ತುಮಕೂರ್ ಲೈವ್

ರಾಜ್ಯದ ಮೂಲೆ ಮೂಲೆಗಳಿಂದ ತುಮಕೂರಿಗೆ ಧಾವಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು

ಪಬ್ಲಿಕ್ ಸ್ಟೋರಿ:  ತುಮಕೂರಿನ ಹಾದಿ ಬೀದಿ ಎಲ್ಲಿ ನೋಡಿದರೂ  ಪಾದಯಾತ್ರೆಗಾಗಿ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಕಂಡು ಬರುತ್ತಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಟೌನ್ ಹಾಲ್ ಸರ್ಕಲ್, ಎಸ್.ಪಿ. ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಗಾಜಿನ ಮನೆ ಸೇರಿದಂತೆ  ನಗರದ ಎಲ್ಲೆಡೆ ಗುಂಪು ಗುಂಪಾಗಿ ನೆರೆದಿದ್ದಾರೆ.

ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ಪಾದಯಾತ್ರೆಗೆ ಅನುಮತಿ ನೀಡುವ ವಿಚಾರ ರಾಜ್ಯ ಸರ್ಕಾರದ ಅಂಗಳ ತಲುಪಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅಂಗನವಾಡಿ ನೌಕರರ ಫೆಡರೇಷನ್ ಮುಖಂಡರ ಜೊತೆ ಮಂಗಳವಾರ ಮಾತುಕತೆ ನಡೆಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರ ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ತಲುಪಿದೆ. ಸರ್ಕಾರದಿಂದ ಯಾವ ಭರವಸೆ ದೊರೆಯುತ್ತದೆ ಎನ್ನುವ ವಿಚಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಪಾದಯಾತ್ರೆ ಕುರಿತ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಬಗ್ಗೆ ಮುಖಂಡರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

ಸರ್ಕಾರ ಮಾತುಕತೆಗೆ ಆಹ್ವಾನಿಸಿ ಸಮಯ ನೀಡಿದರೆ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಪಾದಯಾತ್ರೆ ಕೈ ಬಿಡಲು ಮುಖಂಡರು ನಿರ್ಧರಿಸಿದ್ದಾರೆ. ಒಂದು ವೇಳೆ ಸಕಾರಾತ್ಮಕ ಭರವಸೆ ದೊರೆಯದಿದ್ದರೆ ಯಾವುದೇ ಕಾರಣಕ್ಕೆ  ಪಾದಯಾತ್ರೆ, ಹೋರಾಟ ಹಿಂಪಡೆಯುವುದಿಲ್ಲ ಪಾದಯಾತ್ರೆ ನಡೆಸಿಯೇ ಸಿದ್ದ ಎನ್ನುವ ಅಭಿಪ್ರಾಯವನ್ನು ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

ವಿವಿಧೆಡೆಗಳಿಂದ ಕಾರ್ಯಕರ್ತೆಯರು ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದಾರೆ. ತೀವ್ರ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದರೆ ಸಹಸ್ರಾರು ಸಂಖ್ಯೆಯಲ್ಲಿ ನಗರದತ್ತ ಬರುತ್ತಿರುವ ಕಾರ್ಯಕರ್ತೆಯರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಅನುಮತಿ ನಿರಾಕರಣೆ ಬಗ್ಗೆ ಮುಖಂಡರ ಅಸಮಾಧಾನ:  ಪಾದಯಾತ್ರೆಗೆ ಅನುಮತಿ ನೀಡುವುದಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ದಿಢೀರನೆ ಸೋಮವಾರ ರಾತ್ರಿ ಸರ್ಕಾರದಿಂದ ನಿರ್ದೇಶನ ಬಂದಿದೆ ಎಂದು  ಅನುಮತಿ ನಿರಾಕರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಮ್ಮ ಹಕ್ಕು.   ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿದ್ದಾರೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದು ಸಿಐಟಿಯು ಮುಖಂಡರಾದ  ವರಲಕ್ಷ್ಮಿ ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

ಪೊಲೀಸರ ಮೂಲಕ ಪಾದಯಾತ್ರೆಯನ್ನು ತಡೆದು ಪ್ರತಿಭಟನಾನಿರತರ ಜೊತೆ ಚರ್ಚಿಸದೆ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಶಾಂತಿಯುತವಾಗಿ ಪಾದಯಾತ್ರೆ ಮಾಡಲು ಅವಕಾಶ ನೀಡದೆ ನಿರಂಕುಸ ಧೋರಣೆ ಅನುಸರಿಸಲಾಗುತ್ತಿದೆ. ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸದೆ ಲಕ್ಷಾಂತರ ಮಂದಿ ಕಾರ್ಯಕರ್ತೆಯರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿರುವುದು ವಿಷಾದನೀಯ ಎಂದು ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Comment here