸ್ತಕಗಳ ಸಂಗ್ರಹಕ್ಕೆ ಮುಂದಾಯಿತು.

ಸಾಹಿತಿಗಳ ವಿಚಾರವಂತರ ಮನೆ ಮನೆಗೆ ತೆರಳಿ ಪುಸ್ತಕಗಳನ್ನು ಸಂಗ್ರಹಿಸಿತು. ಬೀದಿ ಬೀದಿಗಳಲಿಲಿ ಪುಸ್ತಕ ಸಂಗ್ರಹಿಸುವ ಅಡ್ಡೆಗಳನ್ನು ನಿರ್ಮಿಸಿತು. ನಂತರ ಅದನ್ನು ಯೋಧರಿಗೆ, ಸೇನಾ ಕ್ಯಾಂಪ್ ಗಳಿಗೆ ವಿತರಿಸಿತು. ಪುಸ್ತಕ ಓದಿ, ಗೆದ್ದು ಬನ್ನಿ ಎಂದು ಹಾರೈಸಿತು.

ಇರಲಿ ಬಿಡಿ, ಈ ಎಲ್ಲವೂ ನೆನಪು ಮಾಡುವಂತೆ ಮಾಡಿದ್ದು ಮಾತ್ರ ಜರ್ಮನಿಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತ ಪುಸ್ತಕಗಳ ಕಲಾಕೃತಿಯೇ.

ಆ ಬೃಹತ್ ಕಲಾಕೃತಿಯನು ನೋಡಲು ಬಂದವರು ಅದರ ಕಂಬದಲ್ಲಿದ್ದ ಒಂದೊಂದೇ ಪುಸ್ತಕಗಳನ್ನು ಕಿತ್ತುಕೊಂಡು ಹೋಗುತ್ತಿದ್ದರು. ಆ ಕಲಾವಿದೆ, ಸಂಘಟಕರು ಹಾಗೆ ಒಬ್ಬೊಬ್ಬರೂ ಪುಸ್ತಕ ಕಿತ್ತುಕೊಂಡು ಹೋಗುವಾಗಲೆಲ್ಲಾ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.

ಯಾವ ದೇಶದಲ್ಲಿ ಪುಸ್ತಕಗಳನ್ನು ಜನರ ಕೈಗಳಿಂದ ಕಿತ್ತುಕೊಳ್ಳಲಾಯಿತೋ ಅದೇ ದೇಶದಲ್ಲಿ ಜನರೇ ಪುಸ್ತಕಗಳನ್ನು ಕಿತ್ತುಕೊಳ್ಳುತ್ತಿದ್ದರು. ಚಕ್ರ ಒಂದು ಸುತ್ತು ಬಂದಿತ್ತು.

‘ಅಕ್ಷರವೆಂದರೆ ಅಕ್ಷರವಲ್ಲ, ಅರಿವಿನ ಗೂಡು, ಚಿಲಿಪಿಲಿ ಎನ್ನುತ ಮೇಲಕ್ಕೆ ಹಾರುವ ಹಕ್ಕಿಯ ಹಾಡು ಕೇಳು’ ಎನ್ನುವ ಸಾಲು ನನ್ನ ಮನದೊಳಗೆ…

ಅಡುಗೆ ಅನಿಲ ಬೆಲೆ ಏರಿಕೆ

ತುಮಕೂರು: ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇಂಡೇನ್ ಗ್ಯಾಸ್ ಸಿಲಿಂಡರ್ 11.50 ರೂಪಾಯಿ ಹೆಚ್ಚಿಸಿದೆ. ಈ ದರ ನಗರದಿಂದ ನಗರಕ್ಕೆ ಬದಲಾವಣೆ ಇರಲಿದೆ.

ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಪಿಜಿ ಬೆಲೆ ಹಾಗೂ ಅಮೆರಿಕ ಡಾಲರ್ ಮತ್ತು ಭಾರತೀಯ ರುಪೀ ಮೌಲ್ಯಗಳನ್ನು ಆಧರಿಸಿ ಈ ಬೆಲೆ ನಿರ್ಧಾರ ಮಾಡಲಾಗುತ್ತದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ ಬೆಲೆ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಎಲ್ಪಿಜಿ ದರ ಭಾರೀ ಇಳಿಕೆ ಕಂಡಿತ್ತು. 744 ರೂ ಇದ್ದ ಸಿಲಿಂಡರ್ ದರ 581 ರೂಪಾಯಿ ಆಗಿತ್ತು.