Wednesday, February 25, 2026
Google search engine
Home Blog Page 286

ಪಾವಗಡ- ನದಿಯಲ್ಲಿ ವಿಗ್ರಹ ಸಿಕ್ಕಿದೆ ಎಂಬ ವದಂತಿ: ವೈರಲ್

Publicstory.in

ಪಾವಗಡ: ಅಂತ್ಯ ಸುಬ್ರಹ್ಮಣ್ಯೇಶ್ವರ ಕ್ಷೇತ್ರ ನಾಗಲಮಡಿಕೆ ಉತ್ತರ ಪಿನಾಕಿನಿ ನದಿಯಲ್ಲಿ ನಾಗ ಲಿಂಗ ವಿಗ್ರಹ ಸಿಕ್ಕಿದೆ ಎಂಬ ವದಂತಿ ವಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

ಸುಳ್ಳು ಸುದ್ಧಿಯನ್ನು ಹಬ್ಬಿಸುವ ಮೂಲಕ ಭಕ್ತಾದಿಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವ, ಆ ಮೂಲಕ ಜನರ ನಂಬಿಕೆಯನ್ನು ಬಂಡವಾಳವಾಗಿಟ್ಟುಕೊಂಡು ಹಣ ಸುಲಿಗೆ ಮಾಡುವ ವ್ಯವಸ್ಥಿತ ಷಡ್ಯಂತ್ರದಲ್ಲಿ ಅಧಿಕಾರಿಗಳು, ಕೆಲ ಕಿಡಿಗೇಡಿಗಳು ಭಾಗಿಯಾಗಿದ್ದಾರೆ ಎಂಬ ಅನುಮಾನವನ್ನು ಜನತೆ ಹಂಚಿಕೊಳ್ಳುತ್ತಿದ್ದಾರೆ.

ಸುಬ್ರಹ್ಮಣ್ಯೇಶ್ವರ ಸ್ವಾಮಿ ಮೂಲ ವಿಗ್ರಹ ಮಡಿಕೆ ಹೊಡೆಯುವಾಗ ಸಿಕ್ಕಿತ್ತು. ಹೀಗಾಗಿ ಗ್ರಾಮಕ್ಕೆ ನಾಗಲಮಡಿಕೆ ಎಂಬ ಹೆಸರು ಬಂದಿತ್ತು. ರಾಜ್ಯ, ಆಂಧ್ರ ಪ್ರದೇಶ, ತಮಿಳು ನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿಯೇ ಅಂತ್ಯ ಸುಬ್ರಹ್ಮಣ್ಯೇಶ್ವರ ಎಂಬ ಜನಪ್ರಿಯತೆ ಇಲ್ಲಿನ ಕ್ಷೇತ್ರಕ್ಕಿದೆ.

ಆದರೆ ಇದೇ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು 500 ವರ್ಷಗಳ ಹಿಂದೆ ನದಿಯಲ್ಲಿ ಸಿಕ್ಕಿರುವ ಮೂಲ ವಿಗ್ರಹದಂತೆಯೇ ಮತ್ತೊಂದು ವಿಗ್ರಹವನ್ನು ತಯಾರಿಸಿ ನದಿ ದಂಡೆಯಲ್ಲಿ ಹೂಳಲಾಗಿದೆ. ಹೂಳಲಾದ ವಿಗ್ರಹವನ್ನು ಜೆಸಿಬಿ ಮೂಲಕ ಮೇಲೆತ್ತಿ, ಶುದ್ಧಗೊಳಿಸಿ ತೀಟೆ ನಾಗಪ್ಪ ದೇಗುಲದ ಮುಂಭಾಗದ ಸರ್ಕಾರಿ ಸ್ಥಳದಲ್ಲಿ ಜನವರಿ-29 ಬುಧವಾರದಂದು ಪ್ರತಿಷ್ಠಾಪಿಸಲಾಗಿದೆ.

ಪೇರೂರಿಗೆ ನೀರು ಹರಿಸುವ ಕಾಮಗಾರಿ ನಡೆಸುವಾಗ ಬೃಹತ್ ಶಿವಲಿಂಗ ಸಿಕ್ಕಿದೆ ಎಂದು ಜೆಸಿಬಿ ಬಳಸಿ ವಿಗ್ರಹ ಮೇಲೆತ್ತುತ್ತಿರುವ ವಿಡಿಯೊ, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೊ, ಚಿತ್ರ ವೀಕ್ಷಿಸಿದವರು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಜಿಲ್ಲೆ ಸೇರಿದಂತೆ ರಾಜ್ಯ, ಆಂಧ್ರ ಪ್ರದೇಶ ಇತರೆ ರಾಜ್ಯಗಳಿಗೂ ಕೆಲವೇ ಗಂಟೆಗಳಲ್ಲಿ ಮಾಹಿತಿ ಹಬ್ಬಿತ್ತು. ಹಂದ್ರಿನಿವಾ ಯೋಜನೆಯಡಿ ಉತ್ತರ ಪಿನಾಕಿನಿ ನದಿ ಮೂಲಕ ಪೇರೂರು ಡ್ಯಾಂ ಗೆ ನೀರು ಹರಿಸುವ ಕಾಮಗಾರಿಗೆ ಕೆಲ ದಿನಗಳ ಹಿಂದೆ ರಾಪ್ತಾಡು ಶಾಸಕ ಪ್ರಕಾಶ್ ರೆಡ್ಡಿ ಶಂಕು ಸ್ಥಾಪನೆ ನೆರವೇರಿಸಿದ್ದರು.

ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ಚಿತ್ರ

ನೂರಾರು ವರ್ಷಗಳ ಇತಿಹಾಸವಿರುವ ಮೂಲ ವಿಗ್ರಹವನ್ನು ಹೋಲುವಂತಹ ಮೂರ್ತಿಯನ್ನೇ ಏಕೆ ತರಿಸಬೇಕಿತ್ತು. ಪ್ರತಿಷ್ಠಾಪನೆಗೂ ಮುನ್ನ ನೀರು, ದವಸ, ಧಾನ್ಯಗಳಲ್ಲಿ ವಿಗ್ರಹವನ್ನು ಇಡುವ ಶಾಸ್ತ್ರವಿದೆ ಎಂದು ಹೇಳಲಾಗುತ್ತದೆ. ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿಯೇ ನೀರು ಸಂಗ್ರಹಿಸುವ ತೊಟ್ಟಿ ನಿರ್ಮಿಸಿ ನೀರಿನಲ್ಲಿಡಬಹುದಿತ್ತು. ಆದರೆ ನದಿಯ ದಂಡೆಯಲ್ಲಿ ಗುಂಡಿ ನಿರ್ಮಿಸಿ ಅದರೊಳಗಿಟ್ಟು, ನಂತರ ಜೆಸಿಬಿಯಲ್ಲಿ ಮೇಲೆತ್ತಲಾಗಿದೆ. ವಿಗ್ರಹವನ್ನು ಗುಂಡಿಯಲ್ಲಿಡುವ ವಿಡಿಯೊವನ್ನು ಹಂಚಿಕೊಳ್ಳದೆ, ವಿಗ್ರಹವನ್ನು ಜೆಸಿಬಿ ಯಂತ್ರದ ಮೂಲಕ ಮೇಲೆತ್ತುವ, ಅದನ್ನು ಶುದ್ಧಗೊಳಿಸುವ ವಿಡಿಯೋ ಮಾಡಿ ಸುಳ್ಳು ಸುದ್ಧಿಯೊಂದಿಗೆ ವಿಡಿಯೊ, ಚಿತ್ರವನ್ನು ಹಬ್ಬಿಸುವ ಅಗತ್ಯವೇನಿತ್ತು?. ಸರ್ಕಾರಿ ಸ್ಥಳದಲ್ಲಿ ಖಾಸಗಿ ವ್ಯಕ್ತಿಗಳು ವಿಗ್ರಹ ಪ್ರತಿಷ್ಠಾಪನೆ ಮಾಡಲು ಯಾರು ಅನುಮತಿ ಕೊಟ್ಟಿದ್ದಾರೆ? ಅಧಿಕಾರಿಗಳೇ ಇದರಲ್ಲಿ ಷಾಮೀಲಾಗಿದ್ದಾರೆಯೆ? ಮುಜರಾಯಿ ದೇಗುಲದ ಸಿಬ್ಬಂದಿಯ ಕುಮ್ಮಕ್ಕು ಕೃತ್ಯಕ್ಕೆ ಇದೆಯೇ ಎಂಬೆಲ್ಲ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.

500 ವರ್ಷಕ್ಕೂ ಹಳೆಯ ದೇಗುಲದಲ್ಲಿರುವ ಮೂಲ ವಿಗ್ರಹವನ್ನೇ ಹೋಲುವ ವಿಗ್ರಹ ತರಿಸಿ ಇಂತಹ ಸುಳ್ಳು ಮಾಹಿತಿಯನ್ನು ಹಬ್ಬಿಸುವುದರಿಂದ ಸುಬ್ರಹ್ಮಣ್ಯೇಶ್ವರ ದೇಗುಲದ ಬಗ್ಗೆ ಜನತೆಗಿರುವ ನಂಬಿಕೆಗೆ ದಕ್ಕೆಯಾಗುತ್ತದೆ. ವಿಗ್ರಹ ಪ್ರತಿಷ್ಠಾಪಿಸುವ ಸ್ಥಳವನ್ನು ಜನಪ್ರಿಯಗೊಳಿಸಲು, ಪ್ರಮುಖ ದೇಗುಲದ ಭಕ್ತಾದಿಗಳನ್ನು ನೂತನವಾಗಿ ಪ್ರತಿಷ್ಠಾಪನೆ ಮಾಡಿರುವ ಸ್ಥಳಕ್ಕೆ ಸೆಳೆಯಲು ಇಂತಹ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಜನತೆ ವಿಶ್ಲೇಷಿಸುತ್ತಿದ್ದಾರೆ.

ಜನರ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುವವರನ್ನು ಪತ್ತೆ ಹಚ್ಚಬೇಕು. ಇಂತಹ ಸೂಕ್ಷ್ಮ ವಿಚಾರಗಳನ್ನು ನಿರ್ಲಕ್ಷಿಸದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಪ್ರಕರಣದ ಬಗ್ಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾಗಲಮಡಿಕೆ ಹೋಬಳಿ ಕಂದಾಯ ನಿರೀಕ್ಷಕ, ತಹಶೀಲ್ದಾರರು, ಜಿಲ್ಲಾಧಿಕಾರಿ ಯಾರೊಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡುವುದಿರಲಿ ರಾಜ್ಯ ಮಟ್ಟದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದರೂ ತುಟಿ ಬಿಚ್ಚದೆ ಮೌನವಾಗಿರುವುದರ ಹಿಂದಿನ ಮರ್ಮವೇನು? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ಶುಕ್ರವಾರ ಜನವರಿ-30 ರಂದು ನಾಗಲಮಡಿಕೆ ಗ್ರಾಮಕ್ಕೆ ಭೇಟಿ ನೀಡಲಾಗುವುದು. ನೂತನ ವಿಗ್ರಹ ಎಲ್ಲಿ ಪ್ರತಿಷ್ಠಾಪಿಸಲಾಗಿದೆ. ಅನುಮತಿ ಪಡೆಯಲಾಗಿದೆಯೇ ಇಲ್ಲವೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುವುದು.

ವರದರಾಜು, ತಹಶೀಲ್ದಾರ್, ಪಾವಗಡ.

ದ್ವೇಷವನ್ನು ತೊಲಗಿಸೋಣ, ಪ್ರೀತಿ ಹಂಚೋಣ – ಕೆ.ದೊರೈರಾಜ್

Publicstory. in


Tumkur: ನಮ್ಮಸುತ್ತಮುತ್ತ ಹಾಗೂ ಪರಿಸರದಲ್ಲಿ ಹೆಚ್ಚುತ್ತಿರುವ ಧ್ವೇಷವನ್ನು ತೊಲಗಿಸಿ ಪ್ರೀತಿಯನ್ನು ಹಂಚುವ ಕೆಲಸ ಮಾಡಲು ಎಲ್ಲರೂ ಪಣ ತೊಡಬೇಕಾಗಿದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.

ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ ಜನಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಹುತಾತ್ಮನಾದ ಗಾಂಧಿ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು. ಗಾಂಧೀಜಿ ಅಹಿಂಸೆಯ ಬೆಳಕು ಚೆಲ್ಲಿದರು. ಹೀಗಾಗಿ ಅದರ ಬೆಳಕಿನಲ್ಲೇ ನಾವು ನಡೆಯಬೇಕಾಗಿದೆ ಎಂದರು.

ನಮ್ಮದು ಕೊಲ್ಲುವ ಸಂಸ್ಕೃತಿಯಲ್ಲ. ಕೊಲ್ಲುವ ಮತ್ತು ದ್ವೇಷದ ಮನೋಭಾವವನ್ನು ಅಳಿಸಿಹಾಕಿ ಪ್ರೀತಿ ಮತ್ತು ಸಹನೆಯ, ಧರ್ಮನಿರಪೇಕ್ಷೆಯ ಸಂವಿಧಾನದಡಿಯಲ್ಲಿ ನಾವು ಬಾಳ್ವೆ ನಡೆಸಬೇಕು. ಜಾತಿ ಧರ್ಮ, ಪ್ರಾದೇಶಿಕತೆ ಸೇರಿದಂತೆ ಎಲ್ಲವನ್ನು ಎಲ್ಲರನ್ನು ಒಳಗೊಂಡು ಪರಸ್ಪರ ಸಹಬಾಳ್ವೆಯಿಂದ ಬದುಕು ನಡೆಸಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಮಾತನಾಡಿ, ಯುದ್ದೋನ್ಮಾದದ ದಿನಗಳಲ್ಲಿ ನಾವು ಗಾಂಧಿ ಹುತಾತ್ಮ ದಿನವನ್ನು ದುಃಖದಿಂದ ಆಚರಿಸುತ್ತಿದ್ದೇವೆ. ನಮ್ಮ ದೇಶ ಅಹಿಂಸೆಗೆ ಹೆಸರಾದುದು. ಹಿಂಸೆ ಶಾಶ್ವತ ಪರಿಹಾಋವನ್ನು ಒದಗಿಸುವುದಿಲ್ಲ. ಯುದ್ದೋನ್ಮಾದ ನಿವಾರಣೆ ಮಾಡಿ ಸಂವಿಧಾನದ ಆಶಯದಂತೆ ಸಂತೋಷವಾಗಿ ಜೀವನ ನಡೆಸಬೇಕಾಗಿದೆ ಎಂದರು.

ಎಐಟಿಯುಸಿ ಮುಖಂಡ ಗಿರೀಶ್ ಮಾತನಾಡಿ, ಶಾಂತಿ ಸ್ಥಾಪನೆಗೆ ಶ್ರಮಿಸಿದವರಿಗೆ ಗುಂಡಿಕ್ಕಿ ಕೊಂದರು. ಇಂದು ರಾಷ್ಟ್ರದಲ್ಲಿ ಆಳ್ವಿಕೆ ನಡೆಸುತ್ತಿರುವವರು ಜನರ ನಡುವೆ ದ್ವೇಷ ಹರಡುತ್ತಿದ್ದಾರೆ. ಇಂತಹ ಕೆಲಸವನ್ನು ಬಿಡಬೇಕು ಎಂದು ತಾಕೀತು ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಒಂದು ದಿನ ಶಾಂತಿ ಮಂತ್ರ ಜಪಿಸುತ್ತಾರೆ. ಮತ್ತೊಂದು ದಿನ ಇನ್ನೊಂದು ದೇಶವನ್ನು ಉಡಾಯಿಸುವ ಮಾತಾಡುತ್ತಾರೆ. ಮತಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕಾರ್ಯಕ್ರಮದ ಸಂಚಾಲಕರಾದ ಈ.ಶಿವಣ್ಣ, ಬಿ.ಉಮೇಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಡಿವೈಎಫ್ ಐ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ, ಸ್ಲಂಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ, ಯುವ ಮುಖಂಡ ತಾಜುದ್ದೀನ್ ಷರೀಪ್, ನಿಸಾರ್ ಅಹಮದ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಇಂದಿರಮ್ಮ, ರಾಣಿ ಚಂದ್ರಶೇಖರ್, ಷಣ್ಮುಖಪ್ಪ, ಫಿಟ್ ವೆಲ್ ಸುಜಿತ್ ನಾಯಕ್, ಕಾಳೇಶ್ವರಿ ಮುತ್ತುರಾಜು, ಲೋಕೇಶ್, ಕಟ್ಟಡ ಕಾರ್ಮಿಕ ಖಲೀಲ್, ಚಾಲಕ ಇಂತಿಯಾಜ್ ಪಾಷ, ಚೇತನ್, ಶೆಟ್ಟಾಳಯ್ಯ, ವಿದ್ಯಾರ್ಥಿಗಳು ಹಾಜರಿದ್ದರು.,

ಅಧಿಕಾರ ಸಿಕ್ಕಿತೆಂದು ದರ್ಬಾರ್ ಮಾಡಬೇಡಿ: ಸಂಸದ ಜಿಎಸ್ ಬಿ

Tumkur: ಅಧಿಕಾರ ಸಿಕ್ಕಿತೆಂದು ದರ್ಬಾರ್ ಮಾಡದೆ, ಹೇಳಿಕೆ ಮಾತು ಕೇಳದೆ ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕೆಂದು ನೂತನವಾಗಿ ಆಯ್ಕೆಯಾದ ಮೇಯರ್ ಫರೀದ ಬೇಗಂ ಹಾಗೂ ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಅವರಿಗೆ ಶುಭ ಕೋರಿ ಸಂಸದ ಜಿ.ಎಸ್. ಬಸವರಾಜು ಅವರು ಸಲಹೆ ನೀಡಿದರು.

ಪಾಲಿಕೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಂಡು ಜನ ಮೆಚ್ಚುವಂತೆ ಅತ್ಯುತ್ತಮವಾಗಿ ಕೆಲಸ ಮಾಡಬೇಕು. ಪಕ್ಷಬೇಧ ಮರೆತು ಮೇಯರ್, ಉಪಮೇಯರ್ ಹಾಗೂ ಸದಸ್ಯರೆಲ್ಲ ಒಂದಾಗಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಮುಂದಿನ 1 ವರ್ಷಗಳ ಕಾಲ ಹರಿಯುವ ನೀರಿನಂತೆ ಕೆಲಸ ಮಾಡಬೇಕು. ಸದಸ್ಯರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ವಾರ್ಡುಗಳ ಅಭಿವೃದ್ಧಿ ಕೆಲಸಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು. ನಗರದಲ್ಲಿರುವ ಮರಗಳನ್ನು ಕತ್ತರಿಸದೆ ಹೊಸದಾಗಿ ಗಿಡಗಳನ್ನು ನೆಡುವ ಮೂಲಕ ಹಸಿರು ತುಮಕೂರನ್ನಾಗಿ ನಿರ್ಮಾಣ ಮಾಡಬೇಕು ಎಂದು ನೂತನ ಮೇಯರ್, ಉಪಮೇಯರ್‍ಗಳಿಗೆ ಮಾರ್ಗದರ್ಶನ ನೀಡಿದರು.

ಪಾಲಿಕೆ ವ್ಯಾಪ್ತಿಯ ಜನರು ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಜ್ಜಗೊಂಡನಹಳ್ಳಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ಕೆಲಸ ಮಾಡಬೇಕು. ಬುಗುಡನಹಳ್ಳಿ ಕೆರೆಯಲ್ಲದೆ ಅಮಾನಿಕೆರೆ, ಮರಳೂರು ಕೆರೆ, ದೇವರಾಯಪಟ್ಟಣ ಕೆರೆ, ಶೆಟ್ಟಿಹಳ್ಳಿ ಕೆರೆ ಸೇರಿದಂತೆ ನಗರದಲ್ಲಿರುವ ಕೆರೆಗಳನ್ನು ಭರ್ತಿ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ಸುತ್ತಲಿನ ಕೊಳವೆ ಬಾವಿಗಳಲ್ಲಿ ಜಲಮರುಪೂರಣವಾಗಲು ಸಾಧ್ಯವಾಗುತ್ತದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಿಗೆ ಸಹಕಾರ ನೀಡುವುದರೊಂದಿಗೆ ಉತ್ತಮ ರಸ್ತೆನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳು ಸಾಮಾನ್ಯ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರಲ್ಲದೆ ನಗರಾಭಿವೃದ್ಧಿಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದ ನಂತರ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ; ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ; ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಸ್ಥಾಯಿ ಸಮಿತಿಗೆ ಆಯ್ಕೆ


ಪಾಲಿಕೆಯ 4 ವಿವಿಧ ಸಮಿತಿಗಳಿಗೆ ತಲಾ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದ ಸದಸ್ಯರ ವಿವರ ಇಂತಿದೆ.

28ನೇ ವಾರ್ಡ್‍ನ ಧರಣೇಂದ್ರ ಕುಮಾರ್, 5ನೇ ವಾರ್ಡ್‍ನ ಟಿ.ಎಂ. ಮಹೇಶ್, 12ನೇ ವಾರ್ಡ್‍ನ ಷಕೀಲ್ ಅಹಮದ್ ಷರೀಫ್, 1ನೇ ವಾರ್ಡ್‍ನ ನಳಿನ ಇಂದ್ರಕುಮಾರ್, 18ನೇ ಮುಜಿದಾ ಖಾನಂ, 10ನೇ ವಾರ್ಡಿನ ನೂರು ಉನ್ನೀಸಾ ಬಾನು, 17ನೇ ವಾರ್ಡಿನ ಬಿ.ಎಸ್. ಮಂಜುನಾಥ ಅವರು ಅವಿರೋಧವಾಗಿ ಆಯ್ಕೆಯಾದರು.

4ನೇ ವಾರ್ಡಿನ ಹೆಚ್.ಎಂ. ದೀಪಶ್ರೀ, 23ನೇ ವಾರ್ಡಿನ ಟಿ.ಕೆ. ನರಸಿಂಹಮೂರ್ತಿ, 8ನೇ ವಾರ್ಡಿನ ಸೈಯದ್ ನಯಾಜ್, 32ನೇ ವಾರ್ಡಿನ ಬಿ.ಜಿ. ಕೃಷ್ಣಪ್ಪ, 20ನೇ ವಾರ್ಡಿನ ಎ. ಶ್ರೀನಿವಾಸ, 9ನೇ ವಾರ್ಡಿನ ಎಂ. ಪ್ರಭಾವತಿ, 21ನೇ ವಾರ್ಡಿನ ಲಲಿತಾ ರವೀಶ್ ಅವರು ಅವಿರೋಧವಾಗಿ ಆಯ್ಕೆಯಾದರು.

ಶಿಕ್ಷಣ ಸಂಪತ್ತಿಗೆ ಒತ್ತು ನೀಡಿ : ಶಾಸಕ ವೆಂಕಟರಮಣಪ್ಪ

Publicstory. in


ವೈಎನ್ ಹೊಸಕೋಟೆ : ಪೋಷಕರು ತಾತ್ಕಾಲಿಕವಾದ ಹಣ ಆಸ್ತಿ ಸಂಪತ್ತಿಗೆ ಬದಲಾಗಿ ಶಾಶ್ವತವಾಗದ ಶಿಕ್ಷಣ ಸಂಪತ್ತನ್ನು ಮಕ್ಕಳಿಗೆ ನೀಡಲು ಒತ್ತು ನೀಡಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.

ಗ್ರಾಮದ ವಾಸವಿ ವಿದ್ಯಾನಿಕೇತನ ಸಂಸ್ಥೆಯ ಪ್ರಾಥಮಿಕ ತರಗತಿಗಳ ನೂತನ ಕಟ್ಟಡ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂಗ್ಲೀಷ್ ಜೊತೆಗೆ ಮಕ್ಕಳಲ್ಲಿ ಮಾತೃಭಾಷೆ ಕನ್ನಡಕ್ಕೂ ಹೆಚ್ಚಿನ ಒತ್ತು ನೀಡಬೇಕು, ಪಠ್ಯ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ ಎಂದರು.

ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಗುರಿ. ತುಂಗಭದ್ರಾ ಕುಡಿಯುವ ನೀರು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ರೈಲ್ವೆ ಯೋಜನೆಗಳು ಎರಡು ವರ್ಷದ ಒಳಗಾಗಿ ಪೂರ್ಣಗೊಳ್ಳಲಿವೆ. ಇದರಿಂದ ತಾಲ್ಲೂಕಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು ಹಾಗೂ ಶಾಸಕರ ಅಭಿವೃದ್ಧಿ ಅನುದಾನದಿಂದ ೫ ಲಕ್ಷ ರೂಗಳನ್ನು ಶಾಲಾ ಕಟ್ಟಡಕ್ಕೆ ದೇಣಿಗೆ ನೀಡುವ ಭರವಸೆ ನೀಡಿದರು.

ಮಧುಗಿರಿ ತಾಲ್ಲೂಕಿನ ತಗ್ಗೀಹಳ್ಳಿ ರಾಮಕೃಷ್ಣ ಮಠದ ಶ್ರೀ ರಾಮಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಮಕ್ಕಳು ಉತ್ತಮ ಪ್ರಜೆಗಳಾಗಬೇಕಾದರೆ ಶಾಲೆ ಮತ್ತು ಮನೆಗಳಲ್ಲು ಉತ್ತಮ ವಾತಾವರಣವಿರಬೇಕು ಎಂದರು.

ಪೋಷಕರಲ್ಲಿ ಉತ್ತಮ ಹವ್ಯಾಸಗಳು ಮತ್ತು ನಡತೆ ಇದ್ದರೆ ಅದನ್ನೇ ಮಕ್ಕಳು ಅನುಸರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದರು.

ಶಾಲಾ ವಾರ್ಷಿಕೋತ್ಸವಗಳಲ್ಲಿ ಭರತ ನಾಟ್ಯಗಳಂತಹ ದೇಶಿಯ ಸಂಸ್ಕೃತಿಗೆ ಪೂರಕವಾದ ನೃತ್ಯಗಳ ಪ್ರದರ್ಶನವಾಗಬೇಕಾಗಿದೆ. ಜೊತೆಗೆ ವಿದ್ಯಾರ್ಥಿಗಳು ಕಬಡ್ಡಿ, ಖೋಖೋ ದಂತಹ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸುವ ಆಟಗಳ ಕಡೆ ಗಮನ ನೀಡಬೇಕಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಇಂದು ಪ್ಲೇಸ್ಕೂಲ್ ಮಾದರಿಯಲ್ಲಿ ಆಧುನಿಕ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ನಗರದ ವಿದ್ಯಾರ್ಥಿಗಳಿಗೆ ಸರಿಸಮನಾಗಿ ನಮ್ಮ ವಿದ್ಯಾರ್ಥಿಗಳು ಬೆಳೆಯಲು ಸಾಧ್ಯ ಎಂದು ಟ್ರಸ್ಟಿನ ಅಧ್ಯಕ್ಷ ಡಾ.ಎಂ.ಪ್ರೇಮಯೋಗಿ ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾನಿಗಳ ಕೊಡುಗೆಯ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯದರ್ಶಿ ಎನ್.ಜಿ.ರಾಮು, ಅಡಳಿತಾಧಿಕಾರಿ ಎನ್.ಜಿ.ಶ್ರೀನಿವಾಸ, ಟ್ರಸ್ಟಿಗಳಾದ ಕೆ.ಎಸ್.ವೆಂಕಟರಮಣಪ್ಪ, ಪಿ.ಎಂ.ಮಂಜುನಾಥ, ಟಿ.ವಿ.ಜಗನ್ನಾಥ, ಶಿವಾನಂದಗುಪ್ತ, ಟಿ.ಅರ್.ವಿ ಪ್ರಸಾದ್, ಟಿ.ವಿ ವೆಂಕಟೇಶ್, ಎನ್.ಅರ್.ಅಶ್ವಥ್, ಎ.ನಾಗರಾಜು, ಇ.ವಿ.ಸತ್ಯನಾರಾಯಣ, ಟಿ.ಆರ್.ನಾಗರಾಜು, ಇ.ಎನ್.ಶ್ರೀನಿವಾಸ, ಎನ್.ಎಸ್.ಮಂಜುನಾಥ, ಮಲ್ಲಿಕಾರ್ಜುನಶೆಟ್ಟಿ, ಪ್ರಾಂಶುಪಾಲ ಸುರೇಶ್, ಮುಖ್ಯಶಿಕ್ಷಕರಾದ ಸತ್ಯನಾರಾಯಣರೆಡ್ಡಿ,ಉಮಾದೇವಿ ಇದ್ದರು.

ಸ್ಚಚ್ಛತೆಗೆ ಚಾಲನೆ ನೀಡಿದ ಜಿಲ್ಲಾ ನ್ಯಾಯಾಧೀಶರು…

Tumkur: ಪ್ರತಿಯೊಬ್ಬ ವ್ಯಕ್ತಿಯೂ ತಾನು ವಾಸಿಸುವ ಮನೆ, ಸುತ್ತಮುತ್ತಲಿನ ಪರಿಸರ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಶುಚಿತ್ವ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವ್‍ ಕುಮಾರ್ ತಿಳಿಸಿದರು.

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸ್ವಚ್ಛತಾ ನಮ್ಮ ನ್ಯಾಯಾಲಯ-ಸ್ವಚ್ಛ ನ್ಯಾಯಾಲಯ ಕಾರ್ಯಕ್ರಮಕ್ಕೆ ನ್ಯಾಯಾಲಯ ಆವರಣ ಸ್ವತಃ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇದೊಂದು ತಂಡಕಾರ್ಯವಾಗಿದ್ದು, ಸ್ವಚ್ಛಗೊಳಿಸಬೇಕೆಂಬ ಮನೋಭಾವದಿಂದ ಎಲ್ಲರೂ ಭಾಗವಹಿಸಿದಾಗ ಇಂತಹ ಕಾರ್ಯಗಳು ಯಶಸ್ವಿಯಾಗುತ್ತವೆ. ಜಿಲ್ಲೆಯ ಎಲ್ಲಾ ನಾಗರೀಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ತಾವು ವಾಸಿಸುತ್ತಿರುವ ಪ್ರದೇಶಗಳಲ್ಲಿರುವ ಶಾಲೆ, ಕಾಲೇಜು, ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳನ್ನು ಸಮುದಾಯ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಿದಾಗ ಊರು, ಪಟ್ಟಣ, ನಗರ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ.

ಯಾವುದೇ ಒಂದು ಸಂಸ್ಥೆ ಅಥವಾ ಸಂಘಟನೆಗಳು ಸ್ವಚ್ಛಗೊಳಿಸಬೇಕೆಂಬ ಮನೋಭಾವ ತೊರೆದು ಭಾರತದ ಸ್ವಚ್ಛ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ದೇಶದ ಈ ಸಿದ್ಧಾಂತವನ್ನು ಯಶಸ್ವಿಗೊಳಿಸಿದಾಗ ವಿಶ್ವಗುರು ಸ್ಥಾನ ಗಳಿಸಲು ಸಾಧ್ಯವಾದೀತು ಅದಕ್ಕಾಗಿ ಪ್ರೇರಣೆ ಮೂಡಿಸಲು ಈ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ರಾಮಮೂರ್ತಿ, ದೊಡ್ಡಹನುಮಯ್ಯ, ಅಂಜನಮೂರ್ತಿ, ತಿಮ್ಮಕ್ಕ, ಪ್ರವೀಣ್, ನರಸಿಂಹಮೂರ್ತಿ, ಅಂಜನಮೂರ್ತಿ ಹಾಗೂ ರಂಗಸ್ವಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಫೆ.1ರಂದು ದೇವರ ಕುದುರೆ ಕುರಿತು ಮಾತುಕತೆ

Chikkanayakana halli: ಪುಸ್ತಕ ಸಂಜೆ – ಕವಿತೆಗಳೊಂದಿಗೆ ವೀಚಿ, ಅನಂತಮೂರ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪಡೆದ ಎಸ್.ಗಂಗಾಧರಯ್ಯನವರ ದೇವರ ಕುದುರೆ ಕಥಾ ಸಂಕಲನದ ಕುರಿತ ಮಾತುಕತೆಯನ್ನು ಚಿಕ್ಕನಾಯಕನಹಳ್ಳಿಯ ಪಟ್ಟಣದ ಎಸ್ಎಂಎಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 1ರಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿ ನಟರಾಜ್ ಬೂದಾಳ್ ವಹಿಸಲಿದ್ದು, ಕಥೆಗಾರ ಕಂಟಲಗೆರೆ ಗುರುಪ್ರಸಾದ್ ಪ್ರಾಸ್ತಾವಿಕ ಮಾತನಾಡುವರು.

ಕೃತಿ ಕುರಿತು ಕಥೆಗಾರ ಜಿ.ವಿ.ಆನಂದಮೂರ್ತಿ ಮಾತನಾಡುವರು. ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಪ್ರತಿಕ್ರಿಯೆ ನೀಡುವರು. ಕಥೆಗಾರ ಎಸ್.ಗಂಗಾಧರಯ್ಯ ಉಪಸ್ಥಿತರಿರುವರು.

ಸಮಾನ ಮನಸ್ಕರ ವೇದಿಕೆ ಚಿ.ನಾ.ಹಳ್ಳಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ತಂಡ ತತ್ವಪದ ಗಾಯನ ಮಾಡುವರು.

ಇದೇ ವೇಳೆ ಕವಿಗೋಷ್ಠಿ ನಡೆಯಲಿದ್ದು ಪ್ರೊ. ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಸುಪ್ರೀಮ್ ಸುಬ್ರಮಣ್ಯ, ಶ್ರೀಧರ್ ದೇವರಹಳ್ಳಿ, ಬಿ.ಎಸ್. ರಾಧಾಕೃಷ್ಣ, ಡಾ. ಮಲ್ಲಿಕಾರ್ಜುನ್, ಡಾ. ವಿಜಯರಾಘವೇಂದ್ರ, ಡಾ.ಮೋಹನ್, ಡಾ.ವಲಿ, ವರಮಹಾಲಕ್ಷ್ಮಿ, ಹುಳಿಯಾರ್ ಶಬ್ಬೀರ್, ತೇಜಾವತಿ, ರವಿಕುಮಾರ್ ಸಿ. ಸಬ್ಬೆನಹಳ್ಳಿ ನಾಗರಾಜ್, ಮಂಜುಳ ಪ್ರಕಾಸ್, ಧನಂಜಯಮೂರ್ತಿ, ದೇವರಹಳ್ಳಿ ಧನಂಜಯ, ಸರ್ವಮಂಗಳ, ಗಂಗಾಧರ್ ಹಾಲುಗೋಣ ಕವಿತೆಗಳನ್ನು ವಾಚಿಸುವರು.

TUMKUR: ಇಲ್ಲಿ ಮದುವೆಯಾದರೆ 8 ಗ್ರಾಂ ಚಿನ್ನದ ತಾಳಿ ಉಚಿತ ಕೊಡುಗೆ

Publicstory. in


Tumkur: ಇನ್ನು ಮುಂದೆ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಸಪ್ತಪದಿ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಎ ದರ್ಜೆಯ ದೇವಾಲಯಗಳಲ್ಲಿ ವಿವಾಹ ಮಾಡಿಕೊಳ್ಳಬಹುದು.

ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ, ದೇವರಾಯನದುರ್ಗದ ಲಕ್ಷ್ಮಿನರಸಿಂಹ ದೇವಸ್ಥಾನ ಹಾಗೂ ಕುಣಿಗಲ್ ತಾಲ್ಲೂಕಿನ ಹಳೇಊರು ಹುಲಿಯೂರಮ್ಮ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿಸಲು ಸರ್ಕಾರ ಆಯ್ಕೆ ಮಾಡಿದೆ.

ಸರಳ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಧು-ವರರು ಆಗಮಿಸಿ, ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯ ಮೂರು ದೇವಾಲಯಗಳಲ್ಲಿ ಮೇ 24ರಂದು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಿದೆ. ಮೇ 24 ದಿನಾಂಕವನ್ನು ತಾತ್ಕಾಲಿಕವಾಗಿ ನಿಗಧಿಪಡಿಸಿ, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ವಿವಾಹ ನಡೆಯುವ ದಿನಾಂಕಕ್ಕೆ 30 ದಿನ ಮುಂಚಿತವಾಗಿ ವಧು-ವರರು ಸಂಬಂಧಿಸಿದ ದೇವಸ್ಥಾನಗಳಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಗಂಡಿಗೆ ಕನಿಷ್ಠ 21 ವರ್ಷ ಹಾಗೂ ಹೆಣ್ಣಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ವಧುವರರ ಫೋಟೋ, ಜನನ ಪ್ರಮಾಣಪತ್ರ/ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಅವಿವಾಹಿತ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರ ಅಂತಿಮ ಪಟ್ಟಿಯನ್ನು ವಿವಾಹ ದಿನದ 15 ದಿನ ಮುಂಚಿತವಾಗಿ ಪ್ರಕಟಿಸಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವರನಿಗೆ ವಿವಾಹಕ್ಕೆ ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ಹಾಗೂ ಪ್ರೋತ್ಸಾಹಧನವನ್ನಾಗಿ 5ಸಾವಿರ ರೂಪಾಯಿ ಹಾಗೂ ಅದೇರೀತಿ ವಧುವಿಗೆ 10 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಮಧುವಿಗೆ ಅಂದಾಜು 8ಗ್ರಾಂ ತೂಕದ ಚಿನ್ನದ ತಾಳಿ, ಎರಡು ಗುಂಡುಗಳನ್ನು ನೀಡಲಾಗುವುದು.

ನೋಂದಣಿಯ ಸಂದರ್ಭದಲ್ಲಿಯೇ ವಧು-ವರರಿಂದ ವಿವಾಹ ನೋಂದಣಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆದು ಇಟ್ಟುಕೊಂಡು ವಿವಾಹ ದಿನದಂದು ಸ್ಥಳದಲ್ಲಿಯೇ ವಿವಾಹ ನೋಂದಣಾಧಿಕಾರಿಗಳು ವಿವಾಹ ಪ್ರಮಾಣಪತ್ರ ನೀಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ನೋಂದಣಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಾಮೂಹಿಕ ವಿವಾಹಗಳ ಬಗ್ಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು. ಜಿಲ್ಲೆಯ ಗ್ರಾಮಪಂಚಾಯತಿ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ತಹಶೀಲ್ದಾರ್ ಅವರ ಕಛೇರಿ ಹಾಗೂ ಕೆಸ್ಸಾರ್ಟಿಸಿ ಬಸ್ಸುಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದರು.

ತುಮಕೂರು ಫಲಪುಷ್ಪ ಪ್ರದರ್ಶನ ಚಿತ್ರಗಳ ಝಲಕ್

Tumkur: ಜನವರಿ 31 ರಿಂದ ಫೆಬ್ರುವರಿ 2ರವರೆಗೆ ತುಮಕೂರಿನ ತೋಟಗಾರಿಕೆ ಕಛೇರಿ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಜನವರಿ 31 ರಂದು ಸಂಜೆ 7.30 ಗಂಟೆಗೆ ಉದ್ಘಾಟಿಸುವರು.

ತೋಟಗಾರಿಕೆ ಸಚಿವ ವಿ.ಸೋಮಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ವಿವಿಧ ಅಲಂಕಾರಿಕ ಪುಷ್ಪಗಳ ಜೋಡಣೆಯಿಂದ ಡಿಸ್ನಿ ಮಾದರಿಯಲ್ಲಿ ವಿನ್ಯಾಸ ನಡೆಯಲಿದೆ ಹಾಗೂ ವೈಲ್ಡ್‍ಲೈಫ್ ಪ್ರಾಣಿಗಳ ಮಾದರಿಗಳು ಪುಷ್ಪಾಲಂಕಾರದಲ್ಲಿ ಇರಲಿವೆ.

ವಿವೇಕಾನಂದರ ಮರಳು ಶಿಲೆಯ ಕಲಾಕೃತಿಯಲ್ಲಿ ವಿಶೇಷ ಅಲಂಕಾರಿಕ ಹೂಗಳಿಂದ ಜನಾಕರ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ತೋಟಗಾರಿಕೆ ರೈತರಿಗೆ ತಾಂತ್ರಿಕ ಮಾಹಿತಿ ಮತ್ತು ವಾಟರ್‍ಶೆಡ್ ಪ್ರಾತ್ಯಕ್ಷಿಕೆ ಮೂಲಕ ಎಲ್ಲಾ ತರಹದ ಹಣ್ಣು, ಹೂ ಮತ್ತು ತರಕಾರಿಗಳನ್ನು ಬೆಳೆಸುವ ಇಂಟಿಗ್ರೇಟೆಡ್ ತೋಟಗಾರಿಕೆ ಮಾದರಿಯನ್ನೂ ಪರಿಚಯಿಸಲಾಗುವುದು.

ಜಿಲ್ಲೆಯಲ್ಲಿ 1.76ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆಯಿದ್ದು, ಫೆಬ್ರುವರಿ 1, 2 ಮತ್ತು 3ನೇ ತಾರೀಖಿನವರೆಗೂ ಜಿಲ್ಲೆಯ ತೆಂಗಿನ ಬೆಳೆಗಳಿಗೆ ತಗಲಿರುವ ರೋಗೋಸ್ ಕೀಟ ನಿಯಂತ್ರಣಕ್ಕೆ ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳಿಂದ ಬೆಳೆಗಳ ಸಂರಕ್ಷಣೆಗಾಗಿ ತೋಟಗಾರಿಕೆ ಪದ್ಧತಿ, ಸಂಸ್ಕರಣೆ ಹಾಗೂ ರೈತರ ಸಂತೆ, ಮಾರುಕಟ್ಟೆ, ಖುಷ್ಕಿ ತೋಟಗಾರಿಕೆ ತರಬೇತಿ ನೀಡಲಾಗುವುದು.

ಇದರಿಂದ ರೈತರಿಗೆ ಸಮಗ್ರ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಜೇನುಕೃಷಿಯ ಮಹತ್ವದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯ ಪ್ರದರ್ಶನದಲ್ಲಿ ಆಗಲಿದೆ.
ರೈತರಿಗೆ ಉಪಯೋಗವಾಗುವಂತೆ ಜೇನುಕೃಷಿ, ಹನಿನೀರಾವರಿ ಘಟಕದ ತಾಂತ್ರಿಕ ಅಳವಡಿಕೆ ಮತ್ತು ನಿರ್ವಹಣೆ, ಹಸಿರು ಮನೆಯಲ್ಲಿ ಸುಧಾರಿತ ಬೇಸಾಯದಿಂದ ಅತಿ ಕಡಿಮೆ ಜಾಗದಲ್ಲಿ ಹೆಚ್ಚು ತರಕಾರಿಗಳನ್ನು ಮತ್ತು ಹೂಗಳನ್ನು ಬೆಳೆಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತರಬೇತಿ ನೀಡಲಾಗುವುದು.

ಕಾರ್ಯಕ್ರಮದ ಮೊದಲನೇ ದಿನ ಸಾಂಸ್ಕೃತಿ ಕಲಾವಿದರಿಂದ ಭರತನಾಟ್ಯ, ಎರಡನೇ ದಿನ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿದೆ. ಫೆಬ್ರುವರಿ 2ರಂದು ಸಂಜೆ 4 ಗಂಟೆಗೆ ಜರುಗುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸುಗಮಸಂಗೀತ ಕಾರ್ಯಕ್ರಮ ಏರ್ಪಡಿಸಲಾಗುವುದು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ ರವಿಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಬಹುಮಾನ ವಿತರಿಸುವರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಗೌರವಾಧ್ಯಕ್ಷರಾದ ಡಾ: ಕೆ.ರಾಕೇಶ ಕುಮಾರ್, ಜಿ.ಪಂ. ಸಿಇಓ ಶುಭಾಕಲ್ಯಾಣ್ ಮತ್ತಿತರ ಗಣ್ಯರು ಭಾಗವಹಿಸುವರು.

ಫಲ-ಪುಷ್ಪ ಪ್ರದರ್ಶನದಲ್ಲಿ 16 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಅಲಂಕೃತವಾಗಿ ಜೋಡಿಸಲಾಗುವುದು. ಜಿಲ್ಲೆಯಲ್ಲಿ ಉತ್ತಮವಾಗಿ ಬೆಳೆದಿರುವ ತೋಟಗಾರಿಕಾ ಬೆಳೆಗಳ ಪ್ರದರ್ಶನ ಏರ್ಪಡಿಸಿ ಆಯ್ಕೆಯಾದ ಬೆಳೆಗಾರರಿಗೆ ಬಹುಮಾನ ವಿತರಿಸಲಾಗುವುದು.

ಸಮಾರಂಭದಲ್ಲಿ ಜಿಲ್ಲೆಯ 10 ಪ್ರಗತಿಪರ ತೋಟಗಾರಿಕಾ ಬೆಳೆಗಳ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು
ಪ್ರದರ್ಶನದ ಅಂಗವಾಗಿ ಕೃಷಿ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ ಸೇರಿದಂತೆ ವಿವಿಧ ಇಲಾಖೆಗಳ 40 ಸ್ಟಾಲ್‍ಗಳನ್ನು ಸ್ಥಾಪಿಸಲಾಗುವುದು ಮತ್ತು ಖಾಸಗಿಯವರೂ ಸೇರಿ ಒಟ್ಟು 120 ಸ್ಟಾಲ್‍ಗಳು ಪ್ರದರ್ಶನದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ವಿಶೇಷತೆಗಳೇ ಹೆಚ್ಚಾಗಿರಲಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಅನಂತಸ್ವಾಮಿ ರಾಗಕ್ಕಿಲ್ಲ ಮನ್ನಣೆ: ಪತ್ನಿ ಬೇಸರ

Tumkur: ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯನ್ನು ಅಧಿಕೃತ ಎಂದು ಇನ್ನೂ ಘೋಷಿಸದಿರುವ ಬಗ್ಗೆ ಮೈಸೂರು ಅನಂತಸ್ವಾಮಿ ಕುಟುಂಬ ತೀವ್ರ ಬೇಸರವನ್ನು ವ್ಯಕ್ತಪಡಿಸಿದೆ.

‘ಅವಧಿ’ ಅಂತರ್ಜಾಲ ತಾಣ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಬಹುರೂಪಿ’ ಪ್ರಕಾಶನ ಪ್ರಕಟಿಸಿರುವ ‘ನನ್ನ ಅಣ ಮೈಸೂರು ಅನಂತಸ್ವಾಮಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಈ ಬೇಸರ ವ್ಯಕ್ತವಾಯಿತು.

ಕೃತಿಯ ಲೇಖಕಿ, ಅನಂತಸ್ವಾಮಿಯವರ ಮಗಳಾದ ಸುನೀತಾ ಅನಂತಸ್ವಾಮಿ ಹಾಗೂ ಪತ್ನಿ ಶಾಂತ ಅನಂತಸ್ವಾಮಿ ಅವರು ಈ ಬೇಸರ ವ್ಯಕ್ತಪಡಿಸಿದರು.

೨೦೦೬ರಲ್ಲಿಯೇ ನಾಡಗೀತೆಗೆ ಯಾವ ರಾಗ ಸಂಯೋಜನೆಯನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಲು ಸರ್ಕಾರ ರಚಿಸಿದ್ದ ಸಮಿತಿಯು ಮೈಸೂರು ಅನಂತಸ್ವಾಮಿಯವರ ರಾಗವನ್ನು ಶಿಫಾರಸು ಮಾಡಿತ್ತು. ಆದರೂ ಸಹಾ ಅದನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿಲ್ಲ. ಇದರಿಂದ ನಾಡಗೀತೆಯ ರಾಗ ವಿವಾದಕ್ಕೆ ತುತ್ತಾಗಿದೆ ಎಂದರು.

ಮೈಸೂರು ಅನಂತಸ್ವಾಮಿಯವರು ‘ಜಯ ಭಾರತ ಜನನಿಯ ತನುಜಾತೆ’ ಹಾಡಿಗೆ ಸಂಯೋಜಿಸಿದ ರಾಗವನ್ನು ಸ್ವತಃ ಕುವೆಂಪುರವರೇ ಮೆಚ್ಚಿದ್ದರು. ಸರ್ಕಾರ ಈ ಗೀತೆಯನ್ನು ನಾಡಗೀತೆ ಎಂದು ಪರಿಗಣಿಸುವ ಸಾಕಷ್ಟು ಮುಂಚೆಯೇ ಅನಂತಸ್ವಾಮಿಯವರು ಇದನ್ನು ನಾಡಿನ ಎಲ್ಲೆಡೆ ಹಾಡಿ ಜನಪ್ರಿಯಗೊಳಿಸಿದ್ದರು. ಖ್ಯಾತ ಹಾಡುಗಾರರಾದ ಪಿ ಕಾಳಿಂಗರಾಯರೂ ಸಹಾ ತಮ್ಮ ದಾಟಿಯನ್ನು ಬಿಟ್ಟು ಮೈಸೂರು ಅನಂತಸ್ವಾಮಿಯವರ ಸಂಯೋಜನೆಯನ್ನು ಮೆಚ್ಚಿ ಅದನ್ನು ಅಳವಡಿಸಿಕೊಂಡಿದ್ದರು.

ಅನಂತಸ್ವಾಮಿ ಅವರು ಭಾವಗೀತೆಯ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ. ನಾಡಗೀತೆಯ ರಾಗವನ್ನು ವಿವಾದಗೊಳಿಸುವ ಮೂಲಕ ಅವರಿಗೆ ಅವಮಾನ ಮಾಡಬೇಡಿ ಎಂದು ಅವರ ಕುಟುಂಬದವರು ಮನವಿ ಮಾಡಿದರು.

ಮೈಸೂರು ಅನಂತಸ್ವಾಮಿಯವರನ್ನು ಆಪ್ತವಾಗಿ ಚಿತ್ರಿಸುವ ಈ ಕೃತಿಯನ್ನು ಪ್ರಸ್ತುತ ಅಮೆರಿಕಾದಲ್ಲಿರುವ ಸುನೀತಾ ಅನಂತಸ್ವಾಮಿ ರಚಿಸಿದ್ದು ಅಪರೂಪದ ಛಾಯಾಚಿತ್ರಗಳನ್ನು ಹೊಂದಿದೆ.

ಕೃತಿಯನ್ನು bahuroopi.in ನಲ್ಲಿ ಕೊಳ್ಳಬಹುದು

ವನ್ಯಜೀವಿ ಸಂರಕ್ಷಣೆ: ವಿ.ವಿ.ಯಲ್ಲಿ ಚರ್ಚೆ

Publicstory. in


ತುಮಕೂರು: ವನ್ಯಜೀವಿ ಸಂರಕ್ಷಣೆ ಒಂದು ದಿನದ ಕೆಲಸವಲ್ಲ. ಅದು ನಿರಂತರ ಕಾರ್ಯವಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮೇವಾ ಸಿಂಗ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗವು ಮಂಗಳವಾರ ಏರ್ಪಡಿಸಿದ್ದ ‘ಭಾರತೀಯ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಣೆ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಜೀವ ವೈವಿಧ್ಯ ತಾಣಗಳ ಕುರಿತು ಮಾಹಿತಿ ನೀಡಿದ ಅವರು ಅಂತಹ ತಾಣಗಳನ್ನು ಸಂರಕ್ಷಿಸುವ ಸಮಾಜದ ಜವಾಬ್ದಾರಿಯನ್ನು ಒತ್ತಿ ಹೇಳಿದರು. ಲಯನ್ ಟೈಲ್ಡ್ ಮಕ್ಯಾಕ್ಯು ಜಾತಿಯ ಮಂಗಗಳು ಹಾಗೂ ಬಾನೆಟ್ ಮಕ್ಯಾಕ್ಯು ಜಾತಿಯ ಮಂಗಗಳ ಹೋಲಿಕೆ ಮಾಡುತ್ತಾ ಅವುಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.

ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಮಂಗಗಳು ಅದರ ವಿವಿಧ ಪ್ರಭೇದಗಳ ಬಗ್ಗೆ ಸಂಶೋಧನೆ ನಡೆಸಿರುವ ಪ್ರೊ. ಸಿಂಗ್ ಲಯನ್ ಟೈಲ್ಡ್ ಮಕ್ಯಾಕ್ಯು ಜಾತಿಯ ಮಂಗಗಳು ಅಳಿವಿನಂಚಿನಲ್ಲಿದ್ದು, ಇದಕ್ಕೆ ಆವಾಸಸ್ಥಾನ ವಿಘಟನೆ, ಬೇಟೆ, ಆವಾಸಸ್ಥಾನ ಅವನತಿ, ಅವಘಡಗಳು ಕಾರಣ ಎಂದು ತಿಳಿಸಿದರು.

ಕಾಡುಗಳು ನಾಶವಾಗುತ್ತಿರುವ ಕಾರಣ ಈ ಜಾತಿಯ ಮಂಗಗಳು ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ರಸ್ತೆ ಅಪಘಾತಗಳಲ್ಲಿ ಹಾಗೂ ವಿದ್ಯುತ್ ಅವಘಡಗಳಿಂದ ಇದರ ಸಂಖ್ಯೆ ನಶಿಸುತ್ತಿದ್ದು, ಅಳಿವಿನಂಚಿಗೆ ತಲುಪಿದೆ. ಈ ಜಾತಿಯ ಮಂಗಗಳನ್ನು ಸಂರಕ್ಷಿಸಲು ಸರ್ಕಾರದಿಂದ ರೂಪಿಸಿರುವ ಯೋಜನೆಗಳ ಬಗ್ಗೆ ವಿವರಿಸಿದರು.


ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ, ದೇಶದಲ್ಲಿ ವನ್ಯಜೀವಿಗಳ ಬಗ್ಗೆ ಹಲವಾರು ಸಂಶೋಧನೆಗಳು ನಡೆದರೂ ಅವುಗಳ ಅಳಿವು ಕಡಿಮೆಯಾಗುತ್ತಿಲ್ಲ. ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಸಂವಿಧಾನದಲ್ಲಿ ಇರುವ ಒಂದು ಕರ್ತವ್ಯವಾಗಿದ್ದರೂ ಅದನ್ನು ನಾವು ನಿರ್ವಹಿಸುತ್ತಿಲ್ಲ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿ ವಿ ಯ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಬಿ. ಆರ್. ಶಾಲಿನಿ. ಪರಿಸರ ವಿಜ್ಞಾನ ವಿಭಾಗದ ಸಂಯೋಜಕರಾದ ಡಾ. ರಾಜಾನಾಯ್ಕ ಎಚ್. ಉಪಸ್ಥಿತರಿದ್ದರು.