Saturday, December 27, 2025
Google search engine
Home Blog Page 311

ಅಂಗನವಾಡಿ ನೌಕರರ ಹೋರಾಟಕ್ಕೆ ಪೊಲೀಸರ ಅಡ್ಡಿ

ಪಬ್ಲಿಕ್ ಸ್ಟೋರಿ: ಪ್ರಾಥಮಿಕ ಪೂರ್ವ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ಅಂಗನವಾಡಿ ನೌಕರರ ವಿವಿಧ ಒತ್ತಾಯಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಕರೆ ನೀಡಿದ್ದ ಪಾದಯಾತ್ರೆಗೆ ಪೊಲೀಸ್ ರು ತಡೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ರಾಜ್ಯದ ವಿವಿಧ ಭಾಗಗಳಿಂದ ತುಮಕೂರಿಗೆ ಅಂಗನವಾಡಿ ನೌಕರರು ಆಗಮಿಸಿ ಅಲ್ಲಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸುವ ಕರೆಯನ್ನು ನೀಡಲಾಗಿತ್ತು. ಈಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ಗಮನಕ್ಕೆ ಲಿಖಿತ, ಮೌಖಿಕವಾಗಿ ತರಲಾಗಿದೆ ಎಂದು ಅಂಗನವಾಡಿ ನೌಕರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದರು.

ಕೋಲಾರ ಸೇರಿದಂತೆ ರಾಜ್ಯದ ಹಲವೆಡೆಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಬರುತ್ತಿದ್ದವರನ್ನು ಪೊಲೀಸರು ತಡೆದು ದೌರ್ಜನ್ಯ ಎಸಗುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಡೆಸುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ ಎಂದು ಮುಖಂಡರು ದೂರಿದ್ದಾರೆ.

ಪತ್ರಿಕಾ ಗೋಷ್ಠಿ ನಡೆಯುವಾಗಲೇ ತುಮಕೂರು ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಮುಖಂಡರಾದ ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಸೈಯದ್ ಮುಜೀದ್, ಬಸವರಾಜು ಅವರೊಂದಿಗೆ  ಮಾತು  ಕತೆ ನಡೆಸುತ್ತಿದ್ದಾರೆ.

ಈ ವೇಳೆಗಾಗಲೇ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪಾದಯಾತ್ರೆಗೆ ಚಾಲನೆ ನೀಡಬೇಕಿತ್ತು. ವಿವಿಧೆಡೆಯಿಂದ ಪಾದಯಾತ್ರೆಗಾಗಿ ತುಮಕೂರಿಗೆ ಆಗಮಿಸಿರುವ ಕಾರ್ಯಕರ್ತೆಯರು ಪೊಲೀಸರ ನಡೆಗೆ ಬೇಸತ್ತು ಕಾದು ಕುಳಿತಿದ್ದಾರೆ.

ಮನೆ ಬಾಗಿಲು ಮುರಿದು ಕಳ್ಳತನ

ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿ ಬ್ಯಾಡರಹಳ್ಳಿ ಗ್ರಾಮದ ರಮೇಶ್ ಎಂಬವವರ ಮನೆಯಲ್ಲಿ ಕಳ್ಳತನ.

ಮನೆಯ ಬೀರು ಹೊಡೆದು 3ಲಕ್ಷ ನಗದು, ಒಂದು ಚಿನ್ನದ ಉಂಗುರ ಕಳವು ಮಾಡಲಾಗಿದೆ.

ರಮೇಶ್ ಮತ್ತು ಕುಟುಂಬ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನ ಕಂಡು ಸಂಚು ರೂಪಿಸಿ ಕಳವು ಮಾಡಲಾಗಿದೆ ಎಂದು ಹೊನ್ನವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕುಣಿಗಲ್ ನ ಸ್ವಾಮಿ, ಗುಬ್ಬಿ, ಕೊರಟಗೆರೆ ಶ್ರೀನಿವಾಸ ಪದವಿ ಪೂರ್ವ ಕಾಲೇಜುಗಳ ಮಾನ್ಯತೆ ರದ್ದು: ಬೀದಿ ಪಾಲಾದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, 35 ಮಂದಿ ಸಿಬ್ಬಂದಿ

ತುಮಕೂರು: ಪರಿಶಿಷ್ಟ ಜಾತಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಕಾಲೇಜುಗಳಿಗೆ ಮಾನ್ಯತೆ ಹಾಗೂ ಅನುದಾನ ಪಡೆಯಲಾಗಿದೆ ಎಂಬ ಆರೋಪದ ಕಾರಣ ಕುಣಿಗಲ್ ನ ಸ್ವಾಮಿ ಪದವಿ ಪೂರ್ವ ಕಾಲೇಜು ಹಾಗೂ ಗುಬ್ಬಿ, ಕೊರಟಗೆರೆಯ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದು ಪಡಿಸಲಾಗಿದೆ. ಇದರಿಂದಾಗಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 35 ಜನ ಸಿಬ್ಬಂದಿ ಭವಿಷ್ಯ ಡೋಲಾಯಮಾನ ಸ್ಥಿತಿ ತಲುಪಿದೆ.

ಪರಿಶಿಷ್ಟ ಜಾತಿಗೆ ಸೇರಿದವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಶ್ರೀನಿವಾಸ ವಿದ್ಯಾಸಂಸ್ಥೆಯನ್ನು 1983ರಲ್ಲಿ ಪ್ರಾರಂಭಿಸಿ ಅಲ್ಲಿಂದ ನಂತರದಲ್ಲಿ ಸರ್ಕಾರದಿಂದ ಬರುವ ಎಲ್ಲಾ ಅನುದಾನಗಳನ್ನು ಪಡೆದಿದ್ದರು. 2012ರಲ್ಲಿ ಅವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಆಪಾದನೆ ಬಂದ ಹಿನ್ನೆಯಲ್ಲಿ ತುಮಕೂರು ಉಪನಿರ್ದೇಶಕರ ನೇತೃತ್ವದಲ್ಲಿ ಪರಿಶೀಲನೆ ನಡೆಸಲು 2012ರಲ್ಲಿ ಸರ್ಕಾರ ಆದೇಶಿಸಿತ್ತು.

ತನಿಖೆ ನಡೆದು ಪರಿಶಿಷ್ಟ ಜಾತಿಗೆ ಸೇರಿದವರೆಂದು ನೀಡಿರುವ ಜಾತಿ ಪ್ರಮಾಣ ಪತ್ರ ಸುಳ್ಳು ಎಂದು ಸಾಭೀತಾದ ಹಿನ್ನೆಯಲ್ಲಿ ಸರ್ಕಾರ ಶ್ರೀನಿವಾಸ ವಿದ್ಯಾಸಂಸ್ಥೆಗೆ ಸೇರಿದ ಕುಣಿಗಲ್ನ ಸ್ವಾಮಿ ಪದವಿ ಪೂರ್ವ ಕಾಲೇಜು, ಗುಬ್ಬಿಯ ಶ್ರೀನಿವಾಸ ಪದವಿ ಪೂರ್ವ ಕಾಲೇಜು ಹಾಗೂ ಕೊರಟಗೆರೆ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದು ಪಡಿಸಿ ಆದೇಶಿಸಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇರೆ ಕಾಲೇಜಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪದವಿ ಪೂರ್ವ ಇಲಾಖೆ ಉಪನಿರ್ದೇಶಕಿ ಟಿ.ಎ.ಲಲಿತ ಕುಮಾರಿ ಅವರು ಸೋಮವಾರ ಕೊರಟಗೆರೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಹತ್ತಿರದ ಸರ್ಕಾರಿ ಕಾಲೇಜಿಗೆ ಸ್ಥಳಾಂತರಿಸಲು ಮುಂದಾದರು.

ಆಡಳಿತ ಮಂಡಳಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರದಿಂದ ಎಲ್ಲಾ ಅನುದಾನ ಪಡೆದು ವಂಚಿಸಿದೆ. ಇದು ತನಿಖೆಯಿಂದ ಸಾಬೀತಾಗಿದೆ. ಈ ಹಿನ್ನೆಯಲ್ಲಿ ಶಿಕ್ಷಣ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡು ಮಾನ್ಯತೆ ರದ್ದು ಪಡಿಸಬೇಕೆಂಬ ಸರ್ಕಾರದ ಆದೇಶದ ಮೇರೆಗೆ ಕಾಲೇಜಿಗೆ ಭೇಟಿ ನೀಡಿ ಕ್ರಮ ವಹಿಸುತ್ತಿರುವುದಾಗಿ ಲಲಿತಾ ಕುಮಾರಿ ಅವರು ತಿಳಿಸಿದರು.

ಕಾಲೇಜು ಮುಚ್ಚಲಾಗುತ್ತಿದೆ. ನೀವು ಬೇರೆ ಕಾಲೇಜಿಗೆ ಹೋಗಿ ಪಾಠ ಕೇಳಿ ಎಂದು ಡಿಡಿಪಿಯು ಅವರು ವಿದ್ಯಾರ್ಥಿಗಳಿಗೆ ಧೀಡೀರ್ ಸೂಚನೆ ನೀಡಿದ ಮೇಲೆ ಕೊಂಚ ಶಾಕ್ ಆದಂತಾದ ವಿದ್ಯಾರ್ಥಿಗಳು ನಾವು ಕಾಲೇಜು ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಪರೀಕ್ಷೆ ಕೇವಲ ಮೂರು ತಿಂಗಳು ಇದ್ದು, ಈಗ ಏಕಾಏಕಿ ಕಾಲೇಜು ಬದಲಾವಣೆ ಮಾಡಿ ಎಂದರೆ ನಮಗೆ ಶೈಕ್ಷಣಿಕವಾಗಿಚೈತ್ರ, ದ್ವಿತೀಯ ಪಿಯುಸಿ ತೊಂದರೆ ಉಂಟಾಗಲಿದೆ. ಇದರೊಂದಿಗೆ ಕಾಲೇಜಿನಲ್ಲಿರುವ ಭೂಗೋಳಶಾಸ್ತ್ರ, ಸಂಸ್ಕೃತ ಹಾಗೂ ಐಚ್ಚಿಕ ಕನ್ನಡ ವಿಷಯಗಳು ಹತ್ತಿರದ ಕಾಲೇಜಿನಲ್ಲಿ ಇಲ್ಲ. ಹೀಗಿರುವಾಗ ನಮಗೆ ಹೇಗೆ ಪಾಠಗಳು ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳು ಎಂದು ಉಪನಿರ್ದೇಶಕರೆದುರು ಅಲವತ್ತುಕೊಂಡರು.

ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಪಾಠ ಪ್ರವಚನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇಲ್ಲಿನ ಸಿಬ್ಬಂದಿ ಸಂಸ್ಥೆ ನಂಬಿಕೊಂಡು 30-35 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಳೆದ ಐದು ತಿಂಗಳಿಂದ ಸಂಬಳ ನಿಲ್ಲಿಸಲಾಗಿದೆ. ಸಿಬ್ಬಂಧಿಗೆ ಯಾವುದೇ ಪರ್ಯಾಯ ಒದಗಿಸಿಲ್ಲ. ಈಗ ಏಕಾಏಕಿ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಕಳುಹಿಸುವುದರಿಂದ ಇಲ್ಲಿನ ಸಿಬ್ಬಂದಿಗೆ ಇನ್ನಷ್ಟು ತೊಂದರೆಯಾಗಲಿದೆ. ಸಿಬ್ಬಂದಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಡಿಡಿ ಅವರನ್ನು ಕೋರಿಕೊಂಡರು.

ಇದೇ ವೇಳೆ ಪೋಷಕರು ವಿಷಯ ತಿಳಿದು ಕಾಲೇಜಿಗೆ ಓಡೋಡಿ ಬಂದು, ಡಿಡಿಪಿಯು ಅವರನ್ನು ಪರೀಕ್ಷೆ ಕೊನೆಗೊಳ್ಳುವವರೆಗೆ ಇದೇ ಜಾಗದಲ್ಲಿ ತರಗತಿಗಳು ಮುಂದುವರೆಯುವಂತೆ ಮನವಿ ಮಾಡಿದರಾದರೂ ಸರ್ಕಾರದ ಆದೇಶ ಇರುವ ಕಾರಣ ಯಾವುದೇ ಕಾರಣಕ್ಕೂ ನಾನು ಏನೂ ಮಾಡಲು ಬರುವುದಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೇರೆ ಕಾಲೇಜಿಗೆ ಸ್ಥಳಾಂತರಿಸಿ ಪಾಠ ಪ್ರವಚನಕ್ಕೆ ವ್ಯವಸ್ಥೆ ಮಾಡುವುದಾಗಿ ಲಲಿತ ಕುಮಾರಿ ತಿಳಿಸಿದರು.

ಕಾಲೇಜಿನ ವೇತನಾನುದಾನವನ್ನು ಹಿಂಪಡೆಯುವ ಬಗ್ಗೆ 2017ರಲ್ಲಿ ನೋಟೀಸ್ ನೀಡಿ ತನಿಖೆಗೆ ಆದೇಶಿಲಾಗಿತ್ತು. ಪ್ರಕರಣ ಸಾಬೀತಾಗಿರುವ ಹಿನ್ನೆಯಲ್ಲಿ ವಿದ್ಯಾಸಂಸ್ಥೆಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಕಾಲೇಜುಗಳ ಮಾನ್ಯತೆ ರದ್ದು ಮಾಡಿ ವೇತನ ಅನುದಾನ ಹಿಂಪಡೆಯಲು ಆದೇಶಿಸಿದೆ. ಈ ಹಿನ್ನೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೂ ಸಂಬಳ ತಡೆ ಹಿಡಿಯಲಾಗಿದೆ ಎಂದರು.

ಶಿಕ್ಷಣ ಇಲಾಖೆಯ ಈ ಕ್ರಮದಿಂದಾಗಿ ಕೊರಟಗೆರೆ ಶ್ರೀನಿವಾಸ ಕಾಲೇಜಿನ ಒಟ್ಟು 253 ವಿದ್ಯಾರ್ಥಿಗಳು ಹಾಗೂ 12 ಜನ ಸಿಬ್ಬಂದಿ, ಗುಬ್ಬಿ ಶ್ರೀನಿವಾಸ ಕಾಲೇಜಿನ 98 ವಿದ್ಯಾರ್ಥಿಗಳು, 13 ಜನ ಸಿಬ್ಬಂದಿ, ಕುಣಿಗಲ್ ಸ್ವಾಮಿ ಪದವಿ ಪೂರ್ವ ಕಾಲೇಜಿನ 98 ವಿದ್ಯಾರ್ಥಿಗಳು ಹಾಗೂ 12 ಜನ ಸಿಬ್ಬಂದಿ ಬೀದಿಪಾಲಾದಂತಾಗಿದೆ.

ಸರ್ಕಾರದ ಆದೇಶದ ಕಾರಣ ವಿದ್ಯಾರ್ಥಿಗಳನ್ನು ಬೇರೆ ಬೇರೆ ಕಾಲೇಜುಗಳಿಗೆ ಸ್ಥಳಾಂತರಿಸಲೇಬೇಕಾಗಿದೆ. ಇದಕ್ಕಾಗಿ ಅವರ ಮನವೊಲಿಸಲಾಗುವುದು. ವಿದ್ಯಾರ್ಥಿಗಳ ಶಿಕ್ಷಣ, ಅಧ್ಯಯನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.

– ಲಲಿತಾ ಕುಮಾರಿ, ಪಿಯು ಡಿಡಿ


ನಮ್ಮ ಕಾಲೇಜಿನಲ್ಲಿ ಇರುವ ಐಚ್ಛಿಕ ವಿಷಯಗಳು ಹತ್ತಿರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಲ್ಲ. ಹಾಗಾಗಿ ಅಲ್ಲಿ ಆ ವಿಷಯದ ಉಪನ್ಯಾಸಕರೂ ಇಲ್ಲ. ನಾವಲ್ಲಿಗೆ ಹೋದಲ್ಲಿ ನಮ್ಮ ಪಾಠ ಪ್ರವಚನ ಇಲ್ಲದಂತಾಗುತ್ತದೆ.

ಚೈತ್ರ, ದ್ವಿತೀಯ ಪಿಯುಸಿ ವಿದ್ಯಾರ್ಥಿ.


ಆಡಳಿತ ಮಂಡಳಿ ಹಾಗೂ ಸರ್ಕಾರದ ನಡುವೆ ಏನೇ ಸಮಸ್ಯೆ ಇರಲಿ ಸದಸ್ಯಕ್ಕೆ ನಮ್ಮನ್ನು ಬೇರೆ ಕಾಲೇಜಿಗೆ ಸ್ಥಳಾಂತರ ಮಾಡದೇ ಇದೇ ಕಾಲೇಜಿನಲ್ಲಿ ಪಾಠ ಕೇಳಲು ಅವಕಾಶ ಮಾಡಿಕೊಡಬೇಕು.

ವಿದ್ಯಾ, ವಿದ್ಯಾರ್ಥಿನಿ


ಏಕಾಏಕಿ ಕಾಲೇಜಿನಿಂದ ಬೇರೆ ಕಾಲೇಜಿಗೆ ಸ್ಥಳಾಂತರದ ಸುದ್ಧಿ ಕೇಳಿ ನಮಗೆ ಆಶ್ಚರ್ಯ ಹಾಗೂ ಧಿಗ್ಬ್ರಾಂತಿಯಾಗಿದೆ. ಕೇವಲ ಮೂರು ತಿಂಗಳು ಪರೀಕ್ಷೆ ಇದ್ದು ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಬಹಳಷ್ಟು ಜನ ಅನುತ್ತೀರ್ಣರಾದರೆ ಅದಕ್ಕ ಎಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ.

ನವೀನ, ದ್ವಿತೀಯ ಪಿಯುಸಿ ವಿದ್ಯಾರ್ಥಿ


ಸಂಸ್ಥೆ ಮಾಡಿದ ತಪ್ಪಿಗೆ ಇದನ್ನೆ ನಂಬಿಕೊಂಡಿರುವ ನಾವು ಬೀದಿ ಪಾಲಾದಂತಾಗಿದೆ. ಈಗಾಗಲೇ ಐದು ತಿಂಗಳ ವೇತನ ನಿಲ್ಲಿಸಲಾಗಿದ್ದು, ಜೀವನ ತುಂಬಾ ದುಸ್ಥರವಾಗಿದೆ. ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಸ್ಥಳಾಂತರಿಸುವಂತೆ ನಮ್ಮನ್ನು ಬೇರೆ ಕಾಲೇಜಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಇಲ್ಲವಾದಲ್ಲಿ ನಾವು, ನಮ್ಮ ಕುಟುಂಬ ವಿಷ ಸೇವಿಸಿ ಸಾಯಬೇಕಾಗುತ್ತೆ.

ಸಣ್ಣಸಿದ್ದಪ್ಪ, ಉಪನ್ಯಾಸಕ

ಈ ಬಗ್ಗೆ ಆಡಳಿತ ಮಂಡಳಿ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದರೂ ಲಭ್ಯವಾಗಲಿಲ್ಲ. ಆಡಳಿತ ಮಂಡಳಿ ಪ್ರತಿಕ್ರಿಯೆ ಕೊಟ್ಟರೆ ಅದನ್ನು ಈ ವರದಿಯೊಂದಿಗೆ ಪ್ರಕಟಿಸಲಾಗುವುದು.

ಇಂದು ಸುಫಿಯ ಕಾನೂನು ಕಾಲೇಜಿನಲ್ಲಿ ಮಾನವ ಹಕ್ಕುಗಳ ದಿನಾಚರಣೆ

ತುಮಕೂರು: ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ.ಎಂ.ಎಸ್ ಶಿಕ್ಷಣ ಸಂಸ್ಥೆಯ ಸುಫಿಯ ಕಾನೂನು ಮಹಾವಿದ್ಯಾಲಯದಲ್ಲಿ ಡಿಸೆಂಬರ್ 10ರಂದು ಬೆಳಗ್ಗೆ 10 ಗಂಟೆಗೆ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಮಹಿಳೆ ಮತ್ತು ಸಾಂವಿಧಾನಿಕ ನೈತಿಕತೆ- ಮಾನವ ಹಕ್ಕು ಕುರಿತು ವಿಷಯ ಮಂಡನೆ ಸಮಾರಂಭವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮವನ್ನು ತುಮಕೂರಿನ 3ನೇ ಅಧಿಕ ಸಿವಿಲ್ ನ್ಯಾಯಾಧೀಶ ಎಸ್. ಚಂದನ್ ಉದ್ಘಾಟಿಸಲಿದ್ದು, ಜೆಎಂಎಫ್ ಸಿ ನ್ಯಾಯಾಲಯದ 5ನೇ ಅಧಿಕ ಸಿವಿಲ್ ನ್ಯಾಯಾಧೀಶೆ ಕೆ.ಸಿ.ತಾರಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಎಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಷಫೀ ಅಹಮದ್ ವಹಿಸುವರು. ಸೂಫಿಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ರಮೇಶ್, ಲೀಗಲ್ ಕ್ಲಿನಿಕಲ್ ಸೆಲ್ ಸಂಯೋಜನಾಧಿಕಾರಿ ಶ್ರೀನಿವಾಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಎಂ. ಹನುಮಂತರಾಯ ಪಾಲ್ಗೊಳ್ಳುವರು.

ಅಬ್ಬಾ, ಆಂಜನೇಯ!

1

ತುಮಕೂರು: ಕೃಷ್ಟ ಜಯಂತಿಯಲ್ಲಿ ತಮ್ಮ ಮುದ್ದಾದ ಮಕ್ಕಳಿಗೆ ಕೃಷ್ಣನ ವೇಷ ಹಾಕುವುದು ಹಿಂದಿನಿಂದಲೂ ಬೆಳೆದುಬಂದಿರುವುದು ರೂಢಿಯಲ್ಲಿದೆ.

ಹೆಣ್ಣಿರಲಿ ಗಂಡಿರಲಿ ಮಕ್ಕಳು ಅಂದ ಮೇಲೆ ಕೃಷ್ಣನ ವೇಷದಲ್ಲಿ ಮುದ್ದಾಗಿ ಕಾಣುತ್ತಾರೆ. ಅದು ಒಂದು ಟ್ರೆಂಡಾಗಿ ಬೆಳೆದಿದ್ದರೆ, ಇದೀಗ ಹನುಮ ವೇಷವೂ ಚಾಲ್ತಿಗೆ ಬರುತ್ತಿದೆ. ಮುದ್ದು ಮಕ್ಕಳಿಗೆ ಹನುಮನ ವೇಷ ತೊಡಿಸಿ ಖುಷಿಪಡುವ ಅಪ್ಪಅಮ್ಮಂದಿರೂ ಇದ್ದಾರೆ. ಹನುಮನ ವೇಷವೂ ಮುಂದೆ ಕೃಷ್ಣನ ವೇಷ ಸ್ಪರ್ಧೆಯಂತೆ ಟ್ರೆಂಡ್ ಆಗುವ ಸಾಧ್ಯೆಗಳು ಹೆಚ್ಚಾಗಿವೆ.

ಇಂದು ಹನುಮ ಜಯಂತಿ. ಇದರ ಪ್ರಯುಕ್ತ ದೇಶದೆಲ್ಲೆಡೆ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ವಿಧಿವಿಧಾನಗಳು ನಡೆದವು. ಹನುಮ ಜಯಂತಿ ಪ್ರಯುಕ್ತ ತುಮಕೂರಿನಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳಿಗೆ ಹನುಮ ವೇಷ ತೊಡಿಸಿ ಆನಂದಪಟ್ಟರು.

ವಕೀಲರಾದ ಹಿಮಾನಂದ ಮತ್ತು ರೇಖಾ ಹಿಮಾನಂದ ದಂಪತಿ ತಮ್ಮ ಮುದ್ದಾದ ಮಗಳಿಗೆ ಹನುಮನ ವೇಷ ತೊಡಿಸಿ ಕೈಯಲ್ಲಿ ಗಧೆಯನ್ನು ಹಿಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇರುವ ಹನುಮನ ಬೃಹತ್ ಪ್ರತಿಮೆಯ ಮುಂದೆ ಮಾಡಿಸಿದ್ದ ಫೋಟೊ ಸೆಷನ್ಸ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದವು.

ನಾಲ್ಕ ವರ್ಷದ ಬಾಲಕಿ ತನ್ವಿಯ ಕೊರಳ ತುಂಬ ಮುತ್ತಿನಂಥ ಹಾರಗಳನ್ನು ಹಾಕಿ ಸಿಂಗರಿಸಿದ್ದರು. ಹನುಮಂತ ಪ್ರತಿಮೆಯ ಮುಂದಿನ ರಸ್ತೆಯಲ್ಲಿ ತನ್ವಿಯನ್ನು ನಿಲ್ಲಿಸಿ ಪೋಟೋ ಕ್ಲಿಕ್ಕಿಸುತ್ತಿದ್ದರೆ ಜನ ನಿಂತು ತನ್ವಿಯ ಸಿಂಗಾರವನ್ನು ನೋಡಿ ಸಂತೋಷಪಟ್ಟರು. ಎಡಗೈಯಲ್ಲಿದ್ದ ಗಧೆಯನ್ನು ನೆಲಕ್ಕೆ ಒತ್ತಿ ಹಿಡಿದು ಪೋಟೋಕ್ಕೆ ಪೋಸ್ ಕೊಟ್ಟಾಗ ತಂದೆ ತಾಯಿಯರಲ್ಲಿ ಎಲ್ಲಿಲ್ಲದ ಆನಂದ ತುಳುಕುತ್ತಿತ್ತು.

ಹನುಮನಂತ ಬಾಯಿ ತೆತೆದು ಗಧೆಯನ್ನು ಮೇಲೆಕ್ಕೆ ಎತ್ತಿ ನಿಂತ ದೃಶ್ಯ ನಿಜವಾಗಿಯೂ ಆಂಜನೇಯ ಮೈದುಂಬಿದ್ದಾನೆಯೋ ಎಂಬಂತೆ ಆ ಪುಟಾಣಿ ಕಂಡು ಬಂದಳು. ಅಲ್ಲಿಂದ ಅಮಾನಿಕೆರೆಯ ಉದ್ಯಾನಕ್ಕೂ ಕರೆದುಕೊಂಡು ಹೋದರು.

ಕೆರೆ ಅಡ್ಡವಾಗಿ ಅಳವಡಿಸಲಾಗಿದ್ದ ತಂತಿ ಬೇಲಿಯ ಮೇಲೆ ನಿಲ್ಲಿಸಿ ಪೋಟೋ ಕ್ಲಿಕ್ಕಿಸಿದರು. ವಕೀಲ ಹಿಮಾನಂದ ಮತ್ತು ರೇಖಾ ಅವರಿಗೆ ಮಗಳನ್ನು ಹನುಮಂತನ ವೇಷದಲ್ಲಿ ನೋಡಲು ಮತ್ತಷ್ಟು ಕುತೂಹಲ ಹೆಚ್ಚುತ್ತಲೇ ಇತ್ತು. ಏನೇ ಆಗಲಿ ಹೆಣ್ಣು ಮಗುವಲ್ಲವೇ? ಯಾವ ಕೃತ್ರಿಮವೂ ಇಲ್ಲದ ಲೋಕಜ್ಞಾನ ತಿಳಿಯದ ಆ ಮುಗ್ದ ಬಾಲಕಿ ಹನುಮಂತನ ವೇಷದಲ್ಲಿ ಸುಂದರವಾಗಿ ಕಂಡುಬಂದಿದ್ದಂತೂ ಸೋಜಿಗದ ದೃಶ್ಯ ಕಾವ್ಯದಂತಿದ್ದಳು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಗುಣಮಟ್ಟದ ಸಂಸ್ಥೆ; ಪರಮೇಶ್ವರ್

ತುಮಕೂರು: ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಕನಸು ಕಂಡಿದ್ದೇನೆ.ಉನ್ನತ ಮಟ್ಟದ ಕಲಿಕೆಯಲ್ಲಿ ಗುಣಮಟ್ಟವು ಮುಖ್ಯವಾಗಿರುವುದರಿಂದ ಆ ನಿಟ್ಟಿನಲ್ಲಿ ಗುಣಮಟ್ಟದ ಸಂಸ್ಥೆಯನ್ನು ರೂಪಿಸಲು ಬಯಸಿರುವುದಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ಸೇತುಬಂಧ’ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ತಂದೆ ಡಾ.ಎಚ್.ಎಂ.ಗಂಗಾಧರಯ್ಯನವರು ನನ್ನನ್ನು ಎಸ್ಎಸ್ಐಟಿ ಸಂಸ್ಥೆಯ ಆಡಳಿತಾತ್ಮಕ ಭಾಗಕ್ಕೆ ಪರಿಚಯಿಸಿದಾಗ ವಿದ್ಯಾರ್ಥಿ ಸ್ನೇಹಿತರೊಂದಿಗೆ ಉತ್ತಮ ಸ್ಮರಣೆಯನ್ನು ಹೊಂದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಸ್ಥೆ ತುಂಬಾ ದೊಡ್ಡ ಮಟ್ಟದಲ್ಲಿಲ್ಲದಿದ್ದರೂ, ಕನಿಷ್ಠ ಉಪಯುಕ್ತವಾದ ಸಂಸ್ಥೆಯಾಗಿದ್ದು, ಈಗ ಅದರ ವ್ಯಾಪ್ತಿ ವಿಶ್ವದಲ್ಲೆಡೆ ಹರಡಿದ್ದು, ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಪ್ರಪಂಚದೆಲ್ಲೆಡೆ ವೃತ್ತಿಪರ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಪರಮೇಶ್ವ ಹೇಳಿದರು.

ವಿದ್ಯಾರ್ಥಿಗಳ ಕರಿಯರ್ಗೆ ಹಿಂತಿರುಗಲು ಮಾತ್ರವಲ್ಲದೆ ಅವರ ಭಾಗವಹಿಸುವ ವಿಷಯದಲ್ಲಿ ಹಳೆವಿದ್ಯಾರ್ಥಿಗಳು ಸಹಕರಿಸುತ್ತೀರಿ, ಇದರಿಂದ ನನ್ನಲ್ಲಿ ಮತ್ತಷ್ಟು ಕನಸನ್ನು ಚಿಗುರಲು ಹಿಂಬುನೀಡಿದೆ. ಸಂಸ್ಥೆಯನ್ನು ಇನ್ನೂ ಬೆಳೆಸುವ ಕನಸುಕಂಡಿದ್ದೇನೆ.ಕಲಿಕೆಯಲ್ಲಿ ಗುಣಮಟ್ಟವು ಮುಖ್ಯವಾಗಿರುವುದರಿಂದ ನಾನು ಗುಣಮಟ್ಟದ ಸಂಸ್ಥೆಯನ್ನು ನಿರ್ಮಿಸಲು ಬಯಸಿರುವುದಾಗಿ ಅವರು ತಮ್ಮಆಶಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಡಿಆರ್ರ್ಡಿಓ ವಿಜ್ಞಾನಿ ಹಾಗೂ ಕಾಲೇಜಿನ ಹಳೆ ರಾಜೇಶ್ ಕುಮಾರ್ ಮಾತನಾಡಿ, ಸಿದ್ಧಾರ್ಥ ಇಂಜಿನಿಯರಿಂಗ್ ರಾಷ್ಟ್ರದ ಪ್ರಧಾನ ಸಂಸ್ಥೆಗಳಲ್ಲಿ ಒಂದಾಗಿದೆ ನಮಗೆ ವೃತ್ತಿಪರ ಗುರುತನ್ನು ಸಂಸ್ಥೆ ನೀಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ನಮ್ಮ ಭವಿಷ್ಯ ನಿರ್ಮಿಸಿದ ಕ್ಯಾಂಪಸ್ ಗೆ ಬಂದಾಗಲೆಲ್ಲಾ ಭಾವಾನಾತ್ಮಕ ಸಂಬಂಧ, ಹಳೆಯ ಶಿಕ್ಷಕರೊಂದಿಗೆ ಕಳೆದ ಉತ್ತಮ ಸಮಯ ಹಾಗೂ ಸ್ನೇಹಿತರು ಜೊತೆಜೊತೆಗಿನ ಸಂಪರ್ಕ ಮರುಕಳಿಸುತ್ತದೆ ಎಂದು ನೆನಪುಗಳ ಬುತ್ತಿಯನ್ನುಬಿಚ್ಚಿಟ್ಟರು.

ಹನುಮದ್ವ್ರತ; ಅಂಜನಿಸುತನಿಗೆ ವಿಶೇಷ ಪೂಜೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೋಟೆ ಆಂಜನೇಯಸ್ವಾಮಿ, ಸಂಕಾಪುರ ಸುವರ್ಚಲಾ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ವಿವಿಧ ಹನುಮಾನ್ ದೇಗುಲಗಳಲ್ಲಿ ಸೋಮವಾರ ಹನುಮದ್ವ್ರತ ಪ್ರಯುಕ್ತ ವಿಶೇಷ ಪೂಜೆ, ಹನುಮಸಂಕೀರ್ತನೆ, ಅಲಂಕಾರ ಉತ್ಸವಗಳು ನಡೆದವು.

ಸಂಕಾಪುರ ಸುವರ್ಚಲಾ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಅಭಿಷೇಕ, ಏಕಾದಶ ರುದ್ರಾಭಿಷೇಕ, ಮಧು ಅಭಿಷೇಕ, ಮನ್ಯು ಸೂಕ್ತ, ಪವಮಾನ ಹೋಮ, ಹೂವು. ವೀಳ್ಯದೆಲೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.  ವಿವಿದೆಡೆಯಿಂದ ಭಕ್ತಾದಿಗಳು ಆಗಮಿಸಿ ಸುವರ್ಚಲಾ ಆಂಜನೇಯಸ್ವಾಮಿ ದರ್ಶನ ಪಡೆದರು.

ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರದಿಂದಲೇ ಹನುಮದ್ವ್ರತದ ಪೂಜೆಗಳನ್ನು ನಡೆಸಲಾಯಿತು. ಸೋಮವಾರದಂದು ಲೋಕಕಲ್ಯಾಣಾರ್ಥ ಪವಮಾನ ದೇವತಾ ಕಳಶ ಸ್ಥಾಪನೆ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ 12.30 ಕ್ಕೆ ಪೂರ್ಣಾಹುತಿ, ಅಷ್ಟಾವಧಾನ ಸೇವೆ ಮಾಡಿದರು.

ಕೆಲ ಭಕ್ತಾದಿಗಳು ಪಾನಕ, ಕೋಸಂಬರಿ ವಿತರಿಸಿ ಹರಕೆ ತೀರಿಸಿದರು.  ಗುಂಡಾರ್ಲಹಳ್ಳಿ, ಬಳಸಮುದ್ರ, ಗುಂಡ್ಲಹಳ್ಳಿ, ರೊಪ್ಪ, ವೈ.ಎನ್.ಹೊಸಕೋಟೆ ಸೇರಿದಂತೆ ಪ್ರತಿ ಹನುಮ ದೇಗುಲದಲ್ಲಿಯೂ ವಿವಿಧ ಪೂಜೆಗಳನ್ನು ಭಕ್ತಾದಿಗಳು ನೆರವೇರಿಸಿದರು.

ಸಿ.ಎಲ್.ಪಿ ನಾಯಕ ಸ್ಥಾನ ತ್ಯಜಿಸುವುದಾಗಿ ಸಿದ್ದರಾಮಯ್ಯ ಪತ್ರ

ಪಬ್ಲಿಕ್ ಸ್ಟೋರಿ: 15 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ ನೈತಿಕ ಹೊಣೆ ಹೊತ್ತು ಸಿ.ಎಲ್.ಪಿ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಲೆಜೆಸ್ಲೆಟಿವ್ ಪಾರ್ಟಿ(ಸಿ.ಎಲ್.ಪಿ)ನಾಯಕ ಸ್ಥಾನ ನೀಡಿದ್ದಕ್ಕೆ ತಮಗೆ ಕೃತಜ್ಞತೆಗಳು. ಪ್ರಾಮಾಣಿಕವಾಗಿ ಶ್ರಮಿಸಿದಾಗ್ಯೂ ಚುನಾವಣೆಯಲ್ಲಿ  ತೃಪ್ತಿಕರ ಫಲಿತಾಂಶ ಸಿಕ್ಕಿಲ್ಲ ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿ.ಎಲ್.ಪಿ ನಾಯಕತ್ವದಿಂದ ಹಿಂದೆ ಸರಿಯುವ ಅನಿವಾರ್ಯತೆ ಇದೆ.

ತಮಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸದಾ ನಿಷ್ಠೆಯಿಂದಿರುತ್ತೇನೆ ಎಂದು   ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಅನರ್ಹರು ಪಡಿತರ ಚೀಟಿ ಹಿಂದಿರುಗಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ

ಪಾವಗಡ: ಇಲಾಖೆಗೆ ತಪ್ಪು ಮಾಹಿತಿ ನೀಡಿ ಬಿ.ಪಿ.ಎಲ್., ಅಂತ್ಯೋದಯ ಪಡಿತರ ಚೀಟಿ ಪಡೆದುಕೊಂಡಿರುವವರು ಡಿಸೆಂಬರ್-31 ರೊಳಗಾಗಿ ತಾಲ್ಲೂಕು ಕಛೇರಿಯ ಆಹಾರ ಶಾಖೆಗೆ ಹೊಂತಿರುಗಿಸಬೇಕು. ಇಲ್ಲವಾದಲ್ಲಿ ಅಂತಹವರಿಗೆ ದಂಡ, ಕ್ರಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ನಂದೀಶ್ ಬಾಬು ತಿಳಿಸಿದ್ದಾರೆ.
1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯವಿರುವ ಕುಟುಬಗಳು, ಎಲ್ಲ ಖಾಯಂ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾತಿಸುವವರು ಅಂತ್ಯೋದಯ, ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಅನರ್ಹರು.
ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬಗಳನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು. ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದಲ್ಲಿ ಕೂಡಲೆ ಹಿಂತಿರುಗಿಸಬೇಕು ಎಂದಿದ್ದಾರೆ.

ಸಿದ್ದರಾಮಯ್ಯನವರು ಯಾವ ಪಕ್ಷದಲ್ಲಿರುತ್ತಾರೋ ನಾನು ಅಲ್ಲಿಯೇ  ಇರುತ್ತೇನೆ: ಕೆ. ಎನ್.ರಾಜಣ್ಣ

ತಾಲ್ಲೂಕಿನ ಐ ಡಿ ಹಳ್ಳಿಯಲ್ಲಿ ಆಯೋಜಿಸಿದ್ದ ಟಿಡಿಸಿಸಿ ಬ್ಯಾಂಕ್‍ನ ನೂತನ 30ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಸಂಸದ ಜಿ.ಎಸ್.ಬಸವರಾಜು ಉದ್ಘಾಟಿಸಿದರು.

ಮಧುಗಿರಿ: ಸಿದ್ದರಾಮಯ್ಯನವರು ಯಾವ ಪಕ್ಷದಲ್ಲಿರುತ್ತಾರೋ ನಾನು ಅಲ್ಲಿಯೇ ಇರುತ್ತೇನೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ನಾವು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಐ ಡಿ ಹಳ್ಳಿಯಲ್ಲಿ ಆಯೋಜಿಸಿದ್ದ ಟಿಡಿಸಿಸಿ ಬ್ಯಾಂಕ್‍ನ ನೂತನ 30ನೇ ಶಾಖೆಯ ಉದ್ಘಾಟನಾ ಸಮಾರಂಭಧ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ನಾನು ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ರವರ ಅನುಯಾಯಿ ಯಾಗಿದ್ದು ಅವರ ಆದರ್ಶಗಳನ್ನು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಲ್ಲಿ ಕಂಡಿದ್ದೇನೆ. ಬಡವರ ಪರ ಕಾಳಜಿ ಇದ್ದೂ ಅವರು ಮುಖ್ಯಮಂತ್ರಿ ಯಾಗಿದ್ದಾಗ ಅನೇಕ ಜನ ಪರವಾದಂತಹ ಭಾಗ್ಯಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ.

ಕಳೆದ ವಿಧಾನ ಸಭೆ ಚುನಾವಣೆಯ ನಂತರ ನನ್ನದು ಕ್ಷೇತ್ರದಲ್ಲಿ ಮೊದಲ ಕಾರ್ಯಕ್ರಮವಾಗಿದೆ. ನಾನು ಈ ಹಿಂದೆ ಎರಡು ಬಾರಿ ಪರಾಜಿತಗೊಂಡಾಗಲು ಬೇಸರವಾಗಿರಲಿಲ್ಲ 2013ರಲ್ಲಿ ತಾಲ್ಲೂಕಿನ ಜನತೆ ನನ್ನನ್ನು ಮತ್ತೆ ಜಯಶೀಲರನ್ನಾಗಿಸಿದರು. ಆದರೆ ಕ್ಷೇತ್ರದ ಜನರು ನೀಡಿದ ಅಧಿಕಾರವಧಿಯಲ್ಲಿ ಸಾವಿರಾರು ಕೋಟಿ ಅನುದಾನದಲ್ಲಿ ಜನ ಪರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದೇನೆ.

ಯಾವುದೇ ಅಧಿಕಾರಿ ಯಿಂದ ಅಥವಾ ಗುತ್ತಿಗೆದಾರನಿಂದ ನಯಾ ಪೈಸೆಯನ್ನು ಮುಟ್ಟಿಲ್ಲ ಯಾರಾದರೂ ನಾನು ಲಂಚ ಪಡೆದದ್ದನ್ನು ಸಾಬೀತು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳತ್ತೆನೆಂದು ಮನ ನೊಂದು ನುಡಿದರು. ತಾಲ್ಲೂಕಿಗೆ ಸಹಕಾರ ಸಂಘಧ ದಿಂದ ರೈತರಿಗೆ ನೀಡಿದ 164 ಕೋಟಿ ರೂ ಸಾಲ ಮನ್ನಾ ವಾಗಿದೆ.

ಬರಗಾಲ ಪೀಡಿತ ಕ್ಷೇತ್ರದಲ್ಲಿ ಇಷ್ಟೂ ಅಭಿವೃದ್ಧಿಯಾದರೂ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಅಭಿವೃಧ್ಧಿ ಕಾರ್ಯಗಳು ಮತವಾಗಿ ಪರಿವರ್ತನೆಯಾಗಲಿಲ್ಲ ನನ್ನ ಮನಸ್ಸಿಗೆ ಬೇಸರವಾಗಿ ಕ್ಷೇತ್ರಕ್ಕೆ ಬರಲು ಮನಸ್ಸಾಗಲಿಲ್ಲ ಆದರೆ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನ ಮಾತಿಗೆ ಮನ್ನೆಣೆ ನೀಡಿ ಕುಟುಂಬ ರಾಜಕೀಯ ಮಾಡುವ ಮಾಜಿ ಪ್ರಧಾನಿಯನ್ನು ಮನೆಗೆ ಕಳುಹಿಸುವುದರ ಮೂಲಕ ಮತದಾರರು ಪರಿವರ್ತನೆಯಾಗಿದ್ದಾರೆಂದು ಮನಸ್ಸಿಗೆ ಸಮಧಾನವಾಯಿತು. ನಾನು ಈ ಭಾಗದ ಜನತೆಗೆ ನೀಡಿದ ಆಶ್ವಾಸನೆಯಂತೆ ನೂತ ಶಾಖೆ ಮಂಜೂರು ಮಾಡಿ ಕೊಟ್ಟಿದ್ದೇನೆ.

ಬ್ಯಾಂಕ್ ನಿಮ್ಮ ಆಸ್ತಿಯಾಗಿದ್ದು ಸಂರಕ್ಷಿಸುವುದರ ಜೊತೆಗೆ ಹೆಚ್ಚು ಹೆಚ್ಚಾಗಿ ಠೇವಣಿ ಜಮಾ ಮಾಡುವಂತೆ ರೈತರಲ್ಲಿ ಮನವಿ ಮಾಡಿದರು. ಕಳೆದ ಸಾರಿ ರಾಜ್ಯ ಸರಕಾರ ಮನ್ನಾ ಮಾಡಿದ ಹಣ ಇನ್ನೂ ಬಂದಿಲ್ಲ ಬಂದ ನಂತರ ಹಂತ ಹಂತವಾಗಿ ಮತ್ತೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಕುಟುಂಬ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಆಡ್ಡಿಪಡಿಸಿದ್ದರಿಂದ ಜಿಲ್ಲೆಯ ಜನರೇ ಅವರನ್ನು ಜಿಲ್ಲೆಯಿಂದ ಹೊರಹಾಕಿದರು. ಮಧುಗಿರಿ ಕ್ಷೇತ್ರದ ಮತದಾರರ ಆರ್ಶೀವಾದ ಕೆ.ಎನ್.ರಾಜಣ್ಣ ನವರ ಸಹಕಾರದಿಂದ ನಾನು ಸಂಸದನಾಗಿದ್ದೇನೆ.

ಕೆ.ಎನ್.ರಾಜಣ್ಣನವರು ಯಾವುದೇ ಪಕ್ಷದಲ್ಲಿದ್ದರು ಕೂಡ ನನ್ನ ಸಂಪೂರ್ಣ ಸಹಕಾರ ನೀಡುತ್ತೆನೆಂದರು. ಸಹಕಾರ ಕ್ಷೇತ್ರದಲ್ಲಿ ಧ್ರುವೀಕರಣ ಮಾಡಿದ್ದಾರೆ. ಹೋಬಳಿಗೊಂದು ಶಾಖೆಗಳನ್ನು ಆರಂಭಿಸಿದ್ದಾರೆ ಮಂಬರುವ ದಿನಗಳಲ್ಲಿ ಪಂಚಾಯಾತಿಗೊಂದರಂತೆ ಶಾಖೆಯನ್ನು ತೆರೆಯುವ ಮೂಲಕ ರೈತರಿಗೆ ಹೆಚ್ಚು ಅನೂಕೂಲ ಮಾಡಿಕೊಡಲಿ ಎಂದರು.

ರಾಜ್ಯ ಮಾರಾಟ ಮಹಾಮಂಡಲದ ನಿರ್ದೇಶಕ ಆರ್.ರಾಜೇಂದ್ರ ಮಾತನಾಡಿ ಐಡಿಹಳ್ಳಿಯ ರೈತರು ಹಾಗೂ ಸಹಕಾರಿಗಳು ಈ ಹಿಂದೆ ಹಣದ ವಹಿವಾಟಿಗೆ ಮಧುಗಿರಿಯ ಬ್ಯಾಂಕಿಗೆ ಬರಬೇಕಾಗಿತ್ತು ಅಲೆದಾಟ ತಪ್ಪಿಸುವ ದೃಷ್ಟಿಯಿಂದ ನೂತನ ಶಾಖೆಯನ್ನು ತೆರೆದು ಮಾಜಿ ಶಾಸಕರು ಅನೂಕೂಲ ಮಾಡಿಕೊಟ್ಟಿದ್ದಾರೆ. ಹಾಲಿ ಶಾಸಕ ಎಂ.ವೀರಭದ್ರಯ್ಯ ಚುನಾವಣೆಯಲ್ಲಿ ಕಳೆದ ಬಾರಿ ಶೇ.10ರಷ್ಟು ಹೆಚ್ಚು ಅಭಿವೃದ್ಧಿ ಕಾರ್ಯ ಮಾಡುತ್ತೆನೆಂದು ಭರವಸೆ ನೀಡಿದವರು ಈಗ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಶೇ.10 ರಿಂದ 15ರಷ್ಟು ಕಮೀಷನ್ ಪಡೆಯುತ್ತಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿರುವುದು ಕೇಳಿ ಬರುತ್ತಿದೆ.

ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ ಜಿಲ್ಲೆಯಲ್ಲಿ 800ಕೋಟಿ, ತಾಲ್ಲೂಕಿನಲ್ಲಿ 164ಕೋಟಿ ಸಾಲ ಪಕ್ಷಾತೀತವಾಗಿ ಜಾತ್ಯಾತೀತಾವಾಗಿ ಮನ್ನಾ ಆಗಿದೆ ಇದೂ ಸಹ ಕೆ.ಎನ್.ರಾಜಣ್ಣನವರ ಪರಿಶ್ರಮವಾಗಿದೆ ಮುಂದಿನ ದಿನಗಳಲ್ಲಿ ಅವರನ್ನು ಮತ್ತೆ ಚುನಾಯಿಸುವ ಜವಾಬ್ದಾರಿ ನಿಮ್ಮ ನಮ್ಮೆಲ್ಲಾರ ಮೇಲಿದೆ ಎಂದರು.

ಬಾಕ್ಸ್: ಮಧುಗಿರಿ ಗಡಿ ಪ್ರದೇಶದಿಂದ ತಾಲ್ಲೂಕಿನ ಗಡಿ ಭಾಗವಾದ ಐಡಿಹಳ್ಳಿ ಗ್ರಾಮದವರೆರೆವಿಗೂ ಕೆ.ಎನ್.ರಾಜಣ್ಣ ಹಾಗೂ ಸಂಸದರು ಬರುವ ದಾರಿಯೂದ್ದಕ್ಕೂ ಪತ್ರಿ ಗ್ರಾಮಗಳಲ್ಲೂ ಅಭಿಮಾನಿಗಳು, ಗ್ರಾಮಸ್ಥರು ತಳಿರು ತೋರಣಗಳಿಂದ ಸಿಂಗರಿಸಿ ಗಣ್ಯರನ್ನು ಹೂ ಮಾಲೆ ನೀಡುವುದರ ಮೂಲಕ ಸ್ವಾಗತಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ .ಕೆ.ಲಕ್ಕಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್ .ಆರ್.ರಾಜಗೋಪಾಲ್, ಜಿ.ಪಂ ಸದಸ್ಯರಾದ ಜಿ.ಜೆ.ರಾಜಣ್ಣ, ಚೌಡಪ್ಪ, ಮಂಜುಳಾ ಆದಿನಾರಾಯಣ ರೆಡ್ಡಿ, ತಾ.ಪಂ ಅಧ್ಯಕ್ಷೆ. ಇಂದಿರಾ ದೇನನಾಯ್ಕ, ಸದಸ್ಯರಾದ.ಕೆ.ಎ.ರಾಜು, ಮಹಾದೇವಿ, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ವಿ.ಎಸ್.ಎಸ್.ಎನ್.ಅಧ್ಯಕ್ಷ ಶಿವಶಂಕರ ರೆಡ್ಡಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಿಕ್ಕೋಬಳರೆಡ್ಡಿ, ಎಪಿಎಂಸಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಟಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕುಬೇಂದ್ರನಾಯ್ಕ, ನಿರ್ದೇಶಕರುಗಳಾದ ಎಸ್.ಹನುಮಾನ್, ಸಿಂಗದಹಳ್ಳಿ ರಾಜಕುಮಾರ್, ಲಕ್ಷ್ಮೀನಾರಾಯಣ್, ಹೆಚ್.ಟಿ.ತಿಮ್ಮರಾಜು, ಪುರಸಭೆ ಸದಸ್ಯರಾದ ಲಾಲಪೇಟೆ ಮಂಜುನಾಥ್, ತಿಮ್ಮರಾಯಪ್ಪ, ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಆಯ್ಯೂಬ್, ತುಮುಲ್ ಮಾಜಿ ಅಧ್ಯಕ್ಷ ನಾಗೇಶ್ ಬಾಬು, ಮುಖಂಡರುಗಳಾದ ಎಸ್.ಡಿ.ಕೃಷ್ಣಪ್ಪ, ರಾಮದಾಸು, ಶನಿವಾರಂರೆಡ್ಡಿ. ಎಸ್.ಬಿ.ಟಿ.ರಾಮು, ಸದಾಶಿವರೆಡ್ಡಿ, ಬ್ಯಾಂಕ್ ನೌಕರರಾದ ಸೀತಾರಾಂ, ಪ್ರದೀಪ್, ಲೋಕೇಶ್, ರಾಮಕೃಷ್ಣ, ಸೇರಿದಂತೆ ಸಾವಿರಾರು ಗ್ರಾಮಸ್ಥರು ಹಾಗೂ ಸಹಕಾರಿಗಳು ಇದ್ದರು.