ಚಿಗುರು ಮೀಸೆಯ ಯುವಕನಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ [ವ್ಯಕ್ತಿಪರಿಚಯ]
ತಲೆ ತುಂಬ ಬಿಳಿಕೂದಲು, ಆಸರೆಗೊಬ್ಬರನ್ನು ಕರೆತಂದು ಪ್ರಶಸ್ತಿ ಪಡೆಯುವವರ ನಡುವೆ ಕಡಿಮೆ ವಯಸ್ಸಿನಲ್ಲಿಯೆ ಸಮಾಜಸೇವೆಯಲ್ಲಿ ತಲ್ಲೀನನಾಗಿರುವ ಚಿಗುರು ಮೀಸೆಯ ಯುವಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತುಮಕೂರು ಜಿಲ್ಲೆ ಪಾವಗಡದ ಗಿರಿ ಫ್ಯಾಷನ್ಸ್ ಗಿರೀಶ್ ಎಂದೇ ಜನಪ್ರಿಯತೆ ಗಳಿಸಿರುವ ಇವರು ನಮ್ಮ ಹಕ್ಕು ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ, ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ, ರೋಟರಿ ಸಂಸ್ಥೆಯ ಯುವ ನಿರ್ದೇಶಕರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ, ಪರಿಸರ ಸಂರಕ್ಷಣೆ, ಸ್ವಚ್ಚತೆ, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಪ್ರವಾಹ ಪೀಡಿತರು ಹಾಗೂ ರೋಗಿಗಳಿಗೆ ಸಹಾಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.
ತಾನು ದುಡಿದ ಹಣದಲ್ಲಿ ಶೇಕಡಾವಾರು ಭಾಗವನ್ನು ಸಮಾಜ ಕಾರ್ಯಕ್ಕಾಗಿ ಮೀಸಲಿಟ್ಟಿರುವುದು ಇವರ ವಿಶೇಷ.
ಸೇವೆಯ ಹೆಜ್ಜೆ ಗುರುತುಗಳು
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಸರ್ಕಾರಿ ಕನ್ನಡ ಶಾಲೆಗಳ 500 ಕ್ಕೂ ಹೆಚ್ಚಿನ ಬಡ ಮಕ್ಕಳಿಗೆ ನಮ್ಮ ಹಕ್ಕು ಸಂಘಟನೆಯ ವತಿಯಿಂದ ಶಾಲಾ ಬ್ಯಾಗ್ ಗಳನ್ನು ವಿತರಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅಳಿಲು ಸೇವೆ ಸಲ್ಲಿಸಿದ್ದಾರೆ. ರೊಪ್ಪ ಸರ್ಕಾರಿ ಶಾಲೆಯ ಮಕ್ಕಳಿಗೆ ಬಟ್ಟೆ, ಲೇಖನ ಸಾಮಾಗ್ರಿಗಳನ್ನು ವಿತರಿಸುವುದರೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಇದು ಬಡ ಮಕ್ಕಳ ಬಗ್ಗೆ ಇವರಿಗಿರುವ ಕಾಳಜಿಯನ್ನು ಪ್ರಚುರಪಡಿಸುತ್ತದೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುಂಗಾಭದ್ರಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ತಿಂಗಳುಗಳ ಕಾಲ ನಡೆದ ನಿರಂತರ ಪ್ರತಿಭಟನೆಯಲ್ಲಿ ಭಾಗವಹಿಸಿ, ಪಾವಗಡ ಮಿನಿ ಫನ್ ಮ್ಯಾರಥಾನ್ ಕ್ರಿಡಾಕೂಟ ಆಯೋಜನೆಗೆ ಶ್ರಮಿಸುವುದರೊಂದಿಗೆ ತಾಲ್ಲೂಕಿನ ಜ್ವಲಂತ ಸಮಸ್ಯೆ ಪರಿಹರಿಸಲು ಹೆಜ್ಜೆ ಇಟ್ಟಿದ್ದಾರೆ.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿನಿಯರಿಗೆ ಮಾನವ ಹಕ್ಕುಗಳ ಬಗ್ಗೆ ಮಾಹಿತಿ ಕೊಡಿಸಿದ್ದಾರೆ.
ಗ್ರಾಮೀಣ ಭಾಗದ ವೃದ್ಧರಿಗೆ ಹೊದಿಕೆ ವಿತರಣೆ, ಕೊಡಗು, ಉತ್ತರ ಕರ್ನಾಟಕ ಭಾಗದ ನೆರೆ ಪೀಡಿತರಿಗೆ ಹೊದಿಕೆ, ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅರಸೀಕೆರೆ, ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರವನ್ನು ಆಯೋಜಿಸಿ, ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಹಸ್ತ ಚಾಚಿ ಚಿಕಿತ್ಸೆ ಕೊಡಿಸಿದ್ದಾರೆ. ತುರ್ತು ಇದ್ದ ಗರ್ಭಿಣಿಯರು, ರೋಗಿಗಳಿಗೆ ಉಚಿತವಾಗಿ ರಕ್ತ ಕೊಡಿಸಿಕೊಡುವ ಮೂಲಕ ಅಪದ್ಭಾಂದವನೆನೆಸಿಕೊಂಡಿದ್ದಾರೆ.
ಶನೈಶ್ಚರ ಜಾತ್ರೆ, ಶ್ರಾವಣ ಮಾಸದಲ್ಲಿ ಪಟ್ಟಣಕ್ಕೆ ಆಗಮಿಸುವ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿಗೆ ಲಘು ಉಪಹಾರ, ಪಾನಕ, ಮಜ್ಜಿಗೆ, ನೀರು ವಿತರಣೆ ಮಾಡುವುದರ ಜೊತೆಗೆ ರಾಮ ನವಮಿ, ಹಬ್ಬ ಹರಿದಿನಗಳಂದು ಪಾನಕ, ಹೆಸರುಬೇಳೆ ವಿತರಣೆಯಂತಹ ಕೆಲಸಗಳನ್ನು ನಿರಂತರವಾಗಿ ನಡೆಸಿಕೊಂಡು ಬರುವ ಇವರು ಧಾರ್ಮಿಕ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದ್ದಾರೆ.
ವಿಶ್ವ ಪರಿಸರ ದಿನಾಚರಣೆ, ಭೂ ದಿನಾಚರಣೆ ಇತ್ಯಾದಿ ದಿನಗಳಂದು ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಸಾಹಸ್ರಾರು ಸಸಿಗೆಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ರಸ್ತೆ ಬದಿ, ಅರಣ್ಯ ಪ್ರದೇಶದಲ್ಲಿ ಮರ ಕಡಿಯುವ ಕಿಡಿಗೇಡಿಗಳ ವಿರುದ್ಧ ಹೋರಾಟ ನಡೆಸಿ ಮರ ಕಡಿದ ಸ್ಥದಲ್ಲಿ ಸಸಿ ನೆಡಿಸುವ ಹಾಗೂ ಪರಿಸರಕ್ಕೆ ದಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಯಶಸ್ಸು ಸಾಧಿಸಿದ ಸಾಕಷ್ಟು ನಿದರ್ಶನಗಳಿವೆ.
ರಾಜ್ಯೋತ್ಸವ ಪ್ರಶಸ್ತಿ ಜವಬ್ಧಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಸಮಾಜ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಾಗಿ ಗಿರಿ ಫ್ಯಾಷನ್ಸ್ ಗಿರೀಶ್ ಪಬ್ಲಿಕ್ ಸ್ಟೋರಿ ಜೊತೆ ಸಂತಸ ಹಂಚಿಕೊಂಡರು.