Friday, May 8, 2026
Google search engine
Home Blog Page 225

ತುಮಕೂರಿನಲ್ಲಿ‌ ಸಾರಿಗೆ ಬಸ್ ಆರಂಭ

Publicstory. in


Tumkuru: ಸತತ ಮೂರು ಲಾಕ್ ಡೌನ್ ಬಳಿಕ ಇಂದು ಸಾರಿಗೆ ಬಸ್ ಗಳು ರಸ್ತೆಗಿಳಿದು ಸಂಚಾರ ಆರಂಭಿಸಿದೆ.ತುಮಕೂರಿನಲ್ಲಿ ಮುಂಜಾನೆಯಿಂದಲೇ ಬಸ್ ಸಂಚಾರ ಆರಂಭವಾಗಿದ್ದು,,ಒಂದು ಬಸ್‌ನಲ್ಲಿ 30 ಜನರಂತೆ ,ಎಲ್ಲಾ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳೊಂದಿಗೆ ಬಸ್ ಸಂಚಾರ ಶುರುವಾಗಿದೆ.ತುಮಕೂರಿನಲ್ಲಿ ಇಂದು 150 ಬಸ್ ಗಳು ರಸ್ತೆಗಳಿದಿದ್ದು,ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಪ್ರಯಾಣಿಕರ ಅನುಗುಣದಂತೆ ಬಸ್ ಸಂಚರಿಸಲಿದೆ.ಬಹುತೇಕ ಬೆಂಗಳೂರಿಗೆ ತೆರಳೋ ಪ್ರಯಾಣಿಕರೇ ಹೆಚ್ಚಾಗಿದ್ದು, ಎಲ್ಲಾ ಪ್ರಯಾಣಿಕರ ಡಿಟೈಲ್ಸ್ ಪಡೆದು ಬಳಿಕ ಸ್ಯಾನಿಟೈಸರ್ ಹಾಕಿ ಬಸ್ ಒಳಗೆ ಬಿಡಲಾಗ್ತಿದೆ..

ಎಸ್ಎಸ್ ಎಲ್ ಸಿ  ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

ಬೆಂಗಳೂರು:- ಎಸ್ಎಸ್ ಎಲ್ ಸಿ  ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾ ಪಟ್ಟಿಯನ್ನು ಸೋಮವಾರ  ಪ್ರಾಥಮಿಕ ಮತ್ತು ಫ್ರೌಢ‌ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದರು.    

ಜೂನ್ 25 ರಿಂದ ಜುಲೈ 4 ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಇಂಗ್ಲೀಷ್‌ ಪರೀಕ್ಷೆಯನ್ನು ಜೂನ್‌ 18 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ರಾಜ್ಯಾದ್ಯಂತ 2879 ಪರೀಕ್ಷಾ ಕೇಂದ್ರಗಳು, 43,720 ಕೊಠಡಿಗಳಲ್ಲಿ  ನಡೆಸಲಾಗುವುದು. ಪ್ರತಿ ವಿದ್ಯಾರ್ಥಿ ಗೆ ಮಾಸ್ಕ್ ಕಡ್ಡಾಯ. ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ವತಿಯಿಂದ ಮಾಸ್ಕ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

‌    ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಹಾಗೂ ಪರೀಕ್ಷಾ ಕೊಠಡಿಗಳ ಸಂಪೂರ್ಣ ಸ್ಯಾನಿಟೈಸೇಷನ್ ಗೆ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ  ಎಂಟು ಲಕ್ಷದ ನಲವತ್ತೆಂಟು‌ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪುನರ್ ಮನನ ಕಾರ್ಯಕ್ರಮ ಮಾಡಲಾಗುತ್ತಿದ್ದು ಇದು ಈ ತಿಂಗಳ ಅಂತ್ಯದವರೆಗೆ ಮುಂದುವರೆಯಲಿದೆ ಎಂದು ತಿಳಿಸಿದರು.

ಬಸ್ ಸಂಚಾರಕ್ಕೆ ಅವಕಾಶ; ಮೇ 31 ರವರೆಗೆ ಲಾಕ್ ಡೌನ್ ವಿಸ್ತರಣೆ

ಪಬ್ಲಿಕ್ ಸ್ಟೋರಿ: ಮೇ-18 ರಿಂದ 4 ನೇ ಹಂತದ  ಲಾಕ್ ಡೌನ್ ಮುಂದುವರೆಯಲಿದೆ. ಲಾಕ್ ಡೌನ್ ನಿಯಮಾವಳಿಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ  ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಕಂಟೈನ್​ಮೆಂಟ್​​ ಝೋನ್​ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಾನೂನು ಮೀರಿದರೆ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲಾಗುವುದು. ಸಂಚಾರಕ್ಕೆ ಅನುಕೂಲ ಕಲ್ಪಿಸಲು ಷರತ್ತುಗಳನ್ನು ವಿಧಿಸಿ   ಬಿಎಂಟಿಸಿ, ಕೆಎಸ್​ಆರ್​ಟಿಸಿ, ಖಾಸಗಿ  ಬಸ್​​ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದು   ತಿಳಿಸಿದ್ದಾರೆ.

ಲಾಕ್​ಡೌನ್ 4 ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ  ಸಚಿವ ಸಂಪುಟದ ಸದಸ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಒಂದು ಬಸ್​ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್​  ಧರಿಸಬೇಕು. ಮಾಸ್ಕ್​ ಹಾಕದೇ ಇದ್ದರೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್​​   ಮುಂದುವರಿಸಲು ನಿರ್ಧರಿಸಲಾಗಿದೆ. ಮೇ 31ರವರೆಗೂ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗುಜರಾತ್ ಜನತೆಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ  ಎಂದು ತಿಳಿಸಿದರು.

ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅವರಿಗೂ ಮಾಸ್ಕ್​ ಕಡ್ಡಾಯಗೊಳಿಸಲಾಗಿದೆ. ನಾಳೆಯಿಂದ ಮಾಲ್​​, ಸಿನಿಮಾ ಥಿಯೇಟರ್, ಹೋಟೆಲ್​ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ರಾಜ್ಯದೊಳಗೆ ಓಡಾಡಲು ರೈಲುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹೊರ ರಾಜ್ಯಗಳಿಂದ ರೈಲೆ ಸಂಚಾರಕ್ಕೆ  ಅವಕಾಶ ಇಲ್ಲ ಎಂದು ತಿಳಿಸಿದರು.

ಸಲೂನ್​   ತೆರೆಯಲು ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ಭಾನುವಾರ   ಸಂಪೂರ್ಣ ​ ಲಾಕ್​ಡೌನ್​ ಇರುತ್ತದೆ. ಬೆಳಗ್ಗೆ 7 ರಿಂದ 9 ಹಾಗೂ ಸಾಯಂಕಾಲ 5 ರಿಂದ 7ಗಂಟೆ ವರೆಗೆ ಎಲ್ಲ ಪಾರ್ಕ್​ಗಳಲ್ಲಿ ಓಡಾಡಲು  ಅವಕಾಶ ನೀಡಲಾಗಿದೆ. ಬಸ್​​ ಟಿಕೆಟ್ ಧರ  ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು  ಹೇಳಿದರು.

ನಿಮ್ಮ ಕೂದಲಿಗೆ ಚಿನ್ನದ ರೇಟ್ ಇದೆ..

ಜಿ ಎನ್ ಮೋಹನ್


ಮೊನ್ನೆ ಕೂದಲಿಲ್ಲದವರ ಕಥೆ ಬರೆದೆ.
ಈಗ ಕೂದಲಿನದ್ದೇ ಕಥೆ..
——

‘ಬೆಟ್ಟದ ಮೇಲಿನ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು’ ಇದಕ್ಕೆ ಒಂದು ಉದಾಹರಣೆ ಕೊಡಿ ನೋಡೋಣ ಎಂದೆ.

ಎದುರಿಗಿದ್ದವರು ‘ಸಂವಾದ’ದ ವಿದ್ಯಾರ್ಥಿಗಳು. ಹೇಳಿ ಕೇಳಿ ಸಂವಾದ ನಡೆಸುವುದರ ಮೂಲಕವೇ ಸಮಾಜವನ್ನು ಅರಿಯಲು ಯತ್ನಿಸುತ್ತಿದ್ದವರು.

ನನ್ನ ಪ್ರಶ್ನಾರ್ಥಕ ನೋಟ ಎಲ್ಲೆರೆಡೆಗೆ ಹೊರಳುತ್ತಿದ್ದಂತೆಯೇ ಮೂಲೆಯಲ್ಲಿದ್ದ ನಾಗರಾಜ್ ಹಾಗೂ ಭವ್ಯ ‘ತಿರುಪತಿ ಹಾಗೂ ಹಾಲಿವುಡ್’ ಎಂದು ಉತ್ತರಿಸಿದರು.

ನನ್ನ ಪ್ರಶ್ನೆಗೆ ಹಲವಾರು ರೀತಿಯ ಉತ್ತರ ಖಂಡಿತಾ ಬರುತ್ತದೆ ಎಂದು ಗೊತ್ತಿತ್ತು ಆದರೆ ಈ ರೀತಿಯ ಉತ್ತರಕ್ಕಂತೂ ನಾನು ಸಜ್ಜಾಗಿರಲಿಲ್ಲ.

ನನ್ನ ಪ್ರಶ್ನೆಗೂ ಈ ಉತ್ತರಕ್ಕೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ? ಎನಿಸಿತು.

ಅದು ಹೇಗೆ? ಎನ್ನುವ ನನ್ನ ಪ್ರಶ್ನೆಯನ್ನು ಅರ್ಥ ಮಾಡಿಕೊಂಡವರಂತೆ ಆ ಇಬ್ಬರೂ ‘ಹಾಲಿವುಡ್ ನ ಬಹುತೇಕ ಎಲ್ಲ ನಟ ನಟಿಯರ ತಲೆಯಲ್ಲಿ ಇರುವುದು ತಿರುಪತಿಯ ಕೂದಲು’ ಎಂದರು.

ನೀವು ಒಂದು ಫಿಲಂ ಹೆಸರು ಹೇಳಿ, ನಾವು ಆ ಸಿನೆಮಾದ ಯಾವ ನಟರ ತಲೆಯಲ್ಲಿ ತಿರುಪತಿ ಕೂದಲು ಇದೆ ಅಂತ ಹೇಳ್ತೀವಿ’ ಅಂದರು.

ಸುಮ್ಮನೆ ಕಾಗಕ್ಕ ಗೂಬಕ್ಕನ ಕಥೆ ಹೇಳ್ಬೇಡಿ ಎನ್ನುವ ಪರಿಸ್ಥಿತಿಯಲ್ಲಂತೂ ನಾನಿರಲಿಲ್ಲ

ಏಕೆಂದರೆ ಅವರು ಕಳೆದ ವಾರವಷ್ಟೇ ಕೊಪ್ಪಳದ ಮೂಲೆ ಮೂಲೆ ತಿರುಗಿ ಬಂದಿದ್ದರು. ಕೂದಲು ಆಯುವವರಿಂದ ಹಿಡಿದು ಕೂದಲು ಫ್ಯಾಕ್ಟರಿ ಮಾಲೀಕರವರೆಗೆ ಅನೇಕರನ್ನು ಭೇಟಿಯಾಗಿದ್ದರು.

ಕೂದಲು ಕೊಡುವವರು, ಕೊಳ್ಳುವವರು, ಪರಿಷ್ಕರಿಸುವವರು, ಎಲ್ಲೆಲ್ಲಿಗೋ ಕಳಿಸುವವರು ಎಲ್ಲರನ್ನೂ ಮಾತನಾಡಿಸಿ ಬಂದಿದ್ದರು. ಅವರು ಹೊತ್ತು ತಂದಿದ್ದ ಫೋಟೋಗಳು, ವಿಡಿಯೋಗಳು ಈ ಎಲ್ಲಕ್ಕೂ ಸಾಕ್ಷ್ಯ ನುಡಿಯುತ್ತಿತ್ತು.

ತಿರುಪತಿಯಲ್ಲಿ 600ಕ್ಕೂ ಹೆಚ್ಚು ಕ್ಷೌರಿಕರಿದ್ದಾರೆ. ಹಲವಾರು ಬೃಹತ್ ಕೊಠಡಿಗಳಲ್ಲಿ ಹರಡಿಕೊಂಡಿರುವ ಇವರು ಪ್ರತೀ ದಿನ ಸಾವಿರಾರು ಭಕ್ತರ ತಲೆಗೂದಲನ್ನು ಸವರಿಹಾಕುತ್ತಾರೆ.

ದೇವರಿಗೆ ಮುಡಿ ಕೊಡಬೇಕೆಂದರೆ ಟೋಕನ್ ಪಡೆದು ಏನಿಲ್ಲೆಂದರೂ ಐದು ಗಂಟೆ ಸರತಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ.

ಒಂದು ದಿನದಲ್ಲಿ ಕೂದಲಿನ ಬೆಟ್ಟವೇ ಬೆಳೆದು ನಿಲ್ಲುತ್ತದೆ. ಇಲ್ಲಿ ಕೂದಲು ನೆಲಕ್ಕೆ ಬೀಳುತ್ತಿದ್ದಂತೆಯೇ ಅದನ್ನು ಗುಡಿಸಿ ತೆಗೆಯುವ ನೌಕರರೂ ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಮೂಗಿಗೆ ಬಟ್ಟೆ ಕಟ್ಟಿಕೊಂಡು ಹಾಜರಾಗುವ ಈ ನೌಕರರು ಕೂದಲನ್ನು ಒಟ್ಟು ಮಾಡಿ ಬೃಹದಾಕಾರದ ಗೋಡೌನ್ ಗಳಲ್ಲಿ ಶೇಖರಿಸುತ್ತಾರೆ.

ಇದು ಒಂದು ದಿನದ ಕಥೆ. ಹಾಗೆ ವರ್ಷವಿಡೀ ಸಂಗ್ರಹವಾಗುವ ಕೂದಲು ನಂತರ ಏನಾಗುತ್ತದೆ?.

‘ಇದು ಚಿನ್ನ, ಕಪ್ಪು ಚಿನ್ನ’ ಅಂತ ಉದ್ಘರಿಸಿದ್ದು ಅಮೇರಿಕಾ.
ತಿರುಪತಿಗೆ ಹೋಗಿ ಕೇಜಿಗಟ್ಟಲೆ ಚಿನ್ನ ಕೊಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆವರು ಸಾಕಷ್ಟು ಸುದ್ದಿಯೂ ಆಗುತ್ತಿದ್ದಾರೆ.

ಆದರೆ ಅದೇ ತಿರುಪತಿಯಿಂದ ಕೇಜಿಗಟ್ಟಲೆ ‘ಕಪ್ಪು ಚಿನ್ನ’ ಫ್ಯಾಶನ್ ಜಗತ್ತಿನ ಮಡಿಲು ಸೇರುತ್ತಿದೆ.

ಫ್ಯಾಶನ್ ಜಗತ್ತಿನಲ್ಲಿ ಕೇವಲ ಕೂದಲೊಂದೇ ಇಂದು 900 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ.

ಇದು ಖಂಡಿತಾ ಚಿನ್ನವೇ ಎಂದು ಗೊತ್ತಾಬೇಕಾದರೆ ತಿರುಪತಿಯಲ್ಲಿ ನಡೆಯುವ ಈ ಕೂದಲಿನ ಹರಾಜನ್ನೊಮ್ಮೆ ನೋಡಬೇಕು.

ಜಗತ್ತಿನ ಅತ್ಯಂತ ಪ್ರತಿಷ್ಠಿತ ಫ್ಯಾಶನ್ ಸಂಸ್ಥೆಗಳಿಗೆ ಕೂದಲು ಒದಗಿಸಲು ಹರಾಜು ಕೂಗುವವರು ಇಲ್ಲಿ ಪೈಪೋಟಿಗೆ ಬೀಳುತ್ತಾರೆ.

’ಅಮೆರಿಕದವನು ಭೂಮಂಡಲದ ಚೆಂಡನ್ನು ಎತ್ತ ಒದ್ದರೂ ಗೋಲ್ ಅವನದೇ..’ ಎಂದು ಎಲ್ ಬಸವರಾಜು ಬರೆದಿದ್ದರು. ಆದರೆ ಕೂದಲಿನ ವಿಚಾರದಲ್ಲಿ ಮಾತ್ರ ಅದು ಸುಳ್ಳು. ಎಲ್ಲಾ ವಿಚಾರದಲ್ಲೂ ಅಮೇರಿಕಾ ಜಗತ್ತಿನ ದೊಡ್ದಣ್ಣನಾಗಿರಬಹುದು. ಆದರೆ ಕೂದಲಿನ ವಿಚಾರ ಬಂದಾಗ ಮಾತ್ರ ಭಾರತದ ಕೂದಲು ಒಮ್ಮೆ ಅಮೆರಿಕಾದ ಕಡೆಗೆ ಹೋಗದೆ ನಿಂತುಬಿಟ್ಟರೆ ಅಮೆರಿಕಾದ ಅನೇಕರ ತಲೆ ಭೂಮಂಡಲದ ಚೆಂಡಿನಂತೆಯೇ ಬೋಳಾಗಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಅಮೇರಿಕಾ ಮಾತ್ರವಲ್ಲ, ಇಂಗ್ಲೆಂಡ್, ಇಟಲಿ, ಫ್ರಾನ್ಸ್,,ಆಫ್ರಿಕಾ, ಆಸ್ಟ್ರೇಲಿಯಾ ದೇಶಗಳ ತಲೆಯೂ ಬೋಳಾಗಬೇಕಾದ ಸ್ಥಿತಿ ಇದೆ.

ಭಾರತದ ಕೂದಲಿಗೆ ಈ ಬೇಡಿಕೆ ಬಂದದ್ದಾದರೂ ಹೇಗೆ?

ಇಡೀ ಜಗತ್ತಿನ ಫ್ಯಾಶನ್ ಕೈಗಾರಿಕೆ ಶರವೇಗದಲ್ಲಿ ಬೆಳೆಯುತ್ತಿದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಹುಚ್ಚು ಎಲ್ಲರಿಗೂ ಬಹುತೇಕ ತಗುಲಿಕೊಂಡ ನಂತರ ಅಂಟಿಕೊಂಡಿರುವ ಇನ್ನೊಂದು ಹುಚ್ಚು ದಿನಕ್ಕೊಂದರಂತೆ ಕೂದಲಿನ ವೇಷ ಬದಲಿಸಿಕೊಳ್ಳುವುದು. ಇದ್ದ ಕೂದಲಿನ ಜೊತೆಗೆ ಇನ್ನೂ ಹಲವು ರೀತಿಯ ಕೂದಲನ್ನು ಸೇರಿಸಿ ದಿನಕ್ಕೊಂದು ರೀತಿಯಂತೆ ಕಾಣಿಸಿಕೊಳ್ಳುವ ಫ್ಯಾಶನ್ ಹೆಚ್ಚುತ್ತಿದೆ. ಅದು ಹೆಚ್ಚಾದಷ್ಟೂ ಕೂದಲಿಗೂ ಇನ್ನಿಲ್ಲದ ಬೇಡಿಕೆ ಹೆಚ್ಚುತ್ತಿದೆ.

ಆದರೆ ಕೂದಲು ಸಹಾ ಕಿಡ್ನಿ, ರಕ್ತದಂತೆ ಬೇಕೆಂದಾಗ ಸೃಷ್ಟಿಸಲು ಸಾಧ್ಯವಿಲ್ಲವಲ್ಲ. ಹಾಗಾಗಿ ಹೊಸ ಹೊಸ ರೀತಿಯ ಫ್ಯಾಶನ್ ಬೆಳೆಯುತ್ತಾ ಅದಕ್ಕೆ ಬೇಕಾದ ಕೂದಲಿನ ಪೂರೈಕೆ ಬೆಳೆಯದೆ ಹೋದ ಕಾರಣ ಕೂದಲಿಗೆ ಚಿನ್ನದ ಬೆಲೆ ಬಂತು.

ಎಲ್ಲಾ ರಂಗದಲ್ಲೂ ಇಣುಕಿ ಒಂದು ಕೈ ನೋಡೇಬಿಡುವ ಎನ್ನುವ ಚೈನಾ ಇಲ್ಲೂ ಸಹಾ ಹೆಜ್ಜೆ ಹಾಕಿತು. ಕೃತಕ ಸಿಂಥೆಟಿಕ್ ಕೂದಲನ್ನು ತಯಾರು ಮಾಡಿ ಫ್ಯಾಶನ್ ಜಗತ್ತನ್ನು ಗೆದ್ದುಕೊಂಡೂಬಿಟ್ಟಿತು. ಆದರೆ ಒಂದಷ್ಟು ವರ್ಷ ಅಷ್ಟೇ. ಈ ಕೃತಕ ಕೂದಲು ಒರಟು ಅನಿಸಿದ್ದಷ್ಟೇ ಅಲ್ಲ, ಅದನ್ನು ಗುಂಗುರಾಗಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಗೊತ್ತಾಗಿ ಹೋಯಿತು.

ಅಸಾಧ್ಯ ಸೆಖೆ ಜೊತೆಗೆ ಚರ್ಮದ ಅಲರ್ಜಿ ಸಹಾ ಇದಕ್ಕೆ ಪೆಟ್ಟು ನೀಡಿತು. ಅದನ್ನು ನೀಟಾಗಿ ಸಂಬಾಳಿಸುವುದೇ ದೊಡ್ಡ ಕೆಲಸ ಅನಿಸಿಬಿಟ್ಟಿತು. ಹಾಗಾಗಿ ದಿಡ್ಹೀರನೆ ಮೇಲಕ್ಕೇರಿದ ಕೃತಕ ಕೂದಲು ಹಾಗೆಯೇ ನೆಲ ಕಚ್ಚಿತು.

ಈ ಮಧ್ಯೆ ಚೈನಾ ತನ್ನ ದೇಶದವರ ನೈಜ ಕೂದಲನ್ನೇ ಸರಬರಾಜು ಮಾಡಲು ಆರಂಭಿಸಿತು. ಚೈನಾ ಕೂದಲು ದಪ್ಪ ಎಂದು ಫ್ಯಾಶನ್ ಇಂಡಸ್ಟ್ರಿ ಮುಖ ತಿರುಗಿಸಿ ಕುಳಿತುಬಿಟ್ಟಿತು.

ಭಾರತದ ಕೂದಲಿನ ಕೋಮಲತೆಯೇ ಜಗತ್ತಿನ ಮನಸ್ಸನ್ನು ಸೆಳೆದುಬಿಟ್ಟಿದೆ.

ಭಾರತದ ಕೂದಲು ಎಷ್ಟು ಕೋಮಲವೆಂದರೆ ಅದನ್ನು ಹೇಗೆ ಬೇಕಾದರೂ ಬಗ್ಗಿಸಬಹುದು, ಒಗ್ಗಿಸಿಕೊಳ್ಳಬಹುದು ಎನ್ನುವುದು ಫ್ಯಾಶನ್ ಜಗತ್ತಿಗೆ ಗೊತ್ತಾಗಿಬಿಟ್ಟಿದೆ.

ಈ ಕೂದಲಿಗಿರುವ ಕಡುಗಪ್ಪು ಬಣ್ಣ, ಈ ಕೂದಲಿನ ಉದ್ದವೇ ಜಗತ್ತಿನ ಪೈಪೋಟಿಯನ್ನು ಮೆಟ್ಟಿ ನಿಲ್ಲಲು ಕಾರಣವಾಗಿರುವುದು.

ಭಾರತದ ಕೂದಲನ್ನು ಜಗತ್ತಿನ ಫ್ಯಾಶನ್ ಇಂಡಸ್ಟ್ರಿ ‘ವರ್ಜಿನ್ ಹೇರ್’ ‘ರೆಮಿ ಹೇರ್’ ಎಂದೇ ಗುರುತಿಸುತ್ತದೆ.

ಕೂದಲನ್ನು ಮೊದಲ ಬಾರಿ ಕತ್ತರಿಸಿರುವುದು ಒಂದು ಅಂಶವಾದರೆ, ಕೂದಲ ಬುಡದಿಂದಲೇ ಕತ್ತರಿಸುವುದು ಇನ್ನೊಂದು ಕಾರಣ. ತಿರುಪತಿಯಂತಹ ದೇವಸ್ಥಾನದಲ್ಲಿ ಮುಡಿ ಕೊಡುವವರು ಕೂದಲನ್ನು ಡೈ ಮಾಡಿಸಿಕೊಳ್ಳದಿರುವವರು ಎನ್ನುವ ಅಂಶ ಸಹಾ ಮನಸ್ಸು ಗೆಲ್ಲಲು ಕಾರಣ. ಇನ್ನೂ ಎಷ್ಟೋ ಜನ ಸೀಗೆ ಕಾಯಿ ಬಳಸುತ್ತಾರೆಯೇ ಹೊರತು ಶಾಂಪೂ ಬಳಸುವುದಿಲ್ಲ ಎನ್ನುವುದೂ ಭಾರತದ ಕೂದಲಿಗೆ ಜಗತ್ ಮನ್ನಣೆ ಸಿಗಲು ಇರುವ ಕಾರಣಗಳು

ಹಾಗಾದರೆ ಜಗತ್ತಿನಲ್ಲಿ ಭಾರತದಂತಹ ಒಳ್ಳೆಯ ಕೂದಲೇ ಇಲ್ಲವೇ?

ಇದೆ. ಯೂರೋಪಿನ ಹಲವು ದೇಶಗಳ ಕೂದಲು ಭಾರತದ ಕೂದಲಿಗೆ ಪೈಪೋಟಿ ನೀಡುವಂತೆಯೇ ಇದೆ. ಆದರೆ ಜಗತ್ತು ಈ ಕೂದಲನ್ನು ‘ನೈತಿಕ ಕೂದಲು’ ಎಂದು ಭಾವಿಸಿಲ್ಲ.

ಆಶ್ಚರ್ಯ ಆದರೂ ನಿಜ.

ಕೂದಲ ಲೋಕದಲ್ಲೂ ನೈತಿಕ, ಅನೈತಿಕ ಎನ್ನುವ ಬೇಧವಿದೆ.

ಯೂರೋಪಿನಿಂದ ಬರುವ ಕೂದಲಿನ ಬಗ್ಗೆ ಫ್ಯಾಶನ್ ಕೈಗಾರಿಕೆಗೆ ಭಾರೀ ಸಂಶಯವಿದೆ. ಜೈಲುಗಳಲ್ಲಿರುವ ಕೈದಿಗಳ ಕೂದಲನ್ನು ಕತ್ತರಿಸಿ, ಇಲ್ಲವೇ ರಸ್ತೆಯಲ್ಲಿ ಆಕ್ರಮಣ ಮಾಡಿ ಕೂದಲು ಎಗರಿಸಿ, ಬೆದರಿಸಿ ಕೂದಲು ಹರಣ ಮಾಡುವ ದಂಧೆಯೇ ಇದೆ. ಹಾಗಾಗಿ ಈ ಕೂದಲು ಸಾಕಷ್ಟು ಚೆನ್ನಾಗಿದ್ದರೂ ಅದು ಯಾವ ಮೂಲದ್ದೋ ಎನ್ನುವ ಸಂಶಯವೂ ಇದೆ.

ಇದರ ಜೊತೆಗೆ ಯುರೋಪಿಯನ್ನರು ಶಾಂಪೂ, ಹೇರ್ ಡೈ ಬಳಸುವುದರಿಂದ ಬೇಡಿಕೆ ಕಡಿಮೆ. ಭಾರತದ ಪರಿಸ್ಥಿತಿ ಹಾಗಲ್ಲ. ಇಲ್ಲಿನ ಬಹುತೇಕ ಕೂದಲು ಬರುವುದು ತಿರುಪತಿಯಿಂದ ಇಲ್ಲವೇ ತಮಿಳುನಾಡಿನ ಮುರುಗ ದೇವಸ್ಥಾನಗಳಿಂದ. ಹಾಗಾಗಿ ಇಲ್ಲಿನ ಕೂದಲು ನೈತಿಕವಾದದ್ದು ಎನ್ನುವ ಗೌರವವಿದೆ.

ಭಾರತದ ಕೂದಲಿನ ಕೈಗಾರಿಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ.

ಸುಮಾರು 25 ಲಕ್ಷ ಮಂದಿ ಈ ಕೂದಲ ಕೈಗಾರಿಕೆಯಲ್ಲಿದ್ದಾರೆ.

ತಿರುಪತಿಯೊಂದರಲ್ಲೇ ಒಂದು ತಿಂಗಳಿಗೆ 1 ಲಕ್ಷ ಪೌಂಡ್ ಕೂದಲು ಶೇಖರವಾಗುತ್ತದೆ ಎನ್ನುವುದು ಭಾರತದ ಕೂದಲಿನ ಕೈಗಾರಿಕೆಯ ಅಗಾಧತೆಗೆ ಕನ್ನಡಿ.

ಅಮೇರಿಕಾ ಕಳೆದ ವರ್ಷ 47 ಮಿಲಿಯನ್ ಡಾಲರ್ ಮೌಲ್ಯದ ಕೂದಲನ್ನು ಆಮದುಮಾಡಿಕೊಂಡಿದೆ. ಬ್ರಿಟನ್ ನಲ್ಲಿ ಕಳೆದ 5 ವರ್ಷಗಳಲ್ಲಿ ಕೂದಲ ಮಾರುಕಟ್ಟೆ ಶೇಖಡಾ 70ರಷ್ಟು ವೇಗವಾಗಿ ಬೆಳೆದಿದೆ. ದೆಹಲಿ, ಮದ್ರಾಸ್, ಬೆಂಗಳೂರಿನಲ್ಲಿ ತಲೆ ಎತ್ತಿರುವ ಕೂದಲು ಸಂಗ್ರಹ ಕೇಂದ್ರಗಳು, ಶುದ್ಧೀಕರಣ ಘಟಕಗಳು ಜಗತ್ತಿನ ಕೂದಲು ಕೈಗಾರಿಕೆ ಬೆಳೆಯುತ್ತಿರುವ ರೀತಿಯನ್ನು ತೋರಿಸುತ್ತದೆ.

ಸರಿ ಹಾಗಾದರೆ ನೀವು ಕೊಪ್ಪಳಕ್ಕೆ ಹೋಗಿದ್ದು ಏಕೆ? ಎಂದೆ.

ನಾಗರಾಜ್, ಭವ್ಯ ಕೂದಲಿನ ಇನ್ನೊಂದು ಲೋಕವನ್ನು ಬಿಚ್ಚಿಡುತ್ತಾ ಹೋದರು.

ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಕೂದಲು ಕೊಳ್ಳುವವರು ಬರುತ್ತಾರೆ. ಬಾಚಣಿಗೆಯನ್ನೋ, ಹೇರ್ ಕ್ಲಿಪ್ ಅನ್ನೋ ನೀಡಿ ಮನೆಯವರು ಕೂದಲು ಬಾಚುವಾಗ ಉದುರಿದ ಕೂದಲನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರಿದ್ದಾರೆ ಚಿಂದಿ ಆಯುವವರು. ಅವರು ಪ್ರತೀ ದಿನಾ ಕಸದ ತೊಟ್ಟಿಯನ್ನು ಕೆದರಿ ಅಲ್ಲಿ ಕೂದಲು ಹೆಕ್ಕುತ್ತಾರೆ.

ಈ ಎಲ್ಲವೂ ನಂತರ ಕೂದಲು ಕೈಗಾರಿಕೆ ಇರುವವರ ಬಳಿ ಬರುತ್ತದೆ. ಅದನ್ನು ತೊಳೆದು, ನೇರ ಮಾಡಿ, ಒಣಗಿಸಿ ಇಡುತ್ತಾರೆ ಈ ಕೂದಲು ಸೇರುವುದು ಆಫ್ರಿಕಾದ ದೇಶಗಳನ್ನು. ಆ ನಂತರವೂ ಉಳಿಯುವ ಕೂದಲನ್ನು ತೋಟಕ್ಕೆ ಬೇಕಾದ ಗೊಬ್ಬರವಾಗಿ, ಇಲ್ಲವೇ ಆಹಾರ ಪದಾರ್ಥಗಳಿಗೆ ಬೇಕಾದ ಅಗತ್ಯ ವಸ್ತುಗಳಾಗಿ ಬದಲಾಗುತ್ತವೆ.

ಎಲ್ಲಿಯ ಕೂದಲು? ಎಲ್ಲಿಯ ಆಹಾರವಪ್ಪಾ? ಎನಿಸಿತು.

ಗೂಗಲ್ ಮೊರೆ ಹೊಕ್ಕೆ.

ಬ್ರೆಡ್ ಮಾಡಲು L-Cystine ಎಂಬ ಅಮಿನೊ ಆಸಿಡ್ ಆಗಿ ಕೂದಲನ್ನು ಪರಿವರ್ತಿಸಲಾಗುತ್ತದೆ ಎಂಬ ಮಾಹಿತಿ ಹೊರಬಿತ್ತು.

ಒಂದು ಕೂದಲಿನಲ್ಲಿ ಎಷ್ಟೆಲ್ಲಾ ಅಡಗಿದೆ, ಒಂದೇ ಒಂದು ಕೂದಲಿನಲ್ಲಿ…ಅನಿಸಿತು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 18, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಸೋಮವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಏಕಾದಶಿ
(ನಿನ್ನೆ ಬೆಳಿಗ್ಗೆ 12 ಗಂ॥ 44 ನಿ।। ರಿಂದ
ಇಂದು ಸಂಜೆ 3 ಗಂ॥ 8 ನಿ।। ತನಕ)
ನಕ್ಷತ್ರ : ಉತ್ತರಾಭಾದ್ರೆ
(ನಿನ್ನೆ ಮಧ್ಯಾಹ್ನ 2 ಗಂ॥ 0 ನಿ।। ರಿಂದ
ಇಂದು ಸಂಜೆ 4 ಗಂ॥ 58 ನಿ।। ತನಕ)
ಯೋಗ : ಪ್ರೀತಿ
ಕರಣ : ಬಾಲವ
ವರ್ಜ್ಯಂ : (ಇಂದು ಪ್ರಾತಃಕಾಲ 0 ಗಂ॥ 47 ನಿ।। ರಿಂದ ಇಂದು ಪ್ರಾತಃಕಾಲ 2 ಗಂ॥ 34 ನಿ।। ತನಕ)
ಅಮೃತಕಾಲ : (ಇಂದು ಬೆಳಿಗ್ಗೆ 11 ಗಂ॥ 34 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 21 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 12 ಗಂ॥ 37 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 28 ನಿ।। ತನಕ)(ಇಂದು ಸಂಜೆ 3 ಗಂ॥ 13 ನಿ।। ರಿಂದ ಇಂದು ಸಂಜೆ 4 ಗಂ॥ 4 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 7 ಗಂ॥ 20 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 57 ನಿ।। ತನಕ)
ಗುಳಿಕ : (ಇಂದು ಮಧ್ಯಾಹ್ನ 1 ಗಂ॥ 49 ನಿ।। ರಿಂದ ಇಂದು ಸಂಜೆ 3 ಗಂ॥ 26 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 10 ಗಂ॥ 34 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 43 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 41 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಮೀನ

ಮೇಷ ರಾಶಿ ಭವಿಷ್ಯ : 18 May 2020
ವಿಶೇಷವಾಗಿ ತಿರುವುಗಳಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಿ. ಬೇರೆಯವರ ಉದಾಸೀನತೆ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನಾಳೆ ಬಹಳ ತಡವಾಗಬಹುದಾದ್ದರಿಂದ ಇಂದು ನಿಮ್ಮ ದೀರ್ಘಕಾಲದ ಜಗಳವನ್ನು ಪರಿಹರಿಸಿಕೊಳ್ಳಿ. ಅದೃಷ್ಟ ಸಂಖ್ಯೆ: 3

ವೃಷಭ ರಾಶಿ ಭವಿಷ್ಯ :18 May 2020
ನೀವು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದಲ್ಲಿ ಖಿನ್ನತೆಗೊಳಗಾಗಬೇಡಿ. ಆಹಾರದ ಸ್ವಾದಕ್ಕೆ ಉಪ್ಪು ಬೇಕಾದ ಹಾಗೆ ಅತೃಪ್ತಿಯಿಂದ ಮಾತ್ರ ನೀವು ಸಂತೋಷದ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಕೆಲವು ಸಾಮಾಜಿಕ ಸಮಾರಂಭಗಳಿಗೆ ಹಾಜರಾಗಿ. ಇಂದು ನಿಮ್ಮ ಕಚೇರಿಯ ಸಹೋದ್ಯೋಗಿ ನಿಮ್ಮ ಅಮೂಲ್ಯವಾದ ವಸ್ತುವನ್ನು ಕದಿಯಬಹುದು, ಆದ್ದರಿಂದ ಇಂದು ನೀವು ನಿಮ್ಮ ವಸ್ತುವನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು. ಅದೃಷ್ಟ ಸಂಖ್ಯೆ: 2

ಮಿಥುನ ರಾಶಿ ಭವಿಷ್ಯ : 18 May 2020
ತೊಂದರೆಗಳ ಬಗ್ಗೆ ಚಿಂತಿಸುವ ಮತ್ತು ಅವುಗಳನ್ನು ದೊಡ್ಡದಾಗಿಸುವ ನಿಮ್ಮ ಸ್ವಭಾವ ನಿಮ್ಮ ನೈತಿಕತೆಯನ್ನು ದುರ್ಬಲಗೊಳಿಸಬಹುದು. ನೀವು ನಿಮ್ಮ ಮನೆಯ ಯಾವುದೇ ಸದಸ್ಯರಿಂದ ಹಣವನ್ನು ಸಾಲ ತೆಗೆದುಕೊಂಡಿದ್ದರೆ ಅದನ್ನು ಇಂದು ಮರುಪಾವತಿಸಿ ಇಲ್ಲದಿದ್ದರೆ ನಿಮ್ಮ ವಿರುದ್ಧವಾಗಿ ಕಾನೂನು ಪ್ರಕರಣ ಮಾಡಬಹುದು. ಕಿರಿಯ ಸಹೋದರ ಅಥವಾ ಸಹೋದರಿ ನಿಮ್ಮ ಸಲಹೆ ಪಡೆಯಸಬಹುದು. ಪ್ರೀತಿಪಾತ್ರರು ಇಂದು ನಿಮ್ಮ ಯಾವುದೇ ಮಾತಿನಿಂದ ಕೋಪಗೊಳ್ಳಬಹುದು. ಅದೃಷ್ಟ ಸಂಖ್ಯೆ: 9

ಕರ್ಕ ರಾಶಿ ಭವಿಷ್ಯ : 18 May 2020
ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಇಂದಿನವರೆಗೂ ಅಗತ್ಯವಿಲ್ಲದೆ ಹಣವನ್ನು ಖರ್ಚು ಮಾಡುತ್ತಿದ್ದ ಜನರು, ಇಂದು ಅವರು ತನ್ನನ್ನು ನಿಯಂತ್ರಿಸಬೇಕು ಮತ್ತು ಹಣವನ್ನು ಉಳಿಸಬೇಕು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ – ಇವು ನಿಮ್ಮ ಮನಸ್ಸಿನ ಮೇಲೆ ಒತ್ತಡ ತರುತ್ತವೆ. ಅದೃಷ್ಟ ಸಂಖ್ಯೆ: 4

ಸಿಂಹ ರಾಶಿ ಭವಿಷ್ಯ : 18 May 2020
ನೀವು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಇಂದು ಅಸಾಮಾನ್ಯವಾದದ್ದೇನಾದರೂ ಸಾಧಿಸುತ್ತೀರಿ. ಇಂದು ನೀವು ಭೂಮಿ, ವಸತಿ, ಅಥವಾ ಸಾಂಸ್ಕೃತಿಕ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು. ಮಕ್ಕಳು ಅವರ ವೃತ್ತಿಯನ್ನು ಯೋಜಿಸುವುದಕ್ಕಿಂತ ಹೆಚ್ಚಾಗಿ ಹೊರಾಂಗಣ ಚಟುವಟಿಕೆಗಳಲ್ಲೇ ಸಮಯ ಕಳೆಯುವುದರಿಂದ ಅವರು ನಿರಾಸೆ ಉಂಟುಮಾಡಬಹುದು. ವೈಯಕ್ತಿಕ ಮಾರ್ಗದರ್ಶನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಅದೃಷ್ಟ ಸಂಖ್ಯೆ: 2

ಕನ್ಯಾ ರಾಶಿ ಭವಿಷ್ಯ : 18 May 2020
ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಅವಧಿ ಮಂದವಾಗಿರುವುದರಿಂದ ನೀವು ತಿನ್ನುವುದರ ಬಗೆಗೆ ಜಾಗರೂಕರಾಗಿರಿ. ನೀವು ವಿಪರೀತವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ನಿಮ್ಮ ಹಣವು ನಿಮ್ಮ ಕೆಲಸಕ್ಕೆ ಬರುತ್ತದೆ, ಇಂದು ನೀವು ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ. ವೈಯಕ್ತಿಕ ಮಾರ್ಗದರ್ಶನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಅದೃಷ್ಟ ಸಂಖ್ಯೆ: 1

ತುಲಾ ರಾಶಿ ಭವಿಷ್ಯ : 18 May 2020
ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಭಿನ್ನಾಭಿಪ್ರಾಯಗಳ ಕಾರಣ ವೈಯಕ್ತಿಕ ಸಂಬಂಧದಲ್ಲಿ ಬಿರುಕು ಬಿಡಬಹುದು. ಮೊದಲಿನಿಂದ ಕೊನೆಯವರೆಗೂ ದಿನವು ನಿಮ್ಮನ್ನು ಕೆಲಸದಲ್ಲಿ ಚೈತನ್ಯದಾಯಕವಾಗಿಡುತ್ತದೆ. ಅದೃಷ್ಟ ಸಂಖ್ಯೆ: 3

ವೃಶ್ಚಿಕ ರಾಶಿ ಭವಿಷ್ಯ : 18 May 2020
ನಿಮಗೇನು ಒಳ್ಳೆಯದೆಂದು ನಿಮಗೆ ಮಾತ್ರ ಗೊತ್ತು – ಆದ್ದರಿಂದ ಧೃಢವಾಗಿರಿ ಮತ್ತು ಧೈರ್ಯಶಾಲಿಗಳಾಗಿರಿ ಮತ್ತು ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಿ ಹಾಗೂ ಫಲಿತಾಂಶಗಳಿಗೆ ಸಿದ್ಧವಾಗಿರಿ. ಯಾರಿಂದಲೂ ಸಲಹೆಯನ್ನು ತೆಗದುಕೊಳ್ಳದೆ ನೀವು ಹಣವನ್ನು ಎಲ್ಲಿಯೂ ಹೂಡಿಕೆ ಮಾಡಬಾರದು. ಅನಿರೀಕ್ಷಿತ ಅತಿಥಿಗಳು ಸಂಜೆ ನಿಮ್ಮ ಮನೆಯಲ್ಲಿ ತುಂಬಿರುತ್ತಾರೆ. ನೀವು ಇಂದು ನಿಮ್ಮ ಸಿಹಿಯಾದ ಪ್ರೀತಿಯ ಜೀವನದಲ್ಲಿನ ಉತ್ಕಟತೆಯನ್ನು ಆನಂದಿಸುತ್ತೀರಿ. ಅದೃಷ್ಟ ಸಂಖ್ಯೆ: 5

ಧನು ರಾಶಿ ಭವಿಷ್ಯ : 18 May 2020
ನಿಮ್ಮ ಭರವಸೆ ಒಂದು ಸಮೃದ್ಧ, ಸೂಕ್ಷ್ಮ ಪರಿಮಳಯುಕ್ತ ಮತ್ತು ಬೆರಗುಗೊಳಿಸುವ ಹೂವಿನ ಹಾಗೆ ಅರಳುತ್ತದೆ. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ನೀವು ಕಾಳಜಿ ವಹಿಸುವ ಯಾರಾದರ ಜೊತೆಗಿನ ಸಂವಹನದ ಕೊರತೆ ನಿಮಗೆ ಖಿನ್ನತೆಯನ್ನು ಉಂಟುಮಾಡುತ್ತದೆ. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ಇದು ಒಂದು ಅನುಕೂಲಕರವಾದ ದಿನ, ಕೆಲಸದಲ್ಲಿ ಇದನ್ನು ಸೂಕ್ತವಾಗಿ ಬಳಸಿಕೊಳ್ಳಿ. ಅದೃಷ್ಟ ಸಂಖ್ಯೆ: 2

ಮಕರ ರಾಶಿ ಭವಿಷ್ಯ : 18 May 2020
ಅನಿರೀಕ್ಷಿತ ಪ್ರಯಾಣದಿಂದ ಸುಸ್ತಾಗಬಹುದು ಹಾಗೂ ಇದು ನಿಮ್ಮನ್ನು ಕರಿಕಿರಿಗೊಳ್ಳುವಂತೆ ಮಾಡಬಹುದು. ಸ್ನಾಯುಗಳಿಗೆ ಆರಾಮ ನೀಡಲು ನಿಮ್ಮ ದೇಹವನ್ನು ತೈಲದಿಂದ ಮಸಾಜ್ ಮಾಡಿ ಭೂಮಿಯನ್ನು ಖರೀದಿಸಿದ ಮತ್ತು ಈಗ ಅದನ್ನು ಮಾರಾಟ ಮಾಡಲು ಬಯಸುವ ಜನರು ಇಂದು ಉತ್ತಮ ಖರೀದಿದಾರರನ್ನು ಕಾಣಬಹುದು ಮತ್ತು ಭೂಮಿಯನ್ನು ಮಾರಾಟ ಮಾಡುವ ಮೂಲಕ ಅವರು ಉತ್ತಮ ಹಣವನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ: 2

ಕುಂಭ ರಾಶಿ ಭವಿಷ್ಯ :18 May 2020
ನಿಮ್ಮ ದಿಟ್ಟ ಮತ್ತು ನಿರ್ಭಯ ಅಭಿಪ್ರಾಯಗಳು ನಿಮ್ಮ ಸ್ನೇಹಿತನ ಅತ್ಮಗೌರವವನ್ನು ಹಾನಿ ಮಾಡಬಹುದು. ನಕ್ಷತ್ರಪುಂಜಗಳ ಚಾಲನೆ ನಿಮಗಾಗಿ ಉತ್ತಮವಾಗಿಲ್ಲ. ಇಂದಿನ ದಿನ ನೀವು ನಿಮ್ಮ ಹಣವನ್ನು ತುಂಬಾ ಸುರಕ್ಷಿತವಾಗಿಡಬೇಕು. ತಪ್ಪು ಸಮಯದಲ್ಲಿ ತಪ್ಪು ವಿಷಯಗಳನ್ನು ಹೇಳದಿರಲು ಪ್ರಯತ್ನಿಸಿ – ನೀವು ಪ್ರೀತಿಸುವವರನ್ನು ನೋಯಿಸದಂತೆ ಎಚ್ಚರ ವಹಿಸಿ. ಅದೃಷ್ಟ ಸಂಖ್ಯೆ: 9

ಮೀನ ರಾಶಿ ಭವಿಷ್ಯ : 18 May 2020
ನಿರಾಶಾದಾಯಕ ಮನೋಭಾವವು ಕೇವಲ ನಿಮ್ಮ ಅವಕಾಶಗಳನ್ನು ಸೀಮಿತಗೊಳಿಸುವುದಷ್ಟೇ ಅಲ್ಲದೇ ದೇಹದ ಸಾಮರಸ್ಯವನ್ನೂ ಭಂಗಪಡಿಸುವುದರಿಂದ ಅವುಗಳನ್ನು ತಡೆಯಬೇಕು. ನೀವು ನಿಮ್ಮ ಇಂದಿನ ದಿನವನ್ನು ಉತ್ತಮಗೊಳಿಸಲು ಕಳೆದ ದಿನಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ, ಅದರ ಪ್ರಯೋಜನವನ್ನು ಇಂದು ನೀವು ಪಡೆಯಬಹುದು. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಂಡು ನೀವು ಒಳೆಯದನ್ನು ಅನುಭವಿಸಬಹುದು ಆದರೆ ಕೊಲವೊಮ್ಮೆ ನೀವು ನಿಮ್ಮ ಅಹಂಕಾರವನ್ನು ಮುಂದೆ ಇಟ್ಟುಕೊಂಡು ಕುಟುಂಬ ಸದಸ್ಯರಿಗೆ ಪ್ರಮುಖ ವಿಷಯಗಳನ್ನು ಹೇಳುವುದಿಲ್ಲ. ನೀವು ಹಾಗೆ ಮಾಡಬಾರದು. ಅದನ್ನು ತೊಂದರೆ ಇನ್ನಷ್ಟು ಹೆಚ್ಚಾಗುತ್ತದೆ ಕಡಿಮೆಯಾಗುವುದಿಲ್ಲ. ಅದೃಷ್ಟ ಸಂಖ್ಯೆ: 6

ಹೆಚ್ಚುತ್ತಿರುವ ಕೊರೊನಾ: ಲಾಕ್ ಡೌನ್ ವಿಸ್ತರಣೆ: ಸಿಎಂ ನಾಳೆ ಸಭೆ

Publicstory. in


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,147ಕ್ಕೇರಿಕೆ.
ರಾಜ್ಯದಲ್ಲಿ ಇಂದು ಹೊಸದಾಗಿ 55 ಮಂದಿಗೆ ಸೋಂಕು.
ದಕ್ಷಿಣ ಕನ್ನಡ 2, ಉಡುಪಿಯ ಓರ್ವರಿಗೆ ಸೋಂಕು ದೃಢ.
ಮಂಡ್ಯ 22, ಕಲಬುರಗಿ 10, ಹಾಸನ 6, ಧಾರವಾಡ 4.
ಕೋಲಾರ ಮತ್ತು ಯಾದಗಿರಿಯಲ್ಲಿ ತಲಾ 3 ಕೇಸ್.
ಶಿವಮೊಗ್ಗ 2, ಉಡುಪಿ 1, ವಿಜಯಪುರ 1 ಸೋಂಕು ಪತ್ತೆ.

ಉತ್ತರ ಕನ್ನಡ ಜಿಲ್ಲೆಯ ಓರ್ವನಿಗೆ ಕೊರೊನಾ ಸೋಂಕು ಪತ್ತೆ.
ರಾಜ್ಯದಲ್ಲಿ 1,147 ಪೈಕಿಯಲ್ಲಿ 509 ಮಂದಿ ಗುಣಮುಖ.

ರಾಜ್ಯದಲ್ಲಿ ಇದುವರೆಗೆ ಕೊರೊನಾ ಸೋಂಕಿಗೆ 37 ಮಂದಿ ಬಲಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ.

ಸೋಮವಾರ ಡಿಸಿಎಂಗಳ ಜೊತೆ ಸಿಎಂ ಬಿಎಸ್‌ವೈ ಸಭೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಕುರಿತು ಚರ್ಚೆ.
ಸಲೂನ್, ಸ್ಪಾ ಬಗ್ಗೆ ಮಾರ್ಗಸೂಚಿಯಲ್ಲಿ ಪ್ರಸ್ತಾಪವಿಲ್ಲ.
ಸಲೂನ್ ಓಪನ್ ಬಗ್ಗೆ ಮಾರ್ಗಸೂಚಿಯಲ್ಲಿ ಗೊಂದಲ.

ಸಲೂನ್ ಶಾಪ್ ತೆಗೆಯುವ ಬಗ್ಗೆ ನಿರ್ಧಾರ
ಬ್ಯೂಟಿ ಪಾರ್ಲರ್ ಓಪನ್ ಮಾಡುವ ಬಗ್ಗೆಯೂ ನಿರ್ಧಾರ.

ಬಸ್ ಸಂಚಾರಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ.

ಬಸ್ ಸಂಚಾರದ ಬಗ್ಗೆ ಸೋಮವಾರ ಯಡಿಯೂರಪ್ಪರಿಂದ ಸಭೆ.
ಬಸ್, ಆಟೋ ಓಡಾಟದ ಬಗ್ಗೆ ಸಿಎಂ ಸಭೆ.

ಮೇ 31ರ ವರೆಗೆ ಲಾಕ್ ಡೌನ್. ಸಿನಿಮಾ, ಹೋಟೆಲ್, ಶಾಲೆ ಇಲ್ಲ

New Delhi: ದೇಶಾದ್ಯಂತ ಮೇ 31ರ ವರೆಗೆ ಲಾಕ್ ಡೌನ್ ವಿಸ್ತರಣೆ.
ಮುಂದಿನ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ.
ಇಂದು ಮಧ್ಯರಾತ್ರಿಯಿಂದ ಲಾಕ್‌ಡೌನ್ 4.0 ಜಾರಿ.
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ವಿಸ್ತರಣೆ.
ದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಸ್ತರಣೆ.
ಮಾರ್ಗ ಸೂಚಿ ಹೊರಡಿಸಿದ ಕೇಂದ್ರ ಗೃಹ ಇಲಾಖೆ.
4ನೇ ಹಂತದ ಲಾಕ್‌ಡೌನ್ ವಿಸ್ತರಿಸಿದ ಕೇಂದ್ರ ಸರ್ಕಾರ.

ಏನು ಹೇಳುತ್ತೆ ಮಾರ್ಗಸೂಚಿ


ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಕಠಿಣ ನಿಯಮ ಜಾರಿ.
ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ.
ಹೋಟೆಲ್&ರೆಸ್ಟೋರೆಂಟ್ ಚಿತ್ರಮಂದಿರಗಳು ಬಂದ್.
ವಾಹನಗಳಲ್ಲಿ ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ.
ರಾತ್ರಿ 7ರಿಂದ ಬೆಳಗ್ಗೆ 7ರ ವರೆಗೆ ಸಂಚಾರಕ್ಕೆ ನಿರ್ಬಂಧ.
60 ವರ್ಷ ಮೇಲ್ಪಟ್ಟವರೂ ಮನೆಯಲ್ಲೇ ಇರಬೇಕು.
ಶಾಲಾ-ಕಾಲೇಜು ಬಂದ್, ಮೆಟ್ರೋ ಸಂಚಾರ ಇರುವುದಿಲ್ಲ.
ಝೋನ್‌ಗಳ ಗಡಿಯಲ್ಲಿ ಜಿಲ್ಲಾಡಳಿತಗಳೇ ನಿರ್ಧರಿಸಬೇಕು.
ಮನೆಮನೆಗೆ ತೆರಳಿ ಆರೋಗ್ಯ ಸರ್ವೇ ಮಾಡಬೇಕೆಂದು ಸೂಚನೆ.
ಆರೋಗ್ಯ ಸೇತು ಆ್ಯಪ್ ಬಳಸುವುದು ಕಡ್ಡಾಯ.
ರಾಜ್ಯದೊಳಗೆ ಸಾರಿಗೆ ವ್ಯವಸ್ಥೆಯ ಬಗ್ಗೆ ರಾಜ್ಯಗಳೇ ನಿರ್ಧರಿಸಬೇಕು.
ಬಫರ್ ಝೋನ್ ವ್ಯಾಪ್ತಿಯ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಲಿ.
ರಾಜ್ಯ ಸರ್ಕಾರಗಳು ಪರಿಸ್ಥಿತಿ ಅವಲೋಕಿಸಿ ನಿರ್ಬಂಧ ವಿಧಿಸಬಹುದು.
ಅಂತ್ಯಸಂಸ್ಕಾರದಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ.
ಎಲ್ಲಾರು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಬೇಕು.
ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲ.
ರೆಡ್, ಆರೆಂಜ್, ಗ್ರೀನ್ ಬಗ್ಗೆ ಜಿಲ್ಲಾಡಳಿದಿಂದ ನಿರ್ಧಾರ.
ಗೂಡ್ಸ್, ಕಾರ್ಗೋ ಟ್ರಕ್‌ಗಳ ಓಡಾಟಕ್ಕೆ ಅವಕಾಶ ಕೊಡಬೇಕು.
ಜಿಮ್, ಫಿಟ್ನೆಸ್ ಸೆಂಟರ್‌ಗಳನ್ನು ತೆರೆಯಲು ಅವಕಾಶ ಇಲ್ಲ.
ಎಲ್ಲಾ ಜಿಲ್ಲಾಡಳಿತಗಳು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಂಚಾರಕ್ಕೆ ನಿರ್ಬಂಧವಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ತಂಬಾಕು, ಮದ್ಯ ಸೇವೆನೆಗೆ ಅವಕಾಶವಿಲ್ಲ.
ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್‌ಗೆ ಉತ್ತೇಜನ ನೀಡಬೇಕು.
ಸಾರ್ವಜನಿಕ ಅಥವಾ ಕೆಲಸದ ಸ್ಥಳದಲ್ಲಿ ಉಗುಳಿದರೆ ದಂಡ.
ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದರೆ ಒಂದು ವರ್ಷ ಜೈಲು ಶಿಕ್ಷೆ.
ವಿಪತ್ತು ನಿರ್ವಹಣಾ ಕಾಯ್ದೆಯಡಿ ಜೈಲು ಶಿಕ್ಷೆ
ಮದುವೆ ಸಮಾರಂಭಕ್ಕೆ 50 ಜನ ಪಾಲ್ಗೊಳ್ಳಲು ಅವಕಾಶ.
ಕ್ರೀಡಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ಅನುಮತಿ.
ಸರ್ಕಾರಿ ಕಚೇರಿಗಳನ್ನು ತೆರೆಯಲು ಕೇಂದ್ರ ಅನುಮತಿ.
ಸಾರ್ವಜನಿಕ ಸಭೆ, ಸಮಾರಂಭಕ್ಕೆ ಅವಕಾಶವಿಲ್ಲ.
ಮಾಲ್, ವಿಮಾನಯಾನ ಸಂಚಾರಕ್ಕೂ ನಿರ್ಬಂಧ.
10 ವರ್ಷದೊಳಗಿನವರು ಮನೆಯಿಂದ ಹೊರಗೆ ಬರುವಂತಿಲ್ಲ.
ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ.

ಕೊರೊನಾ: ತುಮಕೂರಿನಲ್ಲಿ ಇನ್ನೂ ಬರಬೇಕಾಗಿದೆ 650 ಮಂದಿ ವರದಿ

Publicstory.in


Tumkuru: ಜಿಲ್ಲೆಯಲ್ಲಿ ಶಂಕಿತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಭಾನುವಾರ ಒಂದೇ ದಿನ 304 ಜನರ ಸ್ಯಾಬ್ ಪರೀಕ್ಷೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಹನ್ನೊಂದು ಮಂದಿಗೆ ದೃಢಪಟ್ಟಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.‌ ಇಬ್ಬರು ಗುಣಮುಖರಾಗಿ ಮನೆ ಸೇರಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿರುವ ಜಿಲ್ಲಾಡಳಿತ ಮನೆ ಮನೆ ಸಮೀಕ್ಷೆ ಆರಂಭಿಸಿದೆ.

ಅನುಮಾನ ಬಂದವರ ರಕ್ತ, ಸ್ಯಾಬ್ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಟೆಸ್ಟ್ ಸಂಖ್ಯೆ ಹೆಚ್ಚಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಒಂದು ಪಾಸಿಟಿವ್ ಬಾರದೇ ಇರುವುದು ಸಮಾಧಾನ ತಂದಿದೆ.

ಪರೀಕ್ಷೆಗೆ ಕಳುಹಿಸಿರುವ ವರದಿಗಳ ಫಲಿತಾಂಶ ನೋಡಬೇಕಾಗಿದೆ.

ಲಾಕ್ ಡೌನ್ ಸಡಿಲ ಗೊಳಿಸಿರುವ ಹಿನ್ನೆಲೆಯಲ್ಲಿ ಜನರು ಮತ್ತಷ್ಟು ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

_ಇಲ್ಲಿಯವರೆಗೆ ಪರೀಕ್ಷೆ ಮಾಡಿದ 6000ಕ್ಕೂ ಹೆಚ್ಚಿನ ಜನರಲ್ಲಿ ನೆಗಟಿವ್ ಬಂದಿದೆ.

ವೈದ್ಯರ ಸಲಹಾ ಚೀಟಿಯಿಲ್ಲದೆ ಜ್ವರ, ಶೀತ, ಕೆಮ್ಮು, ಸಾರಿ ಹಾಗೂ ಐಎಲ್‍ಐಗೆ ಸಂಬಂಧಪಟ್ಟಂತಹ ಯಾವುದೇ ಔಷಧಗಳನ್ನು ವಿತರಣೆ/ಮಾರಾಟ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‍ಕುಮಾರ್ ಔಷಧ ವ್ಯಾಪಾಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾ ಔಷಧ ವ್ಯಾಪಾರಸ್ಥರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುನ್ನಚ್ಚರಿಕಾ ಕ್ರಮವಾಗಿ ಮೆಡಿಕಲ್ ಸ್ಟೋರ್‍ಗಳಲ್ಲಿ ಔಷಧಿ ಕೊಳ್ಳಲು ಬರುವ ರೋಗಿ ಮತ್ತು ಅವರನ್ನು ತಪಾಸಣೆ ಮಾಡಿರುವ ವೈದ್ಯರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಬೇಕು. ಅಲ್ಲದೇ ಈ ಮಾಹಿತಿಯನ್ನು ಸರ್ಕಾರ ನೀಡಿರುವ ವೆಬ್‍ಸೈಟ್‍ನಲ್ಲಿ ನಮೂದಿಸಬೇಕೆಂದು ಅವರು ನಿರ್ದೇಶನ ನೀಡಿದರು.

ವೈದ್ಯರ ಸಲಹಾ ಚೀಟಿಯಿಲ್ಲದೇ ಔಷಧಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದ್ದಲ್ಲಿ ಅಂತಹವರ ವಿರುದ್ಧ ಎಪಿಡೆಮಿಕ್ ಆಕ್ಟ್ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಿ ಪರವಾನಗಿಗಳನ್ನು ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ನಿಯಂತ್ರಿಸಲು ಜನತೆ ಸಹಕಾರ ಅಗತ್ಯ

ಪಾವಗಡ: ಕೋವಿಡ್ 19 ಸಮಸ್ಯೆ ತ್ವರಿತವಾಗಿ ಮುಕ್ತಾಯವಾಗುವ ಸೂಚನೆಗಳಿಲ್ಲ. ಹೀಗಾಗಿ ದೈನಂದಿನ ಚಟುವಟಿಕೆಗಳೊಂದಿಗೆ ಕೊರೊನಾ ನಿಯಂತ್ರಿಸಲು ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಡಿವೈಎಸ್ ಪಿ ಪ್ರವೀಣ್ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಹೆಲ್ಫ್ ಸೊಸೈಟಿ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಜನತೆ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಗಾಗ ಸ್ಯಾನಿಟೈಸರ್ ಅಥವಾ ಸೋಪಿನಿಂದ ಕೈ ತೊಳೆಯುತ್ತಿಬೇಕು. ಕನಿಷ್ಠ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಆ ಮೂಲಕ ಕೋವಿಡ್ 19 ನಿಯಂತ್ರಿಸಬಹುದು ಎಂದರು.

ಮಧುಗಿರಿ ಉಪವಿಭಾಗದಲ್ಲಿ ಕೊರೊನಾ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಮಧುಗಿರಿ, ಪಾವಗಡ ತಾಲ್ಲೂಕು ಗಡಿ ಹಂಚಿಕೊಂಡಿರುವ ಆಂಧ್ರದ ಅನಂತಪುರಜಿಲ್ಲೆಯಲ್ಲಿ ಹೆಚ್ಚಿನ ಜನರಿಗೆ ಸೊಂಕು ಹರಡಿದೆ. ಮಡಕಶಿರಾ, ಕಲ್ಯಾಣದುರ್ಗ, ಹಿಂದೂಪುರದ ಜನರೊಂದಿಗೆ ತಾಲ್ಲೂಕಿನ ಜನತೆ ಒಡನಾಟ ಹೊಂದಿದ್ದಾರೆ. ಕೊರೊನಾ ನಿಯಂತ್ರಿಸಲು ಆಂಧ್ರದ ಜನತೆ ಒಳ ಬರದಂತೆ ತಡೆಯಲು ಎಲ್ಲರು ಸಹಕಾರ ನೀಡಬೇಕು ಎಂದರು.

ಇತರೆ ರಾಜ್ಯಗಳಿಂದ ಯಾರಾದರೂ ಬಂದಲ್ಲಿ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು.  ಗುಜರಾತ್ ನಿಂದ ಬಂದಿದ್ದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು ಹೀಗಾಗಿ ತಾಲ್ಲೂಕಿನ ಜನತೆ  ಭಯಪಡಬೇಕಿಲ್ಲ ಎಂದರು.

ಡಿವೈ ಎಸ್ ಪಿ ಪ್ರವೀಣ್,  ಸರ್ಕಲ್ ಇನ್ ಸ್ಪೆಕ್ಟರ್ ನಾಗರಾಜು, ಸಬ್ ಇನ್ ಸ್ಪೆಕ್ಟರ್ ನಾಗರಾಜು, ರಾಮಯ್ಯ, ರಾಮಕೃಷ್ಣಪ್ಪ, ಸಿಬ್ಬಂದಿಗೆ ಶಾಲು ಹೊದಿಸಿ, ಹೂ ಚೆಲ್ಲಿ ಅಭಿನಂದಿಸಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಪುರಸಭೆ ಸದಸ್ಯ ಗೊರ್ತಿ ನಾಗರಾಜು, ಅನಿಲ್ ಕುಮಾರ್, ಗೌತಮ್, ರಂಜಿತ್ ಕುಮಾರ್, ಕಾರ್ತಿಕ್ ಸಾಗರ, ಶ್ರವಣ್ ಇದ್ದರು.

ರೇವತಿಯ ‘ಬೊಗಸೆಯಲ್ಲಿ ಮಳೆ’

ಜಿ ಎನ್ ಮೋಹನ್


‘ನನ್ನ ಕೈನಲ್ಲಿ ಡ್ರೈವಿಂಗ್ ಲೈಸೆನ್ಸ್ ಇತ್ತು’ ಎಂದು ಆಕೆ ಹೇಳುವಾಗ ಆ ಮಾತಿನೊಳಗೆ ಇನ್ನಿಲ್ಲದ ಸಂಭ್ರಮ ಮನೆ ಮಾಡಿತ್ತು.

ಜಗತ್ತು ಗೆದ್ದ ಭಾವನೆಯಿತ್ತು. ಆಕಾಶದ ಚಂದ್ರಮನನ್ನು ಕೈಗೆಟುಕಿಸಿಕೊಂಡ ಉಲ್ಲಾಸವಿತ್ತು.

ಆಕೆಯ ಕಣ್ಣುಗಳಲ್ಲಿ ನಾನು ಇಣುಕಿ ನೋಡಿದಾಗ ಇನ್ನೂ ಆ ನಕ್ಷತ್ರಗಳು ಉಳಿದುಕೊಂಡಿದ್ದವು.

ನಾನು ‘ಒಂದು ಡ್ರೈವಿಂಗ್ ಲೈಸೆನ್ಸ್ ಸಿಕ್ಕರೆ ಇಷ್ಟೊಂದು ಸಂಭ್ರಮಾನಾ..?’ ಎಂದು ಅಪ್ಪಿತಪ್ಪಿಯೂ ಕೇಳಲಿಲ್ಲ

ಏಕೆಂದರೆ ನನ್ನ ಎದುರು ನಿಂತಿದ್ದದ್ದು- ರೇವತಿ.

‘ನಾನೇನು ಉಗ್ರವಾದಿಯಾ ಲೈಸೆನ್ಸ್ ಕೊಡದೇ ಇರೋದಿಕ್ಕೆ’ ಅಂತ ಮೇಜನ್ನು ಕುಟ್ಟಿ ಕೇಳಿದ್ದು ಇದೇ ರೇವತಿ ಅಲಿಯಾಸ್ ದೊರೈರಾಜ್

‘ಹೌದು ನಾನು ದೊರೈರಾಜ್ ಆಗಿದ್ದೆ. ಈಗ ರೇವತಿ. ನಾನು ಹೀಗೆ ಕಾನೂನುಬದ್ಧವಾಗಿ ಬದಲಾಗಿದ್ದೇನೆ ಎನ್ನುವುದಕ್ಕೆ ಬೇಕಾದ ಎಲ್ಲಾ ದಾಖಲೆ ನಿಮ್ಮ ಮುಂದಿಟ್ಟಿದ್ದೇನೆ ಆದರೂ ನೀವು ಲೈಸೆನ್ಸ್ ಕೊಡಲ್ಲ ಅಂದರೆ ಏನರ್ಥ. ಹುಷಾರು ನಾನು ಮೀಡಿಯಾ ಬಳಿ ಹೋಗ್ತೀನಿ’ ಎಂದು ರೇವತಿ ದನಿ ಎತ್ತರಿಸಿದಾಗ ನಿಜಕ್ಕೂ ಮದ್ರಾಸಿನ ಆರ್ ಟಿ ಓ ಕಚೇರಿ ದಂಗು ಬಡಿದಿತ್ತು.

‘ಇಂತ ಕೇಸ್ ನಮ್ಮ ಬಳಿ ಬಂದೇ ಇಲ್ಲ’ ಎಂದು ಲೈಸೆನ್ಸ್ ಅಪ್ಲಿಕೇಶನ್ ಅನ್ನು ಮುಖಕ್ಕೆ ಎಸೆದ ಅದೇ ಅಧಿಕಾರಿ ನನ್ನ ಕೈಗೆ ಲೈಸೆನ್ಸ್ ಇಟ್ಟ. ಅಷ್ಟರಮಟ್ಟಿಗೆ ನಾನು ಗೆದ್ದಿದ್ದೆ’ ಎಂದ ರೇವತಿ ‘ಆದರೆ ವಿಷಯ ಗೊತ್ತಾ ಅದರಲ್ಲಿ ರೇವತಿ ಅಂಡ್ ದೊರೈರಾಜ್ ಎಂದು ಬರೆದಿದ್ದರು. ಅಷ್ಟರಮಟ್ಟಿಗೆ ಆತನೂ ಗೆದ್ದ ನಗು ಬೀರಿದ್ದ’ ಎಂದು ವಿಷಾದದ ನಗೆ ಚೆಲ್ಲಿದಳು.

ರೇವತಿ ಹಾಗೂ ನಾನು ನಿಂತದ್ದು ಒಂದು ಬಯಲಿನಲ್ಲಿ. ಬದುಕನ್ನೇ ಬಯಲು ಮಾಡಿದ ಅಥವಾ ಬಯಲಲ್ಲೇ ಬದುಕಬೇಕಾಗಿ ಬಂದ ರೇವತಿ ಅದೀಗ ತಾನೇ ‘ಬದುಕು ಬಯಲು’ ಆತ್ಮಚರಿತ್ರೆ ಬರೆದಿದ್ದರು. ಓದಿದ ಎಲ್ಲಾ ಮನಸ್ಸುಗಳೂ ತಲ್ಲಣಿಸಿಹೋಗಿದ್ದವು. ಅಂತೆಯೇ ನಾನೂ ಇಡೀ ರಾತ್ರಿ ನಿದ್ದೆಗೆಟ್ಟು ರೇವತಿಯ ಎದುರು ನಿಂತಾಗ ಕಣ್ಣುಗಳು ಕೆಂಡದುಂಡೆಗಳಾಗಿದ್ದವು.

ತಮಿಳುನಾಡಿನ ಸೇಲಂ ಬಳಿಯ ಹಳ್ಳಿಯೊಂದರಿಂದ ಹೊರಟ ದೊರೈರಾಜ್ ಎಂಬ ಹುಡುಗ ತಲ್ಲಣದ ಮಳೆಗೆರೆವಲ್ಲಿ ಬದುಕು ದೂಡುತ್ತಾ ನನ್ನೆದುರು ರೇವತಿಯಾಗಿ ನಿಂತಿದ್ದರು.

ಅವರ ಅಂಗೈ ನನ್ನ ಕೈನೊಳಗೆ ಬೆಚ್ಚಗೆ ಕೂತಿತ್ತು.
ಆ ಕಾರಣಕ್ಕೆ ಅವರಿಗೆ ಇನ್ನಿಲ್ಲದ ವಿಶ್ವಾಸ ಬಂತೇನೋ..
ತನ್ನ ಬದುಕಿನ ಯಾವೊಂದು ಹಾಳೆಯನ್ನೂ ಮುಚ್ಚಿಡದೆ ತೆರೆದಿಡುತ್ತಾ ಹೋದರು.

‘ಹೀಗೆ ಕೈ ಹಿಡಿದವರು ಕೆಲವೇ ಮಂದಿ’ ಎಂದೇ ರೇವತಿ ಮಾತು ಶುರು ಮಾಡಿದರು.

‘ನನ್ನ ಅಪ್ಪ ಅಮ್ಮ ಹೀಗೆ ಕೈ ಹಿಡಿದಿದ್ದರೆ ನನ್ನ ಮನಸ್ಸು, ದೇಹದ ಮೇಲಾದ ಲೆಕ್ಕವಿರದಷ್ಟು ಹಲ್ಲೆ ಆಗುತ್ತಲೇ ಇರಲಿಲ್ಲವೇನೋ’ ಎಂದು ನಿಟ್ಟುಸಿರಾದರು.

‘ಆರನೆಯ ವರ್ಷದವರೆಗೆ ನಾನು ಹೆಣ್ಣು ಮಕ್ಕಳ ಜೊತೆ ಆಡುತ್ತ, ಅವರಂತೆ ಬಟ್ಟೆ ಹಾಕುತ್ತಾ ತಿರುಗಿದರೂ ಯಾರಿಗೂ ಏನೂ ಅನಿಸಿರಲಿಲ್ಲ. ಆದರೆ ಆ ನಂತರವೂ ನನ್ನೊಳಗೆ ಯಾವಾಗ ಒಬ್ಬ ಹೆಣ್ಣು ಎದ್ದು ನಿಂತಳೋ ಅಲ್ಲಿಂದ ಶುರುವಾಯಿರು ನೋಡಿ

ಶಾಲೆಯಲ್ಲಿ ಶಿಕ್ಷಕರೇ ಕತ್ತಲ ಕೋಣೆಗೆ ಕರೆದೊಯ್ಯುತ್ತಿದ್ದರು. ನನ್ನ ಗೆಳೆಯರೇ ಚಡ್ಡಿ ಬಿಚ್ಚಿಸಿ ನೋಡಲು ಶುರು ಮಾಡಿದರು.

ಗಂಡಿನ ದೇಹದೊಳಗಿದ್ದ ಈ ಹೆಣ್ಣಿಗೆ ಬೇರೆ ಯಾವ ದಾರಿಯೂ ಇರಲಿಲ್ಲ. ನನ್ನನು ಹೆಣ್ಣು ಎಂದು ಅರ್ಥ ಮಾಡಿಕೊಳ್ಳುವವರನ್ನು ಹುಡುಕುತ್ತಾ ಹೋದೆ.

‘ಅಲ್ಲಿಂದ ಶುರುವಾಯಿತು ನನ್ನ ಯಾತ್ರೆ’ ಎಂದರು.
ತಕ್ಷಣ ನನಗೆ ನೆನಪಾಗಿದ್ದು ‘ಹಿಜ್ರಾ’ ಎನ್ನುವ ಪದ.

ಅದಕ್ಕೆ ಕಾರಣವಿತ್ತು.
ಅವರ ‘ಬದುಕು ಬಯಲು’ ಕೃತಿಯಲ್ಲಿ ಹಿಜ್ರಾ ಎನ್ನುವ ಪದದ ಅರ್ಥವೇ ಯಾತ್ರೆ ಎನ್ನುತ್ತಾರೆ.

‘ಇದು ಉರ್ದು ಪದ. ನಮ್ಮದು ಸದಾ ಯಾತ್ರೆಯೇ ಹಾಗಾಗಿಯೇ ಹಿಜ್ರಾ ಎನ್ನುವ ಹೆಸರು ಅಂಟಿಕೊಂಡಿತು’. ಎಂದು ರೇವತಿ ಗತ ಕಣ್ಣಾದರು.

ಹಿಜ್ರಾ ಜೊತೆಗಿನ ನನ್ನ ನೆನಪುಗಳ ಯಾತ್ರೆಯೂ ಇದೆ.

ನನ್ನ ನೆರೆಮನೆಯಲ್ಲಿ ಗುಜರಾತಿ ಕುಟುಂಬವಿತ್ತು. ಅಲ್ಲಿ ಯಾವುದೇ ಒಳ್ಳೆಯದು ಆದರೂ ಹಿಜ್ರಾಗಳಿಗೆ ಮೊದಲ ಸುದ್ದಿ ಹೋಗುತ್ತಿತ್ತು. ಅವರ ಮನೆಗೆ ಬರುವ ಅತಿಥಿಗಳಲ್ಲಿ ಅಂದು ಬಹು ಮುಖ್ಯ ಸ್ಥಾನ ಇವರಿಗೆ. ಇಡೀ ದಿನ ಅವರ ಜೊತೆ ಹಾಡಿ ಕುಣಿದು ಎಲ್ಲರೂ ಸಂತೋಷದಿಂದಿರುತ್ತಿದ್ದರು. ಆಗ ನನಗೆ ಇನ್ನೂ ಆರೇಳು ವರ್ಷ.

ಈ ಕಾರಣಕ್ಕೇ ಇರಬೇಕು ನನ್ನ ಮನಸ್ಸಿನಲ್ಲಿ ಇಂದಿಗೂ ತೃತೀಯ ಲಿಂಗಿಗಳ ಬಗ್ಗೆ ಯಾವುದೇ ‘ನೋ, ನೋ’ ಮನಸ್ಥಿತಿ ಇಲ್ಲ.

ಅದರ ಜೊತೆಗೆ ಎಚ್ ಎಲ್ ನಾಗೇಗೌಡರ ‘ಜಾನಪದ ಲೋಕ’ದ ಸಹವಾಸಕ್ಕೆ ಬಿದ್ದ ಮೇಲಂತೂ ಮಂಜಮ್ಮ ಜೋಗತಿಯಿಂದ ಹಿಡಿದು ಅನೇಕರ ಜೊತೆ ಗಂಟೆಗಳ ಕಾಲ ಅವರ ನೋವಿನ ಕಥೆಯನ್ನು ಕೇಳಿದ್ದೇನೆ.

ಅವರ ಕಣ್ಣೀರು ನನ್ನೊಳಗೆ ಇನ್ನೂ ಇದೆ.

ಹಾಗಾಗಿಯೇ ಟ್ರಾಫಿಕ್ ಸಿಗ್ನಲ್ ನಲ್ಲಿ ಎದುರಾಗುವ ಎಷ್ಟೋ ಮಂದಿ ಮಾಡುವ ಆಶೀರ್ವಾದಕ್ಕೆ ನಾನು ತನ್ಮಯತೆಯಿಂದ ನನ್ನ ನೆತ್ತಿಯನ್ನು ಅರ್ಪಿಸುತ್ತೇನೆ.

ರೇವತಿ ನಕ್ಕುಬಿಟ್ಟಳು.

‘ಹಾಗೆ ನಾವು ಆಶೀರ್ವಾದ ಮಾಡೋದು, ಅದರಿಂದ ಒಳ್ಳೆಯದಾಗುತ್ತೆ ಅಂತ ಜನ ನಂಬೋದು ಯಾಕೆ ಗೊತ್ತಾ’ ಎಂದು ಕೇಳಿದಳು.

ರಾಮ ವನವಾಸಕ್ಕೆ ಹೊರಟ ಊರವರೆಲ್ಲಾ ದುಃಖದಿಂದ ಅವನನ್ನು ಬೀಳ್ಕೊಡಲು ಕಾಡಿನ ಅಂಚಿನವರೆಗೆ ಬಂದರು.

ರಾಮನೂ ಕಣ್ಣೊರೆಸಿಕೊಂಡವನೇ ‘ಗಂಡಸರೇ ಹೆಂಗಸರೇ ನೀವೆಲ್ಲ ಮನೆಗಳಿಗೆ ಹೋಗಿ. ನಾನು ಸುರಕ್ಷಿತವಾಗಿ ವಾಪಸ್ ಬರುತ್ತೇನೆ’ ಎಂದ.

ಅಂತೆಯೇ ೧೪ ವರ್ಷ ಕಳೆದು ವಾಪಸ್ ಬಂದಾಗ ನೋಡುತ್ತಾನೆ. ಒಂದಷ್ಟು ಜನ ಅಲ್ಲಿಯೇ ಇದ್ದಾರೆ.

ಆಶ್ಚರ್ಯಗೊಂಡ ರಾಮ ಯಾಕೆ ನೀವು ಮನೆಗೆ ಹೋಗದೆ ಇಲ್ಲೇ ಇದ್ದೀರಾ ಎಂದು ಕೇಳುತ್ತಾನೆ.

ಆಗ ಅವರು ನೀವು ಹೆಂಗಸರು, ಗಂಡಸರಿಗೆ ಮನೆಗೆ ಹೋಗಲು ಹೇಳಿದಿರಿ. ಆದರೆ ನಾವು ಅವೆರಡೂ ಅಲ್ಲದವರು. ಹಾಗಾಗಿ ನೀನು ನಮಗೆ ಏನೂ ಹೇಳಲಿಲ್ಲವಲ್ಲ ಇಲ್ಲೇ ಕಾಯುತ್ತ್ತಿದ್ದೇವೆ ಎಂದರಂತೆ.

ಅವರ ಪ್ರೀತಿ ಕಂಡು ದಂಗಾದ ರಾಮ ನಿಮ್ಮ ಆಶೀರ್ವಾದ ಪಡೆದವರಿಗೆ ಸದಾ ಒಳಿತಾಗಲಿ ಎಂದು ಹಾರೈಸಿದನಂತೆ.

ಅಂದಿನಿಂದ ನಮ್ಮ ಆಶೀರ್ವಾದ ಸಿಗುತ್ತಿದೆ.

‘ಆದರೆ ಬದುಕು ನಮ್ಮನ್ನು ಇಂತಹ ಸ್ಥಿತಿಗೆ ದೂಡಿದೆಯೆಂದರೆ ಟ್ರಾಫಿಕ್ ಸಿಗ್ನಲ್ ನಲ್ಲಿ ಬಲವಂತವಾಗಿ ಆಶೀರ್ವಾದ ಮಾಡುವ ಸ್ಥಿತಿಗೆ’ ಎಂದು ವಿಷಾದದ ನಗೆ ಚೆಲ್ಲಿದಳು.

ನನಗೂ ನನ್ನ ಬಾಲ್ಯದಲ್ಲಿ ಗುಜರಾತಿ ಮನೆಗಳಿಗೆ ಇವರು ಬಂದು ಹಾಡಿ ಕುಣಿಯುತ್ತಿದ್ದುದರ ಮಿಸ್ಸಿಂಗ್ ಲಿಂಕ್ ಸಿಕ್ಕಿಹೋಯಿತು.

ರೇವತಿಯನ್ನು ಕೇಳಲು ಸಾಕಷ್ಟು ವಿಷಯವಿತ್ತು. ಸೇಲಂ ನಿಂದ ಮುಂಬೈ, ದೆಹಲಿ.. ಹಿಜಾಬ್, ಚೇಲಾ, ಪ್ರೇಮದಲ್ಲಿ ಬಿದ್ದದ್ದು,, ಗಂಡನಂತೆ ಬದುಕಿದವನು ಇದ್ದಕ್ಕಿದ್ದಂತೆ ಹೊರಗೆ ಹಾಕಿದ್ದು, ೬ನೆಯ ವಯಸ್ಸಿನಲ್ಲಿಯೇ ಸಹಪಾಠಿಗೆ ಪ್ರೇಮ ಪತ್ರ ಬರೆದದ್ದು, ಶಿಶ್ನವನ್ನು ಕತ್ತರಿಸಿ ಎಸೆದಿದ್ದು ಹೀಗೆ.. ಆದರೆ ನನ್ನ ಕಣ್ಣಿದ್ದದ್ದು ಆಕೆಯ ಯಶೋಗಾಥೆಯ ಬಗ್ಗೆ..

‘ನನಗೆ ಪಾಸ್ ಪೋರ್ಟ್ ಸಿಕ್ಕಿತು ಗೊತ್ತಾ’ ಎಂದರು.

ಅದು ನನಗೆ ಗೊತ್ತಿತ್ತು. ಏಕೆಂದರೆ ರೇವತಿ ಎಂದರೆ ಅನೇಕ ವಿದೇಶಿ ವೇದಿಕೆಗಳಲ್ಲಿ ಸಂಚಲನ ಹುಟ್ಟಿಸುವ ಹೆಸರು.

‘ವಿಮೋಚನಾ’ ಬಳಗದ ಭಾಗವಾಗಿದ್ದ ಆಕೆ ಅನೇಕ ಬಾರಿ ವಿದೇಶದಲ್ಲಿ ಉಪನ್ಯಾಸ ನೀಡಿದ್ದಾಳೆ. ತನ್ನ ಕಥೆ ಹೇಳಿಕೊಂಡಿದ್ದಾಳೆ, ಜೊತೆಗಾರರಿಗೆ ಕೌನ್ಸೆಲಿಂಗ್ ಮಾಡಿದ್ದಾಳೆ.

ವಿದೇಶಿ ತೃತೀಯ ಲಿಂಗಿಗಳಿಗೆ ಭಾರತದ ವ್ಯವಸ್ಥೆ ಸದಾ ಕುತೂಹಲಕರ.

ಭಾರತದಲ್ಲಿರುವ ಹಿಜ್ರಾಗಳಿಗೆ ಎರಡು ಕುಟುಂಬ ಪದ್ಧತಿ ಇದೆ. ತಮ್ಮ ಒಡಹುಟ್ಟಿದವರ ಜೊತೆಗಿನದ್ದು ಒಂದಾದರೆ ಹಿಜ್ರಾ ಪದ್ಧತಿಯಲ್ಲಿಯೇ ತಾಯಿ, ಗುರು, ಬಂಧು ಬಳಗ ಇರುವ ಇನ್ನೊಂದು ಕುಟುಂಬ.

ಇದು ಸಾಕಷ್ಟು ಭದ್ರತೆಯ ಭಾವ ನೀಡುತ್ತದೆ. ಇದು ವಿದೇಶದಲ್ಲಿಲ್ಲ.

ಹಾಗಾಗಿಯೇ ಇಲ್ಲಿನ ತೃತೀಯ ಲಿಂಗಿಗಳ ಜೊತೆ ಸದಾ ಸಂವಾದ ನಡೆಸುತ್ತಲೇ ಇರುತ್ತಾರೆ.

‘ರೈತರಿಗೆ ದೇವರಾಜ ಅರಸ್ ಹೇಗೋ ಹಿಜ್ರಾಗಳಿಗೆ ಇಂದಿರಾಗಾಂಧಿ..’ ಎಂದು ರೇವತಿ ತುಂಬು ಕೃತಜ್ಞತೆಯಿಂದ ಮಾತನಾಡಿದಾಗ ನನಗೆ ಆಶ್ಚರ್ಯವಾಯಿತು.

‘ಅದು ಹೇಗೆ’ ಎಂದು ಮುಖ ಮಾಡಿದೆ.

ಇಂದಿರಾ ಗಾಂಧೀ ಹಿಜ್ರಾಗಳಿಗೆ ಮೊತ್ತಮೊದಲ ಬಾರಿಗೆ ಮನೆಗಳನ್ನು ಕೊಟ್ಟರು. ಅಷ್ಟೇ ಆಗಿದ್ದರೆ ಅಂತಹ ದೊಡ್ಡ ಬದಲಾವಣೆ ಆಗುತ್ತಿರಲಿಲ್ಲ.

ಆದರೆ ಆಕೆ ನಮಗೆ ಸಮಾಜದ ಎಲ್ಲರ ನಡುವೆಯೇ ಬದುಕುವ ಅವಕಾಶ ಕಲ್ಪಿಸಿದರು.

ಅದು ಸಣ್ಣ ಪ್ರಯತ್ನ ಆದರೆ ನಮ್ಮ ಬದುಕಲ್ಲಿ ದೊಡ್ಡ ಬದಲಾವಣೆ ತಂದಿತು. ಸಮಾಜ ಹಿಜ್ರಾಗಳನ್ನು ಸ್ವೀಕರಿಸುವಲ್ಲಿ ಇದು ಕ್ರಾಂತಿಕಾರಕ ಹೆಜ್ಜೆ.

ಈಗ ಎಂದೆ. ರೇವತಿಗೆ ಅದುವರೆಗೆ ಇದ್ದ ಆಕ್ರೋಶ ಒದ್ದುಕೊಂಡು ಬಂತು.

‘ನಿಮಗೆ ಗೊತ್ತಿದೆಯಾ ಆಟೋದಲ್ಲಿ ನಾವು ಕುಳಿತರೆ ಸಾಕು ಮೀಟರ್ ಡಬ್ಬಲ್ ಓಡುತ್ತದೆ. ಇದು ಅಘೋಷಿತ ಕಾನೂನು.

ಹಾಗೆಯೇ ನಮಗೆ ಮನೆ ಬಾಡಿಗೆಗೆ ಕೊಡುವಾಗ ಮೂರು ಪಟ್ಟು ಬಾಡಿಗೆ, ಕೊಟ್ಟ ಅಡ್ವಾನ್ಸ್ ವಾಪಸ್ ಇಲ್ಲ,

ಇರುವ ಪ್ರದೇಶದ ರೌಡಿ ಜೊತೆ ಮಲಗಬೇಕು ಎನ್ನುವ ನೂರೆಂಟು ಕಣ್ಣಿಗೆ ಕಾಣದ ಕಾನೂನುಗಳಿವೆ’ ಎಂದಳು.

ರೇವತಿಯೊಳಗೆ ಮಡುಗಟ್ಟಿದ ಆಕ್ರೋಶ ಆಗೀಗ ಹೊರಗೆ ಧುಮ್ಮಿಕ್ಕಿದ್ದರ ಪರಿಣಾಮವೇ ಹಿಜ್ರಾಗಳ ಬದುಕಿನ ಮೇಲೆ ಸಾಕಷ್ಟು ಬೆಳಕು ಬಿದ್ದಿದೆ.

ತಾನಿದ್ದ ಎನ್ ಜಿ ಓ ಲೈಬ್ರರಿಯಲ್ಲಿ ಹಿಜ್ರಾಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳೇ ಇಲ್ಲದ್ದನ್ನು ನೋಡಿದ್ದ ರೇವತಿ ತಾವೇ ಹಿಜ್ರಾಗಳ ಸಂದರ್ಶನ ನಡೆಸಿ ಪುಸ್ತಕವಾಗಿಸಿದರು.

ಇತ್ತೀಚೆಗೆ ‘ಸಿಜಿಕೆ ನೆನಪಿನ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ ರೇವತಿ ಎಲ್ಲರೊಂದಿಗೆ ನಗುತ್ತಾ ಸಂಭ್ರಮದಿಂದ ಓಡಾಡುತ್ತಿದ್ದರು.

‘ಏನು ಇಲ್ಲಿ..?’ ಎಂದು ನಾನು ಖಂಡಿತಾ ಕೇಳಲಿಲ್ಲ

ಏಕೆಂದರೆ ಆ ವೇಳೆಗೆ ರೇವತಿ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು.

ಇವರ ಆತ್ಮಕಥೆ ‘ಬದುಕು ಬಯಲು’ ನಾಟಕವಾಗಿ ಯಶಸ್ಸು ಕಂಡಿತ್ತು. ಖುದ್ದು ರೇವತಿಯೇ ಬಣ್ಣ ಹಚ್ಚಿ ರಂಗದ ಮೇಲೆ ತಮ್ಮ ಕಥೆ ಹೇಳಿದರು.

‘ತಮಿಳುನಾಡು, ಕರ್ನಾಟಕದ ಹಿಜ್ರಾಗಳ ಬಗ್ಗೆ ಪುಸ್ತಕ ತಂದಿರಿ ಆಮೇಲೇನಾಯ್ತು?’ ಕೇಳಿದೆ.

‘ತುಂಬಾ ತುಂಬಾ ಬದಲಾವಣೆಯಾಯಿತು.

ಈ ಪುಸ್ತಕ ಹೊರ ತಂದ ಮೇಲೆ ಯಾಕೋ ಎಲ್ಲವನ್ನೂ ಅಲ್ಲಿ ಹೇಳಲಾಗಿಲ್ಲ ಎನಿಸಿತು. ಆಗ ನಾನು ನನ್ನದೇ ಕಥೆ ಬರೆಯತೊಡಗಿದೆ. ಆತ್ಮಚರಿತ್ರೆ ಹೊರಬಂತು’ ಎಂದರು.

ಅಮೇಲಿನದ್ದು ನನಗೆ ಗೊತ್ತಿತ್ತು. ಯಾವಾಗ ರೇವತಿ ಈ ಕೃತಿ ಹೊರತಂದರೋ ಆಗ ದೇಶದ ಅನೇಕ ಕಡೆ ಇದು ವ್ಯಾಪಕ ಧೈರ್ಯ ನೀಡಿತು.

‘ನಾನು ಸರವಣನ್ ಅಲ್ಲ’, ‘I am Vidya’ ಮುಂತಾದ ಕೃತಿಗಳು ಬಂದವು.

ಇದೆಲ್ಲಾ ನೆನಪಿಸಿಕೊಳ್ಳುತ್ತಾ ನಿಂತಿರುವಾಗಲೇ ರೇವತಿ ದಿಢೀರನೆ ನನ್ನ ಕೈ ಗಟ್ಟಿಯಾಗಿ ಹಿಡಿದುಕೊಂಡರು.

‘ನನ್ನ ಬದುಕಿನ ಅಷ್ಟೂ ನೋವು ಕರಗಿ ಹೋಗಿದ್ದು ಯಾವಾಗ ಗೊತ್ತಾ?’ ಎಂದು ಕಣ್ಣಲ್ಲಿ ಬೆಳಕು ತುಳುಕಿಸುತ್ತಾ ಕೇಳಿದರು.

‘ಕೇರಳದ ಕಾಲೇಜಿನ ಉಪನ್ಯಾಸಕರ ಮಗಳೊಬ್ಬಳು ನನ್ನದೇ ರೀತಿಯ ದ್ವಂದ್ವದಲ್ಲಿದ್ದಳು. ಅವಳ ದೇಹದೊಳಗೆ ಒಬ್ಬ ಗಂಡಿದ್ದ. ಆ ಉಪನ್ಯಾಸಕಿ ವರ್ಷಾನುಗಟ್ಟಲೆ ಡಿಪ್ರೆಶನ್ ಗೆ ಜಾರಿದ್ದರು. ನನ್ನ ಕೃತಿ ಓದಿದ್ದೇ ಮಗಳನ್ನು ಕರೆದು ಇಂದಿನಿಂದ ನೀನು ನನ್ನ ಮಗನೆ ಎಂದು ತಬ್ಬಿಕೊಂಡರು. ಇಬ್ಬರ ಜೀವ ಉಳಿಯಿತು. ಇಬ್ಬರ ಬದುಕೂ ಸಂಭ್ರಮದೆಡೆಗೆ ಹೊರಳಿಕೊಂಡಿತು’ ಎಂದರು.

‘ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಟ್ರಾಫಿಕ್ ಸಿಗ್ನಲ್ ನಲ್ಲಿದ್ದ ಹಿಜ್ರಾಗಳನ್ನು ನೋಡಿ ಅವರ ಬಳಿ ಹೋಗಿ ಅವರನ್ನು ತಬ್ಬಿಕೊಂಡರು. ನೆರೆದಿದ್ದ ಎಲ್ಲರಿಗೂ ಆಶ್ಚರ್ಯ. ಕಾರಿನ ಚಾಲಕ ಕೂಡ ತಬ್ಬಿಬ್ಬು.

ಅವರನ್ನು ತಬ್ಬಿಕೊಂಡು ಹೇಳಿದರಂತೆ- ನಾನು ರೇವತಿ ಆತ್ಮಚರಿತ್ರೆ ಓದಿದೆ. ಅಲ್ಲಿಯವರೆಗೆ ನೀವೆಲ್ಲಾ ಸಮಾಜಕ್ಕೆ ಶಾಪ ಎಂದುಕೊಂಡಿದ್ದೆ. ಆದರೆ ಎಷ್ಟು ಕಷ್ಟ ಅನುಭವಿಸಿದ್ದೀರಿ ಎಂದು ಕಣ್ಣೀರಾದರಂತೆ

ಅಷ್ಟೇ ಅಲ್ಲ ಅವರಿವರನ್ನು ಸಂಪರ್ಕಿಸಿ ನನ್ನ ಫೋನ್ ನಂಬರ್ ಪಡೆದರು. ನನಗೆ ಫೋನ್ ಮಾಡಿದ್ದಾಗ ಅವರಿಗಿಂತ ಹೆಚ್ಚಾಗಿ ನಾನು ಕಣ್ಣೀರಾಗಿದ್ದೆ’ ಎಂದರು.

‘ಒಂದು ನೆಮ್ಮದಿ ವಿಷಯ ಇದೆ’ ಎಂದರು

ನಾನು ಆ ವೇಳೆಗಾಗಲೇ ಅವರ ಬದುಕಿನ ದೋಣಿಯೇರಿ ಸಾಕಷ್ಟು ದೂರ ಬಂದಿದ್ದೆ.

‘ನನ್ನ ತಂದೆಯನ್ನು ಈಗ ನೋಡಿಕೊಳ್ಳುತ್ತಿರುವುದು ನಾನೇ’ ಎಂದರು.
ಆಗ ನೋಡಬೇಕಿತ್ತು ಅವರೊಳಗೆ ಚಿಮ್ಮಿದ ಆತ್ಮ ವಿಶ್ವಾಸ

ನನ್ನ ಮೆಚ್ಚುಗೆಯ ನೋಟ ಸಿಕ್ಕಿದ್ದೇ ತಡ ಹೇಳತೊಡಗಿದರು.
‘ನನ್ನ ಕುಟುಂಬದ ಆಸ್ತಿ ಪಾಲು ಮಾಡಬೇಕಾಗಿ ಬಂದಾಗ ನನ್ನ ತಂದೆ ಎಲ್ಲಾ ಆಸ್ತಿಯನ್ನು ನನ್ನ ಅಣ್ಣಂದಿರಿಗೆ ಕೊಟ್ಟರು.

ಈಗಲೂ ಅವರಿಗೆ ನನ್ನ ಮೇಲೆ ಅಷ್ಟೇನೂ ಪ್ರೀತಿಯಿಲ್ಲ.
ಆದರೆ ಅವರನ್ನು ನನ್ನ ಜೊತೆ ಇರಿಸಿಕೊಂಡು ಅವರ ಸ್ನಾನ ಮಾಡಿಸುತ್ತ, ಬಟ್ಟೆ ಒಗೆಯುತ್ತಾ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ಮೂರು ಹೊತ್ತು ಅಡುಗೆ ಮಾಡಿ ಹಾಕುತ್ತಾ ಹೊತ್ತು ಹೊತ್ತಿನ ಕಷ್ಟ ಸುಖಕ್ಕೆ ಜೊತೆಯಾಗುತ್ತಾ ಸಾಗಿದ್ದೇನೆ. ಇದಕ್ಕಿಂತ ನೆಮ್ಮದಿ ಇನ್ನೇನು ಬೇಕು’ ಎಂದರು.

‘ಬೊಗಸೆಯಲ್ಲಿ ಮಳೆ’ ಎಂದಿದ್ದರು ಜಯಂತ್ ಕಾಯ್ಕಿಣಿ.

ಆ ಕ್ಷಣ ನನ್ನ ಬೊಗಸೆಯಲ್ಲೂ ಮಳೆ ಇತ್ತು.
ಕಣ್ಣೀರಿನ ಮಳೆ.

ರೇವತಿಗೆ ಒಂದು ಚಂದ ಹಗ್ ಕೊಟ್ಟೆ.