Sunday, March 15, 2026
Google search engine
Home Blog Page 94

ವೇಶ್ಯಾವಾಟಿಕೆ ಮುಂದುವರೆಯಲು ಮಾನವ ಸಾಗಾಣಿಕೆ ಕಾರಣ : ಕೆ.ವಿ. ಸ್ಟ್ಯಾನ್ಲಿ

0

Publicstory/prajayoga

ತುಮಕೂರು: ಸ್ವಸ್ಥ ಸಮಾಜದಲ್ಲಿ ವೇಶ್ಯಾವಾಟಿಕೆ ಇನ್ನೂ ಮುಂದುವರಿಯಲು ಮಾನವ ಸಾಗಾಣಿಕೆ ಮುಖ್ಯ ಪಾತ್ರ ವಹಿಸಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕರಾದ  ಕೆ.ವಿ. ಸ್ಟ್ಯಾನ್ಲಿ ಅಭಿಪ್ರಾಯಪಟ್ಟರು.

ತುಮಕೂರು ವಿವಿಯ ವಿಶ್ವೇಶ್ವರಯ್ಯ ಸಭಾಂಹಣದಲ್ಲಿ ಇತ್ತೀಚೆಗೆ ನಡೆದ ‘ಅಂತರಾಷ್ಟ್ರೀಯ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ’ ಮತ್ತು ‘ಮಾನವ ಕಳ್ಳ ಸಾಗಣೆ ತಡೆ ಕ್ಲಬ್’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಹೆಣ್ಣು ಕೇವಲ ಹಣವನ್ನು ಸಂಪಾದಿಸುವ ಸಾಧನವಾಗಿದ್ದಾಳೆ. ದುರಂತವೆಂದರೆ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಕೆಲವರು ಇಂತಹ ಹೀನಾಯ ದಂಧೆಗಳಿಗೆ ತೆರೆಮರೆಯಲ್ಲಿ ಕೈ ಜೋಡಿಸುವ ಮೂಲಕ ಅನಾರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಿದ್ದಾರೆ. ಇಂತಹ ಗಂಭೀರ ಸಾಮಾಜಿಕ ಸಮಸ್ಯೆಗಳ ಪರಿಹಾರದತ್ತ ಯುವಜನತೆಯು ಚಿತ್ತ ಹರಿಸಬೇಕು. ಮನುಷ್ಯತ್ವದ ನೆಲೆಯಲ್ಲಿ ಎಲ್ಲರೂ ಸಮಾನವಾಗಿ ಬಾಳುವಂತಹ ಸಮಾಜಕ್ಕೆ ಕೈ ಜೋಡಿಸಬೇಕು ಎಂದರು.

ಮಹಿಳಾ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್  ನವೀನ್ ಕುಮಾರ್ ಎಂ ಬಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರು ಈ ದಂಧೆಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹಾಗಾಗಿ, ಇಂತಹ ಅಶಕ್ತ ಜನರ ಸುಗಮ ಜೀವನಕ್ಕೆ ಉಪಯುಕ್ತವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಅಮಾನವೀಯವಾದ ಮಾನವ ಕಳ್ಳ ಸಾಗಾಣಿಕೆ ಒಳಗೊಂಡಂತೆ ಅನೇಕ ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ಅಂತ್ಯಹಾಡಬಹುದು’ ಎಂದರು.

ಬೆಂಗಳೂರಿನ ಐ.ಜೆ.ಎಂ( ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್) ನ ಕಾರ್ಯತಂತ್ರದ ನಿರ್ವಹಣೆ ವಿಭಾಗದ ಮುಖ್ಯಸ್ಥೆ ಪ್ರತಿಮಾ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಮಾಡುವುದು ಘೋರ ಅಪರಾಧ. ಹಾಗಾಗಿ, ಇದರ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಪಿಡುಗನ್ನು ಹೋಗಲಾಡಿಸುವಲ್ಲಿ ಇಂದಿನ ಯುವಜನತೆಯ ಪಾತ್ರ ಅವಶ್ಯಕ ಎಂದು ತಿಳಿಸಿದರು.

ತುಮಕೂರು ವಿವಿಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಪರಶುರಾಮ ಕೆ.ಜಿ  ಮಾತನಾಡಿ, ಇಂದಿನ ವಿದ್ಯಾರ್ಥಿಗಳು, ಮಾನವ ಕಳ್ಳ ಸಾಗಣೆಯಂತಹ ಅಮಾನುಷ ಸಾಮಾಜಿಕ ಪ್ರಕ್ರಿಯೆಗಳ ವಿರುದ್ಧ ಅರಿವು ಪಡೆದುಕೊಂಡು ಜನಜಾಗೃತಿ ಹಬ್ಬಿಸಬೇಕಾಗಿದೆ. ಈ ದೆಸೆಯಲ್ಲಿ, ವಿದ್ಯಾರ್ಥಿಗಳು ಉತ್ತಮ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಕೈಜೋಡಿಸುವುದಲ್ಲದೆ, ತಾವೇ ನಾಯಕತ್ವ ವಹಿಸಿ ಸಾಮಾಜಿಕ ಪಿಡುಗುಗಳ ವಿರುದ್ಧ ಅರಿವು ಮೂಡಿಸುವ ಜವಾಬ್ದಾರಿ ಹೊರಬೇಕು. ನಮ್ಮ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಾಕಷ್ಟು ಕ್ಷೇತ್ರ ಕಾರ್ಯ ಸಂಶೋಧನೆ ಮಾಡುವುದರೊಂದಿಗೆ, ಜನಜಾಗೃತಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಒಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ, ಪ್ರತಿ ವಿದ್ಯಾರ್ಥಿಯು ತನ್ನ ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ಸಕ್ರಿಯವಾಗಿ ಕೆಲಸಮಾಡುವ ಅಗತ್ಯವಿದೆ.’ ಎಂದರು.

ಕಾರ್ಯಕ್ರಮದಲ್ಲಿ ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕ ಪರಶುರಾಮ್ ಎಂ ಎಲ್, ಪ್ರದೀಪ್, ಬೆಂಗಳೂರಿನ ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ ನ  ಶಬಿನ್, ತುಮಕೂರು ವಿವಿಯ ‘ಮಾನವ ಕಳ್ಳ ಸಾಗಣೆ ತಡೆ ಕ್ಲಬ್’ ನ ನೋಡಲ್ ಅಧಿಕಾರಿ ಡಾ. ಜ್ಯೋತಿ ಉಪಸ್ಥಿತರಿದ್ದರು.

ಅಪಾಯದ ಮಟ್ಟ ಮೀರಿದ ಜಯಮಂಗಲಿ : ಭೇಟಿ ವೇಳೆ ಜಿಲ್ಲಾಧಿಕಾರಿ ಹೇಳಿದ್ದೇನು?

0

Publicstory/prajayoga

ತುಮಕೂರು: ಧಾರಾಕಾರ ಮಳೆಯಿಂದ ಜಯಮಂಗಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನೀರು ನುಗ್ಗಿ ಜಲಾವೃತಗೊಂಡಿರುವ  ಮಧುಗಿರಿ ತಾಲೂಕು ಪುರವರ ಹೋಬಳಿ ಚನ್ನಸಾಗರ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ನದಿ ನೀರು ಹರಿಯುವ ಪ್ರಮಾಣ ಹೆಚ್ಚಾಗಿರುವುದರಿಂದ ಚನ್ನಸಾಗರ ಗ್ರಾಮದ ಕೆಲವು ಮನೆ, ಶಾಲೆ, ಜಮೀನುಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ನೀರಿನಿಂದ ಬಾಧಿತರಾದವರಿಗೆ ಆಹಾರ ವ್ಯವಸ್ಥೆಗಾಗಿ ಜಿಲ್ಲಾಡಳಿತದಿಂದ  ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಬಾರದಂತೆ ನಿಗಾ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಾವೃತವಾಗಿರುವ ಶಾಲೆಗಳಿಗೆ 2ದಿನಗಳ ಕಾಲ ರಜೆ ಘೋಷಣೆ ಮಾಡಲು ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಗ್ರಾಮದ ರಸ್ತೆಯಲ್ಲಿ ಸಂಚರಿಸಲು ಅನುವಾಗುವಂತೆ ಈಗಾಗಲೇ ಜೆಸಿಬಿಯಿಂದ ಕಾರ್ಯಾಚರಣೆ ಕೈಗೊಂಡಿದ್ದು, ಮುಂಜಾನೆಗಿಂತ ನೀರಿನ ಹರಿವಿನ ಪ್ರಮಾಣ ಈಗ ಕಡಿಮೆಯಾಗಿದೆ. ಮಳೆ ನೀರಿನಿಂದ ಬಾಧಿತರಾದವರಿಗೆ ರಕ್ಷಣೆ ನೀಡುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮ ಕಾರ್ಯಪಡೆಗೆ ಈಗಾಗಲೇ ನಿರ್ದೇಶನ ನೀಡಿದ್ದು, ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.

ಸ್ಪರ್ಧೆಗೆ ಚಾಂಪಿಯನ್ ಶರಣ್ಯಾಳ ಪರದಾಟ:  ಶಾಸಕ ಡಾ.ಜಿ.ಪರಮೇಶ್ವರ್ ಪ್ರಾಯೋಜಕತ್ವದ ಭರವಸೆ

Publicstory/prajayoga

ತುಮಕೂರು: ಪಶ್ಚಿಮ ಬಂಗಾಳದ ಸತ್ಯಜಿತ್ ರಾಯ್ ಇನ್‌ಡೊರ್ ಸ್ಟೆಡಿಯಂನಲ್ಲಿ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ತುಮಕೂರಿನ ಸಿದ್ದಾರ್ಥ ನಗರದ 12ವರ್ಷದ ಕುಮಾರಿ ಶರಣ್ಯ ಅವರು ಎರಡನೇ ಸ್ಥಾನ ಪಡೆದು, ಬೆಳ್ಳಿ ಪದಕ ಪಡೆಯುವ ಮೂಲಕ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದರು.

ಆದರೆ, ಕುಮಾರಿ ಶರಣ್ಯ ಅವರ ಪೋಷಕರು ಕೃಷಿ ಕುಟುಂಬದವರಾಗಿದ್ದು, ಮಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕಳುಹಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ ವಿಷಯ ತಿಳಿದ ಆದೇ ಗ್ರಾಮದ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ,ಕರ್ನಾಟಕ ಅಮೆಚೂರ್ ಅಥ್ಲೇಟಿಕ್ ಸಂಸ್ಥೆಯ ಅಧ್ಯಕ್ಷರು ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಎರಡು ಸ್ಪರ್ಧೆಗಳ ಪ್ರಯೋಜಕತ್ವವನ್ನು ವಹಿಸಿಕೊಂಡು, ಇಡೀ ಖರ್ಚುನ್ನು ವಹಿಸಿಕೊಂಡಿದ್ದಾರೆ. ಮುಂಬರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಪ್ರಯೋಜಕತ್ವ ನೀಡಿದ್ದಾರೆ.
ಕುಮಾರಿ ಶರಣ್ಯ ಅವರ ಕ್ರೀಡಾ ಸಾಧನೆಯನ್ನು ಮೆಚ್ಚಿ ಗೌರವಿಸಿರುವ ಡಾ.ಜಿ.ಪರಮೇಶ್ವರ್, ಈಕೆಯ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದ್ದಾರೆ.

ತುಮಕೂರು ತಾಲೂಕು ಸಿದ್ದಾರ್ಥ ನಗರ(ಗೊಲ್ಲಹಳ್ಳಿ)ಯ ಕೃಷಿಕ ದಂಪತಿಗಳಾದ ಆನಂದಕುಮಾರ್ ಮತ್ತು ಶ್ರೀಮತಿ ನಿರ್ಮಲ ಅವರ ಪುತ್ರಿ, ಊರುಕೆರೆಯ ಜೈನ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರುವ ಶರಣ್ಯ ಕಲ್ಕತ್ತಾ ನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು 2022ರ ಸೆಪ್ಟಂಬರ್ 16-25 ರವರೆಗೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ಓದು ಮತ್ತು ಬಾಕ್ಸಿಂಗ್ ಎರಡರಲ್ಲಿಯೂ ಮುಂದಿರುವ ಕುಮಾರಿ ಶರಣ್ಯ, ಒಂದನೇ ತರಗತಿಯಿಂದಲೇ ಸ್ವಯಂರಕ್ಷಣೆ ಮತ್ತು ಕ್ರೀಡೆಯಾಗಿ ಕರಾಟೆಯನ್ನು ಆಯ್ಕೆ ಮಾಡಿಕೊಂಡಿದ್ದು, ಕರಾಟೆಯಲ್ಲಿಯೂ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈಕೆಯ ಸಾಧನೆಯನ್ನು ಗಮನಿಸಿದ ಶರಣ್ಯ ಅವರ ತರಬೇತುದಾರರಾದ ರಂಗಸ್ವಾಮಿ ಅವರು, ಈಕೆಯನ್ನು ಕಿಕ್‌ಬಾಕ್ಸಿಂಗ್ ಕಲಿಯುವಂತೆ ಪ್ರೇರೆಪಿಸಿ, ಸ್ವತಃ ಅವರಿಗೆ ತರಬೇತಿಯನ್ನು ನೀಡಿದ್ದರು.

ವ್ಯಾಕೋ ಇಂಡಿಯಾ ಕಿಕ್‌ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶರಣ್ಯ ಚಿನ್ನದ ಪದಕ ಹಾಗೂ ಬೆಳ್ಳಿ ಪದಕ ಪಡೆದಿದ್ದರು. 2022ರ ಜುಲೈ 16-23ರವರೆಗೆ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಮನೆಯಲ್ಲಿ ಮಧ್ಯರಾತ್ರಿ ಕರಡಿ ಪ್ರತ್ಯಕ್ಷ ; ಗಾಬರಿಗೊಂಡ ಗ್ರಾಮಸ್ಥರು ಮಾಡಿದ್ದೇನು?

0

Publicstory/prajayoga

ಪಾವಗಡ: ಮನೆಯೊಂದರಲ್ಲಿ ಕರಡಿ ಕಾಣಿಸಿಕೊಂಡ ಘಟನೆ ತಾಲೂಕಿನ ನಿಡಗಲ್ ಹೋಬಳಿಯ ದೇವಲಕೆರೆಯಲ್ಲಿ ನಡೆದಿದೆ.

ಗ್ರಾಮದಲ್ಲಿ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಆಶ್ರಯಕ್ಕಾಗಿ ಗ್ರಾಮದ ನಿವಾಸಿ ಮಂಜಯಳಾ ಪುಟ್ಟರಾಜು ನಿರ್ಮಾಣಗುತ್ತಿರುವ ಮನೆಯಲ್ಲಿ ಮಧ್ಯರಾತ್ರಿ ಪ್ರತ್ಯಕ್ಷವಾಗಿದೆ ಎನ್ನಲಾಗಿದೆ.

ಇದನ್ನು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ. ನಂತರ ಗ್ರಾಮಸ್ಥರು ಒಟ್ಟಾಗಿ ಸೇರಿದ್ದಾರೆ. ಒಮ್ಮೆ ಕೂಗಾಟ ನಡೆಸಿ ಕರಡಿಯನ್ನು ಬೆದರಿಸಿ ಓಡಿಸುವ ಕೆಲಸ ಮಾಡಿದರು.

ಆ.5ರಂದು ಅಕ್ಕಿ ಹರಾಜು : ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

0

Publicstory/prajayoga

ತುಮಕೂರು: ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳವು 2021ರ ಆಗಸ್ಟ್ 17ರಂದು ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಂಕರ್ ರೈಸ್ ಇಂಡಸ್ಟ್ರಿಯಲ್ಗೆ ಭೇಟಿ ನೀಡಿ ತನಿಖೆ ನಡೆಸಿದಾಗ ಲಾರಿ ಸಂಖ್ಯೆ ಕೆಎ-07-6598ರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 474 ಚೀಲ(2.7291 ಕ್ವಿಂಟಾಲ್) ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಅಕ್ಕಿಯನ್ನು ಆಗಸ್ಟ್ 5ರ ಬೆಳಿಗ್ಗೆ 11 ಗಂಟೆಗೆ ಶಿರಾ ರಸ್ತೆ ಡಿ.ಸಿ.ಬಂಗಲೆ ಬಳಿ ಇರುವ ಕೆಎಫ್ಸಿಎಸ್ಸಿ ಸಗಟು ಮಳಿಗೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಕಾಯ್ದೆ 1955 ಕ್ಲಾಸ್ 6ಎ ಅಡಿ ಅಕ್ಕಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.  ವಶಪಡಿಸಿಕೊಂಡ ಅಕ್ಕಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶಿರಾ ರಸ್ತೆ ಡಿ.ಸಿ.ಬಂಗಲೆ ಬಳಿ ಇರುವ ಕೆಎಫ್ಸಿಎಸ್ಸಿ ಸಗಟು ಮಳಿಗೆಯಲ್ಲಿ ಸುರಕ್ಷಿತವಾಗಿ ದಾಸ್ತಾನು ಮಾಡಲಾಗಿದೆ. 
ದಾಸ್ತಾನಿನ ಮಾದರಿಯನ್ನು ಹರಾಜಿನ ದಿನದಂದು ಹರಾಜಿನಲ್ಲಿ ಭಾಗವಹಿಸುವವರು ಪರಿಶೀಲಿಸಲು ಅವಕಾಶವಿದ್ದು, ಆಸಕ್ತರು ನಿಗಧಿತ ಸಮಯಕ್ಕೆ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.  ಬಹಿರಂಗ ಹರಾಜು ದಿನ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ ಬಿಡ್ದಾರರು ಶೇ.50ರಷ್ಟು ಮೊತ್ತವನ್ನು ಪಾವತಿಸಬೇಕು.  ಬಿಡ್ ದಿನ ಹೊರತುಪಡಿಸಿ 3 ದಿನಗಳೊಳಗಾಗಿ ಉಳಿದ ಮೊತ್ತವನ್ನು ಪಾವತಿಸಿ ಅಕ್ಕಿಯ ದಾಸ್ತಾನನ್ನು ಎತ್ತುವಳಿ ಮಾಡತಕ್ಕದ್ದು.  ಇಲ್ಲವಾದಲ್ಲಿ ಶೇ. 50ರಷ್ಟು ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.  ಬಿಡ್ದಾರರು ತಮ್ಮ ದಾಖಲೆ ಹಾಗೂ ಗುರುತಿನ ಚೀಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸತಕ್ಕದ್ದು ಎಂದು ಅವರು ತಿಳಿಸಿದ್ದಾರೆ.

ಯುವಕ ನೀರಿನಲ್ಲಿ ಕೊಚ್ಚಿಹೊಗಿ ಸಾವು; ಕಾರಣ ಇಲ್ಲಿದೆ

0

Publicstory/prajayoga


ಕುಣಿಗಲ್: ತಾಲೂಕಿನ ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ  ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ‌.

ಸಾವನ್ನಪ್ಪಿರುವ ದುರ್ದೈವಿ ನಾಗರಾಜು (28) ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನಾಹುತಗಳು ಸಂಭವಿಸುತ್ತಿದ್ದು, ಇತ್ತೀಚೆಗೆ ತುಮಕೂರು ನಗರದ ವ್ಯಕ್ತಿಯೊಬ್ಬರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

ಚಿಕ್ಕ ನಾಯಕನಹಳ್ಳಿ ತಾಲೂಕಿನ ಮಾದಾಪುರ ತಾಂಡ್ಯದ ನಾಗರಾಜು ಚೆಕ್ ಡ್ಯಾಮ್ ನಿರ್ಮಾಣದ ಕೂಲಿ ಕೆಲಸಕ್ಕಾಗಿ ಬಂದಿದ್ದರು. ಶಿವಪುರ ಹಾಗೂ ದೀಪಾಂಬುದಿ ಕರೆ ತುಂಬಿ ರಭಸವಾಗಿ ಹರಿಯುತ್ತಿದ್ದ ಕಾಲುವೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
ಚೆಕ್ ಡ್ಯಾಮ್ ಕಾಮಗಾರಿಯ ಶೆಡ್ ನಲ್ಲಿ ಮಲಗಿದ್ದ ವೇಳೆ ರಾತ್ರಿ ಮೂತ್ರವಿಸರ್ಜನೆಗೆಂದು  ಹೊರ ಬಂದಿದ್ದಾರೆ. ಈ ಸಂದರ್ಭ ಕತ್ತಲಲ್ಲಿ ತಿಳಿಯದೆ ಈ ಘಟನೆ ನಡೆಸಿದೆ‌. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಸಿದ್ದರಾಮಯ್ಯ ಬಗ್ಗೆ ಸ್ಥಳೀಯ ನಾಯಕರು ಹೇಳಿದ್ದೇನು?

Publicstory/prajayoga

ಡಾ. ರಫೀಕ್ ಅಹ್ಮದ್,
ಮಾಜಿ ಶಾಸಕರು ಕಾಂಗ್ರೆಸ್

ಸಿದ್ದರಾಮಯ್ಯ ಧೀಮಂತ ನಾಯಕ. ದೇವರಾಜು ಅರಸು ನಂತರ ಅತ್ಯತ್ತಮ ಆಡಳಿತ ನೀಡಿದ ಆಡಳಿತಗಾರ. ಯಾರಿಗೂ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡವರು. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ವರ್ಗದವಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಸಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

__________________________________________

ಮುರಳೀಧರ ಹಾಲಪ್ಪ, ಕಾಂಗ್ರೆಸ್, ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು

ಸಿದ್ದರಾಮಯ್ಯ ಇಡೀ ದೇಶಕ್ಕೆ ಮಾದರಿಯಾಗಿರುವ ಅತ್ಯತ್ತಮ ಆಡಳಿತ ಕೊಟ್ಟವರು. ಅವರು ಜಾರಿಗೊಳಿಸಿರುವ ಜನಪರ ಯೋಜನೆ, ಕಾರ್ಯಕ್ರಮಗಳು ಚಿರಸ್ಮರಣೀಯ.

___________________________________________

ಕೊಂಡವಾಡಿ ಚಂದ್ರಶೇಖರ್,
ಮಾಜಿ ಅಧ್ಯಕ್ಷ, ತುಮುಲ್

ಎಲ್ಲರೂ ಒಪ್ಪಿಕೊಂಡ ಜನ ನಾಯಕ ಸಿದ್ದರಾಮಯ್ಯ. ಅವರು ಜಾರಿಗೊಳಿಸಿರುವ ಕಾರ್ಯಕ್ರಮಗಳು ದಮನಿತರಿಗೆ ಹೊಸ ಶಕ್ತಿ ನೀಡಿವೆ. ಜೊತೆಗೆ ರೈತರ ಬದುಕಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ. ಕ್ಷೀರ ಭಾಗ್ಯ ಯೋಜನೆ ರೈತರಿಗೆ ನೇರ ಪ್ರಯೋಜನ ನೀಡಿದ್ದಲ್ಲದೆ, ಬಡ ಮಕ್ಕಳ ಅಪೌಷ್ಠಿಕತೆ ನೀಗಿಸಲು ಕಾರಣೀಭೂತವಾಗಿದೆ.

___________________________________________

ಲಂಕೆಪ್ಪ ಪುಲಮಘಟ್ಟ
ಕಾಂಗ್ರೆಸ್ ಮುಖಂಡರು, ಮಧುಗಿರಿ

ನಾಡಿನ ಜನಪ್ರಿಯ ನಾಯಕ. ಮನೆ ಮನೆಗೆ ಅನ್ನ ನೀಡಿದ ಅನ್ನದಾತ, ಸರ್ವ ಜನಾಂಗದ ನಾಯಕ. ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ. ಅವರ ಅವಧಿಯಲ್ಲಿ ಪ್ರತಿ ಕುಂಟುಂಬದವರಿಗೂ ಯೋಜನೆಗಳು ತಲುಪಿವೆ. ಈ ನಾಡಿಗೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ.

___________________________________________

ಮೈಲಪ್ಪ, ಅಧ್ಯಕ್ಷರು
ಕಾಳಿದಾಸ ವಿದ್ಯಾವರ್ಧಕ ಸಂಘ

ಎಲ್ಲಾ ಸಮುದಾಯಗಳಿಗೆ ಧ್ವನಿಯಾದ ನಾಯಕ. ರಾಜ್ಯದ ಜನರು ಬಡತನ ಹಾಗೂ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯದ ಜೊತೆಗೆ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅವರು ನುಡೆದಂತೆ ನಡೆಯುವ ನಾಯಕ.

___________________________________________

ಲಕ್ಷ್ಮೀ ನಾರಾಯಣ್
ಗ್ರಾಪಂ ಸದಸ್ಯರು, ಚಂದ್ರಗಿರಿ

ಜಾತ್ಯಾತೀತ ಮತ್ತು ಪಕ್ಷಾತೀತ ರಾಜಕಾರಣಿ ಸಿದ್ದರಾಮಯ್ಯ.  ಅವರು ನೀಡಿರುವ ಐದು ವರ್ಷದ ಆಡಳಿತ ಪ್ರಶ್ನಾತೀತವಾಗಿದೆ. ಎಲ್ಲ ವರ್ಗಗಗಳು ಸಮಾನ ಸೌಲಭ್ಯಗಳನ್ನು ಪಡೆದುಕೊಂಡಿವೆ. ಬಡವರಿಗಾಗಿ ಸದಾ ಮಿಡಿಯುವ ಹೃದಯ ಅವರದ್ದು, ಬಡವರಿಗಾಗಿ ನೀಡಿರುವ ಅವರ ಕೊಡುಗೆಗಳು ಅಪಾರ.

___________________________________________

ಕೃಷ್ಣಮೂರ್ತಿ ಜಿ.ಕೆ,
ಬಿಜೆಪಿ ಮುಖಂಡರು, ಗೂಳೂರು

ದಕ್ಷ, ಪ್ರಾಮಾಣಿಕ ಹಾಗೂ ಸಾಮಾಜಿಕ ಕಳಕಳಿ ಬದ್ಧತೆಗೆ ಇರುವ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಹಿಂದುಳಿದ ವರ್ಗಗಳ ಪರವಾಗಿ ನಿಂತವರು. ಗಟ್ಟಿ ಧ್ವಿನಿಯಲ್ಲಿ ನ್ಯಾಯ ಕೇಳುವ ನಾಯಕ. ನಮ್ಮ ಸಮಾಜದಲ್ಲಿ ಅಂತವೊಬ್ಬ ನಾಯಕನಿರುವುದಕ್ಕೆ ಹೆಮ್ಮೆ ಇದೆ. ಆದರೆ, ಒಂದು ಜನಾಂಗಕ್ಕೆ ಸೀಮಿತವಾಗದೆ ಅವರು ಸರ್ವ ಜನರ ನಾಯಕರಾಗಿದ್ದಾರೆ.

___________________________________________

ಜನ ಮೆಚ್ಚಿದ ಸದನ ಶೂರ : ಬಡವರ ಪ್ರೀತಿಯ ಸರದಾರ

Publicstory/prajayoga

ಹರೀಶ್ ಕಮ್ಮನಕೋಟೆ /

ಸಿದ್ದರಾಮನ ಹುಂಡಿಯಿಂದ ಮುಖ್ಯಂತ್ರಿ ಗಾದಿಗೆ ಏರಿದ ಜನ ನಾಯಕನಿಗೆ ಈಗ 75 ವರ್ಷ. ಇಂದು ಅಭಿಮಾನಿಗಳ ಮನ, ಮನೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಎಮ್ಮೆ ಕಾಯುತ್ತಿದ್ದ ಹುಡುಗ ರಾಜ್ಯದ ಮುಖ್ಯಂಮತ್ರಿಗಯಾಗಿ ಇತಿಹಾಸ ಸೃಷ್ಟಿಸಿದ್ದು ಸೋಜಿಗ.
ಉಪನ್ಯಾಸಕರಾಗಿ, ವಕೀಲರಾಗಿಯೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದು, ಸಮಾಜವಾದಿ ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿದ್ದ ಸಿದ್ದರಾಮಯ್ಯ ಅವರು, ಸಮಾಜವಾದಿ ಚಿಂತನೆಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಸಾರ್ವಜನಿಕ ರಂಗದ ಮೇಲೆ ಅತೀವ ಆಸಕ್ತಿ. ಬಡವರು, ದುರ್ಬಲರು ಸಹಾಯಕೇಳಿ ಬಂದಾಗ ತಾವೇ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಬಸ್ ಚಾರ್ಜ್‌ಗೆ ಹಣವನ್ನೂ ನೀಡಿ ಕಳುಹಿಸುತ್ತಿದ್ದರಂತೆ. ಇಂಥ ಮಹೋನ್ನತ ಕಳಕಳಿ ಇರುವ ಮಾನವತಾವಾದಿ. 
ಕಾಲೇಜು ದಿನಗಳಲ್ಲಿ ಅವರು ಅನುಭವಿಸಿದ್ದ ಹಸಿವು, ಹಣಕಾಸಿನ ಸಮಸ್ಯೆಗಳನ್ನು ಅನುಭವಿಸಿದ ಕಾರಣವೇ ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಾನಾ ಭಾಗ್ಯಗಳನ್ನು ನೀಡಲು ಸಾಧ್ಯವಾಯಿತು ಎಂದು ಹೇಳಿಕೊಳ್ಳುತ್ತಾರೆ.

ತಾಲೂಕು ಮಂಡಲದಿಂದ ಸಿಎಂ ಗಾದಿಗೆ

ಜನಪರ ರಾಜಕಾರಣ ಮಾಡುವ ಉದ್ದೇಶದಿಂದ ಅವರು ರಾಜಕೀಯಕ್ಕೆ 1978ರ ಅವಧಿಯಲ್ಲಿ ಪಾದಸ್ಪರ್ಶ ಮಾಡಿದರು. ಮೊದಲಿಗೆ ತಾಲೂಕು‌ ಮಂಡಳಿಯ ಅಧ್ಯಕ್ಷರಾಗಿ ನಂತರ, ಮೈಸೂರು ಲೋಕ ಸಭಾ ಕ್ಷೇತ್ರದಿಂದ  1980ರ ಅವಧಿಯಲ್ಲಿ ಮೊಟ್ಟ ಮೊದಲಿಗೆ   ಚುನಾವಣೆಗೆ ಸ್ಪರ್ಧಿಸಿ ಪರಾಭವ ಅನುಭವಿಸಿದರು. ನಂತರ ಅದನ್ನೇ ಪ್ರತಿಷ್ಠೆಯಾಗಿ ತೆಗದುಕೊಂಡು 1983ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಲೋಕದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ವಿಧಾನಾಭೆಗೆ ಪ್ರವೇಶ ಪಡೆದರು.
1985ರಲ್ಲಿ ಎರಡನೇ ಬಾರಿಗೂ ಸ್ಪರ್ಧಿಸಿ ಪಶು ಸಂಗೋಪನಾ ಸಚಿವ, ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ನಂತರ 1991ರಲ್ಲಿ ಜನತಾದಳದೊಂದಿಗೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. 1994ರಲ್ಲಿ ಮತ್ತೇ ವಿಧಾನಸಭೆಗೆ ಪ್ರವೇಶಿಸಿದರು. ಎಚ್.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು ಹಣಕಾಸು ಮಂತ್ರಿಯಾಗಿದ್ದರು. ಕುರಿ ಕಾಯುವವನಿಗೆ ಬಜೆಟ್ ಮಂಡಿಸಲು ಸಾಧ್ಯವಿದೆಯೇ? ಎಂಬ ಸವಾಲು ಸ್ವೀಕರಿಸಿ ಹದಿಮೂರು ಬಜೆಟ್ ಮಂಡಿಸಿದರು. ಇದರಿಂದ ರಾಜ್ಯ, ದೇಶದಲ್ಲೆಡೆ ಸಿದ್ದರಾಮಯ್ಯ ಅವರ ಆರ್ಥಿಕ ತಜ್ಞತೆ ಪ್ರಶಂಸೆಗೆ ಒಳಗಾಯಿತು. 1996ರಲ್ಲಿ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮತ್ತೆ  2004ರಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಆದರು. ರಾಜಕೀಯ ಕುತಂತ್ರದಿಂದ ಸಿದ್ದರಾಮಯ್ಯ ಅವರು 2006ರಲ್ಲಿ ಜೆಡಿಎಸ್ ನಿಂದ ಉಚ್ಚಾಟನೆಗೊಂಡು ಪ್ರಬಲವಾದ ಅಹಿಂದ ಚಳುವಳಿ ಕಟ್ಟಿದರು. ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸದನದಲ್ಲಿ ಶುರುವಾಗಿದ್ದ ಗಣಿದಣಿಗಳ ಕದನ ಕಾಳಗಕ್ಕೆ ಸಿದ್ದರಾಮಯ್ಯ ಅವರು ರಣ ಕಹಳೆಯೊಂದಿಗೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಬೆಳಸಿ, ತಮ್ಮ ಖದರ್ ಪ್ರದರ್ಶಿಸಿದರು.

ನುಡಿದಂತೆ ನಡೆದ ಜನ ನಾಯಕ

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿಯೊಳಗಾಗಿ ನಡೆಯದಿದ್ದರೆ ನಮ್ಮ ಕೂಡಲ ಸಂಗಮನೆಂತೊಲಿವನಯ್ಯ?
ಎಂಬ ವಚನಕ್ಕೆ ಬದ್ಧವಾಗಿರುವ ವ್ಯಕ್ತಿತ್ವ ಅವರದ್ದು. 2013ರ ಚುನಾವಣೆಯಲ್ಲಿ ಅನುಭವ ಮಂಟಪದ ಆಧಾರದ ಮೇಲೆ ತನ್ನ ಮಂತ್ರಿ ಮಂಡಲದಲ್ಲಿ ಎಲ್ಲಾ ಜಾತಿ ಜನಾಂಗದ ನಾಯಕರಿಗೆ ಅವಕಾಶ ಮಾಡಿಕೊಟ್ಟವರು,  ಪ್ರತೀ ಸರ್ಕಾರಿ ಕಚೇರಿ ಇಲಾಖೆಗಳಲ್ಲಿ ಬಸವಣ್ಣನ ಪಟಗಳನ್ನು ಹಾಕಬೇಂಬ ಅದೇಶ ಜಾರಿಗೆ‌ತಂದವರು. ಅನ್ನದಾಸೋಹದ ಮಾದರಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಯಿತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ಗಳಿಗೆಯಲ್ಲಿ ಅನೇಕ ಜನ ಕಲ್ಯಾಣ ಯೋಜನೆಗಳನ್ನು ಘೋಷಿಸಿಬಿಟ್ಟರು.
ಚುನಾವಣೆಗೂ ಮುನ್ನ ಪಕ್ಷದ ಮ್ಯಾನಿಫ್ಯಾಸ್ಟೋದಲ್ಲಿ 165 ಭರವಸೆಗಳಿದ್ದವು. ಇವುಗಳಲ್ಲಿ 156 ಭರವಸೆಗಳನ್ನು ಈಡೇರಿಸಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡ ಮುಖ್ಯವಂಮತ್ರಿಗಳ ಪೈಕಿ ಇವರು ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ.

ಪ್ರಾದೇಶಿಕ ಸೊಗಡಿನ ನಡತೆ

ಸಿದ್ದರಾಮಯ್ಯ ಅವರು ಪ್ರದೇಶಕ್ಕನುಗುಣವಾಗಿ ಒರಟು ಸ್ವಭಾವ. ಅತ್ಯಂತ ಸಾಮಾಜಿಕ ಕಳಕಳಿ ಇರುವ ನಾಯಕ. ಬಡವರು, ದೀನ ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ವರ್ಗದವರನ್ನು ಸಮಾನ ದೃಷ್ಟಿಯಿಂದ ಕಾಣುವ ಮಾತೃ ಹೃದಯಿ. ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದೊಂದಿಗಿನ ರಾಜಕೀಯ ನಡೆ ಪ್ರತಿಯೊಬ್ಬ ರಾಜಕಾರಣಿಗಳಿಗೆ ಮಾದರಿಯಾಗಬೇಕು.

ಜುಬ್ಬ ಪಂಚೆಯೊಂದಿಗೆ ಶಾಲು ಧರಿಸಿ ಬಂದರೆ ಪ್ರಾದೇಶಿಕ ಸೊಗಡಿನ ಹಳ್ಳಿಯೂರಿನ ಗೌಡ ಎನ್ನುವಂತೆ ಕಾಣುತ್ತಾರೆ. ಸಹಜ ಸ್ವಭಾವ, ಮಾತು, ನಡವಳಿಕೆ ಅವರ ಪ್ರತಿಷ್ಠೆಯನ್ನು ಮತ್ತಷ್ಟು ಉಮೇದು ಮಾಡುವುದರಲ್ಲಿ ಅನುಮಾನವಿಲ್ಲ.

ಸಿದ್ದರಾಮಯ್ಯ ವ್ಯಕ್ತಿತ್ವ ಶುದ್ಧ

ಸದನದಲ್ಲಿ ಕಲಾಪದ ವೇಳೆ ಸುರಿಮಳೆ ಗೈಯುವ ಪ್ರಶ್ನೆಗಳಿಗೆ ಆಡಳಿತ ಪಕ್ಷಗಳು ಬೆದರಿ ಹೋಗುತ್ತವೆ. ಲಾ ಪಾಯಿಂಟ್ ಹಾಕಿದಾಗ ಸಚಿವರ ಬಾಯಿ ಕಟ್ಟಿ ತಡವರಿಸುತ್ತರೆ. ಆದರೆ, ಇಷ್ಟು ವರ್ಷಗಳ ಸುಧೀರ್ಘ ಆಡಳಿತದ ಅವಧಿಯಲ್ಲಿ ಒಮ್ಮೆಯೂ ಅಸಂಸದೀಯ ಪದಗಳನ್ನಾಗಲೀ.. ಬಳಸಿಲ್ಲ.
ವಾದಾ ವಾಗ್ವಾದಗಳ ವೇಳೆ ವೈಯಕ್ತಿಕ ದ್ವೇಷ, ನಿಂದನೆ ಎಂದಿಗೂ ತೋರಿಲ್ಲದೇ ಇರುವುದು ಅವರ ವ್ಯಕ್ತಿತ್ವದ ಘನತೆಯನ್ನು ಪ್ರಸ್ತುತ ಪಡಿಸುತ್ತದೆ.
ರಾಜಕೀಯ ಕಾರಣಕ್ಕಾಗಿ ನಾನು ವಿನಾಃ ಕಾರಣ ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂಬ ಮಾತನ್ನೂ ಅವರು ಹಲವು ಬಾರಿ ಉಚ್ಛರಿಸಿದ್ದುಂಟು.

ಭಾಗ್ಯಗಳ ಸರದಾರನಿಗೆ 75ರ ಅಮೃತ ಮಹೋತ್ಸವ

Publicstory/prajayoga

ಸಿದ್ದು ಬಿ ಎಸ್, ಸೂರನಹಳ್ಳಿ

ರಾಜ್ಯದ ಜನರಿಗೆ ಭಾಗ್ಯಗಳ ಸುರಿಮಳೆಯನ್ನೇ ಸುರಿಸಿದ ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರು ಇದೀಗ 75 ವರ್ಷದ ಅಮೃತ ಘಳಿಗೆಗೆ ಕಾಲಿಟ್ಟಿದ್ದಾರೆ. ಅವರ ರಾಜಕೀಯ ಜೀವನದ ಹತ್ತು ಹಲವು ಯೋಜನೆಗಳನ್ನು ರಾಜ್ಯ ಕಟ್ಟಕಡೆಯ ಪ್ರಜೆಗೂ ತಲುಪಿ ಜನತೆ ಸುಭೀಕ್ಷದಿಂದ ಜೀವಿಸುವಂತಾಗಿದೆ. ಹಾಗೆಯೇ ಅವರು ಜಾರಿಗೆ ತಂದ ಯೋಜನೆಗಳನ್ನು ನಾವು ನೋಡುತ್ತಾ ಹೋದಂತೆ.

ಗ್ರಾಮಕ್ಕೊಂದು ಆಟದ ಮೈದಾನ, ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ, ರುದ್ರಭೂಮಿ ನಿರ್ಮಾಣ, ಕುರಿ-ದನದ ದೊಡ್ಡಿ,  ಧಾನ್ಯಗಳ ಒಕ್ಕಲು ಕಣ, ಬಯಲು ರಂಗಮಂದಿರ ಸ್ವಯಂ ಉದ್ಯೋಗ,  ಕೌಶಲ್ಯ ತರಬೇತಿ,  ನಮ್ಮ ಹಳ್ಳಿ – ನಮ್ಮ ನೀರು, ನಮ್ಮ ಹೊಲ – ನಮ್ಮ ದಾರಿ,  ನಮ್ಮೂರ ಕೆರೆ, ರಸ್ತೆ ನಿರ್ಮಾಣ, ನಾಗರಿಕ ಸೇವಾ ಕೇಂದ್ರ,  ಸಾರ್ವಜನಿಕ ಗ್ರಂಥಾಲಯ, ಮನೆಗೊಂದು ಶೌಚಾಲಯ ಹೀಗೆ ಅನೇಕ 156 ಜನಪರ ಕಾರ್ಯಕ್ರಮಗಳನ್ನು ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದರು.

1. ಅನ್ನಭಾಗ್ಯ:-

ಈ ಮೂಲಕ ಭಾರತ ಸರ್ಕಾರದ 3 ಪ್ರಶಸ್ತಿಗಳನ್ನು ರಾಜ್ಯ ಪಡೆಯುವಂತೆ ಮಾಡಿದರು. ಮುಖ್ಯಮಂತ್ರಿ ಗ್ರಾಮ ವಿಕಾಸ ಎಂಬ ಹೊಸ ಯೋಜನೆ ಮೂಲಕ ಒಂದು ಗ್ರಾಮಕ್ಕೆ ಒಂದು ಕೋಟಿ ರೂ. ಗಳಂತೆ ಒಂದು ಸಾವಿರ ಗ್ರಾಮಗಳಿಗೆ ಹಣ ನೀಡಿದರು.

ಈ ಯೋಜನೆ ಸಿದ್ದರಾಮಯ್ಯನವರ ಜೀವನ ಅನುಭವದಿಂದ ಮೂಡಿದ ಅಗಾಧ ಅರಿವಿನ ಚಿಂತನೆಯ ಯೋಜನೆ. ಹಸಿವು ಮುಕ್ತಗೊಳಿಸುವ  ಬಿರುಸಿನ ಹೆಜ್ಜೆ ಇದು. ಆದ್ದರಿಂದಲೇ ಬಸವ ಜಯಂತಿ ದಿನ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ಕೇವಲ ಅರ್ಧಗಂಟೆಯಲ್ಲಿ ಎಲ್ಲ ಜಾತಿ ಜನಾಂಗದ ಬಡವರಿಗೆ 10 ಕೆಜಿಯಂತೆ ಪ್ರತಿ ಕುಟುಂಬಕ್ಕೆ 30 ಕೆ.ಜಿ ಅಕ್ಕಿ ಸಿಗುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದರು.

2. ಇಂದಿರಾ ಕ್ಯಾಂಟೀನ್:-

ಅನ್ನಭಾಗ್ಯದ ಜೊತೆಗೆ ಬಡವರಿಗೆ ಆಹಾರ ಭಾಗ್ಯವನ್ನು ನೀಡಲಿಕ್ಕಾಗಿ ತಂದ ಮಹತ್ವಾಕಾಂಕ್ಷಿ ಯೋಜನೆ. 2017- 18ನೇ ಸಾಲಿನ ಬಜೆಟ್ ನಲ್ಲಿ ಶ್ರೀಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಅಂದರೆ ಕೇವಲ 5 ರೂ. ಗೆ ತಿಂಡಿ. 10 ರೂ. ಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ಕಾರ್ಯಕ್ರಮ ಘೋಷಣೆ.

3. ಕ್ಷೀರಭಾಗ್ಯ ಯೋಜನೆ :-

ಯೋಜನೆಯನ್ನು ರಾಜ್ಯದಲ್ಲಿ ಚಾಲನೆಗೆ ತಂದಿರುವ ಹಿಂದೆ ಬಹುದೊಡ್ಡ ಉದ್ದೇಶವಿದೆ.  ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕಂಡು, ಮಧ್ಯಾಹ್ನದ ವೇಳೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಐದು ದಿನ ಕೆನೆಭರಿತ 150 ಎಂ.ಎಲ್ ಹಾಲಿನ ಪೂರೈಕೆ 2013 ರಿಂದ ಜಾರಿಗೊಳಿಸಿದರು.

4. ವಿದ್ಯಾಸಿರಿ :-

ಕೆಳವರ್ಗಗಳಿಗೆ ಎಟುಕಲಾರದ ಸಂಪತ್ತಾಗಿದ್ದ ಉನ್ನತ ಶಿಕ್ಷಣವು ಸರ್ವರಿಗೂ ಸಮಾನವಾಗಿ ದೊರಕುವಂತೆ ಮಾಡುವ ಸದುದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಸಿಗದೇ ಹೋದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 1500 ಅಂತೆ 10 ತಿಂಗಳಿಗೆ ಭೋಜನ ವೆಚ್ಚವನ್ನು ಸರ್ಕಾರ ಭರಿಸುವ ಕಾರ್ಯಕ್ರಮ.

5. ಋಣಮುಕ್ತ ಭಾಗ್ಯ :-

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 1978 ರಿಂದ ಹಿಂದುಳಿದ ವರ್ಗಗಳಿಗೆ ಮಂಜೂರು ಮಾಡಿದ್ದ ಸಾಲ ಮತ್ತು ಬಡ್ಡಿ ಮರುಪಾವತಿ ಮಾಡದೇ ಹಿಂದುಳಿದ ವರ್ಗಗಳು ತೊಂದರೆಯಲ್ಲಿ ಇದ್ದುದರಿಂದ ಸಿದ್ದರಾಮಯ್ಯನವರು ಅಸಲು ಬಡ್ಡಿ  ಬಾಕಿ ಇದ್ದರೂ 514 ಕೋಟಿಗಳ ಸಾಲ ಮನ್ನಾ ಮಾಡಿ 4.98 ಲಕ್ಷ ಹಿಂದುಳಿದ ವರ್ಗಗಳ ಫಲಾನುಭವಿಗಳನ್ನು ಸಾಲದಿಂದ ಋಣ ಮುಕ್ತರನ್ನಾಗಿಸಿ, ನೆಮ್ಮದಿಯಿಂದ ಜೀವನ ನಡೆಸಲು ದಾರಿ ಮಾಡಿಕೊಟ್ಟರು.

6. ಕೃಷಿ ಭಾಗ್ಯ ಯೋಜನೆ :-

ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ, ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣು ಆರೋಗ್ಯ ಚೀಟಿ ವಿತರಣೆ, ಸಾವಯವ ಕೃಷಿಗೆ ಉತ್ತೇಜನ, ಮಳೆಯಾಶ್ರಿತ ರೈತರಿಗೆ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ ನೀಡಲಾಯಿತು.

7. ರೈತ ಬೆಳಕು :-

ರೈತ ಬೆಳಕು ಎಂಬ ಹೊಸ ಕಾರ್ಯಕ್ರಮವನ್ನು 2018 – 19ರ ಬಜೆಟ್ ನಲ್ಲಿ ಘೋಷಿಸಲಾಯಿತು. ಯೋಜನೆಯಿಂದ ರಣಭೂಮಿಯಲ್ಲಿ ಬೆಳೆ ಬೆಳೆಯುವ ರೈತರಿಗೆ ಒಂದು ಎಕರೆಗೆ ರೂ 5 ಸಾವಿರ,  ಗರಿಷ್ಠ ರೂ 10 ಸಾವಿರ ರೂ. ಗಳ ಸಹಾಯಧನವನ್ನು ರೈತರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಆಯಿತು.

8. ಬಯಲು ಬಹಿರ್ದೆಸೆ ಮುಕ್ತ ರಾಜ್ಯ:-

ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿಸಬೇಕೆಂಬ ಸಂಕಲ್ಪದಡಿಯಲ್ಲಿನ ಯೋಜನೆ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿರಿಸಿದೆ. 2018-19 ನೆ ಸಾಲಿನ ಅಂತ್ಯಕ್ಕೆ 37.63 ಲಕ್ಷ ಶೌಚಾಲಯಗಳನ್ನು ನಿರ್ಮಿಸಿ ಶೇ. 87% ರಷ್ಟು ಸಾಧನೆ ಮಾಡಿ ಈ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಕಾರ್ಯಕ್ರಮದ ಸಾಧನೆಗಾಗಿ ಭಾರತ ಸರ್ಕಾರವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

9. ಗ್ರಾಮ ವಿಕಾಸ ಯೋಜನೆ:-

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೂ ನಗರ ಪ್ರದೇಶದ ಜನರಿಗೆ ಒದಗಿಸಿರುವ ಸೌಕರ್ಯವನ್ನು ಒದಗಿಸಲು ಪ್ರತಿ ಗ್ರಾಮಕ್ಕೆ ಒಂದು ಕೋಟಿಯಂತೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಯಿತು.

10. ನಮ್ಮ ಗ್ರಾಮ ನಮ್ಮ ರಸ್ತೆ:-

ಗ್ರಾಮೀಣ ಪ್ರದೇಶದ ರಸ್ತೆಗಳು ಎಷ್ಟು ಸುರಕ್ಷಿತ ವಾಗಿವೆ. ಅಭಿವೃದ್ಧಿ ಮಾನದಂಡವನ್ನು ಗುರುತಿಸುವಾಗ ರಸ್ತೆ ನಿರ್ಮಾಣದ ಪ್ರಗತಿಯನ್ನು ಪರಿಗಣಿಸಬೇಕೆಂದು ಗ್ರಾಮೀಣ ಪ್ರದೇಶಗಳಿಗೆ ಸರ್ವ ಋತು ರಸ್ತೆಗಳ ಸಂಪರ್ಕವನ್ನು ಕಲ್ಪಿಸುವುದರ ಜೊತೆಗೆ ರಸ್ತೆಗಳ ನಿರ್ವಹಣೆ ಅಭಿವೃದ್ಧಿಗಾಗಿ, ಸಿದ್ದರಾಮಯ್ಯರ ಅವಧಿಯಲ್ಲಿ ರೂ 4.832 ಕೋಟಿ ಹಣ ಬಿಡುಗಡೆ ಮಾಡಲಾಯಿತು ಮತ್ತು 9,983 ಕಿ.ಮೀ ರಸ್ತೆ ಅಭಿವೃದ್ಧಿಯಾಯಿತು.

11. ವಸತಿ ಭಾಗ್ಯ ಯೋಜನೆ:-

ಕರ್ನಾಟಕದಲ್ಲಿ ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಉದ್ದೇಶದಿಂದ ಸೂರಿಗಾಗಿ ಕನಸು ಕಂಡು ಮಣ್ಣಾಗಿ ಹೋದವರ ಕನಸು ನನಸಾಗಲೆಂದು ವಸತಿ ಭಾಗ್ಯ ಯೋಜನೆಯನ್ನು ಮತ್ತಷ್ಟು ಪುನಶ್ಚೇತನಗೊಳಿಸಲು ಸಿದ್ದರಾಮಯ್ಯನವರು ಪಣ ತೊಟ್ಟರು. ಇವರ ಅವಧಿಯಲ್ಲಿ 13.95 ಲಕ್ಷ ಮನೆಗಳನ್ನು ನಿರ್ಮಿಸಿ ದಾಖಲೆ ಮಾಡಿತು. ವಸತಿ ಕಾರ್ಯಕ್ರಮಕ್ಕೆ 15.391 ಕೋಟಿ ಹಣವನ್ನು ವೆಚ್ಚ ಮಾಡಲಾಯಿತು.

12. ಪಶು ಭಾಗ್ಯ ಯೋಜನೆ :-

ಪಶುಸಂಗೋಪನೆಗೆ ಉತ್ತೇಜನ ನೀಡಿ ಬಡವರ ನಿರಂತರ ಆದಾಯ ಒಂದು ಸಲುವಾಗಿ ಹೈನುಗಾರಿಕೆ ಕೋಳಿ ಸಾಕಾಣಿಕೆ ಕುರಿ ಸಾಕಾಣಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ನಡೆಸಲು ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 50% ರಷ್ಟು ಸಹಾಯಧನ  ಸೇರಿದಂತೆ ರೂ 60,000 ಮತ್ತು ಸಾಮಾನ್ಯ ವರ್ಗದವರಿಗೆ ಶೇಕಡ 25% ರಷ್ಟು ಸಹಾಯಧನ ಸೇರಿದಂತೆ 40,000 ರೂ ಘಟಕ ವೆಚ್ಚದಲ್ಲಿ ಸಹಾಯ ನೀಡಲಾಯಿತು.

13.ಕುರಿಗಾಹಿ ಯೋಜನೆ :-

ಅಲೆಮಾರಿ ಕುರಿಗಾರರ ಮಂದೆಯಲ್ಲಿ ಕನಿಷ್ಠ  500 ರಿಂದ 1000 ದವರಗೆ ಕುರಿ ಗಳಿರುತ್ತವೆ. ಈ ಕುರಿಗಾರರು ಒಂದು ಬಾರಿ ಗ್ರಾಮ ಬಿಟ್ಟರೆ ಪುನಹ ಅವರ ಗ್ರಾಮದ ಹಟ್ಟಿಯನ್ನು ಸೇರುವುದು ಒಂದು ವರ್ಷದ ನಂತರವೇ. ಇಂತಹವರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದರು. ಆಕಸ್ಮಿಕವಾಗಿ ಸಿಡಿಲು ಬಡಿದು ಕುರಿಗಳು ಸತ್ತರೆ, ರೋಗಕ್ಕೆ ತುತ್ತಾದರೆ, ಪ್ರವಾಹದಲ್ಲಿ ಸಿಕ್ಕಿ ಮೃತಪಟ್ಟರೆ, ಅಪಘಾತದಲ್ಲಿ ಸತ್ತರೆ ಪ್ರತಿ ಕುರಿಗೆ 5 ಸಾವಿರ ಪರಿಹಾರ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ.

14. ಪಡಸಾಲೆ ಯೋಜನೆ :-

ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡಲಾಗುವ ಪಡಿತರ ಚೀಟಿ ಕಂದಾಯ ಮತ್ತು ಸರ್ವೆ ದಾಖಲೆಗಳ ದೃಢೀಕರಣದ ನಕಲು, ಪಹಣಿ ಪತ್ರ ಹಕ್ಕು ಬದಲಾವಣೆ ಹಾಗೂ ವಿವಿಧ ಪ್ರಮಾಣಪತ್ರಗಳ ಸೇವೆಗಳನ್ನು ತಾಲೂಕು ಕಚೇರಿಯಲ್ಲಿ ಒಂದೇ ಸೂರಿನಡಿಯಲ್ಲಿ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪಡಸಾಲೆ ಯೋಜನೆ ಜಾರಿ ತರಲಾಯಿತು

15. ಮಾತೃಪೂರ್ಣ ಯೋಜನೆ:-

ಆರೋಗ್ಯವಂತ ಮಕ್ಕಳ ಪೋಷಣೆಗೆ ತಾಯಂದಿರ ಆರೋಗ್ಯ ಅಷ್ಟೇ ಮುಖ್ಯ ಅರಿವಿನ ಬೆಳಕಿನಲ್ಲಿ ರೂಪಿಸಿದ್ದೇ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿರಲು, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೋಷಕಾಂಶಗಳನ್ನು ಒದಗಿಸುವ ಯೋಜನೆ ಮಾತೃಪೂರ್ಣ ಯೋಜನೆ ಜಾರಿಗೆ ತಂದರು.

16. ಮನಸ್ವಿನಿ ಯೋಜನೆ :-

ಮಹಿಳೆಯರ ಸಬಲೀಕರಣವನ್ನು ಪುಷ್ಟಿಗೊಳಿಸುವ ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ 40 ವರ್ಷ ದಾಟಿದ ಹೆಣ್ಣುಮಕ್ಕಳು ಮದುವೆಯಾಗದೆ ಮನೆಯಲ್ಲಿಯೇ ಉಳಿದವುಗಳ ಬಗ್ಗೆ ಚಿಂತೆ ಮಾಡುತ್ತಾರೆ. ಮದುವೆಯಾಗದೆ ಉಳಿದಿರುವಂತ ಮಹಿಳೆಯರಿಗೆ ರೂ 500 ಮಾಸಾಶನ ನೀಡುವ ಯೋಜನೆಯಾಗಿದೆ ಇದಾಗಿದೆ.

17. ಮೈತ್ರಿ :-

ತೃತೀಯ ಲಿಂಗಿಗಳಿಗೆ ಮೈತ್ರಿ ಎಂಬ ಹೊಸ ಯೋಜನೆ ಜಾರಿಗೆ ತಂದು, ಉದ್ಯೋಗವಕಾಶಗಳಿಂದ ವಂಚಿತರಾಗಿ ಸಮಾಜದ ಅವಕೃಪೆಗೆ ಒಳಗಾಗಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ರೂ. 500 ಶಾಸನ ಜಾರಿಗೆ ತರಲಾಗಿದೆ.

18. ಹರೀಶ್ ಸಾಂತ್ವನ ಯೋಜನೆ:-

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಜೀವ ಉಳಿಸಲು ಹಣ ಇಲ್ಲ ಎಂಬುದು ಅಡ್ಡಿಯಾಗಬಾರದು ಎಂದು, ಬಡವ-ಬಲ್ಲಿದ ಯಾರೇ ಆಗಲಿ ಅಪಘಾತದಂತಹ ತುರ್ತು ಗಳಿಗೆಯಲ್ಲಿ ಸೂಕ್ತ ಚಿಕಿತ್ಸೆ ದೊರಕಿಸಿ ಜೀವ ಉಳಿಸಬೇಕು. ಇಂತಹದೊಂದು ಜೀವ ಕಾಳಜಿಯುಳ್ಳ ಆದೇಶ ದೇಶದಲ್ಲಿ ಮೊದಲು ಎನ್ನಬಹುದಾದ ಮಹತ್ವಕಾಂಕ್ಷೆಯ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೆ ತರಲಾಗಿದೆ.

19. ಇನ್ ವೆಸ್ಟ್ ಕರ್ನಾಟಕ :-

ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣ. ರಾಜ್ಯದ ಕೈಗಾರಿಕಾ ಸ್ನೇಹಿ ಕಾನೂನುಗಳು ಬಂಡವಾಳ ಹೂಡಿಕೆ ಉತ್ತೇಜನ. 2016 ರಲ್ಲಿ ಈ ಯೋಜನೆ ಜಾರಿ.

21. ಮೂಢ ನಂಬಿಕೆ ವಿರೋಧಿ ಕಾಯ್ದೆ:-

ಸಮಾಜದಲ್ಲಿನ ಮೂಢನಂಬಿಕೆಗಳು, ಅಮಾನವೀಯ ದೃಷ್ಟ ಪದ್ಧತಿಗಳು ಹಾಗೂ ವಾಮಾಚಾರಗಳನ್ನು ಕಣ್ಣಾರೆ ಕಂಡ ಸಿದ್ದರಾಮಯ್ಯ ಅವರು, ಇವುಗಳ ನಿರ್ಮೂಲನೆ ವಿಧೇಯಕ-2017 ಕಾಯ್ದೆಯನ್ನು ಜಾರಿಗೆ ಅನುವು ಮಾಡಿದ್ದು ಮತ್ತೊಂದು ಪ್ರಗತಿಪರ ನಿಲುವಿನ ಯೋಜನೆಯಾಗಿದೆ.

23. ಭಾಗ್ಯಜ್ಯೋತಿ:-

ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಭಾಗ್ಯಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಹಾಗೂ ಹಣ ಪಾವತಿಸದ ವಿದ್ಯುತ್ ಸಂಪರ್ಕ ಕಡಿತ ಒಳಗಾಗಿದ್ದ ರಾಜ್ಯ ಸುಮಾರು 20 ಲಕ್ಷ ಫಲಾನುಭವಿಗಳಿಗಾಗಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು.

24. ಕೆರೆ ಸಂಜೀವಿನಿ :-

ಕೆರೆಕಟ್ಟೆಗಳನ್ನು ಜೀರ್ಣೋದ್ಧಾರ ಮಾಡಿ ನಿಸರ್ಗವನ್ನು ತಣಿಸುವುದು. ಆ ಮೂಲಕ ಜೀವ ಸಂಕುಲಕ್ಕೆ ತಂಪೆರೆಯುವ ಇಂದಿನ ದಿನಮಾನದಲ್ಲಿ ತುರ್ತಿನ ಕೆಲಸವಾಗಿದೆ. ಈ ಕೆರೆ ಸಂಜೀವಿನಿ ಹೊಸ ಕಾರ್ಯಕ್ರಮ ಇದೊಂದು ಪ್ರಗತಿದಾಯಕ ದಾರಿ.

ಹೀಗೆ ಪ್ರತೀ ಹೆಜ್ಜೆಯಲ್ಲೂ ಮಾದರಿ ನಡೆಯನ್ನು ಅನುಸರಿಸುತ್ತಾ ಬಂದಿರುವ ಮತ್ತು ಜನರ ಸಂಕಷ್ಟಗಳಿಗೆ ಮಿಡಿಯುವ ಗುಣ ಹೊಂದಿರುವ ಇವರು ರಾಜ್ಯದ ಮತದಾರರ ಮನಸ್ಸಿನಲ್ಲಿ ಶಾಶ್ವತ ಮುಖ್ಯಂಮತ್ರಿಯಾಗಿ ನೆಲೆಸಿದ್ದಾರೆ.

ವಿವಿಧ ಪಶುಪಾಲನಾ ಚಟುವಟಿಕೆ ತರಬೇತಿ

0

Publicstory/prajayoga

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ತುಮಕೂರು ಇವರ ವತಿಯಿಂದ ರೈತರಿಗೆ ವಿವಿಧ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು.

ಆಗಸ್ಟ್ 2022ರ ಮಾಹೆಯ ಮೊದಲನೇ ವಾರದಲ್ಲಿ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ, ಕುರಿ/ಮೇಕೆ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಬಗ್ಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು.
ಆಸಕ್ತ ರೈತರು ಮುಖ್ಯ ಪಶುವೈದಾಧಿಕಾರಿಗಳ ಕಚೇರಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಕಾಲ್‌ಟೆಕ್ಸ್ ಸರ್ಕಲ್, ಕುಣಿಗಲ್ ರಸ್ತೆ, ತುಮಕೂರು, ದೂ.ವಾ.ಸಂ. 0816-2251214 ಇಲ್ಲಿ ತರಬೇತಿಗಾಗಿ ಹಾಜರಾಗುವುದು.
ಆಧುನಿಕ ಹೈನುಗಾರಿಕೆ ತರಬೇತಿ ಕುರಿತಂತೆ ಆಗಸ್ಟ್ ೨ ಹಾಗೂ ೩ರಂದು ೨೫ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
ಕುರಿ/ಮೇಕೆ ಸಾಕಾಣಿಕೆ ಕುರಿತಂತೆ ಆಗಸ್ಟ್ ೫ ಹಾಗೂ 6 ರಂದು 25 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಮುಖ್ಯಪಶುವೈದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.