Saturday, May 9, 2026
Google search engine
Home Blog Page 116

ರಾಜಕೀಯ, ಧರ್ಮದ ಹುಚ್ಚಾಟಕ್ಕೆ ಹಿಜಾಬು, ಶಾಲೂ ಬಳಕೆ: ಒಂದು ದುರಂತ

0

ಶಿಲ್ಪ ಎಂ


ಎಷ್ಟು ಚೆನ್ನಾಗಿ ಬದುಕಬೇಕು? ಎಷ್ಟು ಚೆನ್ನಾಗಿ ಕೊಡಬಹುದು ನಮ್ಮ ಕ್ಯಾಂಟ್ರಬ್ಯೂಷನ್? ಮಾನವೀಯತೆ ಹೇಗಿರಬೇಕು? ನಾವು ಸಮಾಜಕ್ಕೆ ಏನು ಒಳ್ಳೆಯದನ್ನು ನೀಡಬಹುದು ? ಇವುಗಳು ಯಾರಿಗೂ ಬೇಕಿದ್ದಂಗೆ ಕಾಣುತ್ತಿಲ್ಲ.

ಧರ್ಮ, ಜಾತಿ, ನಾನು, ನೀನು ಅಂತ ಘೋಷಣೆಗಳನ್ನು ಕೂಗುತ್ತ ಧರ್ಮ ಪ್ರೇಮದ ಹೆಸರಲ್ಲಿ ಧರ್ಮಾಂಧತೆಯ ಕಿಚ್ಚನ್ನು ಗಲ್ಲಿ ಗಲ್ಲಿಗೆ ಊರುಗಳಿಗೆ ಪ್ರತಿ ಮನೆಗಳಿಗೆ ಹಬ್ಬಿಸಿ ತಮಾಷೆ ನೋಡುತ್ತಿರುವ ಷಡ್ಯಂತ್ರಗಳು ಮುಂದಿನ ದಿನಗಳಲ್ಲಿ ದೇಶಕ್ಕೆ ಮಾರಕ ಎಂಬುವುದನ್ನು ಮರೆತಂತೆ ಕಾಣುತ್ತಿದೆ.

ಒಂದು ಸಣ್ಣ ಬಟ್ಟೆಗೆ ಶುರುವಾದ ವಿವಾದ ಕಟಕಟೆಗೆ ಹೋಗಿ ನಿಂತಿದೆ. ಧರ್ಮಗಳ ಘೋಷಣೆಗಳು ಆಗುತ್ತಿವೆ. ಸರಿಯಾದ ವ್ಯವಸ್ಥೆಗಳನ್ನು ಹಾಳುಮಾಡುವ ರಾಜಕೀಯದ ಷಡ್ಯಂತ್ರವೂ ಪ್ರೇಮದ ಅಂಧತೆಯೂ ಸಮುದಾಯಗಳ ದಡ್ಡತನ ವೂ ಇದು ಯಾವುದರ ಕಾರಣಕ್ಕಾಗಿ ಶುರುವಾಗಿದ್ದು ಗೊತ್ತಾಗದೆ ಅವರ ಮೇಲೆ ಇವರೂ ಇವರ ಮೇಲೆ ಅವರು ಕಲ್ಲು ತೂರಾಡುತ್ತಾ ಭವಿಷ್ಯದ ಅಂಗಳವನ್ನು ಬೇಳೆ ಬೇಯಿಸಲು ಬಳಸಿಕೊಂಡು ದಾರಿ ತಪ್ಪಿಸುವ ಈ ಹುಚ್ಚಟಾಕ್ಕೆ ಹೆಣ್ಣುಮಕ್ಕಳ ಹಿಜಾಬು ಮತ್ತು ಶಾಲೂಗಳು ಬಳಕೆಯಾಗುತ್ತಿರುವುದು ದುರಂತವೆ ನಿಜ.

ಹಿಜಾಬ್ ಮತ್ತು ಕೇಸರಿ ಶಾಲುಗಳು ಧರ್ಮ ಪ್ರೇಮ ಹೇಳುವುದಾದರೆ.
ಇಷ್ಟು ದಿನ ಜೊತೆಯಲ್ಲಿ ಓಡಾಡಿ ಒಂದೇ ಬಾಕ್ಸ್ ನಲ್ಲಿ ಊಟವನ್ನು ಹಂಚಿ ತಿಂದು ಬುರುಕ ಗೆಳತಿಯ ಜೊತೆ ಹಣೆಗೆ ಕುಂಕುಮ ಇಟ್ಟ ಗೆಳತಿ ಒಟ್ಟಿಗೆ ನಡೆದು ಶಾಲೆ ಸೇರಿದ ದಿನಗಳನ್ನು ನೋಟ್ ಬುಕ್ ಎಕ್ಸ್ಚೇಂಜ್ ಆದ ದಿನವನ್ನು ಅವಳಿಗಾಗಿ ಬಸ್ಸಿನಲ್ಲಿ ಸೀಟು ಹಿಡಿದು ಅವಳಿಗಾಗಿ ಕಾಯುತ್ತಿದ್ದ ಆ ಸಮಯವನ್ನು ಅವಳ ಮನೆಯ ಬಿರಿಯಾನಿಯನ್ನು ಒಬ್ಬಟ್ಟಿನ ರುಚಿಯನ್ನು ಸವಿದು ಜೊತೆಯಲ್ಲಿ ಸಂಭ್ರಮಿಸಿದ ಆ ಹಬ್ಬಕ್ಕೆ ಪ್ರೇಮ ಎಂದು ಹೆಸರಿಸದೆ ಕೋಮುಗಲಭೆ ಎಂದು ಹೆಸರಿಸಲು ಸಾದ್ಯವೇ ?

ಈ ವಯಸ್ಸು ಇಗೆ ನೀನು ಏನನ್ನಾದರೂ ತುಂಬ ಬಹುದು ಪ್ರೀತಿಯನ್ನು ತುಂಬಿದರೆ ಪ್ರೀತಿ ದ್ವೇಷ ಕಿಚ್ಚನ್ನು ತುಂಬಿದರೆ ಕಿಚ್ಚು ಈ ವಯಸ್ಸಿಗೇ ಕಿಚ್ಚನ್ನು ತುಂಬಿ ಉರಿಸಲಾಗುತ್ತಿದೆ.

ಘಟನೆಯ ಚಿಕ್ಕದರಲ್ಲೆ ಇದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಗೋಜಿಗೆ ಯಾರೂ ಯಾವ ಸಮುದಾಯವು ಹೋಗಿದ್ದಂತೆ ಕಾಣುತ್ತಿಲ್ಲ.

ಮುಸಲ್ಮಾನ ಹೆಣ್ಣು ಮಕ್ಕಳು ಹಿಜಾಬ್ ಬುರ್ಕಾ ಗಳು ಇಲ್ಲದೆ ಹೊರಗೆ ಬರುವುದಿಲ್ಲ ನಿಜ. ಇದು ಇವಾಗಿನ್ ಕಥೆಯಲ್ಲ ಮೊದಲಿಂದ ನಡೆದು ಬಂದಿರುವ ಪದ್ಧತಿಯೂ ಅವರ ಧರ್ಮ ಹೇರಲ್ಪಟ್ಟ ವಿಷಯವೂ ಅವರ ಮೂಲ ಭೂತ ಹಕ್ಕೂ ಅಥವಾ ಹಿಂಗಾದರು ಪುರುಷ ಪ್ರಧಾನ ವ್ಯವಸ್ಥೆ ನಮ್ಮನು ಆಚೆ ಕಳುಹಿಸುತ್ತಾರೆ ಮತ್ತು ಶಿಕ್ಷಣ ಸಿಗುತ್ತದೆ ಅನ್ನುವುದು ಅವರ ಆಸೆ ಇರಬಹುದು. ಹೇಗೂ ಶಿಕ್ಷಣಕ್ಕಾಗಿ ಬರುತ್ತಿದ್ದಾರೆ ತಲೆಗೆ ಒಂದು ಬಟ್ಟೆ ಅಲ್ವ ಬಿಡಿ ಎಂದು ಸುಮ್ಮನಾಗುವ ಮನಸ್ಸು ಮಾಡಬಹುದಿತ್ತಾ?

ಹಿಜಾಬ್ ತೆಗೆದು ಶಾಲೆ ಒಳಗೆ ಬನ್ನಿ ಎಂದು ಹೇಳಿದಾಗ ಹಿಜಾಬ್ ತೆಗೆಯಲ್ಲ. ಇದು ನನ್ನ ಧರ್ಮದ ಸಂಕೇತ ಎಂದು ರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುವ ಮತ್ತು ಪ್ರತಿಭಟಿಸುವ ಮುಸಲ್ಮಾನ ಹೆಣ್ಣು ಮಕ್ಕಳು ಈಗಲಾದರೂ ಮುದ್ದಾದ ತನ್ನ ಮುಖಗಳನ್ನು, ಸುಂದರವಾದ ತನ್ನ ಕೂದಲನ್ನೂ ತೋರಿಸಲು, ಮುಖ್ಯವಾಹಿನಿಗೆ ಬರಲು ಆ ಸೆಕೆಯಿಂದ ತಪ್ಪಿಸಿಕೊಳ್ಳಲು, ತನ್ನನ್ನು ತಾನು ಸಂಭ್ರಮಿಸಲು ಮುಕ್ತವಾಗಿ ಶಿಕ್ಷಣ ಪಡೆಯಲು ತಮ್ಮ ತಮ್ಮ ಮನೆಗಳಲ್ಲಿ ಹಿಜಾಬ್ ತೆಗೆಯಲು ಮತ್ತು ಪುರುಷ ಮತ್ತು ಮಹಿಳೆಯರ ಸಮಾನತೆಗೆ ಪ್ರತಿಭಟಿಸಿದ್ದರೆ, ಮುಕ್ತವಾಗಿ ಶಿಕ್ಷಣ ಪಡೆಯಲು ಹಂಬಲಿಸುತ್ತಿರುವ ಮುಸಲ್ಮಾನ ಸಮುದಾಯದ ಹಿಜಾಬ್ ಇಷ್ಟ ಪಡುವ ಪಡದೆ ಇರುವ ಎಲ್ಲ ಹೆಣ್ಣು ಮಕ್ಕಳಿಗೂ ಇದು ಸಹಾಯವಾಗಬಹುದು ಎಂದು ಯೋಚಿಸುವ ಮನಸ್ಸು ಮಾಡಬಹುದಿತ್ತ?

ಈ ಎರಡು ಸಮುದಾಯಗಳು ಈ ಸಾಧ್ಯತೆಗಳನ್ನು ಯೋಚಿಸಲೇ ಇಲ್ಲ.

ಆದಾಗ್ಯೂ ಶ್ರೀ ರಾಮನ ಜಪ ಮಾಡುವ ಹಿಂದೂ ಹೆಣ್ಣು ಮಕ್ಕಳಿಗೂ ಬುರುಕಾ ಹಿಜಾಬ್ ಬಳಸುವ ಮುಸಲ್ಮಾನ ಹೆಣ್ಣು ಮಕ್ಕಳಿಗೂ ಈ ಸಮಾಜದಲ್ಲಿ ಸುರಕ್ಷತೆಯೂ ಇಲ್ಲ. ಹೆಣ್ಣು ಮಕ್ಕಳ ಮೇಲೆ ಆಗುವ ಅತ್ಯಾ ಚಾರಗಳು ನಿಂತಿಲ್ಲ .

ಹಾಗಾದರೆ, ಈ ಧರ್ಮ ಗಳ ಬಟ್ಟೆಗಳು ಮತ್ತು ದೇವರುಗಳು ಹೆಣ್ಣನ್ನು ಶೋಷಿಸುವ ಮತ್ತು ಅತ್ಯಾಚಾರಗಳನ್ನು ತಡೆಯಲು ಆಗುತ್ತಿಲ್ಲ ಅನ್ನುವುದು ಸತ್ಯವಾದರೆ ನಾವು ಮಾಡಿಕೊಂಡಿರುವ ಧರ್ಮ ಜಾತಿಗಳ ವಿಚಾರಕ್ಕಾಗಿ ಮಾನವೀಯ ಧರ್ಮವನ್ನು ಬಲಿಕೊಡುತ್ತಿರುವುದು ಸರಿಯೇ ಎಂದು ಹೆಣ್ಣು ಮಕ್ಕಳೇ ಯೋಚಿಸಬೇಕು.

ಇದೆಲ್ಲ ಬೆಳವಣಿಗೆಗಳನ್ನು ನೋಡಿದರೆ ಇಲ್ಲಿವರೆಗೂ ನಾವು ಕಲಿತ ಶಿಕ್ಷಣ ಏನು? ಇಲ್ಲಿಯವರೆಗೂ ಯಾವ ಶಿಕ್ಷಣ ಸಂಸ್ಥೆಗಳು ಧರ್ಮ ದೇಶ ಪ್ರೇಮದ ಬಗ್ಗೆ ಪಾಠ ಮಾಡಲೇ ಇಲ್ಲವೇ. ಯಾರನ್ನೂ ಗೌರವಿಸುವುದನ್ನು ಕಲಿಸಲಿಲ್ಲವೆ. ಕುವೆಂಪು ಬರೆದ ನಾಡ ಗೀತೆಯನ್ನು ಹೇಳಿಸಲಿಲ್ಲವೇ ? ಅಂಬೇಡ್ಕರ್ ವಿವೇಕಾನಂದ ಇಂತಹ ವ್ಯಕ್ತಿಗಳನ್ನು ಯುವಕರಿಗೆ ಓದಿಸಲಿಲ್ಲವೆ ? ಮತ್ತೆ ಇಷ್ಟು ದಿನ ಶಿಕ್ಷಣ ಸಂಸ್ಥೆಗಳು ಏನನ್ನೂ ಭೋದಿಸುತ್ತಿವೆ ಅರ್ಥವಾಗುತ್ತಿಲ್ಲ.

ಈ ದಿನಗಳು ನಿಜವಾಗಲೂ ಸಮಾಜವನ್ನು ಹಾಳುಮಾಡುವ ದಿನಗಳು. ಕೋಮು ಗಲಭೆ ಸೃಷ್ಟಿಸಿದ ಮನಸ್ಸುಗಳು ರಾಜಕೀಯ ಬೇಳೆ ಬೇಯಿಸಿ ದಾರಿ ತಪ್ಪಿಸುತ್ತಿರುವ ರಾಜಕಾರಣಿ ಗಳಿಗೆ ಈ ಬೆಂಕಿಗೆ ತುಪ್ಪ ಸುರಿಯುತ್ತಿರುವ ಎಂದು ಬದಲಾಗದ ಯೂಸ್ಲೆಸ್ ಡಿಬೇಟ್ ಗಳನ್ನು ಮಾಡುತ್ತಿರುವ ಮಾಧ್ಯಮಗಳಿಗೆ ದೇಶದ ಮುಂದಿನ ಭವಿಷ್ಯ ಬಲಿಯಾಗುತ್ತಿರುವುದು ಈ ದೇಶದ ದುರಂತ ಮತ್ತು ಸೋಲು.


ಶಿಲ್ಪ ಎಂ

ಹಾವುಗಳ ಬಗ್ಗೆ ನಮಗೆಷ್ಟು ಗೊತ್ತು ?

ಗೌತಮ್ ಎಚ್ಎಸ್

ಹಾವುಗಳು ಎಂದರೆ ಮಾನವನಿಗೆ ಸಹಜವಾಗಿ ಭಯ. ಈ ಭಯ ತಲತಲಾಂತರದಿಂದ ಮುಂದುವರೆದಿದೆ ಆದರೆ ಈ ಜೀವಿಗಳು ಬಹಳ ನಿರುಪದ್ರವಿಗಳಾಗಿ ಇರುತ್ತವೆ.

ನಾನು ಕಂಡ ಹಾಗೆ ಮಲೆನಾಡಿನ ಪ್ರಾಂತ್ಯಗಳಲ್ಲಿ ಹಾವುಗಳು ಮನೆಯ ಒಳಗೆ ಬಂದರೂ ಅವುಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಆದರೆ ಬಯಲು ಪ್ರಾಂತ್ಯದಲ್ಲಿ ಈ ಜೀವಿಗಳನ್ನು ಕಂಡಲ್ಲಿ ಕೊಲ್ಲುತ್ತಾರೆ.

ಹೀಗೆ ಆಗಲು ಕಾರಣ ಅವುಗಳ ಬಗ್ಗೆ ಜ್ಞಾನದ ಕೊರತೆ ಹಾಗೂ ಮೌಡ್ಯತೆ.

ಕೊಳಕುಮಂಡಲ ಹಾವು

ಜಗತ್ತಿನಲ್ಲಿ ಸರಿಸುಮಾರು 3000 ಪ್ರಜಾತಿ ಹಾವುಗಳು ಕಂಡುಬರುತ್ತವೆ ಇದರಲ್ಲಿ ಸುಮಾರು 270 ಪ್ರಜಾತಿಯ ಹಾವುಗಳು ನಮ್ಮ ಭಾರತ ದೇಶದಲ್ಲಿ ಕಾಣಸಿಗುತ್ತವೆ. ಆದರೆ ಅವುಗಳಲ್ಲಿ 60 ಹಾವುಗಳು ಮಾತ್ರ ವಿಷಪೂರಿತವಾಗಿವೆ.

ಇನ್ನೂ ಮುಕ್ಕಾಲು ಭಾಗ ವಿಷವಿಲ್ಲದ ಹಾವುಗಳು. ಇವುಗಳಲ್ಲಿ ಅಲ್ಪ ವಿಷಕಾರಿ ಹಾವುಗಳು ಕೂಡ ಸೇರಿವೆ. ಅಲ್ಪ ವಿಷಕಾರಿ ಎಂದರೆ ಕೇವಲ ಸಣ್ಣ ಜೀವಿಗಳಾದ ಹಲ್ಲಿಗಳು ಇಲಿಗಳು ಓತಿಕ್ಯಾತ ಮತ್ತು ಸಣ್ಣ ಹಾವುಗಳನ್ನು ಮಾತ್ರ ಕೊಲ್ಲುವಷ್ಟು ವಿಷ ಹಾಗೂ ಮಾನವನಿಗೆ ಸಾವು ತರುವುದಿಲ್ಲ. ಆದರೆ ಮಾನವ ಎಲ್ಲಾ ಹಾವುಗಳು ವಿಷಕಾರಿ ಎಂದು ತೀರ್ಮಾನಿಸುತ್ತಾನೆ ಮತ್ತು ಕೊಲ್ಲುತ್ತಾನೆ.

ಇನ್ನೂ ವಿಶೇಷವೆಂದರೆ ಈ 60 ಹಾವುಗಳಲ್ಲಿ ಕೇವಲ 4 ಹಾವುಗಳು ಮಾತ್ರ ಮಾನವನ ಜೀವಕ್ಕೆ ಅಪಾಯಕರ. ಅವುಗಳೆಂದರೆ ನಾಗರಹಾವು(Naja Naja), ಕೊಳಕುಮಂಡಲ(Russell’s viper), ಉರಕುಮಂಡಲ(Saw scaled viper) ಹಾಗೂ ಕಟ್ಟುಹಾವು(Common Krait).

ಉರುಕುಮಂಡಲ

ಇದರಲ್ಲಿ ನಾಗರಹಾವಿಗೆ ಕೋಪ ಹೆಚ್ಚು ಮತ್ತು ಕಟ್ಟುಹಾವು ಅತ್ಯಂತ ವಿಷಕಾರಿ ಹಾವು ಮತ್ತು ಈ ಕಟ್ಟುಹಾವು ಸೊಳ್ಳೆ ಗಿಂತ ಹತ್ತುಪಟ್ಟು ನಿಧಾನವಾಗಿ ಕಚ್ಚುವುದು ಮತ್ತು ಸಾವು 60% ಗಿಂತ ಹೆಚ್ಚು.

ಕೊಳಕುಮಂಡಲ ಮತ್ತು ಕಟ್ಟುಹಾವು ನಿಶಾಚರ ಜೀವಿಗಳಾಗಿವೆ ಇನ್ನು ಉಳಿದ ಎರಡು ಹಾವುಗಳು ಹಗಲಲ್ಲಿ ಕಾಣಬಹುದು.

ಕಟ್ಟುಹಾವು

ಬ್ಲಾಕ್ ಕೊರಲ್ ಹಾವು(Black coral snake) ಕೂಡ ನಮ್ಮ ದೇಶದ ವಿಷಕಾರಿ ಹಾವಾಗಿದೆ ಆದರೆ ಇದು ಗಂಟಲಿನಲ್ಲಿ ತನ್ನ ಹಲ್ಲುಗಳನ್ನು ಹೊಂದಿದೆ ಈ ಕಾರಣದಿಂದ ಇದು ಅಪಾಯಕರವಾಗಿಲ್ಲ. ಪ್ರಪಂಚದ ಅತಿ ದೊಡ್ಡ ವಿಷಕಾರಿ ಹಾವು ಕಾಳಿಂಗ ಸರ್ಪ(King Cobra) ಆದರೆ ಇದನ್ನು ಈ 4 ಹಾವುಗಳ ಮಧ್ಯದಲ್ಲಿ ಸೇರಿಸುವುದಿಲ್ಲ ಏಕೆಂದರೆ ಇದು ಬಹಳ ಸಾಧು ಜೀವಿಯಾಗಿದೆ ಮತ್ತು ಬಹಳ ಸಂಕೋಚದ ಸ್ವಭಾವ ಇದರದಾಗಿದೆ ಇದುವರೆಗೆ ಈ ಜೀವಿಗಳಿಂದ ಮಾನವನ ಸಾವು ಅತ್ಯಲ್ಪ(1-2).

ನಮ್ಮ ದೇಶದ ಸರಿಸುಮಾರು 200 ಹಾವುಗಳು ವಿಷಕಾರಿಯಲ್ಲದ ಹಾವುಗಳಾಗಿವೆ. ಇವುಗಳಲ್ಲಿ ಹಸಿರು ಹಾವು, ಸಾಮಾನ್ಯ ಕಡಂಬಳ, ಪಟ್ಟೆ ಕಡಂಬಳ ಹಾವು, ಕೇರೆ ಹಾವು, ನೀರುಹಾವು, ಟ್ರಿಂಕೆಟ್ ಹಾವು, ಕಂಚು ಬೆನ್ನಿನ ಮರದ ಹಾವು,ಬೆಕ್ಕು ಹಾವು ಮತ್ತು ಹಲವು ಹಾವುಗಳು ಸೇರಿವೆ. ಎರಡು ತಲೆಯ ಹಾವು (Sand Boa) ಒಂದು ವಿಶೇಷತೆಗಳಿಂದ ಕೂಡಿದ ಹಾವಗಿದೆ ತನ್ನ ಬಾಲದ ತುದಿಯನ್ನು ತಲೆಯ ರೀತಿಯಲ್ಲಿ ವಿಶೇಷ ರಚನೆ ಮಾಡಿಕೊಂಡಿರುತ್ತದೆ ಏಕೆಂದರೆ ಬೇಟೆಗಾರರಿಂದ ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಈ ತಂತ್ರವನ್ನು ಅವಲಂಭಿಸಿರುತ್ತದೆ.

ಬ್ರಾಹ್ಮಣಿಕುರುಡಹಾವು

 ಆಸ್ಟ್ರೇಲಿಯದ ಈಶಾನ್ಯ ದಿಕ್ಕಿನಲ್ಲಿ ಮಾತ್ರ ಕಾಣುವ ಇನ್ಲಾಂಡ್ ಟೈಪನ್(Inland taipan) ಎಂಬ ಹಾವು ಜಗತ್ತಿನ ಅತ್ಯಂತ  ವಿಷಕಾರಿ ಉಭಯವಾಸಿ ಹಾವಾಗಿದೆ(1 ಹನಿ ವಿಷ 100ಜನರ ಜೀವ ತೆಗೆಯಬಹುದು) ಬೆಚ್ಲೇರ್ ಸಮುದ್ರ ಕಟ್ಟುಹಾವು(Bechler sea Krait) ಜಗತ್ತಿನ ಅತ್ಯಂತ ವಿಷಕಾರಿ ಹಾವಾಗಿದೆ(1000 ಜನರ ಜೀವ) ಆದರೆ ಈ ಹಾವು ಮಾನವರಿಗೆ ಎಂದೂ ಕಚ್ಚಿರುವ ನಿದರ್ಶನವಿಲ್ಲ.

ಬ್ರಾಹ್ಮಿಣಿ ಕುರುಡು ಹಾವು(Bramhini blind snake) ಪ್ರಪಂಚದ ಅತ್ಯಂತ ಸಣ್ಣ ಹಾವು ಆಗಿದೆ ಇದು ಒಂದು ಎರೆಹುಳ ಗಾತ್ರದಲ್ಲಿ ಸಿಗುತ್ತದೆ ಹಾಗೂ ಅನಕೊಂಡ ಜಗತ್ತಿನ ಅತ್ಯಂತ ದೊಡ್ಡ ಹಾವು(200-250ಕೆಜಿ) ಇದು ದಕ್ಷಿಣ ಅಮೆರಿಕದ ಅಮೆಜಾನ್ ನದಿಯಲ್ಲಿ ಮಾತ್ರ ಕಾಣಸಿಗುತ್ತದೆ.
ಭಾರತದ ಶಿಲಾ ಹೆಬ್ಬಾವು( Indian Rock Phython) ಇದು ನಮ್ಮ ದೇಶದ ಅತ್ಯಂತ ದೊಡ್ಡ(ತೂಕದಲ್ಲಿ) ಹಾವಾಗಿದೆ.
ಇನ್ನೊಂದು ವಿಶೇಷವೇನೆಂದರೆ ಕೇವಲ ನೆಲದಲ್ಲಿ ತೆವಳುವ ಹಾವುಗಳನ್ನು ನೋಡಿದ್ದೇವೆ ಆದರೆ ಕೆಲ ಹಾವುಗಳು ಗಾಳಿಯಲ್ಲಿ ಹಾರಲು ತಿಳಿದಿರುತ್ತವೆ! ನಮ್ಮ ದೇಶದಲ್ಲಿಯೆ ಆಭರಣದ ಹಾವು(Ornate Flying Snake) ಇದಕ್ಕೆ ಉದಾಹರಣೆ ಇಲ್ಲಿ ಪಕ್ಷಿಗಳ ತರಹ ಹಾರಲು ಬರದಿದ್ದರೂ ಅವುಗಳು ಗಾಳಿಯಲ್ಲಿ ತೇಲುವ ದೇಹವನ್ನು ಹಾಗೂ ಸಾಮರ್ಥ್ಯವನ್ನು ಹೊಂದಿರುತ್ತವೆ. 

ಆಭರಣಹಾವು

ಹಾವುಗಳು ಸಹಜವಾಗಿ ವರ್ಷಕ್ಕೆ 4-8 ಬಾರಿ ಪೊರೆ ಬಿಡುತ್ತವೆ ಇದು ತನ್ನ ದೇಹದಲ್ಲಿನ ಕ್ರಿಮಿಕೀಟಗಳು, ಉಣ್ಣೆಗಳು ಕಳೆಯಲು ಮಾಡಿಕೊಂಡಿರುವ ಒಂದು ಕ್ರಿಯೆಯಾಗಿದೆ. ಹಾವುಗಳಿಗೆ ಕಿವಿ ತಮಟೆ ಇರುವುದಿಲ್ಲ ಹಾಗಾಗಿ ಇದು ತನ್ನ ನಾಲಿಗೆಯಿಂದ ಪ್ರಾಕೃತಿಕ ಬದಲಾವಣೆಗಳನ್ನು ತಿಳಿದುಕೊಳ್ಳುತ್ತದೆ ಹಾಗಾಗಿ ಪದೇಪದೇ ನಾಲಿಗೆಯನ್ನು ಹೊರ ಹಾಕುತ್ತಿರುತ್ತದೆ.
ಹಾವಿನ ವಿಷದ ಬಗ್ಗೆ ಹೇಳುವುದಾದರೆ ಇದು ಒಂದು ಸಹಜ ಪ್ರೋಟೀನ್ ಅಂಶದಿಂದ ಕೂಡಿರುತ್ತದೆ. ಇದು ದೇಹದ ರಕ್ತದೊಂದಿಗೆ ಬೆರೆತಾಗ ಮಾತ್ರ ಅದು ವಿಷವಾಗಿ ವರ್ತಿಸುತ್ತದೆ ಆದರೆ ಅದನ್ನು ಆಹಾರವಾಗಿ ತೆಗೆದುಕೊಂಡರೆ ಸಹಜವಾಗಿ ಜೀರ್ಣವಾಗುತ್ತದೆ.ಈ ಕಾರಣಕ್ಕಾಗಿ ಇದನ್ನು ವೆನಮ್ ಎಂದು ಆಂಗ್ಲಭಾಷೆಯಲ್ಲಿ ನಮೂದಿಸುತ್ತಾರೆ. ವಿಷಪೂರಿತ ಹಾವು ಇಲಿಗೆ ಕಚ್ಚಿದಾಗ ಸಾಯುತ್ತದೆ ಆದರೆ ಅದೇ ಇಲಿಯನ್ನು ಹಾವು ನುಂಗಿದಾಗ ಹಾವು ಸಾಯುವುದಿಲ್ಲ ಅದೇ ಹಾವು  ತನಗೆ ತಾನೇ ಕಚ್ಚಿಕೊಂಡರೆ ಸಾವು ಖಚಿತ. ಸಹಜವಾಗಿ ಹಾವಿನ ವಿಷದಲ್ಲಿ ಮೂರು ವಿಧ ಹೇಮೋಟಾಕ್ಸಿಕ್- ಈ ವಿಷವು ರಕ್ತವನ್ನು ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಡೆಸುತ್ತದೆ, ಹೇಮೋಟಾಕ್ಸಿಕ್- ಈ ವಿಷವು ದೇಹದ ನಾನಾ ರಾಸಾಯನಿಕ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ. ಮತ್ತು ನ್ಯೂರೋಟಾಕ್ಸಿಕ್- ಈ ವಿಷವು ದೇಹದ ಪೂರ್ಣ ನರಮಂಡಲವನ್ನು ಹಂತಹಂತವಾಗಿ ನಿಲ್ಲಿಸುತ್ತದೆ ಮತ್ತು ಈ ವಿಷವು ಬಹಳ ಶಕ್ತಿಶಾಲಿ ಹಾಗೂ ಅಪಾಯಕರ. ನಾಗರಹಾವು ಮತ್ತು ಕಟ್ಟುಹಾವಿನಲ್ಲಿ ನ್ಯೂರೋಟಾಕ್ಸಿನ್ ವಿಷವನ್ನು ಕಾಣಬಹುದು ಹಾಗೂ ಮಂಡಲದ ಹಾವುಗಳಲ್ಲಿ ಹೇಮೋಟಾಕ್ಸಿಕ್ ವಿಷವನ್ನು ಕಾಣಬಹುದು. ಹಾವಿನ ವಿಷವು ಕೇವಲ ಆತ್ಮರಕ್ಷಣೆಗಾಗಿ ಮಾತ್ರ ಬಳಸಲಾಗುತ್ತದೆ. ಪ್ರತಿ ವಿಷಕಾರಿ ಹಾವು ನಿರ್ದಿಷ್ಟ ಪ್ರಮಾಣದ ವಿಷವನ್ನು ಮಾತ್ರ ಹೊರಹಾಕುತ್ತವೆ ಇನ್ನೂ ಒಂದು ಕುತೂಹಲದ ಸಂಗತಿ ಎಂದರೆ 60% ಕಿಂತ ಹೆಚ್ಚು ಕಚ್ಚುವಿಕೆಯು ಒಣ ಕಚ್ಚುವಿಕೆಯಿಂದ (Dry Bite) ಆಗಿರುತ್ತದೆ (ವಿಷವಿಲ್ಲದ ಕಚ್ಚುವಿಕೆ). ಹಸಿ ಕಚ್ಚುವಿಕೆಯಾದಾಗ( wet bite ) ಮಾನವನಲ್ಲಿ ಭಯಭೀತಿಯಿಂದ ರಕ್ತ ಸಂಚಾರ ಹೆಚ್ಚಾಗಿ ವಿಷವು ದೇಹಪೂರ್ತಿ ಸೇರುವುದು ಹಾಗೂ ಈ ರೀತಿ ಹೆಚ್ಚು ಸಾವು ಉಂಟಾಗುತ್ತದೆ.ಹಾವಿನ ವಿಷಕ್ಕೆ ಹಾವಿನ ವಿಷವೇ ಮದ್ದು ಎಂದು ಬಹಳ ಜನರಿಗೆ ತಿಳಿದಿಲ್ಲ.  ಹಾವು ಕಚ್ಚಿದಾಗ ಯಾವುದೇ ಗಿಡಮೂಲಿಕೆಗಳನ್ನು  ಬಳಸಬಾರದು ಹಾಗು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಹಾವಿನ ವಿಷದ ಪ್ರತಿರೋಧಕ (Antivenom) ಮಾತ್ರವೇ ಬಳಸಬೇಕು. ಇತ್ತೀಚಿನ ದಿನಗಳಲ್ಲಿ ಹಾವು ಕಡಿತದ ಗೊಂದಲ ನಿವಾರಣೆಗೆ ಮೇಲೆ ಹೇಳಿದ 4 ಹಾವುಗಳ ವಿಷದ ಪ್ರತಿರೋಧಕ ಮಿಶ್ರಣವನ್ನು ಲಸಿಕೆಯಾಗಿ ಬಳಸಲಾಗುತ್ತಿದೆ. ನಮ್ಮ ದೇಶದಲ್ಲಿ ಪ್ರತಿವರ್ಷ ಹಾವಿನ ಕಡಿತದಿಂದಾಗಿ ಸುಮಾರು 50000 ಮಂದಿ ಸಾವನ್ನಪ್ಪುತ್ತಾರೆ ಇದಕ್ಕೆ ಮೂಲ ಕಾರಣ ಮೂಲ ರಕ್ಷಣಾ ಕವಚ ಗಳಿಲ್ಲದೆ ಕೃಷಿ ಚಟುವಟಿಕೆಗಳಲ್ಲಿ ತೊಡಗುವುದು ಮತ್ತು ಅವೈಜ್ಞಾನಿಕ ಮದ್ದು ಎಂದು ವಿಜ್ಞಾನಿಗಳು ನಂಬಿದ್ದಾರೆ.  ಹಾವಿನ ವಿಷವನ್ನು ಕೆಲವು ಔಷಧಿಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಈ ಹಾವುಗಳ ವಿಷಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ ಆ ಕಾರಣದಿಂದ ಇವುಗಳನ್ನು ವಾಮಮಾರ್ಗಗಳಲ್ಲಿ ಶೋಷಿಸಲಾಗುತ್ತಿದೆ. 
ನಮ್ಮ ದೇಶದಲ್ಲಿ ಹಾವಿನ ಬಗ್ಗೆ ಬಹಳ ಮೌಡ್ಯತೆ ಇರುವುದನ್ನು ಕಾಣಬಹುದು. ಇವುಗಳಲ್ಲಿ ಹಾವುಗಳು ದ್ವೇಷ ಕಾರುವುದು, ನಾಗಮಣಿ, ಹುತ್ತಕ್ಕೆ ಹಾಲೆರೆಯುವುದು, ಎರಡು ತಲೆಯ ಹಾವು ಇವೆಲ್ಲವೂ ಅವೈಜ್ಞಾನಿಕ ಸಂಗತಿಗಳಾಗಿವೆ. 


ಹಾವುಗಳ ಆಹಾರಕ್ರಮ ಬಹಳ ವೈಶಿಷ್ಟ್ಯತೆಗಳಿಂದ ಕೂಡಿದೆ ಎರೆಹುಳ, ಕೀಟ, ಸಣ್ಣ ಹುಳುಗಳು, ಮೀನುಗಳು, ಪಕ್ಷಿಗಳು ಹಾಗೂ ಮೊಟ್ಟೆ, ಸಣ್ಣ ಹಾಗೂ ಮಧ್ಯಮ ಸಸ್ತನಿಗಳು, ಸಣ್ಣ ಮೊಸಳೆಗಳನ್ನು ಕೂಡ ಆಹಾರವಾಗಿ ಬಳಸುತ್ತವೆ.
  ಸಹಜವಾಗಿ ಹಾವುಗಳು ಒಂದು ನಿರ್ದಿಷ್ಟ ಜಾಗಗಳಲ್ಲಿ ಮಾತ್ರ ವಾಸಿಸುತ್ತವೆ ಹಾಗೂ ಇವುಗಳನ್ನು ಏನಾದರೂ ರಕ್ಷಿಸಿ ಬಹಳ ದೂರದಲ್ಲಿ ಬಿಟ್ಟರೆ ಇವುಗಳು ಸಾಯುವ ಸಾಧ್ಯತೆ ಹೆಚ್ಚು. ಮಿಲನದ ಸಂದರ್ಭದಲ್ಲಿ ಸಹಜವಾಗಿ ಎರಡು ಗಂಡು ಹಾವುಗಳು ಪರಸ್ಪರ ಜಗಳವಾಡುತ್ತವೆ ಹಾಗೂ ಈ ಪ್ರಕ್ರಿಯೆಯನ್ನು ಎನೆಯಾಡುವುದು ಎಂದು ಗ್ರಾಮೀಣ ಭಾಗಗಳಲ್ಲಿ ಸಹಜವಾಗಿ ಕರೆಯುತ್ತಾರೆ ಹಾಗೂ ಹೆಣ್ಣು ಈ ಕ್ರಿಯೆಯನ್ನು ವೀಕ್ಷಿಸುತ್ತಿರುತ್ತದೆ
ಹಾಗೂ ಗೆದ್ದ ಗಂಡನ್ನು ಹೆಣ್ಣು ಒಪ್ಪಿಕೊಂಡು ಆ ಹಾವಿನೊಂದಿಗೆ ಮಿಲನದಲ್ಲಿ ಭಾಗಿಯಾಗುತ್ತದೆ.
ಹಾವುಗಳ ಸಂತಾನೋತ್ಪತ್ತಿಯ ಬಗ್ಗೆ ಬಹಳ ಅನುಮಾನ ಇದೆ ಅವು ಮೊಟ್ಟೆ ಇಡುತ್ತವೆಯೇ ಅಥವಾ ಜೀವಂತ ಮರಿಗಳಿಗೆ ಜನ್ಮ ನೀಡುತ್ತವೆಯೇ ಎಂಬ ಕುತೂಹಲ ಇರುತ್ತದೆ. ಈ ಜೀವಿಗಳು ಸಹಜವಾಗಿ ಎರಡು ಪ್ರಕ್ರಿಯೆಯಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಮೊಟ್ಟೆ ಇಡುವ ಪ್ರಕ್ರಿಯೆ ಹೆಚ್ಚಾಗಿ ಕಾಣಬಹುದು ಕೇವಲ ಕೆಲವು ಕುಟುಂಬದ ಜೀವಿಗಳು ಮಾತ್ರ ಜೀವಂತ ಮರಿಗಳಿಗೆ ಜನ್ಮ ನೀಡುತ್ತವೆ.

Inland taipan


ನಾವು ನಮ್ಮ ಪಠ್ಯಪುಸ್ತಕಗಳಲ್ಲಿ ಎರೆಹುಳು ಮಾತ್ರ ರೈತಮಿತ್ರ ಎನ್ನುವುದನ್ನು ಕಾಣಬಹುದು ಆದರೆ ಹಾವುಗಳು ಕೂಡ ರೈತಮಿತ್ರ ಆಗಿವೆ ಇವುಗಳು 40% ಗಿಂತ ಹೆಚ್ಚು ಬೆಳೆ ವೃದ್ಧಿಯಾಗಲು ಸಹಾಯಮಾಡುತ್ತವೆ ಈ ಜೀವಿಗಳು ಇಲಿ, ಹೆಗ್ಗಣ, ಹುಳಗಳ ಹಾವಳಿಯನ್ನು ತಪ್ಪಿಸುತ್ತವೆ ಮತ್ತು ಪ್ರಕೃತಿಯಲ್ಲಿ ಆಹಾರ ಸರಪಳಿ ಹಾಗೂ ಆಹಾರ ಬಲೆಗಳಲ್ಲಿ ತನ್ನದೇ ಆದ ಗುರುತು ಮೂಡಿಸಿವೆ.
ನಾನು ಒಬ್ಬ ಅಧ್ಯಾಪಕನಾಗಿ ನನಗೆ ತಿಳಿದಿರುವ ಅಲ್ಪ ವಿಷಯವನ್ನು ನಿಮ್ಮಲ್ಲಿ  ಹಂಚಿಕೊಂಡಿದ್ದೇನೆ ಮತ್ತು ನನ್ನ ಅಭಿಪ್ರಾಯ ಹೇಳುವುದಾದರೆ ಭೂಮಿ ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ. ಪ್ರತಿಜೀವಿಗೂ ಇಲ್ಲಿ ಪ್ರಾಕೃತಿಕವಾಗಿ ಬದುಕುವ ಹಾಗೂ ಸಾಯುವ ಹಕ್ಕಿದೆ, ಅಗತ್ಯವಿದೆ ಅದು ಪ್ರಕೃತಿ ನಿಯಮ. ಈ ನಿಯಮ ಉಲ್ಲಂಘನೆ ಮಾಡುವುದು ಅಥವಾ ತನ್ನ ನಿರ್ಣಯವನ್ನು ತೋರುವುದು ಮಾನವನಿಗೆ ಉರುಳು. (ಉದಾಹರಣೆ ಕೆಲವೊಮ್ಮೆ ಪ್ರತಿರೋಧಕ ದೊರೆಯದಿರುವುದು) ಮೂಲ ಜ್ಞಾನದ ಕೊರತೆ ಇಂದ ಈ ಜೀವಿಗಳ ನಾಶವಾದರೆ ಅದು ನಮ್ಮ  ಹಾಗೂ ಪ್ರಕೃತಿಯ ವಿನಾಶವೇ ಆಗಿರುತ್ತದೆ.

Butchler sea snake

ಬಹುರೂಪಿ’ಗೆ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ

ಕೃಪೆ ಅವಧಿ

ಬಹುರೂಪಿ ಪ್ರಕಾಶನದ ಹೆಮ್ಮೆಯ ‘ಅಕ್ಕಯ್’ ಕೃತಿಗೆ ‘ಪ್ರಕಟಣೆಯ ಉತ್ಕೃಷ್ಟತೆ’ಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಪ್ರಕಟಣಾ ಪ್ರಪಂಚದ ಮಹತ್ವದ ಸಂಸ್ಥೆಯಾದ ‘ಪಬ್ಲಿಷಿಂಗ್ ನೆಕ್ಸ್ಟ್’ ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ ‘ಬಹುರೂಪಿ ಪ್ರಕಾಶನ’ದ ‘ಅಕ್ಕಯ್’ ಕೃತಿ ಪ್ರಕಟಣೆಯ ಉತ್ಕೃಷ್ಟತೆಗೆ ಹಾಗೂ ‘ಕುಪ್ಪಳಿ ಡೈರಿ’ ಮುಖಪುಟ ವಿನ್ಯಾಸಕ್ಕಾಗಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ದೇಶ ವಿದೇಶದ ಪ್ರತಿಷ್ಠಿತ ಪ್ರಕಟಣಾ ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ ‘ಅಕ್ಕಯ್’ ಕೃತಿ ಪ್ರಕಟಣೆಯ ಉತ್ಕೃಷ್ಟತೆ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನವನ್ನು ಗಳಿಸಿತು.

ದೇಶದ ಸಾರ್ವಜನಿಕ ಸಂಪರ್ಕ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆ ‘ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ’ (ಪಿ ಆರ್ ಸಿ ಐ) ನಡೆಸುವ ಸಾರ್ವಜನಿಕ ರಂಗದ ವಾರ್ಷಿಕ ಪ್ರಶಸ್ತಿ ಸ್ಪರ್ಧೆಯಲ್ಲಿ ಪುಸ್ತಕ ಪ್ರಕಟಣಾ ವಿಭಾಗದಲ್ಲಿ ‘ಅಕ್ಕಯ್’ ಕೃತಿ ಪ್ರಕಟಣೆಯಲ್ಲಿನ ಉತ್ಕೃಷ್ಟತೆಗಾಗಿ ಬೆಳ್ಳಿ ಪದಕ ಗಳಿಸಿದೆ.

ಈ ಕೃತಿಯ ವಿನ್ಯಾಸಕ್ಕೆ ಎಸ್ ಎಂ ಸಾಗರ್, ಅರುಣ್ ಕುಮಾರ್ ಜಿ, ಛಾಯಾಗ್ರಾಹಕ ಮನುಕುಮಾರ್, ರೀಗಲ್ ಪ್ರಿಂಟರ್ಸ್ ವೆಂಕಟೇಶ್ ಅವರ ಕೊಡುಗೆ ಇದೆ.

‘ಅಕ್ಕಯ್’ ಕೃತಿ ಮೂಲತಃ ಸಾಮಾಜಿಕ ಹೋರಾಟಗಾರೂ, ಲೈಂಗಿಕ ಅಲ್ಪಸಂಖ್ಯಾತರಾದ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥೆಯಾಗಿದ್ದು ಪ್ರೊ ಡೊಮಿನಿಕ್ ಡಿ ಅವರು ಇದನ್ನು ನಿರೂಪಿಸಿದ್ದಾರೆ.

ಮರಕಡಿದು ಸರ್ಕಾರಿ ಭೂಮಿ ಒತ್ತುವರಿಯ ಹುನ್ನಾರ

ಪಬ್ಲಿಕ್ ಸ್ಟೋರಿ:

ಮಧುಗರಿ:  ತಾಲ್ಲೂಕಿನ ಕಸಬಾ ಹೋಬಳಿ ಗಂಜಲ ಕುಂಟೆ ಗ್ರಾಮದ ಸರ್ಕಾರಿ ಸ್ಥಳದಲ್ಲಿರುವ ಸರ್ವೆ ನಂ 53 ರಲ್ಲಿರುವ ಮರಗಳನ್ನು ಕ್ರಮವಾಗಿ ಕಡಿಯುವವರನ್ನು ಗ್ರಾಮಸ್ಥರು ಹಾಗೂ ಕಂದಾಯ ಿಲಾಖೆ ಸಿಬ್ಬಂದಿ ತಡೆದಿದ್ದಾರೆ.

ಈ ಪ್ರದೇಶದಲ್ಲಿ ನೆರಳು, ಉತ್ತಮ ಪರಿಸರಕ್ಕಾಗಿ ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕವೀರಪ್ಪ ಸುಮಾರು 50 ನೇರಳೆ, ಸಿಲ್ವರ್ ಇತ್ಯಾದಿ ಮರಗಳನ್ನು  ಬೆಳೆಸಿದ್ದರು. ಇವುಗಳಲ್ಲಿ ಕೇವಲ 5 ಮರಗಳು ಮಾತ್ರ ಇವೆ.

ಕೆಲ ಕಿಡಿಗೇಡಿಗಳು ಈ ಸರ್ಕಾರಿ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುವ ಸಲುವಾಗಿ ಇಲ್ಲಿರುವ ಮರಗಳ ಬುಡಕ್ಕೆ ಬೆಂಕಿ ಇಟ್ಟು ನಂತರ ಒಣಗಿದ ಮರಗಳನ್ನು ಕ್ರಮೇಣ ಕಡಿಯುತ್ತಿದ್ದಾರೆ. ಈಗಾಗಲೆ ಸಾಕಷ್ಟು ಮರಗಳನ್ನು ಕಡಿದು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಬಗ್ಗೆ  ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ೀ ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅರ್ಜಿ ನೀಡಲಾಗಿದೆ. ಸ್ಮಶಾನಕ್ಕೆ ಮೀಸಲಿರುಸುವಂತೆಯೂ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗ್ರಾಮದ ಮುಖಂಡರು ದೂರಿದರು.

ಮರ ಕಡಿಯುವ ಬಗ್ಗೆ ಗ್ರಾಮಸ್ಥರು ಈಗಾಗಲೆ ಕಂದಾಯ, ಅರಣ್ಯ ಇಲಾಖೆಯವರಿಗೆ ದೂರು ನಿಡಿದ್ದಾರೆ. ಶೀಘ್ರ ಸರ್ಕಾರಿ ಪ್ರದೇಶ ಒತ್ತುವರಿ ತೆರವುಗೊಳಿಸಿ ಈ ಪ್ರದೇಶ ಸಂರಕ್ಷಿಸದಿದ್ದಲ್ಲಿ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

 

ತುಮಕೂರಿಗೆ ಹೆಮ್ಮೆ ತಂದ ಸುಫಿಯಾ ಕಾನೂನು ಕಾಲೇಜು: RANK ಗಳ ಸುರಿಮಳೆ

ವಿದ್ಯಾರ್ಥಿಗಳ ಸಾಧನೆಗೆ ತಲೆದೂಗಿದ ತುಮಕೂರು ಜಿಲ್ಲೆಯ ಜನರು, ವಕೀಲರ ಸಮೂಹ

Publicstory


ಧಾರವಾಡ/ತುಮಕೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕಾನೂನು ಪದವಿ (ಎಲ್ ಎಲ್ ಬಿ) ಯಲ್ಲಿ ತುಮಕೂರಿನ ಸುಫಿಯ ಕಾನೂನು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು rank ಪಡೆಯುವ ಮೂಲಕ ತುಮಕೂರಿಗೆ ಹೆಮ್ಮೆ ತಂದಿದ್ದಾರೆ.

ಧಾರವಾಡದಲ್ಲಿ ನಡೆದ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಂಕ್ (Rank) ನೀಡಲಾಯಿತು.

ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಕುಲಪತಿ ಡಾ. ಈಶ್ವರ್ ಭಟ್ ಸೇರಿದಂತೆ ಸಿಂಡಿಕೇಟ್,ಅಕೌಡಮಿಕ್ ಕೌನ್ಸಿಲ್ ಸದಸ್ಯರು ವಿದ್ಯಾರ್ಥಿಗಳ ಸಾಧನೆಗೆ ಸಾಕ್ಷಿಯಾದರು.

ಇಷ್ಟೊಂದು ರಾಂಕ್ ಇದೇ ಮೊದಲು: ತುಮಕೂರಿನ ಇತಿಹಾಸದಲ್ಲಿ ಇದೇ ಮೊದಲ ಸಲ ಕಾಲೇಜೊಂದು ಒಮ್ಮೆಗೆ ನಾಲ್ಕು rank ಗಳಿಸಿರುವುದು ಜಿಲ್ಲೆಗೆ ಗರಿಮೂಡಿದಂತಾಗಿದೆ.


ಎಲ್ಲಿದೆ ಕಾಲೇಜು ?
ತುಮಕೂರಿನ ಜಯನಗರ- ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಕಾಲೇಜಿನ ಕ್ಯಾಂಪಸ್ ಇದೆ. ಮೂರು ಹಾಗೂ ಐದು ವರ್ಷಗಳ ಕಾನೂನು ಪದವಿಯನ್ನು ನೀಡಲಾಗುತ್ತದೆ. ಪಿಯುಸಿ ಪಾಸಾದವರು ಐದು ವರ್ಷದ ಕಾನೂನು ಪದವಿ. ಯಾವುದೇ ಪದವಿ ಪಡೆದವರು ಮೂರು ವರ್ಷದ ಕಾನೂನು ಪದವಿಗೆ ಸೇರಿಕೊಳ್ಳಲು ಅವಕಾಶವಿದೆ.

ರೂಪಾ, ಶೋಭಾ, ಲೋಕೇಶ್ ಆರ್ ಹಾಗೂ ಪುಷ್ಪಾ ಅವರು rank ವಿಜೇತರು.
ತುಮಕೂರಿನಲ್ಲಿ ವಿದ್ಯೋದಯ, ಕೃಷ್ಣ ಹಾಗೂ ಸುಫಿಯಾ ಕಾಲೇಜು ಸೇರಿದಂತೆ ಮೂರು ಕಾನೂನು ಕಾಲೇಜುಗಳಿವೆ.

ಗುಣಮಟ್ಟದ ಶಿಕ್ಷಣವೇ ಕಾರಣ

“ ಗುಣಮಟ್ಟದ ಶಿಕ್ಷಣವೇ ಈ ಸಾಧನೆಗೆ ಕಾರಣ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ. ಪ್ರತಿ ವಿದ್ಯಾರ್ಥಿಯ ಸರ್ವೋತ್ತೋಮ ಬೆಳವಣಿಗೆಗೆ ಬಗ್ಗೆ ಕಾಲೇಜಿನಲ್ಲಿ ಗಮನ ಹರಿಸಲಾಗುತ್ತದೆಪ್ರಾಂಶುಪಾಲರಾದ ಡಾ. ಎಸ್.ರಮೇಶ್ ಹೇಳಿದರು.

ಉತ್ತಮ ಗ್ರಂಥಾಲಯ ವ್ಯವಸ್ಥೆ, ನುರಿತ ಪ್ರಾಧ್ಯಾಪಕರ ತಂಡ, ಬೋಧನೆಯಲ್ಲಿ ಹೊಸ ಹೊಸ ವಿಧಾನಗಳ ಅನುಸರಣೆಯೂ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಕವಿತೆಗೂ ಒಂದು ದಿನ

1

ಕವಿತೆಗೂ ಒಂದು ದಿನ. ಅದು ಮಾರ್ಚ್ 21. ಕವಿತೆ ಕೂಡ ಕಲೆಯಂತೆ. ಅಭಿವ್ಯಕ್ತಿಗೆ ಹೇಳಿ ಮಾಡಿಸಿದ ಆಯಾಮ. ರಸಾನುಭಾವಿ ಮಾತ್ರವೇ ಆಸ್ವಾದಿಸಬಲ್ಲ. ಓದಿ “” ಕವಿತೆ ದಿನ”. ಕವಯಿತ್ರಿ ಕಣ್ಣಲ್ಲಿ.


ವಿಶ್ವ ಕವಿತೆ ದಿನ

*************

ಕವಿತೆ ಮೂಡುವುದಿಲ್ಲ
ಬೇಕೆಂದಾಗ.

ಬಂದೇ ಬಿಟ್ಟಿತು ಎಂದಾಗ
ನುಗ್ಗಿ ಮನಸ್ಸಲ್ಲಿ
ಹೃದಯದಲ್ಲಿ
ಕೊನೆಗೆ ಅಕ್ಷರದಲ್ಲಿ…

ಪ್ರೀತಿ, ಪ್ರೇಮ, ಮೋಹ
ಲೋಕದ ನೋವು
ಕಲ್ಪನೆ , ಸಮೀಕರಣ…
ಯಾವುದಕ್ಕಾದರೂ ಬಸಿರಾಗಬಹುದು ಕವಿತೆ

ಅಕ್ಷರದಲ್ಲಿ ಹೆತ್ತು
ವಾಚನದಲ್ಲಿ ಹಗುರಾಗಿ
ಮತ್ತೆ ಭಾವಕ್ಕೆ ಬಸಿರಾಗಿ
ಕಣ್ಣೀರಾಗಬಹುದು…
ಕ್ರಾಂತಿ ಗೀತೆಯಾಗಬಹುದು

ಯಾರದೋ ಭಾವ
ಇನ್ಯಾರದೋ
ಅನುಭೂತಿ.

ಹೃದಯದ ಕುಂಚದಿ
ಹೊರಬಂದ ಚಿತ್ರ ಪಟ
ಈ ಕವಿತೆ.

ಮೂರ್ತ ಅಮೂರ್ತವಾಗಿ
ಕವಿಗೆ ಮಾತ್ರ ಮುತ್ತಿಟ್ಟು
ಗುಟ್ಟು ಮಾತೇ
ಕವಿತೆಯಾಗಿ ಹೊಮ್ಮಿ…

ಗೋಳಾಡಲಾರದ ನೋವುಗಳು
ಕವಿತೆಯಾಗಿ ಹೊಮ್ಮಿ
ಸರಿಯಾದ ಎದೆಗೆ
ಚಿಮ್ಮಿದ ಬಾಣಗಳು.

ಗೌಪ್ಯ ಸಮೀಕರಣದಿಂದ
ನೂರು ಭಾವ ಹೊಮ್ಮಿಸುವ
ಹೃದಯ ಬೀಜಾಸುರರು

ನಿನಗೂ ಒಂದು ದಿನವೇ ?

ಕೆಂಪು ಗುಲಾಬಿ
ಮೊದಲ ಮಳೆ

ಯಾವಾಗ ಕವಿತೆಯಾಗಿ..
ಮನಸ್ಸಲ್ಲಿ ಗುಂಗಾಗಿ

ಕ್ಷಣ ಮೈಮರೆತು

ತುಟಿ ಮೇಲೆ ನಸುನಗು
ಎದೆಯಲ್ಲಿ ರೋಷ

ಬಂದ ಗಳಿಗೆಯೇ
ಕವಿತೆಯ ಜನ್ಮ ಕ್ಷಣ

ಕವಿತೆ…. ಹೇ ಕವಿತೆ

ಎಲ್ಲಿ ಅವಿತಿದ್ದೆ ….


ಡಾ II ರಜನಿ

ಹೀಂಗ್ ಮಾಡಲಿ ನಮ್ ಉಸ್ತುವಾರಿ ಸಚಿವರು!

0

ಸಾವಿನ ಬಸ್ಸೊ ? ಸಾವ್ಕಾರಿ ಬಸ್ಸೋ?

Publicstory


ಪಾವಗಡದಲ್ಲಿ ಈಚೆಗೆ ನಡೆದ ಖಾಸಗಿ ಬಸ್ ಹಳ್ಳಿಗರ ಬಾಯಲ್ಲಿ ಸಾವ್ಕಾರಿ ಬಸ್ ಅಪಘಾತ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.


ಅಪಘಾತದ ನಂತರ ಆಡಳಿತ ಹೇಗೆ ನಡೆದುಕೊಳ್ಳಬೇಕು ಎಂಬ ಸಲಹೆಯನ್ನು ಅಧಿಕಾರ ವರ್ಗಕ್ಕೆ ಓದುಗರೊಬ್ಬರು ನೀಡಿದ್ದಾರೆ. ಆದರೆ ಯಾಕೆ ಅಧಿಕಾರ ವರ್ಗ, ಜನಪ್ರತಿನಿಧಿಗಳು ಹೀಗೆ ಮಾಡುವುದಿಲ್ಲ ಎಂಬುದಕ್ಕೆ ಅವರುಗಳೇ ಉತ್ತರಿಸಬೇಕು


ಅಪಘಾತ ಆಕ್ಸಿಡೆಂಟ್ಸ್ ಸಮಯದಲ್ಲಿ ಗಾಯಾಳುಗಳನ್ನು ಬೇಟಿ ಮಾಡಿ ಸಾಂತ್ವಾನ ಹೇಳುವುದು ಮತ್ತು ಪರಿಹಾರ ಪೋಷಿಸುವುದು ಸರಿ.
ಅದೇ ರೀತಿ ಚುನಾಯಿತ ಪ್ರತಿನಿಧಿಗಳು ತಕ್ಷಣವೇ ಆಸ್ಪತ್ರೆಗೆ ಬೇಟಿ ನೀಡಿದರೆ ಇವರ ಹಿಂಬಾಲಕರು ಜನ ಜಂಗುಳಿ ನಿಯಂತ್ರಣ ಕಷ್ಟ.

RTO ಕಛೇರಿಗೂ ಇದೇ ರೀತಿ ಬೇಟಿ ನೀಡಿ ಟ್ರಿಪ್ ವಿವರ . .ಪರ್ಮಿಟ್ ಸರಿಯಾಗಿತ್ತಾ ಇಲ್ಲವಾ ,ಪ್ರತಿದಿನ ಬಸ್ ಟಾಪ್ ಅಲ್ಲಿ ಜನ ಪ್ರಯಾಣ ಮಾಡುತ್ತಿದ್ದರೂ ಸುಮ್ಮನಿದ್ದ RTO,ಸರಕಾರಿ ಬಸ್ ಹಾಕದಿರಲು ಕಾರಣ. ರಸ್ತೆಯ ಸ್ಥಿತಿ ಇತ್ಯಾದಿ ನೋಡಬೇಕು. ಕಂಟ್ರಾಕ್ಟರ್ ಗಳ ಮೇಲೆ ರಸ್ತೆ ದುಸ್ಥಿತಿ ಬಗ್ಗೆ ಕ್ರಮ ತೆಗೆದುಕೊಳ್ಳುಬೇಕು.

120 ಜನರ ಟಿಕೆಟ್ ಲೆಕ್ಕ ಹಾಕಿ 30 ಜನ ತೋರಿಸುವ ಸಾವ್ಕಾರಿ ಬಸ್ ಗಳ ಆದಾಯ ವಂಚನೆ ಪ್ರಕರಣ ದಾಖಲಿಸಲಿ. ಪ್ರತಿ ದಿನ ಬಸ್ ಓನರ್ ತೋರಿಸಿರುವ ಲೆಕ್ಕ ಪರಿಶೀಲಿಸಲಿ. ಆ ಬಸ್ ನ ಪರ್ಮಿಟ್ ಪರಿಶೀಲಿಸಲಿ.

ಇನ್ನು ಒಂದು ವಾರ ಬಿಟ್ಟು ಗಾಯಾಳುಗಳ ಜೊತೆ ಸಂವಾದ ಮಾಡಲಿ. ಆಗ ಚಿಕಿತ್ಸೆಯ ಗುಣಮಟ್ಟ ಹೇಗಿತ್ತು, ಹೊರಗೆ ಔಷಧಿ ಎಷ್ಟು ಬರೆದು ಕೊಟ್ಟರು, ಆಹಾರ ಹೇಗಿತ್ತು ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಆಸ್ಪತ್ರೆಗಳ ಸುಧಾರಣ ಕ್ರಮ ತೆಗೆದುಕೊಳ್ಳಲಿ.

ಮುಂದೆ ಒಂದು ತಿಂಗಳ ನಂತರ ಇಲಾಖೆಗಳು ಒಟ್ಟಾಗಿ ಸಾಮಾಜಿಕ ಭದ್ರತಾ ಕ್ರಮಗಳಲ್ಲಿ ಯಾವುದು ನೊಂದವರಿಗೆ ತಲುಪಿದೆ, ಪುನರ್ ವಸತಿ ಸೌಲಭ್ಯ ದೊರಕಿದೆಯೋ? ಇತ್ಯಾದಿ ಪರಿಶೀಲಿಸಲಿ.

ಸರಕಾರಿ ಬಸ್ ಎಷ್ಟು ಟ್ರಿಪ್ ಆ ರೂಟನಲ್ಲಿ ಓಡಿಸುತ್ತಿದ್ದಾರೆ. ತುಮಕೂರು ನಗರದಲ್ಲಿ ಸರ್ಕಾರಿ ಬಸ್ ಬರದೇ ಇರುವ ಹಳ್ಳಿಗಳು ಯಾವುವು, ಟಾಪ್ ಮೇಲೆ ಜನ ಓಡಿಸುವ ಸಾವ್ಕಾರಿ ಬಸ್ ಯಾವುದು, ಲೋಪ ಮಾಡಿದ ಅಧಿಕಾರಿಗಳ ಮೇಲೆ ತೆಗೆದುಕೊಂಡ ಕ್ರಮ.

ಡ್ರೈವರ್ ಕುಡಿದಿದ್ದನಾ? ಅವನಿಗಿದ್ದ ಒತ್ತಡ , ಅಸಹಾಯಕತೆ ಏನು, ಎಲ್ಲ ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆ ಒಂದು ಹಂತ ಹಂತವಾಗಿ ಸಮಾಲೋಚನೆ
ಇವುಗಳನ್ನು ಮಾಡಿ . ಸರಿಯಾಗಿ ಒಂದು ತಿಂಗಳಿಗೆ
ಈ ಘೋರ ದುರಂತದ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಿದಲ್ಲಿ ತುಮಕೂರಿನ ಸಾರ್ವಜನಿಕರಿಗೆ ಈ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ನೀಡುವ ಪುಣ್ಯದ ಕೆಲಸ.

ಜೊತೆಗೆ ಇಂತ ಘೋರ ದುರಂತಗಳು ಸಂಭವಿಸ ಬಹುದಾದ ಜಾಗಗಳನ್ನು ಗುರುತಿಸಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಬೇಕಾಗಿದೆ.

ಕವಿತೆ ಓದಿ: ಬಣ್ಣ ಬಣ್ಣಿಸಲೇ

0
ಬಗೆ ಬಗೆ ಬಣ್ಣ ಈ ಶರೀರದಲ್ಲೂ . ಆಡು ಭಾಷೆಯಲ್ಲಿ ಬಣ್ಣದ ಗಮ್ಮತ್ತು. ಆದರೂ ಮನಸ್ಸು ಶಾಂತತೆ ತುಂಬಿರಲಿ ಎಂದು ಹೇಳುತ್ತಾ ಕಣ್ಣಲ್ಲಿ ಕಾಮನ ಬಿಲ್ಲು ಇದ್ದರೂ ಸ್ನೇಹ , ಪ್ರೀತಿ, ಶಾಂತತೆ, ತಾಳ್ಮೆ , ಸೌರ್ಹಾದತೆ,ಎಲ್ಲ ಬಿಳಿ ಎಂದು ಸಾರಿದ್ದಾರೆ ಕವಯಿತ್ರಿ ಈ ಹೋಳಿ ಹಬ್ಬದ ಸಂದರ್ಭದಲ್ಲಿ.

************

ಬಣ್ಣ ಬಣ್ಣಿಸಲೇ


ಎಳೆ ಮಗುವಿನ ತುಟಿ
ನಸು ಗುಲಾಬಿ

ನೇರಳೆ ಕಣ್ಣಿನ
ಕಂದ

ನಲ್ಲೆಯ ಅಂಗಾಲು
ನಸು ಗೆಂಪು

ಕೋಪದಿ ಬಿಟ್ಟ
ಕೆಂಗಣ್ಣು

ಚಳಿಗೆ ನೀಲಿಗಟ್ಟಿದ
ತುಟಿ

ಕೆನೆ ಬಣ್ಣದ
ಮೈ ಬಣ್ಣ

ತಾಂಬೂಲದಿಂದ
ಕೆಂಪಾದ ನಾಲಗೆ

ಕಪ್ಪನೆ ಮೋಡದಂತ
ಮುಂಗುರುಳು

ಹಸಿರು ಪಿತ್ತ
ಹರಿಶಿನ ಕಾಮಾಲೆ
ರಕ್ತ ಕೆಂಪು

ರಕ್ತವಿಲ್ಲದೇ ಬಿಳಿಚಿ
ಬೆಳ್ಳಗಾದ ಉಗುರು

ಹಾಲು ಬಿಳುಪು
ಕೆನ್ನೆ ಕೆಂಪು

ನೀಲ ಮೇಘ ಶ್ಯಾಮ
ನೀಲ ಕಂಠ

ಬಣ್ಣದ ಓಕುಳಿ
ದೇಹವಿದು …

ಮನಸ್ಸಿರಲಿ
ಶಾಂತ ಬಿಳಿ

ಡಾII ರಜನಿ

ಕವಿತೆ ಓದಿ: ಯುದ್ಧ

1
ಯುದ್ಧ ತರುವ ನೋವು ನೂರಾರು. ಅಮಾಯಕರ, ಮಕ್ಕಳ , ಸಾವು ಭವಿಷ್ಯದ ಆಸೆಯನ್ನು ಕಂಗೆಡಿಸುತ್ತದೆ. ಸತ್ತು ಹೋದವರು ದೇವರ ಅದ್ಯಾವ ಲೆಕ್ಕದಲ್ಲಿ ಸಾವನ್ನಪ್ಪಿದರು? ಗೊತ್ತಿಲ್ಲ. ಚರಿತ್ರೆ
ದಾಖಲಿಸುವುದೇ ಸಾಯುವ ಕ್ಷಣವನ್ನು ? ಕಾರಣವನ್ನು ?
ಇದೇ ಪ್ರಶ್ನೆ ಕವಯಿತ್ರಿಯನ್ನು ಕಾಡುತ್ತಿದೆ


ಯುದ್ಧ

******

ಮನೆಯೊಳಗೇ
ಸಿಡಿಮದ್ದು

ಹೊಟ್ಟೆಯಲ್ಲಿನ
ಮಗು ಸತ್ತು
ತಾಯಿ ಸತ್ತು

ಹುಟ್ಟದಿರುವ ಮಗು
ಯಾವ ಧರ್ಮ
ಯಾವ ದೇಶ

ಕಂದನ ಭೂಮಿಗೆ
ತರುವ ತವಕ

ಮುಖ ನೋಡಿಲ್ಲ
ನಾನಾರು ಗೊತ್ತಿಲ್ಲ …

ನನಗೇಕೆ ಸಿಡಿಯಿತು
ತುಪಾಕಿ , ಕ್ಷಿಪಣಿ?

ನಾನು ಮಗುವಿಗೆ ಹಾಲೂಡಿಸುತ್ತಿದ್ದೆ
ಗಿಡಕ್ಕೆ ನೀರೆರೆಯುತ್ತಿದ್ದೆ
ನಾಳೆ ಪಾಠವ ಓದುತ್ತಿದ್ದೆ
ಗೆಳತಿಗೆ ರಿಂಗ್ ತೊಡಿಸಿದ್ದೆ

ಕೊನೆಗೆ …ಓವೆನ್ ಅಲ್ಲಿ
ಬ್ರೆಡ್ ಬೇಯುತ್ತಿತ್ತು…

ಬದುಕಿದ ನಿಮಗೆ ಗೊತ್ತೆ?
ನಿನ್ನೆ ನಾವೇಕೆ ಸತ್ತೆವು ಎಂದು?

ರಸ್ತೆಯಲಿ ನಡೆವಾಗ
ಸತ್ತು ಬಿದ್ದೆವು ಎಂದು ….

ನೀವೇಕೆ ಯುದ್ಧ
ಮಾಡಿದಿರಿ ಎಂದು
ನನ್ನ ಪ್ರೇತಾತ್ಮಕ್ಕಾದರೂ
ತಿಳಿಸಿ…

ಸರಿಯಾಗಿ ತಿಳಿಸಿ.

ಡಾII ರಜನಿ