Saturday, May 9, 2026
Google search engine
Home Blog Page 216

ಕೆ.ಜಿ.ಎಫ್ 2 ಚಿತ್ರದಲ್ಲಿ ಹಿರಿಯ ನಟಿ

ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ತಲುಪಿರುವ ಕೆಜಿಎಫ್-2 ಸಿನಿಮಾದಲ್ಲಿ ಬಹುಭಾಷಾ ಹಿರಿಯ ನಟಿಯೊಬ್ಬರು ಬಣ್ಣ ಹಚ್ಚಲಿದ್ದಾರೆ.

ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಜನರ ಹೃದಯದಲ್ಲಿ ಮನೆಮಾಡಿರುವ ಈಶ್ವರಿರಾವ್ ಕೆಜಿಎಫ್ 2 ಚಿತ್ರದಲ್ಲಿ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ.

ಕೆಜಿಎಫ್ 2 ಚಿತ್ರದಲ್ಲಿ ದೇಶದ ಹೆಸರಾಂತ ನಟ ನಟಿಯರು ನಟಿಸಿದ್ದಾರೆ. ಈಶ್ವರಿರಾವ್ ಗೆ ಯಾವ ಪಾತ್ರ ಕೊಡಲಾಗಿದೆ ಎಂಬ ಬಗ್ಗೆ ಚಿತ್ರ ಗುಟ್ಟಾಗಿರಿಸಿದೆ.

ಬಾಲಿವುಡ್‌ನ ಸಂಜಯ್ ದತ್, ಪ್ರಧಾನಿ ರಮೀಕಾ ಸೇನ್ ಪಾತ್ರದಲ್ಲಿ ಹಿರಿಯ ನಟಿ ರವೀನಾ ಟಂಡನ್, ರಾಕಿಂಗ್ ಸ್ಟಾರ್ ಯಶ್, ಕನ್ನಡದ ಹಿರಿಯ ನಟ ಅನಂತ್ ನಾಗ್ ಮತ್ತು ಅಚ್ಯುತ್ ರಾವ್ ಇತರರು ವಿವಿಧ ಪಾತ್ರಗಳ ಪೋಷಣೆ ಮಾಡಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಕಾಣಬೇಕಿತ್ತು. ಶೇ 90 ರಷ್ಟು ಚಿತ್ರೀಕರಣ ಮುಗಿದಿದ್ದರೂ ಲಾಕ್ ಡೌನ್ ಕಾರಣದಿಂದ  ಸಿನಿಮಾ   ನಿಗದಿತ ದಿನಾಂಕದಂದು ತೆರೆ ಕಾಣುವುದು ಅನುಮಾನ. ಚಿತ್ರದ ಬಿಡುಗಡೆಗೆ  ಚಿತ್ರ ರಸಿಕರು ಆಸೆಗಣ್ಣುಗಳಿಂದ ಎದುರು ನೊಡುತ್ತಿದ್ದಾರೆ.

ವಂಶಿ ಚಿತ್ರಕ್ಕೆ ಸೈ ಎನ್ನುವರೇ ಮಹೇಶ್ ಬಾಬು

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ‘ಮಹರ್ಷಿ’ ಸಿನಿಮಾ ನಂತರ ಇದೀಗ ನಿರ್ದೇಶಕ ವಂಶಿ ಪೈಡಿಪಲ್ಲಿ ಮಹೇಶ್ ಬಾಬು ಜೊತೆ ಮತ್ತೊಂದು ಸಿನಿಮಾ ಮಾಡುವುದು ಪಕ್ಕಾ ಆಗಿದೆ.

ಮಹರ್ಷಿ ಸಿನಿಮಾ ರಿಲೀಸ್  ನಂತರ ಈ ವಿಷಯ ಘೋಷಣೆಯಾಗಿತ್ತು. ರಾಜಮೌಳಿ ತಮ್ಮ ಮುಂದಿನ ಚಿತ್ರದಲ್ಲಿ ಮಹೇಶ್ ಬಾಬು ನಾಯಕ ಎಂದು ಘೋಷಿಸಿದ್ದಾರೆ.

ಆದರೆ ರಾಜಮೌಳಿ ಹಾಗೂ ಮಹೇಶ್ ಕಾಂಬಿನೇಶನ್ ನ   ಚಿತ್ರವೂ 2022ರಲ್ಲಿ ಸೆಟ್ಟೇರಲಿದೆ. ವಂಶಿ ಅವರು ಸೂಪರ್ ಸ್ಟಾರ್ ರಿಂದ ಹಸಿರು ನಿಶಾನೆ ಪಡೆಯುವ ಅವಕಾಶಗಳು ಹೆಚ್ಚಿವೆ ಎನ್ನುತ್ತಿವೆ ಮೂಲಗಳು.

ಜನ ಮಾನಸ ಸೂರೆಗೊಂಡಿದ್ದ ‘ಊಪಿರಿ’ ಸಿನಿಮಾದ   ನಿರ್ದೇಶಕ ವಂಶಿ  ಒಂದು ಭಿನ್ನವಾದ ಸ್ಕ್ರಿಪ್ಟ್ ಅನ್ನು ತಯಾರಿಸಿದ್ದು, ಸದ್ಯದಲ್ಲೇ ಮಹೇಶ್ ಅವರನ್ನು ಭೇಟಿ ಮಾಡುವ ಯೋಚನೆಯಲ್ಲಿದ್ದಾರಂತೆ.

ತಮ್ಮ ಸ್ಕ್ರಿಪ್ಟ್ ಅನ್ನು ಮಹೇಶ್ ಖಂಡಿತ ಒಪ್ಪಿಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸ ವಂಶಿ ಅವರದ್ದು. ಅದ್ಯಾಗೂ ಮಹೇಶ್ ಬಾಬು ಅವರ 28ನೇ ಸಿನಿಮಾದ ಬಗ್ಗೆ ಅನೇಕ ಮಾತುಗಳು ಕೇಳಿಬರುತ್ತಿವೆ.

ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೋರಿ ಮನವಿ

ಚಿತ್ರೀಕರಣಕ್ಕೆ ಅವಕಾಶ ಕೊಡಬೇಕು ಎಂದು ಚಿತ್ರ ರಂಗದ ಪ್ರಮುಖರು ಮುಖ್ಯಮಂತ್ರಿ ಯಡಯೂರಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕೋವಿಡ್ 19 ಲಾಕ್ ಡೌನ್ ನಿಂದ ಸ್ಥಗಿತಗೊಂಡಿರುವ  ಚಿತ್ತರಂಗದ ಚಟುವಟಿಕೆಗಳನ್ರಂನು ಮತ್ತೆ ಆರಂಭಿಸಲು  ಅನುಮತಿ ನೀಡಬೇಕು ಎಂದು  ಮುಖ್ಯಮಂತ್ತಿಯವರನ್ನು ಬೆಂಗಳೂರೂನಲ್ಲಿ ಚಿತ್ರರಂಗದ ಪ್ರಮುಖರು  ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ  ಸುನಿಲ್ ಪುರಾಣಿಕ್ ನೇತೃತ್ವದ    ನಿಯೋಗ   ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಯವರನ್ನು  ಭೇಟಿ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದರು.

‘ನೋಡಿ ನನ್ನ ಪುಟ್ಟ ಪಿಕಾಸೋಗಳು..’

0

ಜಿ ಎನ್ ಮೋಹನ್


ನನ್ನ ಕಣ್ಣೇ ಹನಿಗೂಡಿತ್ತು, ಅವಳಿಗೂ ಮುಂಚೆ..

‘ಪಪ್ಪಾ, ಯಾಕೆ ಅವರು ನಾನು ಬರೆದ ಚಿತ್ರ ಸರಿ ಇಲ್ಲ’ ಎನ್ನುತ್ತಾರೆ ಎಂದು ತನ್ನ ಪುಟ್ಟ ಬೆರಳಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಅವಳು ಕೇಳಿದ್ದಳು.

ಒಂದೆರಡು ಬಣ್ಣದ ಪೆನ್ಸಿಲ್ ಸಿಕ್ಕರೆ ಸಾಕು ಹಾಳೆಯ ತುಂಬಾ ಕಾಮನ ಬಿಲ್ಲನ್ನೇ ಮೂಡಿಸುತ್ತಿದ್ದ, ನನ್ನನ್ನ ಚಕಾಚಕ್ ಬರೆದು ತೋರಿಸುತ್ತಿದ್ದ ಹುಡುಗಿ ಈಗ ಕಣ್ಣಲ್ಲಿ ನೀರು ತುಂಬಿ ನಿಂತಿದ್ದಳು.

ಇದಕ್ಕೂ ಒಂದಷ್ಟು ವರ್ಷದ ಹಿಂದಿನ ಮಾತು-

ಕಲಬುರ್ಗಿಯ ಮನೆ ಹೊಕ್ಕಾಗ ಅವಳಿಗೆ ಇನ್ನೂ ಮೂರು ವರ್ಷ. ಒಂದು ದಿನ ಆಫೀಸಿನಿಂದ ಬಂದು ನೋಡುತ್ತೇನೆ ಇದ್ದ ಪೆನ್ಸಿಲ್ ಅನ್ನೇ ತೆಗೆದುಕೊಂಡು ಗೋಡೆಯ ಮೇಲೆ ಗೆರೆ ಎಳೆದಿದ್ದಳು.

ಮಾರನೆಯ ದಿನ ಇನ್ನೂ ಒಂದೆರಡು ಗೆರೆ ಹೆಚ್ಚಾಗಿತ್ತು
ನನಗೆ ಓನರ್ ಭಯ. ಗೋಡೆ ಮೇಲೆ ಇವಳು ಗೆರೆ ಎಳೆದರೆ ನನ್ನ ಎದೆ ಢವಗುಡುತ್ತಿತ್ತು

ನಾನು ಒಂದು ಉಪಾಯ ಮಾಡಿದೆ. ಬಾಡಿಗೆ ಕಲೆಕ್ಟ್ ಮಾಡಲು ಓನರ್ ಬಂದರೆ ಕಾಣದ ಜಾಗವನ್ನೆಲ್ಲ ಗುರುತಿಸಿದೆ.

‘ಇಲ್ಲಿ ಮಾತ್ರ ಬರಿ’ ಅಂದೆ. ಅವಳು ಎಷ್ಟು ಸಂಭ್ರಮವನ್ನು ತನ್ನ ಮುಖದಲ್ಲಿ ಹರಡಿಕೊಂಡಳು ಎಂದರೆ ನಾನು ಮಾಡಿದ ಕೆಲಸವೇ ಸ್ಟೇಷನ್ ಬಜಾರ್ ನಲ್ಲಿ ಮೂಲೆ ಮೂಲೆ ಹುಡುಕಿ ಬಣ್ಣದ ಪೆನ್ಸಿಲ್, ಕ್ರೆಯಾನ್ ಆರಿಸಿ ತಂದದ್ದು

ಆಮೇಲೆ ಅವಳಿಗೆ ಎದ್ದರೆ ಸಾಕು ಅದೇ ಕೆಲಸ
ನನಗೆ ಆಫೀಸ್ ನಿಂದ ಬಂದರೆ ಸಾಕು ಇವತ್ತೇನು ಬರೆದಿದ್ದಾಳೆ ಎಂದು ನೋಡುವ ಕೆಲಸ

ಒಂದು ದಿನ ಬಂದು ನೋಡುತ್ತೇನೆ ಹುಡುಗಿ ನಾನು ಎಳೆದ ಲಕ್ಷ್ಮಣ ರೇಖೆಯನ್ನು ದಾಟಿಯೇ ಬಿಟ್ಟಿದ್ದಳು. ಏಕೆಂದರೆ ಓನರ್ ಕಣ್ಣಿಗೆ ಕಾಣದ ಗೋಡೆಗಳೆಲ್ಲಾ ಚಿತ್ತಾರದಿಂದ ಬಿರಿದು ಹೋಗಿದ್ದವು

ಪುಟ್ಟ ಹುಡುಗಿ ಇದ್ದ ಗೋಡೆಗಳೆಲ್ಲಾ ತನ್ನದೇ ಕ್ಯಾನ್ ವಾಸ್ ತಂದುಕೊಂಡು ಬಿಟ್ಟಿದ್ದಳು. ಹಾಗಾಗಿ ಈಗ ಅವಳ ಚಿತ್ತಾರ ನಾನು ಕೊಟ್ಟದ್ದ ಜಾಗವನ್ನೂ ಮೀರಿ ಆಚೆ ಬಂದಿತ್ತು

ಸರಿ ಓನರ್ ಮನೆಗೆ ಹೋಗಿ ಹೇಳಿಬಿಟ್ಟೆ, ಹೋಗುವಾಗ ಬೇಕಾದರೆ ಸುಣ್ಣ ಬಣ್ಣಕ್ಕೆ ಇನ್ನೂ ಜಾಸ್ತಿಯೇ ದುಡ್ಡು ಕೊಡುತ್ತೇನೆ ಅಂತ

ಅಂತ ಆ ಹುಡುಗಿ ಈಗ ಬಿಕ್ಕಲೋ ಬೇಡವೋ ಎನ್ನುವಂತೆ ನಿಂತಿದ್ದಳು

ಆಗಿದ್ದು ಇಷ್ಟೇ

ಕ್ಲಾಸ್ ನಲ್ಲಿ ಈಗ ಡ್ರಾಯಿಂಗ್ ಪಿರಿಯಡ್ ಎಂದ ತಕ್ಷಣ ಖುಷಿಯಿಂದ ಜಿಗಿದು ತನಗೆ ತೋಚಿದ್ದೆಲ್ಲಾ ಗೆರೆ ಎಳೆದಿದ್ದಾಳೆ

ಖುಷಿಯಿಂದ ಮೇಷ್ಟ್ರ ಕಡೆ ಹೋದಾಗ ಇದೇನಿದು ಅಂತ ರೇಗಿದ್ದಾರೆ

ಅವರಿಗೆ ಡ್ರಾಯಿಂಗ್ ಎಂದರೆ ಎರಡು ಗುಡ್ಡ, ಮಧ್ಯೆ ಒಂದು ಸೂರ್ಯ, ಎರಡು ತೆಂಗಿನ ಮರ ಅಷ್ಟೇ.. ಹಾಗಾಗಿ ಈ ಹುಡುಗಿ ಹದ್ದು ಮೀರಿ ಹೋಗಿದ್ದಾಳೆ ಎನಿಸಿಬಿಟ್ಟಿದೆ. ಗದರಿಕೆಯೇ ಗೊತ್ತಿಲ್ಲದ ಹುಡುಗಿ ಬೆದರಿ ಹೋಗಿದ್ದಾಳೆ

ಈ ನೆನಪೆಲ್ಲಾ ಇವತ್ತು ಇನ್ನಿಲ್ಲದಂತೆ ನುಗ್ಗಿ ಬಂತು

ಕಾರಣ ಇಷ್ಟೇ

ದೂರದ ಅಮೆರಿಕಾದ ಓಕ್ಲಹಾಮ ದಲ್ಲಿ ಒಂದನೇ ಕ್ಲಾಸ್ ನ ಟೀಚರ್ ದುಃಖವೇ ಮಡುಗಟ್ಟಿ ಕುಳಿತಿದ್ದರು.

ಅಂದು ವರ್ಷದ ಕೊನೆಯ ಕ್ಲಾಸ್. ಪುಟ್ಟ ಪುಟ್ಟ ಮಕ್ಕಳು, ಇಡೀ ವರ್ಷ ತನ್ನೊಡನೆ ಮುದ್ದು ಮುದ್ದಾಗಿದ್ದ ಆಡುತ್ತಿದ್ದ ಮಕ್ಕಳು ಇನ್ನು ಹೊರಟುಬಿಡುತ್ತಾರಲ್ಲಾ ಅನಿಸಿದ್ದೇ ಕಣ್ಣೀರಾಗಿದ್ದರು.

ಆಗ ಹೊಳೆಯಿತು

ತಕ್ಷಣವೇ ‘ಅಮೆಜಾನ್’ ನಿಂದ ಒಂದು ಹೊಸ ಸ್ಕರ್ಟ್ ತರಿಸಿದರು. ಚಂದನೆ ಬೆಲ್ಟ್ ಏರಿಸಿ ಕ್ಲಾಸ್ ಗೆ ಬಂದರು

ಮಕ್ಕಳೇ ಇಲ್ಲಿ ಬನ್ನಿ ಎಂದವರೇ ಕೈಗೆ ಬಣ್ಣ ಬಣ್ಣದ ಪೆನ್ಸಿಲ್ ಇಟ್ಟವರೇ ಈಗ ಚಿತ್ರ ಬರೆಯಿರಿ ನೋಡೋಣ ಎಂದಿದ್ದಾರೆ.

ಮಕ್ಕಳು ಎಲ್ಲಿ ಬರೆಯೋದು ಎಂದು ಮುಖ ಮಾಡಿ ನಿಂತಾಗ ತಾನು ಧರಿಸಿದ್ದ ಹಚ್ಚ ಬಿಳಿಯ ಸ್ಕರ್ಟ್ ನ್ನೇ ತೋರಿಸಿದ್ದಾರೆ

ಮಕ್ಕಳು ‘ಹೋ’ ಎನ್ನುತ್ತಾ ಎಲ್ಲೆಲ್ಲೂ ಗೀಚಿ ಹಾಕಿದ್ದಾರೆ. ಕಾಡು ಮೇಡು, ಬೆಟ್ಟ ಗುಡ್ಡ, ಕಾಮನಬಿಲ್ಲು ಕಾರು, ಕರಡಿ ಕೋತಿ .. ಹೀಗೆ ಏನೆಲ್ಲಾ

ಈಗ ಈ ಸ್ಕರ್ಟ್ ಟೀಚರ್ ಮನೆಯಲ್ಲಿ ಗೋಡೆಯಲ್ಲಿ ಸ್ಮರಣ ಫಲಕವಾಗಿ ತೊಗಾಡುತ್ತಿದೆ

ಈ ಚಿತ್ರ ಅಳಿಸಿಹೋಗಿ ಬಿಟ್ಟರೆ ಎಂದು ಭಯವಾಗಿ ತಜ್ಞರನ್ನು ಕೇಳಿ ಮತ್ತೆ ‘ಅಮೆಜಾನ್’ ನಿಂದ ಒಂದಿಷ್ಟು ರಾಸಾಯನಿಕ ತರಿಸಿ ಲೇಪಿಸಿದ್ದಾರೆ

ಇದೇನು ಹುಚ್ಚಾಟ ಎಂದು ಬೇರೆಯವರು ಹುಬ್ಬೇರಿಸಿದರೆ ಆಕೆ ನಗುತ್ತ, ನಗು ನಗುತ್ತಾ-
‘ನೋಡಿ ನನ್ನ ಪುಟ್ಟ ಪಿಕಾಸೋಗಳು..’ ಎಂದು ಹೆಮ್ಮೆಯಿಂದ ನಗು ತುಳುಕಿಸುತ್ತಾರೆ

ಈಕೆ ಕ್ರಿಸ್
https://www.facebook.com/s.castlebury

ರಾಜ್ಯದಲ್ಲಿ 75 ಮಂದಿಗೆ ಕೊರೋನಾ

ರಾಜ್ಯದಲ್ಲಿ ಇಂದು 75 ಕೇಸ್ ಗಳು ದಾಖಲಾಗಿದೆ.

ಒಟ್ಟು 2,493 ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಉಡುಪಿ 27, ಹಾಸನ 13, ಬೆಂಗಳೂರು 7, ಕಲಬುರಗಿ 3, ಚಿತ್ರದುರ್ಗ 6, ಚಿಕ್ಕಮಗಳೂರಲ್ಲಿ 2 ಸೋಂಕಿತರು ಪತ್ತೆಯಾಗಿದ್ದಾರೆ.

ಹಾಸನದಲ್ಲಿ 12 ವರ್ಷದ ಬಾಲಕ ಮತ್ತು 18 ವರ್ಷದ ಯುವತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚಿತ್ರದುಗರ್ದಲ್ಲಿ 15 ವರ್ಷದ ಬಾಲಕ, ಉಡುಪಿಯಲ್ಲಿ 6 ವರ್ಷದ ಬಾಲಕಿಗೆ ಸೋಂಕು ಪತ್ತೆಯಾಗಿದೆ.

ಐ ಪಿ ಎಲ್ ಇದೇ ವರ್ಷ ನಡೆಯಲಿದೆಯೇ?

ಪಬ್ಲಿಕ್ ಸ್ಟೋರಿ: ಕೋವಿಡ್ 19 ಸಮಸ್ಯೆಯಿಂದಾಗಿ ಮುಂದೂಡಲಾಗಿದ್ದ  13 ನೇ ಆವೃತ್ತಿ ಐ ಪಿ ಎಲ್ ಈ ವರ್ಷ ನಡೆಯುವ ಬಗ್ಗೆ ಖಾತರಿಯಿಲ್ಲ.

ಇದೇ  ವರ್ಷದ 29 ರಿಂದ ಐ ಪಿ ಎಲ್ ಕ್ರೀಡಾಕೂಟ ಆರಂಭವಾಗಬೇಕಿತ್ತು. ಕೊರೋನಾ ಸೋಂಕು ಭೀತಿಯಿಂದಾಗಿ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಅಕ್ಟೋಬರ್‌–ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ  ಟಿ-20 ವಿಶ್ವಕಪ್‌ ನಡೆಯದಿದ್ದಲ್ಲಿ  ದೇಶದಲ್ಲಿ ಐಪಿಎಲ್ ನಡೆಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಮಾಜಿ ಕ್ರಿಕೆಟಿಗ  ಅನಿಲ್ ಕುಂಬ್ಳೆ ಹಾಗೂ ವಿವಿಎಸ್‌ ಲಕ್ಷ್ಮಣ್‌ ಈ ವರ್ಷವೇ ಐಪಿಎಲ್‌ ನಡೆಯುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ಪ್ರೇಮಿಗಳಲ್ಲಿ ಆಶಾ ಭಾವನೆ ಮೂಡಿಸಿದ್ದಾರೆ.

` ಈ ವರ್ಷವೇ ಐಪಿಎಲ್‌ ನಡೆಸಲು ಸಾಧ್ಯವಿದೆ. ಒಂದು ವೇಳೆ   ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಸಲು ಮುಂದಾದರೆ, ಮೂರು–ನಾಲ್ಕು ಸ್ಥಳಗಳಲ್ಲಿ ಆಯೋಜಿಸಬಹುದು. ಈ ಬಗ್ಗೆ ಭರವಸೆ ಇದೆ ’ ವಾಹಿನಿಯೊಂದರ ಸಂದರ್ಶನದಲ್ಲಿ ಎಂದು ಕುಂಬ್ಳೆ ಹೇಳಿದ್ದಾರೆ.

ಹೆಚ್ಚು ಕ್ರೀಡಾಂಗಣಗಳಿರುವ ಸ್ಥಳಗಳಲ್ಲಿ ಪಂದ್ಯಗಳನ್ನು ಆಯೋಜಿಸಿದಲ್ಲಿ ಆಟಗಾರರ ಓಡಾಟ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

 

ಸಿ.ಎಸ್.ಪುರ ಕೆರೆಗೆ ಹೇಮಾವತಿ

ವರದಿ; ನಾಗರಾಜ್


ಸಿ.ಎಸ್.ಪುರ: ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರು ಹರಿಸುವಂತೆ ಹೋಬಳಿಯ ಜನರು ಒತ್ತಾಯಿಸಿದ್ದಾರೆ.

ಕಳೆದ ಸಲ ನೀರು ನಿಟ್ಟಾಗ ಹಂಚಿಕೆಯಾಗಿರುವಷ್ಟು ನೀರನ್ನು ಕೆರೆಗೆ ಹರಿಸಲಿಲ್ಲ. ಏಕಾಏಕಿ ನೀರು ನಿಲ್ಲಿಸಲಾಯಿತು. ಈಗ ಕುಡಿಯುವ ನೀರಿಗಾಗಿ ನಾಲೆಯಲ್ಲಿ ನೀರು ಬಿಟ್ಟಿದ್ದು, ಈಗಾಗಲೇ ತುಮಕೂರಿಗೆ ಹರಿಯುತ್ತಿದೆ. ಸಿ.ಎಸ್.ಪುರ ಕೆರೆಗೆ ನೀರು ಹರಿಸಲು ಶಾಸಕರು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ತುರುವೇಕೆರೆಗೆ ನೀರು ಹರಿಸಿದಾಗಲೆಲ್ಲ ಸಿ.ಎಸ್.ಪುರ ಹೋಬಳಿಗೆ ಅನ್ಯಾಯ ಮಾಡಲಾಗುತ್ತದೆ. ಹೀಗಾಗಿ ಈ ಸಲ ತುರುವೇಕೆರೆ ತಾಲ್ಲೂಕಿಗೆ ನೀರು ಹರಿಸುವಾಗ ಮೊದಲ ಆದ್ಯತೆಯನ್ನು ಕಲ್ಲೂರು, ಸಿ.ಎಸ್.ಪುರ ಕೆರೆಗೆ ಬೀಡಬೇಕು ಎಂದು ಹೇಳಿದ್ದಾರೆ.

ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರು ಹರಿಸಬೇಕೆಂದು ಮೊಟ್ಟಮೊದಲಿಗೆ ಎಸ್ ಎಫ್ ಐ, ಡಿ ವೈ ಎಸ್ ಎಫ್ ಐ ಸಂಘಟನೆಗಳು ಹೋರಾಟ ನಡೆಸಿದವು. ಈ ಸಂಘಟನೆಗಳ ಮುಖಂಡರಾಗಿದ್ದ ಈಗ ನ್ಯಾಯವಾದಿಯಾಗಿರುವ ಸಿ.ಕೆ.ಮಹೇಂದ್ರ, ಹೋಟೆಲ್ ಶಿವು, ರಾಮು, ಸರ್ಕಲ್ ನಾಗರಾಜ್, ಮುನಿಸ್ಚಾಮಿ, ಚಂದ್ರಮೋಹನ್, ಜಯರಾಮ್, ಸಿ.ಎನ್.ಪಾಳ್ಯದ ಪ್ರಕಾಶ್, ಪಡುಗುಡಿ ಕೃಷ್ಣಮೂರ್ತಿ, ಅಂಗಡಿ ರಾಜೇಶ್ ಇನ್ನೂ ಅನೇಕರು ಹೋರಾಟ ರೂಪಿಸಿದ್ದರು‌. ಆಗ ಅನೇಕರು ಇದಕ್ಕೆ ಬೆಂಬಲ ಸೂಚಿಸಿದ್ದರು. ಈ ಹೋರಾಟದಿಂದಾಗಿ ಆಗ ಶಾಸಕರಾಗಿದ್ದ ವೀರಣ್ಣ ಗೌಡರಿಗೆ ರಾಜಕೀಯವಾಗಿ ಹಿನ್ನಡೆಯಾಗಿತ್ತು ಎಂಬುದನ್ನು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ನೆನಪು ಮಾಡಿಕೊಂಡರು.

ದಶಕಗಳ ಕಾಲದ ಸತತ ಹೋರಾಟದ ಒತ್ತಡದಿಂದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಅವಧಿಯಲ್ಲಿ 48 ಎಂಸಿಎಫ್ ಟಿ ನೀರನ್ನು ಸರ್ಕಾರ ಅಧಿಕೃತವಾಗಿ ಹಂಚಿಕೆ ಮಾಡಿತ್ತು. ಆದರೆ ಕೆರೆಗೆ ನೀರು ಹರಿಸುತ್ತಿರಲಿಲ್ಲ. ಶಾಸಕ ಮಸಾಲ ಜಯರಾಮ್ ಅವರ ರಾಜಕೀಯ ಚಾಣಾಕ್ಷತ‌ದ ಕಾರಣ ನೀರನ್ನು ಬಿಡಿಸಿದರು. ಆದರೂ ಹಂಚಿಕೆಯಾಗಿರುವಷ್ಟು ನೀರನ್ನು ಬಿಟ್ಟಿಲ್ಲ. ಈ ಸಲ ಶಾಸಕರು ಕೆರೆ ತುಂಬಿಸಲು ಈಗಿನಿಂದಲೇ ಮುಂದಾಗಬೇಕು ಎಂದು ವಕೀಲ, ಪತ್ರಕರ್ತ ಸಿ.ಕೆ.ಮಹೇಂದ್ರ ತಿಳಿಸಿದರು.

‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’

ಜಿ ಎನ್ ಮೋಹನ್


‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ ಅಂದಳು

ನಾನು ಒಂದು ಕ್ಷಣ ಗರಬಡಿದಂತಾದೆ

ಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆ

ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ ಈ ಪ್ರಶ್ನೆ ಎಸೆದಾಗ ನಾನು ಕಕ್ಕಾಬಿಕ್ಕಿಯಾದೆ

ಕಾಂಡೋಮ್ ಬಗ್ಗೆ ಮಾತನಾಡಲು ಇನ್ನೂ ‘ಶೈನಿಂಗ್ ಇಂಡಿಯಾ’ ಮುಜುಗರಪಡುತ್ತಾ ಕುಳಿತಿರುವಾಗ ಲೀಲಾ ಈ ಪ್ರಶ್ನೆ ಕೇಳಿದ್ದಳು

ಅವಳು ಹಾಗೆ ಕೇಳಲು ಕಾರಣವೂ ಇತ್ತು.

ಕರೋನಾ ಭಯ ಇಲ್ಲದೆ ಹೋಗಿದ್ದರೆ ಜಗತ್ತು ಈ ವೇಳೆಗೆ ಒಲಂಪಿಕ್ಸ್ ಉನ್ಮಾದಕ್ಕೆ ತಯಾರಿ ನಡೆಸುತ್ತಿರುತ್ತಿತ್ತು. ಜುಲೈನಲ್ಲಿ ಟೋಕಿಯೋದಲ್ಲಿ ಒಲಂಪಿಕ್ಸ್ ಗತ್ತಿನಿಂದ ಆರಂಭವಾಗಬೇಕಿತ್ತು.

‘ಇಷ್ಟು ದಿನ ದೇಶ ದೇಶಗಳ ನಡುವೆ ಇದ್ದ ಮುಸುಕಿನ ಗುದ್ದಾಟ ಈಗ ಕ್ರೀಡಾರಂಗದಲ್ಲಿ. ಪ್ರತಿಯೊಬ್ಬರೂ ತಮ್ಮ ದೇಶವನ್ನು ಒಂದು ಯುದ್ಧ ಗೆಲ್ಲಿಸಿ ಕೊಡಲಿಕ್ಕೆ ಹೋಗುತ್ತಿದ್ದಾರೇನೋ ಎನ್ನುವ ಒತ್ತಡ.
ಮಾಡು ಇಲ್ಲವೇ ಮಡಿ’ ಅಂತ ಅವಳಿಗೆ ಒಲಂಪಿಕ್ಸ್ ರಾಜಕೀಯ ಬಣ್ಣಿಸುತ್ತಾ ಕೂತಿದ್ದೆ.

ತಕ್ಷಣವೇ ಆಕೆ ಕೇಳಿದಳು ಏನಂದೆ ‘ಪರ್ಫಾರ್ಮ್ ಆರ್ ಪೆರಿಶ್?’
ಹೌದು, ಖಂಡಿತಾ ನಿಜ… ಆದರೆ ನೀನು ಹೇಳಿದಂತೆ ಬರೀ ಕ್ರೀಡಾಪಟುಗಳಿಗಲ್ಲ. ಜಗತ್ತಿನ ಅನೇಕ ಮುಗ್ಧ ಹೆಣ್ಣು ಮಕ್ಕಳಿಗೂ..’

ನಾನು ಕಿವಿಯ ಮೇಲೆ ಇಡೀ ಲಾಲ್ ಬಾಗನ್ನೇ ಮುಡಿಸಿಕೊಂಡವನಂತೆ
‘ಅಲ್ಲಮ್ಮಾ ಅದಕ್ಕೂ ಇದಕ್ಕೂ ಏನು ಸಂಬಂಧ? ಜಗತ್ತಿನ ಎಲ್ಲೆಡೆ ಹರಡಿಹೋಗಿರುವ ಮುಗ್ಧ ಮಹಿಳೆಯರಿಗೂ- ಒಲಂಪಿಕ್ಸ್ ಗೂ..’ ಅಂದೆ

ಆಗಲೇ ಆಕೆ ನನ್ನತ್ತ ಆ ಪ್ರಶ್ನೆ ಎಸೆದಿದ್ದು ಎಷ್ಟು ಕಾಂಡೋಮ್ ಬೇಕು ಗೊತ್ತಾ ಅಂತ.

ಇಡೀ ಜಗತ್ತು ಒಲಂಪಿಕ್ಸ್ ಎಂದರೆ ಟಿ ವಿ ಪರದೆಯ ಮೇಲೆ ನಡೆಯುವುದು, ರಿಯೋ ಅಂಗಳದಲ್ಲಿ ನಡೆಯುವುದು ಮಾತ್ರ ಅಂದುಕೊಂಡುಬಿಟ್ಟಿದೆ

ಆದರೆ ಈ ಪರದೆಗಳ ಹಿಂದೆ ಜರುಗುವ ಸ್ಪರ್ಧೆಗಳೇ ಬೇರೆ. ‘ಮನುಕುಲದ ಒಳಿತಿಗಾಗಿ’ ಎಂಬ ಸ್ಲೋಗನ್ ಗೂ ಅದಕ್ಕೂ ಏನೇನೂ ಸಂಬಂಧವಿಲ್ಲ.’ಅದಿರಲಿ ಒಂದು ಒಲಂಪಿಕ್ಸ್ ಯಶಸ್ವಿಯಾಗಿ ನಡೆಯಬೇಕು ಎಂದರೆ ಎಷ್ಟು ಕಾಂಡೋಮ್ ಬೇಕು ಎಂಬ ಅಂದಾಜಿದೆಯಾ’ ಎಂದಳು

ಒಲಂಪಿಕ್ಸ್ ಎಂದರೆ ಕ್ರೀಡೆ, ಕ್ರೀಡಾಂಗಣ, ಜ್ಯೋತಿ, ಬೇಟನ್ ಎನ್ನುವ ಕಾಲ ಎಂದೋ ಮುಗಿದು ಹೋಗಿದೆ. ಒಲಂಪಿಕ್ಸ್ ಎನ್ನುವುದು ಕಾಂಡೋಮ್ ಗಳ ಆಟ ಕೂಡಾ ಎಂದಳು

ನಾನು ಪತ್ರಕರ್ತನ ವೇಷದಿಂದ ‘ಪಾಪ ಪಾಂಡು’ ವೇಷಕ್ಕೆ ಸ್ವ ಇಚ್ಛೆಯಿಂದ ಬದಲಾಗಿದ್ದೆ

ಒಂದು ಒಲಂಪಿಕ್ಸ್ ಎಂದರೆ 1 ಕೋಟಿಗೂ ಹೆಚ್ಚು ಕಾಂಡೋಮ್ ಬೇಕು .

ಒಬ್ಬ ಕ್ರೀಡಾಪಟು ಒಲಂಪಿಕ್ಸ್ ನಡೆಯುವ ಎರಡು ವಾರದಲ್ಲಿ ಸರಾಸರಿ 51 ಕಾಂಡೋಮ್ ಬಳಸುತ್ತಾನೆ ಗೊತ್ತಾ ಅಂದಳು

ಎಲ್ಲರೂ ಅಂದುಕೊಂಡಿದ್ದಾರೆ ಒಲಂಪಿಕ್ಸ್ ಸ್ಥಳ ಘೋಷಣೆ ಆದ ತಕ್ಷಣ ತಯಾರಾಗುವುದು ಆ ದೇಶ, ಒಲಂಪಿಕ್ಸ್ ಸಮಿತಿ, ಕ್ರೀಡಾಳುಗಳು ಅಂತ

ನಿಜ, ಆದರೆ ಅವರಿಗಿಂತ ಮುಂಚೆ ಸಿದ್ಧವಾಗುವುದು ಇಡೀ ಜಗತ್ತಿನ ವೇಶ್ಯಾ ಗೃಹಗಳು ಹಾಗೂ ಕಾಂಡೋಮ್ ಕಂಪನಿಗಳು

ಒಲಂಪಿಕ್ಸ್ ಎಂದರೆ ವೇಶ್ಯಾವಾಟಿಕೆಗೆ ಯುಗಾದಿ ಹಬ್ಬ ಇದ್ದಂತೆ

12 ದಿನದಲ್ಲಿ ವರ್ಷದ ಬೆಳೆ ಬೆಳೆಯಬೇಕು ಎಂದು ಮನುಷ್ಯರನ್ನೇ ತಿಂದು ಹಾಕುವ ಕಾರ್ಖಾನೆಗಳು ಹಲ್ಲು ಮಸೆದು ನಿಲ್ಲುತ್ತಾವೆ

‘ಇಡೀ ಜಗತ್ತಿನಲ್ಲಿ ಹೆಣ್ಣು ಮಕ್ಕಳ ತಲಾಷ್ ನಡೆಯುತ್ತದೆ.
ಕಪ್ಪು, ಬಿಳಿ, ಕಂದು, ಸಣ್ಣ, ದಪ್ಪ ಎನ್ನುವ ಬೇಧ ಇಲ್ಲದೆ ಇರುವ ಒಂದೇ ಕೈಗಾರಿಕೆ ಎಂದರೆ ಸೆಕ್ಸ್ ಉದ್ಯಮ ಮಾತ್ರ
ಹೆಂಗಸಾಗಿದ್ದರೆ ಸಾಕು’ ಅಂತ ನಿಟ್ಟುಸಿರಿಟ್ಟಳು.

ಲೀಲಾ ಸಂಪಿಗೆ ಹೇಳುತ್ತಿರುವ ಯಾವುದೇ ವಿಚಾರವನ್ನು ಪ್ರಶ್ನಿಸುವ ಅಗತ್ಯ ನನಗಿರಲಿಲ್ಲ

ಆಕೆ ಸಂಪಿಗೆ ಎಂಬ ಊರಿನಿಂದ, ಕಟ್ಟಾ ಸಂಪ್ರದಾಯಸ್ಥ ಮನೆಯಿಂದ ಹೊರಟು ತಟ್ಟಿದ್ದು ಈ ಜಗತ್ತು ತಟ್ಟಲು ಒಲ್ಲೆ ಎನ್ನುವ ಮನೆಯ ಬಾಗಿಲುಗಳನ್ನು.

ಆಕೆ ಊರೂರುಗಳನ್ನು ಸುತ್ತಿದಳು, ಲೈಂಗಿಕ ಕಾರ್ಯಕರ್ತೆಯರ ಮನೆಯ ಬಾಗಿಲು ತಟ್ಟಿದಳು

ಹಗಲು ರಾತ್ರಿ ಎನ್ನದೆ ಅವರ ಕಥೆಗಳನ್ನು ಕೇಳಿದಳು. ಪೊಲೀಸ್ ಅಧಿಕಾರಿಗಳ ಬೆನ್ನು ಬಿದ್ದಳು. ಒಂದಿಷ್ಟು ಕಿರುಕುಳ ಇಲ್ಲದ ಬದುಕು ದಕ್ಕಿಸಿಕೊಡಲು ಯತ್ನಿಸಿದಳು

ಮನೆ ಮನೆಯ ಕತ್ತಲೆಯಲ್ಲಿ ಉಳಿದು ಪ್ರತಿ ಕಣ್ಣ ಕಣ್ಣೀರನ್ನು ಅರಿತಳು

ಆಗಲೇ ಆಕೆಯನ್ನು ಪರಿಚಯಿಸುವಾಗ ‘ಬಾಂಡ್- ಜೇಮ್ಸ್ ಬಾಂಡ್’ ಎನ್ನುವಂತೆ ನಾನು ‘ಲೀಲಾ ಸಂಪಿಗೆ- ಡಾ ಲೀಲಾ ಸಂಪಿಗೆ’ ಅಂತ ಪರಿಚಯಿಸಿದ್ದು ಯಾಕೆ ಗೊತ್ತಾ

ಈ ಸುತ್ತಾಟಗಳನ್ನು ಆಕೆ ಕೇವಲ ಸುತ್ತಾಟಗಳಿಗಷ್ಟೇ ಸೀಮಿತಗೊಳಿಸಲಿಲ್ಲ
ಬದಲಿಗೆ ಮಡಿವಂತಿಕೆಯ ಮನಸ್ಸುಗಳಿಗೂ ಈ ಕರಾಳತೆಯ ಅರಿವಾಗಿಸಲು ವೇಶ್ಯಾವೃತ್ತಿಯ ಬಗ್ಗೆಯೇ ಪಿಎಚ್ಡಿ ಅಧ್ಯಯನ ನಡೆಸಿದಳು
ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಳು.

ಇಲ್ಲಿ ವೇಶ್ಯಾ ಜಾಲವೂ ತನ್ನ ‘ಆಟ ‘ ಆಡುತ್ತದೆ
ಎನ್ನುವಾಗ ಅವಳ ದನಿ ತಣ್ಣಗೆ ಇರಿಯುತ್ತಿತ್ತು.

ವೇಶ್ಯಾವಾಟಿಕೆಗಳು ಎಷ್ಟು ಸಂಭ್ರಮದಿಂದ ಕುಣಿಯುತ್ತಾವೆ ಎಂದರೆ
ಎಷ್ಟೋ ಊರುಗಳಲ್ಲಿ ಬೀದಿಯಲ್ಲಿ ಆಡುತ್ತಿದ್ದ ಹೆಣ್ಣು ಮಕ್ಕಳು, ಕಾಲೇಜು ಗೇಟು ತಲುಪಿಕೊಳ್ಳುತ್ತಿದ್ದ ಯುವತಿಯರೂ ನಾಪತ್ತೆಯಾಗಿಬಿಡುತ್ತಾರೆ.

ಕ್ರೀಡಾಪಟುಗಳಿಗೆ ಮಾತ್ರ ಅಲ್ಲ, ಕ್ರೀಡಾಧಿಕಾರಿಗಳು, ಕ್ರೀಡಾಭಿಮಾನಿಗಳು, ಕ್ರೀಡೆ ನೆಪದಲ್ಲಿ ಬರುವ ಪ್ರವಾಸಿಗರು, ಒಲಂಪಿಕ್ಸ್ ಗೆ ಬೇಕಾದ ಕಟ್ಟಡ, ಕ್ರೀಡಾಂಗಣ ನಿರ್ಮಿಸಲು ಬರುವ ಕಾರ್ಮಿಕರು, ಮೇಸ್ತ್ರಿಗಳು ಎಲ್ಲರಿಗೂ ವೇಶ್ಯೆಯರನ್ನು ಸರಬರಾಜು ಮಾಡುವ ತಾಣ ಎದ್ದು ನಿಲ್ಲುತ್ತದೆ.

ಇಡೀ ಜಗತ್ತಿನ ಹಲವು ದೇಶಗಳಲ್ಲಿ ಒಲಂಪಿಕ್ಸ್ ಬಂದಾಗ ವಿಚಿತ್ರ ಜಾಹೀರಾತೊಂದು ಕಾಣಿಸಿಕೊಳ್ಳುತ್ತದೆ-
‘ನಿಮ್ಮ ಜೀವಮಾನದ ಕಷ್ಟ ಬಗೆಹರಿಸಿಕೊಳ್ಳಬೇಕೇ?
ಇಲ್ಲಿದೆ ಸುಲಭ ಮಾರ್ಗ, ಸರಿಯಾದ ಅವಕಾಶ..’

ಆ ಸುಲಭ ಮಾರ್ಗ, ಸರಿಯಾದ ಅವಕಾಶ ಎನ್ನುವುದು ಅವರನ್ನು ಕೊಂಡೊಯ್ದು ನಿಲ್ಲಿಸುವುದು ಒಲಂಪಿಕ್ಸ್ ವೇಶ್ಯಾ ಅಡ್ಡೆಗಳಿಗೆ.

ಒಂದು ಒಲಂಪಿಕ್ಸ್ ಎಂದರೆ 75 ಸಾವಿರ ವೇಶ್ಯೆಯರಾದರೂ ಬೇಕು

‘ಪರ್ಫಾರ್ಮೆನ್ಸ್ ಹೌಸ್’ ಎನ್ನುವ ಅಟ್ರಾಕ್ಟಿವ್ ಹೆಸರು ಸಹಾ ಇದಕ್ಕೆ ಇದೆ

‘perform or perish ಅಂದ್ರೆ ಏನು ಅಂತ ಗೊತ್ತಾಯ್ತಾ?’ ಅಂತ ಲೀಲಾ ನಕ್ಕಾಗ ನನಗೆ ಕ್ರೀಡೆಗಳ ಅಂಕಿ ಅಂಶಗಳ ತಜ್ಞ ರಾಜನ್ ಬಾಲಾ ನೀಡುತ್ತಿದ್ದ ಅಂಕಿ ಅಂಶಕ್ಕೂ ಈ ಲೀಲಾ ನೀಡುತ್ತಿದ್ದ ಅಂಕಿ ಅಂಶಕ್ಕೂ ಇರುವ ವ್ಯತ್ಯಾಸ ಷಾಕ್ ನೀಡಿತ್ತು.

ಚಳಿಗಾಲದ ಒಲಂಪಿಕ್ಸ್ ಬಂದರೆ ‘ಚಳಿ ಅಂತ ಭಯಪಡಬೇಡಿ ಬಿಸಿ ಮಾಡುತ್ತೇವೆ’ ಎನ್ನುವ ಜಾಹೀರಾತು ಒಲಂಪಿಕ್ಸ್ ದೇಶದಲ್ಲಿ ಬೀದಿ ಬೀದಿಗಳಲ್ಲಿ ರಾರಾಜಿಸುತ್ತದೆ.

ಒಂದೆಡೆ ಒಲಂಪಿಕ್ಸ್ ಕ್ರೀಡೆ, ಇನ್ನೊಂದೆಡೆ ಲೈಂಗಿಕ ಕ್ರೀಡೆ

ಕಾಂಡೋಮ್ ವೀಕ್, ಸೆಕ್ಸ್ ವೀಕ್, ಕಾಂಡೋಮ್ ಫ್ಯಾಷನ್ ಷೋ ಇವು ಒಂದೆರಡು ಝಲಕ್ ಅಷ್ಟೇ.

ವಿಶ್ವಸಂಸ್ಥೆಯ ಪ್ರಕಾರವೇ ಪ್ರತೀ ವರ್ಷ 7 ಬಿಲಿಯನ್ ಡಾಲರ್ ನಷ್ಟಾದರೂ ಸೆಕ್ಸ್ ವಹಿವಾಟು ನಡೆಯುತ್ತದೆ

ಇದನ್ನ ಸಹಕಾರಿ ವ್ಯಾಪಾರ ಅಂತ ಘೋಷಿಸಿ ಸಹಕಾರಿ ಸಂಸ್ಥೆ ಅಡಿ ರಿಜಿಸ್ಟರ್ ಮಾಡಿ ಎನ್ನುವ ಕೂಗೂ ವೇಶ್ಯಾಗೃಹಗಳಿಂದ ಹೊರಬಿದ್ದಿದೆ.

‘ಅದಿರಲಿ ಬಿಡು ನಿಮ್ಮ ಮೀಡಿಯಾ ಇದನ್ನೆಲ್ಲಾ ಜಗತ್ತಿಗೆ ಹೇಳಬೇಕು ಹೌದಲ್ವಾ’ ಅಂದಳು

ನಾನು ‘ಹೌದು, ಹೌದು ಅಲ್ಲಿನ ಕರಾಳ ಕಥೆಗಳು, ಮಾನವ ಸಾಗಾಟ, ಸ್ಕ್ಯಾಂಡಲ್ ಗಳು ಎಲ್ಲವೂ ಸುದ್ದಿ ಅಷ್ಟೇ ಅಲ್ಲ, ಪೇನಲ್ ಡಿಸ್ಕಷನ್, ಒಪಿನಿಯನ್ ಪೋಲ್, ಅಭಿಯಾನ ಎಲ್ಲಾ ಆಗಿ ಹೊರಹೊಮ್ಮಬೇಕು’ ಅಂತ ಉತ್ಸಾಹದಿಂದ ಹೇಳುತ್ತಿದ್ದೆ. ಆಗಲೇ ಲೀಲಾ ಒಂದು ಪುಟ್ಟ ಸೂಜಿ ಕೈಗೆತ್ತಿಕೊಂಡದ್ದು

‘ನಿಮ್ಮ ಮೀಡಿಯಾದವರಿಗೆ ಸೆಕ್ಸ್ ನೇರಪ್ರಸಾರದ ಹಕ್ಕು ಬೇಕಂತೆ, ಹಾಗಂತ ಅರ್ಜಿ ಹಾಕಿಕೊಂಡಿದ್ದಾರೆ’ ಎಂದಳು

ನನ್ನ ಉತ್ಸಾಹದ ಬಲೂನಿಗೆ ಸೂಜಿ ನೇರವಾಗಿಯೇ ತಾಕಿತ್ತು

‘ಅದೇ ಆಟ, ಅದೇ ಓಟ ಅಂದ್ರೆ ಯಾರಿಗೆ ಇಂಟರೆಸ್ಟ್ ಇರುತ್ತೆ ಎಷ್ಟು ದಿನಾ ಅಂತ ಕುಣಿಯೋದು, ನೆಗೆಯೋದೇ ತೋರಿಸೋದಿಕ್ಕೆ ಆಗುತ್ತೆ?
ಲಕ್ಷಾಂತರ ಡಾಲರ್ ಕೊಟ್ಟು ಪ್ರಸಾರದ ರೈಟ್ಸ್ ತಗೊಂಡು ಮೂರು ನಾಮ ಹಾಕಿಕೊಳ್ಳುವುದೇ ಆಗಿದೆ.
ಆದ್ದರಿಂದ ಒಲಂಪಿಕ್ಸ್ ನೈಟ್ ಲೈಫ್ ಪ್ರಸಾರ ಮಾಡೋದಿಕ್ಕೂ ಅವಕಾಶ ಕೊಡಿ. ಬೇಕಾದರೆ ಅದಕ್ಕೆ ಇನ್ನೂ ಸ್ವಲ್ಪ ಜಾಸ್ತಿ ದುಡ್ಡೂ ತಗೊಳ್ಳಿ’ ಅಂದಿದ್ದು ಖ್ಯಾತ ಮೀಡಿಯಾ ಸಂಸ್ಥೆಗಳು.

‘ಹೋಗ್ಲಿ ಬಿಡಪ್ಪಾ, ಮೀಡಿಯಾದವರ ಒಕ್ಕೊರಲ ಹಕ್ಕೊತ್ತಾಯ ಏನು ಗೊತ್ತಾ..??ಒಲಂಪಿಕ್ಸ್ ನಲ್ಲಿ ಬೆತ್ತಲೆ ಓಟ ಬೇಕಂತೆ’

ಯಾಕಂತೆ ಅಂದೆ

ಅದಕ್ಕೂ ಒಳ್ಳೆ ಡಿಫೆನ್ಸ್ ಇದೆ

ಒಲಂಪಿಕ್ಸ್ ಆರಂಭದಲ್ಲಿ ಫಸ್ಟ್ ಗೋಲ್ಡ್ ಮೆಡಲ್ ಬಂದದ್ದು ನಗ್ನವಾಗಿ ಓಡಿದವನಿಗೆ

ಹಾಗಾಗಿ ಪ್ರತೀ ಒಲಂಪಿಕ್ಸ್ ನಲ್ಲಿ ‘ನ್ಯೂಡ್ ರನ್’ ಇಡಿ ಅಂತಿದ್ದಾರೆ ಅಂತ ಲೀಲಾ ಸಂಪಿಗೆ ತಣ್ಣಗೆ ವಿವರಿಸುತ್ತಿದ್ದಳು.

ಜಗತ್ತಿನ ಕಣ್ಣಿನ ಮುಂದೆ ಬೆತ್ತಲೆ ಓಡುತ್ತಿರುವವರು ಯಾರು? ಎನ್ನುವ ಪ್ರಶ್ನೆ ನನ್ನ ಮನಸ್ಸಿನೊಳಗೆ ಅಷ್ಟೇ ಶರವೇಗದಲ್ಲಿ ಓಡಲಾರಂಭಿಸಿತು

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ; ಸಚಿವ ಈಶ್ವರಪ್ಪ ಅವರಿಗೆ ಹಿನ್ನಡೆ

ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಅವಧಿ ಮುಗಿದಿರುವ ಹಿನ್ನೆಲೆ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿ ನೇಮಿಸಲು ಮುಖ್ಯಮಂತ್ರಿ ಯಡಯೂರಪ್ಪ ನಿರ್ಧರಿಸಿದ್ದಾರೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತಿ ಪ್ರತಿನಿಧಿಗಳ ಅವಧಿ ಮುಕ್ತಾಯವಾದ ಹಿನ್ನೆಲೆ ನಂತರದ ಅವಧಿಗೆ ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪಟ್ಟು ಹಿಡಿದಿದ್ದರು.

ಆದರೆ ನಾಮ ನಿರ್ದೇಶಿತ ಸದಸ್ಯರ ನೇಮಕ ಪ್ರಜಾಪ್ರಭುತ್ವ ವಿರೋಧಿ, ಗ್ರಾಮಗಳಲ್ಲಿ ಇಂತಹ ನೇಮಕದ ಬಗ್ಗೆ ಜನತೆ ತೀವ್ರ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗುವವರೆಗೆ ಪಿಡಿಒ ಗಳನ್ನು ಆಡಳಿತಾಧಿಕಾರಿಯಾಗಿ ನೇಮಿಸಬೇಕು ಎಂದು ಮುಖ್ಯಮಂತ್ರಿ ನಿರ್ಧಿರಿಸಿದ್ದಾರೆ ಎನ್ನಲಾಗಿದೆ.

ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟದಲ್ಲಿ ಆಡಳಿತಾಧಿಕಾರಿ ನೇಮಕ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಹೀಗಾಗಿ ಜನತೆಯ  ಸಚಿವ ಸಂಪುಟದಲ್ಲಿ ಕೈಗೊಳ್ಳುವ  ನಿರ್ಧರವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಪಕ್ಷದ ಪ್ರಮುಖರು, ಬಹುತೇಕ ಶಾಸಕರು, ಸಚಿವರು ಒಮ್ಮತ ಸೂಚಿಸಿದ್ದಾರೆ. ಇದರಿಂದಾಗಿ ಈಶ್ವರಪ್ಪ ಅವರಿಗೆ ತೀವ್ರ ಹಿನ್ನಡೆಯಾಗಲಿದೆ.

ಸಂಜೆ ಸಚಿವ ಸಂಪುಟ ಮುಕ್ತಾಯವಾಗುವ ವೇಳೆಗೆ ಸಚಿವ ಈಶ್ವರಪ್ಪ ತಮ್ಮ ಪಟ್ಟು ಬಿಗಿಮಾಡುತ್ತಾರೆಯೇ ಅಥವಾ ಮುಖ್ಯ ಮಂತ್ರಿಗಳ ನಿರ್ಧಾರಕ್ಕೆ ತಲೆದೂಗುತ್ತಾರೋ ಕಾದು ನೊಡಬೇಕಿದೆ.

ಸಂಜೆ ಸಚಿವ ಸಂಪುಟದಲ್ಲಿ ಪ್ರಮುಖವಾಗಿ ಗ್ರಾಮ ಪಂಚಾಯಿತಿ ಚುನಾವಣೆ, ಆಡಳಿತಾಧಿಕಾರಿ ನೇಮಕದ ಬಗ್ಗೆ ಚರ್ಚೆ ನಡೆಯಿದೆ. ಪಕ್ಷದ ಬುತೇಕ ಸಚಿವರು ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಸೈ ಎನ್ನುವುದು ಖಚಿತ. ಆದರೆ ಸಚಿವ ಈಶ್ವರಪ್ಪ ಅವರೂ ನಾಮ ನಿರ್ದೇಶಿತ ಸದಸ್ಯರ ನೇಮಕದ ಬಗ್ಗೆ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಸಂಪುಟ ಸಭೆಯ ನಂತರ ಖಚಿತ ಮಾಹಿತಿ ಸಿಗಲಿದೆ ಎಂದು ಬಿಜೆಪಿ ಪಕ್ಷದ ಶಾಸಕರೊಬ್ಬರು ಪಬ್ಲಿಕ್ ಸ್ಟೋರಿಗೆ ಮಾಹಿತಿ ನೀಡಿದರು.

 

 

ಕನ್ನಡಿ ಚೂರು

0

ದೇವರಹಳ್ಳಿ ಧನಂಜಯ

ಬಾಳ ಬಾನಲಿ ತೇಲಿದ
ಹೊಳೆವ ಚಂದಿರ
ಸಾವಿರ ಚೂರು
ಅಂತರಂಗದ
ಒಡೆದ ಕನ್ನಡಿಯೊಳಗೆ.

ತಿಳಿನೀಲಿ ಆಗಸ
ತೇಲುವ ಮೋಡಗಳು
ಹೊತ್ತು ತರುತ್ತವೆ
ಬಾಲ್ಯದ ಹಳೆ ನೆನಪುಗಳ
ನನ್ನೆದೆಯ ಒಳಗೆ ರಾಡಿ ಕದಡಿ

ಮನೆಮಂದಿಯೆಲ್ಲಾ
ಹಿಟ್ಟುoಡು ಬುಡ್ಡಿದುಂಬಿ
ಅಂಗಳದಿ ಮೈಚಾಚಿ
ಆಕಾಶಕ್ಕೆ ಮುಖಮಾಡಿದಾಗ
ಹೊಳೆವ ನಕ್ಷತ್ರಗಳಲ್ಲಿ
ಬೇರೆತುಹೋದ ಭಾವ.

ಕಾಲ ಸರಿಯುತ್ತಿದೆ
ಒಂದೊಂದಾಗಿ ಕರಗುತ್ತಿವೆ
ನಕ್ಷತ್ರಗಳು ಸಂಬಂಧಗಳು
ಬಾಲ್ಯದ ಮಧುರ ಕ್ಷಣಗಳು
ಗೂಬೆ ಕಣ್ಣುಗಳ ತೊಟ್ಟು
ಕತ್ತಲ ಕಾಯುತ್ತಿರುವೆ
ಜಾರಿ ಬೀಳುತ್ತಿರುವ ಉಲ್ಕೆ

ನನ್ನನ್ನ ನನಗೆ
ನಾನಾಗೆ ತೋರಿಸಿದ
ಶುದ್ಧ ಕನ್ನಡಿಗೆ
ಕವಣೆ ಕಲ್ಲುಬೀಸಿದ
ಕಾಣದ ಕೈಗಳು ನೂರಾರು.
ದೂರಿಗೆ ಸಿಕ್ಕುತ್ತಿಲ್ಲ ಯಾರೂ

ನಾನೀಗ ಕಳೆದು ಹೋಗಿದ್ದೇನೆ
ಅಂತರಂಗದ ಕನ್ನಡಿ ಇಣುಕಿದಾಗೆಲ್ಲ
ಕಣ್ಣು ಕಟ್ಟುತ್ತಿವೆ
ನಾನಿಲ್ಲದ ನಾನಲ್ಲಾದ
ನನ್ನ ಅಸಂಖ್ಯ ಮುಖಗಳು
ಕಣ್ಣು ಚುಚ್ಚುವ ಕನ್ನಡಿ ಚೂರುಗಳು.