Sunday, March 15, 2026
Google search engine
Home Blog Page 91

ಮಾಧ್ಯಮಗಳಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ: ಪ್ರೊ ಸಿ ಎನ್ ಆರ್

ಜಿ ಎನ್ ರಂಗನಾಥ ರಾವ್ ಅವರ ‘ಆ ಪತ್ರಿಕೋದ್ಯಮ..’ ಕೃತಿ ಬಿಡುಗಡೆ

ಬೆಂಗಳೂರು, ಆಗಸ್ಟ್ 6- ಮಾಧ್ಯಮಗಳಿಗೆ ಸಾಮಾಜಿಕ ಬದ್ಧತೆ ಇರಬೇಕು ಎಂದು ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಹುರೂಪಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಬಹುರೂಪಿಯ ಪ್ರಕಟಣೆ, ಹಿರಿಯ ಪತ್ರಕರ್ತ ಜಿ ಎನ್ ರಂಗನಾಥರಾವ್ ಅವರ ‘ಆ ಪತ್ರಿಕೋದ್ಯಮ..’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಜಿ ಎನ್ ರಂಗನಾಥರಾವ್ ಅವರು ತಮ್ಮ ಕೃತಿಯಲ್ಲಿ ಮಾಧ್ಯಮಗಳು ವೃತ್ತಿ ನಿಷ್ಠತೆಯನ್ನು ಮೆರೆಯಬೇಕಾದ ಅಗತ್ಯತೆಯನ್ನು ದೃಷ್ಟಾಂತಗಳ ಮೂಲಕ ಕಟ್ಟಿಕೊಟ್ಟಿದ್ದಾರೆ., ಆಳುವ ವರ್ಗದ ಓಲೈಕೆ ಮಾಡದೆ, ಕಾರ್ಪೊರೇಟ್ ಸಂಸ್ಥೆಗಳ ಬೆನ್ನು ಬೀಳದೆ, ಸತ್ಯಕ್ಕೆ ಅಪಚಾರವಾಗದೆ ಸಾಮಾಜಿಕ ಬದ್ಧತೆಯನ್ನು ಪ್ರಕಟಿಸುವ ಅಗತ್ಯ ಈ ಹಿಂದಿಗಿಂತಲೂ ಇಂದು ಹೆಚ್ಚಿದೆ ಎಂದರು.

ಜಾಹಿರಾತಿನ ಒತ್ತಡಕ್ಕೆ ಇಂದು ಮಾಧ್ಯಮಗಳು ತನ್ನತನವನ್ನು ಕಳೆದುಕೊಳ್ಳುವ, ಜನಪರ ನಿಲುವಿನಿಂದ ದೂರ ಸರಿಯುವ ನಿಟ್ಟಿನಲ್ಲಿವೆ. ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಜಿ ಎನ್ ರಂಗನಾಥರಾವ್ ಅವರು ತಮ್ಮ ಕಾಲದ ಪತ್ರಿಕೋದ್ಯಮ ಹೇಗೆ ಸತ್ಯನಿಷ್ಠುರತೆಯ ಪರವಾಗಿತ್ತು. ಜಾಹೀರಾತು ಆಮಿಷವನ್ನು ಮೆಟ್ಟಿ ನಿಂತಿತ್ತು ಎನ್ನುವುದನ್ನು ಸಾರಿದ್ದಾರೆ. ಈ ಕೃತಿ ಇಂದಿನ ಪತ್ರಕರ್ತರಿಗೂ, ಅದೇ ಸಮಯದಲ್ಲಿ ವಿದ್ಯಾರ್ಥಿಗಳಿಗೂ ಅಗತ್ಯ ಪಠ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಆರತಿ ಎಚ್ ಎನ್ ಮಾತನಾಡಿ ಆ ಪತ್ರಿಕೋದ್ಯಮ ಹಾಗೂ ಈ ಪತ್ರಿಕೋದ್ಯಮಗಳ ಮಧ್ಯೆ ದೊಡ್ಡ ಕಂದರವಿದೆ. ಇದಕ್ಕೆ ಮುಖ್ಯ ಕಾರಣ ಪತ್ರಿಕೋದ್ಯಮದ ಆದ್ಯತೆಗಳು ಬದಲಾಗಿರುವುದು. ತಂತ್ರಜ್ಞಾನ ಕಾಲಿಟ್ಟ ಮೇಲೆ ಸಮಾಜಮುಖಿ ನೋಟ ಇಲ್ಲವಾಗುತ್ತಿದೆ. ವ್ಯಷ್ಟಿಯ ಎದುರು ಸಮಷ್ಟಿಯ ಆದ್ಯತೆ ಇಲ್ಲವಾಗುತ್ತಿದೆ ಎಂದರು.

ಇ- ಮಾಧ್ಯಮಗಳ ಕಾಲದಲ್ಲಿ ಮನುಷ್ಯತ್ವದ ಮೇಲಿನ ಒತ್ತು ಕಡಿಮೆಯಾಗುತ್ತಿದೆ. ಈ ಕೃತಿಯನ್ನು ಓದಿದಾಗ ಮಾಧ್ಯಮಗಳು ಇಷ್ಟು ಜನಪರವಾಗಿತ್ತೇ ಎಂದು ಅನಿಸದೇ ಇರಲು ಸಾಧ್ಯವಿಲ್ಲ ಎಂದರು.

ಸಾಹಿತಿ, ಬಹುರೂಪಿಯ ಜಿ ಎನ್ ಮೋಹನ್ ಅವರು ಮಾತನಾಡಿ ಜಾಗತೀಕರಣದ ನಂತರ ಮಾಧ್ಯಮ ಇನ್ನೊಂದು ಉದ್ಯಮವಾಗಿ ಬದಲಾಗಿದೆ. ಈ ಮೊದಲಿನ ಮಾಧ್ಯಮಕ್ಕೆ ಸಮಾಜವನ್ನು ಕಟ್ಟುವ ಕನಸುಗಳಿತ್ತು. ಆದರೆ ಕೊಳ್ಳುಬಾಕ ಸಂಸ್ಕೃತಿಗೆ ಉತ್ತೇಜನ ನೀಡಿದ ಜಾಗತೀಕರಣ, ಮಾಧ್ಯಮವನ್ನು ವ್ಯಾಪಾರದ ಇನ್ನೊಂದು ಸರಕನ್ನಾಗಿ ಮಾಡಿದೆ ಎಂದು ವಿಷಾದಿಸಿದರು

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ ಡಿ.ವಿ.ಗುಂಡಪ್ಪ (ಡಿವಿಜಿ) ಅವರು ಪತ್ರಕರ್ತರಿಗಾಗಿ ಹುಟ್ಟುಹಾಕಿದ ಸಂಘ ಇಂದು ರಾಜ್ಯದ ಉದ್ದಗಲಕ್ಕೂ ಅಗಾಧವಾಗಿ ಬೆಳೆದಿದೆ. ಪತ್ರಕರ್ತರ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಗಮನ ನೀಡುವುದಲ್ಲದೆ ಪತ್ರಕರ್ತರ ಸೃಜನಶೀಲ ಕೆಲಸಗಳಿಗೂ ಆದ್ಯತೆ ನೀಡುತ್ತದೆ. ಜಿ ಎನ್ ರಂಗನಾಥ ರಾವ್ ಅವರು ಈ ಸಂಘದ ಹಿರಿಯರಾಗಿದ್ದು ಅವರ ಪತ್ರಿಕೋದ್ಯಮ ಪಯಣದ ಕಥನ ಇಂದಿನ ಪೀಳಿಗೆಗೆ ದಾರಿದೀಪ ಎಂದು ಅಭಿಪ್ರಾಯಪಟ್ಟರು.

ಬಹುರೂಪಿಯ ಶ್ರೀಜಾ ವಿ ಎನ್ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿ ಸಿ ಲೋಕೇಶ್, ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಜಿ.ಎನ್.ರಂಗನಾಥ ರಾವ್ ಅವರಿಗೆ ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನಿಸಲಾಯಿತು.

ಪುಸ್ತಕದ ವಿವರ:

ಕೃತಿ: ಆ ಪತ್ರಿಕೋದ್ಯಮ..
ಜಿ ಎನ್ ರಂಗನಾಥ ರಾವ್
ಪ್ರಕಾಶನ: ಬಹುರೂಪಿ
ಬೆಲೆ: 300 ರೂ
ಸಂಪರ್ಕ: 70191 82729

ಸ್ವಾತಂತ್ರ್ಯ ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ಯುವಜನರ ಮೇಲಿದೆ : ಡಿಡಿಪಿಯು

Publicstory/prajayoga

ತುಮಕೂರು: ಹಲವರ ತ್ಯಾಗ, ಬಲಿದಾನದಿಂದ ಗಳಿಸಿದ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಯುವಜನರ ಮೇಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಯು) ಗಂಗಾಧರ್ ಅಭಿಪ್ರಾಯಪಟ್ಟರು.

ನಗರದ ಎಂಪ್ರೆಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ವತಿಯಿಂದ  ಸ್ವಾತಂತ್ರದ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಎಲ್ಲರೂ ಶಾಂತಿಯುತ ಜೀವನ ನಡೆಸಬೇಕೆಂದರೆ ಯುವಜನರು ಹೆಚ್ಚು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಮುನ್ನೆಡೆಯಬೇಕಾಗಿದೆ ಎಂದರು.

ಅಂದು ನಮ್ಮ ಹಿರಿಯರು ಮಾಡಿದ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದ ಸೇವೆಯಿಂದಾಗಿ ಇಂದು ದೇಶ ಅಭಿವೃದ್ದಿ ಪಥದತ್ತ ಸಾಗಿ ಬಂದಿದೆ. ಪರೋಪಕಾರ ಇದಂ ಶರೀರಂ ಎಂಬ ನುಡಿಯಂತೆ ನಮ್ಮ ಪೂರ್ವಜರು ನಡೆದುಕೊಂಡ ಪರಿಣಾಮ ಇಂದು ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ. ಈ ಗುಣವನ್ನು ಯುವಜನರು ಮೈಗೂಡಿಸಿ ಕೊಂಡು ಮುನ್ನೆಡೆಯಬೇಕಾಗಿದೆ ಎಂದು  ತಿಳಿಸಿದರು.

ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣೆ ಪಡೆಯ ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ ಮಾತನಾಡಿ, ಭಾರತದ ಸ್ವಾತಂತ್ರದ 75ನೇ ಅಮೃತಮಹೋತ್ಸವದ ಅಂಗವಾಗಿ ನಮ್ಮ ಸಂಸ್ಥೆಯಿಂದ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ರಾಷ್ಟ್ರ ಪ್ರೇಮ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳು ಹೇಗೆ ರಾಷ್ಟ್ರ ದ್ವಜ, ರಾಷ್ಟ್ರಗೀತೆಗೆ ಗೌರವ ನೀಡಬೇಕು. ಇವುಗಳ ರಚನೆಯ ಹಿಂದಿನ ಮಹತ್ವ ಮತ್ತಿತರರ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಮುಂದಿನ 25 ವರ್ಷಗಳ ಕಾಲ ನಮ್ಮ ಅಭಿಯಾನ ನಿರಂತರವಾಗಿ ನಡೆಯುತ್ತದೆ. ಆ ಮೂಲಕ ದೇಶದ ಅಭಿವೃದ್ದಿಯಲ್ಲಿ ಯುವಜನರನ್ನು ತೊಡಗಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವಾಗಿದೆ ಎಂದರು.

ಎಂಪ್ರೆಸ್ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲ ಷಣ್ಮುಖಪ್ಪ ಮಾತನಾಡಿ, ಭಾರತದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರದ ಅರ್ಥಿಕ, ಸಾಮಾಜಿ, ಶೈಕ್ಷಣಿಕ, ಕೈಗಾರಿಕಾ ಮತ್ತು ಔದ್ಯೋಗಿಕ ಬೆಳವಣಿಗೆಯನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಪ್ರತಿಯೊಂದಕ್ಕೂ ವಿದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ ಇಂದು ಸ್ವಾವಲಂಬನೆ ಸಾಧಿಸಿ, ವಿಶ್ವದ 6ನೇ ಅತಿ ದೊಡ್ಡ ಅರ್ಥಿಕ ವ್ಯವಸ್ಥೆಯನ್ನು ಹೊಂದಿದೆ. 2030ರ ವೇಳೆಗೆ ದೇಶ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗೆ ಕಾರಣ ಇದುವರೆಗೂ ದೇಶವನ್ನು ಮುನ್ನೆಡೆಸಿದ ಮಹನೀಯರ ಸ್ವಾರ್ಥರಹಿತ ಸೇವೆ. ಹಾಗಾಗಿ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನೆಡೆಯೋಣ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಬಸವರಾಜು ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಮ್ಮ ಸಂಸ್ಥೆವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ.ಇಂದಿನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಹೀಗೆ ಮೂರು ವಿಭಾಗಗಳಲ್ಲಿ ದೇಶಭಕ್ತಿ ಗೀತೆ ಗಾಯನ, ಭರತ ನಾಟ್ಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇಂದು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಆಗಸ್ಟ್ 13ರಂದು ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ನಡೆಯುವ ದೇಶಕ್ಕಾಗಿ ನಡಿಗೆ ವಾಕ್ಥಾನ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಅಲ್ಲದೆ ವಾಕಥಾನ್ನಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಟೀಶರ್ಟ್ ಜೊತೆಗೆ ಪ್ರಶಂಶನಾ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯ ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮನೋಹರ್, ಖಜಾಂಚಿ ಸಂದೀಪಗೌಡ, ಬಿ.ಎಸ್. ಮಹೇಶ್  ಮತ್ತಿತರರು ಉಪಸ್ಥಿತರಿದ್ದರು.

ಸಿದ್ದರಾಮೋತ್ಸವದಿಂದ ನಮಗೆ ಬೆಂಬಲ ಬಂದಿದೆ : ಡಾ.ಜಿ.ಪರಮೇಶ್ವರ್

Publicstory/prajayoga

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರ 71ನೇ ಹುಟ್ಟುಹಬ್ಬವನ್ನು ನಗರದ ಹೆಗ್ಗೆರೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಸರಳ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಅನುಕೂಲವಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ದಾವಣಗೆರೆಯಲ್ಲಿ ಸೇರಿದ್ದರು. ಹಾಗಾಗಿ ನಮಗೂ ಒಂದು ರೀತಿಯ ಬಲ ಬಂದಿದೆ ಎಂದು ಹೇಳಿದರು.

ನನಗೆ ಇಂದಿಗೆ 71 ವರ್ಷ ತುಂಬಿದೆ. ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದೇನೆ. ಅಭಿಮಾನಿಗಳು, ಕಾರ್ಯಕರ್ತರು ಮನೆಗೆ ಬಂದು ಶುಭಾಶಯ ಕೋರಿದ್ದಾರೆ ಎಂದರು.

ಇಂದು ಯಾರ ಕೈಗೂ ಸಿಗದೆ ತಪ್ಪಿಸಿಕೊಂಡು ಹೋಗಲು ಪ್ಲಾನ್ ಮಾಡಿದ್ದೆ. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಬಾರದು ಎಂಬ ಉದ್ದೇಶದಿಂದ ಇಲ್ಲಿಯೇ ಉಳಿದುಕೊಂಡಿದ್ದೇನೆ ಎಂದರು.

ನನಗೆ ಸಿದ್ದರಾಮೋತ್ಸವ ಮಾದರಿಯಲ್ಲಿ ಅಷ್ಟೊಂದು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಆಸಕ್ತಿ ಇಲ್ಲ. ಹಾಗೆಯೇ ಸಿದ್ದರಾಮಯ್ಯನವರಿಗೂ ಆಸಕ್ತಿ ಇರಲಿಲ್ಲ. ಅವರ ಅಭಿಮಾನಿಗಳು ಸೇರಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಕೂಡಾ ಸಮಾವೇಶ ಮಾಡಬಹುದು. ರಾಜಕೀಯವಾಗಿ ಅದು ಸಹಜ ಬೆಳವಣಿಗೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದು ಸ್ವಾಭಾವಿಕ ಬೆಳವಣಿಗೆ ಎಂದ ಅವರು,  ನಾನು ರಾಜಕೀಯವಾಗಿ ಇನ್ನೂ ಎತ್ತರಕ್ಕೆ ತಲುಪುವ ಕಾಲನ್ನು ಈಗಲೇ ಹೇಳಲು ಆಗುವುದಿಲ್ಲ. ಯಾವುದನ್ನೂ ಕೂಡ ಊಹೆ ಮಾಡುವುದಕ್ಕಾಗಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಭಿನಂದನೆ ಸಲ್ಲಿಸಿ ಮಾತನಾಡಿದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜೆ. ಕುಮಾರ್, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಪಾತ್ರ ಬಹಳ ದೊಡ್ಡದಿದೆ. ಹಾಗೆಯೇ ರಾಜ್ಯ ಮತ್ತು ಜಿಲ್ಲೆಗೆ ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಿಂದ ಮತ್ತೆ ಪರಮೇಶ್ವರ್ ಅವರು ಜಯಭೇರಿ ಭಾರಿಸಿ ಕಳೆದ ಬಾರಿಗಿಂತ ಈ ಬಾರಿ ಇನ್ನು ಉನ್ನತ ಸ್ಥಾನವನ್ನು ಅಲಂಕರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಚಂದ್ರಶೇಖರಗೌಡ, ಜಾಕೀರ್ ಪಾಷ, ಪರ್ವೀಜ್, ಉಮೇಶ್, ದರ್ಶನ್, ಸೋವುದ್, ಜಯಂತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

0

Publicstory/prajayoga

ತುಮಕೂರು:  ತುರುವೇಕೆರೆ ತಾಲೂಕು ಕೊಂಡಜ್ಜಿ ಬಳಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ.

ಬುಧವಾರ ರಾತ್ರಿ ಮದುವೆ ಸಮಾರಂಭಕ್ಕೆ ತೆರಳುವಾಗ ಕೊಂಡಜ್ಜಿ ಕ್ರಾಸ್ ಬಳಿ ತಿಪಟೂರು ತಾಲೂಕಿನ ಗಡಬನಹಳ್ಳಿ ಗ್ರಾಮದ ಪುಟ್ಟ ಸಿದ್ದಯ್ಯ ಮತ್ತು ಪಟೇಲ್ ಕುಮಾರಸ್ವಾಮಿ ಹರಿಯುತ್ತಿದ್ದ ನೀರಿನಲ್ಲಿ‌ ಕಾರಿನ ಸಮೇತ ಕೊಚ್ಚಿ ಹೋಗಿದ್ದರು. ಈ ವೇಳೆ ಪುಟ್ಟ ಸಿದ್ದಯ್ಯ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಓಮಿನಿ ಕಾರಿನ ಸಮೇತ ಪಟೇಲ್ ಕುಮಾರಸ್ವಾಮಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಈಗ ಅವರ ಮೃತ ದೇಹ ಪತ್ತೆಯಾಗಿದೆ.

ಕೊಚ್ಚಿ ಹೊಗಿದ್ದ  ವ್ಯಕ್ತಿ ಪಟೇಲ್ ಕುಮಾರ ಸ್ವಾಮಿಗಾಗಿ ಎನ್​ಡಿಆರ್​ಎಫ್​, ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರುವೇಕೆರೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು.  ಆದರೆ, ಇಂದು ಅವರ ಮೃತದೇಹ ಪತ್ತೆಯಾಗಿದೆ.

ಕೃಷಿ ಹೊಂಡಕ್ಕೆ ಬಿದ್ದು ವೃದ್ಧೆ ಸಾವು

0

Publicstory/prajayoga

ತುರುವೇಕರೆ: ತಾಲೂಕಿನ ದಂಡಿನಶಿವರ ಹೋಬಳಿಯ ಹಟ್ಟಿಯಹಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ವೃದ್ದೆಯೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗೌರಮ್ಮ (77)  ಮೃತ ದುರ್ದೈವಿ. ರಾಸುಗಳಿಗೆ ಮೇವು ತರಲು ತೋಟಕ್ಕೆ ಹೋಗಿದ್ದರು. ಕೃಷಿ ಹೊಂಡದ ಪಕ್ಕ ಬೆಳೆದಿದ್ದ ಹುಲ್ಲು ಕೊಯ್ಯುವಾಗ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ.

ಮಧ್ಯಾಹ್ನವಾದರೂ ವೃದ್ಧೆ ಮನೆಗೆ ಬಾರದೆ ಇದ್ದುದ್ದನ್ನು ಗಮನಿಸಿ ಮನೆಯವರು ತೊಟಕ್ಕೆ ತೆರಳಿ ನೋಡಿದಾಗ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಸಿದ್ದಾರೆ.

ನೀರು ಮಿಶ್ರಿತ ಪೆಟ್ರೋಲ್ : ವಾಹನ ರಿಪೇರಿ ಹೊಣೆ ಹೊತ್ತ ಬಂಕ್ ಮಾಲೀಕ

Publicstory/prajayoga

ಪಾವಗಡ: ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಮೇಲೆ  ತುಂಬಿ ಹರಿದ ನೀರು ಪೆಟ್ರೋಲ್ ಟ್ಯಾಂಕ್ ಒಳಗೆ ಮಿಶ್ರಿತವಾಗಿರುವ ಘಟನೆ ತಾಲೂಕಿನ ವೈ.ಎನ್ ಹೊಸಕೋಟೆಯ ಶ್ರೀ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. 

ಗ್ರಾಹಕರೋಬ್ಬರು ಕ್ಯಾನ್ ನಲ್ಲಿ ಪೆಟ್ರೋಲ್ ತುಂಬಿಸಿ ಕೊಂಡಾಗ ಈ ಘಟನೆ ಬೆಳಕಿಗೆ ಬಂದಿರುವುದಾಗಿ  ತಿಳಿದು ಬಂದಿದೆ. ವಿಷಯಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ನ  ಮಾಲೀಕರು ಮಾತನಾಡಿ, ಹೆಚ್ಚಿನ ಮಳೆಯಿಂದಾಗಿ ಪೆಟ್ರೋಲ್ ನ ಜೊತೆ ನೀರು ಮಿಶ್ರಣವಾಗಿದ್ದು, ತಮ್ಮ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡಿರುವ ಗ್ರಾಹಕರು, ಬಂದು ಕೇಳಿದರೆ ಹಣ ವಾಪಸ್ ಮಾಡುವುದಾಗಿ, ಹಾಗೂ ಪೆಟ್ರೋಲ್ ನಿಂದಾಗಿ ಗ್ರಾಹಕರ  ವಾಹನಕ್ಕೆ ಏನಾದರೂ ಸಮಸ್ಯೆ ಉಂಟಾಗಿದ್ದರೆ ಅಂತ ಗಾಡಿಯನ್ನು ಸಹ ರಿಪೇರಿ ಮಾಡಿಸಿಕೊಡದಾಗಿ ತಿಳಿಸಿದರು.     
ಸ್ಥಳಕ್ಕೆ ಆಗಮಿಸಿದ  ವೈಎನ್ ಹೊಸಕೋಟೆಯ ಪೊಲೀಸರು ಪೆಟ್ರೋಲ್ ಬಂಕನ್ನು ತಾತ್ಕಾಲಿಕವಾಗಿ ಮುಚ್ಚಿಸಿದರು. 

ಪುನೀತ್ ರಾಜ್‌ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ತೀರ್ಮಾನ

0

Publicstory/prajayoga

ಬೆಂಗಳೂರು : ಕರ್ನಾಟಕದ ದೊಡ್ಮನೆ ಹುಡುಗ, ಮೇರು ಪ್ರತಿಭೆ, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನ.1 ರಂದು ಪ್ರಧಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ನಲ್ಲಿ ಕರ್ನಾಟಕ ಚಲನಚಿತ್ರ ಮಂಡಳಿ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ‘ಪುನೀತ ನಮನ’ ಕಾರ್ಯಕ್ರಮವನ್ನು  ಮಂಗಳವಾರ  ಆಯೋಜಿಸಿದ್ದ ವೇಳೆ ಈ ನಿರ್ಧಾರವನ್ನು ಪ್ರಕಟಿಸಿದರು.

ನವೆಂಬರ್ 1 ರಂದು ಪ್ರಶಸ್ತಿ ಪ್ರಧಾನ ಮಾಡಲು ತೀರ್ಮಾನಿಸಲಾಗಿದೆ. ಅಪ್ಪು ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಬಾವರಾಜ ಬೊಮ್ಮಾಯಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಡಬ ಬಳಿ ಯುವಕನ ಶವ ಪತ್ತೆ : ಕೊಲೆ ಮಾಡಿರುವ ಶಂಕೆ

0

Publicstory/prajayoga

ಗುಬ್ಬಿ: ತಾಲ್ಲೂಕಿನ ಕಡಬ ಗ್ರಾಮದ ವಿದ್ಯುತ್ ಉಪಸ್ಥಾವರ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ಯುವಕನ ಶವ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆಯನ್ನು ಗುಬ್ಬಿ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ನಾರಸಿಹಳ್ಳಿ ಗೊಲ್ಲರಹಟ್ಟಿ ಯುವಕ ಯೋಗೀಶ್ (26) ಶವವಾಗಿ ಪತ್ತೆಯಾಗಿದ್ದು,
ಗುಬ್ಬಿ ತಾಲ್ಲೂಕಿನ ಕಡಬ ಸಮೀಪದ ತಿಮ್ಮೇಗೌಡನಹಟ್ಟಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕಳೆದ ನಾಲ್ಕೈದು ದಿನದಿಂದ ತಂಗಿದ್ದ ಮೃತ ಯುವಕನ ಶವ ಕಡಬ ಸಮೀಪ ದೊರಕಿದೆ. ಮೃತನ ಬೈಕ್ ಸಹ ಶವ ಪತ್ತೆಯಾದ ಸ್ಥಳದಲ್ಲೇ ನಿಂತಿದೆ. ಹಲ್ಲೆ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ಸಿಪಿಐ ನದಾಫ್ ನೇತೃತ್ವದ ತಂಡ ತೀವ್ರ ತನಿಖೆ ಆರಂಭಿಸಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದ್ದಾರೆ.

ಮಹಿಳಾ ಸಂಘಗಳಿಗೆ 500 ಕೋಟಿ ಸಾಲ

Publicstory


ಗುಬ್ಬಿ: ಸಂಜೀವಿನಿ ಯೋಜನೆಯಿಂದ 33 ಸಾವಿರ ಮಹಿಳಾ ಸಂಘಗಳಿಗೆ 5೦೦ ಕೋಟಿ ಸಾಲ ನೀಡುವುದಾಗಿ ಸರ್ಕಾರದ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಮುಖ್ಯ ಮಹಾ ಪ್ರಬಂಧಕ ದೇಬಾನಂದ ಸಾಹೂ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ವಲಯ ಕಛೇರಿ ತುಮಕೂರು, ಐಡಿಎಫ್ ಸಂಸ್ಥೆ ಹಾಗೂ ಗ್ರಾಮ್ಸರ್ವ್ ಪ್ರೈ .ಲಿ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿಸಾಲ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕೆನರಾ ಬ್ಯಾಂಕ್ನ್ನು ಸರಕಾರ ರಾಜ್ಯ ನೋಡಲ್ ಬ್ಯಾಂಕ್ ಆಗಿ ನೇಮಿಸಿಕೊಂಡಿರುವುದರಿಂದ ರೈತರಿಗೆ ನಮ್ಮ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ ಎಂದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ಪ್ರಬಂಧಕ ಬಿ.ರವಿ ಮಾತನಾಡಿ, ಕೆನರಾ ಬ್ಯಾಂಕ್ 19 ಲಕ್ಷ ಕೋಟಿ ವ್ಯವಹಾರ ಮಾಡುತ್ತಿದೆ. ದೇಶದ ಅತಿ ದೊಡ್ಡ ಬ್ಯಾಂಕ್ಗಳಲ್ಲಿ 3ನೇ ಸ್ಥಾನದಲ್ಲಿ ಕೆನರಾ ಇದ್ದು, ಮುಂದಿನ ಮಾರ್ಚ್ ಕೊನೆಗೆ 2ನೇ ಸ್ಥಾನಕ್ಕೆ ಹೋಗುವ ಗುರಿಯನ್ನು ನಮ್ಮ ಬ್ಯಾಂಕ್ ಹೊಂದಿದೆ. ಗುಬ್ಬಿ ಶಾಖೆಯಿಂದ ಸಾಂಕೇತಿಕವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಇಂದು 75 ಲಕ್ಷ ಮಂಜೂರು ಮಾಡಲಾಗಿದೆ. 46 ಕೋಟಿ ಸಾಲವನ್ನು ಜಂಟಿ ಬಾಧ್ಯತ ಗುಂಪಗಳಿಗೆ ಗುಬ್ಬಿ ಶಾಖೆಯಲ್ಲಿ ಐಡಿಎಫ್ ಸಹಕಾರದಿಂದ ವಿತರಣೆ ಮಾಡಲಾಗಿದೆ. ಪ್ರತಿಯೊಬ್ಬ ರೈತರು ನಮ್ಮ ಶಾಖೆಯಲ್ಲಿ ದೊರೆಯುವ ಜೀವ ವಿಮೆಗಳನ್ನು ಮಾಡಿಸಿಕೊಂಡು ಆಪತ್ತುಗಳು ಸಂಭವಿಸಿದಾಗ ಉಪಯೋಗಕ್ಕೆ ಬರುತ್ತವೆ ಎಂದರು. ಜಂಟಿ ಬಾಧ್ಯತ ಗುಂಪುಗಳಿಗೆ ನೇರವಾಗಿ ನಾವೇ ಹೋಗಿ ಸಾಲ ನೀಡಲು ಆಗದೇ ಇರುವುದಕ್ಕೆ ಐಡಿಎಫ್ ಸಂಸ್ಥೆಯ ಸಹಾಕಾರ ಪಡೆದು ತುಮಕೂರು ಜಿಲ್ಲೆಯಲ್ಲಿ ತುಮಕೂರು, ಗುಬ್ಬಿ ತಾಲೂಕುಗಳಲ್ಲಿ ಸಾಲ ನೀಡುತ್ತಿದ್ದೇವೆ ಇದರ ಸದುಪಯೋಗವನ್ನು ರೈತರು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಐಡಿಎಫ್ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ಪಡೆದ ದೀಪಕ್ ಅವರ ತಂದೆ ಹೆಚ್ಐವಿ ಗೆ ತುತ್ತಾಗಿ ಸಾವನ್ನಾಪ್ಪಿದ ಸಮಯದಲ್ಲಿ ಮುಂದೆ ವಿದ್ಯಾಭ್ಯಾಸ ಮಾಡಲು ಶಕ್ತಿಯಿಲ್ಲದ ಸಮಯದಲ್ಲಿ ಐಡಿಎಫ್ ಸಂಸ್ಥೆ 3 ಲಕ್ಷ ವಿದ್ಯಾರ್ಥಿ ವೇತನ ನೀಡಿದ್ದರಿಂದ ನನ್ನ ಮೋಮ್ಮಗ ಮೆಕ್ಯಾನಿಕಲ್ ಇಂಜಿನಿಯರ್ ಮುಗಿಸಿ ಇಂದು ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿರುವುದಕ್ಕೆ ಐಡಿಎಫ್ ಸಂಸ್ಥೆ ಕಾರಣ ಎಂದು ಅನಿಸಿಕೆ ವ್ಯಕ್ತ ಪಡಿಸಿದರು.
ಐಡಿಎಫ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಎನ್ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಐಡಿಎಫ್ ಸಂಸ್ಥೆಯು ಆರ್ಥಿಕ ಸೇವೆ ಒದಗಿಸುವ ಜೊತೆಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿದೆ. ರೈತರು ಪಡೆದ ಸಾಲವನ್ನು ಒಳ್ಳೆಯ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದರು.
ಇದೆ ಸಂದರ್ಭದಲ್ಲಿ ಕೃಷಿಕರಾದ ಸಿಎಸ್ ಪುರದ ಸಿ.ಎಂ.ಕೃಷ್ಣಮೂರ್ತಿ, ಎಂಹೆಚ್ ಪಟ್ಟಣ ಆಶೋಕ್, ಹಾಲತಿ ರವಿಕಿರಣ್ ಹೆಚ್.ಜಿ, ಚಿಕ್ಕಹಳ್ಳಿ ವೀರಭದ್ರಯ್ಯ, ಸೋರೇಕಾಯಿಪೆಂಟೆ ಗೌರಮ್ಮ, ಹಲಸಿನನಾಗೇನಹಳ್ಳಿ ಹೆಚ್.ಎಸ್.ಪರಮೇಶ್, ಹುಳ್ಳೇನಹಳ್ಳಿ ಶ್ರೀನಿವಾಸ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ್ಸರ್ವ್ ಪ್ರೈ.ಲಿ ಮುಖ್ಯ ಕಾರ್ಯಾಚರಣಾ ಅಧಿಕಾರಿ ಬಸವರಾಜು ಆರ್ ಹಿರೇಮಠ, ಗುಬ್ಬಿ ಶಾಖೆಯ ವ್ಯವಸ್ಥಾಪಕ ದೀಪಕ್, ಕ್ಷೇತ್ರಾಧಿಕಾರಿ ಜಯಶ್ರೀ, ಯೋಜನಾಧಿಕಾರಿ ಮು.ಲ.ಕೆಂಪೇಗೌಡ, ಆರ್.ಆರ್.ದೇಸಾಯಿ, ಎಂ.ಎನ್.ಕುಂಬಯ್ಯ, ಗುರುದತ್, ಕರುಣಾಕರ್, ಸಂತೋಷ್ ಹಾಗೂ ರೈತರು, ಸಿಬ್ಬಂದಿ ಮತ್ತಿತರರು ಇದ್ದರು.

ಮತದಾರರ ಗುರುತಿನ ಚೀಟಿಗೆ ಅಧಾರ್ ಜೋಡಣೆ : ತಹಶಿಲ್ದಾರ್

0

PublicStory/prajayoga

ತಿಪಟೂರು: ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಲು     ತಿಪಟೂರು ತಾಲೂಕು ಗ್ರೇಡ್ 2 ತಹಶಿಲ್ದಾರ್ ಜಗನ್ನಾಥ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. 

ನಗರದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ,  ಚುನಾವಣೆಗಳಲ್ಲಿ (Election) ಮತದಾರರ ಗುರುತಿನ ಚೀಟಿ (Identity News), ನೋಂದಣಿ (Register) ದುರುಪಯೋಗ ತಡೆಯೋಕೆ, ಮತದಾರರ ನೋಂದಣಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ತಾಲೂಕಿನಲ್ಲಿ   ಮತದಾರ ಗುರುತಿನ ಚೀಟಿಗೆ ಆದಾರ್ ಜೋಡಣೆ ಮಾಡಲು  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಚುನಾವಣಾ ಆಯೋಗದ (Election Commission) ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯಾಲಯ ಸಚಿವಾಲಯ ಪ್ರಜಾ ಪ್ರತಿನಿಧಿ ಕಾಯ್ದೆ-1950 ಮತ್ತು 51ರ ಕಾಯ್ದೆಗಳಿಗೆ, ಚುನಾವಣಾ ಕಾನೂನುಗಳ ತಿದ್ದುಪಡಿ ಕಾಯ್ದೆ-2021ರ ಅನ್ವಯ ಬದಲಾವಣೆ ತಂದಿದೆ. ಆಗಸ್ಟ್ 1 ರಿಂದ ಈ ತಿದ್ದುಪಡಿ ಅಂಶಗಳು ಜಾರಿಗೆ ಬರಲಿವೆ.
ತಿದ್ದುಪಡಿ ಕಾಯ್ದೆಯ ಅನ್ವಯ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲು ನಮೂನೆ-6, ಮತದಾರರ ಪಟ್ಟಿಯ ದೃಢೀಕರಣದ ಉದ್ದೇಶಕ್ಕಾಗಿ ಆಧಾರ್ ಸಂಖ್ಯೆಯ ಮಾಹಿತಿ ಪತ್ರ ನಮೂನೆ-6ಬಿ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಅಥವಾ ಹೆಸರು ತೆಗೆದು ಹಾಕಲು ಮತದಾರರ ಅರ್ಜಿ ನಮೂನೆ-7, ಮತದಾರ ಗುರುತಿನ ಚೀಟಿ ಅಥವಾ ಪಟ್ಟಿಯಲ್ಲಿ ತಿದ್ದುಪಡಿ ತರಲು ನಮೂನೆ-8ರ ಪರಿಷ್ಕೃತ ನಮೂನೆ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಬಾರಿ ಅವಕಾಶವನ್ನು ಕಲ್ಪಿಸಲಾಗಿದೆ. ಜನವರಿ 01, ಏಪ್ರಿಲ್ 01, ಜುಲೈ 01, ಹಾಗೂ ಅಕ್ಟೋಬರ್ 01 ತಾರೀಖಿಗೆ 18 ವರ್ಷ ಪೂರೈಸಿದವರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನೋಂದಾಯಿಸಿಕೊಳ್ಳಬಹುದು. ಸ್ವಯಂ ಪ್ರೇರಿತವಾಗಿ ತಮ್ಮ ಆಧಾರ್ ಸಂಖ್ಯೆ ಜೋಡಣೆಗೆ ಮತಗಟ್ಟೆ ಮಟ್ಟದ ಅಧಿಕಾರಿ(ಬಿ.ಎಲ್.ಓ)ಗಳಿಗೆ ನಮೂನೆ-6ಬಿ ರಲ್ಲಿ ಅರ್ಜಿಸಲ್ಲಿಸಬಹುದು.

ಇದರ ಹೊರತಾಗಿ ಓಟರ್ ಹೆಲ್ಪ್ಲೈನ್ ಆ್ಯಪ್  ಮೂಲಕ ಸಹ ಅರ್ಜಿ ಸಲ್ಲಿಸಬಹುದು. ಆಧಾರ್ ಸಂಖ್ಯೆ ಇಲ್ಲದಿರುವವರು ಪರ್ಯಾಯ ದಾಖಲೆಗಳಾದ ಎನ್.ಆರ್.ಇ.ಜಿ. ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರ ಇರುವ ಪಾಸ್ ಬುಕ್, ಕಾರ್ಮಿಕ ಇಲಾಖೆಯಿಂದ ನೀಡಲಾದ ಆರೋಗ್ಯ ಮಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾಡ್, ಪಾಸ್ ಪೋರ್ಟ್, ಪಿಂಚಣಿ ದಾಖಲೆ ಬಳಸಬಹುದು.

ಎನ್.ಪಿ.ಆರ್ ಅಡಿಯಲ್ಲಿ ನೀಡಿರುವ ಆರ್.ಜಿ.ಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಉದ್ದಿಮೆಗಳು ನೀಡಿದ ಭಾವಚಿತ್ರ ಇರುವ ಗುರುತಿನ ಚೀಟಿ, ಸಂಸತ್, ವಿಧಾನ ಸಭಾ, ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ ಸಲ್ಲಿಸಬಹುದು ಎಂದು ಇದೇ ವೇಳೆ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿರಸ್ತೇದಾರ್ ರವಿ ಕುಮಾರ್ ಉಪ ತಹಶಿಲ್ದಾರ್ ಗಳಾದ  ಸ್ವಾಮಿ ಹಾಗೂ ಅಶ್ವತ್ಥನಾರಾಯಣ್.
ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಸುರೇಶ್ ನಗರಾಧ್ಯಕ್ಷ ಗುಲಾಬಿ ಸುರೇಶ್ ಹಾಗು ವಿವಿಧ ಪಕ್ಷದ ಮುಖಂಡರು ಹಾಜರಿದ್ದರು.