Thursday, October 22, 2026
Google search engine
HomeUncategorizedಬಡವನ ಬದುಕಿನ ಅಂತರಾತ್ಮ

ಬಡವನ ಬದುಕಿನ ಅಂತರಾತ್ಮ

ಹಸಿವಿನ ಮುಂದೆ ಕನಸುಗಳನ್ನೇ ಅಡವಿಟ್ಟು, ಬೆವರಿನ ಹನಿಗಳಲ್ಲಿ ಬದುಕನ್ನು ಹುಡುಕುತ್ತಾನೆ. ಜಗತ್ತಿನ ಕಣ್ಣಿಗೆ ಅವನೊಬ್ಬ ಬಡವ ಮಾತ್ರ, ಆದರೆ ಅವನ ಎದೆಯೊಳಗೆ ಒಂದು ಕುಟುಂಬದ ನೂರಾರು ಆಸೆಗಳ ಸಮಾಧಿಯೇ ಮಲಗಿರುತ್ತದೆ.!

ಬೆಳಗಾದರೆ ದುಡಿಮೆಯೇ ಅವನ ದೇವರು, ಕತ್ತಲಾದರೆ ಚಿಂತೆಯೇ ಅವನ ಸಂಗಾತಿ. ಹೊಟ್ಟೆತುಂಬ ಊಟವಿಲ್ಲದಿದ್ದರೂ ಪರವಾಗಿಲ್ಲ, ಮಕ್ಕಳ ಹೊಟ್ಟೆ ತುಂಬಿದರೆ ಸಾಕೆಂದು ತನ್ನ ಹಸಿವಿಗೇ ಸಮಾಧಾನ ಹೇಳುತ್ತಾನೆ ಆ ಜೀವಾತ್ಮ.!

ಶ್ರೀಮಂತರ ಮನೆಯಲಿ ಅನ್ನ ಉಳಿದರೆ ಕಸದ ಬುಟ್ಟಿ, ಬಡವನ ಮನೆಯಲ್ಲಿ ಅನ್ನವಿಲ್ಲದಿದ್ದರೆ ಕಣ್ಣೀರಿನ ರಾತ್ರಿ. ಒಂದೆಡೆ ಹಣಕ್ಕೆ ಸುಖವೇನು ಎಂದು ಹುಡುಕುವವರು, ಇನ್ನೊಂದೆಡೆ ಒಂದು ಹೊತ್ತಿನ ಊಟಕ್ಕಾಗಿ ತಮ್ಮ ಇಡೀ ದಿನವನ್ನೇ ಮಾರಿಕೊಳ್ಳುವವರು.!

ಹರಿದ ಅಂಗಿಯೊಳಗೆ ಅವನ ದೇಹವಿರಬಹುದು, ಆದರೆ ಹರಿಯದ ಕನಸುಗಳ ಕೋಟೆಯೇ ಅವನ ಹೃದಯ. ಸೋತರೂ ಯಾರ ಮುಂದೆ ಕೈಚಾಚಲು ಮನಸ್ಸಿಲ್ಲ, ನೋವಾದರೂ ಮನೆಯವರ ಮುಂದೆ ಕಣ್ಣೀರಿಡುವುದಿಲ್ಲ, ಏಕೆಂದರೆ ಅವನ ದುಃಖಕ್ಕೆ ಸಾಕ್ಷಿಯಾದರೆ ತನ್ನವರ ನಾಳೆಯೂ ಕತ್ತಲಾಗಬಹುದೆಂಬ ಭಯ.!

ಮಗನಿಗೆ ಹೊಸ ಬಟ್ಟೆ ಕೊಡಿಸಲಾಗದ ತಂದೆ, ಮಗಳ ಆಸೆ ಈಡೇರಿಸಲಾಗದ ತಾಯಿ, ಶಾಲೆಯ ಶುಲ್ಕಕ್ಕಾಗಿ ನಿದ್ದೆ ಕಳೆದುಕೊಳ್ಳುವ ಅಪ್ಪ, ಔಷಧಿಯ ಬೆಲೆಗೆ ತನ್ನ ನೋವನ್ನೇ ನುಂಗುವ ಅಮ್ಮ, ಇವರ ಬಡತನವನ್ನು ಅಳೆಯಲು ಯಾವ ತಕ್ಕಡಿಯಿದೆ..? ಇವರ ತ್ಯಾಗವನ್ನು ಬರೆಯಲು ಯಾವ ಭಾಷೆಯಿದೆ..?

ಬಡವನೆಂದರೆ ಬರೀ ಹಣವಿಲ್ಲದವನಲ್ಲ, ತನ್ನ ನೋವನ್ನು ಹಂಚಿಕೊಳ್ಳಲು ಯಾರೂ ಇಲ್ಲದವನೂ ಹೌದು. ಅವನ ಬಳಿ ಅರಮನೆ ಇಲ್ಲದಿರಬಹುದು, ಆದರೆ ಪ್ರೀತಿಯಿಂದ ಕಟ್ಟಿದ ಪುಟ್ಟ ಮನೆಯಿರುತ್ತದೆ. ಅವನ ಬಳಿ ಚಿನ್ನದ ಒಡವೆಗಳಿಲ್ಲದಿರಬಹುದು, ಆದರೆ ಮಕ್ಕಳ ನಗುವಿಗಿಂತ ದೊಡ್ಡ ಸಂಪತ್ತಿಲ್ಲ.!

ಒಂದು ದಿನ ಅವನ ಬೆವರಿಗೂ ಬೆಲೆ ಸಿಗಬಹುದು, ಅವನ ಕಣ್ಣೀರು ಒರೆಸುವ ಕೈಗಳೂ ಸಿಗಬಹುದು. ಆದರೆ ಅವನು ಕಳೆದುಕೊಂಡ ಬಾಲ್ಯ, ಮಕ್ಕಳಿಗಾಗಿ ಬಲಿಕೊಟ್ಟ ಆಸೆಗಳು, ಕುಟುಂಬಕ್ಕಾಗಿ ಮರೆತ ತನ್ನದೇ ಬದುಕು, ಇವೆಲ್ಲವನ್ನೂ ಮರಳಿ ತಂದುಕೊಡಲು ಕಾಲಕ್ಕೂ ಸಾಧ್ಯವಿಲ್ಲ ಎಂಬುದೇ ಬದುಕಿನ ದುರಂತ.!

ಕೊನೆಗೆ ಅವನ ಉಸಿರು ನಿಂತಾಗ ಜಗತ್ತು ಒಂದೆರಡು ಮಾತುಗಳನ್ನಾಡಿ ಮರೆತುಬಿಡುತ್ತದೆ. ಆದರೆ ಅವನ ಹಳೆಯ ಅಂಗಿಯ ಮಡಿಕೆಯಲ್ಲಿ, ದುಡಿದು ತಂದ ಅವನ ಅನ್ನದ ತಟ್ಟೆ, ಮುಚ್ಚಿಟ್ಟ ಅವನ ಕಣ್ಣೀರಿನ ಹನಿಗಳಲ್ಲಿ ಒಂದು ಕುಟುಂಬದ ಇತಿಹಾಸ ಶಾಶ್ವತವಾಗಿ ಉಳಿಯುತ್ತದೆ.

ಅವನನ್ನು ಬಡವನೆಂದು ಕರೆಯುವ ಮುನ್ನ ಒಮ್ಮೆ ಅವನ ಎದೆಯೊಳಗೆ ಇಣುಕಿ ನೋಡಿ.. ಅಲ್ಲಿ ಹಣವಿಲ್ಲದ ನೋವಷ್ಟೇ ಇರುವುದಿಲ್ಲ, ತನ್ನವರಿಗಾಗಿ ಪ್ರತಿದಿನ ಸಾಯುತ್ತಾ, ತನ್ನವರ ನಗುವಿಗಾಗಿ ಪ್ರತಿದಿನ ಬದುಕುವ ಒಬ್ಬ ಮಹಾನ್ ಮನುಷ್ಯನ ಅಂತರಾತ್ಮವಿರುತ್ತದೆ.!
—ತುಳಸಿತನಯ ಚಿದು..✍️

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?