Saturday, May 9, 2026
Google search engine
Home Blog Page 215

ಮಿಂಚು ಹುಳು

0

ದೇವರಹಳ್ಳಿ ಧನಂಜಯ


ಬೇಲಿ ತುಂಬ ಬೆಳಕ ಹೂ
ಬಳ್ಳಿ ತಬ್ಬಿ ಬೆಳೆದಿವೆ
ಆಕಾಶದ ಹಾಲ ಬೆಳಕ
ನೆಲದ ತುಂಬ ಹರಡಿವೆ

ಹಸಿರ ತೊಟ್ಟ ಭೂರಮೆಗೆ
ಮಲ್ಲೆ ದಂಡೆ ಮುಡಿಸಿವೆ
ಧರಣಿ ತುಂಬಾ ಬೆಳಕ ಹಬ್ಬ
ಸಾಲುದೀಪ ಬೆಳಗಿವೆ.

ಆಕಾಶದ ವೈಭವವ
ನೆಲಕೆ ತಂದು ಚೆಲ್ಲಿವೆ
ಮಣ್ಣ ಕಣಕಣದಲ್ಲೂ
ಚೈತನ್ಯವ ತುಂಬಿವೆ

ಕೈಗೆಟುಕದ ಚಂದ್ರಸಂಗ
ನಮಗೆ ಬೇಡ ಎಂದಿವೆ
ನಡೆದವರ ಕಣ್ಣ ಲಾಂದ್ರ
ನಮ್ಮ ಚಂದ್ರ ಎಂದಿವೆ

ಒಳ ತಿಮಿರಿಗೆ ಕಿಚ್ಚು ಹಚ್ಚಿ
ದೇಹ ಪಂಜು ಮಾಡಿವೆ
ಬೇಗುದಿಯ ಬೆಳಕಮಾಡ್ವ
ಹೊಸ ಪಾಠವ ಕಲಿಸಿವೆ.

ಕತ್ತಲೆಯ ಕಣ್ಣುಕುಕ್ಕಿ
ಮಿಂಚುಹುಳು ಮಿನುಗಿವೆ
ಹೊಳೆಯುತಿರುವ ತಾರೆಗಳಿಗೆ
ಸವಾಲು ನಾವು ಎಂದಿವೆ.

ಶಿಕ್ಷಕಿಯೊಬ್ಬರ ಕಣ್ಣಲ್ಲಿ ಆನ್ ಲೈನ್ ಪಾಠದ‌ ಕಷ್ಟಸುಖ

0

ಸ್ಮಿತಾ ಕೆ ಆರ್


ಎಲ್ಲರಿಗೂ ನಮಸ್ಕಾರ
ಕೊರೊನಾ ನಮ್ಮ ದೈನಂದಿನ ದಿನಚರಿಯನ್ನೆ ಬದಲಿಸಿದೆ. ಗೃಹಿಣಿಯಾಗಿ ದಿನವೂ ಮುಂಜಾನೆ ಐದು ಗಂಟೆಯಾಗುತ್ತಿದ್ದಂತೆ ಎದ್ದು ಮನೆಯನ್ನು ಶುಚಿಗೊಳಿಸಿ ತಿಂಡಿ ಅಡುಗೆಯನ್ನು ಮಾಡಿ ಮಕ್ಕಳನ್ನು ಎಬ್ಬಿಸಿ ಅವರನ್ನು ಶಾಲೆಗೆ ಕಳುಹಿಸಿ ನಾನೂ ಕೆಲಸಕ್ಕೆ ಹೊರಡಲು ತಯಾರಿ ಮಾಡಿಕೊಂಡಳ್ಳುವುದು ನನ್ನ ಮೊದಲ ಜವಾಬ್ದಾರಿಯಾಗಿತ್ತು.

ನನ್ನ ಎರಡನೇ ಜವಾಬ್ದಾರಿ ಶಾಲೆಯ ಶಿಕ್ಷಕಿಯಾಗಿ ನಂತರ ಶುರುವಾಗುತ್ತದೆ.

ಮೊದಲ ಜವಾಬ್ದಾರಿ ಮುಗಿಸಿ ಒಂದೇ ಉಸಿರಿನಲ್ಲಿ ಶಾಲೆ ತಲುಪಿ ಅಲ್ಲಿರುವ ಮಕ್ಕಳಿಗೆ ನಗುನಗುತ್ತಾ ಪಾಠ ಹೇಳಿಕೊಟ್ಟು ಸುಸ್ತಾಗಿ ಮನೆಗೆ ಬಂದು ನಂತರ ಉಳಿದ ಮನೆಗೆಲಸವನ್ನು ಮಾಡಿ ತನ್ನ ಮಕ್ಕಳೊಂದಿಗೆ ಆಟವಾಡಿ ಮಲಗುವಾಗಲೂ ನಾಳೆಯ ಕೆಲಸದ ಬಗ್ಗೆ ಚಿಂತಿಸುತ್ತ ಸದಾ ಚುರುಕಾಗಿರುತ್ತಿದ್ದ ನನ್ನಂತಹ ಶಿಕ್ಷಕರನ್ನು ಕಣ್ಣಿಗೆ ಕಾಣದ ಹಿಡಿಯಲೂ ಸಿಗದ ಒಂದು ವೈರಸ್‌ ತೆಪ್ಪಗೆ ಮನೆಯಲ್ಲಿ ಕೂರುವಂತೆ ಮಾಡಿಬಿಟ್ಟಿದೆ.

ಮಕ್ಕಳು ಬರೀ ಪುಸ್ತಕದಿಂದ ಕಲಿಯುವುದಲ್ಲದೇ ಶಾಲೆಯ ವಾತಾವರಣ ಸಹಪಾಠಿಗಳು ಹಾಗೂ ಶಿಕ್ಷಕರನ್ನು ನೋಡಿಯು ಕಲಿಯುತ್ತಾರೆ.ಇಂತಹ ಶಾಲೆಗಳು ಈಗ ಶುರುವಾಗಬೇಕಾದ ಸಮಯ. ಮಕ್ಕಳು ಬೇಸಿಗೆ ರಜೆ ಕಳೆದು ಶಾಲೆಯಲ್ಲಿರಬೇಕಾದ ದಿನಗಳಿವು.

ಆದರೆ ನಾವು ಶಾಲೆಗೆ ಬಂದು ಪಾಠ ಮಾಡುತ್ತೇವೆ ಎಂದರೂ ಶಾಲೆಗಳನ್ನು ತೆರೆಯಲು ಆಗದೆ, ಮಕ್ಕಳನ್ನು ಕರೆಸಿಕೊಳ್ಳಲೂ ಆಗದೆ ಇರುವಂತಹ ಪರಿಸ್ಥಿತಿ ಬಂದುಬಿಟ್ಟಿದೆ.

ಇಂತಹ ಸಂಧರ್ಭದಲ್ಲಿ ಅನಿವಾರ್ಯ ಎಂಬಂತೆ ಆನ್ಲೈನ್ ತರಗತಿಗಳು ಶುರುವಾಗಿವೆ. ಶಾಲೆಯಲ್ಲಿ ದಿನವೂ ನೋಡುವ ಮಕ್ಕಳನ್ನು ಕಂಪ್ಯೂಟರ್‌ ತೆರೆಯ ಮೇಲೆ ನೋಡುವಂತಾಗಿದೆ.ಆನ್ಲೈನ್‌ ತರಗತಿಗಳು ಶಿಕ್ಷಕರಿಗೂ ಮಕ್ಕಳಿಗೂ ಹೊಸ ಅನುಭವ.

ನಾವು ಹೇಳುವ ಪಾಠವನ್ನು ಮಕ್ಕಳೇ ಇಲ್ಲದ ಶಾಲೆಯಲ್ಲಿ ಮೊಬೈಲ್ ಇಲ್ಲ ಕಂಪ್ಯೂಟರ್‌ಗಳ ಮುಂದೆ ಹೇಳಬೇಕಾದ ಅನಿವಾರ್ಯತೆ.

ಶಿಕ್ಷಕರಿಗೆ ಮತ್ತೊಂದು ವಿಶೇಷ ಜ್ಞಾನ ಶಿಕ್ಷಕರಾದ ಕೂಡಲೇ ಬರುತ್ತದೆ.ಅದು ನಾವು ಮಾಡುವ ಪಾಠ ಯಾವ ವಿದ್ಯಾರ್ಥಿಗೆ ಎಷ್ಟು ತಿಳಿದಿದೆ ಎಂದು ಅವರ ಹಾವ–ಭಾವಗಳ ಮೂಲಕವೇ ಗುರುತಿಸುವುದು.ಆದರೆ ಈಗ ನಾವು ಹೇಳುವ ಪಾಠ ಈಗ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳಿಗೆ ತಿಳಿಯುತ್ತಿದೆಯೋ ಗೊತ್ತಿಲ್ಲ.ಆದರೆ ಇದು ಮುಂದಿನ ದಿನಗಳಲ್ಲಿ ಆನ್ಲೈನ್‌ ತರಗತಿಗಳೇ ಅನಿವಾರ್ಯವಾಗಬಹುದು. ಅದಕ್ಕೆ ಪೀಠಿಕೆಯಾಗಿ ಈಗಿನ ವಾತಾವರಣ ನಿರ್ಮಾಣವಾಗಿದೆ.

ಪ್ರತಿಯೊಂದು ವಿಷಯದಲ್ಲೂ ಅನುಕೂಲ ಹಾಗೂ ಅನಾನುಕೂಲಗಳು ಇದ್ದೇ ಇರುತ್ತದೆ. ಆನ್ಲೈನ್ ತರಗತಿಗಳ ಮೂಲಕ ನಾವು ಮಾಡಿರುವ ಪಾಠದ ವಿಡಿಯೋ ಎಷ್ಟು ಭಾರಿ ಬೇಕಾದರು ತೆಗೆದು ನೋಡಬಹುದು.
ಆನ್ಲೈನ್ ಮೂಲಕ ಮಕ್ಕಳು ಶಿಕ್ಷಕರು ಮುಖಾಮುಖಿ ಮಾತನಾಡಬಹುದು ಆದರೆ ಒಮ್ಮೊಮ್ಮೆ ನೆಟ್ವರ್ಕ್ ನ ಸಮಸ್ಯೆ ಬರಬಹುದು ಪಾಠ ಪೂರ್ತಿಯಾಗಿ ಅರ್ಥವಾಗದೇ ಹೋಗಬಹುದು. ಆದರೆ ಶಾಲೆಯಲ್ಲಿ ತಿಳಿಸಿಕೊಟ್ಟಾಗ ತಿಳಿಯುವ ರೀತಿ ವಿಷಯಗಳು ಮಕ್ಕಳಿಗೆ ಅರ್ಥವಾಗುತ್ತಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.

ಏನೆ ಆದರೂ ಮಕ್ಕಳು ಇಲ್ಲದೆ ಶಿಕ್ಷಕರಿಗೆ ಕೆಲಸವಿಲ್ಲ, ಶಿಕ್ಷಕರು ಇಲ್ಲದೆ ಶಾಲೆಗೆ ಅರ್ಥವೇ ಇಲ್ಲ. ಒಟ್ಟಿನಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಶಾಲೆಯ ಬಂದರೇನೇ ಬಹಳ ಸೊಗಸು.

ಒಟ್ಟಿನಲ್ಲಿ ಈಗ ಕಂಪ್ಯೂಟರ್, ಮೋಬೈಲ್‌ಗಳೇ ಶಾಲೆಗಳಾಗಿ ಬದಲಾಗಿದ್ದು ಮಕ್ಕಳ ಮತ್ತು ಶಿಕ್ಷಕರ ನಡುವೇ ಸಂಪರ್ಕ ತಂದು ಕೊಟ್ಟಿದೆ.

ಆದಷ್ಟು ಬೇಗ ಈ ಕೊರೊನ ದಿಂದ ಮುಕ್ತಿ ಸಿಕ್ಕಿ ಮತ್ತೆ ಮಕ್ಕಳು ಶಾಲೆಗೆ ಬಂದು ಪಾಠ ಕಲಿತು ನಮ್ಮ ದೇಶದ ಸತ್ಪ್ರಜೆಗಳಾಗಿ ಬೆಳೆಯಲಿ ಎಂದು ಆಶಿಸುತ್ತೇನೆ.


ಸ್ಮಿತಾ ಅವರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಶಿಕ್ಷಕಿ.

ಎಲ್ಲಿಂದ ಬಂದಿರೆಂದು ಕೇಳಬಹುದು ನೀವು..

ಜಿ ಎನ್ ಮೋಹನ್


ಹೌದು ಇದು ‘ವಿಚಿತ್ರ ಆದರೂ ನಿಜ’.

ಹಾಗೆ ಆ ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ನಾನು ಕ್ರಮಿಸಿದ್ದು ಅಷ್ಟಿಷ್ಟಲ್ಲ.. 1500 ಕಿಲೋ ಮೀಟರ್ ಗಳನ್ನು.

ನಾನು ಒರಿಸ್ಸಾಗೆ ಹೋಗುತ್ತಿದ್ದೇನೆ ಎಂದ ತಕ್ಷಣ ಗೆಳೆಯರು ‘ಓ ಕೋನಾರ್ಕ್’ ಎಂದರು. ಅಲ್ಲಪ್ಪ ಎಂದೆ.. ‘ಪುರಿ ಜಗನ್ನಾಥ’ ಎಂದರು. ‘ಜಗನ್ನಾಥನ ರಥಚಕ್ರಗಳು’ ಕವಿತೆಯಾಗಿ, ನಾಟಕವಾಗಿ ಕನ್ನಡವನ್ನು ಅಷ್ಟು ಕಾಡಿತ್ತು. ಅಲ್ಲ ಅಂದೆ .

ತಕ್ಷಣ ‘ಬುದ್ಧ ಸ್ತೂಪ’ ಎಂದರು. ಅದಕ್ಕೂ ಕಾರಣವಿತ್ತು. ಅಶೋಕ ಚಕ್ರವರ್ತಿ ಸೆಣಸಿದ ಯುದ್ಧ, ಹರಿದ ನೆತ್ತರು ಎಲ್ಲಾಕ್ಕೂ ಒರಿಸ್ಸಾ ಸಾಕ್ಷಿಯಾಗಿತ್ತು. ಆ ಯುದ್ಧದಲ್ಲಿ ಹರಿದ ನೆತ್ತರಿಗೆ ಕಳಿಂಗಾ ನದಿ ತಿಂಗಳುಗಟ್ಟಲೆ ಕಾಲ ರಕ್ತದ ಬಣ್ಣ ಹೊಂದಿತ್ತು ಅನ್ನುತ್ತಾರೆ.

ಅಲ್ಲ ಎಂದೆ

ಹಾಗಿದ್ದರೆ ‘ಚಿಲ್ಕಾ’ ಎಂದು ಯಾವ ಸಂಶಯವೂ ಇಲ್ಲದಂತೆ ಹೇಳಿದರು. ನಿಮ್ಮ ಪಕ್ಕದಲ್ಲೇ ಜಿಗಿಯುವ, ರಾಸಲೀಲೆಯಾಡುವ, ಡಾಲ್ಫಿನ್ ಗಳನ್ನು ನೋಡಬೇಕೆಂದರೆ, ಸಾವಿರಾರು ಮೈಲಿ ಹಾರಿ ಬರುವ ಪಕ್ಷಿಗಳನ್ನು ನೋಡಬೇಕೆಂದರೆ ಬಂಗಾಳ ಕೊಲ್ಲಿಯನ್ನು ಬಗಲಿಗಿಟ್ಟುಕೊಂಡಿರುವ ಚಿಲ್ಕಾ ಸರೋವರಕ್ಕೆ ಬರಬೇಕು.

ಆದರೆ ಏನು ಮಾಡುವುದು ಅದೂ ನನ್ನ ಪಟ್ಟಿಯಲ್ಲಿರಲಿಲ್ಲ.

ನನ್ನ ಪಟ್ಟಿಯಲ್ಲಿದ್ದದ್ದು ಪುಸ್ತಕದ ಅಂಗಡಿ ಮತ್ತು ಅಲ್ಲಿ ಸಿಗುವ ಬಿಸಿ ಬಿಸಿ ಟೀ ಮಾತ್ರ!.

ಹಾಗೆ ಬಿಸಿ ಬಿಸಿ ಚಹಾ ಹಿಡಿದು ನಾನು ಅವರಿಬ್ಬರ ಮುಂದೆ ಕುಳಿತಿದ್ದೆ. ಅವರಿಬ್ಬರ ಕಣ್ಣಲ್ಲೂ ಮಿಂಚಿತ್ತು.

‘ಅದು ಸರಿ ನಮ್ಮ ಈ ಪುಸ್ತಕದ ಅಂಗಡಿ ದಾರಿಯನ್ನು ಹೇಗೆ ಕಂಡು ಹಿಡಿದಿರಿ’ ಎಂದರು.

ಏಕೆಂದರೆ ಅವರಿಗೆ ನಾನು ಬೆಂಗಳೂರಿನವನೆಂದೂ, ನಿಮ್ಮ ಅಂಗಡಿಗೆ ಬರಬೇಕೆಂಬ ಆಸೆ ಇದೆ ಎಂದೂ, ಯಾವಾಗ ಸಿಗುತ್ತೀರಾ.. ಎಂದು ಏನೇನೂ ಕೇಳದೆ ಬಂದುಬಿಟ್ಟಿದ್ದೆ.

ಹಾಗಾಗಿ 1500 ಕಿ ಮೀ ಆಚೆ ಇರುವ ಬೆಂಗಳೂರಿನಿಂದ ಭುವನೇಶ್ವರದ ಕಳಿಂಗ ಆಸ್ಪತ್ರೆಯ ಆಸುಪಾಸಿನಲ್ಲಿದ್ದ ಈ ಪುಸ್ತಕದ ಅಂಗಡಿ ಜಾಡು ಹಿಡಿದು ಬಂದದ್ದಾದರೂ ಹೇಗೆ ಎನ್ನುವ ಪ್ರಶ್ನೆ ಅವರ ಮುಖದಲ್ಲಿತ್ತು.

ನಾನು ಗೂಗಲ್ ಮ್ಯಾಪ್ ಬಳಸಿ ನೇರಾನೇರ ಅಲ್ಲಿಗೆ ಬಂದಿದ್ದೇನೆ ಎಂದು ಅವರು ದೃಢವಾಗಿ ನಂಬಿದ್ದರು.

ಆದರೆ ನಾನು ಹೇಳಿದೆ- ‘ಸಿಂಪಲ್. ಪುಸ್ತಕಕ್ಕೆ ಇರುತ್ತದಲ್ಲ ಅದರದ್ದೇ ಆದ ಘಮ ಅದರ ಜಾಡು ಹಿಡಿದು’. ದುಂಬಿಗೆ ಮಕರಂದ ಯಾವ ಜಾಗದ, ಯಾವ ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು ಗೊತ್ತಾಗುವುದಿಲ್ಲವೇ..

ಹಾಗೆ ನಾನು ಕುಳಿತದ್ದು ಶತಾಬ್ದಿ ಮಿಶ್ರಾ ಹಾಗೂ ಅಕ್ಷಯಾ ರೌತ್ರೆ ಎದುರು.

ಒಬ್ಬಾತ ಕಾಲೇಜಿನಲ್ಲಿ ಓದುವಾಗ ಪದೇ ಪದೇ ಡುಮ್ಕಿ ಹೊಡೆದು ಪುಸ್ತಕದ ಅಂಗಡಿಯಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದಾತ. ಇನ್ನೊಬ್ಬಾಕೆ ಉತ್ಕಲ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಓದಿ ಜಾಹೀರಾತು ಕಂಪನಿಯಲ್ಲಿ ‘ಆಹಾ’ ಎನ್ನುವ, ಒಂದೇ ಏಟಿಗೆ ಎಲ್ಲರನ್ನೂ ಸೆಳೆಯುವ ಕಾಪಿ ಬರೆಯುತ್ತಿದ್ದಾಕೆ.

ಪುಸ್ತಕದ ಅಂಗಡಿಯಲ್ಲಿ ಯಾವಾಗ ಇಬ್ಬರೂ ಕೈ ಕುಲುಕಬೇಕಾಗಿ ಬಂತೋ ಅವತ್ತೇ ಅವರಿಬ್ಬರೂ ತಮ್ಮ ತಮ್ಮ ಕೆಲಸಕ್ಕೆ ರಾಜೀನಾಮೆ ಬಿಸಾಕಿಬಿಟ್ಟರು.

ನಂತರ ಇನ್ನೇನು ಎಂದು ಯೋಚನೆಯನ್ನೂ ಮಾಡದೆ ಎರಡು ಬ್ಯಾಕ್ ಪ್ಯಾಕ್ ತಂದು ಅದರಲ್ಲಿ ಪುಸ್ತಕಗಳನ್ನು ತುಂಬಿದರು. ಬಸ್ ಹತ್ತಿದವರೇ ತಮಗೆ ತೋಚಿದ ಸ್ಥಳಕ್ಕೆ ಹೋದರು. ರಸ್ತೆ ಬದಿ, ಬಸ್ ಸ್ಟಾಂಡ್ ನಲ್ಲಿ, ಆಸ್ಪತ್ರೆ ಮುಂದೆ, ದೇವಸ್ಥಾನದ ಆಚೆ, ಪಾರ್ಕ್ ಗಳಲ್ಲಿ, ಅಪಾರ್ಟ್ಮೆಂಟ್ ಕಾರ್ ಪಾರ್ಕಿಂಗ್ ನಲ್ಲಿ ಹೀಗೆ ಪುಸ್ತಕಗಳನ್ನು ಹರಡಿ ನಿಂತರು.

‘ನೀವು ನಂಬಲೇಬೇಕು.. ಹಾಗೆ ಹೋದಡೆಯೆಲ್ಲಾ ಜನ ನಮ್ಮನ್ನೂ ಅಂತೆಯೇ ಪುಸ್ತಕಗಳನ್ನೂ ಒಳ್ಳೆ ಅನ್ಯಗ್ರಹದಿಂದ ಬಂದ ಜೀವಿಯೇನೋ ಅನ್ನುವ ಹಾಗೆ ನೋಡುತ್ತಿದ್ದರು. ಪಕ್ಕಾ ಅಮೀರ್ ಖಾನ್ ನ ‘ಪಿ ಕೆ’ ಸಿನೆಮಾದಂತೆ’ ಎಂದು ಇಬ್ಬರೂ ಗಹಗಹಿಸಿ ನಕ್ಕರು.

ಮತ್ತೆ ಕಥೆ ಮುಂದುವರೆಸಿದರು. ಆದರೆ ಆ ಮಕ್ಕಳಿದ್ದಾರಲ್ಲ.. ಶಾಲೆಯ ವಿದ್ಯಾರ್ಥಿಗಳು ಅವರು ನಮಗೆ ಭರವಸೆ ನೀಡಿಬಿಟ್ಟರು. ನಾವು ಹೋದ ಹೋದಕಡೆಯೆಲ್ಲ ಕಿಂದರಿಜೋಗಿಯ ಹಿಂದೆ ಮಕ್ಕಳು ಸಮ್ಮೋಹನಕ್ಕೆ ಒಳಗಾಗಿ ಬಂದಂತೆ ಬಂದರು. ಪುಸ್ತಕ ಕೊಳ್ಳಲು ಹಣವಿಲ್ಲದಿದ್ದರೂ ಆಸಕ್ತಿಯಿಂದ ಅದನ್ನು ನೋಡಿದರು. ಎಷ್ಟೋ ವೇಳೆ ಅದನ್ನು ಮುಟ್ಟಿ ನೋಡಬಹುದಾ ಎಂದು ಕೇಳಿದರು. ಅಲ್ಲೇ ನಿಂತು ಎಷ್ಟೋ ಕಥೆ ಓದಿದರು.

ನಮಗೆ ಗೊತ್ತಾಗಿಹೋಯಿತು ಮಕ್ಕಳಿಗೆ ಪುಸ್ತಕಗಳು ಬೇಕು ಆದರೆ ಅವರನ್ನು ಪುಸ್ತಕಗಳ ಲೋಕಕ್ಕೆ ಕರೆದೊಯ್ಯುವ ಮನಸ್ಸುಗಳೆ ಮಾಯವಾಗಿ ಹೋಗಿದೆ ಎಂದು.

ಹಾಗೆ ಅನಿಸಿಹೋದಾಗ ಅವರಿಬ್ಬರೂ ಆರಂಭಿಸಿದ್ದು – ವಾಕಿಂಗ್ ಬುಕ್ ಫೇರ್

ನಾವು ಕುಳಿತದ್ದು ಇದೇ ವಾಕಿಂಗ್ ಬುಕ್ ಫೇರ್ ನ ಪುಸ್ತಕದ ಗೂಡಿನಲ್ಲಿ. ತಪ್ಪು ತಪ್ಪು.. ಅದನ್ನು ಗೂಡು ಎಂದು ಕರೆಯುವ ಹಾಗೆ ಇಲ್ಲ. ಪ್ರತೀ ಪುಸ್ತಕ ಜೋಡಿಸುವುದರಲ್ಲೂ ಅವರು ಕೊಟ್ಟ ಸಮಯ ಗೊತ್ತಾಗಿಹೋಗುತ್ತಿತ್ತು.

ಪುಸ್ತಕಗಳ ಮುಖಪುಟಗಳನ್ನೇ ಸ್ಮರಣ ಫಲಕಗಳನ್ನಾಗಿ ಮಾಡಿದ್ದ್ದರು. ಅಲ್ಲಿ ಹಳೆಯ ಟ್ರಂಕ್ ಒಂದು ಬಿದ್ದುಕೊಂಡಿತ್ತು. ಚಿನ್ನದ ಅಂಗಡಿಯಲ್ಲಿ ನೊಣಕ್ಕೇನು ಕೆಲಸವಪ್ಪ? ಎಂದು ಅದನ್ನು ತೆರೆದರೆ ಅರೆ ಅಲ್ಲೂ.. ಪುಸ್ತಕಗಳು.

ಹಳೆಯ ಕಾಲದ ಟೈಪ್ ರೈಟರ್ ಒಂದು ನೆನಪಿನ ಓಣಿಗಳಲ್ಲಿ ನಡೆಸಿಕೊಂಡು ಹೋಯಿತು. ರಸ್ಕಿನ್ ಬಾಂಡ್, ಖುಷ್ವಂತ್ ಸಿಂಗ್ ಟಪ ಟಪ ಎಂದು ಟೈಪ್ ರೈಟರ್ ನಲ್ಲಿ ಕುಟ್ಟುತ್ತಾ ತಮ್ಮೊಳಗಿನ ಕಥೆ ಕಾದಂಬರಿಗಳು ಹೊರಗೆ ಜಿಗಿಯುವಂತೆ ಮಾಡುತ್ತಿದ್ದುದು ನೆನಪಿಗೆ ಬಂತು.

ಅಲ್ಲೊಂದು ಎತ್ತರದ ಏಣಿ.. ಅದರ ಕಾಲ್ಗಳ ಮೇಲೆ ಆರಾಮವಾಗಿ ಪುಸ್ತಕ ಹಿಡಿದು ಓದುತ್ತಿದ್ದ ದಂಡು.

ಮತ್ತೊಂದು ಕಪ್ ಚಹಾಗೆ ಬೇಡಿಕೆಯಿಟ್ಟು ಹೀಗೆ ಕಣ್ಣಾಡಿಸುತ್ತಾ.. ಕಣ್ಣಾಡಿಸುತ್ತಾ.. ಸಾಗುತ್ತಿದ್ದಾಗ ಒಂದು ವಿಶೇಷ ನನ್ನ ಗಮನಕ್ಕೆ ಬಂತು. ಅಲ್ಲಿದ್ದ ಪುಸ್ತಕಗಳ ಪೈಕಿ ಬಹುತೇಕ ಎಲ್ಲವೂ ಕಥೆ , ಕಾದಂಬರಿಗಳೇ. ಬೇರೆ ಪ್ರಕಾರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇತ್ತು.

ನಾನು ಕೇಳಿಯೂಬಿಟ್ಟೆ.. ಇದೇನು ವಿಚಿತ್ರ ಅಂತ. ಅವರು ಹೇಳಿದರು- ಹೌದು ಅದು ನಾವು ಬೇಕೆಂದೇ ಮಾಡಿರುವ ಆಯ್ಕೆ. ಇವತ್ತು ಕಥೆಗಳು ಬೇಕು. ಈ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಕಥೆಗಳು ಬೇಕು. ವಿಜ್ಞಾನ, ಚರಿತ್ರೆ, ಸಾಮಾಜಿಕ ಶಾಸ್ತ್ರ ಯಾವುದನ್ನೇ ಅರ್ಥ ಮಾಡಿಕೊಳ್ಳಲು ನೀವು ಕಥೆಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.

ನನಗೆ ಹೆಚ್ಚು ಆಸಕ್ತಿ ಇದ್ದದ್ದು ಅವರ ಕಥೆಯಲ್ಲಿ..

ಕೇಳಿಯೇಬಿಟ್ಟೆ.. ನೀವು ಬ್ಯಾಕ್ ಪ್ಯಾಕ್ ನಲ್ಲಿ ಪುಸ್ತಕ ಹೊತ್ತು ಒಯ್ದಿರಿ ಆಮೇಲೆ.. ಅವರಿಗೂ ಕಥೆ ಹೇಳುವ ಹುಮ್ಮಸ್ಸಿತ್ತು. ನನ್ನ ಮುಂದೆ ಒಂದು ಮಾಂತ್ರಿಕ ಲೋಕವನ್ನು ಬಿಡಿಸಿಡುವವರಂತೆ ಅವರು ಬಣ್ಣಿಸುತ್ತಾ ಹೋದರು. ಹಾಗೆ ನಾವು ಊರೂರಿಗೆ ಹಳ್ಳಿಗಳಿಗೆ ಪುಸ್ತಕ ಒಯ್ದಾಗ ಎಲ್ಲರೂ ನಮ್ಮನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು. ನಾವೋ ರಸ್ತೆ ಬದಿ ಪುಸ್ತಕ ಮಾರಿ ಅಲ್ಲಿಯೇ ಮಲಗಿಬಿಡುತ್ತಿದ್ದೆವು. ಹೆಣ್ಣು ಹುಡುಗಿ ರಸ್ತೆ ಬದಿ ಮೆಟ್ಟಿಲ ಮೇಲೆ ಮಲಗುತ್ತಿದ್ದದ್ದು ಹುಬ್ಬೇರುವಂತೆ ಮಾಡಿತ್ತು.

ಎಷ್ಟೋ ಕಡೆ ನಾವು ಹೇಳಲಾಗದಂತ ಸಮಸ್ಯೆಗಳೂ ಆಯಿತು. ಆದರೆ ಎಷ್ಟೋ ಊರುಗಳಲ್ಲಿ ಇದೇ ಮೊದಲ ಬಾರಿಗೆ ಪಠ್ಯ ಪುಸ್ತಕದ ಆಚೆಗೂ ಪುಸ್ತಕಗಳ ಲೋಕವಿದೆ ಎನ್ನುವುದು ಅರ್ಥವಾಯಿತು. ನಮಗೆ ಗೊತ್ತಾಗಿ ಹೋಯಿತು. ಪುಸ್ತಕಗಳನ್ನು ಪಠ್ಯ ಪುಸ್ತಕಗಳಿಂದ ಆಚೆ ಬಿಡಿಸಿಕೊಂಡು ಬರಬೇಕಾದ ಅಗತ್ಯವಿದೆ ಎಂದು.

ಆಗೋ ನೋಡಿ ಎಂದು ಕಿಟಕಿಯಾಚೆಗೆ ಶತಾಬ್ದಿ ಮಿಶ್ರಾ ಕೈ ತೋರಿಸಿದರು.

ಅಲ್ಲಿ ದೇವಸ್ಥಾನದ ಮುಂದೆ ಗರುಡಗಂಭ ಎನ್ನುವಂತೆ ಒಂದು ಟ್ರಕ್ ನಿಂತಿತ್ತು. ಪುಸ್ತಕದ ಟ್ರಕ್. ಅದರ ಮೂರೂ ಬದಿಯಲ್ಲಿ ಪುಸ್ತಕಗಳೋ ಪುಸ್ತಕಗಳು. ಡ್ರೈವರ್ ಸೀಟ್ ಬಿಟ್ಟರೆ ಉಳಿದ ಎಲ್ಲಾ ಕಡೆ ಪುಸ್ತಕಗಳೇ.

ಇದರಲ್ಲಿ ಏನಿಲ್ಲೆಂದರೂ 4000 ಪುಸ್ತಕ ಹಿಡಿಸುತ್ತದೆ ಗೊತ್ತಾ ಎಂದರು. ಹಾಂ! ಅನಿಸಿತು. 10 ಸಾವಿರ ಕಿಲೋ ಮೀಟರ್, 90 ದಿನ, 20 ರಾಜ್ಯ, ಇಬ್ಬರು ಜೊತೆಗಾರರು, ಒಂದು ಟ್ರಕ್, ಸಾವಿರಾರು ಕಥೆಗಳು ಯೋಜನೆ ಸಿದ್ಧವಾಗಿಯೇ ಹೋಯಿತು.

ಜಾಹೀರಾತು ಕಂಪನಿಯಲ್ಲಿ ಪೆನ್ನು ಹಿಡಿದು ಕುಳಿತಿದ್ದ ಹುಡುಗಿ ಈಗ ಟ್ರಕ್ ನ ಸ್ಟಿಯರಿಂಗ್ ವೀಲ್ ಹಿಡಿದಳು. ಬಗಲಲ್ಲಿ ಅಕ್ಷಯಾ ರೌತ್ರೆ.

ಕಾರಣ ಇತ್ತು. ಪುಸ್ತಕದ ಟ್ರಕ್ ಓಡಿಸುತ್ತಾ ನಾವು ಹಾಗೆ ೨೦ ರಾಜ್ಯಗಳಲ್ಲಿ ೧೦ ಸಾವಿರ ಕಿ ಮೀಟರ್ ಸಂಚರಿಸಲು ಕಾರಣವಿತ್ತು.

ಯಾವಾಗ ಒರಿಸ್ಸಾದ ಮಕ್ಕಳು ಇದೇ ಮೊದಲ ಬಾರಿಗೆ ಇಂತಹ ಪುಸ್ತಕಗಳೂ ಇರುತ್ತವೆ ಎಂದು ಬೆರಗುಗಣ್ಣಿನಿಂದ ನೋಡಿದರೋ ಆಗ ಅನಿಸಿತು. ಈ ಪರಿಸ್ಥಿತಿ ನಮ್ಮಲ್ಲಿ ಅಲ್ಲ, ಇಡೀ ದೇಶದಲ್ಲಿ ಹೀಗೇ ಇದ್ದರೆ ಅಚ್ಚರಿಯೇನಿಲ್ಲ ಎಂದು. ಹಾಗಾಗಿ ಸ್ಟಿಯರಿಂಗ್ ಹಿಡಿದೇಬಿಟ್ಟೆವು.

ಹಾಗೆ ಸ್ಟಿಯರಿಂಗ್ ಹಿಡಿದಾಗ ನಮಗೆ ಗೊತ್ತಿತ್ತು. ನಾವು ಪುಸ್ತಕದ ಕನಸಿನ, ಪುಸ್ತಕ ಚಳವಳಿಯ ಸ್ಟಿಯರಿಂಗ್ ಸಹಾ ಹಿಡಿದಿದ್ದೇವೆ ಎಂದು.

ನೋಡಿ ಯಾವುದೇ ಒಂದು ಸಿಟಿಯಲ್ಲಿ ಅಪಾರ್ಟ್ಮೆಂಟ್ ಗಳಿಗೆ ಜಾಗವಿದೆ, ಮಾಲ್ ಗಳಿಗೆ ಜಾಗವಿದೆ, ಹೋಟೆಲ್ ಗಳಿಗೆ ಜಾಗವಿದೆ, ಚಿತ್ರ ಮಂದಿರಕ್ಕೆ ಜಾಗವಿದೆ, ಕೊನೆಗೂ ರೇಸ್ ಕೋರ್ಸ್ ಗೂ ಜಾಗವಿದೆ ಆದರೆ ಲೈಬ್ರರಿಗಳಿಗಿಲ್ಲ?

ಅದೇ ಅಪಾರ್ಟ್ಮೆಂಟ್ ಗೆ ಹೋಗಿ ನೋಡಿ ಕಾರ್ ಪಾರ್ಕಿಂಗ್ ಗೆ ಜಾಗವಿದೆ, ಪೂಲ್ ಗೆ ಜಾಗವಿದೆ, ಕ್ಲಬ್ ಗೆ ಜಾಗವಿದೆ. ಕೊನೆಗೆ ಒಂದು ಮಿನಿ ದೇವಸ್ಥಾನಕ್ಕೂ ಜಾಗವಿರುತ್ತದೆ ಆದರೆ ಇಡೀ ಕಟ್ಟಡದಲ್ಲಿ ಒಂದು ಪುಟ್ಟ ಲೈಬ್ರರಿಗೆ ಜಾಗ ಮಾಡುವುದಿಲ್ಲ.

ಹಾಗಾಗಿಯೇ ನಾವು ಎಲ್ಲಾ ರಾಜ್ಯಗಳ ಮೂಲೆ ಮೂಲೆಗೆ ಟ್ರಕ್ ಡ್ರೈವ್ ಮಾಡುತ್ತಾ ಹೊರಟೇಬಿಟ್ಟೆವು. ಸಾವಿರಾರು ಕಡೆ ಪುಸ್ತಕ ನೋಡಿದವರಲ್ಲಿ ಒಂದಿಷ್ಟು ಜನರಿಗಾದರೂ ಪುಸ್ತಕದ ಹುಚ್ಚು ಹಿಡಿದರೆ ನಾವು ಗೆದ್ದಂತೆ ಎಂದರು.

‘ಎಲ್ಲಾ ಕಡೆ ಹುಚ್ಚು ಬಿಡಿಸುವ ಮಂದಿ ಇದ್ದಾರೆ ನಾವೋ ಅದಕ್ಕೆ ವಿರುದ್ಧ ಹುಚ್ಚು ಹಿಡಿಸುವುದಕ್ಕಾಗಿಯೇ ಊರೂರು ಸುತ್ತುವವರು’ ಎಂದರು.

ಅದು ನಿಜ ಆ ಹುಚ್ಚಷ್ಟೇ ನನಗೂ ತಗುಲಿದ್ದು. ಕಳೆದ ಜನವರಿ 13 ಹಾಗೂ 14 ರಂದು ಈ ಜೋಡಿ ಆ ಪಾಟಿ ಪುಸ್ತಕಗಳನ್ನು ತುಂಬಿಕೊಂಡು ಬೆಂಗಳೂರಿಗೂ ಬಂದಿದ್ದರು.

ಬ್ರಿಗೇಡ್ ರೋಡ್ ನಲ್ಲಿ, ಟ್ರಕ್ ನಿಲ್ಲಿಸಿ ಪಬ್ ಗಳಿರುವೆಡೆ ಪುಸ್ತಕದ ಪರಿಮಳವನ್ನೂ ಹರಡಿಬಿಟ್ಟಿದ್ದರು. ಅದು ನನಗೆ ಗೊತ್ತಾಗುವ ವೇಳೆಗೆ ಅವರು ಬೆಂಗಳೂರಿಗೆ ವಿದಾಯ ಹೇಳಿ ಮೈಸೂರು ಮೂಲಕ ಕೇರಳ ತಲುಪಿಕೊಂದು ಅಲ್ಲಿ ತೆಂಗಿನ ನಗರಿಗೆ ಪುಸ್ತಕದ ಹುಚ್ಚು ಹತ್ತಿಸುತ್ತಿದ್ದರು.

ಛೆ! ಗೊತ್ತಾಗದೆ ಹೋಯ್ತೆ ಎನ್ನುವ ಹಳಹಳಿಕೆ ಶುರುವಾಗಿ ಹೋಯ್ತು.ಕೊನೆಗೆ ಅದು ಕೋನಾರ್ಕವನ್ನೂ, ಪುರಿ ಜಗನ್ನಾಥನನ್ನೂ, ಆ ಚಿಲ್ಕಾ ಸರೋವರವನ್ನೂ ಮೀರಿ ಪುಸ್ತಕದ ಅಂಗಡಿಯ ಮುಂದೆ ನಿಲ್ಲುವಂತೆ ಮಾಡಿತ್ತು.

ನಾನು ಅವರ ಪುಸ್ತಕದ ಅಂಗಡಿ ಹೊಕ್ಕಾಗ ಸಾರ್ಥಕ ಭಾವ. ಎದುರಿಗಿರುವ ಆ ಇಬ್ಬರನ್ನೂ ನೋಡುತ್ತೇನೆ ಅವರ ಮುಖದಲ್ಲೂ ಅದೇ ಸಾರ್ಥಕ ಭಾವ.

ಹುಚ್ಚು ಹತ್ತಿಸಿದವರೂ, ಹುಚ್ಚು ಹತ್ತಿಸಿಕೊಂಡವರು ಇಬ್ಬರೂ ಕೈ ಕುಲುಕಿ ನಿಂತಿದ್ದೆವು. ಥೇಟ್ ಚಿಲ್ಕಾ ಸರೋವರ ಆ ಬಂಗಾಳ ಕೊಲ್ಲಿಯ ಮೈದಡವಿದ ಹಾಗೆ. ಗಂಟೆಗಟ್ಟಲೆ ಇಡೀ ಪುಸ್ತಕದಂಗಡಿ ಹುಡುಕಿ ಸಾಕಷ್ಟು ಪುಸ್ತಕ ಆಯ್ಕೆಮಾಡಿಕೊಂಡೆ.

ಬಿಲ್ ಮಾಡಿಸಲು ಕೌಂಟರ್ ಬಳಿಗೆ ಬಂದಾಗ ಒಂದು ಸಹಾಯ ಆಗಬೇಕಲ್ಲ ಎಂದೆ ಏನು ಎಂದೂ ಕೇಳದೆ ಅವರು ಪರವಾಗಿಲ್ಲ ನೀವು ಬೆಂಗಳೂರಿಗೆ ಹೋದ ಮೇಲೆಯೇ ದುಡ್ಡು ಕಳಿಸಿ ತೊಂದರೆ ಇಲ್ಲ ಅಂದರು. ನಾನು ಅದಲ್ಲ ಎಂದೆ ಮತ್ತೆ ಎನ್ನುವಂತೆ ನೋಡಿದರು. ನೀವು ಎಲ್ಲಾ ಸಮಯದಲ್ಲೂ ಶೇಖಡಾ 20 ರಿಯಾಯಿತಿ ಕೊಟ್ಟೇ ಕೊಡುತ್ತೀರಲ್ಲಾ.. ಅದು ದಯವಿಟ್ಟು ಬೇಡ. ಪುಸ್ತಕದ ಅಷ್ಟೂ ಬೆಲೆಯನ್ನು ನನ್ನಿಂದ ವಸೂಲು ಮಾಡಿ. ಅದೇ ನಾನು ನಿಮಗೆ ಕೊಡಬಹುದಾದ ಕಾಣಿಕೆ ಎಂದೆ.

ಅವರು ಬಹುಷಃ ಅಂತಹ ಮಾತನ್ನು ಮೊದಲು ಕೇಳಿದ್ದರೇನೋ. ನನ್ನ ಕೈ ಒತ್ತಿದರು ಕಣ್ಣಲ್ಲಿನ ಮಿಂಚಿನ ಸಮೇತ.

ನಾನು ಪುಸ್ತಕದ ಕಟ್ಟಿನ ಸಮೇತ ಅಲ್ಲಿಂದ ಹೊರಟವನು ಹಿಂದಿರುಗಿ ನೋಡಿದೆ. ಅವರಿಬ್ಬರೂ ಆಗಲೇ ಟ್ರಕ್ ಹತ್ತಿದ್ದರು. ಕ್ರಮೇಣ ಕಣ್ಣಿಂದ ಮರೆಯಾಗುತ್ತಿದ್ದ ಆ ಟ್ರಕ್ ನಲ್ಲಿ ಖುಷ್ವಂತ್ ಸಿಂಗ್, ದೇವದತ್ತ ಪಟ್ಟನಾಯಕ್, ಜುಂಪಾ ಲಾಹಿರಿ, ನಮ್ಮವರೇ ಆದ ರೇವತಿ, ಲೈಂಗಿಕ ಕಾರ್ಯಕರ್ತೆ ಜಮೀಲಾ, ಸಲ್ಮಾನ್ ರಷ್ಡಿ, ಅನುಜಾ ಚೌಹಾಣ್ ಕುಲು ಕುಲು ನಗುತ್ತಾ ಸಾಗಿದ್ದರು. ಅಷ್ಟೇ ಅಲ್ಲ ಕುಲುಕುತ್ತಲೂ..
——
ಈಗ ಈ ಜೋಡಿ ಬೆಂಗಳೂರಿನಲ್ಲೂ ಪುಸ್ತಕದ ಮಳಿಗೆ ತೆರೆದಿದ್ದಾರೆ. ಓಡಿಶಾದಂತಹದ್ದೇ ಮಳಿಗೆ. https://www.facebook.com/walkingbookfairsbangalore

ತುಮಕೂರು ಜಿಲ್ಲೆಯ ಇಬ್ಬರು ಯುವಕರಿಗೆ ಕೋವಿಡ್!

ತುಮಕೂರು ಜಿಲ್ಲೆಯಲ್ಲಿ ಇಬ್ಬರು  ಯುವಕರಿಗೆ ಕೋವಿಡ್ 19 ದೃಢಪಟ್ಟಿದೆ.  ವೃದ್ಧರಿಗೆ ಸೋಂಕು ಹೆಚ್ಚಾಗಿ ತಗಲುತ್ತದೆ ಎಂಬ ಸಮೀಕ್ಷೆ ಇದೀಗ ಸುಳ್ಳಾಗಿದೆ.

ದೆಹಲಿಯಲ್ಲಿ ಬಿ ಎಸ್ ಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ರಜೆಯ ಮೇಲೆ ಪಾವಗಡ ತಾಲ್ಲೂಕಿಗೆ ಹಿಂದಿರುಗಿದ್ದರು. ಅವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.  ಅವರಿಗೆ ಸೋಂಕು ದೃಢಪಟ್ಟಿದೆ. ಕುಣಿಗಲ್ ನ ಮತ್ತೊಬ್ಬ ಯುವಕನಿಗೂ ಇಂದು ಸೋಂಕು ದೃಢಪಟ್ಟಿದೆ. ಇವರಿಬ್ಬರೂ 30 ಕ್ಕಿಂತ ಕಡಿಮೆ ವಯೋಮಾನದವರು.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಇಂದು ಸಂಜೆಯ ವೇಳೆಗೆ 248 ಹೊಸ ಪ್ರಕರಣ ಪತ್ತೆಯಾಗಿದೆ.  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2781 ಕ್ಕೆ ಏರಿಕೆಯಾಗಿದೆ.

ರಾಜ್ಯದ್ಯಂತ  ಒಂದು ದಿನದಲ್ಲಿ 60 ಮಂದಿ ಸೋಂಕಿನಿಂದ‌ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ.

ಶುಕ್ರವಾರ ಮಧ್ಯಾಹ್ನ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ  178 ಮಂದಿಗೆ ಕೋವಿಡ್ 19 ದೃಢಪಟ್ಟಿರುವುದಾಗಿ ಮಾಹಿತಿ ನೀಡಿತ್ತು. ಸಂಜೆಯ ವೇಳೆಗೆ 248 ಕ್ಕೆ ಸೋಂಕಿತರ ಸಂಖ್ಯೆ ತಲುಪಿದೆ.

ಕೊರೊನಾ ಸೋಂಕಿಗೆ ರಾಜ್ಯದಲ್ಲಿ‌ ಮತ್ತೊಬ್ಬರು ಮೃತಪಟ್ಟಿದ್ದಾರೆ.  ಮೃತರ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ. ಚಿಕ್ಕಬಳ್ಳಾಪುರ ಮೂಲದ 50 ವರ್ಷದ ಮಹಿಳೆಗೆ ನಿಮೋನಿಯಾ ಹಾಗು   ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.  ಬೆಂಗಳೂರಿನ   ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆ ನಡೆಲಾಗಿತ್ತು.  ರದಿಯಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇಂದು ಪತ್ತೆಯಾದ  ಪ್ರಕರಣಗಳು:  ಕಲಬುರಗಿ – 61, ಯಾದಗಿರಿ ‌‌- 60, ರಾಯಚೂರು – 62, ಬೆಂಗಳೂರು – 12, ಉಡುಪಿ – 15,
ಮಂಡ್ಯ – 2, ದಾವಣಗೆರೆ – 04, ಹಾಸನ – 04, ಚಿಕ್ಕಬಳ್ಳಾಪುರ – 05, ಮೈಸೂರು – 02, ವಿಜಯಪುರ – 04, ಬಳ್ಳಾರಿ – 09, ಧಾರವಾಡ – 01, ಶಿವಮೊಗ್ಗ – 01, ಚಿತ್ರದುರ್ಗ – 01, ತುಮಕೂರು – 02, ಚಿಕ್ಕಮಗಳೂರು – 02, ಬೆಂ. ಗ್ರಾಮಾಂತರ – 01 ಪತ್ತೆಯಾಗಿದೆ.

ಮಧುಗಿರಿಯಲ್ಲಿ ನಕಲಿ ವೈದ್ಯರ ಹಾವಳಿ

ಮಧುಗಿರಿ: ತಾಲ್ಲೂಕಿನಾಧ್ಯಂತ ನಾಯಿ ಕೊಡೆಗಳಂತೆ ಹಬ್ಬಿರುವ ನಕಲಿ ವೈದ್ಯರು ಅಮಾಯಕ ಬಡ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದರೆ ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರಪಟ್ಟಿ ಪ್ರಕಟಿಸದೆ ಇರುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ವಿಪರ್ಯಾಸವಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಸರ್ಕಾರಗಳು ಹರಸಾಹಸ ಪಡುತ್ತಿರುವಾಗ ಯಾವ ಖಾಯಿಲೆಗೆ ಯಾವ ಚುಚ್ಚು ಮದ್ದು ನೀಡಬೇಕೆಂಬದನ್ನೇ ತಿಳಿಯದ ನಕಲಿ ವೈದ್ಯರಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ.

ಆರೋಗ್ಯ ಅಧಿಕಾರಿಗಳ ಪಟ್ಟಿಯೊಂದರ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಸುಮಾರು 123 ಮಧುಗಿರಿ ತಾಲ್ಲೂಕಿನಲ್ಲಿ 66 ನಕಲಿ ವೈದ್ಯರಿದ್ದಾರೆಂದು ಅಂದಾಜಿಸಲಾಗಿತ್ತು.

ಆದರೆ ವಾಸ್ತವಾಗಿ ಅದಕ್ಕೆ ಮೂರುಪಟ್ಟು ನಕಲಿ ವೈದ್ಯರಿದ್ದು ಅಧಿಕಾರಿಗಳಿಗೆ ಕಪ್ಪ ಕಾಣಿಕೆಗಳನ್ನು ನೀಡಿ ಪಟ್ಟಿಯಿಂದ ಕೈಬಿಡುವಂತೆ ನೋಡಿಕೊಂಡಿರುವುದು ಸುಳ್ಳೇನಲ್ಲ.

ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ಕೆಲವೇ ಕೆಲವರ ಕ್ಲಿನಿಕ್‍ಗಳ ಮೇಲೆ ದಾಳಿ ನಡೆಸಿ ಇಲಾಖೆಯ ನಿರ್ದೇಶಕರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ತಮ್ಮ ಪಾಲಿನ ಕರ್ತವ್ಯ ಮುಗಿಸಿ ನಕಲಿ ವೈದ್ಯರ ಕಡೆಯಿಂದ ಬರುವ ಗಿಫ್ಟ್ ಆಫರ್ ಗಳನ್ನು ಕಾಲ ಕಾಲಕ್ಕೆ ಪಡೆಯುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ತಾಲ್ಲೂಕಿನಾದ್ಯಂತ ಇರುವ ಕ್ಲಿನಿಕ್‍ಗಳು ರಾಜಾರೋಷವಾಗಿ ರೋಗಿಗಳಿಗೆ ಸ್ಟಿರಾಯ್ಡ್ ಅಂಶಗಳನ್ನು ಹೊಂದಿರುವ ಹೆಚ್ಚು ಡೋಸೇಜ್‍ನ ಔಷಧಿಗಳನ್ನು ನೀಡಿ ತಾತ್ಕಾಲಿಕವಾಗಿ ಖಾಯಿಲೆ ವಾಸಿ ಮಾಡುತ್ತಿರುವ ಈ ನಕಲಿ ವೈದ್ಯರು ಸಮೀಪದ ಔಷಧಿ ಅಂಗಡಿಗಳ ಮಾಲೀಕರೊಂದಿಗೆ ಸೇರಿ ಕಮೀಷನ್ ದಂದೆಯೊಂದನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಪಟ್ಟಣದಲ್ಲಿನ  ಅಗತ್ಯ ಸೌಕರ್ಯಗಳಿಲ್ಲದ ಕ್ಲಿನಿಕ್‍ಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಸರದಿ ಸಾಲಿನಲ್ಲಿ ಗರ್ಭಿಣಿಯರು ನಿಲ್ಲಲು ಆಗದೆ ರಸ್ತೆ ಬದಿಗಳಲ್ಲಿನ ಮರಗಳ ಕೆಳಗೆ ನಿಂತು ಗಂಟೆಗಟ್ಟಲೆ ಕಾಯಬೇಕಿದೆ. ಹೊರ ರಾಜ್ಯದಿಂದ ಬಂದು ಇಲ್ಲಿಯೇ ನೆಲಸಿರುವ ಸಿಡಕು ಸ್ವಭಾವದ ವೈದ್ಯೆ ಸೂಚಿಸಿದ ಹಾಗೂ ಅವರ ಮೆಡಿಕಲ್ ಷಾಪ್ ನಲ್ಲಿಯೇ ಔಷಧ ಪಡೆಯುವುದರೊಂದಿಗೆ ಹೇಳಿದಷ್ಟು ಹಣ ಪಾವತಿಸಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆ.

ಈ ಖಾಸಗಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವೆರಿಗೆ 20 ಸಾವಿರ ಹಾಗೂ ಸಿಜೇರಿಯನ್‍ಗೆ 50 ಸಾವಿರ ನಗದು ಹಣ ಪಡೆಯುತ್ತಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ತಾಲ್ಲೂಕಿನ ಕೆಲವು ಕಡೆ ಕಷ್ಟ ಪಟ್ಟು ವ್ಯಾಸಂಗ ಹಾಗೂ ಕಾನೂನು ಬದ್ಧವಾಗಿ ಪಡೆದ ಸರ್ಟಿಫಿಕೆಟ್ ವೈದ್ಯರ ವಿರುದ್ಧ ಇಲ್ಲ ಸಲ್ಲದ ಮೂಕರ್ಜಿಗಳನ್ನು ರೋಗಿಗಳಿಂದ ಆರೋಗ್ಯ ಇಲಾಖೆಗೆ ಬರೆದು ಬರೆಸಿ ಕೊಡುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ ಇದರಿಂದಾಗಿ ಮೂಲ ವೈದ್ಯಕೀಯ ಪ್ರಮಾಣ ಪತ್ರ ಪಡೆದವರಿಗೂ ಸಹ ಇರಿಸು ಮುರಿಸು ಉಂಟಾಗುತ್ತಿದೆ.

ಈ ಹಿಂದೆ ಸಚಿವರಾಗಿದ್ದ ರಮೇಶ್ ಕುಮಾರ್ ರವರು ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ಹೊರಟು ನಕಲಿ ವೈದ್ಯರೆಂದು ಧೃಢಪಟ್ಟಲ್ಲಿ 5 ಲಕ್ಷ ರೂಪಾಯಿ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ಎಂಬ ಮಸೂದೆಯನ್ನು ತರಲು ಮುಂದಾಗಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಮಸೂದೆಯ ಕಡತಗಳು ಇಲಾಖೆಯಲ್ಲಿಯೇ ಧೂಳು ಹಿಡಿಯುವಂತಾಗಿದೆ ಎಂಬುದು ನಾಗರೀಕರ ಆರೋಪವಾಗಿದೆ.

ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಗಮನಹರಿಸಿ ನಕಲಿ ವೈದ್ಯರ ಹಾವಳಿ ಹಾಗೂ ಖಾಸಗಿ ಕ್ಲಿನಿಕ್‍ಗಳನ್ನು ನಿಯಂತ್ರಿಸಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

 

ಪಾವಗಡ:22 ವರ್ಷದ ವ್ಯಕ್ತಿಗೆ ಕೊರೋನಾ

ಪಾವಗಡ:  ತಾಲ್ಲೂಕಿನ ಅಚ್ಚಮ್ಮನಹಳ್ಳಿ ಗ್ರಾಮಕ್ಕೆ  ದೆಹಲಿಯಿಂದ ಹಿಂದಿರುಗಿದ 22 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಕೋವಿಡ್ 19  ದೃಡಪಟ್ಟಿದೆ.

ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದ ಯುವಕ  ಮೇ-25 ರಂದು ತಾಲ್ಲೂಕಿನ ಸ್ವಗ್ರಾಮಕ್ಕೆ ರಜೆಯ ಮೇಲೆ ಆಗಮಿಸಿದ್ದರು.  ಅವರೇ ಸ್ಪ ಹಿತಾಸಕ್ತಿಯಿಂದ  ಪಟ್ಟಣಕ್ಕೆ ಬಂದು ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಿದ್ದರು. ನಂತರ ಅವರನ್ನು ಪಟ್ಟಣದ  ಆಪ್ ಬಂಡೆ ಬಳಿಯ ವಸತಿ ನಿಲಯದಲ್ಲಿ  ಕ್ವಾರಂಟೈನ್ ಮಾಡಲಾಗಿತ್ತು.  ಇವರೊಂದಿಗೆ ಸುಮಾರು 30 ಮಂದಿಯನ್ನು ಇದೇ ವಸತಿ ನಿಲಯದಲ್ಲಿ ಪ್ರತ್ಯೇಕ ಕೋಠಡಿಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತರ ಕೊಠಡಿಯಲ್ಲಿದ್ದ  ಇತರೆ 3 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಬೇಕಿದ್ದು. ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.

 

ಕಾಂಗ್ರೆಸ್ ಶಾಸಕರು ನನ್ನ ಕಂಟ್ರೋಲ್ನಲ್ಲಿದ್ದಾರೆ: ರಮೇಶ್ ಜಾರಕಿ ಹೊಳಿ

ತುಮಕೂರು

ಹೈಕಮಾಂಡ್ ಅನುಮತಿ ನೀಡಿದರೆ ಕಾಂಗ್ರೆಸ್ ನ ಇನ್ನೂ 5 ಜನ ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತರುವುದಾಗಿ ಸಚಿವ ರಮೇಶ್ ಜಾರಕಿ ಹೊಳಿ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಸಚಿವ ಹೊಳಿ ಚಾಮರಾಜನಗರದಲ್ಲಿ ಈ ರೀತಿ ಹೊಸ ಬಾಂಬೊಂದನ್ನ ಸಿಡಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ  ಕೈಗೊಂಡಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಇಂದು ಚಾಮರಾಜನಗರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗಾಗಿ ಬಂದಿದ್ದರು.

ಈ  ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತ ಕೇವಲ ಒಂದು ವಾರದೊಳಗೆ ಐದು ಜನ ಶಾಸಕ ರಾಜೀನಾಮೆ ಕೊಡಿಸಬಲ್ಲೆ ಈಗಲೂ ನನ್ನ ಬಳಿ 22 ಜನ ಶಾಸಕರು ನನ್ನ  ಕಂಟ್ರೋಲ್ ನಲ್ಲಿದ್ದಾರೆ ಎಂದು ವಿಪಕ್ಷಗಳ ವಾಸ್ತವ ಕುರಿತು ಅಪಹಾಸ್ಯ ಮಾಡಿದರು.

ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು ಅಲ್ಲಿಗೆ ಈಗ ಹೋಗುವವರು ಮೂರ್ಖರು ಇನ್ನು ಮುಂದೆ ನನ್ನ ರಾಜಕೀಯ ಅಂತ್ಯ ಬಿಜೆಪಿಯಲ್ಲೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದರು.

ಮಳೆ ನೀರು ಸಂರಕ್ಷಣೆಯಿಂದ ಪರಿಸರ ಸಮತೋಲನ

ತುಮಕೂರು: ಮಳೆಯ ನೀರು ಹರಿದು ಹೋಗುವುದನ್ನು ತಡೆದು ಭೂಮಿಯಲ್ಲಿ ಇಂಗಿಸಿ ಸಮತೋಲನ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಆವರಣದ ಕುಂಚಿಟಿಗರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಅಂತರ್ಜಲ ಚೇತನ ಕಾರ್ಯಕ್ರಮವನ್ನು ಉದ್ಥಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಮೂಲಕ 30 ವರ್ಷಗಳ ಹಿಂದಿನ ಪರಿಸರ ಮತ್ತು ಪ್ರಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ನರೇಗಾ ಯೋಜನೆಯಡಿಯಲ್ಲಿ ಮಾಡಬೇಕಾಗಿದೆ ಎಂದರು.

ನರೇಗಾ ಯೋಜನೆಯಡಿ 249 ರೂ.ಇದ್ದ ಕೂಲಿ ಹಣವನ್ನು 275 ರೂ.ಗಳಿಗೆ ಹೆಚ್ಚಿಸಿ ದುಡಿಯುವ 9.31ಲಕ್ಷ ಕೈಗಳಿಗೆ ಕೆಲಸ ಕೊಡುವುದರ ಜೊತೆಗೆ ಸಾಮಾಜಿಕ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಹೊಲ, ಮನೆ ಕಾಮಗಾರಿಗಳನ್ನು ಕೈಗೊಂಡು ದುಡಿಯುವವರ ಕೂಲಿಯ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಜಾಬ್ ಕಾರ್ಡ್ ಸ್ಥಳದಲ್ಲೇ ನೀಡಿ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕುಡಿಯುವ ಸಿಹಿ ನೀರು ಮಳೆಯಿಂದ ಮಾತ್ರ ಲಭ್ಯವಾಗುತ್ತಿದ್ದು, ನೀರಿನ ಮೂಲಗಳಾದ ಕೆರೆ, ಹಳ್ಳ, ಬಾವಿಗಳಲ್ಲಿ ನೀರು ಸಂಗ್ರಹಿಸಿಡುವ ಕೆಲಸವಾಗಬೇಕು. ನೀರಿನ ಮಿತ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಅಂತರ್ಜಲ ಹೆಚ್ಚಿಸುವ ಕಾರ್ಯ ಈ ಯೋಜನೆಯಿಂದ ಆಗಬೇಕಾಗಿದೆ ಎಂದರು.

ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿಯಲ್ಲಿ ಅಂತರ್ಜಲ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ನರೇಗಾ ಯೋಜನೆಯಡಿಯಲ್ಲಿ ಅನುದಾನ ನೀಡಿದೆ. ಅಂತರ್ಜಲ ಮರುಪೂರಣಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ಹರಿಯುವ ನೀರು ಕೆರೆ, ಕಾಲುವೆ, ಹಳ್ಳಗಳಲ್ಲಿ ನಿಲ್ಲುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಸಂಸದ ಜಿ.ಎಸ್.ಬಸವರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ಜಯರಾಂ, ಬಿ.ಸತ್ಯನಾರಾಯಣ, ಬಿ.ಸಿ.ನಾಗೇಶ್, ಡಾ ಹೆಚ್.ಡಿ. ರಂಗನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕರ್ಮದ ಫಲ ನಿಮಗೆಷ್ಟು ಗೊತ್ತು…?

ಎಚ್. ಎಸ್.ಲೋಕೇಶ್

ಕರ್ಮಕ್ಕೆ ತಕ್ಕಂತೆ ಪ್ರತಿ ಜೀವಿಯು ಪ್ರತಿಫಲ ಅನುಭವಿಸಲೇಬೇಕು. ಇದು ನಿಯಮ. ಕರ್ಮ ಮೂರು ವಿಧ. ಸಂಚಿತ, ಪ್ರಾರಬ್ಧ, ಆಗಾಮಿ ಎಂಬುದಾಗಿದೆ. ಅನೇಕ ಜನ್ಮಗಳಿಂದ ಕೂಡಿಕೊಂಡು ಬಂದಿರುವ ಕರ್ಮ ಸಂಚಿತ ವಾದರೆ ಯಾವ ಕರ್ಮವನ್ನು ಅನುಭವಿಸಲು ವ್ಯಕ್ತಿಯ ಜನನವಾಗಿದೆ ಅದು ಪ್ರಾರಬ್ಧಕರ್ಮ. ವ್ಯಕ್ತಿಯು ಬದುಕಿರುವವರೆಗೆ ಮಾಡುವುದೇ ಆಗಾಮಿ.

ಕರ್ಮಸಿದ್ಧಾಂತವನ್ನು ತಿಳಿಯುವುದು ಕಷ್ಟಸಾಧ್ಯದ ವಿಷಯವಾಗಿದೆ. ಮುಖ್ಯವಾಗಿ ಕರ್ಮಸಿದ್ಧಾಂತದಲ್ಲಿ ಹುಟ್ಟಿನ ಉದ್ದೇಶ ಸಾವಿನ ಕಾರಣ ತಿಳಿದುಕೊಂಡರೆ ನಮ್ಮ ಜೀವನವು ಸುಗಮವಾಗುತ್ತದೆ. ಆದರೆ ಹುಟ್ಟಿನ ಉದ್ದೇಶ ಸಾವಿನ ಕಾರಣ ಇವೆರಡು ತುಂಬಾ ನಿಗೂಢದ ವಿಚಾರಗಳಾಗಿವೆ. ಈ ವಿಚಾರಗಳನ್ನು ಹರಿಯಲು ಜ್ಯೋತಿಷ್ಯ ನಮಗೆ ಸಹಾಯಕವಾಗಿದೆ.

ಜ್ಯೋತಿಷ್ಯ ಎಂದರೆ ಭವಿಷ್ಯ ಹೇಳುವುದಲ್ಲ ಕೇವಲ ಈ ಜೀವನದಲ್ಲಿ ಆ ವ್ಯಕ್ತಿಯು ಪಡೆದುಕೊಂಡಿರುವ ಎಲ್ಲಾ ರೀತಿಯ ಪಾಪಕರ್ಮಗಳ ಪುಣ್ಯಕರ್ಮಗಳ ಅನುಸಾರ ಜೀವನದಲ್ಲಿ ಅನುಭವಿಸುವ ಸುಖ, ಸಂತೋಷ, ನೋವು-ನಲಿವು, ಒಲವು, ಅನುಕೂಲ, ಕೀರ್ತಿ ಮತ್ತು ದುಃಖ-ದುಮ್ಮಾನ ಸಮಸ್ಯೆ, ರೋಗ ಸಾಲ, ಶತ್ರು ಈ ರೀತಿಯಾಗಿದೆ. ಇನ್ನೂ ಅನೇಕ ವಿಷಯಗಳು ಅಂದರೆ ಜ್ಯೋತಿಷ್ಯದ ರೀತಿ ಹೇಳುವುದಾದರೆ ವ್ಯಕ್ತಿಗೆ ಸ್ವತಃ ತಾನು ತನ್ನ ಕುಟುಂಬ ಸಾಮರ್ಥ್ಯ ಸುಖ ಬೆಲೆ ಕಷ್ಟ, ಇಷ್ಟ, ನಷ್ಟ, ಅದೃಷ್ಟ ಪರೀಕ್ಷೆ ಫಲಿತಾಂಶ ತೃಪ್ತಿ ಇಷ್ಟು ಅಂಶಗಳು ಒಬ್ಬ ವ್ಯಕ್ತಿಯ ಜೀವನವನ್ನು ನಿರ್ಣಯಿಸುತ್ತವೆ.

ಪ್ರಾರಬ್ಧ ಕರ್ಮ ಕಾರ್ಯನಿರ್ವಹಿಸುವ ವಿಧಾನವನ್ನು ಈ ಕೆಳಗಿನ ಶ್ಲೋಕವು ತುಂಬಾ ಅರ್ಥಪೂರ್ಣವಾಗಿ ವಿವರಿಸುತ್ತದೆ

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಮ್ |
ಇಹ ಸಂಸಾರೇ ಬಹು ದುಸ್ತಾರೇ
ಕೃಪಯಾಽಪಾರೇ ಪಾಹಿ ಮುರಾರೇ.

ಈ ಶ್ಲೋಕದ ತಾತ್ಪರ್ಯ ದಂತೆ ನಮ್ಮ ಪ್ರಾರಬ್ಧ ಕರ್ಮವು ನಮ್ಮನ್ನು ಪದೇಪದೇ ಇಲ್ಲಿ ಜನ್ಮ ಪಡೆದು ಜೀವನದಲ್ಲಿ ಹಲವಾರು ಸನ್ನಿವೇಶಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ನಾವು ಮಾಡುವ ಪಾಪಕರ್ಮ ಪುಣ್ಯಕರ್ಮಗಳ ಲೆಕ್ಕಾಚಾರವೇ ಸಂಚಿತಕರ್ಮವಾಗಿದೆ. ಮರಣಾನಂತರ ವಿಧಿಯ ಇಚ್ಛೆಯಂತೆ ಪುನರ್ಜನ್ಮ ಪಡೆದು ಅರಿತು ಅರಿಯದೆ ನಮ್ಮ ಜೀವನದಲ್ಲಿ ಬಂದು ಹೋಗುವ ಎಲ್ಲ ರೀತಿಯ ಅನಿರೀಕ್ಷಿತ ಘಟನೆಗಳಿಗೆ ಪ್ರಾರಬ್ಧಕರ್ಮ ಪ್ರಚೋದನೆ ನೀಡುತ್ತಿರುತ್ತದೆ. ಹಾಗಾಗಿಯೇ ಯಾವಾಗಲೂ ಎಲ್ಲರೂ ನನ್ನ ಕರ್ಮ, ನನ್ನ ಹಣೆಬರಹ, ವಿಧಿಯಾಟ ಈ ರೀತಿಯ ಮಾತುಗಳನ್ನು ಆಡುತ್ತಿರುತ್ತೇವೆ.

ಮುಖ್ಯವಾಗಿ ಒಂದು ವಿಚಾರವನ್ನು ಆಳವಾಗಿ ತೆಗೆದುಕೊಳ್ಳಬೇಕು. ಅದೇನೆಂದರೆ ನಮ್ಮನ್ನು ಮೀರಿದ ಯಾವುದೋ ಒಂದು ಶಕ್ತಿ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೆ ಕಾರಣೀಭೂತವಾಗಿದೆ. ಅದೇ ಪ್ರಕೃತಿ. ಈ ಪ್ರಕೃತಿಯು ಪ್ರತಿಯೊಬ್ಬರಿಗೂ ಬರಬೇಕಾಗಿರುವ ಶುಭ, ಅಶುಭ ಫಲಗಳಿಗೆ ನಾವು ಅಷ್ಟೇ ಅಲ್ಲ ನಮ್ಮ ಪ್ರಕೃತಿಯು ಸಿದ್ಧತೆ ನಡೆಸಿಕೊಳ್ಳುತ್ತದೆ. ಅದೇ ಪ್ರಾರಬ್ಧಕರ್ಮ.

ಜ್ಯೋತಿಷ್ಯದಲ್ಲಿ ಪ್ರಾರಬ್ಧ ಕರ್ಮಕ್ಕೆ ಯಾವುದೇ ಪರಿಹಾರವಿಲ್ಲ ಎನ್ನಲಾಗಿದೆ. ಅನುಭವಿಸಿಯೇ ತೀರಬೇಕು ಆದರೆ ಆ ಭಗವಂತನು ತುಂಬಾ ಕರುಣಾಮಯಿ ಎಲ್ಲರಿಗೂ ಕರ್ಮದ ಜೊತೆ ವಿವೇಚನೆಯನ್ನು ಕೊಟ್ಟಿದ್ದಾನೆ ಈ ಪ್ರಾರಬ್ಧ ಕರ್ಮವನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ನಮ್ಮ ಜ್ಞಾನ ವಿವೇಚನೆ, ಸಮಯಪ್ರಜ್ಞೆ ಮುಖ್ಯವಾಗಿರುತ್ತದೆ. ಒಂದು ಸಣ್ಣ ಉದಾಹರಣೆ ಮೂಲಕ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.

ದಾರಿಯಲ್ಲಿ ಹೋಗುವಾಗ ಒಂದು ಚಿಕ್ಕ ಅಪಘಾತವಾಗುತ್ತದೆ ಎಂದುಕೊಳ್ಳಿ. ಕರ್ಮಾನುಸಾರ ಆದರೆ ಅದೃಷ್ಟವಶಾತ್ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಸಾಮಾನ್ಯವಾಗಿ ಪೆಟ್ಟಾಗಿ ತುಂಬಾ ತೊಂದರೆಯಾದರೆ ನಮ್ಮ ಸುತ್ತಮುತ್ತಲಿನ ನಮ್ಮ ಸಹೋದರರು ಸಹಾಯ ಮಾಡಿ ಸಾಂತ್ವನ ಹೇಳಿ ಚಿಕಿತ್ಸೆ ಪಡೆಯಲು ಸಹಕರಿಸುತ್ತಾರೆ. ಆದರೆ ಯಾವುದೇ ರೀತಿಯ ತೊಂದರೆ ಆಗದೇ ಇದ್ದಾಗ ಪರಸ್ಪರ ಇಬ್ಬರು ವ್ಯಕ್ತಿಗಳು ನಿನ್ನದು ತಪ್ಪು ಎಂದು ಜಗಳ ಶುರು ಮಾಡುತ್ತಾರೆ.

ಆ ಜಗಳ ಅತಿರೇಕಕ್ಕೆ ಹೋಗಿ ಹೊಡೆದಾಡಿಕೊಂಡು ಬೇರೆ ರೀತಿಯಲ್ಲಿ ತೊಂದರೆ ಮಾಡಿಕೊಳ್ಳುತ್ತಾರೆ. ಇಲ್ಲಿ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಾದ ವಿಚಾರವೆಂದರೆ ನಾವುಗಳು ಏನು ಆಗಲಿಲ್ಲವಲ್ಲ ಅದೃಷ್ಟ ಚೆನ್ನಾಗಿದೆ ಆ ಭಗವಂತ ನಮಗೆ ದಯ ತೋರಿದ್ದಾನೆ ಎಂಬ ವಿಚಾರವನ್ನೇ ಮರೆತು ಕೋಪ ಉದ್ವೇಗದಿಂದ ಅನಗತ್ಯ ತೊಂದರೆಯನ್ನು ಮಾಡಿಕೊಳ್ಳುತ್ತೇವೆ. ಅವರವರ ಪ್ರಾರಬ್ಧಕರ್ಮ ದಂತೆ ಯಾವುದೋ ಒಂದು ಅಹಿತಕರ ಘಟನೆ ನಡೆಯುತ್ತದೆ. ಅದನ್ನು ಅರಿಷಡ್ವರ್ಗಗಳ ಹಿಡಿತಕ್ಕೆ ಮನಸ್ಸನ್ನು ಕೊಡದೆ ವಿವೇಚನೆಯಿಂದ ಆಲೋಚಿಸಿದರೆ ಆ ಸನ್ನಿವೇಶವನ್ನು ಕೂಡ ಸಕಾರಾತ್ಮಕವಾಗಿ ಅನುಕೂಲಕರವಾಗಿ ಆನಂದವಾಗಿ ಬದಲಾಯಿಸಬಹುದು.

ವಿಷಯವಿಷ್ಟೇ ಪ್ರಾರಬ್ಧ ಕರ್ಮವನ್ನು ಸದಾ ವಿವೇಚನೆಯಿಂದ ಶುಭ ಫಲವಾಗಿ ಪರಿವರ್ತಿಸಬಹುದು. ಯಾವ ರೀತಿಯ ಪರಿಹಾರಗಳು ಪ್ರಯೋಜನಕಾರಿ ಆಗುವುದಿಲ್ಲ. ಆದ್ದರಿಂದ ಜೀವನದಲ್ಲಿ ಘಟಿಸುವ ಎಲ್ಲ ಘಟನೆಗಳನ್ನು ವಿವೇಕದಿಂದ ವಿಚಾರ ಮಾಡಿ ಮುಂದುವರಿಯಬೇಕು.

ಆದರೆ ಇದು ಸುಲಭದ ಮಾತಲ್ಲ ಕಾರಣ ಯಾವಾಗಲೂ ಸುತ್ತಮುತ್ತಲಿನ ಪರಿಸರ ಪ್ರಚೋದನೆ ನೀಡುತ್ತಿರುತ್ತದೆ ಎಲ್ಲಾ ಸಮಯದಲ್ಲಿ ಎಲ್ಲಾ ಸನ್ನಿವೇಶಗಳು ನಮ್ಮ ಹಿಡಿತದಲ್ಲಿರುವುದಿಲ್ಲ.

ಹಾಗಾಗಿ ಜ್ಞಾನವನ್ನು ಜಾಗೃತಗೊಳಿಸಿ ವಿವೇಕಿಗಳಾಗಿ ವರ್ತಿಸುವ ಅಭ್ಯಾಸ ನಿರಂತರ ನಡೆಸುತ್ತಿರಬೇಕು. ನಿರಂತರ ಅಭ್ಯಾಸದಿಂದ ಜ್ಞಾನವು ಉದಯವಾಗುತ್ತದೆ ಜ್ಞಾನೋದಯವಾದರೆ ಎಲ್ಲವೂ ಸುಲಭವಾಗಿ ಅರಿವಿಗೆ ಬರುತ್ತದೆ.

ರಾಜ್ಯದಲ್ಲಿ 178 ಮಂದಿಗೆ ಕೋವಿಡ್

ರಾಜ್ಯದಲ್ಲಿ 178 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ-29 ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ತಿಳಿಸಿದೆ.

ತುಮಕೂರಿನಲ್ಲಿ ಒಬ್ಬರಿಗು ಪಾಸಿಟಿವ್ ಬಂದಿಲ್ಲ.

ಮೇ 28 ಸಂಜೆ 5 ರಿಂದ ಮೇ-29 ಮಧ್ಯಾಹ್ನದ ವರೆಗೆ 178 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ 2,711 ಮಂದಿಗೆ ಸೋಂಕು ತಗುಲಿದ್ದು, 47 ಮಂದಿ ಮೃತಪಟ್ಟಿದ್ದಾರೆ. 869 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,793 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ರಾಯಚೂರು 62, ಯಾದಗಿರಿ 60, ಉಡುಪಿ 15, ಕಲಬುರ್ಗಿ 15, ಬೆಂಗಳೂರಿನಲ್ಲಿ 10, ದಾವಣಗೆರೆ 4, ಚಿಕ್ಕಬಳ್ಳಾಪುರ 4, ಮೈಸೂರು 2, ಮಂಡ್ಯ 2, ಧಾರವಾಡ 1, ಬೆಂಗಳೂರು ಗ್ರಾಮಾಂತರ 1, ಶಿವಮೊಗ್ಗ 1, ಚಿತ್ರದುರ್ಗ 1 ಪ್ರಕರಣ ಪತ್ತೆಯಾಗಿದೆ.