Thursday, September 12, 2024
Google search engine
Homeಜನಮನಮತ್ತೆ,ತೀರ್ಥ-ರಾಮ ಗುಡ್ಡಗಳ ಒಡಲು ಬಗೆವುದೇ ಹಿಟಾಚಿ !?

ಮತ್ತೆ,ತೀರ್ಥ-ರಾಮ ಗುಡ್ಡಗಳ ಒಡಲು ಬಗೆವುದೇ ಹಿಟಾಚಿ !?

(ಮತ್ತೆ, ಮೈನಿಂಗ್ ಭೂತ ; ಇನ್ನೂ ಪುನಶ್ಚೇತನಗೊಳ್ಳದ ಗಣಿಬಾಧಿತ)

(ಗಣಿಬಾಧಿತ ಪ್ರದೇಶದ 48 ಹಳ್ಳಿಗಳ ನಿದ್ದೆಗೆಡಿಸಿದ ಮಿನರಲ್ ಎಂಟರ್ಪ್ರೈಸಸ್ ಅರ್ಜಿ)

(ಅಪರೂಪದ ಸಸ್ಯಪ್ರಬೇಧ, ವಿಶಿಷ್ಟ ವನ-ಸಂಕುಲ ವ್ಯಾಕುಲ)

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ 2011’ರಲ್ಲೇ ನಿಂತುಹೋಗಿದ್ದಂಥ ಗಣಿಗಾರಿಕೆ ಈಗ ಮತ್ತೆ ತಲೆಯೆತ್ತುವ ಸಾಧ್ಯತೆ ಕಾಣುತ್ತಿದೆ.

ಗಣಿಗಾರಿಕೆ ನಿಂತುಹೋದ ಕಳೆದ ಹದಿನಾಲ್ಕು ವರ್ಷಗಳಿಂದ ತಾಲ್ಲೂಕಿನ ಪ್ರಕೃತಿ ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಅವೇ ಬೆಟ್ಟ-ಗುಡ್ಡಗಳನ್ನು ಬಗೆದು ಗಣಿಗಾರಿಕೆ ನಡೆಸುವ ದುರುದ್ದೇಶಗಳು ಹೆಡೆಯಾಡುತ್ತಿವೆ. ಇದು ಆತಂಕಕಾರಿಯಾದ ಸುದ್ದಿ ಎಂದು ಲಂಚ-ಮುಕ್ತ ಕರ್ನಾಟಕ ವೇದಿಕೆಯ ಮಲ್ಲಿಕಾರ್ಜುನ ಭಟ್ರಳ್ಳಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲಂಚ-ಮುಕ್ತ ಕರ್ನಾಟಕ ಹಾಗೂ ನೆರಳು-ಪರಿಸರ ತಂಡದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜಾಣೆಹಾರ್ ಸೆಕ್ಷನ್-4’ರ ವ್ಯಾಪ್ತಿಯ “ಸಾರಂಗಪಾಣಿ ಐರನ್ ಅಂಡ್ ಮ್ಯಾಂಗನೀಸ್ ಓರ್ ಮೈನ್ಸ್” ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಬೆಂಗಳೂರಿನ “ಮಿನರಲ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್” ಎಂಬ ಗಣಿಗಾರಿಕೆ ಸಂಸ್ಥೆ 132.24’ಎಕರೆ ಭೂ-ಪ್ರದೇಶವನ್ನು 50 ವರ್ಷಗಳ ಅವಧಿಗೆ ಲೀಸ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.

ಹಿಂದೆ ಈ ಭಾಗದಲ್ಲಿ ನಡೆಸಿದ ಗಣಿಗಾರಿಕೆಯಿಂದ ಆಗಿರುವ ಹಾನಿಯನ್ನು ಪರಿಗಣಿಸಿ ಇಲ್ಲಿನ ಪರಿಸರ ಪುನರುಜ್ಜೀವಗೊಳಿಸುವ ‘ಗಣಿಬಾಧಿತ ಪ್ರದೇಶಾಭಿವೃದ್ಧಿ ಹಾಗೂ ಪರಿಸರ ಪುನಶ್ಚೇತನ’ ಯೋಜನೆಯಡಿ ಕೈಗೊಂಡಿರುವ ಕಾರ್ಯಕೆಲಸಗಳ ಬಗ್ಗೆ ಸಮಗ್ರ ಸಮೀಕ್ಷೆಯನ್ನು ಇದುವರೆಗೆ ನಡೆಸಲಾಗಿಲ್ಲ.

ತಾಲ್ಲೂಕಿನ ಗಣಿಬಾಧಿತ ಗ್ರಾಮಗಳಲ್ಲಿ ಹೇಗೆಲ್ಲ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂಬುದರ ಸ್ಪಷ್ಟ ಸಮೀಕ್ಷೆ ಮೊದಲು ಆಗಬೇಕಿತ್ತು. ಇದರ ನಡುವೆಯೇ ಈಗಾಗಲೇ ಮತ್ತೆ ಗಣಿಗಾರಿಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ಶೋಚನೀಯ.

ಇಲ್ಲಿರುವುದು ನವೀಕರಿಸಲಾಗದ ನೈಸರ್ಗಿಕ ಸಂಪತ್ತು. ತೀರ್ಥ-ರಾಮ’ನ ಈ ಗುಡ್ಡಗಳ ಒಡಲು ಬಗೆದು ಬರಿದು ಮಾಡಿಕೊಂಡರೆ, ಮುಗಿಯಿತು. ಮುಂದೆ ಮತ್ತಿನ್ನೇನೂ ಅಲ್ಲಿ ಸಿಗಲಾರದು ಎಂದು ಅವರು ಎಚ್ಚರಿಸಿದರು.

53.52 ಹೆಕ್ಟೇರ್ ಅಂದರೆ, 132.24 ಎಕರೆಗಳಷ್ಟು ಭೂ-ಪ್ರದೇಶದಲ್ಲಿ ಮೈನಿಂಗ್ ನಡೆಸಲು ಈ ಕಂಪನಿ ಉದ್ದೇಶಿಸಿದೆ. ಈ ಪ್ರದೇಶದಲ್ಲಿ 16.32 ಮಿಲಿಯನ್ ಮೆಟ್ರಿಕ್ ಟನ್’ಗಳಷ್ಟು ಭಾರೀ ಪ್ರಮಾಣದ ಕಬ್ಬಿಣದ ಅದಿರು ಹಾಗೂ 0.03133 ಮಿಲಿಯನ್ ಮೆಟ್ರಿಕ್ ಟನ್’ಗಳಷ್ಟು ದೊಡ್ಡ ಪ್ರಮಾಣದ ಮ್ಯಾಂಗನೀಸ್ ಅದಿರನ್ನು ಬಗೆದು ತೆಗೆಯಬಹುದು ಎಂದು ಕಂಪನಿಯೇ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಇಷ್ಟು ಬೃಹತ್ ಪ್ರಮಾಣದ ಅದಿರನ್ನು ಬಗೆದು ತೆಗೆಯುವ ಸಲುವಾಗಿಯೇ 50’ವರ್ಷಗಳ ಅವಧಿಗೆ ಲೀಸ್ ಅನುಮತಿ ಕೋರಿ ಕಂಪನಿ ಅರ್ಜಿ ಸಲ್ಲಿಸಿರುವುದು. ಆದರೆ, ಇದೆಲ್ಲದರ ನಡುವೆ ಅಕ್ರಮ ಗಣಿಗಾರಿಕೆಯ ಭೂತವೂ ತನ್ನ ಕೈಚಳಕ ತೋರಿಸಲಿದೆ. ಇದು ಕಣ್ಣಿಗೇ ಕಾಣುವ ಜನದ್ರೋಹ ಮತ್ತು ಜೀವದ್ರೋಹ ಅಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬರಿದಾಗಲಿದೆ ತೀರ್ಥ-ರಾಮ‌’ನ ಗುಡ್ಡಗಳ ಒಡಲು !?

ಸುಪ್ರೀಂ ಕೋರ್ಟ್ ಆದೇಶದ ನಂತರ ಸರ್ಕಾರಗಳು 2018’ರಿಂದಲೂ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಪರಿಸರ ಪುನರುಜ್ಜೀವನ ಯೋಜನೆಯಡಿ ಕೆಲಸ ನಡೆಸುತ್ತಿರುವುದಾಗಿ ಹೇಳುತ್ತಿವೆ. ಆದರೆ, ಅರಣ್ಯ ಇಲಾಖೆಯ ವರದಿಗಳು ಪರಿಸರ ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳುತ್ತಿದೆ,

ಈಗ ಮತ್ತೆ ಅಲ್ಲಿ ಹಸ್ತಕ್ಷೇಪ ಮಾಡಿ ಯಾರೂ ಅದಕ್ಕೆ ಉಪದ್ರವ ಕೊಡಬಾರದು ಎನ್ನುತ್ತಿವೆ. ಆದರೂ ಸರ್ಕಾರಗಳು ಮಾತ್ರ ಬಲಾಢ್ಯರ ಪರವಾಗಿಯೇ ನಿಲ್ಲುತ್ತಿವೆ. 200 ರಿಂದ 300 ಕೋಟಿ ರೂಪಾಯಿಗಳ ಗಣಿ ರಾಯಧನದ ಆದಾಯದ ಲೆಕ್ಕ ತೋರಿಸುತ್ತಿರುವ ಸರ್ಕಾರಗಳು ಎಲ್ಲರ ಬಾಯಿ ಮುಚ್ಚಿಸಲು ಯತ್ನಿಸುತ್ತಿವೆ.

ಕೆಲವೇ ನೂರು ಕೋಟಿ ರೂಪಾಯಿಗಳ ಆದಾಯದ ಆಮಿಷದಲ್ಲಿ, ಸಾವಿರಾರು ಎಕರೆ ಕೃಷಿಭೂಮಿಯ ಸರ್ವನಾಶಕ್ಕೆ ಸರ್ಕಾರಗಳು ಸಿದ್ಧವಾಗಿ ನಿಂತಂತೆ ಕಾಣುತ್ತಿದೆ. ಗಣಿಗಾರಿಕೆಯಿಂದ ಕೃಷಿ, ತೋಟಗಾರಿಕೆ, ವಾಯು, ಪರಿಸರ, ಜಲ, ನೆಲ, ಸಂಸ್ಕೃತಿ, ಜನಪದ ಎಲ್ಲವೂ ಸರ್ವನಾಶವಾಗಲಿದೆ.

ಇದೆಲ್ಲದರ ಕನಿಷ್ಟ ಊಹೆಯೂ ಇಲ್ಲದ ಮೇಲ್ಮಟ್ಟದ ಅಧಿಕಾರಿಗಳು ಹಾಗೂ ಅರಿವುಗೇಡಿ ಜನಪ್ರತಿನಿಧಿಗಳು ಗಣಿಗಾರಿಕೆಯ ಲಾಭಗಳನ್ನು ಎಣಿಸುತ್ತಾ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ.

ಸಾಗರಧಾರ ವರದಿ :

ಹೈದರಾಬಾದಿನ ಸಾಗರಧಾರ ಎಂಬ ಪರಿಸರ ವಿಜ್ಞಾನಿ ಕರ್ನಟಕದ ಬಳ್ಳಾರಿ, ಸಂಡೂರು, ತುಮಕೂರು, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ, ಗಣಿಗಾರಿಕೆಯಿಂದ ಹಬ್ಬುವ ಧೂಳು ಕನಿಷ್ಠ 50 ಕಿ.ಮೀ.ಗಳವರೆಗೂ ಗಾಳಿಯಲ್ಲಿ ಸಂಚರಿಸುತ್ತದೆ. ಅದನ್ನು ಸೇವಿಸುವ ಜನ, ಜಾನುವಾರು, ಜೀವಸಂಕುಲಕ್ಕೆ ಎಂದೂ ವಾಸಿಯಾಗದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಎರಗುತ್ತವೆ.

ಅದೇರೀತಿ ಸಸ್ಯಪ್ರಬೇಧಗಳ ಎಲೆಗಳ ಮೇಲೆ ಕೂರುವ ದಟ್ಟ ಧೂಳಿನಿಂದಾಗಿ ಪರಾಗಸ್ಪರ್ಶ ಕ್ರಿಯೆಗೆ ಅಡಚಣೆಯಾಗುತ್ತಿದೆ. ಚಿಟ್ಟೆಗಳು ಸಾಯುತ್ತಿವೆ. ಜೇನ್ನೊಣಗಳು ನಾಶವಾಗುತ್ತಿವೆ. ಬೆಳೆ, ಇಳುವರಿ, ಕೃಷಿಭೂಮಿ, ಬೋರವೆಲ್ಲು, ತೆಂಗು, ಅಡಿಕೆ ತೋಟಗಳು ಶಾಶ್ವತವಾಗಿ ಹಾನಿಗೊಳಗಾಗುತ್ತಿವೆ ಎಂದು ವರದಿ ನೀಡಿದ್ದಾರೆ. ಆದರೆ ಸರ್ಕಾರಗಳು, ಸಾಗರಧಾರಾ-ವರದಿಯನ್ನು ಗಾಳಿಗೆ ತೂರಿ, ಮತ್ತೆ ಗಣಿಗಾರಿಕೆ ಮಾಡಹೊರಟಿವೆ.

ನವೀಕರಣಗೊಳ್ಳದ, ಪುನಶ್ಚೇತನಗೊಳ್ಳದ ನೈಸರ್ಗಿಕ ಸಂಪನ್ಮೂಲಗಳನ್ನು ಹೀಗೆ ಅಂಧಾದುಂಧಿ ಬಗೆದು ಪರದೇಶಗಳಿಗೆ ಮಾರಿ, ನಮ್ಮ ನೆಲದ ಒಡಲನ್ನು ಬರಿದು ಮಾಡುವಲ್ಲಿ ಎಂಥ ಪ್ರಗತಿ ಈಡೇರಲಿದೆ…. ಎಂದು ಮಲ್ಲಿಕಾರ್ಜುನ ಪ್ರಶ್ನಿಸುತ್ತಾರೆ.

ಇದು ಜನಶಕ್ತಿಯ ಪ್ರಶ್ನೆ ::

ಅದಿರುಗಳ್ಳರು ಹಾಗು ದೇಶದ ಸಂಪತ್ತನ್ನು ಲೂಟಿ ಮಾಡುವವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಲಾಬಿ ನಡೆಸುವಷ್ಟು ಬಲಾಢ್ಯರು.

ಅಂಥವರ ಲಾಬಿಗಳಿಗೆ ಆಡಳಿತ ಪಕ್ಷಗಳು ಬಾಗಿ ಬೆಂಡಾಗುವುದನ್ನು ನಾವು ಚರಿತ್ರೆಯುದ್ದಕ್ಕೂ ನೋಡುತ್ತಾ ಬಂದಿದ್ದೇವೆ. ಹಾಗಾಗಿ, ಈ ಭಾಗದಲ್ಲಿ ಗಣಿಬಾಧಿತ ಪ್ರದೇಶಗಳಾಗಿ ಗುರ್ತಿಸಲ್ಪಟ್ಟಿರುವ 48 ಹಳ್ಳಿಗಳು ಮತ್ತು ಅಲ್ಲಿನ ಗ್ರಾಮಸ್ಥರೇ ಈಗ ತಮ್ಮ ಮೇಲೆ ಮತ್ತೆ ಬಂದೆರಗಲಿರುವ ಗಣಿಗಾರಿಕೆಯ ಈ ಪೆಡಂಭೂತಕ್ಕೆ ನೇರವಾಗಿ ಎದುರುಗೊಳ್ಳಬೇಕಾಗಿದೆ.

ತಾಲ್ಲೂಕಿನ ಜನಪ್ರತಿನಿಧಿಗಳಿಗೆ ನಿಷ್ಠುರವಾಗಿ ಇಲ್ಲಿನ ಜನಶಕ್ತಿಯನ್ನು ತೋರಿಸಬೇಕಿದೆ. ಗಣಿ ಬಾಧೆಯಿಂದ ನರಳುತ್ತಿರುವ ಈ ಜನ ಕೇವಲ ರಾಜಕೀಯ ಪಕ್ಷಗಳ ಮತಬ್ಯಾಂಕ್ ಆಗಿಯಷ್ಟೇ ಉಳಿಯಬಾರದು. ತಮ್ಮ ಮುಂಬರುವ ಪೀಳಿಗೆಗಳ ಭವಿಷ್ಯದ ಹಿತದೃಷ್ಟಿಯನ್ನು ಮನಗಂಡು ಜನಾಧಿಕಾರದ ಹಕ್ಕುದಾರಿಕೆಯನ್ನು ಮಂಡಿಸಬೇಕು. ಅದೇ ರೀತಿ ಈ ಸಂಕಟ ಕೇವಲ ಗಣಿಬಾಧಿತರಿಗಷ್ಟೇ ಸೀಮಿತವಲ್ಲ. ಇಡೀ ತಾಲ್ಲೂಕು ಮತ್ತು ನೆರೆಹೊರೆಯ ಮೂರು ತಾಲ್ಲೂಕುಗಳಿಗೂ ಸೇರಿದಂಥದ್ದೇ.

ಹಾಗಾಗಿ ಈ ಭಾಗದ ಜನ ಮತ್ತೆ ತಮ್ಮ ಮನೆಮಾರುಗಳಿಗೆ ಗಣಿಭೂತ ಬಂದೆರಗದಂತೆ ಅದನ್ನು ಹಿಮ್ಮೆಟ್ಟಿಸಲು ಒಗ್ಗೂಡಬೇಕು ಎಂದು ಮಲ್ಲಿಕಾರ್ಜುನ ಆಗ್ರಹಿಸಿದರು.

ಬಾಕ್ಸ್ ಐಟಮ್,
ಅರಣ್ಯ ಇಲಾಖೆಯ ವರದಿ ::

2011’ರಲ್ಲಿ ಗಣಿಗಾರಿಕೆ ನಿಂತ ನಂತರ ಈ ಭಾಗದಲ್ಲಿ ಈಗ ಯಥೇಚ್ಛವಾದ ಮರ ಗಿಡಗಳು ಬೆಳೆದು ನಿಂತಿವೆ. ಇಲ್ಲಿ ಜಾಲಾರಿ, ಮರಡಿ, ಕಮರ, ತೂಪ್ರಾ, ಉದಯ, ದಿಂಡಿಗ, ಅಳಲೆ, ಬಾಗೆ, ಹೊನ್ನೆ, ಜಾಣೆ, ಕಾಡುಗೇರು, ಮತ್ತಿ, ನೇರಳೆ, ತಾರೆ ಮುಂತಾದ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕಾ ಬಳ್ಳಿಗಳು ಹೇರಳವಾಗಿವೆ. ಒಣ ಹವೆಯ ಪ್ರದೇಶಕ್ಕನುಗುಣವಾದ ಹಾಗೂ ಬಹು ಮುಖ್ಯವಾದ ಇಲ್ಲಿನ ಸಸ್ಯಪ್ರಬೇಧಗಳು ಇಂದು ಹೆಮ್ಮರಗಳಾಗಿ ಬೆಳೆದು ನೂರಾರು ವರ್ಷಗಳಿಂದ ಇಲ್ಲಿ ನೆಲೆ ನಿಂತಿವೆ.

ಇಂಥ ಸಸ್ಯವೈವಿಧ್ಯತೆಯ ಜೊತೆಗೆ ಚಿರತೆ, ಕರಡಿ, ಜಿಂಕೆ, ನರಿ, ಕಾಡುಹಂದಿ, ನವಿಲು, ಚಿಪ್ಪುಹಂದಿ, ಆಮೆ, ವಿಶಿಷ್ಟ ಪ್ರಬೇಧದ ಕೊಂಡೆಕುರಿ, ಅನೇಕ ರೀತಿಯ ಹಲ್ಲಿ ಹಾಗು ಹಾವು ತರಹದ ವನ್ಯಜೀವಿಗಳ ಸಂಕುಲವೂ ಈ ತೀರ್ಥ-ರಾಮ ಅರಣ್ಯ ಪ್ರದೇಶದಲ್ಲಿ ನೆಲೆ ಕಂಡುಕೊಂಡಿದೆ. ರಾಜ್ಯ ಅರಣ್ಯ ಪ್ರದೇಶವಾಗಿರುವ ಇಲ್ಲಿ CEPMIZ ( Comprehensive Environmental Plan for Mining Impact Zone) ಯೋಜನೆಯಡಿ 26 ಬಗೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಂತಹ ಪ್ರದೇಶದಲ್ಲಿ ಈಗ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ, ಅರಣ್ಯ ಪ್ರದೇಶ ಇಬ್ಭಾಗವಾಗುತ್ತದೆ. CEPMIZ ಸವಲತ್ತು ಮತ್ತು ಸೌಕರ್ಯ ಕಾಮಗಾರಿಗಳಿಂದ ತೀರ್ಥರಾಮ ಅರಣ್ಯ ಪ್ರದೇಶ ವಂಚಿತಗೊಳ್ಳುತ್ತದೆ. ಇದರ ಪರಿಣಾಮವಾಗಿ ವನ್ಯಜೀವಿಗಳು ಊರಿನತ್ತ ವಲಸೆ ಬರುತ್ತವೆ. ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಇದು ನಾಂದಿಯಾಗುತ್ತದೆ. ಇಲ್ಲಿನ ಪರಿಸರಕ್ಕೆ ಎಂದೂ ಭರಿಸಲಾಗದಷ್ಟು ಧಕ್ಕೆಯುಂಟಾಗುತ್ತದೆ. ಈ ಭಾಗದ ಗಣಿಬಾಧಿತ ಪ್ರದೇಶಗಳಾದ ಲಕ್ಮೇನಹಳ್ಳಿ, ಗೊಲ್ಲರಹಳ್ಳಿ, ಹೊಸಹಳ್ಳಿ, ತೊಂದಲಾಪುರ, ಕೋಡಿಹಳ್ಳಿ ಸರ್ವೆ ನಂಬರುಗಳಲ್ಲಿ ತಂತಾನೇ ಬೆಳೆದಿರುವ ಹೇರಳವಾದ ಮರ ಗಿಡ ಸೇರಿದಂತೆ ಇತರೆ ಸಸ್ಯ-ಸಂಪತ್ತಿದೆ. ಈ ಬಗ್ಗೆ ಎಸಿಎಫ್ ಹಾಗೂ ಆರ್ ಎಫ್ ಒ ಮಟ್ಟದ ಅಧಿಕಾರಿಗಳ ಸಮೀಕ್ಷೆ ಆಧರಿಸಿ ಸ್ಪಷ್ಟ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?