Thursday, September 12, 2024
Google search engine
Homeಕೃಷಿಬಿರುಸುಗೊಂಡ ಮಳೆ: ತುರುವೇಕೆರೆಯಲ್ಲಿ ರಾಗಿ ಬಿತ್ತನೆಗೆ ಶುಕ್ರದೆಸೆ

ಬಿರುಸುಗೊಂಡ ಮಳೆ: ತುರುವೇಕೆರೆಯಲ್ಲಿ ರಾಗಿ ಬಿತ್ತನೆಗೆ ಶುಕ್ರದೆಸೆ

ತುರುವೇಕೆರೆ: ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಮಳೆ ಬಿಡುವ ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಮುಂಗಾರು ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ರಾಗಿ ತಾಲ್ಲೂಕಿನ ಪ್ರಧಾನ ಆಹಾರ ಬೆಳೆಯಾಗಿದೆ. ಕಳೆದ ಬಾರಿ ಮಳೆ ಬೀಳುವ ಪ್ರಮಾಣ ಕಡಿಮೆಯಾದ ಕಾರಣ ಭಿತ್ತನೆ ಕಾರ್ಯವೂ ಕ್ಷೀಣವಾಗಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಮತ್ತು ಹಿಂಗಾರು ಒಳ್ಳೆ ಮಳೆಯಾಗಿತು. ಹೆಸರು, ಅಲಸಂದೆ ಭಿತ್ತನೆ ಕೂಡ ಕಡಿಮೆಯಾಗಿತು. ಇದರಿಂದ ತಾಲ್ಲೂಕಿನಲ್ಲಿ 19700 ಹೆಕ್ಟೇರ್ ಪ್ರದೇಶದಲ್ಲಿ ಶೇ.114 ರಷ್ಟು ರಾಗಿ ಬೆಳೆಯನ್ನು ರೈತರು ಈಗಾಗಲೇ ಭಿತ್ತನೆ ಮಾಡಿದ್ದು ಇದು ದಾಖಲೆ ಭಿತ್ತನೆಯಾಗಿದೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಲಾಗಿ ಬಹುಪಾಲು ರೈತರು ರಾಗಿ ಭಿತ್ತನೆ ಮಾಡಿದ್ದರು. ರಾಗಿ ಪೈರೂ ಚನ್ನಾಗಿ ಬಂದು ಹೊಲ ಹಚ್ಚ ಹಸಿರಾಗಿ ಬೆಳೆದು ಇನ್ನೇನು ರಾಗಿ ಬೆಳೆಗೆ ಅಡ್ಡ ಸಾಲು ಹಾಕಬೇಕು ಅಷ್ಟರೊಳಗೆ ಎಡಬಿಡದೆ ಮಘೆ ಮಳೆ ಸುರಿಯಿತು ಇದರಿಂದ ರಾಗಿ ಪೈರು ದಟ್ಟವಾಗಿ ಬೆಳೆಯಿತು, ಜೊತೆಗೆ ಕಳೆ ಕೂಡ ಹೆಚ್ಚಿತ್ತು.

ಕಳೆದ ಎರಡು ದಿನಗಳಿಂದ ರೈತರು ಟ್ರ್ಯಾಕ್ಟರ್ ನಲ್ಲಿ ಅಡ್ಡ ಸಾಲು ಹಾಕುತ್ತಿದ್ದಾರೆ. ಆದರೂ ದಟ್ಟ ಪೈರು ಮತ್ತು ಕಳೆ ಕೀಳುತ್ತಿಲ್ಲ. ಅಳಿದುಳಿದ ಕಳೆ ಕೀಳಲು ಹೆಣ್ಣಾಳುಗಳು ಸಿಗದೆ ರೈತರು ಪರದಾಡುತ್ತಿದ್ದಾರೆ. ಗೆಣೆ ಸಾಲಿನಲ್ಲಿ ರಾಗಿ ಭಿತ್ತನೆ ಮಾಡಿರುವ ರೈತರು ಹಸುಗಳು ಇರುವ ರೈತರ ಕಾಡಿ ಬೇಡಿ ಎರಡು ಮೂರು ಕುಂಟೆ ಹಾಕಿಕೊಂಡು ರಾಗಿ ಪೈರ ಮೇಲೆ ಗೊಬ್ಬರ ಚೆಲ್ಲಿ ಕುಂಟೆ ಹೊಡೆಯುತ್ತಿದ್ದಾರೆ. ಅದೂ ಒಬ್ಬ ರೈತರಾದ ಮೇಲೆ ಮತ್ತೊಬ್ಬರ ಹೊಲವನ್ನು ಮುಯ್ಯಾಳಿನ ರೀತಿ ಹೊಡೆಯಲಾಗುತ್ತಿದೆ. ಹೀಗೆ ಮಳೆ ಬಂದರೆ ಮನೆ ತುಂಬಾ ರಾಗಿ ತುಂಬಿಕೊಳ್ಳಬಹುದು ಎನ್ನುತ್ತಾರೆ ಅಕ್ಕಳಸಂದ್ರಗೊಲ್ಲರಹಟ್ಟಿಯ ರೈತ ಶಾಂತಯ್ಯ.

ಇನ್ನೂ ಕೆಲ ಭಾಗಗಳ ರೈತರು ರಾಗಿ ಪೈರು ನಾಟಿ ಮಾಡಲು ರಾಗಿ ಹೊಟ್ಲು ಬಿಟ್ಟಿದ್ದು ಟ್ರ್ಯಾಕ್ಟರ್ ನಲ್ಲಿ ಗೆರೆ ಹೊಡೆಯಲು ಆಗದೆ ಕೈಯಲ್ಲೇ ಗೆರೆ ಎಳೆದುಕೊಂಡು ಪೈರು ನಾಟಿ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಹದ ಮಾಡಿಕೊಂಡಿರುವ ಭೂಮಿ ಓಣಗಿರುವ ಕಾರಣ ಅಕ್ಕಪಕ್ಕದ ತೋಟದ ರೈತರ ಕೊಳವೆ ಬಾವಿಗಳಿಂದ ನೀರು ಬಿಡಿಸಿಕೊಂಡು ಹೊಲ ಕೆಸರು ಮಾಡಿಕೊಂಡು ರಾಗಿ ಪೈರು ನಾಟಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಚಪಾನ್ ರಾಗಿ ಮಾಡುತ್ತಿದ್ದು ಇದರಿಂದ ಕಳೆ ಕಡಿಮೆಯಾಗಿ ಫಸಲು ಹೆಚ್ಚು ಬರುತ್ತದೆ ಎಂಬುದು ರೈತರ ಲೆಕ್ಕಾಚಾರ. ಕೆಲವೆಡೆ ರಾಗಿ ಪೈರು ಗರಿ ಮೇಯಿಸುವ ಹಂತಕ್ಕೆ ಬಂದಿದ್ದು ಒಂದು ವಾರದೊಳಗೆ ಮಳೆ ಬಾರದಿದ್ದರೆ ಬಿಸಿಲಿಗೆ ರಾಗಿ ಬಾಡಿ ಕೈಗೆ ಬಂದ ತುತ್ತು ಬಾಯಿಗೆ ಬರದು ಎನ್ನುತ್ತಾರೆ ರೈತ ಚಂದ್ರಣ್ಣ.

ತಾಲ್ಲೂಕಿನ ಕಸಬಾ, ಮಾಯಸಂದ್ರ, ದಬ್ಬೇಘಟ್ಟ ಮತ್ತು ದಂಡಿನಶಿವರ ಹೋಬಳಿಯ ಅಲ್ಲಲ್ಲಿ ರಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ಜೊತೆಗೆ ರಾಗಿ ಪೈರಿನ ತುದಿಯೂ ಸುರುಟಿದ ರೀತಿ ಓಣಗುತ್ತಿರುವ ಬಗ್ಗೆ ತಿಳಿದು ಬಂದಿದ್ದು ಇದು ರೈತರಲ್ಲಿ ಆತಂಕ ಮನೆ ಮಾಡಿದೆ. ಇದರ ಜೊತೆಗೆ ಅವರೆ, ತೋಗರಿ ಮತ್ತು ಹರಳಿನ ಗಿಡದ ಎಲೆಗಳಲ್ಲೂ ಸಹ ಸಣ್ಣ ಸಣ್ಣ ರಂದ್ರವಾಗಿ ರೋಗಪೀಡಿತವಾಗಿದ್ದು ಹಾಗಾಗಿ ಗಿಡದ ಬೆಳವಣಿಗೆ ಕುಂಠಿತವಾಗಲಿದೆ ಎನ್ನುವುದು ರೈತ ಬಸವರಾಜು ಆತಂಕವಾಗಿದೆ.

ತಾಲ್ಲೂಕಿನಲ್ಲಿ 665.9 ಮಿ.ಮೀಟರ್ ವಾಡಿಕೆ ಮಳೆ ಇದ್ದು ಆಗಸ್ಟ್ ಅಂತ್ಯದಲ್ಲಿ 203 ಮಿ.ಮೀಟರ್ ಮಳೆಯಾಗಿದೆ. ಅವರೆ 750, ಅಲಸಂದೆ 1200, ತೋಗರಿ 261, ಹರಳು 67, ಹುರಳಿ 615 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೀಜ ಭಿತ್ತನೆಯಾಗಿದೆ. ಸಾಸಿವೆ ಶೂನ್ಯ ಭಿತ್ತನೆಯಾದರೆ, ಎಳ್ಳು ಮತ್ತು ಹುಚ್ಚೆಳ್ಳು ಅತಿ ಕಡಿಮೆ ಭಿತ್ತನೆಯಾಗಿರುವ ಬೆಳೆಯಾಗಿದೆ.

ಕೋಟ್ – ಬಿ.ಪೂಜಾ, ಕೃಷಿ ಸಹಾಯಕ ನಿರ್ದೇಶಕಿ, ತುರುವೇಕೆರೆ
‘ತುರುವೇಕೆರೆಯಲ್ಲಿ ರಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು ವಿರಳ. ಅಂತಹ ಸ್ಥಳಗಳಿಗೆ ಭೇಟಿ ನೀಡಿ, ಬೆಳೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.’

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?