Tuesday, February 24, 2026
Google search engine
Home Blog Page 292

ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ SBI BANK

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌.ಬಿ.ಐ. ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಎಫ್‌ಡಿ ನಂತರ ಆರ್‌ಡಿಯ ಬಡ್ಡಿ ದರಗಳನ್ನುಇಳಿಸಿದೆ. ಒಂದು ವಾರದ ಹಿಂದಷ್ಟೆ ಎಸ್‌.ಬಿ.ಐ., ಎಫ್.ಡಿ. ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿತ್ತು. ಎಸ್‌.ಬಿ.ಐ. ಆರ್‌.ಡಿ. ಖಾತೆದಾರರಿಗೆ ಈಗ ಶೇಕಡಾ 0.15ರಷ್ಟು ಕಡಿಮೆ ಬಡ್ಡಿ ಸಿಗಲಿದೆ.

ಬ್ಯಾಂಕ್ ಹೊಸ ದರದ ಪ್ರಕಾರ 1 ರಿಂದ 10 ವರ್ಷಗಳ ಅವಧಿಯ ಆರ್‌.ಡಿ. ಖಾತೆಗಳ ಬಡ್ಡಿ ದರಗಳು ಶೇಕಡ 6.25 ರಿಂದ 6.10 ಕ್ಕೆ ಇಳಿದಿವೆ. 1 ವರ್ಷದಿಂದ 10 ವರ್ಷಗಳವರೆಗೆ ಪಕ್ವವಾಗುವ ದೀರ್ಘಾವಧಿಯ ಠೇವಣಿಗಳ ಮೇಲೆ ಜನವರಿ 10 ರಂದು ಎಸ್‌.ಬಿ.ಐ., ಎಫ್‌.ಡಿ. ದರವನ್ನು ಶೇಕಡಾ 0.15 ರಷ್ಟು ಇಳಿಸಿತ್ತು.

ಎಸ್‌.ಬಿ.ಐ., ಆರ್‌.ಡಿ. ಖಾತೆದಾರರು ಪ್ರತಿ ತಿಂಗಳು ಕನಿಷ್ಠ 100 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ. ಆದ್ರೆ ಬ್ಯಾಂಕ್ ಆರ್‌.ಡಿ. ಗಿಂತ ಜನರು ಅಂಚೆ ಕಚೇರಿ ಆರ್.ಡಿ.ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರ್‌.ಡಿ. ಮೇಲೆ ಶೇಕಡಾ 6.10 ರಂತೆ ಬಡ್ಡಿ ನೀಡುತ್ತದೆ. ಆದ್ರೆ ಅಂಚೆ ಕಚೇರಿಯಲ್ಲಿ ಶೇಕಡಾ 7.20 ರಷ್ಟು ಬಡ್ಡಿ ಸಿಗ್ತಿದೆ.

ಪೊಲೀಸ್ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮುಂದುವರೆಯುವುದೆ?

0

ಕೆ.ಆರ್.ರಾಘವೇಂದ್ರ


ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪೊನ್ನಸಮುದ್ರ ಗ್ರಾಮದಲ್ಲಿ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಗ್ರಾಮವಾಸ್ತವ್ಯ ಮಾಡುವ ಮೂಲಕ ಗ್ರಾಮಸ್ಥರ ನಾಡಿ ಹಿಡಿಯುವ ಕೆಲಸ ಮಾಡಿದ್ದಾರೆ.

ನಕ್ಸಲ್ ಪೀಡಿತ ಹಾಗೂ ಗಡಿ ತಾಲ್ಲೂಕಿನ ಗ್ರಾಮದಲ್ಲಿ ವಾಸ್ತವ್ಯ ಮಾಡುವುದರೊಂದಿಗೆ ಪೊಲೀಸ್ ಅಧಿಕಾರಿಗಳು ಜನರ ಮಧ್ಯೆ ಇದ್ದು ಅವರ ಮನಸ್ಸನ್ನು ಅರಿಯಬೇಕು. ಸಾರ್ವಜನಿಕರೊಡನೆ ಇದ್ದುಕೊಂಡು ಪೊಲೀಸ್ ಇಲಾಖೆ ಜನ ಸ್ನೇಹಿ ಎಂಬುದನ್ನು ಮನದಟ್ಟು ಮಾಡಬೇಕು ಎಂಬ ಸಂದೇಶವನ್ನು ನೀಡ ಹೊರಟಿರುವುದರ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇಲಾಖೆಯ ಡಿವೈ ಎಸ್ ಪಿ, ಸರ್ಕಲ್ ಇನ್ ಸ್ಪೆಕ್ಟರ್ ಪ್ರತಿ 15 ದಿನಕ್ಕೊಮ್ಮೆ ಗ್ರಾಮ ವಾಸ್ತವ್ಯ ಮಾಡಿ ಗ್ರಾಮಗಳ ಸಮಸ್ಯೆ ಬಗೆಹರಿಸಿ ಇಲಾಖೆ ಅಪರಾಧಗಳನ್ನು ತಡೆಯುವುದರ ಜೊತೆಗೆ ಗ್ರಾಮಗಳ ಹಾಗೂ ಜನ ಸಾಮಾನ್ಯರ ಸಮಸ್ಯೆ ಪರಿಹರಿಸುತ್ತದೆ ಎಂಬ ಆಶಾಕಿರಣವನ್ನು ಜನಮಾನಸದೊಳಗೆ ಮೂಡಿಸುವ ಕೆಲಸವಾಗಬೇಕು ಎಂಬ ಇಂಗಿತವನ್ನು ಜನತೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಯೊಬ್ಬ ಅಧಿಕಾರಿ ವರ್ಷಕ್ಕೆ 24 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಅಕ್ರಮ ಚಟುವಟಿಕೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕುವ ಕೆಲಸ ಮಾಡಿದಲ್ಲಿ ಉತ್ತಮ ವಾತಾವರಣ ಮೂಡಿಸಬಹುದು.

ಎಸ್.ಪಿ. ಡಾ.ಕೆ.ವಂಶಿಕೃಷ್ಣ ಅವರ ಗ್ರಾಮ ವಾಸ್ತವ್ಯ ಸಮುದಾಯದೆಡೆಗೆ ಪೊಲೀಸರು ಎಂಬ ಹೊಸ ಕಾರ್ಯಕ್ರಮಕ್ಕೆ ನಾಂಧಿ ಹಾಕಿಕೊಟ್ಟಿದೆ. ತಾಲ್ಲೂಕು, ಉಪ ವಿಭಾಗ ಮಟ್ಟದ ಅಧಿಕಾರಿಗಳು ಇದನ್ನು ಕಾರ್ಯಗತಗೊಳಿಸುತ್ತಾರೆಯೇ ಕಾದು ನೋಡಬೇಕಿದೆ.
ಪಾವಗಡ ತಾಲ್ಲೂಕಿನ ಪೊನ್ನ ಸಮುದ್ರ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಹೂಡಿದ ಎಸ್ ಪಿ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ.

ಸಿಬ್ಬಂದಿಯೊಂದಿಗೆ ಗ್ರಾಮವನ್ನು ಸುತ್ತಾಡಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ವಾಹನ ಸವಾರರನ್ನು ತಡೆದು, ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸದಾ ಜೊತೆಯಲ್ಲಿಟ್ಟುಕೊಂಡಿರಬೇಕು. ವಾಹನ ವಿಮೆ ಮಾಡಿಸಬೇಕು ಎಂದು ಜನರಲ್ಲಿ ಜಾಗೃತಿ ಮಾಡಿಸಿದ್ದಾರೆ. ಗ್ರಾಮಸಭೆ ನಡೆಸಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.

ತಾಯಿ, ಅಜ್ಜಿಯ ಮರಣದಿಂದ 7 ವರ್ಷದ ಬಾಲಕಿ ರೂಪ ಅನಾಥವಾಗಿದ್ದಾಳೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ ಕೂಡಲೇ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಗುವಿನ ರಕ್ಷಣೆ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸುವ ಮೂಲಕ ಗ್ರಾಮಸ್ಥರ ಮನ ಗೆದ್ದಿದ್ದಾರೆ.
ಗ್ರಾಮ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಮಾಹಿತಿ ಇದ್ದರೆ ತಕ್ಷಣ ಪೋಲೀಸರಿಗೆ ತಿಳಿಸಬೇಕು. ಕಾನೂನಿಗೆ ಗೌರವ ಕೊಡಬೇಕು. ಪ್ರತಿಯೊಬ್ಬರು ಕಾನೂನು ಪಾಲಿಸಿದಾಗ ಮಾತ್ರ ಅಪರಾಧಗಳು ಕಡಿಮೆಯಾಗುತ್ತವೆ ಎಂದು ಗ್ರಾಮಸ್ಥರಲ್ಲಿ ಕಾನೂನಿನ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಿದರು.

ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಬೀಟ್ ಬಂದಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಮಾತನಾಡಿ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಗಲಭೆ ಹಾಗು ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆಯಿಂದಿರಬೇಕು ಎಂದು ಸಿಬ್ಬಂದಿಗೆ ಎಸ್.ಪಿ ತಮ್ಮದೇ ಶೈಲಿಯಲ್ಲಿ ಒಂದು ಕ್ಲಾಸ್ ತೆಗೆದುಕೊಂಡಿದ್ದು ಗ್ರಾಮಸ್ಥರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು.
ಗ್ರಾಮ ವಾಸ್ತವ್ಯಕ್ಕಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ 15 ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದರು. ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ನೆಲದ ಮೇಲೆ ಕುಳಿತು ಎಸ್.ಪಿ ಅವರು ಬಾಳೆ ಎಲೆಯಲ್ಲಿ ಊಟ ಸೇವಿಸಿದರು.

ಇವರ ಸರಳತೆ, ಎಲ್ಲರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ, ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕೆಂಬ ಬಯಕೆ ಇತರೆ ಅಧಿಕಾರಿಗಳು ಕಲಿತುಕೊಳ್ಳಬೇಕು. ಗ್ರಾಮ ವಾಸ್ತವ್ಯದ ಚಿಂತನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾತ್ರ ಸೀಮಿತವಾಗುತ್ತದೆಯೇ ಅಥವಾ ಇತರೆ ಅಧಿಕಾರಿಗಳು ಅನುಸರಿಸುತ್ತಾರೆಯೆ ಎಂಬುದನ್ನು ಜನರು ಕಾತುರ, ಕೌತುಕದಿಂದ ಎದುರು ನೋಡುತ್ತಿದ್ದಾರೆ.

ಧನಗರ ಬಡಿದು ಜನ ಹೆಳವರಾದರೇ..?

0

ಡಾ.ಓ.ನಾಗರಾಜು.


ಇತ್ತೀಚೆಗೆ ಅಷ್ಟೆ ಜನ ತಮ್ಮ ದುಡಿಮೆಯ ಆದಾಯ ತಮ್ಮ ಸಂಸಾರಕ್ಕೆ ಮೀಸಲು, ಮಾಡಿದ ಅಡುಗೆ ಮನೆ ಮಂದಿಗೆ ಮಾತ್ರ, ಕೊಂಡು ತಂದ ಅಥವಾ ಬೆಳೆದ ಯಾವುದೇ ಹಣ್ಣು ಹಂಪಲು ಮಡದಿ ಕಂದಗಳಿಗೆ ಎಂದು ಭಾವಿಸಿಕೊಂಡು ಸ್ವಾರ್ಥದ ಬದುಕು ಸಾಗಿಸುತ್ತಿರುವುದು.

ಮೊದಲು ಈ ತರದ ಬೇರಿಂಗಡ ಇರಲಿಲ್ಲ.
ಅವಿಭಕ್ತ ಕುಟುಂಬ ವ್ಯವಸ್ಥೆ ಯಲ್ಲಿ ಎಲ್ಲರೂ ಒಂದಿಲ್ಲೊಂದು ಬಗೆಯಲ್ಲಿ ದುಡಿಯುವವರೆ ..ವೃದ್ಧರು ಹೆಳವರುಕೂಡ ಮನೆ ಯಲ್ಲಿದ್ದುಕೊಂಡು ಸಣ್ಣ ಪುಟ್ಟ ಕೆಲಸ ಮಾಡುವುದು ಮನೆಗಾಗಿ ಮಿಡಿಯುವುದು ನಡೆಯುತ್ತಿತ್ತು
ವೈಯಕ್ತಿಕ ದುಡಿಮೆ ಕೂಡು ಕುಟುಂಬದ ಒಟ್ಟಾದಾಯ ವಾಗುತಿತ್ತು. ಅದರ ಫಲಭೋಗಿಸುವಿಕೆ ಕೂಡ ಅನ್ಯೋನ್ಯವಾಗಿ ಸಾಮುದಾಯಿಕ ನೆಲೆಯಲ್ಲಿ ನೆರವೇರುತ್ತಿತ್ತು.

ಇನ್ನು ಮನೆಯಲ್ಲಿ ತಯಾರಿಸುವ ರುಚಿಕಟ್ಟು ಅಡುಗೆ ಮನೆ ಮಂದಿಗೆ ಅಲ್ಲದೆ ದಾಯಾದಿ ಸಂಬಂಧಿಗಳ ಮನೆ ಗೋಳ ಗಂಗಳದಲ್ಲಿ ಸ್ಥಾಪಿತಗೊಳ್ಳುತಿತ್ತು. ವಯಸ್ಸಾದವರ ಅಥವಾ ಪ್ರೀತಿ ಪಾತ್ರರ ಗ್ವಾಮಾಳೆಗುಂಟ ಬಸಿರಿಗೆ ಇಳಿಯುತಿತ್ತು.
ಹಸುಗೂಸುಗಳಿಗಂತು ಕವಳ ಒಂದು ಮನೆಯೇ? ಉದೊಸಲುದಾಟಿದ ಅಕ್ಕರೆ, ತಟ್ಟೆ ಮೀರಿದ ಕೈಎಂಜಲೇ ನೈಜಪ್ರೀತಿ..

ಹಾಗೆಯೇ ಹಣ್ಣು ಹಂಪಲು ತಿಂಡಿ ತಿನಿಸಿನ ವಿಚಾರ ಕ್ಕೆ ಬಂದಾಗ ಕೂಡು ಕುಟುಂಬ ವಿರಲಿ ಸಿಡಿದ ಮನೆಯಿರಲಿ ಕಡೆ ಪಕ್ಷ ನೆರೆ ಹೊರೆ ಯ ಕೂಸುಗಳಿಗೆ ಕೊಟ್ಟು ಕಳಿಸುವ ಇಲ್ಲವೇ ತಮ್ಮ ಕುಡಿಗಳ ಜತನದಲಿ ಕೂರಿಸಿ ತಿನ್ನಿಸಬಯಸುವ ಸೌಹಾರ್ದತೆ ಇರುತ್ತಲಿತ್ತು.

ಆದರೆ ಇಂದು.. ?
ಹೂಂ.ಈಗ ಬರಿಯ ಕನವರಿಕೆ.
ಜನ ಧನಗರ ಬಡಿಸಿ ಕೊಂಡು ಕೃಪಣತೆಯ ಎಳವುತನದಲಿ ಔದಾರ್ಯ ನೀಗಿದ ಬದುಕನ್ನು ಏಗುತ್ತಿದ್ದಾರೆ.

ಮನೆ ಮನಸ್ಸಿನ ನಡುವೆ ಗೋಡೆಗಳು ಎದ್ದಿವೆ.ಸಹಜಬಂಧುತ್ವದ ಭಾವಕೋಶದ ಬಾಗಿಲಿಗೆ ಅಸಹನೆಯ ಬೀಗ ಜಡಿಯಲ್ಪಟ್ಟಿದೆ. ಎದ್ದರೆ ಬಿದ್ದರೆ ಎಡತಾಕುವ ಮುಖಾಮುಖಿಯಾಗುವ ಸಂದರ್ಭದೊಳಗೂ ಪರಸ್ಪರ ಬಂಧುಗಳಾಗಿ ದಾಯಾದಿ ಗಳಾಗಿ ಸ್ನೇಹಿತರಾಗಿ ಇದ್ದರೂ ಪ್ರತ್ಯೇಕತೆಯ ವರ್ತುಲ ನಿರ್ಮಿಸಿಕೊಂಡು ಅಪರಿಚಿತ ಆಕೃತಿಗಳಾಗಿ ಕಂಡೂ ಕಾಣದಂತೆ ಅಥವಾ ಹಗೆಸಾಧಿಸುತ್ತ ಅಡ್ಡಾಡುವುದು ನಡೆಯುತ್ತಿದೆ.
ವೈಯುಕ್ತಿಕ-ಪ್ರಗತಿಗೆ ಸಾಮುದಾಯಿಕವಾಗಿ ಆರ್ಥಿಕ ಭಾವನಾತ್ಮಕ ವಿಕಾಸಕ್ಕೆ ಕಕ್ಕುಲಾತಿ ಯ ತಡೆ ಗೋಡೆ ಎದ್ದು ಬಿಟ್ಟಿದೆ.ಇದರೊಟ್ಟಿಗೆ ಜಾತಿ ಧರ್ಮಗಳ ಪ್ರೇತ ಬೇರೆ ಮೈದುಂಬಿ ಕೊಂಡಿದೆ . ಮಾನವೀಯತೆ ಮರೀಚಿಕೆ ಎನಿಸುತ್ತದೆ.
ಅಲ್ಲ.. ನಾವು ಕುವೆಂಪು ಅವರ ಮನುಮತ-ವಿಶ್ವಪಥ ಪರಿಕಲ್ಪನೆ ಯನ್ನು ಸಾಕಾರಗೊಳಿಸಿ ವಿಶ್ವ ಮಾನವ ರಾಗಲೇಬೇಕಾದ ದರ್ದಿನ ಈ ಹೊತ್ತಿನಲ್ಲಿ ಹೀಗೆ ದುರ್ದಿನದ ಕಂದಕ ನಿರ್ಮಿಸಿಕೊಳ್ಳುವುದು ಎಷ್ಟುಸರಿ? ಇದು ಖೇದದ ಸಂಗತಿ ಅಲ್ಲವೇ..ಸ್ನೇಹಿತರೇ?


ಲೇಖಕರು
ಕಾದಂಬರಿಕಾರ
ತುಮಕೂರು
94486 59646

ರಚಿತ ರಾಮ್ ಕಾಣೆಯಾಗಿದ್ದಾರೆ!

0

Public Story
ಬೆಂಗಳೂರು: ಚಿರಂಜೀವಿ ಸರ್ಜಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ‘ಏಪ್ರಿಲ್’ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.

ರಚಿತ ರಾಮ್ ಕಾಣೆಯಾಗಿದ್ದಾರೆ ಎಂದು ಚಿರಂಜೀವಿ ಸರ್ಜಾ ಜಾಹೀರಾತು ಫಲಕ ಹಿಡಿದು ನಿಂತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಅದೇ ಪೋಸ್ಟರ್ನಲ್ಲಿ ರಚಿತಾ ರಾಮ್ ಅವರು ಪುಟ್ಟ ಬಾಲಕಿ ಮಿಸ್ಸಿಂಗ್ ಎಂಬ ಪೋಸ್ಟರ್ ಹಿಡಿದಿರುವುದು ಕುತೂಹಲ ಹೆಚ್ಚಿಸಿದೆ.

ಚಿರಂಜೀವಿ ಸರ್ಜಾ ‘ಏಪ್ರಿಲ್’ ಚಿತ್ರದ ಫಸ್ಟ್ಲುಕ್ ಅನ್ನು ಟ್ವೀಟ್ ಮಾಡಿ ‘ ಮುಂದಿನ ಚಿತ್ರ ಏಪ್ರಿಲ್’ ಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ಇರಲಿ… ಜೈ ಅಂಜನೇಯ‘ ಎಂದು ಟ್ವೀಟ್ ರ್ ನಲ್ಲಿ ಬರೆದಿದ್ದಾರೆ. ಈ ಪೋಸ್ಟರ್ ನೋಡಿದರೆ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಎಂಬುದರಲ್ಲಿ ಅನುಮಾನ ಇಲ್ಲ.

ಚಿರುಗೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಸತ್ಯ ರಾಯಲ ಈ ಸಿನಿಮಾವ ನಿರ್ದೇಶನ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ.

ಕವಿತಾ ಗೌಡ ‘ಗೋವಿಂದ ಗೋವಿಂದ’ ನಾಯಕಿ

0

Public Story:
ತಿಲಕ್ ನಿರ್ದೇಶನದ ‘ಗೋವಿಂದ ಗೋವಿಂದ’ ಚಿತ್ರದ ನಾಯಕಿಯಾಗಿ ಕವಿತಾ ಗೌಡ ನಟಿಸಿದ್ದಾರೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ತಿಲಕ್ ಅವರಿಗೆ ಹಿರಿತೆರೆಯ ನಿರ್ದೇಶನ ಇದೇ ಮೊದಲು. ಸುಮಂತ್ ಶೈಲೇಂದ್ರ ಇದರ ನಾಯಕ. ಹೀರೊ ಆಗಿ ಅವರಿಗೆ ಇದು ಏಳನೇ ಚಿತ್ರ. ಈ ಸಿನಿಮಾದಲ್ಲಿ ಅವರದ್ದು ಅನುತ್ತೀರ್ಣಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಯ ಪಾತ್ರವಂತೆ.
ಸಿನಿಮಾದ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ವಿಜಯಪುರ, ಚಿಂತಾಮಣಿ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಲಾಗಿದೆ. ಎರಡು ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.
ನಾಲ್ಕು ಹಾಡುಗಳಿಗೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಸಂಕಲನ ಸಿ. ರವಿಚಂದ್ರನ್ ಅವರದು. ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸಿದ್ದಾರೆ. ಮೊದಲ ಬಾರಿಗೆ ಎಸ್. ಶೈಲೇಂದ್ರಬಾಬು ಪಾಲುದಾರಿಕೆಯಲ್ಲಿ ಬಂಡವಾಳ ಹೂಡಿದ್ದಾರೆ. ಅವರೊಟ್ಟಿಗೆ ರವಿ ಆರ್. ಗರಣಿ ಮತ್ತು ಕಿಶೋರ್ ಎಂ.ಕೆ. ಮಧುಗಿರಿ ಕೈಜೋಡಿಸಿದ್ದಾರೆ.
‘ಹುಂಡಿ ನಮ್ದು ಕಾಸು ನಿಮ್ದು’ ಎಂಬ ಅಡಿಬರಹದ ಮೂಲಕ ಚಿತ್ರತಂಡ ಕಾಮಿಡಿ ಕಥೆ ಹೇಳಲು ಹೊರಟಿದೆ. ಅದು ಹುಡುಗರ ಗುಂಪು. ಜೀವನದಲ್ಲಿ ಅವರಿಗೆ ಗುರಿ ಎಂಬುದೇ ಇರುವುದಿಲ್ಲ. ನಾಯಕಿಯನ್ನು ಡ್ಯಾನ್ಸರ್ ಮಾಡಬೇಕೆಂಬುದು ಅವರ ಕನಸು. ಆಕೆಯನ್ನು ಅಪಹರಿಸಿ ಅವಳ ತಂದೆಯಿಂದ ಹಣ ಪಡೆದು ನಗರಕ್ಕೆ ಕಳುಹಿಸುವ ಯೋಜನೆ ಅವರದು. ಆದರೆ, ದುಷ್ಕರ್ಮಿಗಳು ಆಕೆಯನ್ನು ಅಪಹರಿಸುತ್ತಾರೆ. ಆಕೆಯ ಬಿಡುಗಡೆಗೆ ಹೇಗೆಲ್ಲಾ ಹಣ ಹೊಂದಿಸುತ್ತಾರೆ ಎನ್ನುವುದು ಈ ಚಿತ್ರದ ಪ್ರಮುಖ ಕಥೆ.
ಉಡಾಳ ಸ್ನೇಹಿತರಾಗಿ ವಿಜಯ್ ಚೆಂಡೂರ್, ಪವನ್ಕುಮಾರ್ ನಟಿಸಿದ್ದಾರೆ. ಭಾವನಾ ಮೆನನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ, ಅಚ್ಯುತ್ಕುಮಾರ್, ಶೋಭರಾಜ್, ಪದ್ಮಾ ವಾಸಂತಿ, ಗೋವಿಂದೇಗೌಡ, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್ ತಾರಾಗಣದಲ್ಲಿದ್ದಾರೆ.

ತುಮಕೂರಿನಲ್ಲಿ ಜೂಜುಕೋರರ ಉಪಟಳ : ರೌಡಿಶೀಟರ್ ಪಟ್ಟಿಗೆ ಜೂಜುಕೋರರು

ಪಬ್ಲಿಕ್ ಸ್ಟೋರಿ:


ತುಮಕೂರು ಜಿಲ್ಲೆಯಾದ್ಯಂತ ಮಟ್ಕಾ ಜೂಜಾಟ ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. 10 ದಿನಗಳೊಳಗೆ ಎರಡಕ್ಕಿಂತ ಹೆಚ್ಚು ಪ್ರಕರಣಗಳಿರುವ ಜೂಜುಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಿದ್ದತೆ ನಡೆಸಲಾಗಿದೆ. ರೌಡಿ ಷೀಟರ್ ಪಟ್ಟಿಗೆ ಸೇರಿಸಿ ಗಡಿಪಾರು ಮಾಡಲಾಗುವುದು ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಗಳನ್ನು ಮದ್ಯ ಮುಕ್ತ ಗ್ರಾಮಗಳನ್ನಾಗಿಸಲು ಒತ್ತು ನೀಡಲಾಗುವುದು. ಕುಟುಂಬಗಳ ನೆಮ್ಮದಿ ಹಾಳು ಮಾಡುವ ಅಕ್ರಮ ಮದ್ಯ ಮಾರಾಟ ಕೇಂದ್ರಗಳನ್ನು ನಿಯಂತ್ರಿಸುವತ್ತ ಗಮನಹರಿಸಲಾಗುವುದು. ತಾಲ್ಲೂಕಿನ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು. ದೊಮ್ಮತಮರಿ, ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ಆರಂಭಿಸುವ ಬಗ್ಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದರು.

ಡಿವೈಎಸ್ ಪಿ ಎಂ.ಪ್ರವೀಣ್ ಮಾತನಾಡಿ, ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಲಾಗುವುದು. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಜನ ಸಂಪರ್ಕ ಸಭೆಯಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.

ತಾಲ್ಲೂಕಿನಾದ್ಯಂತ ಮಟ್ಕಾ ಜೂಜಾಟ ಹೆಚ್ಚಿದೆ. ಜೂಜಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವತ್ತ ಇಲಾಖೆ ಗಮನಹರಿಸಬೇಕು ಎಂದು ಬಿಜೆಪಿ ರೈತ ಮೋರ್ಚ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಒತ್ತಾಯಿಸಿದರು.

ಸರಗಳ್ಳತನ ಪ್ರಕರಣಗಳು ಹೆಚ್ಚಿವೆ. ಮಹಿಳೆಯರು ನಿರ್ಭಯವಾಗಿ ಸಂಚರಿಸುವ ವಾತಾವರಣ ನಿರ್ಮಿಸಬೇಕು ಎಂದು ಸುಶೀಲಮ್ಮ ಒತ್ತಾಯಿಸಿದರು.


ಸೋಲಾರ್ ನಲ್ಲಿ ಕತ್ತಲು

ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ದಲ್ಲಾಳಿಗಳು ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ. ಸರ್ಕಾರದ ಆದೇಶದಂತೆ ವಿದ್ಯುತ್ ಲೈನ್ ಎಳೆಯುವ ಜಮೀನುಗಳ ಮಾಲೀಕರಿಗೆ ಪರಿಹಾರ ಕೊಡಿಸಿಕೊಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ತಿಳಿಸಿದರು.


ಪಟ್ಟಣದ ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ. ಪಟ್ಟಣದ ಕೆಲವೆಡೆ ವಾಹನ ದಟ್ಟಣೆ ಹೆಚ್ಚಿದೆ ಎಂದು ರೈತ ಮುಖಂಡ ಕೃಷ್ಣರಾವ್ ತಿಳಿಸಿದರು.

ಸಂವಿಧಾನ, ಕಾನೂನಿನ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ದಲಿತ ಮುಖಂಡ ಸಿ.ಕೆ. ತಿಪ್ಪೇಸ್ವಾಮಿ ತಿಳಿಸಿದರು.

ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಶೈಲಮೂರ್ತಿ, ನಾಗರಾಜು, ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ, ರಾಮಕೃಷ್ಣಯ್ಯ, ರಾಮಯ್ಯ, ಕಾಂತರಾಜು, ಮಂಜುನಾಥ್, ಮಂಗಳಗೌರಮ್ಮ ಉಪಸ್ಥಿತರಿದ್ದರು.

ಲ್ಯಾಪ್ ಟಾಪ್ ವಿತರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪಬ್ಲಿಕ್ ಸ್ಟೋರಿ
ಪಾವಗಡ: ಪದವಿ ಶಿಕ್ಷಣ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಬೇಕು ಎಂದು ಒತ್ತಾಯಿಸಿ ವೈ.ಇ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿತ್ತು. ಈ ಬಾರಿ ಪ್ರಥಮ ವರ್ಷದ ಪದವಿ ಶಿಕ್ಷಣ ಪಡೆಯುತ್ತಿರುವ ಎಲ್ಲರಿಗೂ ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ. ಆದರೆ ದ್ವಿತೀಯ, ತೃತೀಯ ವರ್ಷದ ಪರಿಶಿಷ್ಟ ಜಾತಿ, ಪಂಗಡದವರನ್ನು ಹೊರತು ಪಡಿಸಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಪದವಿ ವಿದ್ಯಾರ್ಥಿಗಳು ಲ್ಯಾಪ್ ಟಾಪ್ ನಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

ಕಳೆದ ವರ್ಷ ಕೆಲ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿಲ್ಲ. ಈ ಬಗ್ಗೆ ವಿಚಾರಿಸಿದರೆ ಕಳುವಾಗಿದ್ದ ಲ್ಯಾಪ್ ಟಾಪ್ ಗಳನ್ನು ನ್ಯಾಯಾಲಯ ಆದೇಶ ನೀಡುವವರೆಗೆ ವಿತರಿಸುವಂತಿಲ್ಲ. ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾದೀಶರು ಕೇಳಿದಾಗ ಹಾಜರುಪಡಿಸಬೇಕು. ಹೀಗಾಗಿ ಅವುಗಳನ್ನು ವಿತರಿಸುವಂತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಲ್ಯಾಪ್ ಟಾಪ್ ಗಳು ವಿದ್ಯಾರ್ಥಿಗಳ ಬಳಕೆಗೆ ಬಾರದೆ ಕಾಲೇಜಿನಲ್ಲಿ ವ್ಯರ್ಥವಾಗಿವೆ ಎಂದು ದೂರಿದರು.
ಸರ್ಕಾರ ಸೌಲಭ್ಯಗಳನ್ನು ಎಲ್ಲರಿಗೂ ಸಮಾನವಾಗಿ ವಿತರಿಸುವ ಮೂಲಕ ಸಾಮಾಜಿಕ ನ್ಯಾಯ, ಸಮಾನತೆಯನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಇಲ್ಲ ಸಲ್ಲದ ಮಾನದಂಡಗಳ ನೆಪ ಒಡ್ಡಿ ತಾರತಮ್ಯ ಮಾಡಬಾರದು ಎಂದು ಅಳಲನ್ನು ತೋಡಿಕೊಂಡರು.
ಚಳ್ಳಕೆರೆ ರಸ್ತೆಯ ಕಾಲೇಜಿನಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

CAA, NCR ಸಂವಿಧಾನ ವಿರೋಧಿ: ಉಗ್ರಪ್ಪ

ತುಮಕೂರು: ಕೇಂದ್ರ ಸರ್ಕಾರ CAA ಮತ್ತು NCR ಜಾರಿಗೊಳಿಸಲು ಹೊರಟಿದ್ದು ಇದು ಸಂವಿಧಾನ ವಿರೋಧಿಯಾಗಿದೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಸಹ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಕಾಯ್ದೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

ತುಮಕೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿಎಎ ಮತ್ತು ಎನ್ಆರ್.ಸಿ ಕಾಯ್ದೆಗಳು ಸಂವಿಧಾನದ ಆರ್ಟಿಕಲ್ 14, 15, 21, 25 ಮತ್ತು 51ಎ ವಿರುದ್ಧವಾಗಿದೆ. ಈ ಕಾಯ್ದೆಗಳಿಂದ ಮುಸ್ಲೀಂ ಸಮುದಾಯವನ್ನು ಹೊರಗಿಡುವ ಕೆಲಸ ನಡೆಯುತ್ತಿದೆ. ಅಷ್ಟೇ ಅಲ್ಲ ಬೇರೆಯವರಿಗೂ ಇದರಿಂದ ತೊಂದರೆಯಾಗಲಿದೆ ಎಂದು ಆರೋಪಿಸಿದರು.

ಸಿಎಎ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲೀಮರಿಗೆ ಪೌರತ್ವ ನೀಡುವುದಿಲ್ಲ. ಇದು ಧರ್ಮಾಧಾರಿತವಾದ ಕಾಯ್ದೆಯಾಗಿದೆ. ಅಮೇರಿಕಾ ಅಧ್ಯಕ್ಷರ ಭಯದಿಂದಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ, ಕ್ರಿಶ್ಚಿಯನ್ನರಿಗೆ ಪೌರತ್ವ ನೀಡಲು ಅವಕಾಶ ಕೊಟ್ಟಿದ್ದಾರೆ. ಆದರೆ ಶ್ರೀಲಂಕಾ, ಬಾಂಗ್ಲಾ, ನೇಪಾಳದಿಂದ ಬರುವ ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮೀಯರಿಗೂ ಪೌರತ್ವ ನೀಡಬೇಕು.

ಆದರೆ ಕೇಂದ್ರ ಸರ್ಕಾರ ಜಾತಿ, ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿದೆ. ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳ ಕಡೆ ಗಮನ ಕೊಡದೆ ಸಿಎಎ ಮತ್ತು ಎನ್ಆರ್.ಸಿಯಂತಹ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಜನರ ಮನಸ್ಸುಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಸಿಎಎ ಮತ್ತು ಎನ್ಆರ್.ಸಿ ಜಾರಿಗೆ ತರುವವರೆಗೂ ವಿರಮಿಸುವುದಿಲ್ಲ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನು ಒಡೆಯುವ ಮೂಲಕ ಓಟ್ ಬ್ಯಾಂಕ್ ಗಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಭಾರತದ ಸಂಸ್ಕೃತಿ ಸರ್ವೇಜನೋ ಸುಖಿನೋ ಭವಂತು ಎನ್ನುತ್ತದೆ. ವಿಶ್ವಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಾರಿದ ವಿಶ್ವಮಾನವ ಸಂದೇಶವೂ ಇದೇ ಆಗಿದೆ. ಭಾರತ ಎಲ್ಲಾ ಧರ್ಮಗಳಿಗೂ ಸಮಾನ ರಕ್ಷಣೆ ನೀಡಿದೆ ಎಂದು ಹೇಳಿದರು. ಆದರೆ ಇಂದು ಬಿಜೆಪಿ ಸಿಎಎ ಮತ್ತು ಎನ್ಆರ್.ಸಿ ಮೂಲಕ ವಿವೇಕಾನಂದರ ತತ್ವಗಳನ್ನುಗಾಳಿಗೆ ತೂರುತ್ತಿದೆ.

ಸಿಎಎ ಮತ್ತು ಎನ್.ಆರ್.ಸಿ ಪರ ಸಹಿ ಸಂಗ್ರಹ ಚಳವಳಿಗೆ ಬಿಜೆಪಿ ಮುಂದಾಗಿದೆ. ಮನೆಮನೆ ಭೇಟಿ ಮಾಡುತ್ತಿದೆ. ಆದರೆ ದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ತುಟಿಬಿಚ್ಚುತ್ತಿಲ್ಲ. ಅನಗತ್ಯ ಗೊಂದಲ ಸೃಷ್ಟಿಸಿ ದೇಶವನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕುಸಿದಿರುವ ದೇಶದ ಆರ್ಥಿಕತೆ ಬಗ್ಗೆ ಗಮನ ಹರಿಸಬೇಕು ಎಂದು ಆಗ್ಹಹಿಸಿದರು.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜಾ ಇಲಿ. ಅವರದ್ದು ವೀಕ್ ಮೈಂಡ್, ಕೆಲಸ ಮಾಡುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ವಕ್ತಾರ ಮುರಳೀಧರ ಹಾಲಪ್ಪ, ನಿರಂಜನ್ ಮೊದಲಾದವರು ಉಪಸ್ಥಿತರಿದ್ದರು.

ಸುಂದರ ನಗರ: IAS ಅಧಿಕಾರಿ ಭೂಬಾಲನ್ ಏನ್ ಮಾಡ್ತಿದ್ದಾರೆ ಗೊತ್ತಾ?

0

ವಿಶೇಷ ವರದಿ : ಇಮ್ರಾನ್ ಪಾಷ


ತುಮಕೂರು: ತುಮಕೂರು ನಗರ ಈಗ ಸ್ಮಾರ್ಟ್ ಸಿಟಿಯತ್ತ ಮುಖಮಾಡುತ್ತಿದೆ. ಸಾವಿರಾರು ಕೋಟಿ ಅನುದಾನದಲ್ಲಿ ನಗರ ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದೆ.ಈ ಅನುದಾನವನ್ನು ಸಮರ್ಪಕವಾಗಿ ವಿನಿಯೋಗ ಮಾಡುವಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ಎನಿಸಿರುವ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಇವರ ಶ್ರಮ ಹೆಚ್ಚಿನದಾಗಿದೆ. ಇದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂತಹ ದಕ್ಷ ಅಧಿಕಾರಿಗೆ ತಂತ್ರ,ಕುತಂತ್ರದಿಂದ ವರ್ಗಾವಣೆ ಶಿಕ್ಷೆ ನೀಡಿದರು. ಆ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿಯ ಯೋಜನೆಗಳು ಹಳ್ಳ ಹಿಡಿಯಲು ಪ್ರಾರಂಭಿಸಿದವು. ಗುರುಗಳು ಇಲ್ಲದ ಮಕ್ಕಳು ಏನಾಗಬಲ್ಲರು ಎನ್ನುವ ವಾಕ್ಯ ಅನುಸಾರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ಇಲ್ಲದ ಪರಿಣಾಮ ನಡೆಯುತ್ತಿದ್ದ ಎಲ್ಲಾ ಕಾಮಗಾರಿಗಳು ನಿಧಾನಗತಿಯಲ್ಲಿ ಹುಚ್ಚನ ಮದುವೆಯಲ್ಲಿ ಉಂಡೋನೆ ಜಾಣ ಎನ್ನುವಂತೆ ಆಗಿತ್ತು.

ಇದನ್ನು ಗಮನಿಸಿದ ನಗರದ ಸಾರ್ವಜನಿಕರು ದಕ್ಷ, ಪ್ರಾಮಾಣಿಕ ಅಧಿಕಾರಿಯಾದ ಟಿ‌.ಭೂಬಾಲನ್ ಐಎಎಸ್ ಇವರ ಸೇವೆ ತುಮಕೂರು ನಗರಕ್ಕೆ ಅವಶ್ಯಕತೆ ಇದೆ ಎಂದು ಮಾತನಾಡುವಂತಾಗಿತ್ತು.ಇದನ್ನು ಗಮನಿಸಿದ ಸಾಮಾಜಿಕ ಹೋರಾಟಗಾರರ ತಂಡ ಸಾರ್ವಜನಿಕರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದರು.ಇದರ ಪರಿಣಾಮವಾಗಿ ತುಮಕೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಒಂದು ಬಾರಿ ವರ್ಗಾವಣೆಯಾಗಿದ್ದ ಅಧಿಕಾರಿ ಮತ್ತೊಮ್ಮೆ ಅಧಿಕಾರ ಸ್ವೀಕಾರ ಮಾಡಿರುವುದು ಟಿ.ಭೂಬಾಲನ್ ಇವರು ಮಾತ್ರ.ಜನರ ಹಕ್ಕೋತ್ತಾಯಕ್ಕೆ ಶಾಸಕ ಜ್ಯೋತಿಗಣೇಶ್ ಸಹ ಮನ್ನಣೆ ನೀಡಿದರು.

ಶಾಸಕ ಜ್ಯೋತಿಗಣೇಶ್

ಭೂಬಾಲನ್ ಮರುನೇಮಕವಾಗಿ ಇಲ್ಲಿಗೆ ಒಂದು ತಿಂಗಳು ಕಳೆಯುತ್ತಿದೆ.ಸ್ಮಾರ್ಟ್ ಸಿಟಿಯಲ್ಲಿ ಆಗಿದ್ದ ಅವ್ಯವಸ್ಥೆಗಳನ್ನು ಸರಿಪಡಿಸುವ ಮೂಲಕ ಒಂದು ಹಂತದಲ್ಲಿ ಯಶಸ್ಸು ಕಂಡಿದ್ದಾರೆ‌.ಇನ್ನೂ ಹಲವು ಇತಿಹಾಸ ನಿರ್ಮಾಣ ಮಾಡುವ ಕಾರ್ಯಯೋಜನೆಗಳು ಇವರಲ್ಲಿ ಅಡಗಿವೆ ಎಂದರೆ ತಪ್ಪಾಗಲಾರದು.ಇಂತಹ ದಕ್ಷ ಅಧಿಕಾರಿ ಮರುನೇಮಕವಾಗಿ ಒಂದು ತಿಂಗಳ ಅವಧಿಯಲ್ಲಿ ಮತ್ತೊಂದು ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದಾರೆ‌.

ಸ್ಮಾರ್ಟ್ ಸಿಟಿಯ ಜೊತೆಗೆ ಸುಂದರ ನಗರವನ್ನಾಗಿಸುವ ಪ್ರಯತ್ನ..!


ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಂದಿರುವ ಅನುದಾನದಲ್ಲಿ ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರ ಜೊತೆಯಲ್ಲಿ ತುಮಕೂರು ನಗರವನ್ನು ಸುಂದರ ನಗರವನ್ನಾಗಿಸುವ ಕಾರ್ಯಕ್ಕೆ ದಕ್ಷ, ಪ್ರಾಮಾಣಿಕ ಅಧಿಕಾರಿ ಉತ್ತಮವಾದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಈಗಾಗಲೇ ತುಮಕೂರು ನಗರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿರುವ ಕೀರ್ತಿ ಈ ಅಧಿಕಾರಿಗೆ ಸಲ್ಲುತ್ತದೆ.ಅದೇ ರೀತಿ ನಗರವನ್ನು ಸ್ವಚ್ಛತೆಯಿಂದ ಕಾಪಾಡಲು ಮತ್ತು ಸುಂದರ ನಗರವನ್ನಾಗಿ ಮಾಡವ ಸಲುವಾಗಿ ಅನಧಿಕೃತವಾಗಿ ಜಾಹೀರಾತು ಮತ್ತು ಪೋಸ್ಟರ್ ಗಳನ್ನು ಹಾಕಿರುವವರಿಗೆ ದಂಡ ಹಾಕಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ.

ಇದರಿಂದ ನಗರದಲ್ಲಿ ಇಲ್ಲಿಯವರೆಗೆ ಬೇಕಾಬಿಟ್ಟಿ ರೀತಿಯಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಜಾಹೀರಾತು ಮತ್ತು ಪೋಸ್ಟರ್ ಗಳನ್ನು ಹಾಕುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಮೋದಿಯ ಕನಸಿನ ಕೂಸಿಗೆ ಮಣ್ಣೆರಚುವವರ ವಿರುದ್ಧ ಕ್ರಮ..!


ಮಹಾತ್ಮ ಗಾಂಧಿಜೀ ಕಂಡಂತ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಮಿಷನ್ ಎನ್ನುವ ಯೋಜನೆಯನ್ನು ಜಾರಿಗೆ ತಂದರು‌.ಈ ನಿಟ್ಟಿನಲ್ಲಿ ಈಗಾಗಲೇ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ.

ಮುಂದುವರಿದ ಭಾಗವಾಗಿ ಸುಂದರ ನಗರವನ್ನಾಗಿಸುವ ಕನಸನ್ನು ಈಡೇರಿಸುವ ಸಲುವಾಗಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಎಂ.ಡಿಯೂ ಆಗಿರುವ ಟಿ.ಭೂಬಾಲನ್ ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದಾರೆ.

ನಗರದ ವಿಶ್ವವಿದ್ಯಾಲಯದ ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಬಸ್ಸು ಶಲ್ಟರ್ ಮೇಲೆ ಮತ್ತು ಸಾರ್ವಜನಿಕರ ಸ್ಥಳಗಳಲ್ಲಿ,ಮರಗಳ ಮೇಲೆ ಅನಧಿಕೃತವಾಗಿ ಜಾಹೀರಾತಿನ ಪೋಸ್ಟರ್ ಹಾಕಲಾಯಿತು. ಇದನ್ನು ಗಮನಿಸಿದ ಪಾಲಿಕೆಯ ಅಧಿಕಾರಿಗಳು ಅನಧಿಕೃತವಾಗಿ ಜಾಹೀರಾತಿನ ಪೋಸ್ಟರ್ ಗಳನ್ನು ಪ್ರಕಟ ಮಾಡಿದ ಶ್ರೀ ಮಹಾಲಕ್ಷ್ಮಿ ಪಿ.ಜಿಗೆ ಕಾನೂನಿನ ಅನುಸಾರ ದಂಡ ವಿಧಿಸಲಾಯಿತು.

ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಜೊತೆಗೆ ಸುಂದರ ನಗರವನ್ನಾಗಿ ಮಾಡಲು ಸಂಕಲ್ಪ ಮಾಡಿರುವ ದಕ್ಷ ಅಧಿಕಾರಿ ವಿರುದ್ಧ ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸಿರುವುದು ನಾಚಿಕೆಗೇಡಿನ ಸಂಗತಿ. ಸಾರ್ವಜನಿಕವಾಗಿ ಭಾಷಣ ಮಾಡುವಾಗ ದೇಶ ಮತ್ತು ನಿಮ್ಮ ನಗರಗಳನ್ನು ಸ್ವಚ್ಛಾವಾಗಿಡಿ, ಸುಂದರವಾಗಿಡಿ,ಪರಿಸರ ರಕ್ಷಣೆ ಮಾಡಿ ಎಂದು ದೊಡ್ಡ ದೊಡ್ಡದಾಗಿ ಭಾಷಣ ಮಾಡುತ್ತಾರೆ.ಆದರೆ ಮೋದಿಯವರ ಮಾತಿನ ಪ್ರಕಾರ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ನಿಂದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದಕ್ಕೆ ಈಗ ಆಡಳಿತ ಪಕ್ಷದವರೆ ಉತ್ತರ ನೀಡಬೇಕಿದೆ.

ಇವರ ಅನುಕೂಲದಂತೆ ಕೆಲಸ ಮಾಡಿದರೆ ಅಧಿಕಾರಿಗಳಂತ ಅಧಿಕಾರಿಗಳಿಲ್ಲ ಎನ್ನುವ ಮನಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಇಂತಹ ನಡೆಗಳಿಗೆ ಶಾಸಕರು ಅವಕಾಶ ಮಾಡಿಕೊಡಬಾರದು ಎಂಬ ಮಾತುಗಳನ್ನು ನಗರದ ಜನರು ಆಡುತ್ತಿದ್ದಾರೆ

ಏನೆ ಇರಲಿ, ಒಟ್ಟಾರೆ ಮೋದಿಯವರು ತಂದ ಸ್ವಚ್ಛ ಭಾರತ್ ಮಿಷನ್ ಯೋಜನೆ ಯಶಸ್ವಿಯಾಗಲು ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಇಂತಹ ಕಿಡಿಗೇಡಿಗಳ ಕುತಂತ್ರಗಳಿಗೆ ಬಗ್ಗದೆ ತಮ್ಮ ಕಾನೂನಿನ ಅಡಿಯಲ್ಲಿ ಕೆಲಸ ನಿರ್ವಹಿಸಲಿ. ಆಗ ಇಡೀ ನಗರದ ಜನರು ದಕ್ಷತೆಯ ಆಡಳಿತವನ್ನು ಶ್ಲಾಘಿಸುವ ಸಮಯ ಬರಲಿದೆ ಎನ್ನುತ್ತಾರೆ ಭಾರತೀಯ ಕೃಷಿಕ್ ಸಮಾಜದ ಜಗದೀಶ್ ಕೋಡಿಹಳ್ಳಿ.

ನಟಿ ರಶ್ಮಿಕಾ ಮಂದಣ್ಣಗೆ ಐ.ಟಿ.ಶಾಕ್

0

PublicStory:
ಮಡಿಕೇರಿ: ಕೊಡಗಿನ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆ ಸಮೀಪದ ಕುಕ್ಲೂರಿನ ನಿವಾಸದ ಮೇಲೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಐ.ಟಿ.ದಾಳಿ ಯಿಂದಾಗಿ ತೆಲುಗು, ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಮೂರು ಭಾಷೆಯ ಸಿನಿಮಾಗಳಲ್ಲಿ ರಶ್ಮಿಕಾ ಬಹುಬೇಡಿಕೆ ನಟಿಯಾಗಿದ್ದಾರೆ.
ಕಳೆದ ವರ್ಷದ ಜನವರಿಯಲ್ಲಿ ಸ್ಯಾಂಡಲ್ವುಡ್ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿದ್ದ ಐ.ಟಿ ಅಧಿಕಾರಿಗಳು, ಈಗ ನಟಿ ರಶ್ಮಿಕಾ ಅವರ ಕಕ್ಲೂರಿನ ಎರಡು ಅಂತಸ್ತಿನ ನಿವಾಸ, ಅವರ ತಂದೆಗೆ ಸೇರಿದ್ದ ಸೆರೆನಿಟಿ ಹಾಲ್, ಬೃಹತ್ ವಾಣಿಜ್ಯ ಸಂಕೀರ್ಣದ ಮೇಲೆ ದಾಳಿ ನಡೆಸಿದ್ದಾರೆ.

ರಷ್ಮಿಕಾ ಹುಟ್ಟೂರು ಮೈತಾಡಿ ಗ್ರಾಮದಲ್ಲಿ ಕಾಫಿ ತೋಟ, ಬಿಟ್ಟಂಗಾಲದಲ್ಲಿ ಹೊಸದಾಗಿ ಖರೀದಿಸಿದ್ದ 5 ಎಕರೆ ಜಾಗವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಐಷಾರಾಮಿ ಕಾರು ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅವುಗಳ ವಿವರವನ್ನು ಐ.ಟಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ವಿಜಯನಗರದಲ್ಲಿದ್ದ ಮನೆಯನ್ನು ವರ್ಷದ ಹಿಂದೆ ಮಾರಾಟ ಮಾಡಿದ್ದರು.
ಅಭಿಮಾನಿಗಳ ಹೆಸರಲ್ಲಿ ಪ್ರವೇಶ: ಬೆಳಿಗ್ಗೆ ರಶ್ಮಿಕಾ ಅಭಿಮಾನಿಗಳೆಂದು ಹೇಳಿಕೊಂಡ ಪ್ರವಾಸಿ ಟ್ಯಾಕ್ಸಿಯಲ್ಲಿ ಬಂದಿದ್ದ ಅಧಿಕಾರಿಗಳು, ಮನೆಯ ಒಳಹೊಕ್ಕಿ ಇಡೀ ದಿನ ದಾಖಲೆ ಪರಿಶೀಲಿಸಿದರು. ಬುಧವಾರವಷ್ಟೇ ಕನ್ನಡ ಸಿನಿಮಾವೊಂದರ ಡಬ್ಬಿಂಗ್ ಕೆಲಸ ಮುಗಿಸಿ ಹೈದರಾಬಾದ್ಗೆ ತೆರಳಿದ್ದ ರಶ್ಮಿಕಾ ತಮ್ಮ ಮನೆಯಲ್ಲಿ ಇರಲಿಲ್ಲ. ಅವರ ತಾಯಿ ಬೆಂಗಳೂರಿನಲ್ಲಿದ್ದಾರೆ. ಮನೆಯಲ್ಲಿದ್ದ ತಂದೆ ಮದನ್ ಮಂದಣ್ಣ ಅವರಿಂದ ವಿವಿಧ ಹೂಡಿಕೆ ಹಾಗೂ ಮಗಳ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟು 9 ಅಧಿಕಾರಿಗಳು ಮೂರು ಪ್ರತ್ಯೇಕ ತಂಡಗಳಾಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಒಂದು ತಂಡವು ಪಂಜರ್ಪೇಟೆಯ ಮಂದಣ್ಣಗೆ ಸೇರಿದ ಸೆರೆನಿಟಿ ಹಾಲ್ಗೆ ಹೋಗಿ ಅಲ್ಲಿನ ಕಚೇರಿಯಲ್ಲಿ ದಾಖಲೆ ಪರಿಶೀಲಿಸಿತು. ವ್ಯವಸ್ಥಾಪಕ ವಿಕ್ಕಿ ಚಂಗಪ್ಪ ಅವರನ್ನು 9 ನಿಮಿಷಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು, ನಿವಾಸಕ್ಕೆ ಕರೆತಂದು ಮತ್ತಷ್ಟು ಮಾಹಿತಿ ಪಡೆಯಲಾಯಿತು. ಮನೆಯಲ್ಲಿದ್ದ ಅಡುಗೆ ಸಿಬ್ಬಂದಿಯ ಮೊಬೈಲ್ ಸ್ವಿಚ್ ಆಫ್ ಮಾಡಿಸಲಾಗಿತ್ತು. ಸಂಜೆಯ ವೇಳೆಗೆ ಮದನ್ ಮಂದಣ್ಣ ಅವರನ್ನು ಐ.ಟಿ ಅಧಿಕಾರಿಗಳು ಕಾರಿನಲ್ಲಿ ಕರೆದೊಯ್ದು ಅವರ ಸಮ್ಮುಖದಲ್ಲಿ ಅವರ ಆಸ್ತಿಯ ಮಾಹಿತಿ ಪಡೆಯಲಾಯಿತು.
ತೆರಿಗೆ ವಂಚನೆ ಆರೋಪ: ರಶ್ಮಿಕಾ ಅವರು ತೆಲುಗು ಹಾಗೂ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಪ್ರಮಾಣದ ಸಂಭಾವನೆಯನ್ನು ನಗದು ರೂಪದಲ್ಲಿ ಪಡೆದುಕೊಂಡು ತೆರಿಗೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ. ದೊಡ್ಡಮೊತ್ತ ನೀಡಿ ಖರೀದಿಸಿದ್ದ 5 ಎಕರೆ ಜಾಗದಲ್ಲಿ ವಸತಿ ಶಾಲೆ ಹಾಗೂ ಪೆಟ್ರೋಲ್ ಬಂಕ್ ತೆರೆಯಲು ರಶ್ಮಿಕಾ ಸಿದ್ಧತೆ ನಡೆಸಿದ್ದರು. ಆ ಜಾಗವನ್ನು ಸಮತಟ್ಟು ಮಾಡಲಾಗಿದೆ.

ನೋಟಿಸ್ ಜಾರಿ: ರಶ್ಮಿಕಾ ಮನೆಯಲ್ಲಿ ಇರದ ಕಾರಣ ತಕ್ಷಣವೇ ಐ.ಟಿ ಎದುರು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಅವರು ಶುಕ್ರವಾರ ಐ.ಟಿ ಅಧಿಕಾರಿಗಳ ಎದುರು ಹಾಜರಾಗುವ ಸಾಧ್ಯತೆಯಿದೆ.
ಯಾವ್ಯಾವ ಸಿನಿಮಾಗಳು?: ರಶ್ಮಿಕಾ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ನಂತರ, ಕನ್ನಡದಲ್ಲಿ ‘ಯಜಮಾನ’, ‘ಅಂಜನಿಪುತ್ರ’, ‘ಚಮಕ್’ನಲ್ಲಿ ನಟಿಸಿದ್ದಾರೆ. ‘ಪೊಗರು’ ಬಿಡುಗಡೆಗೆ ಸಿದ್ಧವಾಗಿದೆ. ತೆಲುಗಿನ ‘ಗೀತಾ ಗೋವಿಂದಂ’ ಹೆಸರು ತಂದುಕೊಟ್ಟಿದ್ದ ಚಿತ್ರ. ತೆಲುಗು ಹಾಗೂ ತಮಿಳಿನ ಸ್ಟಾರ್ ನಟರೊಂದಿಗೆ ನಟಿಸಿರುವ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.
ಐ.ಟಿ ಅಧಿಕಾರಿಗಳ ದಾಳಿ ವೇಳೆ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದರು. ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಧ್ಯಾಹ್ನ ಮನೆಗೆ ಹೋಟೆಲ್ನಿಂದ ಊಟ ತರಿಸಿಕೊಂಡು ಅಲ್ಲೇ ಸೇವಿಸಿದರು.