Publicstory/prajayoga
ತುರುವೇಕೆರೆ: ಎಷ್ಟೇ ಕಷ್ಟ ಬಂದರೂ ನಿಭಾಯಿಸುವ ಮೂಲಕ ರೈತಾಪಿಗಳು ಜಮೀನನ್ನು ಮಾರಾಟ ಮಾಡದೆ ಉಳಿಸಿಕೊಳ್ಳಿ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಕಿವಿಮಾತು ಹೇಳಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗ ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ವಿಶ್ವಮಾನವ ಟ್ರಸ್ಟ್ ವತಿಯಿಂದ ಸಮುದಾಯ ಭವನದ ಭೂಮಿ ಪೂಜೆ ಹಾಗೂ ಪ್ರತಿಭಾಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಾಡಿಗೆ ಅನ್ನ ನೀಡುವ ಸಮುದಾಯವಾದ ಒಕ್ಕಲಿಗರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಿದೆ. ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸುವತ್ತ ಚಿತ್ತ ಹರಿಸಬೇಕಿದೆ. ಹಳ್ಳಿಗಾಡಿನಲ್ಲಿರುವ ನಮ್ಮವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ. ತಾಲೂಕು ಒಕ್ಕಲಿಗ ನೌಕರರ ಕ್ಷೇಮಾಭಿವೃದ್ದಿ ಸಂಘ ನಿರ್ಮಿಸಲುದ್ದೇಶಿಸಿರುವ ಸಮುದಾಯ ಭವನವು ಮುಂಬರುವ ವರ್ಷದಲ್ಲಿ ಸಮುದಾಯದ ಸೇವೆಗೆ ಸಮರ್ಪಣೆಯಾಗಲಿ ಎಂದು ಆಶಿಸಿದರು.
ಶಾಸಕ ಮಸಾಲಜಯರಾಮ್ ಮಾತನಾಡಿ, ಪಟ್ಟಣದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ಪುತ್ಥಳಿಗೆ ಗ್ರಾನೈಟ್ ಹಾಕಿಸುವ ಮೂಲಕ ಶೀಘ್ರ ಕಾಯಕಲ್ಪ ಒದಗಿಸಲಾಗುವುದು. ತಾಲೂಕಿನ ಮಾಜಿ ಶಾಸಕ ಬಿ.ಬೈರಪ್ಪಾಜಿಯವರ ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ಕೆ ಕೈ ಜೋಡಿಸುತ್ತೇನೆ. ಒಕ್ಕಲಿಗ ನೌಕರರ ಸಂಘವು ಸಮುದಾಯ ಭವನ ನಿರ್ಮಿಸುತ್ತಿರುವ ಪ್ರದೇಶಕ್ಕೆ ಬಿಜಿಎಸ್ ಬಡಾವಣೆ ಎಂದು ನಾಮಕರಣ ಮಾಡಲಾಗುವುದು. ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ನೀಡಿರುವ ಸಲಹೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಆದಿಚುಂಚನಗಿರಿ ಮಠದ ಶಾಖೆಗಳು ದೇಶ ವ್ಯಾಪಿ ಹಾಗೂ ಹೊರ ರಾಷ್ಟ್ರದಲ್ಲಿಯೂ ಇರುವುದು ಹೆಮ್ಮೆಯ ಸಂಗತಿ. ಮಠವು ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿರುವುದು ಅನನ್ಯವಾದುದು. ತಾಲೂಕು ಒಕ್ಕಲಿಗ ನೌಕರರ ಸಂಘವು ಅಲ್ಪಾವಧಿಯಲ್ಲಿಯೇ ಸಮುದಾಯ ಭವನ ನಿರ್ಮಿಸುವ ಸಂಕಲ್ಪ ತೊಟ್ಟು, ಶ್ರೀ ಗಳವರಿಂದ ಭೂಮಿ ಪೂಜೆ ನೆರವೇರಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.
ಈ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ತಾಲೂಕಿನಲ್ಲಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಧಿಕಾರಿಗಳನ್ನು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಆರ್. ನವೀನ್ ವಹಿಸಿದ್ದರು. ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ, ಮಂಗಳಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ಎಸ್.ರುದ್ರಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಒಕ್ಕಲಿಗ ಸಂಘದ ಅಧ್ಯಕ್ಷ ಧನಪಾಲ್, ಎನ್.ಆರ್.ಜಯರಾಮ್, ಕೊಂಡಜ್ಜಿವಿಶ್ವನಾಥ್, ವಿ.ಎನ್.ನಂಜೇಗೌಡ ಮತ್ತಿತರಿದ್ದರು.