publicstory/prajayoga
ತುಮಕೂರು: ಕರುನಾಡ ವಿಜಯಸೇನೆ ಸಂಘಟನೆಯ ಕಾರ್ಯಕರ್ತರು ದೇಶಪ್ರೇಮ ಮತ್ತು ಸೇವಾ ಮನೋಭಾವ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಕರೆ ನೀಡಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರುನಾಡ ವಿಜಯಸೇನೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯ ಕಾರ್ಯಕರ್ತರು ಶಿಸ್ತು, ಪ್ರಾಮಾಣಿಕತೆಯನ್ನು ಬೆಳೆಸಿಕೊಂಡಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಘಟನೆಯವರು ಸಾಮಾಜಿಕ ಕಳಕಳಿಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಲು ಸಂಘಟನೆ ಮುಖ್ಯಸ್ಥರು ಸಲಹೆ, ಮಾರ್ಗದರ್ಶನ ನೀಡಬೇಕು. ಕರುನಾಡ ವಿಜಯಸೇನೆ ರಾಜ್ಯದಲ್ಲಿ ಮಾದರಿ ಸಂಘಟನೆಯಾಗಿ ಬೆಳೆಯಲಿ ಎಂದು ಆಶಿಸಿದರು.
ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಹಾಗೂ ಗ್ರಾಮಾಂತರ ಭಾಗದದಲ್ಲಿ ಕನ್ನಡ ಅಭಿವೃದ್ಧಿ ಮತ್ತು ಸಂಘಟನೆ ಬೆಳವಣಿಗೆಗೆ ಕಾರ್ಯಕರ್ತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕರುನಾಡ ವಿಜಯ ಸೇನೆಯು ಕನ್ನಡ ನಾಡು, ನುಡಿ ಸೇವೆಯ ಉದ್ದೇಶದಿಂದ ಆರಂಭಗೊಂಡಿದೆ. ಸಂಘಟನೆ ಪದಾಧಿಕಾರಿಗಳು ಈ ಆಶಯಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡು ನಾಡ ಸೇವೆ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕರುನಾಡ ವಿಜಯಸೇನೆ ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ ಮಾತನಾಡಿ, ಕರುನಾಡ ವಿಜಯಸೇನೆಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದೇ ಮುಖ್ಯ ಗುರಿಯಾಗಿದೆ ಎಂದರು.
ಮುಂಬರುವ ನವೆಂಬರ್ ತಿಂಗಳಲ್ಲಿ ತುಮಕೂರಿನಲ್ಲಿ ಸುಮಾರು 10 ಸಾವಿರ ಮಂದಿಯನ್ನು ಸೇರಿಸಿ ಕರುನಾಡ ವಿಜಯಸೇನೆಯ ಅದ್ದೂರಿ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್ ಎಚ್.ಎನ್. ಅವರು ಸಂಘಟನೆಯ ವಿವಿಧ ಪದಾಧಿಕಾರಿಗಳಿಗೆ ಅಧಿಕಾರದ ಜವಾಬ್ದಾರಿ ವಿತರಿಸಿದರು.
ಈ ವೇಳೆ ಎಸ್ಪಿ ರಾಹುಲ್‌ಕುಮಾರ್ ಶಹಾಪುರವಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕರುನಾಡ ವಿಜಯಸೇನೆಯ ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಬಿ.ಮಹದೇವಯ್ಯ, ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದನ್ ಪಟೇಲ್, ಜಿಲ್ಲಾಧ್ಯಕ್ಷ ಅರುಣ್ ನೇತೃತ್ವದಲ್ಲಿ ನಗರದ ಟೌನ್‌ಹಾಲ್ ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಸಮಾರಂಭದಲ್ಲಿ ಕರುನಾಡ ವಿಜಯಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಆರ್.ಎಸ್.ಮಹೇಶ್, ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ರಾಂಪ್ರಸಾದ್ ಗೌಡ, ರಾಜ್ಯ ಉಪಾಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ, ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಮುಖಂಡರಾದ ರಂಜನ್, ರಾಜ್ಯ ಪ್ರಧಾನ ಸಂಚಾಲಕ ವಾಸುದೇವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಮೋಹನ್ ಕುಮಾರ್, ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಖಿಲೇಶ್ ಪುತ್ರ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದನ್ ಪಟೇಲ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.