Saturday, December 6, 2025
Google search engine
Home Blog Page 13

ಇದು ಆಸ್ಪತ್ರೆ; ಹಾಳುಬಿದ್ದ ಕಟ್ಟಡವಲ್ಲ!

0

ಆಸ್ಪತ್ರೆ ನಮ್ಮೂರಿಗೆ ಕೊಡಿ, ನಾವ್ ಸರಿ ಮಾಡ್ತೀವಿ ಎಂದು ಗೋಗೆರೆಯುತ್ತಿರುವ ಬ್ಯಾಡರಹಳ್ಳಿ ಜನ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಜೆ ಸಿ ಪುರದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರೇ ಜೀವ ಬಿಗಿಹಿಡಿದು ಕೆಲಸ ಮಾಡಬೇಕಾದ ದುಃಸ್ಥಿತಿಯಿದೆ.

ಜೆ ಸಿ ಪುರ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗಳು ಯಾವಾಗ ತಮ್ಮ ತಲೆ ಮೇಲೆ ಆಸ್ಪತ್ರೆ ಛಾವಣಿ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಂತಹ ಪರಿಸ್ಥಿತಿಯಿದ್ದರೂ ಜೆ ಸಿ ಪುರ ಗ್ರಾಮ ಪಂಚಾಯಿತಿ, ಶಾಸಕರು, ಸ್ಥಳೀಯ ಜನ ಪ್ರತಿನಿಧಿಗಳು ಇದುವರೆಗೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಕಳೆದ ವಾರ ಇಲ್ಲಿ ಸುರಿದ ಧಾರಾಕಾರ ಮಳೆಗೆ ಬೆಚ್ಚಿಬಿದ್ದಿರುವ ಆಸ್ಪತ್ರೆಯ ಸಿಬ್ಬಂದಿ, ಅಲ್ಲಿ ಕೆಲಸ ಮಾಡಲು ಭಯ ಭೀತರಾಗಿದ್ದಾರೆ. ಈ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ ದಿವಾಕರ್ ಹಾಗೂ ಸಹಾಯಕಿ ನಾಗರತ್ನಮ್ಮನವರು ಜಾನುವಾರು ಚಿಕಿತ್ಸೆಯ ಕರ್ತವ್ಯಲ್ಲಿದ್ದಾರೆ.

ಸ್ವಲ್ಪ ಜೋರಾಗಿ ಗಾಳಿ ಬೀಸಿದರೂ ಹೆಂಚುಗಳು ಮುರಿದು ಬೀಳುವ ಸ್ಥಿತಿಯಿರುವ ಕಾರಣ ಅವರು ಸದಾ ಎಚ್ಚರ ಮತ್ತು ಆತಂಕದಲ್ಲೇ ಕರ್ತವ್ಯ ನಿರ್ವಹಿಸಬೇಕಾದ ತುರ್ತು-ಪರಿಸ್ಥಿತಿಯಿದೆ ಇಲ್ಲಿ.

(ಚಿಕಿತ್ಸಾ ಕೇಂದ್ರದ ಕಟ್ಟಡ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿ ಜೆ ಸಿ ಪುರ ಗ್ರಾ.ಪಂ. ಮತ್ತು ಚಿ ನಾ ಹಳ್ಳಿ ತಾ.ಪಂ. ಹಾಗೂ ತಾಲ್ಲೂಕು ಪಶು ಇಲಾಖೆಗಳ ನಡುವೆ ಹಗ್ಗ-ಜಗ್ಗಾಟ)

ಸಮಸ್ಯೆಗೆ ಮೂಲ ಕಾರಣವೇ,
ಜೆ ಸಿ ಪುರದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದು. ಗ್ರಾಮ ಪಂಚಾಯತಿ ಒದಗಿಸಿಕೊಟ್ಟಿರುವ ಕಟ್ಟಡದಲ್ಲೇ ಇಲಾಖೆ ತನ್ನ ಸೇವೆಯನ್ನು ಒದಗಿಸುತ್ತಾ ಬಂದಿದೆ. ಆದರೆ, ಇದು ಬಹಳ ಹಳೆಯ ಕಟ್ಟಡ. ಸಂಪೂರ್ಣ ಶಿಥಿಲಗೊಂಡಿದೆ. ಗೋಡೆಗಳು ಬಿರುಕು ಬಿಟ್ಟಿವೆ.

ಹೆಂಚುಗಳು ಬೀಳುತ್ತಿವೆ. ತೀರು, ತೊಲೆಗಳು ಹುಳ ಹಿಡಿದಿವೆ. ಪ್ಲಾಸ್ಟರಿಂಗ್ ಪುಡಿಪುಡಿಯಾಗಿ ಉದುರುತ್ತಿದೆ. ಮಳೆ-ಗಾಳಿಯ ಹೊಡೆತಕ್ಕೆ ಕಟ್ಟಡ ಯಾವಾಗ ಕುಸಿದು ಬೀಳುವುದೋ ಎಂಬುದೇ ಇಲಾಖೆಯ ಸಿಬ್ಬಂದಿಗಳ ಆತಂಕ. ಆದರೂ, ವರ್ಷಾನುವರ್ಷಗಳಿಂದ ಇಲ್ಲಿ ಪಶು ಇಲಾಖೆ ಅಬಾಧಿತವಾಗಿ ತನ್ನ ಸೇವೆಯನ್ನು ಒದಗಿಸುತ್ತಿದೆ.

ಈ ಹಿಂದೆ ಇದ್ದ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ವಸಂತ್ ಕುಮಾರ್ ಮತ್ತು ಈಗ ಹಾಲಿ ಕರ್ತವ್ಯದಲ್ಲಿರುವ ಇಒ ದೊಡ್ಡಸಿದ್ಧಯ್ಯ ಇಬ್ಬರ ಬಳಿಯೂ ಪಶು ಇಲಾಖೆಯ ಹಿರಿಯ ಅಧಿಕಾರಿಗಳು ಮೂರು ನಾಲ್ಕು ಬಾರಿ ಕಟ್ಟಡ ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಇದುವರೆಗೂ ಯಾವುದೇ ಪೂರಕ ಪ್ರತಿಕ್ರಿಯೆ ಸಿಕ್ಕಿಲ್ಲ. ಸಾಲದ್ದಕ್ಕೆ, ಹಿಂದೆ ಇದ್ದ ಗ್ರಾಮ ಪಂಚಾಯತಿ ಪಿಡಿಒ ಒಬ್ಬರು ಈ ಕಟ್ಟಡದ ದುರಸ್ತಿ ಮಾಡಿಸುತ್ತಿರುವುದಾಗಿ ಹಣ ಬಿಡುಗಡೆ ಮಾಡಿಕೊಂಡು ಬೇರೆಡೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಆದರೆ, ದುರಸ್ತಿ ಕಾರ್ಯ ಏನೇನೂ ಆಗಿಲ್ಲ. ಈಗಿರುವ ಪ್ರಭಾರ ಪಿಡಿಒ ಸಂತೋಷ್ ತನ್ನ ವ್ಯಾಪ್ತಿಗೆ ಮೀರಿದ ಅಧಿಕಾರ ಇದು ಎಂದು ಕೈಚೆಲ್ಲಿದ್ದಾರೆ.

ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿಯೇ 48 ಲಕ್ಷ ರೂಪಾಯಿಗಳಷ್ಟು ಅನುದಾನ ನಿಗದಿಯಾಗಿದೆ. ಜೆ ಸಿ ಪುರ ಗ್ರಾಮ ಪಂಚಾಯತಿ’ಯವರು ಜಾಗ ಗುರ್ತಿಸಿಕೊಟ್ಟರೆ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಬಹುದು. ಅದಕ್ಕೂ ಅವಕಾಶ ಕೊಡದೆ, ಇತ್ತ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ದುರಸ್ತಿಯಾದರೂ ಮಾಡಿಸಿಕೊಡದೆ ಇಲಾಖೆಗಳು ಪರಸ್ಪರ ಕೆಸರೆರಚಾಡಿಕೊಳ್ಳುತ್ತಿವೆ. ಹಾಗಾಗಿ, ಈ ಜೆ ಸಿ ಪುರ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಇದೇ ಪಶು ಚಿಕಿತ್ಸಾ ಕೇಂದ್ರವನ್ನು ನಮ್ಮೂರಿಗೆ ಶಿಫ್ಟ್ ಮಾಡಿ. ನಾವು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಮಗೆ ಉತ್ತಮವಾದ ವಿಶಾಲ ಜಾಗ ಕೊಡುತ್ತೇವೆ ಎಂದು ಜೆ ಸಿ ಪುರ ಪಕ್ಕದ ಬ್ಯಾಡರಹಳ್ಳಿಯ ಕೆಲಮಂದಿ ಒತ್ತಡ ಹಾಕಿದ್ದಾರೆ.

ಜೆ ಸಿ ಪುರದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವ್ಯಾಪ್ತಿಯಲ್ಲಿ 4 ಸಾವಿರ ಜಾನುವಾರುಗಳಿವೆ. 1500’ರಷ್ಟು ಎತ್ತು, ಎಮ್ಮೆ, ಹಸುಗಳಿದ್ದರೆ, 2,500’ದಷ್ಟು ಕುರಿ ಆಡು ಮೇಕೆ ಇವೆ. ನಿತ್ಯ 8 ರಿಂದ 10‌ ಜಾನುವಾರುಗಳು ಈ ಚಿಕಿತ್ಸಾ ಕೇಂದ್ರದ ಸೇವೆ ಪಡೆಯುತ್ತಿವೆ. ಇದರ ವ್ಯಾಪ್ತಿಗೆ ಬರುವ ಸಾವಿರಾರು ಜಾನುವಾರುಗಳ ಆರೋಗ್ಯ ರಕ್ಷಣೆ, ಚಿಕಿತ್ಸೆ-ಶುಶ್ರೂಷೆಯ ಹೊಣೆ ಎಲ್ಲವೂ ಜೆ.ಸಿ.ಪುರದ ಇದೇ ಚಿಕಿತ್ಸಾ ಕೇಂದ್ರದ ಮೇಲಿದೆ.

ಇಷ್ಟು ಪ್ರಾಮುಖ್ಯತೆ ಇರುವ ಈ ಚಿಕಿತ್ಸಾ ಕೇಂದ್ರದ ಕಟ್ಟಡ ದುರಸ್ಥಿ ಅಥವಾ ಅದರ ಬದಲಿ ವ್ಯವಸ್ಥೆ ಮಾಡಿಕೊಡಬೇಕಾಗಿರುವುದು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಅನ್ವಯಪಡುತ್ತದೆ. ಪಶು ವೈದ್ಯಕೀಯ ಮತ್ತು ಪಶು ಸಂಗೋಪನಾ ಇಲಾಖೆಯಲ್ಲಿ ತನ್ನ ಸ್ವಂತ ಕಟ್ಟಡಗಳನ್ನು ದುರಸ್ತಿ ಮಾಡಿಸಿಕೊಳ್ಳಲು ಮಾತ್ರ ಅನುಕೂಲವಿದೆ. ಇದಕ್ಕಾಗಿ ಇಲಾಖೆಗೆ ಪ್ರತಿಸಾಲಿನಲ್ಲಿ ಹಣ ಬಿಡುಗಡೆ ಆಗುತ್ತದೆ.

ಆದರೆ, ಖಾಸಗಿ ಅಥವಾ ಗ್ರಾಮ ಪಂಚಾಯ್ತಿ ಒದಗಿಸಿಕೊಟ್ಟಿರುವ ಕಟ್ಟಡಗಳ ರಿಪೇರಿ ಮತ್ತಿತರೆ ದುರಸ್ತಿಕಾರ್ಯಕ್ಕೆ ನಮ್ಮಲ್ಲಿ ಯಾವುದೇ ಅನುದಾನ ಇರುವುದಿಲ್ಲ. ಈ ಬಾರಿ ಕಟ್ಟಡಗಳ ದುರಸ್ತಿಗೆಂದೇ ಬಿಡುಗಡೆ ಆಗಿರುವ 14.ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿ ಯಳನಡು, ದೊಡ್ಡೆಣ್ಣೇಗೆರೆ, ಚಿಕ್ಕಬಿದರೆ, ತೀರ್ಥಪುರ, ದಬ್ಬಗುಂಟೆ ಭಾಗದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳ ದುರಸ್ತಿಕಾರ್ಯ ನಡೆಸಲಾಗುತ್ತಿದೆ. ಆದರೆ, ಇಲಾಖೆಯ ಕಟ್ಟಡವಲ್ಲದ ಖಾಸಗಿ ಕಟ್ಟಡಕ್ಕೆ ಇಲಾಖೆಯ ಈ ಅನುದಾನದ ಹಣ ವಿನಿಯೋಗಿಸಲು ಅವಕಾಶವಿಲ್ಲ.

ಹಾಗಾಗಿ, ಇದರ ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ಸಂಬಂಧಪಟ್ಟ ಇಲಾಖೆಗಳು ಶೀಘ್ರವೇ ಕ್ರಮ ವಹಿಸಬೇಕಿದೆ ಎಂದು ಪಶು ಸಹಾಯಕ ನಿರ್ದೇಶಕರಾದ ಡಾ ರೆ ಮಾ ನಾಗಭೂಷಣ್ ತಿಳಿಸಿದರು.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ:  ಚಿರತೆ ಸೆರೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಮೇಲನಹಳ್ಳಿ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ‌ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಿಂಬದಿಯಿರುವ ಗುಡ್ಡದ ಬಳಿ ಚಿರತೆ ಮರಿಯೊಂದು ಓಡಾಡುತ್ತಿರುವ ಬಗ್ಗೆ ‌ಶಾಲೆಯ ಸೆಕ್ಯುರಿಟಿ ಸಿ ಜಯರಂಗಯ್ಯ ಮಾಹಿತಿ ನೀಡಿದ್ದರು.

ಅವರ ಮಾಹಿತಿಯನ್ನನುಸರಿಸಿ ಅರಣ್ಯ ಇಲಾಖೆಯಿಂದ ಅಲ್ಲಿ ಬೋನೊಂದನ್ನು ಇಟ್ಟು, ಅದರಲ್ಲಿ ಕೋಳಿಯನ್ನು ಬಿಡಲಾಗಿತ್ತು. ಕೋಳಿಯನ್ನು ತಿನ್ನುವ ಆಸೆಗೆ ಬಿದ್ದು ಚಿರತೆ ಬೋನಿಗೆ ನುಗ್ಗಿ ಲಾಕ್ ಆಗಿದೆ.

ಶುಕ್ರವಾರ ಬೆಳಗ್ಗೆ ಅದೇ ಸೆಕ್ಯುರಿಟಿ ಜಯರಂಗಯ್ಯನವರು ಚಿರತೆ ಬೋನಿಗೆ ಬಿದ್ದಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಂದ ಚಿರತೆಯನ್ನು ಹೊಸಹಳ್ಳಿ ನರ್ಸರಿ ಫೀಲ್ಡ್’ಗೆ ಸಾಗಿಸುವ ತಯಾರಿ ನಡೆಸಿದ್ದಾರೆ.

ಚಿರತೆಯ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ಬನ್ನೇರುಘಟ್ಟ ರಾಷ್ಟ್ರೀಯ ವನಕ್ಕೆ ಅದನ್ನು ಬಿಡಲಾಗುವುದು.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಅಲೆಮಾರಿಗಳ ಗಾಂಧಿನಗರಕ್ಕೆ ಬಂದ ವೈದ್ಯರಿಗೆ ಕಂಡಿದ್ದೇನು?

ಚಿಕ್ಕನಾಯಕನಹಳ್ಳಿ : ಗುರುವಾರ ಮಧ್ಯಾಹ್ನ ಪಟ್ಟಣದ ಅಲೆಮಾರಿ ವಸತಿ ಪ್ರದೇಶವಾದ ಗಾಂಧಿನಗರಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಅವರ ಸಿಬ್ಬಂದಿಗಳು ಭೇಟಿ ನೀಡಿ ಅಲೆಮಾರಿ ನಿವಾಸಿಗಳ ಆರೋಗ್ಯ ವಿಚಾರಿಸಿ, ತಪಾಸಣೆ ನಡೆಸಿದರು.

ಈ ಸಂದರ್ಭದಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯಶ್ವಂತ್ ಮಾತನಾಡಿ, ಪಬ್ಲಿಕ್-ಸ್ಟೋರಿಯಲ್ಲಿ ಪ್ರಕಟಗೊಳ್ಳುತ್ತಿರುವ ಅಲೆಮಾರಿ ಸಮುದಾಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಿದ ಪರಿಣಾಮ ನಾವು ಈಗ ಈ ಅಲೆಮಾರಿ ಸಮುದಾಯಗಳ ವಸತಿ ಪ್ರದೇಶಗಳನ್ನು ಹುಡುಕಿಕೊಂಡು ಇಲ್ಲಿಯವರೆಗೂ ಬರಲು ಸಾಧ್ಯವಾಯಿತು.

ಇಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದೇವೆ. ಇಲ್ಲಿರುವ ಒಬ್ಬ ಹೆಣ್ಣುಮಗುವಿಗೆ ಅಪಸ್ಮಾರ-ಮೂರ್ಛೆರೋಗ(ಎಪಿಲೆಪ್ಸಿ) ಸಮಸ್ಯೆಯಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಗೆ ಉಚಿತವಾಗಿ ನೀಡಲಾಗುವ ಮಾತ್ರೆಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ್ದೇವೆ.

ಮತ್ತೊಂದು ಹೆಣ್ಣು ಮಗುವಿನ ಕಾಲಿನಲ್ಲಿ ತೀವ್ರತರ ಗಾಯವಿದ್ದು, ಅದಕ್ಕೆ ಚಿಕಿತ್ಸೆ ಹಾಗೂ ಶುಶ್ರೂಷೆಯ ಅಗತ್ಯವಿರುವುದನ್ನು ತಿಳಿಸಿ, ಸರ್ಕಾರಿ ಆಸ್ಪತ್ರೆಗೆ ಬರಲು ಹೇಳಿದ್ದೇವೆ. ಇಲ್ಲಿನ ವಯೋವೃದ್ಧರಿಗೆ ಬರುವ ವಯೋಸಹಜ ಬೇನೆಗಳು ಇದ್ದೇ ಇವೆ. ಆಸ್ಪತ್ರೆಯಲ್ಲಿ ಅವರ ವಿವರವಾದ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಗುವುದು. ಒಟ್ಟಾರೆ, ಗಾಂಧಿನಗರದ ಅಲೆಮಾರಿಗಳನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನಾವು ಮನಃಪೂರ್ವಕ ಆಹ್ವಾನಿಸುತ್ತಿದ್ದೇವೆ ಎಂದರು.

ವಸತಿ ಪ್ರದೇಶದಲ್ಲಿ ಅಲ್ಲಲ್ಲಿ ಕಟ್ಟಿದ್ದ ಲಾರ್ವಾ ಶುಚಿಗೊಳಿಸಲಾಗಿದೆ. ಚರಂಡಿಗಳಲ್ಲಿ ನಿಂತ ನೀರು ಹಾಗೂ ಕೊಳಚೆಯ ಫೋಟೋ, ವಿಡಿಯೋ ಮಾಡಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಅಲ್ಲಿನ ಜನರಿಗೆ ಒತ್ತಿ ಒತ್ತಿ ತಿಳಿಹೇಳಲಾಗಿದೆ ಎಂದೂ ಅವರು ಪಬ್ಲಿಕ್ ಸ್ಟೋರಿ’ಗೆ ತಿಳಿಸಿದರು.

ಅಲೆಮಾರಿಗಳ ಗಾಂಧಿನಗರ ಭೇಟಿ ಸಂದರ್ಭದಲ್ಲಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನಟರಾಜ್, ಆರೋಗ್ಯ ನಿರೀಕ್ಷಕ ಮುದ್ದೇಗೌಡ ಹಾಗೂ ಆಶ್ರಿತ ರೋಗವಾಹಕ ನಿಯಂತ್ರಣದ ತಾಂತ್ರಿಕ ಮೇಲ್ವಿಚಾರಕ ಕುಮಾರ್ ಸೇರಿದಂತೆ ಆಸ್ಪತ್ರೆಯ ಇತರೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.


ಇದು ಇಲ್ಲಿಯ ಕತೆ

ಇಲ್ಲಿ ದಕ್ಕಲಿಗ, ಕೊರಮ, ಕೊರಚ, ಸುಡುಗಾಡು ಸಿದ್ದ, ಪಿಂಜಾರ, ಚನ್ನದಾಸರ್ ಮತ್ತು ದೊಂಬಿದಾಸ ಸೇರಿದಂತೆ ಹಲವು ಅಲೆಮಾರಿ ಕುಟುಂಬಗಳು ವಾಸವಿವೆ. ಇವರಲ್ಲಿನ ಅನೇಕರ ಬಳಿ ಆಧಾರ್ ಕಾರ್ಡ್ ಇಲ್ಲ. ಸೂರಿಲ್ಲ.

ಮನೆಯಿಲ್ಲ. ನಿವೇಶನವಿಲ್ಲ. ಉದ್ಯೋಗವಿಲ್ಲ. ಮಕ್ಕಳಿಗೆ ಶಿಕ್ಷಣದ ಸೌಲಭ್ಯವಿಲ್ಲ. ಪಡಿತರದ ಯಾವ ಗ್ಯಾರಂಟಿಯೂ ಇಲ್ಲ. ಆದರೂ ಇವು ಇಲ್ಲಿ ಹೀಗೆ ಉಸಿರು ಬಿಗಿದುಕೊಂಡು ಬದುಕುತ್ತಲೇ ಇವೆ. ನಾಗರಿಕ ಸಮಾಜ(!?) ಬಳಸಿ ಬಿಸಾಡಿದ ಚಿಂದಿ, ಬಾಟಲಿ, ಕಿಲುಬು, ತಗಡು ಆಯ್ದು ಗುಜರಿ ಅಂಗಡಿಗೆ ಮಾರಿ ಬದುಕಿನ ತಲಪರಿಗೆ ತಡಕುತ್ತಲೇ ಇವೆ.




_ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಊರಿಗೆ ಬಂದಾ ಹುಡ್ಗರು ಮಾಡಿದ್ರು ಮೋಡಿ!!!

0

ಅದಾ, ಆ ಊರಿನವರೇ ಮೂಗು ಮುರಿಯುತ್ತಿದ್ದರು. ಈಗ, ನೋಡಿ ಈ ಹುಡಗ್ರು ಮೋಡಿ ಮಾಡೇ ಬಿಟ್ಟರು…

ಬ್ಯಾತ ಗ್ರಾಮದ ಜನರು ಒಬ್ಬೊಬ್ಬರಾಗಿ ಹೇಳುತ್ತಾ ಸಾಗಿದರು.


ಇದು ಯಾರೋ ಮಾಡಿದ ಮೋಡಿಯೂ ಅಲ್ಲ, ಛೂ ಮಂತ್ರವೂ ಅಲ್ಲ!

ತುಮಕೂರಿನ ಸುಫಿಯಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ತುಮಕೂರು ತಾಲ್ಲೂಕು, ಊರ್ಡಿಗೆರೆ ಹೋಬಳಿಗೆ ಸೇರಿದ ಬ್ಯಾತ ಗ್ರಾಮದಲ್ಲಿ ನಡೆಸಿದ ಹತ್ತು ದಿನಗಳ ಶ್ರಮದಾನದಿಂದ ಬದಲಾವಣೆ.


ಎನ್ ಎಸ್ ಎಸ್ ಶಿಬಿರಕ್ಕೂ ಗ್ರಾಮದಲ್ಲಿದ್ದ ಅರಳಿ ಕಟ್ಟೆಗಳು ಗಿಡ ಕೊಳೆಗಳಿಂದ ತುಂಬಿ ಹೋಗಿದ್ದವು. ಈಗ ಶ್ರಮದಾನದ ಪರಿಣಾಮ ಅರಳಿ ಕಟ್ಟೆಗಳು ಲಕ ಲಕ ಹೊಳೆಯುವಂತಾಗಿವೆ. ಹಳ್ಳಿ ಜನ ಕೂತು ಹರಟೆ ಹೊಡೆಯುವ ಸ್ಥಳಗಳಾಗಿವೆ. ವಿದ್ಯಾರ್ಥಿಗಳು ಕ್ಲೀನ್ ಮಾಡುತ್ತಿದ್ದಂತೆ ಗ್ರಾಮದ ಜನರು ಒಬ್ಬೊಬ್ಬರೇ ಬಂದು ಅರಳಿಕಟ್ಟೆಯ ಮೇಲೆ ಕುಳಿತು ಕಾನೂನು ವಿದ್ಯಾರ್ಥಿಗಳ ಶ್ರಮದಾನಕ್ಕೆ ತಲೆ ತೂಗಿದರು.

ಕಸವೇ ಗುಡಿಸುವವರು ಇಲ್ಲದೇ ಕಸದ ತೊಟ್ಟಿಯಂತಿದ್ದ ಸರ್ಕಾರಿ ಶಾಲೆಗೆ ಸಚ್ಛತೆಯ ಮಂತ್ರವನ್ನು ವಿದ್ಯಾರ್ಥಿಗಳು ಕಲಿಸಿಕೊಟ್ಟರು.
ಶಾಲೆ ಪರಿಸರಕ್ಕೆ ಹೊಸ ಸ್ಪರ್ಶ ಕೊಟ್ಟರು.
ಗ್ರಾಮದ ಬೀದಿ ಬೀದಿಗಳನ್ನು ಸ್ವಚ್ಚ ಮಾಡಿದರು. ಬೇಲಿ, ಮುಳ್ಳಿನ ಗಿಡ ನೆಟ್ಟರು.
ಪ್ರತಿ ದಿನ ಸಂಜೆ ಕಾನೂನು ವಿಷಯ, ಹೆಣ್ಣು ಮಕ್ಕಳ ಹಕ್ಕು, ಪೋಸ್ಕೋ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಜಾಗೃತಿ ಮೂಡಿಸಲಾಯಿತು.
ಶಿಬಿರವನ್ನು ಬ್ಯಾತ ಗ್ರಾಮ ಪಂಚಾಯತಿ ಅಧ್ಯಕ್ಷ ಉಮೇಶ್ ಉದ್ಘಾಟಿಸಿದರು. ಪ್ರಾಂಶುಪಾಲ ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು‌.
ಸಮಾರೋಪ ಸಮಾರಂಭದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪಿ.ಎಲ್. ಮಮತಾ ಮಾತನಾಡಿ, ಯೋಜನೆಯ ಉದ್ದೇಶ, ಶ್ರಮದಾನದ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು. ಪ್ರೊ. ಅಶ್ವತ್ಥಯ್ಯ ಅವರು ವಿದ್ಯಾರ್ಥಿಗಳ ಶ್ರಮದಾನದ ಮುಂದಾಳತ್ವವನ್ನು ವಹಿಸಿದ್ದರು. ಹತ್ತು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಹಲವಾರು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಬಿಡಾರದ ಅಲೆಮಾರಿಗಳು ವಿಧಾನ ಸೌಧ ಮುಟ್ಟಿದರು!

0

ಚಿಕ್ಕನಾಯಕನಹಳ್ಳಿ : ಅಲೆಮಾರಿ‌ ಸಮುದಾಯದ ಸಮಸ್ಯೆಗಳ ಕುರಿತು ಸೋಮವಾರ ಬೆಳಗ್ಗೆ ತಾಲ್ಲೂಕಿನ ಅಲೆಮಾರಿಗಳು ತಾಲ್ಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಕೆ.ಪುರಂದರ್’ರವರಿಗೆ ಮನವಿಪತ್ರ ನೀಡಿದರು.

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೌಡಗೆರೆ ಸರ್ವೆ ನಂಬರ್ 20P-1’ನಲ್ಲಿ ಹೋಬಳಿಯ ಅಲೆಮಾರಿ ಜನಾಂಗದವರಿಗೆ 34 ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಆದರೆ, ಮನೆ ನಿರ್ಮಿಸಿಕೊಳ್ಳಲು ಅಲ್ಲಿ ಕೈಗೊಳ್ಳಬೇಕಾದ ಮೂಲಭೂತ ಸೌಕರ್ಯಗಳು ಮಾತ್ರ ನಾಪತ್ತೆಯಾಗಿವೆ. ಅದೇ ಗೌಡಗೆರೆ ಸರ್ವೆ ನಂಬರ್ 20P-1’ನಲ್ಲೇ ಬರುವ 30’ಗುಂಟೆ ಜಮೀನಿನಲ್ಲಿ ಇನ್ನೂ 27 ಅಲೆಮಾರಿ ಕುಟುಂಬಗಳಿಗಾಗಿ ನಿವೇಶನ ಮಾಡಿಕೊಡಲು ಅದರ ಫಾರ್ಮೇಶನ್ ಕೆಲಸಕಾರ್ಯಗಳು ಆಗಬೇಕಿತ್ತು. ಆದರೆ ಇನ್ನೂ ಆ ಕೆಲಸಗಳು ಪ್ರಾರಂಭವೇ ಆಗುತ್ತಿಲ್ಲ. ತಾಲ್ಲೂಕಿನಲ್ಲಿ ಅಲೆಮಾರಿ ಅಭಿವೃದ್ಧಿ ಕಾರ್ಯಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ.

ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್’ಗಳು ಶೀಘ್ರವೇ ಈ ಕೆಲಸಗಳನ್ನು ಕೈಗೆತ್ತಿಕೊಂಡು ವಸತಿ ವಂಚಿತ ಅಲೆಮಾರಿ ಸಮುದಾಯದ ಕುಟುಂಬಗಳು ಮನೆ ಕಟ್ಟಿಕೊಳ್ಳಲು ತ್ವರಿತವಾಗಿ ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂದಿಜೋಗಿ ರಾಜಣ್ಣ ತಿಳಿಸಿದರು.

ಕಳೆದ ಜುಲೈ ತಿಂಗಳಲ್ಲಿ ಹುಳಿಯಾರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯ ಎಡಿಸಿ ಶಿವಾನಂದ ಕರಾಳೆ’ಯವರು ಗೌಡಗೆರೆ ಸರ್ವೆ ನಂಬರ್ 20P-1’ನಲ್ಲಿರುವ ಈ ಅಲೆಮಾರಿ ಬಿಡಾರಕ್ಕೆ ಭೇಟಿಕೊಟ್ಟು ವಾಸ್ತವಸ್ಥಿತಿ ಮನಗಂಡಿದ್ದರು. ಸ್ಥಳದಲ್ಲೇ ತಾಲ್ಲೂಕು ಮಟ್ಟದ ಹಿರಿಕಿರಿಯ ಅಧಿಕಾರಿಗಳಿಗೆ ಶೀಘ್ರವಾಗಿ ಇದರ ಕೆಲಸಕಾರ್ಯಗಳನ್ನು ಪ್ರಾರಂಭಿಸಬೇಕು ಎಂದು ಸೂಚನೆಗಳನ್ನು ನೀಡಿದ್ದರು. ಇದಾಗಿ ಎಡಿಸಿ’ಯವರು ಅಂದು ಅಲೆಮಾರಿ ಬಿಡಾರ’ದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕೆ ಸಂಬಂಧಪಟ್ಟಂತೆ ಖುದ್ದು ಸ್ಥಳ ಪರಿಶೀಲನೆ ನಡೆಸಿದ ನಂತರ ನೀಡಿದ ಸೂಚನೆಗಳ ಅನುಪಾಲನೆ ಏನಾಯಿತು. ಅವು ಎಲ್ಲಿ ಅನುಷ್ಠಾನಗೊಳ್ಳುತ್ತಿವೆಯೇ ಇಲ್ಲವೇ ಎಂಬ ಸ್ಪಷ್ಟ ಮಾಹಿತಿಯೂ ತಿಳಿಯುತ್ತಿಲ್ಲ. ಆ ಅಲೆಮಾರಿ ಬಿಡಾರ ಮಾತ್ರ ಇಂದಿಗೂ ಯಥಾಸ್ಥಿತಿಯಲ್ಲೇ ಇದೆ. ಅದರ ಪ್ರಗತಿ ಯಾವಾಗ, ಹೇಗೆ,ಎಲ್ಲಿಯವರೆಗೆ ಎಂಬುದನ್ನು ನಾವು ಯಾರನ್ನು ಕೇಳಿ ತಿಳಿಯಬೇಕು ಎಂದು ಹಂದಿಜೋಗಿ ರಾಜಣ್ಣ ಪ್ರಶ್ನಿಸುತ್ತಾರೆ.

ಅಲೆಮಾರಿ ನಗರದಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳ ಅಭಿವೃಧ್ಧಿ ಎಲ್ಲಿಗೆ ಬಂತು, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡುವ ಬದಲು ಸಮಾಜ ಕಲ್ಯಾಣ ಇಲಾಖೆಯ ಅಲೆಮಾರಿ ಅಭಿವೃದ್ಧಿ ಕೋಶದಿಂದ ಈ ಮನೆಗಳ ನಿರ್ಮಾಣ ಆಗಬೇಕಿತ್ತು. ಆದರೆ, ಆ ಅನುಕೂಲವೂ ಈಗ ತಪ್ಪಿಹೋಗಿದೆ. ಅಲೆಮಾರಿ ಅಭಿವೃದ್ಧಿ ಕೋಶದಲ್ಲಿ ಈ ಹಿಂದೆ ಅಲೆಮಾರಿಗಳ ಮನೆ ನಿರ್ಮಾಣಕ್ಕೆಂದೇ 4’ಲಕ್ಷಗಳವರೆಗೆ ಅನುದಾನವಿತ್ತು. ಆದರೀಗ ಆಶ್ರಯ ಯೋಜನೆ ಅಡಿಯಲ್ಲಿ ಅಲೆಮಾರಿಗಳಿಗೆ ಸಿಗುವುದು 2′ ಲಕ್ಷ ರೂಪಾಯಿ ಮಾತ್ರ. ಈ ಎರಡು ಲಕ್ಷ ರೂಪಾಯಿ’ಯಲ್ಲಿ ಅಲೆಮಾರಿಗಳು ಹೇಗೆ ಮನೆ ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ತಮ್ಮ ಸಂಕಟ ತೋಡಿಕೊಂಡರು.

ಅದೇ ರೀತಿ ಅಲೆಮಾರಿ ಮಕ್ಕಳ ಹಕ್ಕುಗಳ ರಕ್ಷಣೆ, ಶೈಕ್ಷಣಿಕ ಅಭಿವೃದ್ಧಿ, ವ್ಯಸನಮುಕ್ತ ಹಾಗೂ ಸದೃಢವಾದ ಬೆಳವಣಿಗೆಗೆ ಸಂಬಂಧಿಸಿದಂತೆ ಇರುವ ಕಾರ್ಯಸೂಚಿಗಳು ಅಲೆಮಾರಿ ಬಿಡಾರಗಳಲ್ಲಿ ಅನುಷ್ಠಾನಗೊಳ್ಳಬೇಕು. ಆದರೆ ಇವ್ಯಾವು ನಿಯಮಿತವಾಗಿ ಅಲೆಮಾರಿಗಳಿಗೆ ಲಭಿಸುತ್ತಿಲ್ಲ ಎಂದು ಅಲೆಮಾರಿ ರೇಣುಕಮ್ಮ ತಮ್ಮ ಅಳಲು ತೋಡಿಕೊಂಡರು.

ತಾಲ್ಲೂಕಿನ ಇನ್ನಿತರೆ ಅಲೆಮಾರಿ ಜನಾಂಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಕಾರ್ಯಕ್ರಮಗಳ ಅನುಷ್ಠಾನ ಹೇಗಾಗುತ್ತಿದೆ ಎಂಬುದನ್ನು ತಾಲ್ಲೂಕು ದಂಡಾಧಿಕಾರಿಗಳಿಂದ ಮಾಹಿತಿ ಪಡೆಯುವ ಹಾಗೂ ತಮ್ಮ ಸಂಕಷ್ಟಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ತಾಲ್ಲೂಕಿನ ಅಲೆಮಾರಿಗಳು ತಹಸೀಲ್ದಾರ್’ರವರನ್ನು ಭೆಟ್ಟಿಮಾಡಿ ಮನವಿಪತ್ರ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.

ಈಗಾಗಲೇ 77-78’ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಿಗೆ ಬಂದಿರುವ ವಂಚಿತ ಸಮುದಾಯಗಳಾದ ನಮಗೆ, ಕನಿಷ್ಠ ಹಕ್ಕು ಮತ್ತು ಮೂಲಭೂತ ಸೌಕರ್ಯಗಳನ್ನು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಒದಗಿಸಿಕೊಡಬೇಕು. ಬದುಕನ್ನೇ ನಿತ್ಯದ ಸಂಘರ್ಷದಂತೆ ಬಾಳುತ್ತಿರುವ ನಾವುಗಳು, ಅನಿವಾರ್ಯವಾಗಿ ಹೋರಾಟದ ದಾರಿಗಳನ್ನೇ ಆಯ್ದುಕೊಳ್ಳಬೇಕಾಗುತ್ತದೆ ಎಂದು ಹಂದಿಜೋಗಿ ರಾಜಣ್ಣ ಹೇಳಿದರು.

ಈ ಸಂದರ್ಭದಲ್ಲಿ ಹೊನ್ನಲಕ್ಷಮ್ಮ, ಕಮಲಮ್ಮ, ರೇಖಾ, ಜ್ಯೋತಿ, ದುರ್ಗಪ್ಪ, ವೆಂಕಟೇಶ್, ಪರಮೇಶ್, ಶಾಂತರಾಜ್, ಜಗದೀಶ ಸೇರಿದಂತೆ ಹಲವಾರು ಮಂದಿ ಅಲೆಮಾರಿಗಳು ಹಾಜರಿದ್ದರು.

ಬಾಕ್ಸ್ ಐಟಮ್ :
ಈಗಾಗಲೇ ತಾಲ್ಲೂಕು ಪಂಚಾಯತ್ ಇಲಾಖೆ, ಅಲೆಮಾರಿ ನಿವೇಶನ ಮತ್ತು ಮನೆ ನಿರ್ಮಾಣ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತ್ವರಿತ ಕಾಮಗಾರಿಗಳನ್ನು ಪ್ರಾರಂಭಿಸಲಿದೆ. ಅಲೆಮಾರಿಗಳ ಕಷ್ಟಗಳ ಬಗ್ಗೆ ಬಹಳಷ್ಟು ತಿಳಿದಿರುವ ನನಗೆ ಅವರ ಅಭಿವೃದ್ಧಿ ಕೆಲಸಗಳು ಬೇಗನೆ ಅನುಷ್ಠಾನಗೊಳ್ಳುವ ಭರವಸೆಯಿದೆ ಎಂದು ತಹಸೀಲ್ದಾರ್ ಕೆ ಪುರಂದರ್’ರವರು ತಿಳಿಸಿದರು.

ಬಾಕ್ಸ್ ಐಟಮ್ :
ನಾವು ಈಗಾಗಲೇ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿಯ ಗೌಡಗೆರೆ ಸರ್ವೆ ನಂಬರ್ 20P-1’ರ ಅಲೆಮಾರಿ ನಿವೇಶನಗಳಿರುವ ಪ್ರದೇಶಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದೇವೆ. ಈಗಾಗಲೇ ಅಲ್ಲಿ ಮಂಜೂರಾಗಿರುವ ಜಾಗದ ಫಾರ್ಮೇಶನ್, ನಿವೇಶನ ಅಭಿವೃದ್ಧಿ ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಎಲ್ಲ ಪೂರ್ವ ತಯಾರಿಗಳನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ತಾ.ಪಂ.ಇಒ ದೊಡ್ಡಸಿದ್ಧಯ್ಯ ತಿಳಿಸಿದರು.

__ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ


ಹೆರಿಗೆ ಮುಟ್ಟು: ಗಂಡ, ಅತ್ತೆ ಮಾವಗೆ ಜೈಲೇ ಗತಿ

0

ಚಿಕ್ಕನಾಯಕನಹಳ್ಳಿ : ಗೊಲ್ಲರಹಟ್ಟಿಗಳಲ್ಲಿ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿ ಆಚರಿಸುವವರ ವಿರುದ್ಧ ‘ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ’ ಹಾಗೂ ‘ಬಾಲನ್ಯಾಯ ಕಾಯ್ದೆ’ ಸೆಕ್ಷನ್ 75 ಅಡಿಯಲ್ಲಿ 7 ರಿಂದ 8 ವರ್ಷಗಳ ಜೈಲುಶಿಕ್ಷೆಯ ಪ್ರಾವಧಾನವಿದೆ. ಇದರಡಿಯಲ್ಲಿ ಹೆರಿಗೆಯಾದ ತಾಯಿ ಮತ್ತು ಮಗುವನ್ನು ಹೊರತುಪಡಿಸಿ ಆಕೆಯ ಗಂಡ, ಅತ್ತೆ, ಮಾವ, ತಂದೆ, ತಾಯಿ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುವುದು.

ಅದೇ ರೀತಿ ಮುಟ್ಟಾದ ಹೆಣ್ಣುಮಕ್ಕಳನ್ನು ತಿಂಗಳುಗಟ್ಟಲೆ ಶಾಲೆಗೆ ಕಳಿಸದೆ ಅವರನ್ನೂ ಮನೆಯಿಂದ ಹೊರಗೆ ಇಡುವ ಅನಿಷ್ಟ ಆಚರಣೆಯನ್ನು ಜನ ಬಿಟ್ಟುಬಿಡಬೇಕು ಎಂದು ಬಲ್ಲಪ್ಪನಹಟ್ಟಿಗೆ ಶುಕ್ರವಾರ ಭೇಟಿನೀಡಿದ್ದ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಡಾ ಕೆ ಟಿ ತಿಪ್ಪೇಸ್ವಾಮಿ ಎಚ್ಚರಿಸಿದರು.

ಕಳೆದ ಜೂನ್ ತಿಂಗಳಲ್ಲಿ, ತಾಲ್ಲೂಕಿನ ಬಲ್ಲಪ್ಪನಹಟ್ಟಿ ಮತ್ತು ಎಮ್ಮೆಕರಿಕೆಹಟ್ಟಿಗಳಲ್ಲಿ ಅವ್ಯಾಹತವಾಗಿದ್ದ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿ ಆಚರಣೆಯ ವಿರುದ್ಧ ‘ಕಾಡುಗೊಲ್ಲ ಪ್ರಗತಿಪರ ಹಾಗೂ ಸಮಾನಸ್ಕ ವೇದಿಕೆಯವರು ಜಾಗೃತಿ ಅರಿವು ಕಾರ್ಯಕ್ರಮ ನಡೆಸುತ್ತಿದ್ದಾಗ ಅದೇ ಹಟ್ಟಿಗಳಲ್ಲಿ ಬೆಳಕಿಗೆ ಬಂದ ಇಂತಹ ಮೂರ್ನಾಲ್ಕು ಘಟನೆಗಳ ಬಗ್ಗೆ
ಈ-ದಿನ.ಕಾಮ್ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.

ಈ-ದಿನ.ಕಾಮ್’ನ ಆಯೆಲ್ಲ ವರದಿಗಳನ್ನು ಓದಿ ತಾವೀಗ ಬಲ್ಲಪ್ಪನಹಟ್ಟಿಗೆ ಭೇಟಿ ನೀಡಿದ್ದೇನೆ. ನಮಗೆ ಇಲ್ಲಿನ ವಾಸ್ತವಸ್ಥಿತಿ ತಿಳಿದಿದೆ. ಹಾಗಾಗಿ ನಾವಿಲ್ಲಿಗೆ ಭೇಟಿ ನೀಡಿದ್ದೇವೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಡಾ ಕೆ ಟಿ ತಿಪ್ಪೇಸ್ವಾಮಿ ಹಟ್ಟಿಯ ಎಲ್ಲರಿಗೆ ತಿಳಿಸಿದರು.

75 ವರ್ಷಗಳಿಂದಲೂ ಜಾಗೃತಿ, ಅರಿವು ಮೂಡಿಸುವುದೇ ಕೆಲಸವಾಗಿಹೋಗಿದೆ. ಆದರೂ ಬದಲಾವಣೆಗೆ ಜನ ತಯಾರಿಲ್ಲ. ಇನ್ನು ಜಾಗೃತಿ, ಅರಿವು ಮೂಡಿಸುವ ಕಾರ್ಯಕ್ರಮ ನಿಲ್ಲಿಸಿ ನಿರ್ದಾಕ್ಷಿಣ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜನ ಸ್ವತಃ ಮೂಢನಂಬಿಕೆ, ದೈವನಂಬಿಕೆಗಳ ಹೆಸರಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಹಾಗೂ ಬಸುರಿ-ಬಾಣಂತಿಯರ ಮೇಲೆ ಪುರುಷಾಧಿಕಾರದ ದೌರ್ಜನ್ಯ ನಡೆಸಲು ಅವಕಾಶವಿಲ್ಲ. ಅದು ಅಕ್ಷಮ್ಯ. ಜನ ತಮ್ಮ ಅನಿಷ್ಟ ಮತ್ತು ಮೌಢ್ಯಾಚರಣೆಗಳ ನೆಪದಲ್ಲಿ ಮಕ್ಕಳು ಮತ್ತು ಮಹಿಳೆಯರ ಪ್ರಾಣಕ್ಕೆ ಹಾನಿಯುಂಟಾಗಬಹುದಾದ ಅಪಾಯಗಳನ್ನು ತಂದೊಡ್ಡಬಾರದು. ನಮ್ಮ ದೇಶದಲ್ಲಿ ಯಾರೂ ಯಾರಿಗೂ ಜೀವ ಹಾನಿ ಉಂಟುಮಾಡಲು ಅವಕಾಶವಿಲ್ಲ. ಸ್ವತಃ ಹೆತ್ತವರಿಗೂ ಕೂಡ ಮಗುವಿನ ಜೀವ ತೆಗೆಯುವ ಹಕ್ಕಿಲ್ಲ. ಅಂಥದ್ದರಲ್ಲಿ, ಛಳಿ, ಮಳೆ, ಗಾಳಿ, ಹಗಲು, ರಾತ್ರಿಯೆನ್ನದೆ ಎಂಥ ಹೊತ್ತಲ್ಲಿ ಬೇಕಾದರೂ ಮುಟ್ಟಾದ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಹಾಕಿಬಿಡುವ ಇಂಥ ಮಾರಣಾಂತಿಕವಾದ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿಯ ಆಚರಣೆಯನ್ನು ಇನ್ನು ಯಾರೂ ಮುಂದುವರೆಸಬಾರದು ಎಂದು ಎಚ್ಚರಿಸಿದರು.

ಇದನ್ನು ಆಚರಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣಶಿಕ್ಷೆ ನೀಡಲಾಗುವುದು. ನಿಮ್ಮ ಊರುಗಳಲ್ಲಿ ಮಕ್ಕಳ ಮೇಲೆ ನಡೆಯುವ ಎಂಥದೇ ಅನಿಷ್ಟ ಕೃತ್ಯಗಳನ್ನು ಕಂಡಾಕ್ಷಣ ಜನ ಸ್ವಯಂಪ್ರೇರಿತರಾಗಿ 1098 (ಮಕ್ಕಳ ಸಹಾಯವಾಣಿ) ಗೆ ಕರೆ ಮಾಡಿ ತಿಳಿಸಬೇಕು.

ಇಲ್ಲಿ ಕರೆ ಮಾಡಿದವರ ಹೆಸರು ಮತ್ತು ಗುರುತನ್ನು ಗೌಪ್ಯವಾಗಿಡಲಾಗುವುದು. ಹಾಗಾಗಿ ಭಯಪಡದೆ, ಹಿಂಜರಿಯದೆ ಎಲ್ಲರೂ ತಮ್ಮ ಪಾಲಿನ ಸಾಮಾಜಿಕ ಬದ್ಧತೆಯನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.

ನಂತರ ಅವರು ತಾಲ್ಲೂಕಿನ ಹೊಯ್ಸಳಕಟ್ಟೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಅಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲಿ ನಾಪತ್ತೆಯಾಗಿರುವ ಬಸವರಾಜ್, ದಿವ್ಯಾ, ಲೋಹಿತ್ ಎಂಬ ಮೂವರು ಮಕ್ಕಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವಹಿಸಿರುವ ನಿರ್ಲಕ್ಷ್ಯವನ್ನು ಪ್ರಶ್ನಿಸಿ, ನಿರ್ದಾಕ್ಷಿಣ್ಯ ಶಿಸ್ತುಕ್ರಮದ ಎಚ್ಚರಿಕೆ ಕೊಟ್ಟರು.

ಅದೇ ರೀತಿ ಹೊಯ್ಸಳಕಟ್ಟೆ ಸರ್ಕಾರಿ ಶಾಲೆಯಲ್ಲಿ ಸರಿಯಾದ ದಾಖಲೆ ಮತ್ತು ಪತ್ರಗಳನ್ನು ಇಡಲಾಗದೆ ತಡಬಡಾಯಿಸಿದ ಮುಖ್ಯಶಿಕ್ಷಕರು ಹಾಗೂ ಅಕ್ಷರ ದಾಸೋಹದ ಸಂಯೋಜಕರ ಉದಾಸೀನತೆಯನ್ನು ಪ್ರಶ್ನಿಸಿ, ನೊಟಿಸ್ ನೀಡುವ ಎಚ್ಚರಿಕೆಯನ್ನು ನೀಡಿದರು.

ನಂತರ ಅದೇ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇನಹಳ್ಳಿಯಲ್ಲಿ ತಳಪಾಯವನ್ನೇ ಭದ್ರಪಡಿಸದೇ ಅವೈಜ್ಞಾನಿಕವಾದ ಕಳಪೆ ಕಾಮಗಾರಿ ಮಾಡಿ ನಿರ್ಮಿಸಲು ಮುಂದಾಗಿದ್ದ ಶಾಲಾ ಕೊಠಡಿಗೆ ಸಂಬಂಧಿಸಿದಂತೆ ಅದರ ಉಸ್ತುವಾರಿ ಹೊತ್ತಿದ್ದ ಇಂಜಿನಿಯರ್’ ಕುಮಾರನಾಯ್ಕ’ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಕ್ಕಳು ಬಂದು ಕೂರುವ ಕೊಠಡಿಗಳನ್ನು ಇಷ್ಟು ಅಜಾಗರೂಕವಾಗಿ ನಿರ್ಮಾಣ ಮಾಡುತ್ತಿರುವ ಧೋರಣೆಯನ್ನು ಖಂಡಿಸಿದರು.

ತಾಲ್ಲೂಕು ಆಡಳಿತದೊಂದಿಗೆ ಸಭೆ ::

ಮಧ್ಯಾಹ್ನ 3.45’ರ ಹೊತ್ತಿಗೆ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಆಗಮಿಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ ಕೆ ಟಿ ತಿಪ್ಪೇಸ್ವಾಮಿಯವರು, ತಾಲ್ಲೂಕಿನ ವಿವಿಧ ಇಲಾಖೆಗಳ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಿದ್ಯುತ್ ಲೈನುಗಳ ತಂತಿ ಶಾಲಾ ಆವರಣ ಹಾಗೂ ಶಾಲೆಗಳ ಮೇಲಿಂದ ಹಾದುಹೋಗಿರುವುದನ್ನು ತುರ್ತಾಗಿ ತೆಗೆದುಹಾಕುವ ಆದೇಶವಿದ್ದರೂ ಇದುವರೆಗೂ ಅದನ್ನು ನಿರ್ವಹಿಸದೆ ಇರುವ ಬೆಸ್ಕಾಂ ಇಲಾಖೆಯನ್ನು ಎಚ್ಚರಿಸಿದರು.

ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಗಳು ಕೊಳವೆ ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಎಳೆಯ ಮಕ್ಕಳು ಬೀಳದಂತೆ ವಹಿಸಿರುವ ಮುಂಜಾಗ್ರತಾ ಕ್ರಮಗಳ ಮಾಹಿತಿ ಪಡೆದರು. ಪಟ್ಟಣದ ಪುರಸಭೆಯ ಬೇಜವಾಬ್ದಾರಿ ಹಾಗೂ ಹೊಣೆಗೇಡಿ ವರ್ತನೆಗಳನ್ನು ಖಂಡಿಸಿ, ಅವರಿಗೆ ನೊಟೀಸ್ ನೀಡುವ ಎಚ್ಚರಿಕೆ ಕೊಟ್ಟರು.

ಸಭೆಯಲ್ಲಿ ತಾಲ್ಲೂಕಿನ ಎಲ್ಲ ಇಲಾಖೆಗಳ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ಬಾರದೆ ತಪ್ಪಿಸಿಕೊಂಡಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಎನ್ ಬಿ ಗವಿರಂಗಯ್ಯ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಂಜುಳ’ರವರನ್ನು ಕರೆ ಮಾಡಿ ಕರೆಸಿ, ನಿಗದಿತ ಸಮಯಕ್ಕೆ ಸರಿಯಾಗಿ ಸಭೆಗೆ ಬಾರದೆ ಅವರು ತೋರಿದ ಬೇಜವಾಬ್ದಾರಿ ವರ್ತನೆಯನ್ನು ಎಲ್ಲರೆದುರು ನಿಲ್ಲಿಸಿ ಪ್ರಶ್ನಿಸಿದರು.

ತಾಲ್ಲೂಕು ಆಡಳಿತ ಮತ್ತು ಕೆಲವು ಇಲಾಖೆ ಹಾಗೂ ಕೆಲಮಂದಿ ಅಧಿಕಾರಿಗಳ ಕಾರಣದಿಂದ ಆಗಿರುವ ಎಲ್ಲ ಲೋಪಗಳನ್ನು ಶೀಘ್ರವೇ ಸರಿಪಡಿಸಿ, ತಾಲ್ಲೂಕು ದಂಡಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ತಮ್ಮೆಲ್ಲಾ ಹೊಣೆಗಾರಿಕೆಗಳನ್ನು ಅನುಷ್ಠಾನಗೊಳಿಸುವಂತೆ ಎಚ್ಚರ ಕಾಯಬೇಕು ಎಂದು ತಹಸೀಲ್ದಾರರಿಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ. ಕೆ ಟಿ ತಿಪ್ಪೇಸ್ವಾಮಿ ಸೂಚಿಸಿದರು.


ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಐಪಿ ಸೆಟ್’ಗೂ ಬಂತು  ಆಧಾರ್ ಕಾರ್ಡ್ !!

0

ಚಿಕ್ಕನಾಯಕನಹಳ್ಳಿ : ಐಪಿ ಸೆಟ್’ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.

ಇದರ  ಹಿಂದೆ ವಿದ್ಯುತ್ತಚ್ಛಕ್ತಿ ಸೌಲಭ್ಯವನ್ನು ಖಾಸಗೀಕರಣ ಮಾಡಿ, ರೈತರಿಂದ ದುಪ್ಪಟ್ಟು ಶುಲ್ಕ ವಸೂಲಿಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿ, ಐಪಿ ಸೆಟ್ಟುಗಳಿಗೆ ರೈತರ ಆಧಾರ್ ಕಾರ್ಡ್ ಜೋಡಣೆ ಪ್ರಕ್ರಿಯೆಯನ್ನು ವಿರೋಧಿಸಿ ರೈತಸಂಘದವರು ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ, ತಾಲ್ಲೂಕು ದಂಡಾಧಿಕಾರಿ ಕೆ ಪುರಂದರ’ರವರ ಮುಖೇನ ಇಂಧನ ಸಚಿವ ಕೆ ಜೆ ಜಾರ್ಜ್’ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೂಲ ಸಿದ್ಧಾಂತಗಳ ಯಜಮಾನಿಕೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ’ಯ ತಾಲ್ಲೂಕು ಸಮಿತಿ ಕಾರ್ಯದರ್ಶಿ ಯದುಕುಮಾರ್, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರೈತರು ಐಪಿ ಸೆಟ್ಟುಗಳನ್ನು ಬಳಸುತ್ತಿದ್ದಾರೆ. 10 ಹೆಚ್ ಪಿ ವರೆಗಿನ ರೈತರ ಐಪಿ ಸೆಟ್ಟುಗಳಿಗೂ ಯಾವುದೇ ವಿದ್ಯುತ್ ದರ ಇರುವುದಿಲ್ಲ. ಆದರೂ ಈಗ ಐಪಿ ಸೆಟ್ಟುಗಳಿಗೆ ರೈತರು ಆಧಾರ್ ಕಾರ್ಡ್ ಜೋಡಣೆ ಮಾಡಿಸಬೇಕೆಂದು ಆದೇಶ ಹೊರಡಿಸಿರುವುದು ಯಾತಕ್ಕಾಗಿ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದು ಈಗ ರೈತರಲ್ಲಿ ಅನುಮಾನ ಮೂಡಿಸುತ್ತಿದೆ ಎಂದರು.

ಕೇಂದ್ರ ಸರ್ಕಾರ ಹಿಂದಿನ ಲೋಕಸಭೆಯಲ್ಲಿ “ವಿದ್ಯುತ್ ಖಾಸಗೀಕರಣ” ಮಾಡುವ ಮಸೂದೆಯನ್ನು ಮಂಡಿಸಿ ಸದನಸಮಿತಿಗೆ ಸಲ್ಲಿಸಿರುವುದು. ಇದನ್ನು ಗಮನಿಸಿರುವ ರೈತರಲ್ಲಿ ಈ ಆಧಾರ್ ಕಾರ್ಡ್ ಜೋಡಣೆಯ ಆದೇಶದ ಹಿಂದೆ ವಿದ್ಯುತ್ ಖಾಸಗೀಕರಣ ಮಾಡಲು ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳುತ್ತಿರಬಹುದು ಎಂಬ ಅಭಿಪ್ರಾಯ ಮೂಡಿದೆ. ಸರ್ಕಾರ ಇದಕ್ಕೆ ಸ್ಪಷ್ಟವಾಗಿ ಉತ್ತರಿಸಬೇಕು ಎಂದರು.

ಅದೇ ರೀತಿ ಕರ್ನಾಟಕ ರಾಜ್ಯದ ಹಾಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಕೂಡ, ಚುನಾವಣೆಯ ಮೊದಲು ತಾವು ಎಂದಿಗೂ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂಬ ಭರವಸೆ ಕೊಟ್ಟಿತ್ತು. ಆದರೆ, ಅಧಿಕಾರ ವಹಿಸಿಕೊಂಡ ಮೇಲೆ ‘ವಿದ್ಯುತ್ ಖಾಸಗೀಕರಣ’ ಮಾಡುವುದಿಲ್ಲವೆಂದು ವಿಧಾನ ಸಭೆಯಲ್ಲಿ ನಿರ್ಣಾಯಕವನ್ನು ಮಂಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಬೇಕಿತ್ತು. ರಾಜ್ಯ ಸರ್ಕಾರ ಇದುವರೆಗೂ ಆ ಕೆಲಸವನ್ನು ಮಾಡಲಿಲ್ಲ. ನೆರೆಯ ರಾಜ್ಯಗಳಾದ ಸೀಮಾಂಧ್ರ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳದ ಸರ್ಕಾರಗಳು “ವಿದ್ಯುತ್ ಖಾಸಗೀಕರಣ” ಮಾಡುವುದಿಲ್ಲ ಎಂದು ನಿರ್ಣಾಯಕವನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿವೆ. ಅದೇ ರೀತಿ ನಮ್ಮ ರಾಜ್ಯದ ರೈತರ ಹಿತವನ್ನು ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿವೆ. ಆದರೂ ಸರ್ಕಾರ ತನ್ನ ಉದಾಸೀನ ಧೋರಣೆಯನ್ನು ಬಿಟ್ಟು, ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲ. ಅನಿವಾರ್ಯವಾಗಿ ರಾಜ್ಯದ ರೈತರು ಈಗ ಪ್ರತಿಭಟನೆ, ಹೋರಾಟ ಮಾಡುತ್ತಿದ್ದೇವೆ. ಮುಂದೆ ಇದು ಇನ್ನೂ ತೀವ್ರಗೊಳ್ಳಲಿದೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ, ರೈತ ಮಹಿಳೆ ಭಾಗ್ಯಮ್ಮ, ಸೀಬಿಲಿಂಗಯ್ಯ, ಯದುಕುಮಾರ್, ಕುಮಾರಯ್ಯ, ರೇವಣ್ಣ, ಸೈಯದ್ ಕಲಂದರ್, ಬಸವರಾಜು, ನಟರಾಜು ಸೇರಿದಂತೆ ಹಲವು ಮಂದಿ ರೈತರು ಪಾಲ್ಗೊಂಡಿದ್ದರು.


ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಅಭಯ ಹಸ್ತ ಆಂಜನೇಯ ಸ್ವಾಮಿಗೆ ತಪ್ಪದ ಅಲೆದಾಟ!

ವರದಿ: ಸಂಚಲನ, ಚಿ.ನಾ.ಹಳ್ಳಿ


ಚಿಕ್ಕನಾಯಕನಹಳ್ಳಿ : ಪಟ್ಟಣದ ಪ್ರತಿಷ್ಠಿತ ಹಳೆಯೂರು ಆಂಜನೇಯ ಸ್ವಾಮಿ ದೇವಳದ ಮೂಲಭೂತ ಸೌಕರ್ಯ ಮತ್ತು ಸಮಸ್ಯೆಗಳಿಗೆ ಸ್ಪಂದಿಸದ ತಾಲ್ಲೂಕಿನ ಮುಜುರಾಯಿ ಇಲಾಖೆ ಅಧಿಕಾರಿಗಳ ಬಗ್ಗೆ ದೇವಸ್ಥಾನ ಜೀರ್ಣೋದ್ಧಾರ ಮಂಡಳಿ ಹಾಗೂ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಜುರಾಯಿ ದೇಖರೇಕಿಗೆ ಸಂಬಂಧಪಡುವ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರಾ-ರಥೋತ್ಸವ ಮುಂದಿನ ತಿಂಗಳ ಎರಡು ಮೂರನೇ ವಾರದಲ್ಲಿ
ನೆರವೇರಲಿದೆ. ಅದಕ್ಕೆ ಸಂಬಂಧಿಸಿದ ತಯಾರಿಗಳು ಈಗಿನಿಂದಲೇ ಪ್ರಾರಂಭಗೊಂಡಿವೆ.

 

ಚಿತ್ರ: ಅಂಕನಹಳ್ಳಿ ಶ್ರೀನಿವಾಸ್

ಮುಜುರಾಯಿ ಸಹಯೋಗ ಮತ್ತು ಸಹಕಾರವಿಲ್ಲದೆ ಜಾತ್ರೆಯ ತಯಾರಿಗಳಿಗೆ ತೊಡಕುಂಟಾಗುತ್ತಿದೆ ಎಂದು ಜೀರ್ಣೋದ್ಧಾರ ಸಮಿತಿಯ ಹಿರಿಯ ಸದಸ್ಯರಾದ ಅಂಕನಹಳ್ಳಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸುತ್ತಾರೆ.

ದೇವಸ್ಥಾನದ ಹಿಂಬದಿಯಲ್ಲಿರುವ ಐತಿಹಾಸಿಕ ಕಲ್ಯಾಣಿಯ ಮಾಡುಗೋಡೆ ಕುಸಿದುಬಿದ್ದಿದೆ. ಇದರ ದುರಸ್ತಿ ಕಾರ್ಯ ತ್ವರಿತವಾಗಿ ನಡೆಯಬೇಕಿತ್ತು. ಆದರೆ, ಕಲ್ಯಾಣಿಯ ಸ್ಥಿತಿಯನ್ನು ಒಮ್ಮೆ ಬಂದು ನೋಡುವ ಕನಿಷ್ಠ ಜವಾಬ್ದಾರಿಯನ್ನು ತಾಲ್ಲೂಕು ಮುಜುರಾಯಿ ಇಲಾಖೆಯ ಭಾರತಿ’ರವರು ತೋರುತ್ತಿಲ್ಲ. ನಾವು ಚಿತ್ರಸಹಿತ ವಿವರಗಳನ್ನು ಅವರಿಗೆ ತಲುಪಿಸಿದರೂ ಅವರು ಕಲ್ಯಾಣಿ ದುರಸ್ತುಗೊಳಿಸುವ ಹೊಣೆಗಾರಿಕೆಯನ್ನು ಪ್ರದರ್ಶಿಸುತ್ತಿಲ್ಲ. ಲಕ್ಷಾಂತರ ಮಂದಿ ಭಕ್ತಾದಿಗಳು ಬಂದು ಸೇರುವ ಅಭಯಹಸ್ತ ಆಂಜನೇಯ ಸ್ವಾಮಿಯ ರಥೋತ್ಸವದ ತಯಾರಿಗಳಲ್ಲಿರುವ ನಾವು ಪದೇಪದೇ ಮುಜುರಾಯಿ ಇಲಾಖೆಯ ಅಧಿಕಾರಿಗಳ ಸಮಕ್ಷಮ ಹೋಗಿ ನಿಲ್ಲಬೇಕೇ ಎಂದು ಹಿರಿಯರಾದ ಅಂಕನಹಳ್ಳಿ ಶ್ರೀನಿವಾಸ್’ರವರು ಬೇಸರ ವ್ಯಕ್ತಪಡಿಸಿದರು.

ಇಂದಿನ ಚಿತ್ರ

ಹೀಗಿತ್ತು ನೋಡಾ ಕಲ್ಯಾಣಿ

ಮನಮೋಹಕ ಕಲ್ಯಾಣಿಯ ಹಳೆಯ ಚಿತ್ರ. ಈಗ ಹುಲ್ಲಿನಿಂದ ಮುಚ್ಚಿ ಹೋಗಿರುವ ಚಿತ್ರ ಮೇಲಿನದು.

ಅರ್ಚಕರ ಪಗಾರಕ್ಕೂ ವಿಳಂಬ : ಪಟ್ಟಣದ ಪ್ರಸನ್ನರಾಮೇಶ್ವರ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ’ರವರು, ತಾವು ಸಲ್ಲಿಸುವ ಅರ್ಚಕ ಸೇವೆಗಾಗಿ ಸರ್ಕಾರ ಕೊಡಮಾಡುವ ಪಗಾರ ಪಡೆದುಕೊಳ್ಳಲಿಕ್ಕಾಗಿ ತಾಲ್ಲೂಕಿನ ಮುಜುರಾಯಿ ಇಲಾಖೆ ಅಧಿಕಾರಿಗಳ ಬಳಿ ತಾವು ದಿನೇದಿನೇ ಹೋಗಿ ಗೋಗರೆಯಬೇಕಾದ ಸ್ಥಿತಿಯನ್ನು ತೋಡಿಕೊಂಡರು.

ನಾವು ದೇವರ ಕೆಲಸ ಮಾಡುವವರು. ನಮಗೆ ಹೀಗೆ ಈ ಅಧಿಕಾರಿಗಳು ಸತಾಯಿಸುತ್ತಾರೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಓದಿದ್ದೆವು. ಆದರಿಲ್ಲಿ ದೇವರ ಕೆಲಸ ಮಾಡುವವರ ಸಂಬಳಕ್ಕೂ ವಿನಾಕಾರಣ ಕಾಲ ವಿಳಂಬ ಮಾಡಿ ಅಲೆದಾಡಿಸುತ್ತಾರೆ ಎಂದು ಅರ್ಚಕ ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು.

ದೇವಸ್ಥಾನದ ಜಮೀನು ::
ಹಿಂದೆ ರಾಜಪ್ರಮುಖರು ಹಳೆಯೂರು ಆಂಜನೇಯ ಸ್ವಾಮಿ ದೇವಸ್ಥಾನಕ್ಕಾಗಿ ಬರೆದುಕೊಟ್ಟಿದ್ದ ಜಮೀನನ್ನು ಗುರ್ತು ಮಾಡಿಕೊಡಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗೋಗರೆದು ಸಾಕಾಗಿದೆ.

ತಾಲ್ಲೂಕಿನ ಭಾವನಹಳ್ಳಿ ಸರ್ವೆ ನಂಬರ್ 62/3’ರಲ್ಲಿ ಹಳೆಯೂರು ಆಂಜನೇಯ ದೇವಸ್ಥಾನಕ್ಕಾಗಿ ರಾಜಪ್ರಮುಖರು ಬರೆದುಕೊಟ್ಟ ಜಮೀನಿದೆ. ಅದರ ದಾಖಲೆಗಳನ್ನು ಕೊಟ್ಟು ದೇವಸ್ಥಾನದ ಜಮೀನು ಗುರ್ತು ಮಾಡಿಕೊಡುವಂತೆ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ತಾಲ್ಲೂಕು ಆಡಳಿತ ಹಾಗೂ ಅಧಿಕಾರಿಗಳು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಮಾನ್ಯ ಶಾಸಕರಾದ ಸಿ ಬಿ ಸುರೇಶ್ ಬಾಬುರವರು ಇತ್ತ ಗಮನ ಹರಿಸಬೇಕು ಎಂದು ಅಂಕನಹಳ್ಳಿ ಶ್ರೀನಿವಾಸ್, ಅರ್ಚಕ ಸತ್ಯನಾರಾಯಣ ಹಾಗೂ ಆಂಜನೇಯ ಸ್ವಾಮಿಯ ಭಕ್ತಾದಿಗಳು ಆಗ್ರಹಿಸಿದರು.

ಅಗಲಿದ ಅನ್ನ ಮತ್ತು ಅಕ್ಷರದ ಆದಿಬಂಧು

ಹಿರಿಯ ದಲಿತ ಮುಖಂಡ, ಜನಾನುರಾಗಿ, ಅಪ್ರತಿಮ ಹೋರಾಟಗಾರ ನಾರಾಯಣರಾಜು ಅವರಿಗೆ ಚಿಕ್ಕನಾಯಕನಹಳ್ಳಿಯ ಸಂಚಲನ ಅವರ ನುಡಿನಮನದ ಲೇಖನ ಪಬ್ಲಿಕ್ ಸ್ಟೋರಿ ಓದುಗರಿಗಾಗಿ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಬನಶಂಕರಿ ನಗರದ ತಮ್ಮ ತೋಟದ ಮನೆಯಲ್ಲಿ ವಾಸವಿದ್ದ ನಾರಾಯಣರಾಜು(87) ರವರು ವಯೋಸಹಜ ಸಾವನ್ನಪ್ಪಿದ್ದಾರೆ.

ಎಂಭತ್ತೇಳು ವರ್ಷಗಳ ತುಂಬು ಜೀವನ ನಡೆಸಿರುವ ಇವರು, ಪತ್ನಿ ರತ್ನಮ್ಮ ಮತ್ತು ಪುತ್ರ ಚಿದಾನಂದಮೂರ್ತಿಯವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಅವರ ತೋಟದಲ್ಲೇ ನೆರವೇರಿಸಲಾಯ್ತು.

ಜಿಲ್ಲೆಯ ದಸಂಸ ಮೊದಲ ತಲಮಾರು ::

ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯಲ್ಲಿ ಹಾಗೂ ತಾಲ್ಲೂಕಿನಲ್ಲಿ ಕಟ್ಟಿ ಬೆಳೆಸಿದವರಲ್ಲಿ ಮೊದಲ ತಲಮಾರಿನ ಹಿರಿಯರು ಈ ನಾರಾಯಣರಾಜರು. ಜಿಲ್ಲೆಯಲ್ಲಿ ದಸಂಸ ಹುಟ್ಟಿದಾಗಿನಿಂದಲೂ ಅದರ ಮುಖ್ಯಾಂಗವಾಗಿ ನಿರಂತರ ದುಡಿದವರು ಇವರು.

ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿ ಸರ್ಕಾರಿ ನೌಕರಿ ಗಳಿಸಿಕೊಂಡಿದ್ದ ಇವರು, ತಮಗೆ ಸಿಗುತ್ತಿದ್ದ ತಿಂಗಳ ಸಂಬಳದಲ್ಲಿ ಕುಟುಂಬ ನಿರ್ವಹಣೆಯ ಜೊತೆಗೆ ದಸಂಸ ಹೋರಾಟಗಾರರ ಹೊಟ್ಟೆಗೂ ಅನ್ನವನ್ನು ಕೊಡಿಸುವ ಮಮತೆಯನ್ನಿಟ್ಟುಕೊಂಡಿದ್ದವರು. .

ಎಪ್ಪತ್ತು-ಎಂಭತ್ತು-ತೊಂಭತ್ತರ ದಸಂಸದ ಎಲ್ಲ ಕಾರ್ಯಕರ್ತರು, ಎಲ್ಲ ಹೋರಾಟಗಾರರು ನಾರಾಯಣರಾಜು ರವರ ತಿಂಗಳ ಸಂಬಳದಲ್ಲಿ ನಿತ್ಯದ ತಮ್ಮ ಹಸಿವನ್ನು ನೀಗಿಕೊಂಡವರೇ. ಇವರು ತಿಪಟೂರು ಭಾಗದಲ್ಲಿ ದಲಿತ ಚಳವಳಿ ಕಟ್ಟುತ್ತಿದ್ದ ಕಾಲದಲ್ಲಿ, ದಲಿತ ಸಂಘರ್ಷ ಸಮಿತಿಯ ಹೋರಾಟಗಾರರ ಊಟ-ತಿಂಡಿಗೆಂದೇ ತಿಪಟೂರು ನಗರದಲ್ಲಿ ಊಟದ ಮೆಸ್ಸೊಂದನ್ನು ಗೊತ್ತುಮಾಡಿ, ಹೋರಾಟಗಾರ-ಕಾರ್ಯಕರ್ತರ ಹೊಟ್ಟೆ ತುಂಬಿಸುತ್ತಿದ್ದರು. ತಮ್ಮ ತಿಂಗಳ ಸಂಬಳದಲ್ಲಿ ಪ್ರತೀ ತಿಂಗಳು ಮೆಸ್ಸಿನ ಊಟದ ಬಿಲ್ ಪಾವತಿಸುತ್ತಿದ್ದರು ಎಂದು ಕುಂದೂರು ತಿಮ್ಮಯ್ಯ ಸ್ಮರಿಸಿಕೊಂಡರು

ತಮ್ಮೊಡನೆ ಸದಾ ಜೋಳಿಗೆಯಂಥದ್ದೊಂದು ಬ್ಯಾಗನ್ನಿಟ್ಟುಕೊಂಡೇ ಮನೆಯಿಂದ ಹೊರಡುತ್ತಿದ್ದ ನಾರಾಯಣರಾಜು ರವರು, ಇಂದು ಆ ಜೋಳಿಗೆಯನ್ನು ನಮಗೆ ಕಾಣ್ಕೆ ಕೊಟ್ಟು ನಮ್ಮನ್ನೆಲ್ಲ ಇಲ್ಲಿ ಬಿಟ್ಟುಹೋಗಿದ್ದಾರೆ. ಆ ಜೋಳಿಗೆಯಲ್ಲಿ ಅರ್ಧ ಶತಮಾನಕ್ಕೂ ಮೀರಿದ ಚಳವಳಿ ಅನುಭವವಿದೆ. ಸಂಘಟನೆಯ ಕಾವಿದೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಕೆಚ್ಚಿದೆ. ಅವರ ಈ ಜೋಳಿಗೆಯನ್ನು ನಾವು ನಮ್ಮ ಮುಂದಿನ ತಲಮಾರಿಗೆ ದಾಟಿಸುವವರೆಗೂ ತುಡಿಯಬೇಕಿದೆ.

ನಾರಾಯಣರಾಜು ಅವರಲ್ಲಿದ್ದ ಸಂಘರ್ಷದ ತುಡಿತವನ್ನು ಮುಂದಿನ ತಲಮಾರುಗಳವರೆಗೂ ನಾವು ಕೊಂಡೊಯ್ಯಬೇಕು ಎಂದು ಕೆ.ದೊರೆರಾಜು ಎಚ್ಚರಿಕೆಯ ಮಾತುಗಳನ್ನು ಆಡಿ ನಮನ ಸಲ್ಲಿಸಿದರು.

ಸರ್ವೀಸ್ ಟು ಸೊಸೈಟಿ ಎಂಬ ಧ್ಯೇಯವನ್ನು ಸದಾ ಪಾಲಿಸುತ್ತಿದ್ದ ನಾರಾಯಣರಾಜು ಅವರು, ತಾವು ದುಡಿದಿದ್ದರಲ್ಲಿ ಅರ್ಧಷ್ಟನ್ನಾದರೂ ಸಮುದಾಯಕ್ಕೆ ನೀಡಬೇಕು ಎಂದು ನಂಬಿದ್ದವರು. ಅವರು ತಂದುಕೊಟ್ಟ ಮೆಸ್ಸಿನ ಊಟದ ಟೋಕನ್ ಮತ್ತು ಬಿಳೇಹಾಳೆ ಹಾಗೂ ಪುಸ್ತಕಗಳಿಂದ ಓದಿ ಬೆಳೆದ ಪೀಳಿಗೆಯವರು ನಾವು. ನಮ್ಮ ಬಡ ಕುಟುಂಬಗಳ ನೂರಾರು ವಿದ್ಯಾರ್ಥಿಗಳಿಗೆ ಅನ್ನ ಮತ್ತು ವಿದ್ಯೆಗೆ ಸಹಾಯ ನೀಡಿದ ಮಹಾನುಭಾವರು ಇವರು ಎಂದು ಜಿಲ್ಲೆಯ ಪ್ರಮುಖ ದಲಿತ ಮುಖಂಡರಾದ ಬೆಲ್ಲದಮಡು ಕೃಷ್ಣಪ್ಪನವರು ನಾರಾಯಣರಾಜು ರನ್ನು ಸ್ಮರಿಸಿಕೊಂಡರು.

ನಾಡಿನಾದ್ಯಂತ ದಸಂಸ ಕಟ್ಟಿದ ಹಲವಾರು ಹೋರಾಟಗಳ ಕರಪತ್ರ, ಪತ್ರಿಕಾ ಸುದ್ದಿ, ಬ್ರೋಶರ್, ಬ್ಯಾನರ್, ಪೋಸ್ಟರ್, ಸಲ್ಲಿಸಿದ ಮನವಿಪತ್ರ, ಚಳವಳಿ ಸಾಹಿತ್ಯ ಇತ್ಯಾದಿ ದಾಖಲೆಗಳನ್ನು ಜೋಪಾನ ಮಾಡಿ ಕಾಪಿಟ್ಟುಕೊಂಡವರು ಅಪರೂಪ ಎಂದೇ ಹೇಳಬಹುದು.

ಆದರೆ, ನಾರಾಯಣರಾಜು’ರವರು ದಸಂಸದ ಅಂಥ ಅಪರೂಪದ ಕಾರ್ಯಕರ್ತರಲ್ಲಿ ಬಹುಮುಖ್ಯರು. ಸಂಘರ್ಷ ಸಮಿತಿಯ ಪ್ರತಿಯೊಂದು ಹೋರಾಟದ ಕರಪತ್ರ, ಪೇಪರ್ ಕಟಿಂಗ್ಸ್, ಪೋಟೋ, ಆಡಿಯೋ ರೆಕಾರ್ಡಿಂಗ್ಸ್, ಮತ್ತಿತರೆ ದಾಖಲೆಗಳನ್ನೆಲ್ಲ ಅವರು ಬಹಳ ಎಚ್ಚರಿಕೆಯಿಂದ ಸಂಗ್ರಹಿಸಿಟ್ಟುಕೊಂಡಿದ್ದರು. ಅದರಲ್ಲಿ ಮುಖ್ಯವಾಗಿ, 1990ರ ದಶಕದಲ್ಲಿ ತಿಪಟೂರಿನಲ್ಲಿ ನಡೆದ ಮೂರು ದಿನಗಳ ಅಧ್ಯಯನ ಶಿಬಿರದ ಎಲ್ಲಾ ಗೋಷ್ಠಿಗಳ ಮಾತುಕತೆಯನ್ನು ನಾರಾಯಣರಾಜರು ರೆಕಾರ್ಡಿಂಗ್ ಮಾಡಿಟ್ಟುಕೊಂಡಿದ್ದರು.

ಅಂದಿನ ಆ ಶಿಬಿರದಲ್ಲಿ ಪ್ರೊ.ಬಿ. ಕೃಷ್ಣಪ್ಪನವರು “ದಲಿತ ಸಂಘರ್ಷ ಸಮಿತಿಯ ತಾತ್ವಿಕ ನೆಲೆಗಳು” ಎಂಬ ವಿಷಯದ ಕುರಿತು ಸುದೀರ್ಘವಾಗಿ ಮಾತನಾಡಿದ್ದರು. ಅದಕ್ಕೆ ಕೆ.ಬಿ ಸಿದ್ದಯ್ಯನವರು ಅಷ್ಟೇ ಸುದೀರ್ಘವಾಗಿ ಪ್ರತಿಕ್ರಿಯಿಸಿದ್ದರು. ಆಯೆಲ್ಲ ವಿಚಾರ, ವಾದ-ವಾಗ್ವಾದ, ಮಾತು-ಕತೆ ಎಲ್ಲವೂ ನಾರಾಯಣರಾಜುರವರ ಕ್ಯಾಸೆಟ್ಟುಗಳಲ್ಲಿ ರೆಕಾರ್ಡ್ ಆಗಿತ್ತು. ಮತ್ತದು ಇಂದು ಉಪಯೋಗಕ್ಕೆ ಬರುತ್ತಿದೆ ಎಂದು ಬರಹಗಾರ ಗುರುಪ್ರಸಾದ್ ಕಂಟ್ಲಗೆರೆ ಮಾತನಾಡಿದರು.

ಗುರುಪ್ರಸಾದ್ ಕಂಟಲಗೆರೆ

ದಸಂಸ 50’ರ ಸಂದರ್ಭದಲ್ಲಿ ತುಮಕೂರು ದಲಿತ ಸಂಘರ್ಷ ಸಮಿತಿ ವತಿಯಿಂದ ನಾರಾಯಣರಾಜು ರವರು ಸಂಪಾದಿಸಿಕೊಟ್ಟ ‘ದಲಿತ ಚಳುವಳಿಯ ತಾತ್ವಿಕ ನೆಲೆಗಳು’ ಮಹದ್ಕೃತಿಯನ್ನು ಬಿಡುಗಡೆಗೊಳಿಸಲಾಗಿತ್ತು. ನಮ್ಮೆಲ್ಲರ ಸ್ವಾಭಿಮಾನದ ಸಂಕೇತವಾಗಿದ್ದ ನಾರಾಯಣರಾಜು’ರವರು ಪ್ರೊ.ಬಿ.ಕೃಷ್ಣಪ್ಪನವರು ಪ್ರತಿಪಾದಿಸಿದ ನಮ್ಮ ಧರ್ಮ-ಬೌದ್ಧ ಧರ್ಮ,
ನಮ್ಮ ಪಕ್ಷ-ಬಹುಜನ ಸಮಾಜ ಪಕ್ಷ ಹಾಗೂ ನಮ್ಮ ವಾದ-ಅಂಬೇಡ್ಕರ್ ವಾದ ಎಂಬುದನ್ನು ನಿರ್ವಿವಾದವಾಗಿ ತಮ್ಮ ಜೀವನಪೂರ್ತಿ ಅನುಸರಿಸಿದಂಥವರು.

ತನ್ಮೂಲಕ ನನ್ನಂತಹ ನೂರಾರು ಯುವಕರಿಗೆ ಅನುಕರಣೀಯರಾದವರು. 85ರ ವಯಸ್ಸನ್ನು ದಾಟಿದ ಮೇಲೂ ಅವರು, ಜಿಲ್ಲೆಯಲ್ಲಿ ಎಲ್ಲೇ ದಸಂಸ ಕಾರ್ಯಕ್ರಮ ಇದ್ದರೆ, ಹೆಗಲಿಗೊಂದು ಜೋಳಿಗೆ-ಬ್ಯಾಗ್ ತಗುಲಾಕಿಕೊಂಡು ತಮ್ಮ ಹಾಜರಿ ಕೊಟ್ಟೇಬಿಡುತ್ತಿದ್ದರು. ಅವರಿಲ್ಲದ ದಸಂಸ ತನ್ನ ಪಿತೃತ್ವಶಕ್ತಿಯನ್ನು ಕಳೆದುಕೊಂಡಂತಾಯ್ತು ಅನಿಸುತ್ತಿದೆ ಎಂದು ಭಗತ್ ಕುಂದೂರು ವಿಷಾದ ವ್ಯಕ್ತಪಡಿಸಿದರು.

ಗಣ್ಯರ ಸಂತಾಪ ::
ಶಾಸಕರಾದ ಸಿ ಬಿ ಸುರೇಶ್ ಬಾಬು’ರವರು ನಾರಾಯಣರಾಜು ರವರ ಅಂತಿಮ ದರ್ಶನ ಪಡೆದರು. ತಾಲ್ಲೂಕಿನ, ಜಿಲ್ಲೆಯ, ರಾಜ್ಯದ ಹಲವು ಕಡೆಗಳಿಂದ ಹೋರಾಟಗಾರರು, ಸಾಹಿತಿಗಳು, ಜನಪರ ಕಾರ್ಯಕರ್ತರು, ಪ್ರಗತಿಪರರು, ಬುದ್ಧಿಜೀವಿಗಳು ಆಗಮಿಸಿ ನಾರಾಯಣರಾಜು ರವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ತಾಲೂಕು ದಸಂಸ, ಜಿಲ್ಲೆಯ ದಸಂಸ ಎಲ್ಲ ಬಣಗಳ ಬಹುತೇಕ ಎಲ್ಲ ಪದಾಧಿಕಾರಿಗಳು, ಸದಸ್ಯರು ನಾರಾಯಣರಾಜು ರವರ ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು.

__ಸಂಚಲನ

ಕೆಂಪೇಗೌಡರ ಜಯಂತಿ: ವಕೀಲ ಧನಫಾಲ್

ತುರುವೇಕೆರೆ: ತಾಲ್ಲೂಕು ಒಕ್ಕಲಿಗರ ಸಂಘ ಹಾಗು ತಾಲ್ಲೂಕು ಆಡಳಿತದ ವತಿಯಿಂದ ಜೂನ್ 27 ರಂದು ಪಟ್ಟಣದ ವೈ.ಟಿ ರಸ್ತೆಯಲ್ಲಿರುವ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವನ್ನು ಆಚರಿಸಲಾಗುತ್ತಿದೆ ಎಂದು ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಎಚ್.ಧನಫಾಲ್ ತಿಳಿಸಿದರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಬಿಜಿಎಸ್ ಸಮುಧಾಯ ಭವನದ ಕಚೇರಿಯಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು

ಒಕ್ಕಲಿಗ ನೌಕರರ ಸಂಘ, ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘ, ಹಾಗೂ ಕೆಂಪೇಗೌಡ ಯುವಸೇನೆ ಇವುಗಳ ಸಹಯೋಗದೊಂದಿಗೆ ಗುರುವಾರ ಬೆಳಿಗ್ಗೆ 10-30ಕ್ಕೆ ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಶಾಸಕರಾದ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಚ್.ಧನಪಾಲ್ ಅವರು ವಹಿಸಲಿದ್ದಾರೆ. ಅದೇ ರೀತಿ ಮಾಜಿ ಶಾಸಕರುಗಳಾದ ಮಸಾಲ ಜಯರಾಮ್, ಎಚ್.ಬಿ.ನಂಜೇಗೌಡ, ರುದ್ರಪ್ಪ ಸೇರಿದಂತೆ ಅನೇಕ ಗಣ್ಯರು ಹಾಗು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದಲ್ಲಿ ನೂರಾರು ಯುವಕರು, ಸಮುದಾಯದವರು ಬೈಕ್ ರ್ಯಾಲಿ ಹೊರಡಲಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಿಂದ ಕೆಂಪೇಗೌಡರ ಪ್ರತಿಮೆಯನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತಾ ಸಾಗುವುದು. ಹಾಗು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜರುಗಲಿದೆ. ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಮೈಸೂರಿನ ಡಾ.ಮಂಜುನಾಥ್ ರವರು ಕೆಂಪೇಗೌಡರ ಸಾಧನೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ಒಕ್ಕಲಿಗರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಂ.ಎನ್.ಚಂದ್ರೇಗೌಡ ಮಾತನಾಡಿ, ನಾಡಪ್ರಭು ಕೇಂಪೇಗೌಡ ಮತ್ತು ಕಲ್ಯಾಣದ ಬಸವಣ್ಣನಂತಹ ಶ್ರೇಷ್ಠ ನಾಯಕರು ಎಲ್ಲ ಸಮುದಾಯಗಳನ್ನು ಸಾಂಸ್ಕೃತಿಕವಾಗಿ ಬೆಸೆಯುವ ಕೆಲಸ ಮಾಡಿದ ಜಾತ್ಯಾತೀತ ನಾಯಕರು.

ಆ ನಿಟ್ಟಿನಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಕಾರ್ಯದರ್ಶಿ ಹುಲ್ಲೇಕೆರೆ ಎಚ್.ಎನ್.ಮಹದೇವಯ್ಯ, ಲೇಖಕ ಮತ್ತು ಸಂಶೋಧಕರು ಪ್ರೊ.ಪುಟ್ಟರಂಗಪ್ಪ, ನಿವೃತ್ತ ಸೈನಿಕ ತಿಪ್ಪಯ್ಯ, ತಬಲ ವಿದ್ವಾಂಸ ಚಂದ್ರುಶೇಖರ್, ಪರಿಸರ ಪ್ರೇಮಿ ರಾಮಣ್ಣ, ವೈದ್ಯಕ್ಷೀಯ ಕ್ಷೇತ್ರದ ಡಾ.ನಾಗರಾಜು ಅವರುಗಳನ್ನು ಸನ್ಮಾನಿಸಿ, ಅಭಿನಂದಿಸಲಾಗುವುದು. ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಗಣ್ಯರು, ವಿದ್ವಾಂಸರು, ಕಲಾವಿದರು, ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಸ್.ಎಂ.ಶಂಕರಯ್ಯ, ಲೆಕ್ಕಪರಿಶೋಧಕ ಡಿ.ಪಿ.ರಾಜು, ನಿರ್ದೇಶಕರಾದ ಬಾಣಸಂದ್ರ ರಾಜಣ್ಣ, ಲೇಖಕ ಪ್ರೊ. ಪುಟ್ಟರಂಗಪ್ಪ ಇನ್ನಿತರರು ಉಪಸ್ಥಿತರಿದ್ದರು.

ಪೋಟೋ ಶೀರ್ಷಿಕೆ

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಬಿಜಿಎಸ್ ಸಮುಧಾಯ ಭವನದ ಕಚೇರಿಯಲ್ಲಿ ಕೆಂಪೇಗೌಡರ 515ನೇ ಜಯಂತ್ಯುತ್ಸ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಎಚ್.ಧನಫಾಲ್ ಮಾತನಾಡಿದರು. ಒಕ್ಕಲಿಗರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಂ.ಎನ್.ಚಂದ್ರೇಗೌಡ ಇನ್ನಿತರರು ಇದ್ದರು.