ತುರುವೇಕೆರೆ: ಸ್ಥಳೀಯ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಶಾರಾಜ್ ಶೇಖರ್ ಹಾಗು ಉಪಾಧ್ಯಕ್ಷರಾಗಿ ಭಾಗ್ಯಮ್ಮ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳೆರಡನ್ನೂ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಮಾಜಿ ಶಾಸಕ ಜಯರಾಮ್ ಯಶ್ವಸ್ವಿಯಾದರು.
ಮೊದಲನೆಯ ಅವಧಿಯಲ್ಲಿಯೂ ಸಹ ಬಿಜೆಪಿ ಪಕ್ಷ ಸುಮಾರು ಎರಡುವರೆ ವರ್ಷ ಅಧಿಕಾರ ನಡೆಸಿತ್ತು. ಮೈತ್ರಿ ಇದ್ದರೂ ಎರಡನೇ ಅವಧಿಯಲ್ಲೂ ಮತ್ತೆ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಜಿ ಶಾಸಕರನ್ನು ನೋಡಿಕೊಂಡಿದ್ದಾರೆ. ಹಾಗಾಗಿ ಆಶಾರಾಜಶೇಖರ್ ಎರಡನೇ ಬಾರಿಗೂ ಬಿಜೆಪಿಯಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
14 ಸದಸ್ಯರ ಬಲ ಹೊಂದಿರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 12 ಸದಸ್ಯರು ಹಾಜರಾಗಿದ್ದರು. ಇಬ್ಬರು ಸದಸ್ಯರು ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ 13ನೇ ವಾರ್ಡಿನ ಆಶಾ ರಾಜಶೇಖರ್ , 3ನೇ ವಾರ್ಡಿನ ಭಾಗ್ಯಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂ.ಇ ಅಹಮದ್ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ನೂತನ ಅಧ್ಯಕ್ಷೆ ಆಶಾ ರಾಜಶೇಖರ್ ಮಾತನಾಡಿ, ಮಾಜಿ ಶಾಸಕ ಮಸಾಲ ಜಯರಾಮ್ ರವರು ನನ್ನನು ಎರಡು ಬಾರಿ ಪಟ್ಟಣ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅವರಿಗೂ, ಸದಸ್ಯರಿಗೂ ದನ್ಯವಾದಗಳನ್ನು ತಿಳಿಸುವೆ. ನನ್ನ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿ ಗೆ ಎಲ್ಲರ ಸಹಕಾರದೊಂದಿಗೆ ಶ್ರಮಿಸುತ್ತೇನೆ ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಯಜಮಾನ್ ಮಹೇಶ್, ಎನ್.ಆರ್.ಸುರೇಶ್, ಅಂಜನ್ ಕುಮಾರ್, ಮಧು, ರವಿ, ಚಿದಾನಂದ್, ಫ್ರಭಾಕರ್, ಸ್ವಪ್ನಾನಟೇಶ್, ಜಯಮ್ಮ, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ವೀರಶೈವ ಲಿಂಗಾಯಿತ ಸಮುದಾಯದ ತಾಲ್ಲೂಕು ಅಧ್ಯಕ್ಷ ಕುಮಾರ್ ಸ್ವಾಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮುತ್ತಣ್ಣ, ಮಾಜಿ ಅಧ್ಯಕ್ಷ ದುಂಡಾರೇಣಕಪ್ಪ, ಬಿಜೆಪಿ ಮುಖಂಡರಾದ ಕಾಳಂಜಿಹಳ್ಳಿ ಸೋಮಶೇಖರ್, ಪ್ರಸಾದ್, ಸಿದ್ದಣ್ಣ, ಪ್ರಕಾಶ್ , ಸುರೇಶ್ ಸೇರಿದಂತೆ ಮುಖಂಡರು ಅಭಿನಂದಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅರೆ-ಮಲೆನಾಡು ಮದಲಿಂಗನ ಕಣಿವೆ ಅರಣ್ಯ ಪ್ರದೇಶದ ಸಾರ್ವಜನಿಕ ವೀಕ್ಷಣಾ ಗೋಪುರ ಹಾನಿ
ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನ ಸೀಮೆಯುದ್ದಕ್ಕೂ ಚಾರಿತ್ರಿಕವಾದ ಜನಪದೀಯ ಮಹತ್ವವನ್ನು ಹೊಂದಿರುವ ಮದಲಿಂಗನ ಕಣಿವೆ ಅರಣ್ಯ ಪ್ರದೇಶದ ಸಾರ್ವಜನಿಕ ವೀಕ್ಷಣಾ ಗೋಪುರ ಶಿಥಿಲಗೊಂಡು ಹಾನಿಗೊಳಗಾಗಿದೆ.
ತಾಲ್ಲೂಕು ಪಟ್ಟಣದ ಹಿತ್ತಿಲಲ್ಲೇ ಇರುವ ಮದಲಿಂಗನ ಕಣಿವೆ ಗುಡ್ಡಸಾಲು ಹಾಗೂ ಅರೆ ಮಲೆನಾಡು ಗುಡ್ಡಗಾಡು ಅರಣ್ಯದಲ್ಲಿ ಚಾರಣಿಗರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರಕೃತಿಯ ಸೊಬಗನ್ನು ಮನಸಾರೆ ವೀಕ್ಷಿಸುವ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ವೀಕ್ಷಣಾ ಗೋಪುರದ ಒಳಭಾಗ ತುಕ್ಕು ಹಿಡಿದು ಹಾನಿಗೊಳಗಾಗಿ ಮುರಿದುಬಿದ್ದಿದೆ.
ವೀಕ್ಷಣಾ ಗೋಪುರದ ಒಳಭಾಗದಲ್ಲಿ ಮಳೆ ನೀರು ಸಂಗ್ರಹವಾಗಿ, ಕಬ್ಬಿಣ ತುಕ್ಕು ಹಿಡಿದು ಶಿಥಿಲಾವಸ್ಥೆಗೆ ತಲುಪಿ ಅದು ಮುರಿದುಕೊಂಡು ಬಿದ್ದಿರುವಂತೆ ಕಾಣುತ್ತಿದೆ. ಗೋಪುರದ ಒಳಗಡೆ ಮಳೆ ನೀರು ಸಂಗ್ರಹವಾಗದೆ ಸರಾಗವಾಗಿ ಹರಿದು ಹೊರಹೋಗಲು ಅದಕ್ಕೆ ದಾರಿ ಮಾಡಿಕೊಡದಿರುವುದೇ ಇದಕ್ಕೆ ಕಾರಣ ಎಂದು ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ವೀಕ್ಷಕ ತಜ್ಞರು ದೂರುತ್ತಾರೆ.
ಇಂಥ ಅವೈಜ್ಞಾನಿಕ ಕಾಮಗಾರಿಯನ್ನು ಪರಿಶೀಲಿಸಿ ಪ್ರಾರಂಭದಲ್ಲೇ ಅದರ ಬಗ್ಗೆ ಎಚ್ಚರ ವಹಿಸದಿರುವುದು ಮತ್ತು ತುಕ್ಕು ಹಿಡಿದು ಗೋಪುರ ಹಾನಿಗೊಳಗಾಗುವವರೆಗೂ ಅದರ ಬಗ್ಗೆ ನಿಗಾ ವಹಿಸದೇ ಇಲಾಖೆ ನಿರ್ಲಕ್ಷ್ಯ ತೋರಿರುವುದು ಸ್ಥಳೀಯ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪಷ್ಟನೆ:: ಮದಲಿಂಗನ ಕಣಿವೆ ಅರಣ್ಯ ಪ್ರದೇಶದಲ್ಲಿರುವ ಸಾರ್ವಜನಿಕ ವೀಕ್ಷಣಾ ಗೋಪುರದ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿದ ಪ್ರಸ್ತಾವನೆ ಇಲಾಖೆಯ ಮುಂದಿದೆ. ಶೀಘ್ರವೇ ಅದನ್ನು ದುರಸ್ತಿಗೊಳಿಸಿ ಮತ್ತೆ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಲಾಗುವುದು ಎಂದು (ಆರ್ ಎಫ್ ಒ) ವಲಯ ಅರಣ್ಯ ಅಧಿಕಾರಿ ಅರುಣ್ ಸ್ಪಷ್ಟಪಡಿಸಿದ್ದಾರೆ.
ತುರುವೇಕೆರೆ: ಕ್ಷೇತ್ರದಲ್ಲಿನ ಬಡವರು, ಕೂಲಿಕಾರ್ಮಿಕರು ಮತ್ತು ರೈತರ ಮಕ್ಕಳು ಉನ್ನತ ಶಿಕ್ಷಣ ಓದಲು ಹೊರ ಜಿಲ್ಲೆಗಳಿಗೆ ಹೋಗಲು ಸಾದ್ಯವಾವಿಲ್ಲ ಆದ್ದರಿಂದ ತಾಲ್ಲೂಕಿಗೆ ಸ್ನಾತ್ತಕೋತ್ತರ ಮತ್ತು ಕಾನೂನು ಪದವಿ ಕಾಲೇಜನ್ನು ತರಲು ಚಿಂತಿಸಲಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ರವರ137ನೇ ಜನ್ಮ ಜಯಂತಿ, ಶಿಕ್ಷಕರ ದಿನಾಚರಣೆ ಹಾಗು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರ ಅವರು
ಗುಡ್ಡೇನಹಳ್ಳಿ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್ ನಲ್ಲಿ ಸ್ವಾತ್ನಕೋತ್ತರ ವಿಭಾಗದ ಅರ್ಥಶಾಸ್ತ್ರ ಮತ್ತು ಎಂ.ಕಾಂ ಪದವಿಗಳನ್ನು ಹೊಸದಾಗಿ ತೆರೆಯಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಬಳಿ ಚರ್ಚಿಸಿದ್ದೇನೆ. ತುರುವೇಕೆರೆ ಜಿಲ್ಲೆಯಲ್ಲೇ ಶೈಕ್ಷಣಿಕವಾಗಿ 2ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನಕ್ಕೆ ತಲುಪಲು ಶಿಕ್ಷಕರು, ಅಧಿಕಾರಿಗಳು ಕಠಿಣ ಶ್ರಮ ಹಾಕಿ ಎಂದರು.
ನನ್ನಅವಧಿಯಲ್ಲಿ 7 ಹೊಸ ಪ್ರೌಢ ಶಾಲೆಗಳನ್ನು ತೆರೆಯಲಾಗಿದ್ದು ಆ ಶಾಲೆಗಳಲ್ಲಿ ಕೆಲವು ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿವೆ ಆದ್ದರಿಂದ ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಹೆಣ್ಣು ಮಕ್ಕಳು ದೂರ ಹೋಗಿ ಓದಲು ಆಗುವುದಿಲ್ಲ ಹಾಗಾಗಿ ಮಾರ್ಚ್ ವರೆಗೂ ಮುಂದುವರೆಸಿ ಎಂದು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದೇನೆ. ತಾಲ್ಲೂಕಿನ ಕೆಲ ಶಿಕ್ಷಕರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಶಿಕ್ಷಕರ ಪಾತ್ರ ಅಪಾರ. ನಮ್ಮಂತಹ ರಾಜಕಾರಣಿಗಳಿಂದ ಹಿಡಿದು ಎಲ್ಲ ವರ್ಗದ ನಾಯಕರು, ವಿದ್ವಾಂಸರು, ಚಿಂತರು, ವಿಜ್ಞಾನಿಗಳನ್ನ ರೂಪಿಸುವವರು ಶಿಕ್ಷಕರೇ ಎಂದು ಶ್ಲಾಘಿಸಿದರು.
ಈಚಿನ ದಿನಗಳಲ್ಲಿ ಅತಿ ಕಡುಬಡವರ, ಕೂಲಿಕಾರ್ಮಿಕರ ಮಕ್ಕಳು ಐಎಎಸ್, ಕೆಎಎಸ್ ಮಾಡುತ್ತಿರುವುದು ನೋಡಿದರೆ ವಿದ್ಯೆ, ಉದ್ಯೋಗ ಮತ್ತು ಅಧಿಕಾರ ಪಡೆಯಲು ಬಡತನ ಅಡ್ಡಿಬಾರದು ಎಂಬುದು ನನ್ನಅಭಿಪ್ರಾಯವಾಗಿದೆ ಹಾಗಾಗಿ ಪ್ರತಿಯೊಬ್ಬರೂ ವಿದ್ಯಾವಂತರಾಗಿ ತಮ್ಮ ಮಕ್ಕಳನ್ನು ಚನ್ನಾಗಿ ಓದಿಸಿ ಎಂದರು.
ಬಿ.ಇ.ಒ ಎನ್.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಸಾಧಿಸುವ ಛಲವಿದ್ದರೆ ಶಿಕ್ಷಕರೊಬ್ಬರು ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಬಹುದೆಂದು ತೋರಿಸಿಕೊಟ್ಟವರು ರಾಧಾಕೃಷ್ಣನ್ ರವರು. ಅವರ ಚಿಂತನೆ, ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಿಷಮಸ್ಥಿತಿಯ ಸಮಾಜವನ್ನು ತಿದ್ದುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ಮಾತ್ರ. ಶಿಕ್ಷಕ ವೃತ್ತಪವಿತ್ರವಾದದು ಅದರ ಗೌರವತ್ವವನ್ನು ಚಾಚೂತಪ್ಪದೆ ಕಾಪಾಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ವಿರಕ್ತಮಠದ ಕರಿವೃಷಭ ದೇಶೀ ಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಮಾದಿಹಳ್ಳಿ ರಾಮಕೃಷ್ಣಮಠದ ಅಧ್ಯಕ್ಷರಾದ ಸ್ವಾಮಿ ಮಂಗಳನಾಥನಂದಾಜೀ ಮಹಾರಾಜ್ ದಿವ್ಯ ಸಾನಿಧ್ಯ ವಹಿಸಿದ್ದರು.
ಇದೇ ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸರ್ಕಾರಿ ಹಾಗು ಅನುದಾನಿತ 30 ನಿವೃತ್ತ ನೌಕರರು ಹಾಗು ವಿವಿಧ ವಿಷಯಗಳಲ್ಲಿನ ತಾಲ್ಲೂಕಿನ 40 ಅತ್ಯುತ್ತಮ ಶಿಕ್ಷಕರುಗಳನ್ನು ಅಭಿನಂಧಿಸಲಾಗುವುದು. ಉದಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ಎಸ್.ವಿ.ವಿಜಯಕುಮಾರ್ ಉಪನ್ಯಾಸ ನೀಡಿದರು,
ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಎಕುಂಞಅಹಮದ್, ಇ.ಒ.ಶಿವರಾಜಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜುಮುನಿಯೂರು, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಇಸಿಒ ಸಿದ್ದಪ್ಪ, ಬಿಆರ್ ಸಿ ಸುರೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ರೋಟರಿ ಅಧ್ಯಕ್ಷ ಸಾ.ಶಿ.ದೇವರಾಜು, ಇನ್ನರ್ ವೀಲ್ ಅಧ್ಯಕ್ಷೆ ನೇತ್ರಾ, ಸಾವಿತ್ರಿಭಾಯಿಫುಲೆ ಸಂಘದ ಭವ್ಯಸಂಪತ್, ಗುರುರಾಜು, ಸವಿತಾ, ಟ್ರಜರಿ ತ್ರಿನೇಶ್, ಸಿಆರ್ಪಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
ಚಿಕ್ಕನಾಯಕನಹಳ್ಳಿ : ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ರಸ್ತೆಗಳು ವಿಪರೀತ ಹದಗೆಟ್ಟು ಪಟ್ಟಣವಾಸಿಗಳು ಮತ್ತು ವಾಹನ ಚಾಲಕರ ನೆಮ್ಮದಿ ಕೆಡಿಸಿವೆ.
ಮಳೆ ಇಲ್ಲದ ದಿನಗಳಲ್ಲೇ ಈ ರಸ್ತೆಗಳ ಮೇಲೆ ಚಲಿಸುವುದು ಅಪಾಯಕಾರಿ. ಇನ್ನು ಮಳೆ ಬಂದ ದಿನಗಳಲ್ಲಿ ಇಲ್ಲಿಂದ ಹಾದು ಹೋಗುವುದೇ ದೊಡ್ಡ ಸಾಹಸ. ಮಂಡಿಗಾಲವರೆಗೂ ನೀರು ನಿಲ್ಲುವಷ್ಟು ಆಳದ ಗುಂಡಿಗಳು ರಸ್ತೆಗಳಲ್ಲಿವೆ.
ತೀನಂಶ್ರೀ ಗಳಿಗೆ ನಾವ್ ತೋರಿದ ಗೌರವ ಕಾಣಾ
ಒಳ ಚರಂಡಿಗಳು ಬ್ಲಾಕ್ ಆಗಿ ಮಳೆ ನೀರು ತುಂಬಿ ಉಕ್ಕಿ ಹರಿಯುತ್ತವೆ. ಕಚೇರಿಗಳ ಅಕ್ಕಪಕ್ಕ ಮತ್ತು ಇಂದಿರಾ ಕ್ಯಾಂಟೀನ್ ಬಳಿ ಹಾಗೂ ಸರ್ಕಾರಿ ಕಟ್ಟಡ ಮತ್ತು ಭವನಗಳ ಬಳಿ ಮಳೆ ನೀರು ನಿಂತು ಲಕ್ಷಾಂತರ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
ಡೆಂಗ್ಯೂ ಹರಡಿಕೊಳ್ಳುವ ಭೀತಿಯಿರುವ ಈ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದ್ದ ಇಲಾಖೆಗಳ ಬೇಜವಾಬ್ದಾರಿತನ ಹೇಳತೀರದು ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಎಂಥ ಚೆಂದ, ಎಂಥ ಅಂದ
ಪಟ್ಟಣದ ಖಾಲಿ ನಿವೇಶನಗಳಲ್ಲಿ ಆಳೆತ್ತರದ ಪಾರ್ಥೇನಿಯಂ ಮತ್ತು ಇತರೆ ಕಳೆಗಿಡಗಳು ಬೆಳೆದು ನಿಂತಿವೆ. ಸೊಳ್ಳೆಗಳ ಆವಾಸಕ್ಕೆ ಹೇಳಿ ಮಾಡಿಸಿದ ಆಯಕಟ್ಟಿನ ಜಾಗವದು. ಕ್ಷಣಕ್ಷಣಕ್ಕೂ ಸೊಳ್ಳೆಗಳ ದಾಳಿಗೊಳಗಾಗುತ್ತಿರುವ ಅಕ್ಕಪಕ್ಕದ ಮನೆ ನಿವಾಸಿಗಳ ರೋದನೆ ಕೇಳುವವರೇ ಇಲ್ಲದಂತಾಗಿದೆ.
ಪಟ್ಟಣದಲ್ಲಿ ಖಾಲಿ ಬಿದ್ದಿರುವ ನಿವೇಶನಗಳಲ್ಲಿ ಬೆಳೆದಿರುವ ಪಾರ್ಥೇನಿಯಂ ಮತ್ತು ಇತರೆ ಕಳೆ ಗಿಡಗಳು ಬೆಳೆಯದಂತೆ ಅವನ್ನು ನಿಯಂತ್ರಿಸಿ, ಖಾಲಿ ನಿವೇಶನದಲ್ಲಿ ಸ್ವಚ್ಛತೆ ಕಾಪಾಡುವುದು ನಿವೇಶನಗಳ ಮಾಲೀಕರ ಜವಾಬ್ದಾರಿ.
ಇಂದಿರಾ ಕ್ಯಾಂಟೀನ್
ಅವರು ತಮ್ಮ ನಿವೇಶನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಅವರಿಗೆ ನೊಟಿಸ್ ಕೊಟ್ಟು ಅವರಿಂದ ಸ್ವಚ್ಛತಾ ಕೆಲಸ ಮಾಡಿಸಬೇಕಾದುದು ಪುರಸಭೆಯ ಕರ್ತವ್ಯ. ಆದರೆ, ಚಿಕ್ಕನಾಯಕನಹಳ್ಳಿ ಪುರಸಭೆಯ ಅಧಿಕಾರಿಗಳು ಅಂತಹ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಡೆಂಗ್ಯೂ ಹರಡಿಕೊಳ್ಳುವ ಭೀತಿಯಿರುವ ಈ ದಿನಗಳಲ್ಲಿ ಪುರಸಭೆಯ ಇದೆಂಥ ಬೇಜವಾಬ್ದಾರಿ ನಡೆ ಎಂದು ಪಟ್ಟಣವಾಸಿಗಳು ನೊಂದುಕೊಳ್ಳುತ್ತಿದ್ದಾರೆ!
ನಗರೋತ್ಥಾನ ಅನುಷ್ಠಾನ ; ಮುಖ್ಯಾಧಿಕಾರಿ ::
ಇವರೇ ನೋಡಿ ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಮೇಡಂ
ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಮಂಜುಳ’ರವರಲ್ಲಿ ಪಟ್ಟಣದ ಈ ಅವ್ಯವಸ್ಥೆಯ ಬಗ್ಗೆ ಕೇಳಿದರೆ, ನಗರೋತ್ಥಾನ ಯೋಜನೆ ಪ್ರಾರಂಭಗೊಳ್ಳಬೇಕಿದೆ. ಆ ಯೋಜನೆಯಡಿ ಎಲ್ಲ ಕಾಮಗಾರಿಗಳನ್ನೂ ಮಾಡಲಿದ್ದೇವೆ. ಖಾಲಿ ನಿವೇಶನಗಳ ಮಾಲೀಕರಲ್ಲಿ ಅರಿವು-ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತೇವೆ ಎನ್ನುತ್ತಾರೆ.
ಬೇಸತ್ತ ಪಟ್ಟಣವಾಸಿಗಳು , ಆ ನಗರೋತ್ಥಾನ ಅದಿನ್ನೆಂದು ಅನುಷ್ಠಾನಗೊಳ್ಳಲಿದೆಯೋ ಎಂದು ಹತಾಶರಾಗಿ ಹೋಗಿದ್ದಾರೆ.
ಇವರು ಪುರಸಭೆಯ ಆರೋಗ್ಯಾಧಿಕಾರಿ
ಅಭಿವೃದ್ಧಿಗೆ ಮತ್ತೆ 64 ಕೋಟಿ ; ಶಾಸಕರ ಭರವಸೆ :
ಶಾಸಕ ಸುರೇಶಬಾಬು
ಯುಜಿಡಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ ಅದರ ಟ್ರಯಲ್-ಪರೀಕ್ಷೆಗಳನ್ನು ನಡೆಸಿ ಕನೆಕ್ಷನ್ ಕೊಟ್ಟ ನಂತರ, ಪಟ್ಟಣದ ರಸ್ತೆಗಳಿಗೆ ಡಾಂಬರೀಕರಣದ ಕಾಮಗಾರಿ ಕೈಗೆತ್ತಿಕೊಳ್ಳಲು ಸುಗಮವಾಗಲಿದೆ.
ಈಗ ಹೊಸದಾಗಿ ಮತ್ತೆ 64 ಕೋಟಿ ರೂಪಾಯಿಗಳನ್ನು ಕುಡಿಯುವ ನೀರಿನ ಪೈಪ್’ಲೈನ್ ಕಾಮಗಾರಿಗಾಗಿ ಬಿಡುಗಡೆ ಮಾಡಿಸಲಾಗಿದೆ.
ಗಣಿ ಬಾಧಿತ ಪ್ರದೇಶಾಭಿವೃದ್ಧಿ ಮತ್ತು ಪರಿಸರ ಪುನರುಜ್ಜೀವನ ಯೋಜನೆಯಡಿ 50 ಕೋಟಿ ರೂಪಾಯಿಗಳನ್ನು ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ. ಊರೂರಿಗೂ ಸಿಮೆಂಟ್ ರಸ್ತೆ ನಿರ್ಮಿಸಿಕೊಡುವ ಯೋಜನೆಯಿದೆ. ನಗರೋತ್ಥಾನ ಯೋಜನೆಯಡಿ ಎಲ್ಲ ಅಭಿವೃದ್ಧಿ ಕೆಲಸಗಳನ್ನೂ ಸಾಂಗೋಪಾಂಗವಾಗಿ ನೆರವೇರಿಸಲಾಗುವುದು. ಮಳೆ ಇರುವ ಕಾರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ತೊಡಕುಂಟಾಗುತ್ತಿದೆ, ಅಷ್ಟೆ ಎಂದು ಶಾಸಕ ಸಿ ಬಿ ಸುರೇಶ್ ಬಾಬು’ರವರು ಹೇಳುತ್ತಾರೆ.
ಯುಜಿಡಿ ಮಾಡಿದ್ದೇ ಬಂತು ; ಊರ ಜನರ ನೆಮ್ದಿ ಕೆಡ್ತು ::
ಇಂದಿರಾ ಕ್ಯಾಂಟೀನ್, ವಿದ್ಯಾನಗರ, ಮಹಾಲಕ್ಷ್ಮಿ ಬಡಾವಣೆ, ಕನಕಗಿರಿ ಬಡಾವಣೆ, ಮಾರ್ಕೆಟ್ ರಸ್ತೆ, ತೇರುಬೀದಿ, ಸರ್ಕಾರಿ ಆಸ್ಪತ್ರೆ ರಸ್ತೆ, ಜೋಗಿಹಳ್ಳಿ ರಸ್ತೆಗಳಲ್ಲಿ ಓಡಾಡುವ ಜನ ಸಂಬಂಧಿಸಿದ ಸರ್ಕಾರಿ ಇಲಾಖೆಗಳಿಗೆ ದಿನನಿತ್ಯ ಶಾಪ ಹಾಕುತ್ತಿದ್ದಾರೆ.
ಆಹಾ ನೋಡು ನಮ್ಮೂರ ರಸ್ತೆ
ಯುಜಿಡಿ ಕಾಮಗಾರಿಗಾಗಿ ಬೀದಿ ಬೀದಿಗಳಲ್ಲಿ ರಸ್ತೆಯನ್ನು ಬಗೆದು, ಕನೆಕ್ಷನ್ ಪೈಪುಗಳನ್ನು ಜೋಡಿಸಿದ ಮೇಲೆ, ರಸ್ತೆ ಮಧ್ಯದ ಯುಜಿಡಿ ಹೊಂಡಗಳಿಗೆ ಬರೇ ಮಣ್ಣು ಮುಚ್ಚಿ ಕೈ ತೊಳೆದುಕೊಂಡ ಕಂಟ್ರಾಕ್ಟರುಗಳ ಪತ್ತೆಯಿಲ್ಲ. ಆ ಯುಜಿಡಿ ಹೊಂಡಗಳ ಮಣ್ಣು ಕಸಿದುಕೊಂಡು ಈಗ ಅವೆಲ್ಲಾ ನಾಲೆಯಂತಾಗಿವೆ. ಯುಜಿಡಿ ಕಾಮಗಾರಿಯಿಂದ ಜನತೆಗೆ ಸಿಕ್ಕ ಪ್ರಯೋಜನವಾದರೂ ಏನು ಎಂದು ಕೇಳುತ್ತಾರೆ ಬೇಸತ್ತ ಮಂದಿ.
ಸಂಬಂಧಪಟ್ಟ ಇಲಾಖೆಗಳು ಯಾಕಿಷ್ಟು ಹೊಣೆಗೇಡಿಯಾಗಿವೆ ಎಂದು ಆಶ್ಚರ್ಯಪಡುವ ನಾಗರಿಕರಲ್ಲಿ, ನೀವು ಆರಿಸಿ ಕಳಿಸುತ್ತಿರುವ ನಿಮ್ಮ ಪ್ರತಿನಿಧಿಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ…. ಎಂದು ಊರಿನ ಪ್ರಜ್ಞಾವಂತರು ತಿರುಗಿ ಕೇಳುವಂತಾಗಿದೆ ಪರಿಸ್ಥಿತಿ.
ಚಿಕ್ಕನಾಯಕನಹಳ್ಳಿ : ಕರ್ನಾಟಕ ಪೌರಸಭೆಗಳ ಅಧಿನಿಯಮ(1964)ದಂತೆ ಪಟ್ಟಣದ ಪುರಸಭೆಗೆ ನೂತನವಾಗಿ ಐದು ಮಂದಿ ಸದಸ್ಯರನ್ನು ನಾಮ-ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.
ಅವರಲ್ಲಿ, ಧರ್ಮಾವರ ಬೀದಿಯ ರಘುಪತಿ ಬಿನ್ ಲಕ್ಷ್ಮಣಪ್ಪ, ಮಹಾಲಕ್ಷ್ಮಿ ಬಡಾವಣೆಯ ಸುಗಂಧರಾಜು ಬಿನ್ ಸಿ ಎಮ್ ಸಿದ್ಧಪ್ಪ, ಹೊಸಬೀದಿಯ ಸಿ ಜಿ ಚಂದ್ರಶೇಖರಯ್ಯ ಬಿನ್ ಗಂಗಾಧರಪ್ಪ, ಅಂಬೇಡ್ಕರ್ ನಗರದ ಶ್ರೀಮತಿ ಕೆಂಪಮ್ಮ ಕೋಂ ಶಿವಕುಮಾರ ಹಾಗೂ ಕುರುಬರಹಳ್ಳಿ ರಸ್ತೆಯ ಮಹಮ್ಮದ್ ಹುಸೇನ್ ಬಿನ್ ಪ್ಯಾರೇಜಾನ್ ರವರು ನೂತನವಾಗಿ ಚಿಕ್ಕನಾಯಕನಹಳ್ಳಿ ಪುರಸಭೆಗೆ ನಾಮ ನಿರ್ದೇಶನಗೊಂಡ ಸದಸ್ಯರು.
ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯಾದ ಟಿ.ಮಂಜುನಾಥ್’ರವರು ಈ ಐವರನ್ನು ನಾಮ-ನಿರ್ದೇಶನಗೊಳಿಸಿರುವ ಆದೇಶ ಹೊರಡಿಸಿದ್ದಾರೆ.
ಕಸಮುಕ್ತ ಚಿ ನಾ ಹಳ್ಳಿ :: ನಾಮ-ನಿರ್ದೇಶನಗೊಂಡ ಆದೇಶ ಕೈ-ತಲುಪಿದ ನಂತರ ಮಾತನಾಡಿದ ನೂತನ ಸದಸ್ಯ ಮಹಮ್ಮದ್ ಹುಸೇನ್, ಕರ್ನಾಟಕದ ಸಾಕಷ್ಟು ಕಡೆ ಪುರಸಭೆಯ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಅನುಷ್ಠಾನಗೊಳ್ಳುವ ನಿರೀಕ್ಷೆಗಳು ಕಾಣುತ್ತಿವೆ. ನಮ್ಮಲ್ಲೂ ಅಂತಹ ಆಧುನಿಕ ಮತ್ತು ವೈಜ್ಞಾನಿಕ ಮಾದರಿಯ ಕ್ರಮಗಳನ್ನು ಅನುಸರಿಸಲು ಆರಂಭಿಸಬೇಕಿದೆ.
ಪಟ್ಟಣದ ತ್ಯಾಜ್ಯವನ್ನು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಉಪಯುಕ್ತ ಗೊಬ್ಬರವಾಗಿ ಪರಿವರ್ತಿಸುವ ಆಧುನಿಕ ವಿಧಾನಗಳನ್ನು ನಮ್ಮಲ್ಲೂ ಅನುಷ್ಠಾನಗೊಳಿಸಬೇಕಿದೆ.
ತ್ಯಾಜ್ಯದಿಂದ ತಯಾರಾದ ಗೊಬ್ಬರವನ್ನು ಪುರಸಭೆಯ ವತಿಯಿಂದಲೇ ರೈತರಿಗೆ ಮಾರಾಟ ಮಾಡುವ ಸುಗಮವಾದ ಯೋಜನೆಯನ್ನು ರೂಪಿಸಿಕೊಂಡು, ಪರಿಸರ ಸ್ನೇಹಿ ಹಾಗೂ ಲಾಭದಾಯಕ ಮಾದರಿಯ ತ್ಯಾಜ್ಯ ನಿರ್ವಹಣೆಯನ್ನು ರೂಢಿಗೊಳಿಸಬೇಕು. ಒಟ್ಟಾರೆ, ಚಿಕ್ಕನಾಯಕನಹಳ್ಳಿ ಪಟ್ಟಣವನ್ನು ಕಸಮುಕ್ತ, ತ್ಯಾಜ್ಯಮುಕ್ತ ಪಟ್ಟಣವನ್ನಾಗಿ ರೂಪಿಸುವುದು ನಮ್ಮ ಮೊದಲ ಗುರಿ ಎಂದು ನೂತನವಾಗಿ ನಾಮ-ನಿರ್ದೇಶನಗೊಂಡ ಸದಸ್ಯರ ಪರವಾಗಿ ಮಹಮ್ಮದ್ ಹುಸೇನ್ ತಿಳಿಸಿದರು.
(ಚಿ ನಾ ಹಳ್ಳಿ ಪುರಸಭೆ ಗದ್ದುಗೆ ; ಸಾಮಾಜಿಕ ನ್ಯಾಯ ಮತ್ತು ಮೈತ್ರಿ-ಧರ್ಮ ; ಎರಡಲಗಿನ ಕತ್ತಿ)
ಚಿ ನಾ ಹಳ್ಳಿ ಪುರಸಭೆ ; ಅಧ್ಯಕ್ಷ ಗಾದಿ ಎಸ್ಟಿ ಮೀಸಲು (
ಚಿಕ್ಕನಾಯಕನಹಳ್ಳಿ : ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲು ರಾಜಕೀಯ ಪಕ್ಷ ಮತ್ತು ಸದಸ್ಯರುಗಳ ನಡುವೆ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಒಂದೂವರೆ ವರ್ಷದಿಂದಲೂ ಪಟ್ಟಣದ ಪುರಸಭೆಯ ಅಧ್ಯಕ್ಷಗಾದಿ ಖಾಲಿಯಿದೆ. ಈಗ ಆ ಸ್ಥಾನಗಳಿಗೆ ಸರ್ಕಾರದ ಮೀಸಲಾತಿ ಪ್ರಕಟಗೊಂಡಿರುವುದು ಹೊಸ ರಾಜಕೀಯಕ್ಕೆ ನಾಂದಿ ಹಾಡಿದೆ.
ಹಿಂದಿನಿಂದಲೂ ಪಟ್ಟಣದ ಪುರಸಭೆಯ ಅಧಿಕಾರ ಹಂಚಿಕೆಯಲ್ಲಿ ಶಾಸಕ ಸುರೇಶ್ ಬಾಬು’ರವರ ಮಾತೇ ಅಂತಿಮ. ಆದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮವನ್ನು ಪಾಲಿಸಬೇಕಾದ ಸಂಕಷ್ಟವೂ ಇದೆ. ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡೇ ಕಣಕ್ಕಿಳಿಯಲಿದೆ ಎಂಬುದನ್ನು ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಹಾಗೂ ಶಾಸಕ ಸಿ ಬಿ ಸುರೇಶ್ ಬಾಬು’ರವರು ಹೇಳಿದ್ದಾರೆ.
ಮೈತ್ರಿ-ಧರ್ಮ ಪಾಲಿಸುವ ಅನಿವಾರ್ಯತೆಯಿದ್ದರೂ ಸಾಮಾಜಿಕ ನ್ಯಾಯವನ್ನೂ ಪರಿಗಣಿಸಬೇಕಾದ ತುರ್ತಿದೆ. ಇಂಥದ್ದರಲ್ಲಿ ಪುರಸಭೆಯ ರಾಜಕೀಯ ಈ ಬಾರಿ ಯಾವ ಕಡೆಗೆ ವಾಲುವುದೋ ಎಂದು ಸ್ಥಳೀಯ ರಾಜಕೀಯ ಕಾರ್ಯಕರ್ತರು ಕಾದು ನೋಡುತ್ತಿದ್ದಾರೆ.
ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ (ಮೀಸಲು) ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳಲ್ಲಿ ಜಾತಿ ಮೀಸಲಾತಿ ಇರುವ ಅಭ್ಯರ್ಥಿಗಳೇ ಇಲ್ಲ. ಇದು ಜೆಡಿಎಸ್ ಪಕ್ಷಕ್ಕೆ ಅನುಕೂಲಕರವಾಗಿದೆ. ಹೀಗಾಗಿ, ಪ್ರಸಕ್ತ ಪುರಸಭೆಗೆ ಜೆಡಿಎಸ್ ಅಭ್ಯರ್ಥಿಗಳೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಗದ್ದುಗೆ ಏರುವ ಸಾಧ್ಯತೆಯೇ ಹೆಚ್ಚಿದೆ. ಇನ್ನು ಮೈತ್ರಿ-ಧರ್ಮ ಪರಿಪಾಲನೆಗಾಗಿ ಶಾಸಕರು ಮನಸ್ಸು ಮಾಡಿದರೆ, ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಬೆಂಬಲಿತ ಪುರಸಭಾ ಸದಸ್ಯರಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ.
ಬಲಾಬಲ :: ಚಿಕ್ಕನಾಯಕನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್’ಗಳಿವೆ. ಅದರಲ್ಲಿ ಜೆಡಿಎಸ್ ಸದಸ್ಯರು 15 ಸ್ಥಾನಗಳಲ್ಲಿ, ಬಿಜೆಪಿ ಸದಸ್ಯರು 6 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು 2 ಸ್ಥಾನಗಳಲ್ಲಿ ಇದ್ದಾರೆ. ಈ ಬಾರಿ ಪುರಸಭೆ ಅಧ್ಯಕ್ಷ ಸ್ಥಾನ ಎಸ್ ಟಿ (ಪರಿಶಿಷ್ಟ ಪಂಗಡ) ಅಭ್ಯರ್ಥಿಗೆ ಮೀಸಲಾಗಿದೆ. 6’ನೇ ವಾರ್ಡಿನಿಂದ ಪುರಸಭಾ ಸದಸ್ಯರಾಗಿರುವ ಜೆಡಿಎಸ್ ಪಕ್ಷದ ಸಿ ಎಚ್ ದಯಾನಂದ್ ಒಬ್ಬರೇ ಎಸ್ ಟಿ ಸಮುದಾಯಕ್ಕೆ ಸೇರಿದ ಸದಸ್ಯರಾಗಿದ್ದಾರೆ. ಹಾಗಾಗಿ, ಬಹುತೇಕ ಸಿ ಎಚ್ ದಯಾನಂದರೇ ಪುರಸಭೆಯ ಅಧ್ಯಕ್ಷರಾಗುವುದು ಖಾತ್ರಿಯಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗಗಳ (ಬಿಸಿಎಂ) ಪ್ರವರ್ಗ ‘ಬಿ’ ಮೀಸಲಾತಿ ನಿಗದಿಯಾಗಿದೆ. ಈ ಸ್ಥಾನಕ್ಕಾಗಿ 3’ನೇ ವಾರ್ಡಿನ ಪುರಸಭಾ ಸದಸ್ಯೆಯಾದ ಜೆಡಿಎಸ್ ಬೆಂಬಲಿತ ಶ್ರೀಮತಿ ಸುಧಾ ಸುರೇಶ್, 21’ನೇ ವಾರ್ಡಿನ ಜೆಡಿಎಸ್ ಬೆಂಬಲಿತ ಪುರಸಭಾ ಸದಸ್ಯ ಸಿ ಎಮ್ ರಾಜಶೇಖರ್ ಹಾಗೂ 9’ನೇ ವಾರ್ಡಿನಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ಆನಂತರ ಜೆಡಿಎಸ್’ನಲ್ಲಿ ಸೇರ್ಪಡೆಯಾದ ಪುರಸಭಾ ಸದಸ್ಯ ಮಂಜುನಾಥ್’ರವರುಗಳು ರೇಸ್’ನಲ್ಲಿದ್ದಾರೆ. ಈ ಮೂವರಲ್ಲಿ ಶಾಸಕರು ಯಾರ ಮೇಲೆ ಹೆಚ್ಚು ಒಲವು ತೋರುವರೋ ಎಂದು ಕಾದು ನೋಡಬೇಕಿದೆ.
ತುರುವೇಕೆರೆ: ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಮಳೆ ಬಿಡುವ ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಮುಂಗಾರು ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
ರಾಗಿ ತಾಲ್ಲೂಕಿನ ಪ್ರಧಾನ ಆಹಾರ ಬೆಳೆಯಾಗಿದೆ. ಕಳೆದ ಬಾರಿ ಮಳೆ ಬೀಳುವ ಪ್ರಮಾಣ ಕಡಿಮೆಯಾದ ಕಾರಣ ಭಿತ್ತನೆ ಕಾರ್ಯವೂ ಕ್ಷೀಣವಾಗಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಮತ್ತು ಹಿಂಗಾರು ಒಳ್ಳೆ ಮಳೆಯಾಗಿತು. ಹೆಸರು, ಅಲಸಂದೆ ಭಿತ್ತನೆ ಕೂಡ ಕಡಿಮೆಯಾಗಿತು. ಇದರಿಂದ ತಾಲ್ಲೂಕಿನಲ್ಲಿ 19700 ಹೆಕ್ಟೇರ್ ಪ್ರದೇಶದಲ್ಲಿ ಶೇ.114 ರಷ್ಟು ರಾಗಿ ಬೆಳೆಯನ್ನು ರೈತರು ಈಗಾಗಲೇ ಭಿತ್ತನೆ ಮಾಡಿದ್ದು ಇದು ದಾಖಲೆ ಭಿತ್ತನೆಯಾಗಿದೆ.
ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಲಾಗಿ ಬಹುಪಾಲು ರೈತರು ರಾಗಿ ಭಿತ್ತನೆ ಮಾಡಿದ್ದರು. ರಾಗಿ ಪೈರೂ ಚನ್ನಾಗಿ ಬಂದು ಹೊಲ ಹಚ್ಚ ಹಸಿರಾಗಿ ಬೆಳೆದು ಇನ್ನೇನು ರಾಗಿ ಬೆಳೆಗೆ ಅಡ್ಡ ಸಾಲು ಹಾಕಬೇಕು ಅಷ್ಟರೊಳಗೆ ಎಡಬಿಡದೆ ಮಘೆ ಮಳೆ ಸುರಿಯಿತು ಇದರಿಂದ ರಾಗಿ ಪೈರು ದಟ್ಟವಾಗಿ ಬೆಳೆಯಿತು, ಜೊತೆಗೆ ಕಳೆ ಕೂಡ ಹೆಚ್ಚಿತ್ತು.
ಕಳೆದ ಎರಡು ದಿನಗಳಿಂದ ರೈತರು ಟ್ರ್ಯಾಕ್ಟರ್ ನಲ್ಲಿ ಅಡ್ಡ ಸಾಲು ಹಾಕುತ್ತಿದ್ದಾರೆ. ಆದರೂ ದಟ್ಟ ಪೈರು ಮತ್ತು ಕಳೆ ಕೀಳುತ್ತಿಲ್ಲ. ಅಳಿದುಳಿದ ಕಳೆ ಕೀಳಲು ಹೆಣ್ಣಾಳುಗಳು ಸಿಗದೆ ರೈತರು ಪರದಾಡುತ್ತಿದ್ದಾರೆ. ಗೆಣೆ ಸಾಲಿನಲ್ಲಿ ರಾಗಿ ಭಿತ್ತನೆ ಮಾಡಿರುವ ರೈತರು ಹಸುಗಳು ಇರುವ ರೈತರ ಕಾಡಿ ಬೇಡಿ ಎರಡು ಮೂರು ಕುಂಟೆ ಹಾಕಿಕೊಂಡು ರಾಗಿ ಪೈರ ಮೇಲೆ ಗೊಬ್ಬರ ಚೆಲ್ಲಿ ಕುಂಟೆ ಹೊಡೆಯುತ್ತಿದ್ದಾರೆ. ಅದೂ ಒಬ್ಬ ರೈತರಾದ ಮೇಲೆ ಮತ್ತೊಬ್ಬರ ಹೊಲವನ್ನು ಮುಯ್ಯಾಳಿನ ರೀತಿ ಹೊಡೆಯಲಾಗುತ್ತಿದೆ. ಹೀಗೆ ಮಳೆ ಬಂದರೆ ಮನೆ ತುಂಬಾ ರಾಗಿ ತುಂಬಿಕೊಳ್ಳಬಹುದು ಎನ್ನುತ್ತಾರೆ ಅಕ್ಕಳಸಂದ್ರಗೊಲ್ಲರಹಟ್ಟಿಯ ರೈತ ಶಾಂತಯ್ಯ.
ಇನ್ನೂ ಕೆಲ ಭಾಗಗಳ ರೈತರು ರಾಗಿ ಪೈರು ನಾಟಿ ಮಾಡಲು ರಾಗಿ ಹೊಟ್ಲು ಬಿಟ್ಟಿದ್ದು ಟ್ರ್ಯಾಕ್ಟರ್ ನಲ್ಲಿ ಗೆರೆ ಹೊಡೆಯಲು ಆಗದೆ ಕೈಯಲ್ಲೇ ಗೆರೆ ಎಳೆದುಕೊಂಡು ಪೈರು ನಾಟಿ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಹದ ಮಾಡಿಕೊಂಡಿರುವ ಭೂಮಿ ಓಣಗಿರುವ ಕಾರಣ ಅಕ್ಕಪಕ್ಕದ ತೋಟದ ರೈತರ ಕೊಳವೆ ಬಾವಿಗಳಿಂದ ನೀರು ಬಿಡಿಸಿಕೊಂಡು ಹೊಲ ಕೆಸರು ಮಾಡಿಕೊಂಡು ರಾಗಿ ಪೈರು ನಾಟಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಚಪಾನ್ ರಾಗಿ ಮಾಡುತ್ತಿದ್ದು ಇದರಿಂದ ಕಳೆ ಕಡಿಮೆಯಾಗಿ ಫಸಲು ಹೆಚ್ಚು ಬರುತ್ತದೆ ಎಂಬುದು ರೈತರ ಲೆಕ್ಕಾಚಾರ. ಕೆಲವೆಡೆ ರಾಗಿ ಪೈರು ಗರಿ ಮೇಯಿಸುವ ಹಂತಕ್ಕೆ ಬಂದಿದ್ದು ಒಂದು ವಾರದೊಳಗೆ ಮಳೆ ಬಾರದಿದ್ದರೆ ಬಿಸಿಲಿಗೆ ರಾಗಿ ಬಾಡಿ ಕೈಗೆ ಬಂದ ತುತ್ತು ಬಾಯಿಗೆ ಬರದು ಎನ್ನುತ್ತಾರೆ ರೈತ ಚಂದ್ರಣ್ಣ.
ತಾಲ್ಲೂಕಿನ ಕಸಬಾ, ಮಾಯಸಂದ್ರ, ದಬ್ಬೇಘಟ್ಟ ಮತ್ತು ದಂಡಿನಶಿವರ ಹೋಬಳಿಯ ಅಲ್ಲಲ್ಲಿ ರಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ಜೊತೆಗೆ ರಾಗಿ ಪೈರಿನ ತುದಿಯೂ ಸುರುಟಿದ ರೀತಿ ಓಣಗುತ್ತಿರುವ ಬಗ್ಗೆ ತಿಳಿದು ಬಂದಿದ್ದು ಇದು ರೈತರಲ್ಲಿ ಆತಂಕ ಮನೆ ಮಾಡಿದೆ. ಇದರ ಜೊತೆಗೆ ಅವರೆ, ತೋಗರಿ ಮತ್ತು ಹರಳಿನ ಗಿಡದ ಎಲೆಗಳಲ್ಲೂ ಸಹ ಸಣ್ಣ ಸಣ್ಣ ರಂದ್ರವಾಗಿ ರೋಗಪೀಡಿತವಾಗಿದ್ದು ಹಾಗಾಗಿ ಗಿಡದ ಬೆಳವಣಿಗೆ ಕುಂಠಿತವಾಗಲಿದೆ ಎನ್ನುವುದು ರೈತ ಬಸವರಾಜು ಆತಂಕವಾಗಿದೆ.
ತಾಲ್ಲೂಕಿನಲ್ಲಿ 665.9 ಮಿ.ಮೀಟರ್ ವಾಡಿಕೆ ಮಳೆ ಇದ್ದು ಆಗಸ್ಟ್ ಅಂತ್ಯದಲ್ಲಿ 203 ಮಿ.ಮೀಟರ್ ಮಳೆಯಾಗಿದೆ. ಅವರೆ 750, ಅಲಸಂದೆ 1200, ತೋಗರಿ 261, ಹರಳು 67, ಹುರಳಿ 615 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೀಜ ಭಿತ್ತನೆಯಾಗಿದೆ. ಸಾಸಿವೆ ಶೂನ್ಯ ಭಿತ್ತನೆಯಾದರೆ, ಎಳ್ಳು ಮತ್ತು ಹುಚ್ಚೆಳ್ಳು ಅತಿ ಕಡಿಮೆ ಭಿತ್ತನೆಯಾಗಿರುವ ಬೆಳೆಯಾಗಿದೆ.
ಕೋಟ್ – ಬಿ.ಪೂಜಾ, ಕೃಷಿ ಸಹಾಯಕ ನಿರ್ದೇಶಕಿ, ತುರುವೇಕೆರೆ ‘ತುರುವೇಕೆರೆಯಲ್ಲಿ ರಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು ವಿರಳ. ಅಂತಹ ಸ್ಥಳಗಳಿಗೆ ಭೇಟಿ ನೀಡಿ, ಬೆಳೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.’
(ಮತ್ತೆ, ಮೈನಿಂಗ್ ಭೂತ ; ಇನ್ನೂ ಪುನಶ್ಚೇತನಗೊಳ್ಳದ ಗಣಿಬಾಧಿತ)
(ಗಣಿಬಾಧಿತ ಪ್ರದೇಶದ 48 ಹಳ್ಳಿಗಳ ನಿದ್ದೆಗೆಡಿಸಿದ ಮಿನರಲ್ ಎಂಟರ್ಪ್ರೈಸಸ್ ಅರ್ಜಿ)
(ಅಪರೂಪದ ಸಸ್ಯಪ್ರಬೇಧ, ವಿಶಿಷ್ಟ ವನ-ಸಂಕುಲ ವ್ಯಾಕುಲ)
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ 2011’ರಲ್ಲೇ ನಿಂತುಹೋಗಿದ್ದಂಥ ಗಣಿಗಾರಿಕೆ ಈಗ ಮತ್ತೆ ತಲೆಯೆತ್ತುವ ಸಾಧ್ಯತೆ ಕಾಣುತ್ತಿದೆ.
ಗಣಿಗಾರಿಕೆ ನಿಂತುಹೋದ ಕಳೆದ ಹದಿನಾಲ್ಕು ವರ್ಷಗಳಿಂದ ತಾಲ್ಲೂಕಿನ ಪ್ರಕೃತಿ ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಅವೇ ಬೆಟ್ಟ-ಗುಡ್ಡಗಳನ್ನು ಬಗೆದು ಗಣಿಗಾರಿಕೆ ನಡೆಸುವ ದುರುದ್ದೇಶಗಳು ಹೆಡೆಯಾಡುತ್ತಿವೆ. ಇದು ಆತಂಕಕಾರಿಯಾದ ಸುದ್ದಿ ಎಂದು ಲಂಚ-ಮುಕ್ತ ಕರ್ನಾಟಕ ವೇದಿಕೆಯ ಮಲ್ಲಿಕಾರ್ಜುನ ಭಟ್ರಳ್ಳಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲಂಚ-ಮುಕ್ತ ಕರ್ನಾಟಕ ಹಾಗೂ ನೆರಳು-ಪರಿಸರ ತಂಡದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜಾಣೆಹಾರ್ ಸೆಕ್ಷನ್-4’ರ ವ್ಯಾಪ್ತಿಯ “ಸಾರಂಗಪಾಣಿ ಐರನ್ ಅಂಡ್ ಮ್ಯಾಂಗನೀಸ್ ಓರ್ ಮೈನ್ಸ್” ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಬೆಂಗಳೂರಿನ “ಮಿನರಲ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್” ಎಂಬ ಗಣಿಗಾರಿಕೆ ಸಂಸ್ಥೆ 132.24’ಎಕರೆ ಭೂ-ಪ್ರದೇಶವನ್ನು 50 ವರ್ಷಗಳ ಅವಧಿಗೆ ಲೀಸ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.
ಹಿಂದೆ ಈ ಭಾಗದಲ್ಲಿ ನಡೆಸಿದ ಗಣಿಗಾರಿಕೆಯಿಂದ ಆಗಿರುವ ಹಾನಿಯನ್ನು ಪರಿಗಣಿಸಿ ಇಲ್ಲಿನ ಪರಿಸರ ಪುನರುಜ್ಜೀವಗೊಳಿಸುವ ‘ಗಣಿಬಾಧಿತ ಪ್ರದೇಶಾಭಿವೃದ್ಧಿ ಹಾಗೂ ಪರಿಸರ ಪುನಶ್ಚೇತನ’ ಯೋಜನೆಯಡಿ ಕೈಗೊಂಡಿರುವ ಕಾರ್ಯಕೆಲಸಗಳ ಬಗ್ಗೆ ಸಮಗ್ರ ಸಮೀಕ್ಷೆಯನ್ನು ಇದುವರೆಗೆ ನಡೆಸಲಾಗಿಲ್ಲ.
ತಾಲ್ಲೂಕಿನ ಗಣಿಬಾಧಿತ ಗ್ರಾಮಗಳಲ್ಲಿ ಹೇಗೆಲ್ಲ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂಬುದರ ಸ್ಪಷ್ಟ ಸಮೀಕ್ಷೆ ಮೊದಲು ಆಗಬೇಕಿತ್ತು. ಇದರ ನಡುವೆಯೇ ಈಗಾಗಲೇ ಮತ್ತೆ ಗಣಿಗಾರಿಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ಶೋಚನೀಯ.
ಇಲ್ಲಿರುವುದು ನವೀಕರಿಸಲಾಗದ ನೈಸರ್ಗಿಕ ಸಂಪತ್ತು. ತೀರ್ಥ-ರಾಮ’ನ ಈ ಗುಡ್ಡಗಳ ಒಡಲು ಬಗೆದು ಬರಿದು ಮಾಡಿಕೊಂಡರೆ, ಮುಗಿಯಿತು. ಮುಂದೆ ಮತ್ತಿನ್ನೇನೂ ಅಲ್ಲಿ ಸಿಗಲಾರದು ಎಂದು ಅವರು ಎಚ್ಚರಿಸಿದರು.
53.52 ಹೆಕ್ಟೇರ್ ಅಂದರೆ, 132.24 ಎಕರೆಗಳಷ್ಟು ಭೂ-ಪ್ರದೇಶದಲ್ಲಿ ಮೈನಿಂಗ್ ನಡೆಸಲು ಈ ಕಂಪನಿ ಉದ್ದೇಶಿಸಿದೆ. ಈ ಪ್ರದೇಶದಲ್ಲಿ 16.32 ಮಿಲಿಯನ್ ಮೆಟ್ರಿಕ್ ಟನ್’ಗಳಷ್ಟು ಭಾರೀ ಪ್ರಮಾಣದ ಕಬ್ಬಿಣದ ಅದಿರು ಹಾಗೂ 0.03133 ಮಿಲಿಯನ್ ಮೆಟ್ರಿಕ್ ಟನ್’ಗಳಷ್ಟು ದೊಡ್ಡ ಪ್ರಮಾಣದ ಮ್ಯಾಂಗನೀಸ್ ಅದಿರನ್ನು ಬಗೆದು ತೆಗೆಯಬಹುದು ಎಂದು ಕಂಪನಿಯೇ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಇಷ್ಟು ಬೃಹತ್ ಪ್ರಮಾಣದ ಅದಿರನ್ನು ಬಗೆದು ತೆಗೆಯುವ ಸಲುವಾಗಿಯೇ 50’ವರ್ಷಗಳ ಅವಧಿಗೆ ಲೀಸ್ ಅನುಮತಿ ಕೋರಿ ಕಂಪನಿ ಅರ್ಜಿ ಸಲ್ಲಿಸಿರುವುದು. ಆದರೆ, ಇದೆಲ್ಲದರ ನಡುವೆ ಅಕ್ರಮ ಗಣಿಗಾರಿಕೆಯ ಭೂತವೂ ತನ್ನ ಕೈಚಳಕ ತೋರಿಸಲಿದೆ. ಇದು ಕಣ್ಣಿಗೇ ಕಾಣುವ ಜನದ್ರೋಹ ಮತ್ತು ಜೀವದ್ರೋಹ ಅಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬರಿದಾಗಲಿದೆ ತೀರ್ಥ-ರಾಮ’ನ ಗುಡ್ಡಗಳ ಒಡಲು !?
ಸುಪ್ರೀಂ ಕೋರ್ಟ್ ಆದೇಶದ ನಂತರ ಸರ್ಕಾರಗಳು 2018’ರಿಂದಲೂ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಪರಿಸರ ಪುನರುಜ್ಜೀವನ ಯೋಜನೆಯಡಿ ಕೆಲಸ ನಡೆಸುತ್ತಿರುವುದಾಗಿ ಹೇಳುತ್ತಿವೆ. ಆದರೆ, ಅರಣ್ಯ ಇಲಾಖೆಯ ವರದಿಗಳು ಪರಿಸರ ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳುತ್ತಿದೆ,
ಈಗ ಮತ್ತೆ ಅಲ್ಲಿ ಹಸ್ತಕ್ಷೇಪ ಮಾಡಿ ಯಾರೂ ಅದಕ್ಕೆ ಉಪದ್ರವ ಕೊಡಬಾರದು ಎನ್ನುತ್ತಿವೆ. ಆದರೂ ಸರ್ಕಾರಗಳು ಮಾತ್ರ ಬಲಾಢ್ಯರ ಪರವಾಗಿಯೇ ನಿಲ್ಲುತ್ತಿವೆ. 200 ರಿಂದ 300 ಕೋಟಿ ರೂಪಾಯಿಗಳ ಗಣಿ ರಾಯಧನದ ಆದಾಯದ ಲೆಕ್ಕ ತೋರಿಸುತ್ತಿರುವ ಸರ್ಕಾರಗಳು ಎಲ್ಲರ ಬಾಯಿ ಮುಚ್ಚಿಸಲು ಯತ್ನಿಸುತ್ತಿವೆ.
ಕೆಲವೇ ನೂರು ಕೋಟಿ ರೂಪಾಯಿಗಳ ಆದಾಯದ ಆಮಿಷದಲ್ಲಿ, ಸಾವಿರಾರು ಎಕರೆ ಕೃಷಿಭೂಮಿಯ ಸರ್ವನಾಶಕ್ಕೆ ಸರ್ಕಾರಗಳು ಸಿದ್ಧವಾಗಿ ನಿಂತಂತೆ ಕಾಣುತ್ತಿದೆ. ಗಣಿಗಾರಿಕೆಯಿಂದ ಕೃಷಿ, ತೋಟಗಾರಿಕೆ, ವಾಯು, ಪರಿಸರ, ಜಲ, ನೆಲ, ಸಂಸ್ಕೃತಿ, ಜನಪದ ಎಲ್ಲವೂ ಸರ್ವನಾಶವಾಗಲಿದೆ.
ಇದೆಲ್ಲದರ ಕನಿಷ್ಟ ಊಹೆಯೂ ಇಲ್ಲದ ಮೇಲ್ಮಟ್ಟದ ಅಧಿಕಾರಿಗಳು ಹಾಗೂ ಅರಿವುಗೇಡಿ ಜನಪ್ರತಿನಿಧಿಗಳು ಗಣಿಗಾರಿಕೆಯ ಲಾಭಗಳನ್ನು ಎಣಿಸುತ್ತಾ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ.
ಸಾಗರಧಾರ ವರದಿ :
ಹೈದರಾಬಾದಿನ ಸಾಗರಧಾರ ಎಂಬ ಪರಿಸರ ವಿಜ್ಞಾನಿ ಕರ್ನಟಕದ ಬಳ್ಳಾರಿ, ಸಂಡೂರು, ತುಮಕೂರು, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ, ಗಣಿಗಾರಿಕೆಯಿಂದ ಹಬ್ಬುವ ಧೂಳು ಕನಿಷ್ಠ 50 ಕಿ.ಮೀ.ಗಳವರೆಗೂ ಗಾಳಿಯಲ್ಲಿ ಸಂಚರಿಸುತ್ತದೆ. ಅದನ್ನು ಸೇವಿಸುವ ಜನ, ಜಾನುವಾರು, ಜೀವಸಂಕುಲಕ್ಕೆ ಎಂದೂ ವಾಸಿಯಾಗದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಎರಗುತ್ತವೆ.
ಅದೇರೀತಿ ಸಸ್ಯಪ್ರಬೇಧಗಳ ಎಲೆಗಳ ಮೇಲೆ ಕೂರುವ ದಟ್ಟ ಧೂಳಿನಿಂದಾಗಿ ಪರಾಗಸ್ಪರ್ಶ ಕ್ರಿಯೆಗೆ ಅಡಚಣೆಯಾಗುತ್ತಿದೆ. ಚಿಟ್ಟೆಗಳು ಸಾಯುತ್ತಿವೆ. ಜೇನ್ನೊಣಗಳು ನಾಶವಾಗುತ್ತಿವೆ. ಬೆಳೆ, ಇಳುವರಿ, ಕೃಷಿಭೂಮಿ, ಬೋರವೆಲ್ಲು, ತೆಂಗು, ಅಡಿಕೆ ತೋಟಗಳು ಶಾಶ್ವತವಾಗಿ ಹಾನಿಗೊಳಗಾಗುತ್ತಿವೆ ಎಂದು ವರದಿ ನೀಡಿದ್ದಾರೆ. ಆದರೆ ಸರ್ಕಾರಗಳು, ಸಾಗರಧಾರಾ-ವರದಿಯನ್ನು ಗಾಳಿಗೆ ತೂರಿ, ಮತ್ತೆ ಗಣಿಗಾರಿಕೆ ಮಾಡಹೊರಟಿವೆ.
ನವೀಕರಣಗೊಳ್ಳದ, ಪುನಶ್ಚೇತನಗೊಳ್ಳದ ನೈಸರ್ಗಿಕ ಸಂಪನ್ಮೂಲಗಳನ್ನು ಹೀಗೆ ಅಂಧಾದುಂಧಿ ಬಗೆದು ಪರದೇಶಗಳಿಗೆ ಮಾರಿ, ನಮ್ಮ ನೆಲದ ಒಡಲನ್ನು ಬರಿದು ಮಾಡುವಲ್ಲಿ ಎಂಥ ಪ್ರಗತಿ ಈಡೇರಲಿದೆ…. ಎಂದು ಮಲ್ಲಿಕಾರ್ಜುನ ಪ್ರಶ್ನಿಸುತ್ತಾರೆ.
ಇದು ಜನಶಕ್ತಿಯ ಪ್ರಶ್ನೆ ::
ಅದಿರುಗಳ್ಳರು ಹಾಗು ದೇಶದ ಸಂಪತ್ತನ್ನು ಲೂಟಿ ಮಾಡುವವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಲಾಬಿ ನಡೆಸುವಷ್ಟು ಬಲಾಢ್ಯರು.
ಅಂಥವರ ಲಾಬಿಗಳಿಗೆ ಆಡಳಿತ ಪಕ್ಷಗಳು ಬಾಗಿ ಬೆಂಡಾಗುವುದನ್ನು ನಾವು ಚರಿತ್ರೆಯುದ್ದಕ್ಕೂ ನೋಡುತ್ತಾ ಬಂದಿದ್ದೇವೆ. ಹಾಗಾಗಿ, ಈ ಭಾಗದಲ್ಲಿ ಗಣಿಬಾಧಿತ ಪ್ರದೇಶಗಳಾಗಿ ಗುರ್ತಿಸಲ್ಪಟ್ಟಿರುವ 48 ಹಳ್ಳಿಗಳು ಮತ್ತು ಅಲ್ಲಿನ ಗ್ರಾಮಸ್ಥರೇ ಈಗ ತಮ್ಮ ಮೇಲೆ ಮತ್ತೆ ಬಂದೆರಗಲಿರುವ ಗಣಿಗಾರಿಕೆಯ ಈ ಪೆಡಂಭೂತಕ್ಕೆ ನೇರವಾಗಿ ಎದುರುಗೊಳ್ಳಬೇಕಾಗಿದೆ.
ತಾಲ್ಲೂಕಿನ ಜನಪ್ರತಿನಿಧಿಗಳಿಗೆ ನಿಷ್ಠುರವಾಗಿ ಇಲ್ಲಿನ ಜನಶಕ್ತಿಯನ್ನು ತೋರಿಸಬೇಕಿದೆ. ಗಣಿ ಬಾಧೆಯಿಂದ ನರಳುತ್ತಿರುವ ಈ ಜನ ಕೇವಲ ರಾಜಕೀಯ ಪಕ್ಷಗಳ ಮತಬ್ಯಾಂಕ್ ಆಗಿಯಷ್ಟೇ ಉಳಿಯಬಾರದು. ತಮ್ಮ ಮುಂಬರುವ ಪೀಳಿಗೆಗಳ ಭವಿಷ್ಯದ ಹಿತದೃಷ್ಟಿಯನ್ನು ಮನಗಂಡು ಜನಾಧಿಕಾರದ ಹಕ್ಕುದಾರಿಕೆಯನ್ನು ಮಂಡಿಸಬೇಕು. ಅದೇ ರೀತಿ ಈ ಸಂಕಟ ಕೇವಲ ಗಣಿಬಾಧಿತರಿಗಷ್ಟೇ ಸೀಮಿತವಲ್ಲ. ಇಡೀ ತಾಲ್ಲೂಕು ಮತ್ತು ನೆರೆಹೊರೆಯ ಮೂರು ತಾಲ್ಲೂಕುಗಳಿಗೂ ಸೇರಿದಂಥದ್ದೇ.
ಹಾಗಾಗಿ ಈ ಭಾಗದ ಜನ ಮತ್ತೆ ತಮ್ಮ ಮನೆಮಾರುಗಳಿಗೆ ಗಣಿಭೂತ ಬಂದೆರಗದಂತೆ ಅದನ್ನು ಹಿಮ್ಮೆಟ್ಟಿಸಲು ಒಗ್ಗೂಡಬೇಕು ಎಂದು ಮಲ್ಲಿಕಾರ್ಜುನ ಆಗ್ರಹಿಸಿದರು.
ಬಾಕ್ಸ್ ಐಟಮ್, ಅರಣ್ಯ ಇಲಾಖೆಯ ವರದಿ ::
2011’ರಲ್ಲಿ ಗಣಿಗಾರಿಕೆ ನಿಂತ ನಂತರ ಈ ಭಾಗದಲ್ಲಿ ಈಗ ಯಥೇಚ್ಛವಾದ ಮರ ಗಿಡಗಳು ಬೆಳೆದು ನಿಂತಿವೆ. ಇಲ್ಲಿ ಜಾಲಾರಿ, ಮರಡಿ, ಕಮರ, ತೂಪ್ರಾ, ಉದಯ, ದಿಂಡಿಗ, ಅಳಲೆ, ಬಾಗೆ, ಹೊನ್ನೆ, ಜಾಣೆ, ಕಾಡುಗೇರು, ಮತ್ತಿ, ನೇರಳೆ, ತಾರೆ ಮುಂತಾದ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕಾ ಬಳ್ಳಿಗಳು ಹೇರಳವಾಗಿವೆ. ಒಣ ಹವೆಯ ಪ್ರದೇಶಕ್ಕನುಗುಣವಾದ ಹಾಗೂ ಬಹು ಮುಖ್ಯವಾದ ಇಲ್ಲಿನ ಸಸ್ಯಪ್ರಬೇಧಗಳು ಇಂದು ಹೆಮ್ಮರಗಳಾಗಿ ಬೆಳೆದು ನೂರಾರು ವರ್ಷಗಳಿಂದ ಇಲ್ಲಿ ನೆಲೆ ನಿಂತಿವೆ.
ಇಂಥ ಸಸ್ಯವೈವಿಧ್ಯತೆಯ ಜೊತೆಗೆ ಚಿರತೆ, ಕರಡಿ, ಜಿಂಕೆ, ನರಿ, ಕಾಡುಹಂದಿ, ನವಿಲು, ಚಿಪ್ಪುಹಂದಿ, ಆಮೆ, ವಿಶಿಷ್ಟ ಪ್ರಬೇಧದ ಕೊಂಡೆಕುರಿ, ಅನೇಕ ರೀತಿಯ ಹಲ್ಲಿ ಹಾಗು ಹಾವು ತರಹದ ವನ್ಯಜೀವಿಗಳ ಸಂಕುಲವೂ ಈ ತೀರ್ಥ-ರಾಮ ಅರಣ್ಯ ಪ್ರದೇಶದಲ್ಲಿ ನೆಲೆ ಕಂಡುಕೊಂಡಿದೆ. ರಾಜ್ಯ ಅರಣ್ಯ ಪ್ರದೇಶವಾಗಿರುವ ಇಲ್ಲಿ CEPMIZ ( Comprehensive Environmental Plan for Mining Impact Zone) ಯೋಜನೆಯಡಿ 26 ಬಗೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಂತಹ ಪ್ರದೇಶದಲ್ಲಿ ಈಗ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ, ಅರಣ್ಯ ಪ್ರದೇಶ ಇಬ್ಭಾಗವಾಗುತ್ತದೆ. CEPMIZ ಸವಲತ್ತು ಮತ್ತು ಸೌಕರ್ಯ ಕಾಮಗಾರಿಗಳಿಂದ ತೀರ್ಥರಾಮ ಅರಣ್ಯ ಪ್ರದೇಶ ವಂಚಿತಗೊಳ್ಳುತ್ತದೆ. ಇದರ ಪರಿಣಾಮವಾಗಿ ವನ್ಯಜೀವಿಗಳು ಊರಿನತ್ತ ವಲಸೆ ಬರುತ್ತವೆ. ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಇದು ನಾಂದಿಯಾಗುತ್ತದೆ. ಇಲ್ಲಿನ ಪರಿಸರಕ್ಕೆ ಎಂದೂ ಭರಿಸಲಾಗದಷ್ಟು ಧಕ್ಕೆಯುಂಟಾಗುತ್ತದೆ. ಈ ಭಾಗದ ಗಣಿಬಾಧಿತ ಪ್ರದೇಶಗಳಾದ ಲಕ್ಮೇನಹಳ್ಳಿ, ಗೊಲ್ಲರಹಳ್ಳಿ, ಹೊಸಹಳ್ಳಿ, ತೊಂದಲಾಪುರ, ಕೋಡಿಹಳ್ಳಿ ಸರ್ವೆ ನಂಬರುಗಳಲ್ಲಿ ತಂತಾನೇ ಬೆಳೆದಿರುವ ಹೇರಳವಾದ ಮರ ಗಿಡ ಸೇರಿದಂತೆ ಇತರೆ ಸಸ್ಯ-ಸಂಪತ್ತಿದೆ. ಈ ಬಗ್ಗೆ ಎಸಿಎಫ್ ಹಾಗೂ ಆರ್ ಎಫ್ ಒ ಮಟ್ಟದ ಅಧಿಕಾರಿಗಳ ಸಮೀಕ್ಷೆ ಆಧರಿಸಿ ಸ್ಪಷ್ಟ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ತುರುವೇಕೆರೆ: ಸೋಮವಾರ ರಾತ್ರಿ ಬಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ. ಒಟ್ಟು 21.84 ಸೆಂ. ಮೀಟರ್ ಮಳೆಯಾಗಿದ್ದು, ಮುಂಗಾರು ಭಿತ್ತನೆ ಮಾಡಿದ ರೈತರಲ್ಲಿ ಮಂದಹಾಸ ಮೂಡಿದೆ.
ಸೋಮವಾರ ರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಮಳೆಗೆ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಕೇನಹಳ್ಳಿ ಗ್ರಾಮದ ನಾಗರಾಜುರವರ ಒಂದು ವಾಸದ ಮನೆ, ಬಾಣಸಂದ್ರ ಗ್ರಾಮದಲ್ಲಿನ ಲಕ್ಷ್ಮಣ ಮತ್ತು ಅಂಬಿಕಮ್ಮನವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿವೆ.
ಕಾಳಮ್ಮಪುಟ್ಟಾಚಾರ್ರವರ ದನಕೊಟ್ಟಿಗೆ ಮೇಲೆ ತೆಂಗಿನ ಮರಬಿದ್ದು ಶೀಟುಗಳು ಮರಿದಿವೆ. ದಂಡಿನಶಿವರ ಹೋಬಳಿಯ ತೋವಿನಕೆರೆ ಗ್ರಾಮದಲ್ಲಿ ನಂಜುಂಡಯ್ಯನವರ ಒಂದು ಮನೆ ಭಾಗಶಃ ಕುಸಿದು ಬಿದ್ದಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಬೀಸಿದ ಬಿರುಗಾಳಿಗೆ ಕೋಳಘಟ್ಟ4, ನಾಯಕನಘಟ್ಟ2, ತೊರೆಮಾವಿನಹಳ್ಳಿ1, ಮಂಚೇನಹಳ್ಳಿ1, ಹರಿದಾಸನಹಳ್ಳಿ1, ತಂಡಗ ವ್ಯಾಪ್ತಿ2, ದೊಂಬರನಹಳ್ಳಿ 2, ಮಾದಿಹಳ್ಳಿ4, ಬಸವನಹಳ್ಳಿ1, ನೆಮ್ಮದಿ ಗ್ರಾಮ1, ಸಿದ್ದಾಪುರ 2, ಅಕ್ಕಳಸಂದ್ರ 5, ತಳವಾರನಹಳ್ಳಿ1 ಸೇರಿದಂತೆ ಒಟ್ಟು 26 ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಕಂಬಗಳು ತುಂಡರಿಸಿವೆ ಎಂದು ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್ ತಿಳಿಸಿದ್ದಾರೆ, ಪಟ್ಟಣ ಸೇರಿದಂತೆ ಈ ಗ್ರಾಮಗಳಲ್ಲಿ ರಾತ್ರಿ ವಿದ್ಯುತ್ ಇಲ್ಲದೆ ಜನರು ಪರದಾಡಿದರು.
ತಾಲ್ಲೂಕಿನ ದಂಡನಶಿವರ ಹೋಬಳಿಯ ಸಂಪಿಗೆ ಗ್ರಾಮದಲ್ಲಿನ ಕೆಲ ಚರಂಡಿಗಳಲ್ಲಿ ಕಸ ಕಟ್ಟಿಕೊಂಡ ಪರಿಣಾಮ ಚಿಕ್ಕಕಲ್ಲಯ್ಯ ಅವರ ಮನೆಗೆ ಮಳೆ ನೀರು ನುಗ್ಗಿ ಮನೆಯ ವಸ್ತುಗಳೆಲ್ಲ ನೆನೆದಿವೆ ಹಾಗು ಬಾಣಂತಿ ಮತ್ತು ಮಗುವನ್ನು ಗ್ರಾಮದ ಗ್ರಾಮ ಪಂಚಾಯತಿ ಕಚೇರಿಯಲ್ಲಿ ವಾಸ್ತವ್ಯ ಹೂಡಲಾಗಿದೆಂದು ಕಂದಾಯ ಇಲಾಖೆಯ ಅಧಿಕಾರಿಗಳೊಬ್ಬರು ತಿಳಿಸಿದ್ದರು.
ಲೋಕಮ್ಮನಹಳ್ಳಿ ಗೇಟ್ ಬಳಿಯ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದೆ ಹಾಗು ರಾಷ್ಟ್ರೀಯ ಹೆದ್ದಾರಿ150ಎ ಇಲಾಖೆಯ ಸಿಬ್ಬಂದಿಗಳು, ಅರ್ಧಿಕಾರಿಗಳ ನಿರ್ಲಕ್ಷತನದಿಂದ ಹೆದ್ದಾರಿ ರಸ್ತೆಯ ಅಕ್ಕಪಕ್ಕದ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆಂದು ಗ್ರಾಮಸ್ಥ ಎಂ.ಕಾಂತರಾಜು ಆರೋಪಿಸಿದ್ದಾರೆ.
ಬಾಣಸಂದ್ರ ಹೆದ್ದಾರಿ ರೈಲ್ವೆ ಮೇಲು ಸೇತುವೆ ಕೆಳಗಿನ ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ನೀರು ನಿಂತು ಎರಡು ಗಂಟೆಯವರೆಗೂ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.
ಶಿಂಷಾ ನದಿ ತುರುವೇಕೆರೆ ಕೆರೆಯ ಮೂಲಕ ತುಂಬಿ ಹರಿಯುತ್ತಿದೆ. ಅದೇ ರೀತಿ ತಾಲ್ಲೂಕಿನ ಬೊಮ್ಮೇನಹಳ್ಳಿ, ಬಲಮಾದಿಹಳ್ಳಿ, ಕುಣಿಕೇನಹಳ್ಳಿ, ಹುಳಿಸಂದ್ರ, ಅಮ್ಮಸಂದ್ರ ಮತ್ತು ಕೊಳಾಲ ಕೆರೆಗಳು ತುಂಬಿವೆ ಎಂದು ಹೇಮಾವತಿ ನಾಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹಾನಿಯಾದ ಸ್ಥಳಕ್ಕೆ ತಹಶೀಲ್ದಾರ್ ಎಂ.ಎ.ಕುಂಞ ಅಹಮ್ಮದ್, ಬೆಸ್ಕಾಂ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ನೆಹರೂ ಸರ್ಕಲ್’ನಿಂದ ತಾಲ್ಲೂಕು ಕಚೇರಿವರೆಗೆ ಬ್ಲಾಕ್ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ)
ಚಿಕ್ಕನಾಯಕನಹಳ್ಳಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕರ್ನಾಟಕ ರಾಜ್ಯಪಾಲರ ನಡೆಯ ವಿರುದ್ಧ ಚಿಕ್ಕನಾಯಕನಹಳ್ಳಿ-ಹುಳಿಯಾರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕ್ಷೇತ್ರದ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್’ರವರ ನೇತೃತ್ವದಲ್ಲಿ ಪಟ್ಟಣದ ನೆಹರೂ ಸರ್ಕಲ್’ನಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ಪರ ಪಕ್ಷಪಾತ ನಡೆಸುತ್ತಿರುವ ಕರ್ನಾಟಕದ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ತಹಸೀಲ್ದಾರ್ ಕೆ ಪುರಂದರ್’ರವರ ಮೂಲಕ ಘನತೆವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ ಎಸ್ ಕಿರಣ್ ಕುಮಾರ್, ಬಿಜೆಪಿಯ ಹಲವು ಹಿರಿಯ ನಾಯಕರ ವಿರುದ್ಧ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿದಾಗ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಲಿಲ್ಲ. ಜೆಡಿ(ಎಸ್) ಪಕ್ಷದ ಮುಖಂಡರ ವಿರುದ್ಧ ಹಲವು ದೂರುಗಳು ದಾಖಲಾದಾಗಲೂ ಆ ನಾಯಕರುಗಳ ವಿರುದ್ಧವೂ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಲಿಲ್ಲ.
ಈಗ ಅಬ್ರಹಾಂ ಎಂಬ ಮೂಮೂಲಿ ಗಿರಾಕಿಯ ದೂರಿನನ್ವಯ ಏಕಾಏಕಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ಪಕ್ಷಪಾತಿ ಮತ್ತು ಅಸಾಂವಿಧಾನಿಕವಾದ ನಡೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಗ್ಯಾರಂಟಿ ಸಿದ್ಧರಾಮಯ್ಯ ಎಂದು ದೇಶದಾದ್ಯಂತ ಹೆಸರು ಮಾಡಿ, ನುಡಿದಂತೆ ನಡೆಯುತ್ತಿರುವ ಒಬ್ಬ ರಾಷ್ಟ್ರಮಟ್ಟದ ಅಹಿಂದ ನಾಯಕನನ್ನು ಹಿಮ್ಮೆಟ್ಟಿಸುವ ಪಿತೂರಿ ಇದು ಎಂದು ಅವರು ರಾಜ್ಯಪಾಲರ ಕಾರ್ಯವೈಖರಿಯನ್ನು ಖಂಡಿಸಿದರು.
ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಮಾತನಾಡುತ್ತಾ, ಉಚಿತ ಗ್ಯಾರಂಟಿ ಹಾಗೂ ಉಚಿತ ಭಾಗ್ಯ ಯೋಜನೆಗಳ ಹರಿಕಾರ ಸಿದ್ಧರಾಮಯ್ಯನವರನ್ನು ನಾಡಿನ ಅನೇಕ ವಿಚಾರವಂತರು ದೇವರಾಜ ಅರಸ’ರ ಮೇರು ವ್ಯಕ್ತಿತ್ವಕ್ಕೆ ಹೋಲಿಸುತ್ತಾರೆ.
ಹಿಂದುಳಿದ ವರ್ಗಗಳ, ಶೋಷಿತ ವರ್ಗಗಳ ಆಶಾಕಿರಣವಾಗಿರುವ ಸಿದ್ಧರಾಮಯ್ಯನವರನ್ನು ರಾಜಕೀಯವಾಗಿ ಹತ್ತಿಕ್ಕಲು ಪ್ರಾಸಿಕ್ಯೂಷನ್ ಭೂತವನ್ನು ಬಿಡಲಾಗಿದೆ. ಬಿಜೆಪಿಯ ವಯೋವೃದ್ಧ ಹಿರಿಯ ನಾಯಕರುಗಳ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಅವರ ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಲಾಗದೆ ರಾಜ್ಯಪಾಲರೇ ಎಂದು ಪ್ರಶ್ನಿಸಿದರು. ಉಚಿತ ಭಾಗ್ಯಗಳನ್ನು ನೀಡುವುದರ ಮೂಲಕ ಬಡವರ, ಬಲಹೀನರ, ಹಿಂದುಳಿದವರ ಮತ್ತು ದಲಿತರ ಪರವಾದ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯನವರ ಕಾರಣದಿಂದ ಅದಾನಿ-ಅಂಬಾನಿಗಳಿಗೆ ಕರ್ನಾಟಕದಲ್ಲಿ ಜಾಗವಿಲ್ಲದಂತಾಗಿದೆ. ಅವರ ವ್ಯಾಪಾರಕ್ಕೆ ಜಾಗ ಮಾಡಿಕೊಡುವ ಸಲುವಾಗಿ ಅಹಿಂದ ವರ್ಗಗಳ ಪ್ರಬಲ ನಾಯಕನಾಗಿ ದೇಶದಾದ್ಯಂತ ಸದ್ದು ಮಾಡುತ್ತಿರುವ ಸಿದ್ಧರಾಮಯ್ಯನವರನ್ನು ಮೂಲೆಗುಂಪು ಮಾಡಲು ಮೋದಿ-ಶಾ ಹುನ್ನಾರ ನಡೆಸಿದ್ದಾರೆ. ಅದರ ಕಾರ್ಯಾಚರಣೆಯನ್ನು ರಾಜಭವನದ ಮೂಲಕ ಮಾಡಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಮಹಾನಡೆಯನ್ನು ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ನಾವು ಅನ್ನರಾಮಯ್ಯ ಎಂದೇ ಕರೆಯುತ್ತೇವೆ. ಈ ಅನ್ನರಾಮಯ್ಯನ ಜೊತೆ ನಾವೆಲ್ಲ ಚತುಷ್ಕೋಟಿ ಕನ್ನಡಿಗರು ನಿಂತಿದ್ದೇವೆ. ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್’ರವರೆ ನಿಮ್ಮ ನಡೆ ನಿಸ್ಪಕ್ಷವಾದುದಾಗಿರಲಿ. ಪಕ್ಷಪಾತಿ ನಡೆ ಸಂವಿಧಾನ ವಿರೋಧಿಯಾದಂಥವು. ಕೇಂದ್ರದ ಕೈಗೊಂಬೆ ಆಗಬೇಡಿ. ಬಸವಣ್ಣನ ಕಲ್ಯಾಣ ಕರ್ನಾಟಕದಲ್ಲಿ ಅದಕ್ಕೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ನಾವಿಲ್ಲಿ ಸೇರಿದ್ದೇವೆ. ಮರೆಯದಿರಿ, ಅದಾನಿ-ಅಂಬಾನಿಗಳ ಸ್ನೇಹಿತನಲ್ಲ, ಅಹಿಂದ-ಅಲೆಮಾರಿಗಳ ಬಂಧುಮಿತ್ರ ನಮ್ಮ ಸಿದ್ಧರಾಮಯ್ಯ ಎಂದರು.
ಘನತೆವೆತ್ತ ರಾಷ್ಟ್ರಪತಿಗಳು, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್’ರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ಸಂವಿಧಾನ ಉಳಿಸಿಕೊಳ್ಳಬೇಕು ಎಂದು ಮನವಿಯನ್ನು ಮಾಡಿಕೊಂಡರು.