Monday, October 14, 2024
Google search engine
Homeಪ್ರತಿಭಟನೆವಿದೇಶಿ ಧ್ವಜಗಳ ಬಳಕೆಯಿಂದ ರಾಷ್ಟ್ರದ ಘನತೆಗೆ ಧಕ್ಕೆ : ಹೆಗ್ಗೋಡು ಪ್ರಸನ್ನ

ವಿದೇಶಿ ಧ್ವಜಗಳ ಬಳಕೆಯಿಂದ ರಾಷ್ಟ್ರದ ಘನತೆಗೆ ಧಕ್ಕೆ : ಹೆಗ್ಗೋಡು ಪ್ರಸನ್ನ

Publicstory/prajayoga

ಖಾದಿ ಧ್ವಜಕ್ಕೆ 19℅ ತೆರಿಗೆ ವಿಧಿಸಿ ಸರ್ಕಾರ ಘೋರ ಅಪರಾಧ ಮಾಡಿದೆ

ತುಮಕೂರು: ಖಾದಿ ರಾಷ್ಟ್ರ ಧ್ವಜವನ್ನು ಕಡೆಗಣಿಸಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ಧ್ವಜಗಳ ಬಳಕೆಗೆ ಅನುಮತಿ ನೀಡಿ ಸರ್ಕಾರ ರಾಷ್ಟ್ರದ ಘನತೆಗೆ ಧಕ್ಕೆ ತಂದಿದೆ ಎಂದು ಚರಕ ಖ್ಯಾತಿಯ ಪ್ರಸನ್ನ ಹೆಗ್ಗೋಡು ಆಕ್ರೋಶ ವ್ಯಕ್ತಪಡಿಸಿದರು.

ನಗರದ ರವೀಂದ್ರ ಕಲಾನಿಕೇತನದಲ್ಲಿ ಗ್ರಾಮ ಸೇವಾ ಸಂಘ, ಜನ ಸಂಗ್ರಾಮ ಪರಿಷತ್, ಸರ್ವೋದಯ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರ ಖಾದಿ ಧ್ವಜಗಳನ್ನು ಬದಿಗೆ ಸರಿಸಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ಧ್ವಜಗಳನ್ನು ಬಳಸುವಂತೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಹಾಗೂ ಖಾದಿ ಬಾವುಟ ಬಳಸಲು ಒತ್ತಾಯಿಸಿ ಶುಕ್ರವಾರ ನಡೆದ ಧ್ವಜ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಇಂದು ಸತ್ಯಾಗ್ರಹ ಮಾಡುವ ಪರಿಸ್ಥಿತಿ ಒದಗಿ ಬಂದಿರುವುದು ಶೋಚನೀಯ. ಕನಿಷ್ಟ ಪಕ್ಷ ಸ್ವಾತಂತ್ರ್ಯ ಚಳವಳಿಯ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಧ್ವಜದ ಗೌರವವನ್ನು ರಕ್ಷಿಸಬೇಕಿತ್ತು. ಖಾದಿ ಬಾವುಟಗಳಿಗೆ 19℅ ಜಿಎಸ್‌ಟಿ ವಿಧಿಸಿ, ವಿದೇಶಿ ಧ್ವಜಗಳಿಗೆ ತೆರಿಗೆ ವಿನಾಯತಿ ನೀಡಲಾಗಿದೆ. ಧ್ವಜವನ್ನು ಯಾವುದೇ ವಸ್ತ್ರದಲ್ಲಿ ತಯಾರಿಸಬಹುದೆಂಬ ತಿದ್ದುಪಡಿ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವನ್ನು ಪಾರ್ಲಿಮೆಂಟಿ‌ನ ಮುಂದೆ ಚರ್ಚೆಗೆ ತರದೆ ಏಕಾಏಕಿ ಜಾರಿಗೊಳಿಸಿರುವುದು ಖಂಡನೀಯ ಎಂದರು.

ಈಗ ಸ್ವರ್ಗವಾಸಿಗಳಾಗಿರುವ ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಬದುಕಿದ್ದರೆ ಕಣ್ಣೀರು ಹಾಕುತ್ತಿದ್ದರು. ಭಗವಧ್ವಜದ ಕೆಳಗಡೆ ರಾಷ್ಟ್ರ ಧ್ವಜ ಹಾರಿಸುವ ಪ್ರವೃತ್ತಿ ಬೆಳೆದಿದೆ. ಆದರೆ, ದೇಶದಲ್ಲಿಂದು ಅದೃಷ್ಟವಶಾತ್ ಸ್ವಾತಂತ್ರ್ಯ ಚಳುವಳಿಯ ಜ್ವಾಲೆ ಆರಿಲ್ಲ. ಖಾದಿ ಬಾವುಟ ಭಾರತದ ಹೆಮ್ಮೆ ಎಂದು ಜನ ಸಾಮಾನ್ಯರು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಖಾದಿಯ ಗುಣಮಟ್ಟ ಸರಿಯಿಲ್ಲ ಎಂಬ ಸಬೂಬನ್ನು ಸರ್ಕಾರ ನೀಡುತ್ತಿದೆ. ಸರ್ಕಾರಗಳು ಬಲವಂತವಾಗಿ ಮಾರುತ್ತಿರುವ ಬಾವುಟಗಳು ಒಂದೂ ನಿಯಮಬದ್ಧವಾಗಿಲ್ಲ. ಸರ್ಕಾರದ ಈ ಕೆಟ್ಟ ಬದಲಾವಣೆ ನಾಚಿಕೆ ಗೇಡಿನ ಸಂಗತಿ. ಸರ್ಕಾರ ಯುದ್ಧ ಭೂಮಿಯೊಂದರಲ್ಲಿ ಅಮೃತ ಮಹೋತ್ಸವದ ಉಧ್ಘಾಟನೆ ಮಾಡಿದೆ. ಇದರಿಂದ ಇಡೀ ವಿಶ್ವಕ್ಕೆ ಭಾರತ ಹಿಂಸಾವಾದಿ ರಾಷ್ಟ್ರ ಎಂಬ ಸಂದೇಶ ಹೋಗುತ್ತದೆ. ಭೌದ್ಧ, ಜೈನ, ವಿವೇಕಾನಂದ, ಕಬೀರ, ಬಸವಣ್ಣನನ್ನು ಪಡೆದ ದೇಶವಿದು. ಶಾಂತಿ ಸೌಹಾರ್ದದಲ್ಲಿ ಮಾದರಿಯಾಗಬೇಕು ಎಂದರು.

ಬ್ರಿಟೀಷ್ ಕಾಲದಲ್ಲೂ‌ ಖಾದಿಗೆ ತೆರಿಗೆ ವಿನಾಯಿತಿ‌ ಇತ್ತು. ಇಂದು ಧ್ವಜಕ್ಕೆ ತೆರಿಗೆ ವಿಧಿಸುವ ಮೂಲಕ ಬ್ರಿಟೀಷರು ಮಾಡದೆ ಇರುವ ಘೋರ ಅಪರಾಧವನ್ನು ಸರ್ಕಾರ ಮಾಡಿದೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿವೆ. ಖಾದಿ ಧ್ವಜದಕ್ಕೆ ಜಿಎಸ್‌ಟಿ ವಿಧಿಸಿರುವ ಬಗ್ಗೆ ಗಾಂಧಿ ಹೆಸರೇಳುವ ಪಕ್ಷದವರು ಸೇರಿದಂತೆ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೆ. ಈಗ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಮಾಡುವುದಕ್ಕೆ ಎಲ್ಲರೂ ಸಜ್ಜಾಗಿ ಎಂದು‌ ಕರೆ ನೀಡಿದರು.

ನೂಲು ತೆಗೆಯುವ ಕೆಲಸ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದ್ದು, ಕಷ್ಟಕಾಲದಲ್ಲಿ ಅವರಿಗೆ ಸಹಾಯವಾಗುತ್ತದೆ. ಭಾರತ ದೇಶದ ಮೂಲೆ ಮೂಲೆಗಳಲ್ಲಿ ಸ್ಥಳೀಯ ಹತ್ತಿ ಬಳಸಿ ನೂಲು ತೆಗೆಯುವ ಪರಂಪರೆ ಬೆಳೆದು ಬಂದಿದೆ. ಶ್ರಮ ಜೀವಿ ಹೆಣ್ಣು ಮಕ್ಕಳು ಹೊರ ಹೋಗಿ ಕೆಲಸ ಮಾಡಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಗಾಂಧಿಗೆ ನೂಲುವಿಕೆ ಮತ್ತು ಖಾದಿ ಬಟ್ಟೆ ಮುಖ್ಯವಾಯಿತು. ಮನೆಯಲ್ಲೇ ಕುಳಿತು ನೂಲುವಿಕೆ ಅವಕಾಶದ ಜೊತೆಗೆ ದೇಶ ಮತ್ತು ಪರಿಸರ ಎರಡೂ ಉಳಿಯುತ್ತದೆ ಎಂದರು.

ಯಂತ್ರಗಳನ್ನು ಬಳಸಿ ವಿಪರೀತ ಬೆಂಕಿ ಉರಿಸುವ ಕೆಲಸ ತಂತ್ರಜ್ಞಾನದಿಂದ ಆಗುತ್ತಿದೆ. ಯೂರೋಪ್ ದೇಶಗಳು ಹವಾಮಾನ ವೈಪರೀತ್ಯದಿಂದ ಈಗ ಬೆಂಕಿಯಾಗಿವೆ. ಕೋವಿಡ್ ಸೇರಿದಂತೆ ಪ್ರತೀವರ್ಷ ನೂರು ತರಹದ ಪ್ರಕೋಪಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ನಮ್ಮಲ್ಲೇ ಇದೆ. ಜನ ಸಮುದಾಯಗಳ ಕೈ ಉತ್ಪನ್ನಗಳನ್ನು ಹೆಚ್ಚಿಸುವುದು, ಯಂತ್ರಗಳ ಬಳಕೆ ಕಡಿಮೆ ಮಾಡುವುದು. ಇಡೀ ವಿಶ್ವವಕ್ಕೆ ಕೈ ಉತ್ಪನ್ನಗಳನ್ನು ನೀಡುವ ಸಾಧ್ಯತೆ ನಮ್ಮಲ್ಲಿದೆ. ಗಾಂಧೀ ಜಯಂತಿ ಬಂದಾಗ ಸುಳ್ಳುಭಾಷಣಗಳನ್ನು ಮಾಡಿ ಕಾರು ಹತ್ತಿ ಹೋಗುವ ರಾಜಕಾರಣಿಗಳನ್ನು ಕಳೆದ ಎಪ್ಪತ್ತೈದು ವರ್ಷಗಳಿಂದ ಕಂಡಿದ್ದೇವೆ. ಇಂಥವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಮನೆ ಮೇಲೆ ಧ್ವಜ ಹಾರಿಸದವರಿಗೆ ರೇಶನ್ ಇಲ್ಲ ಎಂಬ ನಿಯಮ ಮಾಡಿದ್ದಾರೆ. ಮೀರಿದಲ್ಲಿ ಪೊಲೀಸರಿಗೆ ದೂರು ನೀಡಿ ಎಂದು ಹೊರ ರಾಜ್ಯಗಳಲ್ಲಿ ರಾಜಕೀಯ ಪಕ್ಷದವರು ಹೇಳುತ್ತಿರುವುದು ದುರಂತ.
ಮುಸಲ್ಮಾನರು, ಕ್ರಿಸ್ತರು ಜೀವಕ್ಕಿಂತ ಹೆಚ್ಚಾಗಿ ರಾಷ್ಟ್ರವನ್ನು, ಧ್ವಜವನ್ನೂ ಪ್ರೀತಿಸುತ್ತಾರೆ. ಆದರೆ, ಧ್ವಜ ಹಾರಿಸದ್ದಕ್ಕೆ ಅವರನ್ನು ಗುರಿ ಮಾಡಿಕೊಳ್ಳಲಾಗಿದೆ. ರಾಷ್ಟ್ರದ ಪ್ರಜೆ ಯಾರೇ ಆಗಿರಲಿ ಅವರನ್ನು ಸಮಾನವಾಗಿ ಕಾಣಬೇಕು. ಅದೇ ರಾಜ ಧರ್ಮ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಈಗ ಜನರನ್ನು ಸಮಾನವಾಗಿ ಕಾಣದೆ ಪ್ರತ್ಯೇಕತಾ ವಾದವನ್ನು ಮಾಡಲಾಗುತ್ತಿದೆ.

– ಪ್ರಸನ್ನ ಹೆಗ್ಗೋಡು

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ನಿರುದ್ಯೋಗ ಹೋಗಲಾಡಿಸಲು ಯಂತ್ರಗಳು ತಯಾರಿಸಿದ ವಸ್ತುಗಳನ್ನು‌ ಬಳಸದೆ, ಬೃಹತ್ ಪ್ರಮಾಣದ ಜನರು ತಯಾರಿಸಿದ ವಸ್ತುಗಳನ್ನು ಬಳಸಬೇಕು. ಇದರಿಂದ ಗಾಂಧಿ‌ ಕಂಡ ಕನಸು ನನಸಾಗುತ್ತದೆ. ಬೃಹತ್ ಜನ ಸಮುದಾಯ ತಯಾರಿಸಿದ ಕೈ ಬಳಕೆ ವಸ್ತುಗಳನ್ನು ಉಪಯೋಗಿಸುವ ಮೂಲಕ ಚಳಚಳಿ ಹುಟ್ಟು ಹಾಕಬೇಕು. ಈಗಿರುವ ಸರ್ಕಾರ ಖಾದಿಯನ್ನೇ ನಂಬಿ‌ ಬದುಕುತ್ತಿದ್ದ ಬಡ ಜನರ ಹೊಟ್ಟೆಯ ಮೇಲೆ ಹೊಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸತ್ಯಾಗ್ರಹದ ರ್ಯಾಲಿ ಪಾದ ಯಾತ್ರೆಯ ಮೂಲಕ ಸ್ವತಂತ್ರ ಚೌಕದಿಂದ ಕೋತಿ ತೋಪಿನಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನಕ್ಕೆ ತಲುಪಿ ಸಮಾರೋಪಗೊಂಡಿತು.

ಧ್ವಜ ಸತ್ಯಾಗ್ರಹದಲ್ಲಿ ಜನ ಸಂಗ್ರಾಮ ಪರಿಷತ್‌ನ ಎನ್ ಎಸ್ ಪಂಡಿತ್ ಜವಾಹರ್, ಆರ್ ವಿ ಪುಟ್ಟ ಕಾಮಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ರವೀಶ್ ಹಾಗೂ ಪ್ರಗತಿಪರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?