Friday, May 8, 2026
Google search engine
Home Blog Page 230

ವಲಸೆ ಕಾರ್ಮಿಕರ ಮುಂದುವರಿದ ಪರದಾಟ

Publicstory. in


Mangalore: ತವರು ರಾಜ್ಯಗಳಿಗೆ ಹೊರಟ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಬಜ್ಪೆ, ಜೋಕಟ್ಟೆ, ಕಾನ ಮುಂತಾದ ವಿವಿಧ ಪ್ರದೇಶಗಳಲ್ಲಿ ಒಟ್ಟು ಸೇರಿಸಿ ಸರಕಾರಿ ಬಸ್ಸುಗಳಲ್ಲಿ ಕೊಂಡೊಯ್ಯುತ್ತವೆ.

ಈ ಕುರಿತು ಹರಡುವ ಮಾಹಿತಿಗಳನ್ನು ನಂಬಿ ಸಾವಿರಾರು ವಲಸೆ ಕಾರ್ಮಿಕರು ಕಾಲ್ನಡಿಗೆ ಸಹಿತ ವಿವಿಧ ವಾಹನಗಳಲ್ಲಿ ಇಂತಹ ಸ್ಥಳಗಳಿಗೆ ತಲುಪುತ್ತಿದ್ದಾರೆ.

ಆ ರೀತಿ ನೊಂದಾವಣೆ ಇಲ್ಲಧ ಬಂದವರಲ್ಲಿ ಹೆಚ್ಚಿನವರು ಪ್ರಯಾಣಕ್ಕೆ ಅವಕಾಶ ಸಿಗದೆ ನಿರಾಶರಾಗಿ ತಮ್ಮ ವಸತಿಗಳಿಗೆ ವಾಪಾಸಾಗುತ್ತಿದ್ದಾರೆ.

ಹೀಗೆ ಬಂದು ಪ್ರಯಾಣಕ್ಕೆ ಅವಕಾಶ ಸಿಗದೆ ನೂರಕ್ಕೂ ಹೆಚ್ಚು ಉತ್ತರ ಪ್ರದೇಶ, ಬಿಹಾರದ ಕಾರ್ಮಿಕರು ಜೋಕಟ್ಟೆಯಲ್ಲಿ ಸಿಲುಕಿ ಕೊಂಡಿದ್ದಾರೆ.

ಇದರಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಕಾರ್ಮಿಕರು ವಿಮಾನ ನಿಲ್ದಾಣ ವಿಸ್ತರಣೆಯಲ್ಲಿ ಗುತ್ತಿಗೆದಾರರ ಅಡಿ ದುಡಿಯುತ್ತಿದ್ದು, ಗುತ್ತಿಗೆದಾರರು ಎರಡು ತಿಂಗಳ ದುಡಿಮೆಯ ಸಂಬಳವೂ ನೀಡದೆ ವಂಚಿಸಿದ್ದಾಗಿ ಆರೋಪಿಸುತ್ತಾರೆ.

ಹೀಗೆ ಅತಂತ್ರ ಗೊಂಡ ಕಾರ್ಮಿಕರಿಗೆ ಸದ್ಯ “ನಾಗರಿಕ ಹೋರಾಟ ಸಮಿತಿ ಜೋಕಟ್ಟೆ, ಇದರ ವತಿಯಿಂದ ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವ ನೇತೃತ್ವದಲ್ಲಿ ಆಹಾರ ವಸತಿ ಏರ್ಪಾಡು ಮಾಡಲಾಗಿದೆ. ಆದರೆ ಇವರ ಪ್ರಾಯಣದ ಕುರಿತು ಯಾವ ಮಾಹಿತಿಯೂ ಈವರಗೆ ಜಿಲ್ಲಾಡಳಿತದಿಂದ ದೊರಕದಿರುವುದರಿಂದ ಕಾರ್ಮಿಕರು ಆತಂಕಿತರಾಗಿದ್ದಾರೆ.

ಅಲ್ಲಿ ಸೀತಕ್ಕ…ಇಲ್ಲಿ ಐಶ್ವರ್ಯ…

0

ಮೇಲಿನ ಚಿತ್ರ: ಅಜ್ಜಿಯೊಬ್ಬರಿಗೆ ಮಾಸ್ಕ್ ಕಟ್ಟುತ್ತಿರುವ ಐಶ್ವರ್ಯ. ಕೆಳಗಿನ ಚಿತ್ರ; ಸಾಮಾಗ್ರಿ ಹೊತ್ತು ನಡೆದು ಹೋಗುತ್ತಿರುವ ಶಾಸಕಿ ಸೀತಕ್ಕ.

Publicstory.in


ತುಮಕೂರು: ಅವರು ಸೀತಕ್ಕ. ಸಂಕಷ್ಟದಲ್ಲಿರುವ ಜನರಿಗಾಗಿ ತಮ್ಮ ಪಿಎಚ್.ಡಿ. ಅಧ್ಯಯನ ಮೊಟುಕುಗೊಳಿಸಿದರು.

ಇಲ್ಲಿ ಈ ಹುಡುಗ, ಹುಡುಗಿಯರು ಯುಪಿಎಸ್ಸಿ ( ಐಎಎಸ್) ಪರೀಕ್ಷೆಯ ತಯಾರಿಯನ್ನೇ ಮೊಟಕುಗೊಳಿಸಿದರು.

ಕೊರೊನಾ, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಈಡಾದ ಜನರಿಗೆ ಸಹಾಯ ಮಾಡುವ ಸಲುವಾಗಿ ತಮ್ಮ ಕನಸುಗಳನ್ನೇ ಪಕ್ಕಕ್ಕಿಟ್ಟು ನಡೆದಿದ್ದಾರೆ ಈ ಹುಡುಗಿಯರು.

ಸೀತಕ್ಕ ಆಂಧ್ರಪ್ರದೇಶದಲ್ಲಿ ಈಗ ಮನೆ ಮಾತು. ಅವರು ಅಲ್ಲಿನ ಶಾಸಕಿ ಸಹ ಹೌದು. ಅವರ ಕ್ಷೇತ್ರದಲ್ಲಿ ಕಾಡಿನಲ್ಲಿ ವಾಸವಿರುವ ಬುಡಕಟ್ಟು ಜನರಿಗೆ ಹತ್ತು-ಹನ್ನೆರಡು ಕಿಲೋ ಮೀಟರ್ ದೂರ ತಲೆಯ ಮೇಲೆ ಸಾಮಾಗ್ರಿ ಹೊತ್ತುಕೊಂಡು ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದಾರೆ.

ಇ‌ನ್ನೂ, ತುಮಕೂರಿನಲ್ಲಿ ಈ ಹುಡುಗಿಯರಿಗೆ ಈ ಪ್ರಶ್ನೆ ಕೇಳಿದ ತಕ್ಷಣವೇ, ವೈ ವಿ ಆರ್ ಕಮ್ ಔಟ್ ಎಂದು ಹೇಳಿ ಕ್ಷಣ ಸುಮ್ಮನಾದರು.

ಐಎಎಸ್ ಆಗಬೇಕೆಂಬ ಕನಸಿಗೆ ಇದು ಅಡ್ಡಿಯಾಗುವುದಿಲ್ಲವೇ? ಇದಕ್ಕಾಗಿ ತಯಾರಿ ನಡೆಸುವವರು ಒಂದು ಗಂಟೆ ಸಮಯ ಸಹ ಓದುವುದನ್ನು ಬಿಟ್ಟು ಬೇರೆಯದಕ್ಕೆ ಮೀಸಲಿಡುವುದಿಲ್ಲ. ಕೊರೊನಾ ಕಾರಣ ಪ್ರಾಣದ ಭಯದಲ್ಲಿ ಒಬ್ಬರೂ ಈಚೆ ಬರುತ್ತಿಲ್ಲ. ಅಂಥದರಲ್ಲಿ ಐಎಎಸ್ ಪರೀಕ್ಷೆ ತಯಾರಿ ಬಿಟ್ಟು, ಪ್ರಾಣ ಭಯ ಬಿಟ್ಟು ಹಳ್ಳಿ-ಹಳ್ಳಿ, ವಾರ್ಡ್ ವಾರ್ಡ್ ಸುತ್ತುತ್ತೀದಿರಲ್ಲ ?ಈ ಪ್ರಶ್ನೆಗಳಿಗೆ, ‘ಕಷ್ಟದಲ್ಲಿರುವ ಜನರ ಮನೆ ಬಾಗಿಲಿಗೆ ಹೋಗಿ ಒಂದಿಷ್ಟು ಸಹಾಯ ಮಾಡುವುದಕ್ಕಿಂತಲೂ ಐಎಎಸ್ ಹುದ್ದೆ ದೊಡ್ಡದಲ್ಲ’ ಎಂದವರು ಐಶ್ವರ್ಯ.

ತುಂಬಾ ಚಿಕ್ಕವಯಸ್ಸಿಗೆ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆಯಾಗಿರುವ ಐಶ್ವರ್ಯ ಅವರು ಅಮೆರಿಕದಲ್ಲಿ ಪ್ರತಿಷ್ಠಿತ ಜನರಲ್ ಮೋಟಾರ್ಸ್ ಕಂಪೆನಿಯಲ್ಲಿ ಉನ್ನತ ಉದ್ಯೋಗಿನಿಯಾಗಿದ್ದರು.

ಭಾರತೀಯ ಆಡಳಿತ ಸೇವೆಗೆ ಸೇರಬೇಕೆಂಬ ಆಸೆ ಹೊತ್ತು ಬೆಂಗಳೂರಿಗೆ ಮರುಳಿ, ಈಗ ಪರೀಕ್ಷಾ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ಯುಪಿಎಸ್ ಸಿ ಪರೀಕ್ಷೆಯಲ್ಲಿ ತೊಡಗಿರುವ ನಮ್ಮ ತಂಡ ಲಾಕ್ ಡೌನ್ ನಿಂದ ಜನರು ಕಷ್ಟದಲ್ಲಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅವರಿಗೆ ಸಹಾಯ ಮಾಡಲು ನಿರ್ಧಾರ ಮಾಡಿದೆವು. ಕೊರೊನಾ ವಾರಿಯರ್ಸ್ ಆಗಲು ಮುಂದಾದೆವು ಎನ್ನುತ್ತಾರೆ ಅವರು.

ಏಶ್ವರ್ಯ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡರ ಒಬ್ಬಳೇ ಮಗಳು. ಕೊರೊನಾ ಭಯದಿಂದ ಹಲವು ಜನಪ್ರತಿನಿಧಿಗಳು ಮನೆ ಬಿಟ್ಟು ಈಚೆ ಬರುತ್ತಿಲ್ಲ. ಅನಿವಾರ್ಯವೆಂಬಂತೆ ಬಂದರೂ ಎರಡು ದಿನ ಮುಖ ತೋರಿಸಿ ಮನೆಯೊಳಗೆ ಸೇರಿದ್ದಾರೆ. ಅಂಥದರಲ್ಲಿ ಪ್ರತಿ ದಿನ ಊರೂರಿಗೆ ಹೋಗಿ ಬಡವರಿಗೆ ಆಹಾರ, ಮಾಸ್ಕ್, ತರಕಾರಿ ಹಂಚಲು ಭಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಅವರು ನಸು ನಕ್ಕರು.

ಪ್ರಾಣ ಭಯ ಯಾರಿಗೆ ತಾನೇ ಇರುವುದಿಲ್ಲ. ಹಣ ಇರುವವರಿಗೆ ಲಾಕ್ ಡೌನ್ ಸಮಸ್ಯೆಯೇ ಅಲ್ಲ. ಆದರೆ ಬಡವರಿಗೆ. ಬಡವರ ಎಲ್ಲ ಸಮಸ್ಯೆಯನ್ನು ನಾವು ಬಗೆಹರಿಸಿ ಬಿಡುತ್ತೇವೆ ಎಂದಲ್ಲ. ನಾವು ಕೊಡುವ ಏಳೆಂಟು ನೂರು ರೂಪಾಯಿಗಳ ಸಹಾಯ ಸಹಾಯವೇ ಅಲ್ಲ. ಆದರೆ ಇಡೀ ಜಗತ್ತು ಭಯದಿಂದ ಓಡುವಾಗ, ಆಹಾರವೂ ಇಲ್ಲದೇ ಪರಿತಪಿಸುವ ಮನೆಯವರ ಮುಂದೆ ನಾವು ಹೋಗಿ ನಿಲ್ಲುವುದೇ ಅವರಿಗೊಂದು ಧೈರ್ಯ.

ನಮ್ಮ ಜೊತೆ ಯಾರೂ ಇಲ್ಲ ಎಂದು ಅವರು ಪರಿತಪಿಸುತ್ತಿದ್ದಾರೆ. ಅಂಥವರಿಗೆ ನಾವು ಇದ್ದೇವೆ ಎಂದು ಹೇಳಲಿಕ್ಕಾದರೂ ನಾವುಗಳು ಅವರ ಮನೆಯ ಕದ ಬಡಿಯಬೇಕಾಗಿದೆ ಎಂದರು.

ಮನೆಯಿಂದ ಹೊರಗೆ ಕಳುಹಿಸಲು ಅಮ್ಮನಿಗೆ ಸುತರಾಂ ಇಷ್ಟ ಇರಲಿಲ್ಲ. ಆದರೆ ಅಪ್ಪನ ಮುಂದೆ ನನ್ನ ನಿರ್ಧಾರವನ್ನು ಗಟ್ಟಿಯಾಗಿ ಹೇಳಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಬದಲು ಅಪ್ಪನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದೆ. ಅವರು ಅನುಮತಿ ನೀಡಿದರು.

ನಮ್ಮ ರಕ್ಷಣೆ, ಮುಂಜಾಗ್ರತಾ ಕ್ರಮ ತೆಗೆದುಕೊಂಡೇ ಕೆಲಸ ಮಾಡಬೇಕಾಗಿದೆ. ಆದರೆ, ಮಾನಸಿಕವಾಗಿ ಧೈರ್ಯವಾಗಿರಬೇಕು ಅಷ್ಟೇ. ಇಬ್ಬರು ಕುರುಡ ಮಹಿಳೆಯರ ಗುಡಿಸಲಿಗೆ ಹೋಗಿ ಅವರಿಗೆ ಆಹಾರ ಧ್ಯಾನ್ಯದ ಕಿಟ್ ವಿತರಿಸಿದಾಗ ಅವರ ಮುಖದಲ್ಲಿ ಕಂಡ ಭಾವ ನನ್ನ ಜೀವಮಾನದಲ್ಲಿ ಎಂದೂ ಮರೆಯುವುದಿಲ್ಲ.

ಬಡ ಜನರು ನಕ್ಕಾಗ ಅದನ್ನು ನೋಡುವ ಸುಖಕ್ಕಿಂತ ಬೇರೆ ಸುಖ, ಸಂತಸ ಇಲ್ಲ ಅಲ್ಲವೇ ಎಂದು ಹೇಳಿದಾಗ ಅವರ ಕಣ್ಣಾಲಿಗಳು ತುಂಬಿ ಬಂದವು.

ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಲೀಡರ್ ಶಿಫ್ ಯಾರೂ ಕೊಡುವುದಿಲ್ಲ. ಅವರಿಗೆ ಪ್ರೋತ್ಸಾಹ ಕೂಡ ಕಡಿಮೆ. ಹೆಣ್ಣು ಮಕ್ಕಳ ಕಷ್ಟ ಆಲಿಸಲು ಹೆಣ್ಣು ಮಕ್ಕಳೇ ಇರಬೇಕು. ಐಎಎಸ್ ತಯಾರಿ ಬಿಟ್ಟು ಇಡೀ ಕ್ಷೇತ್ರದಲ್ಲಿ ಸುತ್ತಾಡಿದ, ಜನರೊಂದಿಗೆ ಬೆರೆತ ಕ್ಷಣಗಳು ಐಎಎಸ್ ಆಗುವ ಖುಷಿಗಿಂತಲೂ ದೊಡ್ಡ ಖುಷಿ ಎಂಬುದು ನನ್ನ ಭಾವನೆ ಎಂದಾಗ ಅವರ ಮುಖದಲ್ಲಿ ನಗುವಿನ ಭಾವ.

ಈ ನನ್ನ ಕೆಲಸ ದೊಡ್ಡದು ಅಲ್ಲವೇ ಅಲ್ಲ. ನನ್ನಸ್ನೇಹಿತೆಯ ಹೆಸರು ಬೇಡ. ಬೆಂಗಳೂರಿನ ಹಾಲಿ ಶಾಸಕರೊಬ್ಬರ ಮಗಳು. ಅವಳು ಸಹ ನನ್ನೊಂದಿಗೆ ಯುಪಿಎಸ್ ಪರೀಕ್ಷೆಗಾಗಿ ಅಧ್ಯಯನ ನಡೆಸುತ್ತಿದ್ದಾಳೆ. ಅವಳು ಸಹ ಬೆಂಗಳೂರಿನಲ್ಲಿ ಕೊಳೆಗೇರಿಗಳಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಬೆಳಿಗ್ಗೆ ಮನೆ ಬಿಟ್ಟರೆ ರಾತ್ರಿಯೇ ಮನೆ ಸೇರುವುದು.

ಬೆಂಗಳೂರು ಎಂದರೇ ಎಲ್ಲರೂ ಭಯ ಬೀಳುತ್ತಿದ್ದಾರೆ. ತಂದೆ ಶಾಸಕರು ಎಂಬ ಪ್ರಶ್ನೆಯೇ ಆಕೆಯಲ್ಲಿ ಬಂದಿಲ್ಲ. ಕಷ್ಟದಲ್ಲಿ ಜನರ ಕೆಲಸ ಮಾಡಬೇಕು ಎಂಬುದೇ ನಮ್ಮ ಉದ್ದೇಶ. ನಾವುಗಳು ಬರಬೇಕೆಂದು ಯಾರೂ ಕೇಳಿರಲಿಲ್ಲ. ಎಲ್ಲ ಶಾಸಕರು. ಮಾಜಿ ಶಾಸಕರು, ಉದ್ಯಮಿಗಳ ಮಕ್ಕಳಂತೆ ಮನೆಯಲ್ಲೇ ಇರಬಹುದಿತ್ತು. ಆದರೆ ಜೀವನದಲ್ಲಿ ನಾವು ಯಾರಿಗಾಗಿ ಕೆಲಸ ಮಾಡಬೇಕಾಗಿದೆ ಎಂಬುದಷ್ಟೇ ಮನುಷ್ಯನ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದು‌ ಹೇಳಿದರು.

ಪ್ರತೀಕ್ಷಾ ಎಸ್, ಸುಶ್ಮಿತಾ ಎಸ್, ನಿಖಿತಾ ಶೆಟ್ಟಿ, ಮನೋಜ್ ಕುಮಾರ್ ಇವರೆಲ್ಲರೂ ನನ್ನ ಜೊತೆಗಾರರೇ. ನಾವೆಲ್ಲರೂ ಒಂದು ತಂಡವಾಗಿ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿಸಿ ನಡೆಸುತ್ತಿದ್ದೇವೆ.ಈಗ ಲಾಕ್ ಡೌನ್ ಸಡಿಲಗೊಂಡಿದೆ. ಜನರ ನಡುವಿನ ನಮ್ಮ ಕೆಲಸ ಮುಗಿದಿದೆ. ಯುಪಿಎಸ್ಸಿ ಎಂಬ ಕನಸಿನ ದೋಣಿಯಲ್ಲಿ ಪಯಣ ಮುಂದುವರೆಸುತ್ತೇವೆ ಎಂದೇಳುತ್ತಾ ಐಶ್ವರ್ಯ ಪುಸ್ತಕಗಳ ಕಡೆ ನೋಡಿದರು.

ಕಾರಂತ ಎನ್ನುವ ದುಡಿ ನನ್ನೊಳಗೆ ನುಡಿಯುತ್ತಲೇ ಇದೆ..

ಕಲೆ: ಪೆರ್ಮುದೆ ಮೋಹನ್ ಕುಮಾರ್

ಜಿ.ಎನ್.ಮೋಹನ್


“..ಈ ದಿನವೂ ಗುಡಿ ಬಂದೊಡನೆ ಬಾಡು ನಾಯಿ ನಿಂತಿತು. ಚೋಮನೂ ತಟಸ್ಥನಾಗಿ ಮೊಣಕಾಲುಗಳನ್ನು ಕೇವಲ ಅಭ್ಯಾಸ ಬಲದಿಂದಲೇ ಊರಿದ. ಎದೆ ಜುಮ್ಎಂದಿತು. ತಾನು ಪಾದ್ರಿಮಠವನ್ನು ಸೇರಲಿರುವವನು. ಇನ್ನು ಪಂಜುರ್ಲಿಗೆ ಡೊಗ್ಗಾಲು ಹಾಕುವುದೇ ಎಂದು ಅನಿಸಿತು. ಕಾಲನ್ನು ನೀಡಲು ನೋಡಿದ ಆಗಲಿಲ್ಲ. ಪಂಜುರ್ಲಿ ಭೂತ ತನ್ನ ಎದುರಿಗೆ ನಿಂತಂತೆ ಕಾಣಿಸಿತು..”

‘ಚೋಮನ ದುಡಿ’ಯಲ್ಲಿ ಮತ್ತೆ ಕಣ್ಣಾಡಿಸುತ್ತಿದ್ದೆ.

ತಕ್ಷಣ ಏನೋ ನೆನಪಾಗಿ ಹಾಗೇ ನಿಂತೆ.

ಸುಮಾರು ನಾಲ್ಕು ದಶಕದ ಹಿಂದಿನ ಮಾತು.

‘ನಾನಾಗಿದ್ದಿದ್ದರೆ ಚೋಮ ದೇವರ ಗುಡಿಗೆ ಕೈ ಮುಗಿಯುವ ಹಾಗೆ ಮಾಡುತ್ತಿರಲಿಲ್ಲ ಆತ ಪಂಜುರ್ಲಿಯನ್ನು ದಾಟಿಕೊಂಡೇ ತಾನು ಬಯಸಿದ ಕಡೆ ಹೋಗುವಂತೆ ಮಾಡುತ್ತಿದ್ದೆ..’ ಎನ್ನುವ ಅರ್ಥದ ಮಾತು ಚಂದ್ರಶೇಖರ ಪಾಟೀಲರ ಸಂಪಾದಕತ್ವದ ‘ಸಂಕ್ರಮಣ’ದಲ್ಲಿತ್ತು.

ಚೋಮನ ದುಡಿಯನ್ನು ಓದಿ ಅದರ ಸೆಳೆತಕ್ಕೆ ಸಿಕ್ಕಿದ್ದ ನನಗೆ ಕಾರಂತರು ಬರೆದದ್ದನ್ನು ಹೀಗೆ ಇನ್ನೊಂದು ರೀತಿ ನೋಡಬಹುದಲ್ಲಾ ಅನಿಸಿತು.

ಅದುವರೆಗೂ ಕಾರಂತರು ಎಂದರೆ ದೇವರಿಗೆ ಒಂದಿಷ್ಟು ಕಡಿಮೆ ಅಷ್ಟೇ ಎಂದು ಮನದಲ್ಲಿ ಅವರನ್ನು ಪ್ರತಿಷ್ಠಾಪಿಸಿಕೊಂಡಿದ್ದ ನನಗೆ ಕಾರಂತರನ್ನೂ ಪ್ರಶ್ನೆ ಮಾಡಬಹುದು ಎನ್ನುವುದೂ ಗೊತ್ತಾಯಿತು.

ಆಮೇಲೆ.. ಆಮೇಲಾಮೇಲೆ.. ಪ್ರಶ್ನೆ ಮಾಡುವ, ಕಾರಂತರನ್ನೂ ಪ್ರಶ್ನೆ ಮಾಡುವ, ಸಕಲ ಚರಾಚರಗಳನ್ನೂ ಪ್ರಶ್ನೆ ಮಾಡುವ, ದೇವರಿಗೇ ಸವಾಲು ಎಸೆಯುವ, ಪ್ರಭುತ್ವವನ್ನು ಜಗ್ಗಿ ಮಾತನಾಡಿಸುವ.. ಎಲ್ಲವನ್ನೂ ಕಲಿಸಿದ್ದು ಕಾರಂತರೇ ಎಂದು ಗೊತ್ತಾಯಿತು.

ಶಿವರಾಮ ಕಾರಂತರು ನನ್ನ ಮನದೊಳಗೆ ನೆಟ್ಟು ನಿಂತದ್ದು ಹೀಗೆ..

ಶಿವರಾಮ ಕಾರಂತ ಹೆಸರು ನಾನು ಅದೀಗ ಕೇಳಿದ್ದೇನೂ ಅಲ್ಲ

ಅವರು ನನ್ನ ಬಾಲ್ಯಕ್ಕೂ, ಯೌವನಕ್ಕೂ ಜತೆ ಜತೆಯಾಗಿಯೇ ಸಾಥ್ ನೀಡಿದ್ದರು.

ಇನ್ನೂ ನಾಲ್ಕನೇ ತರಗತಿಯಲ್ಲಿರುವಾಗಲೇ ನಾನು ‘ವಾಸನ್ ಸರ್ಕ್ಯುಲೇಟಿಂಗ್ ಲೈಬ್ರರಿ’ಯ ಮುಚ್ಚಿದ ಶಟರ್ ಯಾವಾಗ ತೆರೆಯುವುದೋ ಎಂದು ಕಾಯುತ್ತಾ ನಿಂತಿರುತ್ತಿದ್ದೆ.

ಅಲ್ಲಿದ್ದ ‘ಅಮರಚಿತ್ರ ಕಥಾ ಮಾಲಿಕೆ’ಯ ಎಲ್ಲಾ ಪುಸ್ತಕಗಳನ್ನೂಒಂದೇ ಗುಕ್ಕಿಗೆ ಓದಿ ಮುಗಿಸುವ ಹಸಿವಿನಲ್ಲಿರುತ್ತಿದ್ದೆ.

ಶಿವರಾಮ ಕಾರಂತ ಎನ್ನುವ ಹೆಸರು ನನಗೆ ಸಿಕ್ಕಿದ್ದು ಇಲ್ಲಿಯೇ. ಅಮರ ಚಿತ್ರ ಕಥಾ ಮಾಲಿಕೆಯ ಕನ್ನಡದ ಬಹುತೇಕ ಅನುವಾದ ಇವರದ್ದೇ. ಅದಕ್ಕೆ ಮುದ್ದಾದ ಕೈಬರಹದ ಜೊತೆ ನೀಡುತ್ತಿದ್ದವರು ಕಮಲೇಶ್.

ಆಮೇಲೆ ಅವರು ನನಗೆ ಸಿಕ್ಕಿದ್ದು ಅಣ್ಣ ತಂದುಕೊಡುತ್ತಿದ್ದ ಅನೇಕ ಕೃತಿಗಳ ಮೂಲಕ. ನರಗುಂದದ ಮಾಳಿಗೆಯ ಮನೆಯಲ್ಲಿ, ಅಣ್ಣ ಅಲ್ಲಿ ಕೃಷಿ ಅಧಿಕಾರಿಯಾಗಿದ್ದಾಗ ‘ಚೋಮನ ದುಡಿ’ ಕಾದಂಬರಿಯನ್ನು ನಾನು ಕೈಗೆತ್ತಿಕೊಂಡೆ.

ಇದನ್ನು ಓದಿದ ಕಾರಣಕ್ಕಾಗಿಯೇ ಇರಬೇಕು ನನಗೆ ಎರಡು ದಿನ ಮೊದಲೇ ಮೀಸೆ ಬಂದಿತ್ತು.

ಕಾರಂತರು ವಿಜ್ಞಾನ ವಿಷಯಗಳನ್ನು ಬರೆದರು. ತಮ್ಮ ಅಪಾರ ಓದನ್ನೆಲ್ಲಾ ಕನ್ನಡ ಜಗತ್ತಿಗೆ ಧಾರೆ ಎರೆದುಬಿಡಬೇಕು ಎನ್ನುವಂತೆ ಬರದೇ ಬರೆದರು.

ಅದನ್ನೆಲ್ಲ ಓದುತ್ತಾ ದಕ್ಕಿಸಿಕೊಳ್ಳುತ್ತಾ ಹೋಗುತ್ತಿದ್ದಾಗ ತುರ್ತು ಪರಿಸ್ಥಿತಿ ಸದ್ದಿಲ್ಲದೇ ಕಳ್ಳ ಹೆಜ್ಜೆಯಲ್ಲಿ ಒಳಗೆ ಬರಲು ಹವಣಿಸುತ್ತಿತ್ತು.

ಆ ಸಮಯಕ್ಕೆ ಸರಿಯಾಗಿ ಚೋಮನೂ ಬೆಳ್ಳಿ ತೆರೆಯ ಮೇಲೆ ದುಡಿ ಕೈಗೆತ್ತಿಕೊಂಡಿದ್ದ.

ದೇಶಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಸಕಿ ಹಾಕುವ ಹುನ್ನಾರ ನಡೆದಿತ್ತು. ಹಾಗಾಗಿಯೇ ವೈಚಾರಿಕತೆಯ ಬಿರುಗಾಳಿ ಎಲ್ಲೆಲ್ಲೂ ಹರಡಲು ಆರಂಭವಾಗಿತ್ತು.

ಚೋಮನ ದುಡಿ ಈ ಸಮಯಕ್ಕೆ ಉರಿಯುವ ಪಂಜಿಗೆ ಕೀಲೆಣ್ಣೆಯಾಗಿ ಒದಗಿತು

ಹಾಗಾಗಿ ಚೋಮನ ಬಗ್ಗೆ, ಆತನ ನೋವುಗಳ ಬಗ್ಗೆ, ಆತನ ವಿಷಾದದ ಬಗ್ಗೆ ನಮ್ಮದೇ ಆದ ನೋಟಗಳಿತ್ತು

ಅದೇ ನೋಟಗಳನ್ನು ಕಟ್ಟಿಕೊಂಡೇ ಬೆಳೆಯುತ್ತಿದ್ದ ನನಗೆ ‘ಸಂಕ್ರಮಣ’ ಶಾಕ್ ಕೊಟ್ಟಿತ್ತು.

ಲೇಖಕರು ಚೋಮನನ್ನೂ, ಆ ಮೂಲಕ ಶಿವರಾಮ ಕಾರಂತರನ್ನೂ ಪ್ರಶ್ನಿಸಿದ್ದರು.

ಚೋಮನ ದುಡಿ ಮತ್ತೆ ಓದಿದೆ. ‘ಹೌದಲ್ಲಾ ಚೋಮ ವ್ಯವಸ್ಥೆಗೆ ಬಲಿಯಾಗಿ ಕುಸಿಯುವ ಬದಲು…??’ ಎಂದು ನನಗೂ ಅನ್ನಿಸಿತು. ಆಗ ಮತ್ತೆ ಶಿವರಾಮ ಕಾರಂತರನ್ನು ಭೂತಗನ್ನಡಿಯ ಮೂಲಕ ನೋಡಲಾರಂಭಿಸಿದೆ.

ಶಿವರಾಮ ಕಾರಂತರು ಇದ್ದ ವ್ಯವಸ್ಥೆಗೆ ಸಡ್ಡು ಹೊಡೆದವರು. ಎಲ್ಲರೂ ಒಪ್ಪಿಕೊಂಡು ‘ಮಂದೆಯೊಳಗೊಂದಾಗಿ..’ ಹೋಗುತ್ತಿದ್ದಾಗ ಭಿನ್ನ ಪ್ರಶ್ನೆಗಳನ್ನು ಎತ್ತಿದವರು. ರೇಗುತ್ತಲೇ ವಿಷಯದ ಮೊನಚನ್ನು ಅರ್ಥ ಮಾಡಿಸುತ್ತಿದ್ದವರು.

ಪ್ರಶ್ನಿಸಲೇಬೇಕು ಎಲ್ಲವನ್ನೂ ಎಂದು ದೃಢವಾಗಿ ನಂಬಿದ್ದವರು.
ತಾವೊಬ್ಬರೇ ಅಲ್ಲ, ಎಲ್ಲರೂ.. ಎಂದು ಹಾತೊರೆಯುತ್ತಿದ್ದವರು.

ಅಲೆಯ ವಿರುದ್ಧ ಈಜುವುದು ಕಾರಂತರಿಗೆ ತೀರಾ ಸಹಜ ಕ್ರಿಯೆಯಾಗಿತ್ತು.

ಒಂದು ಸಲ ಹೀಗಾಯ್ತು-

ಬಾಲವನದಲ್ಲಿದ್ದೆ. ‘ನಿರತ ನಿರಂತ’ದ ಗೆಳೆಯರೆಲ್ಲರೂ ಕೂಡಿ ಮಕ್ಕಳೊಡನೆ ಗಮ್ಮತ್ತು ಮಾಡುತ್ತಿದ್ದರು. ಅದಕ್ಕೆ ಶಿವರಾಮ ಕಾರಂತರು ಕಣ್ಣಾಗಿದ್ದರು.

ಆ ವೇಳೆಗೆ ಕುಂದಾಪುರ ತಲುಪಿಕೊಂಡಿದ್ದ ಕಾರಂತರಿಗೆ ‘ಬಾಲವನ’ಕ್ಕೆ ಬಂದಾಗ ಮುಖದಲ್ಲಿ ತವರಿಗೆ ಬಂದ ಸಂಭ್ರಮವಿತ್ತು.

ಅವರು ಮಕ್ಕಳಿಗೆ ಕಥೆ ಹೇಳುತ್ತಾ.. ನಗುತ್ತಾ ಕುಳಿತಿದ್ದಾಗ ಅರೆ ಸಿಂಹಕ್ಕೂ ನಗು ಇದೆ ಎಂದು ನಾವೆಲ್ಲರೂ ಕಿಸಪಿಸ ಮಾತಾಡಿಕೊಂಡಿದ್ದೆವು.

ಆಗಲೇ ಗೋಪಾಡ್ಕರ್ ಎನ್ನುವ ಗೆಳೆಯ ಅವರ ಮುಂದೆ ಸ್ವರೂಪ ಎನ್ನುವ ಬಾಲಕನನ್ನು ನಿಲ್ಲಿಸಿದ. ನೆನಪಿನ ಶಕ್ತಿಯ ಬಗ್ಗೆ ಏನೇನೋ ಪ್ರಯೋಗ ನಡೆಸುತ್ತಿದ್ದ ಯುವಕ ಆತ.

ಆ ಮಗುವನ್ನು ಕಾರಂತರ ಮುಂದೆ ನಿಲ್ಲಿಸಿ ‘ಸಾರ್ ಇವನು ಯಾವ ದೇಶದ ಬಾವುಟ ಬೇಕಾದರೂ ಗುರುತಿಸುತ್ತಾನೆ, ದೇಶದ ಚರಿತ್ರೆಯ ದಿನಾಂಕಗಳನ್ನು ಪಟಪಟನೆ ಹೇಳುತ್ತಾನೆ, ಜಗತ್ತಿನ ಎಲ್ಲಾ ರಾಜಧಾನಿಗಳ ಹೆಸರೂ ಗೊತ್ತು, ಪ್ರಧಾನಿ.. ಅಧ್ಯಕ್ಷರು.. ರಾಷ್ಟ್ರಪತಿ.. ಪಕ್ಷಗಳು.. ಹೀಗೆ ಎಲ್ಲವೂ..’ ಎಂದು ಉತ್ಸಾಹದಿಂದ ಬಣ್ಣಿಸುತ್ತಿದ್ದ.

ಮಾತನ್ನು ಅರ್ಧಕ್ಕೆ ತುಂಡರಿಸಿದವರೇ ಕಾರಂತರು ‘ಅದೆಲ್ಲಾ ಸರಿ, ಆ ಮಗುವಿಗೆ ಮಣ್ಣಲ್ಲಿ ಆಡಲು ಬರುತ್ತದಾ ..?’ ಎಂದರು.

ಹುಡುಗನ ಶಕ್ತಿ ಬಣ್ಣಿಸುತ್ತಿದ್ದವರು ಕಕ್ಕಾಬಿಕ್ಕಿ. ಕಾರಂತರು ಹೇಳಿದರು- ಮಗು ಮಗುವಾಗಿರಲಿ ಅವನನ್ನು ಈ ವಯಸ್ಸಿನಲ್ಲೇ ಬೋನ್ಸಾಯ್ ಆಗಿಸಬೇಡಿ ಅಂತ.

ಇದೇ ಗೋಪಾಡ್ಕರ್ ಇನ್ನೊಂದು ದಿನ ನನ್ನೆದುರು ಕುಳಿತು ಕಾರಂತರು ನನ್ನನ್ನು ಮಂಗ ಮಾಡಿದ್ದು ಹೇಗೆ ಎಂದು ವಿವರಿಸುತ್ತಿದ್ದ.

ಒಂದು ಸಲ ಗೋಪಾಡ್ಕರ್ ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದರು. ಅದೇ ರೈಲಿನಲ್ಲಿ ಕಾರಂತರು.

ಗೋಪಾಡ್ಕರ್ ಹುಮ್ಮಸ್ಸು ಮೂರು ಪಟ್ಟು ಅಯಿತು. ಆಗ ಗೋಪಾಡ್ಕರ್ ಗೆ ಒಂದು ಹವ್ಯಾಸವಿತ್ತು. ಉಗುರಿನಲ್ಲಿ ಚಿತ್ರ ಬಿಡಿಸುವುದು.

ಸೀದಾ ಹೋಗಿ ಕಾರಂತರ ಎದುರು ಕುಳಿತಿದ್ದಾನೆ. ಅವರನ್ನೇ ಒಂದಷ್ಟು ಹೊತ್ತು ದಿಟ್ಟಿಸಿ ನೋಡಿದ್ದಾನೆ

ಬ್ಯಾಗಿನಿಂದ ಒಂದು ಡ್ರಾಯಿಂಗ್ ಹಾಳೆ ತೆಗೆದಿದ್ದಾನೆ. ಅವರನ್ನು ನೋಡುವುದು.. ಕಾಗದದಲ್ಲಿ ಉಗುರು ಉಜ್ಜುವುದು..
ಹೀಗೆ ಸುಮಾರು ಅರ್ಧ ಗಂಟೆ ಆಗಿದೆ.

ಆಮೇಲೆ ‘ಆಹಾ..’ ಅಂದುಕೊಂಡು ತಾನು ಹಾಳೆಯ ಮೇಲೆ ಉಗುರಿನಿಂದ ರಚಿಸಿದ ಕಾರಂತರ ಭಾವಚಿತ್ರವನ್ನು ಅವರ ಕೈಗಿರಿಸಿದ್ದಾನೆ.

ಕಾರಂತರ ಮೆಚ್ಚುಗೆಗಾಗಿ ಕಿವಿಯೆಲ್ಲಾ ದೊಡ್ಡದು ಮಾಡಿಕೊಂಡು ಕುಳಿತಿದ್ದಾನೆ.

ಕಾರಂತರು ಆ ಚಿತ್ರವನ್ನು ಆ ಕಡೆಯಿಂದ ಈ ಕಡೆಯಿಂದ ಹತ್ತು ಬಾರಿ ನೋಡಿದವರೇ ‘ಸರಿ ಈ ರೀತಿ ಇರೋದಿಕ್ಕೆ ಪ್ರಯತ್ನಿಸ್ತೀನಿ’ ಎಂದಿದ್ದಾರೆ.

ಗೋಪಾಡ್ಕರ್ ಗೆ ಉಗುರು ಎಬ್ಬಿಹೋದ ಹಾಗಾಗಿತ್ತು.

ಕಾರಂತರೆಂದರೆ ಹಾಗೆ..
ಯಾರನ್ನೂ ಮೆಚ್ಚಿಸುತ್ತಾ ಕೂರುವ ಮಾತೇ ಇಲ್ಲ, ಮೆಚ್ಚಿದ್ದನ್ನೇ ಮೆಚ್ಚಬೇಕೆಂಬುದಂತೂ ಇಲ್ಲವೇ ಇಲ್ಲ.

‘ಇದೇನು ಶೋಕ ಗೀತೆ ಏನ್ರೀ’ ಅಂತ ಅತಿ ಅಸಹನೆಯಿಂದ ಸಭಿಕರನ್ನು ಪ್ರಶ್ನಿಸಿದರು.

ಅದು ಬಂಟವಾಳದಲ್ಲಿ ನಡೆದ ಕಾರ್ಯಕ್ರಮ. ಅವತ್ತು ಅಲ್ಲಿ ರಾಷ್ಟ್ರಗೀತೆ ಹಾಡಿದ್ದರು. ಕಾರಂತರು ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ತಮ್ಮದು ಕೊನೆಯಲ್ಲಿ ಆಗಬೇಕಾದ ಅಧ್ಯಕ್ಷ ಭಾಷಣ ಎನ್ನುವುದನ್ನೂ ಮರೆತಂತೆ ಎದ್ದು ನಿಂತವರೇ ‘ಅಲ್ಲ ರಾಷ್ಟ್ರ ಗೀತೆ ಎಂದರೆ ಉತ್ಸಾಹದಿಂದ ಹಾಡಬೇಕು, ಕುಣಿಯುವ ಹುಮ್ಮಸ್ಸು ಬರುವಂತೆ ಹಾಡಬೇಕು. ಅದು ಬಿಟ್ಟು ಈ ದೇಶಕ್ಕೆ ಏನಾಗಿದೆ? ರಾಷ್ಟ್ರ ಗೀತೆಯನ್ನ ಶೋಕ ಗೀತೆಯ ಥರಾ ಹಾಡ್ತಾರೆ ತಲೆ ತಗ್ಗಿಸಿ, ಕೈ ಕಟ್ಟಿ ಛೆ!’ ಎಂದರು.

‘ನಾವು ರಾಷ್ಟ್ರ ಗೀತೆಗೆ ಮಿಲಿಟರಿ ಶಿಸ್ತು ತಂದುಬಿಟ್ಟಿದ್ದೇವೆ’ ಎಂದು ತೀರಾ ಬೇಸರಪಟ್ಟುಕೊಂಡರು.

ಕಾರಂತರೆಂದರೆ ಹಾಗೇ..

ಅವರಿಗೆ ಬೇರೆಯವರಂತೆ ಸುಮ್ಮನೆ ಕೂರಲು ಆಗುತ್ತಿರಲಿಲ್ಲ ಹಾಗೂ ಬೇರೆಯವರಂತೆ ಮನಸ್ಸಿಗೆ ಮುಸುಕು ಹಾಕಲೂ ಸಾಧ್ಯವಾಗುತ್ತಿರಲಿಲ್ಲ.

ಒಂದು ವಿಷಯ ನಿಮಗೆ ಹೇಳಲೇಬೇಕು.

ನಾನು ‘ಪ್ರಜಾವಾಣಿ’ ವರದಿಗಾರನಾಗಿ ಮಂಗಳೂರನ್ನು ತಲುಪಿಕೊಂಡೆ.

ಹೋದ ಕೆಲ ದಿನಕ್ಕೇ ಶಿವರಾಮ ಕಾರಂತರ ಫೋನ್ ನಂಬರ್ ಬೇಕಲ್ಲಾ ಅಂದೆ.

ಆಗ ಟೆಲಿಕಾಂ ಪಿ ಆರ್ ಓ ಆಗಿದ್ದ ಎಂ ಜಿ ಹೆಗಡೆ ನಂಬರ್ ಕೊಟ್ಟರು.

ತಿರುಗಿಸಿದರೆ ಅದು ‘ಕೊಂಯ್’ ಅಂತ ಕೂಡಾ ಅನ್ನಲಿಲ್ಲ.

ನಾನು ಹೆಗಡೆ ಅವರಿಗೆ ಫೋನ್ ತಿರುಗಿಸಿ ಯಾವುದೋ ರಾಂಗ್ ನಂಬರ್ ಕೊಟ್ಟಿರಬೇಕು ಅಂದೆ.

ಅವರು ಇಲ್ಲ ಅದೇ ನಂಬರ್ ಅಂದರು. ನೀವೇ ತಿರುಗಿಸಿ ನೋಡಿ ಅದು ಸದ್ದೇ ಮಾಡುತ್ತಿಲ್ಲ ಎಂದೆ.

ಆಗ ಅವರು ಜೋರಾಗಿ ನಕ್ಕವರೇ ‘ಕಾರಂತರು ಒನ್ ವೇ ಸ್ವಾಮಿ’ ಅಂದರು.

ನನಗೆ ಅರ್ಥ ಆಗಲಿಲ್ಲ ‘ಏನು’ ಅಂದೆ.

‘ಕಾರಂತರು ಬೇರೆಯವರಿಗೆ ಫೋನ್ ಮಾಡಬಹುದೇ ಹೊರತು ಕಾರಂತರಿಗೆ ನೀವು ಮಾಡೋದಿಕ್ಕೆ ಆಗೋದಿಲ್ಲ’ ಅಂದರು.

ದಕ್ಷಿಣ ಕನ್ನಡ ಟೆಲಿಕಾಂ ಕಾರಂತರಿಗಾಗಿ ಹೊರಹೋಗುವ ಕರೆ ಸೌಲಭ್ಯ ಮಾತ್ರವಿರುವ ಸೆಟ್ ಕೊಟ್ಟಿತ್ತು, ಅವರ ಕೋರಿಕೆಯ ಮೇರೆಗೆ..

ಒಂದು ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಸೂಕ್ತರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಕಾರಂತರಿಗೆ ವಹಿಸಿತ್ತು

ಕಾರಂತರನ್ನು ಉಡುಪಿಯ ಕು ಶಿ ಹರಿದಾಸ ಭಟ್ಟರ ಸಂಶೋಧನಾ ಕೇಂದ್ರದಲ್ಲಿ ಭೇಟಿ ಮಾಡಿ ‘ಹೇಗಿದೆ ಪ್ರಶಸ್ತಿ ಆಯ್ಕೆ ಕೆಲಸ’ ಎಂದೆ.

ಕಾರಂತರು ಪ್ರಶಸ್ತಿಯನ್ನೂ, ಪ್ರಶಸ್ತಿಗಾಗಿಯೇ ಬದುಕಿರುವವರನ್ನು ಒಂದು ಕೆ ಜಿ ಹುಣಿಸೆ ಹಣ್ಣು ಹಾಕಿ ತೊಳೆದರು

ಮೊದಲ ಬಾರಿಗೆ ಕಾರಂತರಿಗೆ ಪ್ರಶಸ್ತಿಗಾಗಿ ಜೊಲ್ಲು ಸುರಿಸಿವವರ ನೇರ ಪರಿಚಯ ಆಗಿ ಹೋಗಿತ್ತು.

ಕಾರಂತರು ಬರೆದ ‘ಓದುವ ಆಟ’ವನ್ನು ಸರ್ಕಾರ ಪಠ್ಯ ಪುಸ್ತಕವನ್ನಾಗಿ ಮಾಡಿತ್ತು.

ಅದರಲ್ಲಿ ‘ಲಟಪಟ ಆಚಾರಿ’ ಎನ್ನುವ ಒಂದು ಲೇಖನವಿತ್ತು.

ಇಡೀ ರಾಜ್ಯದ ಅಕ್ಕಸಾಲಿಗರು ಆ ಲೇಖನದ ವಿರುದ್ಧ ಎದ್ದು ನಿಂತರು. ಈ ಬರಹ ನಮ್ಮನ್ನು ಕೀಳಾಗಿ ಕಾಣುತ್ತದೆ ಎಂದು.

ಬಹುಷಃ ಕಾರಂತರು ತಮ್ಮ ಬರಹಕ್ಕೆ ಈ ರೀತಿ ಪ್ರತಿಕ್ರಿಯೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ.
ವ್ಯಗ್ರರಾದರು.

ಇದೇ ಸಮಯದಲ್ಲಿ ನಾನು ಉಡುಪಿಯಲ್ಲಿ ಅವರಿಗೆ ಈ ವಿವಾದದ ಬಗ್ಗೆ ಕೇಳಿದ್ದೆ.

ಅವರು ಉರಿದೆದ್ದು ಹೋದರು. ‘ಈ ಬಗ್ಗೆ ಯಾರಿಗಾದರೂ ಚರ್ಚೆ ಮಾಡುವ ತಾಖತ್ತಿದೆಯೇ?’ ಎಂದು ಕೇಳಿದರು.

ಒಂದೆರಡು ದಿನದ ನಂತರ ಮಂಗಳೂರಿನ ಗಣಪತಿ ಕಾಲೇಜಿನಲ್ಲಿ ಒಂದು ವಿಚಾರ ಸಂಕಿರಣವಿತ್ತು

ಅಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಮಹಾಬಲೇಶ್ವರ ಹೆಬ್ಬಾರ್ ಅವರು ನನ್ನ ಸಂದರ್ಶನ ಉಲ್ಲೇಖಿಸಿ-
‘ಕಾರಂತರ ಸವಾಲನ್ನು ಸ್ವೀಕರಿಸಲು ನಾನು ಸಿದ್ಧ, ಚರ್ಚೆ ಆಗಿಯೇ ಹೋಗಲಿ..’ ಎಂದರು.

ಕಾರಂತರು ಬುಸುಗುಟ್ಟಿದ್ದನ್ನು ನೋಡಿದ್ದು ಆಗ.

ಶಿವರಾಮ ಕಾರಂತರ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾಯಿತು.

ಬಿ ಎ ವಿವೇಕ ರೈ ಹಾಗೂ ಕಾರಂತರ ನಡುವಣ ನಂಟು ಗಾಢವಾದದ್ದು. ‘ವಿವೇಕ’ ಎನ್ನುವ ಹೆಸರನ್ನು ಸೂಚಿಸಿದ್ದೇ ಶಿವರಾಮ ಕಾರಂತರು.

ಪುರಂದರ ರೈ ಅವರು ಮಗು ಹುಟ್ಟಿದಾಗ ಮೊದಲು ಹೆಜ್ಜೆ ಹಾಕಿದ್ದು ಕಾರಂತರ ಕಡೆಗೆ. ಹೆಸರು ಸೂಚಿಸಿ ಎಂದರು.

ಕಾರಂತರು ವಿವೇಕ ಎಂದು ಹೆಸರಿಡು ಎಂದರು. ಪುರಂದರ ರೈಗಳಿಗೆ ವಿವೇಕಾನಂದ ಎಂದು ಕೇಳಿಸಿತೇನೋ.. ಕಾರಂತರಿಗೆ ಮತ್ತೆ ಪ್ರಶ್ನೆ ಮಾಡಿದರು. ಕಾರಂತರು ‘ವಿವೇಕ ಇದ್ದಲ್ಲಿ ಆನಂದ ತಾನೇ ತಾನಾಗಿ ಬರುತ್ತದೆ. ವಿವೇಕ ಅಂತ ಇಡು ಸಾಕು’ ಎಂದರು.

ಇಂತಹ ವಿವೇಕ ಇದ್ದ ಮಂಗಳೂರು ವಿ ವಿ ಗೆ ಆನಂದ ಮಾತ್ರವಲ್ಲ ಕಾರಂತರೂ ಬಂದರು.

ಹಾಗಾಗಿ ನನಗೆ ಮೇಲಿಂದ ಮೇಲೆ ಕಾರಂತರ ಜೊತೆ ಮಾತನಾಡುವ, ಕೈ ಕುಲುಕುವ, ಅವರೊಟ್ಟಿಗೆ ಓಡಾಡುವ ಪ್ರಸಂಗ ಮೇಲಿಂದ ಮೇಲೆ ಸಿಕ್ಕಿತು.

ಕಾರಂತರ ಲೇಖನಗಳ ಸಮಗ್ರ ಸಂಗ್ರಹದ ಬಹು ಸಂಪುಟಗಳನ್ನು ತರಲು ಮಂಗಳೂರಿನ ಈ ಪೀಠ ಸಜ್ಜಾಯಿತು. ಅದರ ಎಲ್ಲಾ ಹೆಜ್ಜೆಗಳಿಗೂ ನಾನು ಕಣ್ಣಾಗಿದ್ದೆ.

ಪುತ್ತೂರಿನ ಕಾರಂತಜ್ಜರ ಮನೆಯಂತೂ ನನಗೆ ನನ್ನದೇ ಮನೆ ಎನ್ನುವಂತೆ ಆಗಿಹೋಗಲು ಕಾರಣರಾದದ್ದು ಮೋಹನ್ ಸೋನಾ, ಐ ಕೆ ಬೊಳುವಾರು ಹಾಗೂ ಬಾಲವನ ಚಂದ್ರು.

ಮನಸ್ಸಿಗೆ ಒಂದಿಷ್ಟು ಆಯಾಸ ಅನಿಸಿದಾಗೆಲ್ಲಾ ನಾನು ಬಾಲವನ ತಲುಪಿಕೊಳ್ಳುತ್ತಿದ್ದೆ. ಕಾರಂತರ ಪ್ರಿಂಟಿಂಗ್ ಪ್ರೆಸ್, ಕಾರಂತರ ಮನೆ, ತೋಟ ಎಲ್ಲಾ ಅಡ್ಡಾಡುತ್ತ ಅಲ್ಲಿಯೇ ಮಕ್ಕಳ ಜೊತೆ ಚಿಲಿ ಪಿಲಿ ಸದ್ದು ಮಾಡುತ್ತಾ, ಎನ್ ಎಸ್ ಶಂಕರ್ ಕ್ಯಾಮೆರಾ ತಂಡದೊಡನೆ ಬಂದಾಗ ‘ಬಾಲವನ’ ನನ್ನದೇನೂ ಎನ್ನುವಂತೆ ಬಾಗಿಲು ಸರಿಸಿ, ಓಡಾಡಿದ್ದೂ ಉಂಟು.

ಬೋಳಂತಕೋಡಿ ಈಶ್ವರ ಭಟ್ಟರಿಂದಾಗಿ ಲೀಲಾ ಕಾರಂತರ ನೆನಪುಗಳು ದಕ್ಕಿದವು, ನನ್ನ ‘ಈಟಿವಿ’ ಕ್ಯಾಮೆರಾ ಮಗಳು ಕ್ಷಮಾ ರಾವ್ ಅವರ ಒಡಿಸ್ಸಿ ನೃತ್ಯವನ್ನು ಸೆರೆ ಹಿಡಿಯಿತು, ಗೆಳೆಯ ಪ್ರವೀಣ್ ಭಾರ್ಗವ್ ನಿಂದಾಗಿ ಉಲ್ಲಾಸ ಕಾರಂತರ ಸಹವಾಸವೂ ದೊರೆಯಿತು.

ಕಾರಂತರು ಗೆಜ್ಜೆ ಕಟ್ಟಿ ಕುಣಿದದ್ದನ್ನು ಎದುರಿಗೆ ಕುಳಿತು ನೋಡುವ, ಅವರು ಹಾಗೆ ರೂಪಿಸಿದ ಬ್ಯಾಲೆಗಳು ದೇಶ ವಿದೇಶ ತಿರುಗಿ ಚರ್ಚೆಗೊಳಗಾದದ್ದನ್ನು ಅವರಿಂದಲೇ ಆಲಿಸುವ, ಆ ಪ್ರದರ್ಶನಗಳ ವಿಡಿಯೋಗಳನ್ನು ಅವರ ಜೊತೆ ಕುಳಿತು ನೋಡುವ.. ಅಪರೂಪದ ಕ್ಷಣಗಳು ನನಗೆ ಸಿಕ್ಕಿ ಹೋದವು.

ಕಾರಂತರು ಕೈಗಾ ಅಣುಸ್ಥಾವರ ವಿರೋಧಿಸಿ ಹೇಳಿಕೆ ಕೊಟ್ಟಾಗ ನಾನು ಇನ್ನೂ ಆಗ ತಾನೇ ಕಾಲೇಜು ಅಂಗಳದಿಂದ ಹೊರಗೆ ಹೆಜ್ಜೆ ಇಟ್ಟಿದ್ದೆ.

ಕೈಗಾ ಬಗ್ಗೆ ಬಗ್ಗೆ ನಮಗೆ ನಮ್ಮದೇ ಆದ ನಿಲುವುಗಳಿದ್ದವು. ಇದು ಹಸಿರು ಭಯೋತ್ಪಾದನೆಯೂ ಇರಬಾರದೇಕೆ ಅನಿಸಿ ಇದಕ್ಕೆ ಕಾರಂತರ ಕಡೆಯಿಂದಲೇ ಉತ್ತರ ಪಡೆಯೋಣ ಎಂದು ನೇರಾ ನೇರ ಪತ್ರ ಬರೆದಿದ್ದೆ.

ಕಾರಂತರ ಟಿಪಿಕಲ್ ಮೋಡಿ ಅಕ್ಷರದಲ್ಲಿ ಉತ್ತರವೂ ಸಿಕ್ಕಿಬಿಟ್ಟಿತ್ತು.

‘ನಮ್ಮ ಲಾವಂಚ, ಅಂಟುವಾಳ, ಹರಿಶಿಣವನ್ನೇ ಬಿಡದ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಪತ್ರಿಕೆಗಳನ್ನು ನುಂಗದೆ ಬಿಡುತ್ತದೆ ಎಂದು ಭಾವಿಸಿದ್ದೀರಾ?’ ಎಂದು ಸಭಿಕರಿಗೆ ಪ್ರಶ್ನಿಸಿದ್ದೆ.

ಅದು ಬಂಟವಾಳದಲ್ಲಿ ಜರುಗಿದ ಕನ್ನಡ ಪತ್ರಿಕೋದ್ಯಮದ ೧೫೦ನೆಯ ವರ್ಷಾಚರಣೆ.

ಶಿವರಾಮ ಕಾರಂತರ ಜೊತೆ ನಾನೂ ಭಾಷಣಕಾರ.

‘ವಿದೇಶಿ ಪತ್ರಿಕೆಗಳು ಬಂದರೆ ಇಂಗ್ಲಿಷ್ ಪತ್ರಿಕೆಗಳು ನಾಶವಾಗಬಹುದು ಅಷ್ಟೇ ಬಂಟವಾಳ, ಉಪ್ಪಿನಂಗಡಿ, ಕಾಪುವಿನ ಪತ್ರಿಕೆ ಅಲ್ಲ ಎಂದುಕೊಂಡಿದ್ದೀರಿ. ಆದರೆ ಅವರಿಗೆ ಅದು ಕೇವಲ ಪತ್ರಿಕೆಯಾಗಿ ಕಾಣುವುದಿಲ್ಲ ನಿಮ್ಮ ಅಭಿಪ್ರಾಯ ರೂಪಿಸುವ ಆಯುಧವಾಗಿ ಕಾಣುತ್ತದೆ. ಅದನ್ನು ಇಲ್ಲವಾಗಿಸದೆ ಅವರು ಸುಮ್ಮನಿರುವುದಿಲ್ಲ’ ಎಂದೆ.

ಮಾತು ಮುಗಿಸಿ ಕುಳಿತಾಗ ಕಾರಂತರು ನನ್ನ ಕಿವಿಯಲ್ಲಿ ‘ಜಾಗತೀಕರಣದಿಂದ ನನ್ನ ಚೋಮನಿಗೂ ಒಂದಿಷ್ಟು ಮರ್ಯಾದೆ ಬರಬಹುದಲ್ಲವೇ?’ ಎಂದು ಕೇಳಿದರು.

ಅವರು ಅಂದು ಕೇಳಿದ ಮಾತು ಇಂದೂ ನನ್ನೊಳಗೆ ಆ ಚೋಮ ರೋಷದಿಂದ ಇನ್ನಿಲ್ಲದಂತೆ ಬಾರಿಸಿದ ದುಡಿಯ ಶಬ್ಧದಂತೆ ಕಾಡುತ್ತಲೇ ಇದೆ..

ಸಾಹಿತಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇನ್ನಿಲ್ಲ

Publicstory. in


ಮಂಗಳೂರು: ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಕರ್ಕಿಕೋಡಿ ನಿವಾಸಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ (44) ಅಸೌಖ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.

ಅವರು ಹಿರಿಯ ಸಾಹಿತಿ ವಿ.ಗ. ನಾಯಕ ಮತ್ತು ಶ್ಯಾಮಲಾ ಕರ್ಕಿಕೋಡಿ ಅವರ ಪುತ್ರಿ.
ಸೀತಾಲಕ್ಷ್ಮೀ ಅವರು ಅಡ್ಯನಡ್ಕದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪಡೆದರು.

ಬಳಿಕ ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

‘ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ’ ಎಂಬ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ ಪಿಎಚ್‌ಡಿ ಪದವಿ ಪ್ರದಾನಿಸಿ ಗೌರವಿಸಿದೆ.

ಸಾಹಿತ್ಯ ಲೋಕಕ್ಕೆ ತನ್ನದೇ ಆದ ಸೇವೆ ನೀಡಿದ ಸೀತಾಲಕ್ಷ್ಮೀ ಅವರು ಪರಾಮರ್ಶೆ, ಮುಕ್ತಮಾತು, ಆ ಕ್ಷಣದಲ್ಲಿ, ರಂಗಕರ್ಮಿ ಸದಾನಂದ ಸುವರ್ಣ ಸಂಪದ, ರಂಗಚೇತನ ಸದಾನಂದ ಸುವರ್ಣ, ಕಮಲಾದೇವಿ ಚಟ್ಟೋಪಾಧ್ಯಾಯ, ಬಿ.ವಿ. ಅರ್ತಿಕಜೆ ಮುಂತಾದ ಹತ್ತಾರು ಕೃತಿಗಳನ್ನು ರಚಿಸಿದ್ದು, ಅವರಿಗೆ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಜೆಡಿಎ ಪ್ರಶಸ್ತಿ ಲಭಿಸಿದೆ.

ಕಳೆದ ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ

ದಿನಾಂಕ : 13, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಬುಧವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಷಷ್ಠಿ
(ನಿನ್ನೆ ಪ್ರಾತಃಕಾಲ 5 ಗಂ॥ 55 ನಿ।। ರಿಂದ
ಇಂದು ಬೆಳಿಗ್ಗೆ 6 ಗಂ॥ 0 ನಿ।। ತನಕ)
ನಕ್ಷತ್ರ : ಶ್ರವಣ
(ಇಂದು ಪ್ರಾತಃಕಾಲ 4 ಗಂ॥ 56 ನಿ।। ರಿಂದ
ಮರುದಿನ ಬೆಳಿಗ್ಗೆ 6 ಗಂ॥ 22 ನಿ।। ತನಕ)
ಯೋಗ : ಶುಕ್ಲ
ಕರಣ : ವಣಿಕ್
ವರ್ಜ್ಯಂ : (ಇಂದು ಬೆಳಿಗ್ಗೆ 9 ಗಂ॥ 10 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 51 ನಿ।। ತನಕ)(ಇಂದು ಬೆಳಿಗ್ಗೆ 9 ಗಂ॥ 9 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 50 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 7 ಗಂ॥ 20 ನಿ।। ರಿಂದ ಇಂದು ರಾತ್ರಿ 9 ಗಂ॥ 1 ನಿ।। ತನಕ)(ಇಂದು ರಾತ್ರಿ 7 ಗಂ॥ 21 ನಿ।। ರಿಂದ ಇಂದು ರಾತ್ರಿ 9 ಗಂ॥ 2 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 11 ಗಂ॥ 46 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 37 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 49 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 10 ಗಂ॥ 34 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 7 ಗಂ॥ 21 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 58 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 44 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 40 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಮಕರ

ಮೇಷ ರಾಶಿ ಭವಿಷ್ಯ : 13 May 2020
ಧಾರ್ಮಿಕ ಭಾವನೆಗಳನ್ನು ಉದ್ಭವಿಸಿ ಒಬ್ಬ ಪವಿತ್ರ ವ್ಯಕ್ತಿಯಿಂದ ದೈವಿಕ ಜ್ಞಾನವನ್ನು ಪಡೆಯಲು ನೀವು ಒಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಂತೆ ಮಾಡುತ್ತವೆ. ಯಾರಿಂದಲೂ ಸಲಹೆಯನ್ನು ತೆಗದುಕೊಳ್ಳದೆ ನೀವು ಹಣವನ್ನು ಎಲ್ಲಿಯೂ ಹೂಡಿಕೆ ಮಾಡಬಾರದು. ಅದೃಷ್ಟ ಸಂಖ್ಯೆ: 2

ವೃಷಭ ರಾಶಿ ಭವಿಷ್ಯ : 13 May 2020
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಹಣದ ಚಲನೆ ದಿನವಿಡೀ ಮುಂದುವರಿಯುತ್ತದೆ ಮತ್ತು ದಿನದ ಅಂತ್ಯದ ನಂತರ ನೀವು ಉಳಿಸಲು ಸಾಧ್ಯವಾಗುತ್ತದೆ. ಮಕ್ಕಳು ಮತ್ತು ಕುಟುಂಬ ಇಂದು ನಿಮ್ಮ ಕೇಂದ್ರಬಿಂದುವಾಗಿರುತ್ತದೆ. ಅದೃಷ್ಟ ಸಂಖ್ಯೆ: 1

ಮಿಥುನ ರಾಶಿ ಭವಿಷ್ಯ : 13 May 2020
ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರ ವಹಿಸಿ. ಧಾರ್ಮಿಕ ಮತ್ತು ಶುದ್ಧ ಪ್ರೀತಿಯನ್ನು ಅನುಭವಿಸಿ. ಒಂದು ಕಠಿಣ ಸಮಯದ ನಂತರ, ಕೆಲಸದಲ್ಲಿ ಏನಾದರೂ ಸುಂದರವಾದ್ದರಿಂದ ಈ ದಿನ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಅದೃಷ್ಟ ಸಂಖ್ಯೆ: 8

ಕರ್ಕ ರಾಶಿ ಭವಿಷ್ಯ : 13 May 2020
ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಗಳಂಥ ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸನ್ನು ಪ್ರೋತ್ಸಾಹಿಸಿ. ಒಮ್ಮೆ ಈ ಭಾವನೆಗಳು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡ ನಂತರ ಮನಸ್ಸು ತಾನಾಗಿಯೇ ಪ್ರತಿ ಪರಿಸ್ಥಿತಿಗೂ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಇಂದು ಹಣಕಾಸಿನ ಭಾಗವು ಉತ್ತಮವಾಗಿರುತ್ತದೆ ಆದರೆ ಇದರೊಂದಿಗೆ ನೀವು ನಿಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡದಂತೆ ನೋಡಿಕೊಳ್ಳಬೇಕು. ಸಂಬಂಧಿಕರ ಜೊತೆ ಕಳೆದ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ಅದೃಷ್ಟ ಸಂಖ್ಯೆ: 3

ಸಿಂಹ ರಾಶಿ ಭವಿಷ್ಯ : 13 May 2020
ಕುಟುಂಬದ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಳವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಂದು ನೀವು ನಿಮ್ಮ ಮಕ್ಕಳ ಕಾರಣದಿಂದ ಆರ್ಥಿಕ ಬಲವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ದಿನದ ಉತ್ತರಾರ್ಧದಲ್ಲಿ ಅತ್ಯಾಕರ್ಷಕ ಮತ್ತು ಮನರಂಜನೆಯ ಏನನ್ನಾದರೂ ಹೊಂದಿಸಿ. ಇಂದು ನಿಮ್ಮ ಪ್ರೇಮಿಯನ್ನು ನಿರಾಸೆಗೊಳಿಸಬೇಡಿ – ಇದು ನಂತರ ನಿಮ್ಮನ್ನು ಪಶ್ಚಾತ್ತಾಪಗೊಳ್ಳುವಂತೆ ಮಾಡುತ್ತದೆ. ನಿಮ್ಮ ಶ್ರಮ ಕೆಲಸದಲ್ಲಿ ಇಂದು ಫಲ ನೀಡುತ್ತದೆ. ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ ಭವಿಷ್ಯ : 13 May 2020
ಅಭದ್ರತೆ / ದಿಗ್ಭ್ರಮೆಯ ಭಾವನೆ ತಲೆತಿರುಗುವಿಕೆಯನ್ನು ಉಂಟುಮಾಡಬಹುದು. ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಲು ನಿಮ್ಮ ಬಜೆಟ್‌ಗೆ ಅಂಟಿಕೊಳ್ಳಿ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳ ಪುನಶ್ಚೇತನಕ್ಕೆ ಒಳ್ಳೆಯ ದಿನ. ನಿಮ್ಮ ಉತ್ಸಾಹ ನಿಮ್ಮ ಪ್ರೀತಿಯನ್ನು ಸಂಕಟಕ್ಕೆ ಸಿಲುಕಿಸಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಅದೃಷ್ಟ ಸಂಖ್ಯೆ: 9

ತುಲಾ ರಾಶಿ ಭವಿಷ್ಯ : 13 May 2020
ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ ಶಕ್ತಿ ಯನ್ನು ಕುಂಠಿತಗೊಳಿಸಿದೆಯಂದು ಕಂಡುಕೊಳ್ಳಲು ಇದು ಸಕಾಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಕಚೇರಿಯಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿ., ಆಗೇ ನೀವು ಮಾಡದಿದ್ದರೆ ನಿಮ್ಮ ಕೆಲಸ ಹೋಗಬಹುದು. ಸಂತೋಷದ – ಚೈತನ್ಯದಾಯಕ – ಪ್ರಿಯವಾದ ಚಿತ್ತದ – ನಿಮ್ಮ ಖುಷಿಯ ಸ್ವಭಾವ ನಿಮ್ಮ ಸುತ್ತಲಿನವರಿಗೆ ಸಂತೋಷ ಮತ್ತು ಖುಷಿಯನ್ನು ತರುತ್ತದೆ. ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ ಭವಿಷ್ಯ : 13 May 2020
ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಸಮಯ ಮತ್ತು ಹಣದ ಕಾತರ ನೀವು ಮಾಡಬೇಕು ಇಲ್ಲದಿದ್ದರೆ ಮುಂಬರುವ ಸಮಯ ತೊಂದರೆಗಳಿಂದ ತುಂಬಿರಬಹುದು ನಿಮಗೆ ತಕ್ಷಣ ಅವಶ್ಯಕತೆಯಿಲ್ಲದ ವಸ್ತುಗಳ ಮೇಲೆ ಹಣ ವೆಚ್ಚ ಮಾಡಿದಲ್ಲಿ ನೀವು ನಿಮ್ಮ ಸಂಗಾತಿಯನ್ನು ಅಸಮಾಧಾನಪಡಿಸುತ್ತೀರಿ. ಪ್ರಣಯಕ್ಕೆ ಒಳ್ಳೆಯ ದಿನ. ಅದೃಷ್ಟ ಸಂಖ್ಯೆ: 4

ಧನು ರಾಶಿ ಭವಿಷ್ಯ : 13 May 2020
ಕುತ್ತಿಗೆ / ಬೆನ್ನಿನಲ್ಲಿ ನಿರಂತರ ನೋವಿನಿಂದ ಬಳಲುವ ಸಾಧ್ಯತೆಯಿದೆ. ವಿಶೇಷವಾಗಿ ಇದರ ಜೊತೆ ಸಾಮಾನ್ಯ ದೌರ್ಬಲ್ಯವಿದ್ದಾಗ ಇದನ್ನು ನಿರ್ಲಕ್ಷಿಸದಿರಿ. ಇಂದು ವಿಶ್ರಾಂತಿ ಬಹಳ ಪ್ರಮುಖವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಒತ್ತಡದ ಅವಧಿಯಿದ್ದರೂ ಕುಟುಂಬದ ಬೆಂಬಲ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕತ್ತಲೆಯ ಜೀವನ ನಿಮ್ಮ ಸಂಗಾತಿಗೆ ಒತ್ತಡ ತರಬಹುದು. ಅದೃಷ್ಟ ಸಂಖ್ಯೆ: 1

ಮಕರ ರಾಶಿ ಭವಿಷ್ಯ : 13 May 2020
ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ರಕ್ತದೊತ್ತಡ ರೋಗಿಗಳ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿರಿ. ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಪರಿಪೂರ್ಣ ದಿನ. ಒತ್ತಡದ ಅವಧಿಯಿದ್ದರೂ ಕುಟುಂಬದ ಬೆಂಬಲ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಪ್ರೀತಿ ತೋರಿಸಬೇಕು. ಆಪ್ತ ಸ್ನೇಹಿತನ ತಪ್ಪು ಸಲಹೆಯಿಂದಾಗಿ ಈ ರಾಶಿಚಕ್ರದ ವ್ಯಾಪಾರಿಗಳು ಇಂದು ತೊಂದರೆಗೆ ಸಿಲುಕಬಹುದು. ಉದ್ಯೋಗದಲ್ಲಿರುವ ಜನರು ಇಂದು ಕೆಲಸದ ಸ್ಥಳದಲ್ಲಿ ಬುದ್ಧಿವಂತಿಕೆಯಿಂದ ನಡೆಯುವ ಅಗತ್ಯವಿದೆ. ಅದೃಷ್ಟ ಸಂಖ್ಯೆ: 1

ಕುಂಭ ರಾಶಿ ಭವಿಷ್ಯ : 13 May 2020
ನಿಮ್ಮ ಹೆಂಡತಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಮ್ಮನ್ನು ನೀವೇ ಒಂದು ಪ್ರೀತಿಯ ಪೋಷಿಸುವ ಜೋಡಿಯೆನ್ನುವುದನ್ನು ಪುನಃ ಕಂಡುಹಿಡಿಯಲು ಸ್ವಲ್ಪ ಸಮಯ ಖರ್ಚು ಮಾಡಿ. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣವನ್ನು ಆವಾಹಿಸಿಕೊಳ್ಳುತ್ತಾರೆ. ಇದು ಪರಸ್ಪರ ಸಂಪರ್ಕದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ. ಅದೃಷ್ಟ ಸಂಖ್ಯೆ: 8

ಮೀನ ರಾಶಿ ಭವಿಷ್ಯ : 13 May 2020
ಧ್ಯಾನ ಮತ್ತು ಆತ್ಮ ಸಾಕ್ಷಾತ್ಕಾರ ಪ್ರಯೋಜನಕಾರಿಯಾಗಬಹುದು. ನೀವು ನಿಮ್ಮ ತಂತ್ರಗಳನ್ನು ಅಳವಡಿಸಿದಲ್ಲಿ ಇಂದು ಸ್ವಲ್ಪ ಹೆಚ್ಚುವರಿ ಹಣ ಸಂಪಾದಿಸುತ್ತೀರಿ. ನಿಮಗೆ ಗೊತ್ತಿದ್ದ ಯಾರಾದರೂ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು, ಇದು ಮನೆಯಲ್ಲಿ ಆತಂಕದ ಕ್ಷಣಗಳು ತರುತ್ತದೆ. ಪ್ರೀತಿಯಲ್ಲಿ ನಿಮ್ಮ ಅಸಭ್ಯ ವರ್ತನೆಗೆ ಕ್ಷಮೆ ಕೋರಿ. ಅದೃಷ್ಟ ಸಂಖ್ಯೆ: 5

ಕೊರೊನಾ: 1 ಕೋಟಿ‌ ಜನರು ತಟ್ಟೆ, ಲೋಟ ಬಡಿದರು ಏಕೆ?

Publicstory. in


Tumkuru: ಕೊರೊನಾ ವಿರುದ್ಧ‌‌ ಸೆಣಸಾಡುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿಗೆ ಬೇಧಭಾವ ಇಲ್ಲದೇ ಎಲ್ಲರೂ ಚಪ್ಪಾಳೆ ತಟ್ಟಿದ್ದು ಎಲ್ಲರಿಗೂ ಗೊತ್ತು.

ಈಗ ರಾಜ್ಯದಲ್ಲಿ ಸದ್ದಿಲ್ಲದೇ ತಟ್ಟೆ, ಲೋಟ ಬಡಿಯುವ ಚಳವಳಿ ರಾಜ್ಯದ ಎಲ್ಲ ಕೊಳೆಗೇರಿಗಳಲ್ಲಿ ನಡೆದಿದೆ.

ಕೊರೊನಾ ಪ್ಯಾಕೆಜ್ ನಲ್ಲಿ ರಾಜ್ಯ ಸರ್ಕಾರ ಸ್ಲಂ ಜನರನ್ನು ಕಡೆಗಣಿಸಿರುವುದೇ ಇದಕ್ಕೆ ಕಾರಣ. ಸರ್ಕಾರದ ತಾರತಮ್ಯದ ವಿರುದ್ಧ ಕೆಂಡ ಕಾರುತ್ತಿರುವ ಕೊಳೆಗೇರಿ ಜನರು ರಾಜ್ಯ ಕೊಳೆಗೇರಿ ಹಿತಾ ರಕ್ಷಣಾ ಸಮಿತಿ ನೇತೃತ್ವದ ಲ್ಲಿ ಮಂಗಳವಾರ ತಟ್ಟೆ, ಲೋಟ ಬಡಿಯುವ ಚಳವಳಿಗೆ ಚಾಲನೆ ನೀಡಿದ್ದಾರೆ.

ರಾಜ್ಯದಲ್ಲಿ ಘೋಷಿತ, ಘೋಷಿತವಲ್ಲದ ಕೊಳೆಗೇರಿಗಳಲ್ಲಿ 1 ಕೋಟಿ ಜನರು ವಾಸವಿದ್ದಾರೆ. ರಾಜ್ಯ ಸರ್ಕಾರ ಎಲ್ಲ ಜನರಿಗೂ ಕೋವಿಡ್ ಪರಿಹಾರ ನೀಡಿ, ಕೊಳೆಗೇರಿ ಜನರನ್ನು ಉದಾಸೀನ ಮಾಡಿದೆ ಎಂದು ಸಮಿತಿ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.

ಅಟೊ ಚಾಲಕರು,‌ನೇಕಾರರು, ಕೃಷಿಕರು‌ ಹೀಗೆ ನಾನಾ ರಂಗದ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಪರಿಹಾರ ನೀಡಿದೆ.‌ ನಮಗೂ ಕೂಲಿ ನಷ್ಟ ಪರಿಹಾರ ಭತ್ಯೆಯಾಗಿ 9600 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

ತುಮಕೂರಿನ ದೇವರಾಜ ಅರಸ್ ಬಡಾವಣೆಯಲ್ಲಿ ತಟ್ಟೆ, ಲೋಟ ಬಡಿಯುವ ಮೂಲಕ ಸ್ಲಂ‌ ನಿವಾಸಿಗಳು ಪ್ರತಿಭಟಿಸಿದರು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಎ.ನರಸಿಂಹಮೂರ್ತಿ ಮನವಿ ಸಲ್ಲಿಸಿದರು.

ಆರೋಗ್ಯ ಸಹಾಯಕಿಯರ ಮೇಲೆ ಹೂ ಮಳೆ

ಪಾವಗಡದಲ್ಲಿ ಮಂಗಳವಾರ ಸ್ಕೌಟ್ಸ್ ಅಂಡ್ ಗೈಡ್ಸ್  ಪದಾಧಿಕಾರಿಗಳು ಆರೋಗ್ಯ ಸಹಾಯಕಿಯರ ಮೇಲೆ ಹೂ ಚೆಲ್ಲಿ ಸನ್ಮಾನಿಸಿದರು.

ಇಷ್ಟು ವರ್ಷಕ್ಕೆ ಇದೀಗ ಸಂಸ್ಥೆಯೊಂದು ಶುಶ್ರೂಶಕಿಯರ ಶ್ರಮ ಗುರುತಿಸಿ ಗೌರವ ಸಲ್ಲಿಸುತ್ತಿರುವುದು ಖುಷಿ ತಂದಿದೆ. ಇನ್ನು ಹೆಚ್ಚಿನ ಕೆಲಸ ಮಾಡಲು ಉತ್ಸಾಹ ಮೂಡಿಸಿದೆ ಎಂದು ಶುಶ್ರೂಶಕಿಯರ ಸಂಘದ ಅಧ್ಯಕ್ಷೆ ಸರಸ್ವತಮ್ಮ  ಸಂತಸ ಹಂಚಿಕೊಂಡರು.

ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಕಮಲ್ ಬಾಬು ಮಾತನಾಡಿ, ಕೊರೊನಾ ನಿಯಂತ್ರಿಸಲು ಪ್ರಪಂಚದೆಲ್ಲೆಡೆ  ಶುಶ್ರೂಶಕಿಯರು ಜೀವದ ಹಂಗು ತೊರೆದು ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ.  ಸಮಾಜಕ್ಕಾಗಿ  ಶ್ರಮಿಸುತ್ತಿರುವ ಅವರ ಸೇವೆ ಅತ್ಯುತ್ತಮವಾದುದು ಎಂದರು.

ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ, ಶುಶ್ರೂಶಕಿಯರನ್ನು ಗೌರವಿಸುವುದರಿಂದ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಉತ್ಸಾಹ ಸಿಗುತ್ತದೆ. ಆಸ್ಪತ್ರೆ ಸಿಬ್ಬಂದಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ  ಗಮನಹರಿಸಬೇಕು ಎಂದರು.

ವೈದ್ಯಾಧಿಕಾರಿ ಕಿರಣ್ ಕುಮಾರ್, ಸ್ಕೌಟ್ಸ್ ಅಂಡ್ ಗೈಡ್ಸ್ ಉಪಾಧ್ಯಕ್ಷ ಮಾನಂ ಶಶಿಕಿರಣ್,  ನಾಗೇಂದ್ರ ಬಾಬು, ಕಾರ್ಯದರ್ಶಿ ಕರಿಯಣ್ಣ, ಕವಿತಾ, ಸಂದ್ಯ, ಉಪಸ್ಥಿತರಿದ್ದರು.

20 ಲಕ್ಷ ಕೋಟಿ ಪ್ಯಾಕೇಜ್: ಗುಡ್‌ ನ್ಯೂಸ್ ನೀಡಿದ ಪ್ರಧಾನಿ

ದೆಹಲಿ :  ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶ ವ್ಯಾಪ್ತಿ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಮಧ್ಯಮ ವರ್ಗ, ಸಣ್ಣ ಕೈಗಾರಿಕೆ, ರೈತರು ಸಂಕಷ್ಟ ಎದುರಿಸುತ್ತಿದ್ದು,  ದೇಶದ ಮುನ್ನೆಡೆಗಾಗಿ  20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು.

ದೇಶವನ್ನು ಉದ್ದೇಶಿಸಿ ಮಂಗಳವಾರ ರಾತ್ರಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ಆಶಾ‌ಭಾವನೆ ಮೂಡಿಸಿವೆ.

ಲಾಕ್ ಡೌನ್‌ 4.0 ವಿಭಿನ್ನವಾಗಿರಲಿದೆ. ಕೊರೊನಾ ದೀರ್ಘಕಾಲದ ಹೋರಾಟ ಎನ್ನುವ ಅವರ ಮಾತುಗಳು ಕೊರೊನಾ ಜತೆಗಿನ ಸೆಣಸಾಟ‌ ಜನರೇ ಮುಂದುವರೆಸಬೇಕೆಂಬ ಮುನ್ಸೂಚನೆಯಾಗಿರಬಹುದೇ ಎಂಬ ಅಭಿಪ್ರಾಯ ಕೇಳಿಬಂದಿವೆ.

ವಿಶೇಷ ಪ್ಯಾಕೆಜ್ವ ಕಾರ್ಮಿಕರು, ರೈತರು, ಸಣ್ಣ ಮಧ್ಯಮ ವರ್ಗದವರಿಗೆ  ಸಹಕಾರಿಯಾಗಲಿದೆ.

ಇದು ನಮ್ಮ ದೇಶದ ಜಿಡಿಪಿಯ ಶೇ.10 ರಷ್ಟು. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರತಿನಿತ್ಯ ವಿಶೇಷ ಪ್ಯಾಕೇಜ್ ಬಗ್ಗೆ ವಿವರಣೆ ನೀಡಲಿದ್ದಾರೆ. ನಾಳೆಯಿಂದಲೇ ವಿತ್ತ ಸಚಿವರು ಮಾಹಿತಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಆಧಾರ್, ಮೊಬೈಲ್ ಹಾಗು ಜನಧನ್ ಖಾತೆ ಬಳಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ವಿಶೇಷ ಪ್ಯಾಕೇಜ್ ಮೂಲಕ ಹೊಸ ಬಂಡವಾಳ ಹರಿದು ಬರಲಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಈ ವಿಶೇಷ ಆರ್ಥಿಕ ಪ್ಯಾಕೇಜ್ ನಿಂದ ಪ್ರತಿ ವರ್ಗದ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಲಾಕ್‌ಡೌನ್ ನಿಂದ ರಸ್ತೆ ಬದಿ ವ್ಯಾಪಾರಿಗಳು, ಮನೆಗೆಲಸ ಮಾಡೋರು, ಸಣ್ಣಪುಟ್ಟ ಅಂಗಡಿ ನಡೆಸುವವರು, ಮೀನುಗಾರರು, ಮಾರುಕಟ್ಟೆ ವ್ಯಾಪಾರಿಗಳು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈಗ ಅವರನ್ನು ಆರ್ಥಿಕವಾಗಿ ಮೇಲೆತ್ತ ಬೇಕಾಗಿದೆ ಎಂದು ಪ್ರಧಾನಿ ಭಾಷಣದಲ್ಲಿ ತಿಳಿಸಿದ್ದಾರೆ.

ಪ್ರತಿ ಭಾರತೀಯ ವಾಸಿಗಳು ಸ್ಥಳೀಯಮಟ್ಟದಲ್ಲಿ ತಯಾರಾಗುವ ವಸ್ತುಗಳನ್ನ ಖರೀದಿಸಿ ಹಾಗು ಅದಕ್ಕೆ ಪ್ರಚಾರ ಮಾಡುವ ಮೂಲಕ ಅವುಗಳಿಗೆ ಮಾರುಕಟ್ಟೆ ಹೆಚ್ಚಿಸಬೇಕು ಹಾಗು ತಯಾರಕರು ಆರ್ಥಿಕವಾಗಿ ಮುಂದುವರೆಯಲು ಸಹಕಾರ ನೀಡಬೇಕು ಎಂದರು.

ಪ್ರಧಾನಿಯವರ ಈ ಮಾತುಗಳು ಗಾಂಧಿಯನ್ ಎಕಾನಮಿ ಕಡೆ‌ ದೇಶ ಸಾಗುವ ಮುನ್ನೋಟ‌ ಇರಬಹುದೇ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ.

ಪಾವಗಡ: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಪಾವಗಡ  ತಾಲ್ಲೂಕಿನ ಕೃಷ್ಣಾಪುರ ಬಳಿಯ ಜಮೀನಿನಲ್ಲಿ  ಅಪರಿಚಿತ ವ್ಯಕ್ತಿಯೋರ್ವ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

30 ರಿಂದ 35 ವರ್ಷದ ಈತ ಯಾರೆಂದು ತಿಳಿದು ಬಂದಿಲ್ಲ. ಮೃತ  ವ್ಯಕ್ತಿ ಕಾಫಿ ಬಣ್ಣದ ಟೀ ಷರ್ಟ್ ಬಿಳಿ ಕಪ್ಪು ಬಣ್ಣದ ಗೆರೆಗಳುಳ್ಳ ಬರ್ಮಡಾ  ಧರಿಸಿದ್ದಾನೆ. ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ಕೊಳೆಗೇರಿಗಳ ಜನರ‌‌‌ ಕೈ ಹಿಡಿದ ಮಾಜಿ ಶಾಸಕ ರಫೀಕ್

Publicstory. in


ತುಮಕೂರು: ನಗರದ ವಿವಿಧ ಸ್ಲಂ ಗಳಲ್ಲಿ ವಾಸವಾಗಿರುವ ಪಡಿತರ ಕಾರ್ಡುರಹಿತ ಸುಮಾರು 120 ಕುಟುಂಬಗಳಿಗೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ದಿನಸಿ ಕಿಟ್ ಗಳನ್ನು ವಿತರಿಸಿದರು.

ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಮನವಿ ಮೇರೆಗೆ ತಮ್ಮ ಗೃಹ ಕಚೇರಿಯಲ್ಲಿ ಬನಶಂಕರಿಯ ಹಂದಿಜೋಗಿ ಕಾಲೋನಿ, ದಿಬ್ಬೂರು ದೇವರಾಜ ಅರಸು ಬಡಾವಣೆ, ಮರಿಯಮ್ಮ ನಗರ, ಎಸ್.ಎನ್.ಪಾಳ್ಯ, ಡಿ.ಎಂ.ಪಾಳ್ಯ, ನಾಗಣ್ಣನ ಪಾಳ್ಯ, ಹರಳಿಮರದ ಪಾಳ್ಯ,ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ, ಎನ್.ಆರ್.ಕಾಲೋನಿ ಹಾಗೂ ಶಿರಾಗೇಟ್ ನಲ್ಲಿ ವಾಸವಾಗಿರುವ ಸುಮಾರು 120 ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಬಡವರಿಗೆ ನೆರವಾದರು.

ಸಾಂಕೇತಿಕವಾಗಿ ಕೊಳಗೇರಿ ನಿವಾಸಿಗಳಿಗೆ ಪುಡ್ ಕಿಟ್ ವಿತರಿಸಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್, ತುಮಕೂರು ಜಿಲ್ಲೆಯಲ್ಲಿ ಇದುವರೆಗೂ 11 ಕೋರೋನ ಕೇಸ್‍ಗಳಿದ್ದು,ಎರಡು ಏರಿಯಾಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಕೋವಿಡ್ -19 ನಿಂದ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ ಪುಡ್ ಕಿಟ್‍ಗಳನ್ನು ವಿತರಿಸಲಾಗುತ್ತಿದೆ.ಇದು ನನ್ನ ಅಳಿಲು ಸೇವೆ.ಮುಂದೆಯೂ ಕೂಡ ನಿಮ್ಮೊಂದಿಗೆ ನಾನು ಇರಲಿದ್ದೇನೆ. ನಿಮ್ಮ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡುತೇನೆ ಎಂದು ಭರವಸೆ ನೀಡಿದರು.

ರೋಗದಿಂದ ಮುಕ್ತರಾಗಬೇಕೆಂದರೆ ಮನೆಯಲ್ಲಿಯೇ ಇರುವುದು, ಶುಚಿತ್ವದಿಂದ ಇರುವುದೇ ಆಗಿದೆ. ಲಾಕ್‍ಡೌನ್, ಸೀಲ್ ಡೌನ್ ನಿಂದ ಕೂಲಿ ನಾಲಿ ಮಾಡಿ ಬದುಕುತಿದ್ದ ಜನರಿಗೆ ಸಂಕಷ್ಟ ಎದುರಾಗಿದೆ ಎಂದರು.

ಜನರು ಅನಾವಶ್ಯಕವಾಗಿ ಓಡಾಡದೆ, ಮನೆಯಲ್ಲಿಯೇ ಇದ್ದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಜನರಲ್ಲಿ ಡಾ.ರಫೀಕ್ ಅಹಮದ್ ಮನವಿ ಮಾಡಿದರು.

ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ, ಸ್ಲಂಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಫಿಕ್ ಶ್ರಮಿಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ, ಇಂದು ಪುಡ್ ಕಿಟ್ ನೀಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ.ಇದಕ್ಕಾಗಿ ಅವರಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.