Sunday, March 15, 2026
Google search engine
Home Blog Page 89

ಹೈಕೋರ್ಟ್‌ಗೆ ಸುಳ್ಳು ವರದಿ – ಪಾಲಿಕೆ ವಿರುದ್ಧ ಆಕ್ಷೇಪಣೆ ಸಲ್ಲಿಕೆ

0

Publicstory/prajayoga

ತುಮಕೂರು: ನಗರದಲ್ಲಿ ರಸ್ತೆ‌ ಗುಂಡಿಗಳನ್ನು ಮುಚ್ಚಿರುವುದಾಗಿ ಮಹಾನಗರ ಪಾಲಿಕೆ ಹೈಕೋರ್ಟ್ ಗೆ ಚಿತ್ರಸಹಿತ ವರದಿ ನೀಡಿದೆ. ಇದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ನಗರದಾದ್ಯಂತ ಸಾಕಷ್ಟು ಗುಂಡಿಗಳಿವೆ. ನಾನು ಆಧಾರಸಹಿತವಾಗಿ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ ಎಂದು ವಕೀಲ ರಮೇಶ್ ನಾಯ್ಕ್ ತಿಳಿಸಿದರು.

ಹೈಕೋರ್ಟ್ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿದ್ದು, ಸಾಕ್ಷಿ ಸಮೇತ ಹೋರಾಟ ಮುಂದುವರೆಸುತ್ತೇನೆ.
2021 ನವೆಂಬರ್ ನಲ್ಲಿ ರಸ್ತೆ ಗುಂಡಿ ಮುಚ್ಚುವ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಹೈಕೋರ್ಟ್ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಪಾಲಿಕೆಗೆ ನೋಟಿಸ್ ನೀಡಿ ರಸ್ತೆ ಗುಂಡಿ ಮುಚ್ಚಲು ಕ್ರಮಕೈಗೊಂಡು ವರದಿ ನೀಡುವಂತೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು.  ಮಹಾನಗರ ಪಾಲಿಕೆ ರಸ್ತೆ ಗುಂಡಿ ಮುಚ್ಚಿದ್ದು, ಇನ್ನೂ ಎಲ್ಲಾದರು ಗುಂಡಿಗಳಿದ್ದರೆ 0816-2272200 ಅಥವಾ 9449872599 ಸಂಪರ್ಕಿಸುವಂತೆ ಹೇಳಿದೆ.

ರಸ್ತೆ ಗುಂಡಿಗಳಿರುವುದನ್ನು ಗಮನಕ್ಕೆ ತಂದರೆ ಕೂಡಲೇ ಕ್ರಮಕೈಗೊಳ್ಳುವ ಪಾಲಿಕೆ ಭರವಸೆ ಶ್ಲಾಘನೀಯ. ಆದರೆ, ಹೈಕೋರ್ಟ್ ಗೆ ವರದಿ ಸಲ್ಲಿಸುವ ಮುನ್ನ ಸಮಗ್ರವಾಗಿ ರಸ್ತೆ ಗುಡಿಗಳ ಕುರಿತು ಮಾಹಿತಿ ಕಲೆಹಾಕಿ ಸತ್ಯಾಂಶದ ವರದಿ ಸಲ್ಲಿಸಬೇಕಲ್ಲವೇ? ನಗರದ ಬಹುತೇಕ ಕಡೆಗಳಲ್ಲಿ ರಸ್ತೆಗುಂಡಿಗಳಿವೆ. ಹೀಗಾಗಿ ನಾನು ಅವುಗಳ  ಆಧಾರದಲ್ಲಿ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ. ಸಾರ್ವಜನಿಕರು ಸಹ ಪಾಲಿಕೆ ನೀಡಿರುವ ದೂ.ಸಂ ಸಂಪರ್ಕಿಸಿ ಗುಂಡಿ ಮುಕ್ತ ತುಮಕೂರು ನಗರ ನಿರ್ಮಾಣಕ್ಕೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ : ಶಾಸಕ ಡಿ.ಸಿ.ಗೌರಿಶಂಕರ್

Publicstory/prajayoga

ತುಮಕೂರು ಗ್ರಾಮಾಂತರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ತುಮಕೂರು ಗ್ರಾಮಾಂತರ ಶಾಸಕರ ಆರ್ಥಿಕ ಸಹಕಾರದೊಂದಿಗೆ ಅನುಷ್ಠಾನಗೊಂಡಿರುವ ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿಯ ಕಂಭತ್ತನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧಗಂಗಾ ಘಟಕದ ಉದ್ಘಾಟನೆಯನ್ನು ತುಮಕೂರು ಗ್ರಾಮಾಂತರದ ಶಾಸಕ ಡಿ.ಸಿ.ಗೌರಿಶಂಕರ್ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು,  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ. ಧರ್ಮಸ್ಥಳ ಸಂಸ್ಥೆಯಿಂದ 5 ಲಕ್ಷ ಮತ್ತು ಶಾಸಕರ ಪ್ರದೇಶಾಭಿವೃದ್ಧಿ  ಅನುದಾನದಲ್ಲಿ 5 ಲಕ್ಷ ಒಟ್ಟು 10 ಲಕ್ಷ ರೂ ವೆಚ್ಚದಲ್ಲಿ ಶುದ್ಧಗಂಗಾ ಘಟಕ ನಿರ್ಮಾಣಗೊಂಡಿದ್ದು, ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಕ್ಯಾನ್ ಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುನಿತಾಪ್ರಭು  ಮಾತನಾಡಿ, ತುಮಕೂರು ತಾಲೂಕಿನಲ್ಲಿ ಒಟ್ಟು 12 ಶುದ್ಧಗಂಗಾ ಘಟಕ ರಚನೆ ಮಾಡಿದ್ದು, ಎಲ್ಲಾ ಘಟಕಗಳು ಜನರಿಗೆ ತುಂಬಾ ಅನುಕೂಲವಾಗುವಂತೆ ಉತ್ತಮವಾಗಿ ನಿರ್ವಹಣೆ ಆಗುತ್ತಿವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರೂ ಮತ್ತು ಸಮಾಜ ಸೇವಕರೂ ಆದ ಜಿ.ಪಾಲನೇತ್ರಯ್ಯ,ಕೆರೆ ಅಭಿಯಂತರಾದ ಅರುಣ್, ಶುದ್ಧಗಂಗಾ ಮೇಲ್ವಿಚಾರಕರಾದ ಶಿವರಾಮ್,ವಲಯ ಮೇಲ್ವಿಚಾರಕರಾದ ಹೇಮಂತ್ ಕುಮಾರ್,ಜೆವಿಕೆ ಸಮನ್ವಯಾಧಿಕಾರಿ ಸಿಂಧೂ, ಕೈದಾಳ ರಮೇಶ್, ದೇವರಾಜು, ಶಿವಕುಮಾರಸ್ವಾಮಿ, ನರಸಿಂಹಮೂರ್ತಿ, ರಾದಾರಾಜಣ್ಣ, ಸ್ವಾಮಿಗೌಡ, ಮಂಜಣ್ಣ, ಲೋಕೇಶ್, ಗಂಗಣ್ಣ ಹಾಗೂ ಗ್ರಾಮದ ಮುಖಂಡರು ಸಂಘದ ಸದಸ್ಯರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸರಗಳ್ಳರ ಬಂಧನ ;  ಗ್ರಾಮಸ್ಥರೇ ಕಳ್ಳರನ್ನು ಹಿಡಿದದ್ದು ಹೇಗೆ ಗೊತ್ತಾ?

0

Publicstory/prajayoga

ತುರುವೇಕೆರೆ : ತಾಲೂಕಿನ ಹಾಲುಗೊಂಡನಹಳ್ಳಿಯಲ್ಲಿ ಹಾಡುಹಗಲಲ್ಲೇ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಸಿದು  ಪರಾರಿಯಾಗುತ್ತಿದ್ದ   ಸರಗಳ್ಳರನ್ನು  ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ  ಹಾಲುಗೊಂಡನಹಳ್ಳಿ ಗ್ರಾಮದ ಸುಜಾತ ಎಂಬ ಮಹಿಳೆ ಗ್ರಾಮದ ದೇಗುಲಕ್ಕೆ ತೆರಳುತ್ತಿದ್ದರು. ಆ ವೇಳೆ ಪಲ್ಸರ್ ಬೈಕಿನಲ್ಲಿ ಹಿಂಬಾಲಿಸಿದ ಯುವಕರಿಬ್ಬರು ಮಹಿಳೆಯಿಂದ ಸರ ಕಸಿದು ಪರಾರಿಯಾಗಲು ಮುಂದಾಗಿದ್ದರು.  ಸರ ಕಳೆದುಕೊಂಡ ಮಹಿಳೆ ಕೂಗಿಕೊಂಡ ಹಿನ್ನಲೆಯಲ್ಲಿ ಅಲ್ಲಿಯೇ ಇದ್ದ ಗ್ರಾಮಸ್ಥರಾದ ಕುಮಾರ್ ಮತ್ತಿತರರು ಪಲ್ಸರ್ ಬೈಕ್ ಅಡ್ಡಗಟ್ಟಿ ಇಬ್ಬರು ಸರಗಳ್ಳರನ್ನು ಹಿಡಿದಿದ್ದಾರೆ. ಆನಂತರ ಸರಗಳ್ಳರನ್ನು ದಂಡಿನಶಿವರ ಪೋಲೀಸರಿಗೊಪ್ಪಿಸಿದ್ದಾರೆ.

ಸರಗಳ್ಳರು  ಹಾಸನ ಜಿಲ್ಲೆಯ ದಿಡಗ ಸಮೀಪದ ಹುಲ್ಲೇನಹಳ್ಳಿ ವಾಸಿಗಳಾದ ಯೋಗೀಶ್ (23) ಹಾಗೂ ರಾಜೇಶ್ (23) ಎಂದು   ಪೋಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಕುರಿತಂತೆ ಸಿಪಿಐ. ಗೋಪಾಲನಾಯ್ಕ ಹಾಗೂ ಪಿಎಸ್ಐ ರಾಮಚಂದ್ರ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಸರ ಕಳೆದುಕೊಂಡ ಮಹಿಳೆ ಸುಜಾತ ನೀಡಿದ ದೂರಿನ ಮೇರೆಗೆ ದಂಡಿನಶಿವರ ಪೋಲೀಸರು ಪ್ರಕರಣ ದಾಖಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

1750 ಅಡಿ ತ್ರಿವರ್ಣ ಧ್ವಜ ಪ್ರದರ್ಶನ

Publicstory/prajayoga

ವರದಿ, ಶ್ರೀನಿವಾಸಲು

ಪಾವಗಡ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ಇಂದು ರೋದ್ದಂ ಡಿ ಸಿ ಲಕ್ಷ್ಮೀನಾರಾಯಣ ಗುಪ್ತ ತಯಾರಿಸಿದ 1750 ಅಡಿ ತ್ರಿವರ್ಣ ಧ್ವಜದ ಪ್ರದರ್ಶನ ಕಾರ್ಯಕ್ರಮ ಹೆಲ್ಫ್ ಸೊಸೈಟಿ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. 

ಕಾರ್ಯಕ್ರಮಕ್ಕೆ ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ವಿದ್ಯಾ ಜಾತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶಪ್ರೇಮವನ್ನು ಮೆರೆದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ,        ಡಾ. ಜಿ. ವೆಂಕಟರಾಮಯ್ಯ, ಡಾಕ್ಟರ್ ಜಿ.ವಿ ಶಶಿಕಿರಣ್, ಮಾನಂ ವೆಂಕಟಸ್ವಾಮಿ, ತಹಶೀಲ್ದಾರ್ ವರದರಾಜು, ಕಂದಾಯ ಅಧಿಕಾರಿ ರಾಜಗೋಪಾಲ್, ಸಿ ಐ ಕಾಂತ ರೆಡ್ಡಿ, ಮಾನಂ ಶಶಿ ಕಿರಣ್, ಮುಂತಾದವರು ಹಾಜರಿದ್ದರು.

ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ಕೆ.ಷಡಕ್ಷರಿ

Publicstory/prajayoga

ತಿಪಟೂರು : ಕಳೆದ 8 ವರ್ಷಗಳಿಂದ ಮೋದಿ ಅಲೆ ಎಂದು ಮತ ಹಾಕಿದ ಪಶ್ಚಾತ್ತಾಪಕ್ಕಾಗಿ ಇಂದು ನಿರುದ್ಯೋಗದ ಅಲೆಯಲ್ಲಿ ಯುವಕರು ಕೊಚ್ಚಿಹೊಗಿದ್ದಾರೆ. ಈಗಲಾದರು ಎಚ್ಚೆತ್ತುಕೊಳ್ಳದಿದ್ದರೆ ಭಾರತಕ್ಕೆ ಉಳಿಗಾವಿಲ್ಲ. ಮತ್ತೆ ಮೋದಿ ಎಂದರೆ ಶ್ರೀಲಂಕಾದಂತೆ ಭಾರತವಾಗುತ್ತದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಹೇಳಿದರು.

ತಾಲೂಕಿನ ಮಾದಿಹಳ್ಳಿ ಗ್ರಾಮದಿಂದ ಗಾಂಧಿ ನಗರದಲ್ಲಿ ಸಮಾರೋಪಗೊಂಡ ಸ್ವತಂತ್ರ ಮಹೋತ್ಸವದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೋದಿ ಎಂಬ ಅಲೆಗೆ ದೇಶವು ಈಗಾಗಲೇ ಕೊಚ್ಚಿ ಹೋಗುತ್ತಿದೆ. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಅವರು ಕೆಲಸ ನೀಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ. ಕಾಂಗ್ರೆಸ್ 70 ವರ್ಷದಿಂದ ಏನು ಮಾಡಿತ್ತು ಎಂದು ಕೇಳುವ ಮೊದಲು ಬಿಜೆಪಿ 8 ವರ್ಷದಿಂದ ದೇಶಕ್ಕೆ ಏನು ಮಾಡಿದೆ ಎಂಬುದನ್ನು ತಿಳಿಯಲಿ. ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಮಾರಿದ್ದೇ ಇವರ ಸಾಧನೆ ಎಂದರು.

ಪಠ್ಯಪುಸ್ತಕವನ್ನು ತಿರಚುವ ಜೊತೆಗೆ ಸಂವಿದಾನವನ್ನು ತಿರುಚುವುದೇ ಇವರ ಗುರಿ ಆಗಿದೆ. ಇನ್ನು ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ನಮ್ಮ ಎನ್ಎಸ್‌ಯುಐ ಕಾರ್ಯಕರ್ತರು ಶಿಕ್ಷಣ ಸಚಿವರ ಕಛೇರಿ, ಅವರ ಗೃಹದ ಆವರಣದಲ್ಲೇ ಇದ್ದಿದ್ದರಿಂದ ಅಲ್ಲಿ ಪ್ರತಿಭಟನೆ ಮಾಡಲು ಹೋದರು. ಅದನ್ನೇ ದೊಡ್ಡವಿಷಯವನ್ನಾಗಿ ಮಾಡಿ, ಅವರ ಮೇಲೆ ಗಂಭೀರವಾದ ಪ್ರಕರಣವನ್ನು ಹಾಕಿದರು. ಆದರೆ ಅದೇ ಎಬಿವಿಪಿ ವಿದ್ಯಾರ್ಥಿಗಳು ಅರಗ ಜ್ಞಾನೇಂದ್ರನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಕ್ಕೆ ಅವರಿಗೆ ಏನು ತಿಳಿಯುವುದಿಲ್ಲ ಎಂದು ಹೇಳುತ್ತಾರೆ.  ಈಗಲಾದರು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಹಿಡಿಯುವುದು ಖಚಿತ. ಅಂತೆಯೇ ಅನ್ನಭಾಗ್ಯದ ಅಕ್ಕಿಯನ್ನೂ 10 ಕೆ.ಜಿಗೆ ಏರಿಸುವುದು ಖಚಿತವೆಂದರು.

ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಲೋಕೇಶ್ವರ್, ಸಿ.ಬಿ.ಶಶಿಧರ್, ನ್ಯಾಕೇನಹಳ್ಳಿ ಸುರೇಶ್, ನಿಖಿಲ್ ರಾಜಣ್ಣ, ಅಣ್ಣಯ್ಯ, ಸೈಫುಲ್ಲಾ, ವಿ.ಯೋಗೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ಪ್ರಕಾಶ್, ನಗರಸಭಾ ಸದಸ್ಯರಾದ ಯೋಗೀಶ್, ಮಹೇಶ್, ಮೇಘನ ಸುಜಿತ್, ವಿನುತಾ ತಿಲಕ್ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.

ಒಕ್ಕಲಿಗ ಸಮಾಜ ನಾಡಿಗೆ ಅನ್ನ ನೀಡುವ ಜನಾಂಗ: ನಿರ್ಮಲಾನಂದ ಶ್ರೀ


ತುರುವೇಕೆರೆ: ಪ್ರತಿಯೊಬ್ಬ ಮನುಷ್ಯರೂ ದೇವರು ಕೊಟ್ಟ ಜನ್ಮವನ್ನು ಸಾರ್ಥಕ ಪಡಿಸಿಕೊಂಡು ಭರವಸೆಯಿಂದ ತಮ್ಮ ಬದುಕನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಬೇಕೆಂದು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ದಿ ಸಂಘದ ಸಮುದಾಯ ಭವನದ ಶಂಕುಸ್ಥಾಪನೆ, ಪ್ರತಿಭಾ ಪುರಸ್ಕಾರ ಹಾಗು ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು
ಯಾವುದೇ ಖಾಯಿಲೆಗೆ ಹೆದರದೆ ಭರವಸೆಯಿಂದ ಜೀವನ ಸಾಗಿಸಿ, ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ಚಲನಶೀಲರಾಗಬೇಕು ವಿದ್ಯೆಯನ್ನು ಯಾರು ಕಸಿಯಲಾರರು ಎಂದರು.

ನಾಡಿಗೆ ಅನ್ನ ನೀಡುವ ಸಮಾಜ ಒಕ್ಕಲಿಗ ಜನಾಂಗ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆಬರಬೇಕಾದರೆ ಭದ್ದತೆ ಸತತ ಪರಿಶ್ರಮ ಅಗತ್ಯವನ್ನು ಒತ್ತಿ ಹೇಳಿದರು.

ಶೇ. 40ರಷ್ಟು ಜನ ಇನ್ನು ಪ್ರಗತಿ ಹೊಂದಿಲ್ಲ. ಹಣವನ್ನು ಬಳಸುವ ವಿಧಾನ ಗೊತ್ತಿಲ್ಲದೇ ನಷ್ಟಹೊಂದುವಂತಾಗಬಾರದು, ರೈತರು ತಮ್ಮ ಜಮೀನನ್ನು ಕಳೆದುಕೊಳ್ಳಬಾರದು, ಯಾರಿಗೂ ತೊಂದರೆ ಕೊಡದೇ ಸಮಾಜದ ಒಳಿತಿಗೆ ಶ್ರಮಿಸಿ ಎಂದು ಸಲಹೆ ಇತ್ತರು.

ಶಾಸಕ ಎ.ಎಸ್.ಜಯರಾಂ ಮಾತನಾಡಿ, ಸಮುದಾಯದ ಜೊತೆ ಸದಾ ಇರುತ್ತೇನೆ. ನೌಕರರ ಸಂಘದ ನಿವೇಶನ ಮಂಜೂರು ಮಾಡುವುದು, ಜೊತೆಗೆ ಭವನದ ಕಟ್ಟಡಕ್ಕೆ ಶ್ರಮಿಸುವುದಾಗಿ ತಿಳಿಸಿದರು.

ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಸ್.ರುದ್ರಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೆಶಕ ಹನುಮಂತರಾಯಪ್ಪ ಮಾತನಾಡಿದರು. ಇದೇ ವೇಳೆ ಸಂದರ್ಭದಲ್ಲಿ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು, ನಿವೃತ್ತ ನೌಕರರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ತಾಲ್ಲೂಕು ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಡಾ.ನವೀನ್ ಪ್ರಸನ್ನನಾಥ ಸ್ವಾಮೀಜಿ, ಮಂಗಳಾನಂದನಾಥ ಸ್ವಾಮೀಜಿ, ಪಿ.ಎಚ್.ಧನಪಾಲ್, ಕೊಂಡಜ್ಜಿ ವಿಶ್ವಣ್ಣ, ಎನ್.ಆರ್.ಜಯರಾಮ್, ತಿಪಟೂರು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ ಸೇರಿದಂತೆ ಇನ್ನಿತರರು ಇದ್ದರು. ಎಸ್.ಎನ್.ಶಿವಶಂಕರ್ ಸ್ವಾಗತಿಸಿ ವಂದಿಸಿದರು. ನಂಜೇಗೌಡ ನಿರೂಪಿಸಿದರು.

ಜನತೆಗೆ ಸೌಲಭ್ಯ‌ ಒದಗಿಸುವಲ್ಲಿ ಬಿಜೆಪಿ ಸರ್ಕಾರ ವಿಫಲ: ಎಚ್.ಸಿ.ಹನುಂಮತಯ್ಯ

Publicstory/prajayoga

ತುಮಕೂರು: ಎಐಸಿಸಿ ಮತ್ತು ಕೆಪಿಸಿಸಿ ನಿರ್ದೇಶನದ ಮೇರೆಗೆ ಜಿಲ್ಲಾ ಮತ್ತು, ಬ್ಲಾಕ್ ಕಾಂಗ್ರೆಸ್ ಹಾಗೂ ಗುಬ್ಬಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಣೆಗಾಗಿ ಭಾರತ ಇತಿಹಾಸದ ಸಂದರ್ಭಗಳನ್ನು ಜನತೆಗೆ ಮುಟ್ಟಿಸಲು ಸಮಿತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಸಿ.ಹನುಮಂತಯ್ಯ ಮಾತನಾಡಿ, ಅನೇಕ ನಾಯಕರ ಹೋರಾಟ, ಲಕ್ಷಾಂತರ ಜನಗಳ ಬಲಿದಾನದ ಹಿನ್ನೆಲೆಯಲ್ಲಿ ರಾಷ್ಟ್ರನಾಯಕರು ಸ್ವತಂತ್ರ ತಂದು ಕೊಟ್ಟರು. ನಂತರ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಅನೇಕ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅನೇಕ ರಂಗಗಳಲ್ಲಿ ಪ್ರಗತಿಯನ್ನು ಸಾಧಿಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಯಿತು

ರಾಷ್ಟ್ರ ಕಾಂಗ್ರೆಸ್ ಪಕ್ಷದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ವಿಶ್ವದಲ್ಲೇ ಆರ್ಥಿಕ ಸದೃಢತೆ ಒಂದನೇ ಸ್ಥಾನದಲ್ಲಿತ್ತು .ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ ಮತ್ತು ಶ್ರೀಲಂಕಾದ ಪರಿಸ್ಥಿತಿಗೆ ಬರುವಂತಾಗಿದೆ. ಅನೇಕ ಸೌಲಭ್ಯಗಳನ್ನು ಜನತೆಗೆ ಒದಗಿಸುವಲ್ಲಿ ಬಿಜೆಪಿ ಸರ್ಕಾರ ಅಸಮರ್ಥವಾಗಿದೆ ಮತ್ತು ಕಾಂಗ್ರೆಸ್ ಪಕ್ಷ ಕೊಟ್ಟ ಯೋಜನೆಗಳನ್ನು ರದ್ದುಪಡಿಸಲಾಗಿದೆ. ಆದ್ದರಿಂದ ಇಂತಹ ಅಸಮರ್ಥ ಸರ್ಕಾರವನ್ನು ಕಿತ್ತೊಗೆಯಲು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನಸಾಮಾನ್ಯರ ಜಾಗೃತಿ ಮೂಡಿಸಲು ಈ ಭಾರತ ಸ್ವಾತಂತ್ರ‍್ಯ ಮಹೋತ್ಸವ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯು ಗುಬ್ಬಿ ತಾಲೂಕ್ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಭಾನುವಾರ ಮರಳು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚೇಳೂರು – ತುಮಕೂರು ರಸ್ತೆಯಲ್ಲಿ ಪಾದಯಾತ್ರೆಯನ್ನು ನಡೆಸಿ ತದನಂತರ ಚೇಳೂರು ವೃತ್ತದಲ್ಲಿ ಪಾದಯಾತ್ರೆಯ ಸಭೆಯನ್ನು ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಸೂಚನೆ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು, ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಗುಬ್ಬಿ ವಿಧಾನಸಭಾ ಕ್ಷೇತ್ರದ ವೀಕ್ಷಕರು ಹಾಗೂ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ಗುಬ್ಬಿ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೊನ್ನಗಿರಿ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನಿಂಬೆಕಟ್ಟೆ ಜಯಣ್ಣ ಮತ್ತು ನರಸಿಂಹಯ್ಯ, ಶಂಕರಾನAದ ಸಿಆರ್ ಗೌಡ, ಶ್ರೀನಿವಾಸ್ ಮತ್ತು ಮಹಿಳಾ ಮುಖಂಡರುಗಳು ಉಪಸ್ಥಿತರಿದ್ದರು.

ಶೋಭಾ ಕರಂದ್ಲಾಜೆ ಮುಖ್ಯಂಮತ್ರಿ? ಬಿ.ಸುರೇಶ್ ಗೌಡ ಸ್ಪೋಟಕ ಹೇಳಿಕೆ

Publicstory/prajayoga

ತುಮಕೂರು: ಈಗಿರುವ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ, ಪಕ್ಷ ಯಾವ ನಿರ್ಧಾರಗಳನ್ನು ತೆಗದುಕೊಳ್ಳುತ್ತದೆಯೋ ಅದಕ್ಕೆ ನಾವೆಲ್ಲರೂ ಬದ್ಧ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಮುಖ್ಯಂಮತ್ರಿ ಬದಲಾವಣೆಯ ಕುರಿತು ಸುಳಿವು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದೆ. ಈ ಬಗ್ಗೆ ಅವರೇನೂ ಹೇಳಿಲ್ಲ. ನಾನು ಮುಖ್ಯಮಂತ್ರಿ ಯಾಗುತ್ತೇನೆ ಎಂದು ಅವರು ಏನನ್ನೂ ಹೇಳಿಲ್ಲ. ಅದೆಲ್ಲ ಮಾಧ್ಯಮದವರ ಸೃಷ್ಟಿ. ಅವರು ಬಂದ್ರೆ ಸಂತೋಷ. ಈಗಾಗಲೇ ಅವರು ಕೇಂದ್ರ ಸಚಿವರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಮಿತ್ ಶಾ ಬಳಿ 25 ನಿಮಿಷಗಳ ಕಾಲ ಮಾತನಾಡಿದರಂತೆ. ಅವರು ಮಾತನಾಡಿದ ಸಂದರ್ಭ ಯಾವುದಿತ್ತೋ ಗೊತ್ತಿಲ್ಲ ಎಂದರು.

ಬಿಜೆಪಿಯವರು ಎಂಎಲ್‌ಎ ಚುನಾವಣೆಗೆ ಆರು ತಿಂಗಳಿದ್ದಾಗಲೂ ಮುಖ್ಯಂಮತ್ರಿ ಬದಲಾವಣೆ ಮಾಡಿದ್ದಾರೆ. ಎಂಟು, ಹತ್ತು ತಿಂಗಳಿದ್ದಾಗಲೂ ಬದಲಾವಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕೇಂದ್ರಕ್ಕೆ ಬಿಟ್ಟ ವಿಷಯ.
ಸಚಿವ ಸಂಪುಟ ವಿಸ್ತರಣೆ ಆದರೆ ಆಗಸ್ಟ್ 15ರೊಳಗೆ ಆಗಬಹುದು. ಪಾರ್ಟಿ ಅಧಿಕಾರಕ್ಕೆ ಬರಬೇಕು ಎಂಬ ಸಂಕಲ್ಪ‌ ಇರುವುದರಿಂದ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಮಾತಿನ ಮಿಸೈಲ್: ಎಚ್.ಡಿ.ಕುಮಾರಸ್ವಾಮಿ

Publicstory/prajayoga


ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪಾತ್ರವೇನು? ಅವರು, ಅನ್ಯರು ಹಚ್ಚಿದ ಬೆಂಕಿಯಲ್ಲಿ ಬಿಸಿ ಕಾಯಿಸಿಕೊಳ್ಳುತ್ತಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಟೀಕೆಗೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾತಿನ ಮಿಸೈಲ್ ಬಿಟ್ಟಿದ್ದಾರೆ.

ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ ಜನತಾ ದಳ ಸೆಕ್ಯುಲರ್  ಬಗ್ಗೆ ವಿಷ ಕಾರಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷದ್ದು ಇರಲಿ, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?

ವಿಕಿಪೀಡಿಯಾ ಪ್ರಕಾರ ನಿಮ್ಮ ಜನ್ಮವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ?

ಜೆಡಿಎಸ್ ಸ್ಥಾಪನೆ ಆಗಿದ್ದೇ 1999ರಲ್ಲಿ. ಆಗ ನೀವು ಎಲ್ಲಿದ್ದೀರಿ? ನಿಮಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ನೀವು ಕಾಂಗ್ರೆಸ್ ಸೇರಿದ್ದು 2006ರಲ್ಲಿ. ಹೀಗಾಗಿ ಆ ಪಕ್ಷದ ಪೂರ್ವಾಪರದ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ನಿಮಗೆ?

ಗೆದ್ದಲು ಕಟ್ಟಿಕೊಂಡ ಹುತ್ತಕ್ಕೆ ಹಾವಿನಂತೆ ಸೇರಿಕೊಂಡ ನೀವು, ಸ್ವಾರ್ಥ ಬೀಜಾಸುರನಾಗಿ ಆ ಪಕ್ಷದ ಮೂಲ ನಾಯಕರನ್ನೆಲ್ಲ ನುಂಗುತ್ತಿರುವ ನಿಮ್ಮ ಭಕಾಸುರ ಬಾಯಲ್ಲಿ ಸ್ವಾತಂತ್ರ್ಯ ಹೋರಾಟದ ಪಾರಾಯಣವೇ? ನಿಮಗೆ ಅದು ಬೇರೆ ಕೇಡು.

ಅಧಿಕಾರಕ್ಕಾಗಿ ದೀನ ದಲಿತರು, ಅಲ್ಪಸಂಖ್ಯಾತರ ಹೆಸರು ಬಳಸಿಕೊಂಡು, ಹಾದಿಬೀದಿಯಲ್ಲಿ ಹೈಡ್ರಾಮಾ ಆಡಿ ಕಾಂಗ್ರೆಸ್ ಪಕ್ಷಕ್ಕೆ ವಕ್ಕರಿಸಿಕೊಂಡ ನಿಮಗೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯಾ? ಖಂಡಿತಾ ಇಲ್ಲ.

ನೀವು ಹೇಳಿದ ಕಾಂಗ್ರೆಸ್ ಈಗೆಲ್ಲಿದೆ? ನೀವು ಕದ್ದಮಾಲು ಹ್ಯೂಬ್ಲೆಟ್ ವಾಚು ಕಟ್ಟಿದಾಗಲೇ 1947ರ ಕಾಂಗ್ರೆಸ್ ಗೆ ಸಮಾಧಿ ಕಟ್ಟಿದಿರಿ. 5 ವರ್ಷಗಳ ನಿಮ್ಮ ಆಡಳಿತದಲ್ಲಿ ಆ ನತದೃಷ್ಟ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸಾವಿನ ಮೊಳೆ ಹೊಡೆದಿರಿ, ಲೆಕ್ಕ ಹೇಳಬೇಕೆ ಮಿಸ್ಟರ್ ಸಿದ್ದರಾಮಯ್ಯ?

ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ಪಕ್ಷವನ್ನು ನೀವೆಲ್ಲಾ ಸೇರಿ ಎಂದೋ ಮುಗಿಸಿದಿರಿ. ಅದಕ್ಕೆ ಸಮಾಧಿಯೂ ಕಟ್ಟಿ ತಿಥಿ ಊಟವನ್ನೂ ಮಾಡಿದ್ದೀರಿ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೇಳಿದ ತಲೆ ತಲೆಮಾರುಗಳ ಲೂಟಿ ಕಾಂಗ್ರೆಸ್ ಮಾತ್ರವಷ್ಟೇ ಈಗ ಉಳಿದಿರುವುದು.

ಗಾಂಧಿ ಹೆಸರೇಳಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಹೊಂಚು ಹಾಕುತ್ತಿದ್ದೀರಿ. ಇನ್ನೆಷ್ಟು ತಲೆಮಾರಿಗೆ ಆಗುವಷ್ಟು ಲೂಟಿ ಹೊಡೆಯಬೇಕು ಮಿಸ್ಟರ್ ಸಿದ್ದರಾಮಯ್ಯ?
ಅಧಿಕಾರಕ್ಕಾಗಿ ಸ್ವಾತಂತ್ರ್ಯ ಹೋರಾಟದ ಜಪವೇ? ನೇರವಾಗಿ ಕುರ್ಚಿ ಜಪವನ್ನೇ ಮಾಡಬಹುದಲ್ಲವೇ?

ಅಂದು ದೇಶ ಉಳಿಸಿದ ಕಾಂಗ್ರೆಸ್ ಬೇರೆ, ಈಗ ದೇಶವನ್ನು ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ಸೇ ಬೇರೆ. ಲೂಟಿ ಹೊಡೆಯೋದೇ ದೇಶಪ್ರೇಮವಾ ಮಿಸ್ಟರ್ ಸಿದ್ದರಾಮಯ್ಯ? ನಿಮ್ಮ 5 ವರ್ಷದ ಆಡಳಿತದಲ್ಲಿ ನಿಮ್ಮ ಸುತ್ತಮುತ್ತಲಿನ ಪಟಾಲಂ ಹೊಡೆದ ಕೊಳ್ಳೆಯ ಲೆಕ್ಕ ಕೊಡಲೇ? ಅರ್ಕಾವತಿ ರೀಡು ಹಗರಣ ತೆಗೆದರೆ ಮುಖ ಎಲ್ಲಿಟ್ಟುಕೊಳ್ಳುತ್ತೀರಿ?

ಜೆಡಿಎಸ್ ಇನ್ನೊಂದು ಪಕ್ಷದ ಬಳಿ ಬೆಂಕಿ ಕಾಯಿಸಿಕೊಳ್ಳುವ ಪಕ್ಷ ಎನ್ನುತ್ತೀರಿ. ಆದರೆ, ನಿಮ್ಮನ್ನು ನಂಬಿದ್ದಕ್ಕೆ ನಮ್ಮ ಪಕ್ಷಕ್ಕೆ ನೀವೇ ಬೆಂಕಿ ಹಾಕಿದ್ದು ಮರೆತಿರಾ? ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡು ಆಪ್ತರನ್ನೆಲ್ಲ ಮುಂಬಯಿಗೆ ಸಾಗಹಾಕಿದ ಕತ್ತಲ ಕಿತಾಪತಿ ಮಾಡಿದ್ದು ಯಾರು?

ಇಷ್ಟಕ್ಕೂ ತಾವೇನೂ ಮೂಲ ಕಾಂಗ್ರೆಸ್ಸಿಗರಲ್ಲ. ವಲಸೆ ಹೋಗಿ, ವಿಷಹುಳವಾಗಿ ಅಲ್ಲಿಗೆ ಕರೆದುಕೊಂಡು ಹೋದವರ ಕೈ ಕಚ್ಚಿದ್ದು, ಆಮೇಲೆ ನಿಮ್ಮಿಂದ ಆ ಪಕ್ಷ ಬಿಟ್ಟುಹೋದವರ ಪಟ್ಟಿ ಹನುಮನ ಬಾಲದಂತೆ ಬೆಳೆದದ್ದು ಗೊತ್ತಿಲ್ಲವೆ? ಆಶ್ರಯ ಕೊಟ್ಟ ಮನೆಯಲ್ಲೇ ಗಳ ಇರಿದವರು ಯಾರು?

ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನೀವು ನಡೆಸುತ್ತಿರುವ ಷಡ್ಯಂತ್ರ ಇನ್ನೂ ನಿಂತಿಲ್ಲ, ಇನ್ನೊಬ್ಬರನ್ನು ಸೈಡಿಗೆ ತಳ್ಳಿ ಆಗಲೇ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದೀರಲ್ಲ ಮಿಸ್ಟರ್ ಸಿದ್ದರಾಮಯ್ಯ? ಇದು ಸ್ವಾತಂತ್ರ್ಯ ಸಂಗ್ರಾಮವೋ ಅಥವಾ ಕರ್ಚಿಗಾಗಿ ಹೋರಾಟವೋ?

ನಿಮ್ಮಂತಹ ರಾಜಕೀಯ ಭಸ್ಮಾಸುರರು ಇರುವ ಕಾಂಗ್ರೆಸ್ ಪಕ್ಷದ ಹತ್ತಿರಕ್ಕೆ ಬಂದವರೆಲ್ಲ ಸುಟ್ಟು ಭಸ್ಮವಾಗಿದ್ದಾರೆ. ನಮ್ಮ ಪಕ್ಷ ಇರಲಿ, ಪಕ್ಕದ ಮಹಾರಾಷ್ಟ್ರದಲ್ಲಿ ಶಿವಸೇನೆ ಗತಿ ಏನಾಯಿತು? ಯುಪಿಎ-1 ಸರಕಾರಕ್ಕೆ ಬೆಂಬಲ ಕೊಟ್ಟ ತಪ್ಪಿಗೆ 65 ಕ್ಷೇತ್ರ ಗೆದ್ದಿದ್ದ ಕಮ್ಯುನಿಸ್ಟರು ಈಗೆಲ್ಲಿದ್ದಾರೆ? ನಿಮ್ಮ ಸಹವಾಸ ಮಾಡಿದವರಿಗೆಲ್ಲ ಇದೇ ಗತಿ!

ಅಧಿಕಾರದ ದುರಾಸೆಗೆ ಅನ್ಯಪಕ್ಷಗಳನ್ನು ನಂಬಿಸಿ ಕತ್ತು ಕುಯ್ಯವ ಕಾಂಗ್ರೆಸ್ ಪಕ್ಷ ಎಸಗಿದ ಪಾಪಕ್ಕೆ ಈಗ ಫಲ ಉಣ್ಣುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಗಲಾಡಿ ಸಿದ್ದರಾಮಾಯಣ ಶುರುವಾಗಿದೆ. ಈ ಸೋಗಲಾಡಿ ಸಿದ್ದಯ್ಯನ ಅಸಲಿಯೆತ್ತು ಏನು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಕಠೋರವಾಗಿ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಕುಟುಕಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ : ಶಾಸಕ ಎಂ.ವಿ.ವೀರಭದ್ರಯ್ಯ

Publicstory/prajayoga

– ವರದಿ, ವೆಂಕಟೇಶ್ ನಾಗಲಾಪುರ

ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮೃತ ದ್ವಾರಪ್ಪನ (62) ಕುಟುಂಬಕ್ಕೆ ಶಾಸಕ ಎಂ.ವಿ.ವೀರಭದ್ರಯ್ಯ 5 ಲಕ್ಷ ರೂ. ಗಳ ಚೆಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಧುಗಿರಿ ತಹಸೀಲ್ದಾರ್ ಸುರೇಶ್ ಆಚಾರ್, ಪಿಡಿಒ ಹೊನ್ನೇಶಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್ ,ಉಪಾಧ್ಯಕ್ಷರಾದ ಎಸ್ ಸುರೇಶ್. ಸದಸ್ಯ ಸಿದ್ದಪ್ಪ ಹನುಮಂತಯ್ಯ, ಭಾಗ್ಯಮ್ಮ, ಕೇಬಲ್ ರವಿ ಹಾಜರಿದ್ದರು.