ಚಿಕ್ಕನಾಯಕನಹಳ್ಳಿ : ತಾಲ್ಲೂಕು ಮಟ್ಟದ ಕದಸಂಸ ಮಹಿಳಾ ಒಕ್ಕೂಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕದಸಂಸ(ಅಂಬೇಡ್ಕರ್ ವಾದ) ಸಂಘಟನೆಯ ಮುಖಂಡರು ಸಭೆ ಸೇರಿದ್ದರು. ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯನವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ, ಚರ್ಚೆ ಪರಾಮರ್ಶೆ ನಡೆಸಿದ ನಂತರ ವಿವಿಧ ಸಂಚಾಲಕ ಸ್ಥಾನಗಳಿಗೆ ಐವರು ಮಹಿಳೆಯರನ್ನು ಆಯ್ಕೆ ಮಾಡಿ ಸಭೆಯಲ್ಲಿ ಘೋಷಿಸಲಾಯಿತು.
ತಾಲ್ಲೂಕು ಮಟ್ಟದ ಕದಸಂಸ(ಅಂಬೇಡ್ಕರ್ ವಾದ) ಮಹಿಳಾ ಒಕ್ಕೂಟದ ತಾಲ್ಲೂಕು ಸಂಚಾಲಕಿಯಾಗಿ ಕೆ ಎಮ್ ಜಮೀಲಾ’ರನ್ನು ಆಯ್ಕೆ ಮಾಡಲಾಗಿದೆ. ಅದೇರೀತಿ ತಾಲ್ಲೂಕು ಸಂಘಟನಾ ಸಂಚಾಲಕರನ್ನಾಗಿ ಚೈತ್ರ ಹೆಚ್ ಮಾರವಳ್ಳಿ, ಮಂಜುಳಾ ಹುಳಿಯಾರು, ಆಶಾರಾಣಿ ಲಕ್ಮಗೊಂಡನಹಳ್ಳಿ, ಸುಶೀಲಾ ನಡುವನಹಳ್ಳಿ’ರವರನ್ನು ಆಯ್ಕೆ ಮಾಡಲಾಗಿದೆ.
ಕದಸಂಸ(ಅಂಬೇಡ್ಕರ್ ವಾದ) ಯಾವುದೇ ಒಂದು ನಿರ್ದಿಷ್ಟ ಜಾತಿ ಸಮುದಾಯಕ್ಕೆ ಸೀಮಿತವಾದುದಲ್ಲ. ಇದು ಎಲ್ಲ ಜಾತಿ, ಧರ್ಮದ ಶೋಷಿತ-ದಮನಿತರ ಸಂಘರ್ಷಕ್ಕೆ ರೂಪುಗೊಂಡಿರುವ ಸಂಘಟನೆ ಎಂದು ಹಿರಿಯ ದಲಿತಪರ ಹೋರಾಟಗಾರ ಕುಂದೂರು ತಿಮ್ಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಅವರು ಕುಂಬಾರರ ಅನಸೂಯಮ್ಮನ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣ ನೆನಪಿಸಿದರು. ಆಕೆಯ ತಂದೆಯನ್ನು ಕೊಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಪಟ್ಟಭದ್ರರನ್ನು ಕಾನೂನಿನ ಕುಣಿಕೆಗೆ ಸಿಗಿಸುವಲ್ಲಿ ಕದಸಂಸದ ಮಹತ್ತರ ಪಾತ್ರವನ್ನು ವಿವರಿಸಿದರು.
ಆಗ ಪ್ರೊ. ಬಿ ಕೃಷ್ಣಪ್ಪನವರ ನೇತೃತ್ವದಲ್ಲಿ ಇಡೀ ನಾಡಿನಾದ್ಯಂತ ದಸಂಸ ಕಾಲ್ನಡಿಗೆ ಜಾಥಾ ನಡೆಸಿ ವಿಧಾನಸೌಧಕ್ಕೇ ಮುತ್ತಿಗೆ ಹಾಕುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಅನಸೂಯಮ್ಮ ಹಾಗೂ ಕೊಲೆಯಾದ ಆಕೆಯ ತಂದೆ ಶೇಷಗಿರಿಯಪ್ಪಗೆ ನ್ಯಾಯ ದೊರಕಿಸಿಕೊಟ್ಟದ್ದನ್ನು ಅವರು ನೆನಪಿಸಿಕೊಟ್ಟರು.
ಹಾಗಾಗಿ ಕದಸಂಸ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮಾತ್ರ ಮೀಸಲಾದದ್ದು ಎಂಬುದು ಸತ್ಯಕ್ಕೆ ದೂರವಾದ ಮಾತು. ಈಗ ಹೊಸದಾಗಿ ರಚನೆಯಾಗಿರುವ ಈ ಮಹಿಳಾ ಒಕ್ಕೂಟದಲ್ಲಿ ಎಲ್ಲ ಜಾತಿ-ಧರ್ಮದ ಮಹಿಳೆಯರು ಇದ್ದಾರೆ. ಇವರೆಲ್ಲರೂ ಎಲ್ಲ ಜಾತಿ-ಧರ್ಮಗಳ ಮಹಿಳೆಯರ ಪರವಾಗಿ ದನಿಯೆತ್ತಲಿದ್ದಾರೆ ಎಂದರು.
ನೂತನವಾಗಿ ಆಯ್ಕೆಯಾದ ತಾಲ್ಲೂಕು ಸಂಚಾಲಕಿ ಕೆ ಎಮ್ ಜಮೀಲಾ ಮಾತನಾಡಿ, ಸಾಲ-ಸೌಲಭ್ಯ ಕಂಪನಿಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿದರು.
ಇಂಥ ಶೋಷಕ ಕಂಪನಿಗಳ ವಿರುದ್ಧ ತಾಲ್ಲೂಕಿನಾದ್ಯಂತ ಮಹಿಳೆಯರನ್ನು ಸಂಘಟಿಸಿ, ಹೋರಾಟ ನಡೆಸುವುದಾಗಿ ತಿಳಿಸಿದರು.
__ಸಂಚಲನ
ಚಿಕ್ಕನಾಯಕನ ಸೀಮೆಯಿಂದ