ಜಸ್ಟ್ ನ್ಯೂಸ್

ಲ್ಯಾಪ್ ಟಾಪ್ ವಿತರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪಬ್ಲಿಕ್ ಸ್ಟೋರಿ
ಪಾವಗಡ: ಪದವಿ ಶಿಕ್ಷಣ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಬೇಕು ಎಂದು ಒತ್ತಾಯಿಸಿ ವೈ.ಇ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿತ್ತು. ಈ ಬಾರಿ ಪ್ರಥಮ ವರ್ಷದ ಪದವಿ ಶಿಕ್ಷಣ ಪಡೆಯುತ್ತಿರುವ ಎಲ್ಲರಿಗೂ ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ. ಆದರೆ ದ್ವಿತೀಯ, ತೃತೀಯ ವರ್ಷದ ಪರಿಶಿಷ್ಟ ಜಾತಿ, ಪಂಗಡದವರನ್ನು ಹೊರತು ಪಡಿಸಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಪದವಿ ವಿದ್ಯಾರ್ಥಿಗಳು ಲ್ಯಾಪ್ ಟಾಪ್ ನಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

ಕಳೆದ ವರ್ಷ ಕೆಲ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿಲ್ಲ. ಈ ಬಗ್ಗೆ ವಿಚಾರಿಸಿದರೆ ಕಳುವಾಗಿದ್ದ ಲ್ಯಾಪ್ ಟಾಪ್ ಗಳನ್ನು ನ್ಯಾಯಾಲಯ ಆದೇಶ ನೀಡುವವರೆಗೆ ವಿತರಿಸುವಂತಿಲ್ಲ. ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾದೀಶರು ಕೇಳಿದಾಗ ಹಾಜರುಪಡಿಸಬೇಕು. ಹೀಗಾಗಿ ಅವುಗಳನ್ನು ವಿತರಿಸುವಂತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಲ್ಯಾಪ್ ಟಾಪ್ ಗಳು ವಿದ್ಯಾರ್ಥಿಗಳ ಬಳಕೆಗೆ ಬಾರದೆ ಕಾಲೇಜಿನಲ್ಲಿ ವ್ಯರ್ಥವಾಗಿವೆ ಎಂದು ದೂರಿದರು.
ಸರ್ಕಾರ ಸೌಲಭ್ಯಗಳನ್ನು ಎಲ್ಲರಿಗೂ ಸಮಾನವಾಗಿ ವಿತರಿಸುವ ಮೂಲಕ ಸಾಮಾಜಿಕ ನ್ಯಾಯ, ಸಮಾನತೆಯನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಇಲ್ಲ ಸಲ್ಲದ ಮಾನದಂಡಗಳ ನೆಪ ಒಡ್ಡಿ ತಾರತಮ್ಯ ಮಾಡಬಾರದು ಎಂದು ಅಳಲನ್ನು ತೋಡಿಕೊಂಡರು.
ಚಳ್ಳಕೆರೆ ರಸ್ತೆಯ ಕಾಲೇಜಿನಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Comment here