Sunday, February 22, 2026
Google search engine
Home Blog Page 269

ಮಂಡ್ಯ: ಈ ಸರ್ಕಾರಿ ಶಾಲೆ ನೋಡಿದರೆ ಎಂಥವರೂ ಮೂಕವಿಸ್ಮಿತರಾಗುತ್ತಾರೆ…

2

ಲಕ್ಷ್ಮೀಕಾಂತರಾಜು ಎಂಜಿ.


Mandya: ಸರ್ಕಾರಿ ಶಾಲೆ ವಾಸಸ್ಥಳಕ್ಕೆ ಹತ್ತಿರವಿದ್ದರೂ ದೂರದ ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಸೀಟು ಪಡೆದು ಖಾಸಗಿ ಶಾಲೆಗಳಿಗೆ ಸೇರಿಸುವ ವ್ಯಾಮೋಹ ಹೊಂದಿರುವ ಈ ಕಾಲದಲ್ಲೂ ತಾಲ್ಲೂಕು ಕೇಂದ್ರವೊಂದರಲ್ಲಿ ಸರ್ಕಾರಿ ಶಾಲೆಯೊಂದು ವಿದ್ಯಾರ್ಥಿಗಳ ಅಧಿಕ ಹಾಜರಾತಿಯಿಂದ ತುಂಬಿತುಳುಕುತ್ತಿದೆ.

ಹೌದು. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಟೌನ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ನಮ್ಮ ಈ ವರದಿಯ ಕೇಂದ್ರಬಿಂದು. 1910 ರಲ್ಲಿ ಆರಂಭವಾದ ಈ ಶಾಲೆಯು ಅಂದು ಆ ಭಾಗದ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದಿಕೊಳ್ಳುತ್ತಿದ್ದು ನಂತರ ಖಾಸಗಿ ಶಾಲೆಯ ವ್ಯಾಮೋಹ ದ ಕಾರಣ ಪೋಷಕರುಗಳು ತಮ್ಮ‌ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ದರಿಂದ ಈ ಶಾಲೆಗೆ ಹಾಜರಾತಿ ಕೊರತೆ ಉಂಟಾಯಿತು.

ಶಾಲೆ ಶಿಕ್ಷಕಿಯರಿಗೂ ಇಲ್ಲಿ ಸಮವಸ್ತ್ರ

1910 ರ ಸ್ವಾತಂತ್ರ್ಶ ಪೂರ್ವದಲ್ಲಿಯೇ ಆರಂಭವಾಗಿ ಇಂದು 119 ವರ್ಷಗಳು ಕಳೆದು ಶತಮಾನದ ಶಾಲೆಯೆಂದೇ ಹೆಸರಾಗಿರುವ ಈ ಶಾಲೆಯನ್ನ ಅಭಿವೃದ್ಧಿಗೊಳಿಸಿ ಉಳಿಸಬೇಕೆಂಬ ಉದ್ದೇಶದಿಂದ ಅಲ್ಲಿನ‌ ಶಿಕ್ಷಣಾಸಕ್ತರು,ಉತ್ಸಾಹಿಗಳು ಸೇರಿ ಶಾಲೆಯ ಬಗ್ಗೆ ಗಮನಹರಿಸಿ 2014 ರಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿಗಳಾಗಿದ್ದ ಡಾ. ಎಚ್ ಎಲ್ ನಾಗರಾಜು ಅವರ ಅಧ್ಯಕ್ಷತೆಯಲ್ಲಿ‌ ಒಂದು ಸಮಿತಿ ರಚಿಸಿ ಕೊಂಡು ಶಾಲೆಗೆ ಹಾಜರಾತಿ ಹೆಚ್ಚಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಂಡು ಸಮಿತಿಯಲ್ಲಿನ ಉಪನ್ಯಾಸಕರುಗಳು ಹಾಗೂ ಇತರೆ ಸರ್ಕಾರಿ ನೌಕರರುಗಳು ತಮ್ಮ‌ ಮಕ್ಕಳನ್ನೂ ಈ ಶಾಲೆಗೆ ಸೇರಿಸುವ ಮೂಲಕ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದ ಈ ಶಾಲೆಗೆ ಹಾಜರಾತಿ ಹೆಚ್ಚಿಸುವತ್ತಾ ಹೆಜ್ಜೆ ಇಟ್ಟರು.

ಶತಮಾನದ ಶಾಲೆಯ ಇಂದಿನ‌ ಎಸ್ ಡಿ ಎಂಸಿ ಅಧ್ಯಕ್ಷರಾಗಿರುವ ಉಪನ್ಯಾಸಕ ವಾಸು ಹಾಗೂ ಉಪವಿಭಾಗಾಧಿಕಾರಿ ಎಚ್ ಎಲ್ ನಾಗರಾಜು ಅವರು ಸೇರಿದಂತೆ ಅಲ್ಲಿನ ಶಾಲಾ ಶಿಕ್ಷಕರುಗಳ ಶ್ರಮದಿಂದ ಇಂದು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 874 ಆಗಿದ್ದು ಪ್ರತಿಷ್ಟಿತ ಖಾಸಗಿ ಶಾಲೆಯಂತೆ ನಡೆಯುತ್ತಿದೆ.

ಈ ಶಾಲೆಯಲ್ಲಿ ಎಲ್ ಕೆ ಜಿಯ ಮಕ್ಕಳ ಮನೆಯು‌ ನಡೆಯುತ್ತಿದ್ದು ಇದಕ್ಕೆ ಸರ್ಕಾರದ ಯಾವುದೇ ಅನುದಾನವಿಲ್ಲದೇ,ಇಲ್ಲಿನ ಶಾಲೆಯ ಅಭಿಮಾನಿಗಳ ದಾನಿಗಳ ನೆರವಿನಿಂದ ಶಿಕ್ಷಕರ ವೇತನ ನೀಡಿ ಮಕ್ಕಳ ಮನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಎಸ್ ಡಿ ಎಂಸಿ ಅಧ್ಯಕ್ಷರಾದ ವಾಸು ಅವರು.

ಈ ವರ್ಷದಿಂದ ಈ ಶತಮಾನದ ಶಾಲೆಯನ್ನ ಶಿಕ್ಷಣ ಇಲಾಖೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಘೋಷಣೆ ಮಾಡಿದ್ದು ಈ ಯೋಜನೆಯಡಿ ಆಂಗ್ಲ ಮಾಧ್ಯಮಕ್ಕೂ ಪ್ರವೇಶವಾಗಿದ್ದು ಇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 28 ಮಕ್ಕಳು ರಷ್ಟು ಆಂಗ್ಲ ಮಾಧ್ಯಮಕ್ಕೆ ಉಳಿದ ವಿದ್ಯಾರ್ಥಿಗಳು ಕನ್ನಡ ಮಾದ್ಯಮಕ್ಕೆ ಪ್ರವೇಶ ಪಡೆದಿದ್ದಾರೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕರಾದ ರಾಚಯ್ಯ ಅವರು.

ಶತಮಾನದ ಶಾಲೆಯಲ್ಲಿ ಖಾಯಂ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರುಗಳು ಸೇರಿದಂತೆ ಒಟ್ಟು 28 ಶಿಕ್ಷಕರುಗಳಿದ್ದು ಶಾಲಾ‌ಶಿಕ್ಷಕರುಗಳು ಸಹ ವಿದ್ಯಾರ್ಥಿಗಳಂತೆ ಸಮವಸ್ತ್ರ ಹೊಂದಿ ಶಾಲೆಗೆ ಬರುವುದು‌ ವಿಶೇಷವಾಗಿದೆ.

ಇಲ್ಲಿ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಆಧುನಿಕ‌ ಕಂಪ್ಯೂಟರ್ ಗಳನ್ನ ಹಾಕಿಸಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಹೇಳಿಕೊಡುವುದರ ಜೊತೆಗೆ ಉತ್ತಮ ಗ್ರಂಥಾಲಯವನ್ನ ಸಹ ಹೊಂದಿರುವುದು ಮಕ್ಕಳ ಅಧ್ಯಯನಕ್ಕೆ ಅನುಕೂಲವಾಗಿದೆ

2014 ರಿಂದ ಇಲ್ಲಿ ಆರಂಭವಾದ ಮಕ್ಕಳ ಮನೆಯಲ್ಲಿ ಕಲಿಸುತ್ತಿರುವ ಶಿಕ್ಷಕರ ವೇತನ ಮತ್ತಿತರ ಖರ್ಚುಗಳನ್ನ ಸಮಿತಿಯಲ್ಲಿನ ದಾನಿಗಳೇ ಭರಿಸುವ ಮೂಲಕ ಶಾಲೆಯ ಕುರಿತು ತಮ್ಮ‌ ತಮಗಿರುವ ಆಸ್ತಕಿಯನ್ನ ಪ್ರದರ್ಶಿಸಿದ್ದಾರೆ.

ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಅದರಲ್ಲೂ ಸರ್ಕಾರಿ ನೌಕರರು ತಮ್ಮ‌ ಮಕ್ಕಳನ್ನ ಖಾಸಗಿ ಶಾಲೆಗಳಿಗೆ ಸೇರಿಸುವ ಈ ಕಾಲಮಾನದಲ್ಲೂ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸುವದರ ಮೂಲಕ ಈ ಶಾಲೆಯನ್ನ ಅಭಿವೃದ್ಧಿಗೊಳಿಸವಲ್ಲಿ ಇಲ್ಲಿನ ಅನೇಕ ಸರ್ಕಾರಿ ನೌಕರರುಗಳ ಶ್ರಮವಿದೆ. ಇಂದು ಗ್ರಾಮಾಂತರ ಭಾಗದಲ್ಲಿಯೇ ಪೋಷಕರು ತಮ್ಮ ಮಕ್ಕಳನ್ನ ದೂರದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು ಹಳ್ಳಿಕಡೆಯಲ್ಲಿಯೇ ಸರ್ಕಾರಿ ಶಾಲೆಗಳು ಹಾಜರಾತಿ ಕೊರೆತೆಯಿಂದ ಮುಚ್ಚುತ್ತಿರುವಾಗ ಇಂದು ತಾಲ್ಲೂಕು ಕೇಂದ್ರವೊಂದರಲ್ಲಿ ಅಧಿಕ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಸರ್ಕಾರಿ ಶಾಲೆಯೊಂದು ನಡೆಯುತ್ತಿರುವುದು ಸುಮ್ಮನೆ ಮಾತಲ್ಲ.

ಎಲ್ಲ ಭಾಗದಲ್ಲಿಯೂ ಸರ್ಕಾರಿ ಶಾಲೆಗಳು ಕೆಆರ್ ಪೇಟೆಯ ಶತಮಾನದ ಶಾಲೆಯಂತೆ ಅಭಿವೃದ್ಧಿಗೊಂಡು ಹೆಚ್ಚಿನ ಹಾಜರಾತಿ ಹೊಂದಿದರೆ ಸರ್ಕಾರಿ ಶಾಲೆಗಳ ಹಳೆಯ ವೈಭವದ ಮೆರಗನ್ನ ನಾವು ಮತ್ತೆ ಕಾಣಬಹುದಾಗಿದೆ.

ಶಾಲೆ ಉಳಿಸುವುದೇ ನಮ್ಮ ಗುರಿಯಾಗಿತ್ತು

ಅಳಿವಿನಂಚಿನಂತಾಗಿರುವ ಸರ್ಕಾರಿ ಕನ್ನಡ ಶಾಲೆಗಳನ್ನ ಉಳಿಸುವ ಉದ್ದೇಶದಿಂದ ನಾನು ಹಾಗೂ ಶತಮಾನದ ಶಾಲೆಯ ಹಳೇಯ ವಿದ್ಯಾರ್ಥಿಗಳು ಸೇರಿ ಡಾ. ಎಚ್ ಎಲ್ ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಮಿತಿ ರಚಸಿಕೊಂಡು 2014 ರಲ್ಲಿ 110 ಹಾಜರಾತಿ ಹೊಂದಿದ್ದ ಶಾಲೆಯನ್ನ ಇಂದು 850 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಶಾಲೆ ಹೊಂದಿದೆ. ಇಲ್ಲಿ ನಾವು ಎಲ್ ಕೆ ಜಿ ಯ ಮಕ್ಕಳ ಮನೆ ಆರಂಭಿಸಿದ್ದು ಸರ್ಕಾರಿ ಶಾಲೆಯಲ್ಲಿ ಎಲ್ ಕೆ ಜಿ ಆರಂಭಿಸಲು ನಮ್ಮ ಮಕ್ಕಳ ಮನೆಯೇ ಸರ್ಕಾರಕ್ಕೆ ಪ್ರೇರಕವೆಂಬುದು ನಮಗೆ ಸಂತೋಷವೆನಿಸುತ್ತಿದೆ.


ವಾಸು. ಉಪನ್ಯಾಸಕ ಹಾಗೂ ಶತಮಾನದ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ.

ನಾವು ಮನಸ್ಸು ಮಾಡಬೇಕು

ಸರ್ಕಾರಿ‌ ಶಾಲೆಗಳು ಅಭಿವೃದ್ಧಿ ಹಾಗೂ ಹಾಜರಾತಿ ಹೆಚ್ಚಬೇಕಂದರೆ ಆ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಇರಲೇಬೇಕು. ನಾವು ಆ ಉದ್ದೇಶದಿಂದ ಕೆ ಆರ್ ಪೇಟೆ ಶಾಲೆಯಲ್ಲಿ ಪೂರ್ವಪ್ರಾಥಮಿಕ ಶಾಲೆ ಮಕ್ಕಳ ಮನೆ ಆರಂಭಿಸಿದ್ದು. ಇದರ ಪರಿಣಾಮ 130 ಮಕ್ಕಳು ಎಲ್‌ಕೆ ಜಿ ಗೆ ಪ್ರವೇಶ ಪಡೆದು ಶಾಲೆಯ ಹಾಜರಾತಿ ಹೆಚ್ಚಾಯ್ತು.ಎಲ್ಲ ಯೋಜನೆಗಳನ್ನ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಶಿಕ್ಷಣಾಸಕ್ತರು,ಸಾರ್ವಜನಿಕರು ಸರ್ಕಾರಿ ಶಾಲೆಗಳ ಕಡೆ ಒಲವು ತೋರಿ ಸಹಕರಿಸಿದರೆ ಸರ್ಕಾರಿ ಕನ್ನಡ ಶಾಲೆಗಳನ್ನ ಉಳಿಸಬಹುದಾಗಿದೆ.


ಡಾ.ಎಚ್ ಎಲ್ ನಾಗರಾಜು. ಉಪವಿಭಾಗಾಧಿಕಾರಿ,ಚಿಕ್ಕಮಗಳೂರು. ಹಾಗೂ ಅಧ್ಯಕ್ಷರು ಕೆ ಆರ್ ಪೇಟೆಯ ಶತಮಾನದ ಶಾಲೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ.

ATM ಬಳಸಿ ಹಣ ಕದಿಯುತ್ತಿದ್ದವರ ಬಂಧನ

Publicstory. in


Tumkuru: ವಯಸ್ಸಾದ ಗ್ರಾಹಕರಿಗೆ ವಂಚಿಸಿ ಎಟಿಎಂ ಕಾರ್ಡ್ ಪಡೆದು ಹಣ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಕಲಿ ಎಟಿಎಂ ಕಾರ್ಡುಗಳು, ಎರಡು ಲ್ಯಾಪ್ ಟಾಪ್, 19 ವಿವಿಧ ಎಟಿಎಂ ಕಾರ್ಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತುಮಕೂರು ಚರ್ಚ್ ಸರ್ಕಲ್ ಬಳಿ ಕೀಬಂಚ್ ಗಳ ರೀತಿಯ ವಸ್ತುಗಳನ್ನು ಹಿಡಿದು ತಿರುಗುತ್ತಿದ್ದಾಗ ಅನುಮಾನಗೊಂಡು ಬ್ರಿಜ್ ಬನ್ ಸರೋಜ ಮತ್ತು ಹರಿಲಾಲ್ ಅವರನ್ನು ವಶಕ್ಕೆ ಪಡೆದು ತನಿಖೆ ಮಾಡಿದಾಗ ಜನರಿಂದ ಹಣ ತೆಗೆದುಕೊಡುವುದಾಗಿ ಉಪಾಯವಾಗಿ ಎಂಟಿಎಂ ಕಾರ್ಡುಗಳನ್ನು ಪಡೆದು ನಂತರ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಹಕರ ಬಳಿ ಉಪಾಯವಾಗಿ ಎಟಿಎಂ ಕಾರ್ಡುಗಳನ್ನು ಪಡೆದುಕೊಂಡು ತಮ್ಮ ಬಳಿ ಇರುತ್ತಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ರೀಡರ್ ಮತ್ತು ಪೋರ್ಟಲ್ ಮ್ಯಾಗ್ನೆಟಿಕ್ ಕಾರ್ಡ್ ರೀಡರ್ ಸಾಧನಗಳನ್ನು ಬಳಸಿ ಅವುಗಳಿಗೆ ಎಟಿಎಂಗಳ ಸೀಕ್ರೇಟ್ ಕೋಡುಗಳನ್ನು ಸಂಗ್ರಹಿಸಿಕೊಂಡು ನಂತರ ತಾವು ತಂಗಿದ್ದ ಮನೆಗೆ ಹೋಗಿ ಮಿನಿ ಟೂಲ್ಸ್ ಮತ್ತು ಎಂಎಸ್ಆರ್.ಎಕ್ಸ್ ಸಾಫ್ಟ್ ವೇರ್ ಬಳಿಸಿ ಸೀಕ್ರೆಟ್ ಕೋಡುಗಳನ್ನು ನಮೂದಿಸಿ ಆರೋಪಿಗಳು ಎಟಿಎಂಗಳಿಗೆ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು ರಾಹುಲ್, ಅಂಕಿತ್, ಅಂಕುಶ್, ರಾಹುಲ್ ಸರೋಜ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳೆಲ್ಲರು ಉತ್ತರ ಪ್ರದೇಶದವರು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೋನಂ ವಂಶಿಕೃಷ್ಣ ತಿಳಿಸಿದ್ದಾರೆ.

ಆರೋಪಿಗಳು ತಿಪಟೂರು ತಾಲೂಕು ಹೊನ್ನವಳ್ಳಿಯ ಎಚ್.ಕೆ.ಬಸವರಾಜು ಖಾತೆಯಿಂದ 13 ಸಾವಿರ, ಹಾಲುಕುರಿಕೆಯ ಪರಮೇಶ್ವರಯ್ಯ ಅವರ ಖಾತೆಯಿಂದ 23,500 ರೂ, ದಿಬ್ಬೂರಿನ ಮೈಲಾರ ರಾವ್ ಅವರ ಖಾತೆಯಿಂದ 30 ಸಾವಿರ, ವೀರಸಾಗರದ ಮೊಹಮದ್ ಜಬೀರ್ ಹುಸೇನ್ ಅವರ ಖಾತೆಯಿಂದ 15,500 ರೂಪಾಯಿಗಳನ್ನು ನಕಲಿ ಎಟಿಎಂ ಬಳಸಿ ಪಡೆದಿದ್ದಾರೆ ಎಂದು ಹೇಳಿದರು.

ಈ ಆರೋಪಿಗಳ ತಂಡ, ಗುಲ್ಬರ್ಗಾ, ರಾಯಚೂರು, ಲಿಂಗಸಗೂರ, ಗಡ್ನಿ, ಕೃಷ್ಠಗಿ, ಸಿಂಗನೂರು, ಬೆಳಗಾವಿ, ಕುಡ್ಲ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕೋಡಿ, ಹಾವೇರಿ, ಭದ್ರಾವತಿ, ಶಿವಮೊಗ್ಗ, ತರೀಕೆರೆ, ಕಡೂರು, ರಾಣೆಬೆನ್ನೂರು, ಧಾರವಾಡ, ಹಿರಿಯೂರು, ತುಮಕೂರು ಸೇರಿ ಒಟ್ಟು 85 ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಮನೆ ಕಳವು, ಜಾತ್ರೆ, ಬಸ್ ಗಳಲ್ಲಿ ಚಿನ್ನದ ಸರಗಳನ್ನು ಕದಿಯುತ್ತಿದ್ದ ಆರೋಪಿ ಅಶೋಕ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನಿಂದ 330 ಗ್ರಾಂ ತೂಕದ 13, 86,000 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾವಗಡ: ಭ್ರಷ್ಟ ಸಿಬ್ಬಂದಿಗೆ ಕಠಿಣ ಶಿಕ್ಷೆ

ತುಮಕೂರು ಜಿಲ್ಲೆ  ಪಾವಗಡದಲ್ಲಿ ಲಂಚ ಸ್ವೀಕರಿಸಿ ಎಸಿಬಿ   ಬಲೆಗೆ ಬಿದ್ದಿದ್ದ ಆರೋಪಿ ಪುರಸಭೆ ಕಿರಿಯ ಎಂಜಿನಿಯರ್ ಪ್ರಕಾಶ್ ಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ,  4 ಲಕ್ಷ ರೂ ದಂಡ ಹಾಗೂ  ಎರಡನೇ ಆರೋಪಿ ವಾಟರ್ ಮನ್ ರಿಯಾಜ್ ಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 5 ಸಾವಿರ ರೂ ದಂಡವನ್ನು 7 ನೇ ಜಿಲ್ಲಾ ಮತ್ತು ಸತ್ರ ನ್ಯಾಯಲಯ ವಿಧಿಸಿದೆ.

ಪಾವಗಡ ಪುರಸಭೆ ವ್ಯಾಪ್ತಿಯ ವಿವಿಧ  ಕಾಮಗಾರಿಗಳ ಬಿಲ್ ಮಂಜೂರು ಮಾಡಿಕೊಡಲು  ಪುರಸಭೆ ಕಿರಿಯ ಎಂಜಿನಿಯರ್ ಪ್ರಕಾಶ್, ವಾಟರ್ ಮನ್ ರಿಯಾಜ್  7 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 3 ಲಕ್ಷ ರೂ ಹಣವನ್ನು ಪಡೆದುಕೊಂಡು, ಉಳಿಕೆ 4 ಲಕ್ಷ  ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ  ಗುತ್ತಿಗೆದಾರ ಲಿಂಗಮಯ್ಯ   8,  ಸೆಪ್ಟಂಬರ್- 2016 ರಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ಧಳಕ್ಕೆ ದೂರು ನೀಡಿದ್ದರು. ಕಿರಿಯ ಎಂಜಿನಿಯರ್ 1 ಲಕ್ಷ ರೂ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು  ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ತನಿಖಾಧಿಕಾರಿ ಎಸಿಬಿ ಇನ್ ಸ್ಪೆಕ್ಟರ್ ವಿ.ಎ. ಗುರುಪ್ರಸಾದ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ  ಮಾರ್ಚ್-16 ಸೋಮವಾರದಂದು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.  ವಿಶೇಷ ವಕೀಲ ಆರ್.ಪಿ ಪ್ರಕಾಶ್ ವಾದ ಮಂಡಿಸಿದ್ದಾರೆ.

ಇದೀಗ ಮತ್ತೆ ಪುರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಯಾರಾದರೂ ಬುದ್ದಿಕಲಿಸಲಿದ್ದಾರೆಯೇ ಎಂದು ಜನತೆ ಕಾದು ನೋಡುತ್ತಿದ್ದಾರೆ.

ಡಿಕೆಶಿ ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ…

ತುಳಸೀ ತನಯ

ತುಮಕೂರು:
ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮ ದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಡಿ.ಕೆ. ಶಿವಕುಮಾರ್ (ಜನನ 15ನೇ ಮೇ 1962) ತಮ್ಮ ತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು.

18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ 0SUI ಗೆ ಸೇರ್ಪಡೆಗೊಂಡು ಅನತಿ ಕಾಲದಲ್ಲಿಯೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾದರು(1981-83).
ತದನಂತರ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಅವರು ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್‍ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಜನಮನ ಸೆಳೆದರು.

1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡರಾಗಿದ್ದ ಹೆಚ್.ಡಿ. ದೇವೇಗೌಡ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಡಿ.ಕೆ. ಶಿವಕುಮಾರ್ ಮೇಲೆ ಬಿತ್ತು. ಹೀಗಾಗಿ ರಾಜಕಾರಣದ ಪರಿಚಯವೇ ಇಲ್ಲದಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್.ಡಿ. ದೇವೇಗೌಡ ಅವರ ವಿರುದ್ದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ಮೊದಲಭಾರಿಗೆ ಕಣಕ್ನಿಳಿಸಲಾಯಿತು. ಸಾಕಷ್ಟು ಪ್ರಬಲ ಪ್ರತಿರೋಧವನ್ನೇ ತೋರಿದ ಡಿ.ಕೆ.ಶಿ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರು ಅವರು ಅತ್ಯಂತ ಪ್ರಯಾಸದ ಜಯ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ವಿಧಾನಸಭಾಚುನಾವಣೆಯಾದ ಕೆಲವೇ ದಿನಗಳಲ್ಲಿ 1987ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿಆಯ್ಕೆಗೊಂಡರು.
1989ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಮುಖೇನ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಯನ್ನಾಗಿ ನಿಲ್ಲಿಸಲಾಯಿತು. ಅಭೂತ ಪೂರ್ವ ರೀತಿ ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ ಡಿ.ಕೆ. ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸಿದರು.
1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‍ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಸೋರೆಕೊಪ್ಪ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಬಹುಮಾನದ್ಯೋತಕವಾಗಿ ಬಂಗಾರಪ್ಪನವರು ಈ ಯುವಕನನ್ನು ರಾಜ್ಯಮಟ್ಟದ ಸಚಿವರನ್ನಾಗಿ ಮಾಡಿ ಬಂಧಿಖಾನೆ ಖಾತೆ ನೀಡಿದರು.
ಆದರೂ ಕಾಂಗ್ರೆಸ್ ಪಕ್ಷದಲ್ಲಿದ್ದ ಹಲವು ವಿರೋಧಿಗಳ ರಾಜಕೀಯ ಪಿತೂರಿಯಿಂದಾಗಿ 1994ರಲ್ಲಿ ಪಕ್ಷದ ಟಿಕೆಟ್ ವಿರೋಧಿಸಲಾಯಿತು, ಧೃತಿಗೆಡದೆ ಡಿ.ಕೆ. ಶಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಯಗಳಿಸಿ ಜಯದ ಪರಂಪರೆ ಮುಂದುವರೆಸಿದರು.
2004ರಲ್ಲಿ ಸಾತನೂರು ವಿಧಾನಸಭಾಕ್ಷೇತ್ರದಿಂದ 4ನೇ ಭಾರಿ ಆರಿಸಿ ಬಂದರೂ ಕೂಡ ಕಾಂಗ್ರೆಸ್ ಪಕ್ಷ ಬಹುಮತಗಳಿಸುವಲ್ಲಿ ವಿಫಲವಾಯಿತು. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವಿಲ್ಲದ ಕಾರಣ ಕೋಮವಾದಿ ಬಿ.ಜೆ.ಪಿ. ಪಕ್ಷ ಅಧಿಕಾರಕ್ಕೇರದಂತೆ ತಡೆಯಲು ದೇವೇಗೌಡ ನೇತೃತ್ವದ ಜೆ.ಡಿ.ಎಸ್.(ಜಾತ್ಯಾತೀತ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಹೀಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಉದಯಿಸಿದ ಕಾಂಗ್ರೆಸ್-ಜೆ.ಡಿ.ಎಸ್.(ಜಾ), ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿಗೆ ಸ್ಥಾನವಿರಲಿಲ್ಲ, ಏಕೆಂದರೆ ಅವರು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬಾರದೆಂಬುದು ಹೆಚ್.ಡಿ. ದೇವೇಗೌಡರು ಷರತ್ತು ವಿಧಿಸಿದ್ದರು.
ಆದರೂ ಒಟ್ಟಾರೆ ರಾಜ್ಯದ ಹಿತದೃಷ್ಟಿಯಿಂದ ಹಾಗೂ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಡಿ.ಕೆ. ಶಿವಕುಮಾರ್ ತಮಗೆ ಮಾಡಲಾದ ಅಪಮಾನವನ್ನು ಸಹಿಸಿಕೊಂಡರು ಹಾಗೂ ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸುವಲ್ಲಿ ತಮ್ಮ ಸಮಯವನ್ನು ಮೀಸಲಿಟ್ಟರು.
ತಮ್ಮ ವಿರುದ್ಧ ದೇವೇಗೌಡರು ನಡೆಸಿದ ಸೇಡಿನ ರಾಜಕಾರಣಕ್ಕೆ ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡುವಲ್ಲಿ ಶೀಘ್ರದಲ್ಲಿಯೇ ಯಶಸ್ವಿಯಾದರು. 2006ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ಅಜ್ಞಾತ ಹೆಣ್ಣು ತೇಜಸ್ವಿನಿಗೌಡ ಅವರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು.
ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿ ವಿಲಾಸ್‍ ರಾವ್‍ ದೇಶ್‍ ಮುಖ್ ಸಮ್ಮಿಶ್ರ ಸರ್ಕಾರ ಓಅP ಪಕ್ಷದೊಂದಿಗೆ ಸೆಣಸಾಟಕ್ಕಿಳಿದಾಗ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತ್ತು. ಆಗ ಓಅP ಮತ್ತು ವಿರೋಧ ಪಕ್ಷಗಳು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು. ತಕ್ಷಣ ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ಕಾರ್ಯಪ್ರವೃತ್ತರಾದ ಡಿ.ಕೆ. ಶಿವಕುಮಾರ್ ರವರು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10-12 ದಿನಗಳ ಕಾಲ ಬೆಂಗಳೂರಿನ ವೈಭವಪೇತರೆ ಸಾರ್ಟ್‍ ಹೊಟೆಲ್ಒಂದರಲ್ಲಿ ಇರಿಸಿಕೊಂಡು ರಕ್ಷಣೆ ನೀಡಿದರು. ಮುಂಬೈಯಲ್ಲಿ ಪರಿಸ್ಥಿತಿ ತಿಳಿಯಾಗಿ ಸರ್ಕಾರಕ್ಕೆ ಅಪಾಯವಿಲ್ಲವೆಂಬ ಸಂಗತಿ ಮನವರಿಕೆಯಾದ ನಂತರವಷ್ಟೇ ಮಹಾರಾಷ್ಟ್ರ ಶಾಸಕರನ್ನು ಕ್ಷೇಮವಾಗಿ ಕಳುಹಿಸಲಾಯಿತು.
ಹೀಗೆ ಡಿ.ಕೆ. ಶಿವಕುಮಾರ್ ಅವರ ಸಕಾಲಿಕ ರಾಜಕೀಯ ತಂತ್ರಗಾರಿಕೆ ಫಲಕೊಟ್ಟು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ವಿಲಾಸ್‍ ರಾವ್‍ದೇಶ ಮುಖ್‍ ರವರ ಸರ್ಕಾರ ಯಾವುದೇ ಅಪಾಯ ಎದುರಿಸದೆ ಪಾರಾಗಿ ಮುಂದುವರೆಯುವಂತಾಯಿತು. ಇದರ ಎಲ್ಲಾ ಶ್ರೇಯಸ್ಸು ಡಿ.ಕೆ. ಶಿವಕುಮಾರ್ ರವರಿಗೆ ಸಲ್ಲಬೇಕು.

2004ರಲ್ಲಿ ಪ್ರಥಮ ಬಾರಿಗೆ ಜೆ.ಡಿ.ಎಸ್.-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರೂಪುಗೊಂಡಾಗ ಎಸ್.ಎಂ. ಕೃಷ್ಣ ಅವರನ್ನು ಕಡೆಗಣಿಸಿ ಹೆಚ್.ಡಿ. ದೇವಗೌಡರ ಒಪ್ಪಿಗೆಯಂತೆ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಬೇಕಾಗಿ ಬಂದಾಗ ಎಸ್.ಎಂ. ಕೃಷ್ಣ ಅವರಿಗೆ ಬದಲಿಯಾಗಿ ಯಾವುದಾದರೊಂದು ಸ್ಥಾನ ಕೊಡಲೇಬೇಕೆಂದು ಪಕ್ಷದ ವರಿಷ್ಠರ ಮನವೊಲಿಸಿ ಎಸ್.ಎಂ. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ಬಂಡಾಯ ಶಾಸಕರಾಗಿಯೂಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ ಅವರು ಆಗಲೇ ರಾಜಕೀಯವಾಗಿ ಮೂಲೆಗುಂಪಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಓಲೈಸಿ ಮರಳಿ ರಾಜಕೀಯ ರಂಗಕ್ಕೆ ಕರೆತಂದರು ಹಾಗೂ ಜನತಾದಳ ಅಧಿಕಾರದಲ್ಲಿದ್ದರೂ ಅಲ್ಪಮತದ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಎಂ. ಕೃಷ್ಣ ಅವರು ರಾಜ್ಯಸಭೆಗೆ ಸ್ಪರ್ಧಿಸುವಂತೆ ಮಾಡಿದರು. ಜನತಾದಳದಿಂದಲೇ ಅಗತ್ಯವಾದ ಸದಸ್ಯರ ಬೆಂಬಲ ಸಿಗುವಂತೆ ವ್ಯೂಹರಚನೆ ಮಾಡಿ ಎಸ್.ಎಂ. ಕೃಷ್ಣ ರಾಜ್ಯಸಭೆಗೆ ಆಯ್ಕೆಯಾಗುವಂತೆ ಮಾಡಿದರು.
ಎಸ್.ಎಂ. ಕೃಷ್ಣ ಅವರು ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರಸಂಗದ ಸಂಪೂರ್ಣಕೀರ್ತಿ, ಗೌರವ, ಡಿ.ಕೆ. ಶಿವಕುಮಾರ್ ಅವರ ವ್ಯೂಹರಚನೆಗೆ ಸಂದ ವಿಜಯ ಎಂದೇ ಭಾವಿಸಲಾಗುತ್ತಿದೆ.

1999ರಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವರೀತಿಯಲ್ಲಿ ಜಯಗಳಿಸಿ ಸರ್ಕಾರರಚಿಸುವಲ್ಲಿ ಕಾರಣೀಭೂತರಾದರು.
ಎಸ್.ಎಂ. ಕೃಷ್ಣ ಚುನಾವಣಾ ಪೂರ್ವದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಚುನಾವಣಾ ಸಮರ ಆರಂಭಿಸಿದಾಗ, ಈ ಐತಿಹಾಸಿಕ ಯಾತ್ರೆಯನ್ನು ಆಯೋಜಿಸಿದವರು ಡಿ.ಕೆ. ಶಿ. ಇದರಿಂದಲೇ ಕಾಂಗ್ರೆಸ್ ಪಕ್ಷ 139 ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸುವಂತಾಯಿತು.

1999ರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅನುಮತಿ ನೀಡಿತ್ತು. ಆಗ ಅವರ ಎದುರಾಳಿ ಹೆಚ್.ಡಿ. ದೇವೇಗೌಡ ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆಗಿಳಿದಿದ್ದರು. ದೇವೇಗೌಡರು ರಾಜಕೀಯ ಸ್ಥಿತ್ಯಂತರದಿಂದ ಅಂದಿನ ಪ್ರಧಾನ ಮಂತ್ರಿಯಾಗಿದ್ದರು. ತಂದೆಯನ್ನೇ ರಾಜಕೀಯ ವ್ಯೂಹದಲ್ಲಿ ಮಣಿಸಿದ ಡಿ.ಕೆ. ಶಿವಕುಮಾರ್ ಗೆ ಮಗ ಯಾವ ಲೆಕ್ಕ? ನಿರೀಕ್ಷಿಸಿದಂತೆ ಹೆಚ್.ಡಿ. ಕುಮಾರಸ್ವಾಮಿ ಚುನಾವಣೆಯಲ್ಲಿ ಸೋತರು. ಡಿ.ಕೆ. ಶಿವಕುಮಾರ್ ಸತತ 3ನೇ ಬಾರಿಗೆ ಮರಳಿ ಗೆಲುವು ಸಾಧಿಸಲು ಸಾಧ್ಯವಾಯಿತು. ಎಸ್.ಎಂ. ಕೃಷ್ಣ ಅವರು ಕ್ಯಾಬಿನೆಟ್‍ ದರ್ಜೆ ಸಚಿವರನ್ನಾಗಿ ನೇಮಿಸಿ ಮಹತ್ವದ ಸಹಕಾರ ಖಾತೆ ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಶ್ರಮಕ್ಕೆ ತಕ್ಕ ಮನ್ನಣೆ ನೀಡಿದರು.(1999-2002).

2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ ರಾಜ್ಯ ನಗರಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಯುವಕರನ್ನು ಸಂಘಟಿಸಿ ಜೀವನದಲ್ಲಿ ನೆಲೆಗೊಳಿಸುವ “ರಾಜೀವ್‍ಯುವ ಶಕ್ತಿ” ಸಂಘಟನೆಗಳು ರಾಜ್ಯದಲ್ಲಿ ತಲೆಎತ್ತಲು ಕಾರಣೀಭೂತರಾದರು.

ವಿಶ್ವದಲ್ಲಿಯೇ ಮೊದಲನೆಯದು ಎನ್ನಿಸಿದ ಸ್ತ್ರೀಶಕ್ತಿ ಸಂಘಟನೆಗಳನ್ನು ಆರಂಭಿಸುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾಲು ಮಹತ್ವದ್ದು.

2008ರಲ್ಲಿ ಎಸ್.ಎಂ. ಕೃಷ್ಣ ರಾಜ್ಯಪಾಲ ಪದವಿ ತ್ಯಜಿಸಿ ಪುನಃ ರಾಜಕಾರಣಕ್ಕೆ ಬರಬೇಕು ಎಂದು ಬಯಸಿದಾಗ ಅವರನ್ನು ಕರೆತಂದು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಮಹತ್ವದ ಪಾತ್ರ ವಹಿಸಿದರು. ಆನಂತರ ಎಸ್.ಎಂ. ಕೃಷ್ಣ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ವಿದೇಶಾಂಗ ವ್ಯವಹಾರಗಳ ಮಹತ್ವದ ಖಾತೆಯನ್ನು ನಿಭಾಯಿಸಿದರು.

ಕನಕಪುರ ಕ್ಷೇತ್ರದಲ್ಲಿ ವಿಡಿಯೋಕಾನ್ಫರೆನ್ಸ್ ಸೌಲಭ್ಯವನ್ನು ಸ್ಥಾಪಿಸಿ ಆ ಮೂಲಕ ಕ್ಷೇತ್ರದ ಮತದಾರರೊಂದಿಗೆ ನೇರಾ-ನೇರಾ ಸಂಪರ್ಕ ಸಾಧಿಸಿದ ದೇಶದ ಪ್ರಥಮ ಶಾಸಕರೆಂಬ ಕೀರ್ತಿಗೆ ಭಾಜನರಾದವರು. ಸಾತನೂರು ಹಾಗೂ ಕನಕಪುರ ಕಛೇರಿಗಳಲ್ಲಿ ಸ್ಥಾಪಿಸಿದ ವಿಡಿಯೋ ಸಂಪರ್ಕ ಸೌಲಭ್ಯದಿಂದಾಗಿ ಗ್ರಾಮೀಣ ಮತದಾರರು ತಮ್ಮ ಶಾಸಕರೊಂದಿಗೆ ನೇರಾ-ನೇರಾ ಮಾತುಕತೆ ನಡೆಸಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡು ಅವುಗಳಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಯಿತು. ಇದರಿಂದ ಸಾರ್ವಜನಿಕರ ಅಪಾರ ಹಣ ಹಾಗೂ ವೇಳೆಯು ಅಪವ್ಯಯವಾಗುವುದು ತಪ್ಪಿತು.
ಈ ಬಗ್ಗೆ ರಾಷ್ಟ್ರಮಟ್ಟದ ಇಂಡಿಯಾಟುಡೆಯಂತಹ ದಿನಪತ್ರಿಕೆಯು ಅವರ ಸಾಧನೆಯ ಬಗ್ಗೆ ತನ್ನ 2006 ಏಪ್ರಿಲ್ 17ನೇ ದಿನದ ಸಂಚಿಕೆಯಲ್ಲಿ ಭಾರತೀಯ ಶಾಸಕನೊಬ್ಬ ಕೈಗೊಂಡ ಈ ಮಹತ್ವದ ಸಾಧನೆಯನ್ನು ಗುರುತಿಸಿ ಶ್ಲಾಘಿಸಿತು.
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆಯಾಗಿ ರಾಜಕೀಯಕ್ಕೆ ಕುಮಾರಿ ರಮ್ಯಾ ಕಾಲೂರಿದ್ದು ಡಿ.ಕೆ. ಶಿವಕುಮಾರ್ ಅವರ ಸತತ ಒತ್ತಾಸೆ ಹಾಗೂ ಪ್ರೇರಣೆಯಿಂದ.

ಬೆಂಗಳೂರು ಅರಮನೆ ಆವರಣದಲ್ಲಿ ಬೃಹತ್‍ ಯುವಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್‍ ಉಪಾಧ್ಯಕ್ಷ ರಾಹುಲ್‍ಗಾಂಧಿ ಸಮ್ಮುಖದಲ್ಲಿ ಕುಮಾರಿ ರಮ್ಯಾ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕೇವಲ ಕೆಲವೇ ದಿನಗಳ ಅಂತರದಲ್ಲಿ ರಮ್ಯಾ ಮತದಾರರ ಮೇಲೆ ವಿಶ್ವಾಸ, ಪ್ರಭಾವ ಭೀರಿದರಿಂದಾಗಿ ಅವರು ಉಪ ಚುನಾವಣೆಯಲ್ಲಿ ಎದುರಾಳಿಯ ಮಣ್ಣುಮುಕ್ಕಿಸಿ ಸಂಸದೆಯಾಗಿ ಸುಲಭ ಜಯಗಳಿಸಿದರು.

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪೀಠಕ್ಕೆ ಮರಳಿ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಾಗ ಪಕ್ಷದಲ್ಲಿನ ವಿರೋಧಿಗಳು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಕಪೋಲಕಲ್ಪಿತ ದಾಖಲೆಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿ, ಡಿ.ಕೆ.ಶಿ ಅವರಿಗೆ ಸಚಿವ ಸ್ಥಾನ ತಪ್ಪುವಂತೆ ಮಾಡಿದರು. ಇದರಿಂದ ದೃತಿಗೆಡದ ಅವರು, ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಯಾವುದೇ ಪ್ರತಿಭಟನೆ ತೋರದೆ, ತಮ್ಮ ವಿರುದ್ಧ ಆಪಾದನೆಗಳ ಬಗ್ಗೆ ನ್ಯಾಯಾಂಗ ತಜ್ಞರಿಂದ ವಿಮರ್ಶೆ ಮಾಡಿಸುವಂತೆ ವರಿಷ್ಠರನ್ನು ಕೋರಿಕೊಂಡರು.

ಪಕ್ಷದಿಂದ ನೇಮಿತರಾದ ಇಬ್ಬರು ನ್ಯಾಯಾಂಗ ತಜ್ಞರು ಯಾವುದೇ ರೀತಿಯ ಅಕ್ರಮ ಎಸಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ಡಿ.ಕೆ. ಶಿವಕುಮಾರ್ ಅವರನ್ನು ಆರೋಪ ಮುಕ್ತರನ್ನಾಗಿಸಿದರು. ಇದರಿಂದ ಏಳು ತಿಂಗಳ ಅಲ್ಪಅವಧಿಯ ನಂತರ ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನು ನಿಭಾಯಿಸಿದರು. .

ಈ ವೇಳೆಯಲ್ಲಿ ಮಂತ್ರಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಗಳು ಎದುರಾದವು. ತಮ್ಮ ಸಂಘಟನಾ ಶಕ್ತಿ, ರಾಜಕೀಯತಂತ್ರ ಹಾಗೂ ಚಾಣಾಕ್ಯ ನೀತಿ ಇವುಗಳನ್ನು ಧಾರಾಳವಾಗಿ ಬಳಸಿಕೊಂಡು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತ ಪೂರ್ವರೀತಿಯಲ್ಲಿ ವಿಜಯ ಸಾಧಿಸಲು ಕಾರಣೀಭೂತರಾದರಲ್ಲದೆ ಜನತಾದಳದಿಂದ ಎರಡು ಕ್ಷೇತ್ರಗಳನ್ನು ಕಸಿದುಕೊಂಡು ಕಾಂಗ್ರೆಸ್ಸಿಗೆ ಪ್ರತಿಷ್ಟೆಯನ್ನುತಂದುಕೊಟ್ಟರು.

ಇಂಧನ ಸಚಿವರಾಗಿ ಜಡ್ಡುಗಟ್ಟಿದ್ದ ಇಂಧನ ಇಲಾಖೆಯನ್ನು ಅಮೂಲಾಗ್ರ ಸುಧಾರಣೆ ಮಾಡಲಾರಂಭಿಸಿದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಹಿ ಮಾಡಲಾಗಿದ್ದ ಹಲವಾರು ವಿದ್ಯುತ್‍ ಖರೀದಿ ಒಪ್ಪಂದಗಳನ್ನು ರದ್ದುಗೊಳಿಸಿದರು.
ಅಷ್ಟೇ ಅಲ್ಲ ಹಿಂದಿನ ಸರ್ಕಾರದ ಕಾಲಾವಧಿಯಲ್ಲಿ ಮಾಡಲಾದ ವಿದ್ಯುತ್ ಖರೀದಿಯಲ್ಲಿ ಅಕ್ರಮ ಕುರಿತ ಸದನ ಸಮಿತಿ ರಚನೆಗೆ ಕಾರಣರಾದರು. ರೈತ ಸೂರ್ಯ ಯೋಜನೆಯನ್ನು ರೂಪಿಸಿ ಭೂ ಮಾಲೀಕರಾದ ರೈತರು ಸ್ವಯಂ 1 ರಿಂದ 3 ಮೆ.ವ್ಯಾ. ಸೌರವಿದ್ಯುತ್ ಉತ್ಪಾದನೆ ಮಾಡುವಂತೆ ಅವಕಾಶ ಕಲ್ಪಿಸಿದರು. ರಾಜ್ಯ ಸರ್ಕಾರದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಮುಕ್ತ ಕಂಠದಿಂದ ಪ್ರಶಂಸಿದಲ್ಲದೇ ಉಳಿದ ರಾಜ್ಯಗಳೂ ಕರ್ನಾಟಕದ ಮಾದರಿ ಅನುಸರಿಸುವಂತೆ ಮಾನ್ಯ ಕೇಂದ್ರ ಇಂಧನ ಸಚಿವರೇ ಕರೆ ನೀಡುವಂತೆ ಮಾಡಿದರು.
2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ ಅವರು ರಾಜ್ಯದಲ್ಲಿ ಅತೀ ಹೆಚ್ಚು ಪ್ರಮಾಣದ ಚೆಕ್ ಡ್ಯಾಮ್‍ಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಿಕೆ ಮೂಲಕ ಉತ್ತೇಜಿಸಿದರು.
ಕೆ.ಆರ್.ಎಸ್‍ನ ಬೃಂದಾವನ ಉದ್ಯಾನವನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದರಲ್ಲದೇ ಬೃಹತ್ ಕಾವೇರಿ ಪ್ರತಿಮೆ ನಿರ್ಮಾಣಕ್ಕೂ ನಿರ್ಧರಿಸಿದ್ದರು.
ಮೈತ್ರಿ ಸರ್ಕಾರದ ಉಳಿವಿಗೆ ಟೊಂಕ ಕಟ್ಟಿ ನಿಂತು ಪಕ್ಷದ ನಾಯಕತ್ವ ತಮಗೆ ಜವಬ್ದಾರಿ ವಹಿಸಿದ ಅನೇಕ ಉಪಚುನಾವಣೆಗಳಲ್ಲಿ ಪಕ್ಷ ಗೆಲುವಂತೆ ನೋಡಿಕೊಂಡಿರು. ಬಳ್ಳಾರಿ ಲೋಕಸಭೆ ಕ್ಷೇತ್ರ ಕುಂದಗೋಳ ವಿಧಾನಸಭಾ ಕ್ಷೇತ್ರದ ಗೆಲುವಿನಲ್ಲಿ ಡಿ.ಕೆ. ಶಿ ಕೊಡುಗೆ ಗಮನಾರ್ಹ.
3.5 ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇನಾನಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಯಾವುದೇ ಸಂದರ್ಭದಲ್ಲೂ ಯಾವುದೇ ಆಮಿಷಗಳಿಗೂ ಬಲಿಯಾಗದೇ ಪಕ್ಷ ನಿಷ್ಠೆಯನ್ನು ಬದಲಿಸಲಿಲ್ಲ.
ಕಾಂಗ್ರೆಸ್ ಕಟ್ಟಾಳು ಆಗಿರುವ ಡಿ.ಕೆ.ಶಿ 2017ರಲ್ಲಿ ಹೈಕಮಾಂಡ್ ವಹಿಸಿದ ಜವಬ್ದಾರಿಯ ಮೇರೆಗೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಟ್ಟುಕೊಂಡ ಅವರು ಅದಕ್ಕಾಗಿ ಭಾರಿ ಬೆಲೆಯನ್ನೇ ತೆರಬೇಕಾಯಿತಾದರೂ ವಿಚಲಿತರಾಗಲಿಲ್ಲ. ಐಟಿ, ಇಡಿ ಮತ್ತಿತರ ತನಿಖಾ ಸಂಸ್ಥೆಗಳು, ಅವರು ಮತ್ತು ಅವರ ಪರಿವಾರದ ಮೇಲೆ ದಾಳಿ ನಡೆಸಿದಲ್ಲದೇ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೂ ಅಟ್ಟಿದರು. ಈ ಸಂದರ್ಭದಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂದಿ ಅವರು ಜೈಲಿಗೆ ಭೇಟಿ ಕೊಟ್ಟು ಡಿ.ಕೆ.ಶಿವಕುಮಾರ್ ಅವರಿಗೆ ಧೈರ್ಯ ತುಂಬಿದ್ದು ಅವರ ಪಕ್ಷ ನಿಷ್ಠೆಗೆ ಸಿಕ್ಕ ಗೌರವಕ್ಕೆ ಸಾಕ್ಷಿ.
ಡಿ.ಕೆ.ಶಿ ಜೈಲಿನಲ್ಲಿದ್ದಾಗ ಲಕ್ಷಾಂತರ ಜನ ಬೀದಿಗಿಳಿದು ಮಾಡಿದ ಹೋರಾಟ ಹಾಗೂ ಅವರು ಜೈಲಿನಿಂದ ಬಂದ ಬಳಿಕ ಡಿ.ಕೆ.ಶಿವಕುಮಾರ್ ಗೆ ಸಿಕ್ಕ ಸ್ವಾಗತ ಅವರ ನಿಷ್ಠಾವಂತ ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ವೈಯಕ್ತಿಕ ಜೀವನದಲ್ಲಿ ಪ್ರಗತಿಪರ ರೈತರಾಗಿ, ವಸತಿ ಯೋಜನೆಗಳ ನಿರ್ಮಾತೃ ಆಗಿರುವ ಡಿ.ಕೆ. ಶಿವಕುಮಾರ್, ನ್ಯಾಷನಲ್‌ ಎಜುಕೇಷನ್ ಫೌಂಡೇಷನ್‍ನ ಸ್ಥಾಪಕ ಅಧ್ಯಕ್ಷರಾಗಿ ಇಂಜಿನಿಯರಿಂಗ್, ನರ್ಸಿಂಗ್ ಹಾಗೂ ಮ್ಯಾನೇಜ್‍ಮೆಂಟ್ ವಿದ್ಯಾಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಲ್ಲದೆ ವಿಶ್ವಮಟ್ಟದ ಎರಡು ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ನೇತೃತ್ವದ ಡಿ.ಕೆ.ಎಸ್. ಚಾರಿಟೇಬಲ್ ಟ್ರಸ್ಟ್ ಕ್ಷೇತ್ರದ ಹಲವಾರು ಸಮಸ್ಯಾತ್ಮಕ ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರು ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಕೇವಲ 10 ಪೈಸೆಗೆ ಒಂದು ಲೀಟರ್ ಪರಿಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದೆ.
100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಈ ಸ್ಥಾವರಗಳ ಮೂಲಕ ಪರಿಶುದ್ಧ ಕುಡಿಯುವ ನೀರು ದೊರಕಿಸಿಕೊಡುವ ಮೂಲಕ ಅಶುದ್ದ ನೀರಿನ ಬಳಕೆಯಿಂದ ಜನರಿಗಾಗುತ್ತಿದ್ದ ರೋಗರುಜಿನಗಳನ್ನು ನಿವಾರಿಸುವಲ್ಲಿ ಡಿ.ಕೆ.ಎಸ್. ಚಾರಿಟೇಬಲ್ ಟ್ರಸ್ಟ್ ಯಶಸ್ವಿಯಾಗಿದೆ.
ಈ ಯೋಜನೆಯನ್ನುಕಾಲಾನುಕ್ರಮದಲ್ಲಿ ಸಹೋದರ ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿರುವ ಇಡೀ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ವಿಸ್ತರಿಸುವ ಕಾರ್ಯಕ್ರಮವನ್ನು ಡಿ.ಕೆ.ಎಸ್.ಚಾರಿಟೇಬಲ್ ಟ್ರಸ್ಟ್ ಹಾಕಿಕೊಂಡಿದೆ.

ಪ್ರೊ.ಶ್ರೀನಿವಾಸ್ ಗೆ ಬಹುಜನ ಕ್ರೀಡಾರತ್ನ ರಾಷ್ಟ್ರೀಯ ಪ್ರಶಸ್ತಿ ಗರಿ

ತುಮಕೂರು: ಅಥ್ಲೆಟಿಕ್ಸ್ ನಲ್ಲಿ ತುಮಕೂರು ಹಾಗೂ ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿರುವ ಪ್ರೊ‌. ಶ್ರೀನಿವಾಸ್ ಅವರಿಗೆ ಭಾನುವಾರ ತಿರುಪತಿಯಲ್ಲಿ ನಡೆದ ಸಮಾರಂಭದಲ್ಲಿ ಬಹುಜನ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಕ್ರೀಡಾರತ್ನ ಪ್ರಶಸ್ತಿ ನೀಡಲಾಯಿತು.

ಮೂಲತಃ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆಯವರಾದ ಶ್ರೀನಿವಾಸ್ ಅವರು ತಿಪಟೂರಿನ ಪಲ್ಲಾಗಟ್ಟಿ ಪದವಿ ಕಾಲೇಜಿನನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದಾರೆ.

ಕ್ರೀಡೆಯಲ್ಲಿ ಇವರು ತೋರುತ್ತಿರುವ ಆಸಕ್ತಿ, ಸಾಧನೆ ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ.

ಈಚೆಗೆ ಮಾಡಿದ ಸಾಧನೆ


ಕೇರಳದ ಕೋಝಿಕೋಡ್ ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಫ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ನಾಲ್ವರ ತಂಡ ಎರಡು ಸ್ಪರ್ಧೆಗಳಲ್ಲಿ ಬೆಳ್ಳಿಪದಕ ಮತ್ತು ವ್ಯಕ್ತಿಗತವಾಗಿ ಕಂಚಿನ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.

ಕರ್ನಾಟಕದ ತುಮಕೂರು ಜಿಲ್ಲೆಯಿಂದ ಶ್ರೀನಿವಾಸ್ ಬಿ (ತುಮಕೂರು), ಜೋಷಿ, ಪದ್ಮನಾಭ, ರಾಜಮೋನಿ (ದಕ್ಷಿಣ ಕನ್ನಡ) ಅವರು 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿಪದಕ ಪಡೆದಿದ್ದಾರೆ.

ರಾಜ್ಯಪ್ರತಿನಿಧಿಸಿದ್ದ ತಂಡ. ಮುಂದೆ ಇರುವವರು ಶ್ರೀನಿವಾಸ್

ರಾಜ್ಯದ ಶ್ರೀನಿವಾಸ್ ಬಿ (ತುಮಕೂರು), ಹನುಮಂತಪ್ಪ (ಚಿತ್ರದುರ್ಗ), ಜೋಷಿ (ದಕ್ಷಿಣ ಕನ್ನಡ), ಮೋನಪ್ಪ (ಮೈಸೂರು) ಇವರು 4X400 ಮೀಟರ್ ರಿಲೇ ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಬೆಳ್ಳಿಪದಕ ಗಳಿಸಿದ್ದಾರೆ.

ವಿಶೇಷವಾಗಿ 400 ಮೀಟರ್ ಅಡೆತಡೆ ಓಟ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತುಮಕೂರಿನ ಬಿ.ಶ್ರೀನಿವಾಸ್ ಅವರು ಕಂಚಿನ ಪದಕವನ್ನು ಪಡೆದು ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇವರೆಲ್ಲರೂ ಮಾರ್ಚ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ಶ್ರೀನಿವಾಸ ಬಿ ಇವರು ಪಾವಗಡ ತಾಲೂಕು ವೈ.ಎನ್. ಹೊಸಕೋಟೆಯವರಾಗಿದ್ದು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

IT, BT ಗಳಿಗಿಂತಲೂ ಆಡುಕುರಿಗಳೆಂಬ ATM ಗಳು…

0

ಉಜ್ಜಜ್ಜಿ ರಾಜಣ್ಣ


ತುಮಕೂರು: ಕಾಯೋರು, ಕೊಯ್ದುಕೊಡೋರು ಮತ್ತು ಬೇಯಿಸೋರು ಇಂಗಡಿಸಿ ಮಾಡಬೇಕಾದ ಜವಾಬ್ದಾರಿ ಕೆಲಸಗಳೇ ಒಂದೊಂದು ಥರನಾಗಿರುತ್ತುವೆ.

ಉಗಾದಿ ಬೇರೆ ಈಗ ಬಂದಿದೆ. “ಕರಿ ತುಂಡು ತಿಂದು ಕುರಿ ಪಿಸುಗೆ ಹೂವು ಉಗ್ಗಿ” ಹೊಸ ದಿನ್ದು ಚಂದ್ರುನ್ನ ನೋಡೋದು. ದೇವ್ರು ಮಾಡದಂತೂವೆ ಬಿಡಿ ಕ್ವರ ತುಳುಕಂಡು ಬಸಿಲಲ್ಲಿ ತಿರುಗಾಡಿಕೊಂಡು. ಹೊಸ ದಿನ ಇನ್ನೇನು ಹತ್ರು ಬೀಳಾ ಬಂದಿದೆ. ಹೋದು ತಿಂಗಳಿನಿಂದಲೇ ಉಗಾದಿ ಹಬ್ಬದ ವಾರದ ಸಂತೆಗಳು ಮೇಲಿಂದ ಮೇಲೆ ವಾರಕ್ಕೊಂದಂದರಂತೆ ನಡೆಯುತ್ತಿವೆ.

ಉಗಾದಿ ಹಬ್ಬದ ಒಳಗೊಂದು ತಗಾದಿ ವರ್ಸತಡ್ಕು. ಮಳ್ಕ, ಪಟ್ಲಿ, ಹಲ್ಲಾಗಿರೋವು, ಎಳ್ಕಾಗಿರೋವು, ಬಲಿಕೆ ಆದಾವು, ದೇವ್ರುಗೆ ಬಿಟ್ಟಾವು, ಸಂತೆ ಮೇಲೆ ತಂದು ಕೊಯ್ದು ಹರಕೆ ತೀರುಸುವವು, ಹಿಂಡೊಳಿಗೆ ಮೇದಾವು, ಮನೇಕಡೆಗೇ ಮೇಯ್ಸಕೊಂಡು ಇರೋವು, ಬೀಜ್ದವು, ಬೀಜ ಕೀಳ್ಸಕೊಂಡೋವು, ಕವದಾರಿಗುಳು, ಗೊಡ್ಡುಕುರಿಗುಳು, ಹೂಪುಗುಳು ಹೀಗೆ; ಉಗಾದಿಗೆ ಮಾರನಾಮಿ ಮಾರಿಹಬ್ಬುಕ್ಕೆ ಕೊಯ್ಯುವ ಆಡುಕುರಿಗಳೆಲ್ಲಾ ಒಳ್ಳೊಳ್ಳೆ ‘ಖಷಿ’ಯಾದಾ ಉತ್ಪಾದನೆಗಳು.

ಉಗಾದಿಗೆ ಅವುಗಳೆಲ್ಲವೂ ಗೂಡು, ರೊಪ್ಪ, ಮನೆ, ಅಂಗಳಗಳಲ್ಲೆಲ್ಲಾನೂವೆ ಕಾಣುತ್ತಿವೆ. ಅಂತಹ ದಿಂಡಾದ ನಡು ಪಸಿಮೆಯಾದ ಕುರಿಗಳು ಹೊಟ್ಟೇಲಿ ಹುಟ್ಟಿದ ಬನಿಯಾದ ಮರಿಗಳನ್ನೇ ತಂದು ಕುಯ್ಯೋದು.

ಉಗಾದಿ ಹಬ್ಬದ ಸಂದರ್ಭದಲ್ಲಿ ಬೇಳೆಗಿಂತವಾ ಬಾಡಿಂದೇ ಬಹಳ. ಬೇಳೆ ಯಂಗೋ ಬೆಂದು ಬಿಟ್ಟಾವು, ಬಾಡು ಬೇಯಾಕೋಕೆ ಒಳಕೆ ಸೌದೇ ಬೇಕು ಆ ಮೇಲೆ ಸಾರು ಕುದಿ ಹತ್ತಲು ಎಳುರಿ ಇರಬೇಕು.

ಬಾಡು ಮುಗಿಯೋತನುಕವಾ ಒಲೆ ಒಳುಗೆ ಸಾದಾ ದಪ್ಪ ಕೆಂಡ ಇರುಬೇಕು, ಬೆಂದು ಬಾಡು ಕೆಂಡುದು ಪರಿಮಳದಲ್ಲೇ ಕುದಿಹತ್ತಿದುರೆ ಮಾಂಸದ ಸಾರು ಬಹಳ ರುಚಿಕಟ್ಟು‌ ಅಂತಾರೆ. ಕರುಗುದಾಗೆ ನೆಣ್ದು ತುಪ್ಪಾ ಕಾಯಿಸಲು ಗಟ್ಟಿ ಸೌದೆ ಕೆಂಡಿದ್ರೆ ಚೆಂದ ಒಳ್ಳೆಯದು ಅಂತುಲೂವೆ.

ನೆಣ್ದು ತುಪ್ಪುಕ್ಕೆ ಮಾರು ಹೋಗಂಗೆ ಮಾಡಿ ತಾನೆ ಚಿತ್ತಯ್ಯ ಆರುವ್ರು ಮಾಳಮ್ಮುನ್ನ ಮದಿವಾದುದ್ದು. ಉಗಾದಿ ವರ್ಸತಡುಕು ಮುಗುದು ಮೂರ್ನಾಕು ದಿನ ಬಾಡಿನು ಸ್ವಾರೆ ಅಥವಾ ತಪ್ಪಲೆ ಒಲೆ ಗದ್ದಿಗೆ ಬಿಟ್ಟು ಇಳಿಲಾರುದು.

ಉಗಾದಿ ಕಾಲ್ದಾಗೆ ನಾಡಿನಾದ್ಯಂತ ನಡಿಯೋ ಜಾನುವಾರು ಸಂತೆಗಳೆಲ್ಲಾವೂ ವರ್ಸತಡುಕಿನು ಸಂತೆಗಳೆ. ಮಾರನಾಮಿ ಕಾಲ್ದಾಗುಲೂವೆ ನಡಿಯೋ ಜಾನುವಾರುಗಳ ಸಂತೆಗಳನ್ನೂವೆ ಹಿರಿಯರ ಹಬ್ಬ ಸಂತೆಗಳೆಂತಲೇ ಕರೆಯಲಾಗುತ್ತದೆ.

ಬೆಳೆ ಒಡೆ ನೂಕುವ ಕಾಲ ಮತ್ತು ಕೊಯ್ಲೋತ್ತರ ಖೂಳೆ ಕಾಲದಲ್ಲೂ ನಡೆಯುವ ಜಾನುವಾರುಗಳ ಸಂತೆಗಳು ಮಾರಿ ಹಬ್ಬದ ಸಂತೆಗಳು. ಬಾಡಂತೂವೆ ಒಲೆಹಗ್ಗ. ಒಲೆ ಉರಿಯೋದು; ಬಾಡು ಬೇಯೋದು, ವಾರಾನುಗಟ್ಟಲೆ‌ ಮುಂದುವರಿದಿರುತ್ತೆ.

ಒಲೆ ಕುಪ್ಪೆ ಮೇಲೆ ಬೇಯೋ ಬಾಡಿನ ಜೊತೆಜೊತೆಗೇ ಒಲೆ ಮೇಲಿನ ಜಂತಿಗೊ, ಜವಿಗೋ, ತೀರಿಗೋ, ದಬ್ಬಿಗೋ ನೇತು ಹಾಕಿದ ತೊಡೆ ಬಾಡಿಗೆ ಉರಿಒಡಿ ರಾಸಿ ಸದಾ ಕಾವತ್ತುತ್ತಿರುತ್ತದೆ, ಹಿಂದಾಗಿ ಹಬ್ಬಕ್ಕೆ ತಡವಾಗಿ ನಿಧಾನವಾಗಿ ಬರೋರಿಗೆ.

“ಬಡುಗುಲು ಸೀಮೆಯ ಬಾಡು ಅಡುವಾಗದು ಚೆಂದ, ತೆಂಕಲು ಸೀಮೆಯ ಬಾಡು ರುಚಿಯಾಗದು ಚೆಂದ”. ಇದೂ! ಅಂದರೆ, ನಾನು ಮದುವೆ ಆಗಿದ್ದು; ತೆಂಕುಲು ಸೀಮೆ ಹೆಣ್ಣು.

ಅದೂವೆ ಹೊತ್ಕಂಬಂದು ಮದುವಾದೆ. ಹೆಣ್ಣು ಹೊತ್ಕಂಬರೋಕೋದ ದಿನ ಹೆಣ್ಣಿನ ಚಿಕ್ಕಪ್ಪ ಕೋಳಿ ಮರಿಯಣ್ಣ ಮತ್ತು ಅವರ ಗೆಳೆಯ ಗಿರಿತಿಮ್ಮಾವ ಬ್ಯಾಲಕೆರಿ ಗೇಟಾಗೆ ಬಸ್ ಹತ್ತಿದುರು.

ಅದು ಸಾಮಾನ್ಯವಾಗಿ ಚನ್ನಬಸವೇಶ್ವರ ಬಸ್ಸೋ, ಸುಮಲತ ಬಸ್ಸೋ ಇರಬಹುದು. ಹಿಂದಿನ ಸೀಟ್ ನಲ್ಲಿ ಕೂತಿದ್ದ ನಮ್ಮುನ್ನ , ನೋಡಿ ಗಿರಿತಿಮ್ಮಾವ; ಇವ್ಯಾಕ ಬಿದ್ದುವೋ ಮರಿಯಣ್ಣ ತೆಂಕಲು ಸೀಮೇವು ಅಡವಾದ ಬಾಡಿನವಲ್ಲ, ಸಣ್ಣ ಮಳ್ಳ ತುಳುದಾವು, ಸೀರಿದುರೆ ಸೀರಣುಗೆ ಬಾಯಿಗೆ ಸಿಗದೋವು ನಮ್ಮೆಣ್ಣಿಗೆ ಲಗತ್ತಾದವೇನಲ್ಲ ಬುಡು ಮರಿಯಣ್ಣ ಅಂಥವಾ ಮಾತನಾಡೋದು ಗಳಿಮ್ಖಯಾ ಸಣ್ಣುಗು ಕೇಳಿದಂಗಾಗುದು.

ಆದ್ರೂವೆ; ಇವೇನು ನೆಲ ನೆಡದಾವಲ್ಲ ಹೆಣ್ಣು ಹೊತ್ಕಂದು ಹೋಗುತ್ವ ಅದ್ಕಂದು ಸುಮ್ಮನಾಗದ್ರೊಳಿಗೆ ನಾವೂ ಅವ್ರು ಜೊತೆಯಲ್ಲಿ ಬಡಗುಲು ಸೀಮೆ ಬೆಡಗಿನು ಭೂಮಿ ಉಡುವಳ್ಳಿ ಕೆರೆ ದೊಡ್ಡಳ್ಳದ ಸಾಲು ತಟ್ಟಿಕಾಯಿ ಉಗುಣಿಬಳ್ಳಿ ದಿಬ್ಬದ ಮೂಲೆ ಮಖ್ದ ತೆಂಕಡಿ ಮೂಲೆಗಾದು ಹಿರಿಯೂರು ತಾಲ್ಲೂಕಿನ ಮಾರಿಕಣುವೆ ಕಡೆ ಹೋಗಿರೊ‌ ಬ್ಯಾಟೆ ಮರದ ಹಟ್ಟಿ ಗೇಟಲ್ಲಿ ಬಸುರಾಜ ನಾನು ಬಸ್ ಇಳುದು ನಿಲ್ದಾಣದಿಂದ ಹಟ್ಟಿ ಕಡೆ ನಡುದುರೆ, ಮುಂದುಕು ಅಲ್ಲೇ ಹಾದಿಗುಂಟ ಹೋದರೆ ಚಿತ್ರದೇವರಹಟ್ಟಿ. ಅದಕೂ ಮುಂದೆ ಹೋದರೆ ಕರಿಯಾಲ್ದ ತೊರಿಗೋಗೊ ತಿರುವಲ್ಲೇ ಬಾಳೆಗೊಂದಿ ಹಳ್ಳ.

ಅವೆಲ್ಲವೂ ನೆನಪಿಗಾಗಿ ಮನಸು ಮುತುಗುದು ಹೂವಾಗಿ ನನ್ನ ಮದುವೆ ವಿಚಾರ ಮರೆತು, ದುಮ್ಮೇನಳ್ಳಿ ಮಾಳಮ್ಮ ಮತ್ತು ಚಿತ್ರ ದೇವರ ಹಟ್ಟಿ ಚಿತ್ತಯ್ಯನು ಮದುವೆ ಕಣ್ಮಂದೆ. ಇರಲಿ, ಬಡುಗುಲು ಸೀಮೆ ಕುರಿ ನೆಲ ನೆಡದೋವು ಕಾಡು ಮೇದು ಕಣುವೆ ಕಲ್ಲು ತುಳುದು ಬೇಳದೋವು. ನಮಗೆ ತೆಂಕಲು ಸೀಮೆ ಬಿಳಿನೆಲ ಸಣ್ಣ ಮಳ್ಳು ನುಚ್ಚು ಕಲ್ಲು ನುಣ್ಣನೆಯ ಮಣ್ಣು ತುಳುದು ಮೇದಾವು ಅಂಬೋದು ಗಿರಿತಿಮ್ಮಾವುನು ಮಾತು.

ಭಾರತೀಯರಾದ ನಮುಗೆ ಬಾಡು ಬಿಟ್ಟು ಮಾತಾಡಾಕೆ ಬೇರೆ ಏನು ತಾನೆ ಐತೆ ಹೇಳಿ. ಬೆಳಿಯೋದು ಉಣ್ಣೋದು, ಉಡೋದು, ತಿನ್ನೋದು, ಕೊಡೋದು, ಕಟ್ಡೋದು, ಮಾಡೋದು, ತೀರುಸೋದು, ಮಾರೋದು ಎಲ್ಲಾದೂ ಬಾಡು ಬೆಳೆದಿದ್ದುದುದರಿಂದಲೇ ಬಂದದ್ದು ಭಾರತೀಯರಾದ ನಮ್ದು ನಡುದಿದ್ದೇ ಹೀಗೆ.

ಬಾಡು ಹೇರಳವಾಗಿ ಬೆಳಿಯೋ ಭಾರತೀಯ ಬೇಸಾಯ ಶಾಸ್ತ್ರ ಮತ್ತು ತತ್ತ್ವಶಾಸ್ತ್ರದಲ್ಲಿ ಹಾಗು ಭಾರತೀಯ ಆಧ್ಯಾತ್ಮಿಕ ತಾತ್ವಿಕ ನೆಲೆಗಳಲ್ಲಿ ಜಗತ್ತು, ಅಸ್ತಿತ್ವ, ಜೀವಾತ್ಮ, ಮೋಕ್ಷ, ಜೀವಸತ್ವ ಎಲ್ಲಾನೂ ಬಾಡೆಯಾ. ಕಂಡದ ವನವಾಗಿ ಬೆಳೆದ ಅಖಂಡುವಾದ ಸಾಕುಪ್ರಾಣಿಗಳ ಅಂಗಾಂಗಗಳನ್ನು ಖಾದ್ಯಗಳಿಂದ ಎಡೆ ಬಿಡಾರ ಮಾಡಿ ತಾನೆ ಭಾರತೀಯರು ಇಂದಿಗೂ ಹಿರಿಯರ ಹಬ್ಬಗಳನ್ನು ನಡೆಸುವುದು.

ಮರಣಾ ನಂತರದಲ್ಲಿ ಭಾರತೀಯ ಸ್ವರ್ಗಸ್ಥನಾಗಲು ಬಾಡು ಬಳಸಿ ನೆಡೆಸಿದ ಭಾತೀಯ ಪೌರೋಹಿತ್ಯವಂತೂ ಬಾಡು ಉಣ್ಣುವ ಜಗತ್ತಿನ ರಾಷ್ಟ್ರಗಳೇ ಕೊಂಡಾಡುವಂತಹದ್ದು. ಆಗಾದರೆ ಅಪಾಟಿ ಬಾಡು ಬೆಳೆದ ಭಾರತ ಯಾಕಾದರೂ ಬಡವಾಯಿತು.

ಅರ್ಥ ಮಾಡಿಕೊಳ್ಳಲು ತೀರಾ ತಡವಾಗಿದೆ. ಭಾರತದ ಆರ್ಥಿಕ ತಜ್ಞರು ಪಶುಪಾಲನಾ ಸಮುದಾಯಗಳ ಆರ್ಥಿಕ ವ್ಯವಸ್ಥೆಯನ್ನು ಗಡೆಗಣ್ಣಿನಿಂದ ನೋಡುತಿದ್ದಾರೆ. ಭಾರತದ ಅರ್ಥ ವ್ಯವಸ್ಥೆಯನ್ನು ಅನಾದಿಕಾಲದಿಂದಲೂ IT, BT ಗಳಿಗಿಂತಲೂ ಆಡುಕುರಿಗಳೆಂಬ ATM ಗಳು ಇಂದಿಗೂ ಸಲಹುತ್ತಿವೆ. ಭಾರತದ ಹಳ್ಳಿಗಳಲ್ಲಿ ಕಂಪ್ಯೂಟರ್ ರೂಂಗಳಿಗೆ ಬದಲಾಗಿ ಕುರಿ ಗೂಡುಗಳು ಇರುವುದನ್ನು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರ ಅರ್ಥ ಮಾಡಿಕೊಳ್ಳಲು ಇನ್ನೂ ಎಷ್ಟೋ ವರ್ಷಗಳು ಬೇಕಾಗಬಹುದೇನೋ.

ಕೊಟ್ಟಿಗೆ, ಗ್ವಾಂದಿಗೆ, ತಿಪ್ಪೆಗಳು ಪುನರುತ್ಥಾನ ಕಾಣಬೇಕಾದ ಇಂಡಿಯಾದಲ್ಲಿ Fertilizer company, Seed company, Pesticides company ಗಳು ಬೆಳೆದವು. ಪರಿಣಾಮ, ಇವುಗಳನ್ನು ಬೆಳಸಿದ ಸರ್ಕಾರಗಳೇ ಕೊಟ್ಟಿಗೆ ಗೊಬ್ಬರ, ನಾಟಿ ಬೀಜ, ಸಿರಿ ಧಾನ್ಯ ಬಳಸಿ ಮತ್ತು ಬೆಳಸಿ ಎಂದು ವಿಶ್ವವಿದ್ಯಾಲಯಗಳಿಂದ ಹೇಳಿಸುತ್ತಿವೆ. ಕೊಟ್ಟಿಗೆ ಗೊಬ್ಬರ, ನಾಟಿ ತಳಿ ಬೀಜ, ಸಿರಿ ಧಾನ್ಯಗಳ ಬಗ್ಗೆ ಹೆಚ್ಚು ಗಮನ ಸರ್ಕಾವೇ ನೀಡಿದ ಮೇಲೆ ಇವುಗಳನ್ನು ಬೆಳೆಯಲು ಜಾನುವಾರುಗಳು ಅವುಗಳ ಮೇವು ನೀರಿಗಾಗಿ ಹುಲ್ಲುಗಾವಲುಗಳು ಉಳಿಯ ಬೇಕಾದುದು ಅತ್ಯವಶ್ಯಕ.

ಗಂಗಾನದಿ ತೀರದಿಂದ ಹಿಡಿದು ನಮ್ಮೂರು ಕೆಂಗುದುರೆ ಹಳ್ಳದವರೆವಿಗೂ ಆಡುಕುರಿ ದನದ ರೊಪ್ಪಗಳನ್ನು ಕಟ್ಟಿ ಬೆಳೆದುದ್ದು ಬರೀ ಬಾಡು. ಹಿಂದೆಲ್ಲಾ ಅಳೋಮಕ್ಕಳಿಗೆ ಹಾಲೊಯ್ಯುರು. ಅಂತಹ ಕಾಲದಲ್ಲೇ ಜಾನುವಾರು ಸಾಕಾಣಿಕೆ ಭಾರತದಲ್ಲಿ ಬಹಳವಾಗಿತ್ತು. ಅಂದರೆ, ಅವು ಕರೆದ ಹಾಲನ್ನುನ್ನೆಲ್ಲಾ ಅಳಾ ಮಕ್ಕಳೇ ಕುಡುದುವಾ. ಆನಾಡಿ ಜಾನುವಾರುಗಳನ್ನೆಲ್ಲಾ ಹಾಲು ಮಾತ್ರ ಕರಕೊಂಡು ಅವುಗಳನ್ನು ಕಾಡಿಗೆ ಹೊಡ್ದುರಾ. No,

ಕಾಸಿ ಕರೇವು ಮಾಡಿದ್ರು. ಕೊಯ್ದು ಒಣಗಿಸಿ ಕೊರಬಾಡು ಮಾಡಿ ಕಾಳ್ಸಿಗೆ, ಕೊಮ್ಮಗಳಿಗೆ ಒಣ ದಿನಸಿ ದವಸ ಮಾಡಿ ಕಾಳು ಕಡ್ಡಿತರ ಒಣ ಪಡಿ ಮಾಡಿ ಒಣ ಬಾಡನ್ನು ಸಂಗ್ರಹಿಸಿ ಇಟ್ಟುಕೊಂಡರು. ವರ್ಷ ಒಂಭತ್ತು ಕಾಲ ಜಮೀನ್ದಾರರ ಹೊಲ, ತೋಟ, ಗದ್ದೆಗಳಲ್ಲಿ, ಮನೆಯಲ್ಲಿ ದುಡದ್ರುವೇ ಆರು ತಿಂಗಳ ಅಂಬಲಿಗೆ ಸಾಕಾಗದಂತಹ ಕಾಲದಲ್ಲೂ ಕೊರಬಾಡು ಹಲವಾರು ಸಮುದಾಯಗಳನ್ನು ಆಹಾರವಾಗಿ ಅವರ ಹಸಿವಿಗೆ ಒದಗಿದೆ.

ಭಾರತದ ಬಡತನಕ್ಕೆ ಬಾಡೇ ಅನ್ನದ ಬಲ. ಯಾತರವೂ ಕಾಳಿಲ್ಲ, ಈ ಹೊತ್ತು ಸಾರಿಗೆ ವ್ಯವಸ್ಥೆ ಏನೊ? ಎಂದು ಅಡಿಗೆ ಹೊತ್ತಿಗೆ ಯಾರಾದ್ರು ಗುನುಗಿದ್ರೆ ತಗ ಒಂದು ಬೊಗಸೆ ಕೊರಬಾಡು ಒಣವುರೆ ಕಾಳೋ? ಇನ್ಯಾತರವ್ರೋ? ಉಂಡುಗಾಳು ಜತೆಗೆ ಬೇಯಾಕು ಅಂತವಾ ಕೊಡೋರು.‌ ಇವತ್ತು ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಕರೇವು ಮತ್ತು ಕೊರಬಾಡು ಸಂಸ್ಕರಣಾ ಸಾಮರ್ಥ್ಯ ವಿಧಾನಗಳು ಕ್ವಾಣೆ ಸಾಲಿನಲ್ಲಿ ನಿಂತಿರುತಿದ್ದ ಕರಭಾನ್ದು ಸಾಲಿನಿಂದಲೇ ಕಾಣೆಯಾಗೆವೆ.

ಆಧುನಿಕ ಭಾರತದಲ್ಲಿ ಬಾರೀ ನೀರಾವರಿ ಯೋಜನೆಗಳು ಜಾರಿಗೆ ಬಂದವು. ಕಬ್ಬು, ಕಾಯಿ, ಕೊಬರಿ, ಭತ್ತದ ಬಯಲು ನಿರ್ಮಾಣವಾದವು. ಆದರೆ ಭಾರತೀಯರ ಪ್ರಧಾನ ಬೆಳೆ ಪಶುಪಾಲನೆಯನ್ನು ಬೆಳೆಯುವ ಬಯಲುಗಳು ಇಡೀ ಭಾರತದಲ್ಲಿ ಎಲ್ಲಿ ನೋಡಿದರೂ ಕಾಣಸಿಗಲಾರವು. ಬ್ರಿಟಿಷ್ ಸರ್ಕಾರ ಇದ್ದಾಗ ಪಶುಪಾಲನಾ ಸಮುದಾಯಗಳ ಜಾನುವಾರು ಸಂಪತ್ತಿನ ಮೇಲೆ, ಅವುಗಳ ಮೇವು ಮತ್ತು ನೀರಿನ ಪ್ರದೇಶದಲ್ಲಿ ಆಕ್ರಮಣಗಳಾಗಲಿಲ್ಲ . ಭಾತದ ಪಾಳೇಗಾರರು, ಮಾಂಡಲೀಕರು, ರಾಜರುಗಳ ಅಧೀನದಲ್ಲಿದ್ದ ಭಾಗಗಳಲ್ಲಿ ಪ್ರಭತ್ವ ಪಶುಪಾಲನಾ ಜನಾಂಗಗಳನ್ನು ಅವನತಿಗೆ ತಳ್ಳದಂತಹ ಸ್ಥಿತಿ ಇತ್ತು.‌‌

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶದ ಪ್ರಧಾನ ಆಹಾರವನ್ನು ಕದ್ದು ಮುಚ್ಚಿ ತಿನ್ನುವಂತಾಗಿದೆ. ಬ್ಯಾಂಕುಗಳ ಬೆಂಬಲವನ್ನು ಪಡೆಯದೆ ಬಹುಕಾಲದಿಂದಲೂ ಬೆಳೆದ ಆರ್ಥಿಕ ವ್ಯವಸ್ಥೆ. ಪಶುಪಾಲನೆಗೆ Special Economic development zone ಗಳಾಗಿದ್ದ ನದಿಯ ಬಯಲು ಪ್ರದೇಶದಲ್ಲಿ ಮತ್ತು ಹುಲ್ಲುಗಾವಲುಗಳನ್ನು ನಾಶಪಡಿಸುವುದೇ ಜಾನುವಾರು ಸಾಕಾಣಿಕೆದಾರರ ವಿರುದ್ಧದ ಮೊದಲ ಆಕ್ರಮಣಕಾರಿ ಬೆಳವಣಿಗೆಗಳು.‌

ದೇಶದ ಅಲೆಮಾರಿ ಅರೆ ಅಲೆಮಾರಿ ಬುಡಕಟ್ಟು ಜನಾಂಗದವರು ನದಿಗಳು ಹರಿಯು ಪ್ರದೇಶಗಳಿಗೆ ಆಡುಕುರಿ ಮೇವು ನೀರಿಗಾಗಿ ಹೋಗುವರು. ಹಾಗೆ ಪರಸ್ಥಳಗಳಿಗೆ ಹೋದವರು ಅನೇಕವೇಳೆ ಅಪಘಾತ ಮತ್ತು ಆಪತ್ತುಗಳಿಗೆ ಒಳಗಾಗುವರು. ಹತ್ತಿರದಲ್ಲೇ ಇದ್ದ ಅವರ ಹುಲ್ಲುಗಾವಲುಗಳನ್ನು ಸರ್ಕಾರ ಹಾಳು ಮಾಡಿದ್ದರಿಂದ ಅವರು ಬಹಳ ದೂರ ಹುಲ್ಲು ನೀರು ಹುಡುಕಲು ಆರಂಭಿಸಿದರು.

ಬೆಳೆದ ಬೆಳೆ ದನ ಕುರಿಗಳನ್ನು ಕದ್ದು ಮಾರುಕಟ್ಟೆಗೆ ತರುವಂತಾಗದೆ. ಮಾಂಸ ಮಾರುವವರನ್ನು ಹೊಡೆಯುವ ಮತ್ತು ಕೊಲ್ಲುವ ಹಾಗು ಬಂದಿಸಿ ಜೈಲಿನಲ್ಲಿಡುವ ಪರಂಪರೆಯನ್ನು ಭಾರತದ ಉದ್ದಗಲಕ್ಕೂ ಬೆಳಸಿ ಪಶುಪಾಲನಾ ಸಮುದಾಯಗಳ ವೃತ್ತಿಪರತೆಯನ್ನು ಅವಮಾನಿಸಲಾಯಿತು ಹಾಗು ಹಾಳುಮಾಡಲಾಯಿತು.

ಆಧುನಿಕ ಭಾರತದ ಚರಿತ್ರೆಯಲ್ಲಿ ಮಾಂಸಾಹಾರಿಗಳ ವಿರುದ್ಧ ಕಂಡರಿಯದಂತಹ ಕ್ರೌರ್ಯ ಸ್ವತಂತ್ರವಾದ ನಂತರದಲ್ಲಿ ಬೆಳೆದುದ್ದಾದರೂ ಎಕೆ ಎಂಬುದನ್ನು ದೇಶದ ಪಶುಪಾಲನಾ ಸಮುದಾಯಗಳು ಮತ್ತು ಆ ಮೂಲಗಳಿಂದ ಆಯ್ಕೆ ಆದವರೂ ಇಂದಿಗೂ ಸರಿಯಾದ ರೀತಿಯಲ್ಲಿ ಹೇಳುವುದಾದರೆ ಇದನ್ನು ಅರ್ಥ ಮಾಡಿಕೊಳ್ಳಲು ಆಗಿರುವುದಿಲ್ಲ.

ಇದರಿಂದಾಗಿ ದೇಶದ ಜಾನುವಾರು ಸಾಕಾಣಿಕೆದಾರರ ಅರ್ಥಶಾಸ್ತ್ರ ಬುಡಮೇಲಾಗಿದೆ. ವೃತ್ತಿ ಜೀವನವನ್ನೇ ತೊರೆಯುತಿದ್ದಾರೆ. ಮಾಂಸಾಹಾರದ ರಾಜಕೀಯ ಮಾಡಿದ ಪಕ್ಷಗಳು ಗೆಲ್ಲುತ್ತವೆ. ಇದು ಇಡೀ ಪಶುಪಾಲನಾ ಸಮುದಾಯಗಳ ಸೋಲು.

ಅಪಾರವಾದ ಆದಾಯವನ್ನು ಹೊಂದಿರುವ ಉದ್ಯೋಗ ವಲಯವನ್ನು ನಾಶಪಡಿಸುವ ಸಂಚಯಗಳು. ಪಶುಪಾಲನಾ ಪ್ರದೇಶಗಳ ಮೇಲೆ ಆಕ್ರಮಣಗಳು ಸ್ವತಂತ್ರ ನಂತರದ ಭಾರತದಲ್ಲಿ ನಡೆಯುತ್ತಿವೆ.

ದಿಬ್ಬದ ಮೇಲೆ ಮೇಲಾಗಿ ಬೆಳಿಯೋದು ಕಾಡು, ತಗ್ಗು ತಗ್ಗಾದ ಇಳಿಜಾರು ಪ್ರದೇಶಗಳಲ್ಲಿ ಹರಿಯೋದು ನೀರು. ತೊಡೆ ಮರೆಯಲ್ಲಿ ಸಂಸಾರ ಬೆಳದರೆ; ಎಲೆ ಮರೆಯಲ್ಲಿ ಆಡುಕುರಿ ಎತ್ತುಎಮ್ಮೆ ಬೆಳಿಯೋವು. ಹಿಂದೆಲ್ಲಾ ಮಾಂಸಾಹಾರ ಬೆಳೆಯುವವರ ವನಸಂಪತ್ತು ಹುಲ್ಲುಗಾವಲುಗಳು ದನಕರುಗಳಿಗೆ ದೇಶದುದ್ದಕ್ಕೂ ಇದ್ದವು.

ಅನ್ನ ತಿಂದು ಅರಿವೆ ಹೊದಿಯೊ ಪಶುಪಾಲಕರಿಗೆ ಇದು ನಿಸರ್ಗದ ಅರಿವು ವರ. ಆದರೆ, ಆಡಳಿತವನ್ನು ಹಿಡಿಯೋವು, ಆಳೋವು ಇದನ್ನು ಅಪಾರ್ಥ ಮಾಡಿಕೊಂಡುವು. ಮಡ್ದುನೀರು, ಅಡವಿ ಹುಲ್ಲು ಜಾನುವಾರುಗಳ ಬೆಳೆಗಾರರಿಗೆ ಸಿಗದಂತೆ ಇಂದಿಗೂ ಮೋಸ ಮಾಡುತ್ತಿವೆ.

ಮಾಂಸಾಹಾರವನ್ನು ಗುರಿಯಾಗಿ ಇರಿಸಿಕೊಂಡು ನಡೆಯುತ್ತಿರುವ ಭಾರತದ ರಾಜಕಾರಣ ಇಡೀ ದೇಶದಲ್ಲಿ ಪಶುಪಾಲನಾ ಸಮುದಾಯಗಳ ಕಸುಬು, ಕೃಷಿ ಮತ್ತು ಮಾರುಕಟ್ಟೆಗಳನ್ನು ಹಾಳುಮಾಡುತ್ತಿದೆ.

ಹೆಸರಿಗಾಗಿ ಅಧ್ಯಕ್ಷೆಯ ಎಡವಟ್ಟು

ಪಾವಗಡ: ಶಿಲಾನ್ಯಾಸದಲ್ಲಿ ಹೆಸರು ಹಾಕಿಸಿಕೊಳ್ಳುವ ತರಾತುರಿಯಲ್ಲಿ ತಾಲ್ಲೂಕಿನ ಕಣಿವೇನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯ ಭವನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರೆ ಉದ್ಘಾಟಿಸಿದ್ದಾರೆ.

ಸಮುದಾಯ ಭವನದ ಉದ್ಘಾಟನೆಗೆ ಲೋಕಸಭೆ ಸದಸ್ಯ ಎ.ನಾರಾಯಣಸ್ವಾಮಿ ಅವರೊಬ್ಬರನ್ನು ಅಧ್ಯಕ್ಷೆ ಪತಿ ಆಹ್ವಾನಿಸಿದ್ದರು. ಗ್ರಾಮದಲ್ಲಿನ ಗೊಂದಲದ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಸಂಸದರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.  ಉದ್ಘಾಟನೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಜನಾಂಗದ ಸ್ವಾಮೀಜಿ, ಮುಖಂಡರನ್ನು ಕರೆಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಅವಕಾಶ ಕೊಡಬೇಕು ಎಂದು ಗ್ರಾಮಸ್ಥರು ಸಂಸದರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಸದರು ಸಮ್ಮತಿ ಸೂಚಿಸಿ ಎಲ್ಲರೂ ಒಪ್ಪಿ ಆಹ್ವಾನ ನೀಡಿದಾಗ ಮತ್ತೊಮ್ಮೆ ಬಂದು ಉದ್ಘಾಟನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಸಮುದಾಯದವರಿಗೆ ಮಾಹಿತಿ ನೀಡದೆ ಏಕಾ ಏಕಿ ಉದ್ಘಾಟನಾ ಕಾರ್ಯಕ್ರಮ ನಿಗದಿ ಮಾಡಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತಿಯನ್ನು ತರಾಟೆಗೆ ತೆಗೆದುಕೊಂಡು ಸ್ಥಳದಿಂದ ನಿರ್ಗಮಿಸಿದ್ದಾರೆ.

ಲೋಕ ಸಭೆ ಸದಸ್ಯರು ಗ್ರಾಮದಿಂದ ಹೊರಟ ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರೆ  ಸಮುದಾಯ ಭವನದ ಉದ್ಘಾಟನೆ ಮಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಆಕೆಯ ಪತಿ ಗ್ರಾಮಸ್ಥರನ್ನು ನಿಂದಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ಸಮುದಾಯ ಭವನದ ಶಿಲಾ ಫಲಕದಲ್ಲಿ ಹೆಸರು ಹಾಕಿಸಲು ತರಾತುರಿಯಲ್ಲಿ ಕಾರ್ಯಕ್ರಮ ನಿಗದಿಗೊಳಿಸಲಾಗಿದೆ. ಗ್ರಾಮದಲ್ಲಿ ಅಧ್ಯಕ್ಷೆಯನ್ನು ಹೊರತುಪಡಿಸಿ 5 ಮಂದಿ ಸದಸ್ಯರಿದ್ದು ಅವರಿಗೂ ಮಾಹಿತಿ ನೀಡಿಲ್ಲ. ಅಧಿಕಾರಿಗಳು ಜನಾಂಗದ ಮುಖಂಡರು ಯಾರಿಗೂ ಮಾಹಿತಿ ನೀಡದೆ ತ್ವರಿತವಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದು   ಗ್ರಾಮ ಪಂಚಾಯಿತಿ ಸದಸ್ಯರು  ಆರೋಪಿಸಿದರು.

ಮತ ಹಾಕಿ ಗೆಲ್ಲಿಸಿದ ಜನತೆ ಬಗ್ಗೆ ಗೌರವವಿಲ್ಲ.   ಕಾರ್ಯಕ್ರಮದ ಬಗ್ಗೆ ಸೌಜನ್ಯಕ್ಕೂ ಮಾಹಿತಿ ನೀಡಿಲ್ಲ. ಮಾಹಿತಿ ನೀಡದೆ ಸ್ವಾರ್ಥಕ್ಕಾಗಿ ಕಾರ್ಯಕ್ರಮ ಮಾಡುತ್ತಿರುವ  ಬಗ್ಗೆ ಪ್ರಶ್ನಿಸಿದವರನ್ನು ಸಾರ್ವಜನಿಕವಾಗಿ ನಿಂದಿಸಲಾಗಿದೆ. ಶಿಷ್ಠಾಚಾರ ಉಲ್ಲಂಘಿಸಿ ಉದ್ಘಾಟನೆ ಮಾಡಿರುವ ಅಧ್ಯಕ್ಷೆ ಹಾಗೂ ಆಕೆಯ ಪತಿಯ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಮಲ್ಲಿಕಾರ್ಜುನ್, ರವಿ, ಅಶ್ವಥ್ ನಾರಾಯಣ, ಶಂಕರಪ್ಪ, ಅಂಜಿನಪ್ಪ, ಮಾರಪ್ಪ ನಾಯಕ, ರಮೇಶ್ ಆಗ್ರಹಿಸಿದ್ದಾರೆ.

ಇವೋ, ಬಾಯ್ಬಿಟ್ಟು‌ ತುಟಿ ಎರಡು ಮಾಡಿದ್ರೆ ಬಾಡನ್ನೇ ಕೇಳ್ತವೆ!

0

ಉಜ್ಜಜ್ಜಿ ರಾಜಣ್ಣ


ಮಾಂಸ ಅಥವಾ ಬಾಡು ಬಾಯಿಕೆಟ್ಟರೆ ಬೊಗಸಿಕೊಂಡು ತಿನ್ನುವುದು ಭಾರತೀಯರಿಗೆ ರೂಡಿ.

ಕಾಯಿಲೆಯಾದರೆ,‌ತಿಂಗಳಾನುಗಟ್ಟಲೆ ಹಾಸಿಗೆ ಹಿಡಿದರೆ ಹೇಳಿ ಕಳಿಸುತ್ತಾರೆ ಬಂದು ನೋಡಿಕೊಂಡು ಹೋಗಿ ಎಂದು.‌

ಕೈಕಾಲುಗಳು ಆಡಲ್ಲ, ಆಗಲೇ ತಿರುಗಾಡಲ್ಲ, ಇನ್ನೇನು ಮಾತೇ ನಿಂತೋಗಿವೆ, ಮಾತು ತೊದಲುಟ್ಟಿವೆ, ಹೇಳಕಾಗಲ್ಲ ಅತ್ತಲರೇಯಾ, ಇತ್ತಲಗೇನು ಗಮನವೇ ಇಲ್ಲ, ಹೇಳಕಾಗಲ್ಲ ಯಾವುದುಕೂ ಇದ್ದಂಗೆಯಾ ಬಂದು ನೋಡ್ಕಂಡು ಹೋಗಿ ಎಂಬ ವರ್ತಮಾನ ಕಾಯಿಲೆ ಬಿದ್ದವರ ಕುರುತು ಬಂದಾಗಲೆಲ್ಲಾ , ಆಗಾದು ಹೋಗಾದು ಹೊಂಚಿಕೊಂಡು ಹಿಂದುಗುಟೆಯಾ ಯಾಟೆನೋ, ಹುಂಜುನ್ನೇ ಹಿಡಕಂಡು ಸಂಬಂಧಿಕರು ನೆಂಟರ ಮನೆ ಹಾದಿ ಹಿಡಿಯುತ್ತಿದ್ದರು.

ಹಾಕೊ ಪೈರು, ಬಿತ್ತೋ ಹದ ಇರಲಿ, ಹದ ಹಾರುತ್ತೆ ಬಿತ್ತನೆ ಹಿಂದಾಗುತ್ತೆ, ನಾಟಿ ಮಾಡೋದು ತಡವಾಗುತ್ತೆ ಎಂದು ಯಾವುದನ್ನೂ ಲೆಕ್ಕಿಸದೆ ಹೊರಟು ನಡೆಯುತಿದ್ದರು. ಹೋಗುಬೇಕು ಮೈ ತಿಕ್ಕಿ ಕಾಯಿಸಿ ನೀರೊಯ್ದು ಮಾಡಿ ಉಣ್ಣಾಕಿಕ್ಕಿ ಆನುಪಾನು ನೋಡಿ ಮಾತಾಡಿಸ್ಕಂದು ಹಿಂತಿರುಗುವುದು ಕಡ್ಡಾಯವಾದ ನಡೆ ಆಗಿತ್ತು.

ದೇಶದ ಊರು ದೇವರುಗಳು ಅವು ಬಿಡಿ ಸೀ ಊಟ ಸೀಪ್ರು ತಿಂದು ಬದುಕಿದವೇ ಅಲ್ಲ. ಇವೋ ಬಾಬಿಟ್ಟು‌ ತುಟಿ ಎರಡು ಮಾಡಿದ್ರುವೇ ಬಾಡನ್ನೇ ಕೇಳುತ್ತವೆ. ಇವು ಎರಡು ಕಾಲಿಂದು ಕೇಳೋದು ಅಪುರೂಪ.

ಗದಿಗೆ ಬಿಟ್ಟು ಮ್ಯಾಗೆ ಎದ್ದು ಆಚೆ ಹೊರಟರೆ ನಾಲ್ಕು ಕಾಲಿಂದೇ ಬೇಕು ಅಷ್ಟು ಬಾಯಿ ಕೆಟ್ಟವು ನಮ್ಮ ಕುಲ ದೈವಗಳು. ಅವು ಕೂತರೂ, ನಿಂತರೂ ಮರಿ ಕೇಳ್ತವೆ. ಕಷ್ಟ ಹೊಡ್ಕ ಎಂದರೆ ಮರಿ ಬಿಡು ನಿನ್ನ ಉದಿಯೊಳಿಗೆ ನನ್ನ ಅರಿಕೆ ಕುರಿ ಬೆಳಿಲಿ ಆಮೇಲೆ ಕಷ್ಡ ನೋಡಾನ ಅಂದು ಬಾಯಿ ಬಿಟ್ಟೇ ಕೇಳುವಂತಹ ದೇವರುಗಳು ದೇಶದ ಉದ್ದಗಲಕ್ಕೂ ಇವೆ.

ಒಲೆ ಕೊಯ್ದು ಗುಂಡು ಹೂಡಿ ಹೊಚ್ಚಿದು ಒಲೆ ಹಾರದಂಗೆ ಗುಡಿಗುಳು ಮುಂದೆ ನಿತ್ಯವೂ ಬಾಡು ಬೇಯುತ್ತಿರುತ್ತೆ. ಬಾರತೀಯರಿಗೆ ದೈವಾನುಗ್ರಹವಾಗುವುದೇ ಬಾಡಿನ ಮೂಲಕ. ಭಾರತೀಯರು ದೇವ್ರು ಮಾಡೋಕೆ ದೇಶದ ಆಡುಕುರಿ ಸಂತೆಗಳೇ ಸಾಲ್ದು. ಕುರಿಹಟ್ಡಿಲಿ ಬೆಳಿಯೋ ಆಡುಕುರಿ ಗಳೆಲ್ಲಾ ಅರಿಕೆಗೇ ಸಾಲ್ದು.

ತಿನ್ನುಣ್ಣೋ ಜಾತಿಗರೇ ಇರುವ ಭಾರತದಲ್ಲಿ ಮಾಂಸದ ತುಂಡುಗಳನ್ನು ಎಡೆ ಮಾಡದೆ ದೇವರ ಕಾರ್ಯಗಳು ಮುಗಿಯಲಾರವು.‌ ಗ್ರಾಮದೇವತೆ, ಹೊರಗಲಗುಡಿ, ಬೂತನಗುಡಿ, ಹಳ್ಳದ ಮಾಟಪ್ಪ, ಕೋಡಿ ಹಳ್ಳ, ಗಂಗಾ ಪೂಜೆ, ಹೊಲ್ದದೇವ್ರು, ದೆವ್ವನ್ನು ಹಿಡಿಯೋದು, ಮಾಟ್ಗ ಕೀಳೋದು ಅರಿಕೆ ತೀರುಸೋದು, ಮಂಡೆ ಕೊಡೋದು ಒಸಗೆ ಮಾಡೋದು, ಸೂತ್ಕ ಕಳಕೊಳೋದು, ತಿಥಿ, ಬೀಗರು ಊಟ, ಬೇಜಾರಾದಾಗಲೂ ಇಲ್ಲಿ ಬಾಡು ತಿನ್ನದೆಯಾ……

ಸಾಮಾನ್ಯವಾಗಿ ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಮಾಂಸಾಹಾರ ಹೊರತುಪಡಿಸಿ ಯಾವುವೂ ನಡೆಯಲಾರವು. ಆದರೆ ಇದಕ್ಕೆ ಪ್ರತಿಯಾಗಿ ವಿರುದ್ಧವಾದ ಆಹಾರ ರಾಜಕಾರಣ ನಡೆಯುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಪಶುಪಾಲನಾ ಸಮುದಾಯಗಳಿಗೆ ಹೊಡೆತ. ನಮ್ಮ ದೇಶದಲ್ಲಿ ನಮ್ಮ ಆಹಾರ ಪದ್ದತಿಯನ್ನು ಬಳಸಿಕೊಂಡು ಧಾರ್ಮಿಕ ಅಸಹಿಷ್ಣತೆ ಬೆಳೆಸುತ್ತಿರುವುದು ದುರಂತ.

ಒಂದು ಕಡೆ ಅಸಹಿಷ್ಣತೆ ಬೆಳೆಯುತ್ತಿದೆ ಇನ್ನೊಂದು ಕಡೆ ಎಲ್ಲಾ ಕಾರ್ಣೀಕಗಳಿಗೂ ಬೇಕಾದಷ್ಟು ಪ್ರಮಾಣದಲ್ಲಿ ಮಾಂಸಾಹಾರ ಬೆಳೆದು ಕೊಡುವವರ Economy ನಷ್ಟದಲ್ಲಿದೆ.

ರಾಗಿ ಮುದ್ದೆ ನಾಟಿ ಕೋಳಿ ಸಾರು ಉಂಡು ಲೋಕಸಭೆಗೆ ವಿಧಾನಸಭೆಗೆ ಹೋಗಿ ಜನಪ್ರಿಯ ರಾದವರು ರಾಗಿ ಮತ್ತು ನಾಟಿ ಕೋಳಿ ಮೌಲ್ಯವರ್ಧನೆ ಬಗ್ಗೆ ಎಂದೂ ಮಾತನಾಡುವ ಗೋಜಿಗೇ ಹೋಗಲಿಲ್ಲ.

ಊಟ ಮಾಡೋದು ರಾಗಿಮುದ್ದೆ ಮಾತಾಡೋದು ಕೊಬ್ಬರಿ, ಅಡಿಕೆ, ಕಬ್ಬು, ಭತ್ತ. ದಿನಾಲೂವೆ ಇವುರು ತಿನ್ನೋದೇನು ಮಾತಾಡೋದೇನು? ಮಾಂಸ ಬೇಯಿದಿದ್ದರೆ ದೇವರ ಕೆಲಸಗಳೇ ಕಳೆಗಟ್ಟಲ್ಲ. ದೇವಾಲಯ, ದೇವ್ರು ಮಾಡಿರೋ ಜಾಗಕ್ಕೆ ಹೋಗಿ ನೋಡಿದ್ರುರೆ ಚರ್ಮವಾ ನಾಯಿ, ನರಿ ಹದ್ದು, ಕಾಗೆ ಎಳ್ದಾಡ್ಕಂಡು ತಿನ್ನುತ್ತಿರುತ್ತವೆ.

ಕೋರಿ ಧ್ವಜ ಎತ್ತಿ ಕರುಗಲ್ಲಿಗೆ ಕ್ವಾಸೆ ಕೊಯ್ದು ಕಟ್ಟೀಮನಿಗಳ ದೇವರು ಮಾಡುವಂತಹ ಆಡುಕುರಿ ಗಾಯಿಗಳ ದೇಶ ನಮ್ದು.

ಜಗತ್ತಿನಲ್ಲಿ ಚರ್ಮೋದ್ಯಮವನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲು ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶ ಇದ್ದರೂ ಬಹುಪಯೋಗಿ ಚರ್ಮವನ್ನು ಬಿಸಾಡಲಾಗುತ್ತಿದೆ. ಪ್ರಧಾನ ಆಹಾರ ತಳಿ ಆಡು, ಕುರಿ, ಎಮ್ಮೆ, ದನ ದೇಶದ ಆಹಾರ ರಾಜಕಾರಣಕ್ಕೆ ಗುರಿಯಾಗಿ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿವೆ.


ಉಜ್ಜಜ್ಜಿ ರಾಜಣ್ಣ
Mobile: 9 4 4 8 7 4 7 3 6 0

ಮಾರ್ಚ್.15ರಿಂದ ಚಿಕ್ಕಬೀರನಕೆರೆ ಮಾಯಮ್ಮ ದೇವಿ ಜಾತ್ರೆ ಹಾಗೂ ಸ್ವರ್ಣ ಕಿರೀಟ ಸಮರ್ಪಣಾ ಮಹೋತ್ಸವ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಬೀರನಕೆರೆ ಗ್ರಾಮದೇವತೆ ಮಾಯಮ್ಮದೇವಿಯ ಜಾತ್ರೆ ಹಾಗೂ ದೇವಿಯವರಿಗೆ ಸ್ವರ್ಣ ಕಿರೀಟ ಧಾರಣೆ ಮಹೋತ್ಸವವು ಮಾ. 15 ರಿಂದ 17 ರವರೆಗೆ ನಡೆಯಲಿದೆಂದು ಮಾಯಮ್ಮದೇವಿ ಆಚರಣ ಸಮಿತಿಯ ಕುರಿಬಾಂಡ್ ಖ್ಯಾತಿ ರಂಗಸ್ವಾಮಿ ತಿಳಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಚಿಕ್ಕಬೀರನಕೆರೆ ಗ್ರಾಮ ದೇವತೆ ಒಕ್ಕಲಿನ 24 ಗ್ರಾಮಗಳು ಆಚರಿಸುವ ವಿಶೇಷ ಹಬ್ಬ ಇದಾಗಿದ್ದು ಮಾಯಮ್ಮದೇವಿಯವರ ಹಬ್ಬ ಮೂರು ದಿನಗಳ ಕಾಲ ಜರುಗಲಿದೆ. ಹಬ್ಬದ ಅಂಗವಾಗಿ ಆರತಿ ಉತ್ಸವ, ಉಯ್ಯಾಲೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ಜರುಗಲಿವೆ. ಇದೇ ವೇಳೆ ಚಿಕ್ಕಬೀರನಕೆರೆ ಗ್ರಾಮಸ್ಥರು, ಮಾಯಮ್ಮ ದೇವಿ ಗೆಳೆಯರ ಬಳಗ ಹಾಗೂ ಬುಡಕಟ್ಟಿನ ಭಕ್ತರುಗಳು ಹಬ್ಬದ ಅಂಗವಾಗಿ ಮಾಯಮ್ಮದೇವಿಯವರಿಗೆ ಸ್ವರ್ಣಕಿರೀಟ ಧಾರಣೆಯನ್ನು ಸಹ ನೆರವೇರಿಸಲಿದ್ದಾರೆ. ಹಬ್ಬ ಆಚರಣೆ ವೇಳೆ ವೀರಭದ್ರನ ಕುಣಿತ, ಚಿಟ್ಟಿಮೇಳ, ಮದ್ದುಗುಂಡಿನ ಪ್ರದರ್ಶನಗಳಂತಹ ವಿಭಿನ್ನ ಜಾನಪದ ಕಲೆಗಳ ವೈಭವ ಅನಾವರಣಗೊಳ್ಳಲಿದೆ. ಮಾಯಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ‘ಕೃಷ್ಣ ಸಂಧಾನ’ ಎಂಬ ಪೌರಾಣಿಕ ನಾಟಕವೂ ಸಹ ಪ್ರದರ್ಶನಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.

Corona: ಶಾಲಾ-ಕಾಲೇಜು, ಥಿಯೇಟರ್‌ ಬಂದ್: BSY

ಬೆಂಗಳೂರು : ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ನಾಳೆಯಿಂದ ಮಾಲ್, ಥಿಯಟರ್, ಕಾಲೇಜುಗಳು ಬಂದ್ ಮಾಡುವಂತೆ ಖಡಕ್ ಆದೇಶ ಹೊರಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ನಾಳೆಯಿಂದ ಒಂದು ವಾರಗಳ ಕಾಲ ರಾಜ್ಯಾದ್ಯಂತ ಮಾಲ್, ಥಿಯಟರ್, ಕಾಲೇಜು ಬಂದ್ ಮಾಡಲಾಗುವುದು ಹಾಗೂ ರಾಜ್ಯದಲ್ಲಿ ಮದುವೆ, ಜಾತ್ರೆ, ಎಲ್ಲ ರೀತಿಯ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಕಾಲೇಜುಗಳಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದ್ದಾರೆ.