Monday, December 22, 2025
Google search engine
Home Blog Page 312

ಚಿಕ್ಕದೇವರಾಯನ ದುರ್ಗ ಅಂದ್ರೆ ಯಾವುದು ಗೊತ್ತೆ?

ತುಮಕೂರು:: ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇವರಾಯದುರ್ಗದ ಮೂಲ ಹೆಸರು ಚಿಕ್ಕದೇವರಾಯನದುರ್ಗ. ಮೈಸೂರು ಸಂಸ್ಥಾನದ ಚಿಕ್ಕದೇವರಾಜ ಒಡೆಯರು ಇಲ್ಲಿಗೆ ಬಂದು ದೇವಾಲಯಗಳನ್ನು ಕಟ್ಟಿಸಿದರೆಂಬುದು ಇತಿಹಾಸದಿಂದ ತಿಳಿಯುತ್ತದೆ. ಇದೇ ಕಾರಣಕ್ಕೆ ಚಿಕ್ಕದೇವರಾಯನದುರ್ಗ ಎಂದು ಕಯಲ್ಪಟ್ಟಿತೆಂದು ಕಾಲಾನಂತರದಲ್ಲಿ ಅದು ದುವರಾಯನದುರ್ಗವಾಗಿ ಮಾರ್ಪಟ್ಟಿದೆ ಎಂದು ಜಯಚಾಮರಾಜೇಂದ್ರ ಒಡೆಯರ್ ಅವರ ನಾಲ್ಕನೇ ಅಳಿಯ ಅರ್. ರಾಜಚಂದ್ರ ತಿಳಿಸಿದರು.

ತುಮಕೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಯಚಾಮರಾಜೇಂದ್ರ ಒಡೆಯರ್ ತುಮಕೂರು ಜಿಲ್ಲೆಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಬೆಳ್ಳಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಿದವರು ಜಯಚಾಮರಾಜೇಂದ್ರ ಒಡೆಯರ್. ಜಯಮಂಗಲಿ ನದಿಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಪಾವಗಡ, ಸಿರಾ, ಮಧುಗಿರಿ ಮತ್ತು ತುರುವೇಕೆರೆಗಳಲ್ಲಿ ಪುರಸಭೆ ಶಾಲೆಗಳನ್ನು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ವಿವರಿಸಿದರು.

ತುಮಕೂರು ಜಿಲ್ಲೆಯಲ್ಲಿ 1832ಕ್ಕೂ ಮೊದಲು ಎಂಟು ತಾಲೂಕುಗಳು ಮಾತ್ರ ಇದ್ದವು. ಅವುಗಳಲ್ಲಿ ಚಿಕ್ಕನಾಯನಹಳ್ಳಿ, ಮಧುಗಿರಿ, ಸಿರಾ, ಕುಣಿಗಲ್ ಸೇರಿವೆ. ತುಮಕೂರು ಹಿಂದೆ ಯುದ್ದಗಳ ಕೇಂದ್ರವಾಗಿತ್ತು ಎಂಬುದು ಇಲ್ಲಿನ ಕೋಟೆ ಕೊತ್ತಲಗಳನ್ನು ನೋಡಿದರೆ ತಿಳಿಯುತ್ತದೆ. ಗಂಗ, ನೊಳಂಬರು ವಿಜಯನಗರ, ಮೊಘಲರು ಸೇರಿದಂತೆ ಕರ್ನಾಟಕವನ್ನು ಆಳಿದ ಎಲ್ಲಾ ರಾಜರು ಆಳ್ವಿಕೆ ಮಾಡಿಹೋಗಿದ್ದರೂ ತುಮಕೂರು ಪ್ರಮುಖ ನಗರವಾಗಿರಲಿಲ್ಲ ಎಂದರು.

ರಣಧೀರ ಕಂಢೀರವ ತುರುವೇಕೆರೆಯನ್ನು ವಶಪಡಿಸಿಕೊಂಡರು. ನಂತರ ದೇವರಾಜ ಒಡೆಯರು ಚಿಕ್ಕನಾಯಕನಹಳ್ಳಿಯನ್ನು ಸ್ವಾಧೀನಪಡಿಸಿಕೊಂಡರು.1673ರಲ್ಲಿ ಚಿಕ್ಕನಾಯಕನಹಳ್ಳಿ ಅರಮನೆಯಲ್ಲಿ ಸತ್ತುಹೋದರು. ಅಲ್ಲಿಂದ ಅವರನ್ನು ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡು ಹೋದರು ಎಂದು ಒಂದು ವಾಕ್ಯದ ಉಲ್ಲೇಖವಿದೆ.
ಮಂಟೇಸ್ವಾಮಿ ಮಠದ ಎಂ.ಎಲ್. ವರ್ಚಸ್ವೀ ಶ್ರೀಕಂಠ ಸಇದ್ದಲಿಂಗರಾಜೇ ಅರಸ್ ಮಾತನಾಡಿ ಮೈಸೂರು ಸಂಸ್ಥಾನದ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್ ರಾಜರಾಗಿದ್ದರೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಳ್ವಿಕೆ ನಡೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅತ್ಯಂತ ದೊಡ್ಡ ನಿರ್ಧಾರಗಳನ್ನು ಕೈಗೊಂಡರು.

ಇಡೀ ಇಂಡಿಯಾದಲ್ಲಿ ಮೊದಲ ಬಾರಿಗೆ ಸಂಸ್ಥಾನವನ್ನು ಭಾರತದೊಳಗೆ ಸೇರ್ಪಡೆ ಮಾಡಲು ಒಪ್ಪಿಗೆ ಕೊಟ್ಟವರು. 1947ರಲ್ಲಿ ಮೈಸೂರು ಸಂಸ್ಥಾನವನ್ನು ಒಪ್ಪಿಸಿ ದರೂ ಅವರು ರಾಜರಾಗಿಯೇ ಮುಂದುವರಿದಿದ್ದರು. ಯಾಕೆಂದರೆ ಅವರು ತುಮಕೂರು ಜಿಲ್ಲೆಗೆ ಬಂದು ಹಲವು ಅವಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿರುವುದು ಕಂಡು ಬರುತ್ತದೆ ಎಂದು ಹೇಳಿದರು.

ಮೈಸೂರು ಮಹಾರಾಜರು ಅಂದ್ರೆ ಅರಮನೆ ಕೋಟೆಯೊಳಗಿದ್ದು ರಾಜ್ಯಭಾರ ಮಾಡಿದವರು ಎಂದು ಜನರು ತಿಳಿಯುತ್ತಾರೆ. ಇದು ತಪ್ಪು. ಮಹಾರಾಜರ ಬಗ್ಗೆ ಜನರಿಗೆ ತುಂಬ ಗೌರವವಿದೆ. ಸರ್ಕಾರ ಅವರ ಹೆಸರಿನಲ್ಲಿ ಸೂಕ್ತ ವೇದಿಕೆಯನ್ನು ನಿರ್ಮಾಣ ಮಾಡಿ ಅವರು ಶಿಕ್ಷಣ, ಕೃಷಿ, ಕೈಗಾರಿಕೆ, ರೈಲ್ವೆ, ನೀರಾವರಿ, ಸಂಗೀತ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಿಗೆ ಕೊಟ್ಟ ಕೊಡುಗೆಯನ್ನು ಗುರುತಿಸಿ ಒಡೆಯರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು. ಭಾರತ ಸರ್ಕಾರ ಒಡೆಯರ್ ಸೇವೆಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಮಾತನಾಡಿ, ಜಯಚಾಮರಾಜೇಂದ್ರ ಒಡೆಯರ್ 20 ಸಾವಿರ ಸಂಗೀತ ಕೃತಿಗಳನ್ನು ಇಟ್ಟುಕೊಂಡಿದ್ದರು. ವ್ಯಕ್ತಿತ್ವವನ್ನು ಹೇಳಲು ಸಾಧ್ಯವಿಲ್ಲ. ಹೆಚ್ಚು ಒತ್ತು ಕೊಡಿದ್ದು ಸಮಾಜವನ್ನು ಸರಿಮಾಡಲು ಸಂಸ್ಥೆಗಳನ್ನೇ ರೂಪಿಸಿದ್ದರು.

ಜಯಚಾಮರಾಜೇಂದ್ರ ಒಡೆಯರ್ ಒಬ್ಬ ಮೇಧಾವಿಯಾಗಿದ್ದರು. ಎಲ್ಲಾ ಸ್ಥಾನದಲ್ಲೂ ನ್ಯಾಯವನ್ನು ಒದಗಿಸಿದವರು. ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದುಕೊಂಡು ಎಲ್ಲರನ್ನು ಸಮಾನತೆಯಿಂದ ನೋಡಿದವರು. ನಿಜವಾದ ಸತ್ವಯುತ ಜೀವನ ಕ್ರಮವನ್ನು ಕಲಿಸಿದವರು ಜಯಚಾಮರಾಜೇಂದ್ರ ಒಡೆಯರ್ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಪ್ರಾಸ್ತಾವಿಕ ಮಾತನಾಡಿದರು. ಜಯಚಾಮರಾಜೇಂದ್ರ ಒಡೆಯರ್ ಕೃತಿಯ ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್, ಕೃತಿ ಸಂಪಾದನೆಗೆ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಕಸಾಪ ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಗೋವಿಂದಯ್ಯ ವಂದಿಸಿದರು.

MSME ಕೇಂದ್ರಕ್ಕೆ ತುಮಕೂರಿನಲ್ಲಿ 15 ಎಕರೆ‌‌ ಭೂಮಿ

ತುಮಕೂರು: ತುಮಕೂರಿಗೆ ಸುಮಾರು 100 ಕೋಟಿ ವೆಚ್ಚದ ಎಂಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆಗೆ ಜಿಲ್ಲಾಧಿಕಾರಿಗಳು 15 ಎಕರೆ ಜಮೀನನ್ನು ಇಲಾಖೆಗೆ ಹಸ್ತಾಂತರಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಶೀಘ್ರವೇ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಲಾಗುವುದು. ನಂತರ ವಸ್ತುಸ್ಥಿತಿ ಹೇಳಿದ್ದೇನೆ.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿಕೆ ನೀಡಿದ್ದಾರೆಂಬ ಸುದ್ದಿ ನೋಡಿದೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ನಾನು ಮತ್ತು ತುಮಕೂರು ನಗರದ ಶಾಸಕರು ಹಿಂದಿನ ದಿಶಾ ಸಮಿತಿಯ ಸಭೆಯಲ್ಲಿ ಸ್ಕಿಲ್ ಸಿಟಿ ನಿರ್ಮಾಣ ಮಾಡಲು ಸೂಚಿಸಿದ್ದೆವು ಎಂದರು.

ಪಿಪಿಟಿ ಪ್ರದರ್ಶನ ಮಾಡಿದ ಅಂಶಗಳನ್ನು ಶಾಲಿನಿ ರಜನೀಶ್ ಹೇಳಿಕೆ ತರಹ ಬಿಬಬಿಸಲಾಗಿದೆ. ಅದು ಸಹ ತಪ್ಪಾಗಿ ಎಂಬುದು ನನಗೆ ತಿಳಿಯಿತು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ವಿವರವಾದ ಪರಿಕಲ್ಪನಾ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಅಧ್ವಾನಗಳಾಗಿವೆ. ಇದಕ್ಕೆ ತೆರೆ ಎಳೆದು ಜನರಿಗ ಪೂರಕ ಯೋಜನೆಗಳನ್ನು ಕೈಗೊಳ್ಳಲು ದಿಶಾ ಸಮಿತಿ ಸಭೆಯಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿದವವರಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳಿಗೆ ಶಿಪಾರಸು ಮಾಡಲಾಗುವುದು ಎಂದರು.

ನನಗೆ ಓಬೇರಾಯನ ಕಾಲದ ಲೆಕ್ಕವೂ ಗೊತ್ತು, ಡಿಜಿಟಲ್ ಇಂಡಿಯಾವೂ ಗೊತ್ತು, ಜಿಐಎಸ್ ಅಗತ್ಯವೂ ಗೊತ್ತು. ನನಗೆ ಯಾಮಾರಿಸಲು ಯಾರಿಂದಲೂ ಸಾಧ್ಯವಿಲ್ಲ. ೀ ಸಂಬಂಧ ಡಿಸೆಂಬರ್ 16ರಂದು ಸಭೆ ಕರೆದಿದ್ದೇನೆ. ಕಂಪನಿಯ ಚೇರ್ಮನ್ ಸಹ ಸಭೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಯೋಜನೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ತುಮಕೂರು ನಗರದ ೆಲ್ಲಾ ಬಡಾವಣೆಗಳ ನಾಗರಿಕ ಸಮಿತಿಗಳ ಮುಂದೆ ಪ್ರತಿಯೊಂದು ಯೋಜನೆಯ ಮಾಹಿತಿ ಪ್ರಕಟಿಸಿ ಒಂದೊಂದು ಯೋಜನೆಯನ್ನು ಪರಾಮರ್ಶೆಗೆ ಒಳಪಡಿಸಲಾಗುವುದು ಎಂದು ವಿವರಿಸಿದರು.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆ ಯಾವ ಯಾವ ವ್ಯವಸ್ಥಾಪಕ ನಿರ್ದೇಶಕರ ಅವಧಿಯಲ್ಲಿ ಎಷ್ಟೆಷ್ಟು ನಡೆದಿವೆ. ಯಾವ ಸಭೆಯಲ್ಲಿ ಯಾವ ಯೋಜನೆಯ ಬಗ್ಗೆ ವಿವರವಾದ ಚರ್ಚೆ ನಡೆಯಲಾಗಿದೆ ಎಂಬ ಬಗ್ಗೆ ಯೋಜನೆವಾರು ಮಾಹಿತಿಯನ್ನು ಒಂದೇ ಕಡೆ ತರಲು ಸೂಸಿಸಲಾಗಿದೆ ಎಂದು ತಿಳಿಸಿದರು.

ಈ ಕಾಯ್ದೆಯಿಂದ ಕಾರ್ಮಿಕರಿಗೆ ಏನ್ನೆಲ್ಲಾ ಆಗುತ್ತೆ ಗೊತ್ತಾ?

Publicstory.in


ತುಮಕೂರು: ಕೇಂದ್ರ ಸರ್ಕಾರವು ಆತುರಾತುರವಾಗಿ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವುದು ತಮಗೆ ಸಹಾಯ ಮಾಡಿದ್ದ ಕಾರ್ಪೊರೇಟ್ ಧಣಿಗಳಿಗೆ ವ್ಯಾಪಾರ ಸರಳೀಕರಣ ಹೆಸರಿನಲ್ಲಿ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಇರುವ ಹಕ್ಕುಗಳನ್ನು ಮತ್ತು ರಕ್ಷಣೆಗಳನ್ನು ದಮನ ಮಾಡುತ್ತಿದೆ ಎಂದು ಸಿಐಟಿಯು ಸಮಿತಿ ಆಪಾದಿಸಿದೆ.

ಇತ್ತೀಚೆಗೆ, 10-07-2019ರಂದು ಕೇಂದ್ರ ಕಾರ್ಮಿಕ ಸಚಿವರು ಇತರೆ ಸಚಿವರೊಂದಿಗೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಷರತ್ತುಗಳ ಮಸೂದೆ 2019’ನ್ನು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯು ಅನುಮೋದನೆ ಮಾಡಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ವರಲಕ್ಷ್ಮೀ ತಿಳಿಸಿದ್ದಾರೆ.

ಈ ಮಸೂದೆಯು ಹಾಲಿ ಅಸ್ತಿತ್ವದಲ್ಲಿರುವ 13 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ರೂಪಿಸಿರುವ ಸಂಹಿತೆಯಾಗಿದೆ. ಈ ಮಸೂದೆಯಲ್ಲಿ ಕಾರ್ಮಿಕರಿಗೆ ಅನುಕೂಲಕರವಾದದ್ದನ್ನು ಆಯ್ದುಕೊಂಡಿರುವ ಸರ್ಕಾರವು ಕಾರ್ಮಿಕರ ರಕ್ಷಣೆಗೆ ಇದ್ದ ನಿಯಮ-ಉಪನಿಮಯಗಳನ್ನು ದುರ್ಬಲಗೊಳಿಸಿ ಹಾಳು ಮಾಡಲಾಗಿದೆ.

ಪ್ರಾಣ ಹಾನಿಗೆ ನೂಕುತ್ತಾ ಈ ಕಾಯ್ದೆ


ಆರೋಗ್ಯ ಮತ್ತು ಸುರಕ್ಷತೆಯ ವಿಷಯಗಳಲ್ಲಿಯೂ ಸಹ ಕಾರ್ಮಿಕರಾಗಲೀ, ಕಾರ್ಮಿಕರ ಸಂಘವಾಗಲೀ ತಮ್ಮ ಹಕ್ಕನ್ನು ಚಲಾಯಿಸಿ ಈ ವಿಚಾರದಲ್ಲಿ ಮಾಲೀಕರನ್ನು ಅಗತ್ಯವಾದ ಸುರಕ್ಷತೆ ಮತ್ತು ಆರೋಗ್ಯಕರ ವಾತಾವರಣವನ್ನು ಪಡೆಯಲು ಆಗದಂತಹ ರೀತಿಯಲ್ಲಿ ಈ ಸಂಹಿತೆಯನ್ನು ರೂಪಿಸಲಾಗಿದೆ. ಇದರಿಂದಾಗಿ ಮತ್ತಷ್ಟು ಅಂಗವೈಕಲ್ಯತೆ, ಗಾಯಾಳುಗಳ ಸಂಖ್ಯೆ ಹೆಚ್ಚಳ, ಪ್ರಾಣಹಾನಿ ಹೆಚ್ಚಾಗುವಂತೆ ಈ ಮಸೂದೆ ಎಂದು ಆಪಾದಿಸಿದೆ.

ಕೇಂದ್ರ ಸರ್ಕಾರ ಈ ಮಸೂದೆಯನ್ನು ರೂಪಿಸುವ ಸಂದರ್ಭದಲ್ಲಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದರು. ಅದನ್ನು ಪರಿಗಣಿಸದ ಸರ್ಕಾರ ಬಂಡವಾಳಶಾಹಿ ಕಾರ್ಪೊರೇಟ್ ವಲಯವನ್ನು ತೃಪ್ತಿಪಡಿಸಲು ಈ ಮಸೂದೆಯನ್ನು ರೂಪಿಸಲಾಗಿದೆ ಎಂದು ಸಿಐಟಿಯು ಆರೋಪಿಸಿದೆ.

₹ 18 ಸಾವಿರದಿಂದ ಇಳಿತು ಕನಿಷ್ಠ

ಕೂಲಿ ₹ 4628 ಕ್ಕೆ


ಕೇಂದ್ರ ಕಾರ್ಮಿಕ ಸಚಿವರು ಮತ್ತೊಂದು ವಿಷಯ ಪ್ರಸ್ತಾಪಿಸಿ *ವೇತನ ಸಂಹಿತೆ ಮಸೂದೆ 2019* ಅನ್ನು ಅನುಮೋದಿಸಿದ್ದಾಗಿ ತಿಳಿಸಿದ್ದಾರೆ. ಇದರನ್ವಯ ರಾಷ್ಟ್ರೀಯ ನೆಲಮಟ್ಟದ ಕನಿಷ್ಟ ವೇತನವನ್ನು ದಿನವೊಂದಕ್ಕೆ ರೂ. 178 ರೂಪಾಯಿಗಳು (ತಿಂಗಳಿಗೆ 4628) ನಿಗದಿಗೊಳಿಸಲಾಗಿದೆ. ಇದಕ್ಕಿಂತ ಕಡಿಮೆ ವೇತನವನ್ನು ರಾಜ್ಯ ಸರ್ಕಾರಗಳು ನಿಗದಿಗೊಳಿಸುವಂತಿಲ್ಲ ಎಂದು ತಿಳಿಸಲಾಗಿದೆ.

ಇದೊಂದು ನಾಚಿಕೆಗೇಡಿನ ವಿಷಯವಾಗಿದೆ. ಈ ಸಂಹಿತೆಯು ಕನಿಷ್ಠ ಕೂಲಿಯ ಜಾರಿಗೆ ಬೇಕಾದ ಶಾಸನಬದ್ದ ವ್ಯವಸ್ಥೆಯನ್ನು ಸಹ ಹೊಂದಿರುವುದಿಲ್ಲ.

ಕೇಂದ್ರ ಸರ್ಕಾರವು ನೆಲಮಟ್ಟದ ಕನಿಷ್ಠ ವೇತನವನ್ನು ದಿನಕ್ಕೆ 178 ರೂಪಾಯಿ, ಮಾಸಿಕ 4,628/- ರೂಪಾಯಿಗಳೆಂದು ಘೋಷಿಸಿ ಹೆಮ್ಮಪಡುತ್ತಿರುವುದು ನಾಚಿಕೆಗೇಡು ಮತ್ತು ಹಾಸ್ಯಾಸ್ಪದ ವಿಷಯವಾಗಿದೆ ಎಂದು ಸಿಐಟಿಯು ಹೇಳಿದೆ.

ಈಗಾಗಲೇ ದೇಶದ 31 ಕೇಂದ್ರಗಳು ಮತ್ತು ರಾಜ್ಯಗಳಲ್ಲಿ ಕನಿಷ್ಠ ವೇತನವು ದಿನವೊಂದಕ್ಕೆ 178ರೂಪಾಯಿಗೂ ಹೆಚ್ಚಿದೆ. ಕೇಂದ್ರ ಸರ್ಕಾರದ ಈ ಕನಿಷ್ಠ ವೇತನದ ಪ್ರಕಟಣೆಗಳು ರಾಜ್ಯ ಸರ್ಕಾರಗಳನ್ನು ಹಾಗೂ ಮಾಲೀಕರನ್ನು ಕನಿಷ್ಟ ವೇತನ ಕಡಿತ ಮಾಡಲು ಪ್ರಚೋದಿಸುವಂತಿದೆ ಎಂದು ಸಿಐಟಿಯು ಆಪಾದಿಸಿದೆ.

ಈ ನೆಲಮಟ್ಟದ ಕನಿಷ್ಠ ವೇತನ ಕಾಯ್ದೆಯು ಬಂಡವಾಳಗಾರರಿಗೆ ಕನಿಷ್ಟವೇತನವನ್ನು ಕಡಿಮೆ ಮಾಡಿ ಕಾರ್ಮಿಕರನ್ನು ಲೂಟಿ ಮಾಡಲು ಅವಕಾಶ ಮಾಡಿಕೊಡಲಿದೆ ಎಂದು ಸಿಐಟಿಯು ಆರೋಪಿಸಿದೆ.

ಸುಪ್ರೀಂ ಕೋರ್ಟ್ ಸೂತ್ರ ತಲೆಕೆಳಗು


ಹದಿನೈದನೇ ಭಾರತೀಯ ಕಾರ್ಮಿಕ ಸಮ್ಮೇಳನವು ಹಾಗೂ 1992ರಲ್ಲಿ ಭಾರತೀಯ ಸರ್ವೋಚ್ಛ ನ್ಯಾಯಾಲಯವು ರಕ್ತಕೋಸ್ ಬ್ರೆಟ್ ಪ್ರಕರಣದಲ್ಲಿ ಕನಿಷ್ಠ ವೇತನವನ್ನು ನಿಗದಿಗೊಳಿಸಲು ಬೇಕಾಗಿ (2700 ಕ್ಯಾಲೊರಿ ಆಹಾರ) ರಚಿಸಿದ ಸೂತ್ರವನ್ನು ಸರ್ಕಾರ ನಿರ್ಲಕ್ಷಿಸಿದೆ. ಇದೇ ಸೂತ್ರವನ್ನು 44, 45, 46ನೇ ಭಾರತೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಸಹ ಸರ್ವಾನುಮತದಿಂದ ಶಿಫಾರಸು ಮಾಡಲಾಗಿತ್ತು.

ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಭಾಗಿದಾರವಾಗಿತ್ತು. ಮೇಲೆ ಹೇಳಲಾದ ಸೂತ್ರದನ್ವಯ 2014 ಕನಿಷ್ಟ ವೇತನ 18 ಸಾವಿರ ರೂಪಾಯಿ, (ದಿನಕ್ಕೆ 692.3) ರೂಪಾಯಿಗಳು ನಿಗದಿಯಾಗಿತ್ತು. ಇದೇ ವೇತನವನ್ನೇ ಆರನೇ ವೇತನ ಆಯೋಗವು ಶಿಫಾರಸು ಮಾಡಿತ್ತು. ಇದಾದ ನಂತರ 2018ರಲ್ಲಿ ಇದೇ ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರು ಕನಿಷ್ಟ ವೇತನವನ್ನು ನಿಗದಿಗೊಳಿಸುವ ಕುರಿತು ಇರುವ ವಿಧಾನಗಳ ಕುರಿತು ನಿರ್ಧರಿಸಲು ಒಂದು ತಜ್ಞರ ಸಮಿತಿಯನ್ನು ರಚಿಸಿತ್ತು.

ಈ ತಜ್ಞರ ಸಮಿತಿಯು ಭಾರತೀಯ ಕಾರ್ಮಿಕ ಸಮ್ಮೇಳನದ ಸರ್ವಾನುಮತದ ಶಿಫಾರಸುಗಳಾದ 2700 ಕ್ಯಾಲೊರಿ ಆಹಾರ ಸೂತ್ರವನ್ನು ಏಕಪಕ್ಷೀಯವಾಗಿ ಬದಲಿಸಿ 2400 ಕ್ಯಾಲೊರಿಗೆ ಇಳಿಸಲಾಯಿತು. ಅಲ್ಲದೆ ಕನಿಷ್ಠ ವೇತನದ ಲೆಕ್ಕಾಚಾರಕ್ಕೆ ಅಗತ್ಯವಾದ ವಸ್ತುಗಳ ದರಗಳನ್ನು 2012ರ ಮಾರುಕಟ್ಟೆಯ ದರದಂತೆ ಪರಿಗಣಿಸಿತು.

ಈ ತಜ್ಞರ ಸಮಿತಿಯು ಕನಿಷ್ಠವೇತನವನ್ನು ದಿನಕ್ಕೆ 375 ರೂನಿಂದ 447 ರೂಪಾಯಿಗಳಿಗೆ (ಮಾಸಿಕ ರೂ.9750 ರಿಂದ 11,622) ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸು ಕಾರ್ಪೊರೇಟ್ ಬಂಡವಾಳದಾರರ ಕಂಪನಿಗಳ ಕೆಂಗಣ್ಣಿಗೆ ಗುರಿಯಾಯಿತು.

ಬಲಿಷ್ಠ ಪ್ರಧಾನಿ ಸದೃಢ ಸರ್ಕಾರ ಎಂದು ಹೇಳುವ ಕೇಂದ್ರದ ಬಿಜೆಪಿ ಸರ್ಕಾರವು ನಾಚಿಕೆ ಇಲ್ಲದಂತೆ ತನ್ನದೇ ತಜ್ಞರ ಸಮಿತಿಯ ಶಿಫಾರಸುಗಳನ್ನು ಬದಿಗೆ ಸರಿಸಿ, ದಿನವೊಂದಕ್ಕೆ 178 ರೂಪಾಯಿ ನೆಲಮಟ್ಟದ ಕನಿಷ್ಟ ವೇತನವನ್ನು ಘೋಷಿಸಿದೆ ಎಂದು ಸಿಐಟಿಯು ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಇದು ಎಲ್ಲರನ್ನೂ ಒಳಗೊಳ್ಳುವಿಕೆಯ ಅಭಿವೃದ್ಧಿ ಎಂದು ಜಪ ಮಾಡುತ್ತಿರುವ ಬಿಜೆಪಿ ಸರ್ಕಾರದ ನಿಜ ಮುಖವಾಗಿದೆ ಎಂದು ಸಿಐಟಿಯು ವ್ಯಂಗ್ಯವಾಡಿದೆ.

ಸಿಐಟಿಯು ಕೇಂದ್ರ ಈ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತದೆ. ಈ ನೀತಿಯ ವಿರುದ್ಧ ಕಾರ್ಮಿಕ ಸಂಘಗಳು ಮತ್ತು ಕಾರ್ಮಿಕ ವರ್ಗ ಐಕ್ಯ ಹೋರಾಟಕ್ಕೆ ಮುಂದಾಗಲು ಸಿಐಟಿಯು ಕರೆ ನೀಡುತ್ತದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.

ಐ.ಡಿ.ಹಳ್ಳಿ ಗ್ರಾಮದಲ್ಲಿ  DCC ಬ್ಯಾಂಕ್ ನೂತನ ಶಾಖೆ ಪ್ರಾರಂಭೋತ್ಸವಕ್ಕೆ  ಜನರ ಹರ್ಷ

ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ವೀಕ್ಷಿಸಿದರು

Publicstory.in


ಮಧುಗಿರಿ : ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಪ್ರಾರಂಭಿಸುತ್ತಿರುವುದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತಿದೆ.

ಐ.ಡಿ.ಹಳ್ಳಿ ಗ್ರಾಮದಿಂದ ಮಧುಗಿರಿ ಡಿಸಿಸಿ ಬ್ಯಾಂಕ್ ತೆರಳಬೇಕಾದರೆ ದಿನ ವಿಡಿ ಸಮಯ ವ್ಯರ್ಥ ವಾಗುವ ಜೊತೆಗೆ ಬಸ್ ನಲ್ಲೇ ತೆರಳಬೇಕಾಗಿರು ವುದರಿಂದ ಹಣ ಕೂಡ ಖರ್ಚಾಗುತ್ತಿತ್ತು. ಆದರೆ ನಮ್ಮ ಗ್ರಾಮದಲ್ಲೇ ಬ್ಯಾಂಕ್ ಪ್ರಾರಂಭವಾಗುತ್ತಿರುವುದರಿಂದ ಸಮಯ ಹಾಗೂ ಹಣ ಕೂಡ ಉಳಿತಾಯ ವಾಗುತ್ತಿದೆ ಎಂದು ಹರ್ಷ ವ್ಯಕ್ಯಪಡಿಸುತ್ತಿದ್ದಾರೆ.

ಹಣ ಹಾಗೂ ಬಂಗಾರದ ಒಡವೆಗಳ ಕಳ್ಳತನ ಹೆಚ್ಚಾಗುತ್ತಿದ್ದು, ಹಣ ಮತ್ತು ಒಡವೆ ಗಳನ್ನು ಬ್ಯಾಂಕಿನ ಲಾಕರ್ ನಲ್ಲಿಡುವ ಮೂಲಕ ಜೋಪಾನ ಕೂಡ ಮಾಡಬಹುದಾಗಿದೆ ಎಂದು ಹೇಳುತ್ತಾರೆ.
ಗ್ತಾಮೀಣ ಪ್ರದೇಶದಲ್ಲಿ ವಾಣಿಜ್ಯ ಬ್ಯಾಂಕ್ ಮುಚ್ಚುತ್ತಿವೆ. ಆದರೆ ಸಹಕಾರ ಬ್ಯಾಂಕ್ ಶಾಖೆ ತೆರೆಯುತ್ತಿರುವುದು ಗಮನಾರ್ಹವಾಗಿದೆ.

ರಾಜಣ್ಣ ಬಗ್ಗೆ ಮೆಚ್ಚುಗೆ


ಈ ಭಾಗದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆಯನ್ನು ಪ್ರಾರಂಭಿಸುತ್ತಿರುವುದಕ್ಕೆ ರಾಜ್ಯ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪ್ರಯತ್ನಕ್ಕೆ ಗ್ರಾಹಕರು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದೆ ಪರದಾಡುತ್ತಿರುವ ಜನತೆ

ಲಕ್ಷ್ಮೀಕಾಂತರಾಜು ಎಂಜಿ, 9844777110


ಎಲ್ಲರಿಗೂ ಎಲ್ಲಡೆ ಆರೋಗ್ಯವೆಂದು ಆರೋಗ್ಯ ಇಲಾಖೆ ಹೇಳುತ್ತದೆ. ಆದರೆ,ಗಡಿ ಹಾಗೂ ಹಿಂದುಳಿದ ಪ್ರದೇಶಗಳಿಗಳ ಜನರ ಆರೋಗ್ಯದ ಕುರಿತ ಆರೋಗ್ಯ ಇಲಾಖೆ ಕಾಳಜಿವಹಿಸುವುದೇ ಇಲ್ಲ. ಹಿಂದುಳಿದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದೂರವಿರುವ ಒಂದು ಪಂಚಾಯತಿಯ ಜನರು ಆರೋಗ್ಯ ಕೈ ಕೊಟ್ಟಾಗ ಇಲ್ಲಿನ ರೋಗಿಗಳು ದೂರದ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಉಂಟಾಗಿದೆ.

ಹೌದು. ಗುಬ್ಬಿ ತಾಲ್ಲೂಕಿನ ಗಡಿ ಹಾಗೂ ಅತ್ಯಂತ ಹಿಂದುಳಿದ ಪ್ರದೇಶವಾದ ಮಂಚಲದೊರೆ ಗ್ರಾಪಂ ಕೇಂದ್ರಕ್ಕೆ ಇದುವರೆಗೂ ಪ್ರಾಥಮಿಕ ಆರೋಗ್ಯಕೇಂದ್ರವಿಲ್ಲದೆ ಇಲ್ಲಿನ ಜನರು ದೂರದೂರಿನ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಮಂಚಲದೊರೆ ಪಂಚಾಯಿತಿ ಕೇಂದ್ರಸ್ಥಾನಕ್ಕೆ ಸುಮಾರು ಹದಿನಾರು ಹಳ್ಳಿಗಳು ಸೇರಿದ್ದು ಇದು ಗುಡ್ಡಗಾಡು ಪ್ರದೇಶವಾಗಿದ್ದು ಭೌಗೋಳಿಕವಾಗಿ ದೊಡ್ಡದಾಗಿದೆ.ಪಂಚಾಯತಿ ಕೇಂದ್ರ ಸ್ಥಾನದಿಂದ ಗಡಿಗ್ರಾಮಗಳು ಆರೇಳು ಕಿಮೀ ದೂರದಲ್ಲಿವೆ.

ಈ ಗ್ರಾಮಗಳಲ್ಲಿನ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೂ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಈ ಭಾಗದ ಜನರದ್ದಾಗಿದೆ.

ಮಂಚಲದೊರೆಯಲ್ಲಿ ಈಗಾಗಲೇ ಆಯರ್ವೇದ ಆಸ್ಪತ್ರೆ ಇದೆ. ಆದರೆ ವಾರಕ್ಕೆ ಎರಡು ಬಾರಿ ಬರುವ ಡಾಕ್ಟರ್, ವೈದ್ಯರಿಗೆ ಕಚೇರಿ ಕೆಲಸ ಮೀಟಿಂಗ್ ಇದ್ದರೆ ವಾರಪೂರ್ತಿ ಇಲ್ಲಿಗೆ ವೈದ್ಯರೇ ಬರುವುದಿಲ್ಲ .ಆದ್ದರಿಂದ ಇಲ್ಲಿನ ರೋಗಿಗಳಿಗೆ ಆಯುರ್ವೇದ ಆಸ್ಪತ್ರೆಯ ಸೌಲಭ್ಯವೂ ದೊರಕದಂತಾಗಿದೆ ಎಂದು ದೂರುತ್ತಾರೆ ಮಂಚಲದೊರೆ ಪಂಚಾಯತಿ ಜನರು.

ಈ ಭಾಗದ ಸುಮಾರು ಹಳ್ಳಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದರೆ ದೂರದ ಹದಿನೈದು ಇಪ್ಪತ್ತು ಕಿಮೀ ದೂರದ ಹೊಸಕೆರೆ ಹಾಗೂ ಚೇಳೂರು ಆಸ್ಪತ್ರೆಗಳಿಗೆ ಹೋಗಬೇಕಿದ್ದು ಒಂದು ದಿನವೇ ಬೇಕಾಗುತ್ತದೆ.

ದೂರದ ಊರುಗಳಿಗೆ ಚಿಕಿತ್ಸೆ ಬಯಸಿ ಹೋಗುವದರಿಂದ ಇಲ್ಲಿನ ವೃದ್ಧರು ಹಾಗೂ ಮಹಿಳೆಯರಿಗೆ ಬಹಳ ತೊಂದರೆಯಾಗಿರುತ್ತದೆ. ಹೆರಿಗೆ ಮತ್ತಿತರ ತುರ್ತು ಸಮಸ್ಯೆಗಳಿಗೆ ತಾಲ್ಲೂಕು ಕೇಂದ್ರ ನಲವತ್ತು‌ ಕಿಮೀ‌ ದೂರವಿರುವ ಕಾರಣ ಕಡಿಮೆ ಪ್ರಯಾಣ ಅವಧಿಯಲ್ಲಿ ವೈದ್ಯರನ್ನ ಕಾಣುವುದು ಕನಸಿನ ಮಾತಾಗಿದೆ

ಈ ಪಂಚಾಯತಿಯ ಆರೋಗ್ಯ ಸಮಸ್ಯೆಗೆ ಪರಿಹಾರವಾಗಿ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕೆಂದು ಈ ಬಾಗದ ಜನರಿಂದ ಬಹುದಿನದ ಬೇಡಿಕೆಯಾಗಿದ್ದು ಇಲ್ಲಿನ ಜನಪ್ರತಿನಿಧಿಗಳ ಬೇಜವಬ್ದಾರಿಯಿಂದ ಇದುವರೆಗೂ ಕೆಲಸವಾಗಿಲ್ಲ ಎನ್ನುತ್ತಾರೆ ರಾಜಕೀಯ ಮುಖಂಡರೊಬ್ಬರು.

ಮಂಚಲದೊರೆ ಗ್ರಾಮ ಪಂಚಾಯತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡುವುದು ತಡವಾದರೂ ಇರುವ ಆಯುರ್ವೇದ ಆಸ್ಪತ್ರೆಗೆ ಪ್ರತಿ ದಿನವೂ ವೈದ್ಯರು ಕರ್ತವ್ಯಕ್ಕೆ ಹಾಜರಾಗುವುಂತೆ ಮಾಡಿದರೂ ಸ್ವಲ್ಪಮಟ್ಟಿಗಿನ‌ ಸಮಸ್ಯೆ ಬಗೆ ಹರಿಯುತ್ತದೆ . ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಲಿ ಎಂಬುದೇ ಇಲ್ಲಿನ‌ ಜನರ ಅಭಿಲಾಷೆಯಾಗಿದೆ.


ಮಂಚಲದೊರೆಯಲ್ಲಿ ಈಗಾಗಲೇ ಆಯುರ್ವೇದ ಆಸ್ಪತ್ರೆ ಇದ್ದು ಅದನ್ನು ಮೇಲ್ದರ್ಜೆಗೆ ಏರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಲು ಅವಕಾಶ ಇರುವುದಿಲ್ಲ. ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು‌ ಮಾಡಬೇಕಾಗಿದೆ.ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸೋಣ.
ಬಸವರಾಜು. ಸಂಸದರು. ತುಮಕೂರು‌ ಕ್ಷೇತ್ರ

ಮಂಚಲದೊರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದರೆ‌ ಈ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುತ್ತೆ
ಮರಡಿರಂಗನಾಥ,ಮಂಚಲದೊರೆ

ಮಂಚಲದೊರೆಯಲ್ಲಿ ಈಗಿರುವ ಆಯುರ್ವೇದ ಆಸ್ಪತ್ರೆಗೆ ಖಾಯಂ ವೈದ್ಯರನ್ನ ನೇಮಿಸಿ ಪ್ರತಿದಿನವೂ ರೋಗಿಗಳಿಗೆ ವೈದ್ಯರು‌ ಸಿಗುವಂತೆ ಮಾಡಿದರೆ ಇಲ್ಲಿನ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ
ರಮೇಶ,ಮಂಚಲದೊರೆ

ತುಮಕೂರು ಧೂಳು ಸಿಟಿಯೂ ಹೌದು: ‌ಸ್ಮಾರ್ಟ್ ಸಿಟಿ ಆಡಳಿತ ಮಂಡಳಿ ವಿರುದ್ಧ ಶಾಸಕ‌‌ ಗರಂ

Public story.in


ತುಮಕೂರು: ಪೂರ್ವ ನಿಯೋಜಿತವಲ್ಲದ ಸ್ಮಾರ್ಟ್ ಸಿಟಿ ಆಡಳಿತ ಮಂಡಳಿಯಿಂದ ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಾಳಾಗಿವೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪಿಸಿದರು.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ನಗರಕ್ಕೆ ಏನು ಅಗತ್ಯ ಇದೆ ಎಂದು ಸ್ಮಾರ್ಟ್ ಸಿಟಿ ಆಡಳಿತ ಮಂಡಳಿಗೆ ಗೊತ್ತಿಲ್ಲ. ದೂರದೃಷ್ಟಿ ಇಲ್ಲದೆ ಕಾಮಗಾರಿ ಕೈಗೊಂಡಿರುವುದರಿಂದ ಸಮರ್ಪಕವಾಗಿ ಕೆಲಸಗಳು ನಡೆದಿಲ್ಲ ಎಂದು ಒಪ್ಪಿಕೊಂಡರು.

ನಾಗರಿಕ ಸಂಘಟನೆಗಳು ಆರೋಪಿಸುತ್ತಿರುವಂತೆ ಇದು ದೂಳುಸಿಟಿಯೂ ಹೌದು. ಕಾಮಗಾರಿಗಳ ನಿರ್ವಹಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ. ನೀವು ಆರೋಪಿಸುತ್ತಿರುವುದರಲ್ಲಿ ಸತ್ಯಾಂಶವಿದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳ ಸಂಬಂಧ ಇದುವರೆಗೆ 10-12 ಸಭೆಗಳನ್ನು ಮಾಡಿದ್ದೇವೆ. ಕಾಮಗಾರಿಗಳಲ್ಲಿ ಲೂಟಿ ಮಾಡಲು ಅವಕಾಶ ನೀಡಿಲ್ಲ. ಲೂಟಿ ಮಾಡುವುದನ್ನು ಆದಷ್ಟು ತಡೆದಿದ್ದೇವೆ. ವಿಶೇಷ ಅನುದಾನ 20 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ಅದರಲ್ಲಿ ಪ್ರಮುಖ ರಸ್ತೆ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಒಂದೇ ಕಡೆ ಕಾಮಗಾರಿಗಳು ನಡೆದಿವೆ ಎಂಬ ಆರೋಪವನ್ನು ನಿರಾಕರಿಸಿದ ಜ್ಯೋತಿ ಗಣೇಶ್ ಮಹಾಲಕ್ಷ್ಮಿ ಲೇಔಟ್, ದಾನಪ್ಯಾಲೇಸ್, ಬಟವಾಡಿ, ಬಡ್ಡಿಹಳ್ಳಿ ರಸ್ತೆ ಹೀಗೆ ರಸ್ತೆ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಎಲ್ಲಾ ಭಾಗದಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಜಾತಿ ವ್ಯವಸ್ಥೆ ಒಂದು ರೋಗ

ತುಮಕೂರು,: ಸಮಾನತೆ ಸ್ವಾತಂತ್ರ, ಸಹೋದರತೆ ಸಂವಿಧಾನದ ಮೂಲ ಅಶಯ : ಡಾ. ನಾಗಭೂ಼ಷಣ್ ಬಗ್ಗನಡು ಸಹಾಯಕ ಪ್ರಾಧ್ಯಾಪಕರು ತುಮಕೂರು
ಸಮಾನತೆ ಸ್ವಾತಂತ್ರ, ಸಹೋದರತೆ ಸಂವಿಧಾನದ ಮೂಲ ಅಶಯ ವಾಗಿದೆ ಎಂದು ಡಾ. ನಾಗಭೂಷಣ ಬಗ್ಗನಡು ತಿಳಿಸಿದರು.

ಅವರು ತಿಪಟೂರಿನ ಕಂಚಾಘಟ್ಟದಲ್ಲಿ ನಡೆದ ಅಂಬೇಡ್ಕರ್ ರವರ ಮಹಾಪರಿ ನಿರ್ವಾಣ ದಿನದಂದು ಡಾ.ಬಿ ಆರ್ ಅಂಬೇಡ್ಕರ್ ಧಮ್ಮ ಪ್ರತಿಷ್ಠಾನ(ರಿ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.

ದೇಶದ ಜನರಿಗೆ ಸ್ವಾತಂತ್ರ್ಯ ಕೊಡಿ ದೇಶ ಎಂದರೆ ಭೂಪಟವಲ್ಲ , ದೇಶ ಎಂದರೆ ಗಡಿಯಲ್ಲ ,ದೇಶವೆಂದರೆ ಇಲ್ಲಿನ ಜನರು ಎಂದವರು ಅಂಬೇಡ್ಕರ್ . ದೇಶ ಪ್ರೇಮ ದೇಶ ಭಕ್ತಿ ಬೇರೆ ಇಂದು ಅಂಬೇಡ್ಕರ್ ರವರ ಅಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದೇವೆ ಎಂದರು.

ಇಂದಿಗೂ ಜಾತಿ ವ್ಯವಸ್ತೆ ಭಾರತದೊಳಗೆ ಇದೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ ಇದು ಒಂದು ರೋಗ ಎಂದರು.ನಾವು ಈ ಸಂಧರ್ಭದಲ್ಲಿ ಅವಲೋಕನ ಮಾಡಿ ಕೊಳ್ಳಬೇಕಿದೆ ವ್ಯೆಕ್ತಿ ಚಿತ್ರದ ಅಚರಣೆ ಬಾವಚಿತ್ರಕ್ಕೆ ನಾವು ಜೋತು ಬೀಳ ಬೇಕಾಗಿಲ್ಲಾ ನಾವು ಬಾಬಾ ಸಾಹೇಬರನ್ನು ನಮ್ಮ ಅಂತರಾಳದಲ್ಲಿ ಇಳಿಸಿಕೊಂಡಾಗ ಮಾತ್ರ ಅವರಿಗೆ ಸಲ್ಲಿಸುವ ಗೌರವ ಎಂದರು.

ನಿವೃತ್ತ ಪೋಲೀಸ್ ಆಧಿಕಾರಿ ಲೋಕೇಶ್ವರ್ ರವರು ಮಾತನಾಡಿ ಅಂಬೇಡ್ಕರ್ ರವರು ಶಿಕ್ಷಣ, ಸಂಘಟನೆ , ಸಂಘರ್ಷ ಎಂಬ ಮಾತನ್ನು ಹೇಳಿದ್ದರು ಸಿಂದೂ ನಾಗರಿಕತೆ ಇಲ್ಲದಿದ್ದರೆ ಜಾತಿ ವ್ಯೆವಸ್ತೆ ಇರುತ್ತಿರಲಿಲ್ಲ ಇಂದು ಪುರುಷ ಪ್ರದಾನ ಕುಟುಂಬವನ್ನಾಗಿ ಮಾಡಿದ್ದು ಹೆಣ್ಣನ್ನು ದೇವರನ್ನಾಗಿ ಮಾಡಲಾಗಿದೆ ಎಂದ ಅವರು ನಾನು ಬಾಲ್ಯದಿಂದಲೆ ಅಂಬೇಡ್ಕರ್ ರವರ ಪ್ರಭಾವಕ್ಕೆ ಒಳಗಾಗಿದ್ದೆ ಎಂದರು,

ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷರಾದ ಸಿ ಬಿ ಶಶಿಧರ್ ಮಾತನಾಡಿ ಯಾರಿಗೆ ಇತಿಹಾಸ ಗೊತ್ತಿಲ್ಲವೊ ಅವರು ಇತಿಹಾಸ ನಿರ್ಮಿಸಲು ಸಾದ್ಯವಿಲ್ಲ ಹೆಚ್ಚು ಅಂಬೇಡ್ಕರ್ ರವರ ಬಗ್ಗೆ ಅದ್ಯಯನ ಮಾಡುವುದರಿಂದ ಇತಿಹಾಸ ತಿಳಿಯಲು ಕಟ್ಟಲು ಸಾದ್ಯ ಎಂದರು..

ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ, ಬಜಗೂರು ಮಂಜುನಾಥ್,ನಗರಸಭಾ ಸದಸ್ಯರಾದ ಶ್ರೀಮತಿ ವಿನುತ ತಿಲಕ್ ,ಭೂಮಿ ಸಾಂಸ್ಕ್ರೃತಿಕ ವೇದಿಕೆಯ ಸತ್ತೀಶ್, ರೈತ ಸಂಘದ ಮನೋಹರ್ ಪಟೇಲ್, ಮುಸ್ಲಿಂ ಜಮಾಯತ್ ನ ಶಫೀ ಉಲ್ಲಾ ಶರೀಫ್ , ಸೈಯದ್ ಮಹಮೂದ್, ಅಂಬೇಡ್ಕರ್ ಸೇನೆಯ ಅನಂದ್ ಸೇರಿದಂತೆ ಪ್ರಗತಿಪರ ಸಂಘಟನೆಗಳು ಬಾಗವಹಿಸಿದ್ದವು.

ಸೌಹಾರ್ದ ತಿಪಟೂರು ಸಂಘಟನೆಯ ಅಲ್ಲಾಬಕಾಶ್ ಎ ಕಾರ್ಯಕ್ರಮ ನಿರೂಪಿಸಿ ಮೋಹನ್ ಸಾಗಿ ಸ್ವಾಗತಿಸಿದರು. ವಸಂತ್ ವಂದಿಸಿದರು ಈ ಕಾರ್ಯಕ್ರಮವನ್ನು ಡಾ. ಬಿ ಅರ್ ಅಂಬೇಡ್ಕರ್ ಧಮ್ಮ ಪ್ರತಿಷ್ಠಾನ ಆಯೋಜಿಸಿತ್ತು.

ಕಾರ್ಡಿಯಲ್ ಶಾಲೆಯಲ್ಲಿ  ಮಹಾಭಾರತ ಪಕ್ಷಿ ನೋಟ

0

ಮಧುಗಿರಿ : ಮಹಾಭಾರತ ಹಾಗೂ ರಾಮಾಯಣ ಗ್ರಂಥಗಳನ್ನು ಪ್ರತಿಯೊಂದು ಮನೆಯಲ್ಲಿ ಇಡಬೇಕು ಹಾಗೂ ಗ್ರಂಥಗಳನ್ನು ಓದುವ ಮೂಲಕ ಒಳ್ಳೆಯ ವಿಚಾರಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಬಿಇಒ ರಂಗಪ್ಪ ತಿಳಿಸಿದರು.

ಪಟ್ಟಣದ ಕಾರ್ಡಿಯಲ್ ಶಾಲೆಯಲ್ಲಿ ಮಹಾಭಾರತ ಪಕ್ಷಿ ನೋಟ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾಭಾರತದ ಶ್ರೇಷ್ಠ ಗ್ರಂಥವನ್ನು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ. ಸಂಸ್ಕೃತಿ ಹಾಳಾಗುವ ಸಂದರ್ಭದಲ್ಲಿ ಉಳಿಸುವ ಪ್ರಯತ್ನವನ್ನು ಕಾರ್ಡಿಯಲ್ ಶಾಲೆ ಮಾಡಿರುವುದು ಶ್ಲಾಘನೀಯ ಎಂದರು.

ಕಾರ್ಡಿಯಲ್ ಶಾಲೆಯ 650 ಕ್ಕೂ ಹೆಚ್ಚು ಮಕ್ಕಳು ಮಹಾಭಾರತದ ದ್ರೋಣ ಹತ್ಯೆ , ಕರ್ಣ ಹತ್ಯೆ ,ವೈಶಂಪಾಯನ ಸರೋವರ, ಕುರುಕ್ಷೇತ್ರ ಯುದ್ದ ,ಗದಾಯುದ್ಧ, ಧರ್ಮರಾಯರ ಪಟ್ಟಾಭಿಷೇಕ,ಕರ್ಣನ ಜನನ , ಪಾಂಡವರ ಜನನ, ಗುರುಕುಲ ಶಿಕ್ಷಣ , ಇಂದ್ರ ಪ್ರಸ್ಥ ಹಾಗೂ ಹಸ್ತಿ ನಾಪುರದ ಅರಮನೆ ವೈಭವ,ಪುರಜನ, ಹಿಡಿಂಬ ವನ, ಏಕಚಕ್ರ ನಗರದ ಬಕಾಸುರನ ವಧೆ , ದ್ರೌಪದಿ ಸ್ವಯಂ ವರ, ರಾಜಸೂಯ ಯಾಗ, ದ್ರೌಪದಿ ವಸ್ತ್ರಾಪ ಹರಣ, ಸೌಗಂಧಿಕಾ ಪುಷ್ಪ, ಪಾಂಡವರ ವನವಾಸ, ಪಾಂಡವರ ಅಜ್ಞಾತವಾಸ , ಶ್ರೀ ಕೃಷ್ಣ ಸಂಧಾನ, ಕುಂತಿ ಸಂಧಾನ, ಶರಶಯ್ಯನದ ಭೀಷ್ಮ , ಗೀತಾ ಬೋಧನೆ ಸೇರಿದಂತೆ ಅನೇಕ ಘಟನಾವಳಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.

ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮಹಾಭಾರತ ಪಕ್ಷಿ ನೋಟವನ್ನು ಕುತೂಹಲದಿಂದ ವೀಕ್ಷಿಸಿದರು.

ಟ್ರಸ್ಟ್ ಅಧ್ಯಕ್ಷ ರಮೇಶ್ , ಕಾರ್ಯದರ್ಶಿ ಎಂ.ಕೆ.ನಂಜುಂಡಯ್ಯ, ಖಜಾಂಚಿ ಡಿ.ಎನ್.ನಾಗರಾಜು, ಎಜುಶೈನ್ ಸಂಸ್ಥೆ ಸಿಇಒ ಕಿರಣ್ ಕುಮಾರ್ ಸಿದ್ದೆ , ಮುಖ್ಯಶಿಕ್ಷಕಿ ಮಂಜುಳಾ ನಾಗಭೂಷಣ್, ಶಿಕ್ಷಕರಾದ ಚಂದ್ರಕಲಾ, ದಾಕ್ಷಾಯಿಣಿ, ಜೈರಾಮ್ , ರಾಜೇಶ್ ,ಕೃಪಾ, ಅನುಸೂಯ, ವೀಣಾಕುಮಾರಿ, ಆಶಾ, ರಂಜಿತಾ, ಅರೆಲಿಂಗಪ್ಪ, ಎಚ್.ಎಂ.ಕೃಷ್ಣಮೂರ್ತಿ, ನಟರಾಜು ಇದ್ದರು.

ಹುಟ್ಟಿದ‌ ದಿನ ಈ ಕಷ್ಟ ಯಾರಿಗೂ‌ ಬಾರದಿರಲಿ…

0

ಚಿದು


ಆ ದಿನ 6 ಡಿಸೆಂಬರ್ 2017 ಬೆಳಿಗಿನ ಜಾವವೇ ನನ್ನ ಜಂಗಮವಾಣಿ ರಿಂಗಣಿಸಿತ್ತು. ಮೆತ್ತನೆ ಹಾಸಿಗೆಯಲ್ಲಿ ಚಳಿಗೆ ಹೊದ್ದಿ ಮಲಗಿದ್ದ ನನ್ನ‌ನಿದ್ದೆಗೆ ಸ್ನೇಹಿತರ ದಂಡು ಶುಭಾಯಗಳು ಭಂಗ ತರುವಲ್ಲಿ‌ ಯಶಸ್ಸು ಕಂಡಿದ್ದವು.

ಒಬ್ಬೊಬ್ಬರದ್ದು ಒಂದೊಂದು ರೀತಿಯ ಪ್ರೀತಿಯ ಹಾರೈಕೆ ನನ್ನನ್ನು ಮೂಖ‌ ವಿಸ್ಮಿತನಾಗಿಸಿತ್ತು. “ಅಣ್ಣಾ ಸಂಜೆ ನಿನ್ನ ಹುಟ್ಟುಹಬ್ಬಕ್ಕಾಗಿ ಸ್ನೇಹಿತರಿಗೆಲ್ಲ ಸಸ್ಯ ಹಾಗೂ ಮಾಸಹಾರಿ ಭರ್ಜರಿ ಊಟದ ವ್ಯವಸ್ಥೆಯಾಗಿದೆ. ನೀವೆಲ್ಲೂ ಹೋಗುವಾಗಿಲ್ಲ. ಸರಿಯಾದ ಸಮಯಕ್ಕೆ ತಯಾರಾಗಿ ಸ್ಥಳಕ್ಕೆ ಬನ್ನಿ” ಎಂಬ ಆತ್ಮೀಯ ಗೆಳೆಯರ ಮೆದು ಪ್ರೀತಿಯ ಆಹ್ವಾನದ ಆದೇಶ ನನಗೆ ಇನ್ನಷ್ಟು ಮೂಖವಾಗಿಸಿತ್ತು.

ಅದಾವ ಜನ್ಮದ ಪುಣ್ಯವೋ ಇಂಥ ಸ್ನೇಹಿತರು ನನ್ನೊಂದಿಗಿದ್ದಾರಲ್ಲ ಎಂದು ಮನಸು ಬೀಗುತ್ತಿತ್ತು. ಅದಾಗಲೇ ಮನೆಯೊಳಗಿನ ಗಡಿಯಾರದ ಮುಳ್ಳು ಬೆಳಗಿನ ಎಂಟು ಗಂಟೆ ದಾಟಿತ್ತು.

ಅಷ್ಟೊತ್ತಿಗಾಗಲೇ ನೂರಾರು ಸ್ನೇಹಿತರು, ಆತ್ಮೀಯರು, ನನ್ನದೇ ಆದ ವಿದ್ಯಾರ್ಥಿ ಗುಂಪು ನನ್ನ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಎದ್ದಾಗಿನಿಂದ ಬರೀ ಜಂಗಮವಾಣಿ ರಿಂಗಣಿಸಿ‌ ಕರೆಗಳ ಸಂದೇಶ, ಶುಭಾಶಯ ಆಲಿಸಿದ್ದ ನನ್ನ ಮನಸ್ಸು ಹಕ್ಕಿಯಂತೆ ಹಾರಿ ಕುಣಿಯತ್ತಾ ಬೀಗುತ್ತಿತ್ತು.

ಆ ಹೊತ್ತಿಗೆ ನಮ್ಮಣ್ಣನ ಕರೆಯ ರಿಂಗಣದ ಸದ್ದು ಸ್ನಾನಕ್ಕೆಂದು ಹೋದ ನನ್ನ ಕಿವಿ ತಾಕಿತ್ತು. ಅಡುಗೆ ಮನೆಯಲ್ಲಿ‌ ನನ್ನ ಹುಟ್ಟುಹಬ್ಬದ ಸಲುವಾಗಿ ಸಿಹಿ ಅಡುಗೆ ತಯಾರಿಯಾರಲ್ಲಿದ್ದ ಮಡದಿ “ರೀ ಯಾವುದೋ ಪೋನ್ ಕಾಲ್ ಬಂತು” ಎಂದು ಜಂಗಮವಾಣಿ‌ಸದ್ದಿಗೆ ಧನಿಗೂಡಿಸಿದ್ದಳು.

ಜಳಕಕೆಂದು ಸ್ನಾನಗೃಹಕ್ಕೆ ಹೋದವನು ಅರೆಬರೆಯಾಗಿಯೇ ಮನೆಯ ಪಡಸಾಲೆಗೆ ಬಂದು “ಅರೆ ಅಣ್ಣನ ಕರೆ, ಓ‌ ಅಣ್ಣಂಗೂ ಗೊತ್ತಾಯ್ತಾ ನನ್ನ ಹುಟ್ಟಿದಬ್ಬ ಇವತ್ತು ಅಂತಾ” ಎಂತಲೇ ಖುಷಿಯಿಂದ ಜಂಗಮವಾಣಿ ಕರೆ ತೆಗೆದುಕೊಂಡೆ. “ಹಲೋ.. ಎಲ್ಲಿದ್ದೀಯಾ.. ಎಲ್ರೂ ಊರಿಗೆ ಬಂದುಬಿಡ್ರಿ” ಎಂದು ಅಣ್ಣ ಆ ಕಡೆಯಿಂದ ಅಂದಾಗ “ಅರೆ ನನ್ನ ಹುಟ್ದಬ್ಬಕ್ಕೆ ಅಣ್ಣ ಊರಲ್ಲೇ ಏನಾದ್ರು ಅಡುಗೆ ಮಾಡ್ಸೋಕೆ ಕರಿತಿದಾರೆ” ಅಂತ ಕ್ಷಣಾರ್ಧದಲ್ಲಿ ನನ್ನ ಮನಸ್ಸು ಆಲೋಚಿಸ ತೊಡಗಿತ್ತು. ಆದರೂ ಹೊತ್ತಟ್ಟಿಗೆ ಬಂದ ಖುಷಿಯಲ್ಲಿ ‘ಯಾಕಣ್ಣ..?’ ಅಂತ ಪ್ರಶ್ನಿಸಿದೆ. ಅಣ್ಣ ಅರೆ ಕ್ಷಣ ನಿಶಬ್ದರಾಗಿ “ಅಮ್ಮಾ ಹೋದರು.. ಎಲ್ರೂ ಊರಿಗೆ ಬನ್ನಿ” ಎಂದಾಗ ಒಮ್ಮಲೆ‌ ಮುಗಿಲು ಮೇಲೆ ಕುಸಿದು, ಬರಸಿಡುಲು ಒಮ್ಮೆಲೆ ಬಡಿದಂತಾಯಿತು. ಹುಟ್ಟುಹಬ್ಬದ ಅಮಲಿನಲ್ಲಿ‌ ತೇಲುತ್ತಿದ್ದವನ ನಿಶೆಯನ್ನು ದುಃಖ ಆವರಿಸಿತ್ತು. ಅಮ್ಮ ನನ್ನ ಹುಟ್ಟುಹಬ್ಬದ ದಿನವೇ ಕೊನೆಯ ಉಸಿರು ಎಳೆದಿದ್ದರು. ಅಂದೇ ಮಣ್ಣಲ್ಲಿ ಮಣ್ಣಾಗಿ ಹೋದರು.

ಬಹುಶಃ ನಾನು ಇಂತದೊಂದು ಪ್ರಸಂಗ ನನ್ನ‌ ನಿಜ ಜೀವನದಲ್ಲಿ ಬರುತ್ತದೆಂದು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಅನಿರೀಕ್ಷಿತವಾದ ಆ ಸಂದರ್ಭ ನನ್ನ ಮನಸಿನಲ್ಲಿ ಅಗಾಧವಾದ ನೆನಪಿನ ನೋವುಗಳನ್ನು ಉಳಿಸಿಬಿಟ್ಟಿತು.

ನನ್ನ ಕೊನೆ ಉಸಿರು ಇರುವ ತನಕ ಹೆತ್ತವ್ವಳನ ಮಮತೆ, ವಾತ್ಸಲ್ಯ ನೆನಪಿನಂಗಳದಲ್ಲಿ ನೆನಪಾಗಿಯೇ ಉಳಿದುಹೋದವು. ಎಸ್ಸೆಸ್ಸೆಲ್ಸಿ ಯಲ್ಲಿ ನಾಲ್ಕು ವರ್ಷ ನಪಾಸಾಗಿ ವಿದ್ಯಾಭ್ಯಾಸ ಮೊಟುಕುಗೊಳಿಸಿ ಹುಟ್ಟಿದ ದಿನ, ದಿನಾಂಕದ ಅರಿವೇ ಇರದ‌ ನನಗೆ ಈಚೆಗಷ್ಟೆ ಸ್ನೇಹಿತರ ಒತ್ತಾಸೆಯಿಂದಾಗಿ ಹುಟ್ಟು ಆಚರಣೆ ಅರಿವಾಗಿತ್ತು. ಅದೇ ದಿನ ಅಮ್ಮನ ಅಗಲಿಕೆಯ‌ ನೋವು ಇವೆಲ್ಲಾ ಮಜಲುಗಳನ್ನು ಮೀರಿಸುವಷ್ಟು ಮೈಮನ ಹೊಕ್ಕಿದೆ.

ಈಗ ಪ್ರತಿ ವರ್ಷ ಡಿಸೆಂಬರ್ 6 ದಿನ ಅದ್ಯಾಕಾದರೂ ಬರುತ್ತೊ ಎನ್ನುವಷ್ಟು ಮನಸ್ಸು ಮೊಂಡಾಗಿಹೋಯ್ತು. ನನ್ನ ಹುಟ್ಟಿದಬ್ಬ ಇವತ್ತು ಅಂತ ಬೀಗಲೇ..? ಇಲ್ಲಾ ಅಮ್ಮನ ಕಳೆದುಕೊಂಡು ಅನಾಥನಾದಲ್ಲ ಅಂತ ಮರುಗಲೇ..? ಛೇ.. ಹುಟ್ಟಿದ ದಿನದಂದೆ ಅಮ್ಮನ ಕಳೆದುಕೊಂಡ ಇಂತ ಸ್ಥಿತಿ ಅದಾವ ಮಗನಿಗೂ ಬಾರದಿರಲಿ.

ಪ್ರತಿ ದಿನ ಕಾಡುವ ಅಮ್ಮನ ಅಗಲಿಕೆ ನೋವು‌ ನನ್ನ ಹಟ್ಟಿದ ದಿನ‌ ಎಂದಾಗ ಇನ್ನಷ್ಟು ಇಮ್ಮಡಿಸುತ್ತದೆ. ಇದಕ್ಕೆ ಅಳಲೋ… ಇಲ್ಲಾ ನಗಲೋ… ಉಳಿದವರಿಗಿಂತ ಕಳೆದು ಹೋದವರ ನೆನಪು ಅನುದಿನ ಕಾಡುತ್ತೆ. ಮನಸು ಭಾರ ಅನಿಸುತ್ತೆ. ಕಣ್ಣಾಲಿಗಳು ನೀರದುಂಬಿ ಮಾತು ಮೌನಕ್ಕೆ ಶರಣಾಗಿ, ಮನಸು ದುಃಖದಡವಿಯಲ್ಲಿ ಸಿಲುಕುತ್ತೆ.

ಐಡಿ‌‌ ಹಳ್ಳಿಗೆ‌ ಬರಲಿದೆ ಡಿಸಿಸಿ‌ ಬ್ಯಾಂಕ್ ಶಾಖೆ

ಮಧುಗಿರಿ ಪಟ್ಟಣದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾಜಿ ಜಿ.ಪಂ.ಉಪಾದ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಮಾತನಾಡಿದರು.

Publicstory.in


ಮಧುಗಿರಿ: ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 8 ರಂದು ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್‍ನ ನೂತನ ಶಾಖೆಯನ್ನು ಲೋಕಸಭಾ ಸದಸ್ಯ ಬಸವರಾಜು ಉದ್ಘಾಟಿಸಲಿದ್ದಾರೆ ಎಂದು ಮಾಜಿ ಜಿ.ಪಂ.ಉಪಾದ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ತಿಳಿಸಿದರು.

ಪಟ್ಟಣದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ. ಲಾಕರ್ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಜೆ.ರಾಜಣ್ಣ, ಗಣಕೀಕರಣ ಉದ್ಘಾಟನೆಯನ್ನು ತುಮಕೂರು ಬ್ಯಾಂಕ್‍ನ ನಿರ್ದೇಶಕ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಆರ್.ರಾಜೇಂದ್ರ, ವ್ಯವಸ್ಥಾಪಕರ ಕೊಠಡಿ ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪನಿಬಂಧಕ ಆರ್.ಜೆ.ಕಾಂತರಾಜು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು, ಮುಖಂಡರುಗಳು ಹಾಗೂ ಸಾರ್ವಜನಿಕರು ಕೆ ಎನ್ ಆರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಜಿ.ಜೆ.ರಾಜಣ್ಣ, ತಾ.ಪಂ.ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ತುಮುಲ್ ಮಾಜಿ ಅಧ್ಯಕ್ಷ ನಾಗೇಶ್‍ಬಾಬು,ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಮಕೃಷ್ಣಪ್ಪ, ಮುಖಂಡರುಗಳಾದ ಶನಿವಾರಂ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಮಾಜಿ ಗ್ರಾಪಂ ಅಧ್ಯಕ್ಷ ಸದಾಶಿವರೆಡ್ಡಿ, ಕೇಶವ ರೆಡ್ಡಿ, ಪಿ.ಸಿ.ಕೃಷ್ಣರೆಡ್ಡಿ, ಸೀತಾರಾಂ, ಗರಣಿ ರಾಮಾಂಜಿ, ಡಿ.ಟಿ.ಸಂಜೀವ್ ಮೂರ್ತಿ ಹಾಜರಿದ್ದರು.