Thursday, May 7, 2026
Google search engine
Home Blog Page 117

ಆತ್ಮವಿಶ್ವಾಸದಿಂದ ಬದುಕಿ: ಪ್ರೊ.‌ಪರಶುರಾಮ್

ಜಿಲ್ಲಾ ಯುವಜನ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿದ ಪ್ರೊಫೆಸರ್


Public story


Tumkuru: ಆತ್ಮವಿಶ್ವಾಸದಿಂದ ಬದುಕು ಸಾಗಿಸುವ ಮೂಲಕ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು ಎಂದು ತುಮಕೂರು ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ಕೆ.ಜಿ.ಪರಶುರಾಮ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ, ನೆಹರು ಯುವ ಕೇಂದ್ರ, ಜನಮುಖಿ ಕಲಾ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಇವರ ಅಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಯುವಜನ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಜನರ ಪ್ರತಿಭೆಯನ್ನು ಅನವರಣಗೊಳಿಸಲು ನೆಹರು ಯುವ ಕೇಂದ್ರ ವೇದಿಕೆಯನ್ನು ಸೃಷ್ಟಿಸುತ್ತದೆ. ಊರು ಉಸಾಬರಿ ನಮಗೇಕೆ ಎನ್ನುವ ಧೋರಣೆಯಲ್ಲಿ ಇಂದಿನ ಯುವಜನರಿದ್ದಾರೆ. ಇದರಿಂದ ಹೊರಬಂದು ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಭಾಗವಹಿಸಬೇಕು. ಗ್ರಾಮಗಳ ಅಭಿವೃದ್ಧಿಯ ಚಿಂತನೆ ಬಗ್ಗೆ ಚರ್ಚಿಸಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಯುವಶಕ್ತಿ ಅಣುಶಕ್ತಿಯಂತೆ ಭಯಂಕರ ಇಂಥ ಯುವಶಕ್ತಿಯನ್ನು ಸರಿದಾರಿಯಲ್ಲಿ ತೋಡಗಿಸಿಕೊಂಡರೆ ಭಾರತವನ್ನು ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಯುವಕರು ಉತ್ಪಾದಕ ವಲಯವಿದ್ದಂತೆ ಆದ್ದರಿಂದ ಜ್ಞಾನ ಮತ್ತು ಕೌಶಲ್ಯವನ್ನು ಪಡೆದುಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸಲು ಮುಂದಾಗಬೇಕು ಎಂದರು.
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ಪರಿಷತ್ ಕಾರ್ಯಕಾರಿ ಸಮಿತಿಯ ಸದಸ್ಯ ಕೆ.ಟಿ.ತಿಪ್ಪೆಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶೇ ೬೩ ರಷ್ಟು ಯುವಜನರು ಇದ್ದಾರೆ. ರಾಜ್ಯದಲ್ಲಿರುವ ೨.೮ ಲಕ್ಷ ಯುವಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ದರೆ ದೇಶವೇ ಅಭಿವೃದ್ಧಿಯತ್ತ ಸಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಯುವಜನತೆ ಸರ್ಕಾರದ ಯೋಜನೆಗನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ನಾನಾ ಇಲಾಖೆಗಳಲ್ಲಿ ಸಿಗುವ ಯೋಜನೆಗಳಲ್ಲಿ ಯುವಜನರು ಸಂಪೂರ್ಣ ಬಳಸಿಕೊಂಡು ಸ್ವಯಂ ಸಬಲೀಕರಣ ಹೊಂದಬೇಕು ಎಂದರು.
ಅರೆಯೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೀಪಕ್.ಆರ್ ಪ್ರಧಾನ ಮಂತ್ರಿ ಸಾಮಾಜಿಕ ಆರ್ಥಿಕ ಯೋಜನೆಗಳ ಬಗ್ಗೆ ಮಾತನಾಡಿ, ಪ್ರಧಾನ ಮಂತ್ರಿ ಜನ್‌ಧನ್ ಮತ್ತು ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಂತವು ಸಾಕಷ್ಟಿವೆ. ಯುವಜನರು ಕೌಶಲ್ಯ ತರಬೇತಿ ಪಡೆದುಕೊಂಡು ಬ್ಯಾಂಕ್ ಮತ್ತು ಇಲಾಖೆಗಳಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಚಟುವಟಿಕೆಗಳನ್ನು ಮಾಡಬೇಕು ಎಂದು ತಿಳಿಸಿದರು.
ಪ್ರಗತಿಪರ ರೈತ ಸಿ.ಕೆ.ಪ್ರಕಾಶ್ ಮಾತನಾಡಿ, ಯುವ ಜನೆತೆ ಕೃಷಿಯನ್ನು ನಂಬಿ ಕೃಷಿ ಮಾಡಿದರೆ ಆದಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸುಸ್ಥಿರ ಕೃಷಿ ಮಾಡಲು ಎಲ್ಲರೂ ಮುಂದಾಗಬೇಕು. ಇದರಿಂದ ಯುವ ಜನರು ಉದ್ಯೋಗವನ್ನು ಆರಸುತ್ತಾ ನಗರಗಳ ಕಡೆ ಮುಖ ಮಾಡುವುದು ತಪ್ಪುತ್ತದೆ ಎಂದರು.
ಸಂಶೋಧಕ ಡಾ.ಬಿ.ನಂಜುAಡ ಸ್ವಾಮಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ಥಳಿಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪರಸ್ಕೃತ ಲೋಕೇಶ್, ವಿಜಯ್‌ಕುಮಾರ್, ಚಂದನ್ ಹಾಗೂ ಸ್ವಯಂಸೇವಕರು, ಯುವಕರು ಹಾಜರಿದ್ದರು.

ತುಮಕೂರು ಪೋಟೋ : ತುಮಕೂರು ನಗರದ ಕನ್ನಡ ಭವನದಲ್ಲಿ, ನೆಹರು ಯುವ ಕೇಂದ್ರ, ಜನಮುಖಿ ಕಲಾ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಇವರ ಅಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಯುವಜನ ಸಮಾವೇಶ ಕಾರ್ಯಕ್ರಮವನ್ನು ತುಮಕೂರು ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರೊ.ಕೆ.ಜಿ.ಪರಶುರಾಮ್ ಉದ್ಘಾಟಿಸಿದರು.

ಶೇಷಾದ್ರಿಪುರಂ ಕಾಲೇಜಿನಲ್ಲಿ SSLC ವಿದ್ಯಾರ್ಥಿಗಳಿಗೆ ಕಾರ್ಯಾಗಾರ

0

Public story


ತುಮಕೂರಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

2021-2022ನೇ ಸಾಲಿನ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ದಿನಾಂಕ 13/03/2022 ರಂದು ಭಾನುವಾರ ಕಾಲೇಜಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪರೀಕ್ಷೆಗಾಗಿ ವಿಷೇಶ ತರಗತಿಗಳು ಇರಲಿವೆ. MATHS &SCIENCE ವಿಷಯಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಗಳನ್ನು ನೀಡಲಾಗುವುದು.

ಈ ಕಾರ್ಯಾಗಾರಕ್ಕೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಲು ವಿನಂತಿಸಲಾಗಿದೆ.
ಈ ಕಾರ್ಯಾಗಾರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ವಾಹನ ಸೌಲಭ್ಯವನ್ನು ಒದಗಿಸಲಾಗಿದೆ.

ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತ ವಿದ್ಯಾರ್ಥಿಗಳು/ ಪೋಷಕರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಸಲು 99721 75689, 95900 35894 ಪ್ರಕಟಣೆ‌ ತಿಳಿಸಿದೆ.

ಸ್ತ್ರೀ…..

0
ಮಹಿಳಾ ದಿನಾಚರಣೆ ಬಂದು ಹೋಗಾಯ್ತು. ಉಳ್ಳವರ ಬವಣೆ ಒಂದು ಥರ. ದುಡಿಯುವ ಮಹಿಳೆಯ ಬವಣೆ ಬೇರೆ ಥರಾ. ಪ್ರತಿನಿತ್ಯದ ಬದುಕಿನಲ್ಲಿ ಹೆಣ್ಣಿನ ನೋವು ಕಂಡು ಹೊಮ್ಮಿದ ಕವನ ಡಾII ರಜನಿಯವರ ಬತ್ತಳಿಕೆ ಯಿಂದ.

ಸ್ತ್ರೀ…..

ಸ್ತ್ರೀ ದಿನ ಬಂದು
ಹೋಗಾಯ್ತು…

ಉಟ್ಟ ನೇರಳೆ ಸೀರೆಯ
ಬಣ್ಣದ ಬಾಸುಂಡೆ
ಬಾರದಿರಲಿ…

ಮುಡಿದ ಕೆಂಪು ಗುಲಾಬಿಯ
ರಂಗಿನ ಕಣ್ಣಿನ
ಕುಡಿದ ಗಂಡ …ಕಾಡದಿರಲಿ.

ಭಾಷಣ ಮಾಡಿ ಬಂದ
ಹೆಂಡತಿಗೆ …. ವ್ಯಂಗ್ಯ
ಸುರಿಯದಿರಲಿ.

ಆರ್ಥಿಕ ಸ್ವಾವಲಂಬನೆಯ
ಆಸೆಯ ಹೆಂಗಸಿನ
ದುಡ್ಡು ಕಿತ್ತು ಗೊಂಡು
ಗಡಂಗಿನ ದಾರಿಗೆ
ಗಂಡ ನಡೆಯದಿರಲಿ..

ಜೀವ ಮಾನವೆಲ್ಲಾ ದುಡಿದ
ಹೆಣ್ಣಿಗೆ ಆರೋಗ್ಯ ತಪಾಸಣೆ
ಮೊದಲಾಗಲಿ ….

ದುಡಿದ ಸ್ತ್ರೀಗೆ …ದೇಶಗಳ
ದರ್ಶನ ಭಾಗ್ಯ ದೊರೆಯಲಿ….

ತಾನೂ ಹಾಕಿದ ಬಂಡವಾಳಕ್ಕೆ
ಜಂಟಿ ಖಾತೆಯಿರಲಿ…

ದುಡಿದ ಆಸ್ತಿ
ಇಬ್ಬರ ಹೆಸರಲ್ಲೂ ಇರಲಿ…

ನಾಮಿನಿ ಜಾಗದಲ್ಲಿ
ಪಾಲುದಾರಳಾಗಲಿ ….

ಮಗಳಿಗೆ ….. ಪಾಲಿಗೆ
ಬಂದಾಳೆಂದು….
ಗೌರಿಗೆ ಕರೆಯುವದ
ಮರೆಯದಿರಲಿ.

ಸಣ್ಣ ಅಧಿಕಾರ ನೀಡಿ.. ದೊಡ್ಡ
ಅಧಿಕಾರ ನೀಡುವಲ್ಲಿ….
ಕಣ್ಣಿಗೆ ಮಣ್ಣೆರಚದಿರಲಿ.

ಉಡುವ ಬಟ್ಟೆ ಬರೆಯ
ವ್ಯಾಖ್ಯಾನ ಬಿಟ್ಟು …
ವ್ಯಕ್ತಿತ್ವಕ್ಕೆ ಬೆಲೆ ಕೊಡಲಿ.

ಆಕೆಯನ್ನು ತುಳಿಯಲು
ನೂರು ನ್ಯೂನತೆ
ಸೃಷ್ಟಿಯಾಗದಿರಲಿ.

ಸ್ವೀಕರಿಸಿ
ಸಹಜವಾಗಿ.
ಸ್ತ್ರೀತನ ಬೆಳೆದು …

ಸಮಷ್ಠಿ ಲೋಕ
ತಂಪಾಗಿ ಪೊರೆಯುವಂತೆ.


ಡಾII ರಜನಿ

ಇಸ್ರೇಲ್ ಮಾದರಿ ಸ್ವಾಭಿಮಾನ ಅಗತ್ಯ

0

ತುರುವೇಕೆರೆ-: ಬಾಯಲ್ಲಿ ಶಾಂತಿ ಮಂತ್ರ ಜಪಿಸಿದರೂ ಎಲ್ಲಾ ರಾಷ್ಟ್ರಗಳೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಲೇ ಇವೆ.ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಯುದ್ದೋನ್ಮತ್ತವಾಗಿಯೇ ವರ್ತಿಸುತ್ತಿವೆ.ಇಂತಹ ಪರ್ವಕಾಲದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವೂ ಸಹ ಇಸ್ರೇಲ್ ಮಾದರಿಯಲ್ಲಿ ಸ್ವಾಭಿಮಾನ ಮತ್ತು ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಜನಪ್ರಿಯ ವೈದ್ಯ ಡಾ.ನಾಗರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಚಿದಂಬರೇಶ್ವರ ಗ್ರಂಥಾಲಯದಲ್ಲಿ ‘ಇಸ್ರೇಲ್ ಕೆಣಕಿ ಗೆದ್ದವರಿಲ್ಲ’ ಎಂಬ ಕೃತಿಯ ಬಗ್ಗೆ ಪರಾಮರ್ಶೆ ನಡೆಸಿದ ಮಾತನಾಡಿದ ಅವರು ಇಸ್ರೇಲ್ ಅತ್ಯಲ್ಪ ಕಾಲದಲ್ಲೇ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಭಿ ದೇಶವಾಗಿ ಬೆಳೆದಿದೆ. ತನ್ನ ಮೇಲೆ ನಡೆದ ಆಕ್ರಮಣಗಳನ್ನು ಸಮರ್ಥವಾಗಿ ಹತ್ತಿಕ್ಕಿದೆ. ಅಲ್ಲಿನ ಪ್ರತಿಯೊಬ್ಬ ನಾಗರಿಕನೂ ಸೈನಿಕ ತರಬೇತಿ ಹೊಂದಿದ್ದಾನೆ. ಸದಾ ಕಾಲ ಚೀನ ಮತ್ತು ಪಾಕೀಸ್ಥಾನದ ದ್ವೇಷದ ನೆರಳಲ್ಲಿ ಬದುಕುವ ನಾವು ಸಹ ಇಸ್ರೇಲ್ ಮಾದರಿಯನ್ನು ಅನುಸರಿಸಬೇಕು ಎಂದರು.

ಲೇಖಕ ತುರುವೇಕೆರೆ ಪ್ರಸಾದ್, ಗ್ಲೋಬಲ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಪ್ರೊ. ಎಂ.ಎಸ್.ಗಂಗಾಧರ ದೇವರಮನೆ, ಮಂಜುನಾಥ್ ಮೊದಲಾದವರು ಸಂವಾದದಲ್ಲಿ ಪಾಲ್ಗೊಂದು ಪ್ರತಿಕ್ರಿಯಿಸಿದರು.

ಸಮಾರಂಭದಲ್ಲಿ ಶುಶ್ರೂಶಕಿ ಜಯಮ್ಮ ಮತ್ತು ಸಮಾಜಸೇವಕಿ ಎಸ್.ಎಂ. ನಾಗರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಂಥಾಲಯ ಸಂಸ್ಥಾಪಕಿ ಲಲಿತಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.

ಪ.ಪಂ.ಅಧ್ಯಕ್ಷ ಚಿದಾನಂದ್, ಇನ್ನರ್‍ವೀಲ್ ಅಧ್ಯಕ್ಷೆ ಗೀತಾ ಸುರೇಶ್, ಉಪನ್ಯಾಸಕಿ ರೂಪಾ, ಉಷಾ ಶ್ರೀನಿವಾಸ್, ಮಹಾಲಕ್ಷ್ಮೀ ನರಸಿಂಹಮೂರ್ತಿ. ಆನಂದರಾಜ್, ಎಸ್.ಎಂ.ಕುಮಾರಸ್ವಾಮಿ, ಮಂಜಣ್ಣ, ಸತ್ಯನಾರಾಯಣ, ಶ್ರೀನಿವಾಸ್, ಬೋರಲಿಂಗಯ್ಯ ಇತರರು ಭಾಗವಹಿಸಿದ್ದರು. ಕೃಷ್ಣಚೈತನ್ಯ ಸ್ವಾಗತಿಸಿದರು, ಸುಷ್ಮಾ ವಂದಿಸಿದರು. ಟಿ.ರಾಮಚಂದ್ರು ನಿರೂಪಿಸಿದರು.

ಯುದ್ಧ

0

ಡಾ. ರಜನಿ


ಬಗೆಯ ಬೇಡ
ಹೊಟ್ಟೆ
ಅದೇ ಅನ್ನ.

ದಾಟಿದರೂ
ಗಡಿ…
ಅದೇ ಸೂರ್ಯ.

ಕಾಡದಿರು
ಮಗುವೇ…
ಅದೇ ಹಾಲು.

ಸುರಿಸದಿರು
ಕಣ್ಣೀರು…
ಅದೇ ಅಳು.

ಕೊಲ್ಲದಿರು
ಜೀವ…
ಅದೇ ನೋವು.

ದಾಟಿದರೂ
ದೇಶ…
ಅದೇ ಹಸಿವು.

ಹಿಂಡದಿರು
ಕರುಳು…
ಅದೇ ತಾಯಿ

ಬರುತ್ತಿದೆ ಮಾವಿಗೆ ರೋಗ: ಇಲ್ಲಿದೆ ಪರಿಹಾರ

Publicstory


ಗುಬ್ಬಿ: ಮಾವು ಬೆಳೆಯಲ್ಲಿ ಕಾಂಡ ಕೊರಕ, ಓಟೆ ಕೊರಕಹುಳು, ಥ್ರಿಪ್ಸ್ ಮತ್ತು ಹಣ್ಣಿನ ನೊಣ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಹೂ ಬಿಡುವ ಪೂರ್ವದಲ್ಲಿ ಮತ್ತು ನಂತರದಲ್ಲಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು ಎಂದು ಐಡಿಎಫ್ ಸಂಸ್ಥೆಯ ಸಹಾಯಕ ಯೋಜನಾ ನಿರ್ದೇಶಕ ಕೆ.ಎನ್.ಗುರುದತ್ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಹೋಬಳಿ ಅಡಿಕೆಕೆರೆಯಲ್ಲಿ ಸಿಎಸ್ ಪುರ ರೈತ ಉತ್ಪಾದಕರ ಕಂಪನಿ, ಐಡಿಎಫ್ ಸಂಸ್ಥೆ ಬೆಂಗಳೂರು ಹಾಗೂ ಸುಜೀವನ ಒಕ್ಕೂಟ ಗುಬ್ಬಿ ಇವರ ಅಶ್ರಯದಲ್ಲಿ ಏರ್ಪಡಿಸಿದ್ದ ಮಾವು ಬೆಳೆಗಾರರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಸಾವಯವ ಪದಾರ್ಥಗಳನ್ನು ಬಳಸಿ ಮಾವಿನಲ್ಲಿ ಕೀಟ ಮತ್ತು ರೋಗಗಳನ್ನು ನಿಯಂತ್ರಣ ಮಾಡುವುದರಿಂದ ಹಣ್ಣುಗಳನ್ನು ಹೆಚ್ಚು ದಿನಗಳ ಕಾಲ ಸಂರಕ್ಷಿಸಲು ಪೂರಕವಾಗುತ್ತದೆ. ರೈತರಿಗೆ ಉತಮ್ಮ ಬೆಲೆಯು ಸಹ ದೊರೆಯುತ್ತದೆ. ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಸಾವಯವ ವಸ್ತುಗಳನ್ನು ಸಿಂಪಡಣೆ ಮಾಡಿ ಎಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಸಿಇಒ ಲೋಕೇಶ.ಡಿ, ಜಿವನೋಪಾಯ ಉತ್ತೇಜನಾಧಿಕಾರಿ ವಿನೋದಮ್ಮ, ಬಿಸಿಎ ನಳಿನ, ಲಕ್ಷ್ಮೀಕಾಂತ್, ಪ್ರಗತಿಪರ ರೈತರಾದ ದಿನೇಶ್, ನರಸೇಗೌಡ, ಬೀರಮಾರನಹಳ್ಳಿ ಶ್ರೀನಿವಾಸ್, ಕಂಚಿವರದ ಮತ್ತಿತರರು ಇದ್ದರು.

ಸತೀಷ್ ಗೆ ಬೆಳ್ಳಿಕಿರೀಟ ಧಾರಣೆ ಮಾಡಿದ ಮಾಜಿ ಶಾಸಕ ಕೃಷ್ಣಪ್ಪ

Publicstory


ತುರುವೇಕೆರೆ: ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ವಾಪಸ್ ಕೊಡುವುದೇ ಅತ್ಯಂತ ಸಾರ್ಥಕವಾದ ಬದುಕು. ‘ತನಗಾಗಿ ಸ್ವಲ್ಪ ಮತ್ತು ಸಮಾಜಕ್ಕಾಗಿ ಸರ್ವಸ್ವ’ ಎಂಬ ಧ್ಯೇಯದೊಂದಿಗೆ ಬದುಕಿ ಬಾಳಿರುವ ಸಮಾಜ ಸೇವಕ ಹಾಗೂ ಹಿರಿಯ ರಂಗಕರ್ಮಿ ಟಿ.ಎನ್.ಸತೀಶ್ ಅವರು ಅನುಕರಣೀಯ ಮಾದರಿ ಆಗಿದ್ದಾರೆ ಎಂದು ಮಾಜಿ ಶಾಸಕ ಎಸ್.ರುದ್ರಪ್ಪ ಹೇಳಿದರು.

ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನಮಂಟಪದಲ್ಲಿ ಸತ್ಯಗಣಪತಿ ಗ್ರಾಮಾಂತರ ಕಲಾಮಂಡಳಿ ಇತರೆ ಸಂಘಟನೆಗಳು ಹಾಗೂ ಕಲಾಪೋಷಕರು, ಸಾರ್ವಜನಿಕರ ಸಹಯೋಗದೊಂದಿಗೆ ಏರ್ಪಡಿಸಿದ್ದ ರಜತ ಕಿರೀಟ ಧಾರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ‘ ಕಲಾವಿದರ ಬದುಕು ಕಷ್ಟಕಾರ್ಪಣ್ಯಗಳ ಮಧ್ಯೆಯೇ ಸಾಗುತ್ತಿರುತ್ತದೆ. ಅಂತಹ ಕಲಾವಿದರಿಗೆ ಆಸರೆಯಾಗಿ ನಿಂತು ಸಮಾಜಸೇವೆ ಹಾಗೂ ರಂಗಭೂಮಿಯ ಪುನಶ್ಚೇತನಕ್ಕೆ ತಮ್ಮ ವೈಯಕ್ತಿಕ ಬದುಕನ್ನೇ ತ್ಯಾಗ ಮಾಡಿರುವ ಸತೀಶ್ ಅಂತಹವರನ್ನು ಗೌರವಿಸುವುದು ಸಮಾಜ ತನ್ನನ್ನು ತಾನು ಗೌರವಿಸಿಕೊಂಡಂತೆ ಎಂದರು.

ಸಮಾರಂಭದಲ್ಲಿ ರಂಗಕರ್ಮಿ ಟಿ.ಎನ್.ಸತೀಶ್ ಅವರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಬೆಳ್ಳಿ ಕಿರೀಟಧಾರಣೆ ಮಾಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸತೀಶ್ ತಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣರಾದ ಎಲ್ಲಾ ಪ್ರೇರಕ ವ್ಯಕ್ತಿಗಳಿಗೆ, ಸಂಘಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ.ಎ. ನಾಗರಾಜ್ ಮತ್ತು ನಾಟಿ ವೈದ್ಯೆ ರೆಹನಾ ಬೇಗಂ, ಗಂಗಮ್ಮ, ಯಶೋಧಮ್ಮ, ಸುಜಾತಾ ಅವರನ್ನು ಸನ್ಮಾನಿಸಲಾಯಿತು. ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್(ರಾಜು)ಅಧ್ಯಕ್ಷತೆ ವಹಿಸಿದ್ದರು. ಬಿ.ಮಂಜುನಾಥ ಶಾಸ್ತ್ರೀ, ಬಿ.ಎಂ.ಚಿಕ್ಕೀರಪ್ಪ,ಪ.ಪಂ.ಅಧ್ಯಕ್ಷ ಟಿ.ಕೆ. ಚಿದಾನಂದ್, ಬಿಜೆಪಿ ಯುವ ಮುಖಂಡ ವಿ.ಬಿ.ಸುರೇಶ್, ಎಚ್.ಆರ್. ರಾಮೇಗೌಡ, ಕೆ.ನರಸಿಂಹಮೂರ್ತಿ, ಟಿ.ಎಸ್.ಬೋರೇಗೌಡ, ರಾಮಚಂದ್ರಯ್ಯ, ರಾಘವೇಂದ್ರ. ಇತರರು ಉಪಸ್ಥಿತರಿದ್ದರು. ಜೆ.ಬಿ. ನವೀನ್ ಕುಮಾರ್ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಕೆ.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ಹಾಗೂ ರಂಗಕಲಾವಿದ ಅಮಾನಿಕೆರೆ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕಿನ ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಸತೀಶ್ ಅವರನ್ನು ಅಭಿನಂದಿಸಿದರು.

ಪತ್ರಕರ್ತರ ಕಣ್ಣೀರು ತೆರೆದಿಡುವ ಕಥನಗಳ ಪುಸ್ತಕ

Publicstory


ಕೋವಿಡ್ ತಂದಿತ್ತ ನೋವುಗಳನ್ನು ಹೇಳಲು ಪದಗಳೇ ಇಲ್ಲ. ಕೋವಿಡ್ ಕಥನಗಳನ್ನು ಜಗತ್ತಿಗೆ ಹೇಳುತ್ತಿದ್ದ ಪತ್ರಕರ್ತರೇ ಕೋವಿಡ್‌ಗೆ ತುತ್ತಾದರೆ? ಅವರ ಆರ್ಥಿಕ ಕಷ್ಟಗಳು ಏನಿದ್ದವು? ಅವರ ಕುಟುಂಬದ‌ ಕತೆ ಏನಾಗಿತ್ತು?

ಅನೇಕ ಪತ್ರಕರ್ತರು ಕಷ್ಟದಲ್ಲೇ ನಲುಗುತ್ತಿದ್ದಾರೆ. ಅದರೂ ನಗುನಗುತ್ತಾ ಸಮಾಜಸೇವೆಯ ಬರವಣೆಗೆಯಲ್ಲಿ ತೊಡಗುತ್ತಾರೆ. ಕೋವಿಡ್ ಎಂದು ಎಲ್ಲರೂ ಮನೆ ಸೇರಿದಾಗ ಧೃತಿಗೆಡದೆ ಸುದ್ದಿ ಮಾಡಿ ಜನರಿಗೆ ನ್ಯಾಯ ಕೊಡಿಸಿದರು. ಈ‌‌ ಕೆಲಸದಲ್ಲಿ ಅನೇಕರು ಹಸು ನೀಗಿದರು.‌‌ ಪ್ರಾಣ ತೆತ್ತವರ ಕುಟುಂಬದ ಕಷ್ಟಗಳ ಕಥನವೇ ಕೋವಿಡ್ ಕತೆಗಳು.

ಬೆಂಗಳೂರಿನ ಬಹುರೂಪಿ ಪ್ರಕಾಶನ ಹೊರ ತಂದಿರುವ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಬರೆದಿರುವ ಪುಸ್ತಕ ಓದುತ್ತಾ ಓದಂತೆ ಎಂಥವರ ಕಣ್ಣಾಲಿಗಳು ತುಂಬಿ ಬರುತ್ತವೆ.

ಪತ್ರಕರ್ತರಿಗೂ ಇಷ್ಟೊಂದು ಕಷ್ಟಗಳಿವೆಯೇ? ಸರ್ಕಾರದ ಒಂದು ಸಹಾಯ ಪಡೆಯಲು ಪತ್ರಕರ್ತರು ಸಹ ಒದ್ದಾಡಬೇಕೆ ಎಂಬುದು ಪುಸ್ತಕ ಓದಿದ ಮೇಲೆಯೇ ಗೊತ್ತಾಗಲಿದೆ.

ನನಗೆ ಗೊತ್ತಿರುವ ಅನೇಕ ಪತ್ರಕರ್ತರ ಸಾವಿನ ಸುದ್ದಿಗಳು ಇದರಲ್ಲಿವೆ. ಕರಳು‌ ಚುರುಕ್ ಎಂದಿತು.

ಶಾಂತಾರಾಮ ಭಟ್, ಸೀತಾಲಕ್ಷ್ಮಿ, ಜಯಣ್ಣ, ಮಂಜು‌ನಾಥ್, ಪುತ್ತೂರಿನ ಸುದ್ದಿ ಬಿಡುಗಡೆಯ ಸಂಪಾದಕರು… ಹೀಗೆ ಹಲವರು.

ಕೋವಿಡ್ ನಿಂದ ತುತ್ತಾದ ಜನ ಸಾಮಾನ್ಯರ ಮನೆ ಹೊಕ್ಕಿ ನೋಡಿದರೆ ಇನ್ನೆಂಥ ಕರುಣಾಜನಕ ಕತೆಗಳಿವೆಯೋ?

ಎಲ್ಲರೂ ಓದಬೇಕಾದ ಪುಸ್ತಕ ಇದಾಗಿದೆ. ತುಂಬಾ ಸರಳವಾಗಿ ಬರೆದಿದ್ದಾರೆ. ಒಮ್ಮೆಗೇ ಒಂದೇ ಗುಟಕಿಗೆ ಓದಿಸಿಕೊಳ್ಳುತ್ತಲೇ ಹೊಟ್ಟೆಯಲ್ಲಿ ದುಃಖದ ಜ್ವಾಲೆ ಯನ್ನು ಹೊತ್ತಿಸುವ ಕೃತಿ ಇದು. ಪತ್ರಕರ್ತರ ಬವಣೆಗಳ ನಿವಾರಣೆಗೆ ಹೆಗಲಾದ ಪತ್ರಕರ್ತರ ಸಂಘ, ಅದರ ಅಧ್ಯಕ್ಷರಾದ ಶಿವಾನಂದ ತಗಡೂರು, ಅವರ ಎಲ್ಲ ಪದಾಧಿಕಾರಿಗಳ ಕೆಲಸ ಮೆಚ್ಚುವಂಥದ್ದು. ಇಂಥದೊಂದು ಕೃತಿ ಬರೆದ ಶಿವಾನಂದ್, ಕೃತಿಯನ್ನು ಹೊರ ತಂದಿರುವ ಬಹುರೂಪಿ ಪ್ರಕಾಶನದ ಕೆಲಸ ಅಭಿನಂದಾರ್ಹ.‌

ಕೃತಿ ಬೇಕಾದವರು ಮೊ: 7019182729 ಸಂಪರ್ಕಿಸಿ.

ಆಂಜನೇಯ ಈಗಲೂ ಜೀವಂತ: ಶೃಂಗೇರಿ ಶ್ರೀಗಳು

Publicstory


Sankapura (pavagada): ಆಂಜನೇಯ ಎಂದರೆ ಬ್ರಹ್ಮಚಾರಿ ಎಂದು ನಾವೆಲ್ಲ ನಂಬಿದ್ದೇವೆ. ಪುರಾಣಗಳು ಇದನ್ನು ಓದಿದ್ದೇವೆ. ಆದರೆ ಪರಾಷರಾ ಚರಿತ ಸಂಹಿತೆಯಲ್ಲಿ ಆಂಜನೇಯನದ ಮದುವೆಯ ಉಲ್ಲೇಖ ಇದೆ. ಸೂರ್ಯನ ಮಗಳಾದ ಸುರ್ವಚಲಾ ದೇವಿಯನ್ನು ಮದುವೆಯಾಗಿದ್ದ ಎಂದು ಕೂಡಲಗಿ ಶೃಂಗೇರಿ ಮಠದ ಶ್ರೀ ಹೇಳಿದರು.

ಇಲ್ಲಿನ ಸುರ್ವಚಲಾ ಆಂಜನೇಯ ದೇವಸ್ಥಾನದ ಲ್ಲಿ ನಡೆದ ಸುರ್ವಚಲಾ ದೇವಿಯ ಪ್ರತಿಷ್ಠಾಪನೆ, ಆಂಜನೇಯ- ಸುರ್ವಚಲಾ ದೇವಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.

ಒಂದೇ ನೆಗೆತಕ್ಕೆ ಆರು ದಿಕ್ಕು ನೆಗೆದಿದ್ದ. ಸೂರ್ಯನಾರಾಯಣನನ್ನೇ ಆಂಜನೇಯ ಗುರುವಾಗಿಸಿಕೊಂಡ. ಸರ್ವ ವಿದ್ಯೆ ಕಲಿಸಿದ. 90 ವಿದ್ಯೆಗಳನ್ನು ಹೇಳಿಕೊಟ್ಟ. ಇನ್ನು ನಾಲ್ಕು ವಿದ್ಯೆ ಹೇಳಿಕೊಡಬೇಕಾದರೆ ಮದುವೆಯಾದರೆ ಮಾತ್ರ ಕಲಿಸಿಕೊಡುವುದಾಗಿ ಹೇಳಿದ ಎಂದು ವಿವರಿಸಿದರು.

ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದೇನೆ ದನು. ಮದುವೆಯಾಗುವುದಿಲ್ಲ ಎಂದು ಹಠ ಸಾಧಿಸಿದ. ಆದರೆ ದೇವಾನುದೇವತೆಗಳು ಆಂಜನೇಯನ ಮನವೊಲಿಸಿದರು. ರಾಕ್ಷಸರ ಸಂಸಾರ ಮಾಡಿ ಲೋಕ ಕಲ್ಯಾಣ ಮಾಡಬೇಕಾದರೆ ಆ ನಾಲ್ಕು ವಿದ್ಯೆಗಳನ್ನು ಕಲಿಯಬೇಕೆಂದರು. ಆಗ ಆಂಜನೇಯ ಸೂರ್ಯನನ್ನು ಕೇಳಿಕೊಂಡ. ಸೂರ್ಯ ತನ್ನ ಕಿರಣಗಳನ್ನು ಒಂದು ಗೂಡಿಸಿ ಸುರ್ವಚಲಾ ಶಕ್ತಿಯನ್ನು ರೂಪಿಸಿದ. ಆ ಶಕ್ತಿಯೇ ಹೆಣ್ಣು ಮಗಳಾದಳು. ಅವಳನ್ನು ವಿವಾಹ ಮಾಡಿಕೊಂಡ ಎಂದರು.

ಸೂರ್ಯ ದೇವನ ಮಗಳನ್ನು ಮದುವೆ ಮಾಡಿಕೊಂಡ. ಮದುವೆಯಾದರೂ ಬ್ರಹ್ಮಚಾರಿ ಪಾಲಿಸುವೆ ಎಂದು ಸೂರ್ಯನ ಬಳಿ ವರ ಪಡೆದ. ಮದುವೆಯಾದರೂ ಬ್ರಹ್ಮಚಾರಿ ಯಾಗಿಯೇ ಉಳಿದ. ಸುರ್ವಚಲಾ ದೇವಿ ತಪಸ್ಸಿಗೆ ಹೋದಳು. ಇದು ವೃತ್ತಾಂತ ಎಂದರು.

ಶನಿ ದೋಷ ವಿದ್ದವರು ಆಂಜನೇಯ ಸ್ವಾಮಿ ಪಠಣದಿಂದ ಕಡಿಮೆಯಾಗಲಿದೆ ಎಂದರು.

ರಾಮಾಯಣದಲ್ಲಿ ಕೊನೆಗೆ ಶ್ರೀರಾಮನ ಪಟ್ಟಾಭಿಷೇಕದ ವೇಳಿ ಸೀತಾಮಾತೆ ಸುರ್ವಚಲಾ ದೇವಿಯನ್ನು ಪತಿವ್ರತೆ ಎಂದು ನೆನಪಿಸಿಕೊಂಡಳು.

ಸಂಕಾಪುರದಲ್ಲಿ ಆಂಜನೇಯನ ಮದುವೆ ಮಾಡಿದ. ಕರ್ನಾಟಕದಲ್ಲಿ ಇದು ಪ್ರಚಾರ ಇಲ್ಲ‌ . ಊರಿಗೊಬ್ಬ ಹನುಮಂತ ಇದ್ದಾರೆ. ಆಂಜನೇಯನ ಪತ್ನಿಯನ್ನು ಯಾರೂ ಪ್ರತಿಷ್ಠಾಪನೆ ಮಾಡಿಲ್ಲ ಎಂದರು.

ಹೈದರಬಾದ್ ನ ಹತ್ತಿರ ಸುರ್ವಚಲಾ ಆಂಜನೇಯ ದೇವಸ್ಥಾನವಿದೆ. ಇದು ಕರ್ನಾಟಕದ ಪ್ರಪ್ರಥಮವಾಗಿ ಇಲ್ಲಿ ಸ್ಥಾಪಿಸಲಾಗಿದೆ. ಇದರ ಕಲ್ಯಾಣೋತ್ಸವ ಮಾಡಿದರೆ ಮದುವೆಯಾಗಲಿದೆ. ಇಲ್ಲಿ ಗಂಡ ಹೆಂಡತಿ ಜಗಳ, ಹೊಂದಾಣಿಕೆ ಇಲ್ಲದಿದ್ದವರು ಇಲ್ಲಿ ಪೂಜೆ ಸಲ್ಲಿಸಿದರೆ ಸರಿಹೋಗಲಿದೆ ಎಂದು ಹೇಳಿದರು

ಅವನು ಚಿರಂಜೀವಿ. ‌ಈಗಲೂ ಹನುಮಂತ ಜೀವಂತ ಇದ್ದಾರೆ. ಅಭ್ಯಜನ ಸ್ನಾನದ ವೇಳೆ ಏಳು ಜನ ಚಿರಂಜೀವಿಗಳ ಹೆಸರನ್ನು ಹೇಳುತ್ತಿದ್ದರು. ಇವರಲ್ಲಿ ಆಂಜನೇಯ ಕೂಡ ಒಬ್ಬನು ಎಂದನು.

ಮನುಷ್ಯ ರೂಪದಲ್ಲಿ ಜನಿನಿಸಿದ ದೇವರೆಲ್ಲರ ಅಂತ್ಯವಿತ್ತು. ಆದರೆ ಆಂಜನೇಯ ಇದ್ದಾನೆ ಎಂಬುದೇ ನಂಬಿಕೆ ಎಂದರು. ಈಗಲೂ ಹನುಮಂತನು ರಾಮನ ಪಠಣ ಮಾಡುತ್ತಿದ್ದಾನೆ ಎಂದರು.

ಪರಾಕ್ರಮಿ, ಬುದ್ಧಿಶಾಲಿ‌. ಎಲ್ಲ ವಿದ್ಯೆಗಳನ್ನು ಪಡೆದವನು. ಬಲಶಾಲಿ. ಸ್ವತಃ ರುದ್ರಾಂಶ ಸಂಭೂತಿ ಎಂದರು.

ಆಂಜನೇಯ ಇಂದ್ರಿಯಗಳ ಜಿತನು. ಆದರೆ ಮನುಷ್ಯರು ಇಂದ್ರಿಯಗಳ ಜಿತರಲ್ಲ ಎಂದರು.

ದೇವಾನುದೇವತೆಗಳಿಗೂ ಕಷ್ಟ ಬಂದಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ತಪ್ಪಿದ್ದಲ್ಲ. ಕಷ್ಟವನ್ನು ಎದುರಿಸಬೇಕು. ರಾಮನಾಮ ಸ್ಮರಣೆ ಮಾಡಿದರೆ ಮಾರುತಿ, ರಾಮ ಇಬ್ಬರೂ ಸಿಗಲಿದೆ. ಆಂಜನೇಯ ಸ್ಮರಣೆ ಮಾತ್ರದಿಂದ ಸಮಸ್ಯೆ ಎದುರಿಸುವ ಶಕ್ತಿ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಸುರ್ವಚಲಾ ಆಂಜನೇಯ ದೇವಸ್ಥಾನದ ಧರ್ಮದರ್ಶಿ, ಪ್ರಧಾನ ಅರ್ಚಕರಾದ ಅನಿಲ್, ಅರ್ಚಕರಾದ ರಂಗಣ್ಣ ಹಲವು ಋತ್ವಿಕರು ಇದ್ದರು.

ತಿಪಟೂರು ವಿದ್ಯಾರ್ಥಿಗಳ ಕೈ ಹಿಡಿದ ಶಶಿಧರ್

NMMS ಪರೀಕ್ಷೆಯಲ್ಲಿ ಫೇಲೇ ಜಾಸ್ತಿ! ಇದಕ್ಕಾಗಿ ಉಚಿತ ತರಬೇತಿಗೆ ಮುಂದಾದ ಶಶಿಧರ್


Public story

Tipturu : ಕಲ್ಪತರು ನಾಡು ತಿಪಟೂರು ನಲ್ಲಿ ಶಿಕ್ಷಣಕ್ಕೆ ಉತ್ತಮ ವಾತವರಣವಿದೆ. ಪ್ರತಿಭಾವಂತ ಹಾಗೂ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯಾದ NMMS ಮಕ್ಕಳ ಪ್ರತಿಭೆಗೆ ಸಿಗುವ ಪುರಸ್ಕಾರ ಎಂದು ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿದರ್ ಅಭಿಪ್ರಾಯ ಪಟ್ಟರು.

ಅವರು ತಿಪಟೂರು ನಗರದ ಠಾಗೂರ್ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲ್ಲೂಕಿನಾದ್ಯಂತ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತಾನಾಡುತ್ತ ಕಳೆದ ವರ್ಷದಲ್ಲಿ ತಾಲ್ಲೂಕಿನಲ್ಲಿ ಕೇವಲ 11 ವಿದ್ಯಾರ್ಥಿಗಳು ಮಾತ್ರ NMMS ನಲ್ಲಿ ಉತ್ತೀರ್ಣರಾಗಿದ್ದು, ಈ ವರ್ಷ ಗುರಿಯನ್ನು ಹೆಚ್ಚಿಸಬೇಕೆಂಬ ಇಚ್ಚೆಯಿಂದ ಹಾಗೂ ತಾಲ್ಲೂಕಿನ ಪ್ರತಿಭಾವಂತ ಮಕ್ಕಳು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಬೇಕೆಂಬ ಉದ್ದೇಶ ನಮ್ಮದು. ಹಾಗಾಗಿ ಇಂತಹ ಶಿಕ್ಷಣ ಸಂಬಂಧಿ ಕೆಲಸಗಳಲ್ಲಿ ಜನಸ್ಪಂದನ ಟ್ರಸ್ಟ್ ಭಾಗಿಯಾಗುತ್ತದೆ ಎಂದರು.

ಈ ಮಕ್ಕಳು ತಾಲ್ಲೂಕಿನ ಶಿಕ್ಷಣ ಕ್ರಾಂತಿಯ ಭಾಗವಾಗಲಿ ಮುಂದಿನ ದಿನಗಳಲ್ಲಿ ಜನಸ್ಪಂದನ ಟ್ರಸ್ಟ್ ನಿಂದ ಪ್ರಯೋಜನ ಪಡೆದು ಹೆಚ್ಚು ಮಕ್ಕಳು ಪರಿಕ್ಷೆ ಬರೆಯಲಿ ಎಂದು ಅಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿ ಬಿ ಶಶಿಧರ್ ರವರು ಟಿಕ್ ಎಕ್ಸಾಮ್ {TICK EXAMS } ನ ಅ್ಯಪ್ ಅನ್ನು ಬಿಡುಗಡೆ ಮಾಡಿದರು.

ಟಿಕ್ ಎಕ್ಸಾಮ್ {TICK EXAMS } ನ ಮನೋಜ್ ಕುಮಾರ್ ರವರು ಮಾತನಾಡಿ ನಮ್ಮ ಸಂಸ್ಥೆ ಐ ಎ ಎಸ್ ನಂತಹ ಉನ್ನತ ತರಬೇತಿಗಳನ್ನು ನೀಡುತ್ತಿದ್ದು ಜೊತೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿ ಎಂದು NMMS ತರಬೇತಿ ನೀಡುತ್ತಿದ್ದು.ಇದಕ್ಕೆ ಪ್ರತಿ ವಿದ್ಯಾರ್ಥಿಗೆ 500 ರೂ ವೆಚ್ಚವಾಗಲಿದ್ದು ಇದನ್ನು ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿಧರ್ ರವರು 350 ಕ್ಕೂ ಹೆಚ್ಚು ವಿಧ್ಯಾರ್ಥಿಗಳ ವೆಚ್ಚವನ್ನು ತಮ್ಮ ಸಂಸ್ಥೆಯಿಂದ ಭರಿಸುತ್ತಿರುವುದು ಶ್ಲಾಘನೀಯ ಹಾಗೂ ಇಂತಹವರು ತಾಲ್ಲೂಕಿಗೆ ಒಬ್ಬರು ಇದ್ದರೆ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಆಗಲು ಸಾದ್ಯವೆಂದರು.

ಈ ಕಾರ್ಯಕ್ರಮದಲ್ಲಿ ಜನಸ್ಪಂದನ ಟ್ರಸ್ಟ್ ನ ಚಟುವಟಿಕೆಗಳ ಕುರಿತು ಅಲ್ಲಾಬಕಾಶ್ ಎ ರವರು ಮಾತನಾಡಿದರು.

RYT ಯ ಸೈಯದ್ ಸಾದತ್ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಟಿಕ್ ಎಕ್ಸಾಮ್ {TICK EXAMS }ನ ಸೈಯದ್ ಶಾಹೀದ್ ಹಾಷ್ಮಿ ಜನಸ್ಪಂದನ ಟ್ರಸ್ಟ್ ನ ಶರತ್ ,ಸಂತೋಷ್ ಮತಿಘಟ್ಟ, ಅಭಿ, ಜಯಂತ್. ಚಂದ್ರುಶೇಖರ್ , ಬಸವರಾಜು . RYT ಸಂಸ್ಥೆಯಿಂದ ಲೋಕೇಶ್, ತಾಸೀನ್ ಶರಿಫ್ ,ಜುನೇದ್, ಶಾಹೀದ್, ಕೈಫ್, ಸಲ್ಮಾ, ಅಮ್ರೀನ್, ಹಮೀದಾ ಷವಾಜ್ , ವಸೀಲ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಠಾಗೂರ್ ಸಂಸ್ಥೆಯ ಶಿಕ್ಷಕರಾದ ವನಜಮ್ಮ ಸ್ವಾಗತಿಸಿ, ಶಿಕ್ಷಕರಾದ ಸೋಮಶೇಖರ್ ವಂದಿಸಿದರು 230 ವಿಧ್ಯಾರ್ಥಿಗಳು ಹಾಗು 100 ಕ್ಕೂ ಹೆಚ್ಚು ಪೋಷಕರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.ಎರಡನೇ ಹಂತದ ತರಬೇತಿಯು 120 ಕ್ಕೂ ಹೆಚ್ಚು ಮಕ್ಕಳಿಗೆ ನೋಣವಿನಕೆರೆಯಲ್ಲಿ 23/02/2022 ರಂದು ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಠಾಗೂರ್ ವಿಧ್ಯಾಸಂಸ್ಥೆ ಹಾಗೂ RYT ಸಹಕರಿಸಿದ್ದು. ಕಾರ್ಯಕ್ರಮವನ್ನು ಜನಸ್ಪಂದನ ಟ್ರಸ್ಟ್ ಅಯೋಜಿಸಿತ್ತು.