Tuesday, July 23, 2024
Google search engine
Homeಜಸ್ಟ್ ನ್ಯೂಸ್ಮಾಧ್ಯಮಗಳಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ: ಪ್ರೊ ಸಿ ಎನ್ ಆರ್

ಮಾಧ್ಯಮಗಳಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ: ಪ್ರೊ ಸಿ ಎನ್ ಆರ್

ಜಿ ಎನ್ ರಂಗನಾಥ ರಾವ್ ಅವರ ‘ಆ ಪತ್ರಿಕೋದ್ಯಮ..’ ಕೃತಿ ಬಿಡುಗಡೆ

ಬೆಂಗಳೂರು, ಆಗಸ್ಟ್ 6- ಮಾಧ್ಯಮಗಳಿಗೆ ಸಾಮಾಜಿಕ ಬದ್ಧತೆ ಇರಬೇಕು ಎಂದು ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಹುರೂಪಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಬಹುರೂಪಿಯ ಪ್ರಕಟಣೆ, ಹಿರಿಯ ಪತ್ರಕರ್ತ ಜಿ ಎನ್ ರಂಗನಾಥರಾವ್ ಅವರ ‘ಆ ಪತ್ರಿಕೋದ್ಯಮ..’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಜಿ ಎನ್ ರಂಗನಾಥರಾವ್ ಅವರು ತಮ್ಮ ಕೃತಿಯಲ್ಲಿ ಮಾಧ್ಯಮಗಳು ವೃತ್ತಿ ನಿಷ್ಠತೆಯನ್ನು ಮೆರೆಯಬೇಕಾದ ಅಗತ್ಯತೆಯನ್ನು ದೃಷ್ಟಾಂತಗಳ ಮೂಲಕ ಕಟ್ಟಿಕೊಟ್ಟಿದ್ದಾರೆ., ಆಳುವ ವರ್ಗದ ಓಲೈಕೆ ಮಾಡದೆ, ಕಾರ್ಪೊರೇಟ್ ಸಂಸ್ಥೆಗಳ ಬೆನ್ನು ಬೀಳದೆ, ಸತ್ಯಕ್ಕೆ ಅಪಚಾರವಾಗದೆ ಸಾಮಾಜಿಕ ಬದ್ಧತೆಯನ್ನು ಪ್ರಕಟಿಸುವ ಅಗತ್ಯ ಈ ಹಿಂದಿಗಿಂತಲೂ ಇಂದು ಹೆಚ್ಚಿದೆ ಎಂದರು.

ಜಾಹಿರಾತಿನ ಒತ್ತಡಕ್ಕೆ ಇಂದು ಮಾಧ್ಯಮಗಳು ತನ್ನತನವನ್ನು ಕಳೆದುಕೊಳ್ಳುವ, ಜನಪರ ನಿಲುವಿನಿಂದ ದೂರ ಸರಿಯುವ ನಿಟ್ಟಿನಲ್ಲಿವೆ. ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಜಿ ಎನ್ ರಂಗನಾಥರಾವ್ ಅವರು ತಮ್ಮ ಕಾಲದ ಪತ್ರಿಕೋದ್ಯಮ ಹೇಗೆ ಸತ್ಯನಿಷ್ಠುರತೆಯ ಪರವಾಗಿತ್ತು. ಜಾಹೀರಾತು ಆಮಿಷವನ್ನು ಮೆಟ್ಟಿ ನಿಂತಿತ್ತು ಎನ್ನುವುದನ್ನು ಸಾರಿದ್ದಾರೆ. ಈ ಕೃತಿ ಇಂದಿನ ಪತ್ರಕರ್ತರಿಗೂ, ಅದೇ ಸಮಯದಲ್ಲಿ ವಿದ್ಯಾರ್ಥಿಗಳಿಗೂ ಅಗತ್ಯ ಪಠ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಆರತಿ ಎಚ್ ಎನ್ ಮಾತನಾಡಿ ಆ ಪತ್ರಿಕೋದ್ಯಮ ಹಾಗೂ ಈ ಪತ್ರಿಕೋದ್ಯಮಗಳ ಮಧ್ಯೆ ದೊಡ್ಡ ಕಂದರವಿದೆ. ಇದಕ್ಕೆ ಮುಖ್ಯ ಕಾರಣ ಪತ್ರಿಕೋದ್ಯಮದ ಆದ್ಯತೆಗಳು ಬದಲಾಗಿರುವುದು. ತಂತ್ರಜ್ಞಾನ ಕಾಲಿಟ್ಟ ಮೇಲೆ ಸಮಾಜಮುಖಿ ನೋಟ ಇಲ್ಲವಾಗುತ್ತಿದೆ. ವ್ಯಷ್ಟಿಯ ಎದುರು ಸಮಷ್ಟಿಯ ಆದ್ಯತೆ ಇಲ್ಲವಾಗುತ್ತಿದೆ ಎಂದರು.

ಇ- ಮಾಧ್ಯಮಗಳ ಕಾಲದಲ್ಲಿ ಮನುಷ್ಯತ್ವದ ಮೇಲಿನ ಒತ್ತು ಕಡಿಮೆಯಾಗುತ್ತಿದೆ. ಈ ಕೃತಿಯನ್ನು ಓದಿದಾಗ ಮಾಧ್ಯಮಗಳು ಇಷ್ಟು ಜನಪರವಾಗಿತ್ತೇ ಎಂದು ಅನಿಸದೇ ಇರಲು ಸಾಧ್ಯವಿಲ್ಲ ಎಂದರು.

ಸಾಹಿತಿ, ಬಹುರೂಪಿಯ ಜಿ ಎನ್ ಮೋಹನ್ ಅವರು ಮಾತನಾಡಿ ಜಾಗತೀಕರಣದ ನಂತರ ಮಾಧ್ಯಮ ಇನ್ನೊಂದು ಉದ್ಯಮವಾಗಿ ಬದಲಾಗಿದೆ. ಈ ಮೊದಲಿನ ಮಾಧ್ಯಮಕ್ಕೆ ಸಮಾಜವನ್ನು ಕಟ್ಟುವ ಕನಸುಗಳಿತ್ತು. ಆದರೆ ಕೊಳ್ಳುಬಾಕ ಸಂಸ್ಕೃತಿಗೆ ಉತ್ತೇಜನ ನೀಡಿದ ಜಾಗತೀಕರಣ, ಮಾಧ್ಯಮವನ್ನು ವ್ಯಾಪಾರದ ಇನ್ನೊಂದು ಸರಕನ್ನಾಗಿ ಮಾಡಿದೆ ಎಂದು ವಿಷಾದಿಸಿದರು

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ ಡಿ.ವಿ.ಗುಂಡಪ್ಪ (ಡಿವಿಜಿ) ಅವರು ಪತ್ರಕರ್ತರಿಗಾಗಿ ಹುಟ್ಟುಹಾಕಿದ ಸಂಘ ಇಂದು ರಾಜ್ಯದ ಉದ್ದಗಲಕ್ಕೂ ಅಗಾಧವಾಗಿ ಬೆಳೆದಿದೆ. ಪತ್ರಕರ್ತರ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಗಮನ ನೀಡುವುದಲ್ಲದೆ ಪತ್ರಕರ್ತರ ಸೃಜನಶೀಲ ಕೆಲಸಗಳಿಗೂ ಆದ್ಯತೆ ನೀಡುತ್ತದೆ. ಜಿ ಎನ್ ರಂಗನಾಥ ರಾವ್ ಅವರು ಈ ಸಂಘದ ಹಿರಿಯರಾಗಿದ್ದು ಅವರ ಪತ್ರಿಕೋದ್ಯಮ ಪಯಣದ ಕಥನ ಇಂದಿನ ಪೀಳಿಗೆಗೆ ದಾರಿದೀಪ ಎಂದು ಅಭಿಪ್ರಾಯಪಟ್ಟರು.

ಬಹುರೂಪಿಯ ಶ್ರೀಜಾ ವಿ ಎನ್ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿ ಸಿ ಲೋಕೇಶ್, ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಜಿ.ಎನ್.ರಂಗನಾಥ ರಾವ್ ಅವರಿಗೆ ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನಿಸಲಾಯಿತು.

ಪುಸ್ತಕದ ವಿವರ:

ಕೃತಿ: ಆ ಪತ್ರಿಕೋದ್ಯಮ..
ಜಿ ಎನ್ ರಂಗನಾಥ ರಾವ್
ಪ್ರಕಾಶನ: ಬಹುರೂಪಿ
ಬೆಲೆ: 300 ರೂ
ಸಂಪರ್ಕ: 70191 82729

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?