Thursday, February 26, 2026
Google search engine
Home Blog Page 267

ವಿದೇಶಿಯರನ್ನು ಕಂಡು ಕಂಗಾಲಾದ ಜನತೆ

ವಿದೇಶಿಯರನ್ನು ಕಂಡರೆ ಸಾಕು ಸೆಲ್ಫೀ ತೆಗೆದುಕೊಂಡು ಅವರಿಂದ ವಸ್ತುಗಳನ್ನು ಖರೀದಿಸುವಂತೆ ಹಿಂದೆ ಬೀಳುತ್ತಿದ್ದವರು ಶನಿವಾರ ದೂರ ಓಡಿದರು.

ತುಮಕೂರು ಜಿಲ್ಲೆ ಪಾವಗಡದ ಶನೈಶ್ಚರ ದೇಗುಲಕ್ಕೆ 4 ಮಂದಿ ವಿದೇಶಿಯರು ಆಗಮಿಸಿದ್ದನ್ನು ಕಂಡು ಪಟ್ಟಣದ ಜನತೆ ಆತಂಕದಿಂದ   ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.

ವಿದೇಶಿಯರು ದೇಗುಲಕ್ಕೆ ಬಂದಿರುವ ವಿಚಾರ ತಿಳಿದ ಕೂಡಲೆ ವಿವಿಧ ಇಲಾಖೆಗಳ ಸಿಬ್ಬಂದಿ ಶ ನೈಶ್ಚರ ದೇಗುಲದ ಬಳಿ ದೌಡಾಯಿಸಿದರು. ಆಂಧ್ರದ ಪುಟ್ಟಪರ್ತಿಗೆ ಕೆಲ ತಿಂಗಳ ಹಿಂದೆ  ಬಂದಿದ್ದು, ಶನಿವಾರವಾದ್ದರಿಂದ ದೇಗುಲಕ್ಕೆ ಆಗಮಿಸಿರುವುದಾಗಿ ಅಧಿಕಾರಿಗಳಿಗೆ ವಿದೇಶಿಯರು ಮಾಹಿತಿ ನೀಡಿದರು.

4 ಮಂದಿಯ ಆರೋಗ್ಯ ತಪಾಸಣೆ ನಡೆಸಿ ಕೂಡಲೇ ತಮ್ಮ ಸ್ಥಳಗಳಿಗೆ ಹಿಂದಿರುಗುವಂತೆ ವೈದ್ಯರು ಸೂಚಿಸಿದರು.  ಶನೈಶ್ಚರ ದೇಗುಲ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ದೇಗುಲದ ಬಾಗಿಲನ್ನು ಮುಚ್ಚಿಸಲಾಯಿತು.

ಕೆಲವರು   ಅವರ ಸಮೀಪ ಹೋಗದೆ ದೂರದಿಂದಲೇ ಮಾಹಿತಿ ಪಡೆದರು. ದೂರದಿಂದಲೇ ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶನಿವಾರವೇ ತುಮಕೂರಿನಲ್ಲಿ ಕಂಡ ಜನತಾ ಕರ್ಪ್ಯೂ!

ಚಿತ್ರಗಳು: ಜೆಪಿ

ತುಮಕೂರು: ಸೆಕ್ಷನ್ 144 ಹಿನ್ನೆಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿರುವ ಜಿಲ್ಲೆಯ ಜನರು ಶನಿವಾರವೇ ಮನೆಯಿಂದ ಈಚೆ ಬರುವುದನ್ನು‌ ನಿಲ್ಲಿಸ ತೊಡಗಿದ್ದಾರೆ.

ತುಮಕೂರು ನಗರದ ಪ್ರಮುಖ ಬೀದಿಗಳು ಬಿಕೋ ಎನ್ನುತ್ತಿದ್ದವು.‌ ಅಲ್ಲದೇ ಹೋಟೆಲ್, ಬಾರ್, ರೆಸ್ಟೋರೆಂಟ್‌ ಗಳು ಮುಚ್ಚಿದ್ದವು.
ಅಮಾನಿಕೆರೆಯ ಉದ್ಯಾ‌ನದಲ್ಲಿ ಜನರು ಸುಳಿಯಲಿಲ್ಲ. ಬಸ್ ನಿಲ್ದಾಣವೂ ಖಾಲಿ ಹೊಡೆಯುತ್ತಿತ್ತು.

ಸರ್ಕಾರಿ ಕಚೇರಿಗಳಲ್ಲೂ ಜನರು ಬರಲಿಲ್ಲ. ಕೆಲವು ಕಡೆಗಳಲ್ಲಿ ಬೆರಳಣಿಕೆ ಜನರು ಮಾತ್ರ ಇದ್ದರು.
ಸಾಕಷ್ಟು ಅಂಗಡಿ ಮಳಿಗೆಗಳು ಬಾಗಿಲು ಮುಚ್ಚಿದ್ದವು.
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲೂ ಜನರು ಇರಲಿಲ್ಲ. ಭಾನುವಾರ ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ.

ದನ ಕುರಿ ಅಟ್ಟಿದರೂ ಅರಣ್ಯ ಬೆಳೆಯಲಿಲ್ಲ ಏಕೆ?

0

ಉಜ್ಜಜ್ಜಿ ರಾಜಣ್ಣ


ಆಡುಕುರಿ ದನಗಾಯಿಗಳು ಕಾಡಿನೊಳಗೆ ಹೋಗದಂತೆ ಮಾಡಿದರು. ಅದರಿಂದ ವನವನ್ನೇನು ಉದ್ಧಾರ ಮಾಡುವುದು ಕಾಣಲಿಲ್ಲ.

ಪಶುಪಾಲನಾ ಸಮುದಾಯಗಳನ್ನು ಕಳ್ಳರನ್ನು ಓಡಿಸುವವರಂತೆ ಕಾಡಿನಿಂದ ಹೊರದೂಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. Local Environment Fecility ಗಳನ್ನು ಆಡುಕುರಿ ದನಗಾಯಿಗಳಿಂದ ಕಸಿದುಕೊಳ್ಳಲಾಯಿತು.

ನಮ್ಮ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಜಿಲ್ಲಾ ಪಂಚಾಯತಿಗಳು‌ ಜೈವಿಕ ಸಂಪನ್ಮೂಲಗಳ ಬಳಕೆದಾರರಿಗೆ ಬಾಯಿಕುಕ್ಕೆ ಇಡುವ ಮೂಲಕ United Nations Development Programs ಗಳಿಗೇ ವಿರುದ್ಧವಾಗಿ ನಡೆದುಕೊಂಡವು.

ಪಶುಪಾಲನೆ ಮತ್ತು ಅರಣ್ಯ ಅಭಿವೃದ್ಧಿ ಜೊತೆಜೊತೆಗೇ ‌ಬೆಳವಣಿಗೆ ಮಾಡುವುದರ ಬದಲಾಗಿ ಜೈವಿಕ ಸಂಪನ್ಮೂಲಗಳು ಮತ್ತು ಜೀವವೈವಿಧ್ಯತೆಯ ಅರಿವುಗಳುಳ್ಳ ಸಮುದಾಯಗಳಿಗೆ ವಂಚನೆ ಮಾಡಿ ಅವುಗಳ ವೃತ್ತಿ ಕೌಶಲಗಳನ್ನು ಕಿತ್ತುಕೊಂಡು ಹಳ್ಳೇರು, ಹಳ್ಳೇವು ಎಂದು ಕಡೆಗಣಿಸಿ ಅವರನ್ನು ಅವರ ಬದುಕಿನ ವಲಯದಿಂದಲೇ ಹೊರ ಹೋಗುವಂತೆ ಮಾಡಲಾಯಿತು.

ಪಶುಪಾಲನೆಯಂತಹ ವೃತ್ತಿ ಜೀವನ ಶೈಲಿಯನ್ನು ಹೊಂದಿದ್ದ ಸಮುದಾಯಗಳನ್ನು ಅಕುಶಲ ಕಾರ್ಮಿಕರೆಂದು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸಕ್ಕಾಗಿ ಕರೆಯಲಾಗುತ್ತಿದೆ.‌

ಸದರಿ ಯೋಜನೆಯ ಅಡಿಯಲ್ಲಿ ವಿದಿ ಇಲ್ಲದೆ ಇವರು job card ಗಳನ್ನು ಪಡೆಯುವುದು ಅನಿವಾರ್ಯವಾಗಿದೆ. ಆಡುಕುರಿ ಎತ್ತುಎಮ್ಮೆ‌ ಕರಮರಿ ಆಳಿದ ಸಮುದಾಯಗಳನ್ನು ಅವುಗಳ ವೃತ್ತಿ ಜೀವನದ ವಿಶೇಷ ಆರ್ಥಿಕ ವಲಯದಲ್ಲಿ ಸಲ್ಲದ ಅಭಿವೃದ್ಧಿ ಯೋಜನೆ ಜಾರಿಗೆ ತಂದವು ಸರ್ಕಾರಗಳು. ಈಗ ಅವರನ್ನು ರಸ್ತೆ ಡಾಂಬಾರು, ಚರಂಡಿ, ಕೂಲಿ ಕೆಲಸಕ್ಕಾಗಿ ಕರೆಯಲಾಗುತ್ತಿದೆ. ಇವರ ಮಹದಾಸೆ ಸಾಮ್ರಾಜ್ಯ ಕಟ್ಟಿ ಸಾಂಮ್ರಾಟರಾಗಬೇಕೆಂಬುದಾಗಿರಲಿಲ್ಲ. ಈಗಲೂ ಈ ಸಮುದಾಯಗಳ ಮಹದಾಸೆ ದನಕುರಿ ಆಳುವುದಾಗಿದೆ.

Biological diversity ಬಳಕೆಯ ನಿಸರ್ಗ ಸಹಜ ಜ್ಞಾನ ಹೊಂದಿರುವ ಆಡುಕುರಿ ಕಾಯುವವರನ್ನು ಸರ್ಕಾರಗಳು ಕಾಡು ತೊರೆಸಿದ ನಂತರದಲ್ಲಿ ದೇವರ ದೈಮಾರರ ಕಾಲದ ಕಾಡೇನು ದೇಶದಲ್ಲಿ ನಿರ್ಮಾಣವಾಗಿಲ್ಲ. ಆಗಾಗಿ, National biodiversity authority, State biodiversity board and Biodiversity management committees ಗಳಿಂದಲೂ ಕರ್ನಾಟಕ ಹಾಗು ಭಾರತೀಯ ಪಶುಪಾಲನಾ ಸಮುದಾಯಗಳು ವಂಚನೆಗೆ ಒಳಗಾಗಿವೆ.

ಈ ಸಮುದಾಯಗಳು ಕಾಡಿನಲ್ಲಿ ಬೆಳೆಯುವ ಮರಮಂಡಿಗಳ Timber ಗಳಲ್ಲಿ, ಹಾಗು ಖನಿಜ ನಿಕ್ಷೇಪಗಳನ್ನು ಭಾಗ ಕೇಳಿಲ್ಲ. ಹುಲ್ಲು ಬೆಳೆಯುತ್ತಿರುವ ಪ್ರದೇಶದಲ್ಲಿ ಪರಂಪರೆಯ ಪಶುಪಾಲನಾ ವೃತ್ತಿಗೆ ಜಾಗ ಹಿಡಿದುಕೊಂಡಿದ್ದವು. ಭಾರತೀಯ ಭಾಷೆಗಳನ್ನೂ ಬೆಳೆಸಲು ಕಾವ್ಯಗಳನ್ನು ಕಟ್ಟಿ ಬೆಳೆಸಿದರು.

ದೇವರದೈಮಾರ, ಜುಂಜಪ್ಪ, ಸಿವು ಸಿತ್ರುಲಿಂಗ, ಗಂಗಮಾಳಿ, ಹರಿಯಾಲ್ದ ದೇವಿ, ಕುಮಾರ ರಾಮ, ಈರಬೊಮ್ಮಕ್ಕ, ಜಡೆಗೊಂಡ, ಹೊನ್ನಜ್ಜಿ ಸಿರಿಯಪ್ಪ, ಚಿತ್ತಯ್ಯ, ಕಾಟಯ್ಯ, ಅಜ್ಜಪ್ಪ, ಸುರುಹೊನ್ನೆ ಮರದ ಈರಣ್ಣ, ವೀರಕರಿಯಣ್ಣ, ಸಿಡ್ಲು ಪಾಲಯ್ಯ, ಇಂತಹ ಹಲವಾರು ಕನ್ನಡದ ಗಣೆ ಕಾವ್ಯಗಳನ್ನು ಕರ್ನಾಟಕದ ಪಶುಪಾಲನಾ ಸಮುದಾಯಗಳು ಇಂದಿಗೂ ಬಾಳಿ ಬದುಕುತ್ತಿವೆ.

Non timber forest products groups ಗಳಾಗಿರುವ ಪಶುಪಾಲನಾ ಸಮುದಾಯಗಳು ಮತ್ತು ಬುಡಕಟ್ಟು ಜನಾಂಗಗಳನ್ನು ಸ್ಥಳೀಯ ಗ್ರಾಮ ಪಂಚಾಯತಿಗಳ ಹಂತದಲ್ಲಿ ರಚಿಸಲಾಗುವ ಅಥವಾ ಕೆಲಸ ಮಾಡುವ civil society organizations and Technical support group’s ಗಳಿಂದಲೂ ದೂರ ಇಡಲಾಯಿತು.

ಹುಲ್ಲುಗಾವಲು ಪ್ರದೇಶಗಳಲ್ಲಿ ಹುಲ್ಲು ಬೀಜ ಹುಟ್ಟುವ ಜಾಗದಿಂದಲೂವೆ ಹೊರಗಿಟ್ಟು ನಾಮಕಾವಸ್ಥೆಗೆ ಗ್ರಾಮ ಪಂಚಾಯತಿಗಳೂ ಸಹ ಈ ಸಮುದಾಯದಗಳ ಪರವಾಗಿ ಕೆಲಸ ಮಾಡಲೇಬೇಕಾದಂತಹ ಸಮಿತಿಗಳನ್ನು ರಚಿಸಿಕೊಳ್ಳುತ್ತಿವೆ.


ಉಜ್ಜಜ್ಜಿ ರಾಜಣ್ಣ: 9 4 4 8 7 4 7 3 6 0

ತಿಪಟೂರಿನಲ್ಲಿ ಚಿರತೆ ಸೆರೆ

ತಿಪಟೂರು: ತಾಲೂಕು ನೊಣವಿನಕೆರೆ ಹೋಬಳಿ ಕನ್ನುಘಟ್ಟ ಗ್ರಾಮದ ಬಳಿ ಕಳೆದ ನಾಲ್ಕೈದು ದಿನಗಳಿಂದ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಸುಮಾರು ಎರಡೂವರೆ ವರ್ಷದ ಹೆಣ್ಣು ಚಿರತೆಯನ್ನು ತಿಪಟೂರು ವಲಯದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೋನಿನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಮಾರ್ಚ್ 27ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ

Publicstory.in


Tumkuru: ಮಾರ್ಚ್ 27ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆಗಳು ಯಾವುದೇ ಲೋಪದೋಷವಿಲ್ಲದೇ ಪಾರದರ್ಶಕವಾಗಿ ನಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾರ್ಚ್ 27ರಿಂದ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಲ್ಲಿ ಟೇಬಲ್, ಕುಡಿಯುವ ನೀರು ಮತ್ತು ಎಲ್ಲಾ ರೀತಿಯ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು ಅಲ್ಲದೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಾಗಲಿ, ಪರೀಕ್ಷಾ ಕೇಂದ್ರಗಳಲ್ಲಿ ಗುಂಪಾಗಿ ಸೇರದಂತೆ ನೋಡಿಕೊಳ್ಳುವುದು ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಎಂದು ಅವರು ಸೂಚಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವಾಗ/ಉತ್ತರ ಪತ್ರಿಕೆಗಳನ್ನು ತರುವಾಗ ಸೂಕ್ತ ಭದ್ರತೆಗಳಿಂದ ಪೊಲೀಸ್ ಇಲಾಖೆ ಕ್ರಮವಹಿಸಬೇಕು. ಅಲ್ಲದೇ ಪರೀಕ್ಷಾ ಕಾರ್ಯಕ್ಕಾಗಿ ಸೂಕ್ತ ವಾಹನಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್‍ಟಿಓ ಅಧಿಕಾರಿಗಳಿಗೆ ಸೂಚಿಸಿದರು.


ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜರ್ಸ್‍ಗಳನ್ನು ಇಟ್ಟು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಎಲ್ಲಾ ಅಧಿಕಾರಿ/ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಪರೀಕ್ಷೆ ಕೊಠಡಿಗೆ ತೆರಳುವಂತೆ ವ್ಯವಸ್ಥೆ ಮಾಡುವುದು.

ಒಂದು ವೇಳೆ ಯಾವುದೇ ವಿದ್ಯಾರ್ಥಿಯು ಜ್ವರ, ಕೆಮ್ಮು, ನೆಗಡಿ ಇವುಗಳಿಂದ ಬಳಲುತ್ತಿದ್ದರೆ ಅಂತಹವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿದರು. ಅಲ್ಲದೇ ಕೋವಿಡ್-19 ವ್ಯಾಪಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಗೊಳಿಸಿ ವಿದ್ಯಾರ್ಥಿಗಳ ಅಂತರವನ್ನು ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.


ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ 2020ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಒಟ್ಟು 36782 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಒಟ್ಟು 144 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಕೊರೊನಾ ಭೀತಿ: 212 ಮಂದಿ ಮೇಲೆ ನಿಗಾ: ತುಮಕೂರಿನಲ್ಲಿ ನಿಷೇಧಾಜ್ಞೆ ಜಾರಿ

Publicstory. in


Tumkuru: ಕೊರೊನಾ ಭೀತಿ ಹೆಚ್ಚುತ್ತಿರುವ ಕಾರಣ ಜಿಲ್ಲೆಯಲ್ಲಿ ಸೆಕ್ಷನ್ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಖೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 20ರಿಂದ 31ರವರೆಗೂ ಈ ನಿಷೇದಾಜ್ಞೆ ಜಾರಿಯಲ್ಲಿ ಇರಲಿದೆ.

ತುಮಕೂರಿನಲ್ಲಿ ಈವರೆಗೂ ಕರೊನಾ ಪ್ರಕರಣಗಳು ದೃಢಪಟ್ಟಿಲ್ಲದಿದ್ದರೂ ಸುಮಾರು 212 ಮಂದಿ ಹೊರ ದೇಶಗಳಿಂದ ಜಿಲ್ಲೆಗೆ ಬಂದಿದ್ದಾರೆ. ಅದರಲ್ಲೂ ಕೆಲವರು ಕರೊನಾ ಪೀಡಿತ ದೇಶಗಳಿಂದ ಬಂದಿರುವ ಕಾರಣ ಜಿಲ್ಲೆಯಲ್ಲಿ ದಿನೇದಿನೇ ಆತಂಕ ಹೆಚ್ಚುತ್ತಿದೆ.

ವಿದೇಶದಿಂದ ಬಂದಿರುವ ಎಲ್ಲರ ಮೇಲೂ ಕಣ್ಗಾವಲು ಇಡಲಾಗಿದೆ. ಕೆಲವು ಶಂಕಿತರ ರಕ್ತ ಹಾಗೂ ಗಂಟಲು ದ್ರವದ ಮಾದಿರಯನ್ನು ಪರೀಕ್ಷೆಗಾಗಿ ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮದುವೆ, ಜಾತ್ರೆ, ಹಬ್ಬ ಹರಿದಿನ ಹಾಗೂ ದಿನ ನಿತ್ಯದ ಚಟುಚಟಿಕೆಗಳಲ್ಲಿ ಜನರು ಗುಂಪಾಗಿ ಸೇರಬಾರದೆಂದು ಈಗಾಗಲೇ ಸೂನಚೆ ನೀಡಿದರೂ ಈ ಸೂಚನೆಗಳನ್ನು ಜನರು ಪಾಲಿಸುತ್ತಿಲ್ಲ. ಗುಂಪು ಗುಂಪಾಗಿ ಜನರು ಸೇರುತ್ತಿದ್ದಾರೆ.

ಸರ್ಕಾರದ ಸೂಚನೆಗಳನ್ನು ಸರಿಯಾಗಿ ಕೆಲವರು ಪಾಲಿಸದೇ ಇರುವುದರಿಂದ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ನಿಷೇಧಾಜ್ಞೆ ಜಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರ ಆದೇಶದಲ್ಲಿ ತಿಳಿಸಲಾಗಿದೆ.

ಅಂತ್ಯಕ್ರಿಯೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರಿಗೆ ಈ ನಿಷೇದಾಜ್ಞೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಿಪಟೂರು ಕೊಬ್ಬರಿಗೆ GI ಬನ್ನಿ ಕೈ ಜೋಡಿಸಿ….

ಶ್ರೀಕಾಂತ್ ಕೆಳಹಟ್ಟಿ


ಸುರಿ ನಿಗದಿತ ಸ್ಥಳ ಸಂಬಂಧವನ್ನು ಬೆಸೆದುಕೊಂಡ ಅಥವಾ ಆ ಮೂಲಕ ಕೆಲವು ಉತ್ಪನ್ನಗಳ ಗುಣಮಟ್ಟ ಅಥವಾ ಲಕ್ಷಣಗಳು ನಿರ್ಧರಿತವಾಗುವ ಆ ಉತ್ಪನ್ನಗಳನ್ನು ಜನಸಾಮಾನ್ಯರು ಸದಾ ಅವುಗಳೊಂದಿಗೆ ಗುರುತಿಸಿ ಬಳಸುತ್ತಿರುವರು. ಅಂತಹ ಸ್ಥಳನಾಮ ಬಳಸುವಿಕೆಯನ್ನು ನಾವು ಭೌಗೋಳಿಕ ಸಂಕೇತಗಳೆನ್ನುತ್ತೇವೆ (Geographical Indications). ಭಾರತದಲ್ಲಿ ಅತಿ ಸಾಧಾರಣವಾಗಿ ಡಾರ್ಜಲಿಂಗ್ ಚಹಾವನ್ನು ಉದಾಹಣೆಯಾಗಿ ನೀಡುವರು. ಜಾಗತಿಕ ಮಟ್ಟದಲ್ಲಿ ಷಾಂಪೇನ್ ವೈನ್ ಹೆಸರುವಾಸಿ ’ಜಿಐ’ಯಾಗಿರುವುದು.

ಸಾರ್ವಜನಿಕರನ್ನು ದಾರಿತಪ್ಪಿಸುವಿಕೆ ಮತ್ತು ಅನುಚಿತ ಪೈಪೋಟಿಯನ್ನು ನಿವಾರಿಸುವ ಸಲುವಾಗಿ ಡಬ್ಲೂಟಿಒ ಸದಸ್ಯರು ಟ್ರಿಪ್ಸ್ ಒಡಂಬಡಿಕೆ ಮಾಡಿಕೊಂಡು ‘ಜಿಐ’ಗಳಿಗೆ ಕೆಲವು ಹಂತದ ರಕ್ಷಣೆಗಳನ್ನು ನೀಡಲು ಮುಂದಾಗಿರುವರು. ಉತ್ಪನ್ನಗಳ ವಿಶೇಷ ಗುಣಮಟ್ಟ ಅಥವಾ ಲಕ್ಷಣಗಳಿಗೆ ಭೌಗೋಳಿಕ ಮೂಲದೊಂದಿಗೆ ಸಂಬಂಧ ಕಲ್ಪಸಿಕೊಡುವುದರೊಂದಿಗೆ ಮಾರುಕಟ್ಟೆಯಲ್ಲಿ ಗಣ್ಯಸ್ಥಾನ ಗಳಿಸಿ ಹೊಸದೊಂದು ಆಯಾಮ ಕಂಡುಕೊಳ್ಳಲು ‘ಜಿಐ’ ರಕ್ಷಣೆಯು ಎಡೆ ಮಾಡಿಕೊಟ್ಟಿದೆ.

ಕೃಷಿ ಉತ್ಪನ್ನ, ಜವಳಿ, ಕರಕುಶಲ ಮುಂತಾದ ಸುಮಾರು 100ಕ್ಕೂ ಹೆಚ್ಚು ನೋಂದಾಯಿತ ಭೌಗೋಳಿಕ ಸಂಕೇತಗಳು ಇಂದು ಭಾರತದಲ್ಲಿದೆ.

ಈ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ‘ತಿಪಟೂರು ಕೊಬ್ಬರಿ’ಯೆಂದೇ ಖ್ಯಾತವಾಗಿರುವ ನಮ್ಮ ಹೆಮ್ಮೆಯ ಉತ್ಪನ್ನವನ್ನು ‘ಜಿಐ’ಗಾಗಿ ನೋಂದಾಯಿಸಲು ತುರ್ತು ಕೆಲಸವಾಗಬೇಕಾಗಿದೆ.

ಆದುದರಿಂದ ಕಾಳಜಿಯುಳ್ಳ ಆಸಕ್ತ ವ್ಯಕ್ತಿಗಳು, ಸಂಸ್ಥೆಗಳು, ಎನ್ ಜಿ ಓ ಗಳು ತಮ್ಮ ತಿಳಿವು, ಪರಿಣಿತಿ, ಅನುಭವ, ದಾಖಲೆ ಹಾಗು ಉತ್ಪನ್ನದ ಕುರಿತಾದ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲು ಶ್ರಮ ಮತ್ತು ಸಮಯ ವಿನಿಯೋಗಿಸುವುದಾದರೆ ತಮಗೆ ಆತ್ಮೀಯ ಸ್ವಾಗತ.

ಬನ್ನಿ ನಾವೆಲ್ಲರೂ ಸೇರಿ ನಮ್ಮ ಪೂರ್ವಜರ ಸಾಂಪ್ರದಾಯಿಕ ವಿಧಾನದಿಂದ ತಯಾರಿಸಿದ ಕೊಬ್ಬರಿಗೆ, ಅನುಚಿತ ಪೈಪೋಟಿಯನ್ನು ತಪ್ಪಿಸಿ ದೇಶೀಯ ಹಾಗು ವಿದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳೋಣ.

ಆಸಕ್ತರು ಕರೆ ಅಥವಾ ಮೆಸೆಜ್ ಮಾಡಿ,
ಶ್ರೀಕಾಂತ್, 9632904901
srikanthkelahatti@gmail.com
ರಾಜ್ಯ ಕಾರ್ಯದರ್ಶಿ, ಬೆಲೆ ಕಾವಲು ಸಮಿತಿ, ತಿಪಟೂರು.

ತುಮಕೂರು: 12 ಕೊರೊನಾ ಶಂಕಿತರ ರಕ್ತ ಮಾದರಿ ಪರೀಕ್ಷೆಗೆ, 212 ಜನರ ಮೇಲೆ ನಿಗಾ

Publicstory. in


ತುಮಕೂರು: ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕಿತರು ದೃಢಪಟ್ಟಿಲ್ಲ. ವಿದೇಶದಿಂದ ಬಂದವರಲ್ಲಿ ಶಂಕಿತ 12 ಮಂದಿಯ ರಕ್ತ ಹಾಗೂ ಗಂಟಲು ಸ್ರಾವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ಇನ್ನಷ್ಟೇ ಕೆಲವರ ವರದಿ ಬರಬೇಕಾಗಿದೆ.

ಮುಂಜಾಗ್ರತಾ ಕ್ರಮವಾಗಿ ಮಾತ್ರವೇ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ ಯಾರಿಗೂ ಸೋಂಕು ಕಾಣಿಸಿಲ್ಲ.

ಜಿಲ್ಲೆಯಲ್ಲಿ ಕರೊನಾ ವಿರುದ್ಧ ತೀವ್ರ ನಿಗಾ ಇಟ್ಟಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸುಳ್ಳು ಸುದ್ದಿಗಳು ಹರಡದಂತೆಯೂ‌ ನಿಗಾವಹಿಸಿದೆ.
ಈವರೆಗೂ ಬೇರೆ ಬೇರೆ ದೇಶಗಳಿಂದ 212 ಮಂದಿ ತುಮಕೂರಿಗೆ ಬಂದಿದ್ದು ಅವರೆಲ್ಲರ ಮೇಲೆ ನಿಗಾ ಇಡುವ ಕೆಲಸವನ್ನು ಜಿಲ್ಲಾಡಳಿತ ಈಗಾಗಲೇ ಆರಂಭಿಸಿದೆ.
ಅವರಲ್ಲಿ ತಪಾಸಣೆಗೊಳಪಡುತ್ತಿರುವವರ ಸಂಖ್ಯೆ 83, ಕೆಲವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಅವರ ಚಲನ ವಲನಗಳ ಮೇಲೆ ನಿಗಾ ಇಡಲು ಕೆಲವು ಕಡೆ ಸಿಬ್ಬಂದಿಯನ್ನು ಸಹ ನೇಮಕ ಮಾಡಲಾಗಿದೆ.

ನಿಗಾವಣೆಯಲ್ಲಿ 28 ದಿನಗಳ ಅವಧಿ ಮುಗಿಸಿರುವವರ ಸಂಖ್ಯೆ 8, ರಕ್ತ ಗಂಟಲು ಮಾದರಿಗಳ ಪರೀಕ್ಷೆ ನಡೆಸಿರುವವರ 8‌ ಮಂದಿಯ ವರದಿ ಬಂದಿದ್ದು ಇವರಲ್ಲಿ ಸೋಂಕು ಕಂಡುಬಂದಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿದಿನ ಕರೊನಾ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಹೆಚ್ಚು ಜನ ಸೇರುವ ಎಲ್ಲಾ ಸನ್ನಿವೇಶಗಳಿಗೆ ನಿಷೇಧ ಹೇರಲಾಗಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗೆ 3 ಹಂತದ ತರಬೇತಿ ನೀಡಲಾಗಿದೆ.

ಆರೋಗ್ಯ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಗಳನ್ನು ನೀಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಸ್ಥೆ ಸಹಜಾರದೊಂದಿಗೆ ಮನೆ-ಮನೆಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ 100 ಐಸೋಲೇಶನ್ ವಾರ್ಡ್‍ಗಳನ್ನು ಗುರಿತಿಸಲಾಗಿದೆ. ಜಿಲ್ಲೆಯಲ್ಲಿರುವ 242 ಖಾಸಗಿ ಕ್ಲಿನಿಕ್‍ಗಳಲ್ಲಿಯೂ ಸೂಚನೆ ನೀಡಲಾಗಿದೆ.

ಶ್ರೀದೇವಿ ಮತ್ತು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕಂಟೋನೆಂಟ್ ಐಸೋಲೇಶನ್ ವಾರ್ಡ್ ಗಳನ್ನು ತೆರೆಯಲಾಗಿದೆ. ಅಲ್ಲದೇ ಪ್ರತಿನಿತ್ಯ ಖಾಸಗಿ ಕ್ಲಿನಿಕ್‍ಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಅದೇಶಿಸಲಾಗಿದೆ. ಎಂ

ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಂತಹ ಸೋಂಕು ಕಂಡುಬಂದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡಲು ಮನವಿ ಮಾಡಲಾಗಿದೆ.

ಕರೊನಾ: ಲೋಕಾಯುಕ್ತ ವಿಚಾರಣೆ ಆರಂಭ

ಸುಳ್ಯ: ಕರ್ನಾಟಕ ಲೋಕಾಯುಕ್ತ ಇಲಾಖೆಯ ಆದೇಶದಂತೆ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಲು ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ವಿಜಯಪ್ರಸಾದ್ ರವರ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ,ನೆಲ್ಯಾಡಿ, ಉಪ್ಪಿನಂಗಡಿ, ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳು, ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರೋಗ್ಯ ಕೇಂದ್ರಗಳಲ್ಲಿ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ವಿಜಯಪ್ರಸಾದ್ ರವರು ಇಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಆರೋಗ್ಯ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ ಅಧಿಕಾರಿಗಳು ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ ಸರಕಾರದ ವತಿಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ಈಗಾಗಲೇ ಆಸ್ಪತ್ರೆ,ಕಚೇರಿಗಳಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ.

ಮಾತ್ರವಲ್ಲದೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು.

ಜನರು ಯಾವುದೇ ರೀತಿಯ ಭಯ ಆತಂಕ ಪಡುವ ಅಗತ್ಯವೇ ಇಲ್ಲ. ಯಾವುದಾದರೂ ಸಮಸ್ಯೆಗಳು ಕಂಡುಬಂದಲ್ಲಿ ತನ್ನನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಹೇಳಿದರು. ಮಾಧ್ಯಮದ ವತಿಯಿಂದ ಅಧಿಕಾರಿಗಳು, ಜನರಿಗೆ ಪೂರ್ಣ ಸಹಕಾರ ನೀಡಬೇಕೆಂದು ವಿನಂತಿ ಮಾಡಿದರು.

ಈ ದಿನದ ಬೆಳವಣಿಗೆ: ಹೆಚ್ಚಿದ ಕರೊನಾ ಸಂಖ್ಯೆ, ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್

ತುಮಕೂರು: ಕೊಡಗಿನ ವ್ಯಕ್ತಿಗೆ ಕೊರೊನಾ ಸೋಂಕು ದೃಢ.
ರಾಜ್ಯದಲ್ಲಿ 15ಕ್ಕೇರಿದ ಸೋಂಕಿತರ ಸಂಖ್ಯೆ
ಸೌದಿಯಿಂದ ಹಿಂದಿರುಗಿದ್ದ ವ್ಯಕ್ತಿಗೆ ಸೋಂಕು
ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ
ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್
———————-

ನಾಳೆ ಅತ್ಯಾಚಾರಿಗಳಿಗೆ ಗಲ್ಲು

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಫಿಕ್ಸ್
ನಾಳೆ ಬೆಳಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳಿಗೆ ಗಲ್ಲು.
ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಈವರೆಗೆ ನಾಲ್ಕು ಬಾರಿ ಡೆತ್ ವಾರೆಂಟ್ ಜಾರಿಯಾಗಿತ್ತು.
ಪವನ್, ಮುಕೇಶ್, ಅಕ್ಷಯ್ ವಿನಯ್‍ಗೆ ನಾಳೆ ಗಲ್ಲು.
—————————

ನಾಳೆಯಿಂದ ರೈಲು ಸಂಚಾರ ಬಂದ್

ದೇಶಾದ್ಯಂತ ಕೊರೊನಾ ವೈರಸ್‍ನ ಎಫೆಕ್ಟ್
ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ
155 ರೈಲು ಸಂಚಾರ ರದ್ದುಪಡಿಸಿದ ಇಲಾಖೆ
ಶೇ.40ಕ್ಕಿಂತ ಕಡಿಮೆಯಾದ ಟಿಕೆಟ್ ಬುಕಿಂಗ್.
ನಾಳೆಯಿಂದ ಹಲವು ರೈಲು ಸಂಚಾರ ಬಂದ್.
————————

2 ತಿಂಗಳ ಪಡಿತರ ಒಟ್ಟಿಗೆ

ಎರಡು ತಿಂಗಳ ಪಡಿತರ ಒಟ್ಟಿಗೆ ಪೂರೈಕೆ
ಬಿಪಿಎಲ್ ಕಾರ್ಡ್‍ದಾರರಿಗೆ ಪಡಿತರ ಪೂರೈಕೆ
2 ತಿಂಗಳ ರೇಷನ್ ಒಟ್ಟಿಗೆ ಕೊಡುವ ತೀರ್ಮಾನ
ಆಹಾರ ಸಚಿವ ಕೆ. ಗೋಪಾಲಯ್ಯ ಹೇಳಿಕೆ.
ಸಿಎಂ ಬಿಎಸ್‍ವೈ ಬಳಿ ಚರ್ಚಿಸಿ ಈ ಬಗ್ಗೆ ಕ್ರಮ
ಹೆಬ್ಬೆಟ್ಟು ತೆಗೆದುಕೊಳ್ಳುವುದು ನಿಲ್ಲಿಸಿದೆ
ಒಟಿಪಿ ಆಧರಿಸಿ ರೇಷನ್ ವಿತರಣೆ
ಸೋಂಕು ಹರಡುವುದನ್ನು ತಡೆಯಲು ಕ್ರಮ
ಆಹಾರ ಸಚಿವ ಕೆ. ಗೋಪಾಲಯ್ಯ ಹೇಳಿಕೆ
———————

ಕೊಡಗಿನಲ್ಲಿ ಮತ್ತೊಬ್ಬರಿಗೆ ಕೊರೊನಾ

ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಹಿನ್ನೆಲೆ
35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್
ಕೊಡಗು ಡಿಸಿ ಅನೀಸ್ ಕಣ್ಮಣಿ ಜಾಯ್ ಹೇಳಿಕೆ
ಲ್ಯಾಬ್ ರಿಪೋರ್ಟ್‍ನಲ್ಲಿ ಪಾಸಿಟಿವ್ ಬಂದಿದೆ
35 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು
ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಮುಂದುವರಿಕೆ
ಸೌದಿ ಪ್ರವಾಸದಿಂದ ಹಿಂದಿರುಗಿದ್ದ ವ್ಯಕ್ತಿ
ಕೊಡಗು ಡಿಸಿ ಅನೀಸ್ ಕಣ್ಮಣಿ ಜಾಯ್ ಹೇಳಿಕೆ
————————-