Friday, May 8, 2026
Google search engine
Home Blog Page 218

ಗಡಿ ಉದ್ವಿಗ್ನ: ಭಾರತದಿಂದ ಪ್ರಜೆಗಳನ್ನು ವಾಪಸ್ ಬರುವಂತೆ ಹೇಳಿದ ಚೀನಾ

ಭಾರತ ಗಡಿಯಲ್ಲಿ ಸೈನಿಕರ ಡೇರೆ ಸ್ಥಾಪಿಸಿರುವ ಚೀ‌ನಾ

ನವದೆಹಲಿ: ಭಾರತ ಚೀನಾ ನಡುವೆ ದಿನೇ ದಿನೇ ಪರಿಸ್ಥಿತಿ ವಿಷಮಿಸುತ್ತಿದ್ದು, ಭಾರತದಲ್ಲಿರುವ ತನ್ನ ಪ್ರಜೆಗಳನ್ನು ವಾಪಸ್ ಬರುವಂತೆ ಚೀನಾ ಸೋಮವಾರ ಸೂಚಿಸಿದೆ.

ಭಾರತದಲ್ಲಿರುವ ತನ್ನ ದೇಶದ ಪ್ರಜೆಗಳ ನಿಖರ ಮಾಹಿತಿ ಹೊಂದಿರುವುದಾಗಿ ತಿಳಿಸಿರುವ ಚೀನಾ ರಾಯಭಾರ ಕಚೇರಿ, ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸುತ್ತಿದ್ದು, ತನ್ನ ದೇಶದ ಪ್ರಜೆಗಳನ್ನು ವಾಪಸ್ ತೆರಳಲು ಸಿದ್ಧರಾಗಿರುವಂತೆ ತಿಳಿಸಿದೆ ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಮೇ 27ರಂದು ಭಾರತದಿಂದ ವಾಪಸ್ ಮರಳಲು ತನ್ನ ಪ್ರಜೆಗಳಿಗೆ ಸೂಚಿಸಿರುವ ಚೀನಾ.ಇದರಲ್ಲಿ ಪ್ರವಾಸಿ, ಉದ್ಯಮ, ವ್ಯಾಸಂಗ ಹಾಗೂ ತೀರ್ಥಯಾತ್ರೆ ವೀಸಾ ಪಡೆದಿರುವ ಪ್ರಜೆಗಳಿಗೆ ತಿಳಿಸಿದೆ.

ಆದರೆ ಚೀನಾ ತನ್ನ ವಿಶೇಷ ವಿಮಾನ ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂದು ತಿಳಿಸಿಲ್ಲ.

ಭಾರತ- ಚೀನಾ ಗಡಿಯಲ್ಲಿ ಸೇನೆ ಜಮಾವಣೆಗೊಂಡ ನಂತರ ದಿನೇ ದಿನೇ ಎರಡೂ ದೇಶಗಳ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು ಈ ಆದೇಶಕ್ಕೆ ಕಾರಣ ಎನ್ನಲಾಗಿದೆ.

ಇದರ ಜೊತೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ರೋಗಿಗಳ ಸಂಖ್ಯೆಯೂ ಕಾರಣ ಎನ್ನಲಾಗುತ್ತಿದೆ.

ಇದಲ್ಲದೇ ಪ್ರಪಂಚದಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ವಿಶ್ವದ ಹಲವಾರು ದೇಶಗಳು ಚೀನಾವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದು, ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಚೀನಾ, ಪ್ರಪಂಚದ ದೇಶಗಳ ದೃಷ್ಠಿಯನ್ನು ಬೇರೆಡೆಗೆ ತಿರುಗಿಸಲು ಸೈನ್ಯ ಜಮಾವಣೆ ತಂತ್ರ ಅನುಸರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದೊಂದಿಗೆ ಅತೀ ದೊಡ್ಡ ಗಡಿ ಹೊಂದಿರುವ ಚೀನಾ ತನ್ನ ಜೊತೆಗೆ ಭಾರತದ ದಾಯಾದಿ ದೇಶಗಳಾದ ನೇಪಾಳ ಹಾಗೂ ಪಾಕಿಸ್ತಾನವನ್ನು ಎತ್ತಿಕಟ್ಟುತ್ತಿರುವುದು ಭಾರತ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಮೊದಲೇ ಬಂದಳು ಹೇಮೆ: ಮೇರೆ‌ ಮೀರಿತು ಸಡಗರ

Publicstory.in


ತುಮಕೂರು: ಹೇಮಾವತಿ ಜಲಾಶಯದಿಂದ ನಾಲೆಯ ಮೂಲಕ ಬಿಡುಗಡೆ ಮಾಡಿರುವ ನೀರು ಇಂದು ತುಮಕೂರು ತಾಲೂಕು ಬುಗುಡನಹಳ್ಳಿಯ ಜಲಸಂಗ್ರಹಾಗಾರಕ್ಕೆ ಬಂದು ಸೇರಿತು.

ಕಳೆದ ಎರಡು ದಿನಗಳ ಹಿಂದೆ ಗೊರೂರು ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿತ್ತು. ಬುಗುಡನಹಳ್ಳಿಯ ಕೆರೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ನಗರ ಶಾಸಕ ಜ್ಯೋತಿ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ಬೇಸಿಗೆ ಕಾರಣದಿಂದ ನೀರು ಕಡಿಮೆಯಾಗಿತ್ತು.

ಹೀಗಾಗಿ ಗೊರೂರು ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಬಿಡುಗಡೆ ಮಾಡಿದ್ದು ಇನ್ನು ಕೆಲವು ದಿನಗಳ ಕಾಲ ನೀರು ಹರಿಯಲಿದೆ.

ಕೊರೊನಾ‌ ವಾರಿಯರ್ಸ್ ಗೆ ಸನ್ಮಾನದ ರಂಜಾನ್ ಸಂಭ್ರಮ

https://youtu.be/tsnEgGd_X74

ಚಿಕ್ಕನಾಯಕನಹಳ್ಳಿ: ರಂಜಾನ್ ಹಬ್ಬದ ಅಂಗವಾಗಿ ಸಾಮಾಜಿಕ ಕಾರ್ಯಕರ್ತ ಇಮ್ರಾಜ್ ಮತ್ತು ಸ್ನೇಹಿತರು ಕೊರೊನಾ ವಾರಿಯರ್ ಆಗಿ ಹಗಲುರಾತ್ರಿ ಶ್ರಮವಹಿಸಿರುವ, ಲಾಕ್ ‌ಡೌನ್ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕರೋನಾ ಹರಡದಂತೆ ತಡೆಗಟ್ಟಲು ಯಶಸ್ವಿಯಾಗಿರುವ ಹುಳಿಯಾರು ಪಟ್ಟಣದ ಸಬ್ ಇನ್ಸ್ಪೆಕ್ಟರ್ ಕೆ.ಟಿ ರಮೇಶ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸೈಯದ್ ಹಮಿತ್, ಸಾದತ್ ಶರೀಫ್, ಇಮ್ರಾನ್, ಜಬಿ ಉಲ್ಲಾ ,ಅರಫಾತ್, ಮುಜಮಿಲ್, ಸಲ್ಮಾನ್ ,ಫರ್ಮಾನ್ ಹಾಜರಿದ್ದರು.

ಭಾರತದ‌ ಗಡಿಯುದ್ದಕ್ಕೂ‌ ಸೇನೆ ಜಮಾವಣೆ ತೀವ್ರಗೊಳಿಸಿದ ಚೀನಾ

ಚೀನಾ ಸೈನಿಕರನ್ನು ಜಮೆ ಮಾಡಿರುವ ಚೀನಾ-ಭಾರತ ಗಡಿ.

ವಿನಯ್ ಹೆಬ್ಬೂರು


ನವದೆಹಲಿ: ಲಡಾಖ್‌ನ ವಾಸ್ತವಿಕ ನಿಯಂತ್ರಣ(LAC) ರೇಖೆಯ ಉದ್ದಕ್ಕೂ ಪಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೀನಾದ ಮಿಲಿಟರಿ ತನ್ನ ಸೈನ್ಯದ ಸಂಖ್ಯೆಯನ್ನು ವೇಗವಾಗಿ ಹೆಚ್ಚಿಸುತ್ತಿದೆ,

ಭಾರತೀಯ ಸೇನೆಯೊಂದಿಗಿನ ಮುಖಾಮುಖಿಯನ್ನು ಕೊನೆಗೊಳಿಸಲು ಸಿದ್ಧವಾಗಿಲ್ಲ ಎಂಬ ಸಂಕೇತವನ್ನು ಕಳುಹಿಸುತ್ತದೆ ಎಂದು ವೈರ್ ಅಂತರ್ಜಾಲ ತಾಣ ವರದಿ ಮಾಡಿದೆ.

ಗಡಿಯಲ್ಲಿ 80 ಡೇರೆಗಳನ್ನು ನಿರ್ಮಾಣ ಮಾಡಿದೆ.

ಚೀನಾ ಗಾಲ್ವಾನ್ ಕಣಿವೆಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದ್ದು, ಕಳೆದ ಎರಡು ವಾರಗಳಲ್ಲಿ ಸುಮಾರು 100 ಡೇರೆಗಳನ್ನು ನಿರ್ಮಿಸಿದೆ ಎಂದು ಚೀನಾ ಮೂಲದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇದರ ನಡುವೆ ಈ ವಿವಾದಿತ ಪ್ರದೇಶದಲ್ಲಿ ಭಾರತೀಯ ಸೈನ್ಯವೂ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು ಭಾರತವೂ ರಸ್ತೆ, ಬಂಕರ್ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.

ಕಳೆದ ಒಂದು ವಾರದಲ್ಲಿ ಪೂರ್ವ ಲಡಾಖ್‌ನ ಹಲವಾರು ಪ್ರದೇಶಗಳಲ್ಲಿ ಚೀನಾದ ಪೀಪಲ್‌ ಲಿಬರಲ್ ಆರ್ಮಿ ಅನೇಕ ಪ್ರದೇಶಗಳಲ್ಲಿ ಅತಿಕ್ರಮಣ ನಡೆಸಿದ್ದು , ಎರಡು ಕಡೆಯ ಸೈನಿಕರು ಕನಿಷ್ಠ ಎರಡು ಸಂದರ್ಭಗಳಲ್ಲಿ ನೇರ ಮುಖಾಮುಖಿಯಾಗಿವೆ.

ಪಾಂಗೊಂಗ್ ತ್ಸೋ ಸರೋವರ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಚೀನಾ ಸೇನೆ ಅದೇ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೈನ್ಯದ ಸೈನಿಕರನ್ನು ಬಲವಂತವಾಗಿ ನಿಲ್ಲಿಸಿತು ಎಂದು ಹಲವಾರು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣಿ ಅವರು ಶುಕ್ರವಾರ ಲೇಹ್‌ನ 14 ಕಾರ್ಪ್ಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು, ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿಯ ವಿವಾದಿತ ಪ್ರದೇಶಗಳ ಭದ್ರತಾ ಸನ್ನಿವೇಶವನ್ನು ಉನ್ನತ ಕಮಾಂಡರ್‌ಗಳೊಂದಿಗೆ ಪರಿಶೀಲಿಸಿದರು.

ಪಾಂಗೊಂಗ್ ತ್ಸೊ ಸರೋವರ ಮತ್ತು ಗಾಲ್ವಾನ್ ಕಣಿವೆ ಎರಡೂ ಭಾರತ ಹಾಗೂ ಚೀನಾದ ನಡುವೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಈ ಪ್ರದೇಶಗಳು ಇತರ ಕೆಲವು ಸೂಕ್ಷ್ಮ ಪ್ರದೇಶಗಳಳಿಗೆ ಹೆಚ್ಚು ಅನುಕೂಲಕರ ಸ್ಥಾನದಲ್ಲಿದೆ ಎಂದು ಮೂಲಗಳು ತಿಳಿಸಿವೆ ಎಂದು ವೈರ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಮೇ 5 ರ ಸಂಜೆ ಸುಮಾರು 250 ಚೀನೀ ಮತ್ತು ಭಾರತೀಯ ಸೈನಿಕರು ಈ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋದ ನಂತರ ಎರಡೂ ಕಡೆಯ ಕಮಾಂಡರ್‌ಗಳು ಚರ್ಚಿಸಿ ಪರಿಸ್ಥಿತಿತಿಳಿಗೊಳಿದ್ದರು.ಇದರ ನಡುವೆಯೂ ಪೂರ್ವ ಲಡಾಕ್‌ನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಮೇ 9 ರಂದು ಉತ್ತರ ಸಿಕ್ಕಿಂನಲ್ಲಿ ಇದೇ ರೀತಿಯ ಘಟನೆಯ ನಂತರ ಪಾಂಗೊಂಗ್ ತ್ಸೋದಲ್ಲಿ ನಡೆದ ಘಟನೆಯಲ್ಲಿ 100ಕ್ಕೂ ಹೆಚ್ಚು ಸೈನಿಕರು ಮುಖಾಮುಖಿಯಾಗಿದ್ದರು.

ಕಳೆದ ಒಂದು ವಾರದಲ್ಲಿ, ಎರಡೂ ಕಡೆಯ ಸ್ಥಳೀಯ ಕಮಾಂಡರ್‌ಗಳು ಕನಿಷ್ಠ ಐದು ಸಭೆಗಳನ್ನು ನಡೆಸಿದರು, ಈ ಸಂದರ್ಭದಲ್ಲಿ ಗಾಲ್ವಾನ್ ಕಣಿವೆಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಡೇರೆಗಳನ್ನು ನಿರ್ಮಿಸುವ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ನಡೆಯನ್ನು ಭಾರತ ವಿರೋಧಿಸಿದೆ.

ಚೀನಾ ಮಿಲಿಟರಿಯ ನಡೆಯಿಂದ ತನ್ನ ಸೈನಿಕರ ಸಾಮಾನ್ಯ ಗಸ್ತು ತಿರುಗಲು ಅಡ್ಡಿಯಾಗುತ್ತಿದೆ ಎಂದು ಭಾರತ ಗುರುವಾರ ಹೇಳಿಕೆ ನೀಡಿದ್ದು , ಗಡಿ ನಿರ್ವಹಣೆಯ ಬಗ್ಗೆ ಭಾರತ ಯಾವಾಗಲೂ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಭಾರತ ಮತ್ತು ಚೀನಾದ ಪಡೆಗಳು 2017 ರಲ್ಲಿ ಡೋಕ್ಲಾಮ್ ತ್ರಿ-ಜಂಕ್ಷನ್‌ನಲ್ಲಿ 73 ದಿನಗಳು ಪರಸ್ಪರ ಮುಖಾಮುಖಾಯಾಗಿದ್ದು ಯುದ್ದ ಭೀತಿ ಮೂಡಿಸಿತ್ತು.

ಭಾರತ-ಚೀನಾ 3,488 ಕಿ.ಮೀ ಉದ್ದದ ಗಡಿ ವಿವಾದ ಹೊಂದಿದ್ದು. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳುತ್ತದೆ.

ಜಮ್ಮು ಮತ್ತು ಕಾಶ್ಮೀರದ ಭಾರತದ ಮರುಸಂಘಟನೆ ವಿಧೇಯಕವನ್ನು ಚೀನಾ ಟೀಕಿಸುತ್ತಿದ್ದು, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದಕ್ಕಾಗಿ ಭಾರತದ ವಿರುದ್ಧ ಅಸಹನೆ ಹೊರಹಾಕುತ್ತಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.


ಈ ವರದಿಯು thewire ಅಂತರ್ಜಾಲ ತಾಣ ಹಾಗೂ ವಿವಿಧ ಸುದ್ದಿ ತಾಣಗಳನ್ನು ಅವಲಂಬಿಸಿದೆ.

ತುಮಕೂರು; ಒಬ್ಬರಿಗೆ ಸೋಂಕು,‌ಒಂದು ಸಾವು ಕೊರೊನಾ, ಮಾವಿನಕುಂಟೆ ಗ್ರಾಮ ಸೀಲ್ಡ್ ಡೌನ್

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ಮತ್ತೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಇನ್ನೂ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಭಾನುವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಜಿಲ್ಲೆಯ ಬೆಳ್ಳಾವಿ ಹೋಬಳಿ ಮಾವಿನಕುಂಟೆ ಗ್ರಾಮದ ಬಸ್ ಚಾಲಕರೊಬ್ಬರಿಗೆ ಸೋಂಕು ತಗುಲಿದೆ.

ಗ್ರಾಮವನ್ನು ಸೀಲ್ಡ್ ಡೌ‌ನ್ ಮಾಡಲಾಗಿದೆ.

ಇವರು ಮಹಾರಾಷ್ಟ್ರ ಕ್ಕೆ ಹೋಗಿ ಬಂದಿದ್ದರು.

ಮಾಗಡಿ ಡಿಪೊದಲ್ಲಿ ಕೆಲಸಕ್ಕೆ ಹಾಜರಾಗಲು ಹೋದಾಗ ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಹಳ್ಳಿಗಳಲ್ಲಿ ಕೊರೊನಾ ವ್ಯಾಪಿಸತೊಡಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

ಲಾಕ್ ಡೌನ್ ಸಡಿಲವಾಗಿದೆ ಎಂದು ಪ್ರಯಾಣ ಬೆಳೆಸಬಾರದು. ಆದಷ್ಟೂ ಮನೆಯಲ್ಲೇ ಇರಬೇಕು. ಅನಿವಾರ್ಯ ಕೆಲಸ ಇದ್ದರೆ ಮಾತ್ರ ಬರಬೇಕು.

ಓಹ್! ಒಂದು ಹಾಲಿನ ಮನವಿಯಿಂದಾಗಿ ಏನೆಲ್ಲಾ..

ಜಿ ಎನ್ ಮೋಹನ್


‘ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ 1992’ನ್ನು ರದ್ದು ಮಾಡಲು ಅವಕಾಶ ಕೊಡಬೇಡಿ’

-ಹೀಗೆ ಒಂದು ಮನವಿಯನ್ನು ಅರ್ಪಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ.

‘ಕ್ಷೀರ ಕ್ರಾಂತಿಯ ರೂವಾರಿ’ ಎಂದೇ ಹೆಸರಾಗಿದ್ದ ಪ್ರೊ ವಿ ಕುರಿಯನ್ ಅವರು ಮಂಗಳೂರಿಗೆ ಬಂದಿದ್ದರು.

ಆ ವೇಳೆಗಾಗಲೇ ನಾವೆಲ್ಲಾ ಅನಂತ್ ನಾಗ್ ಅಭಿನಯದ ಶ್ಯಾಮ್ ಬೆನಗಲ್ ಅವರ ‘ಮಂಥನ್’ ನೋಡಿ ಆಹಾ ಎಂದು ಕಣ್ಣರಳಿಸಿದ್ದೆವು.

ನಮ್ಮೊಳಗೇ ಹೌದಲ್ಲಾ.. ‘ಏಕ್ ಏಕ್ ಏಕ್.. ಅನೇಕ್’ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? ಎಂದು ಒಂದು ಹೊಸ ಮಾದರಿಯನ್ನೇ ಮುಂದಿಟ್ಟುಬಿಟ್ಟಿತ್ತು. ‘ಹನಿ ಹನಿಗೂಡಿಸಿದರೆ ಹಳ್ಳ’ ಎನ್ನುವುದನ್ನು ನಾವು ಮೊದಲು ಕಲಿತದ್ದೇ ಆ ‘ಮಂಥನ್’ ಮೂಲಕ.

ಹಾಗಾಗಿ ಅಂತಹ ‘ಮಂಥನ್’ಗಳಿಗೆ ನಾಂದಿ ಹಾಡಿದ, ದೇಶಾದ್ಯಂತ ಹಾಲು ಕರೆಯುತ್ತಿದ್ದ ರೈತರ ಮುಖದಲ್ಲಿ ಮುಗುಳ್ನಗೆ ಮೂಡಿಸಿದ, ತಲೆ ಎತ್ತಿ ಸಮಾಜದಲ್ಲಿ ನಿಲ್ಲುವಂತೆ ಮಾಡಿದ್ದ ‘ಅಮುಲ್’ ಜನಕ ಕುರಿಯನ್ ಬಂದಿದ್ದಾರೆ ಎಂದರೆ ನಾವು ಅಲ್ಲಿಗೆ ದೌಡಾಯಿಸದಿರಲು ಹೇಗೆ ಸಾಧ್ಯ?.

ಹಾಗೆ ನಾನು ಭೇಟಿ ಕೊಟ್ಟದ್ದು ಮಂಗಳೂರಿನ ಕೆ ಎಂ ಎಫ್ ಡೈರಿಗೆ.

ಕುರಿಯನ್ ಅವರ ಜೊತೆ ಮಾತನಾಡಿ ಅವರ ಫೋಟೋ ಕ್ಲಿಕ್ಕಿಸಿ, ಅವರೊಡನೆ ಫೋಟೋ ಕ್ಲಿಕ್ಕಿಸಿಕೊಂಡು ಹೊರಬಂದಾಗ ಸಾಕಷ್ಟು ಜನ ಕೈನಲ್ಲಿ ಪತ್ರವೊಂದನ್ನು ಹಿಡಿದು ನಂತಿದ್ದರು.

ಕುರಿಯನ್ ಅವರಿಗೆ ಕೊಡಲು ತಂದಿದ್ದ ಮನವಿ ಪತ್ರ ಅದು. ಕುರಿಯನ್ ಆ ದೊಡ್ಡ ಹಿಂಡಿನ ನಡುವೆ ನಿಂತು ಆ ಮನವಿ ಸ್ವೀಕರಿಸಿದರು. ಅಲ್ಲಿ ಸೇರಿದ್ದವರು ಹಾಲು ಉತ್ಪಾದಕರ ಒಕ್ಕೂಟದ ಸದಸ್ಯರು.

ಅವರ ಮನವಿ ಒಂದೇ- ‘ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ-92 ಕ್ಕೆ ತಿದ್ದುಪಡಿ ತರಲು ಬಿಡಬೇಡಿ. ಇಷ್ಟು ದಿನ ನಮ್ಮ ಬದುಕಿಗೆ ಬೆಳ್ಳನೆ ಬೆಳಕಾಗಿದ್ದ ಹಾಲೇ ನಮಗೆ ವಿಷವೂ ಆಗಿಬಿಡುತ್ತದೆ’ ಎಂದು ತಮ್ಮೊಳಗಿದ್ದ ಆತಂಕಕ್ಕೆ ಬಾಯಿ ಕೊಟ್ಟಿದ್ದರು.

ಅದೇನದು ಎನ್ನುವ ಕುತೂಹಲಕ್ಕೆ ಬಿದ್ದ ನಾನು ಆ ಪತ್ರದೊಳಗೆ ಇಣುಕಿದೆ. ಹಾಲನ್ನು ಚಾಕಲೇಟ್ ಆಗಿಸುವ, ಮಿಲ್ಕ್ ಪೌಡರ್ ಆಗಿಸುವ ಹುನ್ನಾರ ಜರುಗುತ್ತಿದೆ. ಹಾಲು ಬೇಕಾಗಿರುವ ಕಂದಮ್ಮಗಳ ಬಾಯಿಗೆ ಚಾಕಲೇಟ್ ತುರುಕಲು ಬಹುರಾಷ್ಟ್ರೀಯ ಕಂಪನಿಗಳು ಸಜ್ಜಾಗುತ್ತಿವೆ ಎನ್ನುವ ಕಳವಳ ಅಲ್ಲಿತ್ತು.

ಆ ವೇಳೆಗಾಗಲೇ ನಾನೂ ಸಹಾ ಸಾಕಷ್ಟು ಚಾಕಲೇಟ್ ತಿಂದು ಬಾಯಿ ಚಪ್ಪರಿಸಿದ್ದವನೇ. ಅಷ್ಟೇ ಅಲ್ಲ ಮಂಗಳೂರಿಗೆ ಬಂದ ಹೊಸದರಲ್ಲಿ ಕ್ಯಾಂಪ್ಕೋ ಬಿಡುಗಡೆ ಮಾಡಿದ್ದ ಚಾಕಲೇಟ್ ಗಳನ್ನು ಕೊಂಡು ದೂರದೂರಿನ ಗೆಳೆಯರಿಗೆಲ್ಲ ಕೊರಿಯರ್ ಮೂಲಕ ಕಳಿಸಿಕೊಟ್ಟಿದ್ದವನು ನಾನು.

ಮನಸ್ಸು ಗಲಿಬಿಲಿಯಾಗಿ ಹೋಯಿತು. ಅಲ್ಲಾ ಚಾಕಲೇಟ್ ಮಾಡುವುದು ಬೇಡ ಎಂದರೆ ಹೇಗೆ?.. ಯಾಕೆ? ಅನಿಸಿತು.

ಹಾಗೆ ನನ್ನೊಳಗೆ ಹೊಕ್ಕ ಹುಳುವನ್ನು ಬೆಂಬತ್ತಿದೆ. ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲ ಹುಡುಕಿದೆ, ನೂರೆಂಟು ಜನರಿಗೆ ಫೋನಾಯಿಸಿದೆ. ಎಷ್ಟೋ ಕಚೇರಿಗಳ ಬಾಗಿಲು ತಟ್ಟಿದೆ. ಚಾಕಲೇಟ್ ಮಾರುವವರನ್ನೂ, ಚಾಕಲೇಟ್ ಉತ್ಪಾದಿಸುವವರನ್ನೂ, ಚಾಕಲೇಟ್ ತಿನ್ನುವವರನ್ನೂ, ಚಾಕಲೇಟ್ ಬೇಡ ಎನ್ನುವವರನ್ನೂ ಹೀಗೆ..

ಹಾಲು ಎಂದಾಕ್ಷಣ ಇಡೀ ಜಗತ್ತು ಭಾರತದತ್ತ ನೋಡುತ್ತಿತ್ತು.

ಹಾಲು ಮನೆ ಮನೆ ತಲುಪಲು, ಪ್ರತಿಯೊಬ್ಬ ಮಗುವಿಗೆ ಮೀಸೆ ಬರೆಯಲು, ಶಾಲೆಯಂಗಳದಲ್ಲಿ ನರಳುತ್ತಿದ್ದ ಮಕ್ಕಳಿಗೆ ಒಂದಿಷ್ಟು ಕಸುವು ತುಂಬಲು ಹಾಲು ಉತ್ಪಾದಕರು ಕಾರಣರಾಗಿದ್ದರು.

ಹಾಲು ಉತ್ಪಾದಿಸುವುದರಲ್ಲೂ, ಅದನ್ನು ಸರಬರಾಜು ಮಾಡುವ ಜಾಲದಲ್ಲೂ ಭಾರತ ಜಗತ್ತಿನ ಗಮನ ಸೆಳೆದುಬಿಟ್ಟಿತ್ತು. ಬೆಂಗಳೂರಿನಿಂದ ಕೊಲ್ಕೊತ್ತಾಗೆ ರೈಲಿನಲ್ಲಿ ಹಾಲು ಸರಬರಾಜು ಮಾಡುವ ಮೂಲಕ ಇಡೀ ಏಷ್ಯಾದಲ್ಲಿ ಮಹತ್ವದ ಸಹಕಾರಿ ವಿಧಾನ ಎನ್ನುವ ಪ್ರಶಂಸೆಗೆ ಪಾತ್ರವಾಗಿತ್ತು.

ಹಾಲು ಇಲ್ಲದೆ ಬಳಲುವ ದೆಹಲಿ, ಮುಂಬೈ, ಮದ್ರಾಸ್, ಕೊಲ್ಕೊತ್ತಾಗೆ ಈ ಸಹಕಾರಿ ಜಾಲ ನೆಮ್ಮದಿ ತಂದಿತ್ತು. ಅಕ್ಷರಶಃ ದೇಶ ಹಾಲಿಲ್ಲದೆ ಬಳಲದಂತೆ ನೋಡಿಕೊಂಡಿದ್ದು ಈ ಹಾಲು ಉತ್ಪಾದಕರ ಸಹಕಾರಿ ಜಾಲ.

ಯಾವಾಗ ಭಾರತ ಹೊಸ ಆರ್ಥಿಕ ನೀತಿಗೆ ಸಹಿ ಹಾಕಿತೋ ಹಾಲಿನ ಒಕ್ಕೂಟ ತತ್ತರಿಸಿಹೋಯಿತು.

ಚಾಕಲೇಟ್ ಗಳ ಮಾರುಕಟ್ಟೆಯ ದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಇದೇ ನೀತಿಯಡಿ ಹಾಲನ್ನು ಚಾಕಲೇಟ್ ಆಗಿಸಲು ಅನುಮತಿ ನೀಡುವಂತೆ ಒತ್ತಡ ಹೇರಲು ಆರಂಭಿಸಿದವು.

ಯಾವಾಗ ಸರ್ಕಾರ ಹಾಲು ಮತ್ತು ಹಾಲಿನ ಪದಾರ್ಥಗಳ ಸಂಸ್ಕರಣಾ ಘಟಕಕ್ಕೆ ಅವಕಾಶ ನೀಡಲು ಮುಂದಾಯಿತೋ ‘ಹಾಲಿನ ಕ್ಷೇತ್ರದಲ್ಲಿ ಹಾಲಾಹಲದ ಹೊಳೆ ಬೇಡ’ ಎಂಬ ದನಿಗಳು ಗಟ್ಟಿಯಾಗಿ ಎದ್ದು ನಿಂತವು.

ಇಂತಹ ಆತಂಕದೊಂದಿಗೆ ಒಕ್ಕೂಟದ ಸದಸ್ಯರು ಕುರಿಯನ್ ಎದುರು ನಿಂತಿದ್ದರು.

ಒಂದು ಮನವಿ ಪತ್ರ ನನ್ನೊಳಗೂ ನೂರೆಂಟು ಪ್ರಶ್ನೆ ಎಬ್ಬಿಸಿತ್ತು. ದಿನಕ್ಕೆ ಹತ್ತಾರು ಹೇಳಿಕೆ, ಮನವಿ ಪತ್ರ, ಕರಪತ್ರಗಳನ್ನು ಒಂದು ಚಿಟಿಕೆ ಸುದ್ದಿಯಾಗಿ ತಳ್ಳಿಹಾಕಿಬಿಡುವ ಪತ್ರಿಕೋದ್ಯಮದ ಕಾಲದಲ್ಲಿ ಈ ಮನವಿ ನನ್ನ ಕೈ ಹಿಡಿದು ಜಗ್ಗಿತ್ತು.

ಒಂದು ಹನ್ನೊಂದಾಯಿತು. ಹಾಲು ರೈತರ ಕಾರಣದಿಂದಾಗಿ ನನ್ನೊಳಗೆ ಹೊಕ್ಕಿದ್ದ ಗುಂಗೀ ಹುಳು ಒಂದಿಷ್ಟು ಹೆಚ್ಛೇ ಸದ್ದು ಮಾಡಲಾರಂಭಿಸಿತ್ತು.

ಅದೇ ಸಮಯಕ್ಕೆ ನಾನು ಶಿವರಾಮ ಕಾರಂತರ ಜೊತೆ ಕೂರಬೇಕಾಗಿ ಬಂದಿತ್ತು. ಬಂಟವಾಳದಲ್ಲಿ. ಗ್ರಾಮೀಣ ಪತ್ರಕರ್ತರನ್ನು ಉದ್ಧೇಶಿಸಿ ಮಾತನಾಡಬೇಕಾದ ಸಂದರ್ಭ ಅದು.

ಜಾಗತೀಕರಣ ಎನ್ನುವುದು ಹೆದ್ದಾರಿಗಳನ್ನು ಮಾತ್ರ ಸೃಷ್ಟಿಸುತ್ತಾ ಚಕ್ಕಡಿಯ ದಾರಿಗಳನ್ನು ನಿವಾರಿಸಿ ಹಾಕಿಬಿಡುತ್ತದೆ ಎನ್ನುವ ಆತಂಕದಲ್ಲಿದ್ದ ನಾನು ಹಾಲಿನ ಕಥೆಯನ್ನು ಅವರೊಂದಿಗೆ ಹಂಚಿಕೊಂಡೆ. ನನ್ನೊಳಗಿನ ಗುಂಗೀ ಹುಳು ಈಗ ಸುಮಾರ ಜನರ ತಲೆ ಹೊಕ್ಕಿತು.

ಲಾವಂಚ ಎನ್ನುವುದು ಪಶ್ಚಿಮ ಘಟ್ಟದವರಿಗೆ ಒಂದು ಹುಲ್ಲು, ಅಬ್ಬಬ್ಬಾ ಎಂದರೆ ವಿಶೇಷ ತಳಿಯ ಹುಲ್ಲು. ಆದರೆ ಅದಕ್ಕಿರುವ ಶಕ್ತಿ ನನ್ನನ್ನು ದಂಗುಬಡಿಸಿತ್ತು. ದಕ್ಷಿಣ ಕನ್ನಡದ ಯಾವುದೇ ಹೋಟೆಲ್, ಮನೆಗೆ ಹೋಗಿ ನೀವು ಕುಡಿಯುವ ನೀರಿನ ರುಚಿ, ಬಣ್ಣ ಬೇರೆ. ಏಕೆಂದರೆ ಅದರಲ್ಲಿ ಲಾವಂಚದ ಸೊಗಡಿರುತ್ತದೆ.

ಅಷ್ಟೇ ಅಲ್ಲ ಪಶ್ಚಿಮ ಘಟ್ಟಗಳು ಇಂದು ಉರುಳದೆ ಗಟ್ಟಿಯಾಗಿ ನಿಂತಿದ್ದರೆ ಯಕಃಶ್ಚಿತ್ ಎಂದುಕೊಂಡುಬಿಡುವ ಈ ಲಾವಂಚದ ಪಾತ್ರ ದೊಡ್ಡದು. ಅದು ಭೂಮಿ ಸರಿಯದಂತೆ ಗಟ್ಟಿಯಾಗಿ ಬಂಧಿಸಿಡುತ್ತದೆ. ಆದರೆ ಅಮೆರಿಕಾ ಆ ವೇಳೆಗಾಗಲೇ ಲಾವಂಚದ ಪೇಟೆಂಟ್ ಪಡೆದುಕೊಂಡುಬಿಟ್ಟಿತ್ತು.

ಆಗಲೇ ಶಿವರಾಮ ಕಾರಂತರು ನನಗೆ ‘ಡೌನ್ ಟು ಅರ್ಥ್’ ಪತ್ರಿಕೆಯ ವರದಿಯ ಬಗ್ಗೆ ಹೇಳಿದ್ದು.

ಸೌತೇಕಾಯಿ ಕುಟುಂಬದ 150ಕ್ಕೂ ಹೆಚ್ಚು ಬಗೆ ಅಪ್ಪಟ ಭಾರತೀಯ ಮೂಲದ್ದು, ಆದರೆ ಈಗಾಗಲೇ ಸೌತೆ ಜಾತಿಗೆ ಸೇರಿದ ಎಲ್ಲಾ ಸಸ್ಯಗಳೂ ಅಮೇರಿಕಾದ ಹಕ್ಕಾಗಿದೆ ಎಂದು ದೆಹಲಿಯ ‘ಡಾನ್ ಟು ಅರ್ಥ್’ ಪತ್ರಿಕೆ ವರದಿ ಮಾಡಿತ್ತು.

ಭಾರತದ ವಿಶಿಷ್ಟ ಅಕ್ಕಿ ಬಾಸುಮತಿ ಅಮೆರಿಕಾದಲ್ಲಿ ಟೆಕ್ಸ್ ಮತಿಯಾಗಿ ಮರುನಾಮಕರಣಗೊಂಡಿತ್ತು.

ಅದಿರಲಿ, ನಮ್ಮ ಹಳ್ಳಿಗಳಲ್ಲಿ ಒಟ್ಟೆ ತೊಳೆಯಲು, ಮೈ ತೊಳೆಯಲು ಬಳಸುತ್ತಿದ್ದ ಅಂಟುವಾಳ ಕಾಯಿಗೆ ಆಗ ಅಮೇರಿಕಾದ ಕಂಪನಿಗಳು ಪೇಟೆಂಟ್ ಪಡೆಯುವ ಸನ್ನಾಹ ನಡೆಸಿದ್ದವು.

ಬೇವಿನ ಸಸ್ಯದ ಎಲೆ, ಬೀಜ, ತೊಗಟೆ, ಬೇರು, ಕಾಂಡ ಹೀಗೆ ಇಡೀ ಬೇವಿನ ದೇಹದ ಅಂಗಾಂಗಕ್ಕೆ 13 ಬಗೆಯ ಪೇಟೆಂಟ್ ಗಳನ್ನು ಅಮೇರಿಕಾದ ಕಂಪನಿಗಳು ಪಡೆದು ಕೂತಿದ್ದವು.

ಹಾಲಿನ ರೈತರು ಎತ್ತಿದ ಆತಂಕದ ದನಿಯೇ ನನ್ನೊಳಗೆ ಅಳಿಸಿ ಹೋಗಿರಲಿಲ್ಲ. ಆ ವೇಳೆಗೆ ಬೀಡಿ ಕಾರ್ಮಿಕರು ಎದ್ದು ನಿಂತರು.

ಭಾರತ ಒಳಗೆ ಮಿನಿ ಸಿಗರೇಟ್ ಹೆಜ್ಜೆ ಹಾಕಲು ಸಜ್ಜಾಗಿ ನಿಂತಿತ್ತು. ಬೀಡಿ ಉದ್ಯಮ ಕಂಗಾಲಾಗಿ ಹೋಯಿತು. ಒಮ್ಮೆ ಬಹುರಾಷ್ಟ್ರೀಯ ಕಂಪನಿಗಳ ಮಿನಿ ಸಿಗರೇಟುಗಳು ದೇಶದ ಒಳಗೆ ಕಾಲಿಟ್ಟರೆ ಬೀಡಿ, ಬೀಡಿ ಎಲೆಯಿಂದಲೇ ಬದುಕು ಕಂಡುಕೊಂಡ ಲಕ್ಷಾಂತರ ಕುಟುಂಬಗಳು ತತ್ತರಿಸಿ ಹೋಗಲಿದ್ದವು.

ಲಕ್ಷಾಂತರ ಕುಟುಂಬಗಳಿಗೆ ಬೀಡಿ ಎನ್ನುವುದು ಬರೀ ಬೀಡಿಯಾಗಿರಲಿಲ್ಲ. ಅದು ಆರ್ಥಿಕ ಸ್ವಾತಂತ್ರ್ಯವಾಗಿತ್ತು. ಮಹಿಳೆಯರ ಸಮಾನತೆಯ ದಾರಿಯಾಗಿತ್ತು. ಮನುಷ್ಯನ ಘನತೆಯ ಬದುಕಿಗೆ ದೀವಿಗೆಯಾಗಿತ್ತು. ಇದನ್ನು ದಕ್ಷಿಣ ಕನ್ನಡದ ಮೂಲೆ ಮೂಲೆಯ ಮನೆಗಳ ಬಾಗಿಲು ತಟ್ಟಿದ್ದ ನಾನು ಕಣ್ಣಾರೆ ಕಂಡಿದ್ದೆ.

ಆ ವೇಳೆಗೇ ಕಡಲ ಊರಿನ ಧಕ್ಕೆಗಳಲ್ಲಿ ಹಾಹಾಕಾರ ಎದ್ದಿತ್ತು. ವಿದೇಶಿ ಕಂಪನಿಗಳ ಹಡಗುಗಳು ಮೀನುಗಾರಿಕೆಗೆ ಇಳಿದಿದ್ದವು. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮೀನು ಸಾಂದ್ರತೆಯನ್ನು ಪತ್ತೆ ಮಾಡುವ, ಒಂದು ಗುಂಡಿ ಒತ್ತುವುದರ ಮೂಲಕ ಯಾಂತ್ರಿಕ ಬಲೆಯನ್ನು ಹರಡಿಬಿಡುವ, ಹಡಗಿನಲ್ಲೇ ಅದನ್ನು ಒಣಗಿಸುವ, ಪುಡಿ ಮಾಡುವ, ಡಬ್ಬಿಗೆ ಹಾಕುವ, ಎಲ್ಲೆಲ್ಲಿಗೋ ರಫ್ತ್ತು ಮಾಡುವ ತಾಖತ್ತು ಇರುವ ಹಡಗುಗಳು ಅವು.

ದಿನವಿಡೀ ಕಡಲಿನಲ್ಲಿ ಮೀನು ಅರಸುತ್ತಾ ತಿರುಗುವ ಮೀನುಗಾರರೂ, ಇವರು ಹಿಡಿದು ತರುವ ಮೀನನ್ನೇ ನಂಬಿದ ಮೀನು ಮಾರುವ ಮಹಿಳೆಯರೂ, ಆ ಮೀನಿನ ಮೂಲಕವೇ ಒಂದು ನೆಮ್ಮದಿಯ ಆರೋಗ್ಯಕ್ಕೆ ದಾರಿ ಮಾಡಿಕೊಂಡಿದ್ದ ಮನೆಗಳವರು.. ಎಲ್ಲರನ್ನೂ ಒಂದು ನಿರ್ಧಾರ ಹೊಸಕಿ ಹಾಕಿಬಿಡಲು ಸಜ್ಜಾಗಿತ್ತು.

ಯಾರೇ ನನ್ನ ಗೆಳೆಯರನ್ನು ಪರಿಚಯ ಮಾಡಿಕೊಡುವಾಗ ನಾನು ‘ನಮ್ಮ ಊರುದ, ನಮ್ಮ ನೀರುದ’ ಎನ್ನುವ ಮಾತು ಬಳಸುತ್ತೇನೆ.

ಇದು ನನ್ನೊಳಗೆ ಹೊಕ್ಕು ಪಯಣ ಆರಂಭಿಸಿದ್ದೇ ಕರಾವಳಿಯ ನೂರೆಂಟು ರೀತಿಯ ಕೋಲಾಗಳಿಂದಾಗಿ. ಈಗಿನ ಬ್ರಾಂಡೆಡ್ ಕೋಲಾಗಳು ಬರುವ ಮುನ್ನ ಯಾವ ಕೈಗಾರಿಕಾ ಪ್ರದೇಶಕ್ಕೆ ಹೋದರೂ ನಮಗೆ ಬೇಕಾದ ನಮ್ಮ ಕಸುವು ಹೆಚ್ಚಿಸುವ, ನಮ್ಮ ಬಾಯಾರಿಕೆ ತಣಿಸುವ, ನಮ್ಮ ನೀರಿನಿಂದ ಮಾಡಿದ ನಮ್ಮ ಊರಿನ ಕೋಲಾಗಳು ಇರುತ್ತಿದ್ದವು.

ಆದರೆ ಈಗ ಅದೇ ಕೈಗಾರಿಕಾ ಪ್ರದೇಶಕ್ಕೆ ಹೋಗಿ ನೋಡಿ. ದೊಡ್ಡ ಕಂಪನಿಗಳ ಹೊಡೆತಕ್ಕೆ ‘ನಮ್ಮ ನೀರೂ, ನಮ್ಮ ಊರೂ’ ಎರಡೂ ತತ್ತರಿಸಿ ಕುಳಿತಿರುವುದು ಕಾಣುತ್ತದೆ.

ಕೊಡೆಯೂ ತನ್ನ ಒಂದು ಕಥೆ ಹೇಳಿದ್ದು ನಾನು ‘ಧೋ’ ಎಂದು ದಿನಗಟ್ಟಲೆ ಸುರಿವ ಮಂಗಳೂರಿನ ಮಳೆಯಲ್ಲಿ ಕೊಡೆ ಕೊಳ್ಳಲು ಅಂಗಡಿಯೊಂದನ್ನು ಹೊಕ್ಕಾಗ.

ಬೆಂಗಳೂರಿನಲ್ಲಿ ಆಡಿ ಬೆಳೆದವನಿಗೆ ಗೊತ್ತಿದ್ದದ್ದು ಒಂದು ಬ್ರಾಂಡಿನ ಕೊಡೆ ಮಾತ್ರ. ಆದರೆ ಮಂಗಳೂರಿನ ಅಂಗಡಿ ಹೊಕ್ಕವನು ಕಣ್ಣು ಪಿಳಿ ಪಿಳಿ ಕಣ್ಣು ಬಿಡಲಾರಂಭಿಸಿದ್ದೆ. ಎಷ್ಟೊಂದು ಬ್ರಾಂಡುಗಳು. ಎಷ್ಟೊಂದು ರೀತಿಯವು.

ಮಂಗಳೂರು ಮಳೆ ಹೇಗೆ ಎಂದು ಗೊತ್ತಿದ್ದು ಆ ಮಳೆಗೆ ತಕ್ಕುನಾಗಿಯೇ ರೂಪಿಸಿದ್ದ ಕೊಡೆಗಳು. ಟೂ ವೀಲರ್ ನಲ್ಲಿ ಹೋಗುವವರಿಗಾಗಿಯೇ ಗಾಳಿ ಧಿಕ್ಕನ್ನು ಆಧರಿಸಿ, ಸ್ಕೂಟರ್ ನ ಎರಡೂ ಸವಾರರನ್ನು ರಕ್ಷಿಸಲು ಆಗುವಂತಹ ಕೊಡೆಗಳು. ನನಗೋ ಯಾರೋ ನನ್ನ ಬಳಿ ಬಂದು ನನ್ನ ಅಳತೆ ತೆಗೆದುಕೊಂಡು ನನಗೆ ಬೇಕಾದ ರೀತಿಯಲ್ಲಿ ಬಟ್ಟೆ ಹೊಲಿದು ಕೊಟ್ಟ ಅನುಭವ. ಆದರೆ ಈಗ ಅದೇ ಕೊಡೆ ಕಂಪನಿಗಳು ಎಷ್ಟು ಉಳಿದಿವೆ ಹುಡುಕಿನೋಡಿ.

ಹೀಗೆ ಒಂದು ಹಾಲಿನ ಮನವಿ ಪತ್ರ ನನ್ನೊಳಗೆ ಒಂದು ಕಣ್ಣನ್ನು ಕೂರಿಸಿಯೇಬಿಟ್ಟಿತು. ನನ್ನೊಳಗನ್ನು ದಿನೇ ದಿನೇ ಬದಲಿಸುತ್ತಾ ಹೋಯಿತು.

ಹಾಗೆ ಆಗುತ್ತಾ ಇರುವಾಗಲೇ ನಾನು ಕ್ಯೂಬಾಗೆ ಹೆಜ್ಜೆ ಹಾಕಿದ್ದು.

ಅಲ್ಲಿ ಫಿಡೆಲ್ ಕ್ಯಾಸ್ಟ್ರೊ ಮಾತನಾಡುತ್ತಿದ್ದರು. ಜಗತ್ತಿನ ಎಲ್ಲಾ ದೇಶಗಳ ಯುವಕರು ತುಂಬಿದ್ದ ದೊಡ್ಡ ಸಭೆ ಅದು- ಅಲ್ಲಿ ಮತ್ತೆ ಜಿಗಿದು ಬಂದದ್ದು ಹಾಲು.

ಫಿಡೆಲ್ ಭಾರವಾದ ಆದರೆ ಅಷ್ಟೇ ಗಟ್ಟಿ ದನಿಯಲ್ಲಿ ಹೇಳುತ್ತಿದ್ದರು. ‘ಪ್ರತಿಯೊಂದು ಗ್ರಾಮ್ ಹಾಲಿಗಾಗಿ ನಾನು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತೇನೆ.’ ಅರೆ! ಎಂದು ಅಚ್ಚರಿಪಡುತ್ತಿರುವಾಗಲೇ ಅವರು ಮುಂದುವರಿಸಿದ್ದರು- ‘ಪ್ರತೀ ಬಾರಿ ಮಕ್ಕಳನ್ನು ನೋಡಿದ್ದಾಗ ಅವರು ಮಹಾಯುದ್ಧದ ಮಧ್ಯೆ ನಿಂತಿದ್ದಾರೆ ಎನಿಸುತ್ತದೆ. ಹಾಲುಗಲ್ಲದ ಮಕ್ಕಳು ಯುದ್ಧದ ಮಧ್ಯೆ ಇರುವ ಯೋಧರಾಗಿ ಕಾಣುತ್ತಿದ್ದಾರೆ ಎಂದರು. ಅಮೆರಿಕಾ ವಿಧಿಸಿದ ದಿಗ್ಬಂಧನ ಕ್ಯೂಬಾದ ಮಕ್ಕಳಿಂದ ಹಾಲನ್ನು ಕಿತ್ತುಕೊಂಡಿತ್ತು. ನನ್ನೊಳಗೊಂದು ನಿಟ್ಟುಸಿರು.

ಇಷ್ಟೆಲ್ಲಾ ಆಗಿ ವರ್ಷಗಳು ಕಳೆದಿತ್ತು. ಪತ್ರಿಕೆಯಲ್ಲಿ ಕುರಿಯನ್ ಅವರ ಭಾಷಣವೊಂದು ದಾಖಲಾಗಿತ್ತು. ಏನು ಎಂದು ಬಿಡಿಸಿನೋಡಿದೆ-

‘ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಾವು ವಿದೇಶಿ ಚಾನಲ್ ಗಳನ್ನು ನೋಡಲೆಂದೋ, ಕೋಲಾ ಕುಡಿಯಲೆಂದೋ ಪ್ರಾಣ ತೆರಲಿಲ್ಲ. ಅವರು ಸೆಣೆಸಿದ್ದು, ತ್ಯಾಗ ಮಾಡಿದ್ದು ಎಲ್ಲರೂ ಏಕಾತ್ಮಕವಾಗಿ ದುಡಿದು ದೇಶವನ್ನು ಕಟ್ಟಬಲ್ಲಂತಹ ವ್ಯವಸ್ಥೆಯನ್ನು ಸೃಷ್ಟಿಸಲೆಂದು…’

ಓಹ್! ಒಂದು ಹಾಲಿನ ಹನಿ ಏನೆಲ್ಲಾ ಮಾಡಿಬಿಟ್ಟಿತು…

ದಕ್ಷತೆ ಮತ್ತು ಪರಿಣಾಮಕಾರಿತ್ವ

0

ರಘುನಂದನ್ ಎ.ಎಸ್.


ಒಮ್ಮೆ ದೋಣಿಗೆ ಬಣ್ಣ ಬಳಿಯಲು ಒಬ್ಬ ವ್ಯಕ್ತಿಯನ್ನು ಕೇಳಿದಾಗ ಅವನು ತನ್ನೊಂದಿಗೆ ಬಣ್ಣ ಮತ್ತು ಕುಂಚಗಳನ್ನು ತಂದು ಮಾಲೀಕರು ಕೇಳಿದಂತೆ ದೋಣಿಯನ್ನು ಗಾಢ ಕೆಂಪು ಬಣ್ಣ ಬಳಿಯಲು ಪ್ರಾರಂಭಿಸಿದನು.ಬಣ್ಣ ಮಾಡುವಾಗ, ದೋಣಿ ಮಧ್ಯೆ ಸಣ್ಣ ರಂಧ್ರ ಇರುವುದನ್ನು ಗಮನಿಸಿದ ಅವನು ಅದನ್ನು ಮಾಲಿಕನಿಗೆ ಹೇಳದೆಯೇ ಸರಿಪಡಿಸಿದನು.

ಬಣ್ಣದ ಕೆಲಸ ಮುಗಿದ ನಂತರ, ಅವನು ತನ್ನ ಹಣವನ್ನು ಸ್ವೀಕರಿಸಿ ಹೊರಟುಹೋದನು.ಮರುದಿನ, ದೋಣಿಯ ಮಾಲೀಕರು ಪೈಂಟರ್ ಬಳಿಗೆ ಬಂದು ಅವನಿಗೆ ದೊಡ್ಡ ಮೊತ್ತದ ಚೆಕ್ಕ್ ಒಂದನ್ನು ನೀಡಿದರು, ಇದು ಅವನ ಕೆಲಸದ ಸಂಬಳಕ್ಕಿಂತ ಅತಿ ಹೆಚ್ಚಿನದಾಗಿತ್ತು.ಆಗ ಪೈಂಟರ್ ಆಶ್ಚರ್ಯಚಕಿತನಾಗಿ, ದೋಣಿ ಪೈಂಟಿಂಗ್ಗೆ ನೀವು ಈಗಾಗಲೇ ನನಗೆ ಹಣ ನೀಡಿದ್ದೀರಿ ಈ ಹಣ ಏತಕ್ಕೆ ಎಂದಾಗ, ಮಾಲಿಕನು ಇದು ಬಣ್ಣದ ಕೆಲಸಕ್ಕಾಗಿ ಅಲ್ಲ. ಇದು ದೋಣಿಯ ರಂಧ್ರವನ್ನು ಸರಿಪಡಿಸಿದ್ದಕ್ಕಾಗಿ ಎಂದನು.ಆಗ ಪೈಂಟರ್ ಅಷ್ಟು ಸಣ್ಣ ಕೆಲಸಕ್ಕೆ ದುಬಾರಿ ಮೊತ್ತವನ್ನು ಕೊಡುವುದು ಖಂಡಿತವಾಗಿಯೂ ಅಷ್ಟು ಯೋಗ್ಯವಲ್ಲ ಎಂದನು.ಆಗ, ಮಾಲಿಕನು ವಿವರಿಸುತ್ತ, ನಾನು ನಿಮ್ಮನ್ನು ದೋಣಿಗೆ ಪೈಂಟ್ ಮಾಡಲು ಮಾತ್ರ ಹೇಳಿ, ದೋಣಿಯ ರಂಧ್ರದ ಬಗ್ಗೆ ಹೇಳುವುದನ್ನ ಮರೆತಿದ್ದೆ.ದೋಣಿಗೆ ಬಳಿದ ಬಣ್ಣ ಒಣಗಿದಾಗ, ನನ್ನ ಮಕ್ಕಳು ದೋಣಿ ತೆಗೆದುಕೊಂಡು ಮೀನು ಹಿಡಿಯಲು ಹೊರಟು ಹೋದರು.ದೋಣಿಯ ರಂಧ್ರದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ನಾನೂ ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ.ನಾನು ಹಿಂತಿರುಗಿ ಬಂದು ನೋಡಿದಾಗ ಅವರು ದೋಣಿಯನ್ನ ತೆಗೆದುಕೊಂಡು ಹೋಗಿರುವುದನ್ನ ಕೇಳಿ ಗಾಬರಿಗೊಂಡು ಭಯಬೀತನಾಗಿದ್ದೆ.ಆದರೆ ಅವರು ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗುವುದನ್ನು ನೋಡಿದಾಗ ನನ್ನ ದುಗುಡ ದೂರಾಗಿ, ಆನಂದ ಮತ್ತು ಆಶ್ಚರ್ಯದಿಂದ ದೋಣಿಯನ್ನು ನೋಡಿದಾಗ ನೀವು ರಂಧ್ರವನ್ನು ಸರಿಪಡಿಸಿದ್ರಿ.ನೀವು ನನ್ನ ಮಕ್ಕಳ ಜೀವವನ್ನು ಉಳಿಸಿದ್ದೀರಿ! ನಿಮ್ಮ ಆ ಒಂದು ‘ಸಣ್ಣ’ ಮತ್ತು ಒಳ್ಳೆಯ ಕೆಲಸ ನನ್ನ ಮಕ್ಕಳನ್ನೇ ಉಳಿಸಿತು. ಈ ಕೆಲಸಕ್ಕೆ ಬೆಲೆಕಟ್ಟುವಷ್ಟು ಹಣ ನನ್ನಲ್ಲಿಲ್ಲ. ” ಎಂದನು.
ಇದರಿಂದ ನಿನ್ನ ಕಾರ್ಯ ದಕ್ಷತೆ ಮತ್ತು ಪರಿಣಾಮಕಾರತ್ವ ಎಷ್ಟು ಎಂದು ತಿಳಿಯುತ್ತದೆ ಎಂದು ಮಾಲಿಕನು ಪೈಂಟರ್ ನ ಹೋಗಳಿದನು.ತಾತ್ಪರ್ಯ -ಯಾವುದೇ ದೋಷವಿಲ್ಲದ ಕೆಲಸ ಮಾಡುವುದು ದಕ್ಷತೆ; ನಿರೀಕ್ಷೆಗಿಂತ ಹೆಚ್ಚಿನದು ಹಾಗು ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದು ಪರಿಣಾಮಕಾರಿತ್ವ.ದಕ್ಷತೆಯು ಪ್ರಕ್ರಿಯೆಯನ್ನು ತೋರಿಸಿದರೆ, ಪರಿಣಾಮಕಾರಿತ್ವವು ಉದ್ದೇಶವನ್ನು ತೋರಿಸುತ್ತದೆ.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 25, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ಜ್ಯೇಷ್ಠ ಮಾಸ
ಋತು : ಗ್ರೀಷ್ಮ ಋತು
ಕಾಲ : ಬೇಸಿಗೆಕಾಲ
ವಾರ : ಸೋಮವಾರ
ಪಕ್ಷ : ಶುಕ್ಲಪಕ್ಷ
ತಿಥಿ : ತದಿಗೆ
(ಇಂದು ಪ್ರಾತಃಕಾಲ 1 ಗಂ॥ 0 ನಿ।। ರಿಂದ
ಮರುದಿನ ಪ್ರಾತಃಕಾಲ 1 ಗಂ॥ 16 ನಿ।। ತನಕ)
ನಕ್ಷತ್ರ : ಮೃಗಶಿರ
(ನಿನ್ನೆ ಪ್ರಾತಃಕಾಲ 4 ಗಂ॥ 53 ನಿ।। ರಿಂದ
ಇಂದು ಬೆಳಿಗ್ಗೆ 6 ಗಂ॥ 10 ನಿ।। ತನಕ)
ಯೋಗ : ಧೃತಿ
ಕರಣ : ತೈತಿಲ
ವರ್ಜ್ಯಂ : (ಇಂದು ಮಧ್ಯಾಹ್ನ 2 ಗಂ॥ 52 ನಿ।। ರಿಂದ ಇಂದು ಸಂಜೆ 4 ಗಂ॥ 31 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 8 ಗಂ॥ 40 ನಿ।। ರಿಂದ ಇಂದು ರಾತ್ರಿ 10 ಗಂ॥ 19 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 12 ಗಂ॥ 38 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 30 ನಿ।। ತನಕ)(ಇಂದು ಸಂಜೆ 3 ಗಂ॥ 15 ನಿ।। ರಿಂದ ಇಂದು ಸಂಜೆ 4 ಗಂ॥ 7 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 7 ಗಂ॥ 18 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 55 ನಿ।। ತನಕ)
ಗುಳಿಕ : (ಇಂದು ಮಧ್ಯಾಹ್ನ 1 ಗಂ॥ 50 ನಿ।। ರಿಂದ ಇಂದು ಸಂಜೆ 3 ಗಂ॥ 27 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 10 ಗಂ॥ 34 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 41 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 44 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಮಿಥುನ

ರಾಶಿ ಭವಿಷ್ಯ

ಮೇಷ ರಾಶಿ 
ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು ಮನೆಯ ಸೌಂದರ್ಯದ ಜೊತೆಗೆ ಮಕ್ಕಳ ಅಗತ್ಯಗಳನ್ನೂ ನೋಡಿಕೊಳ್ಳಿ. ಮಕ್ಕಳಿಲ್ಲದ ಮನೆಗಳು ಕ್ರಮಬದ್ಧವಾಗಿದ್ದರೂ ಕೂಡ ಆತ್ಮವಿಲ್ಲದಂತಿರುತ್ತವೆ. ಮಕ್ಕಳು ಮನೆಗಳಿಗೆ ಒಂದು ಆನಂದ ಮತ್ತು ಸಂತೋಷ ತರುತ್ತಾರೆ. ಕೆಲವರಿಗೆ ಮದುವೆಯಾಗುವ ಸಾಧ್ಯತೆಗಳು ಹಾಗೂ ಇನ್ನೂ ಕೆಲವರಿಗೆ ಪ್ರಣಯ ಕಾಲ. ನಿಮ್ಮ ಹಿರಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅದೃಷ್ಟ ಸಂಖ್ಯೆ: 2

ವೃಷಭ ರಾಶಿ
ಕುತ್ತಿಗೆ / ಬೆನ್ನಿನಲ್ಲಿ ನಿರಂತರ ನೋವಿನಿಂದ ಬಳಲುವ ಸಾಧ್ಯತೆಯಿದೆ. ವಿಶೇಷವಾಗಿ ಇದರ ಜೊತೆ ಸಾಮಾನ್ಯ ದೌರ್ಬಲ್ಯವಿದ್ದಾಗ ಇದನ್ನು ನಿರ್ಲಕ್ಷಿಸದಿರಿ. ಇಂದು ವಿಶ್ರಾಂತಿ ಬಹಳ ಪ್ರಮುಖವಾಗಿರುತ್ತದೆ. ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಪ್ರೀತಿ – ಸಾಂಗತ್ಯ ಮತ್ತು ಬಂಧ ಏರಿಕೆಯಲ್ಲಿರುತ್ತವೆ. ಅದೃಷ್ಟ ಸಂಖ್ಯೆ: 1

ಮಿಥುನ ರಾಶಿ
ನೀವು ಇದು ಒಳ್ಳೆಯ ಆರೋಗ್ಯ ಹೊಂದಿರುವುದರಿಂದ ಅದು ನಿಮಗೆ ಯಶಸ್ಸು ನೀಡುವ ಸಾಧ್ಯತೆಯಿದೆ. ಆದರೆ ನಿಮ್ಮ ಶಕ್ತಿಯನ್ನು ನಾಶಪಡಿಸುವ ಎಲ್ಲವನ್ನೂ ನೀವಿಂದು ತಪ್ಪಿಸಬೇಕು. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಇಂದಿನ ದಿನ ನೀವು ನಿಮ್ಮ ವ್ಯಾಪಾರಕ್ಕೆ ಹೊಸ ಎತ್ತರವನ್ನು ನೀಡಬಹುದು. ನಿಮ್ಮ ದಿನವನ್ನು ಎಚ್ಚರಿಕೆಯಿಂದ ಆಯೋಜಿಸಿ – ನೀವು ನಂಬಿಕೆಯಿಡಬಹುದಾದ ಜನರ ಸಹಾಯ ಪಡೆಯಲು ಅವರ ಜೊತೆ ಚರ್ಚಿಸಿ. ಅದೃಷ್ಟ ಸಂಖ್ಯೆ: 8

ಕರ್ಕ ರಾಶಿ
ನಿಮ್ಮ ಮೇಲೆ ಬಹಳಷ್ಟು ಅವಲಂಬಿಸಿರುತ್ತದೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲು ಮಾನಸಿಕ ಸ್ಪಷ್ಟತೆ ಅಗತ್ಯವಾಗಿರುತ್ತದೆ. ನಿಮ್ಮ ತಾಯಿಯ ಬದಿಯಿಂದ ಇಂದು ಹಣಕಾಸಿನ ಲಾಭವನ್ನು ಪಡೆಯುವ ಪೂರ್ಣ ಸಾಧ್ಯತೆ ಇದೆ.ನಿಮ್ಮ ಮಾಮ ಅಥವಾ ತಾತ ನಿಮಗೆ ಆರ್ಥಿಕ ಬೆಂಬಲ ಮಾಡಬಹುದು. ಅದೃಷ್ಟ ಸಂಖ್ಯೆ: 3

ಸಿಂಹ ರಾಶಿ
ಮಾತನಾಡುವ ಮುನ್ನ ಯೋಚಿಸಿ. ತಿಳಿಯದೆ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ಮಕ್ಕಳಿಗೆ ಅವರ ಮನೆಗೆಲಸ ಪೂರ್ಣಗೊಳಿಸಲು ಸಹಾಯ ಮಾಡುವ ಸಮಯ. ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ
ಅನಂತ ಜೀವನದ ಉತ್ಕೃಷ್ಟ ವೈಭವವನ್ನು ಆನಂದಿಸಲು ನಿಮ್ಮ ಜೀವನವನ್ನು ಹೆಚ್ಚು ಭವ್ಯಗೊಳಿಸಿ. ಚಿಂತೆಯ ಅನುಪಸ್ಥಿತಿ ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು ಮತ್ತು ನೀವು ಹಣದ ಲಾಭವನ್ನು ಪಡೆಯಬಹುದು. ನಿಮ್ಮ ಸಂಗಾತಿಯ ಆರೋಗ್ಯದ ನಿಮ್ಮನ್ನು ಚಿಂತೆಗೀಡುಮಾಡಬಹುದು. ಪ್ರೀತಿಯ ಸಂತೋಷವನ್ನು ಅನುಭವಿಸಬಹುದು. ಅದೃಷ್ಟ ಸಂಖ್ಯೆ: 8

ತುಲಾ ರಾಶಿ
ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ಇಂದು ಮನೆಯ ಯಾವುದೇ ಎಲೆಕ್ಟ್ರಾನಿಕ್ ಸರಕುಗಳ ಕೆಟ್ಟು ಹೋಗುವ ಕಾರಣದಿಂದಾಗಿ ನಿಮ್ಮ ಹಣ ಖರ್ಚಾಗಬಹುದು. ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ
ನಿಮ್ಮ ಉತ್ತಮ ಆರೋಗ್ಯದ ಸಲುವಾಗಿ ದೀರ್ಘ ನಡಿಗೆಗೆ ಹೋಗಿ. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ಕುಟುಂಬದ ಸದಸ್ಯರೊಂದಿಗೆ ಒಂದು ಶಾಂತಿಯುತ ಮತ್ತು ಶಾಂತ ದಿನವನ್ನು ಆನಂದಿಸಿ – ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ – ಅವರನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಮನಸ್ಸಿನಲ್ಲಿ ಈ ಚಿಂತೆ ಬೇರೂರಲು ಅವಕಾಶ ನೀಡಬೇಡಿ. ಅದೃಷ್ಟ ಸಂಖ್ಯೆ: 4

ಧನು ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ – ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ಅದೃಷ್ಟ ಸಂಖ್ಯೆ: 1

ಮಕರ ರಾಶಿ
ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಫಿಟ್ ಆಗಿ ಉಳಿಯಲು ನಿಯಮಿತವಾಗಿ ಹೆಲ್ತ್ ಕ್ಲಬ್‌ಗೆ ಭೇಟಿ ನೀಡಿ. ಬಯಸದೆ ಇರುವ ಯಾವುದೇ ಅತಿಥಿ ಇಂದು ನಿಮ್ಮ ಮನೆಗೆ ಬರಬಹುದು , ಅವರು ಬರುವುದರಿಂದಾಗಿ ನೀವು ಬರುವ ತಿಂಗಳಿಗೆ ಮುಂದೂಡಲಾಯಿಸಿರುವ ಮನೆಯ ಆ ವಸ್ತುಗಳ ಮೇಲು ಖರ್ಚು ಮಾಡಬಹುದು . ಅತಿಥಿಗಳು ಸಂಗವನ್ನು ಆನಂದಿಸಲು ಒಂದು ಅದ್ಭುತ ದಿನ. ಅದೃಷ್ಟ ಸಂಖ್ಯೆ: 1

ಕುಂಭ ರಾಶಿ
ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಹಾಗೂ ಅವು ನಿಮಗೆ ಹೊಸ ಆರ್ಥಿಕ ಲಾಭ ತರುತ್ತವೆ. ಮೊಮ್ಮಕ್ಕಳು ಅಪಾರ ಸಂತೋಷದ ಮೂಲವಾಗುತ್ತಾರೆ. ಅದೃಷ್ಟ ಸಂಖ್ಯೆ: 7

ಮೀನ ರಾಶಿ
ನಿಮ್ಮ ದೇಹದ ಪುನಃಶ್ಚೇತನಕ್ಕಾಗಿ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ನೀವು ಆಯಾಸ ಹಾಗೂ ನಿರಾಸೆಯಲ್ಲಿ ಸಿಲುಕುತ್ತೀರಿ. ಊಹೆಗಳು ಲಾಭ ತರುತ್ತವೆ. ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ. ಪ್ರಣಯದ ನೆನಪುಗಳು ನಿಮ್ಮ ದಿನವನ್ನು ಆಕ್ರಮಿಸುತ್ತವೆ. ಅದೃಷ್ಟ ಸಂಖ್ಯೆ: 5

ಮೊಬೈಲ್ ಮುಟ್ಟಿದ ತಪ್ಪಿಗೆ ಬಂತು ಕೊರೊನಾ

ಮಂಗಳೂರು: ಮೊಬೈಲ್ ಮುಟ್ಟಿದ ಕಾರಣಕ್ಕಾಗಿ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ವಿಟ್ಟದ ಪೊಲೀಸ್ ಕಾನ್ ಸ್ಟೆಬಲ್ ಸೋಂಕು ತಗುಲಿಸಿಕೊಂಡವರು.

ಮುಂಬೈನಿಂದ ಠಾಣೆಗೆ ಬಂದಿದ್ದ ವ್ಯಕ್ತಿಯೊಬ್ಬನ ವಿವರ ಪಡೆಯುವಾಗ ಅವರ ಮೊಬೈಲ್ ತೆಗೆದುಕೊಂಡು ನೋಡಿದ್ದರು.

ಆ ವ್ಯಕ್ತಿಗೆ ಕೊರೊನಾ ಇರುವುದು ನಂತರ ದೃಢಪಟ್ಟಿತ್ತು. ಸಂಪರ್ಕಕ್ಕೆ ಬಂದಿದ್ದ ಕಾನ್ ಸ್ಟೆಬಲ್ ಅವರನ್ನು ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಿದೆ.

ತುರುವೇಕೆರೆಗೆ ಹೇಮಾವತಿ ನೀರು; ಸಿಎಂಗೆ ಶಾಸಕ ಜಯರಾಮ್ ಅಭಿನಂದನೆ

ತುರುವೇಕೆರೆ : ತಾಲ್ಲೂಕಿನ ಗಡಿಭಾಗದ ಎ.ಹೊಸಹಳ್ಳಿ ಸಮೀಪದ ಡಿ.8 ನಾಲೆಯ ಮೂಲಕ ಹೇಮಾವತಿ ನಾಲಾ ನೀರು ಭಾನುವಾರ ಹರಿಯುತ್ತಿದ್ದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಬಿನಂಧನೆ ಸಲ್ಲಿಸುವುದಾಗಿ ಶಾಸಕ ಮಸಾಲ ಜಯರಾಮ್ ತಿಳಿಸಿದರು.

ಪೂರ್ವ ಮುಂಗಾರು ತೀವ್ರವಾಗಿ ಕ್ಷೀಣಿಸುತ್ತಿರುವುದರಿಂದ ಮಳೆಯಿಲ್ಲದೆ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ತುಂಬಾ ಬಿಗಡಾಯಿಸಿದೆ. ಇದೇ ರೀತಿ ಜಿಲ್ಲೆಯಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾದ್ದರಿಂದ ಜಿಲ್ಲೆಗೆ ಬಾಕಿ ಇರುವ 6 ಟಿಎಂಸಿ ನೀರ ಬಿಡುವಂತೆ ನಾನೂ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಒಟ್ಟುಗೂಡಿ ಈಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಜಿಲ್ಲೆಗೆ ಬಾಕಿ ಇರುವ ಹೇಮೆ ನೀರನ್ನು ಬಿಡುವಂತೆ ಕಳಕಳಿಂದ ಮನವಿ ಮಾಡಿಕೊಂಡ ಫಲವಾಗಿ ಇಂದು ತಾಲ್ಲೂಕಿನ ಮೂಲಕ ಹೇಮೆಯ ನೀರು ಹರಿದು ರೈತರಲ್ಲಿ ಸಂತಸ ಉಂಟು ಮಾಡಿದೆ ಎಂದರು.

ಕ್ಷೇತ್ರದಾದ್ಯಂತ ಈಗಾಗಲೇ ಕುಡಿಯುವ ನೀರಿಗಾಗಿ ಹತ್ತಾರು ಕೊಳವೆ ಬಾವಿ ಕೊರೆಯಿಸಿದರೂ ವಿಫಲವಾಗುತ್ತಿವೆ. ತಾಲ್ಲೂಕಿಗೆ ಹೇಮೆ ನೀರು ಹರಿದರೆ ನಾಲಾ ವ್ಯಾಪ್ತಿಯ ಕೆರೆಕಟ್ಟೆಗಳು ತುಂಬಿ ಅಂರ್ತಜಲ ವೃದ್ದಿಯಾಗುತ್ತದೆ ಹಾಗು ತಾಲ್ಲೂಕಿನ ರೈತರ ಕೊಳವೆಬಾವಿಗಳಲ್ಲಿಯೂ ಉತ್ತಮ ನೀರು ಸಂಗ್ರಹವಾಗುತ್ತದೆ. ಮೊದಲ ಆದ್ಯತೆಯಲ್ಲಿ ತುಮಕೂರಿಗೆ ನೀರು ಹರಿದ ನಂತರ ತುರುವೇಕೆರೆ ತಾಲ್ಲೂಕಿಗೆ ಜೂನ್.4ರಿಂದ 13ರವರೆಗೆ ನೀರು ಹರಿಯಲಿದೆ ಎಂದರು.