Sunday, March 15, 2026
Google search engine
Home Blog Page 86

ರಾಜ್ಯ ಸರ್ಕಾರ ವಿತರಿಸಿದ ಬಾವುಟಗಳು ಎಷ್ಟು ಗೊತ್ತೇ?

Publicstory/prajayoga

ಬೆಂಗಳೂರು: ಆ.1ರಿಂದ 15ರ ವೆರೆಗೆ ಪ್ರತೀ ಮನೆಗಳಲ್ಲಿ ರಷ್ಟ್ರ ಧ್ವಜ ಹಾರಿಸುವ ಉದ್ದೇಶದಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ರಾಜ್ಯ ಸರ್ಕಾರ  1.08 ಕೋಟಿ ಧ್ವಜವನ್ನು ವಿತರಿಸಿದೆ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಅವರು, ಹಲವು ಸಂಘ ಸಂಸ್ಥೆಗಳು ಸೇರಿದಂತೆ, ಪ್ರತೀ ಗ್ರಾಮ ಪಂಚಾಯ್ತಿಗೆ 400-500 ಬಾವುಟಗಳನ್ನು ನೀಡಲಾಗಿದೆ. ಇಲ್ಲೀವರೆಗೆ ಸುಮಾರು 1.20ಕೋಟಿ ಅಧಿಕ ಬಾವುಟ‌ಗಳನ್ನು ವಿತರಿಸಲಾಗಿದೆ. ಎರಡು ಮೂರು ದಿನಗಳಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ತಯಾರಿ ನಡೆದಿದೆ. ಯುವಜನರು ಧ್ವಜಗಳನ್ನು ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.

ಆ.15ನ್ನು ಎಲ್ಲರೂ ಸಂಭ್ರಮದಿಂದ ಆಚರಿಸಬೇಕು ಹಾಗೂ ರಾಷ್ಟ್ರ ವನ್ನು ಮತ್ತೊಷ್ಟು ಶಕ್ತಿಶಾಲಿಯಾಗಿ ಮಾಡಲು ಸಂಕಲ್ಪ ತೊಡಬೇಕಿದೆ. ಸ್ವಾತಂತ್ರ್ಯೋತ್ಸವ ಆಚರಣೆ ಮೂಲಕ ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ಸಾರಬೇಕಿದೆ ಎಂದು ತಿಳಿಸಿದರು.

ತುಮಕೂರು-ಕುಣಿಗಲ್ ರಸ್ತೆ ದಿಢೀರ್ ಕುಸಿತ

Publicstory/prajayoga

ತುಮಕೂರು: ನಗರದ ಸದಾಶಿವ ನಗರದಲ್ಲಿರುವ ಹೇಮಾವತಿ‌ ನಾಲಾವಲಯ ಕಚೇರಿ ಎದುರು ಹಾದು ಹೋಗಿರುವ ತುಮಕೂರು-ಕುಣಿಗಲ್ ಮುಖ್ಯ ರಸ್ತೆಯಲ್ಲಿ ಇದ್ದಕ್ಕಿದ್ದ ಹಾಗೆ ಎಂಟು ಅಡಿ ಆಳದ ಗುಂಡಿ ಬಿದ್ದಿದೆ.

ರಸ್ತೆ ಕುಸಿದಿರುವುದರಿಂದ ಆ ಪ್ರದೇಶದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
ರಸ್ತೆಗಳಲ್ಲಿ ಗುಂಡಿಗಳಿಲ್ಲ ಎಂಬ ಸುಳ್ಳುವರದಿಯನ್ನು ಪಾಲಿಕೆ ಹೈಕೋರ್ಟ್‌ಗೆ ನೀಡಿರುವ ಬೆನ್ನಲ್ಲೇ ತುಮಕೂರು- ಕುಣಿಗಲ್ ಮುಖ್ಯ ರಸ್ತೆ ಹೀಗಾಗಿದೆ.

ಗುಂಡಿಯ ಸುತ್ತಲೂ ಮೂರರಿಂದ ನಾಲ್ಕು ಅಡಿ ಅಂತರದಲ್ಲಿ ಬಿರು ಬಿಟ್ಟಿರುವುದು ಸವಾರರಿಗೆ ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ‌. ಪಾಲಿಕೆ ಅಧಿಕಾರಿಗಳು ಶೀಘ್ರಗತಿಯಲ್ಲಿ ದುರಸ್ತಿ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸರ್ಕಾರ‌ ನೇಕಾರರ ಹೊಟ್ಟೆಯ ಮೇಲೆ ಹೊಡೆದಿದೆ : ಧನಿಯಾಕುಮಾರ್

Publicstory/prajayoga

ತುಮಕೂರು: ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತರುವ ಮೂಲಕ ನೈಲಾನ್ ಮತ್ತು ಪಾಲಿಯಸ್ಟರ್ ವಸ್ತುಗಳಿಂದ ತಯಾರಿಸಿದ ರಾಷ್ಟ್ರ ಧ್ವಜ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ, ನೇಕಾರರ ಹೊಟ್ಟೆಯ ಮೇಲೆ ಒಡೆದಿದೆ ಎಂದು ಜಿಲ್ಲಾ ನೇಕಾರರ ಸಮುದಾಯದ ಕಾರ್ಯದರ್ಶಿ ಧನಿಯಕುಮಾರ್ ತಿಳಿಸಿದರು.

ನಗರದ ಖಾಸಗಿ ಹೊಟೇಲ್ನಲ್ಲಿ ಆಗಸ್ಟ್ 17 ರಂದು ನಡೆಸಲು ಉದ್ದೇಶಿಸಿರುವ 8ನೇ ಅಂತರರಾಷ್ಟ್ರೀಯ ನೇಕಾರರ ದಿವಸ ಕಾರ್ಯಕ್ರಮದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ  ಮಾತನಾಡಿದ ಅವರು, ರಾಷ್ಟ್ರ ಧ್ವಜಕ್ಕೆ ತನ್ನದೇ ಆದ ಘನತೆ, ಗೌರವವಿದೆ. ಹತ್ತಿಯ ಬಟ್ಟೆಯಿಂದ ತಯಾರಿಸಿದ ರಾಷ್ಟ್ರದ್ವಜವನ್ನು ಮಾತ್ರ ಬಳಕೆ ಮಾಡಬೇಕೆಂಬ ನಿಯಮವಿದ್ದ ಕಾರಣ, ರಾಷ್ಟ್ರೀಯ ಹಬ್ಬ ಸಂದರ್ಭದಲ್ಲಿ ನೇಕಾರರಿಗೆ ಧ್ವಜ ನೇಯ್ಗೆ ಮಾಡಲು ಆರ್ಡರ್ಗಳು ಬರುತ್ತಿದ್ದವು. ಇದರಿಂದ ಸಾವಿರಾರು ನೇಕಾರರ ಕುಟುಂಬಗಳು ಜೀವನ ನಡೆಸುತ್ತಿದ್ದರು. ಆದರೆ ಸರ್ಕಾರ ನೈಲಾನ್ ಮತ್ತು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಭಾವುಟಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ನೇಕಾರರ ಕೈಯಲ್ಲಿ ಕೆಲಸವಿಲ್ಲದೆ, ಹಸಿದ ಹೊಟ್ಟೆಯಲ್ಲಿಯೇ ಜೀವನ ನಡೆಸುವಂತಾಗಿದೆ. ಸರ್ಕಾರದ ಈ ನೀತಿ ಖಂಡನೀಯ. ಸರ್ಕಾರ ಕೂಡಲೇ ಧ್ವಜ ಸಂಹಿತೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ದೇವಾಂಗ ಸಮಾಜದ ಅಧ್ಯಕ್ಷರಾದ ರಾಮಕೃಷ್ಣಯ್ಯ ಮಾತನಾಡಿ, ನೇಕಾರ ಸಮುದಾಯದ ಬಟ್ಟೆ ನೇಯ್ದು ಪ್ರಪಂಚದ ಜನರ ಮಾನ ಮುಚ್ಚುವ ಪವಿತ್ರ ವೃತ್ತಿ ಮಾಡುತ್ತಿದೆ.1915ರಲ್ಲಿ ಮಹಾತ್ಮಗಾಂಧಿ ವಿದೇಶಿ ವಸ್ತುಗಳನ್ನು ತ್ಯಜಿಸಿ, ಸ್ವದೇಶಿ ವಸ್ತುಗಳಿಗೆ ಕರೆ ನೀಡಿದ್ದರು.
ಚಳವಳಿಯ 100 ನೇ ವರ್ಷದ ನೆನಪಿಗಾಗಿ ಪ್ರಧಾನಿ ನರೇಂದ್ರಮೋದಿ  ಆಗಸ್ಟ್  07ನ್ನು ನೇಕಾರರ ದಿನವಾಗಿ ಘೋಷಿಸಿದ್ದರು. ಆದರೆ ಕಳೆದ ಎರಡು ವರ್ಷಗಳ ಕಾಲ ಕರೋನದಿಂದ ಕೆಲಸವಿಲ್ಲದೆ ಅರ್ಥಿಕ ಸಂಕಷ್ಟ ಅನುಭವಿಸುತ್ತಿದ್ದ ನೇಕಾರರ ಮೇಲೆ ಧ್ವಜ ಸಂಹಿತೆ ತಿದ್ದುಪಡಿ, ಸಮುದಾಯವು ಮತ್ತಷ್ಟು ಆರ್ಥಿಕವಾಗಿ ಕುಸಿಯುವಂತೆ ಮಾಡಿದೆ ಎಂದರು.

ದೇವಾಂಗ ಸಮುದಾಯದ ಮುಖಂಡರಾದ ರಾಮಕೃಷ್ಣಯ್ಯ ಮಾತನಾಡಿ, ನೆರೆಯ ತಮಿಳುನಾಡು ಸರ್ಕಾರ ನೇಕಾರರಿಗೆ ಉಚಿತವಾಗಿ ವಿದ್ಯುತ್, ಆಶ್ರಯ ಮನೆ, ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ವಿದ್ಯಾಭ್ಯಾಸದಲ್ಲಿ ಮೀಸಲಾತಿ ನೀಡಿದೆ. ಅದೇ ರೀತಿ ರಾಜ್ಯ ಸರ್ಕಾರವು ನೇಕಾರರಿಗೆ 100 ಯೂನಿಟ್ವರೆಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಕಚ್ಚಾವಸ್ತುಗಳ ಸರಬರಾಜಿನ ಜೊತೆಗೆ, ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಬೇಕೆಂಬುದು ಕರ್ನಾಟಕ ನೇಕಾರರ ಸಮುದಾಯದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಆ.17ರ ವಿಶ್ವ ನೇಕಾರರ ದಿನದಂದು ಮಾಡಲಾಗುವುದು ಎಂದು  ತಿಳಿಸಿದರು.

ನೇಕಾರರ ಸಮುದಾಯಗಳ ಒಕ್ಕೂಟದ ಉಪಾಧ್ಕಕ್ಷ ಎಸ್.ವಿ.ವೆಂಕಟೇಶ್ ಮಾತನಾಡಿ, ಆಗಸ್ಟ್ 17 ರಂದು ನಗರದ ಹೊರಪೇಟೆ ಮುಖ್ಯರಸ್ತೆಯಲ್ಲಿರುವ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ವಿಶ್ವ ನೇಕಾರರ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮವನ್ನು ಶಾಸಕ ಜಿ.ಬಿ.ಜೋತಿಗಣೇಶ್ ಉದ್ಘಾಟಿಸುವರು. ಜೆಡಿಎಸ್ ಮುಖಂಡ ಎನ್.ಗೋವಿಂದರಾಜು, ಮಾಜಿ ಶಾಸಕ ಡಾ.ರಫೀಕ್ ಅಹಮದ್, ನೇಕಾರರ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್.ಸೋಮಶೇಖರ್ ಸೇರಿದಂತೆ ಹಲವು ನಾಯಕರುಗಳು ಉಪಸ್ಥಿತರಿರುವರು. ಇದೇ ವೇಳೆ ನೇಕಾರರ ಸಮುದಾಯದ ನಾಲ್ವರು ಹಿರಿಯರನ್ನು ಅಭಿನಂದಿಸಲಾಗುವುದು. ಜಿಲ್ಲೆಯ ಎಲ್ಲಾ ನೇಕಾರ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ವೇಳೆ ನೇಕಾರರ ಸಮುದಾಯದ ಕುರುಹಿನ ಶೆಟ್ಟಿ, ತೋಗಟವೀರ, ಪದ್ಮಶಾಲಿ, ಅನಿಲ್ಕುಮಾರ್, ಎಸ್.ವಿ.ವೆಂಕಟೇಶ್, ಎಸ್.ಎನ್.ರಂಗಸ್ವಾಮಿ, ಯೋಗಾನಂದ, ಕರಿಯಪ್ಪ ಮತ್ತಿತರರು ಸರ್ಕಾರದ ನಡೆಯನ್ನು ಖಂಡಿಸಿದರು.

ಆ.16ರಿಂದ ಎರಡು ದಿನಗಳ ಅಂತರರಾಷ್ಟ್ರೀಯ ಯುವ ಸಮ್ಮೇಳನ : ವೀರೇಶಾನಂದ ಸರಸ್ವತಿ

Publicstory/prajayoga

ತುಮಕೂರು: ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಆಂತರಿಕ ಗುಣಮಟ್ಟದ ಭದ್ರತಾ ಘಟಕವು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಯುಕ್ತಾಶ್ರಯದಲ್ಲಿ ಆ.16 ಮತ್ತು 17 ರಂದು ‘ಆರೋಹ’ ಎಂಬ ಶೀರ್ಷಿಕೆಯಡಿಯಲ್ಲಿ ‘ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಎರಡು ದಿನಗಳ ಅಂತಾರಾಷ್ಟ್ರೀಯ ಯುವ ಸಮ್ಮೇಳನವನ್ನು ಗಂಗಸಂದ್ರ ರಸ್ತೆಯ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ತಿಳಿಸಿದರು.

ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಮಠ ಮತ್ತು ಮಿಷನ್ನ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜೀ ಮಹಾರಾಜ್  ಯುವ ಸಮ್ಮೇಳನವನ್ನು ಉದ್ಘಾಟಿಸುವರು. ಕರ್ನಾಟಕ-ಕೇರಳ ವಿಭಾಗದ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ನಿರ್ದೇಶಕರಾದ ಎಸ್.ಎನ್. ಗಿರೀಶ್, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ, ತುಮಕೂರು ವಿಭಾಗದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ  ಡಬ್ಲ್ಯೂ.ಡಿ. ಅಶೋಕ್ ಅಂತಾರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮವು ಒಟ್ಟು ಐದು ಗೋಷ್ಠಿಗಳಲ್ಲಿ ಜರುಗಲಿದ್ದು, ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಲಿದೆ. ಎಲ್ಲ ಉಪನ್ಯಾಸಗಳೂ ಆಂಗ್ಲ ಭಾಷೆಯಲ್ಲಿ ಮೂಡಿ ಬರಲಿವೆ. ರಾಮಕೃಷ್ಣ ಪರಂಪರೆಯ ಯತಿಗಳು, ಮಾತಾಜಿಗಳು ಮತ್ತು ಅಂತಾ ರಾಷ್ಟಿçÃಯ ಖ್ಯಾತಿಯ ಚಿಂತಕರು ಹಲವಾರು ವಿಷಯಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು.

ಯುವ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಮತ್ತು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ  ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಉಪನ್ಯಾಸ ನೀಡುವರು.

ಗೋಷ್ಠಿ ಎರಡರಲ್ಲಿ ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ ಮಾತಾ ವಿವೇಕಮಯಿ ಮತ್ತು ಮುಂಬೈನ ಆತ್ಮದರ್ಶನ ಪ್ರೆಐವೇಟ್ ಲಿಮಿಟೆಡ್ನ ಸಂಸ್ಥಾಪಕ ನಿರ್ದೇಶಕ ಡಾ. ರಾಧಾಕೃಷ್ಣನ್ ಪಿಳೈ ತಮ್ಮ ವಿಚಾರಗಳನ್ನು ಮಂಡಿಸುವರು ಎಂದು ವಿವರಿಸಿದರು.

ಮೂರನೇ ಗೋಷ್ಠಿಯಲ್ಲಿ ಲಂಡನ್ನ ರಾಮಕೃಷ್ಣ ವೇದಾಂತ ಕೇಂದ್ರದ ಮುಖ್ಯಸ್ಥರಾದ ಸ್ವಾಮಿ ಸರ್ವಸ್ಥಾನಂದಜೀ ಮಹಾರಾಜ್, ಹೈದರಾಬಾದ್ನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಬೋಧಮಯಾನಂದಜೀ ಮಹಾರಾಜ್, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀರವರು ಉಪನ್ಯಾಸ ನೀಡಲಿದ್ದಾರೆ.

ನಾಲ್ಕನೇ ಗೋಷ್ಠಿಯಲ್ಲಿ ನವದೆಹಲಿ ರಾಮಕೃಷ್ಣ ಮಿಷನ್ನ ಕಾರ್ಯದರ್ಶಿ ಸ್ವಾಮಿ ಶಾಂತಾತ್ಮಾನಂದಜೀ ಮಹಾರಾಜ್, ಬೆಂಗಳೂರಿನ ನ್ಯಾಷನಲ್ ಡಿಸೈನ್ ಅಂಡ್ ರಿಸರ್ಚ್ ಫೋರಂನ ಅಧ್ಯಕ್ಷರಾದ ಡಾ. ಪಿ ರಘೋತ್ತಮರಾವ್ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಐದನೇ ಗೋಷ್ಠಿಯಲ್ಲಿ ನವದೆಹಲಿ ರಾಮಕೃಷ್ಣ ಶಾರದಾ ಮಿಷನ್ನ ಪ್ರವ್ರಾಜಿಕ ದಿವ್ಯಾನಂದಪ್ರಾಣಾ ಮತ್ತು ಕೊಚ್ಚಿಯ ಅಂತಾರಾಷ್ಟ್ರೀಯ ಖ್ಯಾತಿಯ ಕಾರ್ಪೊರೇಟ್ ತರಬೇತುದಾರ ವಿಜಯ್ ಮೆನನ್ ಉಪನ್ಯಾಸ ನೀಡುವರು ಎಂದು ಅವರು ವಿವರಿಸಿದರು.

ಸಮಾರೋಪ
ಆ.17ರಂದು ಸಂಜೆ 4 ಗಂಟೆಗೆ ಸಮರೋಪ ಸಮಾರಂಭ ನಡೆಯಲಿದ್ದು, ಕೊಲ್ಕತ್ತಾದ ರಾಮಕೃಷ್ಣ ಮಿಷನ್ ವಿವೇಕಾನಂದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ (ಡೀಮ್ಡ್ ವಿಶ್ವವಿದ್ಯಾನಿಲಯ)ಯ ಸಹ ಕುಲಾಧಿಪತಿ  ಸ್ವಾಮಿ ಆತ್ಮಪ್ರಿಯಾನಂದಜೀ ಮಹಾರಾಜ್ ದಿಕ್ಸೂಚಿ ಭಾಷಣ ಮಾಡುವರು.  ಇಂಫಾಲ್ ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ. ಎಸ್. ಅಯ್ಯಪ್ಪನ್, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿದ ಪ್ರೊ. ಎಂ. ವೆಂಕಟೇಶ್ವರಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಡಿಯಲ್ಲಿ ಆ. 16 ರಂದು ನೀಲಾಲಯ ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಮೂಡಬಿದ್ರಿಯ ಯಕ್ಷನಿಧಿ ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳ ಸಂಸ್ಥೆಯ ವಿದ್ಯಾರ್ಥಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕು. ಪಂಚಮಿ ಮಾರೂರು ತಂಡದಿಂದ ಯಕ್ಷಗಾನ ಕಾರ್ಯಕ್ರಮವು ನಡೆಯಲಿದೆ.

ಆ. 17 ರಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿವೇದಿತಾ ನಿಕೇತನ ಸಂಸ್ಥೆಯ ಯುವತಿಯರಿಂದ ದೇಶಪ್ರೇಮ ಕುರಿತಾದ ಗೀತಗುಚ್ಛ ಕಾರ್ಯಕ್ರಮ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾದ ವಿದ್ವಾನ್ ಮೈಸೂರು ಹರೀಶ್ ಪಾಂಡವ್ ತಂಡದವರಿಂದ ನಿನಾದಂ ಶೀರ್ಷಿಕೆಯಡಿಯಲ್ಲಿ ವಾದ್ಯ ಸಂಗೀತ ಕಾರ್ಯಕ್ರಮವು ಏರ್ಪಡಿಸಲಾಗಿದೆ ಎಂದರು.

ಅಂತಾರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಸುಮಾರು 250 ವಿದ್ಯಾರ್ಥಿಗಳು ಮತ್ತು 50 ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ. ನೋಂದಾಯಿತ ಪ್ರತಿನಿಧಿಗಳಿಗೆ ಉಪಹಾರ, ಭೋಜನ, ವಸತಿ ವ್ಯವಸ್ಥೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಜಿ.ಟಿ. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಪ್ರೊ. ರಮ್ಯಕಲ್ಲೂರ್ ಕೆ.ವಿ., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀನಿಧಿ, ಆಶ್ರಮದ ಸೇವಾಕರ್ತರಾದ ಪ್ರದೀಪ್ ಸಿಂಹ, ಸುನಿಲ್ ಹುಲಿಕಲ್ ಉಪಸ್ಥಿತರಿದ್ದರು.

ವೈಭವಯುತ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

0

Publicstory/prajayoga

ತುಮಕೂರು: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ “ಅಜಾದಿ ಕಾ ಅಮೃತ ಮಹೋತ್ಸವ”ದ ಪ್ರಯುಕ್ತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ವೈಭವಯುತವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಯಾವುದೇ ಲೋಪವಾಗದಂತೆ ಧ್ವಜಸ್ತಂಭ, ಉತ್ತಮ ಬ್ಯಾಕ್‌ಡ್ರಾಪ್, ವೇದಿಕೆ ಸಜ್ಜುಗೊಳಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಸಚಿವರು, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗಣ್ಯರಿಗೆ, ಸಂಘ ಸಂಸ್ಥೆಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ದಿನಾಚರಣೆಯಂದು ಪಥ ಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡುವ ಶಾಲಾ ಮಕ್ಕಳು, ಮೀಸಲು ಪಡೆ, ಎನ್‌ಸಿಸಿ ತಂಡ, ಪೊಲೀಸ್ ತುಕಡಿಗಳಿಗೆ ಬಹುಮಾನ ನೀಡುವ ಬಗ್ಗೆ ಚರ್ಚಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು 5 ತಂಡಗಳನ್ನು ಸಜ್ಜುಗೊಳಿಸಿ ಉತ್ತಮ ಪ್ರದರ್ಶನ ನೀಡುವಂತೆ ತಾಲೀಮು ನಡೆಸಬೇಕು.  ನಗರದ ಪ್ರಮುಖ ವೃತ್ತ, ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಭಾನುವಾರ ಆಗಸ್ಟ್ 14ರ ಸಂಜೆ 4 ಗಂಟೆಗೆ ನಗರದ ಅಮಾನಿಕೆರೆಯಿಂದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದವರೆಗೆ ನಡೆಯಲಿರುವ ಸೈಕ್ಲೋಥಾನ್ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಈಗಾಗಲೇ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯ್ತಿಯಿಂದ ನೀಡಿರುವ ರಾಷ್ಟ್ರಧ್ವಜವನ್ನು ಪ್ರತಿ ಮನೆಗಳ ಮೇಲೆ ಹಾರಿಸಬೇಕೆಂದು ಎಲ್ಲಾ ನಾಗರಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ಡಿವೈಎಸ್‌ಪಿ ಡಿಎಆರ್ ಪರಮೇಶ್, ಪಾಲಿಕೆ ಆಯುಕ್ತೆ ರೇಣುಕಾ, ತಹಶಿಲ್ದಾರ್ ಮೋಹನ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಲತಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ. ಪರಮೇಶ್ವರಪ್ಪ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸೇವಾ ಮನೋಭಾವ ಮೈಗೂಡಿಸಿಕೊಂಡು ಮುನ್ನಡೆಯಿರಿ : ಎಸ್ಪಿ ರಾಹುಲ್ ಕುಮಾರ್

publicstory/prajayoga

ತುಮಕೂರು: ಕರುನಾಡ ವಿಜಯಸೇನೆ ಸಂಘಟನೆಯ ಕಾರ್ಯಕರ್ತರು ದೇಶಪ್ರೇಮ ಮತ್ತು ಸೇವಾ ಮನೋಭಾವ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಕರೆ ನೀಡಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರುನಾಡ ವಿಜಯಸೇನೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯ ಕಾರ್ಯಕರ್ತರು ಶಿಸ್ತು, ಪ್ರಾಮಾಣಿಕತೆಯನ್ನು ಬೆಳೆಸಿಕೊಂಡಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಘಟನೆಯವರು ಸಾಮಾಜಿಕ ಕಳಕಳಿಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಲು ಸಂಘಟನೆ ಮುಖ್ಯಸ್ಥರು ಸಲಹೆ, ಮಾರ್ಗದರ್ಶನ ನೀಡಬೇಕು. ಕರುನಾಡ ವಿಜಯಸೇನೆ ರಾಜ್ಯದಲ್ಲಿ ಮಾದರಿ ಸಂಘಟನೆಯಾಗಿ ಬೆಳೆಯಲಿ ಎಂದು ಆಶಿಸಿದರು.

ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಹಾಗೂ ಗ್ರಾಮಾಂತರ ಭಾಗದದಲ್ಲಿ ಕನ್ನಡ ಅಭಿವೃದ್ಧಿ ಮತ್ತು ಸಂಘಟನೆ ಬೆಳವಣಿಗೆಗೆ ಕಾರ್ಯಕರ್ತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕರುನಾಡ ವಿಜಯ ಸೇನೆಯು ಕನ್ನಡ ನಾಡು, ನುಡಿ ಸೇವೆಯ ಉದ್ದೇಶದಿಂದ ಆರಂಭಗೊಂಡಿದೆ. ಸಂಘಟನೆ ಪದಾಧಿಕಾರಿಗಳು ಈ ಆಶಯಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡು ನಾಡ ಸೇವೆ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕರುನಾಡ ವಿಜಯಸೇನೆ ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ ಮಾತನಾಡಿ, ಕರುನಾಡ ವಿಜಯಸೇನೆಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದೇ ಮುಖ್ಯ ಗುರಿಯಾಗಿದೆ ಎಂದರು.
ಮುಂಬರುವ ನವೆಂಬರ್ ತಿಂಗಳಲ್ಲಿ ತುಮಕೂರಿನಲ್ಲಿ ಸುಮಾರು 10 ಸಾವಿರ ಮಂದಿಯನ್ನು ಸೇರಿಸಿ ಕರುನಾಡ ವಿಜಯಸೇನೆಯ ಅದ್ದೂರಿ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್ ಎಚ್.ಎನ್. ಅವರು ಸಂಘಟನೆಯ ವಿವಿಧ ಪದಾಧಿಕಾರಿಗಳಿಗೆ ಅಧಿಕಾರದ ಜವಾಬ್ದಾರಿ ವಿತರಿಸಿದರು.

ಈ ವೇಳೆ ಎಸ್ಪಿ ರಾಹುಲ್‌ಕುಮಾರ್ ಶಹಾಪುರವಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಕರುನಾಡ ವಿಜಯಸೇನೆಯ ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಬಿ.ಮಹದೇವಯ್ಯ, ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದನ್ ಪಟೇಲ್, ಜಿಲ್ಲಾಧ್ಯಕ್ಷ ಅರುಣ್ ನೇತೃತ್ವದಲ್ಲಿ ನಗರದ ಟೌನ್‌ಹಾಲ್ ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ಕರುನಾಡ ವಿಜಯಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಆರ್.ಎಸ್.ಮಹೇಶ್, ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ರಾಂಪ್ರಸಾದ್ ಗೌಡ, ರಾಜ್ಯ ಉಪಾಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ, ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಮುಖಂಡರಾದ ರಂಜನ್, ರಾಜ್ಯ ಪ್ರಧಾನ ಸಂಚಾಲಕ ವಾಸುದೇವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಮೋಹನ್ ಕುಮಾರ್, ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಖಿಲೇಶ್ ಪುತ್ರ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದನ್ ಪಟೇಲ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಆಧಾರ್ ಜೋಡಣೆಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ

Publicstory/prajayoga

ತಿಪಟೂರು: ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಗುರುತಿನ ಚೀಟಿ ಹೊಂದಿದ್ದರೆ ಆ ಸಮಸ್ಯೆಯನ್ನು ಬಗೆಹರಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಯೂ ಸಹಕಾರಿಯಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಕಲ್ಪಶ್ರೀ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಆಯೋಜಿಸಿದ್ದ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮತ್ತು ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು ತಮ್ಮ ಗ್ರಾಮಗಳಲ್ಲಿ ಜನರಿಗೆ ತಿಳಿಸಿ ನಿಮ್ಮ ಗೆಳೆಯರು, ಸಂಬಂಧಿಕರಿಗೆ ಜಾಗೃತಿ ಮೂಡಿಸಿ ಎಂದರು.

ವಿದ್ಯಾರ್ಥಿಗಳೆಲ್ಲರೂ ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, 75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಸಂಭ್ರಮಿಸಬೇಕು ಎಂದು ಹೇಳಿದರು.

ತಾಲೂಕು ದಂಡಾಧಿಕಾರಿ ಚಂದ್ರಶೇಖರ್.ಜೆ.ಆರ್. ಮಾತನಾಡಿ, ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ವೋಟರ್ ಹೆಲ್ಪ್ ಲೈನ್ ಆಪ್ ಮುಖಾಂತರ ಜೋಡಣೆ ಮಾಡಬಹುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸರಸ್ವತಿ.ಕೆ.ವಿ. ಮಾತನಾಡಿ, ವಿದ್ಯಾರ್ಥಿಗಳು ಮತದಾರರ ಚೀಟಿಗೆ ಆಧಾರ್ ಸಂಖ್ಯೆಯ ಜೋಡಣೆಯಲ್ಲಿ ಸೈನಿಕರಂತೆ ಕಾರ್ಯನಿರ್ವಹಿಸಬೇಕು ಹಾಗೂ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಹೊನ್ನಾಂಜಿನೇಯ ಡಿ.ಆರ್, ಸಮಾಜ ಕಲ್ಯಾಣ ಇಲಾಖೆಯ ಸಹ ನಿರ್ದೇಶಕ ದಿನೇಶ್, ಪತ್ರಿಕೋದ್ಯಮ ವಿಭಾಗದ ಶಂಕರಪ್ಪ(ಶಿರಾ), ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಂದೀಶ್ ಕೆ.ಆರ್ ಮತ್ತಿತರರು ಉಪಸ್ಥಿತರಿದ್ದರು

ವಿದೇಶಿ ಧ್ವಜಗಳ ಬಳಕೆಯಿಂದ ರಾಷ್ಟ್ರದ ಘನತೆಗೆ ಧಕ್ಕೆ : ಹೆಗ್ಗೋಡು ಪ್ರಸನ್ನ

Publicstory/prajayoga

ಖಾದಿ ಧ್ವಜಕ್ಕೆ 19℅ ತೆರಿಗೆ ವಿಧಿಸಿ ಸರ್ಕಾರ ಘೋರ ಅಪರಾಧ ಮಾಡಿದೆ

ತುಮಕೂರು: ಖಾದಿ ರಾಷ್ಟ್ರ ಧ್ವಜವನ್ನು ಕಡೆಗಣಿಸಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ಧ್ವಜಗಳ ಬಳಕೆಗೆ ಅನುಮತಿ ನೀಡಿ ಸರ್ಕಾರ ರಾಷ್ಟ್ರದ ಘನತೆಗೆ ಧಕ್ಕೆ ತಂದಿದೆ ಎಂದು ಚರಕ ಖ್ಯಾತಿಯ ಪ್ರಸನ್ನ ಹೆಗ್ಗೋಡು ಆಕ್ರೋಶ ವ್ಯಕ್ತಪಡಿಸಿದರು.

ನಗರದ ರವೀಂದ್ರ ಕಲಾನಿಕೇತನದಲ್ಲಿ ಗ್ರಾಮ ಸೇವಾ ಸಂಘ, ಜನ ಸಂಗ್ರಾಮ ಪರಿಷತ್, ಸರ್ವೋದಯ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರ ಖಾದಿ ಧ್ವಜಗಳನ್ನು ಬದಿಗೆ ಸರಿಸಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ಧ್ವಜಗಳನ್ನು ಬಳಸುವಂತೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಹಾಗೂ ಖಾದಿ ಬಾವುಟ ಬಳಸಲು ಒತ್ತಾಯಿಸಿ ಶುಕ್ರವಾರ ನಡೆದ ಧ್ವಜ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಇಂದು ಸತ್ಯಾಗ್ರಹ ಮಾಡುವ ಪರಿಸ್ಥಿತಿ ಒದಗಿ ಬಂದಿರುವುದು ಶೋಚನೀಯ. ಕನಿಷ್ಟ ಪಕ್ಷ ಸ್ವಾತಂತ್ರ್ಯ ಚಳವಳಿಯ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಧ್ವಜದ ಗೌರವವನ್ನು ರಕ್ಷಿಸಬೇಕಿತ್ತು. ಖಾದಿ ಬಾವುಟಗಳಿಗೆ 19℅ ಜಿಎಸ್‌ಟಿ ವಿಧಿಸಿ, ವಿದೇಶಿ ಧ್ವಜಗಳಿಗೆ ತೆರಿಗೆ ವಿನಾಯತಿ ನೀಡಲಾಗಿದೆ. ಧ್ವಜವನ್ನು ಯಾವುದೇ ವಸ್ತ್ರದಲ್ಲಿ ತಯಾರಿಸಬಹುದೆಂಬ ತಿದ್ದುಪಡಿ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವನ್ನು ಪಾರ್ಲಿಮೆಂಟಿ‌ನ ಮುಂದೆ ಚರ್ಚೆಗೆ ತರದೆ ಏಕಾಏಕಿ ಜಾರಿಗೊಳಿಸಿರುವುದು ಖಂಡನೀಯ ಎಂದರು.

ಈಗ ಸ್ವರ್ಗವಾಸಿಗಳಾಗಿರುವ ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಬದುಕಿದ್ದರೆ ಕಣ್ಣೀರು ಹಾಕುತ್ತಿದ್ದರು. ಭಗವಧ್ವಜದ ಕೆಳಗಡೆ ರಾಷ್ಟ್ರ ಧ್ವಜ ಹಾರಿಸುವ ಪ್ರವೃತ್ತಿ ಬೆಳೆದಿದೆ. ಆದರೆ, ದೇಶದಲ್ಲಿಂದು ಅದೃಷ್ಟವಶಾತ್ ಸ್ವಾತಂತ್ರ್ಯ ಚಳುವಳಿಯ ಜ್ವಾಲೆ ಆರಿಲ್ಲ. ಖಾದಿ ಬಾವುಟ ಭಾರತದ ಹೆಮ್ಮೆ ಎಂದು ಜನ ಸಾಮಾನ್ಯರು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಖಾದಿಯ ಗುಣಮಟ್ಟ ಸರಿಯಿಲ್ಲ ಎಂಬ ಸಬೂಬನ್ನು ಸರ್ಕಾರ ನೀಡುತ್ತಿದೆ. ಸರ್ಕಾರಗಳು ಬಲವಂತವಾಗಿ ಮಾರುತ್ತಿರುವ ಬಾವುಟಗಳು ಒಂದೂ ನಿಯಮಬದ್ಧವಾಗಿಲ್ಲ. ಸರ್ಕಾರದ ಈ ಕೆಟ್ಟ ಬದಲಾವಣೆ ನಾಚಿಕೆ ಗೇಡಿನ ಸಂಗತಿ. ಸರ್ಕಾರ ಯುದ್ಧ ಭೂಮಿಯೊಂದರಲ್ಲಿ ಅಮೃತ ಮಹೋತ್ಸವದ ಉಧ್ಘಾಟನೆ ಮಾಡಿದೆ. ಇದರಿಂದ ಇಡೀ ವಿಶ್ವಕ್ಕೆ ಭಾರತ ಹಿಂಸಾವಾದಿ ರಾಷ್ಟ್ರ ಎಂಬ ಸಂದೇಶ ಹೋಗುತ್ತದೆ. ಭೌದ್ಧ, ಜೈನ, ವಿವೇಕಾನಂದ, ಕಬೀರ, ಬಸವಣ್ಣನನ್ನು ಪಡೆದ ದೇಶವಿದು. ಶಾಂತಿ ಸೌಹಾರ್ದದಲ್ಲಿ ಮಾದರಿಯಾಗಬೇಕು ಎಂದರು.

ಬ್ರಿಟೀಷ್ ಕಾಲದಲ್ಲೂ‌ ಖಾದಿಗೆ ತೆರಿಗೆ ವಿನಾಯಿತಿ‌ ಇತ್ತು. ಇಂದು ಧ್ವಜಕ್ಕೆ ತೆರಿಗೆ ವಿಧಿಸುವ ಮೂಲಕ ಬ್ರಿಟೀಷರು ಮಾಡದೆ ಇರುವ ಘೋರ ಅಪರಾಧವನ್ನು ಸರ್ಕಾರ ಮಾಡಿದೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿವೆ. ಖಾದಿ ಧ್ವಜದಕ್ಕೆ ಜಿಎಸ್‌ಟಿ ವಿಧಿಸಿರುವ ಬಗ್ಗೆ ಗಾಂಧಿ ಹೆಸರೇಳುವ ಪಕ್ಷದವರು ಸೇರಿದಂತೆ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೆ. ಈಗ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಮಾಡುವುದಕ್ಕೆ ಎಲ್ಲರೂ ಸಜ್ಜಾಗಿ ಎಂದು‌ ಕರೆ ನೀಡಿದರು.

ನೂಲು ತೆಗೆಯುವ ಕೆಲಸ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದ್ದು, ಕಷ್ಟಕಾಲದಲ್ಲಿ ಅವರಿಗೆ ಸಹಾಯವಾಗುತ್ತದೆ. ಭಾರತ ದೇಶದ ಮೂಲೆ ಮೂಲೆಗಳಲ್ಲಿ ಸ್ಥಳೀಯ ಹತ್ತಿ ಬಳಸಿ ನೂಲು ತೆಗೆಯುವ ಪರಂಪರೆ ಬೆಳೆದು ಬಂದಿದೆ. ಶ್ರಮ ಜೀವಿ ಹೆಣ್ಣು ಮಕ್ಕಳು ಹೊರ ಹೋಗಿ ಕೆಲಸ ಮಾಡಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಗಾಂಧಿಗೆ ನೂಲುವಿಕೆ ಮತ್ತು ಖಾದಿ ಬಟ್ಟೆ ಮುಖ್ಯವಾಯಿತು. ಮನೆಯಲ್ಲೇ ಕುಳಿತು ನೂಲುವಿಕೆ ಅವಕಾಶದ ಜೊತೆಗೆ ದೇಶ ಮತ್ತು ಪರಿಸರ ಎರಡೂ ಉಳಿಯುತ್ತದೆ ಎಂದರು.

ಯಂತ್ರಗಳನ್ನು ಬಳಸಿ ವಿಪರೀತ ಬೆಂಕಿ ಉರಿಸುವ ಕೆಲಸ ತಂತ್ರಜ್ಞಾನದಿಂದ ಆಗುತ್ತಿದೆ. ಯೂರೋಪ್ ದೇಶಗಳು ಹವಾಮಾನ ವೈಪರೀತ್ಯದಿಂದ ಈಗ ಬೆಂಕಿಯಾಗಿವೆ. ಕೋವಿಡ್ ಸೇರಿದಂತೆ ಪ್ರತೀವರ್ಷ ನೂರು ತರಹದ ಪ್ರಕೋಪಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ನಮ್ಮಲ್ಲೇ ಇದೆ. ಜನ ಸಮುದಾಯಗಳ ಕೈ ಉತ್ಪನ್ನಗಳನ್ನು ಹೆಚ್ಚಿಸುವುದು, ಯಂತ್ರಗಳ ಬಳಕೆ ಕಡಿಮೆ ಮಾಡುವುದು. ಇಡೀ ವಿಶ್ವವಕ್ಕೆ ಕೈ ಉತ್ಪನ್ನಗಳನ್ನು ನೀಡುವ ಸಾಧ್ಯತೆ ನಮ್ಮಲ್ಲಿದೆ. ಗಾಂಧೀ ಜಯಂತಿ ಬಂದಾಗ ಸುಳ್ಳುಭಾಷಣಗಳನ್ನು ಮಾಡಿ ಕಾರು ಹತ್ತಿ ಹೋಗುವ ರಾಜಕಾರಣಿಗಳನ್ನು ಕಳೆದ ಎಪ್ಪತ್ತೈದು ವರ್ಷಗಳಿಂದ ಕಂಡಿದ್ದೇವೆ. ಇಂಥವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಮನೆ ಮೇಲೆ ಧ್ವಜ ಹಾರಿಸದವರಿಗೆ ರೇಶನ್ ಇಲ್ಲ ಎಂಬ ನಿಯಮ ಮಾಡಿದ್ದಾರೆ. ಮೀರಿದಲ್ಲಿ ಪೊಲೀಸರಿಗೆ ದೂರು ನೀಡಿ ಎಂದು ಹೊರ ರಾಜ್ಯಗಳಲ್ಲಿ ರಾಜಕೀಯ ಪಕ್ಷದವರು ಹೇಳುತ್ತಿರುವುದು ದುರಂತ.
ಮುಸಲ್ಮಾನರು, ಕ್ರಿಸ್ತರು ಜೀವಕ್ಕಿಂತ ಹೆಚ್ಚಾಗಿ ರಾಷ್ಟ್ರವನ್ನು, ಧ್ವಜವನ್ನೂ ಪ್ರೀತಿಸುತ್ತಾರೆ. ಆದರೆ, ಧ್ವಜ ಹಾರಿಸದ್ದಕ್ಕೆ ಅವರನ್ನು ಗುರಿ ಮಾಡಿಕೊಳ್ಳಲಾಗಿದೆ. ರಾಷ್ಟ್ರದ ಪ್ರಜೆ ಯಾರೇ ಆಗಿರಲಿ ಅವರನ್ನು ಸಮಾನವಾಗಿ ಕಾಣಬೇಕು. ಅದೇ ರಾಜ ಧರ್ಮ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಈಗ ಜನರನ್ನು ಸಮಾನವಾಗಿ ಕಾಣದೆ ಪ್ರತ್ಯೇಕತಾ ವಾದವನ್ನು ಮಾಡಲಾಗುತ್ತಿದೆ.

– ಪ್ರಸನ್ನ ಹೆಗ್ಗೋಡು

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ನಿರುದ್ಯೋಗ ಹೋಗಲಾಡಿಸಲು ಯಂತ್ರಗಳು ತಯಾರಿಸಿದ ವಸ್ತುಗಳನ್ನು‌ ಬಳಸದೆ, ಬೃಹತ್ ಪ್ರಮಾಣದ ಜನರು ತಯಾರಿಸಿದ ವಸ್ತುಗಳನ್ನು ಬಳಸಬೇಕು. ಇದರಿಂದ ಗಾಂಧಿ‌ ಕಂಡ ಕನಸು ನನಸಾಗುತ್ತದೆ. ಬೃಹತ್ ಜನ ಸಮುದಾಯ ತಯಾರಿಸಿದ ಕೈ ಬಳಕೆ ವಸ್ತುಗಳನ್ನು ಉಪಯೋಗಿಸುವ ಮೂಲಕ ಚಳಚಳಿ ಹುಟ್ಟು ಹಾಕಬೇಕು. ಈಗಿರುವ ಸರ್ಕಾರ ಖಾದಿಯನ್ನೇ ನಂಬಿ‌ ಬದುಕುತ್ತಿದ್ದ ಬಡ ಜನರ ಹೊಟ್ಟೆಯ ಮೇಲೆ ಹೊಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸತ್ಯಾಗ್ರಹದ ರ್ಯಾಲಿ ಪಾದ ಯಾತ್ರೆಯ ಮೂಲಕ ಸ್ವತಂತ್ರ ಚೌಕದಿಂದ ಕೋತಿ ತೋಪಿನಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನಕ್ಕೆ ತಲುಪಿ ಸಮಾರೋಪಗೊಂಡಿತು.

ಧ್ವಜ ಸತ್ಯಾಗ್ರಹದಲ್ಲಿ ಜನ ಸಂಗ್ರಾಮ ಪರಿಷತ್‌ನ ಎನ್ ಎಸ್ ಪಂಡಿತ್ ಜವಾಹರ್, ಆರ್ ವಿ ಪುಟ್ಟ ಕಾಮಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ರವೀಶ್ ಹಾಗೂ ಪ್ರಗತಿಪರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಷ್ಟ್ರ ಧ್ವಜಕ್ಕೆ ಅಪಮಾನ ಆರೋಪ ; ಶಿಕ್ಷಣ ಸಚಿವರ ವಿರುದ್ಧ ದೂರು ದಾಖಲು

ತಿಪಟೂರು: ತ್ರಿವರ್ಣ ಧ್ವಜಕ್ಕಿಂತ ಮೇಲೆ ಕೇಸರಿ‌ ಧ್ವಜ ಹಾರಿಸಿರುವ ಆರೋಪದ‌ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.‌ನಾಗೇಶ್ ವಿರುದ್ಧ ತಿಪಟೂರು ಪೊಲೀಸ್ ಠಾಣೆಯಲ್ಲಿ‌ ಇಂದು ದೂರು ದಾಖಲಾಗಿದೆ.

ಬುಧವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾವಿರ ಮಕ್ಕಳು ಪಾಲ್ಗೊಂಡು ನಡೆದ 180 ಅಡಿ ಉದ್ದದ ತಿರಂಗ ಯಾತ್ರೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಪಾಲ್ಗೊಂಡಿದ್ದರು. ಈ ತಿರಂಗ ಮೆರವಣಿಗೆಯಲ್ಲಿ‌ ರಾಷ್ಟ್ರಧ್ವಜಕ್ಕಿಂತ ಮೇಲೆ ಕೇಸರಿ ಧ್ವಜ ಹಾರಾಟ ಮಾಡಲಾಗಿತ್ತು. ಇದು ರಾಷ್ಟ್ರದ್ರೋಹಕ್ಕೆ ಸಮಾನಾದ ಅಪರಾಧವಾಗಿದೆ. ಶಾಲಾ ಮಕ್ಕಳನ್ನು ಇಂತಹ ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದುರ್ದೈವದ ಸಂಗತಿ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ‌ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ವಿ ಹರಿಪ್ರಸಾದ್ ದೂರು ಸಲ್ಲಿಸಿದ್ದಾರೆ.

ದಾಖಲಾದ ದೂರಿನ ಪ್ರತಿ

ಕಲ್ಪತರು ವಿದ್ಯಾಸಂಸ್ಥೆಯ ಮುಕುಟಕ್ಕೆ ಮತ್ತೊಂದು ಗರಿ

Publicstory/prajayoga

ತಿಪಟೂರು : ಗ್ರಾಮಾಂತರ ಪ್ರದೇಶದಲ್ಲಿ ಇಂಜಿಯರಿಂಗ್ ಕಾಲೇಜನ್ನು ನಡೆಸುವುದೇ ಕಷ್ಟಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ ಅದೇ ಕಾಲೇಜಿಗೆ ಕೇಂದ್ರದ ಎನ್.ಬಿ.ಎ ಮಾನ್ಯತೆ ದೊರೆತಿರುವುದರಿಂದ ಕಲ್ಪತರು ವಿದ್ಯಾಸಂಸ್ಥೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ತಿಪ್ಪೇರುದ್ರಪ್ಪ ತಿಳಿಸಿದರು.

ನಗರದ ಕೆ.ಐ.ಟಿ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ನ್ಯಾಷನಲ್ ಬೋರ್ಡ್ ಆಫ್ ಆಕ್ರಿಡೇಷನ್ (ಎನ್.ಬಿ.ಎ) ನವದೆಹಲಿ ಕಮಿಟಿಯವರು ನಮ್ಮ ಕಾಲೇಜಿನ್ನು ಪರಿಶೀಲಿಸಿದರು. ಈ ಪರಿಶೀಲನೆಯಲ್ಲಿ ದೇಶದ ಪ್ರತಿಷ್ಠಿತ ಐ.ಐ.ಟಿ ಪ್ರೊಪೆಸರ್‌ಗಳು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಗುಣಮಟ್ಟ, ಕಲಿಕಾ ವಾತಾವರಣ, ಕಾಲೇಜಿನ ಮೂಲಸೌಕರ್ಯಗಳು, ಹಲವಾರು ವರ್ಷದ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ಕಾಲೇಜಿನ ಉಪನ್ಯಾಸಕರ ವಿದ್ಯಾರ್ಹತೆಯನ್ನು ನೋಡಿ ನಮ್ಮ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ ಸಿಕ್ಕಿರುವುದು ಕಾಲೇಜಿನ ಕೀರ್ತಿಯ ಜೊತೆಗೆ ವಿದ್ಯಾರ್ಥಿಗಳಿಗೆ, ಮತ್ತು ಪೋಷಕರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಶಿವಪ್ರಸಾದ್ ಮಾತನಾಡಿ, ನಮ್ಮ ಕಾಲೇಜು ಈಗ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿರುವುದರಿಂದ ನಮ್ಮಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಎಲ್ಲೆಡೆ ಮನ್ನಣೆ ದೊರೆಯಲಿದ್ದು ಉದ್ಯೋಗವಕಾಶಗಳು ಹೆಚ್ಚಲಿವೆ ಎಂದು ತಿಳಿಸಿದರು.

ಕಾರ್ಯದರ್ಶಿ ಸುಧಾಕರ್ ಮಾತನಾಡಿ, ನಮ್ಮ ಸಂಸ್ಥೆಗೆ ಎನ್.ಬಿ.ಎ ಮಾನ್ಯತೆ ಎಂ.ಬಿ.ಎ ಗೆ ಮೊದಲೇ ದೊರೆತಿತ್ತು. ಈಗ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಅಂಡ್ ಇಂಜಿನಿಯರಿಂಗ್‌ಗೆ ದೊರೆತಿದ್ದು, ಈ ಮಾನ್ಯತೆ ಆಗಸ್ಟ್ 2022ರಿಂದ ಜೂನ್ 2025ರ ವರೆಗೂ ಇರುತ್ತದೆ. ಇದಕ್ಕೆಲ್ಲಾ ಕಾರಣ ನಮ್ಮ ತಾಲೂಕಿನ ಮೊದಲ ಸಚಿವರಾದ ಟಿ.ಎಂ. ಮಂಜುನಾಥ್ ರವರು 1986ರಲ್ಲಿ ಕಲ್ಪತರು ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿ ಇಲ್ಲಿ ಗ್ರಾಮೀಣ ಮಕ್ಕಳಿಗೆ ಗಗನ ಕುಸುಮವಾಗಿದ್ದ ಇಂಜಿನಿಯರಿಂಗ್ ಪದವಿ ದೊರೆಯುವಂತೆ ಮಾಡಿದರು ಎಂದರು.

ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲೂ ಮುಂದಿದ್ದು ವಿ.ಟಿ.ಯು ನ ಟಾಪ್ ಹತ್ತು ವಿದ್ಯಾರ್ಥಿಗಳಲ್ಲಿ 4-5 ವಿದ್ಯಾರ್ಥಿಗಳು ಮತ್ತು ಟಾಪ್ 100 ವಿದ್ಯಾರ್ಥಿಗಳಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುತ್ತಾರೆ. ಈ ಬಾರಿಯ ಮೆಕಾನಿಕಲ್ ವಿಭಾಗದಲ್ಲಿ ಶೃತಿ ಎಚ್.ಎಂ.ವಿ.ಟಿ.ಯುನಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಬಿ.ಎಸ್.ಉಮೇಶ್, ಜಿ.ಪಿ ದೀಪಕ್, ಟಿ.ಎಸ್.ಬಸವರಾಜು, ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಟಿ.ಯು ಜಗದೀಶ್‌ಮೂರ್ತಿ, ಪ್ರಾಂಶುಪಾಲ ಜಿ.ಡಿ.ಗುರುಮೂರ್ತಿ, ಹೆಚ್.ಓ.ಡಿಗಳಾದ ಯೋಗಾನಂದ್, ಶಶಿಧರ್ ಸೇರಿದಂತೆ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪಸ್ಥಿತರಿದ್ದರು.