ತುರುವೇಕೆರೆ: ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೊಳಗಾದ ತಾಲ್ಲೂಕಿನ ಹೂ ಬೆಳೆಯುವ ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರಧನ ಘೋಷಣೆಯಾಗಿದ್ದು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸ ಬಹುದಾಗಿದೆ.
ಗರಿಷ್ಠ 1 ಹೆಕ್ಟೇರ್ ವರೆಗಿನ ಹೂ ಬೆಳೆಗಾರರಿಗೆ 25 ಸಾವಿರದಂತೆ. ಅದಕ್ಕಿಂತ ಕಡಿಮೆ ಇರುವ ಹೂ ಬೆಳೆಗಾರರಿಗೆ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರಧನ ನೀಡಲಾಗುವುದು.
2019-20 ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿನ ಹೂ ಬೆಳೆಗಾರರ ದೃಢೀಕರಿಸಿದ ಪಟ್ಟಿಯನ್ನು ತಾಲ್ಲೂಕು ಮಟ್ಟದಲ್ಲಿ ತೋಟಗಾರಿಕೆ ಕಚೇರಿ, ತಾಲ್ಲೂಕು ಕಚೇರಿ, ಗ್ರಾಮಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳ ನಾಮಫಲಕಗಳಲ್ಲಿ ಪ್ರದರ್ಶಿಸಲಾಗುವುದು.
ಸದರಿ ಪಟ್ಟಿಯಲ್ಲಿ ಇರುವ ರೈತರು ಯಾವುದೇ ಅರ್ಜಿ ಹಾಗೂ ದಾಖಲಾತಿಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಬೆಳೆಸಮೀಕ್ಷೆ ಪಟ್ಟಿಯಲ್ಲಿ ಇಲ್ಲದಿರುವ ಇತರೆ ರೈತರು ಪ್ರಾಮಾಣಿಕವಾಗಿ ಹೂ ಬೆಳೆದಿದ್ದಲ್ಲಿ ಸಂಬಂಧಪಟ್ಟ ತಾಲ್ಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ಕಾರ್ಡ್, ರೈತರ ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ಬೆಳೆಯ ಸ್ವಯಂ ದೃಢೀಕರಣದೊಂದಿಗೆ ಮೇ.16ರಿಂದ ಮೇ.28 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಹಾಗು ಹೋಬಳಿಮಟ್ಟದ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ಆಂಜನೇಯರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಿನ ಕುಟುಂಬ ವ್ಯವಸ್ಥೆಗೆ ಈ ದಿನ ಅದೆಷ್ಟು ಹತ್ತಿರವಾಗಿದಿಯೂ ಗೊತ್ತಿಲ್ಲ.
ಹಿಂದೆಲ್ಲ ಅಮ್ಮನ ದಿನ ,ಅಪ್ಪನ ದಿನ, ಮಹಿಳೆಯರ ದಿನ, ಫ್ಯಾಮಿಲಿ ದಿನ, ಅಂತೇನು ದಿನಗಳನ್ನು ಎಣಿಸಬೇಕಾಗಿರಲಿಲ್ಲ
ಯಾವಾಗಲೂ ಗೌರವ ಇರುತ್ತಿತ್ತು. ಆಗ ಜನ ಫ್ಯಾಷನ್ ಹಿಂದೆ ಬಿದ್ದಿರಲಿಲ್ಲ .ವಾಸ್ತವದಲ್ಲಿ ಜೀವಿಸಿದ್ದರು ಯಾವೆಲ್ಲ ಜವಬ್ದಾರಿಗಳನ್ನು ನಿಭಾಯಿಸಬೇಕಿತ್ತು, ನಿಭಾಯಿಸಿದ್ದರು.
ಪ್ರತಿ ದಿನ ಫ್ಯಾಮಿಲಿ ದಿನವಾಗಿಯೆ ಕಾಣುತ್ತಿದ್ದವು. ಕಾರಣ ಮನೆ ತುಂಬ ಜನ ಇರುತ್ತಿದ್ದರು ಒಟ್ಟಿಗೆ ಕೆಲಸ ಮಾಡುತ್ತಿದ್ದರು ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು ಒಬ್ಬರನ್ನು ಒಬ್ಬರು ಗೌರವಿಸುತ್ತಿದ್ದರು, ಸಮಸ್ಯೆಗಳು ಬಂದಾಗ ಬಗೆಹರಿಸಿಕೊಳ್ಳುತ್ತಿದ್ದರು…
ಹಬ್ಬ ಹುಣ್ಣಿಮೆ ಗಳಲ್ಲಿ ಸಂಬಂಧಿಕರೆಲ್ಲ ಒಟ್ಟಿಗೆ ಸೇರುತ್ತಿದ್ದರು . ಮಹಾನವಮಿ ಬಂತೆಂದರೆ ಸಾಕು ಹಳಯದನೆಲ್ಲ ನೆನಪಿಸಿಕೊಳ್ಳುವ ಅಜ್ಜಿ ಹೇಳುತ್ತಾರೆ ೧೦ ಸೇರು ಅಕ್ಕಿ ನೆನೆಸಿ ರುಬ್ಬುವ ಗುಂಡಲ್ಲಿ ರುಬ್ಬಿ ಹಿತ್ತಲಲ್ಲಿ ಬೆಳೆದ ತರಕಾರಿ ಪಲ್ಯ ಮಾಡಿ, ಇಡ್ಲಿ, ಮಾಡುತ್ತಿದ್ದವಿ ಒಂದು ಮಿಗದೆ ಖಾಲಿ ಆಗುತ್ತಿತ್ತು .
ನೆಂಟರು ಬರೋರು ಅಂಗೆ ಸಂಜೆಗೆ ಅಷ್ಟೇ ಸೇರಿನ ಬೇಳೆ ಹಾಕಿ ಒಬ್ಬಟ್ಟು ಮಾಡಿದರೆ ಹಬ್ಬ ಅನಿಸುತ್ತಿತ್ತು.
ಚಿಕ್ಕ ಮನೆ ಸಗಣಿಯಲ್ಲಿ ಸಾರಿಸಿದ ಬಗ್ಗಡದ ನೆಲ ರಂಗೋಲಿಯ ಅಲಂಕಾರ, ಮಾಳಿಗೆ ಮನೆಯ ಹೊಲೆಯ ಮುಂದೆ ಬೇಯುತ್ತಿದ್ದರು ಅದರ ಹಬೆ ಗೊತ್ತಾಗದೆ ಇರುವಷ್ಟು ಮನೆ ತುಂಬಾ ನೆಂಟರು ಇರುತ್ತಿದ್ದರು .
ಆಗ ಹಬ್ಬಕ್ಕೆ ಕಳೆ ಬಂದು ಮನೆ ಕಳ ಕಳ ಅನ್ನುತಿತ್ತು..ಅಜ್ಜಿ ಹೇಳುವಾಗ ಆಗಿನ ಮನೆಗಳು ಕುಟುಂಬಗಳೂ ಅದೆಷ್ಟು ಘನತೆ ಉಳಿಸಿಕೊಂಡಿದ್ದವು ಅನಿಸುತ್ತದೆ. ಈಗ ಮನೆಗಳು ದೊಡ್ಧವು ,ಗ್ರಾನ್ಯೆಟ್ ಕಲ್ಲು ,ಅಡುಗೆ ಮಾಡಲು ಎಲ್ಲ ಸುಸಜ್ಜಿತವೆ .ಅದರೂ ಹಬ್ಬದ ಕಳೆಇಲ್ಲ ನೆಂಟರಿಲ್ಲ ಹಬ್ಬ ಅನಿಸೋದೆ ಇಲ್ಲ .
ಹಬ್ಬಕ್ಕೆ ಹೇಳುವವರೂ ಇಲ್ಲ ಬರುವವರೂ ಇಲ್ಲ. ಎಲ್ಲರೂ ಕೆಲಸದ ಒತ್ತಡ ದಲ್ಲಿ ಇದ್ದಾರೆ. ರಜೆಗಳಿಲ್ಲ ಎನ್ನುತ್ತಾರೆ, ಮಕ್ಕಳೆ ಮನೆಗೆ ಬರದಂತೆ ದೂರದಲ್ಲಿದ್ದಾರೆ ಎನ್ನುವ ಅಜ್ಜಿಯ ಮುಖದಲ್ಲಿ ನಿರಾಶೆಯ ಭಾವ ಕಾಣುತ್ತದೆ.
ಆಗ ಕುಟುಂಬಗಳ ದಿನವನ್ನು ಆಚರಿಸಲು ವಾಟ್ಸ ಆ್ಯಪ್ ಗಳ ಸ್ಟೇಟಸ್ ಗಳಿರಲಿಲ್ಲ ಫೇಸ್ಬಕ್ ನಂತಹ ಸಾಮಾಜಿಕ ಜಾಲತಾಣ ಇರಲಿಲ್ಲ.ಇದರ ಅವಶ್ಯಕತೆಗಳು ಇರಲಿಲ್ಲ.
ಕಾರಣ ತಿಂಗಳಿಗೊಮ್ಮೆ ಬರುವ ಹಬ್ಬಗಳು ಕೂಡು ಕುಟುಂಬಗಳೆ ಕುಟುಂಬ ದಿನದ ಸಾಕ್ಷಿ ಆಗಿದ್ದವು. .ಈಗಿನ ನಾವುಗಳೂ ಸಂಬಂದ ಗಳಿಂದ ದೂರವಿದ್ದು ನಿಜವಾಗಿಯೂ ಅನುಭವಿಸ ಬೇಕಿದ್ದ ಕೂಡು ಕುಟುಂಬದ ಅನುಭವ ವಿಲ್ಲದೆ ಸುಮ್ಮನೆ ಸಾಮಾಜಿಕ ಜಾಲಾತಾಣದಲ್ಲಿ ಶುಭಾಷಯ ತಿಳಿಸುವುದರ ಮೂಲಕ ಮೊಬೇಲ್ ಗಳೇ ನಮ್ಮ ಫ್ಯಾಮಿಲಿ ಗಳಂತೆ ಕಾಣುತ್ತಿರುವುದು ದುರಂತವೆ ಅನಿಸುತ್ತದೆ.
ಹಳ್ಳಿಯಲ್ಲಿ ಬೆಳೆದ ಮಕ್ಕಳಿಗೂ ನಗರದಲ್ಲಿ ಬೆಳೆದವರಿಗೂ ಕೆಲವೊಂದು ವ್ಯತ್ಯಾಸ ಗಳನ್ನು ನಾನು ಗಮನಿಸಿದ್ದೇನೆ.
ಹಳ್ಳಿಯ ಮಕ್ಕಳು ಹೆಚ್ಚು ಕಲಿತಿರುತ್ತಾರೆ. ಧ್ದೈಯ೯ ವಾಗಿರುತ್ತಾರೆ ಮತ್ತು ಆತ್ಮೀಯವಾಗಿರುತ್ತಾರೆ. ಸಹಿಸಿಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವರಿಗಿಂತ ಚಿಕ್ಕ ಮಕ್ಕಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ .
ನಗರದ ಮಕ್ಕಳು ಹೆಚ್ಚು ಕೂತೂಹಲದಲ್ಲೆ ಇರುತ್ತಾರೆ. ಹಳ್ಳಿಗಳ ಮಕ್ಕಳ ಜೊತೆ ಬೆರೆತು ಕಲಿಯುತ್ತಾರೆ. ಆದರೆ ಅವರಲ್ಲಿ ಸ್ಪಧಾ೯ತ್ಮಕ ಗುಣ ಹೆಚ್ಚು ಇರುತ್ತದೆ.
ಆದರೆ ನನಗೆ ಅನಿಸುವುದು ಅವರಿಗೆ ಹಳ್ಳಿಯ ಮಕ್ಕಳಿಗಿಂತ ಆತ್ಮೀಯತೆ ಕಮ್ಮಿ ಇರುತ್ತದೆ .ಅವರಿಗಿಂತ ಚಿಕ್ಕ ಮಕ್ಕಳನ್ನು ಸ್ಪಧೆ೯ಯ ಭಾಗವಾಗಿಯೆ ನೊಡುತ್ತಾರೆ.
ಇದನ್ನು ತಪ್ಪು ಎನ್ನಲು ಆಗುವುದಿಲ್ಲ. ಸ್ಪಧೆ೯ಯ ಮೇಲೆ ನಿಂತಿರುವ ಈ ವಾತಾವರಣದ ಭಾಗವಾಗಿಯೆ ಅವರು ಬೆಳೆಯುತ್ತಿದ್ದಾರೆ.
ಈ ಕೊವಿಡ್ ವ್ಯೆರಸ್ ನ ಕಾರಣದಿಂದಾಗಿ ಹಳ್ಳಿ ಮಕ್ಕಳು ನಗರದವರು ಒಟ್ಟಾಗಿ ಆಡುವ ಮತ್ತು ಕಲಿಯುವ ಸಂಧಭ೯ ಗಳಲ್ಲಿ ಶೇಕಡ ವಾರು ನಗರದ ಮಕ್ಕಳಲ್ಲಿ ಗಮನಿಸಿದ ಹಾಗೆ ಸ್ಪಧೆ೯ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ .ಈ ಸ್ಪಧಾ೯ತ್ಮಕ ಮನೊಭಾವ ಇವರಲ್ಲಿ ಆತ್ಮೀಯತೆಯನ್ನು ಕಸಿದುಕೊಂಡಿರಬಹುದೆ?! .
ಹಳ್ಳಿ ಮಕ್ಕಳು ಹೆಚ್ಚು ಕಲಿಸುತ್ತಿದ್ದಾರೆ ಮತ್ತು ರಾಜಿ ಯಾಗುತ್ತಿದ್ದಾರೆ. ಆತ್ಮೀಯವಾಗಿ ಅವರೊಟ್ಟಿಗೆ ಕೆಲವೊಂದನ್ನು ಹಳ್ಳಿಯ ಮಕ್ಕಳು ಕಲಿಯುತ್ತಿದ್ದಾರೆ.
ನನ್ನ ಚಿಕ್ಕಪ್ಪನ ಮಗಳು ನಿಹಾರಿಕ ನನ್ನ ಮಗನಿಗಿಂತ ೩ ವರ್ಷ ದೊಡ್ಧವಳಿರಬಹುದು. ಆದರೆ ಅವಳು ಅವನನ್ನು ನಿಭಾಯಿಸುವುದು ಮತ್ತು ಅವನನ್ನು ಪೋಷಿಸುವುದು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ.!
ನನ್ನ ಅಣ್ಣನ ಮಗಳು ನಿಹಾರಿಕಾಗಿಂತ ದೊಡ್ಧವಳು. ಅವಳು ನಗರದಲ್ಲಿ ಬೆಳೆದಿರುವುದು. ಅವಳು ಹೆಚ್ಚು ಸ್ಪಧಾ೯ತ್ಮಕವಾಗಿರುತ್ತಾಳೆ. ಯಾವುದಕ್ಕೂ ರಾಜಿಯಾಗದೆ…… ನಿಹಾರಿಕ ಚಿಕ್ಕ ವರೊಟ್ಟಿಗೆ ಮತ್ತು ದೊಡ್ಡವರೊಟ್ಟಿಗೆ ಹೇಗಿರಬೇಕೆಂಬುದನ್ನು ಅರಿತಿದ್ದಾಳೆ. ರಾಜಿಯಾಗುವುದು ಮತ್ತು ಬಿಟ್ಟುಕೊಡುವುದು ಸಂಬಂಧಗಳನ್ನು ಹೆಚ್ಚು ಬಲಿಷ್ಠವಾಗಿಸಬಹುದೆಂದು ಅವಳಿಗೆ ಈಗಲೇ ತಿಳದಿರಬಹುದೇನೂ ……… ಮತ್ತು ಅವಳು ಹಳ್ಳಿಯಲ್ಲಿ ಜನರೊಟ್ಟಿಗೆ ಬೆರೆತಿರುವುದು ಇದಕ್ಕೆ ಕಾರಣವಾಗಿರಲೂಬಹುದು .
ಕೃಷಿ ಮತ್ತು ಪಶುಪಾಲನೆಗಳು ಒಂದುಗೂಡಿ ಬದುಕು ಸಾಗಿಸುವ ಕುಟುಂಬದಲ್ಲಿ ಹುಟ್ಟಿರುವ ನನ್ನಂತವರಿಗೆ ಬಾಲ್ಯವೆಂಬುದು ದೊಡ್ಡ ಜವಾಬ್ಧಾರಿಯನ್ನೂ , ಬಲವಂತದ ಗಾಂಭೀರ್ಯವನ್ನೂ ಹೇರಿತ್ತು. ಗೋಲಿ, ಮರಕೋತಿ ಆಟ, ಚಿನ್ನಿದಾಂಡುಗಳಂತಹ ಹಳ್ಳಿ ಆಟಗಳೆಲ್ಲ ನನ್ನಂತವರಿಗೆ ಕೈಗೆ ಸುಲಭಕ್ಕೆ ಸಿಗದ ಉರಿಯ ಹೂವುಗಳಂತಾಗಿದ್ದವು. ಗುಂಪುಗೂಡಿ ಆಡುವ ಈ ಆಟಗಳೆಲ್ಲ ಗೊತ್ತೇ ಇಲ್ಲ ನನಗೆ. ಅದಕ್ಕೆ ಸ್ಕೂಲು,ಕಾಲೇಜುಗಳಲ್ಲಿ ಬರೀ ಓಡುವ ಆಟಗಳಲ್ಲೆ ಭಾಗವಹಿಸುತ್ತಿದ್ದೆ. ಬಾಲ್ಯವೆಲ್ಲ ಬರಿ ದುಡಿಮೆಯಲ್ಲೆ ಮುಗಿದು ಹೋಯ್ತು. ಆರು-ಏಳು ವರ್ಷಗಳಿಗಾಗಲೇ ಹಸು, ಎಮ್ಮೆ, ಕುರಿಗಳನ್ನು ಮೇಯಿಸುತ್ತಿದ್ದ ,ಹೊಲದಲ್ಲಿನ ಹುಲ್ಲು, ಮನೆಯಲ್ಲಿನ ಕಸ ಹೊರುತ್ತಿದ್ದ, ತೋಳಗಳ ವಿರುದ್ಧ ಹೋರಾಡುತ್ತಿದ್ದ ನೆನಪುಗಳೇ ಬಂದು ಎದುರು ಕೂರುತ್ತವೆ.
ಅಪ್ಪ ಎಂದರೇನೆಂದು ಅರಿಯುವ ಮೊದಲೆ ಆತ ಮಣ್ಣೊಳಗೆ ಮರೆಯಾಗಿ ಹೋದ. ಅಪ್ಪನ ಫೋಟೋ ಕೂಡ ಇಲ್ಲದ ಸ್ಥಿತಿಯಲ್ಲಿ ನೆನಪುಗಳು ಮಾತ್ರ ಆತನನ್ನು ತಡವರಿಸಿ ನೆನಪಿಸಲು ಸಾಧ್ಯವಷ್ಟೆ ನನಗೆ. ಘೋರ ಗಾಳಿ, ಸಿಡಿಲು, ಮಳೆ, ಹಾವು, ಹದ್ದುಗಳ ಉಪಟಳದಿಂದ ಗೂಡು ರಕ್ಷಿಸಿ ಮರಿಗಳಿಗೆ ರೆಕ್ಕೆ ಮೂಡುವ ಮೊದಲೆ ಮರಿಗಳನ್ನು ಅನಾಥ ಮಾಡಿ ಯಮನ ಹಲ್ಲಿಗೆ ಆಹಾರವಾಗುವ ಹಿರಿ ಹಕ್ಕಿಯ ಸ್ಥಿತಿ ನನ್ನ ಕುಟುಂಬದ್ದು. ಇದರ ಜೊತೆಗೆ ಅಡವಿಯ ಹುಲ್ಲು, ಬೆಟ್ಟ, ನರಿ, ತೋಳ, ಹಳ್ಳ, ತೋಡು ,ಜೇನಿನ ಪಥ, ಅಣಬೆಯ ತಾವು, ಕಾರೆ, ಕವಳೆ, ಬಿಕ್ಕೆ, ಸೀತಾಫಲಗಳು ಹಣ್ಣಾಗಿ ಸಂಭ್ರಮಿಸುತ್ತಿದ್ದ ಜಾಗಗಳೂ ನೆನಪಿನ ತಿಜೋರಿಯಲ್ಲಿ ಕೂತಿವೆ. ರೈತಾಪಿ ಮನೆಗಳಲ್ಲಿ ಮಕ್ಕಳು ಕಾಲು ಮತ್ತು ಕೈಗಳನ್ನು ಸ್ವತಂತ್ರವಾಗಿ ಬಳಸಬಲ್ಲರು ಎಂಬ ನಂಬಿಕೆ ಬಂದಕೂಡಲೆ ಅವರನ್ನು ಕೃಷಿ ದುಡಿಮೆಯಲ್ಲಿ ತೊಡಗಿಸುತ್ತಿದ್ದರು. ಇಡೀ ಮನೆಗೆ ಮನೆಯೆ ಮೈಮುರಿದು ದುಡಿದರೂ ಯುಗಾದಿಗೆ ಒಂದು ಜೊತೆ ಬಟ್ಟೆ ಕೊಳ್ಳಲಾಗದ, ವಾರಕ್ಕೊಮ್ಮೆ ಹಿಡಿ ಅನ್ನಕ್ಕೆ ಒದ್ದಾಡಿ ಹೋಗುವ ಒಕ್ಕಲು ಕುಟುಂಬಗಳಲ್ಲಿ ನನ್ನದೂ ಒಂದಾಗಿತ್ತು.
ನೆನಪಿಸಿಕೊಂಡರೆ ತಡೆಯಲಾಗದಷ್ಟೂ ವೇದನೆಯಾಗುತ್ತದೆ. ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಅಪ್ಪನಿಗೆ ಕ್ಯಾನ್ಸರ್ ಬಂತು. ತಮ್ಮ ನನಗಿಂತ ನಾಲ್ಕು ವರ್ಷ ಚಿಕ್ಕವನು. ಅಪ್ಪನನ್ನು ಸೇರಿಸಿದ್ದ ಆಸ್ಪತ್ರೆಯ ಮುಖವನ್ನೂ ಸಹ ಸಣ್ಣ ಮಕ್ಕಳಾಗಿದ್ದ ನಾವು ನೋಡಿರಲಿಲ್ಲ. ಅಪ್ಪ ಆಪರೇಷನ್ ಮಾಡಿಸಿಕೊಂಡು ಮನೆಗೆ ಬಂದರು. ಮೃದು ಆಹಾರ ಕೊಡಬೇಕೆಂದು ಡಾಕ್ಟರು ಪಥ್ಯ ಹೇಳಿದ್ದರು. ಸುಮಾರಾಗಿ ಜಮೀನಿದ್ದ ನನ್ನಂತವರ ಮನೆಗಳಲ್ಲಿಯೂ ಅಕ್ಕಿ ಎನ್ನುವುದು ಅಮೃತ ಸಮಾನ ಧಾನ್ಯವಾಗಿತ್ತು. ರೈತನ ಕೈಯಲ್ಲಿ ಅಂದು ಹಣವಿರುತ್ತಿರಲಿಲ್ಲ. ಇಂದೂ ಇಲ್ಲ ಬಿಡಿ. ವ್ಯವಸಾಯದ ಸಮಯ ಹೊರತುಪಡಿಸಿ ಉಳಿದ ಸಮಯಗಳಲ್ಲಿ ಅಣ್ಣ ಬಳ್ಳಾಪುರದ ಯಾವುದೋ ಸಾಮಿಲ್ಲಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಆತನ ದುಡಿಮೆಯ ಪುಡಿಗಾಸು ನಮಗೆ ಆಸರೆಯೂ ಆಗಿತ್ತು.
ಇಂಥ ದಿನಗಳಲ್ಲಿ ಅಪ್ಪನಿಗೆ ಸಣ್ಣದೊಂದು ಪಾತ್ರೆಯಲ್ಲಿ ಅಮ್ಮ ಅನ್ನ ಮಾಡಿ ಬಡಿಸುತ್ತಿದ್ದಳು . ಎಲ್ಲರಿಗೂ ಆಸೆಯೆ. ಎಂಟು-ಒಂಬತ್ತು ವರ್ಷಗಳಿಗೆ ಆಸೆ ಹತ್ತಿಕ್ಕಿಕೊಳ್ಳುವ ಕೃತಕ ವೈರಾಗ್ಯದ ಕಲೆಯನ್ನು ಅಮ್ಮ ಕಲಿಸಿದ್ದಳು. ತಮ್ಮ ಚಿಕ್ಕವನು. ಪಾಪ ,ಮೆಲ್ಲನೆ ಅಮ್ಮನ ಕಿವಿಯಲ್ಲಿ ‘ನಂಗೂ ಒಂದು ತುತ್ತು ಕೊಡು ಅಂದ’. ಎಲ್ಲರ ಕಣ್ಣೊಳಗೆ ಇಣುಕಿದ ನೀರು ಹಾಗೇ ಸೀದು ಎದೆಯ ಆಳಕ್ಕೆ ಇಳಿದು ಹೋಯಿತು. ಸರೀಕರೆದುರು ಮರ್ಯಾದೆಯೆಂಬುದು ಜೀವಕ್ಕಿಂತ ಮಿಗಿಲು ಎಂಬ ತತ್ವವನ್ನು ನಮ್ಮ ರಕ್ತದೊಳಗೆ ಅಚ್ಚು ಹಾಕಿದ್ದರು. ಬಹುಶಃ ಈ ಮನೋಭಾವದಿಂದಲೆ ಭಾರತದ ರೈತರು ಯಾವ ಪ್ರತಿಭಟನೆಯನ್ನೂ ತೋರದೆ ಜೀವ ಕಳೆದುಕೊಳ್ಳಲು ಕಾರಣವೆನ್ನಿಸುತ್ತದೆ. ಕಷ್ಟ ಹೊದ್ದು ಕಂಬನಿಯೊಳಗೆ ಕೈತೊಳೆವ ರೈತಾಪಿ ಜನರಿಗೆ ನಿಜವಾಗಿಯೂ ಜಾತಿ , ಧರ್ಮಗಳಿಲ್ಲ. ಮನುಷ್ಯ ದ್ವೇಷಿ ಶಕ್ತಿಗಳು ಕೂಡಿ, ಕಷ್ಟದ ಜೀವಿಗಳು ಒಂದುಗೂಡದಂತೆ ಒಡೆದು ನಾಶಮಾಡುತ್ತಿದ್ದಾರಷ್ಟೆ. ಈ ವರ್ಷ(2016) ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ 50 ಕ್ಕೂ ಹೆಚ್ಚಿನವರು ದಲಿತ ರೈತರು. ಎಷ್ಟು ದುಡಿದರೂ ಆಸ್ಪತ್ರೆಗೆ ಕಟ್ಟಲು ಹತ್ತಿಪ್ಪತ್ತು ಸಾವಿರ ಹಣವನ್ನು ಹೊಂದಿಸಲಾಗದೆ ತಾಳಿಯನ್ನೂ ಮಾರವಾಡಿ ಅಂಗಡಿಗಳಲ್ಲಿ ಒತ್ತೆ ಇಡುವುದೊ ಇಲ್ಲ ಕಿಡ್ನಿ ಮಾರಿಕೊಳ್ಳುವುದನ್ನೊ ಮಾಡಿರುವ ಅಸಂಖ್ಯಾತ ಉದಾಹರಣೆಗಳಿವೆ. ಇಂಥವೆಲ್ಲ ನಡೆಯುವಾಗ ಕಳೆದ 68 ವರ್ಷಗಳಿಂದ ನಾವು ಸಾಧಿಸಿದ್ದೇನು? ರೈತನ ರಕ್ತ, ಬೆವರು, ಮೂಳೆ ಮಾಂಸಗಳನ್ನು ತೈಲದಂತೆ ಉರಿಸಿ ಯಾರನ್ನು ಕೊಬ್ಬಿಸಲಾಯಿತು?
ಇವೆಲ್ಲದರ ನಡುವೆ, ನಗು ಕಳೆದುಕೊಂಡು ನಡೆದ ಕುಟುಂಬದಲ್ಲಿ ಹುಟ್ಟಿದ ನನಗೆ ಕೆಲವು ಘಟನೆಗಳು ತಣ್ಣಗೆ ಬೆಚ್ಚುವಂತೆ ಮಾಡುತ್ತವೆ. ಒಮ್ಮೆ ಹೀಗಾಯಿತು; ಹೊಲ ಕುಯಿಲಿನ ಟೈಮು. ರೈತರನ್ನು ರುಬ್ಬಿ ಹಾಕುವ ಶಕ್ತಿಗಳ ಜೊತೆಗೆ ಅನೇಕ ಸಾರಿ ನಿಸರ್ಗ ಶಕ್ತಿಯೂ ಸೇರಿಕೊಳ್ಳುತ್ತದೆ. ಹಿಂಗಾರಿನ ಅಂಗೈ ಅಗಲದ ಮೋಡದ ತುಣುಕೊಂದು ರಾಕ್ಷಸಾಕಾರ ಪಡೆದು, ಬೆಳೆದದ್ದನನ್ನೆಲ್ಲಾ ಕೊಚ್ಚಿ ಹಾಕುತ್ತದೆ. ಅನಾರಾಗಿ ಮಳೆ ಬಂದು ತಿನ್ನೋ ರಾಗಿ ಹೊತ್ಕೊಂಡೋಯ್ತು’ ಎಂಬ ಮಾತುಗಳನ್ನು ಈ ಸಂದರ್ಭಗಳಲ್ಲಿ ಮತ್ತೆ ಮತ್ತೆ ಕೇಳುತ್ತೇವೆ. ಮುಂಗಾರಿನಲ್ಲಿ ತೆಕ್ಕೆ ಬಿದ್ದ ಕಾಳಿಂಗಗಳಂತೆ ಏರಿ ಬರುವ ಮೋಡಗಳು ಊರು ತಲುಪುವ ಹೊತ್ತಿಗೆ ಬುರ್ನಾಸಾದರೆ, ಸ್ವಾತಿ- ವಿಶಾಖದಂತಹ ಮಳೆಗಳು ಹಾಗಲ್ಲ . ಪೂರ್ವದ ಕಡಲಿಂದ ಏರಿ ಧಾವಿಸಿ ಬರುವ ಮೋಡಗಳು ಕೆಲವೊಮ್ಮೆ ಅತಿ ಕಠೋರ ಮತ್ತು ನಿಷ್ಕರುಣಿ. ಪಶ್ಚಿಮ ಘಟ್ಟಗಳಂತಹ ಗೋಡೆಗಳ ಅಡ್ಡಿ ಇಲ್ಲದೆ ಏರಿ ಬರುವುದರಿಂದಲೊ ಏನೋ ಈ ಮಾರುತಗಳು ಮಾಡುವ ಅನಾಹುತ ಮಾತ್ರ ಊಹಾತೀತ (ಯಾಕೊ ಇತ್ತೀಚೆಗೆ ಇಂಥ ಮಳೆಗಳೂ ಬರೀ ನೆನಪುಗಳಾಗುತ್ತಿವೆ). ಪಾಪ ,ಪೂರ್ವದ ಕಡಲಂಚಿನ ಜನರಿಗೆ ಅಕ್ಟೋಬರ್ ನಂತರ ಆಸ್ತಿ ಪಾಸ್ತಿ ಉಳಿಸಿಕೊಳ್ಳುವುದರ ಜೊತೆಗೆ ಜೀವ ಉಳಿಸಿಕೊಳ್ಳುವುದೊಂದು ದೊಡ್ಡ ಸಾಹಸ. ಮೃತ್ಯುವೆಂಬುದು ಹಳ್ಳ, ಹೊಳೆ,ಗಾಳಿ, ಸಿಡಿಲು,ಕಡಲು ಯಾವ್ಯಾವುದೋ ರೂಪದಲ್ಲಿ ಯಾವಾಗ ಬೇಕಾದರೂ ಬಂದು ಅಪ್ಪಳಿಸಬಹುದು. ಈ ಟೈಮುಗಳಲ್ಲಿ ಪಾಪದ ರೈತರು ಥೇಟ್ ಬಿರುಗಾಳಿಗೆ ಸಿಕ್ಕ ತಾಯಿ ಹಕ್ಕಿಯಂತೆ ಹೋರಾಡುತ್ತಿರುತ್ತಾರೆ.’ರಾಜ ಯಾರಾದರೂ ರಾಗಿ ಬೀಸೋದು ತಪ್ಪಲಿಲ್ಲ’ ಎಂಬ ತತ್ವದ ಚುಂಗು ಹಿಡಿದು ಬಡಿದಾಡುವುದು ಮಾತ್ರ ಇನ್ನೂ ತಪ್ಪಿಲ್ಲ. ಮಕ್ಕಳು ಮರಿಯೆನ್ನದೆ ನಿಸರ್ಗದ ಎದುರಿನ ಈ ಹೋರಾಟದಲ್ಲಿ ತೊಡಗಿಕೊಳ್ಳುತ್ತಾರೆ.
ಬಹುಶಃ 7 ವರ್ಷದ ನಾನೂ ಸಹ ಇಂಥ ಟೈಮಿನಲ್ಲೆಲ್ಲ 12 ಎಮ್ಮೆಗಳನ್ನು ಮೇಯಿಸುವ ಜವಾಬ್ಧಾರಿ ನಿಭಾಯಿಸುತ್ತಿದ್ದೆ. ಮಳೆಗೂ ಎಮ್ಮೆಗಳಿಗೂ ವಿಶ್ವ ರಹಸ್ಯದ ಯಾವುದೊ ನಿಸ್ತಂತು ಸಂಬಂಧವಿದೆಯೆನ್ನಿಸುತ್ತದೆ.ಸಣ್ಣ ಹನಿ ಗಾಳಿಗೆ ಮೂಗರಳಿಸಿ ಬಾಲ ಎತ್ತಿ ತಿರುಗಿಸುತ್ತಾ ಹಳ್ಳ ಗುಡ್ಡಗಳೆನ್ನದೆ ದಿಕ್ಕಾಪಾಲು ಓಡತೊಡಗುತ್ತವೆ. ಸಿನಿಮಾಗಳಲ್ಲಿ ಮಾತ್ರ ತಮಾಷೆಯೆನ್ನಿಸುವ ಈ ದೃಶ್ಯಗಳು ನಿಜದಲ್ಲಿ ನಮಗೆ ನರಕ ಸದೃಶ್ಯವಾಗಿರುತ್ತಿದ್ದವು. ಇಂಥ ಘಳಿಗೆ ಬರದಿರಲೆಂದು ಮೋಡಕಟ್ಟುವ ವೇಳೆಗೆ ಅಂಬಿನಿಂದ ಎಮ್ಮೆಗಳನ್ನು ಹಿಡಿದು ಗಟ್ಟಿಯಾದ ಮರ ಗಿಡಗಳಿಗೆ ಕಟ್ಟಿ ಹಾಕುತ್ತಿದ್ದೆವು . ಇಲ್ಲವೆಂದರೆ ವಿಶ್ವಾಮಿತ್ರ ಸೃಷ್ಟಿಯಾದ ಇವುಗಳ ಕಾಲು ತೋರಿಸಿದ ಕಡೆ ಬುದ್ಧಿ ಓಡುತ್ತದೆ.ಅಂಥ ಸಮಯದಲ್ಲಿ ದೇವರೂ ಕೂಡ ಕಾಪಾಡಲಾರ. ಇದರ ಜೊತೆಗೆ ತೋಳ, ಕತ್ತೆಕಿರುಬ, ನರಿಗಳು ಮೋಡ ಮುಸುಕಿ ಹಗಲು ಕತ್ತಲಾದಂತೆ ಭ್ರಮೆ ಹುಟ್ಟಿಸಿದರೆ ಸಾಕು ಹಗಲಲ್ಲೆ ಬಗಲಲ್ಲಿ ಕೂತು ಊಳಿಡುತ್ತಿದ್ದವು ಅಷ್ಟೊತ್ತಿಗಾಗಲೆ ಸೀಳು ನಾಯಿಗಳು ಕಣ್ಮರೆಯಾಗಿದ್ದವು. ಹುಲಿಗಳು ಇನ್ನೂ ಮೊದಲೆ ಬಲಿಯಾಗಿ ಹೋಗಿದ್ದವು.ಆಗ ಹಸು, ಎಮ್ಮೆ ,ಕುರಿ ಕಾಯುತ್ತಿದ್ದವರೆಲ್ಲ ವಾರಿಗೆಯವರೆ. ಕೈಕಾಲು ಗಟ್ಟಿಯಿರುವ ದೊಡ್ಡವರೆಲ್ಲ ಹೊಲಗಳಲ್ಲಿ ಯುದ್ಧಕ್ಕಿಳಿದವರಂತೆ ದುಡಿಯುತ್ತಿದ್ದರು.
ನಿಷ್ಕರುಣಿ ಆಕಾಶ, ಕೋಟೆ ಕೋಟೆ ಮೋಡಗಳು, ಜೋಗಿ ಹಳ್ಳದಾಚೆಯ ಗುಡ್ಡಪ್ಪನಕಟ್ಟೆ, ಬಿಳಿಗುಂಡ್ಲು ಬಯಲಲ್ಲಿ, ಹಳ್ಳಗಳಲ್ಲಿ ಎಮ್ಮೆ ಮೇಯುತ್ತಿದ್ದವು. ಬೈಗು ಕವಿಯತೊಡಗಿತು. ನೋಡ ನೋಡುತ್ತಿದ್ದಂತೆ ನಮ್ಮ ಎಮ್ಮೆಯೊಂದು ಕೆಳಕ್ಕೆ ಕುಸಿದು ಬಿತ್ತು. ತುಸು ದೊಡ್ಡ ಹುಡುಗರು ‘ಹೋ ಎಮ್ಮೇನ ಲಕ್ವಾ ಹಕ್ಕಿ ಮುಟ್ಬಿಟ್ಟದೆ ಕಣ್ರೋ’ ಎಂದು ಕೂಗತೊಡಗಿದರು. ಯಾರ ಕಣ್ಣಿಗೂ ಹಕ್ಕಿ ಮಾತ್ರ ಕಾಣಲಿಲ್ಲ. ಎಮ್ಮೆ ಮಾತ್ರ ಮೇಲೇಳುತ್ತಿಲ್ಲ. ಈ ಹಕ್ಕಿ ಕುರಿತಂತೆ ಕಥೆಯೊಂದಿದೆ. ಅದು ನಿಜವೊ ಸುಳ್ಳೊ ಈ ತನಕ ತಿಳಿದಿಲ್ಲ. ಪಿಟ್ಟೆಕ್ಯಾತನಂಥ ಕಾವಿಗೆ ಕೂತ ಸಣ್ಣ ಹಕ್ಕಿಯೊಂದು ತನ್ನ ಮೊಟ್ಟೆಗಳ ಹತ್ತಿರ ಬರುವ ಪ್ರಾಣಿಗಳ ಮೈಮೇಲೆ ಚೀರಾಡಿ ಕೂತುಕೊಳ್ಳುತ್ತದಂತೆ . ಹಕ್ಕಿ ಕೂತ ತಕ್ಷಣವೆ ಆ ಪ್ರಾಣಿ ಲಕ್ವಾ ಹೊಡೆಸಿಕೊಂಡಂತೆ ಕುಸಿದು ಬೀಳುತ್ತದೆನ್ನುತ್ತಾರೆ. ಏನಾಯಿತೊ ಏನೊ ಎಮ್ಮೆ ಮಾತ್ರ ಮೇಲೇಳುತ್ತಿಲ್ಲ. ಉರಿಕೆಂಡದಂತ ನಮ್ಮ ಎಮ್ಮೆ, ಗೆಳೆಯರ ಪ್ರಕಾರ ಎರಡು ಬೆರಳು ಗಾತ್ರದ ಯಃಕಶ್ಚಿತ್ ಹಕ್ಕಿಯೊಂದರ ಸ್ಪರ್ಶಕ್ಕೆ ಸೊಂಟ ಮುರಿದುಕೊಂಡು ನೆಲಮುಖಿಯಾಯ್ತು ಎಂದರೆ ಹೇಗೆ ನಂಬುವುದು.
ಹುಡುಗರೆಲ್ಲ ಎಮ್ಮೆಗಳನ್ನು ಊರಕಡೆಗೆ ತಿರುಗಿಸಿ ನಡೆಯತೊಡಗಿದರು. ನಮ್ಮ 11 ಎಮ್ಮೆಗಳೂ ಅವುಗಳೊಟ್ಟಿಗೆ ಹೆಜ್ಜೆ ಹಾಕತೊಡಗಿದವು. ಒಬ್ಬನೇ ಉಳಿಯುವುದು ಹೇಗೆ ನಾನೂ ಮನೆ ಕಡೆ ನಡೆಯತೊಡಗಿದೆ. ಸೊಂಟ ಮುರಿದು ಬಿದ್ದ ಎಮ್ಮೆ ಸಣ್ಣಗೆ ನರಳುವುದು ಫರ್ಲಾಂಗಿನಷ್ಟು ದೂರದವರೆಗೂ ಕೇಳಿಸುತ್ತಿತ್ತು. ಅಳುತ್ತಲೇ ಮನೆಗೆ ಹೋಗಿ ಎಮ್ಮೆಗಳನ್ನು ಕಟ್ಟಿಹಾಕಿ ನೋಡಿದರೆ ಮನೆಯಲ್ಲಿ ಒಬ್ಬರೂ ಇಲ್ಲ. ಮಳೆ ಬರಬಹುದೆಂದು ಎಲ್ಲರೂ ಹೊಲದಲ್ಲೆ ಕೆಲಸ ಮಾಡುತ್ತಿದ್ದಾರೆ. ತುಸು ಹೊತ್ತಿಗೆ ಅಮ್ಮ ಮತ್ತು ಅಕ್ಕ ಬಂದರು. ಅಳುತ್ತಲೆ ಸುದ್ದಿ ತಿಳಿಸಿದೆ. ‘ತೋಳಗಳೊ , ಕಿರುಬಗಳೊ ತಿಂದುಬಿಡುತ್ತವೆಂದೂ ಮನೆಗೆ ದೊಡ್ಡವರು ಬರುವ ಹೊತ್ತಾಗಿದೆ, ಬಂದಕೂಡಲೇ ಕಳಿಸುತ್ತೇನೆ ನೀವು ಬೇಗನೆ ಹೋಗಿ ಕಾಯುತ್ತಿರಿ’ ಎಂದು ಆಜ್ಞಾಪಿಸಿದರು. ಅಮ್ಮ ಎಷ್ಟು ನಿಷ್ಕರುಣಿ ಎನ್ನಿಸಿತು. ಹೋಗಲಾರೆವೆಂದು ಪ್ರತಿಭಟಿಸುವಂತೆಯೂ ಇಲ್ಲ. ಕತ್ತಲು ನುಂಗಿ ಹಾಕುವಷ್ಟು ಗವ್ವೆನ್ನುತ್ತಿದೆ. ಎಮ್ಮೆ ಬಿದ್ದಿರುವ ಜಾಗ ಊರಿಂದ ಒಂದೂವರೆ ಮೈಲಿ ಆಚೆ ಇದೆ. ಕತ್ತಲಾದೊಡನೆ ಆ ದಾರಿಯಲ್ಲಿ ನಡೆಯುವುದಕ್ಕೆ ಗಟ್ಟಿಗುಂಡಿಗೆಯ ಗಂಡಸರೂ ಹೆದರುತ್ತಿದ್ದರು.
ಮೈಸೂರರಸರ ಕಾಲದಲ್ಲಿ ನೆಟ್ಟ ಹುಣಿಸೆ ಮರಗಳು , ಭೀಕರಾಕಾರದ ಆಲ ಮತ್ತು ಬೇವಿನ ಮರಗಳು ರಸ್ತೆಯುದ್ಧಕ್ಕೂ ನಿಂತಿವೆ. ಪ್ರತಿ ಮರದಲ್ಲೂ ಸತ್ತ ಒಬ್ಬೊಬ್ಬರು ದೆವ್ವವಾಗಿದ್ದಾರೆಂದು ಕಥೆಗಳು ಬೇರೆ . ಊರಾಚೆ ಓಣಿ, ಅದನ್ನು ದಾಟಿದೊಡನೆ ಕಾಲುದಾರಿ. ದಾರಿಯಲ್ಲಿ ತಡವರಿಸಿ ಹೋಗಬೇಕು, ಬೆಳಕಿನ ಯಾವ ಆಸರೆಯೂ ಇಲ್ಲ. ನಿಶಾಚರಿ ಗೂಬೆಗಳ ರಕ್ತ ಹೆಪ್ಪುಗಟ್ಟಿಸುವ ಘೂಕು. ನರಿ, ತೋಳ, ಕಿರುಬಗಳು ಹೆಜ್ಜೆ ಮೂಸಿ ಹಿಂದೆ ಬರುತ್ತಿರಬಹುದೆಂಬ ಭಯ.’ಇಂಥ ಮನೆಯಲ್ಲಿ ನಮ್ಮನ್ನು ಹುಟ್ಟಿಸಿದ್ದು ಯಾಕೆ ದೇವರೇ, ನಿನಗೆ ಕಣ್ಣಿದ್ದರೆ ಅವು ಇಂಗಿ ಹೋಗಲಿ’ ಎಂದು ಎಂಥದೊ ಶಾಪ ಹಾಕಿ ಅಕ್ಕ ನಡೆದಳು. ಭಯಭೀತ ಎರಡು ಪುಟ್ಟ ದೇಹಗಳು ಮೆಲ್ಲಗೆ ತೆವಳಿಕೊಂಡು ಅಂತೂ ಅರ್ಧ ಮೈಲಿ ನಡೆದವು. ಅದು ವೀರತಿಪ್ಪಯ್ಯನ ಹೊಲದ ಬೀಳು. ಹತ್ತು ವರ್ಷಗಳ ಹಿಂದೆ ಮಡಿದಿದ್ದ ನನ್ನ ಇನ್ನೊಬ್ಬ ಅಕ್ಕನನ್ನು ಸುಟ್ಟಿದ್ದ ಜಾಗ ಅದು. ಸತ್ತ ಅಕ್ಕನೂ ದೆವ್ವವಾಗಿದ್ದಾಳೆಂದು ಊರ ಜನ ಪುಕಾರೆಬ್ಬಿಸಿದ್ದರು. ಹಾಗಂದವರ ಮೇಲೆ ಅಮ್ಮ ಕೆಂಡಾಮಂಡಲ ರೇಗುತ್ತಿದ್ದಳು. ‘ಸರಿ ನೀ ದೆವ್ವವಾಗಿದ್ದರೂ ಸರಿಯೇ ಮನೆಮಕ್ಕಳನ್ನು ಉಳಿದ ದೆವ್ವ ಪಿಶಾಚಿಗಳಿಂದ, ಹಲ್ಲುಕಿರಿವ ತೋಳಗಳಿಂದ ಕಾಪಾಡು’ ಎಂದು ಮೆಲ್ಲನೆ ಕೇಳಿಕೊಂಡೆವು.
ಹಾಗೆ ನೂರು ಹೆಜ್ಜೆ ನಡೆದಿರಬಹುದು, ಥಟ್ಟನೆ ಭೂತದ ಕೈಗೆ ಸಿಕ್ಕ ಪಿಳ್ಳೆಗಳಂತೆ ನಿಂತುಬಿಟ್ಟೆವು. ಇಡೀ ಮರ, ಪೊದೆ ಎಲ್ಲವೂ ಭೂಮಿಯಿಂದ ಮುಗಿಲವರೆಗೆ ನಿಂತು ಕೆಂಡದ ಪಂಜು ಹಿಡಿದು ಝಗ್ಗ ಝಗ್ಗನೆ ಕುಣಿದಂತೆ, ಉರಿದು ಆರುವ ರಾಕ್ಷಸ. ಎಲ್ಲಿಂದಲೋ ಕೇಳುವ ಜೀವ ನಡುಗಿಸುವಂಥ ಶಬ್ಧಗಳು ಮತ್ತು ನುಂಗಿ ಹಾಕಿದ ಕತ್ತಲು ಮಾತ್ರ ಸಾಕ್ಷಿ. ಸಂದೇಹವೇ ಇರಲಿಲ್ಲ, ಅದು ಕೊಳ್ಳಿ ದೆವ್ವ. ಸತ್ತ ಹಸುಗೂಸಿನಂಥ ಅಕ್ಕ ದೆವ್ವವಾಗಿದ್ದರೆ ತಾನೇ ಇಂಥಾ ಭೀಕರಾಕಾರದ ಉರಿವ ಪಂಜಿನ ಮೈಯ ಕೊಳ್ಳಿದೆವ್ವದ ಎದುರು ತಾನೆ ಏನು ಮಾಡಲು ಸಾಧ್ಯ? ಮನೆ ದೇವರಾದಿಯಾಗಿ ಯಾರೂ ನಮ್ಮನ್ನು ಕಾಪಾಡಲಾರರು. ಇದರ ಕೈಯಲ್ಲಿ ಸಿಕ್ಕಿ ಭಸ್ಮವಾಗುವುದರ ಹೊರತು ಬೇರೆ ದಾರಿ ಇಲ್ಲ , ಸಾವು ಮೌನವಾಗಿ ಸುತ್ತಲೂ ಓಡಾಡುತ್ತಿದೆ ಎನ್ನಿಸಿತು. ಒಬ್ಬರ ಉಸಿರು ಇನ್ನೊಬ್ಬರಿಗೆ ಕೇಳಿಸುತಿತ್ತು. ಎತ್ತಲೂ ಕದಲಲಾರದ ನಿರ್ದಯಿ ಗಳಿಗೆ .ಜೀವನದಲ್ಲಿ ಎಂದೂ ಹೀಗಾಗಿರಲಿಲ್ಲ. ನೋಡಿರಲೂ ಇಲ್ಲ. ಅದಾಗಿ ಎಷ್ಟೋ ವರ್ಷಗಳಾದ ಮೇಲೆ ಕುವೆಂಪು ಅವರ ‘ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ’ ಎಂಬ ಪದ್ಯ ನಮ್ಮನ್ನು ನೋಡಿಯೇ ಬರೆದಿರಬೇಕು ಅನ್ನಿಸಿತು. ತುಸು ದೊಡ್ಡವಳಾದ ಅಕ್ಕನಿಗೆ ಏನಾಯಿತೋ ಕಾಣೆ, ರಪ ರಪಾ ಅಂತ ಹೊಡೆಯತೊಡಗಿದಳು. ತಡೆಯಲಾರದೆ ಮೆಲ್ಲನೆ ಭಿಕ್ಕತೊಡಗಿದೆ.’ಜೋರಾಗಿ ಅಳೋ’ ಎಂದು ಮತ್ತೆ ಹೊಡೆಯತೊಡಗಿದಳು. ಅಳತೊಡಗಿದೆ.
ಆಗ ಮನುಷ್ಯ ಜಗತ್ತಿನ ಆಕ್ರಂದನದ ಶಬುದವೊಂದರ ಆಸರೆಯ ಎಳೆಯೊಂದನ್ನು ಹಿಡಿದು ಮೆಲ್ಲನೆ ತೆವಳತೊಡಗಿದೆವು. ಅಳು ನಿಲ್ಲಿಸುವಂತಿಲ್ಲವೆಂದು ಆದೇಶಿಸಿದಳು. ದೆವ್ವ ಇಷ್ಟು ಹೊತ್ತಾದರೂ ಏನೂ ಮಾಡಿಲ್ಲವೆಂದು ತುಸು ಗೊಂದಲವೂ ಆಯ್ತು. ತುಸು ಹತ್ತಿರಕ್ಕೆ ನಡೆದು ಮೆಲ್ಲನೆ ದಿಟ್ಟಿಸಿ ನೋಡಿದೆವು ತಕ್ಷಣವೆ ಹೋದ ಜೀವವೊಂದು ಮರಳಿ ಎದೆಯೊಳಗೆ ಮಿಡುಕಿದಂತಾಯ್ತು. ಅದು ಮಿಂಚು ಹುಳುಗಳು ಕೂಡಿ ಕುಣಿಯುವ ರಾವಣ ನೃತ್ಯ. ಇಂಥ ದೃಶ್ಯವನ್ನೆಂದೂ ನಾವು ನೋಡಿರಲಿಲ್ಲ. ಕಲ್ಪಿಸಿಕೊಂಡಿರಲೂ ಇಲ್ಲ. ಆ ದೃಶ್ಯ ಈಗಲೂ ಕನಸಿನಲ್ಲಿ ಬಂದು ಬೆಚ್ಚಿ ಬೀಳಿಸುತ್ತದೆ. ಗಿಡ್ಡಯ್ಯನ ಕುಂಟೆಯ ಮೋಟು ಆಲದ ಮರ , ಪಾಳು ಬಿದ್ದ ಮಂಟಪ ಎಲ್ಲವೂ ದೆವ್ವಗಳ ಕಾರಸ್ಥಾನವೆ. ಕಲ್ಲುಕಲ್ಲಿಗೂ ರಕ್ತಕಾರುವ ಕಥೆಗಳು. ಬಹುಶಃ ಟಿ.ವಿ ಬಂದ ಮೇಲೆ ಮನುಷ್ಯನ ಮುಗ್ಧತೆ, ನಿಗೂಢಗಳ ಕುರಿತಾದ ವಿಸ್ಮಯ ಪ್ರಜ್ಞೆಗಳೆಲ್ಲ ಮರೆಯಾಗಿ ಹೋದವೆನ್ನಿಸುತ್ತದೆ.
ಪ್ರತಿ ಹೆಜ್ಜೆಯೂ ಸಾವಿನ ಬಾಗಿಲಿಗೆ ಇಡುತ್ತಿರುವಂತೆ ಭಾಸವಾಗುತಿತ್ತು. ನಾನು ಅಳುತ್ತಲೆ ನಡೆದೆ. ಅಕ್ಕ ಬಯ್ಯುತ್ತಾ, ಹೊಡೆಯುತ್ತಾ ಬಂದಳು. ನನ್ನ ಅಳುವೆ ಅವಳಿಗೆ ಹೆಜ್ಜೆ ಇಡಲು ಆಸರೆ . ಇಲ್ಲದಿದ್ದರೆ ನಿಶ್ಯಬ್ಧವೆಂಬುದು ನಮ್ಮನ್ನು ಕತ್ತು ಹಿಸುಕಿ ಕೊಂದು ಹಾಕುತಿತ್ತು. ಅಂತೂ ಎಮ್ಮೆ ಇರುವ ಸ್ಥಳಕ್ಕೆ ನಡೆದೆವು. ಕಿರುಬ -ತೋಳಗಳ ಬಿಸಿ ಬಿಸಿಯಾದ ಉಗ್ರ ಹಸಿವಿನ ವಾಸನೆ ತಟ್ಟಿದಂತೆಯೂ , ಕತ್ತಲು ನಮ್ಮನ್ನು ಹಿಡಿದು ಕವುಚಿ ಹಾಕಿದಂತೆಯೂ ಭಾಸವಾಯ್ತು. ಪಾಪ ನಮ್ಮನ್ನು ಇಂಥ ಘನ ಘೋರ ಕಷ್ಟಕ್ಕೆ ಸಿಕ್ಕಿಸಿದ ಎಮ್ಮೆಯೂ ನಾಲಿಗೆ ಚಾಚಿ ಓಡಾಡುತ್ತಿರುವ ಪ್ರಾಣಿಗಳ ಎದುರು ತನ್ನ ಸಾವಿಗೆ ಕಾಯುತ್ತಿದೆಯೇನೊ ಎಂಬಂತೆ ನರಳುತಿತ್ತು. ಸಾವಿನ ನೋವು ಮೈ ನೇವರಿಸುವ ಗಳಿಗೆಗಳಲ್ಲಿ ಮನುಷ್ಯ-ಪ್ರಾಣಿ-ಮೃಗಗಳೆಲ್ಲದರ ಅಸ್ತಿತ್ವದ ಅಸಹಾಯಕತೆಗಳಲ್ಲಿ ವ್ಯತ್ಯಾಸಗಳಿವೆಯೇ? ಹಸಿವು ನಾನಾ ತರ.
ನಾನು ಅಲ್ಲಿಗೆ ಕಾಲಿಟ್ಟಾಗ ಕತ್ತಲು ನಿಧಾನವಾಗಿ ಊರಿಗೆ ಊರನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು. ಅಷ್ಟು ದೂರದಿಂದ ಬಂದಿದ್ದ ನಾನು ಆಸೆಯಿಂದಲೇ ಅವರ ಮನೆಯ ಬಾಗಿಲು ಬಡಿದೆ.
ಬಾಗಿಲು ತೆರೆಯಿತಾದರೂ ನನಗೆ ಬೇಕಾದವರು ಇರಲಿಲ್ಲ.
ನಾನು ಹಾಗೆ ಅಷ್ಟು ದೂರದಿಂದ ತಹತಹಿಸಿ ಬಂದದ್ದು ಕೃಷ್ಣನ ದರ್ಶನಕ್ಕಾಗಿ. ’ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ, ಕೃಷ್ಣಾ ಎನಬಾರದೆ’ ಎನ್ನುವ ಸಾಲುಗಳನ್ನ ಸದಾ ನೆಂಚಿಕೊಳ್ಳುತ್ತಲೇ ಬಂದ ನಾನು ನೇರವಾಗಿ ಆ ಕೃಷ್ಣನ ಮನೆಯ ಬಾಗಿಲಿಗೇ ಬಂದು ನಿಂತಿದ್ದೆ.
ಆದರೆ ಹಾಗೆ ನಾನು ಕೃಷ್ಣನನ್ನು ಹುಡುಕುತ್ತಾ ಬಂದದ್ದು ದ್ವಾರಕೆಗಲ್ಲ… ಕೆರೆಮನೆಗೆ.
ಕೃಷ್ಣ ಹೇಗಿದ್ದನೋ ನನಗಂತೂ ಗೊತ್ತಿಲ್ಲ. ನನಗೆ ಮಾತ್ರವಲ್ಲ, ಕೃಷ್ಣನ ಬಗ್ಗೆ ನೂರೆಂಟು ಹಾಡಿದವರಿಗೂ, ಕೃಷ್ಣನ ಭಜಿಸಿದವರಿಗೂ, ಕೃಷ್ಣನಿಗಾಗಿ ಹಪಹಪಿಸಿದವರಿಗೂ ಗೊತ್ತಿಲ್ಲ.
ಆದರೆ ’ಕೃಷ್ಣ ಹೇಗಿರುತ್ತಾನೆ’ ಎಂದು ಯಕ್ಷಗಾನ ಪ್ರಿಯರಿಗ್ಯಾರಿಗಾದರೂ ಕೇಳಿ ನೋಡಿ, ಅವರು ಒಂದಿಷ್ಟೂ ಅನುಮಾನವಿಲ್ಲದಂತೆ ’ಶಂಭುಹೆಗಡೆಯವರ ಹಾಗೆ’ ಎಂದು ಬಿಡುತ್ತಾರೆ.
ಕೃಷ್ಣ ಎಂದರೆ ಅದು ಶಂಭು ಹೆಗಡೆಯೇ ಎನ್ನುವ ಆ ಅಚ್ಚನ್ನು ಯಕ್ಷಗಾನ ಕಂಡವರ ಮನದಿಂದ ಬಹುಷಃ ಅಳಿಸಲು ಸಾಧ್ಯವೇ ಇಲ್ಲವೇನೋ.
ನಾನು ಗೆಳೆಯ ಶಿವಾನಂದ ಹೆಗಡೆಯನ್ನು ಭೇಟಿ ಮಾಡಲೆಂದು ಕಲಾಕ್ಷೇತ್ರದ ಚೌಕಿಗೆ ಹೆಜ್ಜೆ ಹಾಕಿದಾಗ ಆ ‘ಕೃಷ್ಣ’ನ ದರ್ಶನವಾಗಿಹೋಯ್ತು.
ಆಗ ತಾನೆ ಪ್ರಸಾಧನ ಮುಗಿಸಿಕೊಂಡಿದ್ದ ಶಂಭು ಹೆಗಡೆಯವರು ರಂಗಕ್ಕೆ ಇನ್ನೇನು ಹೆಜ್ಜೆಯಿಡಬೇಕು… ಆಗ ಕಿರೀಟವಿಲ್ಲದ ತಲೆಯನ್ನು ದಿಂಬಿಗೊರಗಿಸಿ ಕಣ್ಣು ಮುಚ್ಚಿದ್ದರು. ರಂಗಕ್ಕೆ ಇಳಿಯಲು ಶಂಭು ಹೆಗಡೆಯವರು ಸಜ್ಜಾಗುತ್ತಿದ್ದದ್ದೇ ಹಾಗೆ. ಅವರು ಇಹಪರಗಳಿಂದ ಒಂದರೆಕ್ಷಣ ದೂರವಾಗಿಬಿಡುತ್ತಿದ್ದರು.
ದುರ್ಯೋಧನನ ಬಳಿ ಕೃಷ್ಣ ಸಂಧಾನಕ್ಕಾಗಿ ಆಗಮಿಸುತ್ತಾನೆ. ಉರಿ ಉರಿಯುತ್ತಿದ್ದ ದುರ್ಯೋಧನ ಕೃಷ್ಣನನ್ನು ಕಟ್ಟಿಹಾಕುವಂತೆ ಆಜ್ಞಾಪಿಸುತ್ತಾನೆ. ಆಗ ನೋಡಬೇಕು ಶಂಭು ಹೆಗಡೆಯವರ ಅಭಿನಯ… ಮುಖದಲ್ಲಿ ನಗು ತುಳುಕಿಸುತ್ತಾ, ಎದುರಿಗಿರುವ ದುರ್ಯೋಧನನ ಮುಖ ಇನ್ನಷ್ಟು ಉರಿಯುವಂತೆ ಅವರು ಹೆಜ್ಜೆ ಹಾಕುತ್ತಿದ್ದ ಭಂಗಿಯನ್ನು ನಾನಿನ್ನೂ ಮರೆತಿಲ್ಲ.
ಅಂದು ರಂಗದ ಚೌಕಿಯಲ್ಲಿ ಕಂಡ ನಂತರ ಈ ಕೃಷ್ಣನನ್ನು ಮತ್ತೆ ಮತ್ತೆ ಭೇಟಿ ಮಾಡಿದ್ದೇನೆ.
ಮುಂಬೈಗೆ ಹೋಗುವ ದಾರಿಯಲ್ಲಿ ವೇಷದ ಹತ್ತೆಂಟು ದೊಡ್ಡ ಪೆಟ್ಟಿಗೆಗಳ ಸಮೇತ ಮಂಗಳೂರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ, ಗೆಳೆಯ ಎಸ್ ಎಂ ಹೆಗಡೆಯವರ ಮನೆಯಲ್ಲಿ ಊಟ ಮಾಡುತ್ತಿರುವಾಗ, ಸೋಮೇಶ್ವರದ ಕಡಲ ಬದಿಯಲ್ಲಿ ಯಕ್ಷಗಾನದ ಮಾತು ಮಥಿಸುತ್ತಿದ್ದಾಗ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಡತಗಳನ್ನು ಹೊತ್ತು ತಾವು ಹುಟ್ಟುಹಾಕಿದ ಯಕ್ಷಗಾನ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಓಡಾಡುತ್ತಿದ್ದಾಗ…. ಹೀಗೆ.
ಶಂಭು ಹೆಗಡೆ ಅಂದರೆ ಸಾಕು ಯಕ್ಷಗಾನದ ನಡೆದಾಡುವ ದೇವರು ಎಂದೇ ಅರ್ಥ. ಸಜ್ಜನ ಯಕ್ಷಗಾನಕ್ಕೆ ಮತ್ತೊಂದು ಹೆಸರು ಎನ್ನುವಂತಿದ್ದರು.
ಶಂಭು ಹೆಗಡೆಯವರ ಬಗ್ಗೆ ನನ್ನ ಕುತೂಹಲಕ್ಕೆ ಇದ್ದ ಕಾರಣವೇ ಬೇರೆ. ಅವರು ಆ ಕಾಲಕ್ಕೇನೇ ಯಕ್ಷಗಾನದಲ್ಲಿ ಹೊಸ ಗಾಳಿ ಬೀಸಲು ಕಾರಣರಾಗಿದ್ದರು.
ದಕ್ಷಿಣ ಕನ್ನಡದಲ್ಲಿ ಶಿವರಾಮ ಕಾರಂತರು ಕಾಲಿಗೆ ಗೆಜ್ಜೆ ಕಟ್ಟಿ ನಿಂತಿದ್ದರೆ, ಉತ್ತರ ಕನ್ನಡದಲ್ಲಿ ಶಂಭು ಹೆಗಡೆಯವರು ಕುಣಿತಕ್ಕೆ ಹೊಸ ಹೆಜ್ಜೆ ವಿನ್ಯಾಸ ಮಾಡುತ್ತಿದ್ದರು.
60ರ ದಶಕದಲ್ಲಿಯೇ ಯಕ್ಷಗಾನಕ್ಕೆ ಹೊಸ ಹೆಜ್ಜೆಗಳನ್ನು ಬೆಸುಗೆ ಹಾಕಲು ಅವರು ದೆಹಲಿಯತ್ತ ಮುಖ ಮಾಡಿದ್ದರು. ದೆಹಲಿಯಲ್ಲಿ ಮಾಯಾರಾವ್ ಅವರ ’ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕೊರಿಯೋಗ್ರಾಫಿ’ಯಲ್ಲಿ ತಿಂಗಳುಗಟ್ಟಲೆ ಕೊರಿಯೋಗ್ರಫಿ ಕಲಿತು ಬಂದರು.
ನಾನು ಲಾಂಚನ್ನೇರಿ, ನದಿ ದಾಟಿ, ಇಡೀ ಸಂಜೆ ಹೊನ್ನಾವರದ ಪೇಟೆಯಲ್ಲಿ ಸುತ್ತುತ್ತಾ, ಕಡಲಿನ ಆರ್ಭಟಕ್ಕೆ ಕಿವಿಗೊಟ್ಟು, ಮೀನು ಅಂಗಡಿಗಳ ಏರು ದನಿಗೆ ಬೆರಗಾಗಿ ಮತ್ತೆ ಕೆರೆಮನೆಗೆ ಬಂದಾಗ ರಾತ್ರಿಯಾಗಿತ್ತು.
ಶಂಭು ಹೆಗಡೆಯವರು ಬಂದು ನನಗಾಗಿ ಕಾದು ಕುಳಿತಿದ್ದರು. ಚಂದಿರನನ್ನು ಸರಿಸಿ, ಸೂರ್ಯನನ್ನು ಬರಮಾಡಿಕೊಳ್ಳುವವರೆಗೆ ನಾವು ಮಾತನಾಡಿಯೇ ಸಿದ್ಧ ಎನ್ನುವಂತೆ ನಾವು ಕುಳಿತು ಬಿಟ್ಟೆವು.
’ಯಾವುದೇ ಕಲಾವಿದನಿಗೆ ಕನ್ನಡಿ ಮುಖ್ಯ’ ಎಂದರು. ನನ್ನ ಪ್ರಶ್ನಾರ್ಥಕ ಚಿಹ್ನೆಯ ಮುಖ ಅವರಿಗೆ ಕಂಡಿತೇನೋ, ’ಕನ್ನಡಿ ನೋಡಿದಾಗ ನಮ್ಮ ಆಕೃತಿ ಸ್ವಚ್ಛವಾಗಿ ಕಾಣುತ್ತದೆ. ಹಾಗೆಯೇ ನಾವು ಬೇರೆ ಕಲೆಗಳನ್ನು ನೋಡುತ್ತಾ ನಮ್ಮ ಕಲೆ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯಕ್ಷಗಾನದ ಕಲಾವಿದರು ಇತರೆ ರಂಗಭೂಮಿಯನ್ನು ಜಾಸ್ತಿ ಅಧ್ಯಯನ ಮಾಡುವುದಿಲ್ಲ. ಯಕ್ಷಗಾನ ಎಷ್ಟು ಮುಖ್ಯ ಎನ್ನುವುದು ಗೊತ್ತಾಗಬೇಕಾದರೆ ನಾವು ಬೇರೆ ಕಲೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕು ಎಂದರು.
ಬಹುಷಃ ದೆಹಲಿಯಲ್ಲಿನ ಅಧ್ಯಯನ, ಇತರೆ ಕಲೆಗಳ ಬಗ್ಗೆ ಇದ್ದ ಆಸಕ್ತಿಯಿಂದಲೇ ಇರಬೇಕು ಶಂಭು ಹೆಗಡೆಯವರು ಸದಾ ಹೊಸತರ ಹುಡುಕಾಟ ನಡೆಸುತ್ತಲೇ ಇದ್ದರು.
ಯಕ್ಷಗಾನಕ್ಕೆ ಒಂದು ಹೊಸರೀತಿಯ ರಂಗಮಂಟಪ ಕೊಟ್ಟಿದ್ದೇ ಇವರು. ಯಕ್ಷಗಾನ ನೋಡಲು ಜನ ಹೆಚ್ಚಾದಂತೆ ಕಂಬಗಳೇ ಅಡ್ಡಿಯಾಗುತ್ತಾ ಹೋಯಿತು. ಯಕ್ಷಗಾನ ಆಡುವವರಿಗೂ, ನೋಡುವವರಿಗೂ ಇಬ್ಬರಿಗೂ ಅಡ್ಡಿ. ಆಗಲೇ ಶಂಭು ಹೆಗಡೆಯವರು ಅರ್ಧ ಚಂದ್ರಾಕೃತಿಯ ರಂಗಮಂಟಪ ವಿನ್ಯಾಸ ಮಾಡಿದ್ದು.
ಸಂತೋಷ ಆದರೆ ಮಾತ್ರ ಕುಣಿತ ಎನ್ನುವ ಕಾಲವೂ ಇತ್ತು. ಕರುಣಾ ರಸಕ್ಕೆ ನೃತ್ಯವೇ ಇರಲಿಲ್ಲ. ಆಗ ಶಂಭು ಹೆಗಡೆ ಒಂದು ಹೆಜ್ಜೆ ಮುಂದೆ ಬಂದರು. ’ರಸ, ಕುಣಿತಕ್ಕಾಗಿ ಇರುವುದಿಲ್ಲ, ನೃತ್ಯದಲ್ಲಿ ರಸ ಹೊರಹಾಕುವುದು ಮುಖ್ಯ’ ಎಂದವರೇ ಶೋಕ ಹಾಗು ಕರುಣ ರಸಕ್ಕೂ ನೃತ್ಯವನ್ನು ಸಂಯೋಜಿಸಿದರು.
ಯಕ್ಷಗಾನದಲ್ಲಿ ಇನ್ನೊಂದು ಸಮಸ್ಯೆ ಇತ್ತು. ಯಕ್ಷಗಾನದ ಕೆಟ್ಟ ಮತ್ತು ಒಳ್ಳೆಯ ಪಾತ್ರವನ್ನು ಅದರ ಕಿರೀಟಗಳೇ ತಿಳಿಸಿಬಿಡುತ್ತವೆ. ಆದರೆ ಅತ್ತ ಒಳ್ಳೆಯದೂ ಅಲ್ಲದ, ಇತ್ತ ಕೆಟ್ಟದೂ ಅಲ್ಲದ ಅರೆ ರಾಕ್ಷಸ ಪಾತ್ರಗಳಿಗೆ ಕಿರೀಟ, ವೇಷ ಇರಲಿಲ್ಲ. ಆಗ ಶಂಭು ಹೆಗಡೆ ಒಳ್ಳೆಯ, ಕೆಟ್ಟ ಎರಡೂ ಗುಣಗಳನ್ನೂ ಮಿಶ್ರಣ ಮಾಡಿದ ಕಿರೀಟ ವಿನ್ಯಾಸ ಮಾಡಿಕೊಟ್ಟರು.
ನಾನು ’ಅಭಿನಯ ದರ್ಪಣ’ವನ್ನು ಮೆಚ್ಚುವವನು. ಯಾಕೆಂದರೆ ಅದರಲ್ಲಿ ಪರಂಪರೆಯ ಜೊತೆ ಪ್ರಯೋಗಕ್ಕೂ ಅವಕಾಶವಿದೆ. ಪರಂಪರೆಗೆ ಜೋತು ಬೀಳಬಾರದು, ಹೊಸದಕ್ಕೆ ತೆರೆದುಕೊಳ್ಳಬೇಕು’ ಎಂದ ತಕ್ಷಣ ನನಗೆ ಯಕ್ಷಗಾನಕ್ಕೆ ಆಧುನಿಕ ವಿಷಯಗಳನ್ನು ಬೆಸುಗೆ ಹಾಕಲು ನಡೆಯುತ್ತಿದ್ದ ಪ್ರಯತ್ನ ನೆನಪಾಯಿತು.
’ಯಕ್ಷಗಾನ ಇವತ್ತಿನ ಜರೂರಿಗೆ ಸ್ಪಂದಿಸುವ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಿರುವುದರ ಬಗ್ಗೆ ನಿಮಗೇನನ್ನಿಸುತ್ತದೆ’ ಎಂದೆ.
’ಸಾಮಾಜಿಕ ವಿಷಯಗಳು ಖಂಡಿತಾ ಬೇಕು, ಆದರೆ ನೇರವಾಗಿ ಬೇಡ ಎನ್ನುವ ನಿಲುವು ನನ್ನದು. ವಸ್ತುವಿನ ಚೌಕಟ್ಟಿನೊಳಗೆ ಏನು ಇದೆ, ಅದನ್ನು ಹುಡುಕಬೇಕು. ಮರ ಕಡಿಯಬಾರದು ಅಂತ ಅರಣ್ಯಾಧಿಕಾರಿ ಹೇಳಿದ ಹಾಗೆ ಹೇಳಿದರೆ ಏನು ಪ್ರಯೋಜನ? ಬದಲಿಗೆ ಪ್ರಕೃತಿಯನ್ನು ಪ್ರೀತಿಸುವ ಗುಣವನ್ನು ಜಾಗೃತಿಗೊಳಿಸಬೇಕು. ’ಖಾಂಡವ ದಹನ’ ಕಥೆ ನೋಡಿ. ಅಲ್ಲಿ ಪರಿಸರ ನಾಶಮಾಡಬೇಡಿ ಎನ್ನುವುದಿಲ್ಲ. ನಾಶ ಮಾಡಿದ್ದರಿಂದ ಏನಾಯಿತು ಎನ್ನುವ ವಿವರಣೆ ಇದೆ. ಪುರಾಣದಲ್ಲಿಯೆ ಇಂದಿನ ಸಮಸ್ಯೆಗೆ ಸ್ಪಂದಿಸುವ, ವ್ಯವಸ್ಥೆಗೆ ಟ್ರೀಟ್ ಮೆಂಟ್ ಕೊಡುವ ವಸ್ತುಗಳಿವೆ. ಅದನ್ನು ಹುಡುಕುವ ನೋಟ ಇರಬೇಕು’ ಎಂದರು.
ಯಕ್ಷಗಾನದಲ್ಲಿ ಸಿನಿಮಾ ಹಾಡು, ಡ್ಯಾನ್ಸ್ ಎಲ್ಲಾ ಇಣುಕಿ ಹೋಗುತ್ತಿರುವ ಸಂದರ್ಭದಲ್ಲಿ ಶಂಭು ಹೆಗಡೆಯವರ ’ಶುದ್ಧ ಯಕ್ಷಗಾನ’ ಏನಾಗುತ್ತಿದೆ ಎಂದು ಕೇಳುವ ಬಯಕೆಯಾಯಿತು.
ಶಂಭು ಹೆಗಡೆ ಮುಖ ಚಿಕ್ಕದು ಮಾಡಿಕೊಂಡರು. ‘ಮೋಹನ್, ಬರೀ ಹಾಡು, ಡ್ಯಾನ್ಸ್ ಅಲ್ಲ, ಯಕ್ಷಗಾನದ ಹೆಣ್ಣು ಪಾತ್ರಧಾರಿಗಳು ರವಿಕೆ ಹರಿದುಕೊಂಡು ವೇದಿಕೆಗೆ ಬರುತ್ತಾರೆ. ಸಂಭಾಷಣೆಯಲ್ಲಿ ಡಬಲ್ ಮೀನಿಂಗ್ ಕಾಣಿಸಿಕೊಂಡಿದೆ’ ಎಂದರು.
ಬೆಳಕು ಮೂಡಲು ಲೋಕ ಸಜ್ಜಾಯಿತು ಎನ್ನುವಂತೆ ಹಕ್ಕಿಗಳು ಚಿಲಿಪಿಲಿ ಎನ್ನತೊಡಗಿದವು.
’ಇಲ್ಲ ಕಾನೂನಿನಿಂದ ಇದನ್ನೆಲ್ಲಾ ನಿಯಂತ್ರಣ ಮಾಡಲಾಗುವುದಿಲ್ಲ. ಹೆಚ್ಚು ಜನ ಪ್ರೇಕ್ಷಕರನ್ನು ಸೆಳೆಯಬೇಕು ಎನ್ನುವುದಕ್ಕೆ ಕೆಟ್ಟ ಕ್ರೌರ್ಯ ಮತ್ತು ಅತಿಯಾದ ಲೈಂಗಿಕ ಪ್ರದರ್ಶನವೇ ಶಾರ್ಟ್ ಕಟ್. ಆದರೆ ನಮ್ಮಂತಹ ಹಲವಾರು ಮೇಳಗಳಾದರೂ ಶ್ರೇಷ್ಠ ಅಭಿರುಚಿ ಉಳಿಸಬೇಕು. ವ್ಯವಸಾಯ ಮೇಳಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡೋಣ. ಸಿನಿಮಾದಲ್ಲೂ ಆರ್ಟ್, ಕಮರ್ಷಿಯಲ್ ಅಂತ ಇಲ್ಲವೇ? ಒಳ್ಳೆ ಅಭಿರುಚಿ ಇರುವ ಪ್ರೇಕ್ಷಕರು ಇರುವವರೆಗೂ ಒಳ್ಳೆಯ ಯಕ್ಷಗಾನ ಸಹ ಸಾಯುವುದಿಲ್ಲ.’
ಅಷ್ಟರಲ್ಲಾಗಲೇ ಬೆಳಕು ನಮ್ಮ ಅಂಗೈಯೊಳಗೆ ಬಂದು ಕುಳಿತಿತ್ತು.
’ಬನ್ನಿ ಹೀಗೆ, ಎರಡು ಹೆಜ್ಜೆ ಹಾಕೋಣ’ ಎಂದವರೇ ಅಲ್ಲೇ ಕೆರೆಮನೆ ಸರ್ಕಲ್ ನಲ್ಲಿದ್ದ ತುಪ್ಪದ ದೋಸೆ ಹೋಟೆಲ್ ಗೆ ಕರೆದುಕೊಂಡು ಹೋದರು.
ನಾನು ಮಂಗಳೂರಿಗೆ ಹೋಗಲೇಬೇಕಿತ್ತು. ಅವರಿಗೆ ಭಟ್ಕಳದಲ್ಲಿ ಕೆಲಸವಿತ್ತು. ಹಾಗಾಗಿ ನಾವಿಬ್ಬರೂ ಅಲ್ಲೆ ಹಾದುಹೋಗುತ್ತಿದ್ದ ಮೆಟಡಾರ್ ವ್ಯಾನ್ ಗೆ ಕೈ ಅಡ್ಡ ಹಾಕಿದೆವು.
ವ್ಯಾನ್ ಏರಿದ್ದೇ ತಡ, ಅಶ್ಲೀಲ ಹಾಡೊಂದು ರಪ್ಪನೆ ಕಿವಿಗೆ ರಾಚಿತು.
ನಾನು ಶಂಭು ಹೆಗಡೆಯವರ ಕಡೆ ನೋಡಿದೆ. ಕಣ್ಣು, ಕಿವಿ ಎಲ್ಲವೂ ಅಶ್ಲೀಲವಾಗುತ್ತಿರುವುದನ್ನು ಕಂಡು ತಬ್ಬಿಬ್ಬಾಗಿದ್ದ ಆ ಕೃಷ್ಣ ವಿಷಾದದ ನಗೆ ಮೂಡಿಸಿದರು.
——-
ಅಮ್ಮ ವಿಜಯಮ್ಮ ನನಗೆ ಶಂಭು ಹೆಗಡೆ ಅವರ ಸಂದರ್ಶನ ಮಾಡಿಕೊಡು ಎಂದರು. ಆಗ ಅವರು ‘ಸಂಕುಲ’ದ ಸಂಪಾದಕರು.
ಕನ್ನಡ ಕಂಡ ಒಂದು ಒಳ್ಳೆಯ ಸಾಹಿತ್ಯ, ಸಾಂಸ್ಕೃತಿಕ ಡೈಜೆಸ್ಟ್ ಅದು.
ಅಮ್ಮನಿಗೆ ಇಲ್ಲ ಎಂದವರುಂಟೆ ?. ಮಂಗಳೂರಿನಲ್ಲಿದ್ದ ನಾನು ಹೊನ್ನಾವರ ತಲುಪಿದೆ. ಅಲ್ಲಿಂದ ಮುಂದಿನ ಕಥೆ ಇದು
ತೀರಾ ವೈಯಕ್ತಿಕವಾದ ಬರಹಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದೆ ಎಂಬ ಪ್ರಶ್ನೆ ನನ್ನನ್ನು ಬಹಳ ಕಾಲದಿಂದ ಕಾಡುತ್ತಿದೆ. ಹಾಗೆ ಹಂಚಿಕೊಳ್ಳುವುದು ಲಜ್ಜೆ ಎನ್ನಿಸುತ್ತಿದ್ದ ಕಾರಣದಿಂದ ಈ ರೀತಿಯ ಬರಹಗಳನ್ನು ಬರೆಯದೆ ಹತ್ತನ್ನೆರಡು ವರ್ಷಗಳಿಂದ ಸುಮ್ಮನಿದ್ದು ಬಿಟ್ಟಿದ್ದೇನೆ. ಆದರೆ ಹಿರಿಯರಾದ ನಾಗೇಶ್ ಹೆಗಡೆ, ಕೆ.ಪಿ.ಸುರೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಕರೀಗೌಡ್ರು ಮುಂತಾದವರು ನಮ್ಮ ‘ಕೆರೆ ಕಾಯಕ’ ದ ಕುರಿತು ಬರೆಯಲು ಸಿಕ್ಕಾಗಲೆಲ್ಲ ಹೇಳುತ್ತಲೇ ಬಂದಿದ್ದರು. Documentation ಬಹಳ ಮುಖ್ಯ, ನಿಮ್ಮ ಅನುಭವಗಳು ಉಳಿದವರಿಗೆ ಮಾರ್ಗದರ್ಶನ ನೀಡುವಂತಾದರೆ ಅನುಕೂಲ ಎಂಬುದು ಅವರ ಮಾತು.
ನಾಗೇಶ್ ಹೆಗಡೆಯವರು ಕನ್ನಡದ ನಟ ಯಶ್ ಗೆ ಒಂಥರಾ ಗುರುಗಳು. ಯಶ್ ಉತ್ತರ ಕರ್ನಾಟಕದ ಕೆಲವು ಕೆರೆಗಳನ್ನು ಸರಿ ಮಾಡಿ ನೀರು ನಿಲ್ಲುವಂತೆ ಮಾಡುತ್ತಿದ್ದರು. ಅವರಿಗೆ ನನ್ನ ನಂಬರ್ ಕೊಟ್ಟು ಹಲವು ಬಾರಿ ಮಾತನಾಡಿಸಿದ್ದರು. ಯಶ್ ಈಗ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ.
ನಮ್ಮ ಕೆರೆ ಅನುಭವ 2011-12 ರದು. ಅದುವರೆಗೆ ದೈನಂದಿನ ಕೆಲಸದ ನಡುವೆ ರಸ್ತೆ ವಿಸ್ತರಣೆಯಂಥ ಕೆಲಸಗಳು ಅಭಿವೃದ್ಧಿ ದೃಷ್ಟಿಯಿಂದ ಮುಖ್ಯ ಎಂದು ಭಾವಿಸಿ ಆ ದಿಕ್ಕಿನಲ್ಲಿ ತೊಡಗಿದ್ದೆವು. ಪುತ್ತೂರು ರಸ್ತೆ ವಿಸ್ತರಣೆಯ ಕತೆ ಕೂಡ ಒಂಥರಾ ರೋಚಕವೆ. ಅದನ್ನು ತಡೆಯಲು ಕೆಲವರು ಏನೆಲ್ಲ ಪ್ರಯತ್ನಗಳನ್ನು ಮಾಡಿದ್ದರು! ನಮ್ಮ ಮೂರೂ (AC,ASP ,TAHASILDAR) ವಸತಿ ಗೃಹಗಳಿಗೆ ಕೇರಳದಿಂದ ಮಾಂತ್ರಿಕರನ್ನು ಕರೆಸಿ ರಾತ್ರೋರಾತ್ರಿ ಕೋಳಿ ಬಲಿ ನೀಡಿ ಕಟ್ಟು ಮಾಡಿಸಿದ್ದರು. ಆದರೂ ರಸ್ತೆ ವಿಸ್ತರಣೆ ಆಯಿತು. ಅಲ್ಲಿ ಆಟೋ ಡ್ರೈವರುಗಳು, ಸಣ್ಣ ಪುಟ್ಟ ಜನ ನಮ್ಮ ಬೆಂಬಲಕ್ಕಿದ್ದರು. ಇಂಥ ಹಲವು ಅನುಭವಗಳಿದ್ದರೂ ಕೆರೆ ಕ್ಲೀನು ಮಾಡುವಂಥ ಸಾಮೂಹಿಕ ಸ್ವರೂಪದ ಕೆಲಸ ನನಗೂ ಹೊಸದೆ.
ತಿಪಟೂರು ರಸ್ತೆ ವಿಸ್ತರಣೆ ಕೆಲಸ ಮುಗಿದ ಕೂಡಲೆ ಕೆರೆ ಕೆಲಸ ಕೈಗೆತ್ತಿಕೊಂಡೆವು. ಅದು ಅದ್ಭುತ ಸಮಯ. ಶಾಸಕರು ,ಅಧಿಕಾರಿಗಳು, ಬಹುಪಾಲು ಸಂಘಟನೆಗಳು, ಜನತೆ, ಪತ್ರಕರ್ತರು ಒಂದೆ ಆತ್ಮದಂತೆ ಯೋಚನೆ ಮಾಡುತ್ತಿದ್ದ ಕಾಲ. ಎಷ್ಟೊಂದು ಕೆಲಸಗಳು ನಡೆದವು ಆಗ. ಸಣ್ಣ ಸಣ್ಣ ಪ್ರಯತ್ನಗಳು ಎಷ್ಟೊಳ್ಳೆ ಫಲ ನೀಡಿದವು. ಸುಮಾರು ೫ ಲಕ್ಷದ ಆಸು ಪಾಸಿನಲ್ಲಿ ಗ್ರೀಕ್ ಮಾದರಿಯ ಬಯಲು ರಂಗ ಮಂದಿ ತಿಪಟೂರಿನಲ್ಲಿ ಕಟ್ಟಿದ್ದೇವೆ. ಅದು ರಾಜ್ಯದ ಅತ್ಯುತ್ತಮವಾದ ರಂಗಮಂದಿರಗಳಲ್ಲೊಂದೆಂದು ನೀನಾಸಂ ಗಣೇಶ್ ಆದಿಯಾಗಿ ಅನೇಕ ಗೆಳೆಯರು ಹೇಳಿದ್ದಾರೆ.
ಕೆರೆಯ ಕೆಲಸ ನಮಗೆ ಹಲವು ಪಾಠಗಳನ್ನು ಒಟ್ಟಿಗೆ ಕಲಿಸಿತು. ತಿಪಟೂರು ಅಮಾನಿಕೆರೆಯ ವಿಸ್ತೀರ್ಣ ಸುಮಾರು ೧೬೦ ಎಕರೆ. ಸುಮಾರು ಐವತ್ತು ಎಕರೆಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಉಳಿದ ೧೧೦ ಎಕರೆಯಲ್ಲಿನ ಕೆರೆಯನ್ನು ಕೆರೆಯ ರೂಪಕ್ಕೆ ತರುವ ಕುರಿತು ಶಾಸಕರಾದ ಶ್ರೀ ನಾಗೇಶ್ ಅವರು ಒಂದು ಸಂಜೆ ನಮ್ಮೊಂದಿಗೆ ಚರ್ಚಿಸಿದರು. ಒಂದಿಂಚೂ ಜಾಗವಿಲ್ಲದಂತೆ ಬಳ್ಳಾರಿ ಜಾಲಿ ಬೆಳೆದು ಕಾಡಾಗಿದ್ದ ಕೆರೆ ಅದು.
ಕೊಲೆ, ಸುಲಿಗೆ, ಇನ್ನಿತರ ಕಾಳ ವ್ಯವಹಾರಗಳೆಲ್ಲ ಅದರಲ್ಲಿ ನಡೆಯುತ್ತಿದ್ದವು. ಊರ ಮಧ್ಯದ ಕೆರೆ ಊರಿಗೆ ಸಂಭ್ರಮವಾಗುವುದರ ಬದಲು ಗಾಯದಂತೆ ನಾರುತ್ತಿತ್ತು. ಇದನ್ನು ಸರಿ ಮಾಡುವುದು ಸಾಮಾನ್ಯದ ಕೆಲಸವೆ ? ೩-೪ ಅಡಿ ಹೂಳು ತುಂಬಿ ಕೊಂಡಿತ್ತು. ಸರ್ಕಾರವೇ ಕೈಗೆತ್ತಿಕೊಂಡರೆ ಇದು ಹತ್ತಾರು ಕೋಟಿ ರೂಪಾಯಿಗಳ ಕಾಮಗಾರಿ. ಇಷ್ಟೊಂದು ಹಣವನ್ನೂ ನಿರೀಕ್ಷೆ ಮಾಡುವಂತಿರಲಿಲ್ಲ.
ಆಗಿದ್ದಾಗಲಿ ನೋಡೇ ಬಿಡೋಣ ಎಂದು ತೀರ್ಮಾನಿಸಿದೆವು. ೨೦೧೧ ರ ಅಂತ್ಯಕ್ಕೆ ಹೂಳೆತ್ತಲು ಪ್ರಾರಂಭಿಸುವುದು, ಸರ್ಕಾರದಿಂದ ಎಷ್ಟು ಹಣ ತರಲು ಸಾಧ್ಯವೋ ನೋಡೋಣ ಎಂದು ಶಾಸಕರು ಹೇಳಿದರು. ಉತ್ಸಾಹದಲ್ಲಿದ್ದ ನಾವೆಲ್ಲರೂ ತಲೆಗೊಂದೊಂದು ಐಡಿಯಾ ಹೇಳಿ ಹುರಿದುಂಬಿಸಿದೆವು. ಕೆರೆಯ ಗೋಡು ಮಣ್ಣು ತೋಟಕ್ಕೆ, ಇಟ್ಟಿಗೆ ಗೂಡಿಗೆ ತುಂಬಾ ಒಳ್ಳೆಯದೆಂದು ಹೇಳುತ್ತಾ ಹೋದೆವು. ಕೊನೆಗೆ ೨೦ ಕಿ.ಮೀ ಗಳಿಂದ ರೈತರು ಬಂದು ಮಣ್ಣು ತುಂಬಿ ಸಾಗಿಸತೊಡಗಿದರು. ಮಣ್ಣು ತುಂಬುವ ಯಂತ್ರಗಳಿಗೆ ಬಾಡಿಗೆ, ಇಂಧನ ಇತ್ಯಾದಿಗಳಿಗಾಗಿ ಮಣ್ಣು ತುಂಬಿಸಿಕೊಂಡು ಹೋಗುವವರು ಕೈಲಾದಷ್ಟು ಸಹಾಯ ಮಾಡಬೇಕೆಂದು ಕೇಳಿಕೊಂಡೆವು.
ಸಂಗ್ರಹವಾಗುವ ಹಣದ ಪೈಸೆಗಳ ಲೆಕ್ಕವನ್ನೂ ಪಾರದರ್ಶಕವಾಗಿಡಲಾಯಿತು. ನಗರಸಭೆ ಮತ್ತು ಸಣ್ಣ ನೀರಾವರಿ ಇಲಾಖೆಗಳ ಇಂಜಿನಿಯರುಗಳು, ನೌಕರರು ಪೂರ್ಣವಾಗಿ ತೊಡಗಿಕೊಂಡರು. ಒಂದು ಅಂದಾಜಿನ ಪ್ರಕಾರ ಹೂಳೆತ್ತುವುದರಿಂದಾಗಿ ಎಲ್ಲ ಖರ್ಚುಗಳನ್ನು ಕಳೆದು ಸುಮಾರು 5 ಲಕ್ಷ ರೂಪಾಯಿಗಳಷ್ಟು ಹಣ ಉಳಿದಿತ್ತು. ಕೆರೆ ಹೂಳೆತ್ತಲು ಸರ್ಕಾರದ ಹಣ ಬೇಕಿಲ್ಲ. ಬದಲಾಗಿ ಸರ್ಕಾರಕ್ಕೆ ಹಣ ತುಂಬಬಹುದು ಎಂಬ ಪಾಠವನ್ನು ಇದರಿಂದ ಕಲಿತೆವು.
ಹೂಳು ಎಂಬುದು ಸಂಪತ್ತು ಎಂದು ಅರಿವಾಯಿತು. ಹಿಂದೆಲ್ಲ ಪ್ರತಿ ಬೇಸಿಗೆಯಲ್ಲಿ ಕೆರೆಯ ಗೋಡನ್ನು ಹೊಲಗದ್ದೆಗಳಿಗೆ ಸಾಗಿಸುತ್ತಿದ್ದ, ಅನೇಕ ಸಾರಿ ತಲೆಯ ಮೇಲೆ ಹೊತ್ತು ಬಂಡಿ ತುಂಬಿದ್ದ ನನ್ನಂಥವರಿಗೆ ಇದು ಹೊಸದಲ್ಲವಾದರೂ ಬದಲಾದ ಕಾಲಘಟ್ಟದಲ್ಲಿ ಸಮುದಾಯಗಳು ಇದನ್ನೆಲ್ಲ ಮರೆತು ಹೋಗಿವೆ. ಇದೆಲ್ಲ ಸರ್ಕಾರದ ಕೆಲಸ ಎಂದು ಭಾವಿಸಲಾಗಿದೆ. ಹಾಗಾಗಿ ರಾಜ್ಯದ ಕೆರೆಗಳೆಲ್ಲ ಕೆರೆಯ ರೂಪಕ್ಕೆ ಬರಲು ಕಂಟ್ರಾಕ್ಟರುಗಳಿಗಾಗಿ ಕಾಯುತ್ತಿವೆ.
ನಮ್ಮ ತಿಪಟೂರು ಕೆರೆಯೇನೋ ಕೇವಲ ನಾಲ್ಕು ತಿಂಗಳಲ್ಲಿ ನೋಡ ನೋಡುತ್ತಿದ್ದಂತೆ ಸ್ವಚ್ಛವಾಗತೊಡಗಿತು. ಕೆರೆಯೊಂದು ಹೇಗಿರಬೇಕೆಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾಗಿದ್ದ ರವಿಯವರು(ಆಗ ಮೈಸೂರು ಜ಼ೂ ನಲ್ಲಿ ಅಧಿಕಾರಿಯಾಗಿದ್ದರು). ಹಲವು ಸೂಚನೆಗಳನ್ನು ನೀಡಿದರು. ಕೆರೆಯೆಂದರೆ ಬರೀ ನೀರಲ್ಲ. ಅಲ್ಲಿ ಜಲಚರಗಳು, ಹಕ್ಕಿ, ಪ್ರಾಣಿಗಳು ಬದುಕಬೇಕಾದ, ಸಂತಾನಾಭಿವೃದ್ಧಿ ಮಾಡಬೇಕಾದ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕಾಗಿ ಹುಲ್ಲು, ಮರಗಿಡಗಳು ಅನಿವಾರ್ಯ ಎಂದೆಲ್ಲ ಹೇಳಿದರು. ಅದರಂತೆ ಕೆರೆ ರೂಪುಗೊಂಡಿತು. ಕೆರೆಯೇನೋ ರೂಪುಗೊಂಡಿತು.
ಆದರೆ ನಮ್ಮ ಈ ಉತ್ಸಾಹದಿಂದ ಊರೆಲ್ಲ ಧೂಳ್ಮಯವಾಯಿತು. ಕೆಲವರು ಈ ಆಡೋ ಹುಡುಗರಂಥ (ಎಲ್ಲರೂ ೩೦ ರ ಹರೆಯದವರು)ಅಧಿಕಾರಿಗಳನ್ನಿಟ್ಟುಕೊಂಡು ಈ ಶಾಸಕರೂ ಅವರಂಗೆ ಆಗಿಬಿಟ್ಟಿದ್ದಾರೆ ಎಂದು ಬಯ್ಯತೊಡಗಿದರು. ಊರಿನ ರಸ್ತೆಗಳಿಗೆ ಬೆಳಿಗ್ಗೆ ಸಂಜೆ ನೀರು ಚಿಮುಕಿಸುವುದನ್ನೂ ಮಾಡಿದೆವು.
ಅಂತೂ ಇಂತು ಜೂನ್ ಹೊತ್ತಿಗೆ ಕೆರೆ ಸಿದ್ಧವಾಯಿತು. ಜುಲೈನಿಂದ ಕೆರೆಗೆ ನೀರು ತುಂಬಲಾರಂಭಿಸಿತು. ನೀರು ತುಂಬಿದಂತೆಲ್ಲ ಇನ್ನೊಂದು ಸಮಸ್ಯೆ ಶುರುವಾಯಿತು. ಇಡೀ ಕೆರೆಗೆ ಕೆರೆಯೇ ವಾಟರ್ ಹೈಸಿಂಥ್ ಎಂಬ ಕಳೆಗಿಡದಿಂದ ಮುಚ್ಚಿಹೋಯ್ತು. ಇದರ ವೇಗವೇ ಭಯಾನಕ.ಅಂಗೈ ಅಗಲ ಕಾಣಿಸಿಕೊಂಡ ಈ ಗಿಡ ತಿಂಗಳೊಪ್ಪತ್ತಿನಲ್ಲಿ ಕೆರೆಯನ್ನು ಹಸಿರು ಮಯ ಮಾಡಿತು.
ಸೆಪ್ಟೆಂಬರ್ ಕೊನೆಯ ಹೊತ್ತಿಗೆ ನೀರೇ ಕಾಣದಂತೆ ಗಿಡ ಆವರಿಸಿಕೊಂಡಿತು. ಏನು ಮಾಡುವುದು? ಇಂಜಿನಿಯರುಗಳನ್ನು ಕೇಳಿದರೆ ಕೋಟಿಗಳಲ್ಲಿ ಲೆಕ್ಕ ಹಾಕುತ್ತಾರೆ. ಕೊನೆಗೆ ಜನರ ಮುಂದಾಳತ್ವದಲ್ಲೆ ಗಿಡ ತೆಗೆಯುವುದೆಂದು ತೀರ್ಮಾನಿಸಿದೆವು. ಅಗ್ನಿಶಾಮಕದಳದವರು ಲೈಫ್ ಜಾಕೆಟ್ಗಳನ್ನು , ಫೈಬರ್ ಬೋಟುಗಳನ್ನು ತಂದರು. ಯಾವುದಕ್ಕೂ ಇರಲಿ ಎಂದು ಒಂದಿಷ್ಟು ಮೀನುಗಾರ ಈಜಾಳುಗಳನ್ನು ಕರೆತಂದೆವು.
ಆಸಕ್ತಿ ಇರುವ ಜನ ಬರಬೇಕೆಂದು ಮನವಿ ಮಾಡಿದೆವು. ಅಕ್ಟೋಬರ್ ೨ ,೨೦೧೨ ರಂದು ಗಾಂಧಿ ಜಯಂತಿ ಮುಗಿಸಿ ಕೆರೆಗೆ ಇಳಿದೆವು. ಕೆರೆಯಲ್ಲಿ ೭ ಅಡಿ ವರೆಗೆ ನೀರು ನಿಂತಿತ್ತು. ನೋಡ ನೋಡುತ್ತಿದ್ದಂತೆ ಸ್ತ್ರೀಶಕ್ತಿ ಗುಂಪುಗಳಾದಿಯಾಗಿ ಹೆಂಗಸರು ಮಕ್ಕಳು ಬುತ್ತಿಗಳನ್ನು ಹೊತ್ತು ತಂದರು. ೩-೪ ಸಾವಿರ ಜನ ಕೆರೆಯ ಸುತ್ತ ಸೇರಿದರು. ಈಜು ಬರುವ ಎಲ್ಲ ಅಧಿಕಾರಿಗಳು, ಶಾಸಕರು ಅಂದು ಇಡೀ ದಿನ ಕೆರೆಯೊಳಗಿದ್ದೆವು. ಜನ ಪಕ್ಷ ಭೇದ ಮರೆತು ಸಂಭ್ರಮಿಸತೊಡಗಿದರು.
ಊರು ಒಟ್ಟಿಗೆ ಸಂಭ್ರಮಿಸುವುದು ಇಂಥ ಘಳಿಗೆಗಳಲ್ಲೆ ಅನ್ನಿಸುತ್ತದೆ. ಜನ ಜಾತಿ ಧರ್ಮ ಮೀರಿ ಸೇರಿದ್ದರು. ಅವರನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆಯಾಗತೊಡಗಿತು. ಹೀಗೆ ಮೂರು ರಜಾ ದಿನಗಳಲ್ಲಿ ಕೆರೆ ಸ್ವಚ್ಛವಾಯಿತು. ಬೆಳಗಿನ ಸೂರ್ಯ ಕಿರಣಗಳು ನೀರ ಮೇಲೆ ಬಿದ್ದರೆ ಅಚ್ಛೋದ ಸರೋವರ ನೆನಪಾಗುತ್ತಿತ್ತು. ಊರ ಒಂದು ಹನಿ ಕೊಳಚೆ ನೀರೂ ಕೆರೆಗೆ ಬರದಂತೆ ವ್ಯವಸ್ಥೆ ಮಾಡಲಾಯಿತು.
ಕೆರೆ ಅಕ್ಟೋಬರ್ ತಿಂಗಳಲ್ಲೆ ಕೋಡಿ ಬಿತ್ತು. ಇದನ್ನು ನೋಡಿ ತಾಲ್ಲೂಕಿನ ಹಲವು ಕಡೆ ಕೆರೆಗಳನ್ನು ಕೆರೆಯ ರೂಪಕ್ಕೆ ತರುವ ಪ್ರಯತ್ನಗಳಾದವಂತೆ. ತಿಪಟೂರು ಬಹಳ ಮೋಹಕವೆನ್ನಿಸಿ ಅಲ್ಲೇ ಉಳಿದು ಬಿಡೋಣ ಅನ್ನಿಸಿತ್ತು. ಇಲ್ಲೇ ಮನೆ ಕಟ್ಟೋಣ ಅಂತ ಪ್ರೇಮಾ ಹತ್ತಿರ ಪ್ರಸ್ತಾಪ ಮಾಡಿದೆ. ನನ್ನ ಹುಚ್ಚಾಟಗಳನ್ನು ಬೆಂಬಲಿಸುವ ಅವಳು ಬೇಡ ಅನ್ನಲಿಲ್ಲ. ಆದರೆ ಬೆಂಗಳೂರಿಗೆ Transfer ಆಯಿತು. ಊರೊಂದು ನನ್ನೊಳಗೆ ಇಷ್ಟೊಂದು ಮೋಹಕವಾಗಿ ಒಳಗಿಳಿದದ್ದು ತಿಪಟೂರೆ ಇರಬಹುದು.
ಇಲ್ಲಿ ಸೂಕ್ಷ್ಮತೆ ಮೈವೆತ್ತ ಅನೇಕ ಗೆಳೆಯರಿದ್ದರು. ಸಜ್ಜನ ನಾಗರಿಕರಿದ್ದರು. ಅಚ್ಚುಕಟ್ಟಾದ ರಸ್ತೆಗಳು, ಹಸಿರು, ಮಂಗಟ್ಟೆಯಂಥ ಪಶ್ಚಿಮಘಟ್ಟದ ಹಕ್ಕಿಗಳು ಇರುವ ಊರು ಅದು. ನಾವು ತಿಪಟೂರಿನಷ್ಟೆ, ಚಿಕ್ಕನಾಯಕನಹಳ್ಳಿಯಲ್ಲೂ ಓಡಾಡುತ್ತಿದ್ದೆವು. ಡಾ.ರಘುಪತಿ, ಗಂಗಾಧರಯ್ಯ, ಉಜ್ಜಜ್ಜಿ, ಸತೀಶ್, ಗೌಸಿ, ರಾಜಪ್ಪ ಮುಂತಾದ ಗೆಳೆಯರು ಚಿಕ್ಕನಾಯಕಹಳ್ಳಿಯನ್ನೂ ಜೀವಂತವಾಗಿಟ್ಟಿದ್ದರು. ಒಮ್ಮೆ ಮೀನು, ಕೋಳಿ ತಿಂದು ರಹಮತ್ ಮೇಷ್ಟ್ರು ಜೊತೆ ತುಂಬು ಬೆಳದಿಂಗಳ ರಾತ್ರಿಯಲ್ಲಿ ಕಾಡ ಮಧ್ಯದಲ್ಲಿದ್ದ ಕನ್ನಡಿಯಂಥ ಕೆರೆಯಲ್ಲಿ ಈಜಿದ್ದೆವು. ತಿಪಟೂರು ಒಂದು ಸುಂದರ ನೆನಪು.
ಅಲ್ಲಿ ಈಗ ಎನ್ಕೆ ಇಲ್ಲ. ಹಳ್ಳಿ ಸುರೇಶ್ ಇಲ್ಲ. ಆ ಊರನ್ನು ನೆನೆದಾಗಲೆಲ್ಲ. ಈ ಇಬ್ಬರು ಅಮೂಲ್ಯವಾದ ಗೆಳೆಯರು ಇನ್ನಿಲ್ಲದಂತೆ ಕಾಡುತ್ತಾರೆ. ಭೂಮಿ ಸತೀಶ್ ಲೈಬ್ರರಿಯಲ್ಲಿ ತಿಂದ ಕಡ್ಲೆಪುರಿಗೆ ,ನಡೆಸಿದ ಚರ್ಚೆಗಳಿಗೆ ಲೆಕ್ಕವೇ ಇಲ್ಲ.(ಇಲ್ಲಿ ಆಲೂರು ದೊಡ್ಡನಿಂಗಪ್ಪ(ಮೈಸೂರಿನಿಂದ ಬರುತ್ತಿದ್ದರು),ಫೀನಿಕ್ಸ್ ರವಿ, ಶಶಿ,ನಾಗಣ್ಣ,ಕೃಷ್ಣ ,ಸಂತೋಷ್,ನಗರಸಭೆಯಲ್ಲಿದ್ದ ಪ್ರಕಾಶ್,ರಾಮಿ ಮುಂತಾದವರು ಸೇರುತ್ತಿದ್ದರು. ಇವರಲ್ಲಿ ಅನೇಕರು ಸೈದ್ಧಾಂತಿಕ ಕಾರಣಗಳಿಗಾಗಿ ಶಾಸಕರನ್ನು ವಿರೋಧಿಸುತ್ತಿದ್ದರು. ಆದರೆ ಅನೇಕ ವಿಚಾರಗಳನ್ನು ಮೆಚ್ಚುತ್ತಿದ್ದರು.
ಇವರ ಸಣ್ಣ ಕೋರಿಕೆಗೆ ನರಸಿಂಹರಾಜು ರಂಗ ಮಂದಿರ ತಂದರು ಶಾಸಕರು. ಶಾಸಕರು ಸಹ ಭಿನ್ನಮತವನ್ನು ಗೌರವಿಸುತ್ತಿದ್ದರು. ಶಾಸಕರ ಮೇಲೆ ಮೊನ್ನೆ ಸುಳ್ಳು ಆರೋಪ ಹೊರಿಸಿದಾಗ ಇವರುಗಳಲ್ಲಿ ಅನೇಕರು ಶಾಸಕರಿಗೆ ಸಾಂತ್ವನ ಹೇಳಿದರು. ಇಂಥ ಸಜ್ಜನಿಕೆಗಳೆ ಊರನ್ನು ಮಾನವೀಯವಾಗಿಸುವುದು. ಜೀವಂತವಾಗಿಸುವುದು)
ಶಾಸಕರು, ಅಧಿಕಾರಿ ಮಿತ್ರರು, ಊರಜನರು ಸಜ್ಜನಿಕೆಯ ಸಾಕಾರದಂತೆ ಕಾಣಿಸಿದ್ದರು ನನಗೆ. ಊರೊಟ್ಟಿನ ಕೆಲಸಗಳು ಮನುಷ್ಯರೊಳಗೆ ಮನುಷ್ಯತ್ವವನ್ನು ತುಂಬಿ ಪೊರೆಯುತ್ತವೆ.
ಇತ್ತೀಚೆಗೆ ಹಿರಿಯ ಗೆಳೆಯರಾದ ಕರೀಗೌಡರು ಹಲವು ಬಾರಿ ಚರ್ಚಿಸಿ ಏಕಾಏಕಿ ಕೆರೆ ಕ್ಲೀನು ಮಾಡುವ ಕ್ರಿಯೆಗೆ ಇಳಿದರು. ಅವರೀಗ ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆಗೌಡರೆಂದು ಖ್ಯಾತಿ. ಅವರ ಅಭಿಮಾನಿ ಸಂಘಗಳು ಅನೇಕ ಊರುಗಳಲ್ಲಿ ಹುಟ್ಟಿಕೊಂಡಿವೆ. ಇಡೀ ಜಿಲ್ಲೆಯ ಜನ ಅವರಿಂದ ಸ್ಫೂರ್ತಿಗೊಂಡು ಕೆರೆ ಕಾಯಕಕ್ಕೆ, ನೀಲಗಿರಿ ತೆರವಿಗೆ ಇಳಿದಿದ್ದರು.
ದುರಂತವೆಂದರೆ ಕೆಲ ದುಷ್ಟರು ತಿಪಟೂರು ಶಾಸಕರು ಮತ್ತು ಜಿಲ್ಲಾಧಿಕಾರಿಗಳಾಗಿದ್ದ ಕರೀಗೌಡರ ಮೇಲೆ ಹುಸಿ ಆರೋಪ ಮಾಡಿ ಅವರನ್ನು ನೋಯಿಸಿದರು. ಈ ಆರೋಪಗಳನ್ನು ತಿಪಟೂರು ಶಾಸಕರ ರಾಜಕೀಯ ವಿರೋಧಿಗಳೂ ಸಹ ಸಾರಾಸಗಟಾಗಿ ವಿರೋಧಿಸಿದರು. ಜನ ಅವರ ಬೆಂಬಲಕ್ಕೆ ನಿಂತರು. ಕರೀಗೌಡರು ಅಧಿಕಾರಿಯಾದ್ದರಿಂದ ನೋವು ನುಂಗಿಕೊಂಡರು.
ನಮ್ಮ ಕೆರೆಕಾಯಕದಲ್ಲಿ ಇಡೀ ತಾಲ್ಲೂಕಿನ ಅಧಿಕಾರಿಗಳು ಭಾಗವಹಿಸಿದ್ದರು. ಅವರೆಲ್ಲರ ಹೆಸರು ಹೇಳಲಾಗದು ಇಲ್ಲಿ. ಆದರೆ ಎಸಿಯಾಗಿದ್ದ ಪಾಟೀಲರು, ತಹಶೀಲ್ದಾರ್ ಮಿತ್ರ ವಿಜಯ್ ಕುಮಾರ್, ಎಸಿಪಿ ಬೋರಲಿಂಗಯ್ಯನವರು, ಉಮೇಶ್, ನಟರಾಜ್, ನ್ಯಾಮಗೌಡ, ಮನಮೋಹನ್ ಮುಂತಾದವರನ್ನು ಮರೆಯಲಾರೆ.
ನಾನು ವಿಡಿಯೋ ,ಫೋಟೋಗಳನ್ನೂ ಇಟ್ಟಿರಲಿಲ್ಲ. ಅಳಿಸಲಾರದ ಲಿಪಿಯನು ಬರೆಯಬಾರದು ಎಂಬ ಉದ್ದೇಶದಿಂದ. ತಮ್ಮ ಸಂಗ್ರಹದಲ್ಲಿ ಅಳಿದುಳಿದ ಫೋಟೋಗಳನ್ನು ಗೆಳೆಯ ತಿಪಟೂರು ಗುರು ಕಳಿಸಿಕೊಟ್ಟಿದ್ದಾರೆ. ಇವುಗಳಲ್ಲಿ ಸಣ್ಣ ಮಾಹಿತಿ ಸಿಗಬಹುದು.
ಪಂಚಾಂಗ ದಿನಾಂಕ : 15, ಮೇ 2020 ಸ್ಥಳ : ಬೆಂಗಳೂರು (ಕರ್ನಾಟಕ) ಸಂವತ್ಸರ : ಶಾರ್ವರಿನಾಮ ಸಂವತ್ಸರ ಆಯನಂ : ಉತ್ತರಾಯಣ ಮಾಸ : ವೈಶಾಖ ಮಾಸ ಋತು : ವಸಂತ ಋತು ಕಾಲ : ಬೇಸಿಗೆಕಾಲ ವಾರ : ಶುಕ್ರವಾರ ಪಕ್ಷ : ಕೃಷ್ಣಪಕ್ಷ ತಿಥಿ : ಅಷ್ಟಮಿ (ನಿನ್ನೆ ಬೆಳಿಗ್ಗೆ 6 ಗಂ॥ 53 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 23 ನಿ।। ತನಕ) ನಕ್ಷತ್ರ : ಧನಿಷ್ಥೆ (ನಿನ್ನೆ ಬೆಳಿಗ್ಗೆ 6 ಗಂ॥ 25 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 31 ನಿ।। ತನಕ) ಯೋಗ : ಐಂದ್ರ ಕರಣ : ಕೌಲವ ವರ್ಜ್ಯಂ : (ಇಂದು ಸಂಜೆ 4 ಗಂ॥ 30 ನಿ।। ರಿಂದ ಇಂದು ರಾತ್ರಿ 6 ಗಂ॥ 16 ನಿ।। ತನಕ) ಅಮೃತಕಾಲ : ಇಂದು ಯಾವುದೇ ಅಮೃತಕಾಲ ಇಲ್ಲ. ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 19 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 10 ನಿ।। ತನಕ)(ಇಂದು ಬೆಳಿಗ್ಗೆ 12 ಗಂ॥ 37 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 28 ನಿ।। ತನಕ) ರಾಹುಕಾಲ : (ಇಂದು ಬೆಳಿಗ್ಗೆ 10 ಗಂ॥ 34 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ) ಗುಳಿಕ : (ಇಂದು ಬೆಳಿಗ್ಗೆ 7 ಗಂ॥ 21 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 58 ನಿ।। ತನಕ) ಯಮಗಂಡ : (ಇಂದು ಸಂಜೆ 3 ಗಂ॥ 25 ನಿ।। ರಿಂದ ಇಂದು ಸಂಜೆ 5 ಗಂ॥ 2 ನಿ।। ತನಕ) ಸೂರ್ಯೋದಯ : ಬೆಳಿಗ್ಗೆ 5 ಗಂ॥ 44 ನಿ।। ಗೆ ಸೂರ್ಯಾಸ್ತದ : ಸಂಜೆ 6 ಗಂ॥ 40 ನಿ।। ಗೆ ರವಿರಾಶಿ : ವೃಷಭ ಚಂದ್ರರಾಶಿ : ಕುಂಭ
ಮೇಷ ರಾಶಿ ಭವಿಷ್ಯ : 15 May 2020 ನಿಮ್ಮ ಆರೋಗ್ಯ ಸುಧಾರಿಸವುದನ್ನು ಪ್ರಾರಂಭಿಸಲು ಅತ್ಯುತ್ತಮ ದಿನ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ಸ್ನೇಹಿತರೊಂದಿಗೆ ಸಂಜೆ ಆನಂದ ಹಾಗೂ ಕೆಲವು ರಜೆಯ ಯೋಜನೆಗಳಿಗೂ ಉತ್ತಮವಾಗಿರುತ್ತದೆ. ನೀವು ಇಂದು ನೈಸರ್ಗಿಕ ಸೌಂದರ್ಯದಿಂದ ವಿಸ್ಮಯಗೊಳ್ಳುವ ಸಾಧ್ಯತೆಯಿದೆ. ಪ್ರೀತಿ ಇಂದ್ರಿಯಗಳ ಮಿತಿಯನ್ನು ಮೀರಿದ್ದಾಗಿದೆ, ಆದರೆ ನಿಮ್ಮ ಇಂದ್ರಿಯಗಳು ಇಂದು ಪ್ರೀತಿಯ ಭಾವಪರವಶತೆಯನ್ನು ಅನುಭವಿಸುತ್ತವೆ. ಇಂದು ನೀವು ಉಚಿತ ಸಮಯವನ್ನು ಬಳಸುತ್ತೀರಿ ಮಾತು ಕಳೆದ ಸಮಯದಲ್ಲಿ ಪೂರ್ಣಗೊಳ್ಳದ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ ನಿಮ್ಮ ಜೀವನ ಸಂಗಾತಿ ಹಿಂದೆಂದೂ ಇಂದಿಗಿಂತ ಹೆಚ್ಚು ಅದ್ಭುತವಾಗಿರಲಿಲ್ಲ. ಅದೃಷ್ಟ ಸಂಖ್ಯೆ: 3
ವೃಷಭ ರಾಶಿ ಭವಿಷ್ಯ : 15 May 2020 ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಪ್ರೀತಿಯ ಇಂದ್ರಜಾಲ ಇಂದು ನಿಮ್ಮನ್ನು ಕಟ್ಟಿಹಾಕಲಿದೆ. ಕೇವಲ ಈ ಆನಂದವನ್ನು ಆಸ್ವಾದಿಸಿ. ಅದೃಷ್ಟ ಸಂಖ್ಯೆ: 2
ಮಿಥುನ ರಾಶಿ ಭವಿಷ್ಯ : 15 May 2020 ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನಿಮಗೆ ಕಷ್ಟವಾಗಬಹುದು – ನಿಮ್ಮ ಅಸಾಮಾನ್ಯ ವರ್ತನೆ ನಿಮ್ಮ ಸುತ್ತಲಿನ ಜನರನ್ನು ಗೊಂದಲದಲ್ಲಿ ಕೆಡವಬಹುದು ಮತ್ತು ನಿಮ್ಮನ್ನು ನಿರಾಸೆಗೊಳಿಸಬಹುದು. ನೀವು ಪ್ರಯಾಣ ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ವಿಶೇಷ ಗಮನ ಹರಿಸಿ, ನೀವು ಇದನ್ನು ಮಾಡದಿದ್ದರೆ ಸರಕುಗಳು ಕದಿಯುವ ಸಾಧ್ಯತೆಯಿದೆ. ಇಂದು ನೀವು ನಿಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಂದ ಬೆಂಬಲ ಪಡೆದು ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯುತ್ತೀರಿ. ಪ್ರೀತಿಯ ಇಂದ್ರಜಾಲ ಇಂದು ನಿಮ್ಮನ್ನು ಕಟ್ಟಿಹಾಕಲಿದೆ. ಕೇವಲ ಈ ಆನಂದವನ್ನು ಆಸ್ವಾದಿಸಿ. ಎಚ್ಚರದಿಂದಿರಿ- ಜನರೊಡನೆ ವ್ಯವಹರಿಸುವಾಗ ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದಿರಿ. ಅದೃಷ್ಟ ಸಂಖ್ಯೆ: 9
ಕರ್ಕ ರಾಶಿ ಭವಿಷ್ಯ : 15 May 2020 ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ನೀವು ಸ್ನೇಹಿತರ ಮೂಲಕ ಪ್ರಮುಖ ಸಂಪರ್ಕಗಳನ್ನು ಹೊಂದುತ್ತೀರಿ. ಇಂದು ನಿಮ್ಮ ಪ್ರಿಯತಮೆಗೆ ತೀರ ಮಧುರವಾದಂಥದ್ದನ್ನು ಹೇಳಬೇಡಿ. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿರುತ್ತವೆ. ನಿಮ್ಮ ಸಂಗಾತಿ ನಿಮ್ಮಿಂದ ಕೇವಲ ಸ್ವಲ್ಪ ಸಮಯವನ್ನು ಬಯಸುತ್ತಿದ್ದಾರೆ ಆದರೆ ನೀವು ಅವರಿಗೆ ಸಮಯ ನೀಡಲಾಗುತ್ತಿಲ್ಲ. ಇದರಿಂದಾಗಿ ಅವರು ಅಸಮಾಧಾನಗೊಳ್ಳುತ್ತಾರೆ. ಅದೃಷ್ಟ ಸಂಖ್ಯೆ: 3
ಸಿಂಹ ರಾಶಿ ಭವಿಷ್ಯ : 15 May 2020 ನಿಮ್ಮ ಬಲವಾದ ಧೃಢತೆ ಮತ್ತು ನಿರ್ಭಯತೆ ನಿಮ್ಮ ಮಾನಸಿಕ ಶಕ್ತಿ ವರ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದು ನಿಮಗೆ ಯಾವುದೇ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಉತ್ತೇಜಿಸುವುದರಿಂದ ಇದನ್ನು ಕಾಯ್ದುಕೊಳ್ಳಿ. ಡೈರಿ ಉದ್ಯಮಕ್ಕೆ ಸೇರಿರುವವರು ಇಂದು ಆರ್ಥಿಕ ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಕೆಲವರು ಅವರಿಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ನೀಡುವ ಭರವಸೆ ನೀಡುತ್ತಾರೆ – ಕೇವಲ ಮಾತನಾಡುವ ಮತ್ತು ಯಾವುದೇ ಫಲಿತಾಂಶಗಳ ನೀಡದ ಇಂಥ ಜನರನ್ನು ಮರೆತುಬಿಡಿ. ಅದೃಷ್ಟ ಸಂಖ್ಯೆ: 2
ಕನ್ಯಾ ರಾಶಿ ಭವಿಷ್ಯ : 15 May 2020 ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಒಂದು ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ನಿಮ್ಮ ಪ್ರೀತಿಯ ಕಥೆ ಇಂದು ಒಂದು ಹೊಸ ತಿರುವು ತೆಗೆದುಕೊಳ್ಳಬಹುದು, ಇಂದು ನಿಮ್ಮ ಸಂಗಾತಿ ಮದುವೆಯ ಬಗ್ಗೆ ನಿಮ್ಮೊಂದಿಗೆ ಮಾತನಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಪರಿಗಣಿಸಬೇಕು. ಅದೃಷ್ಟ ಸಂಖ್ಯೆ: 9
ತುಲಾ ರಾಶಿ ಭವಿಷ್ಯ : 15 May 2020 ನಿಮ್ಮ ಮಾನಸಿಕ ಒತ್ತಡವನ್ನು ಹೊಡೆದೋಡಿಸಲು ಆಧ್ಯಾತ್ಮಿಕತೆ ಒಂದು ಅತ್ಯುತ್ತಮ ಆಯ್ಕೆಯಾಗಿರುವುದರಿಂದ ನೀವು ಅದರ ಸಹಾಯ ಪಡೆಯಲು ಈಗ ಒಳ್ಳೆಯ ಸಮಯ. ಧ್ಯಾನ ಮತ್ತು ಯೋಗ ನಿಮ್ಮ ಮಾನಸಿಕ ದೃಢತೆಯನ್ನು ವರ್ಧಿಸುತ್ತವೆ. ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ. ದೂರದ ಸಂಬಂಧಿಗಳಿಂದ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವುದು. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ಬಾಕಿಯಿರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತವೆ. ಅದೃಷ್ಟ ಸಂಖ್ಯೆ: 3
ವೃಶ್ಚಿಕ ರಾಶಿ ಭವಿಷ್ಯ : 15 May 2020 ಮಕ್ಕಳೊಂದಿಗೆ ಆಟವಾಡುವುದು ನಿಮಗೆ ಯಾವತ್ತೂ ಅದ್ಭುತ ಚಿಕಿತ್ಸೆಯ ಅನುಭವ ನೀಡುತ್ತದೆ. ನಿಮ್ಮ ತಾಯಿಯ ದುಂದುಗಾರಿಕೆಯನ್ನು ನೋಡಿ ನೀವು ಚಿಂತಿತರಾಗಬಹುದು ಮತ್ತು ಆದ್ದರಿಂದ ನೀವು ಅವರ ಕೋಪದ ಬೇಟೆಯಾಗಬಹದು. ಒಬ್ಬ ಹಳೆಯ ಸ್ನೇಹಿತರು ಸಂಜೆ ನಿಮಗೆ ಕರೆ ಮಾಡುತ್ತಾರೆ ಮತ್ತು ಹಳೆಯ ನೆನಪುಗಳನ್ನು ತೆರೆದಿಡುತ್ತಾರೆ. ಪ್ರೇಮಿಗಳು ಕುಟುಂಬದ ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತಾರೆ. ಅದೃಷ್ಟ ಸಂಖ್ಯೆ: 4
ಧನು ರಾಶಿ ಭವಿಷ್ಯ : 15 May 2020 ನೀವು ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ನೀವು ಇಡೀ ಕುಟುಂಬಕ್ಕೆ ಏಳಿಗೆ ತರುವ ಯೋಜನೆಗಳನ್ನು ಆರಿಸಿಕೊಳ್ಳಬೇಕು. ಯಾರಾದರೂ ನಿಮಗೆ ಪ್ರೇಮ ನಿವೇದನೆ ಮಾಡುವ ಸಾಧ್ಯತೆಗಳಿವೆ. ವ್ಯಾಪಾರ ಸಹವರ್ತಿಗಳು ಬೆಂಬಲ ನೀಡುತ್ತಾರೆ ಮತ್ತು ನೀವು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಒಟ್ಟಿಗೆ ಕೆಲಸ ಮಾಡುತ್ತೀರಿ. ಇಂದಿನ ಸಮಯದಲ್ಲಿ, ನಿಮಗಾಗಿ ಸಮಯವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಆದರೆ ಇಂದು ನಿಮಗಾಗಿ ಸಾಕಷ್ಟು ಸಮಯವನ್ನು ಹೊಂದಿರುವ ದಿನ. ಅದೃಷ್ಟ ಸಂಖ್ಯೆ: 1
ಮಕರ ರಾಶಿ ಭವಿಷ್ಯ : 15 May 2020 ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸುವುದು ನಿಮ್ಮ ಕಾಯಿಲೆಯನ್ನು ಇನ್ನಷ್ಟು ಉಲ್ಬಣಿಸಬಹುದಾದ್ದರಿಂದ ಹಾಗೆ ಮಾಡಬೇಡಿ. ಮನೆಯ ಸಣ್ಣ ವಸ್ತುಗಳ ಮೇಲೆ ನಿಮ್ಮ ಸಾಕಷ್ಟು ಹಣ ಹಾಳಾಗಬಹುದು, ಇದರ ಕಾರಣದಿಂದ ನೀವು ಮಾನಸಿಕ ಒತ್ತಡಗೊಳಗಾಗಬಹುದು. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನೀವು ಪ್ರಣಯದ ಮನೋಭಾವ ಹೊಂದಿರುತ್ತೀರಿ- ನೀವು ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ವಿಶೇಷ ಯೋಜನೆಗಳನ್ನು ಮಾಡಲು ಮರೆಯಬೇಡಿ. ಅದೃಷ್ಟ ಸಂಖ್ಯೆ: 1
ಕುಂಭ ರಾಶಿ ಭವಿಷ್ಯ : 15 May 2020 ನಿಮ್ಮ ಚೈತನ್ಯವನ್ನು ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಪ್ರೀತಿಪಾತ್ರರು ಇಂದು ನಿಮ್ಮಿಂದ ಏನು ಬೇಕಾದರೂ ಬೇಡಿಕೊಳ್ಳಬಹುದು ಆದರೆ ನೀವು ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದೃಷ್ಟ ಸಂಖ್ಯೆ: 8
ಮೀನ ರಾಶಿ ಭವಿಷ್ಯ : 15 May 2020 ಇಂದು ನಿಮ್ಮ ವಿಶ್ವಾಸ ಬೆಳೆಯುತ್ತದೆ ಮತ್ತು ಪ್ರಗತಿ ನಿಶ್ಚಿತವಾಗಿದೆ. ಇಂದು ಸಾಲಗಾರನು ನಿಮ್ಮ ಮನೆ ಬಾಗಿಲಿಗೆ ಬರಬಹುದು ಮತ್ತು ನಿಮ್ಮ ಹತ್ತಿರ ಸಾಲ ಕೇಳಬಹುದು. ಅವರಿಗೆ ಹಣವನ್ನು ಹಿಂದಿರುಗಿಸಿ ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬಹುದು. ಸಾಲ ಪಡೆಯುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ಕೆಲಸದ ಒತ್ತಡ ನಿಮ್ಮ ಮನಸ್ಸನ್ನು ಆವರಿಸುತ್ತದೆ ಹಾಗೂ ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ಹೊರಹೋಗಲು ಯೋಜಿಸುವಿರಿ ಆದರೆ ಯಾವುದೊ ಅಗತ್ಯವಾದ ಕೆಲಸದಿಂದಾಗಿ ಈ ಯೋಜನೆ ಯಶಸ್ವಿಯಾಗುವುದಿಲ್ಲ, ಈ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ಸಂಘರ್ಷ ಉಂಟಾಗಬಹುದು. ಅದೃಷ್ಟ ಸಂಖ್ಯೆ: 6
ಭೂಗತ ಲೋಕದ ಮಾಜಿ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ನಿಧನರಾಗಿದ್ದಾರೆ.
ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೆಲದಿನಗಳಿಂದ ಅವರ ಆರೊಗ್ಯ ಸ್ಥಿತಿ ಗಂಭೀರವಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಬೆಳಗ್ಗೆ 8 ಗಂಟೆಗೆ ಮಗ ರಿಕಿ ರೈ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ.
ಹಲವು ವರ್ಷಗಳ ಕಾಲ ಇಡೀ ಭೂಗತ ಜಗತ್ತನ್ನು ಆಳಿದ ಮುತ್ತಪ್ಪ ರೈ, ನಂತರ ಅದರಿಂದ ಹೊರ ಬಂದು ವಿಭಿನ್ನ ಬದುಕು ಕಟ್ಟಿಕೊಂಡಿದ್ದರು.
ಮೂಲತಃ ಪುತ್ತೂರಿನ ಕೆಯ್ಯೂರು ನಿವಾಸಿಯಾಗಿದ್ದ ಮುತ್ತಪ್ಪ ರೈ ಅವರು ಬೆಂಗಳೂರಿನ ಬಿಡದಿ ಬಳಿ ವಾಸವಾಗಿದ್ದರು. ಜಯ ಕರ್ನಾಟಕ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿದ್ದರು.
ನವದೆಹಲಿ :ಕೊರೊನಾ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು , ಅಧೀನ ನ್ಯಾಯಾಲಯಗಳ ನ್ಯಾಯಾಧೀಶಕರು, ವಕೀಲರು ಹಾಗೂ ಕೋಟು , ಗೌನ್ ಧರಿಸುವ ಅಗತ್ಯ ಇಲ್ಲ ಎಂದು ಬಿಸಿಐ ಹೇಳಿದೆ.
ಕೊರೊನಾ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ಅಥವಾ ಮುಂದಿನ ಆದೇಶ ಇರುವವರಿಗೆ ಇದು ಜಾರಿಯಲ್ಲಿರುತ್ತದೆ.
ವಕೀಲರು ಬಿಳಿ ಅಂಗಿ , ಮಹಿಳಾ ವಕೀಲರು ಬಿಳಿ ಸ್ಯಾರಿ ಧರಿಸಬೇಕು. ಕೋಟು ಹಾಗೂ ಗೌನ್ ಧರಿಸುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ . ಹೀಗಾಗಿ ದೇಶದಲ್ಲಿ ಈ ಆರೋಗ್ಯ ತುರ್ತು ಪರಿಸ್ಥಿತಿ ಅಂತ್ಯವಾಗುವವರೆಗೆ ಇಲ್ಲವೇ , ಮುಂದಿನ ಆದೇಶದವರೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಕಲಾಪದ ವೇಳೆ ಇವುಗಳನ್ನು ಧರಿಸಬಾರದು ಎಂದು ಹೇಳಲಾಗಿದೆ.
CITU ಟ್ರೇಡ್ ಯೂನಿಯನ್ ರಾಜ್ಯ ಅಧ್ಯಕ್ಷೆಯಾಗಿರುವ ವರಲಕ್ಷ್ಮಿ ಅವರು ಕರ್ನಾಟಕದಲ್ಲಿ ಅತಿದೊಡ್ಡ ಕಾರ್ಮಿಕ ಸಂಘಟನೆಯ ನೇತೃತ್ವ ವಹಿಸಿರುವ ಮೊದಲ ಮಹಿಳೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತರಲು ಮೆಲ್ಲಗೆ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಹೊರಟಿದೆ. ಈಗಾಗಲೇ ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ತಿದ್ದುಪಡಿ ಮಾಡಲಾಗಿದೆ. ಕೆಲವು ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ರದ್ದುಪಡಿಸಲಾಗಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳ ಕಾಲಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲೂ ಜಾರಿಯಾಗಲಿವೆ.
ಈ ಹಿನ್ನೆಲೆಯಲ್ಲಿ ವಕೀಲ ಮಹೇಂದ್ರ ಕೃಷ್ಣಮೂರ್ತಿ ಅವರು https://publicstory.in ಗೆ ವರಲಕ್ಷ್ಮೀ ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಮಾಲೀಕರಿಗೆ ಲಾಭ, ಕಾರ್ಮಿಕರು ಬೀದಿಗೆ, ನಿರುದ್ಯೋಗ ಸೃಷ್ಟಿ
@ Citu ಸಂಘಟನೆಯಲ್ಲಿ ಎಷ್ಟು ಜನ ಕಾರ್ಮಿಕರು ಸದಸ್ಯರಿದ್ದಾರೆ?
ದೇಶದಲ್ಲಿ ನಮ್ಮ ಸಂಘಟನೆಯಲ್ಲಿ 60 ಲಕ್ಷಕ್ಕೂ ಅಧಿಕ ಕಾರ್ಮಿಕರು ಸದಸ್ಯರಿದ್ದಾರೆ. ರಾಜ್ಯದಲ್ಲಿ 2 ಲಕ್ಷ ಕಾರ್ಮಿಕರು ನಮ್ಮೊಂದಿಗಿದ್ದಾರೆ.
ಕಾರ್ಮಿಕರು ಎಂದರೆ ಕೈಗಾರಿಕೆಗಳಲ್ಲಿ ದುಡಿಯುವವರು ಮಾತ್ರ ಅಲ್ಲ. ಎಲ್ಲ ರೀತಿಯ ಕಾರ್ಮಿಕರು, ರೈತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರು ಸೇರುತ್ತಾರೆ ಎಂಬುದನ್ನು ಎಲ್ಲರೂ ಗಮನಿಸಬೇಕು.
@ ಕೊರೊನಾ ಪೂರ್ವದ, ಕೊರೊನಾ ನಂತರದ ಕಾರ್ಮಿಕರ ಸ್ಥಿತಿ ಹೇಗಿದೆ?
ಕೊರೊನಾ ಬರುವುದಕ್ಕೆ ಮುಂಚೆ ಕಾರ್ಮಿಕರು ಸಾಮಾನ್ಯವಾಗಿ ಕೆಲಸಕ್ಕೆ ಹೋಗುತ್ತಿದ್ದರು, ಬರುತ್ತಿದ್ದರು. ಆದರೆ ಕೊರೊನ ನಂತರ ಆದ ಲಾಕ್ ಡೌನ್ ನಿಂದಾಗಿ ಕಾರ್ಮಿಕರು ತುಂಬಾ ತೊಂದರೆಗೆ ಒಳಗಾಗಿದ್ದಾರೆ.
ಕೈಗಾರಿಕೆಗಳಲ್ಲಿ ಮಾರ್ಚ್ ನಾಲ್ಕನೇ ವಾರದಿಂದ ಏಪ್ರಿಲ್ ತಿಂಗಳಲ್ಲಿ ಸಂಬಳವನ್ನೇ ಕೊಟ್ಟಿಲ್ಲ. ಸಂಬಳವನ್ನು ತಡೆಹಿಡಿಯಲಾಗಿದೆ. ಈ ಎಲ್ಲ ಕಾರ್ಮಿಕರಿಗೂ ಸಂಬಳ ಬೇಕು ಇಲ್ಲದಿದ್ದರೆ ಕೋಟ್ಯಂತೆರ ಕಾರ್ಮಿಕರು ಬೀದಿಗೆ ಬೀಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕಾರ್ಮಿಕರಿಗೆ ಸಂಬಳ ಕೊಡುವಂತೆ ಸಿಐಟಿಯು ಒತ್ತಾಯ ಮಾಡುತ್ತಿದೆ .
@ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸದಿಂದ ತೆಗೆಯಬಾರದು, ಸಂಬಳ ಕೊಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆಯಲ್ಲ?
ಕೇಂದ್ರ ಸರ್ಕಾರ ಮಾಡಿದ ಈ ಆದೇಶದ ಹಿನ್ಮೆಲೆಯಲ್ಲಿ ರಾಜ್ಯದಲ್ಲೂ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಮಾಲೀಕರ ಒತ್ತಾಯಕ್ಕೆ ಮಣಿದ ಸರ್ಕಾರ ಮೂರೇ ದಿನಗಳಲ್ಲಿ ಈ ಸುತ್ತೋಲೆ ವಾಪಸ್ ಪಡೆಯಿತು. ಹೀಗಾಗಿ ಈಗ ಈ ಆದೇಶ ಜಾರಿಯಲ್ಲಿಲ್ಲ. ಹೀಗಾಗಿ ಮಾಲೀಕರು ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ.
@ ಕಾರ್ಮಿಕ ಸಚಿವರಿಗೆ ಇದೆಲ್ಲ ಗೊತ್ತಾಗುವುದಿಲ್ಲವೇ?.
ಸಾಕಷ್ಟು ವಿಚಾರಗಳಲ್ಲಿ ಕಾರ್ಮಿಕ ಸಚಿವರು ಕಾರ್ಮಿಕರ ಪರವಾಗಿ ನಿಂತಿದ್ದಾರೆ. ಆದರೆ ಅವರ ಮಾತನ್ನು ರಾಜ್ಯ ಸರ್ಕಾರದಲ್ಲಿ ಕೇಳುತ್ತಿಲ್ಲ.
ಕಾರ್ಮಿಕ ಸಂಘಟನೆಗೆಗಳ ಒತ್ತಾಯದ ಮೇರೆಗೆ ಕಾರ್ಮಿಕಸಚಿವರು ತ್ರಿಪಕ್ಷೀಯ ಸಮಿತಿಯನ್ನು ರಚಿಸಿದರು.
ಈ ಸಮಿತಿಗೆ ಒಂದು ಸಾವಿರ ನೋಂದಾಯಿತ ದೂರುಗಳು ಬಂದಿವೆ. ನೂರಾರು ಜನರು ಕೆಲಸದಿಂದ ತೆಗೆಯಲಾಗಿದೆ ಎಂದು ದೂರು ನೀಡಿದ್ದಾರೆ. ಆದರೆ ಸಮಿತಿ ಸರಿಯಾಗಿ ರಾಜ್ಯ ಸರ್ಕಾರ ಬಿಡುತ್ತಿಲ್ಲ. ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನೇ ವರ್ಗ ಮಾಡಿತ್ತಲ್ಲ?
@ ಕಾರ್ಮಿಕ ಕಾಯ್ದೆಗೆ ತರುವ ತಿದ್ದುಪಡಿ ದೇಶದ ಅಭಿವೃದ್ದಿ ಪರವಾಗಿದೆ ಎನ್ನುತ್ತಾರಲ್ಲ?
ಕಾರ್ಮಿಕ ಕಾನೂನುಗಳ ತಿದ್ದುಪಡಿಯಿಂದ ರಾಜ್ಯಕ್ಕೆ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಾಲೀಕರ ಪರವಾಗಿ ಸರ್ಕಾರಗಳು ವರ್ತಿಸುತ್ತಿವೆ. ಮಾಲೀಕರಿಗೆ ಲಾಭ ಮಾಡಿಕೊಡಲು ಈಗಿರುವ ಕಾರ್ಮಿಕರ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಹದಿನೈದು ಗಂಟೆಗಳ ಕಾಲ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಇದನ್ನು ಕನಿಷ್ಠ ಪಕ್ಷ ಹನ್ನೆರಡು ಗಂಟೆಗಳಾದರೂ ಹೆಚ್ಚಿಸಲು ಮುಂದಾಗಿದೆ. @ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸುವುದರಿಂದ ಆರ್ಥಿಕತೆ ಪುನಶ್ಚೇತನಗೊಳ್ಳಲಿದೆ ಎಂಬ ಮಾತಿದೆಯಲ್ಲ?
ಕಾರ್ಮಿಕರು ಹೆಚ್ಚು ಕೆಲಸ ಮಾಡುವುದರಿಂದ ಇರುವ ಕಾರ್ಮಿಕರನ್ನು ಮಾಲೀಕರು ಕೆಲಸದಿಂದ ತೆಗೆಯಲು ಸಹಾಯವಾಗಲಿದೆ. ಕಡಿಮೆ ಕಾರ್ಮಿಕರಿಂದ ಹೆಚ್ಚು ಉತ್ಪಾದನೆ ಮಾಡಲು ಸಾಧ್ಯವಾಗಲಿದೆ. ಇದರಿಂದ ಇರುವ ಕಾರ್ಮಿಕರಿಗು ಕೆಲಸ ಇಲ್ಲದಂತಾಗಿ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.
@ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಅಷ್ಟು ಸುಲಭವೇ?
ಈಗ ತರಲು ಹೊತಟಿರುವ ತಿದ್ದುಪಡಿ ಪ್ರಕಾರ 300 ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಕೈಗಾರಿಕೆಗಳನ್ನು ಯಾವ ಕ್ಷಣದಲ್ಲಿ ಬೇಕಾದರೂ ಮುಚ್ಚಬಹುದು, ತೆಗೆಯಬಹುದು. ಯಾವ ಕಾರ್ಮಿಕನನ್ನು ಯಾವಾಗ ಬೇಕಾದರೂ ಕ್ಷಣ ಮಾತ್ರದಲ್ಲಿ ತೆಗೆಯುವ ಅಧಿಕಾರವನ್ನು ಮಾಲೀಕರಿಗೆ ನೀಡಲಾಗುತ್ತಿದೆ. ಕೆಲಸ ಕಳೆದುಕೊಂಡ ಕಾರ್ಮಿಕರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅವರ ಮೂಲಭೂತ ಹಕ್ಕನ್ನು ಕಿತ್ತಕೊಳ್ಳಲಾಗುತ್ತಿದೆ.
ಈ ಹಿಂದೆ ಕೈಗಾರಿಕೆಗಳನ್ನು ಮುಚ್ಚಬೇಕಾದರೆ ಸರ್ಕಾರಕ್ಕೆ ಕಾರಣ ತಿಳಿಸಬೇಕಿತ್ತು. ಲಾಭ, ನಷ್ಟಗಳ ವಿವರ ನೀಡಬೇಕಿತ್ತು. ಕಾರ್ಮಿಕರ ಬಾಕಿಯನ್ನು ಪಾವತಿಸಬೇಕಾಗಿತ್ತು.
@ ನಿಜವಾಗಲೂ ಸಮಸ್ಯೆ ಯಾರಿಗೆ ಆಗಲಿದೆ?
ತಕ್ಷಣಕ್ಕೆ ಸರ್ಕಾರಿ, ಸೇವಾ ರಂಗದಲ್ಲಿ ಕೆಲಸ ಮಾಡುವವರಿಗೆ ಇದರ ಪರಿಣಾಗ ಆಗದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಅವರಿಗೂ ಇದು ವಿಸ್ತರಣೆಯಾಗಲಿದೆ.
ಸಣ್ಣ, ಮಧ್ಯಮ ಕೈಗಾರಿಕೆಗಳ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ. ಇನ್ನೊಂದೆಡೆ ಇರುವ ಕಾರ್ಮಿಕರಿಗೆ ಹೆಚ್ಚು ಅವಧಿ ದುಡಿಯುವುದರಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ.
@ನೀವು ಇಟ್ಟಿರುವ ಸಲಹೆಗಳೇನು?
ಕಾರ್ಮಿಕರ ಕಾನೂನುಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಯಾರನ್ನು ಕೆಲಸದಿಂದ ತೆಗೆಯದಂತೆ ನೋಡಿಕೊಳ್ಳಬೇಕು.
ಈಗಿರುವ ಕೆಲಸದ ಅವಧಿಯನ್ನು 8 ಗಂಟೆಯಿಂದ ಕಡಿಮೆ ಮಾಡಿದರೆ ಹೆಚ್ಚು ಕಾರ್ಮಿಕರಿಗೆ ಕೆಲಸ ಸಿಗಲಿದೆ. ಇಲ್ಲ ಹೀಗಿರುವ ಅವಧಿಯನ್ನೇ ಮುಂದುವರೆಸಬೇಕು. ಹೆಚ್ಚು ಉದ್ಯೋಗ ಸೃಷ್ಟಿ ಕಡೆಗೆ ಗಮನ ನೀಡಬೇಕು.
ಕಾರ್ಮಿಕರ ಕೊಳ್ಳುವ ಶಕ್ತಿ ಕಡಿಮೆಯಾದಷ್ಟು ದೇಶದ ಆರ್ಥಿಕ ಸ್ಥಿತಿ ಹದಗೆಡಲಿದೆ. ಇದು ಗೊತ್ತಿದ್ದು, ಮಾಲೀಕರಿಗೆ ಅನುಕೂಲ ಮಾಡುವ ಒಂದೇ ಕಾರಣಕ್ಕಾಗಿ ಸರ್ಕಾರ ಈ ಕೆಲಸ ಮಾಡಲು ಹೊರಟಿದೆ.