ತುರುವೇಕೆರೆ: ಪ್ರತಿಯೊಬ್ಬ ಮನುಷ್ಯರೂ ದೇವರು ಕೊಟ್ಟ ಜನ್ಮವನ್ನು ಸಾರ್ಥಕ ಪಡಿಸಿಕೊಂಡು ಭರವಸೆಯಿಂದ ತಮ್ಮ ಬದುಕನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಬೇಕೆಂದು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ದಿ ಸಂಘದ ಸಮುದಾಯ ಭವನದ ಶಂಕುಸ್ಥಾಪನೆ, ಪ್ರತಿಭಾ ಪುರಸ್ಕಾರ ಹಾಗು ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು
ಯಾವುದೇ ಖಾಯಿಲೆಗೆ ಹೆದರದೆ ಭರವಸೆಯಿಂದ ಜೀವನ ಸಾಗಿಸಿ, ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ಚಲನಶೀಲರಾಗಬೇಕು ವಿದ್ಯೆಯನ್ನು ಯಾರು ಕಸಿಯಲಾರರು ಎಂದರು.
ನಾಡಿಗೆ ಅನ್ನ ನೀಡುವ ಸಮಾಜ ಒಕ್ಕಲಿಗ ಜನಾಂಗ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆಬರಬೇಕಾದರೆ ಭದ್ದತೆ ಸತತ ಪರಿಶ್ರಮ ಅಗತ್ಯವನ್ನು ಒತ್ತಿ ಹೇಳಿದರು.
ಶೇ. 40ರಷ್ಟು ಜನ ಇನ್ನು ಪ್ರಗತಿ ಹೊಂದಿಲ್ಲ. ಹಣವನ್ನು ಬಳಸುವ ವಿಧಾನ ಗೊತ್ತಿಲ್ಲದೇ ನಷ್ಟಹೊಂದುವಂತಾಗಬಾರದು, ರೈತರು ತಮ್ಮ ಜಮೀನನ್ನು ಕಳೆದುಕೊಳ್ಳಬಾರದು, ಯಾರಿಗೂ ತೊಂದರೆ ಕೊಡದೇ ಸಮಾಜದ ಒಳಿತಿಗೆ ಶ್ರಮಿಸಿ ಎಂದು ಸಲಹೆ ಇತ್ತರು.
ಶಾಸಕ ಎ.ಎಸ್.ಜಯರಾಂ ಮಾತನಾಡಿ, ಸಮುದಾಯದ ಜೊತೆ ಸದಾ ಇರುತ್ತೇನೆ. ನೌಕರರ ಸಂಘದ ನಿವೇಶನ ಮಂಜೂರು ಮಾಡುವುದು, ಜೊತೆಗೆ ಭವನದ ಕಟ್ಟಡಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಸ್.ರುದ್ರಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೆಶಕ ಹನುಮಂತರಾಯಪ್ಪ ಮಾತನಾಡಿದರು. ಇದೇ ವೇಳೆ ಸಂದರ್ಭದಲ್ಲಿ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು, ನಿವೃತ್ತ ನೌಕರರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ತಾಲ್ಲೂಕು ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಡಾ.ನವೀನ್ ಪ್ರಸನ್ನನಾಥ ಸ್ವಾಮೀಜಿ, ಮಂಗಳಾನಂದನಾಥ ಸ್ವಾಮೀಜಿ, ಪಿ.ಎಚ್.ಧನಪಾಲ್, ಕೊಂಡಜ್ಜಿ ವಿಶ್ವಣ್ಣ, ಎನ್.ಆರ್.ಜಯರಾಮ್, ತಿಪಟೂರು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ ಸೇರಿದಂತೆ ಇನ್ನಿತರರು ಇದ್ದರು. ಎಸ್.ಎನ್.ಶಿವಶಂಕರ್ ಸ್ವಾಗತಿಸಿ ವಂದಿಸಿದರು. ನಂಜೇಗೌಡ ನಿರೂಪಿಸಿದರು.