ಆಸ್ಪತ್ರೆ ನಮ್ಮೂರಿಗೆ ಕೊಡಿ, ನಾವ್ ಸರಿ ಮಾಡ್ತೀವಿ ಎಂದು ಗೋಗೆರೆಯುತ್ತಿರುವ ಬ್ಯಾಡರಹಳ್ಳಿ ಜನ
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಜೆ ಸಿ ಪುರದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರೇ ಜೀವ ಬಿಗಿಹಿಡಿದು ಕೆಲಸ ಮಾಡಬೇಕಾದ ದುಃಸ್ಥಿತಿಯಿದೆ.
ಜೆ ಸಿ ಪುರ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗಳು ಯಾವಾಗ ತಮ್ಮ ತಲೆ ಮೇಲೆ ಆಸ್ಪತ್ರೆ ಛಾವಣಿ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಂತಹ ಪರಿಸ್ಥಿತಿಯಿದ್ದರೂ ಜೆ ಸಿ ಪುರ ಗ್ರಾಮ ಪಂಚಾಯಿತಿ, ಶಾಸಕರು, ಸ್ಥಳೀಯ ಜನ ಪ್ರತಿನಿಧಿಗಳು ಇದುವರೆಗೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕಳೆದ ವಾರ ಇಲ್ಲಿ ಸುರಿದ ಧಾರಾಕಾರ ಮಳೆಗೆ ಬೆಚ್ಚಿಬಿದ್ದಿರುವ ಆಸ್ಪತ್ರೆಯ ಸಿಬ್ಬಂದಿ, ಅಲ್ಲಿ ಕೆಲಸ ಮಾಡಲು ಭಯ ಭೀತರಾಗಿದ್ದಾರೆ. ಈ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ ದಿವಾಕರ್ ಹಾಗೂ ಸಹಾಯಕಿ ನಾಗರತ್ನಮ್ಮನವರು ಜಾನುವಾರು ಚಿಕಿತ್ಸೆಯ ಕರ್ತವ್ಯಲ್ಲಿದ್ದಾರೆ.
ಸ್ವಲ್ಪ ಜೋರಾಗಿ ಗಾಳಿ ಬೀಸಿದರೂ ಹೆಂಚುಗಳು ಮುರಿದು ಬೀಳುವ ಸ್ಥಿತಿಯಿರುವ ಕಾರಣ ಅವರು ಸದಾ ಎಚ್ಚರ ಮತ್ತು ಆತಂಕದಲ್ಲೇ ಕರ್ತವ್ಯ ನಿರ್ವಹಿಸಬೇಕಾದ ತುರ್ತು-ಪರಿಸ್ಥಿತಿಯಿದೆ ಇಲ್ಲಿ.
(ಚಿಕಿತ್ಸಾ ಕೇಂದ್ರದ ಕಟ್ಟಡ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿ ಜೆ ಸಿ ಪುರ ಗ್ರಾ.ಪಂ. ಮತ್ತು ಚಿ ನಾ ಹಳ್ಳಿ ತಾ.ಪಂ. ಹಾಗೂ ತಾಲ್ಲೂಕು ಪಶು ಇಲಾಖೆಗಳ ನಡುವೆ ಹಗ್ಗ-ಜಗ್ಗಾಟ)
ಸಮಸ್ಯೆಗೆ ಮೂಲ ಕಾರಣವೇ,
ಜೆ ಸಿ ಪುರದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದು. ಗ್ರಾಮ ಪಂಚಾಯತಿ ಒದಗಿಸಿಕೊಟ್ಟಿರುವ ಕಟ್ಟಡದಲ್ಲೇ ಇಲಾಖೆ ತನ್ನ ಸೇವೆಯನ್ನು ಒದಗಿಸುತ್ತಾ ಬಂದಿದೆ. ಆದರೆ, ಇದು ಬಹಳ ಹಳೆಯ ಕಟ್ಟಡ. ಸಂಪೂರ್ಣ ಶಿಥಿಲಗೊಂಡಿದೆ. ಗೋಡೆಗಳು ಬಿರುಕು ಬಿಟ್ಟಿವೆ.
ಹೆಂಚುಗಳು ಬೀಳುತ್ತಿವೆ. ತೀರು, ತೊಲೆಗಳು ಹುಳ ಹಿಡಿದಿವೆ. ಪ್ಲಾಸ್ಟರಿಂಗ್ ಪುಡಿಪುಡಿಯಾಗಿ ಉದುರುತ್ತಿದೆ. ಮಳೆ-ಗಾಳಿಯ ಹೊಡೆತಕ್ಕೆ ಕಟ್ಟಡ ಯಾವಾಗ ಕುಸಿದು ಬೀಳುವುದೋ ಎಂಬುದೇ ಇಲಾಖೆಯ ಸಿಬ್ಬಂದಿಗಳ ಆತಂಕ. ಆದರೂ, ವರ್ಷಾನುವರ್ಷಗಳಿಂದ ಇಲ್ಲಿ ಪಶು ಇಲಾಖೆ ಅಬಾಧಿತವಾಗಿ ತನ್ನ ಸೇವೆಯನ್ನು ಒದಗಿಸುತ್ತಿದೆ.
ಈ ಹಿಂದೆ ಇದ್ದ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ವಸಂತ್ ಕುಮಾರ್ ಮತ್ತು ಈಗ ಹಾಲಿ ಕರ್ತವ್ಯದಲ್ಲಿರುವ ಇಒ ದೊಡ್ಡಸಿದ್ಧಯ್ಯ ಇಬ್ಬರ ಬಳಿಯೂ ಪಶು ಇಲಾಖೆಯ ಹಿರಿಯ ಅಧಿಕಾರಿಗಳು ಮೂರು ನಾಲ್ಕು ಬಾರಿ ಕಟ್ಟಡ ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಇದುವರೆಗೂ ಯಾವುದೇ ಪೂರಕ ಪ್ರತಿಕ್ರಿಯೆ ಸಿಕ್ಕಿಲ್ಲ. ಸಾಲದ್ದಕ್ಕೆ, ಹಿಂದೆ ಇದ್ದ ಗ್ರಾಮ ಪಂಚಾಯತಿ ಪಿಡಿಒ ಒಬ್ಬರು ಈ ಕಟ್ಟಡದ ದುರಸ್ತಿ ಮಾಡಿಸುತ್ತಿರುವುದಾಗಿ ಹಣ ಬಿಡುಗಡೆ ಮಾಡಿಕೊಂಡು ಬೇರೆಡೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಆದರೆ, ದುರಸ್ತಿ ಕಾರ್ಯ ಏನೇನೂ ಆಗಿಲ್ಲ. ಈಗಿರುವ ಪ್ರಭಾರ ಪಿಡಿಒ ಸಂತೋಷ್ ತನ್ನ ವ್ಯಾಪ್ತಿಗೆ ಮೀರಿದ ಅಧಿಕಾರ ಇದು ಎಂದು ಕೈಚೆಲ್ಲಿದ್ದಾರೆ.
ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿಯೇ 48 ಲಕ್ಷ ರೂಪಾಯಿಗಳಷ್ಟು ಅನುದಾನ ನಿಗದಿಯಾಗಿದೆ. ಜೆ ಸಿ ಪುರ ಗ್ರಾಮ ಪಂಚಾಯತಿ’ಯವರು ಜಾಗ ಗುರ್ತಿಸಿಕೊಟ್ಟರೆ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಬಹುದು. ಅದಕ್ಕೂ ಅವಕಾಶ ಕೊಡದೆ, ಇತ್ತ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ದುರಸ್ತಿಯಾದರೂ ಮಾಡಿಸಿಕೊಡದೆ ಇಲಾಖೆಗಳು ಪರಸ್ಪರ ಕೆಸರೆರಚಾಡಿಕೊಳ್ಳುತ್ತಿವೆ. ಹಾಗಾಗಿ, ಈ ಜೆ ಸಿ ಪುರ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಇದೇ ಪಶು ಚಿಕಿತ್ಸಾ ಕೇಂದ್ರವನ್ನು ನಮ್ಮೂರಿಗೆ ಶಿಫ್ಟ್ ಮಾಡಿ. ನಾವು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಮಗೆ ಉತ್ತಮವಾದ ವಿಶಾಲ ಜಾಗ ಕೊಡುತ್ತೇವೆ ಎಂದು ಜೆ ಸಿ ಪುರ ಪಕ್ಕದ ಬ್ಯಾಡರಹಳ್ಳಿಯ ಕೆಲಮಂದಿ ಒತ್ತಡ ಹಾಕಿದ್ದಾರೆ.
ಜೆ ಸಿ ಪುರದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವ್ಯಾಪ್ತಿಯಲ್ಲಿ 4 ಸಾವಿರ ಜಾನುವಾರುಗಳಿವೆ. 1500’ರಷ್ಟು ಎತ್ತು, ಎಮ್ಮೆ, ಹಸುಗಳಿದ್ದರೆ, 2,500’ದಷ್ಟು ಕುರಿ ಆಡು ಮೇಕೆ ಇವೆ. ನಿತ್ಯ 8 ರಿಂದ 10 ಜಾನುವಾರುಗಳು ಈ ಚಿಕಿತ್ಸಾ ಕೇಂದ್ರದ ಸೇವೆ ಪಡೆಯುತ್ತಿವೆ. ಇದರ ವ್ಯಾಪ್ತಿಗೆ ಬರುವ ಸಾವಿರಾರು ಜಾನುವಾರುಗಳ ಆರೋಗ್ಯ ರಕ್ಷಣೆ, ಚಿಕಿತ್ಸೆ-ಶುಶ್ರೂಷೆಯ ಹೊಣೆ ಎಲ್ಲವೂ ಜೆ.ಸಿ.ಪುರದ ಇದೇ ಚಿಕಿತ್ಸಾ ಕೇಂದ್ರದ ಮೇಲಿದೆ.
ಇಷ್ಟು ಪ್ರಾಮುಖ್ಯತೆ ಇರುವ ಈ ಚಿಕಿತ್ಸಾ ಕೇಂದ್ರದ ಕಟ್ಟಡ ದುರಸ್ಥಿ ಅಥವಾ ಅದರ ಬದಲಿ ವ್ಯವಸ್ಥೆ ಮಾಡಿಕೊಡಬೇಕಾಗಿರುವುದು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಅನ್ವಯಪಡುತ್ತದೆ. ಪಶು ವೈದ್ಯಕೀಯ ಮತ್ತು ಪಶು ಸಂಗೋಪನಾ ಇಲಾಖೆಯಲ್ಲಿ ತನ್ನ ಸ್ವಂತ ಕಟ್ಟಡಗಳನ್ನು ದುರಸ್ತಿ ಮಾಡಿಸಿಕೊಳ್ಳಲು ಮಾತ್ರ ಅನುಕೂಲವಿದೆ. ಇದಕ್ಕಾಗಿ ಇಲಾಖೆಗೆ ಪ್ರತಿಸಾಲಿನಲ್ಲಿ ಹಣ ಬಿಡುಗಡೆ ಆಗುತ್ತದೆ.
ಆದರೆ, ಖಾಸಗಿ ಅಥವಾ ಗ್ರಾಮ ಪಂಚಾಯ್ತಿ ಒದಗಿಸಿಕೊಟ್ಟಿರುವ ಕಟ್ಟಡಗಳ ರಿಪೇರಿ ಮತ್ತಿತರೆ ದುರಸ್ತಿಕಾರ್ಯಕ್ಕೆ ನಮ್ಮಲ್ಲಿ ಯಾವುದೇ ಅನುದಾನ ಇರುವುದಿಲ್ಲ. ಈ ಬಾರಿ ಕಟ್ಟಡಗಳ ದುರಸ್ತಿಗೆಂದೇ ಬಿಡುಗಡೆ ಆಗಿರುವ 14.ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿ ಯಳನಡು, ದೊಡ್ಡೆಣ್ಣೇಗೆರೆ, ಚಿಕ್ಕಬಿದರೆ, ತೀರ್ಥಪುರ, ದಬ್ಬಗುಂಟೆ ಭಾಗದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳ ದುರಸ್ತಿಕಾರ್ಯ ನಡೆಸಲಾಗುತ್ತಿದೆ. ಆದರೆ, ಇಲಾಖೆಯ ಕಟ್ಟಡವಲ್ಲದ ಖಾಸಗಿ ಕಟ್ಟಡಕ್ಕೆ ಇಲಾಖೆಯ ಈ ಅನುದಾನದ ಹಣ ವಿನಿಯೋಗಿಸಲು ಅವಕಾಶವಿಲ್ಲ.
ಹಾಗಾಗಿ, ಇದರ ದುರಸ್ತಿ ಕಾರ್ಯ ಕೈಗೊಳ್ಳಬೇಕಾದ ಸಂಬಂಧಪಟ್ಟ ಇಲಾಖೆಗಳು ಶೀಘ್ರವೇ ಕ್ರಮ ವಹಿಸಬೇಕಿದೆ ಎಂದು ಪಶು ಸಹಾಯಕ ನಿರ್ದೇಶಕರಾದ ಡಾ ರೆ ಮಾ ನಾಗಭೂಷಣ್ ತಿಳಿಸಿದರು.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ